ನಾವಿಷ್ಟಪಟ್ಟ ಸ್ಥಳಕ್ಕೆ ಆದಾಗಲೊಮ್ಮೆ ಭೇಟಿಕೊಡುತ್ತೇವೆ ಅನ್ನೋದು ನಿಜ. ಆದ್ರೆ ಆ ಸ್ಥಳ ಮೊದಲ ಸಲ ಹೋದಾಗ ಇದ್ದಷ್ಟೇ ಚಂದವಾಗಿ ಇದ್ಯ? ಕಳೆದ ಸಲ ಹೋದಾಗ ಅದರ ಪರಿಸ್ಥಿತಿ ಏನಾಗಿತ್ತು? ಒಮ್ಮೆ ಎರಡೂ ಪ್ರವಾಸವನ್ನು ನೆನಪಿಗೆ ತಂದುಕೊಳ್ಳಿ. ಮೊದಲಿಗೆ ಹೋದಾಗ ಆಗಿದ್ದ ಸಂತೋಷ ಮತ್ತೆಮತ್ತೆ ಹೋದಾಗಲೂ ಘಟಿಸುತ್ತಿದೆಯೆಂದರೆ ಆ ಸ್ಥಳವಿನ್ನೂ ಮನುಷ್ಯನ ಅಟ್ಟಹಾಸಕ್ಕೆ ಸಿಕ್ಕಿಹಾಕಿಕೊಂಡಿಲ್ಲ ಎಂದರ್ಥ. ಆದ್ರೆ ಹಾಗೆ ಯಾವುದಾದ್ರೂ ಸ್ಥಳ ಕೇವಲ ಹತ್ತು ವರ್ಷ ಹಿಂದಿದ್ದಷ್ಟೇ ಪ್ರಶಾಂತವಾಗಿ, ಸ್ವಚ್ಛವಾಗಿ, ಚಂದದಿಂದ ಉಳಿದುಕೊಂಡಿರೋದು ಸಾಧ್ಯವೇ ಇಲ್ಲ ಅನ್ನಬಹುದು.
ರೂಪಶ್ರೀ ಕಲ್ಲಿಗನೂರ್ ಅಂಕಣ

 

ಇವತ್ತು ವಿಶ್ವ ಪರಿಸರ ದಿನ. ನಾವೆಲ್ಲರೂ ಸರಿಯಾಗಿ ಪ್ರಕೃತಿಯೊಟ್ಟಿಗೆ ಹೊಂದಿಕೊಂಡು ಬದುಕುತ್ತಿದ್ದರೆ, ಈ ಹೊತ್ತಿಗಾಗಲೇ ಮಾನ್ಸೂನ್ ಶುರುವಾಗಿರಬೇಕಿತ್ತು. ಮಳೆ ಪ್ರಿಯರು(pluviophile) ಮಳೆ ಬಂದಾಗಲೆಲ್ಲ, ಮನೆಯ ಹೊರಗೆ ಬಂದು, ಮಳೆಯ ಕುರಿತ ಹಾಡುಗಳನ್ನ ಹಾಡುತ್ತ, ಮೈ ತೋಯಿಸಿಕೊಂಡು ಖುಷಿಪಡಬಹುದಿತ್ತು. ಹಾವು, ಕಪ್ಪೆ ಫೋಟೋ ತೆಗೆಯುವ ಉತ್ಸಾಹಿಗಳು, ಗಮ್ ಬೂಟು, ಪಾಂಚೋಗಳನ್ನ ಏರಿಸಿಕೊಂಡು, ಧೋ ಅಂತ ಸುರಿಯೋ ಮಳೆಯನ್ನ ಲೆಕ್ಕಿಸದೇ, ಕಪ್ಪೆಗಳಿಗಾಗಿಯೋ ಅವುಗಳ ಮೊಟ್ಟೆಗಳಿಗಾಗಿಯೋ ಕಾಡುಮೇಡಿನಲ್ಲಿ ಅಂಡಲೆಯುತ್ತ ಪ್ರಕೃತಿಯ ಸಾಂಗತ್ಯವನ್ನು ಸಂಭ್ರಮಿಸಬೇಕಾಗಿತ್ತು. ಆದರೆ ಹಾಗಾಗುತ್ತಿಲ್ಲ. ಮಾನ್ಸೂನ್ ಬರೋದು ಈ ಸಲ ತಡವಂತೆ. ವರ್ಷಕಾಲದಿಂದ ಭೂಮಿಯೊಳಗೆ ಕೂತ ಕಪ್ಪೆಗಾಗಲೀ, ಅಲ್ಲೆಲ್ಲೋ ಮೂಲೆಯಲ್ಲಿ ಧೂಳು ಮೆಲ್ಲುತ್ತಾ, ಮಳೆಗೆ ಕಾಯುತ್ತಾ ಕೂತಿರೋ ಛತ್ರಿಗಳಿಗಾಗಲೀ ಇದನ್ನೆಲ್ಲ ಹೇಗೆ ಹೇಳೋದು? ಈ ಹೊತ್ತಿಗೆ ಮಳೆಯೂರ ಹಾದಿ ಹಿಡಿಯಬೇಕಿದ್ದ ಮಳೆಹುಚ್ಚರೆಲ್ಲ, ಮನೆಯಲ್ಲೋ ಆಫೀಸಿನಲ್ಲೋ, ಮನೆಯಲ್ಲೋ ಕೀಬೋರ್ಡ್ ಕುಟ್ಟುತ್ತ ಕುಳಿತಿದ್ದಾರೆ. ಮತ್ತೆ ಸಮಯ ಸಿಕ್ಕಾಗಲೊಮ್ಮೆ, ನೆನಪಾದಾಗಲೊಮ್ಮೆ ಕಳೆದವರ್ಷದ ಪ್ರವಾಸದ ಫೋಟೋಗಳನ್ನು ನೋಡುತ್ತ ದಿನಗಳನ್ನು ತಳ್ಳುತ್ತಿದ್ದಾರೆ….

********

ಒಮ್ಮೆ ನಾವೆಲ್ಲೋ ಪ್ರವಾಸಕ್ಕೆ ಅಂತ ಹೋಗಿರ್ತೀವಿ. ಮೊದಲ ಸಲ ನೋಡುತ್ತಿರೋ ಒಂದು ಅದ್ಭುತವಾದ ಜಾಗ. ಅಲ್ಲಿಗೆ ಕಾಲಿಟ್ಟ ಕ್ಷಣದಿಂದ ಅದು ನಮ್ಮನ್ನ ಅದೆಷ್ಟು ತೀವ್ರವಾಗಿ ಆಕ್ರಮಿಸಿಕೊಂಡುಬಿಟ್ಟಿರುತ್ತೆ ಅಂದ್ರೆ, ಎದೆಯ ಹತ್ತು ಹಲವು ನೋವುಗಳು, ನಾವಾಗಲೇ ನೆನಪು ಮಾಡಿಕೊಳ್ಳುವವರೆಗೂ ಅವು ನಮಗೆ ನೆನಪಾಗೋದೇ ಇಲ್ಲ. ಅದರ ಬದಲಾಗಿ ಅಯ್ಯೋ ಇದನ್ನು ಇಷ್ಟು ವರ್ಷ ಹೇಗೆ ನೋಡದೇ ಇದ್ದೆ? ಅಂತನ್ನಿಸಬಹುದು ಅಥವಾ ಅಬ್ಬಾ ಸಧ್ಯ ಜನ್ಮದಲ್ಲಿ ಇಂಥದ್ದೊಂದು ಜಾಗಾನ ನೋಡಿದೆನಲ್ಲ! ಅನ್ನೋ ನೆಮ್ಮದಿಯ ಅಲೆ ನಿಮ್ಮ ಮನಸ್ಸಲ್ಲಿ ತಂಪಗೆ ತೇಲಬಹುದು. ಇಂಥ ಅನುಭೂತಿಯನ್ನು ಪ್ರಕೃತಿ ಅಲ್ಲದೇ ನಮಗಿನ್ಯಾರು ಕೊಡಲು ಸಾಧ್ಯ? ಆದರೆ ಮನುಷ್ಯ ಕೃತಘ್ಞ ಜೀವಿ. ಹಾಗೆ ಅಷ್ಟು ಹೊತ್ತೂ ನಮ್ಮನ್ನ ಚಿಂತೆಯ-ಚಿತೆಯ ಮೇಲೆ ಉರಿಯದಂತೆ ಕಾಯ್ದ, ಮತ್ತು ದಿನನಿತ್ಯದ ಬದುಕಿಗೆ ಮೂಲಾಧಾರವಾಗಿರೋ ಪ್ರಕೃತಿಯನ್ನೇ ಇಂಚಿಂಚಾಗಿ ಕೊಲ್ಲುತ್ತ ಬರುತ್ತಿದ್ದೇವೆ.

ನಾವಿಷ್ಟಪಟ್ಟ ಸ್ಥಳಕ್ಕೆ ಆದಾಗಲೊಮ್ಮೆ ಭೇಟಿಕೊಡುತ್ತೇವೆ ಅನ್ನೋದು ನಿಜ. ಆದ್ರೆ ಆ ಸ್ಥಳ ಮೊದಲ ಸಲ ಹೋದಾಗ ಇದ್ದಷ್ಟೇ ಚಂದವಾಗಿ ಇದ್ಯ? ಕಳೆದ ಸಲ ಹೋದಾಗ ಅದರ ಪರಿಸ್ಥಿತಿ ಏನಾಗಿತ್ತು? ಒಮ್ಮೆ ಎರಡೂ ಪ್ರವಾಸವನ್ನು ನೆನಪಿಗೆ ತಂದುಕೊಳ್ಳಿ. ಮೊದಲಿಗೆ ಹೋದಾಗ ಆಗಿದ್ದ ಸಂತೋಷ ಮತ್ತೆಮತ್ತೆ ಹೋದಾಗಲೂ ಘಟಿಸುತ್ತಿದೆಯೆಂದರೆ ಆ ಸ್ಥಳವಿನ್ನೂ ಮನುಷ್ಯನ ಅಟ್ಟಹಾಸಕ್ಕೆ ಸಿಕ್ಕಿಹಾಕಿಕೊಂಡಿಲ್ಲ ಎಂದರ್ಥ. ಆದ್ರೆ ಹಾಗೆ ಯಾವುದಾದ್ರೂ ಸ್ಥಳ ಕೇವಲ ಹತ್ತು ವರ್ಷ ಹಿಂದಿದ್ದಷ್ಟೇ ಪ್ರಶಾಂತವಾಗಿ, ಸ್ವಚ್ಛವಾಗಿ, ಚಂದದಿಂದ ಉಳಿದುಕೊಂಡಿರೋದು ಸಾಧ್ಯವೇ ಇಲ್ಲ ಅನ್ನಬಹುದು.

ಕೆಲವೊಂದು ಸ್ಥಳಗಳಿಗೆ ಹೋದಾಗ “ಸರ್ ಇನ್ನೊಂದ್ ಸೊಲ್ಪ ದಿನಾ ಇರೀ, ಇಲ್ಲಿಗೆ ಟಾರ್ ರೋಡ್ ಬರತ್ತೆ, ಆಮೇಲ್ ಅರಾಮಾಗಿ ಹತ್ತಬೋದು” ಅನ್ನೋ ಮಾತು ಕೇಳಿಬಂದ್ರೆ ಆ ಜಾಗದ ಭವಿಷ್ಯ ಕಣ್ಣಮುಂದೆ ಹಾದು, ಇಲ್ಲೆಲ್ಲ ಟಾರುರಸ್ತೆ ಅವಶ್ಯ ಇದ್ಯ? ಮನುಷ್ಯ ಹೆಜ್ಜೆಇಟ್ಟಲ್ಲೆಲ್ಲ ಹಾಳು ಅಂತಾರೆ. ಅಂಥದ್ರಲ್ಲಿ ಬೆಟ್ಟದ ತುದಿಯವರೆಗೂ ರಸ್ತೆಮಾಡಿಬಿಟ್ಟರೆ ಅದರ ಗತಿಯೇನು? ಅನನ್ಯವಾದದ್ದನ್ನ ಕಾಣಬೇಕಂದ್ರೆ ಒಂದಷ್ಟು ಕಷ್ಟಪಡಲೇಬೇಕು. ಹಾಗೆ ಬೆವರು ಹರಿಸಿದಾಗಲೇ ಅದಕ್ಕೊಂದು ಘನತೆ ದಕ್ಕೋದು. ಮೊದಲೇ ಮಂಗನಂತಾಡುವ ಮನುಷ್ಯನಿಗೆ ಬೇಕಾದಲ್ಲೆಲ್ಲ ರಸ್ತೆ ಮಾಡುತ್ತ ಹೋದರೆ, ಅವನು ಮಾಡೋ ಚೇಷ್ಟೆಗಳಿಗೆ ರತ್ನಗಂಬಳಿ ಹಾಕಿ ಸ್ವಾಗತಿಸಿದ ಲೆಕ್ಕ. ಹಾಗಾಗಿ ಕೆಲವೊಮ್ಮೆ ಅಭಿವೃದ್ಧಿಯ ಬಗೆಗೆ ಬೇಸರಿಕೆ ಹುಟ್ಟಿಕೊಳ್ಳತ್ತೆ. ಯಾಕಂದ್ರೆ ನಿಜಕ್ಕೂ ಅಭಿವೃದ್ಧಿ ಅನ್ನೋದರ ಬಗೆಗೆ ಜನರಲ್ಲಿ ತಪ್ಪು ಮಾಹಿತಿಯಿದೆ. ಎಲ್ಲ ಹಳ್ಳಿಗಳನ್ನೂ ನುಂಗಿ, ಪಟ್ಟಣ ಬೆಳೆಯುತ್ತಾ ಹೋದರೆ ಅದು ಅಭಿವೃದ್ದಿಯಾ? ಕಾಡನ್ನೆಲ್ಲನ್ನೆಲ್ಲ ಕಡಿದು, ಅಲ್ಲಿ ಅಪಾರ್ಟ್ಮೆಂಟ್ ಕಟ್ಟಿಸಿ, ಅದರ ತುಂಬ ಬೆಲೆಬಾಳುವ ಮರಗಳ ಫರ್ನಿಚರ್ ಗಳನ್ನು ತುಂಬಿಕೊಂಡು ಅದರಮೇಲೆ ವಿರಾಜಮಾನರಾಗಿ ಕೂತರೆ ಅದು ಅಭಿವೃದ್ಧಿಯಾ? ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವು. ಅಭಿವೃದ್ಧಿಯ ಹೆಸರಿನಲ್ಲಿ ಅಸುನೀಗುತ್ತಿರೋ ಅರಣ್ಯಗಳ ಬೆಲೆ, ನೀರಿಗೆ ಹಪಾಹಪಿ ಎದ್ದಿರೋ ಈ ಹೊತ್ತಿನಲ್ಲಿ ಸ್ವಲ್ಪ ಜನಕ್ಕಾದರೂ ಗೊತ್ತಾಗುತ್ತಿದೆ.

ಇಂಥ ಅನುಭೂತಿಯನ್ನು ಪ್ರಕೃತಿ ಅಲ್ಲದೇ ನಮಗಿನ್ಯಾರು ಕೊಡಲು ಸಾಧ್ಯ? ಆದರೆ ಮನುಷ್ಯ ಕೃತಘ್ಞ ಜೀವಿ. ಹಾಗೆ ಅಷ್ಟು ಹೊತ್ತೂ ನಮ್ಮನ್ನ ಚಿಂತೆಯ-ಚಿತೆಯ ಮೇಲೆ ಉರಿಯದಂತೆ ಕಾಯ್ದ, ಮತ್ತು ದಿನನಿತ್ಯದ ಬದುಕಿಗೆ ಮೂಲಾಧಾರವಾಗಿರೋ ಪ್ರಕೃತಿಯನ್ನೇ ಇಂಚಿಂಚಾಗಿ ಕೊಲ್ಲುತ್ತ ಬರುತ್ತಿದ್ದೇವೆ.

(ಗರೀಮಾ ಪೂನಿಯಾ)

ಮೊನ್ನೆ ಸುದ್ದಿಗಾಗಿ ಅಂತರ್ಜಾಲದಲ್ಲಿ ಕಣ್ಣಾಡಿಸುವಾಗ ಕಂಡ ಸುದ್ದಿಯೊಂದರ ತಲೆಬರಹ ನನ್ನನ್ನು ತತ್ ಕ್ಷಣ ಸೆಳೆದಿತ್ತು. ಅದು ಗರೀಮಾ ಪೂನಿಯಾ ಅನ್ನೋ ಹುಡುಗಿ ಮಾಡುತ್ತಿರೋ ಸಾಹಸಗಾಥೆಯ ಕತೆ. ಈಗಷ್ಟೇ ಇಪ್ಪತ್ತಾರದ ಹರೆಯದ ಗರೀಮಾಳಿಗೆ ಪ್ರಕೃತಿಯೆಂದರೆ ಇನ್ನಿಲ್ಲದ ಪ್ರೀತಿ. ಒಮ್ಮೆ ತನ್ನ ಅಪ್ಪ-ಅಮ್ಮನೊಟ್ಟಿಗೆ ಸ್ಕೂಬಾ ಡೈವಿಂಗ್ ಕಲಿಯಲು ಅಂಡಮಾನ್ ದ್ವೀಪಕ್ಕೆ ಹೋಗೋ ಗರೀಮಾಳಿಗೆ, ಮಲೀನಗೊಂಡಿದ್ದ ಅಂಡಮಾನ್ ನ ಚಿತ್ರ ನಿಜಕ್ಕೂ ಬೇಸರ ತರಿಸುತ್ತೆ. ಕಣ್ಣು ಹಾಯಿಸಿದಲ್ಲೆಲ್ಲ ಪ್ಲಾಸ್ಟಿಕ್ ಬಾಟಲ್, ಮೀನಿನ ಬಲೆ ಮತ್ತು ನೂರಾರು ಬಗೆಯ ಮುರಿದ ಪ್ಲಾಸ್ಟಿಕ್ ವಸ್ತುಗಳ ತುಂಡುಗಳೆಲ್ಲ ಸಮುದ್ರದ ದಡದ ತುಂಬೆಲ್ಲ ಚೆಲ್ಲಾಡಿತ್ತಂತೆ. ಪ್ರಕೃತಿ ಸೌಂದರ್ಯ ತುಂಬಿ ತುಳುಕಬೇಕಿದ್ದ ಜಾಗದಲ್ಲೆಲ್ಲ ಪ್ಲಾಸ್ಟಿಕ್ ನ ಅಟ್ಟಹಾಸ ಕಂಡು ಮರುಕ ಪಟ್ಟಿದ್ದಳು ಆ ಹುಡುಗಿ. ಆ ಚಿತ್ರಣಗಳೆಲ್ಲ ಅವಳ ಮನಸ್ಸಿನಲ್ಲಿ ಆಳವಾಗಿ ಕುಳಿತುಬಿಟ್ಟಿದ್ದವು. ಕೂತರೂ ನಿಂತರೂ ಅದೇ ಚಿತ್ರಣ ಕಣ್ಮುಂದೆ ಹಾದುಹೋಗುತ್ತಿತ್ತು. ಅದು ಆ ಹುಡುಗಿಯ ಆಂತರ್ಯವನ್ನು ಎಷ್ಟರಮಟ್ಟಿಗೆ ಕಲಕಿತ್ತೆಂದರೆ ಅಲ್ಲಿಂದ ವಾಪಾಸ್ಸು ತನ್ನೂರಿಗೆ ಹೋಗಿ ಹಲವು ದಿನಗಳವರೆಗೆ ಅವಳಿಗೆ ನಿದ್ದೆಯೇ ಬರಲಿಲ್ಲವಂತೆ!

ಹೀಗೆ ಒಂದು ಸುಂದರವಾದ ದ್ವೀಪ ಹಾಳಾಗಿದ್ದನ್ನ ನೋಡಿ ಗರೀಮ ಬರೀ ಮರುಕಪಟ್ಟು ಕೂರಲಿಲ್ಲ. ಹೇಗಾದ್ರೂ ಮಾಡಿ ಆ ದ್ವೀಪವನ್ನೆಲ್ಲ ಶುಚಿಗೊಳಿಸಬೇಕಲ್ಲ ಅನ್ನೋ ಕನಸು ಕಂಡಳು. ಹಾಗೆಯೇ ಅದರ ಬೆನ್ನುಹತ್ತಿದವಳು ತನ್ನ ಕನಸಿನ ಯು.ಕೆ. ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಪದವಿ ಓದಲು ಸಿಕ್ಕ ಅವಕಾಶವನ್ನೇ ಬಿಟ್ಟುಕೊಟ್ಟು ದ್ವೀಪವೊಂದನ್ನ ಕಸಮುಕ್ತ ಮಾಡುವ ಕಾರ್ಯಕ್ಕೆ ಕೈ ಹಾಕುತ್ತಾಳೆ. ಆ ದಾರಿಯಲ್ಲಿ ತನ್ನೂರಿನಿಂದ ಹೊರಟು, ಯಾರೂ ಗೊತ್ತಿಲ್ಲದಿದ್ದ ಅಂಡಮಾನ್ ನ ನೀಲ್ ದ್ವೀಪದಲ್ಲಿ ಬಂದು ನಿಂತು, ಸ್ಥಳೀಯರ ಸಹಾಯದಿಂದ ವಸತಿ, ಊಟದ ವ್ಯವಸ್ಥೆಯ ಜೊತೆಗೆ ದುಡಿಯಲೊಂದು ಕೆಲಸವನ್ನೂ ಹುಡುಕಿಕೊಂಡಳು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಅವಳಿಗೆ ಒಂದಷ್ಟು ದಿನ ಬೇಕಾದವು. ಆಮೇಲೆ ಸ್ಥಳೀಯರ ವಿಶ್ವಾಸ ಗೆಲ್ಲುತ್ತಾಹೋದ ಗರೀಮಾ ಅವರೆಲ್ಲರ ಸಹಕಾರದಿಂದ ಸ್ವಚ್ಛತಾ ಕಾರ್ಯವನ್ನು ಆರಂಭಿಸಿಯೇ ಬಿಟ್ಟಳು. ಮೊದಲು ಅಲ್ಲಿನ ಮನೆಯ ಜನ ಕಸವನ್ನು ಹೇಗೆ ನಿಭಾಯಿಸುತ್ತಾರೆ ಅನ್ನುವ ಸರ್ವೆ ಮೂಲಕ ಕೆಲಸ ಆರಂಭಿಸಿದವಳು, ನಂತರ ಗ್ರಾಮ ಪಂಚಾಯತ್, ಎನ್.ಜಿ.ಓ, ಸ್ವಯಂಸೇವಕರ ಸಹಾಯದಿಂದ ನೀಲ್ ದ್ವೀಪವನ್ನು ಬಹುತೇಕ ಕಸಮುಕ್ತವಾಗಿಸಿದ್ದಾಳೆ. ಮುಂದೆ ಇನ್ನುಳಿದ ದೀಪಗಳಲ್ಲಿ ಸ್ವಚ್ಛತಾ ಕಾರ್ಯ ಮುಂದುವರೆಸಿ ಎಲ್ಲ ದ್ವೀಪಗಳನ್ನೂ ಮೊದಲಿನಂತೆ ಸುಂದರವಾಗಿಡಬೇಕೆಂಬುದು ಅವಳ ಕನಸು.

ಈ ಸುದ್ದಿ ನಿಜಕ್ಕೂ ನನ್ನನ್ನು ಚಕಿತಗೊಳಿಸಿದೆ. ಯಾಕಂದ್ರೆ ಹೋದಲ್ಲೆಲ್ಲ ಪ್ಲಾಸ್ಟಿಕ್ ಚೆಲ್ಲಿ, ತಮ್ಮ ಮನೆಯನ್ನು ಮಾತ್ರ ಶುಚಿಯಾಗಿಟ್ಟುಕೊಳ್ಳುವ ಜನರ ನಡುವೆ ಗರೀಮಾ ಕತೆ ನಿಜಕ್ಕೂ ಸ್ಪೂರ್ತಿದಾಯಕ. ಹಾಗೆ ಯಾರೂ ಗೊತ್ತಿಲ್ಲದೂರಿನಲ್ಲಿ ನೆಲೆ ಕಲ್ಪಿಸಿಕೊಳ್ಳುವುದೆಲ್ಲ ಸುಲಭದ ಮಾತಲ್ಲ. ಆದರೆ ಈ ಹುಡುಗಿ ಅದನ್ನೆಲ್ಲ ಸಾಧಿಸಿ, ತನ್ನದಲ್ಲದ ಊರನ್ನ ಶುಚಿಗೊಳಿಸುವುದಕ್ಕೆ ಹೋರಾಡುತ್ತಿರುವ ಪರಿ ನಿಜಕ್ಕೂ ಅನನ್ಯ. ಆದರೆ ಇದೆಲ್ಲ ಒಂದಷ್ಟು ಪ್ರಕೃತಿ ಪ್ರೇಮಿಗಳು ಮಾಡುವ ಕೆಲಸವಲ್ಲ. ಎಲ್ಲ ನಾಗರಿಕರಿಗೂ ತಮ್ಮತಮ್ಮ ಊರು-ಕೇರಿಯ ಬಗ್ಗೆ ಪ್ರೀತಿ ಇರಬೇಕು. ಅವುಗಳ ಸ್ವಚ್ಚತೆಯ ಬಗ್ಗೆ ಕಾಳಜಿಯಿರಬೇಕು. ಇಲ್ಲವಾದ್ರೆ ಪರಿಸರ ಮಾಲಿನ್ಯವನ್ನ ಸರಿಮಾಡೋದಾದ್ರೂ ಯಾವಾಗ?

ಕೊನೆಗೆ ಕೃಪಾಕರ ಸೇನಾನಿ ಹೇಳಿದ ಮಾತೊಂದು ನೆನಪಾಗ್ತಿದೆ. “ನೀವೆಲ್ಲ ಕೇಳಬಹುದು, ನಾವೊಂದಷ್ಟ್ ಜನ ಹೀಗೆ ಪ್ರಕೃತಿನ ಉಳಿಸೋಕೆ ಹೋರಾಡ್ತಿದ್ರೆ ಒಂದೊಮ್ಮೆ ಎಲ್ಲವೂ ಸರಿಯಾಗ್ಬಿಡತ್ತಾ ಅಂತ. ಖಂಡಿತಾ ಇಲ್ಲ. ಯಾಕಂದ್ರೆ ಹೀಗೆ ಯೋಚನೆ ಮಾಡೋ ಜನಗಳ ಸಂಖ್ಯೆಯೇ ತೀರ ಕಡಿಮೆ ಆದ್ರಿಂದ ಅದರಿಂದಾಗೋ ಪರಿಣಾಮಗಳೂ ಅಷ್ಟೇ ಕಡಿಮೆ ಇರತ್ತೆ. ಆದ್ರೆ ಸಾಯೋಕೆ ಮುಂಚೆ ನಮ್ಮ ಪರಿಸರವನ್ನ ಕಾಪಾಡಿಕೊಳ್ಳೋಕೆ ಒಂದಷ್ಟು ಕೆಲಸವನ್ನಾದ್ರೂ ಮಾಡಿದ್ವಲ್ಲ ಅನ್ನೋ ನೆಮ್ಮದಿ ಸಿಗತ್ತಲ್ಲ, ಅದಕ್ಕಾದ್ರೂ ನಾವು ಇಂಥ ಕೆಲಸಗಳನ್ನ ಮಾಡ್ಬೇಕು”. ಬಹಳ ದಿನ ಈ ಮಾತು ನನ್ನನ್ನ ಕಾಡಿತ್ತು. ಹಿಂದೆಲ್ಲ ಹೀಗೆ ಪರಿಸರಸ್ನೇಹಿ ಅಭ್ಯಾಸವನ್ನು ರೂಢಿಸಿಕೊಳ್ಳಲು ಆರಂಭಿಸಿದಾಗ, ಹೊರಗೆ ಲಕ್ಷಾಂತರ ಜನ ಅದನ್ನು ಹಾಳುಗೆಡುವೋದು ಕಂಡು, ನಾವು ಮಾಡೋದೆಲ್ಲ “ಹೊಳೇಲಿ ಹುಣಸೆ ಹಣ್ಣು ತೊಳೆದಹಾಗೆ” ಅಂತ ಅನ್ನಿಸ್ತಿತ್ತು. ಅದಕ್ಕೆ ಉತ್ತರವಾಗಿ ಮೇಲಿನ ಮಾತು ಕೇಳಿದ ದಿನದಿಂದ ಆ ಥರದ ಭಾವನೆ ಮತ್ತೆ ಕಾಡಿಲ್ಲ.