ಧಾರ್ಮಿಕ ಸಮಾಜಗಳಲ್ಲಿ ಮೂಲಭೂತವಾದಿಗಳು, ಕೋಮುವಾದಿಗಳು ಮತ್ತು ಏನೂ ಗೊತ್ತಿಲ್ಲದ ಕರ್ಮಠರದೇ ಕಾರುಬಾರು ಜಾಸ್ತಿ ಇರುತ್ತದೆ. ಜನರನ್ನು ಹಿಂದೂ ಮುಸ್ಲಿಂ ಮಾಡುವುದರಲ್ಲೇ ಅವರು ತಲ್ಲೀನರಾಗಿರುತ್ತಾರೆ.  ರಂಜಾನ್ ಮತ್ತು ಬಕ್ರೀದಗಳಲ್ಲಿ ನನ್ನ ತಂದೆ ದೊಡ್ಡ ಹಂಡೆಯಲ್ಲಿ ಶುರಕುಂಬಾ ತಯಾರಿಸಲು ಎಲ್ಲ ವ್ಯವಸ್ಥೆ ಮಾಡುತ್ತಿದ್ದರು. ನಾವಿಗಲ್ಲಿಯ ಜನರೆಲ್ಲ ಶುರಕುಂಬಾ ಕುಡಿಯಬೇಕೆಂಬುದು ಅವರ ಆಶಯವಾಗಿತ್ತು. ದಲಿತ, ಲಿಂಗಾಯತ ಮತ್ತು ಬ್ರಾಹ್ಮಣ ಗೆಳೆಯರು ಮನೆಗೆ ಬಂದು ಹಬ್ಬದೂಟ ಮಾಡಿ ಹೋಗುತ್ತಿದ್ದರು.
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ ಹದಿಮೂರನೇ ಕಂತು ಇಲ್ಲಿದೆ. 

 

ವಿಜಾಪುರದಲ್ಲಿ ನಾವು ಮದ್ದಿನಖಣಿ ಓಣಿಯಿಂದ ನಾವಿಗಲ್ಲಿಯ ಬಾಡಿಗೆ ಮನೆಗೆ ಬಂದ ಮೇಲೆ ನನ್ನ ತಂಗಿ ಹುಟ್ಟಿದಳು. ಆಕೆಗೆ ಮಾಲನ್ ಎಂದು ಹೆಸರಿಟ್ಟರು. ಮೂರು ಗಂಡು ಮಕ್ಕಳ ನಂತರ ಹೆಣ್ಣು ಹುಟ್ಟಿದರೆ ಮಾಲನ್ ಎಂದು ಹೆಸರಿಡುತ್ತಾರೆ. ಹಿಂದೂ ಮುಸ್ಲಿಂ ಭೇದವಿಲ್ಲದೆ ಎಲ್ಲ ಜಾತಿಗಳಲ್ಲೂ ಇದೇ ಹೆಸರಿಡುತ್ತಾರೆ. ಮಾಲನ್ ಎಂಬ ಹೆಸರು ಈ ರೀತಿ ಜಾತ್ಯಾತೀತವಾಗಿದೆ. ‘ಮಾಲನ್ ಹೆಸರಿನ ಮಹಿಳೆಗೆ ಮೂರು ಜನ ಅಣ್ಣಂದಿರು ಇರುತ್ತಾರೆ’ ಎಂಬುದು ಗ್ಯಾರಂಟಿ.

ಮಾಲನ್ ಎಂದರೆ ಮಾಲಿನಿ, ಹೂವಾಡಗಿತ್ತಿ ಎಂದು ಅರ್ಥ. ತಂಗಿ ಚೆನ್ನಾಗಿ ನಡೆದಾಡುವಷ್ಟು ದೊಡ್ಡವಳಾದ ಮೇಲೆ ಪ್ರತಿ ಮಂಗಳವಾರದಂದು (ಅದು ಅವಳು ಹುಟ್ಟಿದ ದಿನವಿರಬಹುದು) ಬಿದರಿನ ಬುಟ್ಟಿಯಲ್ಲಿ ಹೂಗಳನ್ನು ತುಂಬಿಕೊಂಡು ಖುಷಿಯಿಂದ ಸುತ್ತಮುತ್ತಲಿನ ಮನೆಗಳಿಗೆ ಹೋಗಿ ಹಂಚುತ್ತಿದ್ದಳು. ತಾಯಿ ಪ್ರತಿವಾರವೂ ಈ ವ್ಯವಸ್ಥೆ ಮಾಡುತ್ತಿದ್ದಳು.

(ನಾವಿಗಲ್ಲಿ)

ನನ್ನ ತಾಯಿ ಚಂದಾಬಾವಡಿ ದವಾಖಾನೆಯಲ್ಲಿ ಹಡೆದಾಗ ನೋಡಲು ಹೋಗುತ್ತಿದ್ದೆ. (ತಾಜಬಾವಡಿ ನಂತರ ವಿಜಾಪರದಲ್ಲಿ ಅತಿದೊಡ್ಡದಾದ ಬಾವಿ ಅದು. ಬಾವಿಯ ಪಕ್ಕದಲ್ಲಿ ಮುನಸಿಪಾಲಿಟಿಯ ಹೆರಿಗೆ ಆಸ್ಪತ್ರೆ ಇದ್ದುದರಿಂದ ಅದಕ್ಕೆ ‘ಚಂದಾಬಾವಡಿ ದವಾಖಾನೆ’ ಎಂದು ಕರೆಯುತ್ತಿದ್ದರು. ಅದರ ಕಟ್ಟಡ ಸುಂದರವಾಗಿದ್ದು ಸ್ವಚ್ಛತೆ ಮತ್ತು ಉತ್ತಮ ಸೇವೆಗೆ ಹೆಸರಾಗಿತ್ತು. ನರ್ಸ್ಗಳು ಸಮವಸ್ತ್ರದಲ್ಲಿ ಚಾಕಚಕ್ಯತೆಯಿಂದ ಕರ್ತವ್ಯ ನಿಭಾಯಿಸುತ್ತಿದ್ದರು. ಅದು ಆ ಕಾಲದ ಸರ್ಕಾರಿ ಆಸ್ಪತ್ರೆಯ ಹಾಗೆ ವಾಸನೆ ಹೊಂದಿದ್ದಿಲ್ಲ. ಸಾಬೂದಾನಿ ಕುದಿಸುವಾಗ ಬರುವ ವಾಸನೆಯಂತೆ ಇತ್ತು. ಆಗ ಮನೆಯವರು ಬಾಣಂತಿಯರಿಗೆಲ್ಲ ಸಾಬೂದಾನಿ ಪಾಯಸ ಮತ್ತು ಬಾಯಲ್ಲಿ ಇಟ್ಟರೆ ಕರಗುವಂಥ ಪಂಜೀರ್ (ಕೊಬ್ಬರಿ, ಅಂಟು, ಬೆಲ್ಲ ಮತ್ತು ಕೆಲ ಡ್ರೈ ಫ್ರುಟ್ಸ್ ಮೂಲಕ ತಯಾಸುವ ಶಕ್ತಿಶಾಲಿ ಪುಡಿ ಆಹಾರ. ಇದನ್ನು ಉಂಡೆ ಕಟ್ಟಿದರೆ ಅಂಟಿನ ಉಂಡೆ ಆಗುತ್ತದೆ.) ಕೊಡುತ್ತಿದ್ದರು. ನಾನು ಹೋದಾಗ ನನ್ನ ಲಕ್ಷವೆಲ್ಲ ಪಂಜೀರ್ ಮೇಲೆಯೇ ಇರುತ್ತಿತ್ತು. ಅಮ್ಮ ಪ್ರೀತಿಯಿಂದ ನನಗೂ ಕೊಡುತ್ತಿದ್ದಳು.

ದವಾಖಾನೆಯಿಂದ ಮನೆಗೆ ಬಂದ ಮೇಲೆ ಹದಿನೈದು ದಿನಗಳೊಳಗೆ ಸಣ್ಣಗೆ ಮನೆಗೆಲಸ ಮಾಡುವುದು ಅನಿವಾರ್ಯವಾಗಿತ್ತು. ಮಾಲನ್ ಐದಾರು ತಿಂಗಳ ಕೂಸು ಇದ್ದಾಗ ಅಮ್ಮ ಹಾಲಿನ ಬಾಟಲಿಯನ್ನು ನನ್ನ ಕೈಯಲ್ಲಿ ಕೊಟ್ಟು ನೀರು ತುಂಬಲು ಹೋದಳು. ಅಪ್ಪಣ್ಣ ಸಜ್ಜನರ ಮನೆಯ ನಳದಿಂದ ನೀರು ತುಂಬುತ್ತಿದ್ದೆವು. ಅವರ ಹೆಂಡತಿ ಗೌರಮ್ಮ ಅಷ್ಟೇನು ದೊಡ್ಡವಳಿದ್ದಿದ್ದಿಲ್ಲ. ಆದರೆ ಮನಸ್ಸು ಬಹಳ ದೊಡ್ಡದಾಗಿತ್ತು. ನನ್ನ ತಾಯಿಯನ್ನು ಬಹಳ ಗೌರವದಿಂದ ಕಾಣುತ್ತಿದ್ದಳು. ನಮಗೆ ಕನಿಷ್ಠ ಹತ್ತು ಕೊಡ ನೀರು ಬೇಕಿತ್ತು. ಗೌರಮ್ಮ ಎಂದೂ ಬೇಸರಪಟ್ಟುಕೊಳ್ಳಲಿಲ್ಲ. ನನ್ನ ತಾಯಿ ಅಲ್ಲಿಂದ ನೀರು ತಂದು ಹರವಿಗೆ ಸುರುವಲು ಐದು ನಿಮಿಷ ಬೇಕಾಗುತ್ತಿತ್ತು. ನಾನು ಅಷ್ಟರೊಳಗಾಗಿ ನಿಪ್ಪಲ್ ಅನ್ನು ನನ್ನ ಬಾಯಿಗೆ ಹಚ್ಚಿ ಹಾಲಿನ ರುಚಿ ಸವಿಯುತ್ತಿದ್ದೆ. ಅಮ್ಮ ಬಂದ ಸಂದರ್ಭದಲ್ಲಿ ನಿಪ್ಪಲ್ ತಂಗಿಯ ಬಾಯಲ್ಲಿ ಇರುತ್ತಿತ್ತು. ಬಾಟಲಿಯಲ್ಲಿನ ಹಾಲಿನ ಕಾಲುಭಾಗ ನನ್ನ ಪಾಲಿನದಾಗುತ್ತಿತ್ತು!

(ಚಂದಾಬಾವಡಿ ದವಾಖಾನೆ)

ಅವಳು ಎರಡು ವರ್ಷದವಳಾದಾಗ ವಿಜಾಪುರಕ್ಕೆ ಸರ್ಕಸ್ ಬಂದಿತ್ತು. ನಾನು ಆ ಸರ್ಕಸ್ ನೋಡಿ ಬಂದೆ. (ಯಾರು ಕರೆದುಕೊಂಡು ಹೋಗಿದ್ದರೋ ನೆನಪಿಲ್ಲ.) ಆ ಸರ್ಕಸಲ್ಲಿ ಯುವತಿಯೊಬ್ಬಳು ಕಾಲು ಜೋಡಿಸಿಕೊಂಡು ನಿಂತು ಹಿಂಬದಿಯಿಂದ ಬಾಗಿ ಹಿಮ್ಮಡಿ ಸಮೀಪ ಅಂಗೈಯನ್ನು ನೆಲಕ್ಕೆ ಊರಿದಳು. ಇದು ನನಗೆ ಆಶ್ಚರ್ಯವೆನಿಸಿತು. ಮನೆಗೆ ಬಂದರೂ ಅದೇ ನೆನಪು. ಮರುದಿನ ನನ್ನ ತಂಗಿಯನ್ನು ನಿಲ್ಲಿಸಿ ಹಾಗೇ ಹಿಂದುಗಡೆ ಬಾಗಿಸಿದೆ. ಅದನ್ನು ನೋಡಿದ ತಾಯಿ ಅವಳನ್ನು ಎತ್ತಿಕೊಂಡು ನನಗೆ ಬಡಿದಳು.

ಈ ತಂಗಿ ಹುಟ್ಟಿದ ಸಂತೋಷ ಹೇಳತೀರದಷ್ಟಿತ್ತು. ಹೆಣ್ಣು ಹುಟ್ಟದೆ ಇರುವುದು ಯಾವುದೇ ತಾಯಿಗೆ ಬಹಳ ಬೇಸರದ ವಿಚಾರವಾಗಿತ್ತು. ಕಾರಣ ಇತರ ಹೆಣ್ಣುಮಕ್ಕಳು ಹೆಣ್ಣು ಹಡೆಯದವಳನ್ನು ನೋಡುವ ರೀತಿ ಮನಸ್ಸಿಗೆ ಬೇಸರ ಹುಟ್ಟಿಸುತ್ತಿತ್ತು.

ಒಂದು ಸಲ ಗಲ್ಲಿಯ ಇಬ್ಬರು ಹೆಣ್ಣುಮಕ್ಕಳು ನಮ್ಮ ಮನೆ ಮುಂದಿನ ರಸ್ತೆ ಮೇಲೆ ಜಗಳಾಡುತ್ತಿದ್ದರು. ಅವರ ಮಧ್ಯೆ ಬೈದಾಟ ಜೋರಾಗಿತ್ತು. ಅವರಲ್ಲಿ ಒಬ್ಬಳಿಗೆ ಬರೀ ಗಂಡುಮಕ್ಕಳಿದ್ದರು. ಆಕೆಯ ಧ್ವನಿ ಜೋರಾಗಿತ್ತು. ಇನ್ನೊಬ್ಬಳು ಅವಳ ಬಾಯಿಗೆ ಹತ್ತುವುದರಲ್ಲಿ ಸೋಲತೊಡಗಿದಳು. ಆಗ ಅವಳು ಕೂಡಲೆ “ಹೆಣ್ಣು ಇಲ್ಲದ ಹುರಗಾಲಿ” ಎಂದು ಛೇಡಿಸಿದಳು. ಬೈಸಿಕೊಂಡವಳ ಜಂಘಾಬಲವೇ ಉಡುಗಿ ಹೋಯಿತು. ಮಾತಿನ ಪೆಟ್ಟಿನಿಂದಾಗಿ ಅವಳಿಂದ ಮಾತುಗಳೇ ಹೊರಡಲಿಲ್ಲ. ಅಪಮಾನಕ್ಕೊಳಗಾಗಿ ಸುಸ್ತಾದ ಅವಳು ಮನೆಯ ಹಾದಿ ಹಿಡಿದಳು.

(ಮಠಪತಿ ಗಲ್ಲಿ)

ಬಹುಶಃ ಎರಡನೆಯ ಇಯತ್ತೆ ಮುಗಿದ ನಂತರದ ಬೇಸಗೆ ರಜೆಯಲ್ಲಿ ನನ್ನ ಮತ್ತು ನನ್ನ ತಮ್ಮನ ಸುಂತಿ (ಸುನತಿ) ಆಯಿತು. ಗಾಯ ಮಾಯ್ದ ಮೇಲೆ ನಿಶ್ಚಿತ ದಿನದಲ್ಲಿ ಧಾರ್ಮಿಕ ಕಾರ್ಯಕ್ರಮ ಮಾಡುತ್ತಾರೆ. ಸುಂತಿ ಆದ ಮೇಲೆ ಅದು ಒಣಗುವವರೆಗೆ ಚಡ್ಡಿ ಇಲ್ಲದೆ ಬರಿ ಅಂಗಿ ಹಾಕಿಕೊಂಡು ತಿರುಗುತ್ತಿದ್ದ ನಮ್ಮನ್ನು ಮೆರವಣಿಗೆಯ ದಿನ ಮದುಮಕ್ಕಳ ಹಾಗೆ ಸಿಂಗರಿಸಿ ಪ್ರತ್ಯೇಕ ಕುದುರೆಗಳ ಮೇಲೆ ಕೂಡಿಸಿ ಮೆರವಣಿಗೆ ಹೊರಡಿಸಿದ್ದರು. ಹೊಸ ಬಟ್ಟೆ ಮತ್ತು ಮಲ್ಲಿಗೆ ಹೂಗಳ ಸಹೆರಾದಿಂದಾಗಿ ದೇಹವೆಲ್ಲ ಹೂಮಯವಾಗಿತ್ತು. ಮುಂದುಗಡೆ ಬ್ರಾಸ್ ಬ್ಯಾಂಡಿನ ಬಾಜಾ ಬಜಂತ್ರಿಯ ವೈಭವ. ನಾವಿಗಲ್ಲಿಯ ಹೆಣ್ಣುಮಕ್ಕಳು, ಯುವಕರು, ಹುಡುಗರು, ಮತ್ತು ಹಿರಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಮ್ಮ ಗಲ್ಲಿಯ ಹೆಣ್ಣುಮಕ್ಕಳು ಹಬ್ಬದ ಸಮಯದಲ್ಲಿ ಉಡುವಂಥ ಸೀರೆ ಉಟ್ಟಿದ್ದರು. ಬೆಳ್ಳಿಯ ಚೈನು, ತೋಡೆ, ತೋಳಬಂದಿ ಮತ್ತು ಡಾಬ ಮುಂತಾದ ಆಭರಣಗಳನ್ನು ಧರಿಸಿದವರೂ ಇದ್ದರು. ಹೀಗೆ ಮೆರವಣಿಗೆ ಧೂಮ್‌ಧಾಮ್ ಆಗಿತ್ತು.

ಯುವತಿಯರು ಮೆರವಣಿಗೆಯುದ್ದಕ್ಕೂ ಮಲ್ಲಿಗೆ ಹೂಗಳನ್ನು ನಮ್ಮ ಮೇಲೆ ಎಸೆಯುತ್ತಿದ್ದರು. ನಮಗೆ ಮಸಾಲಾ ಪಾನ್ ತಿನ್ನಲು ಕೊಟ್ಟಿದ್ದರು. ನನ್ನ ಗೆಳೆಯ ಪಾಂಡುನ ಅಕ್ಕ ಹೂಗಳನ್ನು ಎರಚುವಾಗ ತಮಾಷೆಗಾಗಿ ಉಗಳುವಂತೆ ಮಾಡಿದೆ. ಅವಳು ನನ್ನನ್ನು ಮತ್ತು ತಮ್ಮನನ್ನು ಬೇರೆಯಾಗಿ ಕಾಣುತ್ತಿರಲಿಲ್ಲ. ಅವಳ ಆ ನಗು, ಪ್ರೀತಿ ಮತ್ತು ಸಂತೋಷ ಎಂದೂ ಮರೆಯಲಿಕ್ಕಾಗದು. ಬಡತನದಲ್ಲೂ ಎಂಥ ಸುಂದರ ಬದುಕು ನಮ್ಮದಾಗಿತ್ತು. ನಮ್ಮ ಮೆರವಣಿಗೆಯಲ್ಲಿ ಬಹಳವೆಂದರೆ ಮೂರೂಮುಕ್ಕಾಲು ಜನ ಮುಸ್ಲಿಮರಿರಬಹುದು. ಅಂದಿನ ವೈಭವ ಮತ್ತು ಮೆರವಣಿಗೆಯಲ್ಲಿ ಭಾಗಿಯಾದ ಜನರ ಉತ್ಸಾಹ, ಪ್ರೇಮಭಾವ ಮತ್ತು ಮಾನವೀಯ ಸಂಬಂಧಗಳು ನೆನಪಾದಾಗಾಲೆಲ್ಲ ಹೃದಯ ತುಂಬಿಬರುತ್ತದೆ.

ಈ ಮೆರವಣಿಗೆಗೆ ನನ್ನ ತಂದೆ ಆ ಕಾಲದಲ್ಲಿ ೨೦೦ ರೂಪಾಯಿ ಖರ್ಚು ಮಾಡಿದ್ದು ನೆನೆಪಾದಾಗ ಇಂದಿಗೂ ಸಖೇದಾಶ್ಚರ್ಯವಾಗುತ್ತದೆ. ಲಾರಿಯಿಂದ ೬೪ ಚೀಲ ಇಳಿಸಿ ವಖಾರದಲ್ಲಿ ಜೋಡಿಸಿಟ್ಟರೆ ಇಲ್ಲವೆ ವಖಾರದಿಂದ ತಂದು ಲಾರಿಯಲ್ಲಿ ಹೇರಿದ್ದರೆ ಒಂದು ರೂಪಾಯಿ ಸಿಗುತ್ತಿದ್ದ ಕಾಲವದು. ಈ ಮೆರವಣಿಗೆಗಾಗಿ ನಮ್ಮ ತಂದೆ ೧೨,೮೦೦ ಚೀಲ ಲೋಡ್ ಅಥವಾ ಅನ್‌ಲೋಡ್ ಮಾಡಿರಬಹುದು! ಎಷ್ಟು ವರ್ಷಗಳ ಶ್ರಮದ ಮೂಲಕ ೨೦೦ ರೂಪಾಯಿ ಸಂಗ್ರಹಿಸಿಟ್ಟಿರಬಹುದು! ಯಾವುದೇ ಜವಾಬ್ದಾರಿಯುತ ಬಡ ತಂದೆಯ ಮಕ್ಕಳು ಕೂಡ “ಶ್ರೀಮಂತ” ಆಗಿರುತ್ತಾರೆ. ನಮ್ಮ ತಂದೆ ತಾಯಿ ಮತ್ತು ಅಜ್ಜಿ, ಅವರ ದೃಷ್ಟಿಯಲ್ಲಿ ನಮಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳಲು ಸದಾ ಪ್ರಯತ್ನ ಮಾಡುತ್ತಿದ್ದರು.

ನಮ್ಮ ಮೆರವಣಿಗೆ ‘ಟಾಕ್ ಆಫ್ ದ ಟೌನ್’ ಆಗಿ ಬಿಟ್ಟಿತು. ನನ್ನ ಜೀವನದಲ್ಲಿ ಅದೇ ಮೊದಲ ಮತ್ತು ಕೊನೆಯ ಮೆರವಣಿಗೆಯಾಯಿತು. ಬುದ್ಧಿ ಬಂದಮೇಲೆ ಅಂಥ ವೆಚ್ಚದ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಕೊಡಲಿಲ್ಲ. ನಮ್ಮ ಜನರು ಮದುವೆ ಮುಂಜಿ ಮುಂತಾದ ಸಂಪ್ರದಾಯಗಳಿಗೆ ಮಾಡುವ ವೆಚ್ಚವನ್ನು ಶಿಕ್ಷಣಕ್ಕೆ ಮಾಡಿದ್ದರೆ ಅದೆಷ್ಟೋ ಬದಲಾವಣೆಯಾಗುತ್ತಿತ್ತು. ಬಡವರಿರಲಿ, ಶ್ರೀಮಂತರಿರಲಿ ಸಂಪ್ರದಾಯಗಳ ಆನಂದವೇ ಆನಂದ. ಆದರೆ ಶ್ರೀಮಂತರಿಗೆ ನಿಭಾಯಿಸುವ ಶಕ್ತಿ ಇರುವಷ್ಟು ಬಡವರಿಗೆ ಇರುವುದಿಲ್ಲ. ಅವರು ಒದ್ದಾಡುತ್ತಲೇ ಸಂಪ್ರದಾಯಗಳನ್ನು ಪಾಲಿಸುತ್ತಿರುತ್ತಾರೆ.

ತೆಗ್ಗಿನ ಶಾಲೆಯಲ್ಲಿ ನನಗೆ ಕೆಲ ಆಪ್ತ ಮಿತ್ರರಿದ್ದರು. ಅವರಲ್ಲಿ ಮುರನಾಳ ಅಡ್ಡಹೆಸರಿನ ವಿದ್ಯಾರ್ಥಿ ಇದ್ದ. ಆತ ನನ್ನ ಹಾಗೆ ಬಹಳ ಬಡವನಾಗಿದ್ದ. ಹಳ್ಳಿಯಿಂದ ಬಂದು ಗೂಗ್ಯಾಳ ಗೌಡರ ಮನೆಯಲ್ಲಿ ಕೆಲಸ ಮಾಡುತ್ತ ಶಾಲೆ ಕಲಿಯುತ್ತಿದ್ದ. ಗೂಗ್ಯಾಳ ಗೌಡರು ಅಂತಃಕರಣದ ವ್ಯಕ್ತಿಯಾಗಿದ್ದರು. ಅವರ ಮನೆಯ ಮಗನಾಗಿ ಪ್ರೀತಿಪಾತ್ರನಾಗಿದ್ದ ಮುರನಾಳ ತನಗೆ ವಹಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಅಭ್ಯಾಸ ಮಾಡುತ್ತಿದ್ದ.

ನಾವು ಚಿಕ್ಕವರಿದ್ದಾಗ ವಿಜಾಪುರದಲ್ಲಿ ಬಹುಪಾಲು ಮಂದಿಗೆ ಹಲಸಿನ ಹಣ್ಣಿನ ಬಗ್ಗೆ ಗೊತ್ತಿರಲಿಲ್ಲ. ಒಂದು ಸಲ ಗೂಗ್ಯಾಳ ಗೌಡರು ಪ್ರವಾಸಕ್ಕೆ ಹೋದಾಗ ಎಲ್ಲಿಂದಲೋ ಹಲಸಿನ ಹಣ್ಣನ್ನು ತಂದಿದ್ದರು. ಮುರನಾಳನಿಗೂ ತಿನ್ನಲು ಕೊಟ್ಟಿದ್ದರು. ಆತ ಒಂದಿಷ್ಟು ಉಳಿಸಿಕೊಂಡು ಪೇಪರಲ್ಲಿ ನನಗಾಗಿ ಕಟ್ಟಿಕೊಂಡು ಬಂದಿದ್ದ. ಆಗ ನಾವೆಲ್ಲ ಸ್ಕೂಲಲ್ಲಿ ನೆಲದ ಮೇಲೆ ಹಾಸಿಕೊಂಡು ಕೂಡುತ್ತಿದ್ದೆವು. ನನ್ನ ಹಿಂದೆ ಕುಳಿತಿದ್ದ ಮುರನಾಳ ಯಾರಿಗೂ ಗೊತ್ತಾಗದ ಹಾಗೆ ಪೇಪರ್ ಪುಡಿಕೆಯನ್ನು ನನಗೆ ಕೊಟ್ಟ. ನಾನು ಅದನ್ನು ಚಡ್ಡಿಯ ಕಿಸೆಯಲ್ಲಿ ತುರುಕಿಕೊಂಡೆ. (ಹಲಸಿನಲ್ಲಿ ಮುಖ್ಯವಾಗಿ ‘ಬಕ್ಕೆ’ ಮತ್ತು ‘ರಸಾಳ’ ಎಂದು ಎರಡು ಪ್ರಕಾರ. ಬಕ್ಕೆ ಹಳದಿಯಾಗಿದ್ದು ಸ್ವಲ್ಪ ಗಟ್ಟಿಯಾಗಿರುತ್ತದೆ ರಸಾಳ ಕೇಸರಿ ಬಣ್ಣದ್ದಾಗಿದ್ದು ಜಿಗುಟು ಜಿಗುಟಾಗಿ ಮೆತ್ತಗಾಗಿರುತ್ತದೆ. ಇದು ರಸಾಳವಾಗಿತ್ತು. ಏಕೆಂದರೆ ಪುಡಿಕೆ ಕಟ್ಟಿದ ಪೇಪರ್‌ಗೆ ಅಂಟಿಕೊಂಡಿತ್ತು. ಕ್ಲಾಸಿನಲ್ಲಿ ಸಣ್ಣಗೆ ಹಲಸಿನ ವಾಸನೆ ಹಬ್ಬಲು ಶುರುವಾಯಿತು. ಮಾಸ್ತರರು ಇದೆಲ್ಲಿಯ ವಾಸನೆ, ಯಾರು ಏನು ತಂದಿದ್ದೀರಿ ಎಂದು ಕೇಳತೊಡಗಿದರು. ನನಗೋ ಧರ್ಮಸಂಕಟ. ಏನೂ ತೋಚದೆ ಸುಮ್ಮನೆ ಕುಳಿತೆ. ಕೊನೆಗೆ ಮಾಸ್ತರರು ಬಂದು ಎದ್ದು ನಿಲ್ಲಿಸಿ ಚೆಕ್ ಮಾಡಲು ಪ್ರಾರಂಭಿಸಿದರು. ನಾನು ಕುಳಿತ ಸಾಲಿನಿಂದಲೇ ಚೆಕಿಂಗ್ ಶುರುವಾಯಿತು. ಆ ಸಾಲಿನಲ್ಲಿ ನಾನು ಮೂರನೆಯವನಾಗಿದ್ದೆ. ಎದ್ದು ನಿಂತಾಗ ಕಿಸೆ ಉಬ್ಬಿದ್ದು ಕಂಡಿತು. ಹೊರಗೆ ತೆಗೆಸಿದರು. ಓಪನ್ ಮಾಡಿದರು. ಇದು ಏನು ಎಂದು ಕೇಳಿದರು. ಅದು ಏನು ಎಂಬುದು ತಿಳಿಯದ ನಾನು ಸುಮ್ಮನೆ ನಿಂತೆ. (ರಸಾಳ ಹಲಸು ತನ್ನ ರೂಪವನ್ನು ಕಳೆದುಕೊಂಡು ಪೇಸ್ಟ್ ಹಾಗೆ ಆಗಿತ್ತು.) ಕೊನೆಗೆ ಮುರನಾಳ ವಿವರಿಸಿದ. ಮಾಸ್ತರರು ನಕ್ಕು ‘ನಿನ್ನ ದೋಸ್ತ ಒಬ್ಬನೇ ತಿನಬೇಕಾ’ ಎಂದು ಹೇಳಿ ಹೋದರು.

(ತೆಗ್ಗಿನ ಶಾಲೆ)

ತೆಗ್ಗಿನ ಶಾಲೆಯಲ್ಲಿ ಬಿ.ಎಸ್. ಪಾಟೀಲ ಎಂಬ ಶಿಸ್ತಿನ ಮಾಸ್ತರರು ಇದ್ದರು. ಅವರ ಬಗ್ಗೆ ನಮಗೆಲ್ಲ ಗೌರವವೂ ಭಯವೂ ಇತ್ತು. ಅವರು ಮಾಸ್ತರಿಕೆಯನ್ನು ಒಂದು ವ್ರತದಂತೆ ಮಾಡುತ್ತಿದ್ದರು. ಅವರ ಮನೆ ನಮ್ಮ ನಾವಿಗಲ್ಲಿ ಮನೆಯ ಹಿಂದಿನ ಸಾಲಿನ ಮಠಪತಿ ಗಲ್ಲಿಯಲ್ಲಿ ಇತ್ತು. ನಮ್ಮ ಮನೆಯಿಂದ ಅವರ ಮನೆಗೆ ಹೋಗಲು  ಎರಡು ನಿಮಿಷ ಸಾಕು. ಅವರು ನನಗೆ ಒಂದು ಕೆಲಸವನ್ನು ಹಚ್ಚುತ್ತಿದ್ದರು. ಅದೇನೆಂದರೆ ಜೋಳ ಬೀಸಿಕೊಂಡು ಬರುವುದು.

ನಮ್ಮ ಮನೆಯ ಜೋಳವನ್ನೂ ನಾನೇ ಬೀಸಿಕೊಂಡು ಬರುತ್ತಿದ್ದೆ. ಆದರೆ ಎರಡೂ ಮನೆಯ ಜೋಳವನ್ನು ಒಮ್ಮೆಲೆ ಬೀಸಿಕೊಂಡು ಬರಲಿಕ್ಕಾಗುತ್ತಿರಲಿಲ್ಲ. ಹೀಗಾಗಿ ನಾನು ಹದಿನೈದು ದಿನಗಳಲ್ಲಿ ಎರಡೆರಡು ಸಲ ಹಿಟ್ಟಿನ ಗಿರಣಿಗೆ ಹೋಗಬೇಕಿತ್ತು. ಆ ಗಿರಣಿ ಅಷ್ಟೇನು ದೂರವಿರಲಿಲ್ಲ. ಬಹಳವೆಂದರೆ ಹತ್ತು ನಿಮಿಷದ ದಾರಿ. ಲದ್ದಿಕಟ್ಟಿ ಹನುಮಂತದೇವರ ಗುಡಿಯ ಪೌಳಿಯಲ್ಲಿ ಆ ಹಿಟ್ಟಿನ ಗಿರಣಿ ಇತ್ತು. ಆ ಗಿರಣಿ ನಡೆಸುವ ಆಳು ಅಬ್ದುಲ್ ಹಿಟ್ಟಿನಿಂದ ಸ್ನಾನ ಮಾಡಿದವರ ಹಾಗೆ ಇರುತ್ತಿದ್ದ. ಅವನ ಎಣ್ಣೆ ಹಚ್ಚದ ಕೂದಲು, ಹೇಗೋ ಬೆಳೆದ ಗಡ್ಡ ಮೀಸೆ ಎಲ್ಲವೂ ಹಿಟ್ಟುಮಯವಾಗಿರುತ್ತಿದ್ದವು.

ಆತನ ಸಂಯಮ ಅಸಾಧ್ಯವಾದುದಾಗಿತ್ತು. ಧಾನ್ಯ ಬೀಸಿಕೊಳ್ಳಲು ಬರುವವರು ಕಿರಿಕಿರಿ ಮಾಡಿದರೂ ನಕ್ಕು ಸುಮ್ಮನಿರುತ್ತಿದ್ದ. ಆ ಇಡೀ ಪ್ರದೇಶದಲ್ಲಿ ಅದೊಂದೇ ಹಿಟ್ಟಿನ ಗಿರಣಿ ಇತ್ತು. ಅದು ಡೀಸಲ್ ಎಂಜಿನ್‌ನಿಂದ ನಡೆಯುತ್ತಿತ್ತು. ಡೀಸಲ್ ಎಂಜಿನ್ ಗಾಲಿಯಿಂದ ಬೀಸುವ ಗಿರಣಿಯ ಗಾಲಿಗೆ ದಪ್ಪನೆಯ ಬೆಲ್ಟ್ ಜೋಡಿಸಿದ್ದರು. ಒಂದೊಂದು ಸಲ ಆ ಬೆಲ್ಟ್ ಕಳಚಿ ಬೀಳುತ್ತಿತ್ತು. ಆಗ ಗಿರಣಿ ಬಂದಾಗುತ್ತಿತ್ತು. ಹಳೆಯದಾಗಿದ್ದರಿಂದ ಎಂಜಿನ್ ಕೂಡ ಕೆಲವೊಮ್ಮೆ ಬಂದ್ ಬೀಳುತ್ತಿತ್ತು. ‘ಆಲ್ ಇನ್ ಒನ್’ ಆಗಿದ್ದ ಅಬ್ದುಲ್, ತಾನೇ ರಿಪೇರಿ ಮಾಡಿ ಎಂಜಿನ್ ಚಾಲೂ ಮಾಡುತ್ತಿದ್ದ. ಎಂಜಿನಿನ ಹೊಗೆಗೊಳವೆ ಗಿರಣಿ ಕಟ್ಟಡದಿಂದ ಇನ್ನೂ ಎತ್ತರಕ್ಕೆ ಇರುತ್ತಿತ್ತು. ಆ ಕೊಳವೆಯ ಬಾಯಿಗೆ ಚಿಕ್ಕದಾದ ತಗಡಿನ ಡಬ್ಬಿ ಕಟ್ಟುತ್ತಿದ್ದ. ಆ ಡಬ್ಬಿಯ ಒಂದೇ ಮಗ್ಗಲಿಗೆ ತಂತಿಯಿಂದ ಬಿಗಿದ ಕಾರಣ ಎಂಜಿನ್ ಚಾಲೂ ಆದಾಗ ಅದು ಕುಣಿಯುತ್ತ ‘ಪಕ್ ಪಕ್ ಪಕ್’ ಎಂದು ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಆ ಸಪ್ಪಳ ಸುತ್ತುಮುತ್ತಲಿನ ಮನೆಗಳವರಿಗಲ್ಲದೆ ನಮ್ಮ ಮನೆಯವರೆಗೂ ಕೇಳಿಸುತ್ತಿತ್ತು. ಗಿರಣಿಗೆ ಹೋಗಲು ಜೋಳದ ಡಬ್ಬಿಯನ್ನು ಇಟ್ಟುಕೊಂಡು ಕುಳಿತ ನಾನು ಸೌಂಡು ಕೇಳಿದ ಕೂಡಲೆ, ಆ ಗೋಧೂಳಿ ಸಮಯದಲ್ಲಿ ಗಿರಣಿಯ ಕಡೆಗೆ ಧಾವಿಸುತ್ತಿದ್ದೆ.

ನಾನು ಹೋಗುವುದರೊಳಗಾಗಿ ಅನೇಕ ಜನರ ಜೋಳ ಗೋಧಿ ಮುಂತಾದ ಧಾನ್ಯಗಳ ಡಬ್ಬಿಗಳು ಸರತಿಯಲ್ಲಿರುತ್ತಿದ್ದವು. ಬೀಸಿಕೊಂಡು ಹೋಗಲು ಬಂದ ಹೆಣ್ಣುಮಕ್ಕಳು ಕಿಕ್ಕಿರಿದು ತುಂಬಿರುತ್ತಿದ್ದರು. ಕೆಲವರು ಮಕ್ಕಳನ್ನೂ ಕರೆದುಕೊಂಡು ಬಂದಿರುತ್ತಿದ್ದರು. ನನ್ನ ವಯಸ್ಸಿನ ಹುಡುಗರು ಒಂಟಿಯಾಗಿ ಬಂದಿರುತ್ತಿದ್ದರು. ಎಂಜಿನ್ ಸಪ್ಪಳ, ಎಂಜಿನ್ ಮೂಲಕ ಬೀಸುವ ಕಲ್ಲಿನ ಸಪ್ಪಳ, ಕೊಳವೆಗೆ ಕಟ್ಟಿದ ಡಬ್ಬಿಯ ಪಕ್ ಪಕ್ ಕರ್ಕಶ ಧ್ವನಿ, ಜನರ ಗದ್ದಲ ಮತ್ತು ಹಿಟ್ಟಿನ ಹುಡಿಯಿಂದ ತುಂಬಿದ ವಾತಾವರಣ.

ಈ ಗದ್ದಲಲ್ಲಿ ನನ್ನ ಪಾಳಿ ಬರಲು ಕನಿಷ್ಠ ಎರಡು ಗಂಟೆಗಳು ಬೇಕಾಗುತ್ತಿತ್ತು. ಆದ್ದರಿಂದ ನಾನು ಗಿರಿಣಿಗೆ ಹೋಗುವಾಗ ಒಂದು ಪುಸ್ತಕವನ್ನು ತೆಗೆದುಕೊಂಡು ಹೋಗುತ್ತಿದ್ದೆ. ಅಷ್ಟೇನೂ ಹೆಚ್ಚಿಲ್ಲದ ದೀಪದ ಬೆಳಕಿನಲ್ಲಿ ತದೇಕಚಿತ್ತನಾಗಿ ಹೊರಗಿನ ಕಟ್ಟೆಯ ಮೇಲೆ ಓದುತ್ತ ಕೂಡುತ್ತಿದ್ದೆ.

ಗಿರಣಿಗೆ ಬಂದ ಪ್ರತಿಯೊಬ್ಬರು ತಮ್ಮ ಧಾನ್ಯದ ಡಬ್ಬಿ ಅಥವಾ ಬುಟ್ಟಿಯ ಬಳಿ ಇರುತ್ತಿದ್ದರು. ಒಬ್ಬರ ಧಾನ್ಯ ಬೀಸುವುದು ಮುಗಿದ ಕೂಡಲೆ ಹಿಂದಿನವರು ತಮ್ಮ ತಮ್ಮ ಧಾನ್ಯದ ಡಬ್ಬಿಗಳನ್ನು ಮುಂದೆ ಸರಿಸುತ್ತಿದ್ದರು. ಹೀಗೆ ಪಾಳಿಯ ಪ್ರಕಾರ ಡಬ್ಬಿಗಳು ಮತ್ತು ಬುಟ್ಟಿಗಳು ಮುಂದೆ ಸರಿಯುತ್ತಿದ್ದವು. ಗಿರಣಿಯ ಹತ್ತಿರ ಡಬ್ಬಿ ಬಂದಾಗ ಅದನ್ನು ತಂದವರು ಅಲ್ಲಿ ಇರಲೇ ಬೇಕು. ಇಲ್ಲದಿದ್ದರೆ ಅಬ್ದುಲ್ ಆ ಡಬ್ಬಿಯನ್ನು ಪಕ್ಕಕ್ಕೆ ಸರಿಸಿಡುತ್ತಿದ್ದ. ನನ್ನ ಧಾನ್ಯದ ಡಬ್ಬಿಗೆ ಇಂಥ ಪರಿಸ್ಥಿತಿ ಆಗಾಗ ಒದಗಿ ಬರುತ್ತಿತ್ತು. ನಾನು ಪುಸ್ತಕದಲ್ಲಿ ಮಗ್ನನಾದಾಗ ಆ ಗಿರಣಿಯ ಗದ್ದಲ ಸ್ವಲ್ಪವೂ ಕೇಳಿಸುತ್ತಿರಲಿಲ್ಲ. ಆ ಮೇಲೆ ಹೋಗಿ ತಿಳಿಸಿದಾಗ ಅಬ್ದುಲ್ ಬೀಸಿ ಕೊಡುತ್ತಿದ್ದ.

ಜೋಳ ಬೀಸಿಕೊಂಡು ಪಾಟೀಲ ಸರ್ ಮನೆಗೆ ಹೋದಾಗ ಅವರು ಕೈಯಲ್ಲಿರುವ ಪುಸ್ತಕ ನೋಡಿ ನನ್ನ ಓದುವ ಹುಚ್ಚಿಗೆ ಸಂತಸಪಡುತ್ತಿದ್ದರು. ಅವರು ಆರು ತಿಂಗಳಿಗೊಮ್ಮೆ ಟೋಪಿ ಬದಲಿಸುತ್ತಿದ್ದರು. ಬಟ್ಟೆ ಮತ್ತು ರಟ್ಟಿನ ಟೋಪಿಗಳನ್ನು ಬಳಸುತ್ತಿದ್ದ ಅವರು ಅವುಗಳನ್ನು ಬದಲಿಸಿದಾಗ ನನಗೆ ಕೊಡುತ್ತಿದ್ದರು. ಅವು ಬಹಳ ನೀಟಾಗಿರುತ್ತಿದ್ದವು. ಅವರು ಗಣಿತ ಶಿಕೋಣಿ (ಟ್ಯೂಷನ್) ತೆಗೆದುಕೊಳ್ಳುತ್ತಿದ್ದರು. ಟ್ಯೋಷನ್‌ಗೆ ಬರುವ ವಿದ್ಯಾರ್ಥಿಗಳು ತಿಂಗಳಿಗೆ ಎರಡು ರೂಪಾಯಿ ಕೊಡುತ್ತಿದ್ದರು. ಆದರೆ ನನಗೆ ಉಚಿತ ಪ್ರವೇಶವಿತ್ತು.

ರಂಜಾನ್ ತಿಂಗಳಲ್ಲಿ ಮತ್ತು ಬಕ್ರೀದ್‌ನಲ್ಲಿ ಮುಸ್ಲಿಮರು ಶುರಕುಂಬಾ (ಅದರ ಮೂಲ ಹೆಸರು ಕ್ಷೀರಕುರ್ಮಾ) ಎಂಬ ಪಾಯಸ ಮಾಡುತ್ತಾರೆ. ಹಾಲು, ಶಾವಿಗೆ, ಬೆಲ್ಲ/ಸಕ್ಕರೆ, ಗಸಗಸಿ, ಡ್ರಾಯ್ ಫ್ರುಟ್ಸ್ ಮುಂತಾದವುಗಳನ್ನು ಹಾಕಿ ತಯಾರಿಸುತ್ತಾರೆ. ಒಂದು ಸಲ ರಂಜಾನ್ ಮುಗಿದ ಮೇಲೆ ಪಾಟೀಲ ಸರ್‌ಗೆ ಶುರುಕುಂಬಾ ಕುಡಿಯುವ ಮನಸ್ಸಾಯಿತು. (ಅವರು ಎಂದೂ ಶುರಕುಂಬಾ ಕುಡಿದಿರಲಿಲ್ಲ) ನಾನು ತಾಯಿಗೆ ಹೇಳಿದೆ. ತಾಯಿ ಖುಷಿಯಿಂದ ಸ್ಪೇಷಲ್ ಆಗಿ ಅಂದರೆ ಬರಿ ಹಾಲಿನಲ್ಲಿ ಸಕ್ಕರೆ ಮತ್ತು ಎಲ್ಲ ಡ್ರಾಯ್ ಫ್ರುಟ್ಸ್ ಹಾಕಿ ಮರುದಿನ ಮಾಡಿಕೊಟ್ಟಳು.

ರಾತ್ರಿ ಎಂಟು ಗಂಟೆ ವೇಳೆಗೆ ತೆಗೆದುಕೊಂಡು ಬರಲು ಸರ್ ಹೇಳಿದ್ದರು. ನಾನು ಆ ವೇಳೆಗೆ ಹೋಗುವುದರೊಳಗಾಗಿ, ಅವರ ಚಾಳ ಮುಂದಿರುವ ಸಿದ್ರಾಮಪ್ಪನ ಕಿರಾಣಿ ಅಂಗಡಿಯ ಎದುರು ನಿಂತಿದ್ದರು. ಅಲ್ಲಿಯೆ ಶುರಕುಂಬಾ ಗ್ಲಾಸ್ ಕೊಟ್ಟೆ. ಆ ಕುರಿತು ಸಿದ್ರಾಮಪ್ಪನಿಗೆ ಸರ್ ಬಹಳಷ್ಟು ಹೇಳಿದರು. ಅವರ ಉದ್ದೇಶ ‘ಅದು ಮಾಂಸಾಹಾರವಲ್ಲ ಶಾಖಾಹಾರ’ ಎಂಬುದನ್ನು ಸಿದ್ರಾಮಪ್ಪನಿಗೆ ಮನವರಿಕೆ ಮಾಡಿಕೊಡುವುದಾಗಿತ್ತು. ಮನೆಗೆ ಹೋಗಿ ಇನ್ನೊಂದು ಗ್ಲಾಸ್ ತೆಗೆದುಕೊಂಡು ಬಂದು ಸಿದ್ರಾಮಪ್ಪನಿಗೂ ಅರ್ಧ ಕೊಟ್ಟರು. ಇಬ್ಬರೂ ಶುರಕುಂಬಾ ರುಚಿಯನ್ನು ಬಹಳ ಮೆಚ್ಚಿಕೊಂಡರು. ನನಗೆ ಹೇಳತೀರದಷ್ಟು ಆನಂದವಾಯಿತು.

(ಲಕ್ಷ್ಮೀಗುಡಿ)

ಬಡತನದಲ್ಲೂ ಎಂಥ ಸುಂದರ ಬದುಕು ನಮ್ಮದಾಗಿತ್ತು. ನಮ್ಮ ಮೆರವಣಿಗೆಯಲ್ಲಿ ಬಹಳವೆಂದರೆ ಮೂರೂಮುಕ್ಕಾಲು ಜನ ಮುಸ್ಲಿಮರಿರಬಹುದು. ಅಂದಿನ ವೈಭವ ಮತ್ತು ಮೆರವಣಿಗೆಯಲ್ಲಿ ಭಾಗಿಯಾದ ಜನರ ಉತ್ಸಾಹ, ಪ್ರೇಮಭಾವ ಮತ್ತು ಮಾನವೀಯ ಸಂಬಂಧಗಳು ನೆನಪಾದಾಗಾಲೆಲ್ಲ ಹೃದಯ ತುಂಬಿಬರುತ್ತದೆ.

ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಹಳೆಯದಾದ ಸಾದಾ ಮಸೀದಿ ಇತ್ತು. ಅದರೊಳಗೆ ಡೋಲಿ ಇದ್ದು. ಮೊಹರಂ ವೇಳೆ ಅದನ್ನು ಸಿಂಗರಿಸುವ ರೀತಿ ಅನನ್ಯವಾಗಿತ್ತು. ಡೋಲಿಯ ಕಾಲು, ಸುತ್ತಲಿನ ಚೌಕಟ್ಟು ಮತ್ತು ಮೇಲೆಲ್ಲ ಹೊಸ ಈಚಲು ಚಾಪೆಯನ್ನು ಕತ್ತರಿಸಿ ಜೋಡಿಸುತ್ತಿದ್ದರು. ಆಗ ಇಡೀ ಡೋಲಿ ಚಾಪೆ ಸುತ್ತಿಕೊಂಡು ಹೊಸ ಡೋಲಿಯ ಹಾಗೆ ಕಾಣುತ್ತಿತ್ತು. ಡೋಲಿಯ ಸೌಂದರ್ಯಕ್ಕೆ ಕುಂದು ಬರದಂತೆ ಸುತ್ತಿದ ಚಾಪೆಯ ಮೇಲೆ ಕೆಮ್ಮಣ್ಣು ಮೆತ್ತುತ್ತಿದ್ದರು. ನಂತರ ಅದರ ಮೇಲೆ ಆಳವಿ ಹಾಕಿ ಪಿಚಕಾರಿಯಿಂದ ದಿನವೂ ನೀರು ಹೊಡೆಯುತ್ತಿದ್ದರು. ಕೆಲ ದಿನಗಳಲ್ಲೇ ಆಳವಿ ಸಸಿ ಎದ್ದು ಇಡೀ ಡೋಲಿ ಹಸಿರಿನಿಂದ ಕಂಗೊಳಿಸುತ್ತಿತ್ತು. ಈ ಡೋಲಿಯಿಂದಾಗಿ ಆ ಮಸೀದಿಗೆ ‘ಆಳವಿಡೋಲಿ ಮಸಿದಿ’ ಎಂದು ಕರೆಯುತ್ತಿದ್ದರು. ಮೊಹರಂ ಮುಗಿದ ಮೇಲೆ ಅದು ಎಂದಿನಂತೆ ಆ ಮಸೀದಿಯ ಮೂಲೆಯಲ್ಲಿರುತ್ತಿತ್ತು. ಅದು ಹುತಾತ್ಮಳ ಡೋಲಿಯಾಗಿತ್ತು.

ಅಲ್ಲಿ ಯಾರೂ ನಮಾಜ ಮಾಡುತ್ತಿರಲಿಲ್ಲ. ಒಮ್ಮೆ ಒಬ್ಬ ವ್ಯಕ್ತಿ ಬಂದು ನಮಾಜು ಮಾಡಿಸತೊಡಗಿದ. ನಾನೂ ನಮಾಜ ಮಾಡಲು ಹೋದೆ. ಸ್ವಲ್ಪ ತೆಳ್ಳನೆಯ ಮತ್ತು ಉದ್ದನೆಯ ಆ ವ್ಯಕ್ತಿಯ ಬಂಗಾರದ ಬಣ್ಣದವನಾಗಿದ್ದು ಸ್ಫುರದ್ರೂಪಿಯಾಗಿದ್ದ. ಆತ ಬೆಳ್ಳನೆಯ ಲುಂಗಿ, ಜುಬ್ಬ ಮತ್ತು ಅಷ್ಟೇ ಬೆಳ್ಳನೆಯ ರುಮಾಲನ್ನು ಸುತ್ತಿಕೊಂಡು ಕಂಗೊಳಿಸುತ್ತಿದ್ದ. ನಗುಮುಖದ ಆತ ಜಾಸ್ತಿ ಮಾತನಾಡುತ್ತಿರಲಿಲ್ಲ. ಸದಾ ದೇವರಲ್ಲಿ ಐಕ್ಯನಾದವನ ಹಾಗೆ ಇದ್ದ. ಮಸೀದಿಯ ಒಂದು ಮೂಲೆಯಲ್ಲಿ ಮಲಗುತ್ತಿದ್ದ. ಅದರ ಮುಂದಿನ ಚಿಕ್ಕ ಆವರಣದ ಮೂಲೆಯೊಂದರಲ್ಲಿ ಅನ್ನ ಸಾರು ಮಾಡಿಕೊಳ್ಳುತ್ತಿದ್ದ. ಕೆಲವೊಂದು ಸಲ ಯಾರಾದರೂ ಊಟ ತಂದುಕೊಡುತ್ತಿದ್ದರು ಅಥವಾ ಮನೆಗೆ ಕರೆದುಕೊಂಡು ಊಟ ಹಾಕಿಸುತ್ತಿದ್ದರು. ಆತ ಧರ್ಮವೇ ಮೂರ್ತಿವೆತ್ತಂತಿದ್ದ. ಒಂದು ದಿನ ಯಾವನೋ ಪುಟಗೋಸಿ ಬಂದು ಇಲ್ಲಿ ಹೆಣ್ಣು ಡೋಲಿ ಇದೆ, ನಮಾಜು ಮಾಡಬಾರದು ಎಂದು ಹೇಳಿದ. ಆ ವ್ಯಕ್ತಿಗೆ ಏನನ್ನಿಸಿತೋ ಅಂದು ಹೋದವ ಮರಳಿ ಬರಲೇ ಇಲ್ಲ. ನನಗೆ ಈ ಘಟನೆ ಬಹಳ ಬೇಸರವೆನಿಸಿತು. ನನಗೆ ನಮಾಜದ ಆನಂದ ಮತ್ತು ಆ ಸಾತ್ವಿಕ ಪುರುಷನನ್ನು ನೋಡುವ ಆನಂದ ಇಲ್ಲವಾದವು. ಬಹಳ ದಿನಗಳವರೆಗೆ ಈ ಘಟನೆ ನೋವುಂಟು ಮಾಡುತ್ತಲೇ ಇತ್ತು.

ಕೆಲ ತಿಂಗಳುಗಳು ಕಳೆದ ಮೇಲೆ ಸೈಕಲ್ ರಿಪೇರಿ ಅಂಗಡಿಯವನೊಬ್ಬ ಪ್ರತಿದಿನ ಬಜಾರದಿಂದ ಬಂದು ನಮಾಜು ಮಾಡಿಸುತ್ತಿದ್ದ. ನಾವು ಮತ್ತು ನಮಾಜ್ ಮಾಡಲು ಪ್ರಾರಂಭಿಸಿದೆವು. ಆತ ಕೂಡ ಬಹಳ ನಿಷ್ಠೆ ಚಾಕಚಕ್ಯತೆಯಿಂದ ನಮಾಜ ಮಾಡಿಸುತ್ತಿದ್ದ. ಸ್ವಲ್ಪ ದಿನಗಳಲ್ಲಿ ಆತ ಕೂಡ ಬರುವುದನ್ನು ಬಿಟ್ಟ. ಯಾರು ಏನು ಹೇಳಿದರೋ ಗೊತ್ತಾಗಲಿಲ್ಲ. ಧಾರ್ಮಿಕ ಸಮಾಜಗಳಲ್ಲಿ ಮೂಲಭೂತವಾದಿಗಳು, ಕೋಮುವಾದಿಗಳು ಮತ್ತು ಏನೂ ಗೊತ್ತಿಲ್ಲದ ಕರ್ಮಠರದೇ ಕಾರುಬಾರು ಜಾಸ್ತಿ ಇರುತ್ತದೆ. ಜನಸಾಮಾನ್ಯರು ಧರ್ಮದ ಮೂಲಕ ನೆಮ್ಮದಿ ಪಡೆಯಲು ಅವರು ಬಿಡುವುದೇ ಇಲ್ಲ. ಜನರನ್ನು ಹಿಂದೂ ಮುಸ್ಲಿಂ ಮಾಡುವುದರಲ್ಲೇ ಅವರು ತಲ್ಲೀನರಾಗಿರುತ್ತಾರೆ.

ರಂಜಾನ್ ಮತ್ತು ಬಕ್ರೀದಗಳಲ್ಲಿ ನನ್ನ ತಂದೆ ದೊಡ್ಡ ಹಂಡೆಯಲ್ಲಿ ಶುರಕುಂಬಾ ತಯಾರಿಸಲು ಎಲ್ಲ ವ್ಯವಸ್ಥೆ ಮಾಡುತ್ತಿದ್ದರು. ಅದು ಅವರಿಗೆ ಬಹಳ ಪ್ರಿಯವಾದ ಕಾರ್ಯವಾಗಿತ್ತು. ನಾವಿಗಲ್ಲಿಯ ಜನರೆಲ್ಲ ಶುರಕುಂಬಾ ಕುಡಿಯಬೇಕೆಂಬುದು ಅವರ ಆಶಯವಾಗಿತ್ತು. ಗಲ್ಲಿಯ ಜನರೆಲ್ಲ ಬಂದು ಪ್ರೀತಿಯಿಂದ ಸ್ವೀಕರಿಸುತ್ತಿದ್ದರು. ಕೆಲವರಿಗೆ ನಾವೇ ಮನೆಗೆ ಹೋಗಿ ಕೊಡುತ್ತಿದ್ದೆವು. ನನ್ನ ದಲಿತ, ಲಿಂಗಾಯತ ಮತ್ತು ಬ್ರಾಹ್ಮಣ ಗೆಳೆಯರು ಮನೆಗೆ ಬಂದು ಹಬ್ಬದೂಟ ಮಾಡಿ ಹೋಗುತ್ತಿದ್ದರು.

ನಮ್ಮೂರಲ್ಲಿ ಮುಸ್ಲಿಂ ಗೆಳೆಯರ ಜೊತೆ ಹಿಂದೂ ಗೆಳೆಯರು ಕೂಡ ರಂಜಾನ್ ಹಬ್ಬದಲ್ಲಿ ಈದಗಾ ಮೈದಾನಗೆ ಹೋಗಿ ನಮಾಜ ಮಾಡುವುದನ್ನು ನೋಡಿದ್ದೇನೆ. ಅದೇ ರೀತಿ ನನ್ನಂಥ ಅನೇಕ ಮುಸ್ಲಿಂ ಬಾಲಕರು ಇತರ ಗೆಳೆಯರ ಜೊತೆಗೆ ಗುಡಿ ಗುಂಡಾರಗಳನ್ನು ಸುತ್ತಿದ್ದೇವೆ. ಇವೆಲ್ಲ ಸಹಜವಾಗಿದ್ದವು. ನಮ್ಮೆಲ್ಲರ ತಾಯಿ ತಂದೆಗಳು ಇಂಥ ವಿಚಾರಗಳ ಬಗ್ಗೆ ಎಂದೂ ಪ್ರಶ್ನಿಸುತ್ತಿದ್ದಿಲ್ಲ. ಅಂಥ ಯೋಚನೆ ಕೂಡ ಅವರಿಗೆ ಬರುತ್ತಿದ್ದಿಲ್ಲ. ನಾವು ನಗರದೊಳಗೆ ಹೋಗುವಾಗ ಸಿಕ್ಕ ಸಿಕ್ಕ ಗುಡಿಗಳಿಗೆ, ದರ್ಗಾಗಳಿಗೆ ಮತ್ತು ಚರ್ಚ್ಗಳಿಗೆ ರಸ್ತೆ ಮೇಲಿಂದಲೇ ನಮಸ್ಕರಿಸಿ ಹೋಗುತ್ತಿದ್ದೆವು. ನಮಗೆ ಎಲ್ಲವೂ ಸುಂದರವಾಗಿ ಕಾಣುತ್ತಿದ್ದವು. ಎಲ್ಲ ಜನರೂ ಒಂದೇ ಎಂಬ ಭಾವ ನಮ್ಮಲ್ಲಿ ಸಹಜವಾಗಿತ್ತು. ಈ ಸಹಜತೆ ಆ ಕಾಲದ ಹಿರಿಯರಿಂದ ಬಂದುದಾಗಿತ್ತು. ಜಾತಿಗಳು ಅವರವರ ಮನೆಗೆ ಮತ್ತು ಸಮಾಜಕ್ಕೆ ಸೀಮಿತವಾಗಿದ್ದವು. ಬೇರೆಯವರ ಜೀವನವಿಧಾನವನ್ನು ಯಾರೂ ಪ್ರಶ್ನಿಸುತ್ತಿದ್ದಿಲ್ಲ. ಬದಲಿಗೆ ಇತರರ ಧಾರ್ಮಿಕ ಕಾರ್ಯಗಳಿಗೆ ತನುಮನಧನದಿಂದ ಸಹಾಯ ಮಾಡುತ್ತಿದ್ದರು. ಜಾತ್ರೆ ಉರುಸ್ ಮುಂತಾದವುಗಳನ್ನು ಎಲ್ಲ ಧರ್ಮದವರು ಕೂಡಿಯೆ ಮಾಡುತ್ತಿದ್ದರು.

ನಿರಕ್ಷರಿ ಜನಸಾಮಾನ್ಯರಿಗೆ ದೇವರ ಬಗೆಗಿನ ನಂಬಿಕೆ ಅನನ್ಯವಾಗಿರುತ್ತದೆ. ಅವರು ದೇವರನ್ನು ಧರ್ಮಗಳ ಚೌಕಟ್ಟಿನಾಚೆ ನಿಂತು ನೋಡುವ ಶಕ್ತಿಯನ್ನು ಪಡೆದಿರುತ್ತಾರೆ. ‘ದೇವರು ಒಬ್ಬನೇ, ಆದರೆ ಧರ್ಮ ಹಲವು’ ಎಂಬುದು ಜನಸಾಮಾನ್ಯರ ನಂಬಿಕೆಯಾಗಿತ್ತು. ಆದ್ದರಿಂದ ಅವರವರ ಧರ್ಮದ ಪ್ರಕಾರ ದೇವರ ಪೂಜೆ, ಪ್ರಾರ್ಥನೆ ಮಾಡುತ್ತಾರೆ. ಬೇರೆಯವರ ಧಾರ್ಮಿಕ ವಿಧಿವಿಧಾನಗಳನ್ನು ಟೀಕಿಸಬಾರದು ಎಂಬುದು ಅವರ ಮನಸ್ಥಿತಿಯಾಗಿತ್ತು.

ಧರ್ಮದ ಚೌಕಟ್ಟಿನೊಳಗೆ ನಿಂತು ನೋಡುವ ಮೂಲಭೂತವಾದಿಗಳು ಮತ್ತು ಕೋಮುವಾದಿಗಳು ಇಂಥ ಮಹಾನ್ ಜನಸಾಮಾನ್ಯರಿಂದ ಪಾಠವನ್ನು ಕಲಿಯಲೇ ಇಲ್ಲ. ಆದರೆ ಅವರಿಗೆ ಪಾಠ ಹೇಳಿ ಹೇಳಿ ತಲೆಕೆಡಿಸುವಲ್ಲೇ ತಲ್ಲೀನರಾಗಿರುತ್ತಾರೆ. ನಾನು ನನ್ನ ತಂದೆಯ ಜೊತೆ ವರ್ಷದಲ್ಲಿ ಎರಡು ಸಲ ಅಂದರೆ ರಂಜಾನ್‌ನಲ್ಲಿ ಮತ್ತು ಬಕ್ರೀದ್ ಸಮಯದಲ್ಲಿ ನಮಾಜ್ ಮಾಡಲು ಈದಗಾ ಮೈದಾನಕ್ಕೆ ಹೋಗುತ್ತಿದ್ದೆ. ಆದಿಲಶಾಹಿ ಕಾಲದ ಆ ಭವ್ಯ ಈದಗಾ ನೋಡುವುದೇ ಒಂದು ಆನಂದ. ಹತ್ತಾರು ಸಾವಿರ ಜನರು ಮಾಡುವ ಹಾಗೆ ನಾನು (ನೋಡಿಕೊಂಡು) ನಮಾಜ್ ಮಾಡುತ್ತಿದ್ದೆ. ನಮಾಜ್ ನಂತರ ಧರ್ಮಗುರುಗಳ ಕುತ್ಬಾ (ಪ್ರವಚನ) ಇರುತ್ತಿತ್ತು. ನನಗೆ ತಿಳಿಯದಿದ್ದರೂ ಅದರ ಒಟ್ಟು ಧ್ವನಿ ಧರ್ಮಮಾರ್ಗದಲ್ಲಿ ನಡೆಯುವುದರ ಕುರಿತು ಇರುತ್ತಿತ್ತು ಎಂಬುದು ಭಾಸವಾಗುತ್ತಿತ್ತು.

ಹೊರಗೆ ಭಿಕ್ಷುಕರು  ನಮಾಜ ಮತ್ತು ಕುತ್ಬಾ ಮುಗಿಯುವುದನ್ನೇ ಕಾಯುತ್ತಿದ್ದರು. ಬಗೆ ಬಗೆಯ ಭಿಕ್ಷುಕರು ಅಲ್ಲಿರುತ್ತಿದ್ದರು. ಕೆಲವರನ್ನು ನೋಡಿದರೆ ಭಯ ಬರುತ್ತಿತ್ತು. ಒಬ್ಬಾತ ತಗ್ಗು ತೋಡಿ ಅದರಲ್ಲಿ ತಲೆ ಇಟ್ಟು ಶೀರ್ಷಾಸನದ ರೀತಿಯಲ್ಲಿ ಕಾಣುತ್ತಿದ್ದ. ಆತನ ಕುತ್ತಿಗೆಯವರೆಗೆ ಮಣ್ಣನ್ನು ಮುಚ್ಚಿರುತ್ತಿದ್ದರು. ಅವನು ಅದು ಹೇಗೆ ಉಸಿರಾಡುತ್ತಿದ್ದ? ಕಸಿವಿಸಿಗೊಳ್ಳದೆ ಅದು ಹೇಗೆ ಆರೇಳು ಗಂಟೆ ಶೀರ್ಷಾಸನದಲ್ಲಿ ಸಹಿಸಿಕೊಂಡಿರುತ್ತಿದ್ದ? ಎಂಬ ಪ್ರಶ್ನೆಗಳು ಹಾಗೇ ಉಳಿದಿವೆ. ಆತನ ಮುಂದೆ ಹಾಸಿದ ಬಟ್ಟೆಯಲ್ಲಿ ಜನ ಚಿಲ್ಲರೆ ಹಾಕುತ್ತಿದ್ದರು. ಇನ್ನೊಬ್ಬ ಮುಳ್ಳಿನ ಕಂಟಿಯ ಮೇಲೆ ಮಲಗಿರುತ್ತಿದ್ದ. ಕೆಲ ಬಡ ಹೆಣ್ಣುಮಕ್ಕಳು ಬುರ್ಖಾ ಹಾಕಿಕೊಂಡು ಮೌನವಾಗಿ ಭಿಕ್ಷೆಗೆ ಕೂಡುತ್ತಿದ್ದರು. ಮತ್ತೆ ಕೆಲ ಕೆಳಜಾತಿಗಳ ಬಡ ಹೆಣ್ಣು ಮಕ್ಕಳು ಬಗಲಲ್ಲಿ ಕೂಸನ್ನು ಕಟ್ಟಿಕೊಂಡು ಭಿಕ್ಷೆ ಬೇಡುತ್ತಿದ್ದರು. ಫಕೀರರು ದಫ್ಲಿ ಬಾರಿಸುತ್ತ, ನವಿಲುಗರಿಯ ಸೂಡನ್ನು (ಮೋರ್-ಛಲ್) ಆಶೀರ್ವಾದದ ರೀತಿಯಲ್ಲಿ ಬೆನ್ನಿಗೆ ಬಡಿಯುತ್ತ ದೇವರ ಹೆಸರಿನಲ್ಲಿ ದಾನ ಕೊಡಲು ಭಿಕ್ಷಾಪಾತ್ರೆ (ಕಶ್ತಿ) ಮುಂದೆ ಮಾಡುತ್ತಿದ್ದರು. ಬಡವರ ಮಕ್ಕಳು ಭಿಕ್ಷೆ ಕೇಳಲು ಮುಗಿಬೀಳುತ್ತಿದ್ದರು.

ಈ ಎರಡು ಹಬ್ಬಗಳಲ್ಲಿ ಮಾತ್ರ ನಮಗೆ ಹೊಸ ಬಟ್ಟೆಯ ಯೋಗ ಲಭಿಸುತ್ತಿತ್ತು. ಕೇಶಟ್ಟಿ ಎಂಬ ಹೆಸರಿನ ಟೇಲರ್ ಬಹಳ ಚೆನ್ನಾಗಿ ಬಟ್ಟೆ ಹೊಲಿಯುತ್ತಿದ್ದರು. ನನ್ನ ತಂದೆ ಅಲ್ಲಿಯೇ ಬಟ್ಟೆ ಹೊಲಿಸುತ್ತಿದ್ದರು. (ಚೆನ್ನಾಗಿ ಬಟ್ಟೆ ಹೊಲಿಯುವವರು ಅಥವಾ ಯಾವುದೇ ಕೆಲಸ ಮಾಡುವವರು ಹೆಚ್ಚಿಗೆ ಚಾರ್ಜ್ ಮಾಡುತ್ತಿರಲಿಲ್ಲ. ಅವರ ನೀಟಾದ ಕಾಯಕವೇ ಅವರಿಗೆ ಹೆಚ್ಚಿನ ತೃಪ್ತಿ ಕೊಡುತ್ತಿತ್ತು. ಇನ್ನೂ ಕೆಲವರು ತಮ್ಮ ಕಾಯಕದಲ್ಲಿ ವಿಶೇಷ ಜ್ಞಾನವನ್ನು ಹೊಂದಿದ್ದರೂ ಹೆಚ್ಚಿಗೆ ಕೆಲಸ ಮಾಡುತ್ತಿರಲಿಲ್ಲ. ಆದರೆ ಯಾರಿಗೂ ಹಣ ಕೇಳುತ್ತಿರಲಿಲ್ಲ. ತಮ್ಮ ಬಳಿಯ ಹಣ ಮುಗಿದಾಗ ಮಾತ್ರ ಕೆಲಸಕ್ಕೆ ಹೋಗುತ್ತಿದ್ದರು. ಒಬ್ಬ ಸಿಂಪಿಗ ಇದ್ದ. ಆತ ಬಟ್ಟೆ ಹೊಲಿಯುತ್ತಿರಲಿಲ್ಲ. ಆದರೆ ಸೂಟಿನ ಬಟ್ಟೆ ಕಟ್ ಮಾಡಿ ಕೊಡುತ್ತಿದ್ದ. ಆತ ಎಷ್ಟು ಪರಿಣಿತನಿದ್ದ ಎಂದರೆ ಕೆಲ ಶ್ರೀಮಂತರು ಟೇಲರ್ ಹತ್ತಿರ ಥ್ರೀಪೀಸ್ ಬಟ್ಟೆ ತಂದುಕೊಟ್ಟು ಆತ ಕಟ್ ಮಾಡಿ ಕೊಟ್ಟ ನಂತರವೇ ಹೊಲಿಯಬೇಕೆಂದು ತಾಕೀತು ಮಾಡುತ್ತಿದ್ದರು. ಆತ ಯಾವ ಟೇಲರನಿಗೂ ಕೆಲಸ ಕೇಳುತ್ತಿರಲಿಲ್ಲ. ರಸ್ತೆಯ ಮೇಲೆ ಕಂಡನೆಂದರೆ ಆತನಿಗೆ ಹಣ ಬೇಕಾಗಿದೆ ಎಂದೇ ಅರ್ಥ. ಟೇಲರ್‌ಗಳು ಆತ ಬರುವುದನ್ನೇ ಕಾಯುತ್ತಿದ್ದರು. ಕಂಡೊಡನೆ ಕರೆಯುತ್ತಿದ್ದರು. ಆತ ಥ್ರೀಪೀಸ್ ಸೂಟ್ ಕಟ್ ಮಾಡಿಕೊಟ್ಟು ಹಣ ತೆಗೆದುಕೊಂಡು ಹೋದನೆಂದರೆ ಮತ್ತೆ ಬೀದಿಗೆ ಬರುವುದು ಹಣ ಖರ್ಚಾದಾಗಲೇ!)

ಹಬ್ಬಕ್ಕೆ ಹದಿನೈದು ದಿನ ಮೊದಲೇ ಬಟ್ಟೆ ಜೊತೆ ಅಳತೆ ಕೊಟ್ಟು ಬರುತ್ತಿದ್ದೆವು. ಅಳತೆ ತೆಗೆದುಕೊಳ್ಳುವ ಸಂದರ್ಭದಲ್ಲಿ ‘ಎಂದು ಹೊಲಿದು ಕೊಡುವಿರಿ’ ಎಂದು ಕೇಳಿದಾಗ ‘ಒಂದು ವಾರ ಬಿಟ್ಟು ಬಾ. ರೆಡಿ ಇರ್ತಾವ’ ಎಂದು ಕೇಶಟ್ಟಿ ಹೇಳುತ್ತಿದ್ದರು. ಒಂದು ವಾರ ಬಿಟ್ಟು ಹೋದಾಗ ‘ನಾಳೆ ಬಾ’ ಎನ್ನುತ್ತಿದ್ದರು. ಹೀಗೇ ದಿನವೂ ಹೋಗಿ ನಿರಾಶೆಯಿಂದ ಮರಳುತ್ತಿದ್ದೆ. ಹೊಲಿಯಲು ಎಷ್ಟೇ ಬೇಗ ಬಟ್ಟೆ ಕೊಟ್ಟರೂ ಸಿಗುವುದು ಮಾತ್ರ ಹಬ್ಬದ ಹಿಂದಿನ ದಿನದ ರಾತ್ರಿಯೆ. ಹೀಗಾಗಿ ಆ ಬಟ್ಟೆಯ ವೈಭವವನ್ನು ಹಬ್ಬದ ದಿನ ಬೆಳಿಗ್ಗೆಯೆ ನೋಡುತ್ತಿದ್ದೆವು.

ಕೆಲವೊಂದು ಸಂದರ್ಭದಲ್ಲಿ ಹಣದ ಕೊರತೆಯುಂಟಾದಾಗ ಹಬ್ಬಕ್ಕೆ ಬಟ್ಟೆ ಖರೀದಿಸಲು ತಂದೆಗೆ ಸಾಧ್ಯವಾಗುತ್ತಿರಲಿಲ್ಲ. ಆಗ ಅವರು ಅಡತಿ ಅಂಗಡಿ ಮಾಲೀಕರು ದೀಪಾವಳಿಯಲ್ಲಿ ಕಾಣಿಕೆಯಾಗಿ ಕೊಟ್ಟ ಬಿಳಿ ರುಮಾಲಿನಿಂದ ನೆಹರೂ ಷರ್ಟ್ ಹೊಲಿಸುತ್ತಿದ್ದರು. ಬಿಳಿ ಪೈಜಾಮಕ್ಕಾಗಿ ಮಾತ್ರ ಬಟ್ಟೆ ಕೊಳ್ಳುತ್ತಿದ್ದರು. ತೆಳ್ಳನೆ ರುಮಾಲಿನ ಬಟ್ಟೆಯ ಆ ಷರ್ಟ್ಗಳು ಬೇಗ ಹರಿದುಹೋಗುತ್ತಿದ್ದವು.

ರಂಜಾನ್ ಹಬ್ಬದ ಹಿಂದಿನ ರಾತ್ರಿ ಕೈಗೆ ಮದರಂಗಿ ಹಚ್ಚಿಕೊಳ್ಳುತ್ತಿದ್ದೆವು. ಮರುದಿನ ಬೆಳಿಗ್ಗೆ ಸ್ನಾನ ಮಾಡುವ ಮೊದಲು ಕೈಗಳನ್ನು ಕೊಬ್ಬರಿ ಎಣ್ಣೆಯಿಂದ ತಿಕ್ಕಿಕೊಂಡು ತೊಳೆದುಕೊಳ್ಳುತ್ತಿದ್ದೆವು, ಆಗ ಮದರಂಗಿಯ ಕೆಂಪು ಬಣ್ಣ ಎದ್ದುಕಾಣುತ್ತಿತ್ತು. ಹೊಸ ಬಟ್ಟೆ ಹಾಕಿಕೊಂಡು, ಕಿವಿಯಲ್ಲಿ ಅತ್ತರ್ ಹಾಕಿದ ಹತ್ತಿಯನ್ನು ಇಟ್ಟುಕೊಂಡು, ತಲೆಗೆ ಎಣ್ಣೆ ಹಚ್ಚಿಕೊಂಡು ತಯಾರಾದಾಗ ಎಂಟಾಣೆ ತುದಿಯಿಂದ ಕಣ್ಣಿನ ಕೆಳಭಾಗದ ರೆಪ್ಪೆಗುಂಟ ಸುರ್ಮಾ ಹಚ್ಚುತ್ತಿದ್ದರು. ಅದು ಒಂದು ರೀತಿಯ ಕಲ್ಪುಡಿಯಂತಿರುವ ಕಾರಣ ಕಣ್ಣುಚುಚ್ಚಿ ಕಣ್ಣೀರು ಹರಿಯುತ್ತಿತ್ತು. ಸುರ್ಮಾ ಮಾತ್ರ ನಾನು ಎಂದೂ ಇಷ್ಟಪಡಲಿಲ್ಲ. ಆದರೆ ಅದರಿಂದ ಕಣ್ಣಿನ ಸೌಂದರ್ಯ ಇಮ್ಮಡಿಗೊಳ್ಳುತ್ತಿತ್ತು. ಹೀಗೆ ಸಿಂಗಾರಗೊಂಡ ನಂತರ  ಎಂಟು ಗಂಟೆ ಸುಮಾರಿಗೆ ಶುರಕುಂಬಾ ಕುಡಿದು ಈದಗಾ ಮೈದಾನಕ್ಕೆ ಹೊರಡುತ್ತಿದ್ದೆವು. ಈದಗಾ ಮೈದಾನ ನಮ್ಮ ಮನೆಯಿಂದ ದೂರವಿರುವುದರಿಂದ ಮತ್ತು ನಮಾಜ ಮಾಡಲು ಜಾಗ ಸಿಗದಷ್ಟು ಜನರು ಬರುವುದರಿಂದ ತಂದೆ ಸ್ವಲ್ಪ ಮುಂಚಿತವಾಗಿಯೆ ನಮ್ಮನ್ನು ನಡೆಸುತ್ತ ಕರೆದುಕೊಂಡು ಹೋಗುತ್ತಿದ್ದರು. ಸಹಸ್ರಾರು ಜನರು ಹೊಸ ಬಟ್ಟೆ ಹಾಕಿಕೊಂಡು ಈದಗಾ ಮೈದಾನಕ್ಕೆ ನಡೆದುಕೊಂಡು ಹೋಗುವುದನ್ನು ನೋಡುವುದು ನಯನ ಮನೋಹರವಾಗಿತ್ತು.

ಹಬ್ಬದ ದಿನ ಹೊಸ ಬಟ್ಟೆಯಲ್ಲಿ ಖುಷಿಯಿಂದ ತಿರುಗುತ್ತಿದ್ದೆ. ಆ ದಿನ ಹಬ್ಬದ ಶುಭಾಶಯ ಹೇಳಲು ಮನೆಗೆ ಬರುವವರೆಲ್ಲ ಹೊಸ ಬಟ್ಟೆಯಲ್ಲೇ ಇರುತ್ತಿದ್ದರು. ಆದರೆ ಮರುದಿನದಿಂದ ನನಗೆ ದುಗುಡ ಶುರುವಾಗುತ್ತಿತ್ತು. (ರಂಜಾನ್ ಬರುವುದರೊಳಗಾಗಿ ನನ್ನ ಬಟ್ಟೆ ಸವೆದುಹೋಗಿರುತ್ತಿದ್ದವು. ಚಡ್ಡಿಗಳು ಹಿಂಭಾಗದಲ್ಲಿ ಸವೆದು ಸವೆದು ಕಿಂಡಿಬಿಟ್ಟಿರುತ್ತಿದ್ದವು. ವರ್ಷವಿಡೀ ಹಳೆ ಬಟ್ಟೆ ಹಾಕಿಕೊಂಡವನಿಗೇ ಗೊತ್ತು ಹೊಸ ಬಟ್ಟೆ ಹಾಕಿಕೊಳ್ಳುವ ಕಷ್ಟ.) ಹೀಗಾಗಿ ರಂಜಾನ್‌ನಲ್ಲಿ ಹೊಲಿಸಿದ ಆ ಹೊಸ ಬಟ್ಟೆಗಳು ಸ್ವಲ್ಪ ಹಳೆ ಬಟ್ಟೆಯ ಹಾಗೆ ಕಾಣಲೆಂಬ ಉದ್ದೇಶದಿಂದ ಪದೆ ಪದೆ ಒಗೆದು ಹಾಕುತ್ತಿದ್ದೆ. ಹೊಸ ಬಟ್ಟೆಯ ರೂಢಿ ಮಾಡಿಕೊಳ್ಳಲು ಸಂಜೆಯಾದೊಡನೆ ಒಂದು ರೌಂಡ್ ಹಾಕುತ್ತಿದ್ದೆ. ಯಾರಾದರೂ ಗೆಳೆಯರು ಸಿಕ್ಕರೆ ಮುಜುಗರದಿಂದ “ಹಿ ಹಿ” ಎನ್ನುತ್ತ ಮುದುಡುತ್ತಿದ್ದೆ. ಅವರೆಲ್ಲಿ ನನ್ನ ಹೊಸ ಬಟ್ಟೆಯ ಕಡೆಗೆ ಗಮನ ಹರಿಸುತ್ತಾರೋ ಎಂಬ ದುಗುಡ ಆವರಿಸುತ್ತಿತ್ತು. ನಾನು ಯಾವ ಬಟ್ಟೆ ಹಾಕಿಕೊಂಡರೆ ಅವರಿಗೇನು? ಆದರೆ ಅದೆಲ್ಲ ನನ್ನ ಅನಿಸಿಕೆ ಆಗಿತ್ತು.

(ನನ್ನ ಮನಸ್ಸು ಹಳೆ ಬಟ್ಟೆಗಳ ಜೊತೆ ಎಷ್ಟು ಒಗ್ಗಿ ಹೋಗಿದೆ ಎಂದರೆ ನನ್ನ ಕೈಗಳು ಇಂದಿಗೂ ಹಳೆಯ ಬಟ್ಟೆಗಳ ಕಡೆಗೇ ಹೋಗುತ್ತವೆ. ೧೯೮೩ರಲ್ಲಿ ನಾನು ಮೊದಲ ಬಾರಿಗೆ ವಿದೇಶಕ್ಕೆ ಹೋದಾಗ, ಚಳಿಪಳಿ ಎಂದು ಅವರಿವರ ಮಾತು ಕೇಳಿ ಹೊಲಿಸಿದ ರೇಮಂಡ್ ಬಟ್ಟೆಯ ಫುಲ್ ಸೂಟ್ ಅನ್ನು ವಾಪಸ್ ಬಂದ ಮೇಲೆ ಹಾಕಿಕೊಳ್ಳಲೇ ಇಲ್ಲ. ಕೋಟನ್ನು ಧಾರವಾಡದಲ್ಲಿ ನನ್ನ ಕ್ಯಾಮರಾ ರಿಪೇರಿ ಮಾಡುವವನಿಗೆ ಖುಷಿಯಿಂದ ಕೊಟ್ಟೆ. ಅಂಥ ಕ್ಯಾಮರಾ ರಿಪೇರಿ ಮಾಡುವ ತಜ್ಞನನ್ನು ನಾನು ಮತ್ತೆಲ್ಲೂ ನೋಡಿಲ್ಲ. ಅವನ ಕುರಿತು ಸುಧಾ ವಾರಪತ್ರಿಕೆಗೆ ಬರೆದೆ. ಆ ಲೇಖನದ ಶೀರ್ಷಿಕೆ ‘ಕ್ಯಾಮರಾ ಲೋಕದ ಮಾಂತ್ರಿಕ’ ಎಂದಿತ್ತು. ಆತ ತನ್ನ ಮಗನನ್ನು ಅದೇ ಕ್ಯಾಮರಾ ರಿಪೇರಿ ಫೀಲ್ಡಲ್ಲಿ ತರಬೇತಿ ನೀಡುತ್ತಿದ್ದ. ಆದರೆ ಆ ಹುಡುಗ ಕೆರೆಯಲ್ಲಿ ಈಜಲು ಹೋಗಿ ಸತ್ತ. ಮುಂದೆ ಆ ಕ್ಯಾಮರಾ ತಜ್ಞನೂ ಸತ್ತು ಮನದಲ್ಲಿ ನೋವಾಗಿ ಉಳಿದ.)

ನಮ್ಮ ಕ್ಲಾಸಿನಲ್ಲಿ ‘ಕಲಾದಗಿ’ ಅಡ್ಡ ಹೆಸರಿನ ಮುಸ್ಲಿಂ ವಿದ್ಯಾರ್ಥಿಯೊಬ್ಬನಿದ್ದ. ಆತ ತಡವಾದಾಗ ತನ್ನ ತಂದೆಯನ್ನು ಕರೆದುಕೊಂಡು ಬರುತ್ತಿದ್ದ. ಆತನ ತಂದೆ ತಡವಾದುದಕ್ಕೆ ಕಾರಣ ತಿಳಿಸುತ್ತಿದ್ದರು. ನನ್ನಂಥ ಅನೇಕ ಹುಡುಗರ ತಲೆಗಳು ಕೊಬ್ಬರಿ ಎಣ್ಣೆಯಿಂದ ವಂಚಿತವಾಗಿರುತ್ತಿದ್ದವು. ಆದರೆ ಕಲಾದಗಿ ಮಾತ್ರ ಸ್ವಲ್ಪ ಹೆಚ್ಚಿಗೆ ಎಣ್ಣೆ ಹಚ್ಚಿಕೊಂಡು ಬರುತ್ತಿದ್ದ. ಆ ಎಣ್ಣೆ ಸಣ್ಣಗೆ ಸೋರಿ ಕಪಾಳನ್ನು ಆವರಿಸುತ್ತಿತ್ತು. ಅವನು ಒರೆಸಿಕೊಳ್ಳುತ್ತಿರಲಿಲ್ಲ. ಅದು ಅವನ ‘ಶ್ರೀಮಂತಿಕೆ’ಯ ಲಕ್ಷಣವಾಗಿತ್ತು. ಅವನು ಕೂಡ ಬಡವನೇ. ಆದರೆ ನನ್ನಷ್ಟಲ್ಲ.

ಕೊಬ್ಬರಿ ಎಣ್ಣೆಯ ಸಮಸ್ಯೆಯಿಂದಾಗಿ ನಮ್ಮ ಕೂದಲನ್ನು ಸಣ್ಣಗೆ ಇಟ್ಟು ಪನ್ನಾ ಕಟ್ ಹೊಡೆಯಲು ತಂದೆ ತಮ್ಮಣ್ಣ ಮಾಮಾ (ಹಡಪದ ತಮ್ಮಣ್ಣ)ಗೆ ಹೇಳುತ್ತಿದ್ದರು. ಸ್ವಲ್ಪವಾದರೂ ಉದ್ದನೆಯ ಕೂದಲು ಬೇಕು ಎಂಬುದು ನನ್ನ ಹಟ ಆಗಿರುತ್ತಿತ್ತು. ನನ್ನ ಇಬ್ಬರು ತಮ್ಮಗಳ ಬಯಕೆಯೂ ಅದೇ ಆಗಿತ್ತು. ತಮ್ಮಣ್ಣ ಮಾಮಾಗೆ ಬಹಳ ರಿಕ್ವೆಸ್ಟ್ ಮಾಡುತ್ತಿದ್ದೆವು. ಆತ ನಮ್ಮ ಮೇಲೆ ಕರುಣೆ ತೋರಿಸುತ್ತ ನನ್ನ ತಂದೆ ಹೇಳಿದ್ದಕ್ಕಿಂತ ಸ್ವಲ್ಪ ಹೆಚ್ಚಿಗೆ ಕೂದಲಿಟ್ಟು ಕಟಿಂಗ್ ಮಾಡುತ್ತಿದ್ದ. ತಂದೆ ಬಂದು ಚೆಕ್ ಮಾಡಿದಾಗ ಸಿಕ್ಕಿಬೀಳುತ್ತಿದ್ದೆವು. ಹೀಗಾಗಿ ತಮ್ಮಣ್ಣ ಮತ್ತೆ ಕೂದಲು ಕಟ್ ಮಾಡುವುದು ಅನಿವಾರ್ಯವಾಗುತ್ತಿತ್ತು.

(ಎಸ್.ಎಸ್. ಹೈಸ್ಕೂಲ್)

ನಮ್ಮ ಮನೆಗಳ ಮುಂದೆಯೆ ಕಟಿಂಗ್ ಆಗುತ್ತಿತ್ತು. ನಾವಿಗಳು ಹಡಪ ಹಿಡಿದುಕೊಂಡು ತಿರುಗುತ್ತಿದ್ದರು. ತಿಂಗಳಿಗೊಮ್ಮೆ ತಮ್ಮಣ್ಣ ಬಂದು ಕಟಿಂಗ್ ಮಾಡುತ್ತಿದ್ದ. ಕೆಲ ಶ್ರೀಮಂತ ನಾವಿಗಳು ಮತ್ತು ಹಡಪದ ಸಮಾಜದವರು ಬಜಾರಲ್ಲಿ ಅಂಗಡಿ ಇಟ್ಟುಕೊಂಡಿದ್ದರು. ಹಡಪದರು ‘ಕಟಿಂಗ್ ಸಲೂನ್’ ಎಂದು ಯಾವುದಾದರೂ ಹೆಸರಿನ ಮುಂದೆ ಬರೆದುಕೊಂಡರೆ, ನಾವಿಗಳು ‘ಕೇಶಕರ್ತನಾಲಯ’ ಎಂದು ಬರೆದು ಕೊಳ್ಳುತ್ತಿದ್ದರು.

ನಮ್ಮ ಶಾಲೆಯಲ್ಲಿ ಅಯ್ಯಪ್ಪ ಹೆಸರಿನ ಅಂಗವಿಕಲ ಹುಡುಗನಿದ್ದ. ಆ ಐನಾರ (ಜಂಗಮರ) ಹುಡುಗನ ಮನೆ ಗಚ್ಚಿನಮಠದ ಪಕ್ಕದಲ್ಲಿತ್ತು. ಆತ ಡುಮ್ಮನಾಗಿದ್ದ. ತಲೆ ಉದ್ದವಿದ್ದು ಕೈಕಾಲುಗಳು ಗಿಡ್ಡ ಇದ್ದವು. ಸರಿಯಾಗಿ ಮಾತನಾಡಲು ಬರುತ್ತಿದ್ದಿಲ್ಲ. ಆದರೆ ಕಲಿಯುವ ಹುಚ್ಚು ಇತ್ತು. ನಾನು ಶಾಲೆಗೆ ಹೋಗಬೇಕಾದರೆ ಆತನ ಮನೆಯ ಮುಂದಿನಿಂದಲೇ ಹಾದುಹೋಗಬೇಕಿತ್ತು. ಅವರ ಮನೆಯವರು ಶಾಲೆಗೆ ತಂದು ಬಿಡುತ್ತಿದ್ದರು. ಆದರೆ ಬಹಳ ಸಲ ನಾನೇ ಹೊತ್ತುಕೊಂಡು ಹೋಗುತ್ತಿದ್ದೆ ಮತ್ತು ಶಾಲೆ ಮುಗಿದಮೇಲೆ ಹೊತ್ತು ತಂದು ಮನೆಯಲ್ಲಿ ಇಳಿಸುತ್ತಿದ್ದೆ. ನನ್ನ ಹಾಗೂ ಅವನ ಪಾಟಿಚೀಲಗಳೊಂದಿಗೆ ಆ ಭಾರ ಹೇಗೆ ಹೊರುತ್ತಿದ್ದೆನೊ!

ನನ್ನ ತಂದೆ ತಾಯಿಗಳ ಅಂತಃಕರಣ ನನಗೆ ರಕ್ತಗತವಾಗಿತ್ತು. ವಿಜಾಪುರದಲ್ಲಿ ಆಗ ಹಂದಿಗಳು ಬಹಳವಾಗಿದ್ದವು. ಎಲ್ಲಿ ನೋಡಿದಲ್ಲೆಲ್ಲ ಹಂದಿಗಳದ್ದೇ ಓಡಾಟವಿತ್ತು. ಶಾಲೆ ಬಿಟ್ಟಕೂಡಲೆ ಮನೆಗೆ ಬರುವ ವೇಳೆಯಲ್ಲಿ ಹುಡುಗರು ಹಂದಿಯ ಮರಿಗಳಿಗೆ ಕಲ್ಲು ಹೊಡೆಯುತ್ತಿದ್ದರು. ಅದನ್ನು ನೋಡಲಿಕ್ಕಾಗುತ್ತಿರಲಿಲ್ಲ. ನಾನು ಸ್ವಲ್ಪ ದಷ್ಟಪುಷ್ಟನಾಗಿದ್ದೆ. ‘ಹಂದಿ ಮರಿಗೆ ಕಲ್ಲು ಹೊಡೆಯುವವರ ತಲೆ ಒಡೆಯುವೆ’ ಎಂದು ಕಲ್ಲು ಹಿಡಿದುಕೊಂಡು ಅಂಜಿಸುತ್ತಿದ್ದೆ. ಹೀಗಾಗಿ ನಾನಿದ್ದಾಗ ಹುಡುಗರು ಹಂದಿಮರಿಗಳಿಗೆ ಕಲ್ಲು ಹೊಡೆಯಲು ಭಯಪಡುತ್ತಿದ್ದರು.

ಒಂದು ಸಲ ಶಾಲೆಗೆ ಹೋಗಬಾರದು ಎನಿಸಿತು. ಎಸ್.ಎಸ್. ಹೈಸ್ಕೂಲ್ ಗೇಟ್ ಬಳಿ ಇಲಾಚಿ ಹುಣಸೆಕಾಯಿ ತಿನ್ನುತ್ತ ತಿರುಗುತ್ತಿದ್ದೆ. ಅದೇ ವೇಳೆಗೆ ಆ ದಾರಿಯಿಂದ ನನ್ನ ತಂದೆ ಬರಬೇಕೆ? ಅವರಿಗೆ ಬಹಳ ಸಿಟ್ಟು ಬಂದಿತು. ಅಲ್ಲಿಯೆ ಬೆಳೆದಿದ್ದ ಹಸಿ ಕಂಟಿಯಿಂದ ಛಡಿ ಮಾಡಿ ನನಗೆ ಹೊಡೆಯುತ್ತ ಎಸ್.ಎಸ್. ಹೈಸ್ಕೂಲ್ ಒಳಗೇ ಇರುವ ತೆಗ್ಗಿನ ಶಾಲೆಗೆ ತಂದು ಬಿಟ್ಟರು. ಅದೊಂದೇ ಬಾರಿ ನಾನು ಹೀಗೆ ಶಾಲೆ ತಪ್ಪಿಸಿದ್ದು. ಆದರೆ ಪೂರ್ತಿ ತಪ್ಪಿಸಲಿಕ್ಕಾಗಲಿಲ್ಲ.

ನಾನು ಚೆನ್ನಾಗಿ ಓದಿ ಮಾಸ್ತರ ಆಗಬೇಕೆಂಬುದು ತಂದೆಯ ಇಚ್ಛೆಯಾಗಿತ್ತು. ಅದಕ್ಕಿಂತಲೂ ದೊಡ್ಡ ಹುದ್ದೆ ಯಾವುದೂ ಇಲ್ಲ ಎಂಬುದು ಅವರ ಅನಿಸಿಕೆಯಾಗಿದ್ದಿರಬಹುದು. ಅಥವಾ ಕಲಿಸುವುದು ಪವಿತ್ರ ಕಾರ್ಯ ಎಂದು ಭಾವಿಸಿರಬೇಕು. ಇಲ್ಲವೆ ಅದಕ್ಕಿಂತ ದೊಡ್ಡ ಕನಸು ಕಾಣಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿರಬಹುದು.

ನಾನು ಮಾಸ್ತರ ಆಗಿ ಕುರ್ಚಿಯ ಮೇಲೆ ಕೂಡುವುದನ್ನು ನೋಡಬೇಕೆಂಬುದು ಅವರ ಬಯಕೆಯಾಗಿತ್ತು. ‘ಹಾಗೇ ಸುಮ್ಮನೆ ಕೂಡುವುದರಲ್ಲಿ ಅರ್ಥವಿಲ್ಲ. ಯೋಗ್ಯತೆ ಪಡೆದುಕೊಂಡು ಕೂಡುವುದಕ್ಕೆ ಅರ್ಥವಿದೆ’ ಎಂದು ಅವರು ತಮ್ಮದೇ ಆದ ಧಾಟಿಯಲ್ಲಿ ಹೇಳಿದ್ದರು. ನನ್ನ ನಿರಕ್ಷರಿ ತಂದೆ ಎಂದೂ ಖುರ್ಚಿಯ ಮೇಲೆ ಕುಳಿತುಕೊಳ್ಳಲಿಲ್ಲ.

(ಚಿತ್ರಗಳು: ಸುನೀಲಕುಮಾರ್ ಸುಧಾಕರ)