ಬೇಬಿಗೆ ಆ ದಿನ ಬೆಳಿಗ್ಗೆ ತಿಂಡಿಗೆ ಜೇನು ಇರಲಿಲ್ಲ. ಜೇನು ಇಲ್ಲದಿದ್ದರೆ ಅವನು ತಿಂಡಿ ತಿನ್ನುವವನಲ್ಲ. ಮಗುವಿಗೆ ಹೇಗೆ ತಿಂಡಿ ತಿನ್ನಿಸುವುದು? ತಾಯಿಗೆ ಕಡೆಗೊಂದು ಉಪಾಯ ಹೊಳೆಯಿತು. ಹಿಂದಿನ ದಿನ ಜಾಮೂನು ಮಾಡಿದ್ದರು ಅವರು. ಆ ಸಕ್ಕರೆ ಎಳೆ ಪಾಕವನ್ನೆ ಜೇನೆಂದು ಕೊಡುವುದು. ಆಗಲೂ ತಿನ್ನದಿದ್ದರೆ ಮತ್ತೇನಾದರು ದಾರಿ ನೋಡುವುದೆಂದು ತಟ್ಟೆಗೆ ಸಕ್ಕರೆ ಪಾಕವನ್ನು ಹಾಕಿ, ಜೇನು ಹಾಕಿಯಾಯಿತು, ತಿಂಡಿ ತಿನ್ನೆಂದು ತಮ್ಮ ಮುದ್ದಿನ ಮಗನಿಗೆ ಹೇಳಿದರು ಆ ತಾಯಿ. ಮಗನಿಗೆ ಅದು ಜೇನಲ್ಲ; ಸಕ್ಕರೆ ನೀರು ಎಂದು ಬಾಯಿಗೆ ಹಾಕಿದಾಗ ಗೊತ್ತಾದರೂ ಅದು ನಿಜಕ್ಕೂ ಜೇನು ಎಂಬಂತೆ ತಿಂಡಿಗೆ ಮುಟ್ಟಿಸಿಕೊಂಡು ತಿಂದ. ಇಬ್ಬರಿಗೂ ಇದು ನಾಟಕವೆಂದು ಗೊತ್ತು. ಆದರೆ ಇಬ್ಬರೂ ಚಕಾರವೆತ್ತಲಿಲ್ಲ.

“ನಮ್ಮ ಬೇಬಿಗೆ ತಿಂಡಿಗೆ ಹಾಕಿದ್ದು ಜೇನಲ್ಲ ಎಂದು ಗೊತ್ತಾಗಿದೆ. ಆದರೂ ಜಾಮೂನಿನ ಸಕ್ಕರೆ ಪಾಕವನ್ನು ತಿಂಡಿಗೆ ಮುಟ್ಟಿಸಿಕೊಂಡು ತಿಂದುಬಿಟ್ಟ. ಗಲಾಟೆ ಮಾಡಲಿಲ್ಲ. ಸಾಯಂಕಾಲದೊಳಗಾದರು ಜೇನು ತಂದಿಡಬೇಕು. ನಿನ್ನೆಯೇ ನಾನು ಜೇನು ಬೇಕು, ಮುಗಿದು ಹೋಗಿದೆ ಎಂದು ಹೇಳಿದ್ದೆ” ತಾಯಿ ಹೇಳುತ್ತಿದ್ದರು. ತಂದೆ ಸಂಜೆಯೊಳಗೆ ಜೇನು ತಂದಿಡುವ ಎಂದು ಸಂತೈಸುವ ರೀತಿಯಲ್ಲಿ ಉತ್ತರಿಸುತ್ತಿದ್ದರು. ತನಗೆ ಐದು ವರ್ಷವಿದ್ದಾಗ ಈ ಮಾತು, ಘಟನೆ ನಡೆದಿದ್ದರೂ ಬೇಬಿಗೆ ಈಗಲೂ ಸರಿಯಾಗಿ ನೆನಪಿದೆ. ಬೇಬಿ ಅಂದರೆ ಕತೆಗಾರ್ತಿ ಕೊಡಗಿನ ಗೌರಮ್ಮನವರ ಮಗ ವಸಂತ. ಅವರು ಮುದ್ದಿನಿಂದ ಬೇಬಿ ಎಂದು ಕರೆಯುತ್ತಿದ್ದರು. ಈಗ ಎಂಭತ್ತರ ಅಜ್ಜ ಅವರು. ತಮ್ಮ ತಾಯಿ ಕೊಡಗಿನ ಗೌರಮ್ಮನವರನ್ನು ನೆನಪಿಸಿಕೊಳ್ಳುವಾಗ ಅವರ ಮನದಲ್ಲಿ ಸುಳಿದ ನೆನಪು ಇದು.

ವಸಂತ ಏನಾದರು ತಪ್ಪು ಮಾಡಿದರೆ ಗೌರಮ್ಮ ಅಷ್ಟೇ ಕಠಿಣರಾಗುತ್ತಿದ್ದರು. ತೋಟದಲ್ಲಿ ಕೆಲಸಗಾರರು ಕೆಲಸ ಮಾಡುತ್ತಿದ್ದಾಗ, ವಸಂತ ಉದ್ದನೆಯ ಕೋಲು ಹಿಡಿದುಕೊಂಡು ಹಿಂಬದಿಯಿಂದ ಹೋಗಿ ಅವರಿಗೆ ಹೊಡೆಯುತ್ತಿದ್ದರು. ಒಂದು ದಿನ ಹೀಗೆ ಹೊಡೆತ ತಿಂದ ಕೆಲಸದವಳೊಬ್ಬಳು, ಅಂಗಾರೆ ಕೊಂಬೆಯನ್ನು ವಸಂತನ ಹಿಂಭಾಗ ಪೂರ್ತಿ ಉಜ್ಜಿ ಬಿಟ್ಟಳು. ಉರಿ ಹತ್ತಿದ ವಸಂತ ಅತ್ತುಕೊಂಡು ಓಡಿ ಬಂದು, ತಾಯಿಗೆ ಪುಕಾರು ಮಾಡಿದ. ಗೌರಮ್ಮ ಮಗನನ್ನು ಮುದ್ದಿಸಲಿಲ್ಲ. ಬದಲು; ಕೋಣೆಯಲ್ಲಿ ಕೂಡಿ ಹಾಕಿದರು. ಅವರ ಮೈದುನ ಬಿ.ಟಿ. ಗೋವಿಂದಯ್ಯ, ಮಗುವಿಗೆಂದು ಹೋಳಿಗೆ ತೆಗೆದುಕೊಂಡು ಬಂದಿದ್ದರು. ಕೋಣೆಯ ಬಾಗಿಲು ತೆಗೆಯುವಂತೆ ವಸಂತ ಅಳುತ್ತ ಚಿಕ್ಕಪ್ಪನನ್ನು ಕೇಳಿಕೊಂಡ. ಗೌರಮ್ಮ ಅವರಿಗೂ ಬಾಗಿಲು ತೆಗೆಯಲು ಬಿಡಲಿಲ್ಲ. ಕೆಲಸದವರಿಗೆ ಹೊಡೆದರೆ ಶಿಕ್ಷೆ ಅನುಭವಿಸಲೇಬೇಕು ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದರು.

ಗೌರಮ್ಮನವರ ಬಗ್ಗೆ ಅವರಿಗೆ ಚೆನ್ನಾಗಿರುವ ಮತ್ತೊಂದು ನೆನಪೆಂದರೆ ಟೆನ್ನಿಸ್ ಆಟ. ಗೌರಮ್ಮ ಒಳ್ಳೆಯ ಟೆನ್ನಿಸ್ ಆಟಗಾರ್ತಿ. ಮದುವೆಗೆ ಮೊದಲೂ ಆಡುತ್ತಿದ್ದರು. ಮದುವೆಯಾಗಿ ಗುಂಡುಕುಟ್ಟಿಗೆ ಬಂದ ಮೇಲೂ ಅವರು ನಿತ್ಯ ಟೆನ್ನಿಸ್ ಆಡುತ್ತಿದ್ದರು. ಪಕ್ಕದಲ್ಲೆ ಸಾಕಮ್ಮನವರ ಕಾಫಿ ತೋಟವೂ ಇತ್ತು. ಆ ತೋಟದ ಮ್ಯಾನೇಜರ್ ಭಂಡಾರಿ ಎಂಬುವವರು ಬಹಳ ವರ್ಷ ಇಂಗ್ಲೆಂಡಿನಲ್ಲಿ ಇದ್ದವರಂತೆ. ಅವರು ಮತ್ತು ಅವರ ಪತ್ನಿ ಟೆನ್ನಿಸ್ ಆಡುತ್ತಿದ್ದರು. ಬೇಸಿಗೆಯಲ್ಲಿ ಅವರು ನಿತ್ಯ ಆಡಲು ಬರುತ್ತಿದ್ದರು. ಗೌರಮ್ಮನವರ ಪತಿ ಗೋಪಾಲಕೃಷ್ಣ (ಗುಂಡುಕುಟ್ಟಿ ಮಂಜುನಾಥಯ್ಯನವರ ಕಾಫಿ ತೋಟದಲ್ಲಿ ಮ್ಯಾನೇಜರ್ ಆಗಿದ್ದರು) ಕೈಯಲ್ಲಿ ಅಂಚೆ ಕಾಗದ ಹಿಡಿದು “ದ.ಬಾ. ಕುಲಕರ್ಣಿಯವರ ಕಾಗದ” ಎಂದು ಹೇಳಿದರು. ಗೌರಮ್ಮ ಅಲ್ಲಿಗೇ ಆಟ ನಿಲ್ಲಿಸಿ ಓಡಿ ಬಂದು ಪತಿಯ ಕೈಯಿಂದ ಕಾಗದ ಕೇಳಿಕೊಂಡರಂತೆ.

 ಗೌರಮ್ಮ ತೀರಿಕೊಳ್ಳುವ ಹಿಂದಿನ ದಿನ ವಸಂತನನ್ನು ಹಾರಂಗಿ ಹೊಳೆ ದಂಡೆಗೆ ಕರೆದುಕೊಂಡು ಹೋಗಿದ್ದರು. ಮಗನಿಗೆ ಮರಳು ರಾಶಿಯಲ್ಲಿ ಅರಮನೆ ಕಟ್ಟಲು ಹೇಳಿ, ಬಂಡೆಯ ಮೇಲೆ ಕುಳಿತು ಅವರು ಪುಸ್ತಕ ಓದುತ್ತಿದ್ದರು. ಅಮ್ಮ ಪುಸ್ತಕ ಓದುವುದು, ಮಗ ಮನೆ ಕಟ್ಟುವುದು ನಡೆದೇ ಇತ್ತು. ಅವನು ಮರಳು ಮನೆ ಕಟ್ಟಿ, ಬೀಳಿಸುತ್ತಿದ್ದ. ತಾಯಿ ಪುಸ್ತಕ ಓದಿ ಮುಗಿಸುವವರೆಗೂ ಅವನು ಮರಳಲ್ಲಿ ಆಡಿಕೊಂಡೇ ಇದ್ದ. ಭಾರತೀಸುತರು ತಾವು ಬರೆದ ಮೊದಲ ಕಾದಂಬರಿ `ನನ್ನ ಅತ್ತಿಗೆ’ ಪ್ರಕಟಿಸುವ ಮೊದಲು ಹಸ್ತಪ್ರತಿಯನ್ನು ಗೌರಮ್ಮನವರಿಗೆ ತೋರಿಸಿದ ನೆನಪು ವಸಂತನಿಗೆ ಇದೆ. ಅವರಿಬ್ಬರು ಬಹಳ ಹೊತ್ತು ಮಾತನಾಡುತ್ತಿದ್ದರಂತೆ. ಮಾತು ತಮಗೆ ಅರ್ಥವಾಗುತ್ತಿರಲಿಲ್ಲ. ಏನೋ ಚರ್ಚೆ ನಡೆಯುತ್ತಿದೆ ಎಂದಷ್ಟೆ ಗೊತ್ತಾಯಿತು. ಬಂದವರು ಯಾರು, ಯಾಕೆ ಚರ್ಚೆ ಎಂದು ವಸಂತ ತಾಯಿಯನ್ನೆ ಕೇಳಿದ. ಮಗ ವಿಷಯ ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವನಲ್ಲ. ಆದರೂ ಅವನನು ನಿರಾಶೆ ಮಾಡದೆ ಗೌರಮ್ಮ, ಬಂದವರು ಯಾರು, ಚರ್ಚೆ ಏನು ನಡೆಯಿತು ಎಂದೆಲ್ಲ ವಿವರಿಸಿದರು.
ವಸಂತ ಅವರ ಅಭಿಪ್ರಾಯದಲ್ಲಿ ಕೊಡಗಿನ ಗೌರಮ್ಮ ಇನ್ನೊಂದು ಅರ್ಧ ಶತಮಾನದಷ್ಟು ಕಾಲ ಬದುಕಿದ್ದಿದ್ದರೆ… ಬಹಳಷ್ಟು ಕಾದಂಬರಿಗಳನ್ನು ಬರೆದಿರುತ್ತಿದ್ದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯೂ ಆಗಿರುತ್ತಿದ್ದರು. ದೊಡ್ಡ ರಾಜಕಾರಣಿಯಂತು ಖಂಡಿತಾ ಆಗಿರುತ್ತಿದ್ದರು.

ಗೌರಮ್ಮನದು ನೀಳಕಾಯ. ಹಾಲಿನ ಕೆನೆಯಂಥ ಮೈ ಬಣ್ಣ. ತಿದ್ದಿ ತೀಡಿದಂತಿದ್ದ ಕಣ್ಣು, ಮೂಗು, ಹುಬ್ಬುಗಳು. ಅವರು ತುಂಬ ಸುಂದರಿಯಾಗಿದ್ದರು ಎಂದು ಗೌರಮ್ಮನವರ ಚಿಕ್ಕಪ್ಪನ ಮಗಳು ಬಿ.ಟಿ. ಹೊನ್ನಮ್ಮ (85) ಹೇಳುತ್ತಾರೆ. ತಿಳಿ ಹಸಿರು ಬಣ್ಣದ ಸೀರೆಯುಟ್ಟು, ಬಿಳಿ ಬಣ್ಣದ ತುಂಡು ತೋಳಿನ ರವಿಕೆ ತೊಟ್ಟುಕೊಂಡು ಮಹಡಿಯಿಂದ ಕೆಳಗೆ ಇಳಿದು ಬರುವ ದೃಶ್ಯ ಅವರಿಗೆ ಈಗಲೂ ಕಣ್ಣೆದುರು ಬರುತ್ತದೆ. ಹೊನ್ನಮ್ಮನವರ ತಂದೆ ಯಾಲಕ್ಕಿ ವ್ಯಾಪಾರವನ್ನು ಮಂಗಳೂರಿನಲ್ಲಿ ಮಾಡುತ್ತಿದ್ದರಂತೆ. ಅವರು ಮಂಗಳೂರಿನಿಂದ ಬರುವಾಗ ದ್ರಾಕ್ಷೆ, ಗೋಡಂಬಿ, ಖರ್ಜೂರ, ಬಿಳಿ ಕಲ್ಲುಸಕ್ಕರೆಯನ್ನು ತರುತ್ತಿದ್ದರು. ಗೌರಮ್ಮನವರಿಗೆ ಅವೆಲ್ಲವನ್ನು ಬೆರೆಸಿ ತಿನ್ನುವುದು ಬಹಳ ಇಷ್ಟ. ಚಿಕ್ಕಪ್ಪ ಮಂಗಳೂರಿನಿಂದ ಬಂದದ್ದೆ, ಗೌರಮ್ಮ ಚಿಕ್ಕಪ್ಪನ ಮನೆಯಲ್ಲಿ ಹಾಜರಾಗುತ್ತಿದ್ದರು. ಆಗ ನಾಲ್ಕು ವರ್ಷದವರಾಗಿದ್ದ ಹೊನ್ನಮ್ಮನನ್ನು ಮಲ್ಲಿಗೆ ಹೂವು ಕೊಯ್ಯಲು ಹಿತ್ತಲಿಗೆ ಕಳುಹಿಸಿ, ಅಡುಗೆ ಮನೆ ಬಿಸಿಗೆಯಲ್ಲಿಟ್ಟಿದ್ದ ಡಬ್ಬಿಯಿಂದ ಒಣ ಹಣ್ಣುಗಳನ್ನು, ಕಲ್ಲು ಸಕ್ಕರೆಯನ್ನು ಉಡಿಯಲ್ಲಿ ಕಟ್ಟಿಕೊಳ್ಳುತ್ತಿದ್ದರು. ಹೂವು ಕೊಯ್ದು ತಂದ ಹೊನ್ನಮ್ಮ ಅವರೆದುರು ನಿಂತುಕೊಂಡರೆ, ಅವರನ್ನು ಎತ್ತಿ ಮಂಚದ ಮೇಲೆ ಹಾಕಿ, ಗೌರಮ್ಮ ಒಬ್ಬರೆ ಕುಳಿತು ಒಣ ಹಣ್ಣು ತಿನ್ನುತ್ತಿದ್ದರು.

ಕೊಡಗಿನ ಗೌರಮ್ಮನವರ ಮಗ ವಸಂತ

ಗೌರಮ್ಮ ಬಹಳ ಓದುತ್ತಿದ್ದರು. ಅದೇನೇನೊ ಪುಸ್ತಕಗಳ ರಾಶಿ ಹಾಕಿಕೊಳ್ಳುತ್ತಿದ್ದರು. ಇಂಗ್ಲೀಷು, ಕನ್ನಡ ಪುಸ್ತಕಗಳು. ಅವೆಲ್ಲ ಏನೆಂದು ಹೊನ್ನಮ್ಮನವರಿಗೆ ಗೊತ್ತಾಗುತ್ತಿರಲಿಲ್ಲ. “ಅವಳು ಬಹಳ ಬುದ್ಧಿವಂತೆ. ಒಳ್ಳೆ ಆಟಗಾರ್ತಿ. ಫ್ಯಾಶನ್ ಇಷ್ಟ ಪಡುತ್ತಿದ್ದಳು. ನಾಜೂಕಾಗಿ ಬಟ್ಟೆ ತೊಡುತ್ತಿದ್ದಳು. ಈಗ ನನಗೆ ಅವಳ ಧ್ವನಿಯೂ ಮರೆತು ಹೋಗಿದೆ. ಒಟ್ಟಲ್ಲಿ ಬಹಳ ಸುಂದರಿಯಾಗಿದ್ದಳು. ನಾವೇನು ಮಾತಾಡಿದೆವೊ ಗೊತ್ತಾಗುತ್ತಿಲ್ಲ. ನಾವೆಲ್ಲ ಚಿಕ್ಕವರಾಗಿದ್ದೆವು. ಅವಳು ಸಾಯುವಾಗ ನನಗೆ ಹನ್ನೆರೆಡು ವರ್ಷ ವಯಸ್ಸಷ್ಟೆ” ಎಂದು ಹೇಳಿದರು ಹೊನ್ನಮ್ಮ.

ಗೌರಮ್ಮನವರ ತಂದೆ ವಕೀಲರು. ಅಣ್ಣ ಗೋಪಾಲಕೃಷ್ಣ ಮಡಿಕೇರಿ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದರು. ಅವರು ನೀಡುತ್ತಿದ್ದ ತೀರ್ಪುಗಳನ್ನು ಗೌರಮ್ಮನವರು ಇಂಗ್ಲೀಷಿಗೆ ಅನುವಾದಿಸುತ್ತಿದ್ದರು. ಅಣ್ಣನೊಟ್ಟಿಗೆ ಮಾಡುತ್ತಿದ್ದ ಅಭ್ಯಾಸ, ಆಗಿನ ರಾಜಕೀಯ ಪರಿಸರಗಳಿಂದ ಗೌರಮ್ಮ ಬಹಳ ಪ್ರಭಾವಿತರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಬಿ.ಟಿ. ಗೋಪಾಲಕೃಷ್ಣ ಅವರನ್ನು 1925ರಲ್ಲಿ ವಿವಾಹ ಆದ ಮೇಲೂ ಅವರು ಓದುವುದು, ರಾಜಕೀಯ ಚಟುವಟಿಕೆಗಳನ್ನು ನಿಲ್ಲಿಸಲಿಲ್ಲ. ಸ್ವಯಂಪ್ರೇರಣೆಯಿಂದ ಖಾದಿ ತೊಟ್ಟರು. ಚಿನ್ನಾಭರಣಗಳಿದ್ದರೂ, ಬಹಳ ಸರಳವಾಗಿ ಇರುತ್ತಿದ್ದರು. ಕೊಡಗಿನ ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರ ಪಂಡಿಯಂಡ ಬೆಳ್ಯಪ್ಪನವರೊಂದಿಗೆ ಕೊಡಗು ಸುತ್ತಿ, ಬಹಳಷ್ಟು ಯುವಕರನ್ನು ಕಾಂಗ್ರೆಸ್ ಸೇರಲು ಪ್ರೇರೇಪಿಸಿದರು. ಕೇಂದ್ರದಲ್ಲಿ ನೆಹರು ಸಂಪುಟದಲ್ಲಿ ಸಚಿವರಾಗಿದ್ದ ಸಿ.ಎಂ. ಪೂಣಚ್ಚನವರನ್ನು ಗೌರಮ್ಮನವರೇ ಕಾಂಗ್ರೆಸ್ ಸದಸ್ಯರನ್ನಾಗಿ ಮಾಡಿದರು.

ಗೌರಮ್ಮ ಇಂಟರ್ ಓದುತ್ತಿದ್ದಾಗ (1925) ಅವರ ವಿವಾಹ ಆಯಿತು. ಅವರ ಕಾಲೇಜು ಓದು ಅಲ್ಲಿಗೇ ನಿಂತಿತು. ರಾಜಕೀಯ ಚಟುವಟಿಕೆ, ಬರಹಗಳ ನಡುವೆ ಗೌರಮ್ಮ ಪತಿ, ಮಗನನ್ನು ಅಲಕ್ಷ್ಯ ಮಾಡಲಿಲ್ಲ. ಗಂಡ-ಹೆಂಡತಿ ಇಬ್ಬರೂ ಪರಸ್ಪರ ಹೇಳಿ ಮಾಡಿಸಿದಂತಿದ್ದರು. ಗೌರಮ್ಮನವರ ಪತಿ ಗೋಪಾಲಕೃಷ್ಣ, ಸ್ವಭಾವದಲ್ಲಿ ಮುಗ್ಧರು. ಒಂದು ರೀತಿಯಲ್ಲಿ ಸಂತನ ಜೀವನ ಅವರದ್ದು. ಇವತ್ತಿನದು ಇವತ್ತಿಗೆ, ನಾಳೆಯದು ನಾಳೆಗೆ ನೋಡಿಕೊಂಡರಾಯಿತು ಎಂದು ನಂಬಿದವರು. ಹಾಗಾಗಿ ಅವರು ಯಾವತ್ತೂ ಹಣ ಕೂಡಿಟ್ಟವರಲ್ಲ, ನಾಳೆಗೆ ಎಂದು ಏನನ್ನೂ ತೆಗೆದಿಟ್ಟವರಲ್ಲ. ಯಾರು ಕೇಳಿದರೂ ಕೈಯಲ್ಲಿ ಇದ್ದುದನ್ನು ಕೊಟ್ಟುಬಿಡುತ್ತಿದ್ದರು. ಗೌರಮ್ಮನವರನ್ನು ವಿವಾಹ ಆಗಲಿಕ್ಕಾಗಿ ತೆಗೆದಿಟ್ಟ ಹಣವನ್ನೂ ಕಷ್ಟ ಎಂದು ಹಣ ಕೇಳಿದವರೊಬ್ಬರಿಗೆ ಕೊಟ್ಟು, ನಂತರ ಮದುವೆ ಖರ್ಚಿಗೆ ಬಹಳವೇ ಪರದಾಡಿದರಂತೆ. ಅವರ ಆತ್ಮೀಯ ಗೆಳೆಯರಾಗಿದ್ದ ಗಮಕಿ ಮೈ.ಶೇ. ಅನಂತಪದ್ಮನಾಭರಾವ್, ಗೋಪಾಲಕೃಷ್ಣರ ಈ ಪರದಾಟದ ಕುರಿತು `ಗೋಪು ಮದುವೆ’ ಎಂಬ ಕತೆಯೊಂದನ್ನು ಬರೆದರು. ಆ ಕತೆ `ಜಯಕರ್ನಾಟಕ’ದಲ್ಲಿ ಪ್ರಕಟವೂ ಆಯಿತು.

1933ರಲ್ಲಿ ಕೊಡಗಿಗೆ ಗಾಂಧೀಜಿ ಬಂದಾಗ ಗುಂಡುಕುಟ್ಟಿ ಮಂಜುನಾಥಯ್ಯನವರ ಮನೆಯಲ್ಲಿ ಉಳಿದುಕೊಂಡಿದ್ದರು. ಗೌರಮ್ಮ ಗಾಂಧೀಜಿಯವರನ್ನು ತಮ್ಮ ಮನೆಗೂ ಆಹ್ವಾನಿಸಿದರು. ಸಮಯವಿಲ್ಲವೆಂದು ಗಾಂಧೀಜಿ ಆಹ್ವಾನ ತಿರಸ್ಕರಿಸಿದರು. ಬಡವರ ಮನೆಗೆ ಗಾಂಧೀಜಿ ಬರುವುದಿಲ್ಲವೆಂದು ಗೌರಮ್ಮ ಆಕ್ಷೇಪಿಸಿದ್ದು ಮಾತ್ರವಲ್ಲ; ಅಲ್ಲೆ ಉಪವಾಸ ಕುಳಿತರು. ಮೀರಾ ಬೆನ್ ಗೌರಮ್ಮನವರ ಮನವೊಲಿಸಲು ಪ್ರಯತ್ನಿಸಿ ಸೋತರು.

ಕೊನೆಗೂ ಗಾಂಧೀಜಿ ಗೌರಮ್ಮನಿಗೆ ಕಿತ್ತಳೆ ಹಣ್ಣು ಕೊಟ್ಟು, ಅವರ ಮನೆಗೆ ಬಂದರು. ಗೌರಮ್ಮ ಅವರನ್ನು ಮಣೆಯಿಟ್ಟು ಕೂರಿಸಿದರು. ಇದೆಲ್ಲ ಯಾಕೆಂದು ಗಾಂಧೀಜಿ ಕೇಳಿದರೂ ಅವರು ಉತ್ತರಿಸಲಿಲ್ಲ. ಒಳಗಿನಿಂದ ಒಂದು ಪಾತ್ರೆಯಲ್ಲಿ ತಮ್ಮಲ್ಲಿದ್ದ ಎಲ್ಲಾ ಚಿನ್ನದ ಆಭರಣಗಳನ್ನು ತುಂಬಿಸಿ ತಂದು ಗಾಂಧೀಜಿ ಎದುರಿನಲ್ಲಿಟ್ಟರು. ಆ ಚಿನ್ನವನ್ನು ಹರಿಜನ ಉದ್ಧಾರ ಕಾರ್ಯಕ್ಕೆ ಬಳಸುವಂತೆ ಗಾಂಧೀಜಿಯನ್ನು ಕೇಳಿಕೊಂಡರು. ಇದಕ್ಕೆ ಪತಿಯ ಒಪ್ಪಿಗೆ ಇದೆಯೆ ಎಂದು ಗಾಂಧೀಜಿ ಕೇಳಿದರಂತೆ. ಸ್ವ ಇಚ್ಛೆಯಿಂದ ಗೌರಮ್ಮ ಕೊಡುತ್ತಿದ್ದಾರೆ. ಅವರು ಮತ್ತೊಮ್ಮೆ ಒಡವೆ ಮಾಡಿಸಿಕೊಡುವಂತೆ ಕೇಳದಿದ್ದರಾಯಿತು ಎಂದು ಗಾಂಧೀಜಿ ಸಮೀಪವೆ ನಿಂತಿದ್ದ ಗೋಪಾಲಕೃಷ್ಣ ಹೇಳಿ ಮುಗುಳುನಕ್ಕರಂತೆ. ಗೌರಮ್ಮ ಇನ್ನು ಚಿನ್ನ ತೊಡುವುದಿಲ್ಲವೆಂದು ಗಾಂಧೀಜಿ ಎದುರು ಪ್ರತಿಜ್ಞೆ ಮಾಡಿದರಂತೆ. ಗಾಂಧೀಜಿ ಈ ಘಟನೆಯನ್ನು 1934 ಮಾರ್ಚಿ 2ರ `ಹರಿಜನ’ ಪತ್ರಿಕೆಯಲ್ಲಿ ಬರೆದಿರುವಂತೆ. ಅಲ್ಲಿಂದ ಅವರ ಜೀವಿತ ಅವಧಿ ವರೆಗೂ ಗೌರಮ್ಮ ಮಂಗಳಸೂತ್ರ, ಮೂಗೂತಿ, ಕಿವಿ ಓಲೆಗಳನ್ನು ಮಾತ್ರ ಇಟ್ಟುಕೊಂಡಿದ್ದರು.

ಗಾಂಧೀಜಿ ಈ ಭೇಟಿ ನೀಡಿದ ಸಂದರ್ಭದಲ್ಲಿಯೇ ಗೌರಮ್ಮ ಗುಟ್ಟಾಗಿ ಗಾಂಧೀಜಿ ಬಳಸಿದ ಮೈಸೂರು ಸ್ಯಾಂಡಲ್ ಸೋಪನ್ನು ತೆಗೆದಿಟ್ಟುಕೊಂಡರಂತೆ. ಖಾದಿ ಚೀಲದಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದರಂತೆ. ಆ ಸೋಪು, ಗೌರಮ್ಮನವರ ಸೀರೆಗಳು, ಕೈ ಬರಹ ಈಗ ಮಾನಸಗಂಗೋತ್ರಿಯಲ್ಲಿದೆ.

1939 ಏಪ್ರಿಲ್ 12 ಗೌರಮ್ಮನವರಿಗೆ ಮಾತ್ರವಲ್ಲ; ಕನ್ನಡ ಸಾರಸ್ವತ ಲೋಕಕ್ಕೆ ಕೆಟ್ಟ ದಿನವಾಯಿತು. ಹರದೂರಿನಲ್ಲಿ ಹಾರಂಗಿ ಹೊಳೆಗೆ ಆತ್ಮೀಯರೊಂದಿಗೆ ಈಜಲು ಹೋದವರು ಮೇಲೆ ಬರಲೇ ಇಲ್ಲ. ಅಂದು ಬೆಳಿಗ್ಗೆ ಸೋಮವಾರಪೇಟೆಗೆ ಕೆಲಸದ ಮೇಲೆ ಹೊರಟಿದ್ದ ಗೋಪಾಲಕೃಷ್ಣ, ತಾನೂ ಮನೆಯಲ್ಲಿ ಇಲ್ಲದಿರುವುದರಿಂದ, ಗೌರಮ್ಮನವರಿಗೆ  ಹೊಳೆಗೆ ಈಜಲು ಹೋಗುವುದು ಬೇಡವೆಂದು ಹೇಳಿದ್ದರಂತೆ. ಅವರು ಕೆಲಸದವಳಿಗೆ ಮಗುವನ್ನು ನೋಡಿಕೊಳ್ಳಲು ಹೇಳಿ ಈಜಲು ಹೊರಟುಬಿಟ್ಟರು.

ಆದರೆ ಹಾಗೆ ಆಗಬಹುದೆಂದು ಕನಸು-ಮನಸ್ಸಿನಲ್ಲಿಯು ಯಾರೂ ನಿರೀಕ್ಷಿಸಿರಲಿಲ್ಲ.ಗೌರಮ್ಮ ಬರಲಿಲ್ಲವೆಂದು ಅವರೆಲ್ಲ ಆತಂಕದಿಂದ ಹೊಳೆ ಕಡೆ ನೋಡಿದರು. ದೂರದಲ್ಲಿ ತನ್ನನ್ನು ರಕ್ಷಿಸಿ ಎಂದು ಕೇಳಿಕೊಳ್ಳುವಂತೆ ಅವರು ಕೈ ಬೀಸುತ್ತಿದ್ದರಂತೆ. ಗೌರಮ್ಮ ಮೂರು ಬಾರಿ ಕೈ ಬೀಸಿದುದನ್ನು ಅವರೆಲ್ಲರೂ ನೋಡಿದ್ದರು. ಆದರೆ ಯಾರೂ ಹೊಳೆಗೆ ಇಳಿಯಲಿಲ್ಲ. ಹೀಗೆ ಗೌರಮ್ಮ ಹಾರಂಗಿ ಪಾಲಾದರು. ಆಗಿನ್ನೂ ಅವರಿಗೆ 27ರ ಹರೆಯ.

(ಗೌರಮ್ಮ ಮುಳುಗಿದ ಮಾದಾಪುರ ನದಿ. ಫೋಟೋ : ರಶೀದ್)