ಒಮ್ಮೊಮ್ಮೆ ಇಲ್ಲಿ ಬಂದು ಸಂದ ಮೇಲೆ ಅಲ್ಲಿನ ತವರಿಗೆ ಭೇಟಿ ಕೊಟ್ಟಾಗ ಅಲ್ಲೂ ಇಲ್ಲ ಇಲ್ಲೂ ಇಲ್ಲ ಅನ್ನೋ ಎಡಬಿಡಂಗಿತನ ಧುತ್ತನೆ ಎದುರು ನಿಲ್ಲುತ್ತದೆ. ಆದರೆ ಆ ಎಡಬಿಡಂಗಿತನದಲ್ಲಿದೆ ಒಂದಷ್ಟು ನಗು, ಹರ್ಷ, ಉಲ್ಲಾಸ, ಪರಸ್ಪರತೆ, ಜೊತೆಯಾಗುವುದು. ಕುತೂಹಲ ಮೂಡಿಸುವುದು ಕಿರಿವಯಸ್ಸಿನ ಕತೆಗಾರರ ಅನುಭವ ಮೂಸೆಯಲ್ಲಿ ಪರಿಮೂಡುವ ಆಸ್ಟ್ರೇಲಿಯನ್-ಭಾರತೀಯತೆ ಕಲ್ಪನೆ ಮತ್ತು ಹೊಂದಾಣಿಕೆ. ಇವಷ್ಟೇ ಅಲ್ಲ. ಮಧ್ಯಮ ಮತ್ತು ಹಿರಿವಯಸ್ಸಿನ ಕತೆಗಾರರ ದನಿಯಲ್ಲಿ ಚಿತ್ರಿತವಾಗುವ ಹೊಸದೇಶ, ಅಪರಿಚಿತ ಸಮಾಜದ, ಅಲ್ಲಿನ ವ್ಯವಸ್ಥೆಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನಗಳು, ಅವಲ್ಲಿರುವ ಸಾಹಸಗಳು, ಸೋಲು-ಗೆಲುವು, ಆಂತರಿಕ ಒಳನೋಟಗಳು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
ಹೀಗೊಂದು ಪುಸ್ತಕ. ಹೆಸರು Home Across the Horizon. ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದವರು ಅಥವಾ ಇನ್ನೂ ಭಾರತೀಯರಾಗೇ ಉಳಿದಿರುವ (ಪಾಸ್ಪೋರ್ಟ್ / ಪೌರತ್ವ ಇಟ್ಟುಕೊಂಡಿರುವವರು) ಮೂವತ್ತೆರಡು ಮಂದಿ ಬರೆದ ಸಣ್ಣಕಥೆಗಳ ಗುಚ್ಛಕ್ಕೆ ಕೊಟ್ಟ ಹೆಸರು. ಈ ಸಣ್ಣಕತೆಗಳ ಸಂಕಲನವು ಹೋದ ಶುಕ್ರವಾರ ಮಾರ್ಚ್ ಆರನೇ ತಾರೀಕು ಸಿಡ್ನಿಯಲ್ಲಿ ಬಿಡುಗಡೆಯಾಯ್ತು. ಕೆಲಸದ ದಿನವಾದ್ದರಿಂದ ನಾನು ಬ್ರಿಸ್ಬೇನ್ನಿಂದ ಸಿಡ್ನಿಗೆ ಹೋಗಲಾಗಲಿಲ್ಲ. ಕಥಾಸಂಕಲನ ಬಿಡುಗಡೆ ಕಾರ್ಯಕ್ರಮ ಭರ್ಜರಿಯಾಗಿ ಜರುಗಿತು ಎಂದು ಫೋಟೋಗಳಿಂದ, ವಿಡಿಯೋಗಳಿಂದ ತಿಳಿಯಿತು.
ಈ ಕಥಾಸಂಕಲನದ ೩೨ ಕತೆಗಾರರಲ್ಲಿ ಒಂಭತ್ತು ಕನ್ನಡಿಗರು ಇದ್ದಾರೆ. ಅಂದರೆ ಕನ್ನಡಿಗರ ಕೊಡುಗೆ ಶೇಕಡಾ ೨೫ ಕ್ಕೂ ಹೆಚ್ಚು. ಹಾಗಾಗಿ ಈ ಪುಸ್ತಕ ನನಗೆ ವಿಶೇಷ ಅನ್ನಿಸಿದೆ. ಹಾಗೊಂದು ಹೀಗೊಂದು ಅಲ್ಲ, ಈ ಸಣ್ಣಕತೆಗಳ ಸಂಕಲನಕ್ಕೆ ಕನ್ನಡಿಗರು ಕೊಟ್ಟಿರುವ ಮಹತ್ವದ ಕೊಡುಗೆ ಇನ್ನೂ ಇದೆ. ಹೇಗೆ ಅಂತೀರಾ? ಸಂಕಲನವನ್ನು ಸಂಪಾದಿಸಿದ್ದು ಬೆಂಗಳೂರು ಮೂಲದ, ಸಿಡ್ನಿ ನಗರವಾಸಿ ಕನ್ನಡತಿ ಅನು ಶಿವರಾಂ. ನಿರರ್ಗಳವಾಗಿ ‘ನಮ್ಮ ಬೆಂಗಳೂರು ಕನ್ನಡ’ದಲ್ಲಿ ಹರಟೆ ಹೊಡೆಯುವ, ಅಷ್ಟೇ ಸುಲಭವಾಗಿ ಕನ್ನಡದಲ್ಲಿ ಬರೆಯುವ ಅನು ಈಗಾಗಲೇ ಇಂಗ್ಲಿಷ್ ಭಾಷೆಯಲ್ಲಿ ತಮ್ಮದೆ ಕಥಾಗುಚ್ಛವನ್ನು ಪ್ರಕಟಿಸಿದ್ದಾರೆ. ಅವರ ಇಂಗ್ಲಿಷ್-ಕನ್ನಡ ತರ್ಜುಮೆ ಕೃತಿಗಳೂ ಪ್ರಕಟವಾಗಿವೆ.
ತಮ್ಮ ಸಂಪಾದಕೀಯದಲ್ಲಿ ಅನು ಹೇಳಿರುವಂತೆ ಕತೆಗಾರರಿಗೆ ಆಹ್ವಾನ ಕೊಟ್ಟಾಗ ಇಂಥದ್ದೇ ಒಂದು ಥೀಮ್ ಅಂತೇನೂ ಹೇಳಿದ್ದಿಲ್ಲ. ಆದರೂವೆ ಕತೆಗಳು ಬಂದಾಗ ಅವುಗಳಲ್ಲಿನ ಮುಖ್ಯ ದನಿ ಅಥವಾ ಎಳೆ ಇದ್ದದ್ದು ತವರು ಕುರಿತು. ತವರನ್ನು ಬಿಟ್ಟುಬರುವಾಗ ಸಹಜವಾಗಿಯೇ ನಮ್ಮ ಕಣ್ಣು ಆಚೆಬದಿ ದಡದತ್ತ ಹಾಯುತ್ತದೆ. ಆ ಕಡೆ, horizon ಆಚೆ ಏನಿದೆ ಎಂಬ ಕುತೂಹಲ, ಚಡಪಡಿಕೆ, ಸಣ್ಣದೊಂದು ಆತಂಕವಿರುತ್ತದೆ. ಜೊತೆಗೇ ಉತ್ಸಾಹ, ಸಂಭ್ರಮವಿರುತ್ತದೆ. ಕಥೆಗಾರರಲ್ಲಿ ಅನೇಕರಿಗೆ ಅವರು ಹೊಸ ನಾಡಿಗೆ, ಆಸ್ಟ್ರೇಲಿಯಾಕ್ಕೆ ಬಂದಾಗ ಅದೂ ಕೂಡ ಮನೆಯಾಯ್ತು. ಅಲ್ಲಿ-ಇಲ್ಲಿ ಸಲ್ಲುವ ಪ್ರಯತ್ನ ಆರಂಭವಾಯ್ತು. ಸಹಜವಾಗಿಯೇ ಸಂಕಲನದ ಹೆಸರು Home Across the Horizon ಎಂದಾಯ್ತು.
ಕತೆಗಳನ್ನು ಗಮನಿಸಿದರೆ ನನಗೆ ಕಂಡದ್ದು ಸಂಬಂಧದ ಸೇತುವೆಗಳು. ಒಂದಲ್ಲ ಎರಡಲ್ಲ. ಹಲವಾರು ಸೇತುಬಂಧಗಳು, ರಾಖಿ ಬಂಧಗಳು, ಸ್ನೇಹದ ಹಾರಗಳು, ಕೊಡು-ಕೊಳ್ಳುವಿಕೆಯ ಸಹಜತೆ. ತಾವು ಬಿಟ್ಟುಬಂದ ತವರು ತಾಯಿಮನೆ ಭಾರತ, ಅಪ್ಪಿಕೊಂಡ ಅತ್ತೆಮನೆ ಆಸ್ಟ್ರೇಲಿಯಾ. ಕತೆಗಾರರು ಇವೆರಡರ ನಡುವೆ ಆಪ್ತ ಸಂಬಂಧದ ಸೇತುವೆಯನ್ನು ಕಟ್ಟಿದರು. ಎರಡೂ ‘ಮನೆ’ ಗಳಲ್ಲಿ ತಮ್ಮ ಮನವನ್ನು ನೆಟ್ಟು, ಅದನ್ನು ಮರವಾಗಿಸುವ ಪಣ ತೊಟ್ಟು, ಬೆಳೆಸಿ, ಉಳಿಸಿಕೊಂಡರು. ಅದರಲ್ಲಿ ತಮ್ಮ ಅಸ್ಮಿತೆ, ಆಪ್ತತೆ, ಉಳಿಸಿಕೊಂಡಿರುವ ಆಸ್ಟ್ರೇಲಿಯನ್-ಭಾರತೀಯ ಅನುಭವಗಳು, ಒಳನೋಟಗಳು, ದೃಷ್ಟಿಕೋನಗಳು ಈ ಸಂಕಲನದಲ್ಲಿ ಮರುದನಿಸಿದೆ.
ಕತೆಗಾರರಲ್ಲಿ ಇಪ್ಪತ್ತು ವರ್ಷ ಮೀರಿರದ ಕಿರಿವಯಸ್ಸಿನವರಿಂದ ಹಿಡಿದು ಎಪ್ಪತ್ತು ಚಿಲ್ಲರೆ ವಯಸ್ಸಿನ ಹಿರಿಯರ ಒಂದು ದೊಡ್ಡ ಹರವು ಇದೆ. ಓದುಗರಿಗೆ ಅಚ್ಚರಿಯಾಗುವುದು ಕತೆಗಳಲ್ಲಿ ಇರುವ ವಿಭಿನ್ನತೆ, ವೈಶಿಷ್ಟ್ಯ ಮತ್ತು ವಿಚಾರಧಾರೆಗಳು. ಜೊತೆಗೆ ಒಂದಷ್ಟು ಸಂಡಿಗೆಯಂತೆ ಸಿಕ್ಕುವ ಹಾಸ್ಯದ ಲೇಪನ. ಇದು ತನ್ನಂತೆ ತಾನೇ ಸ್ವಾಭಾವಿಕವಾಗಿ ಚಿತ್ರಿತವಾಗಿದೆ. ಆಗ ನಮಗನ್ನಿಸುವುದು ಕಥೆಗಾರರಲ್ಲಿ ಅಡಕವಾಗಿರುವ ಒಳದನಿ, ಬರವಣಿಗೆಯ ಶೈಲಿ, ಮತ್ತು ಪಳಗಿದ ಲೇಖನಿ. ಇವನ್ನು ಬಿಂಬಿಸುವುದು ಹೊಸದಾಗಿ ಪ್ರಪ್ರಥಮ ಬಾರಿ ಬರೆದವರು, ತಡಬಡಿಸಿದವರು, ಬರೆದು ಪಳಗಿದವರು, ಲೇಖನಿಯಿಂದಲೇ ಪ್ರಶಸ್ತಿ ಪಡೆದವರು, ಇದ್ಯಾವುದೂ ಬೇಡ ನನ್ನಷ್ಟಕ್ಕೆ ನಾನು ಸುಮ್ಮನೆ ಬರೀತೀನಿ ಎಂದವರು, ಎಲ್ಲರೂ ಇದ್ದಾರೆ. ಆಗಲೇ ಹೇಳಿದಂತೆ ಬರೋಬ್ಬರಿ ಮೂವತ್ತೆರಡು ಕತೆಗಾರರು ಅಂದಮೇಲೆ ಇವೆಲ್ಲಾ ಸರಕು, ಮಸಾಲೆ ಇರಬೇಕು ಅಲ್ಲವೇ.
ಇನ್ನಷ್ಟು ಹೇಳಬೇಕೆಂದರೆ, ಕಥೆಗಾರರಲ್ಲಿ ಒಂದಷ್ಟು ಬಿಕ್ಕಳಿಕೆ ಅಡಗಿದೆ. ಇದನ್ನು ನೋವು ಎನ್ನಲಾಗುವುದಿಲ್ಲ. ಅಳು ಅಂತಲೂ ಅಲ್ಲ. ದುಃಖವಂತೂ ಇಲ್ಲವೇ ಇಲ್ಲ. ಅದೇನೋ ಒಂದು ತರಹದ ಕಳೆದುಹೋದ ಭಾವನೆಯ ಪುನರುಚ್ಚಾರವಿದೆ ಈ ಕತೆಗಳಲ್ಲಿ. ಇದು ಆಡುಭಾಷೆಯಲ್ಲಿ ‘ಪಿಟೀಲು ಕುಯ್ಯುವಂತೆ’ ಮರುಕಳಿಸುತ್ತದೆ. ಆದರೆ, ಈ ಭಾವನೆ ಬೇರೆಬೇರೆ ಮಟ್ಟಗಳಲ್ಲಿ ಕಾಣಬರುತ್ತದೆ. ಹಾಗಾಗಿ ನಿಂತ ನೀರಿನಂತಾಗದೆ ಓದಿಸಿಕೊಂಡು ಹೋಗುತ್ತದೆ.
ಒಮ್ಮೊಮ್ಮೆ ಇಲ್ಲಿ ಬಂದು ಸಂದ ಮೇಲೆ ಅಲ್ಲಿನ ತವರಿಗೆ ಭೇಟಿ ಕೊಟ್ಟಾಗ ಅಲ್ಲೂ ಇಲ್ಲ ಇಲ್ಲೂ ಇಲ್ಲ ಅನ್ನೋ ಎಡಬಿಡಂಗಿತನ ಧುತ್ತನೆ ಎದುರು ನಿಲ್ಲುತ್ತದೆ. ಆದರೆ ಆ ಎಡಬಿಡಂಗಿತನದಲ್ಲಿದೆ ಒಂದಷ್ಟು ನಗು, ಹರ್ಷ, ಉಲ್ಲಾಸ, ಪರಸ್ಪರತೆ, ಜೊತೆಯಾಗುವುದು. ಕುತೂಹಲ ಮೂಡಿಸುವುದು ಕಿರಿವಯಸ್ಸಿನ ಕತೆಗಾರರ ಅನುಭವ ಮೂಸೆಯಲ್ಲಿ ಪರಿಮೂಡುವ ಆಸ್ಟ್ರೇಲಿಯನ್-ಭಾರತೀಯತೆ ಕಲ್ಪನೆ ಮತ್ತು ಹೊಂದಾಣಿಕೆ. ಇವಷ್ಟೇ ಅಲ್ಲ. ಮಧ್ಯಮ ಮತ್ತು ಹಿರಿವಯಸ್ಸಿನ ಕತೆಗಾರರ ದನಿಯಲ್ಲಿ ಚಿತ್ರಿತವಾಗುವ ಹೊಸದೇಶ, ಅಪರಿಚಿತ ಸಮಾಜದ, ಅಲ್ಲಿನ ವ್ಯವಸ್ಥೆಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನಗಳು, ಅವಲ್ಲಿರುವ ಸಾಹಸಗಳು, ಸೋಲು-ಗೆಲುವು, ಆಂತರಿಕ ಒಳನೋಟಗಳು.
ಇವುಗಳಲ್ಲಿ ನನಗೆ ಕಂಡದ್ದು ನಮ್ಮ ಬೆಳವಣಿಗೆ. ಅಂದರೆ ಕತೆ ಬರೆಯುವಾಗ ನಮಗೆ ಸಿಕ್ಕಂಥಾ ಅವಕಾಶ ಒಂದು ಒಳನೋಟಕ್ಕೆ, ಪ್ರತಿಫಲನಕ್ಕೆ, ಹರಿವಿಗೆ ಕಾರಣವಾಯ್ತೆನೋ. ಈ ಪರದೇಶದಲ್ಲಿ ನನ್ನ ನೋವು-ನಲಿವುಗಳಿಗೆ ಒಗ್ಗುವ ಪ್ರೇರಣೆಗಳೇನು, ಸಂಬಂಧಗಳು ಯಾವುವು, ಎಲ್ಲೆಲ್ಲಿ ನಾನು ಹೇಗೆಹೇಗೆ ಸಲ್ಲುತ್ತೀನಿ, ಸಲ್ಲಲೇಬೇಕು ಎನ್ನುವ ಸಂದರ್ಭ ಬಂದಾಗ ನನ್ನ ಆಯ್ಕೆ ಏನಾಗುತ್ತದೆ … ಹೀಗೆಲ್ಲಾ ಯೋಚನೆಗಳ ರೈಲುಬಂಡಿ ಓಡುತ್ತಿತ್ತು. ಆಗೆಲ್ಲಾ ನನ್ನ ಮನೆಯಲ್ಲಿ ಇದು ಭಾರತೀಯತೆ ಎನ್ನುವ ಪ್ರತೀಕಗಳು ಯಾವುದಿವೆ ಎನ್ನುವ ಆಲೋಚನೆ. ಜೊತೆಗೆ ಆಸ್ಟ್ರೇಲಿಯಾದ ಸಮಾಜದಲ್ಲಿ ನಾನು ಒಬ್ಬಳು ಎಂದಾಗ ಅದನ್ನು ಪ್ರತಿಫಲಿಸುವ ನನ್ನ ನಡೆ-ನುಡಿಗಳು ಯಾವುವು ಎನ್ನೋ ಪ್ರಶ್ನೆ. ಹೀಗೇ ಯೋಚಿಸುತ್ತಿದ್ದರೆ ತಲೆನೋವು ಗ್ಯಾರಂಟಿ!
Home Across the Horizon ಕಥಾಸಂಕಲನದ ಮೂಲ ಕಲ್ಪನೆ ಮತ್ತು ಪೂರ್ಣ ಯೋಜನೆಯ ಜವಾಬ್ದಾರಿ ಹೊತ್ತಿದ್ದು ಸಿಡ್ನಿಯಲ್ಲಿರುವ ಸಂಸ್ಥೆ Indian Literary and Art Society of Australia (ILASA). ಇದನ್ನು ಹುಟ್ಟುಹಾಕಿದ್ದು ರೇಖಾ ರಾಜವಂಶಿ. ರೇಖಾ ಈ ಸಂಸ್ಥೆಯ ಪ್ರೆಸಿಡೆಂಟ್ ಕೂಡ. ILASA ಹೆಸರೇ ಹೇಳುವಂತೆ ಈ ಸಂಸ್ಥೆಯ ಮೂಲ ಉದ್ದೇಶ ಭಾರತೀಯ ಮೂಲದ ಬರಹಗಾರರನ್ನು, ಭಾಷೆಗಳನ್ನು ಪ್ರೋತ್ಸಾಹಿಸುವುದು, ಮತ್ತು ಭಾರತೀಯ ಕಲೆಗಳನ್ನು ಉತ್ತೇಜಿಸುವುದು. ಎರಡೂ ದೇಶಗಳ ನಡುವೆ ಇರುವ ಸ್ನೇಹಸಂಬಂಧವನ್ನು ಬಲಪಡಿಸುವುದು. ILASA ಸ್ಥಾಪಿತವಾಗಿದ್ದು ೨೦೧೦ ರಲ್ಲಿ. ಅಲ್ಲಿಂದಾಚೆಗೆ ಭಾರತೀಯ ಭಾಷೆಗಳ, ಬರಹಗಾರರ ಸಮಾವೇಶಗಳನ್ನು ನಡೆಸಿದೆ. ಅಂದ ಹಾಗೆ ನಮ್ಮ ಕಥಾಸಂಕಲನದ ಸಂಪಾದಕಿ ಅನು ಶಿವರಾಂ ಈ ಸಂಸ್ಥೆಯ ಕಾರ್ಯದರ್ಶಿ.

ಮತ್ತೆ ನಮ್ಮ ಕನ್ನಡಿಗರ ಕೊಡುಗೆಯತ್ತ ಕಣ್ಣೋಡಿಸೋಣ. ಕಥೆಗಾರರಲ್ಲಿ ಪಳಗಿದ ಲೇಖನಿಯಿರುವ ಸಿಡ್ನಿ ಶ್ರೀನಿವಾಸ್ ಅವರ ಜೊತೆಗೆ ಇರುವ ಬೇರೆ ಕತೆಗಾರರು ರಾಜೇಶ್ವರಿ ಜಯದೇವ್, ಉಮಾ ಶ್ರೀನಿವಾಸನ್, ಪೂಜಾ ಅನಂತ, ಸಂಜನಾ ವಿಶಾಲ್, ಸವಿತಾ ನಾರಾಯಣ್, ಉಷಾ ಸಲಗಮೆ, ಮೇಖಲ ರಾಮಪ್ರಕಾಶ್, ಮತ್ತು ನಾನು ವಿನತೆ ಇದ್ದೀವಿ. ನಾನು ಇಂಗ್ಲಿಷ್ ಭಾಷೆಯಲ್ಲಿ ಕತೆ ಬರೆದಿದ್ದು ಇದೇ ಮೊದಲಲ್ಲ. ಮುಂಚೆ ಬರೆದಿದ್ದು ಎಲ್ಲೂ ಪ್ರಕಟವಾಗಿರಲಿಲ್ಲ. ಹಾಗಾಗಿ Home Across the Horizon ಕಥಾಸಂಕಲನದಲ್ಲಿ ಪ್ರಕಟವಾಗಿರುವ ನಾನು ಬರೆದ Chaos of the Bra ಕತೆಯನ್ನು ನೋಡಿದಾಗ ಪುಳಕವಾಯ್ತು. ಕಥಾಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ವತಃ ಭಾಗವಹಿಸಿದ್ದ ಆಸ್ಟ್ರೇಲಿಯನ್-ಭಾರತೀಯ ಕತೆಗಾರರಿಗೆ ಅದೆಷ್ಟು ಹೆಮ್ಮೆಯಾಯ್ತು ಎಂದು ಊಹಿಸಿಕೊಂಡು ಸಂತೋಷಪಟ್ಟೆ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

