ಹಿಂದೊಮ್ಮೆ ಹುಸೇನ್ ಸಾಬ್‌ಗೆ ಹೊಲ ಮಾಡಲು ಕೊಟ್ಟಾಗ ಸುತ್ತಲೂ ಒಂದೈವತ್ತು ಅಪ್ಪೆ ಮಿಡಿ ಗಿಡಗಳನ್ನು ನೆಟ್ಟಿದ್ದೆ. ಸ್ವಲ್ಪ ಬೆಳೆದಾದ ಮೇಲೆ ಪೂರ್ತಿ ಗಿಡಗಳನ್ನು ಬೆಂಕಿ ಹಚ್ಚಿ ಇಲ್ಲದಂತೆ ಮಾಡಿದ್ದರು. ಬೆಂಕಿ ಹಚ್ಚಿದ್ದು ಯಾರು ಅಂತ ಕೊನೆಗೂ ಗೊತ್ತಾಗಲಿಲ್ಲ. ಒಬ್ಬರ ಮೇಲೆ ಒಬ್ಬರು ಹಾಕಿ ನನ್ನನ್ನು ಮಂಗ ಮಾಡಿದ್ದರು! ಇಲ್ಲಿನವರೆ ಕಳ್ಳರು, ಆ ಜಾತಿಯವರನ್ನು ನಂಬಬಾರದು ಅಂತೆಲ್ಲ ಹೇಳೋದೆಲ್ಲ ತಪ್ಪು. ಕಳ್ಳರದೇ ಒಂದು ಪ್ರತ್ಯೇಕ ಜಾತಿ! ಏನಾಗುತ್ತೋ ನೋಡೋಣ ಅಂತ ಸುಮ್ಮನಾದೆ. ಆದರೂ ಮುಂದೊಮ್ಮೆ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕು ಅಂತ ನಿರ್ಧರಿಸಿದೆ.
ಗುರುಪ್ರಸಾದ್ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣದ 17ನೇ ಕಂತು
ಬೆಳಿಗ್ಗೆ ಎದ್ದಾಗ ಹೊಸಕೊಪ್ಪದಲ್ಲಿ ಜುರು ಜರು ಅಂತ ಮಳೆ ಸುರಿಯುತ್ತಿತ್ತು. ಅಲ್ಲೊಂದೆ ಅಲ್ಲ ಇಡೀ ರಾಜ್ಯವೇ ಮಳೆಯಲ್ಲಿ ನೆನೆಯುತ್ತಿತ್ತು. ಮೋಡ ಆವರಿಸಿದ್ದರಿಂದ ತುಂಬಾ ಸಪ್ಪೆ ವಾತಾವರಣ ಅನಿಸಿತು. ಮೊಬೈಲ್‌ನಲ್ಲಿ ಹವಾಮಾನ ವರದಿ ನೋಡಿದಾಗ ಇನ್ನೂ ಮೂರು ನಾಲ್ಕು ದಿನಗಳು ಹೀಗೆಯೇ ಮಳೆ ಸುರಿಯಲಿದೆ ಅಂತ ಹೇಳುತ್ತಿತ್ತು. ಮೊದಲಿಗಿಂತ ನಿಖರವಾಗಿ ಹವಾಮಾನ ಹೇಳುವಷ್ಟು ನಮ್ಮ ದೇಶದ system ಗಳು ತಯಾರಾಗಿವೆ ಅಂತ ಅನಿಸಿತು. ತುಂಬಾ ಹಿಂದೆ ನಾವು ಚಿಕ್ಕವರಿದ್ದಾಗ ರೇಡಿಯೋದಲ್ಲಿ “ಸಾಧಾರಣದಿಂದ ಭಾರಿ ಮಳೆ” ಅಂತ ಕೇಳಿದಾಗೆಲ್ಲ ನಗು ಬರೋದು. ಸಾಧಾರಣವಾಗಿ ಬಂದರೂ, ಭಾರಿ ಬಂದರೂ ಮಳೆಯ ವರದಿ ಸರಿಯಾಗಿಯೇ ಇರುತ್ತಿತ್ತಲ್ಲ! ಆದರೆ ಈಗ ಹಾಗಲ್ಲ, 90% ನಿಖರತೆ ಇದ್ದೇ ಇರುತ್ತದೆ. ಶತ ಪ್ರತಿಶತ ಸರಿಯಾಗಿ ಅಮೆರಿಕೆಯಲ್ಲಿ ಕೂಡ ಹೇಳುವುದಿಲ್ಲ ಬಿಡಿ. ವರ್ಷಗಳ ಹಿಂದೆ ನಾವಲ್ಲಿದ್ದಾಗ ಆ ಊರಿನಲ್ಲಿ ತುಂಬ ಹಿಮ ಬೀಳುತ್ತಿತ್ತು. ಹವಾಮಾನ ಇಲಾಖೆಯವರು, ಇವತ್ತು ಇಷ್ಟು ದಪ್ಪದ ಹಿಮ ಬೀಳುತ್ತದೆ ಅಂತ ಹೇಳುತ್ತ ಒಂದಿಷ್ಟು ಫುಟ್ ಹೆಚ್ಚೇ ಹೇಳುತ್ತಿದ್ದರು. ಅಂದರೆ ಒಂದು ಫುಟ್ ಹಿಮ ಬೀಳುತ್ತಿದ್ದಾರೆ ಮೂರು ಫುಟ್ ಅಂತ, ರೆಡ್ ಅಲರ್ಟ್ ಘೋಷಣೆ ಮಾಡುತ್ತಿದ್ದರು… ಯಾಕಂದರೆ ಕಡಿಮೆ ಹೇಳಿ ಹೆಚ್ಚು ಹಿಮ ಬಿದ್ದರೆ ಅಲ್ಲಿನ ಜನ ಜಗಳ ತೆಗೆಯುತ್ತಾರಂತೆ ಅದಕ್ಕೆ! ಅದೂ ಅಲ್ಲದೆ ನಿಸರ್ಗ ದೇವತೆ ಹಾಗೂ ಹೆಂಡತಿಯ ಮೂಡು ಹೀಗೆಯೇ ಅಂತ ಕರಾರುವಕ್ಕಾಗಿ ಹೇಳುವುದು ಸ್ವಲ್ಪ ಕಷ್ಟವೆ. ಅದಕ್ಕೆ ತಕ್ಕಂತೆ ನಾವು ತೆಪ್ಪಗೆ ಇರಬೇಕು ಅಷ್ಟೇ!
ನಾಲ್ಕು ದಿನ ಹೀಗೇ ಮಳೆ ಹೊಡೆಯುತ್ತಿದ್ದರೆ ಹಳ್ಳಿಯಲ್ಲಿದ್ದು ಏನು ಮಾಡುವುದು ಅನಿಸಿತು. ಅದೂ ಅಲ್ಲದೆ ಇನ್ನು ಕೆಲವು ದಿನಗಳಲ್ಲಿ ಬೆಂಗಳೂರಿನಲ್ಲಿ ಮತ್ತೆ ನನ್ನ workshop ಇದ್ದ ಕಾರಣ ನಾಳೆ ಬೆಳಿಗ್ಗೆ ಅಲ್ಲಿಗೆ ಹೊರಟುಬಿಡುವ ಅಂತ ರಾಮನಿಗೆ ಹೇಳಿದೆ. ಅವನಿಗೂ ಮತ್ತೆ ಬೆಂಗಳೂರಿಗೆ ಹೋಗುವುದಕ್ಕೆ ಖುಷಿಯಾದೀತು ಅಂತ ಅನಿಸಿತು. ಆದರೂ ಯಾಕೋ ಅವನು ಸ್ಥಿತಪ್ರಜ್ಞನಂತೆ ಇದ್ದ.
ಮರುದಿನ ಬೆಳಿಗ್ಗೆ ಕಾರ್‌ನಲ್ಲಿ ಇಬ್ಬರೂ ಹೊರಟಾಗ ನನಗೆ ಸಣ್ಣಗೆ ತಲೆ ನೋಯುತ್ತಿತ್ತು. ಅದ್ಯಾಕೋ corona ಯುಗ ಶುರುವಾದ ಮೇಲೆ ಸ್ವಲ್ಪ ಮೋಡ ಬಂದರೂ ಗಂಟಲು ಹಿಡಿಯುವುದು ತಲೆ ನೋಯುವುದು ತುಂಬಾ ಸಾಮಾನ್ಯ ಆಗಿಬಿಟ್ಟಿದೆ ಅನಿಸಿತು. ಮೊದಲೆಲ್ಲ ನಿಯಮಿತವಾಗಿ ಯೋಗ ಮಾಡುತ್ತಿದ್ದೆ. ಆಗೆಲ್ಲ ಈ ಸಮಸ್ಯೆ ಇರಲಿಲ್ಲ. ಇನ್ನು ಮತ್ತೆ ಯೋಗಾಭ್ಯಾಸ ಮಾಡಲೇಬೇಕು ಅಂತ ಪ್ರತಿಜ್ಞೆ ಮಾಡಿದೆ. ಆರೋಗ್ಯವೆಂಬ ಭಾಗ್ಯದ ಅರಿವಾಗುವುದು ಆರೋಗ್ಯ ಕೆಟ್ಟಾಗಲೆ ಅಲ್ಲವೇ. ರಾಮ ಏನೋ ಯೋಚನೆಯಲ್ಲಿ ಮುಳುಗಿದ್ದ. ದಾವಣಗೆರೆ ಬಳಿ ಅವನಿಗೆ ಬೆಣ್ಣೆ ದೋಸೆ ತಿನಿಸಿದೆ, of course ಜೊತೆಗೆ ನಾನೂ ತಿಂದೆ! ಅವತ್ತು ಬೆಂಗಳೂರು ಮುಟ್ಟಿದಾಗ ಸಂಜೆ 5.
ಉಳಿದುಕೊಳ್ಳಲು ನನ್ನ office ನಲ್ಲಿಯೇ ಅವನಿಗೆ ವ್ಯವಸ್ಥೆ ಮಾಡಿಕೊಟ್ಟೆ. ಊಟಕ್ಕೆಲ್ಲ ಹೊರಗೆ ಹೋಗೋದು ಬೇಡ ಇಲ್ಲಿರುವತನಕ ನಮ್ಮ ಮನೆಗೇ ಬಂದು ಬಿಡು ಅಂತ ಹೇಳಿದೆ. ತಲೆ ನೋವು ಜಾಸ್ತಿಯಾಗಿ ಮರುದಿನ ನನಗೆ office ಗೆ ಹೋಗಲಿಕ್ಕೆ ಆಗಲಿಲ್ಲ. ಅವನಿಗೆ ಅಲ್ಲೊಂದಿಷ್ಟು ವಿಷಯಗಳನ್ನು ಕಲಿಯಲು ಫೋನ್‌ನಲ್ಲಿಯೇ ತಿಳಿಸಿದೆ. ಅವತ್ತು ರಾತ್ರಿ ರಾಮ ಮನೆಗೆ ಬಂದ. ಊಟ ಮಾಡಿ ಮಲಗಲು office ಗೆ ಹೋಗುವ ಮೊದಲು ಸರ್ ನಿಮ್ಮ ಜೊತೆ ಮಾತನಾಡಬೇಕು ಅಂತ ಹೊರಗೆ ಕರೆದ. ನನಗ್ಯಾಕೋ ಅನುಮಾನ ಬಂತು. ಏನು ಅಂತ ಕೇಳಿದಾಗ,
“ಸರ್ ನನಗೆ ತುಂಬಾ lonely feel ಆಗ್ತಿದೆ. ಯಾಕೋ ಇಲ್ಲಿ ಇರೋಕೆ ಆಗ್ತಿಲ್ಲ. ನಾನು ವಾಪಸ್ಸು ನನ್ನ ಊರಿಗೆ ಹೋಗ್ತೀನಿ ಅಂದ.”
ಅವನ ಕಣ್ಣುಗಳು ತೇವಗೊಂಡಿದ್ದವು. ಅವನ ಜೊತೆಗೆ ಬೇರೆ ಸಹಪಾಠಿಗಳು ಯಾರೂ ಇಲ್ಲದ್ದಕ್ಕೆ ಹಾಗೆ ಅನಿಸಿತೆ? ತಾನು ಕೃಷಿ ಮಾಡಲು ಯೋಗ್ಯನಲ್ಲ ಅಂತ ಇಷ್ಟು ಬೇಗನೆ ಸೋತುಬಿಟ್ಟನೆ? ಉತ್ಸಾಹದಿಂದ ಬಂದು, ವಾಪಸ್ಸು ಹೋಗಿ ಅಪ್ಪ ಅಮ್ಮನಿಗೆ ಹೇಗೆ ಮುಖ ತೋರಿಸಲಿ ಅಂತ ಅನಿಸಿತ್ತೆ? ಒಟ್ಟಿನಲ್ಲಿ ಕಣ್ಣೀರಾಗಿದ್ದ ಅವನಿಗೆ, “ನಿನಗೆ ಮೊದಲೇ ಹೇಳಿದ್ದೆನಲ್ಲವೆ… ಈ ಕೃಷಿ ಜೀವನ ಅಷ್ಟು ಸುಲಭ ಅಲ್ಲ ಅಂತ” ಅಂತ ಸ್ವಲ್ಪ ಕೋಪದಿಂದಲೇ ಅಂದುಬಿಟ್ಟೆ. ಅವನು ಇನ್ನೂ ಅಳಲು ಶುರು ಮಾಡಿದ. ನಾನು ಸಮಾಧಾನ ಮಾಡಿ, ಆಯ್ತು ಮಾರಾಯಾ ನಾಳೆ ಬೆಳಿಗ್ಗೆ ನೀನು ವಾಪಸ್ಸು ಊರಿಗೆ ಹೊರಡು ಅಂತ ಹೇಳಿದೆ. ಅವನು ಇಲ್ಲಿ ಹೆಚ್ಚು ದಿನ ಇರಲಾರ ಅಂತ ಗೊತ್ತಿತ್ತಾದರೂ ಇಷ್ಟು ಬೇಗ ಹೋದಾನು ಅಂತ ಅನಿಸಿರಲಿಲ್ಲ.
ತುಂಬಾ ಯುವಕರು ಇದೆ ತರಹ ಒಂದು ಭ್ರಮೆಗೆ ಸಿಲುಕಿ ಒದ್ದಾಡುತ್ತಾರೆ. ಕೃಷಿ ನೋಡಲು ಚಂದ, ಬೇರೆಯವರ ತೋಟಕ್ಕೆ ಹೋಗಿ ವಿಹರಿಸುವುದು ಇನ್ನೂ ಚಂದ. ಆದರೆ ಆ ತೋಟವನ್ನು ಮಾಡಲು ಬೇಕಾದುದು ಬೆವರ ಹನಿಯ ಜೊತೆಗೆ ವಿಚಿತ್ರ ತಾಳ್ಮೆ. ಅದು ಎಷ್ಟು ಪರೀಕ್ಷೆ ಮಾಡುತ್ತದೆ ಎಂದರೆ ಅದರಲ್ಲಿ ಮುಂದುವರಿದವನು ಸ್ವರ್ಗ ಕಾಣುತ್ತಾನೆ, ಮಿಕ್ಕವರು…? ಆದರೂ ರಾಮ ಪ್ರಯತ್ನವಾದರೂ ಮಾಡಿದನಲ್ಲ ಅಂತ ನನಗೆ ಖುಷಿಯಾಯ್ತು. ಒಟ್ಟಿನಲ್ಲಿ ಅಲ್ಲಿಗೆ ರಾಮಾಯಣ ಮುಗಿದಿತ್ತು. ಮುಂದೆಂದಾದರೂ ನಿನ್ನ ಮನಸ್ಸು ಬದಲಾದರೆ ಬಾ ಅಂತ ಹೇಳಿ ಅವನನ್ನು ಕಳಿಸಿಕೊಟ್ಟೆವು.
ವರ್ಷಗಳ ಹಿಂದೆ ನಾವಲ್ಲಿದ್ದಾಗ ಆ ಊರಿನಲ್ಲಿ ತುಂಬ ಹಿಮ ಬೀಳುತ್ತಿತ್ತು. ಹವಾಮಾನ ಇಲಾಖೆಯವರು, ಇವತ್ತು ಇಷ್ಟು ದಪ್ಪದ ಹಿಮ ಬೀಳುತ್ತದೆ ಅಂತ ಹೇಳುತ್ತ ಒಂದಿಷ್ಟು ಫುಟ್ ಹೆಚ್ಚೇ ಹೇಳುತ್ತಿದ್ದರು. ಅಂದರೆ ಒಂದು ಫುಟ್ ಹಿಮ ಬೀಳುತ್ತಿದ್ದಾರೆ ಮೂರು ಫುಟ್ ಅಂತ, ರೆಡ್ ಅಲರ್ಟ್ ಘೋಷಣೆ ಮಾಡುತ್ತಿದ್ದರು… ಯಾಕಂದರೆ ಕಡಿಮೆ ಹೇಳಿ ಹೆಚ್ಚು ಹಿಮ ಬಿದ್ದರೆ ಅಲ್ಲಿನ ಜನ ಜಗಳ ತೆಗೆಯುತ್ತಾರಂತೆ ಅದಕ್ಕೆ!
ಅಷ್ಟರಲ್ಲಿ ತಾನು ಒಂದೆರಡು ದಿನಗಳ ಮಟ್ಟಿಗೆ ಹಳ್ಳಿಗೆ ಹೋಗಿ ಬರುವೆ ಅಂತ ನಾಗಣ್ಣ ಫೋನಿಸಿ ಹೇಳಿದರು. ನಾನು ಅಲ್ಲಿ ಇಲ್ಲದಾಗ ಇವರಾದರೂ ಇರುತ್ತಾರಲ್ಲ ಅಂತ ನನಗೂ ಖುಷಿಯಾಯ್ತು. ರಾಮ ಹೋದದ್ದು ನನಗೂ ಬೇಜಾರಾಗಿತ್ತು. ಆದರೂ ನಾಗಣ್ಣ ಇನ್ನೂ ಕೃಷಿಗೆ ಅಂಟಿಕೊಂಡಿದ್ದಾರಲ್ಲ ಅಂತ ಒಂದು ಸಮಾಧಾನ ಇತ್ತು.
*****
ಅವತ್ತು ನನ್ನ ಬೆಂಗಳೂರಿನ workshop ಮುಗಿಸಿದ ಬಳಿಕ ಸಂಜೆ ಸಮಯ ನಾಗಣ್ಣ ಫೋನ್ ಮಾಡಿದರು. ಸರ್ ಒಂದು ವಿಷಯ ಹೇಳಬೇಕಿತ್ತು… ಅಂದ್ರು. ಅವರ ಒಂದು ದೊಡ್ಡ pause ನನ್ನ ಹೃದಯವನ್ನು ನಿಲ್ಲಿಸುತ್ತಿತ್ತಲ್ಲ! ಆದರೂ ಬಹುಶಃ ಸುಮ್ಮನೆ ಫೋನ್ ಮಾಡಿರಬೇಕು ಅಂತಲೂ ಅನಿಸಿತು.
“ಸರ್.. ಹೊಲಕ್ಕೆ ಬಂದಿದೀನಿ.. ಇಲ್ಲಿ ಅಡ್ಡಾಡಿ ನೋಡಿದಾಗ.. ಎರಡು ಮೂರು ಕಡೆ patch patch ಆಗಿ ಭತ್ತ ಕೊಯ್ದಿದ್ದಾರೆ. ಯಾರೋ ಬೇಕಂತಲೇ ಕತ್ತರಿಸಿದಂತೆ ಕಾಣುತ್ತೆ. ಫೋಟೋ ಕಳಿಸಿದ್ದೀನಿ ನೋಡಿ.” ಅಂದರು. WhatsApp ನಲ್ಲಿ ಫೋಟೋ ನೋಡಿದೆ. ನನಗೆ ಸಿಕ್ಕಾಪಟ್ಟೆ ಬೇಸರವಾಯ್ತು. ಹಾಗೆ ಮಾಡಿದವರ ಬಗ್ಗೆ ತುಂಬಾ ಹೇಸಿಗೆ ಹುಟ್ಟಿತು. ಇವರೂ ಮನುಷ್ಯರಾ? ಒಬ್ಬ ರೈತನ ಹೊಲವನ್ನು ಅದೂ ಭತ್ತದ ಬೆಳೆಯನ್ನು ಕದಿಯುವ ಮನಸ್ಸಾದರೂ ಹೇಗೆ ಬರುತ್ತದೆ. ಯಾರು ಕದ್ದಿರಬಹುದು ಎಂಬ ಪ್ರಶ್ನೆಗೆ ಸುಲಭದ ಉತ್ತರ ಇರಲಿಲ್ಲ. ಹಾಗೆ ಕದ್ದಿರಬಹುದಾದವರ ಮುಖಗಳು ಕಣ್ಣ ಮುಂದೆಯೇ ಬಂದು ಹೋದವು. ಆದರೂ ಸುಮ್ಮ ಸುಮ್ಮನೆ ಯಾರ ಮೇಲೆ ಬೆರಳು ಮಾಡುವುದು?
“ಶಾಮ ಎಲ್ಲಿದ್ದಾನೆ?”
“ಅವನು ಇವತ್ತು ಬಂದಿಲ್ಲ ಸರ್..” ಅಂದಾಗ ಅವನ ಮೇಲೆಯೇ ಸಂಶಯ ಬಂತು.
ಕೂಡಲೇ ಅವನಿಗೆ ಫೋನ್ ಹಚ್ಚಿ ಹೀಗೆ ಅಂತ ಹೇಳಿದೆ. ಅವನು ತಕ್ಷಣವೇ ನಾಟಕೀಯವಾಗಿ…
“ಹೌದ್ರಿ ಸರ್ರ.. ಹೊಟ್ಟಿಗೆ ಏನ್ ತಿಂತಾರ್ ಅವ್ರು?… ತಡೀರಿ… ನಾನು ಇಲ್ಲೇ ನಿಮ್ಮ ಹೊಲದ ಹತ್ರ ಮರಿ (ಮರೆಯಾಗಿ) ಮಾಡಿಕೊಂಡು ನಿಂತೀನ್ರಿ. ಅವ್ರು ಬಂದರಂದ್ರ ವಿಡಿಯೋ ಮಾಡ್ತೀನಿ. ಆಮ್ಯಾಲೆ ಅವರಿಗೆ ಏನು ಮಾಡ್ತೀರಿ ನಿಮಗ ಬಿಟ್ಟಿದ್ದು..” ಅಂತ ಅವನು ಹೇಳುತ್ತಿದ್ದರೆ ನನಗೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ! ಈಗಾಗಲೇ ಕಳುವು ಮಾಡಿ ಆಗಿದೆ. ಈಗ ಇವನ ಕ್ಯಾಮೆರಾಕ್ಕೆ ಪೋಸು ಕೊಡಲು ವಾಪಸ್ಸು ಬರುವಷ್ಟು ಮೂರ್ಖರೇ ಆ ಕಳ್ಳ ಖದೀಮರು! ನನಗೆ ಇವನ ಮೇಲಿನ ಸಂಶಯ ಇನ್ನೂ ಜಾಸ್ತಿಯಾಯ್ತು! ಆಯ್ತು ಮೊದ್ಲು ಕಳ್ಳನ್ನ ಹಿಡಿ ನೋಡೋಣ ಅಂತ ಕರೆಯನ್ನು ತುಂಡರಿಸಿದೆ..
ಹೀಗೆ ಪದೆ ಪದೆ ಕಳುವುಗಳಾಗುತ್ತಿದ್ದರೆ ಏನು ಮಾಡೋದು ಎಂಬ ಹುಳ ತಲೆಯಲ್ಲಿ ಕೊರೆಯತೊಡಗಿತು. ಇದಕ್ಕೆ ಕಾರಣ ನಾವು ಅಲ್ಲಿ ಇರುವುದಿಲ್ಲ ಅನ್ನೋದೇ ಅಂತ ಗೊತ್ತಿದ್ದರೂ ಪರಿಹಾರವೇನು ಅಂತ ಯೋಚಿಸತೊಡಗಿದೆ.
ಹಿಂದೊಮ್ಮೆ ಹುಸೇನ್ ಸಾಬ್‌ಗೆ ಹೊಲ ಮಾಡಲು ಕೊಟ್ಟಾಗ ಸುತ್ತಲೂ ಒಂದೈವತ್ತು ಅಪ್ಪೆ ಮಿಡಿ ಗಿಡಗಳನ್ನು ನೆಟ್ಟಿದ್ದೆ. ಸ್ವಲ್ಪ ಬೆಳೆದಾದ ಮೇಲೆ ಪೂರ್ತಿ ಗಿಡಗಳನ್ನು ಬೆಂಕಿ ಹಚ್ಚಿ ಇಲ್ಲದಂತೆ ಮಾಡಿದ್ದರು. ಬೆಂಕಿ ಹಚ್ಚಿದ್ದು ಯಾರು ಅಂತ ಕೊನೆಗೂ ಗೊತ್ತಾಗಲಿಲ್ಲ. ಒಬ್ಬರ ಮೇಲೆ ಒಬ್ಬರು ಹಾಕಿ ನನ್ನನ್ನು ಮಂಗ ಮಾಡಿದ್ದರು! ಈಗಲೂ ಅದೇ ಕತೆ.. ಇದು ಅಲ್ಲಿ ಇಲ್ಲಿ ಅಂತಲ್ಲ. ಎಲ್ಲ ಕಡೆಯೂ ಇದೆ ಕತೆ. ಸತ್ಯವಂತರು ಇರುವಂತೆಯೇ ಎಲ್ಲಾ ಕಡೆಯೂ ಕಳ್ಳರು, ಸುಳ್ಳರು ಇದ್ದೆ ಇರುತ್ತಾರೆ. ಇದು ಜಾತಿ ಧರ್ಮ ಸೀಮೆ ಮೀರಿದ್ದು. ಇಲ್ಲಿನವರೆ ಕಳ್ಳರು, ಆ ಜಾತಿಯವರನ್ನು ನಂಬಬಾರದು ಅಂತೆಲ್ಲ ಹೇಳೋದೆಲ್ಲ ತಪ್ಪು. ಕಳ್ಳರದೇ ಒಂದು ಪ್ರತ್ಯೇಕ ಜಾತಿ! ಏನಾಗುತ್ತೋ ನೋಡೋಣ ಅಂತ ಸುಮ್ಮನಾದೆ. ಆದರೂ ಮುಂದೊಮ್ಮೆ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕು ಅಂತ ನಿರ್ಧರಿಸಿದೆ.
ಮುಂದಿನ ವಾರ ಒಬ್ಬನೇ ಹಳ್ಳಿಗೆ ಹೊರಟೆ. ನಾಗಣ್ಣ ಈಗಾಗಲೇ ಬೆಂಗಳೂರಿಗೆ ವಾಪಸ್ಸಾಗಿದ್ದರು. ನಮ್ಮದು ಒಂತರಹದ ಖೋ ಖೋ ಟೀಂ ಆಗಿತ್ತು. ಅವರಿದ್ದಾಗ ನಾನಿಲ್ಲ, ನಾನಿದ್ದಾಗ ಅವರಿಲ್ಲ! ಇದೆಲ್ಲವನ್ನೂ ಅಲ್ಲಿನ ಕೆಲವು ಕಳ್ಳರು ಹೇಗೋ ಪತ್ತೆ ಹಚ್ಚಿ ನಾವಿಲ್ಲದಾಗ ಅಲ್ಲಿ ಕಳುವು ಮಾಡುತ್ತಿದ್ದರು. ಅವತ್ತು ಅಷ್ಟೊಂದು ಮಳೆ ಇರಲಿಲ್ಲ. ಹೀಗಾಗಿ ನಾನು ಬೆಳಿಗ್ಗೆ ಬೇಗನೆ ಎದ್ದು ಹೊಲಕ್ಕೆ ಹೊರಟೆ. ಸಾಮಾನ್ಯವಾಗಿ ಹೊಲಕ್ಕೆ ಹೋಗುವಾಗ ಕೈಯಲ್ಲಿ ಒಂದು ಕತ್ತಿ (ಕುಡುಗೋಲು) ತೆಗೆದುಕೊಂಡು ಹೋಗುವುದು ರೂಡಿ. ಅವತ್ತೂ ಕೂಡ ಒಯ್ದಿದ್ದೆ. ರಸ್ತೆಯೆಲ್ಲ ಮತ್ತೆ ರಾಡಿಯಾಗಿತ್ತಾದ್ದರಿಂದ ನಡೆದುಕೊಂಡೇ ಹೋದೆ. ಹೊಲವನ್ನು ಪ್ರವೇಶಿಸಿ ಭತ್ತವನ್ನು ಕತ್ತರಿಸಿದ್ದ ಜಾಗವನ್ನು ನೋಡಿದೆ. ಎರಡು ಮೂರು ಕಡೆ ಸುತ್ತಾಡಿದಾಗ ಇನ್ನು ಎರಡು ಕಡೆ ಹೊಸದ್ದಾಗಿ ಹುಲ್ಲು ಕತ್ತರಿಸಿದ್ದು ಗೋಚರಿಸಿತು. ನನಗೆ ತುಂಬಾ ಕೋಪ ಉಕ್ಕಿ ಬಂತು. ಆದರೂ ಏನೂ ಮಾಡಲಿಕ್ಕೆ ಆಗದ ಅಸಹಾಯಕ ಪರಿಸ್ಥಿತಿ. ನಿಟ್ಟುಸಿರು ಬಿಟ್ಟು ಅಲ್ಲಿಂದ ಮುಂದೆ ನಮ್ಮ ಅಡಿಕೆ ಗಿಡಗಳು ಏನಾಗಿವೆಯೋ ಅಂತ ನೋಡಲು ಹೋಗುವದರಲ್ಲಿದ್ದೆ, ಅಷ್ಟರಲ್ಲೇ ನನ್ನ ಹೊಲದೊಳಗಿಂದ ಒಬ್ಬ ಮನುಷ್ಯ ಬರುವುದು ಕಂಡಿತು. ಅವನ ಹೆಗಲ ಮೇಲೊಂದು ದೊಡ್ಡ ಹುಲ್ಲಿನ ಹೊರೆ ಇತ್ತು. ಕಳ್ಳ ಸಿಕ್ಕೆಬಿಟ್ಟ, ಬರಲಿ ಬಡ್ಡಿ ಮಗ…! ಅವಂಗೆ ಇದೆ ಇವತ್ತು ಹಬ್ಬ ಅಂತ ಯೋಚಿಸುತ್ತ ನನ್ನ ಮೊಬೈಲ್ ತೆಗೆದು ಎಡಗೈಯಲ್ಲಿ ಹಿಡಿದು ಕ್ಯಾಮೆರಾ ಆನ್ ಮಾಡಿ ನಿಂತೇ… ಬಲಗೈಯಲ್ಲಿ ಕತ್ತಿ ಇತ್ತಲ್ಲ. ಇಂತಹ ಒಂದು ಸನ್ನಿವೇಶದಲ್ಲಿ ಪ್ರಥಮ ಬಾರಿಗೆ ನಾನಿದ್ದೆ. ನನ್ನ ಎದೆ ಉದ್ವೇಗದಲ್ಲಿ ಜೋರಾಗಿ ಹೊಡೆದುಕೊಳ್ಳತೊಡಗಿತ್ತು…
(ಮುಂದುವರಿಯುವುದು…)
ಗುರುಪ್ರಸಾದ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿ ರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ), ಗ್ರಾಮ “ಡ್ರಾಮಾಯಣ” ಸೇರಿ ಇವರ ನಾಲ್ಕು ಕೃತಿಗಳು ಪ್ರಕಟಗೊಂಡಿವೆ.
ನಿಮ್ಮ ಬರವಣಿಗೆಯ ಶೈಲಿ ಬಹಳ ಚೆನ್ನಾಗಿದೆ ಗುರುಪ್ರಸಾದ್. ಅಂಕಣ ಬಹಳ ಚೆನ್ನಾಗಿ ಮೂಡಿ ಬರ್ತಿದೆ, ಮುಂದಿನ ಕಂತು ಯಾವಾಗ ಅಂತ ಕಾಯುವಂತೆ ಮಾಡುತ್ತದೆ.
Poorvi, ಅವರೆ ನಿಮ್ಮ ಅನಿಸಿಕೆ ಕೇಳಿ ಖುಷಿಯಾಯ್ತು! ಧನ್ಯವಾದಗಳು 🙂🙏
ಗುರುಪ್ರಸಾದ ಸರ್, ಕ್ರಷಿ ನೋಡಲು ಚೆಂದ,ಬೇರೆಯವರ ತೋಟಕ್ಕೆ ಹೋಗಿ ವಿಹರಿಸುವದು ಇನ್ನೂ ಚೆಂದ ಆದರೆ ಆ ತೋಟವನ್ನು ಮಾಡಲು ಬೆವರ ಹನಿಯ ಜೊತೆಗೆ ವಿಚಿತ್ರ ತಾಳ್ಮೆ ಬೇಕೆನ್ನುವ ಮಾತು ಅಷ್ಟೇ ಸತ್ಯ ಎನಿಸುತ್ತದೆ.ಪತ್ತೇದಾರಿ ಕಾದಂಬರಿಯ ಹಾಗೆ ಬರೆದು ನಮಗೆ ಕುತೂಹಲ ಮೂಡಿಸಿ ಕಾಯುವಂತೆ ಮಾಡಿದ್ದೀರಿ.ಕಾಯುತ್ತೇವೆ 🙏🙏
ತಮ್ಮ ಅನಿಸಿಕೆ ಓದಿ ಖುಷಿ ಆಯ್ತು, ಗದಗ ಆವರೆ. ಧನ್ಯವಾದಗಳು 🙂🙏