ಊರಲ್ಲಿ ಗೌಡ್ರ ಮನೆ ಅಂತ ಇದ್ದಿದ್ದೆ ಎರಡು. ಗಂಡುಹುಡುಗ್ರು ಶಾಲಿಗೆ ಬಂದ್ರೂ ಅವ್ರ ಹೆಣ್ಮಕ್ಳನ್ನ ಕಳುಸ್ತಿರ್ಲೆ. ಬ್ರಾಹ್ಮಣ ಹೆಣ್ಮಕ್ಳಷ್ಟೆ ಶಾಲಿಗೆ ಹೋಗ್ತಿದ್ದ. ಅಚ್ಚಿ ಕಲಿಯದ್ರಲ್ಲಿ ಹುಷಾರಿತ್ತು. ಗೊತ್ತಾಗದಿದ್ನ ಕೇಳಕ್ಕೆ ಅಣ್ಣ ಹ್ಯಾಂಗೂ ಮನೇಲಿದ್ದ. ಎರಡನೇ ತರಗತಿ ಮುಗದಾಗ ಕೂಸು ದೊಡ್ಡಾತು ಅಂತ ಸೀರೆ ಉಡಸಕ್ಕೆ ಶುರುಮಾಡಿದ್ದ. ಇಲ್ಲಿವರಿಗೆ ಅಕ್ಕಯ್ಯದಿಕ್ಳು ಹಾಕಿಬಿಟ್ಟ ಅಂಗಿನ ಅಮ್ಮ ಸರಿಮಾಡಿಕೊಡ್ತಿತ್ತು, ಅದ್ನೇ ಅಚ್ಚಿ ಮನೇಲಿ ತೊಟ್ಗಳ್ತಿತ್ತು. ಶಾಲಿಗೆ ಹೋಪ್ಲೆ ಅಂತ ತಂದಿದ್ದ ಎರಡೂ ಅಂಗಿ ಹರದುಹೋಗಿತ್ತು. ಅಂಟವಾಳಕಾಯಿ ಹಾಕಿ ಬಟ್ಟೆ ತೊಳದ್ರೂ ಚೊಕ್ಕ ಆಗದು ಅಷ್ಟರಲ್ಲೇ ಇತ್ತು.
ಡಾ. ಚಂದ್ರಮತಿ ಸೋಂದಾ ಹೊಸ ಕಾದಂಬರಿ “ದುಪಡಿ”ಯ ಕೆಲವು ಪುಟಗಳು ನಿಮ್ಮ ಓದಿಗೆ

ಆ ಮನೆ ಹೆಣ್ಮಕ್ಳಲ್ಲಿ ನಾಲ್ಕಕ್ಷರ ಕಲ್ತೋಳು ಅಂದ್ರೆ ಅಚ್ಚಿ ಒಬ್ಳೇ. ರಂಗನಾಥ ಅದ್ನ ಕರ್ಕಂಡ್ಹೋಗಿ ಶಾಲಿಗೆ ಸೇರ್ಸಿದ್ದ. ಮೊದಮೊದ್ಲು ಅದ್ಕೆ ಹೆದ್ರಿಕೆ ಆಗ್ತಿತ್ತು. ರಂಗನಾಥ, ಹರಿಯಪ್ಪ ಕೂಲಿಮಠದಲ್ಲಿ ಓದ್ದೋರು. ಅವರಿಬ್ರ ಓದು ಮುಗದಿತ್ತು. ನಾಗವೇಣಿ, ಅನ್ನಪೂರ್ಣೆ ಇಬ್ರೂ ಮನೇಲಿ ರಂಗನಾಥನ ಹತ್ರವೇ ಓದಕ್ಕೆ, ಬರೆಯಕ್ಕೆ ಕಲ್ತಿದ್ದ. ನಾಗವೇಣಿಗೆ ಓದುಬರಹ ಅಂದ್ರೆ ಅಷ್ಟಕ್ಕಷ್ಟೆ. ಅನ್ನಪೂರ್ಣಿಗೆ ಕಲಿಯ ಉಮೇದಿತ್ತು. ಅದ್ರ ಕಾಲಕ್ಕೆ ಊರಗೆ ಯಾರೂ ಹೆಣ್ಮಕ್ಳನ್ನ ಕೂಲಿಮಠಕ್ಕೆ ಕಳಸ್ತಾ ಇರ್ಲೆ. ಅಚ್ಚಿಗೆ ಆರೇಳು ವರ್ಷ ಆಗಷ್ಟತ್ತಿಗೆ ಅದ್ರ ವಾರಿಗೇಲಿ ಮೂರ್ನಾಕು  ಹೆಣ್ಹುಡುಗ್ರು ಶಾಲಿಗೆ ಹೋಪ ವಯಸ್ನೋರು ಇದ್ದಿದ್ದ. ಕೂಲಿಮಠದ ಬದ್ಲು ಊರಿಗೆ ಶಾಲೆ ಬಂದಿತ್ತು. ಹಂಗಾಗಿ ಎಲ್ಲ ಸೇರಿ ಶಾಲಿಗೆ ಕಳಿಸಿದ್ದ.
ಫರಂಗಿಯೋರ ಕಾಲ. ಎಲ್ಲೋ ದೂರದಲ್ಲಿ ಮಹಾಯುದ್ಧ ನಡತ್ತು ಅಂತ ಜನಕ್ಕೆ ಗೊತ್ತಾಗಿತ್ತು. ಎಲ್ಲೆಲ್ಲೂ ಎಲ್ಲವುದಕ್ಕೂ ಬರಗಾಲ. ಒಮ್ಮೆ ಯಾರತ್ರಾದ್ರೂ ಆಹಾರ ಪದಾರ್ಥ ಇದ್ದು ಅಂದ್ರೆ ಇದ್ದಿದ್ನೆಲ್ಲ ಸರಕಾರದವ್ರು ದೋಚ್ಗಂಡು ಹೋಗ್ತಿದ್ದ. ಎಷ್ಟು ತೀರವೆ ಕೊಟ್ರೂ ಸಾಲ. ಜನಕ್ಕೆ ಸಾಕ್ಬೇಕಾಗಿತ್ತು. ʻಅಂತೂ ಯುದ್ಧ ಮುಗುತ್ತಡ’ ಅನ್ನದು ಜನಕ್ಕೆ ನೆಮ್ಮದಿ ಅನ್ಸಿತ್ತು. ದೇಶ ಮೊದಲಿನ ಸ್ಥಿತಿಗೆ ಬರ್ತಾ ಇತ್ತು. ಸ್ವಾತಂತ್ರ್ಯ ಚಳವಳಿ ಇನ್ನಷ್ಟು ಬಿರುಸಾಗಿತ್ತು. ಈಗೀಗ ಹಳ್ಳಿಯವ್ರಿಗೂ ಬಿಳಿಯರು ನಮ್ಮನ್ನು ಆಳ್ತಿರೋರು ಅನ್ನದು ಗೊತ್ತಾಗಿತ್ತು. ದೊಡ್ಡ ಊರಲ್ಲಿ ಹೆಣ್ಮಕ್ಳಿಗೆ ಶಾಲಿಗೆ ಹೋಪಲೆ ಅವಕಾಶ ಆಗಿತ್ತು. ಹಳ್ಳಿಗೂ ಅದ್ರ ಗಾಳಿ ಬೀಸಿತ್ತು. ಕೆಲವರು ಹತ್ತು ಹನ್ನೆರಡು ವರ್ಷ ಆಗವರಿಗೆ ಹೆಣ್ಮಕ್ಳನ್ನ ಶಾಲಿಗೆ ಕಳ್ಸಕ್ಕೆ ಶುರುಮಾಡಿದ್ದ. ಪ್ಯಾಟೆ ಹತ್ರ ಇದ್ದೋರಿಗೆ ಸವಲತ್ತೂ ಇತ್ತು. ಆ ಕಾಲಕ್ಕೆ ಸೊರಬ ಪ್ಯಾಟೆ ಅನ್ನಿಸಿಕ್ಯಂಡಿತ್ತು. ನಡಗೋಡು ಹತ್ರ ಇದ್ದಿದ್ದಕ್ಕೆ ಊರಿಗೆ ಶಾಲೆಬಂದಿತ್ತು. ಹದ್ನೈದಿಪ್ಪತ್ತು ಬ್ರಾಹಣರ ಮನೆ ಇತ್ತು. ಆ ಮಕ್ಳಷ್ಟೆ ಶಾಲಿಗೆ ಹೋಗಲಾಗಿತ್ತು. ದೀವಗೇರಿ, ಹಸಲಕೇರಿ ಇದ್ರೂ ಅವ್ರು ಯಾರೂ ಶಾಲಿಗೆ ಬರಹಂಗಿರ್ಲೆ. ʻಶೂದ್ರು ಮುಂಡೇವಕ್ಕೆ ಯಂತಕ್ಕೆ ಓದುಬರಹ?’ ಅಂತ ಮ್ಯಾಲಿನ ಜಾತಿ ಜನರ ಭಾವನೆ.  ಒಮ್ಮೆ ಯಾರಾದ್ರೂ ಆಸಕ್ತಿ ತೋರಿಸಿದ್ರೂ ಮ್ಯಾಲಿನ ಜಾತಿಯವ್ರು ಕೆಳಜಾತಿ ಜನಕ್ಕೆ ಕಲಸದಾದ್ರೂ ಹ್ಯಾಂಗೆ? ಶೂದ್ರರಿಗೆ ಅಕ್ಷರ ಹೇಳಿಕೊಟ್ಟು ಧರ್ಮಭ್ರಷ್ಟ ಅನ್ನಿಸಿಕ್ಯಳಕ್ಕೆ ಯಾರು ತಯಾರಿದ್ದ?

(ಡಾ. ಚಂದ್ರಮತಿ ಸೋಂದಾ)

ಊರಲ್ಲಿ ಗೌಡ್ರ ಮನೆ ಅಂತ ಇದ್ದಿದ್ದೆ ಎರಡು. ಗಂಡುಹುಡುಗ್ರು ಶಾಲಿಗೆ ಬಂದ್ರೂ ಅವ್ರ ಹೆಣ್ಮಕ್ಳನ್ನ ಕಳುಸ್ತಿರ್ಲೆ. ಬ್ರಾಹ್ಮಣ ಹೆಣ್ಮಕ್ಳಷ್ಟೆ ಶಾಲಿಗೆ ಹೋಗ್ತಿದ್ದ. ಅಚ್ಚಿ ಕಲಿಯದ್ರಲ್ಲಿ ಹುಷಾರಿತ್ತು. ಗೊತ್ತಾಗದಿದ್ನ ಕೇಳಕ್ಕೆ ಅಣ್ಣ ಹ್ಯಾಂಗೂ ಮನೇಲಿದ್ದ. ಎರಡನೇ ತರಗತಿ ಮುಗದಾಗ ಕೂಸು ದೊಡ್ಡಾತು ಅಂತ ಸೀರೆ ಉಡಸಕ್ಕೆ ಶುರುಮಾಡಿದ್ದ. ಇಲ್ಲಿವರಿಗೆ ಅಕ್ಕಯ್ಯದಿಕ್ಳು ಹಾಕಿಬಿಟ್ಟ ಅಂಗಿನ ಅಮ್ಮ ಸರಿಮಾಡಿಕೊಡ್ತಿತ್ತು, ಅದ್ನೇ ಅಚ್ಚಿ ಮನೇಲಿ ತೊಟ್ಗಳ್ತಿತ್ತು. ಶಾಲಿಗೆ ಹೋಪ್ಲೆ ಅಂತ ತಂದಿದ್ದ ಎರಡೂ ಅಂಗಿ ಹರದುಹೋಗಿತ್ತು. ಅಂಟವಾಳಕಾಯಿ ಹಾಕಿ ಬಟ್ಟೆ ತೊಳದ್ರೂ ಚೊಕ್ಕ ಆಗದು ಅಷ್ಟರಲ್ಲೇ ಇತ್ತು. ಸಂಜೆಹೊತ್ತಿಗೆ ಕಲ್ಲುಮಣ್ಣಲ್ಲಿ ಆಡದಿದ್ರೆ ಮಕ್ಳಿಗೆ ಆಡದಾಂಗೆ ಅಲ್ಲ.   ಹಿಂಗೆ ಮಣ್ಣಲ್ಲಿ ಆಡಿರೆ ಬಟ್ಟೆ ಯಂತಕ್ಕೆ ಬತ್ತು ಅಂತ ದೊಡ್ಡೋರು ಎಷ್ಟು ಬಾಯಬಡ್ಕಂಡ್ರೂ ಕಿವಿ ಮೇಲೆ ಹಾಕ್ಯಳ ಜಾತಿಯಲ್ಲ ಮಕ್ಕಳು. ಮೈಗೆ ಸೋಪು ಕಂಡಿದ್ದೂ ಅಷ್ಟರಲ್ಲೇ ಇತ್ತು. ಸೀಗೆಪುಡಿನೇ ಮೈಗೆ, ತಲಿಗೆ ಎಲ್ಲವುದಕ್ಕೂ. ಅಚ್ಚಿ ಮೈಸೋಪು ಕಂಡಿದ್ದೇ ಮೊದಲ್ನೇ ಮಗ ಹುಟ್ಟಿದಾಗ ಶಿಶುವಿಗೆ ಅಂತ ಅಣ್ಣ ಸೋಪು ತಂದಾಗ. ಒಂಬತ್ತು ವರ್ಷದೋಳಿಗೆ ಎಷ್ಟು ದೊಡ್ಡ ಸೀರೆ ಬೇಕು. ಅಂಗಡೀಲಿ ಹುಡುಕಿ ಒಂದು ಪುಟ್ಟ ಸೀರೆ(ಕಿರಿಗೆ) ತಂದಿದ್ದ ಅಣ್ಣಯ್ಯ. ಎರಡು ದಿನಕ್ಕೊಂದ್ ಸರ್ತಿ ಸೀರೆ ತೊಳಕಳಕಾಗಿತ್ತು. ಆವಾಗ ದೇವಕಿಯ ಹಳೇ ಸೀರೆತುಂಡೇ ಗತಿಯಾಗಿತ್ತು. ಕೆಂಪಿಸೀರೇನ ಅಮ್ಮ ಕತ್ತರಿಸಿ ಕೊಟ್ಟಿತ್ತು. ಅದ್ನ ಸುತ್ತಿಗ್ಯಂಡು ಮನೆಒಳಗೆ ಕೂತ್ಗಳಕಾಗಿತ್ತು. ಸೀರೆ ಒಣಗಿದ್ದ್ ಮೇಲೆ ಬಾಗಿ ಜೊತಿಗೆ ಆಟ. ʻಶಣ್ಣಕ್ಕಯ್ಯನ ನೋಡು, ಅಮ್ಮನ ಹಳೇಸೀರೆ ಉಟ್ಗಂಡು ಹೊರಗಿದ್ದೋರ್ ಥರ ಮೂಲೇಲಿ ಕೂತಿದ್ದು’ ಅಂತ ಸುಬ್ಬು ತಮಾಶೆ ಮಾಡ್ತಿದ್ದ. ತಮ್ಮನ ಮೇಲೆ ಸಿಟ್ಟುಬಂದ್ರೂ ಹೊಡೆಯಕ್ಕೆ ಆಗ್ತಿರ್ಲೆ. ಅಂವ ಓಡಿಬುಡತಿದ್ದ. ಅವ್ನ ಹಿಂದೆ ಹೋಪ ಹಂಗಿಲ್ಲೆ. ಎಷ್ಟೇ ಕಷ್ಟಾದ್ರು ಅಚ್ಚಿ ಶಾಲೆ ಮಾತ್ರ ತಪ್ಪುಸ್ತಿರ್ಲೆ. ಅಚ್ಚಿಗೂ ಹತ್ತಾಗ್ತಾ ಬಂತು. ಮದ್ವೆ ಮಾಡವ್ವು ಅನ್ನ ಮಾತು ಆಗಲೇ ಮನೇಲಿ ಕೇಳಿಬರ್ತಿತ್ತು.

ಅಚ್ಚಿ ಸ್ವಾದರತ್ತೇನ ದೊಡ್ಡೇರಿಗೆ ಕೊಟ್ಟಿತ್ತು. ಅದು ಅಪ್ಪನ ಸ್ವಂತ ತಂಗಿಯೇನಲ್ಲ, ಚಿಕ್ಕಪ್ಪನ ಮಗಳು. ಅದ್ರ ತವರ್ಮನೇಲಿ ಯಾರೂ ಇರ್ಲೆ. ಹಂಗಾಗಿ ಅದು ಇವ್ರಮನೇನ ತವರು ಅಂತ ತಿಳಕಂಡು ಎರಡ್ಮೂರು ವರ್ಷಕ್ಕೊಂದ ಸರ್ತಿ ಇವ್ರಮನಿಗೆ ಬಂದು ಹೋಗತಿತ್ತು. ಈ ವರ್ಷನೂ ಹಂಗೆ ಬಂದಿತ್ತು. ಜೊತಿಗೆ ಅದ್ರ ಮಗನೂ ಬಂದಿದ್ದ. ಅತ್ಗೆ, ನಾದ್ನಿ ನಡುವೆ ಸುಖ-ದಃಖದ ಮಾತುಕತೆ ನಡೆದಿತ್ತು. ʻನಿನ್ ಮಗಳನ್ನ ಯನ್ನ ಮಗಂಗೆ ಕೊಡತ್ಯಾ? ಅತ್ಗೆ’ ಅಂತ ಅದು ದೇವಕಿನ ಕೇಳಿತ್ತು.
ʻಹೂಂ, ಕೊಡಲಾಗ ಅಂತೇನಿಲ್ಲೆ. ನಿಂಗೂ ತವರ್ಮನೆ ಸಂಬಂಧ ಉಳದಂಗಾತು. ಯಾವ್ದುಕ್ಕೂ ರಂಗನ್ನ ಒಂದ್ ಮಾತು ಕೇಳಿ ಕಡಿಗೆ ತಿಳಸ್ತಿ’
ʻತಡಿ ಅತ್ಗೆ, ನಿನ್ ಜಾಣ ಮಗಳನ್ನ ಕೇಳನ, ಯಂತ ಹೇಳ್ತು ನೋಡನ’
ಅಂಗಳದಲ್ಲಿ ಭಾಗಿ ಜೊತಿಗೆ ಎತಿಗಲ್ಲಾಡ್ತ ಕೂತಿದ್ದ ಸ್ವಾದರ ಸೊಸೇನ ಕರದು ಪಕ್ಕದಲ್ಲಿ ಕೂರಿಸಿಕ್ಯಂಡು ಅದ್ರ ತಲೆ ಸವರಿ, ʻಅಚ್ಚಿ ನಿನ್ನ್ ಭಾವನ್ನ ಮದುವ್ಯಾಗ್ತ್ಯನೇ?’ ಅಂತ ಕೇಳಿತ್ತು. ʻಅಂವಗೆ ಎದೆಸೀಳಿರೆ ಮೂರಕ್ಷರ ಇಲ್ಲೆ. ಅಂವನ್ನ ಯಾರು ಮದುವೆ ಆಗ್ತ ಅತ್ತೆ’ ಅಂತ ಹೇಳಿಕ್ಕಿ ಆಡಕ್ಕೆ ಓಡಿಹೋಗಿತ್ತು.  ಸೊಸೆ ಮಾತ ಕೇಳಿದ್ದೆ ಅತ್ತೆ ಮಕ ಸುಟ್ಟ್ ಬದ್ನೆಕಾಯಾಂಗೆ ಆಗಿತ್ತು.
ʻಅಂತ ಅವ್ಸರ ನಿಂಗೇನಿತ್ತು? ಶಣ್ ಕೂಸು, ಬಾಯಿಗೆ ಬಂದಿದ್ದ ಹೇಳ್ತು. ಯಂತ ಆಗ್ತು ನೋಡನ ತಡಿ, ನಿನ್ ಅಳಿಯನ್ನ ಕೇಳನ’ ಅಂತ ದೇವಕಿ ಸಮಾಧಾನ ಮಾಡಿರೂ ಅದ್ಕೆ ಬೇಜಾರಾಗಿ ಮರ್ದಿನವೇ ಊರಿಗೆ ಹೋಗಿತ್ತು.
ಅವತ್ತು ಸಂಜೆ ಮಾವನ್ ಮನೆಯಿಂದ ಬಂದ ರಂಗನಾಥನ ಹತ್ರ ನಡದದ್ದನ್ನ ಒಪ್ಪಿಸಿತ್ತು. ʻಅಮ, ಹೋಗ್ಲಿ ಬಿಡು, ಯಂತಕ್ಕೆ ಬೇಜಾರ್ ಮಾಡಿಕ್ಯತ್ತೆ. ಅಚ್ಚಿ ಹೇಳಿದ್ದು ಸುಳ್ಳಾ? ನೋಡಕ್ಕೂ ಸುಮಾರಾಗಿದ್ದ ವೆಂಕಟೇಶ. ಅಲ್ದೆ ಶಾಲೆ ಮೆಟ್ಲು ಹತ್ತುಲ್ಲೆ. ಈಗಿನ್ನೂ ಅಚ್ಚಿಗೆ ಹತ್ವರ್ಷ ಆಗ್ತಾ ಇದ್ದು. ಒಂದೆರಡ್ವರ್ಷದಲ್ಲಿ ಯಾವ್ದಾದ್ರು ಒಳ್ಳೇ ಸಂಬಂಧ ಸಿಗ್ತು ತಗ. ಹ್ಯಾಂಗೂ ಅದು ನೋಡಕ್ಕೆ ಚೊಲೋ ಇದ್ದು’ ಅಂತ ದೇವಕಿಗೆ ಸಮಾಧಾನ ಹೇಳಿದ್ದ.
ಅವತ್ತು ಶಾಲಿಗೆ ರಜ ಇತ್ತು. ಬಾಗಿ, ಅಚ್ಚಿ, ಮತ್ತೆರಡ್ಮೂರು ಹೆಣ್‌ಹುಡುಗ್ರು ಸೇರಿ ದೇವಸ್ಥಾನದ ಬಾಗ್ಲಲ್ಲಿ ಕಲ್ಲು ಕುಟ್ತಾ ಇದ್ದ. ʻಏ, ಅಲ್ನೋಡು, ಯಾರೇನ ನಿನ್ ನೋಡಿಕೋತ ಹೋಗ್ತಾ ಇದ್ದು’ ಅಂತ ಬಾಗಿ ಅಚ್ಚಿಗೆ ತೋರ್ಸಿತ್ತು. ಆ ಹೆಂಗ್ಸಿನ ಜೊತಿಗೆ ಒಂದು ಮಾಣಿ ಇದ್ದಾಂಗೆ ಕಂಡಿತ್ತು. ಅವ್ರಿಬ್ರೂ ಸೊರಬದ ಕಡಿಗೆ ನಡಕಂಡು ಹೋಗ್ತಾ ಇದ್ದ.
ʻಅವ್ರು ಯಾರೇನ? ಯನ್ನ ಯಂತಕ್ಕೆ ನೋಡ್ತ’
ʻಯಂತಕ್ಕೇನ ಗೊತ್ತಿಲ್ಲೆ. ಆದ್ರೆ ಅದು ಆ ಮಾಣಿ ಹತ್ರ ಯಂತುದೋ ಹೇಳ್ತಾ ಇತ್ತು’
ʻಕಲ್ಲ್ ಕುಟ್ಟದ ಬಿಟ್ಟಿಕ್ಕಿ ನೀನು ದಾರೀಲಿ ಹೋಪೋರನ್ನ ನೋಡ್ತಾ ಇದ್ಯಾ?’ ಅಂತ ಅಚ್ಚಿ ಬಾಗಿ ಬಾಯಿ ಮುಚ್ಚಿಸಿತ್ತು. ಆದ್ರೂ ʻಯಾರಾಗಿಕ್ಕು’ ಅಂತ ಆ ಕಡೆ ನೋಡಿತ್ತು. ಅವರಿಬ್ರೂ ಮರದ ಸಂದೀಲಿ ಮರೆಯಾಗಿದ್ದ. ಆದಾಗಿ ಎಂಟ್ಹತ್ತ್ ದಿವ್ಸ ಆಗಿಕ್ಕು. ಒಂದಿವ್ಸ ಊಟಕ್ಕೆ ಕೂತಾಗ ಅಮ್ಮ, ಅಣ್ಣಯ್ಯ ತನ್ನ ಮದ್ವೆ ಸುದ್ದಿ ಮಾತಾಡಿದ್ದ. ಅದ್ರಲ್ಲಿ ತನ್‌ಗೆ ಗೊತ್ತಾಗಿದ್ದು ಇಷ್ಟೆ. ತಮ್ಮೂರಿಂದ ಐದಾರ್ ಮೈಲು ದೂರದ ಊರು. ಅನುಕೂಲಸ್ಥರು. ಮಾಣಿ ಲಕ್ಷಣವಾಗಿದ್ದ. ಆವಾಗ ಅಚ್ಚಿಗೆ ನೆನಪಾತು. ಸುಮಾರು ದಿವ್ಸದ ಹಿಂದೆ ಯಾರೋ ಒಬ್ಳು ತಮ್ಮನಿಗೆ ಬಂದಿತ್ತು. ಬಾಗಿ ಮನಿಗೆ ಹೋಗಿದ್ದ್ ತನ್ನ ಅತ್ಗೆ ಹಿತ್ಲಕಡೆ ಬಾಗ್ಲಿಂದ ಒಳಗೆ ಕರ್ಕಂಡು ಬಂದು ಚೊಲೋ ಇರ ಅದ್ರ ಸೀರೆ ಉಡುಸಿ ಆ ಬಡವೆ ಇದ್ದಲ್ಲಿಗೆ ಕರ್ಕಂಡು ಹೋಗಿತ್ತು. ʻತಂಗಿ ನಿನ್ ಹೆಸ್ರು ಯಂತುದು?’ ಅಂತ ಕೇಳಿತ್ತು. ತನ್‌ಗೆ ಗೊತ್ತಿಲ್ದ ಅದ್ರ ಹತ್ರ ಮಾತಾಡಕ್ಕೆ ನಾಚ್ಗೆ ಆಗಿತ್ತು. ಅಲ್ಲಿವರಿಗೆ ತನ್ನ ಹತ್ರ ಹಿಂಗೆ ಹೆಸ್ರು ಯಾರೂ ಕೇಳಿರ್ಲೆ. ʻಕೂಸು ಲಕ್ಷಣ್ವಾಗಿದ್ದು, ಯಾವ್ದುಕ್ಕೂ ಯಮ್ಮನೆ ಹಿರಿಯೋರನ್ನ ಕೇಳಿ ತಿಳುಸ್‌ತ್ಯ’ ಅಂತ ಹೇಳಿತ್ತು. ತನ್‌ಗೆ ಯಂತೂ ಗೊತ್ತಾಗಿರ್ಲೆ. ಎರಡ್ಮೂರು ದಿನ ಆದ್ಮೇಲೆ ಬಾಗಿಯಿಂದ ಎಲ್ಲ ಸುದ್ದಿಯೂ ಗೊತ್ತಾಗಿತ್ತು. ʻಅವತ್ತು ಬಂದೋಳ ಹೆಸ್ರು ಗಂಗಮ್ಮ ಅಂತ. ಅದಕ್ಕೆ ಕೆಂಚನಹಳ್ಳಿ ಆತು. ಮಗಂಗೆ ಮದ್ವೆ ಮಾಡಲೆ ಹೆಣ್ಣು ಹುಡುಕ್ತಾ ಇದ್ದು. ಯಾರೋ ನಡಗೋಡು ಪಟೇಲ್ರ ಮನೇಲಿ ಗನಾ ಕೂಸಿದ್ದು ಅಂತ ಹೇಳಿದ್ವಡ. ಹೊಸಬಾಳಿಗೆ ಮಗ್ಳ ಮನಿಗೆ ಹೋಪ ಹೆಳೆ ಮಾಡಿಕ್ಯಂಡು ಬಂದು ಇಲ್ಲಿ ಹೊಕ್ಕು ಹೆಣ್ಣ್ ನೋಡಿಕ್ಯಂಡು ಹೋತು’ ಅಂತ.
ʻನಿಂಗೆ ಇದ್ನಲ್ಲ ಯಾರು ಹೇಳಿದ್ವೆ ಬಾಗಿ?’
ʻಯಮ್ಮಮ್ಮ, ಅಪ್ಪನ ಹತ್ರ ಹೇಳದನ್ನ ಆನು ಕೇಳಿಸಿಗ್ಯಂಡಿದ್ದಿ’
ಅಚ್ಚಿಗೆ ಆ ಸುದ್ದಿ ಮರ್ತುಹೋಗಿತ್ತು. ಒಂದಿನ ದೇವಕಿ ಹೂಕಟ್ತಾ ಇದ್ದ ಮಗಳನ್ನು ಕರದು ʻಅಚ್ಚಿ ಇನ್ನೊಂದು ತಿಂಗ್ಳಿಗೆ, ಶಿವರಾತ್ರೆ ಮರ್ದಿನ ಮದ್ವೆ’ ಅಂತ ಹೇಳಿತ್ತು. ʻಯಾರ ಮದ್ವೆ ಅಮ’ ʻಇನ್ಯಾರದು? ನಿಂದು’ ಅಂತ ಅಮ್ಮ ಹೇಳ್ದಾಗ ಅಚ್ಚಿಗೆ ಒಂಥರಾ ನಾಚ್ಗೆ, ಹೆದ್ರಿಕೆ ಎರಡೂ ಆಗಿತ್ತು. ಅಳ್ಳಿಕಟ್ಟೇರ‍್ಮನೆ ಸುಬ್ಬಿ ಮದ್ವೆ ನೆನಪಾಗಿತ್ತು. ಎರಡ್ಮೂರು ವರ್ಷದ ಹಿಂದೆ ತನ್ನ ಜೊತೆಯೋಳೇ ಸುಬ್ಬಿನ ಅದ್ರತ್ತೆ ಮಗ ತಿಪ್ಪಭಾವಂಗೆ ಕೊಟ್ಟು ಮದ್ವೆ. ಆಚೆ ಕೇರೀಲಿ ಅವರ್ಮನೆ. ಅಂವ ಹರಿಯಪ್ಪಣ್ಣನ ಜೊತಿಯಂವ. ನಾಕು ದಿನದ ಮದ್ವೆ. ಮದ್ವೆ ಮರುದಿನ ನಾಗೋಲಿ ಶಾಸ್ತ್ರ. ಚತುರ್ಥೆ ದಿಬ್ಬಣಕ್ಕೆ ಹೆಣ್ಣಿನೋರೆಲ್ಲ ಗಂಡಿನ ಮನಿಗೆ ಹೊರಟಾಗ ʻಆನು ತಿಪ್ಪಭಾವನ ಚತುರ್ಥೆ ದಿಬ್ಬಣಕ್ಕೆ ಬತ್ತಿ’ ಅಂತ ಸುಬ್ಬಿ ಹಠಮಾಡಿತ್ತಡ. ʻಅಂವ ನಿನ್ನ್ ಗಂಡ. ಇನ್ಮೇಲೆ ಅಂವಗೆ ತಿಪ್ಪಭಾವ ಅಂತ ಕರೆಯಲಾಗ’ ಅಂತ ಯಾರೋ ತಿಳಿಸಿ ಹೇಳಿದ್ವಡ’ ಊರಲ್ಲಿ ಅದೊಂದು ದೊಡ್ಡ ಸುದ್ದಿಯಾಗಿತ್ತು.
ಮಂಗಲ ಜವಳಿಗೆ ಹೋಗಿಬಂದ ಅಣ್ಣಯ್ಯ ʻಅಮ, ಮದ್ವೆಕೂಸಿಗೆ ಅಂತ ಒಂದು ಜರಿಸೀರೆ, ಇನ್ನೊಂದು ಇನಕಲ್ ಸೀರೆ ತಗಂಡಿದ್ದ. ಅವರ್ ಮನಿಯೋರು ನಿಜ್ವಾಗ್ಲೂ ಸಾವಕಾರ್ರೆ ಹೌದು’ ಅಂತ ಹೇಳಿದ್ದ.
ʻಆಗ್ಲಿ ಬಿಡು. ಈ ಕೂಸಿಗಾದ್ರೂ ಗನಾ ಮನೆ ಸಿಗತ್ಯಲ. ಅವಿರಿಬ್ರಂತೂ ಗಂಡನ ಮನೇಲಿ ಸುರದಕಳ್ತಾ ಇದ್ದಿದ್ದು ಅಷ್ಟರಲ್ಲೇ ಇದ್ದು. ಏನೇ ಆಗ್ಲಿ ರಂಗಾ, ನೀನು ಈ ವಯಸ್ಸಿಗೆ ಮೂರು ಮೂರು ಜನ ತಂಗಿದಿಕ್ಳ ಮದ್ವೆ ಮಾಡ ಜವಾಬ್ದಾರಿ ಹೊತ್ಗಂಡೆ’

ʻಹಿರೇಮಗ ಆಗಿದ್ದಕ್ಕೆ ಅಷ್ಟು ಮಾಡ್ದೆ ಇದ್ರೆ ಹ್ಯಾಂಗೆ ಅಮ. ಆನು ಈ ಮದ್ವೆ ಒಂದ್ ಮಾಡಿ ಮುಗಿಸಿದ್ರೆ ಸಾಕು. ಸುಬ್ಬು ಇನ್ನೂ ಶಣ್ಣಂವ ಹ್ಯಾಂಗೋ ಆಕ್ತು’

ʻಹೌದಪ, ನೀನೂ ಸಂಸಾರಸ್ಥ. ಹ್ಯಾಂಗಾರೂ ತೇರು ಎಳೆಯಕಾತಲ್ಲ. ಪಾಪ! ನಿನ್ನ್ ಹೆಣ್ತಿಗೆ ನಮ್ಮನೆ ಊಟ ಕಷ್ಟ. ಆನೂ ಸಾಧ್ಯವಾದ್ಮಟ್ಟಿಗೆ ಅದುಕ್ಕೆ ಅನ್ನನೇ ಬಡಸ್ತಿ. ಬಂದಾಗ ನಾಕದಿನ ತ್ರಾಸ್‌ಪಡದು ಬ್ಯಾಡ ಅಂತ. ಇನ್ನೇನು ಅದ್ಕೂ ಹದ್ಮೂರಾತು. ವರ್ಷೊಪ್ಪತ್ನಲ್ಲಿ ನಮ್ಮನಿಗೇ ಬಂದ್ಮೇಲೆ ಯಂತ ಮಾಡದೇನ? ಇರ್ಲಿಬಿಡು, ದೇವ್ರು ಮಾಡಸ್ದಾಂಗೆ ಆಗಲಿ’