‘ಜೀವನದಲ್ಲೊಂದು ಘಳಿಗೆ ಬಂದಿತು. ನಾನೊಬ್ಬ ಗೇ ಎನ್ನುವುದೇ ನನ್ನ ಟ್ರು ಐಡೆಂಟಿಟಿ ಎಂದು ಅನಿಸೋಕೆ ಶುರುವಾಯಿತು. ಆಗ ನಾನು ನನ್ನ ತಂದೆ ತಾಯಿಗೆ ಹೇಳಲೇಬೇಕಾಯಿತು. ಅಪ್ಪ ಮೊದಲಿಗೆ ನೀನು ಮನೆಗೆ ವಾಪಸ್ ಬರಬೇಕೆಂದರೆ ಅದೆಲ್ಲ ಬಿಡಬೇಕು ಎಂದರು. ಬಿಡುವುದಕ್ಕೆ ಅದೇನದು? ನನ್ನನ್ನ ನಾನಿರುವ ಹಾಗೆ ಒಪ್ಪಿಕೊಳ್ಳದಿದ್ದರೆ ನಾನು ಬರುವುದಿಲ್ಲ ಎಂದಿದ್ದೆ. ಕೂಡಲೇ ಫೋನ್ ಕಟ್ ಮಾಡಿದ್ದರು. ಆಮೇಲೇನಾಯಿತೋ ಏನೋ ಮತ್ತೆ ಅವರಿಂದ ಫೋನ್ ಬಂದಿತು… ನಾವಿಬ್ಬರು ಬೆಂಗಳೂರಿನಲ್ಲಿ ಜೊತೆಗಿರಲು ಶುರುಮಾಡಿದಾಗ ನಿನಗೊಬ್ಬಳು ಹೆಂಗಸು ಬೇಕೇ ಬೇಕು ಅಂದ್ರು’.
ದಾದಾಪೀರ್‌ ಜೈಮನ್‌ ಬರೆಯುವ “ಜಂಕ್ಷನ್‌ ಪಾಯಿಂಟ್‌” ಅಂಕಣ

 

ಅವರಿಬ್ಬರು ಮನೆಗೆ ಕರೆದಿದ್ದರು. ಅವರ ಮನೆಗೆ ಹೋಗುವುದೆಂದರೆ ನನಗೆ ಎಲ್ಲಿಲ್ಲದ ಸಂಭ್ರಮ. ಅವರ ಹೆಸರು ವಿನೋದ್ ಮತ್ತು ಶರತ್. ವಯಸ್ಸು ಸುಮಾರು ನಲವತ್ತೈದರ ಆಸುಪಾಸು. ಇಬ್ಬರೂ ಜೊತೆಗಿದ್ದರು. ಮಹಾನಗರದಲ್ಲಿ ಬದುಕುವ ಎಲ್ಲಾ ಶ್ರೀಸಾಮಾನ್ಯರ ಸೀದಾ ಸಾದಾ ಕನಸುಗಳಾದ ಮನೆ, ಕಾರು, ಒಳ್ಳೆಯ ಉದ್ಯೋಗವನ್ನು ಸಾಕಾರಗೊಳಿಸಿಕೊಂಡಿದ್ದರು. ಕಳೆದ ಫೆಬ್ರವರಿಗೆ ಇಪ್ಪತ್ತು ವರ್ಷಗಳ ಸಾಂಗತ್ಯ ಸಂಭ್ರಮವನ್ನೂ ಕೂಡ ಆಚರಿಸಿಕೊಂಡರು. ಅವರಿಬ್ಬರೂ ಭೇಟಿಯಾದರು. ಪ್ರೀತಿ ಹುಟ್ಟಿತು. ಪ್ರೀತಿಸಿದರು. ಬಂದದ್ದು ಬರಲಿ ಆಗುವುದು ಆಗಲಿ ಎಂದು ಬದುಕಿನ ಹೆಜ್ಜೆಗಳನ್ನು ಒಟ್ಟಿಗೇ ಇಡುತ್ತಾ ಸಾಗಿದರು. ನಡಿಗೆ ಅಷ್ಟಕ್ಕೇ ನಿಲ್ಲಲಿಲ್ಲ. ಅವರು ಐಸ್ ಲ್ಯಾಂಡಿನಲ್ಲಿ ಮದುವೆ ಕೂಡ ಆದರು. ಮೇಲುನೋಟಕ್ಕೆ ನೋಡಿದರೆ ‘ಅರೆ! ಇದರಲ್ಲೇನಿದೆ ಮಹಾ? ಪ್ರೀತಿಸಿದರು. ಮದುವೆಯಾದರು. ಕ್ವೀರ್ ಜೋಡಿಗಳನ್ನು ಈಗೀಗ ನಮ್ಮಂತೆಯೇ ಅವರೂ ಎಂದು ನೋಡುತ್ತಿದ್ದೀವಲ್ಲ’ ಎನ್ನಬಹುದು. ಹಾಗನಿಸುವುದು ಸಹಜ. ಆದರೂ ಅರಮನೆ ಮುಂದಿನ ಮೆರವಣಿಗೆಗೆ ಹಾಸಿರುವ ಹೂವಿನ ಹಾಸಿಗೆಯ ದಾರಿಯ ಪಯಣ ಕೆಲವರಿಗೆ ದುರ್ಗಮವಾಗಿರುತ್ತದೆ. ಕೆಲವರಿಗೆ ದಾರಿಯ ವಿಳಾಸವೇ ತಡವಾಗಿ ತಿಳಿಯುತ್ತದೆ.

‘ಎಲ್ಲವೂ ಸುಲಭವಾಗಿರಲಿಲ್ಲ.’
ವಿನೋದ್ ಹೇಳುವ ಪ್ರಕಾರ ‘ಜೀವನದಲ್ಲೊಂದು ಘಳಿಗೆ ಬಂದಿತು. ನಾನೊಬ್ಬ ಗೇ ಎನ್ನುವುದೇ ನನ್ನ ಟ್ರು ಐಡೆಂಟಿಟಿ ಎಂದು ಅನಿಸೋಕೆ ಶುರುವಾಯಿತು. ಆಗ ನಾನು ನನ್ನ ತಂದೆ ತಾಯಿಗೆ ಹೇಳಲೇಬೇಕಾಯಿತು. ಅಪ್ಪ ಮೊದಲಿಗೆ ನೀನು ಮನೆಗೆ ವಾಪಸ್ ಬರಬೇಕೆಂದರೆ ಅದೆಲ್ಲ ಬಿಡಬೇಕು ಎಂದರು. ಬಿಡುವುದಕ್ಕೆ ಅದೇನದು? ನನ್ನನ್ನ ನಾನಿರುವ ಹಾಗೆ ಒಪ್ಪಿಕೊಳ್ಳದಿದ್ದರೆ ನಾನು ಬರುವುದಿಲ್ಲ ಎಂದಿದ್ದೆ. ಕೂಡಲೇ ಫೋನ್ ಕಟ್ ಮಾಡಿದ್ದರು. ಆಮೇಲೇನಾಯಿತೋ ಏನೋ ಮತ್ತೆ ಅವರಿಂದ ಫೋನ್ ಬಂದಿತು… ನಾವಿಬ್ಬರು ಬೆಂಗಳೂರಿನಲ್ಲಿ ಜೊತೆಗಿರಲು ಶುರುಮಾಡಿದಾಗ ನಿನಗೊಬ್ಬಳು ಹೆಂಗಸು ಬೇಕೇ ಬೇಕು ಅಂದ್ರು. ನೀವಿಬ್ಬರು ಒಬ್ಬರನ್ನೊಬ್ಬರು ಕಾಳಜಿ ಮಾಡಿಕೊಂಡು ಜೊತೆಯಲ್ಲಿರೋದಕ್ಕಾಗಲ್ಲ ಅಂದ್ರು. ಮದುವೆಯಾಗು ಅಂದ್ರು. ಈ ಮನೆ ಸರಿಯಿಲ್ಲ ಅಂದ್ರು. ಆ ಹುಡುಗ ನಿನಗೆ ಸರಿಯಾದ ಜೋಡಿಯಲ್ಲ ಅಂದರು. ನಾವು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಒಟ್ಟಿಗಿದ್ದೆವು. ಈಗಲೂ ಇದ್ದೇವೆ. ನನ್ನದಾದರೂ ಹೀಗೆ. ಆದರೆ ಶರತ್ ಗೆ ಅವರ ಮನೆಯಲ್ಲಿ ಕನ್ವರ್ಷನ್ ಥೆರಪಿ ಅಂತ ಕರೆದುಕೊಂಡು ಹೋಗಿ ಎಲೆಕ್ಟ್ರಿಕ್ ಶಾಕುಗಳನ್ನೆಲ್ಲಾ ಕೊಟ್ಟರು. ಇಷ್ಟೆಲ್ಲಾ ಆದರೂ ನಾವು ಜಗ್ಗಲಿಲ್ಲ. ಅದಕ್ಕೆ ಇವತ್ತಿನ ತನಕವೂ ಜೊತೆಗಿದ್ದೇವೆ. ಈಗೆಲ್ಲಾ ಬಹುತೇಕ ಸರಿಯಿದೆ. ಅವನು ಎಜುಕೇಷನ್ ಫೀಲ್ಡಲ್ಲಿ ಕೆಲಸ ಮಾಡ್ತಿದಾನೆ. ನಾನು ಮೆಂಟಲ್ ಹೆಲ್ತ್ ವಿಭಾಗದಲ್ಲಿ. ಆರ್ಥಿಕವಾಗಿ ಯಾರ ಮೇಲೂ ಅವಲಂಬಿತರಾಗಿಲ್ಲ. ಹಾಗಾಗಿ ಸಂಬಂಧಿಕರು, ಕುಟುಂಬದವರು ಕೇವಲ ಟಾಲರೇಟ್ ಮಾಡಿಕೊಳ್ಳುತ್ತಾರೆ. ಆದರೆ ನಮ್ಮನ್ನು ಅವರ ಹತ್ತಿರ ಕರೆದುಕೊಳ್ಳುವುದರಿಂದ ದೂರವೇ ಉಳಿಯುತ್ತಾರೆ…

ಶರತರನ್ನು ಅವರಿಬ್ಬರ ಪ್ರೀತಿಯ ಬಗ್ಗೆ ಮಾತನಾಡಿಸಿದರೆ; ‘ನಾನು ಇಥಿಯೋಪಿಯಾದಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೆ. ವಿನೋದ್ ಇಲ್ಲಿ ನಮ್ಮ ಬೆಂಗಳೂರಿನ ಮನೆಯಲ್ಲಿ ನಮ್ಮ ಅಪ್ಪ ಅಮ್ಮನ ಜೊತೆಯಲ್ಲಿದ್ದ. ವಿದೇಶದ ಯಾವುದೋ ಯುನಿವರ್ಸಿಟಿಯಲ್ಲಿ ಕೋರ್ಸೊಂದನ್ನು ಮಾಡಿಕೊಳ್ಳುತ್ತಿದ್ದ. ನಾವಿಬ್ಬರು ಭೇಟಿಯಾದೆವು. ಇಬ್ಬರೂ ಒಟ್ಟಿಗಿರುವುದು ಎಂದು ನಿರ್ಧಾರ ಮಾಡಿಕೊಂಡೆವು. ‘ಇದ್ದೆವು’ ಅಷ್ಟೇ. ಹಾಗೆ ನೋಡಿದರೆ ನನ್ನ ಅಮ್ಮನಿಗೆ ಕ್ಯಾನ್ಸರ್ ಆದಾಗ ಅಮ್ಮನನ್ನು ನೋಡಿಕೊಂಡಿದ್ದು ವಿನೋದ್.’ ಎಂದು ಕಣ್ಣೀರಾದರು.

ಶರತ್ ಸೌತ್‌ಆಫ್ರಿಕಾದಲ್ಲಿದ್ದಾಗ ಇಲ್ಲಿ ಬೆಂಗಳೂರಿನಲ್ಲಿ ವಿನೋದ್ ಎಲ್ಲವನ್ನೂ ನಿಭಾಯಿಸಿದರು. ಅಮ್ಮನಿಗೆ ಇಂಗ್ಲಿಷ್ ಬರುವುದಿಲ್ಲ. ವಿನೋದ್ ಗೆ ಕನ್ನಡ ಬರುವುದಿಲ್ಲ. ಭಾಷೆಯ ಸಮಸ್ಯೆಯ ಜೊತೆಗೆ ಏಗುತ್ತಲೇ ಸೇವೆ ಮಾಡಿದರು. ನಮ್ಮ ಸ್ವಂತ ತಂದೆ ತಾಯಿಯ ವಿಷಯ ಬೇರೆ! ಒಮ್ಮೊಮ್ಮೆ ಅಲ್ಲಿ ಅನಿವಾರ್ಯತೆ ಇರುತ್ತದೆ. ಇನ್ನೂ ನಿಕೃಷ್ಟ ಘಳಿಗೆಗಳಲ್ಲಿ ಆಸ್ತಿಗೋಸ್ಕರ ವಿಧಿಯಿಲ್ಲದೇ ಸೇವೆ ಮಾಡುವ ಸಂದರ್ಭಗಳೂ ಇರುತ್ತವೆ. ಇಲ್ಲಿ ವಿನೋದ್ ಅವರು ಶರತ್ ಅವರ ತಾಯಿಯ ಸೇವೆ ಮಾಡಿದ್ದು ಎಲ್ಲಾ ಸ್ವಾರ್ಥದ ಸೀಮೆಯನ್ನು ನೀಗಿಕೊಂಡು ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಮಿಡಿಯುವುದೇ ಈ ಬದುಕಿನ ಮೂಲಭೂತ ತತ್ವವೆನ್ನುವುದನ್ನು ಸಾಬೀತು ಪಡಿಸುವಂತೆ ನನಗೆ ಕಾಣುತ್ತದೆ.

‘ನಾವಿಬ್ಬರು ಭೇಟಿಯಾದೆವು. ಇಬ್ಬರೂ ಒಟ್ಟಿಗಿರುವುದು ಎಂದು ನಿರ್ಧಾರ ಮಾಡಿಕೊಂಡೆವು. ‘ಇದ್ದೆವು’ ಅಷ್ಟೇ. ಹಾಗೆ ನೋಡಿದರೆ ನನ್ನ ಅಮ್ಮನಿಗೆ ಕ್ಯಾನ್ಸರ್ ಆದಾಗ ಅಮ್ಮನನ್ನು ನೋಡಿಕೊಂಡಿದ್ದು ವಿನೋದ್.’ ಎಂದು ಕಣ್ಣೀರಾದರು.

‘ನಾವಿಬ್ಬರೂ ಕ್ವೀರ್ ಕಪಲ್ ಎಂದು ಮನೆಯವರಿಗೆ ಹೇಳಿದ ಮೇಲೆ ಮತ್ತೊಂದು ಸಮಸ್ಯೆ ಎದುರಾಯಿತು. ಇನ್ಷೂರೆನ್ಸ್ ಮಾಡುವಾಗ ನಾನು ನಾಮಿನಿಯಾಗಿ ಶರತ್ ಹೆಸರು ಬರೆಸುವ ಆಯ್ಕೆ ಇಲ್ಲ. ಮುಂದೆ ಏನೋ ಅಪಘಾತ ಆದ ಸಮಯದಲ್ಲಿ ಅಥವಾ ಕೊನೆಗಾಲದಲ್ಲಿ ಕೋಮಾ ಗೋ ಗೀಮಾಗೋ ಹೋದ ಪಕ್ಷದಲ್ಲಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ನಮ್ಮ ಮನೆಯವರಿಗಿರುತ್ತದೆ. ಅಂದರೆ ನನ್ನ ಅಣ್ಣನಿಗೋ ತಮ್ಮನಿಗೋ ಅಥವಾ ಅಕ್ಕತಂಗಿಯರಿಗೋ ಹೋಗುತ್ತದೆ. ಆ ಸಮಯದಲ್ಲಿ ಅವರು ನನ್ನ ಸಂಗಾತಿಯನ್ನು ಸಂಪೂರ್ಣವಾಗಿ ಹೊರಗಿಡಲೂಬಹುದು. ಆಗೇನು ಮಾಡುವುದು? ಭಯವಾಗುತ್ತದೆ. ಈಗ ಪರವಾಗಿಲ್ಲ. ಇಬ್ಬರೂ ವೃತ್ತಿಯಲ್ಲಿ ಒಂದು ಹಂತಕ್ಕೆ ಬಂದಿದ್ದೇವೆ. ಕೈಯಲ್ಲಿ ದುಡ್ಡಿದೆ. ಹೇಗೋ ಆಗುತ್ತದೆ. ಕೊನೆಗಾಲದಲ್ಲಿ ನಾವು ಯಾವುದೋ ಕಾರಣಕ್ಕೆ ಬೇರೆಯಾಗಿಬಿಟ್ಟರೆ ಅನ್ನೋ ಭಯ ಇದೆ. ಆ ಯೋಚನೆಯೇ ಭೀಕರ ಕನಸಾಗಿ ಕಾಡುತ್ತದೆ ಎಂದು ತಗ್ಗಿದ ಸ್ವರದಲ್ಲಿ ವಿನೋದ್ ಹೇಳಿದರು.

ಶರತ್ ರನ್ನ ನಾನು ಬೇಕಂತಲೇ ಮದುವೆಯ ವಿಷಯದ ಬಗ್ಗೆ ಕೇಳಿದೆ. ಅದು ಮತ್ತೊಂದು ಕಥೆ ಎಂದು ಶುರುಮಾಡಿದರು. ಆಕರ್ಷಿತರಾಗಿದ್ದವರು ಪ್ರೇಮಿಗಳಾಗಿ ಅಲ್ಲಿಂದ ಒಂದು ಹೆಜ್ಜೆ ಮುಂದೆ ಹೋಗಿ ಮದುವೆ ಆಗಬೇಕೆಂದು ನಿರ್ಧರಿಸಿದಾಗ ನಮ್ಮ ಮುಂದೆ ಇದ್ದ ಆಯ್ಕೆಗಳಲ್ಲಿ ಅರ್ಜೆಂಟೀನಾ, ಮೆಕ್ಸಿಕೋ ಮತ್ತು ಐಸ್ ಲ್ಯಾಂಡ್ ಇದ್ದವು. ಈಗ ನಾವು ವಾಸಿಸುತ್ತಿರುವ ಸೌತ್‌ಆಫ್ರಿಕಾ ದೇಶದಲ್ಲೂ ಕೂಡ ಗೇ ಮದುವೆಗಳು ಸಾಧ್ಯ ಇದ್ದರೂ ಕೂಡ ಬೇರೆ ದೇಶನಿವಾಸಿಗಳು ಇಲ್ಲಿ ಬಂದು ಮದುವೆಯಾಗಲು ಅನುಮತಿಯಿಲ್ಲ. ಅರ್ಜೆಂಟೀನಾದಲ್ಲಿ ಪೇಪರ್ ವರ್ಕ್ ಜಾಸ್ತಿ ಇದ್ದದ್ದರಿಂದ ಕೊನೆಗೆ ಐಸ್ಲ್ಯಾಂಡನ್ನೇ ಆಯ್ಕೆ ಮಾಡಿಕೊಂಡೆವು. ಮೈನಸ್ ಹದಿನಾರು ತಾಪಮಾನದ ವಾತಾವರಣದಲ್ಲಿ ನಾವಿಬ್ಬರು ಚಳಿಗೆ ಗಡಗಡ ನಡುಗುತ್ತಾ ಮದುವೆಯಾದೆವು ಎಂದು ಕಣ್ಣರಳಿಸುತ್ತಾರೆ.

ಅಲ್ಲಿಂದ ಮಾತನ್ನು ಮುಂದೆತ್ತಿಕೊಂಡ ವಿನೋದ್; ಈಗ ಸೌತ್‌ಆಫ್ರಿಕಾದಲ್ಲಿ ಇಬ್ಬರೂ ಒಂದೇ ಶಿಕ್ಷಣ ಸಂಸ್ಥೆಗೆ ದುಡಿಯುತ್ತಿದ್ದೇವೆ. ಸಂಸ್ಥೆಯಲ್ಲಿ ನನ್ನದು ಕೌನ್ಸೆಲರ್ ಕೆಲಸ.

‘ಆ ದೇಶ ಹೇಗೆ’ ಎಂದು ಕೇಳಿದ್ದಕ್ಕೆ ಸೌತ್‌ಆಫ್ರಿಕಾ ದೇಶದಲ್ಲಿ ನಮ್ಮ ಭಾರತಕ್ಕೆ ಸಮನಾದ ಮಡಿವಂತಿಕೆ ಇದೆ. ಆದರೆ ಇಲ್ಲಿ ನೆಲ್ಸನ್ ಮಂಡೇಲಾ ಮುಂತಾದ ದೂರದರ್ಶಿಗಳು ಮಾಡಿದ ಕಾನೂನಿನಿಂದಾಗಿ ಇಲ್ಲಿಯ ಜನ ಘನತೆಯಿಂದ ಬಾಳುವಂತಾಗಿದೆ. ಭಾರತದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದಾಗಿ ಹೇಗೆ ಜನರಿಗೆ ಜೀವ ಬಂದಿದೆಯೋ ಇದೂ ಹಾಗೆಯೇ ಎನ್ನುತ್ತಾ, ಮಾತಿನಲ್ಲಿ ರಾಜಕೀಯವನ್ನು ತಮ್ಮದೇ ಗ್ರಹಿಕೆಯೊಂದಿಗೆ, ತಮ್ಮದೇ  ಹದದಲ್ಲಿ ಬೆರೆಸುತ್ತಾರೆ.

ವಿನೋದ್ ಮತ್ತು ಶರತ್ ತಾವು ಕೆಲಸ ಮಾಡುವ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಲೈಂಗಿಕ ಅಸ್ಮಿತೆಯ ಬಗ್ಗೆ ಹೇಳಿಕೊಂಡ ಸಲುವಾಗಿ ಹೇಗೆ ಒಂದಿಷ್ಟು ಜನ ಅದನ್ನು ಪೀಡಿಯೋಫಿಲಿಯಾದೊಂದಿಗೆ ಸುಲಭವಾಗಿ ಲಿಂಕ್ ಮಾಡಿಬಿಡುತ್ತಾರೆ? ಅನುಮಾನದ ನೆರಳು ಆಗಾಗ ಸುಳಿದು ಮರೆಯಾಗುತ್ತದೆ, ಅದನ್ನೆಲ್ಲಾ ಸಂಭಾಳಿಸುವುದು ಅದೆಷ್ಟು ಕಷ್ಟ ಎಂಬುದರ ಮೇಲೆ ಕೂಡ ಬೆಳಕು ಚೆಲ್ಲಿದರು. ಇಷ್ಟೆಲ್ಲಾ ಹೇಳಿದ್ದು ಅವರು ಬೆಂಗಳೂರಿಗೆ ಬಂದಿದ್ದಾಗ, ನಾನವರ ಮನೆಗೆ ಹೋದಾಗ. ನಾನು ಮನೆಗೆ ಹೋಗುತ್ತಿದ್ದೇನೆ ಎಂಬ ಒಂದೇ ಕಾರಣಕ್ಕೆ ಅವರ ಕೈಯಾರೆ ಚಿಕನ್ ಬಿರಿಯಾನಿ ಮಾಡಿದ್ದರು. ವೋಡ್ಕಾ ಮತ್ತು ಚೀಸ್ ಇತ್ತು. ಮರುದಿನ ಬೆಳಿಗ್ಗೆಗೆ ಇಬ್ಬರೂ ದೋಸೆ ಚಟ್ನಿ ಮಾಡಿ ಬಡಿಸಿದರು.

ಇಷ್ಟೆಲ್ಲಾ ಹೇಳುವಾಗ ಅವರ ನಡುವೆ ಜಗಳವೇ ಆಗುವುದಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ನಾನು ಗಮನಿಸಿದಂತೆ ಮತ್ತು ಅವರೇ ಹೇಳಿಕೊಳ್ಳುವಂತೆ ‘ನಮ್ಮ ಮಧ್ಯೆ ಜಗಳ ಇದ್ದದ್ದೇ. ಆ ಜಗಳವೇ ನಮ್ಮನ್ನು ಒಟ್ಟಿಗಿಡುತ್ತದೆ.’ ಎನ್ನುವಾಗ ಅವರ ಕಣ್ಣಲ್ಲಿ ಮಿಂಚು. ವಿನೋದ್ ಹೀಗೆ ಹೇಳುವಾಗ ಶರತ್ ಸುಮ್ಮನೆ ತಮ್ಮ ಒಂದು ಮುಗುಳ್ನಗೆಯಿಂದಲೇ ಸಹಮತ ಸೂಚಿಸಿದರು. ಇದೇ ಸರಿಯಾದ ಸಮಯ ಎಂದು ಭಾವಿಸಿ ‘ಒಬ್ಬರು ಇಥಿಯೋಪಿಯಾದಲ್ಲಿ, ಇನ್ನೊಬ್ಬರು ಬೆಂಗಳೂರಿನಲ್ಲಿ. ಆಗೆಲ್ಲಾ ಲಾಂಗ್ ಡಿಸ್ಟೆನ್ಸ್ ಸಮಸ್ಯೆ ಆಗಲಿಲ್ಲವೇ?’ ಎಂದು ಕೇಳಿದ್ದಕ್ಕೆ ‘ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಪ್ರೀತಿಯಲ್ಲಿ ಬಹಳ ಮುಖ್ಯ. ಪ್ರೀತಿ ಎನ್ನುವುದು ದೇಹವನ್ನು ಒಳಗೊಂಡೂ ಮೀರಿದ ಆತ್ಮಸಾಂಗತ್ಯ’ ಎಂದು ವೇದಾಂತಿಯಂತೆ ಹೇಳಿದರು. ನಾನದಕ್ಕೆ ‘ಅರೆ ವಾಹ್!’ ಎಂದು ಉದ್ಘಾರ ತೆಗೆದು ತಲೆದೂಗಿದೆ.

ಅದೇನೇ ಕಷ್ಟಗಳನ್ನು ಹಾದು ಬಂದಿದ್ದರೂ ನನಗೆ ವಿನೋದ್ ಮತ್ತು ಶರತ್ ಅದೆಷ್ಟೋ ಇಕ್ಕಟ್ಟಿನ ಸ್ಥಿತಿಗಳಲ್ಲಿಯೂ, ರಾಜಿ ಮಾಡಿಕೊಂಡರೆ ಉಳಿದೆಲ್ಲರ ಹಾಗೆ ಆರಾಮಾಗಿ ಬದುಕಿಬಿಡಬಹುದು ಎನ್ನವ ಸಂದರ್ಭಗಳಲ್ಲಿ ಧೈರ್ಯದ ನಿರ್ಧಾರಗಳನ್ನು ತೆಗೆದುಕೊಂಡವರು. ಈಗ ಅವರ ಜೀವನದಲ್ಲಿ ಹೂಹಾಸಿಗೆ. ಅವರ ಪಾಲಿಗೆ ಅದು ಹಾಗೆಯೇ ಇರಲಿ. ಯಾವುದೇ ಸಂದರ್ಭದಲ್ಲಿಯೂ ಒಬ್ಬರನ್ನೊಬ್ಬರು ತೊರೆಯುವ ಸಂದರ್ಭ ಬರದೇ ಇರಲಿ. ಇದು ವಿನೋದ್ ಮತ್ತು ಶರತ್ ಎನ್ನುವ ಕ್ವೀರ್ ಜೋಡಿಗಳ ಪ್ರೇಮಚರಿತೆ. ಕನ್ನಡದಲ್ಲಿ ಇದನ್ನು ಭಿನ್ನಸಾಮಾನ್ಯರ ಪ್ರೇಮಚರಿತೆ ಎನ್ನಬಹುದೇನೋ!