ಪ್ರತಿದಿನ ಸ್ನಾನಮಾಡಿ ಬಂದಕೂಡಲೇ ಅಮ್ಮ ಮುಖದ ತುಂಬ ಪಾಂಡ್ಸ್ ಪೌಡರನ್ನು ಢಾಳಾಗಿ ಹಚ್ಚಿಕೊಳ್ಳುತ್ತಿದ್ದಳು. ಅಶ್ವತ್ಥದ ಎಲೆಯಾಕಾರದಲ್ಲಿ ಕಾಡಿಗೆಯನ್ನು ಚಂದಗೆ ಬೊಟ್ಟಾಗಿಸುತ್ತಿದ್ದಳು. ಎಲ್ಲರಂತೆ ಕುಂಕುಮವನ್ನು ಹಣೆಗೆ, ತಾಳಿಗೆ ಹಚ್ಚಿಕೊಳ್ಳದೇ ತುಟಿಗೆ ನವಿರಾಗಿ ಲೇಪಿಸಿಕೊಳ್ಳುತ್ತಿದ್ದಳು. ಎಲ್ಲವೂ ಮುಗಿದು ಕನ್ನಡಿಯಲೊಮ್ಮೆ ಇಣುಕುವಾಗ ಅವಳ ಮುಖದಲ್ಲೊಂದು ಹೂ-ನಗೆಯಿರುತ್ತಿತ್ತು. ಪೌಡರ್ ಎಂಬುದು ತೀರ ಲಕ್ಷುರಿಯಾಗಿದ್ದ ಆ ಕಾಲದಲ್ಲೂ ಅಮ್ಮ ಅದಿಲ್ಲದೇ ದಿನಕಳೆಯುತ್ತಿರಲಿಲ್ಲ.
ಇಪ್ಪತ್ತೊಂಭತ್ತು ವರ್ಷಗಳ ಹಿಂದೆ ಹುಣ್ಣಿಮೆಯ ರಾತ್ರಿ ತೀರಿಕೊಂಡ ತಮ್ಮ ತಾಯಿಯ ಕುರಿತು ಸುಧಾ ಆಡುಕಳ ಬರಹ ನಿಮ್ಮ ಓದಿಗೆ
ಚಂದ್ರ, ಹುಣ್ಣಿಮೆ, ಬೆಳದಿಂಗಳು ಇವೆಲ್ಲ ಒಂದು ಕಾಲದಲ್ಲಿ ಎಷ್ಟೊಂದು ಆಪ್ತ ಪದಗಳು! ಗಡಿಯಾರದ ಹಂಗಿರದ ಆ ದಿನಗಳಲ್ಲಿ ಅಪ್ಪ ತಿಂಗಳನ್ನು ನೋಡಿಯೇ ರಾತ್ರಿ ಇನ್ನೆಷ್ಟು ತಾಸು ಉಳಿದಿದೆಯೆಂದು ಲೆಕ್ಕ ಮಾಡುತ್ತಿದ್ದರು. ಚಂದಿರನಿಗೆ ನನ್ನೂರಿನಲ್ಲಿ ತಿಂಗಳು ಎಂದೇ ಕರೆಯುತ್ತಿದ್ದರು. ತೆಂಗು, ಕಂಗುಗಳ ನಾಡಾದ ನನ್ನೂರಿನಲ್ಲಿ ರಾತ್ರಿಯೆಲ್ಲ ಮರಗಳ ಮರೆಯಲ್ಲಿ ಕಣ್ಣಾಮುಚ್ಚಾಲೆಯಾಡುತ್ತಿದ್ದ ಚಂದಿರನನ್ನು ಅದೆಷ್ಟು ಬಾರಿ ಕಣ್ತುಂಬಿಸಿಕೊಂಡು ಸುಖಿಸಿದ್ದೆವೋ ಬಲ್ಲವರಾರು? ಊರ ಹೊರಗಿರುವ ದೇವರ ಗುಡಿಯಲ್ಲಿ ನಡೆಯುವ ಭಜನೆಯನ್ನು ಕೇಳಿ ಮರಳುವಾಗ, ಊರ ಮುಂದಾಳುವಿನ ಮನೆಯಲ್ಲಿ ನಡೆಯುವ ಕೀರ್ತನೆಯನ್ನು ಆಸ್ವಾದಿಸಿ ಹಿಂದಿರುಗುವಾಗ, ಯಕ್ಷಗಾನ ಬಯಲಾಟವನ್ನು ನೋಡಿ ಮನೆಗೆ ವಾಪಸ್ಸಾಗುವಾಗ, ಹೊಟ್ಟೆ ಸರಿಯಿಲ್ಲವೆಂದು ನಡುರಾತ್ರಿಯಲಿ ಅಮ್ಮನನ್ನು ಎಬ್ಬಿಸಿ ಬಯಲಿನಲ್ಲಿ ಶೌಚಕ್ಕೆಂದು ಕುಳಿತಾಗಲೆಲ್ಲ ಚಂದ್ರ ನಮ್ಮ ಜತೆಯಾಗಿದ್ದಾನೆ. ಅದೇ ಚಂದ್ರ ಕಾಮನ ಹುಣ್ಣಿಮೆಯ ದಿನ, ಊರ ಹೊರಗಿನ ಕಾಡಿನಲ್ಲಿ ಅಮ್ಮನ ದೇಹವನ್ನು ಚಿತೆಯಲ್ಲಿ ಬೇಯಿಸುವಾಗಲೂ ಆಗಸದಲ್ಲಿ ಬೆಳಗುತ್ತಲೇ ಇದ್ದ. ಕೆಳಗೆ ಧಗಧಗನೆ ಉರಿಯುತ್ತಿದ್ದ ಬೆಂಕಿ, ಮೇಲೆ ತಣ್ಣಗೆ ಬೆಳದಿಂಗಳು ಚೆಲ್ಲುತ್ತಿದ್ದ ಚಂದ್ರ! ಎದೆಯೊಳಗೆ ಹೇಳಿಕೊಳ್ಳಲಾಗದ ಉಮ್ಮಳ! ಅಂದಿನಿಂದಲೂ ಹುಣ್ಣಿಮೆಯ ಚಂದಿರ ಉರಿಯುತ್ತಿರುವ ಚಿತೆಗೆ ರೂಪಕವಾಗಿ ಮನಸ್ಸಿನಲ್ಲಿ ಉಳಿದುಹೋದ. ಹಾಲಂತೆ ಸುರಿವ ಬೆಳದಿಂಗಳು ಬೆಂಕಿಯಂತೆ ಮನಸ್ಸನ್ನು ಸುಡುತ್ತಲೇ ಇರುತ್ತದೆ.
ಇನ್ನೊಂದು ವರ್ಷ ಕಳೆದರೆ ಅಮ್ಮನಿಲ್ಲದೇ ಮೂರು ದಶಕಗಳಾಗುತ್ತವೆ. ಇಲ್ಲಿಯವರೆಗೂ ಅದೆಷ್ಟೋ ಸಲ ಅವಳಿಗೆ ಅಕ್ಷರ ನಮನಗಳನ್ನು ಸಲ್ಲಿಸಿರುವೆ. ಬರೆದಷ್ಟೂ ಸಲ ಅವೆಲ್ಲವೂ ನೋವಿನ ಗಾಥೆಗಳೇ ಆಗಿವೆ. ಕಾಮನ ಹುಣ್ಣಿಮೆ ಮತ್ತೆ ಮರಳಿದೆ. ಇದೊಂದು ಸಲವಾದರೂ ಅಮ್ಮನ ಬದುಕಿನ ಖುಶಿಯ ಕ್ಷಣಗಳನ್ನು ಆಯ್ದು ಪೋಣಿಸಬೇಕು ಅನಿಸುತ್ತಿದೆ. ಆಗಸದ ಚಂದ್ರನೂ ತಿಂಗಳಿಗೊಮ್ಮೆ ಪೂರ್ಣವಾಗಿ ಮೈದುಂಬಿಕೊಂಡು ಬೆಳಗುತ್ತಾನಲ್ಲವೆ? ಅಮ್ಮನ ನೆನಪಲ್ಲಿ ಒಂದರೆಕ್ಷಣ ಕಣ್ಮುಚ್ಚಿದರೂ ಸೋವಿನ ಅಲೆಗಳು ಸರಸರನೆ ಬಂದು ಎದೆಗೆ ಅಪ್ಪಳಿಸುತ್ತವೆ. ಸಂತೋಷದ ಬುಗ್ಗೆಗಳ್ಯಾಕೋ ಮಳೆನೀರಿನಲಿ ಮೂಡಿ ಮರೆಯಾಗುವ ನೀರ ಗುಳ್ಳೆಯಂತೆ ಥಟಕ್ಕನೆ ಮರೆಯಾಗುತ್ತಿವೆ. ನೋವಿನ ಗಳಿಗೆಗಳಿಗೆ ಬಾಗಿಲು ಮುಚ್ಚಿರುವೆ.
ನಮ್ಮನೆಯ ಒಳಕೋಣೆಯ ಕಿಟಕಿಯ ಮೇಲೊಂದು ಪುಟ್ಟ ಪೆಟ್ಟಿಗೆಯಿತ್ತು. ಅದರಲ್ಲಿ ಒಂದು ಪೌಂಡ್ಸ್ ಪೌಡರ್, ಕಾಡಿಗೆ ಡಬ್ಬ, ಕಾಡಿಗೆಯನ್ನು ಹಚ್ಚಲೊಂದು ಬೆಂಕಿಕಡ್ಡಿ ಮತ್ತು ಕುಂಕುಮದ ಕರಡಿಗೆಗಳು ಇರುತ್ತಿದ್ದವು. ಪ್ರತಿದಿನ ಸ್ನಾನಮಾಡಿ ಬಂದಕೂಡಲೇ ಅಮ್ಮ ಮುಖದ ತುಂಬ ಪಾಂಡ್ಸ್ ಪೌಡರನ್ನು ಢಾಳಾಗಿ ಹಚ್ಚಿಕೊಳ್ಳುತ್ತಿದ್ದಳು. ಅಶ್ವತ್ಥದ ಎಲೆಯಾಕಾರದಲ್ಲಿ ಕಾಡಿಗೆಯನ್ನು ಚಂದಗೆ ಬೊಟ್ಟಾಗಿಸುತ್ತಿದ್ದಳು. ಎಲ್ಲರಂತೆ ಕುಂಕುಮವನ್ನು ಹಣೆಗೆ, ತಾಳಿಗೆ ಹಚ್ಚಿಕೊಳ್ಳದೇ ತುಟಿಗೆ ನವಿರಾಗಿ ಲೇಪಿಸಿಕೊಳ್ಳುತ್ತಿದ್ದಳು. ಎಲ್ಲವೂ ಮುಗಿದು ಕನ್ನಡಿಯಲೊಮ್ಮೆ ಇಣುಕುವಾಗ ಅವಳ ಮುಖದಲ್ಲೊಂದು ಹೂ-ನಗೆಯಿರುತ್ತಿತ್ತು. ಪೌಡರ್ ಎಂಬುದು ತೀರ ಲಕ್ಸುರಿಯಾಗಿದ್ದ ಆ ಕಾಲದಲ್ಲೂ ಅಮ್ಮ ಅದಿಲ್ಲದೇ ದಿನಕಳೆಯುತ್ತಿರಲಿಲ್ಲ.
ಅಮ್ಮನಿಗೆ ಪುಸ್ತಕ ಓದುವುದು ಮತ್ತು ಸಿನೆಮಾ ನೋಡುವುದೆಂದರೆ ಪಂಚಪ್ರಾಣವಾಗಿತ್ತು. ಪುಸ್ತಕವಿರಲಿ, ಪೇಪರಿನ ತುಂಡುಗಳೂ ಸಿಗದ ನನ್ನೂರಿಗೆ ಮದುವೆಯಾಗಿ ಬಂದಮೇಲೆ ಓದುವುದನ್ನು ಮರೆತಿದ್ದಳು. ಆದರೆ ಪೇಟೆಯಲ್ಲಿರುವ ತವರಿಗೆ ಹೋದಾಗ ಅದೆಷ್ಟು ಕಷ್ಟವಾದರೂ ತವರಿನ ಬಳಗವನ್ನು ಕಟ್ಟಿಕೊಂಡು ವರ್ಷದಲ್ಲಿ ಒಂದೆರಡಾದರೂ ಸಿನೆಮಾವನ್ನು ನೋಡುತ್ತಿದ್ದಳು. ಟಿಕೇಟಿನ ಹಣ ವ್ಯರ್ಥವೆಂದು ಮಕ್ಕಳಾದ ನಮ್ಮನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದರು. ಅವಳೊಂದಿಗೆ ಬರುವೆನೆಂದು ಹಠಮಾಡಿ ನಾನು ನೋಡಿದ ಒಂದೇ ಒಂದು ಸಿನೆಮಾವೆಂದರೆ ಅತ್ತೆಗೆ ತಕ್ಕ ಸೊಸೆ. ಸಿನೆಮಾ ನೋಡಿ ಬಂದು ವರ್ಷವಾಗುವವರೆಗೂ ಪ್ರತಿದಿನ ಮಧ್ಯಾಹ್ನ ಅಕ್ಕಿಯನ್ನು ಆರಿಸುವ ಸಮಯದಲ್ಲಿ ಇಬ್ಬರೂ ಸಿನೆಮಾದ ಬಗ್ಗೆ ಮಾತಾಡಿದ ನೆನಪು ಇನ್ನೂ ಹಸಿರಾಗಿದೆ. ಸಿನೆಮಾದ ಸುದ್ದಿ ಬಂದಾಗಲೆಲ್ಲ ಅಮ್ಮ ಒಂದು ಘಟನೆಯನ್ನು ತಪ್ಪದೇ ನೆನಪಿಸಿಕೊಳ್ಳುತ್ತಿದ್ದಳು. ಮದುವೆಯಾದ ಹೊಸದರಲ್ಲಿ ಅಮ್ಮನ ಆಸೆಗೆ ಓಗೊಟ್ಟು ಅಪ್ಪ ಅವಳನ್ನು ‘ನನ್ನ ನೀನು ಗೆಲ್ಲಲಾರೆ’ ಸಿನೆಮಾಕ್ಕೆ ಕರೆದುಕೊಂಡು ಹೋಗಿದ್ದರಂತೆ. ಬಾಯಲ್ಲಿ ಎಲೆಡಿಕೆಯಿಲ್ಲದೇ ಉಸಿರಾಡದ ಅಪ್ಪ ಅದನ್ನು ಟಾಕೀಸಿನಲ್ಲಿಯೇ ಉಗುಳಲು ಮುಂದಾದಾಗ ಅಮ್ಮ ಮೆಲುವಾಗಿ ಗದರಿದರಂತೆ. ಎಲೆಅಡಿಕೆ ಉಗಿಯಲು ಜಾಗವಿಲ್ಲದ ಟಾಕೀಸಿಗೆ ಇನ್ನು ಮುಂದೆ ಬರಲಾರೆನೆಂದು ಅಪ್ಪ ಅಲ್ಲಿಯೇ ಪ್ರತಿಜ್ಞೆ ಮಾಡಿದರಂತೆ. ಹಾಗಾಗಿ ಅವರಿಬ್ಬರೂ ಒಟ್ಟಾಗಿ ನೋಡಿದ ಕೊನೆಯ ಚಿತ್ರವೂ ಅದೇ ಆಗಿತ್ತು.
ಅದೇ ಚಂದ್ರ ಕಾಮನ ಹುಣ್ಣಿಮೆಯ ದಿನ, ಊರ ಹೊರಗಿನ ಕಾಡಿನಲ್ಲಿ ಅಮ್ಮನ ದೇಹವನ್ನು ಚಿತೆಯಲ್ಲಿ ಬೇಯಿಸುವಾಗಲೂ ಆಗಸದಲ್ಲಿ ಬೆಳಗುತ್ತಲೇ ಇದ್ದ. ಕೆಳಗೆ ಧಗಧಗನೆ ಉರಿಯುತ್ತಿದ್ದ ಬೆಂಕಿ, ಮೇಲೆ ತಣ್ಣಗೆ ಬೆಳದಿಂಗಳು ಚೆಲ್ಲುತ್ತಿದ್ದ ಚಂದ್ರ! ಎದೆಯೊಳಗೆ ಹೇಳಿಕೊಳ್ಳಲಾಗದ ಉಮ್ಮಳ! ಅಂದಿನಿಂದಲೂ ಹುಣ್ಣಿಮೆಯ ಚಂದಿರ ಉರಿಯುತ್ತಿರುವ ಚಿತೆಗೆ ರೂಪಕವಾಗಿ ಮನಸ್ಸಿನಲ್ಲಿ ಉಳಿದುಹೋದ.
ಅಮ್ಮನಿಗೆ ಹರಿವೆ, ಬೆಂಡೆ, ಬದನೆಕಾಯಿಗಳೆಂದರೆ ಪ್ರಾಣ. ಅವೆಲ್ಲವನ್ನೂ ತೋಟದಲ್ಲಿ ತಾವೇ ಬೆಳೆದುಕೊಳ್ಳುತ್ತಿದ್ದಳು. ಹರಿವೆಯ ಪಲ್ಯ, ಬದನೆಕಾಯಿಯ ಗೊಜ್ಜು, ಬೆಂಡೆಕಾಯಿಯ ಸಾಂಬಾರನ್ನು ಚಪ್ಪರಿಸಿ ಉಣ್ಣುವಷ್ಟು ರುಚಿಯಾಗಿ ಮಾಡುತ್ತಿದ್ದಳು. ಹಾಗಲಕಾಯಿಯನ್ನು ಮಾತ್ರ ಎಂದಿಗೂ ತಿನ್ನುತ್ತಿರಲಿಲ್ಲ. ಅವರ ನಾದಿನಿಯರಿಗೆ ಹೇಗಾದರೂ ಮಾಡಿ ಅತ್ತಿಗೆಗೆ ಹಾಗಲಕಾಯಿ ತಿನ್ನಿಸಬೇಕೆಂಬ ಹಂಬಲ. ಎಷ್ಟೇ ಹುರಿದರೂ ಕಹಿರುಚಿಯನ್ನು ಬಿಟ್ಟುಕೊಡದ ಹಾಗಲವನ್ನು ಹೇಗೆ ರೂಪಾಂತರಿಸಿ ಕೊಟ್ಟರೂ ಅಮ್ಮ ಕಂಡುಹಿಡಿದುಬಿಡುತ್ತಿದ್ದಳು. ಆದರೂ ಛಲಬಿಡದ ಹುಡುಗಿಯರು ಒಮ್ಮೆ ಎಳೆಯ ಹಾಗಲಕಾಯಿಯನ್ನು ಕೊಯ್ದು, ಹಸುವಿನ ತುಪ್ಪದಲ್ಲಿ ಗರಿಗರಿಯಾಗಿ ಹುರಿದು ಮೊಸರು, ತೆಂಗಿನಕಾಯಿ ಸೇರಿಸಿ ಮಾಡುವ ಸಾಸಿವೆಯೆಂಬ ಮೇಲೋಗರವನ್ನು ಮಾಡಿ ಅಮ್ಮನಿಗೆ ಉಣಿಸಿಯೇಬಿಟ್ಟರು. ಬಾಳೆಯ ಹೂವಿನ ಸಾಸಿವೆಯೆಂದು ಸುಳ್ಳು ಹೇಳಿ ತಿನ್ನಿಸಿ ಹಾಗಲಕಾಯಿಯ ರುಚಿ ತೋರಿಸಿದರು ಎಂದು ಸದಾ ನೆನಪಿಸಿಕೊಳ್ಳುತ್ತಿದ್ದಳು.
ಅಮ್ಮನಿಗೆ ಹಸು, ಎತ್ತುಗಳೆಂದರೆ ಪಂಚಪ್ರಾಣವಾಗಿತ್ತು. ಆದರೆ ಅವಿಭಕ್ತ ಕುಟುಂಬದ ಅಪ್ಪನ ಮನೆಯಲ್ಲಿ ಕರೆಯುವ ದನಗಳನ್ನೆಲ್ಲ ತಾವೇ ಇಟ್ಟುಕೊಂಡು, ಎತ್ತು ಮತ್ತು ಗೂಳಿಗಳನ್ನು ಮಾತ್ರವೇ ತುಸುದೂರದ ಬಿಡಾರದಲ್ಲಿದ್ದ ಅಮ್ಮನ ಹಟ್ಟಿಯಲ್ಲಿ ಕಟ್ಟುತ್ತಿದ್ದರು. ದಿನವೂ ನಸುಕಿನಲ್ಲಿ ಎದ್ದು ಎತ್ತುಗಳಿಗೆ ಹುಲ್ಲು ಹಾಕಲು ಹಟ್ಟಿಗೆ ಹೋಗುವ ಅಮ್ಮ, “ನಮ್ಮನೆಯಲ್ಲಿ ಹಟ್ಟಿಗೆ ಹೋಗಿ ಹುಲ್ಲುಹಾಕಿ, ಎತ್ತುಗಳು ಉಚ್ಚೆಹೊಯ್ಯುವುದನ್ನು ನೋಡಿಕೊಂಡು ಬಂದರಾಯಿತು.” ಎಂದು ತುಸುವಿಷಾದದಲ್ಲಿ ಹೇಳುತ್ತಿದ್ದಳು. ತಂಗಿಯ ಮಾತಿನ ಹಿಂದಿನ ನೋವನ್ನು ಅರಿತ ಅಮ್ಮನ ಅಣ್ಣ ಒಮ್ಮೆ ತಮ್ಮದೇ ಮನೆಯ ಹೆಂಗರುವೊಂದನ್ನು ಸಾಕಲಾಗದು ಎಂಬ ನೆಪಹೇಳಿ ತಂಗಿಯ ಹಟ್ಟಿಗೆ ಅಟ್ಟಿದ್ದ. ಅಮ್ಮನ ಅಕ್ಕರೆಯ ಆರೈಕೆಯಲ್ಲಿ ಮೈದುಂಬಿಕೊಂಡ ಆ ಕರು ವರ್ಷಕ್ಕೊಂದರಂತೆ ಈಯುತ್ತ ಇಡಿಯ ಹಟ್ಟಿಯನ್ನು ಹಸುಮಯ ಮಾಡಿಬಿಟ್ಟಿತ್ತು. ಬೆಳಗೆದ್ದು ಹಿಂದಿನ ದಿನ ಉಳಿದ ಅನ್ನಕ್ಕೆ ಹಿಂಡಿಯನ್ನು ಕಲೆಸಿ ರುಚಿಯಾದ ದಾಣಿಯನ್ನು ತಯಾರಿಸುವ ಅಮ್ಮ ದನಗಳಿಗೆಲ್ಲ ಒಂದೊಂದು ಮುಷ್ಟಿ ತಿನಿಸಿ ದೊಡ್ಡ ಚೊಂಬಿನ ತುಂಬ ನೊರೆಹಾಲನ್ನು ಹಿಡಿದು ಬರುವಾಗ ಅದೆಷ್ಟು ಕಳೆಕಳೆಯಾಗಿ ಕಾಣುತ್ತಿದ್ದಳು! ಮರದ ಏಣಿಯ ಮೆಟ್ಟಿಲಿಗೆ ಕಡಗೋಲನ್ನು ಕಟ್ಟಿ ಚರಿಗೆ ತುಂಬ ಮೊಸರನ್ನು ಸರೋಬರೋ ಎಂದು ಕಡೆದು ಬಾಯಾರಿದವರಿಗೆಲ್ಲ ಮಜ್ಜಿಗೆ ಉಪ್ಪು ಕುಡಿಸಿ ತಣಿಯುತ್ತಿದ್ದಳು. ವಾರಕ್ಕೊಮ್ಮೆ ಬೆಣ್ಣೆಮುದ್ದೆಯನ್ನು ಕರಗಿಸಿ ಘಮಗುಡುವ ತುಪ್ಪ ತಯಾರಿಸುತ್ತಿದ್ದಳು. ಊರಿನವರೆಲ್ಲರ ಸತ್ಯನಾರಾಯಣ ಪೂಜೆಗೂ ನಮ್ಮನೆಯಿಂದಲೇ ತುಪ್ಪದ ಸರಬರಾಜು ಮಾಡುತ್ತಿದ್ದಳು. ಅದರಿಂದ ಬರುವ ಪುಡಿಗಾಸಿನಲ್ಲಿ ಸಿನೆಮಾ, ಕುಬುಸ, ದ್ರಾಕ್ಷಿ ಹಣ್ಣು, ಖಾರಾಸೇವು ಹೀಗೆ ತನ್ನೆಲ್ಲ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದಳು.
ತನ್ನ ಬಡತನ, ಹೆಣ್ಣುಮಕ್ಕಳ ತಾಯ್ತನ ಇವುಗಳಿಂದ ಎಲ್ಲಿಯಾದರೂ ಅವಮಾನಕ್ಕೊಳಗಾಗಬೇಕಾದೀತೆಂದು ಬಂಧುಗಳ ಮನೆಯ ಭೇಟಿಯನ್ನು ಸಾಧ್ಯವಾದಷ್ಟು ದೂರವಿಡುವ ಅಮ್ಮ ತನ್ನನ್ನು ಯಾರಾದರೂ ಗುರುತಿಸಿ ಗೌರವಿಸಿದಾಗಲೆಲ್ಲ ತೀರ ಸಂಭ್ರಮಿಸುತ್ತಿದ್ದಳು. ಅತಿ ಸಿರಿವಂತರಾದ ತನ್ನ ಅಜ್ಜನಮನೆಯ ಮದುವೆಯೊಂದಕ್ಕೆ ಹೋದಾಗ ಸಂಬಂಧಿಯೊಬ್ಬರು, “ಬಾರೇ ಅತ್ತಿಗೇ, ನಿಂಗೆ, ನಂಗೆ ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ. ಅವರ ಕಾಟವಿಲ್ಲ. ಇವತ್ತು ನಾನು, ನೀನು ಇಬ್ಬರೂ ಸೇರಿ ಬೀಗರಿಗೆ ಕೋಲ್ಡ ಡ್ರಿಂಕ್ಸ್ ಕೊಡೋಣ” ಎಂದು ಇವಳನ್ನು ಮುನ್ನೆಲೆಗೆ ತಂದದ್ದನ್ನು ಅದೆಷ್ಟೋ ವರ್ಷ ನೆನಪಿಸಿಕೊಂಡು ಸುಖಿಸುತ್ತಿದ್ದರು. ತಳ್ಳುಗಾಡಿಯಲ್ಲಿ ಬಾಟಲಿಗಳನ್ನು ಜೋಡಿಸಿಕೊಂಡು ಬಂದವರಿಗೆಲ್ಲ ಕುಡಿಯಲು ಕೊಡುವ ಕ್ರಮ ಆಗಷ್ಟೇ ಜಾರಿಗೆ ಬಂದಿತ್ತು. ಅಂತಹ ಗಾಡಿಯನ್ನು, ಡ್ರಿಂಕ್ಸನ್ನು ಜನ್ಮದಲ್ಲಿ ನೋಡಿರದ ಅಮ್ಮನಿಗೆ ಅದೊಂದು ‘ಥ್ರಿಲ್ಲಿಂಗ್ ಪರ್ಫಾಮೆನ್ಸ್’ ಆಗಿತ್ತು.
ಕಪ್ಪು ಸೀರೆಯೆಂದರೆ ಅಮ್ಮನಿಗೆ ಪಂಚಪ್ರಾಣವಾಗಿತ್ತು. ಇದರ ಬಗ್ಗೆ ಗೊತ್ತಿದ್ದ ಅವಳ ಪ್ರೀತಿಯ ಅಣ್ಣನೊಬ್ಬ ಅವರಮ್ಮ ತೀರಿಕೊಂಡಾಗ ದುಃಖದ ಸೀರೆಯೆಂದು ಕಪ್ಪು ಕಾಟನ್ ವಾಯಿಲ್ ಸೀರೆಯನ್ನೇ ಕೊಟ್ಟಿದ್ದ. ಆ ಸೀರೆಯನ್ನು ಒಣಗಿಸುವಾಗಲೂ, ಉಡುವಾಗಲೂ ಅಮ್ಮ ಚೊಚ್ಚಲ ಮಗುವನ್ನೆತ್ತಿದಷ್ಟೇ ಸಂಭ್ರಮಿಸುತ್ತಿದ್ದಳು. ಕಷ್ಟದ ಹಾಸಿಗೆಯಲ್ಲಿ ಮಲಗುತ್ತಿದ್ದ ಅಮ್ಮನಿಗೆ ಕೆಲವೊಮ್ಮೆ ಸುಖದ ಕನಸುಗಳು ಬೀಳುತ್ತಿದ್ದವು. ತನ್ನ ಮುದ್ದಿನ ಕೊನೆಯ ಮಗಳು ಶಿಕ್ಷಕ ತರಬೇತಿಗೆ ಸೇರಿದಾಗ ಅವಳ ಎಲ್ಲ ಕನಸುಗಳೂ ಗರಿಗೆದರಿದ್ದವು. ನನ್ನ ಮರಿಗೆ ಕೆಲಸವೊಂದು ಸಿಕ್ಕಿದರೆ ಮುಗಿಯಿತು, ಕಲ್ಲಿನಲ್ಲಿ ಕಡೆಯುವ ಉಸಾಬರಿಯಿಲ್ಲ. ಗರ್ ಅಂತ ಮಿಕ್ಸಿಯಲ್ಲಿ ಕಡೆದರಾಯಿತು, ದೂರದ ಬಾವಿಯಿಂದ ನೀರೆತ್ತುವ ರಗಳೆಯಿಲ್ಲ, ಚಕ್ ಅಂತ ಮಿಶೆನ್ ಚಾಲೂ ಮಾಡಿದರೆ ನೀರು ಬರುವುದು, ಮಸಿ ಒಲೆಯಲ್ಲಿ ಮುಖವಿಟ್ಟು ಊದುವ ಪ್ರಮೇಯವಿಲ್ಲ, ಸೀಮೆಎಣ್ಣೆಯ ಸ್ಟೋವ್ ಮನೆಯೊಳಗೆ ಬರುವುದು ಎಂದೆಲ್ಲ ಕನಸು ಕಾಣುತ್ತಿದ್ದಳು. ಹೌದು, ಅಮ್ಮನ ಬಾಳಿನಲ್ಲೂ ತುಸು ಬೆಳದಿಂಗಳಿತ್ತು.

ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಮನಸ್ಸು ತುಂಬಿ ಬಂತು ಸುಧಾ, ಅಮ್ಮನೆಂದರೆ ಹಾಗೇ, ಅಮ್ಮನ ನೆನಪು ಎಲ್ಲರಿಗೂ ಚಿರಾಯು🙏
ಧನ್ಯವಾದಗಳು ಅಕ್ಕಾ
ಮೇಡಂ ನಿಮ್ಮ ಬರಹಗಳು ಅದ್ಭುತವಾಗಿವೆ. ಒಮ್ಮೆ ನಮ್ಮ ಬ್ಯಾಲಕ್ಕೆ ನಾವೇ ಹಿಂದಿರುಗಿದಂತಿದೆ.
ಧನ್ಯವಾದಗಳು
ಮೇಡಮ್ ಎಂದಿಗೂ ಮರೆಯಲು ಸಾಧ್ಯವಿಲ್ಲದ ಅಮ್ಮನ ಜೊತೆಗಿನ ಆತ್ಮೀಯ ಒಡನಾಟದ ಕ್ಷಣಗಳನ್ನು ಹಂಚಿಕೊಂಡಿದ್ದೀರಿ. ಓದಿ ಮನಸ್ಸು ಭಾರವಾಯ್ತು. ಧನ್ಯವಾದಗಳು.