Advertisement
ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ: ಸುಕನ್ಯಾ ಕನಾರಳ್ಳಿ ಅಂಕಣ

ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ: ಸುಕನ್ಯಾ ಕನಾರಳ್ಳಿ ಅಂಕಣ

ಕಾಸರವಳ್ಳಿಯವರೇ ಹೇಳುವಂತೆ, ‘ಹಿಂದಿನ ಕಾಲದ ಗ್ರಾಮೀಣ ಬದುಕಲ್ಲಿ ಶಾಂತಿ ಇತ್ತು, ಸೌಹಾರ್ದತೆ ಇತ್ತು ಎನ್ನುವುದು ಒಂದು ರಮ್ಯ ಕಲ್ಪನೆ ಅಷ್ಟೇ. ಇವತ್ತಿನ ನಗರ ಕೇಂದ್ರದ ಬದುಕಿಗೆ ಹೋಲಿಸಿದಾಗ ಸ್ವಲ್ಪ ಮಟ್ಟಿನ ಸೌಹಾರ್ದತೆ ಇತ್ತು ಎನ್ನುವುದು ನಿಜವಾದರೂ ಜಾತಿ, ಅಂತಸ್ತು, ವೃತ್ತಿಯ ನೆಲೆಯಲ್ಲಿ ಅನ್ಯಾಯ, ದೌರ್ಜನ್ಯ, ಹಿಂಸೆ ನಡೆಯುತ್ತಲೇ ಇದ್ದವು.’  ಅದನ್ನೇ ನಾಗರಾಜನ ಹೆಂಡತಿ, ‘ಆ ದಿನಗಳಲ್ಲಿ ಸುಖ ಇರಲಿಲ್ಲ, ನೆಮ್ಮದಿ ಇತ್ತು. ಆದರೆ ಇವತ್ತು ಸುಖ ಇದೆ, ನೆಮ್ಮದಿ ಇಲ್ಲ’ ಎಂದು ಹೇಳುತ್ತಾಳೆ.
ಸುಕನ್ಯಾ
ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಒಂಭತ್ತನೆಯ ಬರಹ

ಕಾಸರವಳ್ಳಿಯವರ ಸಿನಿಮಾತ್ಮಕ ಬದುಕಿನ ಹಾದಿ ರಾಷ್ಟ್ರದ ಚರಿತ್ರೆಯೂ ಆಗಬಲ್ಲದು ಎನ್ನುವಷ್ಟು ಅವರು ವರ್ತಮಾನದ ಕಾಳಜಿಗಳಿಗೆ ರಾಷ್ಟ್ರದ ನೆಲೆಯಲ್ಲಿ ಸ್ಪಂದಿಸಿದ್ದಾರೆ ಅಂತನಿಸುತ್ತದೆ. ಆದರೆ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಕಥನ ರಾಷ್ಟ್ರವನ್ನು ಮೀರಿದ ನೆಲೆಯಲ್ಲಿ ನಿಂತು ಇಪ್ಪತ್ತೊಂದನೆಯ ಶತಮಾನದ ಮನುಷ್ಯ ಬದುಕಿಗೇ ಬರೆದ ಭಾಷ್ಯದಂತೆ ತೋರುತ್ತದೆ. ದಾಸರ ಪದದ ಸಾಲನ್ನೇ ಅವರು ಶೀರ್ಷಿಕೆಯಾಗಿ ಆಯ್ದುಕೊಂಡಿರುವುದು ಯಾವುದೋ ದಾರ್ಶನಿಕ ಸತ್ಯದತ್ತ ಬೆರಳು ಮಾಡಿ ತೋರಿಸಿದಂತೆ ಕಾಣಿಸುತ್ತದೆ.

(ಗಿರೀಶ್‌ ಕಾಸರವಳ್ಳಿ)

ಅವರ ‘ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ’ ಚಿತ್ರಕ್ಕೆ ಸಂಬಂಧಿಸಿದಂತೆ ಅವರ ಕೃತಿ ‘ಬಿಂಬ ಬಿಂಬನ’ ದಲ್ಲಿ ಅವರದ್ದೇ ಮಾತುಗಳಲ್ಲಿ, ‘ಇದು ಕೇವಲ ನಾಗರಾಜನ ದ್ವಂದ್ವ ಅಲ್ಲ, ಮಾನವ ಕುಲ ಅನುಭವಿಸುವ ಸಾರ್ವತ್ರಿಕ, ಸಾರ್ವಕಾಲಿಕ ದ್ವಂದ್ವ. ಬದುಕಿನ ಪ್ರಯಾಣದಲ್ಲಿ, ಸಾಧನೆಗಳಲ್ಲಿ ಏನೋ ಕೊರತೆ ಇದೆ, ಈ ಜೀವನ ಅಪೂರ್ಣ ಎನಿಸಿ ಇನ್ನೊಂದು ರೀತಿಯ ಬದುಕಿಗೆ ಮನುಷ್ಯ ಹಂಬಲಿಸುತ್ತಿರುತ್ತಾನೆ. ಗೋಪಾಲಕೃಷ್ಣ ಅಡಿಗರು ಹೇಳುವುದಿಲ್ಲವೇ, ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಅಂತ? .

ಈ ಚಿತ್ರದ ಮೊದಲ ಭಾಗ ‘ಇಲ್ಲಿರಲಾರೆ…’ ಯಲ್ಲಿ  ಹಳ್ಳಿಯನ್ನು ತೊರೆದ ಇನ್ನೂ ಇಬ್ಬರು ಇದ್ದಾರೆ. ಭಟ್ಟರ ಮಗ ಮತ್ತು ಪಬ್ಬು. ಮೊದಲನೆಯವನು ಸಮ ಸಮಾಜದ ಆಶಯ ಹೊತ್ತವನಂತೆ ತೋರಿದರೂ ಸಹ ಮನೆಯಲ್ಲೇ ಇದ್ದರೆ ಅಪ್ಪನ ಮತ್ತು ಸಂಪ್ರದಾಯದ ಕಪಿಮುಷ್ಟಿಗೆ ತಾನು ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ಭಯದಲ್ಲಿ  ತೊರೆದು ಹೋದವ. ಪಬ್ಬು ಬದುಕಿನ ಜೀವನಮಟ್ಟ ಸುಧಾರಿಸಲು ಬೆಂಗಳೂರಿಗೆ ಹೋದವ.

ಎರಡು ಮಹಾಯುದ್ಧಗಳು ಇಪ್ಪತ್ತನೆಯ ಶತಮಾನದ ಮೊದಲ ಅರ್ಧವನ್ನು ಅಪ್ಪಳಿಸಿದ ಮೇಲೆ ಉತ್ತರ ಭಾಗವನ್ನು ‘ಖಿನ್ನತೆಯ ಯುಗ’ ಎಂದು ಪರಿಕಲ್ಪಿಸಲಾಗಿತ್ತು. ಯುದ್ಧ ಮುಗಿದ ಮೇಲೂ ದುಃಸ್ವಪ್ನಗಳನ್ನು ಹೊತ್ತು ಬಳಲುವ ಸೈನಿಕನಂತೆ. ಇಪ್ಪತ್ತೊಂದನೆಯ ಶತಮಾನ ತಲೆಕೆಟ್ಟ ‘ಧಾವಂತದ ಯುಗ’ ಎಂಬ ರೀತಿಯಲ್ಲಿ ಬಿಚ್ಚಿಕೊಳ್ಳುತ್ತಿದೆ ಎನ್ನುವುದು ಈ ಯುಗದಲ್ಲಿ ಬದುಕಿರುವವರಿಗೆ ಸ್ಪಷ್ಟವೇ.

ಊಹಿಸಲೂ ಆಗದಷ್ಟು ವೇಗದಲ್ಲಿ ತಂತ್ರಜ್ಞಾನ ಬದಲಾಯಿಸುತ್ತಿರುವಾಗ ಅದಕ್ಕೆ ಹೊಂದಿಕೊಳ್ಳುವ ತರಾತುರಿಯಲ್ಲಿ ಬದುಕು ಎತ್ತ ಹೇಗೆ ಯಾಕೆ ಸಾಗುತ್ತಿದೆ ಎನ್ನುವುದು ಸಹ ಅರ್ಥವಾಗದಷ್ಟು ದಿಕ್ಕು ಮೂಡರಾಗಿದ್ದೇವೆ. ಈ ವೇಗ ಒಂದು ರೀತಿಯ ಆಂತರಿಕ ನಿಷ್ಕ್ರಿಯತೆಯನ್ನು ಮತ್ತು ಉದಾಸೀನವನ್ನು ಹುಟ್ಟು ಹಾಕಿದೆ. ಅತಿಯಾದ ವೇಗದಲ್ಲಿ ತಿರುಗುತ್ತಿರುವ ಬದುಕು ಅಂತರಾಳದಲ್ಲಿ ಯಾವ ಮೌಲ್ಯವೂ ಮಹತ್ತೆನಿಸದ ಆಲಸ್ಯಕ್ಕೆ ಒಳಗಾಗಿರುವುದು ಈ ಕಾಲದ ಪ್ರಚಂಡ ವಿಪರ್ಯಾಸ.

ಫ್ರೆಂಚ್ ಕವಿ ಬೋದಿಲೇರ್ ಹೇಳುವಂತೆ ಆಧುನಿಕದ  ಮನುಷ್ಯಜೀವಿ  ಮಹಾ ಏಕತಾನತೆಯಲ್ಲಿ (ennui) ಸಿಕ್ಕುಬಿದ್ದು ಪ್ರತಿಕ್ಷಣವೂ ತನ್ನನ್ನು ಹೊಸದಾಗಿ ಆವಿಷ್ಕರಿಸಿಕೊಳ್ಳುವ ತುರ್ತಿನಲ್ಲಿ  ಹೊಸದನ್ನು ಹುಡುಕಿಕೊಂಡು ಹೋಗುವ ಅನಿವಾರ್ಯಕ್ಕೆ ಸಿಕ್ಕಿದವನು. ಅದು ಬೇಡುವ ಪ್ರಚಂಡ ಚಟುವಟಿಕೆಯ ನಡುವೆ ನಿರಾಳದ ಯಾವ ಸೂಚನೆಯೂ ಸಿಕ್ಕದೆ ಬಳಲಿ ಬೇಸತ್ತು ವಿಚಿತ್ರವಾದ ಚೈತನ್ಯಹೀನತೆಗೆ ಪಕ್ಕಾದವನು. ಮಾರ್ಕ್ಸ್ ಅದನ್ನು ಶತಮಾನಗಳ ಹಿಂದೆಯೇ ‘ಸ್ವ-ಪರಕೀಯತೆ’ ಎಂದು ಪರಿಕಲ್ಪಿಸಿದ್ದ. ಆ ಚೈತನ್ಯಹೀನತೆ ರಾಕ್ಷಸೀತನ ಬೇರೂರಲು ಫಲವತ್ತಾದ ನೆಲೆಯೂ ಹೌದು.

*****

‘ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ’ ಚಿತ್ರಕಥನ ಎರಡು ಭಾಗಗಳನ್ನು ಹೊಂದಿದೆ. ಮೊದಲನೆಯ ‘ಇಲ್ಲಿರಲಾರೆ’ 1969ರ (ಚಂದ್ರನ ಮೇಲೆ ಮನುಷ್ಯ ಕಾಲಿಟ್ಟ ವರ್ಷ) ಗ್ರಾಮೀಣ  ಪರಿಸರದಲ್ಲಿ ಮೂಡಿರುವ ಆವರೇ ಬರೆದಿರುವ ಕಥೆ.  ಎರಡನೆಯದು ಜಯಂತ ಕಾಯ್ಕಿಣಿ ಅವರ ‘ಹಾಲಿನ ಮೀಸೆ’ ಸಣ್ಣ ಕಥೆಯನ್ನು ಆಧರಿಸಿದೆ. ಎರಡು ಕಥೆಗಳು ವಾಸ್ತವದಲ್ಲಿ ಎರಡಲ್ಲ. ಪರಸ್ಪರ ವ್ಯಾಖ್ಯಾನಿಸುವ ಅಂತರ-ಪಠ್ಯೀಯತೆಯನ್ನು ಹೊತ್ತಿದೆ.  ಮೊದಲನೆಯ ಭಾಗದಲ್ಲಿ ಬರುವ ನಾಗನ ಬದುಕು  ನಗರದ ನಾಗರಾಜನ ಮನೆಯಲ್ಲಿ ಎರಡು ಭಾವಚಿತ್ರಗಳಾಗಿ ಗೋಡೆಯೇರಿವೆ.

‘ಇದಾಗಿ ಮೂವತ್ತು ವರ್ಷ ಕಳೆದಿದೆ’ ಎನ್ನುವುದು ಎರಡನೆಯ ಭಾಗದಲ್ಲಿ ದೃಶ್ಯ, ಧ್ವನಿಗಳ ಮೂಲಕ ಬಿಚ್ಚಿಕೊಳ್ಳುವ ವಿವರ. ಆ ಮೂವತ್ತು ವರ್ಷಗಳಲ್ಲಿ ಏನು ನಡೆದಿರಬಹುದು ಎನ್ನುವುದು ನೋಡುಗಳ ಕಲ್ಪನಾಶಕ್ತಿಗೆ ಬಿಟ್ಟಂತಹ ಅರ್ಥಗರ್ಭಿತ ಮೌನ.

ಮೊದಲನೆಯ ಭಾಗದ ಗ್ರಾಮೀಣ ಪರಿಸರ ಕಣ್ಣಿಗೆ ತಂಪೆನಿಸುವ (‘ಮರುಳುಗೊಳಿಸುವ’ ಅಲ್ಲ, ಅದು ಕಾಸರವಳ್ಳಿಯವರ ಸಿನಿಮಾತ್ಮಕ ಸಿದ್ಧಾಂತಕ್ಕೆ ವಿರುದ್ಧ) ದೃಶ್ಯ, ಧ್ವನಿಗಳನ್ನು ಒಳಗೊಂಡಿದೆ. ಎರಡನೆಯ ಭಾಗದ ನಗರ ಕರ್ಕಶ ಶಬ್ದಗಳ ಸಮೇತ ಅನಾವರಣಗೊಂಡು ವೀಕ್ಷಕ ಪ್ರಜ್ಞೆಯನ್ನು ಬೆಚ್ಚಿಬೀಳಿಸುತ್ತದೆ. ಕಥನದ ಸ್ಥಿತ್ಯಂತರವನ್ನು ತೋರಿಸಲು ಅದೊಂದು ವಿವರವೇ ಸಾಕು. ಹಳ್ಳಿಯ ಪರಿಸರದ ಸಹಜ ತಂಪು ಬೆಳಕು ಮತ್ತು  ನಗರದ ನಾಗರಾಜನ ಮನೆಯ (‘ಏನನ್ನೋ ಬಚ್ಚಿಡುವ ಪ್ರಯತ್ನವಾಗಿ’) ಢಾಳಾದ ಬೆಳಕು ಅಂತಹದ್ದೇ ಇನ್ನೊಂದು ದೃಶ್ಯ ವಿವರ.

ಹಾಗೆಂದ ಮಾತ್ರಕ್ಕೆ, ‘ಗ್ರಾಮೀಣ’ ಎನ್ನುವುದು  ಮರಳಲು ಬಯಸುವ ಬದುಕೇನೂ ಅಲ್ಲ. ಕಾಸರವಳ್ಳಿಯವರೇ ಹೇಳುವಂತೆ, ‘ಹಿಂದಿನ ಕಾಲದ ಗ್ರಾಮೀಣ ಬದುಕಲ್ಲಿ ಶಾಂತಿ ಇತ್ತು, ಸೌಹಾರ್ದತೆ ಇತ್ತು ಎನ್ನುವುದು ಒಂದು ರಮ್ಯ ಕಲ್ಪನೆ ಅಷ್ಟೇ. ಇವತ್ತಿನ ನಗರ ಕೇಂದ್ರದ ಬದುಕಿಗೆ ಹೋಲಿಸಿದಾಗ ಸ್ವಲ್ಪ ಮಟ್ಟಿನ ಸೌಹಾರ್ದತೆ ಇತ್ತು ಎನ್ನುವುದು ನಿಜವಾದರೂ ಜಾತಿ, ಅಂತಸ್ತು, ವೃತ್ತಿಯ ನೆಲೆಯಲ್ಲಿ ಅನ್ಯಾಯ, ದೌರ್ಜನ್ಯ, ಹಿಂಸೆ ನಡೆಯುತ್ತಲೇ ಇದ್ದವು.’  ಅದನ್ನೇ ನಾಗರಾಜನ ಹೆಂಡತಿ, ‘ಆ ದಿನಗಳಲ್ಲಿ ಸುಖ ಇರಲಿಲ್ಲ, ನೆಮ್ಮದಿ ಇತ್ತು. ಆದರೆ ಇವತ್ತು ಸುಖ ಇದೆ, ನೆಮ್ಮದಿ ಇಲ್ಲ’ ಎಂದು ಹೇಳುತ್ತಾಳೆ.

ಭಟ್ಟರ ಅಂಗವಿಕಲ ಸೊಸೆ ಸೀತೆ ಗಂಡನ ಮುಖವನ್ನು ಕಾಣದೆ ಹತಾಶೆಯ ಅಂಚನ್ನು ತಲುಪಿದವಳು. ‘ತಿನ್ನಕ್ಕೆ ಹಿಡಿ ಅವಲಕ್ಕಿನೂ ಇಲ್ಲ, ಬೆಳಕು ಹಚ್ಚಕ್ಕೆ ಚಿಮಣಿ ಎಣ್ಣೆನೂ ಇಲ್ಲ, ಇವರು ಮಾತ್ರ ಹೊಟ್ಟೆ ಬಿರಿಯ ತಿನ್ನಕ್ಕೆ ಶ್ರಾದ್ಧಕ್ಕೆ ಹೊರಟುಬಿಟ್ರು’ ಎಂದು ಅತ್ತೆ ಭಟ್ಟರ ಮೇಲೆ ಸಿಡಿಮಿಡಿಗುಟ್ಟುತ್ತಿರುವಾಗ ಅವಳು ಮಾತ್ರ, ‘ಅಯ್ಯೋ ಬಿಡಿ ಅತ್ತೆ, ಏಕಾದಶಿ, ಅಮಾವಾಸ್ಯೆ ಎರಡೂ ಒಟ್ಟೊಟ್ಟಿಗೆ ಬಂದಿದೆ ಅಂತ ಅಂದುಕೊಂಡರಾಯ್ತು’ ಎಂದು ನಿರ್ಭಾವದಿಂದ ಹೇಳಬಲ್ಲಳು.

ಮೇಷ್ಟರು ಸೀತೆಗೆ ಕೊಡೆಂದು ಕೊಟ್ಟ ಪತ್ರವನ್ನು ನಾಗ ಅವಳ ಅತ್ತೆಗೆ ಸಿಗದಂತೆ ಮಾಡಿ ಅವಳ ಹಿತ ಕಾಯುತ್ತಾನೆ, ನಿಜ. ಆದರೆ ಪುಂಡಲೀಕನಿಗೆ ಅವನ ತಾಯಿಯಿಂದ ಬಂದ  ಪತ್ರವನ್ನು ಹರಿದು ಎಸೆಯುವಾಗ ಅವನ ಸಾದಾ ಸ್ವಾರ್ಥವಷ್ಟೇ ಕಾರಣ. ಮೇಲ್ಜಾತಿಯ ‘ಸಣ್ಣಮ್ಮ’ನ ಹಿತ ಕಾಯುವ ನಾಗನಿಗೆ ಮುಂದೆ ನಾಗರಾಜನಾದಾಗ ತನ್ನಂತೆಯೇ ವಂಚಿತನಾದ ಪುಂಡಲೀಕನನ್ನು ಕಾಯುವ ಇರಾದೆಯಿಲ್ಲ.

ಅದರ ಬಗ್ಗೆ ಕಾಸರವಳ್ಳಿಯವರು ವ್ಯಾಖ್ಯಾನಿಸುತ್ತಾ,

ತನಗೆ ಓಡಿ  ಹೋಗುವ ಇನ್ನೊಂದು ಅವಕಾಶ ಸಿಗಬಹುದು. ಆದರೆ ಸಣ್ಣಮ್ಮಂಗೆ ಖಂಡಿತ ಸಿಗುವುದಿಲ್ಲ ಎಂದು ನಾಗ ಪಬ್ಬುವಿಗೆ ತಿಳಿಸುತ್ತಾನಲ್ಲ, ಅದು ತ್ಯಾಗ ಅಲ್ಲ. ನಮ್ಮ ಶ್ರೇಣೀಕೃತ ಸಮಾಜದಲ್ಲಿ ಮೇಲ್ಜಾತಿಯವರ, ಮೇಲ್ವರ್ಗದವರ ಸಮಸ್ಯೆಗಳಿಗೆ ಎಲ್ಲ ವರ್ಗದ ಜನರೂ ಸ್ಪಂದಿಸುವುದೇ ಸಹಜ ಧರ್ಮ ಎಂದು ನಂಬಿಸುತ್ತಾ ಬಂದಿದ್ದು ಕಾರಣ. ಆದರೆ ಅವರ ಸಂಕಷ್ಟಗಳಿಗೆ ಸ್ಪಂದಿಸಿ, ಪ್ರತಿಕ್ರಿಯಿಸಿದಂತೆ ತುಳಿತಕ್ಕೊಳಗಾದವರ ಸಂಕಟಗಳಿಗೆ ಯಾರೂ ಪ್ರತಿಕ್ರಿಯಿಸುವುದಿಲ್ಲ. (ಪು. 275-6).

ಈ ಸತ್ಯ ಜೆಂಡರ್ ನೆಲೆಯಲ್ಲಿ ಸಹ ನಿಜವೇ. ಹೆಂಗಸರು ಗಂಡಸರ ಕಷ್ಟಕ್ಕೆ ಮರುಗುವಷ್ಟು ಇನ್ನೊಬ್ಬ ಹೆಣ್ಣಿಗೆ ಮರುಗಲಾರದಂತೆ ಕೌಟುಂಬಿಕ ವ್ಯವಸ್ಥೆ ಅವರನ್ನು ರೂಪಿಸಿದೆ.  ‘ಹೆಣ್ಣಿಗೆ ಹೆಣ್ಣೇ ಶತ್ರು’ ಎಂದು ಪಿತೃಶಾಹಿ ಷರಾ ಬರೆಯಲು ಅನುಕೂಲವಾಗುವುದು ಅದರಿಂದಲೇ.

ನಗರ ಎಂಬ ವ್ಯವಸ್ಥೆಯಲ್ಲಿ ಮೇಲೆ ತೋರುವಂತೆ ಜಾತಿ ತಾರತಮ್ಯ ಕಾಣಿಸದಿರಬಹುದು. ಆದರೆ ವರ್ಗವೂ ಸೇರಿದಂತೆ ಬೇರೆ ತಾರತಮ್ಯಗಳನ್ನು ಹುಟ್ಟಿ ಹಾಕುತ್ತದೆ. ಭಾಷೆ ಅದರಲ್ಲಿ ಒಂದು. ಪಿಂಕಿ ಕೂಡಾ ಪುಂಡನಿಗೆ ಇಂಗ್ಲೀಷ್ ಬರುವುದಿಲ್ಲ ಎಂದು ಗೇಲಿ ಮಾಡುತ್ತಾಳೆ. ಹಾಗೆಯೇ ಪಿಂಕಿಯ ತಾಯಿಗೆ ಇಂಗ್ಲೀಷ್ ಮೇಲಿರುವ ಹಿಡಿತ ನಾಗರಾಜನಿಗಿಲ್ಲ. ಅದನ್ನು ಅವನೂ ಬಲ್ಲ.

ಪ್ರಜ್ಞೆಯನ್ನು ಕಾಡುವ ಮಕ್ಕಳು 

‘ಅವಶೇಷ್’ ಎಂಬ ಕಿರುಚಿತ್ರವೂ ಸೇರಿದಂತೆ ಕಾಸರವಳ್ಳಿಯವರ 16 ಚಿತ್ರಗಳಲ್ಲಿ ಕೇವಲ ನಾಲ್ಕು ಚಿತ್ರಗಳಲ್ಲಿ ಮಾತ್ರ ಮಕ್ಕಳಿಲ್ಲ. ಅವರದ್ದೇ ಮಾತುಗಳಲ್ಲಿ, ‘ಮಕ್ಕಳ ಪಾತ್ರಗಳನ್ನು ಕಥಾನಕಕ್ಕೆ ಸೇರ್ಪಡೆ ಮಾಡುವುದಕ್ಕೆ ಒಂದು ವಿಶೇಷ ಕಾರಣವಿದೆ. ದೊಡ್ಡವರ ಲೆಕ್ಕಾಚಾರದ ಬದುಕಿಗೆ ಈ ಮಕ್ಕಳ ಮುಗ್ಧ ಕ್ರಿಯೆ-ಪ್ರತಿಕ್ರಿಯೆಗಳು ಒಂದು ಸೂಕ್ತ ಕೌಂಟರ್ ನರೇಟಿವ್ ಸೃಷ್ಟಿ ಮಾಡುತ್ತವೆ. ಅದು ಚಿತ್ರದ ಮೌಲ್ಯವನ್ನು ಹೆಚ್ಚಿಸುತ್ತದೆ.’ (ಪು. 288).

ಆದರೆ ಮನೆಯಲ್ಲಿ ಹೀಗೆ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳಬಹುದೇ? ಬಾಲ ಕಾರ್ಮಿಕರು, ಜೀತ ಇತ್ಯಾದಿಗಳ ವಿರುದ್ಧ ಕಾನೂನುಗಳಿಲ್ಲವೇ? ಯಾರು ಬೇಕಾದರೂ ಕರೆ ಮಾಡಲು ಸಹಾಯವಾಣಿಯೇ ಇದೆಯಲ್ಲ?

ಲೀ ಟಕ್ಕರ್ ಎಂಬ ಸಮಾಜವಿಜ್ಞಾನಿಯ Child Slaves in Modern India ಎಂಬ ಲೇಖನ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ. ಅದರ ಪ್ರಕಾರ, ಜಾತಿ ಮತ್ತು ಜೀತಕ್ಕೆ ಅವಿನಾವ ಸಂಬಂಧವಿದೆ. ಜೀತ ಎನ್ನುವುದು ಸಾವಿರದ ಐನೂರು ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಸುಮಾರು ಅರವತ್ತೈದು ಮಿಲಿಯನ್ ಮಂದಿ ಅದರ ಹಿಡಿತದಲ್ಲಿ ಇದ್ದಾರೆ. ಅದರಲ್ಲಿ ಶೇಕಡಾ ಎಂಬತ್ತಕ್ಕಿಂತಲೂ ಹೆಚ್ಚು ಮಂದಿ ದಲಿತರು, ಆದಿವಾಸಿ ಸಮುದಾಯಕ್ಕೆ ಸೇರಿದವರು,

ಯಾವುದೋ ಸಾಲವನ್ನು ತೀರಿಸಲು ಮಕ್ಕಳ ದುಡಿಮೆಯನ್ನು ಒತ್ತೆಯಿಡುವುದು ಭಾರತದಲ್ಲಿಯೂ ಸಹ ತಾತ್ವಿಕವಾಗಿ ಕಾನೂನುಬದ್ಧವಲ್ಲ, ನಿಜ. ತೊಂಬತ್ತರ ದಶಕದಲ್ಲಿ ನಡೆದ ಅಧ್ಯಯನಗಳು ಬಾಲಕಾರ್ಮಿಕರ ಸಂಖ್ಯೆಯನ್ನು ಹದಿನೈದು ಮಿಲಿಯನ್ನುಗಳಿಗಿಂತಲೂ ಹೆಚ್ಚು ಎಂದು ಅಂದಾಜಿಸಿದ್ದವು. ಮಕ್ಕಳ ಹಕ್ಕು ಎನ್ನುವುದು ಇವತ್ತಿಗೂ ಒಂದು ಜೋಕ್!

ಮೇಲ್ನೋಟಕ್ಕೇ ಸ್ಪಷ್ಟವಾಗುವಂತೆ ಶಿಕ್ಷಣವನ್ನು ಕಡ್ಡಾಯಗೊಳಿಸದೆ ಮಕ್ಕಳ ದುಡಿಮೆ ಎಂಬ ಅನಿಷ್ಟವನ್ನು ತೊಡೆದು ಹಾಕಲು ಸಾಧ್ಯವೇ ಇಲ್ಲ. ಭಾರತೀಯ ಸಂವಿಧಾನ ಹದಿನಾಲ್ಕು ವರ್ಷದ ತನಕ ಮಕ್ಕಳಿಗೆ ಶಿಕ್ಷಣವನ್ನು ಮುಫತ್ತಾಗಿ ಪಡೆಯುವ ಹಕ್ಕಿದೆ, ಪ್ರಭುತ್ವಗಳು ಅದಕ್ಕೆ ಬದ್ಧವಾಗಿರಬೇಕು ಎಂದು ವಿಧಿಸಿತ್ತು. ತೊಂಬತ್ತರ ದಶಕದಲ್ಲಿ ನಡೆದ ಅಧ್ಯಯನಗಳ ಪ್ರಕಾರ, ಭಾರತದ ಸುಮಾರು ಅರ್ಧದಷ್ಟು ಮಕ್ಕಳು ಮಾತ್ರ ಶಾಲೆಗೆ ಹೋಗುತ್ತಿದ್ದರು. ಒಟ್ಟು ದೇಶದ ಅಕ್ಷರಸ್ಥರು ಶೇಕಡಾ 41ರಷ್ಟು ಮಾತ್ರ ಇದ್ದರು. ಹಳ್ಳಿಗಳಲ್ಲಿ ಅದು ಇನ್ನೂ ಕಮ್ಮಿ. ಸರಕಾರವೇ ಆಯೋಜಿಸಿದ1995ರ ಒಂದು ಅಧ್ಯಯನ  ಭಾರತೀಯ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಹೇಳಲಾರದಷ್ಟು ಶೋಚನೀಯವಾಗಿದೆ ಎಂದು ಸ್ಪಷ್ಟವಾಗಿ ಘೋಷಿಸಿತ್ತು.

ಮಕ್ಕಳು ಕೆಲಸಕ್ಕೆ ವಯಸ್ಕರಿಗಿಂತ ಹೆಚ್ಚು ಯೋಗ್ಯರು ಎಂಬ ವಾದವೇ ವಿಚಿತ್ರ. ಹೇಳಿದ ಮಾತು ಕೇಳುತ್ತಾರೆ, ಹೆದರಿಸಿ ಶಿಕ್ಷಿಸುವುದು ಸುಲಭ, ಅವರಿಗೆ ತಮ್ಮ ಹಕ್ಕುಗಳ ಅರಿವಿಲ್ಲ, ಒಟ್ಟಾಗಿ ಪ್ರತಿಭಟಿಸುವ ಅವಕಾಶವಿಲ್ಲ, ಇತ್ಯಾದಿಗಳು ನಿಜವಾದ ಕಾರಣಗಳು. ಜೊತೆಗೆ ಅವರಿಗೆ ಕನಿಷ್ಠ ವೇತನ ಎಂಬ ಕಾನೂನೂ ಇಲ್ಲ. ದೊಡ್ಡವರು ದುಡಿಯುವಷ್ಟೇ ಕಾಲ ದುಡಿದರೂ ಸಹ ಅವರಿಗೆ ಸಿಗುವ ಪ್ರತಿಫಲ ಮೂರನೆಯ ಒಂದಕ್ಕಿಂತಲೂ ಕಮ್ಮಿ. ಕೆಲವು ವೃತ್ತಿಗಳಿಗಂತೂ (ಉದಾ. ಉಣ್ಣೆ, ರೇಷ್ಮೆ ಎಳೆ ತೆಗೆಯುವ) ಮಕ್ಕಳ ಎಳೆಯ ಕೈಬೆರಳುಗಳೇ ಸೂಕ್ತ ಎಂಬ ವಾದವೂ ಇದೆ.

1933ರಷ್ಟು ಹಿಂದೆಯೇ ಬ್ರಿಟಿಷ್ ಆಡಳಿತ ಮಕ್ಕಳ ದುಡಿಮೆಯನ್ನು ನಿಷೇಧಿಸಿತ್ತು. ಸ್ವತಂತ್ರ ಭಾರತದ 1986ರ ಮಕ್ಕಳ ದುಡಿಮೆ ನಿಷೇಧ ಮತ್ತು ನಿಯಂತ್ರಣ ಕಾಯಿದೆ ಹಲವಾರು ನಿಯಮಗಳನ್ನು ಜಾರಿ ಮಾಡಿರುವುದೂ ನಿಜ. ಆದರೆ ಯಾವ ವಯಸ್ಸಿನ ತನಕ ಮಕ್ಕಳು ಕಾನೂನಿನ ಕಣ್ಣಲ್ಲಿ ಮಕ್ಕಳಾಗಿರುತ್ತಾರೆ ಎಂಬ ಸ್ಪಷ್ಟನೆಯಿಲ್ಲ.

ಹಾಗೆಯೇ ಮಕ್ಕಳ ದುಡಿಮೆ ನಿಷೇಧ ಎಂಬ ಸಮಗ್ರವಾದ ಕಾನೂನೂ ಸಹ ಇಲ್ಲ. ಅದರಲ್ಲಿ ‘ಆದರೆ’, ಎಂಬ  ವಿನಾಯತಿ  ನೂರೆಂಟು ರೀತಿಯನ್ನು ಹೊತ್ತು ನಿಂತಿರುವುದರಿಂದ ದುಡಿಯುವ ಮಕ್ಕಳು ಸ್ವತಂತ್ರ ಭಾರತದಲ್ಲಿ ಎಲ್ಲೆಲ್ಲೂ ಕಾಣಸಿಗುತ್ತಾರೆ. ತಮ್ಮ ಮಕ್ಕಳನ್ನು ಮಾತ್ರ ಮುಚ್ಚಟೆಯಾಗಿ ನೋಡಿಕೊಳ್ಳುವ ಮಧ್ಯಮವರ್ಗಕ್ಕೆ ಅದರಿಂದ ತಪ್ಪಿತಸ್ಥ ಪ್ರಜ್ಞೆಯೇನೂ ಮೂಡುವುದಿಲ್ಲ.  ‘ಅಲ್ಲಿಗೆ ಹೋಗಲಾರೆ’ ಕಥನದಲ್ಲಿ ಬರುವ ಎರಡು ಮಧ್ಯಮವರ್ಗದ ಕುಟುಂಬಗಳ ಉದಾಹರಣೆಯೇ ಸಾಕು.

ಅಷ್ಟೇ ಅಲ್ಲ, ಸ್ವತಂತ್ರ ಭಾರತದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜೀತ ಪದ್ಧತಿ ನಿಷೇಧ ಎಂಬ ಕಾಯಿದೆ ಮಕ್ಕಳನ್ನು ಮತ್ತು ವಯಸ್ಕರನ್ನು ಸಹ ಬಲವಂತದ ದುಡಿಮೆಯಿಂದ ತಾತ್ವಿಕವಾಗಿ ಪಾರು ಮಾಡಬೇಕೇನೋ ನಿಜ. ಅಕಸ್ಮಾತ್ ಪಾರು ಮಾಡಿದರೂ ಸರಕಾರ ಅವರ ಯೋಗಕ್ಷೇಮಕ್ಕೆ ಬದ್ಧವಾಗಿರಬೇಕು ಎಂದು ಸಹ ಕಾನೂನು ಹೇಳುತ್ತದೆ. ಕೇಳುವವರಾರು?

ಬಹುಶಃ ಜಗತ್ತಿನಲ್ಲಿ ಅತಿ ಹೆಚ್ಚಿನ ಕಾಯಿದೆಗಳನ್ನು ಹೊಂದಿದ್ದು ಅತಿ ಹೆಚ್ಚಿನ ಮಟ್ಟದಲ್ಲಿ ಅದನ್ನು ರಾಜಾರೋಷವಾಗಿ ಇಲ್ಲಾ ಸುತ್ತಿ ಬಳಸಿ ಉಲ್ಲಂಘಿಸುವ ಪ್ರವೃತ್ತಿಗೆ ಭಾರತವನ್ನು ಹೆಸರಿಸಬಹುದೇನೋ. ಉಲ್ಲಂಘನೆ ಆದರೂ ಶಿಕ್ಷೆ ಮಾತ್ರ ಹೆಚ್ಚಿನಂಶ  ‘ನೀ ಹೊಡೆದಂತೆ ಮಾಡು, ನಾ ಅತ್ತಂತೆ ಮಾಡುತ್ತೇನೆ’ ಎಂಬ ರೀತಿಯಲ್ಲೇ ಇರುತ್ತದೆ.

1976ರ ಜೀತ ನಿಷೇಧ ಕಾಯಿದೆ ಯಾರದೇ ದುಡಿಮೆಯನ್ನು  ಅವರ ಇಚ್ಛೆಗೆ ವಿರುದ್ಧವಾಗಿ ಬಳಸಿಕೊಂಡಲ್ಲಿ ಮೂರು ವರುಷ ಜೈಲು ಮತ್ತು ಎರಡು ಸಾವಿರ ರೂಪಾಯಿಯ ದಂಡದ ಶಿಕ್ಷೆಯನ್ನು ಘೋಷಿಸುತ್ತದೆ. ಮಕ್ಕಳ ದುಡಿಮೆ ನಿಷೇಧ ಮತ್ತು ನಿಯಂತ್ರಣ (1986)  ಕಾಯಿದೆ ಮಕ್ಕಳ ದುಡಿಮೆಯನ್ನೇ ನಿಷೇಧಿಸುವುದಿಲ್ಲ, ಅಥವಾ ಕನಿಷ್ಠ ವಯಸ್ಸನ್ನು ಸಹ ಉಲ್ಲೇಖಿಸುವುದಿಲ್ಲ. ಬದಲಿಗೆ ಅವರು ದುಡಿಯಬೇಕಾದ ಅವಧಿಯನ್ನು ಸೀಮಿತಗೊಳಿಸಿ ಮತ್ತು ದುಡಿಮೆಯ ಪರಿಸರ ಹೇಗಿರಬೇಕೆಂಬುದನ್ನು (ಉದಾ. ಕೆಲವು ಅಪಾಯದಿಂದ ಕೂಡಿದ ಸುಮಾರು ಇಪ್ಪತ್ತೈದರಷ್ಟು ಕೈಗಾರಿಕೆಗಳು) ನಿರ್ದಿಷ್ಟಗೊಳಿಸುತ್ತದೆ.

ಜಾತಿಬಡತನ ಎಂಬ ಅವಳಿ

ಕುಮುದ್ ಪಾಂಡ್ವೆ ಎಂಬ ಸಂಸ್ಕೃತ ಪ್ರೊಫೆಸರ್ ತಮ್ಮ The Story of My Sanskrit ಕೃತಿಯಲ್ಲಿ ಬರುವ  ‘ನನ್ನ ಜಾತಿಯನ್ನು ಎಷ್ಟು ಮರೆಯಲು ಪ್ರಯತ್ನಿಸಿದರೂ ಸಾಧ್ಯವೇ ಆಗುವುದಿಲ್ಲ’ ಎಂಬ ಸಾಲು ‘ಸಂಸ್ಕಾರ’ದ ‘ನಾರಣಪ್ಪ ಬ್ರಾಹ್ಮಣಿಕೆಯನ್ನು ಬಿಟ್ಟರೂ ಬ್ರಾಹ್ಮಣಿಕೆ ನಾರಣಪ್ಪನನ್ನು ಬಿಡುವುದಿಲ್ಲ’ ಎಂಬ ಸಾಲನ್ನು ನೆನಪಿಸುವುದು ಸಹಜವೇ. ಆಧುನಿಕದತ್ತ ಹೊರಳಿದ ಅಂಚಿನ ಸಮುದಾಯಗಳು ತಮ್ಮ ಜಾತಿಯನ್ನು ಮರೆಯಲು ಪ್ರಯತ್ನಿಸುವುದು ಆಧುನಿಕವಾಗುವ ಪ್ರಕ್ರಿಯೆಯ ಒಂದು ಭಾಗವೇ ಆಗಿರುತ್ತದೆ ಎನ್ನುವುದು ಒಂದು ಸಾಮಾಜಿಕ ದುರಂತ.  ಎಂ ಎನ್  ಶ್ರೀನಿವಾಸರ ‘ಸಂಸ್ಕೃತೀಕರಣ’ ಪರಿಕಲ್ಪನೆ ಸಹ ನೆನಪಿಗೆ ಬರಬಹುದು. ಹಾಗೆಯೇ ಡಿ. ಆರ್. ನಾಗರಾಜರ ‘ Flaming Feet’ ಕೃತಿಯಲ್ಲಿ ಹೇಳಿದಂತೆ ತನ್ನ ಜಾತಿಯನ್ನು ನೆನಪಿಸುವ ಗತದ ಜೊತೆ ಎಲ್ಲ ಸಂಬಂಧವನ್ನು ಕಡಿದುಕೊಳ್ಳುವ ಮತ್ತು ನೆನಪಿನಲ್ಲಿ ಗತವನ್ನೇ ಬದಲಾಯಿಸುವ ಪ್ರಜ್ಞಾಪೂರ್ವಕ ಪ್ರಯತ್ನವೂ ಅಲ್ಲಿ ನಡೆದಿರುತ್ತದೆ.

ಎಂ. ಎಸ್. ಎಸ್. ಪಾಂಡ್ಯನ್ ತಮ್ಮ ಒಂದು ಲೇಖನದಲ್ಲಿ ನಾನಾಸಾಹೇಬ್ ವಾಂಖೆಡೆ ಅವರ ಬಗ್ಗೆ ಆಗ ನಾಗಪುರದಲ್ಲಿ ಡೆಪ್ಯುಟಿ ಕೌಂಟಿ ಕಮಿಷನರ್ ಆಗಿದ್ದ ವಸಂತ್ ಮೂನ್ ಅವರ ಮಾತುಗಳನ್ನು ಉಲ್ಲೇಖಿಸುತ್ತಾರೆ: ‘ನಾವು ನಿವೃತ್ತ ಡೆಪ್ಯೂಟಿ ಕೌಂಟಿ ಕಮಿಷನರ್ ವಾಂಖೆಡೆ ಅವರ ಮನೆಗೆ ಹೋದೆವು…. ಅವರೊಬ್ಬ ಅತ್ಯಂತ ಸಹೃದಯ ವ್ಯಕ್ತಿ. ಆದರೆ ತಮ್ಮ ಸಮುದಾಯದೊಂದಿಗೆ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿದ್ದವರು.  ಅವರ ಸಹೋದ್ಯೋಗಿಯಾದ ನನ್ನ  ಜೊತೆ ಸಹ ಅವರು ಬೆರೆಯುತ್ತಿರಲಿಲ್ಲ.’

ಮೂನ್ ಸಹ ಮಹರ್ ಸಮುದಾಯಕ್ಕೆ ಸೇರಿದವರು. ಅವರ ಜೊತೆ ಒಮ್ಮೆ ವಾಂಖೆಡೆಯವರು ತಮ್ಮಲ್ಲಿದ್ದ ಬುದ್ಧ, ಬಾಬಾಸಾಹೇಬರ ಬಗೆಗಿನ  ಪುಸ್ತಕಗಳನ್ನು ಬೇರೆಯವರು ನೋಡಿದರೆ ಕಷ್ಟ ಎಂದು ಹೇಳಿದ್ದರಂತೆ. ಆದರೆ ಅಂಬೇಡ್ಕರರ ಸಾವಿನ ಸುದ್ದಿಯನ್ನು ಕೇಳಿದ ತಕ್ಷಣ  ವಾಂಖೆಡೆಯವರಿಗೆ ಕಣ್ಣೀರು ದಳದಳನೆ ಇಳಿದಿತ್ತು ಎನ್ನುವುದನ್ನು ಮೂನ್ ನಿರೂಪಿಸುತ್ತಾರೆ. ಪಾಂಡ್ಯನ್ ಅವರು ಗುರುತಿಸುವಂತೆ, ‘ಸಾರ್ವಜನಿಕದಲ್ಲಿ ತಮ್ಮ ಜಾತಿಯ ಪ್ರಸ್ತಾಪ ಇರಬಾರದು, ಆದರೆ ಖಾಸಗಿಯಾಗಿ ಬೇಕಿದ್ದರೆ ಕಣ್ಣೀರು ಸುರಿಸಬಹುದು. ಆಧುನಿಕ ಎನ್ನುವುದು ಕೆಳಜಾತಿಯವರಿಗೆ ಕೊಟ್ಟಿರುವ ಸವಲತ್ತು ಇದೇ.’

ಮೇಲ್ಜಾತಿಯ ಪ್ರತಿಷ್ಠಿತರು  ಸಹ ತಮ್ಮ ಜಾತಿಯನ್ನು ಹೇಳಿಕೊಳ್ಳದಿರುವ ನಿದರ್ಶನಗಳು ಇವೆಯಲ್ಲ ಎನ್ನುವುದು ವಿತಂಡ ವಾದವಾಗಬಹುದು. ಅವರು ಹೇಳಿಕೊಳ್ಳಬೇಕಿಲ್ಲ.  ಹತ್ತಾರು ರೀತಿಯಲ್ಲಿ ತಮ್ಮ ಮೇಲ್ತನವನ್ನು ಸೂಚಿಸಬಹುದು. ಅದನ್ನು ‘transcoding’ ಅಥವಾ ‘ಸಂಕೇತಾಂತೀಕರಣ’ ಎಂದು ಕರೆಯಲಾಗುತ್ತದೆ.

ಪಾಂಡ್ಯನ್ ಅವರು ಆರ್. ಕೆ. ನಾರಾಯಣರ ಆತ್ಮಕತೆಯನ್ನು ಅದಕ್ಕೆ ಉದಾಹರಣೆಯಾಗಿ ಬಳಸುತ್ತಾರೆ. ಅದರಲ್ಲಿ ಕೇವಲ ಎರಡು ಕಡೆ ಅವರ ಜಾತಿ ಉಲ್ಲೇಖವಾಗುತ್ತದೆ. 1910ರ ದಶಕದಲ್ಲಿ ಮದ್ರಾಸಿನ ಮಿಷನರಿ ಸ್ಕೂಲಿನಲ್ಲಿ ಅವರು ಓದುತ್ತಿದ್ದಾಗ ಅಲ್ಲಿದ್ದ ಒಬ್ಬನೇ ಒಬ್ಬ ಬ್ರಾಹ್ಮಣ ಹುಡುಗ ತಾನು ಎಂದು ಹೇಳಿಕೊಳ್ಳುತ್ತಾರೆ. ಇನ್ನೊಂದು ಮೈಸೂರಿನಲ್ಲಿ  The Justice ಎಂಬ ಬ್ರಾಹ್ಮಣ-ವಿರೋಧಿ ಪತ್ರಿಕೆಗೆ ಬ್ರಾಹ್ಮಣನಾಗಿದ್ದರೂ ಸಹ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ಸಂದರ್ಭವನ್ನು ಉಲ್ಲೇಖಿಸುವಾಗ. ಆದರೆ ಆತ್ಮಕತೆಯುದ್ದಕ್ಕೂ ಜಾತಿ ಹಲವಾರು ರೂಪದಲ್ಲಿ ಇದ್ದೇ ಇದೆ ಎಂಬ ಸತ್ಯವನ್ನು ಮರೆಯಲಾಗುವುದಿಲ್ಲ. ಉದಾಹರಣೆಗೆ ಮೈಸೂರಿನಲ್ಲಿ ತಮ್ಮ ಕುಟುಂಬಕ್ಕೆ ತಕ್ಕ ಮನೆಯ ಹುಡುಕಾಟದಲ್ಲಿ ಇದ್ದ ಘಟನೆಯ ಬಗ್ಗೆ ನಾರಾಯಣರು ಬರೆಯುತ್ತಾ,

ನಮ್ಮ ಕುಟುಂಬಕ್ಕೆ ತಕ್ಕ ಮನೆ ಸಿಕ್ಕುವುದು ಕಷ್ಟವೇ ಆಗಿತ್ತು. ಮೂವರೂ ಅಣ್ಣತಮ್ಮಂದಿರಿಗೆ ಮತ್ತು ಅವರ ಕುಟುಂಬಗಳಿಗೆ ಪ್ರತ್ಯೇಕ ಕೊಠಡಿಗಳು; ತಾಯಿಯವರಿಗೆ ಇನ್ನೊಂದು; ನಮ್ಮ (ಗ್ರೇಟ್ ಡೇನ್ ಜಾತಿಯ) ನಾಯಿ ಶೀಬಾಗೆ ಹೊರಗೆ ಮಾಂಸ ಬೇಯಿಸುವಾಗ ಆ ಮಡಕೆಯಿಂದ ಬರುವ  ಹೊಗೆ ಕಟ್ಟುನಿಟ್ಟಾದ  ಸಸ್ಯಾಹಾರಿ ಮನೆಯ ಒಳಗೆ ಹರಡಿ ಮಡಿಯನ್ನು ಕೆಡಿಸದಿರುವ ಹಾಗೊಂದು ಹರವಾದ  ಜಾಗ; ಮತ್ತೆ, ಅಲ್ಲಿಗೆ ಹೋಗಿ ‘ಮಟನ್’ ಬೇಯಿಸುವ ನಮ್ಮ ವಯಸ್ಸಾದ ಆಳಿಗೆ ವಾಸಿಸುವ ಒಂದು ಪ್ರತ್ಯೇಕ ಜಾಗ …’ (ಪಾಂಡ್ಯನ್ ಅವರು ಸ್ಪಷ್ಟಪಡಿಸುವಂತೆ ಇಲ್ಲಿ ‘ಬೀಫ್’ ಬದಲಾಗಿ ‘ಮಟನ್’ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಉಪಯೋಗಿಸಲಾಗಿದೆ.)

ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ‘ಇಲ್ಲಿರಲಾರೆ… ಅಲ್ಲಿಗೆ ಹೋಗಲಾರೆ’, ಭಾರತದಲ್ಲಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಾಗನ ಪಾತ್ರ ನಿರ್ವಹಿಸಿದ ದೃಶಾ ಕೊಡಗು ಶ್ರೇಷ್ಠ ಬಾಲನಟ ಪ್ರಶಸ್ತಿಯನ್ನು ಗೆದ್ದುಕೊಂಡದ್ದು ಅವುಗಳಲ್ಲಿ ಒಂದು. ಮಕ್ಕಳನ್ನು ನೋಡಿದಾಗೆಲ್ಲ ನನಗೆ ಹಾಯಿಕುಗಳು ನೆನಪಾಗುತ್ತವೆ. ಎರಡು ಸಿನಿಮಾತ್ಮಕ ಹಾಯಿಕುಗಳನ್ನು ಒಳಗೊಂಡ ಈ ಚಿತ್ರದ ಮಕ್ಕಳು, ವಿಶೇಷವಾಗಿ ಪುಂಡಲೀಕ, ತುಳಸಿಯರು ನನ್ನ ಕಣ್ಣಲ್ಲಿ ನೀರು ಬರಿಸಿದ್ದಂತೂ ನಿಜ.

(ಲೇಖಕಿಯ ಮುಂಬರುವ ರಾಷ್ಟ್ರಜೆಂಡರ್: ಗಿರೀಶ್ ಕಾಸರವಳ್ಳಿಯರ ಚಿತ್ರಗಳಲ್ಲಿ ಎಂಬ ಪುಸ್ತಕದಿಂದ ಆಯ್ದ ಭಾಗ)
ಬೌದ್ಧಿಕ ಋಣ
1, ಗೋಪಾಲಕೃಷ್ಣ ಪೈ ಮತ್ತು ಗಿರೀಶ್ ಕಾಸರವಳ್ಳಿ, ಬಿಂಬ ಬಿಂಬನ, ಬೆಂಗಳೂರು: ವೀರಲೋಕ, 2024.
  1. ’Stepping Outside History: New Dalit Writings from Tamil Nadu, in Partha Chatterjee, Wages of Freedom: 50 Years of the Indian Nation-State, OUP: New Delhi, 1998, pp. 292-309).
  2. M.S.S. Pandian, ‘One Step Outside Modernity’, Economic and Political Weekly, 37:18 (May 4-10, 2002), pp. 1735-1741.
  3. D.R. Nagaraj, The Flaming Feet and Other Essays: The Dalit Movement in India, Bangalore: ICRA, 1993.
  4. Lee Tucker, ‘Child Slaves in Modern India: The Bonded Labor Problem’, Human Rights Quarterly, 19:3 (August, 1997), pp. 572-629.

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದ ಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ರೂಮಿಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು’ ಬಿಡುಗಡೆಗೆ ಸಿದ್ಧವಿದೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ