Advertisement
`ಅಂತರಿಕ್ಷದಲ್ಲಿ ವಿಹಾ’ ಮಕ್ಕಳ ವೈಜ್ಞಾನಿಕ ಫ್ಯಾಂಟಸಿಯ ಲೋಕ: ಮಂಡಲಗಿರಿ ಪ್ರಸನ್ನ ಬರಹ

`ಅಂತರಿಕ್ಷದಲ್ಲಿ ವಿಹಾ’ ಮಕ್ಕಳ ವೈಜ್ಞಾನಿಕ ಫ್ಯಾಂಟಸಿಯ ಲೋಕ: ಮಂಡಲಗಿರಿ ಪ್ರಸನ್ನ ಬರಹ

ವಿಹಾ ಮತ್ತು ಆಕೆಯ ಗೆಳೆಯ ಚಿಂಟು ಅವರ ಕೆಲ ವೈಜ್ಞಾನಿಕ ಸಂಭಾಷಣೆಗಳು ಆಸಕ್ತಿದಾಯಕ. ನಿದ್ದೆಯಲ್ಲೂ ಅಂತರಿಕ್ಷ, ರಾಕೇಟ್, ಪ್ಯಾರಾಚೂಟ್….. ಎಂದೆಲ್ಲ ಬಡಬಡಿಸುವ ವಿಹಾ, ಸ್ವೀಟೋ ಏಲಿಯನ್ಸ್ ಜೊತೆ ನಡೆಸುವ ಸಂಭಾಷಣೆ ಮಕ್ಕಳ ಯೋಚನಾ ಲಹರಿಯ ವಿಸ್ತಾರಕ್ಕೆ ಇಂಬುಕೊಟ್ಟಂತಿದೆ. ವಿಹಾಳ ಕನಸು, ಸ್ವೀಟೋ ಬಂದ ದಿನ, ಫ್ಲೈಯಿಂಗ್ ಸಾಸರ್‌ನಲ್ಲಿ ಏಲಿಯನ್ಸ್, ಅಂತರಿಕ್ಷದಲ್ಲಿ ವಿಹಾ, ಮೊದಲಾದ ಅಧ್ಯಾಯಗಳಲ್ಲಿ ವಿಹಾಳ ಸಾಹಸ, ಆಕೆಯ ಕಲ್ಪನಾ ಶಕ್ತಿ, ಧೈರ್ಯ, ಹೊಸತನ್ನು ಕಲಿಯಬೇಕು, ಮಾಡಬೇಕೆನ್ನುವ ಹಂಬಲದ ತುಡಿತವಿದೆ.
ವಸು ವತ್ಸಲೆ ಬರೆದ `ಅಂತರಿಕ್ಷದಲ್ಲಿ ವಿಹಾʼ ಮಕ್ಕಳ ಕೃತಿಯ ಕುರಿತು ಮಂಡಲಗಿರಿ ಪ್ರಸನ್ನ ಬರಹ

ವಸು ವತ್ಸಲೆ ಅವರ `ಅಂತರಿಕ್ಷದಲ್ಲಿ ವಿಹಾ’ ಕೃತಿ ಒಂದು ವೈಜ್ಞಾನಿಕ ಕಥಾ ಸರಣಿಯ ಮೊದಲ ಭಾಗ. ಹಾಗಾಗಿಯೇ, ಈ ಕೃತಿಯ ಶೀರ್ಷಿಕೆಯ ಜೊತೆಗೆ ಅವರು `ಹಾರುವ ಬಾರ ದೂರ’ ಎನ್ನುವ ಮೋಹಕ ಟ್ಯಾಗ್ ಲೈನ್ ಸೇರಿಸಿ ಪ್ರಕಟಿಸಿದ್ದಾರೆ. ಈ ಕೃತಿಯ ಮೂಲ ಉದ್ದೇಶ ವೈಜ್ಞಾನಿಕ ವಿಷಯಗಳನ್ನು ವಿವಿಧ ಮೂಲಗಳಿಂದ ಹೆಕ್ಕಿ ತೆಗೆದು, ಮಕ್ಕಳಿಗೆ ಕುತೂಹಲ ಮೂಡಿಸಬಹುದಾದ ಫ್ಯಾಂಟಸಿ ಲೋಕವೊಂದಕ್ಕೆ ಸೆಳೆದುಕೊಂಡು ಹೋಗಬಹುದಾದ ವಿವೇಚನೆಯಿಂದಲೆ ವಸು ವತ್ಸಲೆ ಈ ಪ್ರಯತ್ನಕ್ಕೆ ಇಳಿದಿರಬಹುದಾದ ಸಾಧ್ಯತೆ ಇದೆ. ಅದಕ್ಕೆ ಬಲವಾದ ಒಂದು ಕಾರಣವೆಂದರೆ ವಸು ವತ್ಸಲೆ ಮೂಲತಃ ಶಿಕ್ಷಕ ವೃತ್ತಿಯಲ್ಲಿರುವವರಾದ ಕಾರಣದಿಂದ ಅವರು ಮಕ್ಕಳ ಆಸಕ್ತಿ, ಕುತೂಹಲ, ಮನೋಧರ್ಮವನ್ನು ಬಲ್ಲವರಾಗಿರುವ ಕಾರಣದಿಂದಲೂ, ಮಕ್ಕಳ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಗಳ ಮೂಲಕ ಮಕ್ಕಳ ಮನಸ್ಸನ್ನು ಅರಿತವರಾಗಿರುವುದರಿಂದ ಅವರು ಇಂತಹ ಸಾಹಿತ್ಯ ಒದಗಿಸಲು ಸಾಧ್ಯವಾಗಿದೆ, ಅದಕ್ಕೆ ಅವರು ಸಮರ್ಥರು ಸಹ.

(ವಸು ವತ್ಸಲೆ)

ಮಕ್ಕಳ ಸಹಜ ಕುತೂಹಲ ಇಲ್ಲಿ ವಿಹಾಳ ಮೂಲಕ ಅಭಿವ್ಯಕ್ತಗೊಂಡಿದೆ. ಕಥೆಯ ಉದ್ದಕೂ ಲೇಖಕಿ ಅಂತರಿಕ್ಷದ ವೈಜ್ಞಾನಿಕ ವಿಷಯಗಳನ್ನು ತೆರೆದಿಡುತ್ತಾರೆ. ವಿಜ್ಞಾನದ ವಿದ್ಯಾರ್ಥಿಯಲ್ಲದೆಯೂ ಅಂತರಿಕ್ಷದ ವಿಷಯಗಳನ್ನು ಕಟ್ಟಿಕೊಡುವಲ್ಲಿ ವಸು ವತ್ಸಲೆ ತೋರಿಸಿರುವ ಆಸಕ್ತಿ ಮತ್ತು ಕುತೂಹಲ ನಿಜಕ್ಕೂ ಮೆಚ್ಚುವಂತಹುದು. `ಸ್ಪೇಸ್’ ನಲ್ಲಿ ಕಸ ಹೇಗೆ ಸಂಗ್ರಹವಾಯಿತು? ಎಂಬ ಸಂಗತಿಯಿಂದಲೇ ತೆರೆದುಕೊಳ್ಳುವ ಕಥೆ, ಸ್ಪೇಸ್ ಸ್ಟುಡಿಯೋ ಹೊಕ್ಕು ಗೆಳೆಯರೊಂದಿಗೆ ಕಸ ಹುಡುಕಲು ರಾಕೇಟ್ ಮೂಲಕ ಹಾರಿ, ಏಲಿಯನ್ಸ್ ಹುಡುಕುವುದು, ರೋಬೋ ಗೆಳೆತನ ಮಾಡುವುದು, ಗ್ಯಾಜೆಟ್ ಮೂಲಕ ಗಗನಕ್ಕೆ ಚಿಮ್ಮಿ ಸಾಹಸ ನಡೆಸುವುದು ಮಕ್ಕಳ ರಮ್ಯ ಲೋಕವನ್ನು ತೆರೆದಿಡುವಲ್ಲಿ ಯಶಸ್ವಿಯಾಗುತ್ತದೆ. ಈ ಮೊದಲು ರಾಜಶೇಖರ ಭೂಸನೂರಮಠ ಸೇರಿದಂತೆ ಕೆಲವೆ ಕೆಲವು ಬರಹಗಾರರು ಇಂತಹ ಮಕ್ಕಳ ವೈಜ್ಞಾನಿಕ ಕಥಾ ಲೋಕವನ್ನು ತೆರೆದಿಡಲು ಪ್ರಯತ್ನಿಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.

ವಿಹಾ ಎಂಬ ಪುಟ್ಟ ಬಾಲಕಿಯ ಬಾಹ್ಯಾಕಾಶ ಸಂಗತಿಗಳು, ವಿಸ್ಮಯಗಳನ್ನು ಅರಿಯುವ ಆಸಕ್ತಿ ಆಕೆಯ ತಂದೆಯ ಮೂಲಕ ಇಲ್ಲಿ ಆರಂಭವಾಗುತ್ತದೆ. ಇಸ್ರೋ ವಿಜ್ಞಾನ ಜಗತ್ತನ್ನು ವಿಹಾಳ ತಂದೆ ಡಾ.ಸುಧಿ ಸಮ್ಯಕ್ ಮೂಲಕ ಕುತೂಹಲದ ಪುಟ್ಟ ಪುಟ್ಟ ಕಣ್ಣುಗಳಿಂದ ನೋಡಲು ಪ್ರಯತ್ನಿಸುವ ಬಾಲಕಿ ಮಾಡುವ ಅನ್ವೇಷಣೆಗಳು, ಸಾಹಸಗಳು ಮೈನವಿರೇಳಿಸುತ್ತವೆ.

ವಿಹಾ ಮತ್ತು ಆಕೆಯ ಗೆಳೆಯ ಚಿಂಟು ಅವರ ಕೆಲ ವೈಜ್ಞಾನಿಕ ಸಂಭಾಷಣೆಗಳು ಆಸಕ್ತಿದಾಯಕ. ನಿದ್ದೆಯಲ್ಲೂ ಅಂತರಿಕ್ಷ, ರಾಕೇಟ್, ಪ್ಯಾರಾಚೂಟ್….. ಎಂದೆಲ್ಲ ಬಡಬಡಿಸುವ ವಿಹಾ, ಸ್ವೀಟೋ ಏಲಿಯನ್ಸ್ ಜೊತೆ ನಡೆಸುವ ಸಂಭಾಷಣೆ ಮಕ್ಕಳ ಯೋಚನಾ ಲಹರಿಯ ವಿಸ್ತಾರಕ್ಕೆ ಇಂಬುಕೊಟ್ಟಂತಿದೆ. ವಿಹಾಳ ಕನಸು, ಸ್ವೀಟೋ ಬಂದ ದಿನ, ಫ್ಲೈಯಿಂಗ್ ಸಾಸರ್‌ನಲ್ಲಿ ಏಲಿಯನ್ಸ್, ಅಂತರಿಕ್ಷದಲ್ಲಿ ವಿಹಾ, ಮೊದಲಾದ ಅಧ್ಯಾಯಗಳಲ್ಲಿ ವಿಹಾಳ ಸಾಹಸ, ಆಕೆಯ ಕಲ್ಪನಾ ಶಕ್ತಿ, ಧೈರ್ಯ, ಹೊಸತನ್ನು ಕಲಿಯಬೇಕು, ಮಾಡಬೇಕೆನ್ನುವ ಹಂಬಲದ ತುಡಿತವಿದೆ.

ಅಲ್ಲಲ್ಲಿ ಮಿಂಚುವ ಹಾಸ್ಯ ಪ್ರಸಂಗಗಳು ಓದುಗರಿಗೆ ಕಚಗುಳಿ ಇಡುತ್ತವೆ. ಕಲಾವಿದ ಸಂತೋಷ್ ಸಸಿಹಿತ್ಲು ಅವರ ಚಿತ್ರಗಳು ಲೇಖಕಿ ವಸು ವತ್ಸಲೆ ಅವರ ಕಥಾ ಜಗತ್ತಿಗೆ ವಿಶಿಷ್ಟ ಬಗೆಯ ಸಂವೇದನೆ ಸೃಷ್ಟಿಸಿವೆ. ಈಗಾಗಲೆ ಮಕ್ಕಳ ನಾಡಿ ಮಿಡಿತವನ್ನು ಬಲ್ಲವರಾದ ಉತ್ಸಾಹಿ ಲೇಖಕಿ ವಸು ವತ್ಸಲೆ ಈ ವೈಜ್ಞಾನಿಕ ಕಥಾ ಸರಣಿ ಕುರಿತಂತೆ ಇನ್ನೂ ನಾಲ್ಕು ಕಥಾ ಸರಣಿಯಲ್ಲಿ ವಿಹಾಳ ವೈಜ್ಞಾನಿಕ ಆಸಕ್ತಿಯನ್ನು ಮತ್ತಷ್ಟು ಹೊರಹಾಕಲಿರುವುದು ಸಂತೋಷದ ಸಂಗತಿ.

ಹೊಸ ಬಗೆಯ ಮಕ್ಕಳ ಕಥಾ ನಿರೂಪಣೆ, ಅದರಲ್ಲೂ ಅಪರೂಪವಾಗುತ್ತಿರುವ ವೈಜ್ಞಾನಿಕ ಕಥೆಗಳ ಕೊರತೆಯಲ್ಲಿ ವಸು ವತ್ಸಲೆ ಅವರ ಈ ವಿಜ್ಞಾನ, ತಂತ್ರಜ್ಞಾನ ಹಿನ್ನೆಲೆಯ ಮಕ್ಕಳ ಕಥಾ ಸರಣಿ ನಿಜಕ್ಕೂ ಕುತೂಹಲ ಮೂಡಿಸುತ್ತದೆ. ವಸು ವತ್ಸಲೆ ಅವರ ಈ ಪ್ರಯತ್ನ ಯಶಸ್ವಿಯಾಗಿ, ಇಲ್ಲಿನ ಕಥಾ ಸಂಗತಿಗಳು ಕನ್ನಡದ ಮಕ್ಕಳಿಗೆ ತಲುಪುವಂತಾಗಲಿ.

(ಕೃತಿ: ಅಂತರಿಕ್ಷದಲ್ಲಿ ವಿಹಾ (ಮಕ್ಕಳ ಕಥಾ ಸರಣಿ-೧), ಲೇಖಕರು: ವಸು ವತ್ಸಲೆ, ಪ್ರಕಾಶಕರು: ಅವ್ಯಕ್ತ ಪ್ರಕಾಶನ, ಬೆಲೆ: 210/-)

About The Author

ಮಂಡಲಗಿರಿ ಪ್ರಸನ್ನ

ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ