Advertisement
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ಎನುಗಂಟಿ ವೇಣುಗೋಪಾಲ್ ತೆಲುಗು ಕತೆ

ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ಎನುಗಂಟಿ ವೇಣುಗೋಪಾಲ್ ತೆಲುಗು ಕತೆ

“ಬಹಳ ದೂರ ಬಂದ ಮೇಲೆ ನೀವು ಎದುರಾದಿರಿ” ಎಂದು ಹೇಳುವುದು ಮುಗಿದ ಮೇಲೆ ಉಳಿದ ಅರ್ಧ ಗ್ಲಾಸ್ ಮದ್ಯವನ್ನು ಖಾಲಿ ಮಾಡಿದ ರಂಜಿತ್. “ಇಗೋ ಪುರಾವೆ… ನನ್ನ ಕೈ ಮೇಲಿನ ಗಾಯ” ಎನ್ನುತ್ತಾ ಬಲಗೈಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ತೋರಿಸಿದ ರಂಜಿತ್. “ಹೌದು, ಆಗ ನೀವು ಬಲಗೈಯಿಂದ ಲಿಫ್ಟ್ ಕೇಳಿದಾಗ ಬೀದಿ ದೀಪದ ಬೆಳಕಿನಲ್ಲಿ ಗಮನಿಸಿದೆ. ಆ ಗಾಯ ನೋಡಿಯೇ ಲಿಫ್ಟ್ ಕೊಟ್ಟೆ” ಎಂದ ವಾಸುದೇವ ರಾವ್. ರಂಜಿತ್ ಒಮ್ಮೆಲೇ ದಂಗಾದನು. “ಆತಂಕ ಪಡಬೇಡಿ. ನೀವು ಆ ಗಾಯದ ನೋವಿನಲ್ಲಿ ಇರುತ್ತೀರಿ ಎಂದುಕೊಂಡು ಲಿಫ್ಟ್ ಕೊಡಲು ಸಿದ್ಧನಾದೆ.” ಎಂದ ಮಾತು ಬದಲಿಸುತ್ತಾ.
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಕತೆಗಾರ ಎನುಗಂಟಿ ವೇಣುಗೋಪಾಲ್ ಅವರ ಕತೆ “ಚೋರಿ” ನಿಮ್ಮ ಈ ಭಾನುವಾರದ ಓದಿಗೆ

ರಾತ್ರಿ ವೇಳೆ. ಸಮಯ ಇನ್ನೂ ಹತ್ತು ಗಂಟೆಯೂ ದಾಟಿಲ್ಲ. ಎಲ್ಲೆಡೆ ಕತ್ತಲು ಆವರಿಸಿದೆ. ಯಾರ ಗಡಿಬಿಡಿಯಲ್ಲಿ ಅವರಿದ್ದಾರೆ, ಯಾರ ಕೆಲಸದಲ್ಲಿ ಅವರು ಮಗ್ನರಾಗಿದ್ದಾರೆ. ಅಸಲಿಗೆ ತಮ್ಮ ಪಕ್ಕದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ. ಹಾಗೆಯೇ ಆ ಪ್ರದೇಶವೆಲ್ಲಾ ತುಂಬಾ ‘ಬ್ಯುಸಿ! ಬ್ಯುಸಿ!’.

ರಸ್ತೆಯ ಎರಡೂ ಬದಿಗಳಲ್ಲಿ ದೀನವಾಗಿ ಮುಖ ಹಾಕಿಕೊಂಡು ನಿಂತಿರುವ ಮರಗಳು, ಬೀದಿ ದೀಪಗಳ ಬೆಳಕನ್ನು ಹೊದ್ದುಕೊಂಡು ಚಳಿಯಿಂದ ಸ್ವಲ್ಪ ನಿರಾಳತೆ ಪಡೆಯುತ್ತಿರುವಂತೆ ಕಾಣುತ್ತಿದ್ದವು. ರಂಜಿತ್ ಕುಮಾರ್ ಶಿವಪುರ ರಸ್ತೆಯನ್ನು ದಾಟಿ ಆ ರಾತ್ರಿ ಸಮಯದಲ್ಲಿ ಗಡಿಬಿಡಿಯಲ್ಲಿ ನಡೆಯುತ್ತಾ ಹೇಗೋ ರಾಮ್ ಬಜಾರ್ ಮೇನ್ ರೋಡ್‌ವರೆಗೆ ಬಂದನು.

ತಾನು ಬಹಳ ದೂರ ಬಂದಿದ್ದೇನೆ ಎಂದು ಖಚಿತಪಡಿಸಿಕೊಂಡ ನಂತರ ರಸ್ತೆ ಬದಿಯಲ್ಲಿ ನಿಂತು ಬೀದಿ ದೀಪದ ಕೆಳಗೆ ನಿಂತನು. ಯಾರಾದರೂ ರಂಜಿತ್ ಹತ್ತಿರ ಹೋಗಿ ಗಮನಿಸಿದರೆ ಅವನ ಮುಖದಲ್ಲಿನ ಆತಂಕ ಮತ್ತು ಎದೆಯ ಬಡಿತವನ್ನು ಸುಲಭವಾಗಿ ಪತ್ತೆಹಚ್ಚಬಹುದಿತ್ತು.

(ಎನುಗಂಟಿ ವೇಣುಗೋಪಾಲ್)

ಆ ಪ್ರದೇಶದಲ್ಲಿ ಜನ ಸಂಚಾರ ಅಷ್ಟಾಗಿ ಇಲ್ಲದಂತಿದೆ, ಸುಮಾರು ನಿರ್ಮಾನುಷ್ಯವಾಗಿಯೇ ಇತ್ತು. ಸುಮಾರು ಒಂದು ಹತ್ತು ನಿಮಿಷ ಹಾಗೆಯೇ ನಿಂತುಬಿಟ್ಟನು. ಮನಸ್ಸಿಗೆ ಸ್ವಲ್ಪ ಸಮಾಧಾನವಾದ ಮೇಲೆ ತಾನು ಯಾವ ದಿಕ್ಕಿಗೆ ಹೋಗಬೇಕೋ ಆ ದಿಕ್ಕಿನಲ್ಲಿ ಹೋಗುತ್ತಿದ್ದ ಕೆಲವು ವಾಹನಗಳನ್ನು ಗಮನಿಸುತ್ತಾ ಒಬ್ಬಿಬ್ಬರನ್ನು ಲಿಫ್ಟ್ ಕೇಳಿದನು. ಆದರೆ ಯಾರೂ ನಿಲ್ಲಿಸಲಿಲ್ಲ.

ಮೂರನೇಸಲ ದ್ವಿಚಕ್ರ ವಾಹನವೊಂದಕ್ಕೆ ಬಲಗೈ ಅಡ್ಡ ಹಿಡಿದು ಗಟ್ಟಿಯಾಗಿ “ಲಿಫ್ಟ್” ಎಂದು ಕೇಳಿದನು. ತಕ್ಷಣ ಪಲ್ಸರ್ ಬೈಕನ್ನು ನಿಲ್ಲಿಸಿದ ವಾಸುದೇವ ರಾವ್.

ರಂಜಿತ್ ಬೈಕ್ ಹತ್ತಿರ ಬರುತ್ತಿದ್ದಂತೆಯೇ, “ಲಿಫ್ಟ್ ಕೊಡುತ್ತೇನೆ, ಆದರೆ ಒಂದು ಸಣ್ಣ ಕಂಡೀಷನ್!” ಎಂದು ಷರತ್ತು ವಿಧಿಸಿದನು.

ರಂಜಿತ್ ತಲೆಯಾಡಿಸುತ್ತಾ “ಸರಿ! ಹೇಳಿ” ಎಂದು ಕೇಳಿದನು.

“ನಿಜ ಹೇಳಬೇಕೆಂದರೆ, ಈ ಚಳಿ ರಾತ್ರಿ ಸಮಯದಲ್ಲಿ ಬೆಚ್ಚಗಿರಲೆಂದು ಒಂದೆರಡು ಪೆಗ್ ಹಾಕಲು ಬಾರ್ ಕಡೆಗೆ ಹೋಗುತ್ತಿದ್ದೇನೆ. ಒಬ್ಬನೇ ಕುಡಿದರೆ ಅಷ್ಟಾಗಿ ಕಿಕ್ ಇರಲ್ಲ. ನೀವು ಕಂಪನಿ ಕೊಡುತ್ತೀರೆಂದರೆ, ಲಿಫ್ಟ್ ಕೊಡಲು ನನಗೇನು ಅಭ್ಯಂತರವಿಲ್ಲ. ಓಕೆನಾ?” ಎಂದನು.

ರಂಜಿತ್ ಸಂದೇಹದಿಂದ ತಡಬಡಾಯಿಸಿದನು. ಅದನ್ನು ಗಮನಿಸಿದ ವಾಸುದೇವ ರಾವ್ ನಗುತ್ತಾ, “ಬಿಲ್ ನಂದೇ! ಡೋಂಟ್ ವರಿ… ಕಣೋ!” ಎಂದನು.

ಅನುಮಾನಗಳೆಲ್ಲಾ ದೂರವಾಗುತ್ತಿದ್ದಂತೆಯೇ ರಂಜಿತ್ ಯಾವುದೇ ಸಂಕೋಚವಿಲ್ಲದೆ “ಡನ್!” ಎನ್ನುತ್ತಾ ಸಂತೋಷದಿಂದ ಬೈಕ್ ಹಿಂದೆ ಕುಳಿತ.

ಅಶ್ವದಂತೆ ಬೈಕ್ ದೌಡಾಯಿಸಿತು.

ಬಿಜಾಪುರ ಹೊರವಲಯ ದಾಟಿದ ನಂತರ ಬಾಗಲಕೋಟೆ ರಸ್ತೆಯಲ್ಲಿರುವ ‘ವಿಲೇಜ್ ರೆಸ್ಟೋರೆಂಟ್’ ಮುಂದೆ ಬೈಕ್ ಪಾರ್ಕ್ ಮಾಡಿ ಇಬ್ಬರೂ ಬಾರ್ ಒಳಗಡೆ ನಡೆದರು.

ವಾಸುದೇವ ರಾವ್ ತನಗೆ ಇಷ್ಟವಾದ ಬ್ರಾಂಡ್ ಆರ್ಡರ್ ಮಾಡಿದನು. ಬೇಯಿಸಿದ ಕಡಲೆಕಾಯಿ ತರಿಸಿದನು.

ವೇಯ್ಟರ್ ಅವರಿಗೆ ಬೇಕಾದ್ದನ್ನು ತರುವಷ್ಟರಲ್ಲಿ ಒಬ್ಬರಿಗೊಬ್ಬರು ಹೆಸರುಗಳನ್ನು ಪರಿಚಯಿಸಿಕೊಂಡರು.

ಎರಡು ಪೆಗ್ ಬೀಳುವವರೆಗೂ ಅವರಿಬ್ಬರ ಮಧ್ಯೆ ಗ್ಲಾಸ್‌ಗಳದ್ದೇ ಸದ್ದು. ಮೌನವೇ ಮಾತನಾಡಿತು. ಮೂರನೇ ಪೆಗ್‌ಗೆ ಸೋಡಾ ಬೆರೆಸುತ್ತಾ ವಾಸುದೇವ ರಾವ್ ತುಟಿ ತೆರೆದನು, “ಈ ಸಮಯದಲ್ಲಿ ನೀವು ಎಲ್ಲಿಂದ ಬರುತ್ತಿದ್ದೀರಿ ಎಂದು ಹೇಳಲೇ ಇಲ್ಲ” ಎಂದು.

ಬದಲಾಗಿ ರಂಜಿತ್ ಸಣ್ಣದಾಗಿ ನಕ್ಕನು. “ಹೇಳಿದರೆ ನಂಬಲ್ಲ” ಎಂದನು ಎರಡು ಮೂರು ಕಡಲೆ ಬೀಜಗಳನ್ನು ಬಾಯಿಗೆ ಹಾಕಿಕೊಂಡು ಅಗಿಯುತ್ತಾ.

“ಹೇಳಿದ ಮೇಲೆ ಖಂಡಿತ ನಂಬುತ್ತೇನೆ!” ಎಂದ ವಾಸುದೇವ ರಾವ್.

“ನಾನೊಬ್ಬ ಕಳ್ಳ” ಎಂದು ಸಮಾಧಾನವಾಗಿ ಬಾಂಬ್ ಸಿಡಿಸಿದ ರಂಜಿತ್… ಎದುರಿಗಿದ್ದ ವ್ಯಕ್ತಿಯ ಮುಖದ ಭಾವನೆಗಳನ್ನು ನೋಡಲು ಅವನ ಮುಖದತ್ತ ಇಣುಕಿ ನೋಡುತ್ತಾ.

ಕೈಯಲ್ಲಿದ್ದ ಮದ್ಯದ ಗ್ಲಾಸ್ ಎತ್ತಿದ ವಾಸುದೇವ ರಾವ್ ಒಂದು ಸಿಪ್ ಮಾಡಿದನು. ಅದನ್ನು ಟೇಬಲ್ ಮೇಲೆ ಇಡುತ್ತಾ, “ನಾನು ನಂಬಲ್ಲ!” ಎಂದನು… ರಂಜಿತ್ ಊಹಿಸಿದಂತೆ ತನ್ನ ಮುಖದಲ್ಲಿ ಎಂತಹದೇ ಭಾವೋದ್ವೇಗಕ್ಕೆ ಎಡೆಕೊಡದೆ.

“ನಂಬಲ್ಲ ಎಂದು ಮುಂಚೆಯೇ ಹೇಳಿದ್ದೆನಲ್ಲ!” ಎನ್ನುತ್ತಾ ತನ್ನ ಪ್ಯಾಂಟ್ ಜೇಬಿನೊಳಗೆ ಕೈ ಹಾಕಿ ಸುಮಾರು ಆರು ತುಲಾದಷ್ಟು ತೂಕವಿರಬಹುದಾದ ಚಿನ್ನದ ಸರವನ್ನು ಹೊರತೆಗೆದು ತೋರಿಸಿದನು.

“ವಾವ್! ಫ್ರೆಶ್ ಆಗಿ ಈಗಲೇ ಕಳ್ಳತನ ಮಾಡಿದಿರಾ?” ಎಂದು ಸಣ್ಣ ಮಗುವಿನಂತೆ ಉತ್ಸಾಹ ತೋರಿದನು ದೊಡ್ಡ ಮೀಸೆಯಿದ್ದ ವಾಸುದೇವ ರಾವ್.

ರಂಜಿತ್ ಅದನ್ನು ಮತ್ತೆ ಜೇಬಿನೊಳಗೆ ಹಾಕಿಕೊಳ್ಳುತ್ತಾ, ‘ಮಾಡಿದ ಪಾಪ ಹೇಳಿಕೊಂಡರೆ ಹೋಗುತ್ತದೆ’ ಎಂದುಕೊಳ್ಳುತ್ತಾ ಹೆಮ್ಮೆಯಿಂದ ತಲೆಯಾಡಿಸಿದನು.

ಯಾಕೋ ಹಠಾತ್ತಾಗಿ ರಂಜಿತ್ ಅನುಮಾನದಿಂದ ಕೇಳಿದನು, “ಯಾರಿಗಾದರೂ ಹೇಳಲ್ಲ ತಾನೇ ಈ ವಿಷಯ?”.

“ನನಗೇನು ಕೆಲಸ? ಅಚಾನಕ್ಕಾಗಿ ಭೇಟಿಯಾದೆವು, ಸ್ವಲ್ಪ ಹೊತ್ತಿನಲ್ಲಿ ಬೇರೆಯಾಗುತ್ತೇವೆ. ಅಷ್ಟೇ ತಾನೇ! ಸ್ವತಃ ಪೊಲೀಸರೇ ಕೇಳಿದರೂ ಬಾಯಿ ಬಿಡಲ್ಲ” ಎಂದು ನಂಬಿಕೆ ಹುಟ್ಟಿಸಿದ ವಾಸುದೇವ ರಾವ್.

ರಂಜಿತ್ ನಿರಾಳವಾಗಿ ನಿಟ್ಟುಸಿರು ಬಿಡುತ್ತಾ ಒಂದೇ ಗುಕ್ಕಿನಲ್ಲಿ ಅರ್ಧ ಗ್ಲಾಸ್ ಮದ್ಯ ಖಾಲಿ ಮಾಡಿದನು.

ಅವನ ವೇಗವನ್ನು ಕಂಡು ವಾಸುದೇವ ರಾವ್ ಆಶ್ಚರ್ಯ ಪಡುತ್ತಲೇ, “ನನಗೆ ದೆವ್ವದ ಕಥೆಗಳೆಂದರೆ, ಕಳ್ಳತನದ ಘಟನೆಗಳೆಂದರೆ ಬಹಳ ಇಷ್ಟ. ಹೇಳಿದರೆ ಮಜವಾಗಿ ಸಮಯವೂ ಕಳೆಯುತ್ತದೆ” ಎಂದು ಹೇಳುವಂತೆ ಕೇಳಿದನು. “ನನಗೇನು ಅಭ್ಯಂತರವಿಲ್ಲ, ಆದರೆ ನಂದೂ ಒಂದು ಸಣ್ಣ ಕಂಡೀಷನ್” ಎಂದು ವಾಸುದೇವ ರಾವ್ ತರಹವೇ ರಂಜಿತ್ ಕೂಡ ಪಟ್ಟು ಹಿಡಿದನು.

“ಕಂಡೀಷನ್ ಎಂತದ್ದೇ ಆದರೂ… ನನಗೆ ಓಕೆ!” ಎಂದು ತಕ್ಷಣ ಒಪ್ಪಿಕೊಂಡ ವಾಸುದೇವ ರಾವ್.

“ಮುಂದೆ ಯಾವಾಗಲಾದರೂ ನಾವು ಭೇಟಿಯಾದಾಗ ಅಥವಾ ಪ್ರತ್ಯೇಕವಾಗಿ ಫೋನ್ ಮಾಡಿ ಭೇಟಿಯಾದಾಗ ಮದ್ಯದ ಪಾರ್ಟಿ ನಾನೇ ಕೊಡುತ್ತೇನೆ”.

“ಅಷ್ಟೇ ತಾನೇ! ಶ್ಯೂರ್!” ಎಂದು ಒಪ್ಪಿಕೊಂಡನು. ಆ ಮಾತು ಮುಗಿದ ಮೇಲೆ ವಾಸುದೇವ ರಾವ್ ಫೋನ್ ನಂಬರ್ ಕೇಳಿ ಸೇವ್ ಮಾಡಿಕೊಂಡ ರಂಜಿತ್.

ತನ್ನ ಕಳ್ಳತನದ ಸಾಹಸ ಗಾಥೆಯನ್ನು ವಾಸುದೇವ ರಾವ್‌ಗೆ ರೋಚಕವಾಗಿ ಹೇಳಲು ರಂಜಿತ್ ಕುಮಾರ್ ಪ್ರಾರಂಭಿಸಿದನು.

ಶಿವಪುರ ರಸ್ತೆಯ ತುದಿಯಲ್ಲಿ ಎಸೆದಂತಿದೆ ಆ ಭವನ. ಆ ರಾತ್ರಿ ಸಮಯದಲ್ಲಿ ಮನೆಯ ಯಜಮಾನ ಬ್ಯುಸಿನೆಸ್ ನಿಮಿತ್ತ ಕಂಪನಿಯಲ್ಲೇ ಇರುತ್ತಾನೆ. ಈಗಾಗಲೇ ಒಂದು ವಾರದಿಂದ ನಿಗಾ ಇಟ್ಟು ರಂಜಿತ್ ತಿಳಿದುಕೊಂಡಿದ್ದನು.

ಜನಸಂಚಾರ ಹೆಚ್ಚಿಲ್ಲದ ಮನೆಗಳನ್ನೇ ಅವನು ಗುರಿ ಮಾಡುತ್ತಾನೆ. ಕಳ್ಳತನ ಮಾಡಬೇಕೆಂದು ಆರಿಸಿಕೊಂಡ ನಂತರ ಮೆಲ್ಲನೆ ಆ ಮನೆಗೆ ನುಗ್ಗಿದನು.

ಯಾವುದೇ ಹೆದರಿಕೆಯಿಲ್ಲದೆ ಒಬ್ಬಳೇ ಇದ್ದ ವನಜಾ ಹತ್ತಿರ ಹೋಗಿ ಚಾಕು ತೋರಿಸಿ ಬೆದರಿಸಿದನು. ಆ ಸಮಯದಲ್ಲಿ ಟಿವಿ ನೋಡುವುದರಲ್ಲಿ ಮಗ್ನಳಾಗಿದ್ದ ವನಜಾ ಅವನ ಬರವಿಕೆಯಿಂದ ತಟ್ಟನೆ ಎದ್ದು ನಿಂತಳು.

ಆ ಹಠಾತ್ ಬೆಳವಣಿಗೆಯಿಂದ ಆ ಅಪರಿಚಿತನನ್ನು ಕಂಡು ಮೊದಲು ಬೆದರಿ ಹೋದಳು. ಆದರೆ ಮರುಕ್ಷಣವೇ ಎದೆಯಲ್ಲಿ ಧೈರ್ಯ ತುಂಬಿಕೊಂಡಳು.

“ಹಠ ಮಾಡದೆ ಆ ಸರವನ್ನು ಹೀಗೆ ಕೊಟ್ಟರೆ ಕೆಲಸ ಸುಲಭವಾಗುತ್ತದೆ. ನಿನಗೆ ಪ್ರಾಣಾಪಾಯ ಇರಲ್ಲ, ಗಾಯವೂ ಆಗಲ್ಲ” ಎಂದನು ಕ್ರೂರವಾಗಿ.

“ನಿಮ್ಮಪ್ಪನ ಆಸ್ತಿ ಅಂದುಕೊಂಡಿದ್ದೀಯಾ? ಈ ಸರ ನಮ್ಮ ಕಷ್ಟಾರ್ಜಿತ” ಎಂದು ಹೇಗೋ ಧೈರ್ಯ ತಂದುಕೊಂಡು ಆಕೆ ಒಂದು ಮಾತು ಹೇಳುವಷ್ಟರಲ್ಲಿ, ಬಲಗೈಯಲ್ಲಿದ್ದ ಚಾಕುವನ್ನು ಎಡಗೈಗೆ ಬದಲಿಸಿಕೊಂಡ ರಂಜಿತ್.

ಬಲಗೈಯಿಂದ ಲೀಲಾಜಾಲವಾಗಿ ವನಜಾ ಕತ್ತಿನಲ್ಲಿದ್ದ ಸರವನ್ನು ಬಲವಾಗಿ ಎಳೆದನು. ವನಜಾ ಆ ವ್ಯಕ್ತಿಯನ್ನು ಬಿಡಲಿಲ್ಲ. ನೋಡ ನೋಡುತ್ತಲೇ ಅಷ್ಟು ಬೆಲೆಬಾಳುವ ಸರವನ್ನು ಕಳೆದುಕೊಳ್ಳಲು ಮನಸ್ಸು ಒಪ್ಪುತ್ತಿರಲಿಲ್ಲ. ಅವನ ಕೈಯನ್ನು ಹಾಗೆಯೇ ಹಿಡಿದು ಬಲವಾಗಿ ಕಚ್ಚಿದಳು. ನೋವಿನಿಂದ ಒದ್ದಾಡುತ್ತಾ, ಕಾದಾಟ ನಡೆಸಿ ಕೊನೆಗೆ ಚಾಣಾಕ್ಷತನದಿಂದ ತಪ್ಪಿಸಿಕೊಂಡನು.

ಸಿಕ್ಕಿದ ಆ ಸರದೊಂದಿಗೆ ಅಲ್ಲಿಂದ ಓಡಿ ಹೊರಗೆ ಬಂದನು.

“ಬಹಳ ದೂರ ಬಂದ ಮೇಲೆ ನೀವು ಎದುರಾದಿರಿ” ಎಂದು ಹೇಳುವುದು ಮುಗಿದ ಮೇಲೆ ಉಳಿದ ಅರ್ಧ ಗ್ಲಾಸ್ ಮದ್ಯವನ್ನು ಖಾಲಿ ಮಾಡಿದ ರಂಜಿತ್.

“ಇಗೋ ಪುರಾವೆ… ನನ್ನ ಕೈ ಮೇಲಿನ ಗಾಯ” ಎನ್ನುತ್ತಾ ಬಲಗೈಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ತೋರಿಸಿದ ರಂಜಿತ್.

“ಹೌದು, ಆಗ ನೀವು ಬಲಗೈಯಿಂದ ಲಿಫ್ಟ್ ಕೇಳಿದಾಗ ಬೀದಿ ದೀಪದ ಬೆಳಕಿನಲ್ಲಿ ಗಮನಿಸಿದೆ. ಆ ಗಾಯ ನೋಡಿಯೇ ಲಿಫ್ಟ್ ಕೊಟ್ಟೆ” ಎಂದ ವಾಸುದೇವ ರಾವ್.

ರಂಜಿತ್ ಒಮ್ಮೆಲೇ ದಂಗಾದನು. “ಆತಂಕ ಪಡಬೇಡಿ. ನೀವು ಆ ಗಾಯದ ನೋವಿನಲ್ಲಿ ಇರುತ್ತೀರಿ ಎಂದುಕೊಂಡು ಲಿಫ್ಟ್ ಕೊಡಲು ಸಿದ್ಧನಾದೆ. ಆ ನೋವು ಮರೆಯಲು ಮದ್ಯ ಆಫರ್ ಮಾಡಿದೆ” ಎಂದ ಮಾತು ಬದಲಿಸುತ್ತಾ.

“ಏನನ್ನೂ ಮುಚ್ಚಿಡದೆ ನಾನು ಪ್ರಾಮಾಣಿಕವಾಗಿ ನನ್ನ ಬಗ್ಗೆ ಹೇಳಿದೆ. ಅಂದಹಾಗೆ ಅಸಲಿಗೆ ನೀವು ಯಾರು ಎಂದು ಹೇಳಲೇ ಇಲ್ಲ. ಅಷ್ಟೇ ಅಲ್ಲದೆ ನಾವು ಮತ್ತೆ ಭೇಟಿಯಾಗಬೇಕೆಂದುಕೊಂಡಿದ್ದೇವಲ್ಲ” ಎಂದ ರಂಜಿತ್.

“ನೀವು ಈಗ ತಾನೇ ಕಳ್ಳತನ ಮಾಡಿ ಬಂದ ಪ್ರದೇಶದಲ್ಲಿ ಜನಸಂಚಾರ ಹೆಚ್ಚಾಗಿ ಇರುವುದಿಲ್ಲ ಅಲ್ಲವೇ?”

“ನಿಜ ಹೇಳಿದಿರಿ. ಜನಸಂಚಾರ ಕಡಿಮೆ ಇರುವ ಮನೆಯನ್ನೇ ನಾನು ಟಾರ್ಗೆಟ್ ಮಾಡುತ್ತೇನೆ. ಅದಕ್ಕೆ ಒಡವೆ ಕಳೆದುಕೊಂಡ ಆ ಹೆಂಗಸು ಕಿರುಚಿದರೂ ಪ್ರಯೋಜನವಿಲ್ಲ ಎಂದು… ಹೆಚ್ಚಾಗಿ ಕಿರುಚದೆ ಸೆಲ್ ಫೋನ್ ಹುಡುಕಾಟದಲ್ಲಿ ಬಿದ್ದಳು. ನಾನು ಓಡಿ ಬರುತ್ತಿರುವಾಗ…” ಎನ್ನುತ್ತಾ ಸ್ವಲ್ಪ ಜೋರಾಗಿ ನಕ್ಕನು ರಂಜಿತ್.

“ಯು ಆರ್ ರೈಟ್! ಅದು ವಾಸ್ತವವೇ. ಫೋನ್‌ಗಾಗಿ ಹುಡುಕಿದ ಆ ಬಾಧಿತೆ ಪೊಲೀಸರಿಗೆ ಫೋನ್ ಮಾಡಿರಬಹುದು ಅಥವಾ ತನ್ನ ಗಂಡನಿಗೆ ಕರೆ ಮಾಡಿ ಹೇಳಿರಬಹುದು. ಒಟಿಟಿಯಲ್ಲಿ ಬಂದ ಒಂದು ಸಿನಿಮಾದಲ್ಲಿ ಇಂತಹ ದೃಶ್ಯ ನೋಡಿದ್ದೇನೆ…” ಎಂದ ವಾಸುದೇವ ರಾವ್.

“ಆ ನಿರ್ದೇಶಕನ ಸ್ಕ್ರಿಪ್ಟ್‌ನಲ್ಲಿ ಅಂತಹ ದೊಡ್ಡ ಟ್ವಿಸ್ಟ್ ಏನಿದೆ? ಯಾರಾದರೂ ಹಾಗೆಯೇ ಮಾಡುತ್ತಾರೆ ತಾನೇ?” ಎಂದು ಹೆಗಲು ಕುಣಿಸಿದ ರಂಜಿತ್.

“ಇನ್ನೂ ಆ ಸಿನಿಮಾ ದೃಶ್ಯದ ಮುಂದುವರಿಕೆ ಹೇಳಬೇಕೆಂದರೆ, ಆಕೆಯ ಫೋನ್ ಕರೆ ಸ್ವೀಕರಿಸಿದ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದರು. ಬಹಳ ವೇಗವಾಗಿ ತನಿಖೆ ಆರಂಭಿಸಿದರು. ಆ ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ಫೂಟೇಜ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಅವುಗಳಿಂದ ಆ ಕಳ್ಳನ ಫೋಟೋ ಸಂಗ್ರಹಿಸಿದರು. ಅದನ್ನು ನಗರದ ತಮ್ಮ ಸಿಬ್ಬಂದಿಯ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಇತರ ಪೊಲೀಸರಿಗೆ ಕಳುಹಿಸಿದರು.”

“ತುಂಬಾ ಕುತೂಹಲಕಾರಿಯಾಗಿದೆ. ಬಹುಶಃ ನೀವು ಹೇಳುತ್ತಿರುವುದು ಯಾವುದಾದರೂ ಮಲಯಾಳಂ ಸಿನಿಮಾದ ಸೀನ್ ಇರಬೇಕು. ಏಕೆಂದರೆ ಮಲಯಾಳಂ ಸಿನಿಮಾಗಳಲ್ಲಿ ಇಂತಹ ಇನ್ವೆಸ್ಟಿಗೇಷನ್ ಇರುತ್ತವೆ. ಸಹಜವಾಗಿ ಚಿತ್ರೀಕರಿಸುತ್ತಾರೆ. ಅವೇ ನಾನು ಮಾಡುವ ಕಳ್ಳತನಗಳಿಗೆ ಇನ್ಸ್ಪಿರೇಷನ್. ಸರಿ, ಆಮೇಲೇನಾಯಿತು?” ಎಂದು ಬಹಳ ಆಸಕ್ತಿ ತೋರಿಸಿದ ರಂಜಿತ್.

ಕುಡಿಯುವುದನ್ನು ನಿಲ್ಲಿಸಿ ವಾಸುದೇವ ರಾವ್ ಮುಂದುವರಿಸಿದನು. “ಸರಿಯಾಗಿ ಅದೇ ಸಮಯದಲ್ಲಿ ಯಾವುದೋ ಕೆಲಸದ ಮೇಲೆ ಅದೇ ದಾರಿಯಲ್ಲಿ ಹೋಗುತ್ತಿದ್ದ ಎಸ್‌ಐ ಗೌತಮ್ ಕುಮಾರನ್ನು ಒಬ್ಬ ಅಪರಿಚಿತ ವ್ಯಕ್ತಿ ಕೈ ತೋರಿಸಿ ಲಿಫ್ಟ್ ಕೇಳುತ್ತಾನೆ.

ಅವನ ಕೈ ಮೇಲೆ ಯಾರೋ ಕಚ್ಚಿದಂತಹ ಗಾಯವಿರುವುದನ್ನು ಆ ಎಸ್‌ಐ ಗಮನಿಸುತ್ತಾನೆ. ‘ಒಂದು ಸೆಕೆಂಡ್!’ ಎನ್ನುತ್ತಾ ಸೆಲ್ ಓಪನ್ ಮಾಡಿ ವಾಟ್ಸಾಪ್ ಗ್ರೂಪ್ ಚೆಕ್ ಮಾಡುತ್ತಾನೆ.

ಆಗ ತಾನೇ ಗ್ರೂಪ್‌ಗೆ ಬಂದ ಫೋಟೋ ನೋಡಿ ಅದರೊಂದಿಗೆ ಹೋಲಿಸಿದಾಗ… ಆ ಕಳ್ಳನೇ ಈ ಲಿಫ್ಟ್ ಕೇಳಿದ ವ್ಯಕ್ತಿ ಎಂದು ಎಸ್‌ಐ ಖಚಿತಪಡಿಸಿಕೊಳ್ಳುತ್ತಾನೆ.

ಆ ಕಳ್ಳತನದ ಕೇಸ್ ತನಿಖೆ ಮಾಡುತ್ತಿರುವ ಪೊಲೀಸರಿಗೆ ಸಮಯಪ್ರಜ್ಞೆಯಿಂದ ತಕ್ಷಣ ಮಾಹಿತಿ ನೀಡುತ್ತಾನೆ. ಇದೆಲ್ಲಾ ನಡೆದ ಮೇಲೆ ಅವನನ್ನು ಬೈಕ್ ಹಿಂದೆ ಕುಳ್ಳಿರಿಸಿಕೊಳ್ಳುತ್ತಾನೆ…”

ಅದು ಹಾಗೆ ನಡೆಯುತ್ತಿರುವಾಗ… ಈಗ ತನಗಾದಂತೆಯೇ ವಾಸುದೇವ ರಾವ್ ವಿವರಿಸುತ್ತಿದ್ದರೆ, ರಂಜಿತ್ ಕುಮಾರ್‌ಗೆ ಎಲ್ಲೋ ಏನೋ ತಪ್ಪಾಗಿದೆ ಅನಿಸಿತು. ನೀರು ಕುಡಿಯುತ್ತಾ ಕುಳಿತಿದ್ದ ಕಡೆಯಿಂದ ಸರ್ ಎಂದು ಎದ್ದು ನಿಂತನು.

ಅಷ್ಟರಲ್ಲಾಗಲೇ ವಾಸುದೇವ ರಾವ್ ಮುಖದಲ್ಲಿ ಸಣ್ಣ ನಗು ಅರಳಿತು.

“ನೀವು… ನೀವು ಆ ಕಥೆಯಲ್ಲಿ ಹೇಳಿದಂತೆ ಎಸ್‌ಐ ಗೌತಮ್ ಕುಮಾರ್ ಅಲ್ಲ ತಾನೇ? ಏಕೆಂದರೆ ವಾಸುದೇವ ರಾವ್ ಹೆಸರಿನಲ್ಲಿ ನೀವು ನನಗೆ ಪರಿಚಯವಾದಿರಿ” ಎಂದು ಆತಂಕದಿಂದ ಕೇಳಿದ ರಂಜಿತ್ ಕುಮಾರ್.

ಗ್ಲಾಸ್ ಎತ್ತಿ ಉಳಿದಿದ್ದ ಕೆಲವು ಹನಿಗಳನ್ನು ಬಾಯಿಗೆ ಹಾಕಿಕೊಂಡು ಖಾಲಿ ಗ್ಲಾಸನ್ನು ಟೇಬಲ್ ಮೇಲಿಟ್ಟನು. ಬಲಗೈ ಬೆರಳುಗಳಿಂದ ಮೀಸೆಯನ್ನು ಮೇಲಕ್ಕೆ ತಿರುವಿದನು.

ರಂಜಿತ್‌ನನ್ನು ಅಷ್ಟೊಂದು ಸಸ್ಪೆನ್ಸ್‌ನಲ್ಲಿ ಮುಳುಗಿಸದೆ ಓರೆಯಾಗಿ ನಗುತ್ತಾ “ಹೌದು” ಎಂಬಂತೆ ತಲೆಯಾಡಿಸಿದನು… ಟ್ವಿಸ್ಟ್ ರಿವೀಲ್ ಮಾಡುತ್ತಾ.

ಅಷ್ಟರಲ್ಲಾಗಲೇ ರಂಜಿತ್ ಮೈಯೆಲ್ಲಾ ಬೆವರಿನಿಂದ ನೆನೆದು ಹೋಗಿತ್ತು. ಹೃದಯ ಬಡಿತ ಜೋರಾಗಿತ್ತು. ಇನ್ನು ದಾರಿಯಿಲ್ಲದೆ ಮಿಂಚಿನ ವೇಗದಲ್ಲಿ ತಕ್ಷಣವೇ ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪಾದರಸದಂತೆ ಚಲಿಸಲು ಮುಂದಾದನು.

ಸರಿಯಾಗಿ ಅದೇ ಪರಿಸ್ಥಿತಿಯಲ್ಲಿ… ಈಗಾಗಲೇ ಎಸ್‌ಐ ಗೌತಮ್ ಕುಮಾರ್ ಕಳುಹಿಸಿದ ಲೊಕೇಶನ್ ಆಧಾರದ ಮೇಲೆ ಅಲ್ಲಿಗೆ ಬಂದ ನಾಲ್ವರು ಪೊಲೀಸರು ರಂಜಿತ್‌ನನ್ನು ಸುತ್ತುವರಿದರು.

“ಮಾತು ಕೊಟ್ಟಿದ್ದೇನಲ್ಲ, ಖಂಡಿತವಾಗಿಯೂ ನಾವಿಬ್ಬರೂ ಸೇರಿ ಮತ್ತೊಮ್ಮೆ ಮದ್ಯದ ಪಾರ್ಟಿ ಮಾಡೋಣ. ನಾನು ಖಂಡಿತ ಬರುತ್ತೇನೆ. ಆದರೆ ನೀನು ಕಳ್ಳತನ ಮಾಡಿದ ಹಣದಿಂದಲ್ಲ. ಇದುವರೆಗೆ ಪೊಲೀಸರ ಕಣ್ಣು ತಪ್ಪಿಸಿ ನೀನು ಮಾಡಿದ ಕಳ್ಳತನದ ಅಪರಾಧಕ್ಕೆ ಶಿಕ್ಷೆ ಅನುಭವಿಸಲೇಬೇಕು.

ಇನ್ನು ಯಾವಾಗಲಾದರೂ ಜೈಲಿನಿಂದ ಖಂಡಿತ ವಾಪಸ್ ಬರುತ್ತೀಯಾ. ಆಮೇಲೆ ನಿನ್ನ ರೆಕ್ಕೆಗಳ ಕಷ್ಟದಿಂದ ಯಾವುದಾದರೂ ಕೆಲಸ ಮಾಡಿ ಒಂದು ಐನೂರು ರೂಪಾಯಿ ಪ್ರಾಮಾಣಿಕವಾಗಿ ಸಂಪಾದಿಸು. ಆಗ ನಿನ್ನ ಕರೆಯ ಮೇರೆಗೆ ಬರುತ್ತೇನೆ. ಆ ಹಣದಿಂದ ಇನ್ನೊಮ್ಮೆ ಮದ್ಯದ ಪಾರ್ಟಿ ಮಾಡೋಣ. ಓಕೆನಾ! ಮಿಸ್ಟರ್ ರಂಜಿತ್.”

ಆ ಕಾನ್ಸ್‌ಟೇಬಲ್‌ಗಳು ತನಗೆ “ಥ್ಯಾಂಕ್ಸ್” ಹೇಳುತ್ತಿದ್ದರೆ… ಕಿರುನಗು ಬೀರಿದ ಟ್ರೈನಿ ಎಸ್‌ಐ ಗೌತಮ್ ಕುಮಾರ್ ಅಲ್ಲಿಂದ ಬಿಲ್ ಕೌಂಟರ್ ಕಡೆಗೆ ನಡೆದನು.

“ಎಸ್‌ಐ ಗೌತಮ್ ಕುಮಾರ್ ಪರಿಚಯವಾಗುವ ಮೊದಲು ಬೆಲೆಬಾಳುವ ಆ ಚಿನ್ನದ ಒಡವೆಯನ್ನು ಚೋರಿ ಮಾಡಿದೆ ಎಂದುಕೊಂಡೆ. ಆದರೆ ಈಗ ಎಸ್‌ಐ ಗೌತಮ್ ಕುಮಾರ್ ಕೈಯಿಂದ ನಾನೇ ಚೋರಿಯಾದೆ” ಎಂಬ ರಂಜಿತ್ ಅಂತರಂಗದ ಮಾತುಗಳಿಗೆ ಅವನ ತುಟಿಯ ಮೇಲೆ ಬಾಡಿದ ನಗುವೊಂದು ನೀರಸವಾಗಿ ಅರಳಿತು.

About The Author

ಕೋಡಿಹಳ್ಳಿ ಮುರಳಿಮೋಹನ್

ಕೋಡಿಹಳ್ಳಿ ಮುರಳಿಮೋಹನ್ ತೆಲುಗು ಬರಹಗಾರ, ಸಂಪಾದಕ, ಅನುವಾದಕ ಮತ್ತು ತೆಲುಗು ವಿಕಿಪೀಡಿಯನ್. ಡಾ.ಎಚ್. ನರಸಿಂಹಯ್ಯನವರ ಆತ್ಮಕಥೆ "ಹೋರಾಟದ ಹಾದಿ" ಯನ್ನ ತೆಲುಗು ಭಾಷೆಯಲ್ಲಿ "ಪೋರಾಟಪಥಂ" ಹೆಸರಿನಲ್ಲಿ ಅನುವಾದಿಸಿದ್ದಾರೆ. ಊರು ಹಿಂದೂಪುರ ಬಳಿಯ ಲೇಪಾಕ್ಷಿ ಮಂಡಲದ ಕೋಡಿಹಳ್ಳಿಯವರಾದ ಇವರು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದು, ಪ್ರಸ್ತುತ ದಕ್ಷಿಣ ಮಧ್ಯ ರೈಲ್ವೇಯಲ್ಲಿ ಹಿರಿಯ ವಿಭಾಗದ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ