ನಿದ್ರಿಸುವ ನದಿಯೆಡೆಗೆ ಹೋಗುವವರ ಎದೆಯಲ್ಲಿ ಎಳ್ಳಷ್ಟೂ ಭಯ ಇರಬಾರದು. ಅಕಸ್ಮಾತ್ ನಿನ್ನ ಮನಸ್ಸಿನಲ್ಲಿ ಒಂದೇ ಒಂದು ಕ್ಷಣ ಭಯ ಹೊಕ್ಕರೆ ನೀನು ಸತ್ತಂತೆ ಸರಿ, ನಿನ್ನ ಆತ್ಮಕ್ಕೆ ಅವುಗಳನ್ನು ಎದುರಿಸಲು ಆಗುವುದಿಲ್ಲ. ನೀನು ಪಾಪದ ಕೆಲಸ ಮಾಡಿದ್ದರೆ ಆ ಆತ್ಮಗಳು ನಿನ್ನನ್ನು ಸುಲಭವಾಗಿ ಮುಗಿಸಿಬಿಡುತ್ತವೆ. ಭಯಾನಕ ಅಂತ್ಯ ನಿನ್ನದಾಗುತ್ತದೆ. ಶುದ್ಧ ಮನಸ್ಸು ಮತ್ತು ಒಳ್ಳೆಯ ಹೃದಯ ನಿನ್ನ ರಕ್ಷಣೆ, ನಿದ್ರಿಸುವ ನದಿಯೆಡೆಗೆ ಹೋಗುವಾಗ ಯಾರೊಡನೆಯೂ ದ್ವೇಷ ಹೊಂದಿರಬಾರದು. ಮನಸ್ಸಿನಲ್ಲಿ ಕೆಡುಕು, ದುಷ್ಟತನ ಇರಬಾರದು.
ರವಿಕುಮಾರ್ ಹಂಪಿ ಅನುವಾದಿತ “ನದಿಯೊಂದು ನಿದ್ರಿಸಿದಾಗ” ಕಾದಂಬರಿಯ ಕುರಿತು ಸುಮಿತ್ ಮೇತ್ರಿ ಬರಹ
ರವಿಕುಮಾರ್ ಹಂಪಿ ಅವರ ಅನುವಾದಿತ ಕಾದಂಬರಿ “ನದಿಯೊಂದು ನಿದ್ರಿಸಿದಾಗ” ಒಂದೇ ಸಿಟ್ಟಿಂಗ್‌ನಲ್ಲಿ ಓದಿ ಮುಗಿಸಿದೆ. ಆದರೆ ಈಗಾಗಲೇ ಒಂದು ಬಾರಿ ಓದಿದರೂ ಎರಡನೇ ಸುತ್ತಿನ ಓದಿಗೆ ತೆರೆದುಕೊಂಡಿದ್ದೇನೆ ಈ ಬರೆಹದ ಜೊತೆಗೆ… ಕಾದಂಬರಿ ತುಂಬಾ ಸೊಗಸಾಗಿ ಮೂಡಿಬಂದಿದೆ. ಇದೊಂದು ಅನುವಾದವೇ? ಎನಿಸುವಷ್ಟು ಸಹಜವಾಗಿ ಓದಿಸಿಕೊಂಡು ಹೋಗುತ್ತದೆ.
ಏನೋ ಸದ್ದಾಯಿತು! ಕಾಳರಾತ್ರಿಯ ಒಂಟಿತನದ ಸದ್ದು ಸತ್ತವರನ್ನು ಎದ್ದು ಕೂರುವಂತೆ ಮಾಡುತ್ತದೆ ಅನ್ನುತ್ತಾರಲ್ಲ ಹಾಗೆ ಆಯಿತು ಈ ನಡುರಾತ್ರಿ 01:43 ಸಮಯ, ಓದಿನ ನಡುವೆಯೇ ಖುಷಿ ತಾಳಲಾರದೆ ನಿಮಗೆ ಹೀಗೆ ಹೇಳಲು ಬಯಸುತ್ತಿದ್ದೇನೆ.
ಜನರಿಂದಲೇ ಸಾಧ್ಯವಾದಷ್ಟು ದೂರ ಇರಲು ಇಚ್ಚಿಸುವ ನಾನು, ನಾನು ವೀಲಿ ನಾ? ನನ್ನ ಬಾಲ್ಯದ ಕನಸುಗಳ ಪ್ರತಿಬಿಂಬದಂಥ ಈ ಕಾದಂಬರಿ ಕುರಿತು ನಾನಾದರೂ ಏನು ಹೇಳಲು ಸಾಧ್ಯ ಹೇಳಿ? ಈಗ ಈ ಕತ್ತಲೆ ಸಾಮ್ರಾಜ್ಯದ ಕಾಡಿನಲ್ಲಿ ನಾನಿದ್ದೇನೆ. ಕೇಡು, ಅಸೂಯೆ, ಹೊಟ್ಟೆ ಕಿಚ್ಚಿನಿಂದ ಉರಿಯುವ ಜನರಿಂದ ದೂರವಿರಲು ಓದು ಮತ್ತು ಕಾಡು ನಿಜವಾಗಿಯೂ ಎಷ್ಟೊಂದು ಸೂಕ್ತ ಅನಿಸುವುದರ ಜೊತೆಗೆ ಈ ನಿಟ್ಟಿನಲ್ಲಿ ಸದಾಕಾಲವೂ ನೀರಡಿಕೆ.
ಎಲೆಗಳ ಮೇಲಿನ ನಡಿಗೆ ಯಾವಾಗಲೂ ಖುಷಿ ಕೊಡುತ್ತದೆ. ಹಳ್ಳಿದಾರಿಗಿಂತಲೂ ಕಾಡಿನ ಹಾದಿ ನಡೆಯುತ್ತಾ, ನಡೆಯುತ್ತಾ, ಓಡುತ್ತಾ, ಓಡುತ್ತಾ, ಆಕಾಶವೂ ಕಾಣಿಸದಂಥ ಕೆಟ್ಟಕಾಡಿನೊಳಗೆ ಮೈಲಿಗಟ್ಟಲೆ ದೂರ ಹೊಕ್ಕು ಕಳೆದು ಹೋಗಿ ಬಿಡಬೇಕು. ನನಗೆ ನಾನೇ ಕಳೆದು ಹೋದೆ ಅನಿಸುವಂತೆ. ಮೊದಲೇ ನನಗೆ ಕಾಡು ಎಂದರೆ ತುಂಬಾ ಇಷ್ಟ, ಅದೊಂದು ನನಗೆ ಹೊಕ್ಕುಳುಬಳ್ಳಿ ಸಂಬಂಧದಂತೆ. ಅದು ಇಂತಹಾ ಈ ಸಂದರ್ಭದಲ್ಲಿ “ನದಿಯೊಂದು ನಿದ್ರಿಸಿದಾಗ” ಕಾದಂಬರಿ ಓದು ಇನ್ನಷ್ಟು ಮತ್ತಷ್ಟು ರೋಮಾಂಚನವನ್ನು ತಂದಿದ್ದು, ನಾನು ಮತ್ತೆ ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಲು ಸಾಧ್ಯವಾಗಿದ್ದು ಕಾಕತಾಳೀಯವೇ ಸರಿ. ಅಲೌಕಿಕ ಹುಡುಕಾಟದಲ್ಲಿ ಯಾವಾಗಲೂ ಅಲೆಯುವ ನಾನು, ಪೂರ್ಣಚಂದ್ರ ತೇಜಸ್ವಿ ಅವರ ಕಡೆ ಒಂದು ಬೆರಗು ಕಣ್ಣಿನಿಂದಲೇ ನೋಡುತ್ತೇನೆ. ಈಗ ನೀವು ಜೊತೆಯಾದರಿ, ಆಗಾಗ ನಿಮ್ಮ ಜೊತೆಗೆ ಮಾತನಾಡಬಹುದು ಎಂಬ ಸಂತೋಷ ಮನೆ ಮಾಡಿದೆ. ಈಗ ನಾನು ಯಾವುದೋ ಒಂದು ಹೊಸ ಕಾಡಿಗೆ ಪ್ರವೇಶಿಸಿದ್ದೇನೆ. ಅಲ್ಲಿ ಆ ಹಂದಿ, ಕಾಡೆಮ್ಮೆ, ಕರಡಿ, ಅಳಿಲು, ಕೋತಿ, ಹುಲಿ, ಕಾಡುಕೋಣ, ಕಾಡುನಾಯಿ, ಎಮ್ಮೆಗಳು, ಹಾಗೆ ವೀಲಿ, ಆ ಕಾಡು ಜನರ ಜೊತೆ ನಾನು ಹೆಜ್ಜೆ ಹಾಕುತ್ತಿದ್ದೇನೆ ಎಂದೇ ಎನ್ನಿಸುತ್ತಿದೆ.
ಕಾಡಿನ ಮಧ್ಯೆ ಬೆಂಕಿಗಿಡ, ಜೋತೋ ಸಸ್ಯ, ಗಾರಾ (ಬ್ರಾಹ್ಮಿಸೊಪ್ಪು), ಜರಿಗಿಡ, ಗಾಪಾ (ಕಾಡುಬಾಳೆ), ಟಿರುಟಿಫು, ವಿಲ್ಹುಲಿ ನಾ ಸೊಪ್ಪು, ಇನ್ನಿತರ ಸಸ್ಯ ಜೊತೆಗೆ ಒಂದು ಟೆಂಟು ಹಾಕಿಕೊಂಡು ನಾನು ಇರುವ ಆಶೆ ಜೀವಂತವಾಗಿದೆ. “ಏಳು, ತಕ್ಷಣ ಹೊರಡು, ಅಪಾಯ, ಅಪಾಯ…” ಮನಸು ಗಂಟೆ ಹೊಡೆಯುತ್ತಲೇ ಇದೆ. ನಾನು ಈಗ ಈ ಓದು ಮುಗಿಸಿ ವಾಪಾಸು ಕಾಡಿಗೆ ಹೋಗ್ಬೇಕು “ಮೆಕಸೇನೋ” ಳನ್ನು ನಾನು ಭೇಟಿಯಾಗಬೇಕು. ನನಗೆ ಸಿಗಬಹುದು ಅಲ್ವಾ? ಹಂಪಿ ಮಾಸ್ಟರ್! “ನನ್ನ ಪ್ರಿಯ ಆತ್ಮವೇ ನಿನಗೆ ನನ್ನ ನೆನಪು, ಆತ್ಮವೇ ನಿನಗೆ ಧನ್ಯವಾದ!”
ಅಲೌಕಿಕ ಹುಡುಕಾಟದಲ್ಲಿ ಯಾವಾಗಲೂ ಅಲೆಯುವ ನಾನು, ಪೂರ್ಣಚಂದ್ರ ತೇಜಸ್ವಿ ಅವರ ಕಡೆ ಒಂದು ಬೆರಗು ಕಣ್ಣಿನಿಂದಲೇ ನೋಡುತ್ತೇನೆ. ಈಗ ನೀವು ಜೊತೆಯಾದರಿ, ಆಗಾಗ ನಿಮ್ಮ ಜೊತೆಗೆ ಮಾತನಾಡಬಹುದು ಎಂಬ ಸಂತೋಷ ಮನೆ ಮಾಡಿದೆ. ಈಗ ನಾನು ಯಾವುದೋ ಒಂದು ಹೊಸ ಕಾಡಿಗೆ ಪ್ರವೇಶಿಸಿದ್ದೇನೆ.
“ಆತ್ಮದ ಹುಲಿ, ಹೃದಯದ ಕಲ್ಲು” ನನ್ನ ಆತ್ಮದ ಹುಡುಕಾಟದಲ್ಲಿ ನಾನು ಇದ್ದೇನೆ. ನೀವು? ನಿಮ್ಮ ಮಗಳಿಗೆ ಅನಿಸಿದಂತೆ ನನಗೆ ಪ್ರತಿ ಕ್ಷಣವೂ ಹಾಗೆ ಅನಿಸಿದೆ, ಅನಿಸುತ್ತದೆ ಹಾಗೂ ನಾನು ಅದೇ ಮಂಪರಿನಲ್ಲಿ ಮುಳುಗಿರುತ್ತೇನೆ. ಯಾವುದಾದರೊಂದು ಆತ್ಮ ನನಗೆ ಎದುರಾಗಬಹುದು ಎಂದು ಮತ್ತು ಆತ್ಮಗಳ ಕಾಡಿಗೆ ಹೊಕ್ಕು ಬಿಡಬೇಕೆಂಬ ಆಶೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೆಲುವಾದ, ಜೋಂಪು ಹತ್ತಿಸುವ ಕಾಡಿನ ಹಾಡು ಹಾಡಿ, ಆತ್ಮದ ಹಾಡು ಕೇಳಿ, ಕರುಣೆ ತುಂಬಿದ ಮೋಹಕ, ಪರಮ ಆತ್ಮಸುಂದರಿ ಜೊತೆಗೆ ಕಾಡಿನ ಹಾಡಿಗೆ ಹೆಜ್ಜೆ ಹಾಕಬೇಕು. ಏಕಾಂಗಿ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸಿಸಬೇಕು.
“ನಿದ್ರಿಸುವ ನದಿಯೆಡೆಗೆ ಹೋಗುವವರ ಎದೆಯಲ್ಲಿ ಎಳ್ಳಷ್ಟೂ ಭಯ ಇರಬಾರದು. ಅಕಸ್ಮಾತ್ ನಿನ್ನ ಮನಸ್ಸಿನಲ್ಲಿ ಒಂದೇ ಒಂದು ಕ್ಷಣ ಭಯ ಹೊಕ್ಕರೆ ನೀನು ಸತ್ತಂತೆ ಸರಿ, ನಿನ್ನ ಆತ್ಮಕ್ಕೆ ಅವುಗಳನ್ನು ಎದುರಿಸಲು ಆಗುವುದಿಲ್ಲ. ನೀನು ಪಾಪದ ಕೆಲಸ ಮಾಡಿದ್ದರೆ ಆ ಆತ್ಮಗಳು ನಿನ್ನನ್ನು ಸುಲಭವಾಗಿ ಮುಗಿಸಿಬಿಡುತ್ತವೆ. ಭಯಾನಕ ಅಂತ್ಯ ನಿನ್ನದಾಗುತ್ತದೆ. ಶುದ್ಧ ಮನಸ್ಸು ಮತ್ತು ಒಳ್ಳೆಯ ಹೃದಯ ನಿನ್ನ ರಕ್ಷಣೆ, ನಿದ್ರಿಸುವ ನದಿಯೆಡೆಗೆ ಹೋಗುವಾಗ ಯಾರೊಡನೆಯೂ ದ್ವೇಷ ಹೊಂದಿರಬಾರದು. ಮನಸ್ಸಿನಲ್ಲಿ ಕೆಡುಕು, ದುಷ್ಟತನ ಇರಬಾರದು. ಒಳ್ಳೆಯ ಆಲೋಚನೆ, ಶುದ್ಧ ಹೃದಯ ಇದ್ದವರು ಮಾತ್ರ ನಿದ್ರಿಸುವ ನದಿಯ ಸಮೀಪ ಹೋಗಲು ಸಾಧ್ಯ. ಅದನ್ನು ಮುಟ್ಟಲು ಸಾಧ್ಯ. ಇಲ್ಲದಿದ್ದರೆ ಸತ್ತು ಹೋಗುತ್ತಾರೆ. ನಿನ್ನಲ್ಲಿ ದುರಾಸೆ, ಕೆಟ್ಟತನ ಇದ್ದರೆ ನಿದ್ರಿಸುವ ನದಿ ಮುಟ್ಟುವ ಆಸೆ ಬಿಡುವುದು ಒಳ್ಳೆಯದು” ಈಗ ಹೇಳಿ ನಾನು ನಿದ್ರಿಸುವ ನದಿಯನ್ನು ಸೇರಲು ಬಯಸದೇ ಹೋದರೆ ಏನಿದೆ ಈ ಬದುಕಿಗೆ ಅರ್ಥ?
ಇನ್ನೂ ಓಕ್, ಸಿಲ್ವರ್ ಓಕ್ ಮರಗಳು, ಹುಳಿ, ರುಚಿ ಮೆಜೋಸಿ ಹಣ್ಣುಗಳು, ಬಾಳೆ ಹಣ್ಣುಗಳು, ಕಾಡುಬಾಳೆಯಂತೆ ವೀಲಿ, ಇಡಿಲಿ, ತೀಸೋಯೋಕೋ, ಸುಬಾಲೆ, ಏಟಿ, ಸೆಲೋನಾ, ಪೆಲೋನಾ, ವಿಭು, ಅಸಾಕೋ, ರೋಕೋ, ಬೆರಳ ತುದಿಯಲ್ಲಿ ಸಾವು ತರುವ ಶಕ್ತಿ ಇರುವ ಜೊತೆಗೆ ಔಷಧಿ ಸಸ್ಯಗಳ ಬಗೆಗಿನ ತಿಳುವಳಿಕೆಯ “ಕರ್ಫ್ಯೂಮಿಯಾ” ಬಗ್ಗೆ ನಾವು ಈ ಕಾದಂಬರಿ ಓದಿಯೇ ತಿಳಿಯಬೇಕು. ಅಲ್ಲದೆ “ನನಗೆ ಖಂಡಿತ ಗೊತ್ತು ನಿನ್ನಲ್ಲೇನೋ ಮಹತ್ವದ್ದಿದೆ. ಅದು ಯಾರ ಬಳಿಯೂ ಇರಲಾರದ್ದು, ಆದ್ದರಿಂದ ಅದನ್ನು ಪಡೆಯಲು ಜನ ನಿನಗೆ ಮೋಸ ಮಾಡಬಹುದು. ಅದರ ಕುರಿತು ಜಾಗ್ರತೆ ವಹಿಸು. ಯಾರಿಗೂ ಮೋಸ ಮಾಡಬೇಡ, ನೀನೂ ಮೋಸ ಹೋಗಬೇಡ. ಹೃದಯ ಶುದ್ಧತೆ ಬಹಳ ಮುಖ್ಯವಾದುದು.” ಹೌದೇ?
ನಿಜಾ ಎನಿಸುತ್ತದೆ ನನಗೆ:
“ತುಂಬಾ ಜಾಗ್ರತೆ ಮಗನೇ, ಅಪಾರ ತಾಳ್ಮೆ ಇದ್ದವರಿಗೆ ಮಾತ್ರ ನಿದ್ರಿಸುವ ನದಿಯ ಆಶೀರ್ವಾದ ಸಿಗುತ್ತದೆ, ಕಾಯಬೇಕು, ಕಾಯಬೇಕು ನೀನು ತಯಾರಾಗುವವರೆಗೆ ಕಾಯಬೇಕು…” ಹೌದು ಹಾಗೆಯೇ ಅನಿಸುತ್ತಿದೆ ನನಗೆ “ನದಿಯೊಂದು ನಿದ್ರಿಸಿದಾಗ; ಕನಸೊಂದು ನನಸಾದಾಗ” ಅದನ್ನು ಕಾಣಲು ಧ್ಯಾನಸ್ಥ ಸ್ಥಿತಪ್ರಜ್ಞೆರಿಗೆ ಮಾತ್ರ ದಕ್ಕುವುದು ಎಂದು.
“ಇದು ನನ್ನ ದಿನ
ನನ್ನದು ಪರಮ ಆತ್ಮ
ಈ ನದಿಯ ಸಂಪತ್ತು ನನಗೂ ಸೇರಿದೆ
ಈ ಕಲ್ಲು ನನ್ನ ಆತ್ಮಕ್ಕೆ ಸೇರಿದೆ
ಆತ್ಮಗಳೊಂದಿಗಿನ ಹೋರಾಟ
ಆತ್ಮವೊಂದು ಇನ್ನೊಂದು ಆತ್ಮಕ್ಕೆ ಮಾತ್ರ
ಸ್ಪಂದಿಸುತ್ತದೇ ಅಂತೆ
ಆತ್ಮದ ಜಯ
ಅಂತಿಮ ವಿದಾಯ ಹೇಳಲಾದರೂ
ಆ ಆತ್ಮ ನನ್ನ ಮತ್ತೊಮ್ಮೆ ಹುಡುಕಿಕೊಂಡು ಬರಲಿ
ನಾನು ಕಾಯುತ್ತೇನೆ ಕಾಯುತ್ತಲೇ ಇರುತ್ತೇನೆ
ಹಾಲು ಕುಡಿಸುತ್ತಾ
ಮಗುವನ್ನು ಬೆಚ್ಚಗಿಡಲು
ಎದೆಗೊತ್ತಿಕೊಂಡಂತೆ
ನನ್ನ ಎದೆ ಒತ್ತಿಕೋ ಆತ್ಮದ ಹುಲಿ!”
(ಕೃತಿ: ನದಿಯೊಂದು ನಿದ್ರಿಸಿದಾಗ (ಕಾದಂಬರಿ), ಲೇಖಕರು: ರವಿಕುಮಾರ್ ಹಂಪಿ, ಮೂಲ: ಈಸ್ಟರೀನ್ ಕೀರೆ, ಬೆಲೆ: 150/-)
ಸುಮಿತ್ ಮೇತ್ರಿ ವಿಜಯಪುರ ಜಿಲ್ಲೆಯ ಹಲಸಂಗಿಯವರು. ಕವಿತೆ/ಲಹರಿ/ಕಥೆ/ಪ್ರಬಂಧಗಳು ಬರೆಯುವಲ್ಲಿ ಆಸಕ್ತಿ ಹೊಂದಿದ್ದಾರೆ. ಫೋಟೋಗ್ರಾಫಿ ಅವರ ಮೆಚ್ಚಿನ ಹವ್ಯಾಸ. ಸದ್ಯ ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ (ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಕೃತಿ ಪ್ರಶಸ್ತಿ ಪುರಸ್ಕೃತ) ಮತ್ತು ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಇವರ ಪ್ರಕಟಿತ ಕವನ ಸಂಕಲನಗಳು.