ಶನಿವಾರ ಬಂದರೆ ಸಾಕು ಚೌಕದ ಮೂಗು ಅರಳುತ್ತಿತ್ತು ಒಂದು ಕಾಲಕ್ಕೆ! ಮಸೀದಿಯ ಮೂಲೆಗೆ ಸುತ್ತಲಿನ ಹಳ್ಳಿಗಳಿಂದ ಬಂದ ಹೆಣ್ಮಕ್ಕಳು ಒಲೆ ಹೂಡಿ ತುಪ್ಪ ಕಾಯಿಸುತ್ತಿದ್ದರು. ಚೌಕದಿಂದಾಚೆ ಸುಮಾರು ದೂರದವರೆಗೆ ತುಪ್ಪದ ವಾಸನೆ ಗಮ್ಮಂತ ಬರುತ್ತಿತ್ತು. ಹದವಾಗಿ ಕಾಯುತ್ತಿದ್ದ ತುಪ್ಪಕ್ಕೆ ವೀಳ್ಯದೆಲೆ ಹಾಕಿ ತುಪ್ಪದ ವಾಸನೆಗೊಂದು ಅಪ್ಯಾಯತೆ ತರುತ್ತಿದ್ದರು. ಘಮ ಘಮಿಸುವ ತುಪ್ಪ ಕಾಯಿಸಿದ ಸ್ವಲ್ಪ ಹೊತ್ತಿಗೆ ಖಾಲಿಯಾಗುತ್ತಿತ್ತು. ತುಪ್ಪ ಮಾರುವವರಿಗೆ ಚೌಕ ಖಾಯಂ ವಿಳಾಸವಾಗಿತ್ತು.
ಶರಣಬಸವ ಕೆ. ಗುಡದಿನ್ನಿ ಬರೆದ ಹೊಸ ಪ್ರಬಂಧಗಳ ಸಂಕಲನ “ಉಡದಾರ” ಪುಸ್ತಕದಿಂದ ಒಂದು ಪ್ರಬಂಧ ನಿಮ್ಮ ಓದಿಗೆ

 

ಗಡಿಯಾರ ಚೌಕ..

ಗಡಿಯಾರ ಚೌಕ ಹೆಸರು ಕೇಳಿದರೆ ಸಾಕು ಎದೆ ಪುಳಕಗೊಳ್ಳುತ್ತದೆ. ಬರೀ ದೇವರ, ಧರ್ಮ ಗುರುಗಳ, ವ್ಯಕ್ತಿಗಳ, ಜಾತಿಗಳ ಹೆಸರುಗಳನ್ನೆ ಚೌಕಗಳಿಗಿಟ್ಟು ‘ಒಬ್ಬರ’ ಸ್ವತ್ತಾಗಿ ಮಾಡಿದ್ದನ್ನೆ ನೋಡಿದ್ದ ಜನರಿಗೆ ಗಡಿಯಾರ ಚೌಕವೆಂಬುದು ಯಾರದೊ ಸ್ಮಾರಕವಾಗಲಿ, ಒಂದು ಜನ, ಜನಾಂಗ, ಧರ್ಮದ ಸೂಚಕವಾಗಲಿ ಕಾಣದೇ ಎಲ್ಲರನ್ನೂ ಸಮವಾಗಿ ಎದೆಗಪ್ಪಿಕೊಳ್ಳುವ ಪ್ರಜಾಪ್ರಭುತ್ವದ ಮೂಲ ಆಶಯದಂತೆ ಇತ್ತೀಚಿಗೆ ತೋರತೊಡಗಿತ್ತು.

ಆರು ಹಸುಳೆಯಂತಹ ರಸ್ತೆಗಳನ್ನು ಹೊಕ್ಕುಳದೊಳಗಿಂದ ಊರೊಳಗೆ ಹರಿಬಿಟ್ಟು ಗಡಿಯಾರವೊಂದು ಎದೆಸೆಟೆಸಿ ನಿಂತಿರುವದನ್ನ ನಾನಂತೂ ಸದಾ ಅಚ್ಚರಿಯಿಂದ ನೋಡುತ್ತಿದ್ದೆ.

(ಶರಣಬಸವ ಕೆ. ಗುಡದಿನ್ನಿ)

ಸಂತೆಗೆ ಬಂದವರಿಂದ ಹಿಡಿದು ಸರಕಾರಿ ದವಾಖಾನೆಗೆ ಬರುವವರವರೆಗೆ ಬಹುತೇಕರು ಚೌಕದ ನೆರಳಿಗೆ ಬಂದು ಚಹಾ ಕುಡಿದು ಹೋದರೇನೇ ಆ ದಿನದ ಪಯಣ ಸಮಾಧಾನ ಎನಿಸುವಷ್ಟು ಚೌಕವಿಲ್ಲಿ ಜನರ ಬದುಕೊಳಗೆ ಬೆರೆತುಹೋಗಿದೆ. ಹಳೇ ಕಾಲದ ಕಣ್ಗಾವಲು ಕೋಟೆಯಂತಿರುವ ಗಡಿಯಾರ ಚೌಕ ಈಗೀಗ ಕಾಶ್ಮೀರದ ಲಾಲ್ ಚೌಕದಂತೆ ಕೇಸರಿ, ಬಿಳಿ, ಹಸಿರು ಮೆತ್ತಿಕೊಂಡು ಗಂಟೆಗೊಮ್ಮೆ ಸಾರೇ ಜಹಾಸೇ ಅಚ್ಛಾ ಅಂತ ಹಾಡುವುದು ಸುತ್ತಲಿನವರ ರಗುತದೊಳಗೆ ಇಳಿದುಹೋಗಿ ಗಂಟೆಯಾಗಲು ಅರೆಘಳಿಗೆ ಇರುವಾಗಲೆ ಅವರ ಮೈ ರೋಮಾಂಚನಗೊಂಡು ನುಡಿಯುವ ಶಬುದಕ್ಕಾಗಿ ಮೇಲೆ ನೋಡುವಂತೆ ಭಾಸವಾಗುವದು.

ದಿನವಿಡೀ ಆ ಹಾಡು ಕೇಳುತ್ತಿದ್ದರೂ ಪ್ರತೀ ಸಲ ಕೇಳುವಾಗಲೂ ಮೈ ರೋಮಾಂಚನವಾಗುವುದು ಮಾತ್ರ ಸೋಜಿಗವೇ!
ಎಡ-ಬಲ ಕಣ್ಣಾಯಿಸಿದರೆ ಮೊದಲು ಕಾಣುವದು ಬಂಗಾರದ ಅಂಗಡಿಗಳೇ ಆದರೂ ತನ್ನ ಬುಡದಲ್ಲದು ಬಡವರಿಗೂ ಬದುಕು ಕಟ್ಟಿಕೊಳ್ಳಲು ಜಾಗಕೊಟ್ಟಿದೆ.

ಪಶ್ಚಿಮಕ್ಕಿರುವ ಜಾಮಿಯಾ ಮಸೀದಿಯ ಆಜಾನ್ ಮತ್ತು ಉತ್ತರಕ್ಕಿರುವ ದೊಡ್ಡ ಹನಮಂತದೇವರ ಗುಡಿಯ ಮಂತ್ರೊಚ್ಛಾರ ಏಕಕಾಲಕ್ಕೆ ಕೇಳಿಸಿಕೊಳ್ಳುವ ಚೌಕ ಇಡೀ ಊರಿನ ಸಾಕ್ಷಿ ಪ್ರಜ್ಞೆಯಂತೆ ಮುಗುಳ್ನಗುತ್ತ ನಿಂತಿದೆ.

ಗಡಿಯಾರ ಚೌಕ ಎಚ್ಚರಗೊಳ್ಳುವದು ನಸುಕಿನಲ್ಲೆ!
ಹಗಲಿಡಿ ಸಾವಿರಾರು ಜನರ ನೋವು-ನಲಿವು ಸುಖ-ದುಃಖ ಎಲ್ಲವನ್ನೂ ಕೇಳಿಸಿಕೊಳ್ಳುವ ಚೌಕದ ಸುತ್ತ ಬದುಕುಗಳು ಬಹುಬೇಗ ತೆರೆದುಕೊಳ್ಳುತ್ತವೆ.

ಚೌಕದ ಮೂಲೆಗಿರುವ ಗೌಳೇರ ಮೌಲ ಐದುವರೆಗೆಲ್ಲ ಬಿಸಿ ಚಹಾ ಕುದಿಸಲು ತೊಡಗುತ್ತಾನೆ. ಮೌಲಾನ ಬೋಗಣಿಯೊಳಗಿನ ಚಹಾ ಯಾವತ್ತೂ ಚೌಕದ ನಾಲಗೆಯನ್ನ ತಾಕಿಲ್ಲವಾದರೂ ಅದನ್ನು ಹೀರುವಾಗ ಜನರಾಡುವ ಮಾತುಗಳನ್ನದು ತನ್ಮಯತೆಯಿಂದ ಕೇಳಿಸಿಕೊಳ್ಳುತ್ತದೆ. ಮೌಲಾನ ಇರುವ ಮೂರು ಬೆಂಚುಗಳಲ್ಲಿ ಕಾಲು ಮುರಿದ ಒಂದನ್ನ ಬಿಟ್ಟರೆ ಉಳಿದ ಎರಡರಲ್ಲಿ ಮುಂಜಾನೆಯ ಫಜರ್ ನಮಾಜಿಗೆ ಬಂದ ಇಕ್ಬಲ್ಲಾ ಸಾಬು, ಮುನೀರು, ಷಫೀ, ಮುನ್ನಾ ಬೈಯಿ ಮುಂತಾದವರು ಕೂತಿದ್ದರೆ ಇನ್ನೊಂದು ಬೆಂಚಲಿ ದೊಡ್ಡ ಹನುಮಂತದೇವರ ಗುಡಿಗೆ ಮಡಿಯಲ್ಲಿ ಹೊರಟ ರಾಮಾ ಜೋಯಿಸ, ಲಿಂಗಾಯತರ ಸಂಗಪ್ಪ ಮತ್ತು ಶನಿವಾರ ಬಂದರೆ ಸಾಕು ಕಾಲಲ್ಲಿ ಚಪ್ಪಲಿಯೂ ಧರಿಸದ ಹನುಮಸಿಂಗ್ ಕೂತು ಹರಟೆ ಹೊಡಿಯುತ್ತಾರೆ.

ಅವರ ಮಾತುಗಳ ಮಧ್ಯೆ ಊರು ಬೆಳೆದ ರೀತಿ, ಹಳೇ ಬಸ್ಟ್ಯಾಂಡ್ ಸುತ್ತ-ಮುತ್ತಲೆದ್ದ ಕಾಂಪ್ಲೆಕ್ಸ್‌ಗಳು, ಹೊಸದಾಗಿ ಬಂದ ಚೀಫ್ ಆಫೀಸರ್, ಊರೊಳಗೆ ನಡೆಯುತ್ತಿರುವ ಕ್ರಿಕೆಟ್ ಟೂರ್ನಮೆಂಟ್ ಹೀಗೆ ಹಲವು ಸುದ್ದಿಗಳು ಹಾಯ್ದು ‘ಚಹಾ ಪೇ ಚರ್ಚೆ’ ಜೋರಾಗಿ ಚಹಾ ಕುಡಿಯಲು ಬಂದವರು ಚಹಾವನ್ನು ಮರೆತು ಆ ಮಾತುಗಳಲ್ಲಿ ಮುಳುಗಿ ಏಳುತ್ತಾರೆ!

ಚೌಕದಲ್ಲಿ ತಿಂಗಳಲ್ಲಿ ಒಂದಾದರೂ ಕಾರ್ಯಕ್ರಮಗಳಾಗುತ್ತವೆ ಆವಾಗ ಚೌಕ ಚಡಪಡಿಸುತ್ತದೆ. ಅತ್ತ ಹನಮಂತದೇವರ ಗುಡಿ ಇತ್ತ ಮಸೀದಿ ಇವತ್ತು ನನ್ನ ಅಂಗಳದಲ್ಲಿ ‘ಮತ್ತೇನಾದರೂ’ ಸಂಭವಿಸೀತು ಅಂತ ಹಲುಬಿ ಬುಗುಲು ಬೀಳುತ್ತದೆ. ವಿವಿಧ ಧರ್ಮಗಳ ಉಗ್ರ ಭಾಷಣಕಾರರು ಬಂದಾಗ ತುಸು ಬಿಗಿಯಾದ ವಾತಾವರಣವಿರುತ್ತದೆ.

ಚೌಕಿನ ಮೂಲೆಗಿರುವ ಪೋಲಿಸ್ ಸ್ಟೇಷನ್ ಹೈ ಅಲರ್ಟ್ ಆಗಿ, ಚೌಕಿನ ಸುತ್ತ ಪೋಲೀಸರು ಇರುವೆಗಳಂತೆ ಸಾಲು ಸಾಲಾಗಿ ಹರಿದಾಡುತ್ತಾರೆ! ವೇದಿಕೆಯಲಿ ಸುದೀರ್ಘ ಭಾಷಣ ಮಾಡಿದಾತ ಪ್ರತೀ ನುಡಿಯುದ್ದಕ್ಕೂ ದ್ವೇಷ ಉಗುಳಿ, ಎರಡು ಹೃದಯಗಳ ಮಧ್ಯೆ ಗೋಡೆ ಎಬ್ಬಿಸುವ ಮಾತಾಡಿ ಬಸ್ಸು ಹತ್ತುತ್ತಿದ್ದರೆ ಮಾತು ಕೇಳಿಸಿಕೊಂಡು, ಭಾಷಣದುದ್ದಕ್ಕೆ ಕೇಕೆ ಹಾಕಿದ್ದ ಜನ ಕಾರ್ಯಕ್ರಮ ಮುಗಿದ ಮೂರು ನಿಮಿಷಕ್ಕೆ ಮೌಲಾನ ಹೋಟಲಿನ ಮೂಲೆಗೆ ಕೂತು “ಬಾರೀ ಮಾತಾಡಿದ್ನಪ ಆದ್ರ ನಮ್ಮೂರಾಗ ಅಂತ ತಾಯ್ಗಂಡ್ರು ಎಲ್ಯದಾರ ನಾವೆಲ್ಲ ಅಣ್ಣತಮ್ರು ಇದ್ದಂಗ” ಅಂತ ಪರಸ್ಪರ ಹೆಗಲು ಮುಟ್ಟಿ ಗಮಾತು ಮಾಡುತ್ತ ಮಾತಿಗಿಳಿದಾಗ ಚೌಕ ನಿಟ್ಟುಸಿರುಬಿಡುತ್ತದೆ!

“ಹೌದ್ದಲೇ ಗಣಮಕ್ಳು” ಅಂತ ಉದ್ಘಾರ ಹೊರಹಾಕುತ್ತದೆ.

ಯಾರ ದ್ವೇಷದ ಮಾತು ಇಲ್ಲಿ ಯಾರ ಎದೆಗೂ ಇಳಿಯುವದಿಲ್ಲ. ಜನರು ಚೌಕದ ಮುಖದ ಮುಗುಳ್ನಗೆಯನ್ನ ಮಾತ್ರ ನಂಬುತ್ತಾರೆ. ಆದರೆ ‘ಸಾರ್ವಜನಿಕ’ ಆಪತ್ತು ಬಂದಾಗ ಆರಂಭವಾಗುವ ಪ್ರತೀ ಹೋರಾಟವೂ ಇಲ್ಲೇ ಹುಟ್ಟು ಪಡೆಯುತ್ತದೆ, ಹೋರಾಟದ ರ್ಯಾಲಿ ಇಲ್ಲಿಂದಲೇ ಹೊರಡುತ್ತದೆ.

ಆಣೆ, ಪ್ರಮಾಣಗಳು ಇಲ್ಲಿ ಸಾವಿರ, ಸಾವಿರ ಹುಟ್ಟಿ ಸಾಯುತ್ತವೆ! ಗೆದ್ದಾಗ ಪಟಾಕಿ, ಸತ್ತಾಗ ಶ್ರದ್ಧಾಂಜಲಿ ಎಲ್ಲದಕ್ಕೂ ಚೌಕ ಜಾಗ ಮಾಡಿಕೊಡುತ್ತದೆ.

ಶನಿವಾರ ಬಂದರೆ ಸಾಕು ಚೌಕದ ಮೂಗು ಅರಳುತ್ತಿತ್ತು ಒಂದು ಕಾಲಕ್ಕೆ! ಮಸೀದಿಯ ಮೂಲೆಗೆ ಸುತ್ತಲಿನ ಹಳ್ಳಿಗಳಿಂದ ಬಂದ ಹೆಣ್ಮಕ್ಕಳು ಒಲೆ ಹೂಡಿ ತುಪ್ಪ ಕಾಯಿಸುತ್ತಿದ್ದರು. ಚೌಕದಿಂದಾಚೆ ಸುಮಾರು ದೂರದವರೆಗೆ ತುಪ್ಪದ ವಾಸನೆ ಗಮ್ಮಂತ ಬರುತ್ತಿತ್ತು. ಹದವಾಗಿ ಕಾಯುತ್ತಿದ್ದ ತುಪ್ಪಕ್ಕೆ ವೀಳ್ಯದೆಲೆ ಹಾಕಿ ತುಪ್ಪದ ವಾಸನೆಗೊಂದು ಅಪ್ಯಾಯತೆ ತರುತ್ತಿದ್ದರು. ಘಮ ಘಮಿಸುವ ತುಪ್ಪ ಕಾಯಿಸಿದ ಸ್ವಲ್ಪ ಹೊತ್ತಿಗೆ ಖಾಲಿಯಾಗುತ್ತಿತ್ತು. ತುಪ್ಪ ಮಾರುವವರಿಗೆ ಚೌಕ ಖಾಯಂ ವಿಳಾಸವಾಗಿತ್ತು.

ಹಾಗೆ ತುಪ್ಪ ಮಾರುತ್ತಿದ್ದ ಜಾಗದಲ್ಲೀಗ ಬ್ಯಾಂಕೊಂದರ ದೊಡ್ಡ ಬಿಲ್ಡಿಂಗ್ ಎದ್ದು ನಿಂತಿದೆ.

ಚೌಕದ ಮೂಲೆಗಿರುವ ಗೌಳೇರ ಮೌಲ ಐದುವರೆಗೆಲ್ಲ ಬಿಸಿ ಚಹಾ ಕುದಿಸಲು ತೊಡಗುತ್ತಾನೆ. ಮೌಲಾನ ಬೋಗಣಿಯೊಳಗಿನ ಚಹಾ ಯಾವತ್ತೂ ಚೌಕದ ನಾಲಗೆಯನ್ನ ತಾಕಿಲ್ಲವಾದರೂ ಅದನ್ನು ಹೀರುವಾಗ ಜನರಾಡುವ ಮಾತುಗಳನ್ನದು ತನ್ಮಯತೆಯಿಂದ ಕೇಳಿಸಿಕೊಳ್ಳುತ್ತದೆ.

ಪ್ರತಿ ನಿತ್ಯ ಹಲವರ ಮನದ ಮಾತು ಕೇಳಿಸಿಕೊಂಡೂ ಮುಗುಮ್ಮಾಗಿರುವ ಚೌಕ‌ದ ಬಲಗೈ ಕೆಳಗೆ ದೊಬ್ಬುವ ಬಂಡಿಯಲಿ ಹಣ್ಣು-ಹಂಪಲು ಮಾರುವ ಭಜಂತ್ರಿಯ ಮುದ್ಕಿ ದಿನಾಲು ಚೌಕದ ನಿಲುಕಿದ ಕಲ್ಲಿಗೆ ಹಣೆ ಹಚ್ಚಿ ಕೈ ಮುಗಿದಾಗೆಲ್ಲ ಪುಳಕಗೊಳ್ಳುತ್ತದೆ!
ಆಕೆಯನ್ನ ಯಾರಾದರೂ ಕೇಳಿದಾಗ
“ಯಪ್ಪಾss ಹುಟ್ಸಿ ಬೆಳ್ಸಿದ ಮಕ್ಕಳೇ ನೆಳ್ಳಾಗಿಂದ ಬಿಸಿಲಿಗಿ ದೊಬ್ಬಿದ್ರು,
ಆದ್ರ ಈ ಚೌಕದ ನೆಳ್ಳು ನಾನು ಬದ್ಕಾಕ ದಾರಿ ಆಗ್ಯಾದ ಇದಾ ನನಿಗಿ ದೇವ್ರು”
ಅಂತ ಮತ್ತೊಮ್ಮೆ ಸಾಮಾಡಿದರೆ ಸಾಕು ಆನಂದಭಾಷ್ಪವೆಂಬುದು ಚೌಕದ ಪ್ರತೀ ಕಲ್ಲಲೂ ಜಿನುಗಿ ಬದುಕು ಸಾರ್ಥಕವೆಂಬಂತೆ ಖುಷಿಯಿಂದ ಸಾರೇ ಜಹಾಸೇ ಅಚ್ಛಾ ಹಾಡುತ್ತದೆ.

1981 ರ ಸುಮಾರಿಗೆ ಗಡಿಯಾರ ಚೌಕದ ಕಲ್ಲು ಕಟ್ಟೆ ನಿರ್ಮಾಣ ಮಾಡಿ ಚೌಕದ ತಲೆಯ ನಾಲ್ಕು ದಿಕ್ಕಿಗೊಂದು ಗಡಿಯಾರವಿಟ್ಟಾಗ ಚೌಕ ಕಿರೀಟವಿಟ್ಟಂತೆ ಭಾವಿಸಿ ಖುಷಿಯಾಗಿತ್ತು. ಪಕ್ಕದಲ್ಲೆ ನೀರಿನ ಕಾರಂಜಿ ರಾತ್ರಿಯಾದರೆ ಬಣ್ಣದ ಲೈಟುಗಳು ಅಕ್ಷರಶಃ ಸ್ವರ್ಗವೇ ಅಲ್ಲಿ ನಿರ್ಮಾಣವಾಗಿತ್ತೆನ್ನಿ. ಅದಕ್ಕೂ ಮೊದಲು ಅದೇ ಜಾಗದಲ್ಲಿ ಇನ್ನೂ ಸ್ವಲ್ಪ ಎತ್ತರಕ್ಕೆ ಚರ್ಚಿನೊಳಗೆ ಇರುವಂತೆ ಹಗ್ಗ ಕಟ್ಟಿ ಎಳೆದು ಬಾರಿಸುವಂತಹ ‘ನ್ಯಾಯದ ಘಂಟೆ’ ತರಹದ್ದನ್ನ ನೇತು ಹಾಕಲಾಗಿತ್ತಂತೆ.
ಆ ಕಾಲಕ್ಕೆ ಲಿಂಗಸ್ಗೂರು ಬ್ರಿಟಿಷ್ ರೆಜಿಮೆಂಟ್ ನ ಪ್ರಮುಖ ಸೇನಾ ನೆಲೆಯಾಗಿತ್ತು. ಸುರಪುರ, ಶಹಾಪುರ ಸೇರಿದಂತೆ ಸುಮಾರು 190 ಹಳ್ಳಿಗಳಿಗೆ ಜಿಲ್ಲಾ ಕೇಂದ್ರವೂ ಆಗಿತ್ತು.

ಹೀಗಿರುವಾಗ ಅಲ್ಲಿ ತಂಗಿರುವ ಸೈನಿಕರನ್ನ ಎಚ್ಚರಗೊಳಿಸಲು ಮತ್ತು ಸಭೆಗಳಿಗೆ ಕರೆಯಲು ಮುಂತಾದ ಸಂದೇಶಗಳಿಗೆ ಇಲ್ಲಿಯ ಗಡಿಯಾರವನ್ನ ನಾಲ್ಕು ದಿಕ್ಕಿಗೆ ಕೇಳಿಸುವಂತೆ ಬಾರಿಸುತ್ತಿದ್ದರು ಅಂತ ಕೇಳಲ್ಪಟ್ಟೆ! ಕುತೂಹಲ ಎನಿಸಿತು ಕೆದಕಿದರೆ ಇನ್ನೂ ಏನೇನು ಸಿಗಬಹುದು ಹುದುಗಿರುವ ಚೌಕದ ಎದೆಯೊಳಗೆ ಅಂತ ಬೆರಗುಗೊಂಡೆ. ಸಿಕ್ಕ ಸಿಕ್ಕವರ ಎದಿರು ಚೌಕದ ಕುರಿತು ಮಾತುಗೆಳೆದು ಏನೇನೊ ಹೇಳಿದರು.. ಹಗ್ಗದ ಗಂಟೆ ಸುಮಾರು ದಿನಗಳ ಕಾಲವಿತ್ತು ಆದರೆ ಈ ಕಾಲಘಟ್ಟದವರು ಯಾರಿಗೂ ಅದು ನೆನಪಿಲ್ಲ. ಆ ಘಂಟೆಯ ಬದಲಿಗೆ ಮತ್ಯಾರೋ ಆಧುನಿಕ ಲೋಲಕದ ಗಡಿಯಾರ ತಂದು ಸಿಗಾಕಿದ ಮೇಲೆ ಉಳಿದ ಘಟನೆಗಳನ್ನು ಮಾತ್ರ ಬಹುತೇಕರು ಸಾಮ್ಯವಾಗಿ ಹಂಚಿಕೊಂಡರು.

ಹಾಗೆ ಹೊಸದಾಗಿ ತಂದು ಹಾಕಿದ ಲೋಲಕದ ಗಡಿಯಾರ ಬಹಳ ದಿನಗಳ ಕಾಲ ಊರಿಗೆ ಸಮಯ ಹೇಳುತ್ತಿತ್ತು. ಮಧ್ಯೆ ಅದ್ಯಾವದೋ ಘಳಿಗೆಯಲ್ಲಿ ಒಂದೆರಡು ಸಮುದಾಯಗಳು ಆ ಚೌಕವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ತಮ್ಮ ಸಮುದಾಯದ ಆದರ್ಶ ಪುರುಷನ ಹೆಸರನ್ನು ಚೌಕಿಗೆ ಇಡಲು ಪೈಪೋಟಿ ನಡೆಸತೊಡಗಿದವು.

“ಏನಾ ಬಾನಾಗಡಿ ಮಾಡಿ ನನ್ನ ಇನ್ಯಾರದರ ಪಾಲು ಮಾಡ್ತಾರಪ” ಅಂತ ಚೌಕ ಹೆದರಿ ಬಸವಳಿದಿತ್ತು. ಇದನ್ನ ಮನಗಂಡ ಕೆಲವು ಮುತ್ಸದ್ಧಿಗಳು ನಮ್ಮೂರಲಿ ಅಂತಹ ಯಾವದೇ ಜಾತಿ, ಧರ್ಮ, ದೇವರು ಸೂಚಕ ಚೌಕಗಳು ಬೇಡ ಇದ್ದರೆ ನಮ್ಮಗಳ ನಡುವೆ ಗೋಡೆಗಳೆದ್ದು ಪರಸ್ಪರ ಕಿತ್ತಾಡುವುದು ದಿಟ ಎಂದು ಆಲೋಚಿಸಿ ಈ ಮೊದಲು ಇದ್ದ ಜಾಗಕ್ಕೆ ಪುರಸಭೆಯಿಂದ ಒಂದಿಷ್ಟು ನವೀಕರಿಸಿ ಗಡಿಯಾರ ಚೌಕ ಅಂತ ಅಧಿಕೃತವಾಗಿ ನಾಮಕರಣ ಮಾಡಿದಾಗಲೇ ಚೌಕಕ್ಕೆ ನೆಮ್ಮದಿ ಅನಿಸಿದ್ದು. ಇಲ್ಲವಾದಲ್ಲಿ ಮತ್ಯಾವದೋ ಹೆಸರನ್ನ ಹೊತ್ತುಕೊಂಡು ಈ ಮುದಿವಯಸ್ಸಲಿ ಯಾರು ಒದ್ದಾಡ್ತಾರೆ ಅನಿಸಿಬಿಟ್ಟಿತ್ತು!

ಊರಮಂದಿ ಚೌಕವನ್ನ ದೇವರಂತೆ ಕಂಡರೂ ನನಗ್ಯಾವ ದೇವರು-ದಿಂಡರ ಗೊಡವೆಯೇ ಬೇಡ ಅಂತ ಚೌಕ ನಿಂತಿದ್ದರೂ
ಮೊಹರಂ ನ ಕೊನೆಯ ದಿನ ಮಾತ್ರ ಚೌಕಕ್ಕೆ ದೇವರ ಸಂಗಮದಿಂದ ತಪ್ಪಿಸಿಕೊಳ್ಳಲು ಆಗುವದಿಲ್ಲ! ಊರ ಓಣಿ, ಓಣಿಯ ಹಸನ್ ಹುಸೇನ ಸೋದರರೆಲ್ಲ ಚೌಕವನ್ನೂ ಹುಡುಕಿಕೊಂಡೇ ಬರುತ್ತಾರೆ! ಅವರು ಪರಸ್ಪರ ಭೇಟಿಯಾಗುವದೇ ಈ ಚೌಕದ ಆರು ದಾರಿ ಸೇರುವ ಚಂದದ ಅಂಗಳದಲ್ಲಿ. ಆವತ್ತು ಸುತ್ತಲಿನ ಮಾರವಾಡಿ ಬಿಲ್ಡಿಂಗುಗಳ ಮೇಲೆಲ್ಲ ಜನ ಕಕ್ಕಿರಿದು ಸೇರಿರುತ್ತಾರೆ. ಜಿಲೇಬಿ, ಖಾರದ ಸಮರಾಧನೆಯ ಜೊತೆಗೆ ಮಕ್ಕಳ ಆಟಿಕೆಗಳು ಭರಪೂರವಿದ್ದು ಅದೊಂದು ಜಾತ್ರೆಯೇ ಅಲ್ಲಿ ನೆರೆದಿರುತ್ತದೆ. ಕೌಸೇನ್, ಬೌಸೇನ್ ದೂಲಾಃ ದೂಲಾಃ ಅಂದ ಹಾಗೆಲ್ಲ ಚೌಕಕ್ಕೂ ಮೈಯಲ್ಲಿ ದೇವರು ಬಂದಂತಾಗಿ ಓಲಾಡುತ್ತದೆ.

ನನಗಂತೂ ಚೌಕವನ್ನ ನೋಡಿದಾಗಲೆಲ್ಲ ಅದಕ್ಕೆ ಮಾತು ಬಂದು ಏನಾದರೂ ತಪ್ಪು ನಡೆದ ದಿನ ಕರೆದು ತರಾಟೆಗೆ ತೆಗೆದುಕೊಳ್ಳುತ್ತದೆಂದೂ, ಅದಕ್ಕೆ ಕಿವಿಯಿದ್ದೂ ನಮ್ಮೆಲ್ಲರ ಎದೆಯೊಳಗಿನ ಮಾತುಗಳನ್ನೆಲ್ಲ ಕೇಳಿಸಿಕೊಳ್ಳುವದೆಂದು, ಚೌಕಕ್ಕೆ ಕಣ್ಣಿದ್ದು ನಾವು ಮಾಡುವ, ಮುಚ್ಚಿಡುವ ಪಸಾಯಿಸುವ ಎಲ್ಲವನ್ನೂ ತೆರೆದ ಕಣ್ಗಳಿಂದ ನೋಡುತ್ತ ಆಕಾಶದಂಚಲಿರುವ ದೇವರಿಗೆ ವರದಿ ನೀಡುವ ದೇವದೂತನಿರಬಹುದೆಂದು ಅನುಮಾನ ಬರುತ್ತದೆ! ಅದಕ್ಕೆ ಅಲ್ಲಿ ಹಾಯುವಾಗೆಲ್ಲ ಮುಗುಳ್ನಗುತ್ತ ಮೇಲೆ ನೋಡಿ ಚೌಕಕ್ಕೊಂದು ಸಲಾಮ್ ಹೇಳುತ್ತೇನೆ. ಆವಾಗೆಲ್ಲ ಅದು ಎದುರು ಮುಗಳ್ನಕ್ಕು ‘ಚೊಲೊ ಇರು’ ಅಂತ ಅಭಯ ನೀಡಿದಂತೆನಿಸುತ್ತದೆ..

(ಕೃತಿ: ಉಡದಾರ (ಪ್ರಬಂಧಗಳ ಸಂಕಲನ), ಲೇಖಕರು: ಶರಣಬಸವ ಕೆ. ಗುಡದಿನ್ನಿ, ಪ್ರಕಾಶಕರು: ಶ್ರೀಗೌರಿ ಪ್ರಕಾಶನ ,ಬೆಲೆ:100/-)