ನಾವಿಬ್ಬರೂ ಆಡಿದ ಕಡೆಯ ಮಾತುಗಳು ನೆನಪಿದ್ದರೂ ಯಾವುದನ್ನು ಮೊದಲು ಮಾತಾಡಿದೆವು ಯಾವುದನ್ನು ಆಮೇಲೆ ಅನ್ನುವುದು ನೆನಪಿಲ್ಲ. ಶಿನ್ ಒಕುಬೊ ನಿಲ್ದಾಣದ ಹತ್ತಿರ ಪರಸ್ಪರ ವಿದಾಯ ಹೇಳಿದೆವು. ಟ್ಯಾಕ್ಸಿಯಲ್ಲಿ ಆ ನಿಲ್ದಾಣಕ್ಕೆ ಬಂದೆವು. ನನ್ನಣ್ಣ ಟ್ಯಾಕ್ಸಿ ಇಳಿದು ರೈಲು ನಿಲ್ದಾಣದ ಮೆಟ್ಟಿಲುಗಳನ್ನು ಹತ್ತುತ್ತಾ ಮನೆಯವರೆಗೂ ಟ್ಯಾಕ್ಸಿಯಲ್ಲೇ ಹೋಗು ಅಂತ ಹೇಳಿದ. ಕಾರು ಚಲಿಸುತ್ತಿದ್ದಂತೆ ಮತ್ತೆ ಮೆಟ್ಟಿಲಿಳಿದು ಬಂದು ಚಾಲಕನಿಗೆ ಕಾರು ನಿಲ್ಲಿಸುವಂತೆ ಕೈಯಾಡಿಸಿದ. ಟ್ಯಾಕ್ಸಿಯಿಂದಿಳಿದು ಅವನ ಹತ್ತಿರ ಹೋಗಿ “ಏನು?” ಅಂದೆ. ಒಂದೆರೆಡು ಕ್ಷಣ ನನ್ನನ್ನೇ ದಿಟ್ಟಿಸಿ ನೋಡಿ “ಏನಿಲ್ಲ, ನೀನು ಹೋಗು” ಅಂತಂದು ತಿರುಗಿ ಮೆಟ್ಟಿಲು ಹತ್ತಿ ಹೋಗಿಬಿಟ್ಟ.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವ ಆತ್ಮಕತೆಯ ಅಧ್ಯಾಯ.

 

ನನ್ನನ್ನು ಅಸ್ವಸ್ಥಗೊಳಿಸುವಂತಹ ಕತೆ ಹೇಳಿದ ಮೇಲೆ ಮತ್ತೆಂದೂ ನಾನು ಎದುರಿಸಲು ಇಷ್ಟಪಡದ ಘಟನೆಯ ಕುರಿತು ಬರೆಯುತ್ತಿದ್ದೇನೆ. ಅದು ನನ್ನಣ್ಣನ ಸಾವು. ಅದನ್ನು ಕುರಿತು ಬರೆಯುವುದೆಂದರೆ ಬಹಳ ನೋವಾಗುತ್ತದೆ. ಆದರೆ ಆ ಕುರಿತು ಹೇಳದೆ ಮುಂದೆ ಹೋಗಲಾರೆ.

ವಠಾರದ ಕೋಣೆಗಳಲ್ಲಿ ಬದುಕನ್ನು ಕಳೆಯುತ್ತಾ ಬದುಕಿನ ಕರಾಳಮುಖಗಳ ಪರಿಚಯವಾದಂತೆ ಇದ್ದಕ್ಕಿದ್ದಂತೆ ಅಪ್ಪ ಅಮ್ಮನೊಂದಿಗೆ ಇರಬೇಕು, ಮನೆಗೆ ವಾಪಸ್ಸು ಹೋಗಬೇಕು ಎಂದು ತೀವ್ರವಾಗಿ ಅನ್ನಿಸಲಾರಂಭಿಸಿತು. ಇನ್ನು ಮುಂದೆ ಬರುವ ಎಲ್ಲ ವಿದೇಶ ಸಿನಿಮಾಗಳು ಟಾಕಿ ಚಿತ್ರಗಳಾಗಿರುತ್ತವೆ. ಹಾಗೂ ಅವುಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳಲ್ಲಿ ಇನ್ನು ಮುಂದೆ ನಿರೂಪಕರ ಅಗತ್ಯವಿಲ್ಲ ಎನ್ನುವ ನಿಯಮವನ್ನು ಜಾರಿಗೆ ತರಲಾಯಿತು. ಏಕಾಏಕಿ ಎಲ್ಲ ನಿರೂಪಕರನ್ನು ಕೆಲಸದಿಂದ ಕಿತ್ತೊಗೆಯಲಾಯಿತು. ಅವರೆಲ್ಲ ಇದನ್ನು ವಿರೋಧಿಸಿ ಮುಷ್ಕರಕ್ಕೆ ನಿಂತರು. ನನ್ನಣ್ಣ ಮುಷ್ಕರ ಹೂಡಿದವರ ನಾಯಕನಾಗಿ ಕಷ್ಟದ ದಿನಗಳನ್ನು ಎದುರಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲೂ ಅವನ ಮೇಲೆ ಅವಲಂಭಿತನಾಗಿರುವುದು ಸರಿಯೆನಿಸಲಿಲ್ಲ. ಮನೆಗೆ ಹಿಂತಿರುಗಿದೆ.

ಕಳೆದ ಹಲವು ವರ್ಷಗಳಿಂದ ನಾನು ಹೇಗೆ ಜೀವನ ನಡೆಸುತ್ತಿದ್ದೆ ಎನ್ನುವ ಕುರಿತು ಅಪ್ಪ ಅಮ್ಮನಿಗೆ ಏನೂ ತಿಳಿದಿರಲಿಲ್ಲ. ಮಗ ದೀರ್ಘಕಾಲಿಕ ಚಿತ್ರಕಲಾಭ್ಯಾಸದ ಪಯಣ ಮುಗಿಸಿ ಬಂದಿದ್ದಾನೆ ಎಂದುಕೊಂಡು ಪ್ರೀತಿಯಿಂದ ಮನೆಗೆ ಸ್ವಾಗತಿಸಿದರು. ನಮ್ಮಪ್ಪನಿಗೆ ನಾನು ಯಾವ ಚಿತ್ರಕಲೆಯ ಯಾವ ವಿಧಾನವನ್ನು ಅಭ್ಯಾಸ ಮಾಡಿದ್ದೆ ಎನ್ನುವ ಕುರಿತು ಅಪಾರ ಕುತೂಹಲವಿತ್ತು. ಅದರ ಬಗ್ಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಲಾರಂಭಿಸಿದಾಗ ಬೇರೆ ದಾರಿಯಿಲ್ಲದೆ ಅವರಿಗೆ ಸಮಾಧಾನವಾಗುವಂತಹ ಸುಳ್ಳುಗಳನ್ನು ಹೇಳಲಾರಂಭಿಸಿದೆ. ನಾನೊಬ್ಬ ಚಿತ್ರಕಲಾವಿದನಾಗಬೇಕೆಂದು ನಮ್ಮಪ್ಪ ನನ್ನ ಮೇಲಿಟ್ಟಿರುವ ಭರವಸೆಯನ್ನು ನೋಡಿ ಮತ್ತೆ ಚಿತ್ರ ಬರೆಯಲು ನಿರ್ಧರಿಸಿದೆ.

ಆಯಿಲ್ ಪೇಂಟಿಂಗ್ ಮಾಡಬೇಕೆಂದು ನಿರ್ಧರಿಸಿದೆ. ಆದರೆ ಇಡೀ ಮನೆಯ ಜವಾಬ್ದಾರಿ ದೊಡ್ಡಕ್ಕನೇ ಹೊತ್ತಿದ್ದಳು. ಆಕೆ ಮೊರಿಮುರ ಗಾಕ್ಯುಯೆನ್ ನಲ್ಲಿ ಶಿಕ್ಷಕರಾಗಿದ್ದವರನ್ನು ಮದುವೆಯಾಗಿದ್ದಳು. ಬಣ್ಣ ಹಾಗೂ ಕ್ಯಾನ್ವಾಸ್ ಗಳನ್ನು ಕೊಡಿಸೆಂದು ಆಕೆಯನ್ನು ಕೇಳುವುದು ಸಾಧ್ಯವಿರಲಿಲ್ಲ. ರೇಖಾಚಿತ್ರಗಳನ್ನು ರಚಿಸಲು ಶುರುಮಾಡಿದೆ.

ಇವೆಲ್ಲದರ ನಡುವೆ ನನ್ನಣ್ಣ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ಬಂತು. ಅವನು ನಾಯಕನಾಗಿ ಮುನ್ನಡೆಸುತ್ತಿದ್ದ ನಿರೂಪಕರ ಮುಷ್ಕರಕ್ಕೆ ಸೋಲಾಗಿತ್ತು. ಇದೇ ಕಾರಣದಿಂದ ಅವನು ಆತ್ಮಹತ್ಯೆಗೆ ಮುಂದಾದ ಅನ್ನಿಸಿತು. ಸಿನಿಮಾ ತಂತ್ರಜ್ಞಾನ ಧ್ವನಿಯನ್ನು ಅಳವಡಿಸಿಕೊಳ್ಳುವಷ್ಟು ಮುಂದುವರೆದ ಮೇಲೆ ನಿರೂಪಕರ ಅಗತ್ಯವಿಲ್ಲ ಎನ್ನುವ ಸತ್ಯವನ್ನು ನನ್ನಣ್ಣ ಒಪ್ಪಲು ತಯಾರಿರಲಿಲ್ಲ. ಮುಷ್ಕರವು ವಿಫಲವಾಗುತ್ತದೆ, ನಾಯಕನಾಗಿ ಅದು ತನ್ನ ಸೋಲು ಎನ್ನುವುದು ಅವನಿಗೆ ಹೆಚ್ಚು ನೋವಿನ ಸಂಗತಿಯಾಗಿತ್ತು.

ಅಣ್ಣ ತನ್ನ ಬದುಕಿನ ನೋವಿಗೆ ಆತ್ಮಹತ್ಯೆಯ ಮೂಲಕ ಕೊನೆಯಾಗಿಸಲು ಬಯಸಿದ್ದು ಇಡೀ ಕುಟುಂಬವನ್ನು ನೋವಿನಲ್ಲಿ ಅದ್ದಿತು. ಎಲ್ಲರ ಗಮನವನ್ನು ಬೇರೆಡೆಗೆ ಸೆಳೆಯಲು ಮನೆಯಲ್ಲಿ ಏನಾದರೂ ಸಂತಸದ ಘಟನೆ ಘಟಿಸಬೇಕಿತ್ತು. ಏನು ಮಾಡುವುದು ಎಂದು ತೀವ್ರವಾಗಿ ಹುಡುಕಲಾರಂಭಿಸಿದೆ. ನನ್ನಣ್ಣನೊಡನೆ ಬಹುಕಾಲದಿಂದ ಜೊತೆಯಲ್ಲಿ ಬದುಕುತ್ತಿದ್ದ ಮಹಿಳೆಯೊಂದಿಗೆ ಅವನ ಮದುವೆ ಮಾಡಿಸೋಣ ಎನ್ನುವ ಯೋಚನೆ ಮನಸ್ಸಿಗೆ ಹೊಳೆಯಿತು. ನಾನಾಕೆಯನ್ನು ಒಂದು ವರ್ಷದಿಂದ ನೋಡಿದ್ದೆ. ಆಕೆಯ ಸ್ವಭಾವದಲ್ಲಿ ಕುಂದೆಣಿಸುವಂತದ್ದೇನು ಕಂಡಿರಲಿಲ್ಲ. ಆಕೆ ನಿಜವಾಗಿಯೂ ನನ್ನತ್ತಿಗೆ ಎನ್ನುವ ರೀತಿಯಲ್ಲಿಯೇ ಆಕೆಯೊಂದಿಗೆ ವರ್ತಿಸುತ್ತಿದ್ದೆ. ಅವರಿಬ್ಬರ ಸಂಬಂಧವನ್ನು ಮದುವೆಯ ಚೌಕಟ್ಟಿನೊಳಗೆ ತರುವುದು ನನ್ನ ಕೆಲಸ ಅನ್ನಿಸಿತು.

ನನ್ನ ಈ ಯೋಚನೆಯನ್ನು ಅಮ್ಮ, ಅಪ್ಪ, ಅಕ್ಕ ಯಾರೂ ವಿರೋಧಿಸಲಿಲ್ಲ. ಆದರೆ ನನ್ನಣ್ಣ ಮಾತ್ರ ಈ ವಿಷಯವಾಗಿ ನೇರವಾದ ಉತ್ತರ ನೀಡಲಿಲ್ಲ. ಅವನ ಈ ಬಗೆಯ ಪ್ರತಿಕ್ರಿಯೆಗೆ ಅವನ ಕೆಲಸದ ಒತ್ತಡ ಕಾರಣವಿರಬಹುದು ಎಂದುಕೊಂಡೆ.

ಕಳೆದ ಹಲವು ವರ್ಷಗಳಿಂದ ನಾನು ಹೇಗೆ ಜೀವನ ನಡೆಸುತ್ತಿದ್ದೆ ಎನ್ನುವ ಕುರಿತು ಅಪ್ಪ ಅಮ್ಮನಿಗೆ ಏನೂ ತಿಳಿದಿರಲಿಲ್ಲ. ಮಗ ದೀರ್ಘಕಾಲಿಕ ಚಿತ್ರಕಲಾಭ್ಯಾಸದ ಪಯಣ ಮುಗಿಸಿ ಬಂದಿದ್ದಾನೆ ಎಂದುಕೊಂಡು ಪ್ರೀತಿಯಿಂದ ಮನೆಗೆ ಸ್ವಾಗತಿಸಿದರು. ನಮ್ಮಪ್ಪನಿಗೆ ನಾನು ಯಾವ ಚಿತ್ರಕಲೆಯ ಯಾವ ವಿಧಾನವನ್ನು ಅಭ್ಯಾಸ ಮಾಡಿದ್ದೆ ಎನ್ನುವ ಕುರಿತು ಅಪಾರ ಕುತೂಹಲವಿತ್ತು.

ಒಂದು ದಿನ ನನ್ನಮ್ಮ “ಹೀಗೊ (Heigo) ಆರಾಮಾಗಿದ್ದಾನೆ ಅಂತ ಅನುಮಾನ ಬರ್ತಿದೆ” ಅಂದಳು. “ಯಾಕೆ ಹಾಗಂತಿಯಾ?” ಅಂತ ಕೇಳಿದೆ. “ಮೂವತ್ತು ವರ್ಷ ಆಗೋಕೂ ಮುಂಚೆ ಸತ್ತುಹೋಗ್ತೀನಿ ಅಂತ ಅವನು ಯಾವಾಗಲೂ ಹೇಳುತ್ತಿದ್ದ ಅಲ್ವಾ?” ಆಕೆ ಹೇಳಿದ್ದು ನಿಜ. ನನ್ನಣ್ಣ ಯಾವಾಗಲೂ ಹಾಗೆ ಹೇಳುತ್ತಿದ್ದ. ಅವನ ಪ್ರಕಾರ ಮೂವತ್ತು ವರ್ಷದ ನಂತರ ಮನುಷ್ಯರು ಹೆಚ್ಚು ಸ್ವಾರ್ಥಿಗಳು, ಕುರೂಪ ಮನಸ್ಸಿನವರಾಗಿಬಿಡುತ್ತಾರೆ. ಅದಕ್ಕೆ ಅವನಿಗೆ ಮೂವತ್ತರ ನಂತರ ಬದುಕುವ ಉದ್ದೇಶವಿರಲಿಲ್ಲ. ಅವನು ರಷ್ಯನ್ ಸಾಹಿತ್ಯದ ಮಹಾನ್ ಭಕ್ತ. Mikhail Axtsybashev ನ The Last Line ಪುಸ್ತಕವನ್ನು ಸದಾ ಕೈಯಲ್ಲಿಟ್ಟುಕೊಂಡು ಓಡಾಡುತ್ತಿದ್ದ. ನನ್ನಣ್ಣ ಬಹಳ ಇಷ್ಟಪಡುತ್ತಿದ್ದ ನಾಯಕ ನಾಮೊವ್ (Naumov)ನ “ವಿಲಕ್ಷಣ ಸಾವು” ಭಾವಾತಿರೇಕದ್ದು ಎಂದೇ ನನಗನ್ನಿಸುತ್ತಿತ್ತು. ಆದರೆ ನನ್ನಣ್ಣನ ಸಾವಿಗೆ ಇದು ಮುನ್ಸೂಚನೆ ಅಂತ ಅಂದುಕೊಂಡಿರಲಿಲ್ಲ. ನಮ್ಮಮ್ಮ ತನ್ನ ಮನಸ್ಸಿನ ಕಸಿವಿಸಿಯನ್ನು ಹಂಚಿಕೊಂಡಾಗ ನಕ್ಕು “ಸಾಯ್ತೀನಿ ಅಂತ ಹೇಳೋರು ಸಾಯುವುದಿಲ್ಲ” ಅಂತಂದು ಅವಳ ಮಾತನ್ನು ತಳ್ಳಿಹಾಕಿದ್ದೆ. ಕೆಲವು ತಿಂಗಳುಗಳ ನಂತರ ನಮ್ಮಮ್ಮನ ಭಯ ನಿಜವಾಗಿತ್ತು. ನನ್ನಣ್ಣ ಸತ್ತುಹೋದ. ಅವನು ಹೇಳಿದಂತೆ ಮೂವತ್ತು ವರ್ಷ ತುಂಬುವ ಮೊದಲೇ ಸತ್ತುಹೋದ. ತನ್ನ ಇಪ್ಪತ್ತೇಳನೆಯ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ.

ಆತ್ಮಹತ್ಯೆ ಮಾಡಿಕೊಳ್ಳುವ ಮೂರು ದಿನಗಳಿಗೆ ಮುಂಚೆ ಅವನು ನನ್ನನ್ನು ರಾತ್ರಿಯೂಟಕ್ಕೆ ಕರೆದೊಯ್ದಿದ್ದ. ವಿಚಿತ್ರ ಎಂದರೆ ಎಷ್ಟೇ ಪ್ರಯತ್ನಿಸಿದರೂ ಎಲ್ಲಿಗೆ ಕರೆದುಕೊಂಡು ಹೋಗಿದ್ದ ಎನ್ನುವುದು ನೆನಪಾಗುತ್ತಿಲ್ಲ. ಬಹುಶಃ ಅವನ ಸಾವಿನ ಆಘಾತದ ಪರಿಣಾಮವಿರಬೇಕು. ನಾವಿಬ್ಬರೂ ಆಡಿದ ಕಡೆಯ ಮಾತುಗಳು ನೆನಪಿದ್ದರೂ ಯಾವುದನ್ನು ಮೊದಲು ಮಾತಾಡಿದೆವು ಯಾವುದನ್ನು ಆಮೇಲೆ ಅನ್ನುವುದು ನೆನಪಿಲ್ಲ. ಶಿನ್ ಒಕುಬೊ ನಿಲ್ದಾಣದ ಹತ್ತಿರ ಪರಸ್ಪರ ವಿದಾಯ ಹೇಳಿದೆವು. ಟ್ಯಾಕ್ಸಿಯಲ್ಲಿ ಆ ನಿಲ್ದಾಣಕ್ಕೆ ಬಂದೆವು. ನನ್ನಣ್ಣ ಟ್ಯಾಕ್ಸಿ ಇಳಿದು ರೈಲು ನಿಲ್ದಾಣದ ಮೆಟ್ಟಿಲುಗಳನ್ನು ಹತ್ತುತ್ತಾ ಮನೆಯವರೆಗೂ ಟ್ಯಾಕ್ಸಿಯಲ್ಲೇ ಹೋಗು ಅಂತ ಹೇಳಿದ. ಕಾರು ಚಲಿಸುತ್ತಿದ್ದಂತೆ ಮತ್ತೆ ಮೆಟ್ಟಿಲಿಳಿದು ಬಂದು ಚಾಲಕನಿಗೆ ಕಾರು ನಿಲ್ಲಿಸುವಂತೆ ಕೈಯಾಡಿಸಿದ. ಟ್ಯಾಕ್ಸಿಯಿಂದಿಳಿದು ಅವನ ಹತ್ತಿರ ಹೋಗಿ “ಏನು?” ಅಂದೆ. ಒಂದೆರೆಡು ಕ್ಷಣ ನನ್ನನ್ನೇ ದಿಟ್ಟಿಸಿ ನೋಡಿ “ಏನಿಲ್ಲ, ನೀನು ಹೋಗು” ಅಂತಂದು ತಿರುಗಿ ಮೆಟ್ಟಿಲು ಹತ್ತಿ ಹೋಗಿಬಿಟ್ಟ.

ಮತ್ತೆ ನಾನವನನ್ನು ನೋಡುವಾಗ ರಕ್ತಸಿಕ್ತ ಬಟ್ಟೆಯಲ್ಲಿ ಸುತ್ತಿಟ್ಟ ಶವವಾಗಿದ್ದ. ಇಜು ಪೆನೆನ್ಸುಲಾದ ಒಂಟಿ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಕೊಠಡಿಯ ಬಾಗಿಲಲ್ಲೇ ಸ್ತಬ್ಧವಾಗಿ ನಿಂತುಬಿಟ್ಟೆ. ನನ್ನ ಹಾಗೂ ನಮ್ಮಪ್ಪನ ಜೊತೆ ಶವವನ್ನು ತೆಗೆದುಕೊಂಡು ಹೋಗಲು ಬಂದಿದ್ದ ನಮ್ಮ ಸಂಬಂಧಿ ಸಿಟ್ಟಿನಲ್ಲಿ “ಅಕಿರ ಏನು ಮಾಡ್ತಾ ಇದೀಯಾ?” ಅಂದ. ನಾನೇನು ಮಾಡುತ್ತಿದ್ದೆ? ಸತ್ತ ನನ್ನಣ್ಣನನ್ನು ನೋಡುತ್ತಿದ್ದೆ. ಸತ್ತ ನನ್ನಣ್ಣನ ದೇಹವನ್ನು ನೋಡುತ್ತಿದ್ದೆ. ಅವನ ದೇಹದಲ್ಲಿ ಹರಿಯುತ್ತಿದ್ದ ರಕ್ತವೇ ನನ್ನಲ್ಲೂ ಹರಿಯುತ್ತಿದ್ದದ್ದು. ಅದೇ ರಕ್ತವನ್ನು ಅವನು ತನ್ನ ದೇಹದಿಂದ ಹೊರಗೆ ಹರಿಸಿಬಿಟ್ಟಿದ್ದ. ನಾನು ಬಹಳ ಗೌರವಿಸುತ್ತಿದ್ದ ಅಣ್ಣ. ಅವನ ಸ್ಥಾನವನ್ನು ಮತ್ತಾರೂ ತುಂಬುವಂತಿರಲಿಲ್ಲ. ಅವನು ಸತ್ತುಹೋಗಿದ್ದ. ನಾನೇನು ಮಾಡುತ್ತಿದ್ದೆ? ಥತ್!

“ಅಕಿರ ಸ್ವಲ್ಪ ಸಹಾಯ ಮಾಡು” ಅಪ್ಪ ಮೆದುವಾಗಿ ಹೇಳಿದರು. ಬಹಳ ಕಷ್ಟಪಟ್ಟು ಅಣ್ಣನ ದೇಹವನ್ನು ಬಟ್ಟೆಯಲ್ಲಿ ಸುತ್ತಿದರು. ಅಪ್ಪ ಕಷ್ಟಪಡುತ್ತಿದ್ದದ್ದು ಅವರ ಏದುಸಿರು ನನ್ನನ್ನು ಆಳವಾಗಿ ಕಲಕಿತು. ಕಡೆಗೂ ಆ ಕೋಣೆಯೊಳಗೆ ಕಾಲಿಟ್ಟೆ.

ಟೋಕಿಯೊದಿಂದ ಬಂದಿದ್ದ ಕಾರಿನೊಳಗೆ ಅಣ್ಣನ ದೇಹವನ್ನು ಇಟ್ಟಾಗ ದೇಹ ನರಳಿದಂತೆನಿಸಿತು. ಅವನ ಕಾಲುಗಳನ್ನು ಎದೆಗೆ ಒತ್ತಿದಾಗ ಬಹುಶಃ ಗಾಳಿ ಬಾಯಿಂದ ಹೊರಬಂದಿರಬೇಕು. ಕಾರಿನ ಚಾಲಕ ನಡುಗಿಬಿಟ್ಟ. ಆದರೂ ಶವಾಗಾರದಲ್ಲಿ ದೇಹ ಸುಟ್ಟು ಬೂದಿಯಾಗುವವರೆಗೂ ಹೇಗೋ ಜೊತೆಯಲ್ಲಿದ್ದ. ಟೋಕಿಯೊಗೆ ಹಿಂತಿರುಗುವಾಗ ಮೈಮೇಲೆ ಬಂದವನಂತೆ ಯಾವುದ್ಯಾವುದೋ ರಸ್ತೆಗಳಲ್ಲಿ ಕಾರನ್ನು ವೇಗವಾಗಿ ಓಡಿಸಿಕೊಂಡು ಬಂದ.

ಎಂದೂ ತನ್ನ ನೋವನ್ನು ತೋರ್ಪಡಿಸಿಕೊಳ್ಳದ ಅಮ್ಮ, ಅಣ್ಣನ ಆತ್ಮಹತ್ಯೆಯ ನೋವನ್ನು ಒಂದೇ ಒಂದು ಹನಿ ಕಣ್ಣೀರು ಹಾಕದೆ ಮೌನವಾಗಿ ನುಂಗಿಕೊಂಡಳು. ಅವಳಿಗೆ ನನ್ನ ಮೇಲೆ ಕೋಪವಿಲ್ಲ ಅಂತ ಗೊತ್ತಿದ್ದರೂ ಅವಳ ಮೌನ ನನ್ನನ್ನು ಇರಿಯುತ್ತಿತ್ತು. ಅಣ್ಣನ ಬಗ್ಗೆ ಅಮ್ಮ ಹೇಳಿದಾಗ ಉಢಾಪೆಯಿಂದ ಅವಳ ಮಾತನ್ನು ನಿರ್ಲಕ್ಷಿಸಿದ್ದಕ್ಕೆ ಆಕೆಯಲ್ಲಿ ಕ್ಷಮೆ ಕೇಳಿದೆ. ಆದರೆ ಆಕೆ “ಏನು ನಿನ್ನ ಮಾತಿನರ್ಥ ಅಕಿರ?” ಅಂದಳು ಅಷ್ಟೇ. ಅಣ್ಣನ ದೇಹವನ್ನು ನೋಡಿ ನಿಸ್ತೇಜಿತನಾದೆ ಹೆದರಲಿಲ್ಲ. ಆದರೆ ಅಮ್ಮನಿಗೆ ಹೇಳಿದ ಮಾತಿಗೆ ನನ್ನನ್ನೇ ನಾನು ಕ್ಷಮಿಸಲಾರೆ. ಅಣ್ಣನ ಬದುಕು ಎಂತಹ ದುರಂತವಾಗಿಬಿಟ್ಟಿತು. ನಾನೆಂಥ ಮೂರ್ಖ!