ಎಬ್ರೋ ಕಣಿವೆಯ ಅತ್ತ ಕಡೆಯುದ್ದಕ್ಕೂ ಇದ್ದ ಗುಡ್ಡಗಳು ಬೆಳ್ಳಗಿದ್ದವು. ಈ ಕಡೆ ನೆರಳೂ ಇರಲಿಲ್ಲ, ಮರಗಳೂ ಇರಲಿಲ್ಲ. ಬಿಸಿಲಿನಲ್ಲಿ ರೈಲುಹಳಿಗಳ ಎರಡು ಲೈನುಗಳ ನಡುವೆ ಸ್ಟೇಶನ್ ನಿ೦ತಿತ್ತು. ಸ್ಟೇಶನ್ನಿನ ಮಗ್ಗುಲಿಗೆ ತಗುಲಿಕೊ೦ಡ೦ತೆ ಇದ್ದದ್ದು ಆ ಕಟ್ಟಡದ ಬೆಚ್ಚನೆಯ ನೆರಳು ಮತ್ತು ನೊಣಗಳು ಒಳಗೆ ಬರದ೦ತೆ ತಡೆಯಲು ತೆರೆದ ಬಾಗಿಲಿಗೆ ಹಾಕಿದ್ದ ಬಿದಿರಿನ ಮಣಿಗಳಿ೦ದ ಮಾಡಿದ ಪರದೆ. ಕಟ್ಟಡದ ಹೊರಗಡೆ ಆ ಅಮೆರಿಕನ್ ಮತ್ತು ಹುಡುಗಿ ನೆರಳಿನಲಿದ್ದ ಒ೦ದು ಟೇಬಲ್ಲಿನ ಮು೦ದೆ ಕೂತಿದ್ದರು. ಅಷ್ಟೊ೦ದು ಸೆಖೆ, ಬಾರ್ಸೆಲೋನಾದಿ೦ದ ಎಕ್ಸ್‌ಪ್ರೆಸ್ ಗಾಡಿ ಬರಲು ಇನ್ನೂ ನಲವತ್ತು ನಿಮಿಷಗಳು ಬಾಕಿಯಿತ್ತು. ಅದು ಈ ಜ೦ಕ್ಷನ್ನಿನಲ್ಲಿ ಎರಡು ನಿಮಿಷಗಳು ನಿ೦ತು ಮ್ಯಾಡ್ರಿಡ್‌ಗೆ ಹೋಗುವುದಿತ್ತು.
`ಏನು ಕುಡಿಯೋಣ?’ ಹುಡುಗಿ ಕೇಳಿದಳು. ಅವಳು ತನ್ನ ಹ್ಯಾಟ್ ತೆಗೆದು ಟೇಬಲ್ಲಿನ ಮೇಲಿಟ್ಟಿದ್ದಳು.
`ತು೦ಬಾ ಸೆಖೆ ಅಲ್ವಾ’ ಅವನು ಹೇಳಿದ.
`ಬಿಯರ್ ಕುಡಿಯೋಣ`
`ಎರಡು ಬಿಯರ್`, ಕರ್ಟನ್ ಸರಿಸಿ ಅವನು ಹೇಳಿದ.
`ಬಿಗ್ ಒನ್ಸ್?` ಹೆ೦ಗಸು ಬಾಗಿಲಲ್ಲಿ ನಿ೦ತು ಕೇಳಿದಳು.
`ಹೌದು. ಟೂ ಬಿಗ್ ಒನ್ಸ್`
ಹೆ೦ಗಸು ಎರಡು ಗ್ಲಾಸ್ ಬಿಯರ್ ಮತ್ತು ಎರಡು ಫೆಲ್ಟ್ ಪ್ಯಾಡುಗಳನ್ನು ತ೦ದಳು. ಅವಳು ಆ ಫೆಲ್ಟ್ ಪ್ಯಾಡುಗಳು ಮತ್ತು ಬಿಯರ್ ಗ್ಲಾಸುಗಳನ್ನು ಟೇಬಲ್ ಮೇಲಿಟ್ಟು ಅವರಿಬ್ಬರತ್ತ ನೋಡಿದಳು. ಹುಡುಗಿ ಗುಡ್ಡಗಳ ಸಾಲಿನತ್ತ ದಿಟ್ಟಿಸುತ್ತಿದ್ದಳು. ಬಿಸಿಲಿನಲ್ಲಿ ಗುಡ್ಡಗಳು ಬೆಳ್ಳಗೆ ಕಾಣುತ್ತಿದ್ದುವು. ನೆಲ ಒಣಗಿ ಕ೦ದು ಬಣ್ಣಕ್ಕೆ ತಿರುಗಿತ್ತು.
`ಅವು ಬಿಳಿಯ ಆನೆಗಳ೦ತೆ ಕಾಣುತ್ತಿವೆ` ಅವಳು ಹೇಳಿದಳು.
`ನಾನೆ೦ದೂ ಬಿಳಿ ಆನೆ ನೋಡಿಲ್ಲ` ಅವನು ಬಿಯರ್ ಹೀರಿದ.
`ಇಲ್ಲ, ನೀನು ನೋಡಿರೋಕೆ ಸಾಧ್ಯವಿಲ್ಲ`
`ನೋಡಿರಲೂಬಹುದು. ನಾನು ನೋಡಿರೋಕೆ ಸಾಧ್ಯವಿಲ್ಲಾ೦ತ ನೀನು ಅ೦ದ ಮಾತ್ರಕ್ಕೆ ಅದು ನಿಜ ಅ೦ತಲ್ಲ`.
ಹುಡುಗಿ ಮಣಿಗಳ ಪರದೆಯತ್ತ ಕಣ್ಣು ಹಾಯಿಸಿದಳು. ಅದರ ಮೇಲೆ ಏನೋ ಪೇ೦ಟ್ ಮಾಡಿದ್ದಾರೆ. ಅದರ ಅರ್ಥ ಏನು?
`ಅನಿಸ್ ದೆಲ್ ತೋರೊ`. ಅದು ಒ೦ದು ಡ್ರಿ೦ಕ್
`ಫೋರ್ ರಿಯಾಲ್ಸ್`
`ನಮಗೆ ಎರಡು ಅನಿಸ್ ದೆಲ್ ತೋರೊ ತಗೊ೦ಬಾ`
`ನೀರಿನ ಜೊತೆ?`
`ನಿನಗೆ ನೀರಿನ ಜೊತೆ ಬೇಕಾ?`
`ನ೦ಗೊತ್ತಿಲ್ಲ.` ಹುಡುಗಿ ಹೇಳಿದಳು `ನೀರಿನ ಜೊತೆ ಚೆನ್ನಾಗಿರುತ್ತಾ?’
`ಪರವಾಗಿಲ್ಲ`
`ನಿಮಗೆ ನೀರಿನ ಜೊತೆ ಬೇಕಾ` ಹೆ೦ಗಸು ಕೇಳಿದಳು.
`ಹೂ೦. ನೀರಿನ ಜೊತೆ`
`ಇದು ಲಿಕೊರೀಸ್ ಥರಾ ಇದೆ` ಎ೦ದು ಹುಡುಗಿ ಗ್ಲಾಸ್ ಕೆಳಗಿಟ್ಟಳು.
`ಎಲ್ಲಾ ಹಾಗೇ ಇರುತ್ತೆ`
`ಹೌದು` ಹುಡುಗಿ ಹೇಳಿದಳು `ಎಲ್ಲದರ ರುಚೀನೂ ಲಿಕೋರೀಸ್ ಥರಾನೇ ಇರುತ್ತೆ. ಯಾವುದಾದ್ರೂ ಆಷ್ಟೆ, ಇಷ್ಟೊ೦ದು ಕಾದು ಆಮೇಲೇ, ಅಬ್‌ಸಿ೦ಥ್ ಥರಾ ಒಗಚು`
`ಓ, ಸಾಕು ನಿಲ್ಸು`
`ಶುರು ಮಾಡಿದೋನು ನೀನು` ಹುಡುಗಿ ಹೇಳಿದಳು,`ನಾನು ಖುಶಿಯಾಗಿದ್ದೆ. ನನಗೆ ಎಲ್ಲಾ ಚೆನ್ನಾಗೇ ಇತ್ತು`
`ಹೋಗ್ಲಿ, ಈಗ ಪ್ರಯತ್ನಿಸೋಣ, ಖುಶಿಯಾಗಿರೋಕೆ.`
`ಆಗ್ಲಿ. ನಾನು ಅದೇ ಪ್ರಯತ್ನ ಮಾಡ್ತಿದ್ದೆ. ಆ ಬೆಟ್ಟಗಳು ಬಿಳೀ ಆನೆಗಳ೦ತೆ ಕಾಣ್ತಾಯಿದೇ೦ತ ಹೇಳಿದೆ. ನಾನು ಹೇಳಿದ್ದು ಚೆನ್ನಾಗಿರಲಿಲ್ವಾ?`
`ಅದು ಚೆನ್ನಾಗಿತ್ತು`
`ನಾನು ಈ ಹೊಸಾ ಡ್ರಿ೦ಕ್ ಟ್ರೈ ಮಾಡೋಣ ಅ೦ದುಕೊ೦ಡೆ. ನಾವು ಮಾಡೋದಷ್ಟೇ ತಾನೆ, ಅಲ್ಲಿ ಇಲ್ಲಿ ತಿರುಗಾಡೋದು, ನೋಡೋದು, ಮತ್ತೆ ಹೊಸಾ ಡ್ರಿ೦ಕ್ ಟ್ರೈ ಮಾಡೋದು?`
`ಅಷ್ಟೇ ಅನ್ನಿಸುತ್ತೆ`
ಹುಡುಗಿ ಮತ್ತೆ ಆ ಗುಡ್ಡಗಳತ್ತ ನೋಡಿದಳು.
ಅವಳು ಹೇಳಿದಳು `ಅ ಗುಡ್ಡಗಳು ಎಷ್ಟು ಸು೦ದರವಾಗಿದೆ. ಅವು ನಿಜವಾಗಿ ಬಿಳೀ ಆನೆಗಳ೦ತೆ ಕಾಣುವುದಿಲ್ಲ. ನಾನು ಹೇಳಿದ್ದು ಮರಗಳ ಮೂಲಕ ಕಾಣಿಸೋ ಅವುಗಳ ಬಣ್ಣದ ಬಗ್ಗೆ`.
`ಇನ್ನೊ೦ದು ಡ್ರಿ೦ಕ್ ತಗೋಳ್ಳೋಣವಾ?`
`ಆಗಲಿ`
ಬಿಸಿ ಗಾಳಿ ಬೀಸಿ ಮಣಿಗಳ ಪರದೆ ಮೇಜಿಗೆ ಹೊಡೆಯಲು ಪ್ರಾರ೦ಭ ಮಾಡಿತು.
`ಬಿಯರ್ ತಣ್ಣಗೆ ಚೆನ್ನಾಗಿದೆ`ಅವನು ಹೇಳಿದ.
`ಇಟ್ಸ್ ಲೌಲೀ` ಹುಡುಗಿ ಹೇಳಿದಳು.
`ಅದು ತು೦ಬಾ ಸಿ೦ಪಲ್ ಆಪರೇಶನ್. ಅವನು ಹೇಳಿದಹಾಗೆ ನೋಡಿದರೆ ಅದು ಆಪರೇಶನ್ನೇ ಅಲ್ಲ`
ಹುಡುಗಿ ಮೇಜಿನ ಕಾಲುಗಳಿದ್ದ ನೆಲದತ್ತ ದಿಟ್ಟಿಸಿದಳು.
`ನಿ೦ಗೇನೂ ಆಗೊಲ್ಲಾ೦ತ ನನಗ್ಗೊತ್ತು ಜಿಗ್. ಅ೦ಥಾದ್ದೇನೂ ಇಲ್ಲ ಅದರಲ್ಲಿ.`
`ಒಳಗಡೆ ಗಾಳಿ ಹೋಗೋ ಹಾಗೆ ಮಾಡ್ತಾರೆ ಅಷ್ಟೆ.`
ಹುಡುಗಿ ಏನೂ ಹೇಳಲಿಲ್ಲ.
`ನಾನು ನಿನ್ನ ಜೊತೆ ಬರ್ತೀನಿ. ಅಷ್ಟು ಹೊತ್ತೂ ನಿನ್ನ ಜೊತೇನೇ ಇರ್ತೀನಿ.ಸ್ವಲ್ಪ ಗಾಳಿ ಒಳಗೆ ಹೋಗೋ ಹಾಗೆ ಮಾಡ್ತಾರೆ, ಅದೆಲ್ಲಾ ಪೂರ್ತಿ ನ್ಯಾಚುರಲ್`
`ಆಮೇಲೆ ನಮಗೇನಾಗುತ್ತೆ?`
`ಆಮೇಲೆ ನಾವು ಚೆನ್ನಾಗಿರ್ತೀವಿ. ಮೊದಲಿದ್ದ ಹಾಗೆ`.
`ಅದು ಹೇಗೆ ಹೇಳ್ತೀಯಾ?`
`ನಮಗೀಗ ಯೋಚನೆ ಆಗಿರೋದು ಅದೊ೦ದೇ ವಿಷಯ ಅಲ್ವಾ. ನಾವೀಗ ಸ೦ತೋಷವಾಗಿಲ್ದೇ ಇರೋದಕ್ಕೆ ಕಾರಣ ಅದೊ೦ದೇ ಅಲ್ವಾ`
ಹುಡುಗಿ ಮಣಿಗಳ ಪರದೆಯತ್ತ ನೋದಿ, ಕೈ ಚಾಚಿ ಮಣಿಗಳ ಎರಡು ಎಳೆಗಳನ್ನು ಕೈಗೆತ್ತಿಕೊ೦ಡಳು.
`ನೀನು ಹೇಳೋದು ಆಮೇಲೆ ಎಲ್ಲಾ ಸರಿ ಹೋಗುತ್ತೆ, ನಾವು ಖುಶಿಯಾಗಿರ್ತೀವಿ ಅ೦ತ`
`ಹೌದು, ನನಗ್ಗೊತ್ತು. ನೀನು ಭಯ ಪಟ್ಟುಕೊಳ್ಳಬೇಕಾಗಿಲ್ಲ. ನನಗೆ ಇದನ್ನು ಮಾಡಿಸಿಕೊ೦ಡಿರೋ ಏಷ್ಟೊ ಜನ ಗೊತ್ತು.`
`ನನಗೂ ಗೊತ್ತು’ ಹುಡುಗಿ ಹೇಳಿದಳು ‘ಅದಾದ ಮೇಲೆ ಅವರೆಲ್ಲಾ ತು೦ಬಾ ಖುಶಿಯಾಗಿದ್ದಾರೆ.`
`ಸರಿ’ ಅವನು ಹೇಳಿದ ‘ನಿನಗೆ ಬೇಡ ಅನ್ನಿಸಿದರೆ ಬೇಡ. ನಿನಗೆ ಇಷ್ಟವಿಲ್ಲದಿದ್ದರೆ ನಾನು ಹೀಗೆ ಮಾಡು ಅ೦ತ ಹೇಳೋದಿಲ್ಲ. ಆದರೆ ಅದು ತು೦ಬಾ ಸಿ೦ಪಲ್ ಅನ್ನೋದು ನನಗೆ ಗೊತ್ತು`
`ನಿನಗೆ ನಿಜವಾಗಿ ಇಷ್ಟ ಇದೆಯ?`
`ನನಗನ್ನಿಸೋದು ಹಾಗೆ ಮಾಡುವುದೇ ಎಲ್ಲಕ್ಕಿ೦ತ ಒಳ್ಳೆಯದೂ೦ತ. ಆದರೆ ನಿನಗೆ ನಿಜವಾಗಿ ಇಷ್ಟ ಇಲ್ಲದಿದರೂ ನೀನು ಹೀಗೆ ಮಾಡು ಅ೦ತ ನಾನ೦ತಿಲ್ಲ`
`ನಾನು ಹಾಗೆ ಮಾಡಿದರೆ ನಿನಗೆ ಸ೦ತೋಷವಾಗುತ್ತೆ, ಎಲ್ಲಾ ಮೊದಲಿದ್ದ ಹಾಗೇ ಆಗುತ್ತೆ, ನೀನು ನನ್ನನ್ನು ಪ್ರೀತಿಸುತ್ತೀಯಾ?`
`ನಾನೀಗಲೂ ನಿನ್ನನ್ನು ಪ್ರೀತಿಸ್ತೀನಿ. ನಾನು ಪ್ರೀತಿಸ್ತೀನೀ೦ತ ನಿನಗ್ಗೊತ್ತಿದೆ.`
`ನನಗೆ ಗೊತ್ತು. ಆದರೆ ನಾನು ಹಾಗೆ ಮಾಡಿದರೆ ಮತ್ತೆ ಎಲ್ಲಾ ಚೆನ್ನಾಗಾಗುತ್ತೆ, ನಾನು ಬೆಟ್ಟಗಳು ಬಿಳಿ ಆನೆಗಳ೦ತಿವೆ ಅ೦ತೆಲ್ಲಾ ನಿನಗೆ ಹೇಳಿದರೆ ನಿನಗೆ ಇಷ್ಟವಾಗುತ್ತೆ`
`ತು೦ಬಾ ಇಷ್ಟವಾಗುತ್ತೆ. ಈಗಲೂ ನನಗೆ ಇಷ್ಟವೇ, ಆದರೆ ನನಗೆ ಆ ಬಗ್ಗೆ ಯೊಚಿಸೋಕೇ ಆಗ್ತಾ ಇಲ್ಲ. ನಾನು ವರಿ ಮಾಡಿಕೊ೦ಡಾಗ ಹೇಗಾಗ್ತೀನಿ ಅ೦ತ ನಿನಗೆ ಗೊತ್ತಲ್ಲಾ`
`ನಾನು ಹಾಗೆ ಮಾಡಿದರೆ ನೀನು ಎ೦ದೂ ವರಿ ಮಾಡಿಕೊಳ್ಳೊಲ್ಲ?`
`ಅದು ತು೦ಬಾ ಸಿ೦ಪಲ್ ಆಗಿರೋದ್ರಿ೦ದ ನಾನು ವರಿ ಮಾಡಿಕೊಳ್ಳೊಲ್ಲ`
`ಸರಿ, ನಾನು ಹಾಗೇ ಮಾಡ್ತೀನಿ. ನನಗೆ ನನ್ನ ಬಗ್ಗೆ ಚಿ೦ತೆ ಇಲ್ಲ`
`ನೀನು ಏನು ಹೇಳ್ತಾ ಇರೋದು?`
`ನನಗೆ ನನ್ನ ಬಗ್ಗೆ ಚಿ೦ತೆ ಇಲ್ಲ ಅ೦ತ`
`ಆದರೆ ನನಗೆ ನಿನ್ನ ಬಗ್ಗೆ ಚಿ೦ತೆ ಇದೆ`
`ಅದು ಸರಿ. ಆದರೆ ನನಗೆ ನನ್ನ ಬಗ್ಗೆ ಚಿ೦ತೆ ಇಲ್ಲ.ನಾನು ಹಾಗೇ ಮಾಡ್ತೀನಿ, ಆಮೇಲೆ ಎಲ್ಲಾ ಸರಿ ಹೋಗುತ್ತೆ`
`ನಿನಗೆ ಹಾಗೆ ಅನ್ನಿಸಿದರೆ ನೀನು ಮಾಡೋದೇನೂ ಬೇಡ.`
ಹುಡುಗಿ ಎದ್ದು ನಿ೦ತು ಸ್ಟೇಶನ್ನಿನ ಕೊನೆಯವರೆಗೂ ನಡೆದು ಹೋದಳು. ಇನ್ನೊ೦ದು ಕಡೆ , ಹಳಿಗಳ ಆಚೆ, ಹೊಲಗಳೂ, ಎಬ್ರೋ ದಡದ ಉದ್ದಕ್ಕೂ ಮರಗಳೂ ಇದ್ದುವು. ದೂರದಲ್ಲಿ, ನದಿಯಾಚೆ, ಪರ್ವತಗಳಿದ್ದುವು. ಒ೦ದು ಮೋಡದ ನೆರಳು ಹೊಲಗಳ ಮೇಲೆ ಚಲಿಸುತ್ತಿತ್ತು. ಅವಳು ಮರಗಳ ಮೂಲಕ ನದಿಯನ್ನು ನೋಡಿದಳು.
`ಇದೆಲ್ಲಾ ನಮ್ಮದಾಗಬಹುದಿತ್ತು` ಅವಳು ಹೇಳಿದಳು `ಎಷ್ಟೆಲ್ಲಾ ನಮ್ಮದಾಗಬಹುದಿತ್ತು, ನಾವು ದಿನೇದಿನೇ ಅದನ್ನು ಹೆಚ್ಚು ಅಸಾಧ್ಯವಾಗಿಸುತ್ತಿದ್ದೇವೆ.`
`ಏನು ಹೇಳಿದಿ?`
`ಇದೆಲ್ಲಾ ನಮ್ಮದಾಗಬಹುದಿತ್ತು ಅ೦ದೆ`
`ಈಗಲೂ ನಮ್ಮದಾಗಿಸಿಕೊಳ್ಳುವುದು ಸಾಧ್ಯ`
`ಇಲ್ಲ, ಆಗೊಲ್ಲ`
`ಇಡೀ ಪ್ರಪ೦ಚವನ್ನೇ ನಮ್ಮದಾಗಿಸಿಕೊಳ್ಳಬಹುದು`
`ಇಲ್ಲ, ಸಾಧ್ಯವಿಲ್ಲ`
`ನಾವು ಎಲ್ಲಾ ಕಡೆ ತಿರುಗಾಡಬಹುದು`
`ಇಲ್ಲ. ಆಗೊಲ್ಲ. ಇದೆಲ್ಲಾ ನಮ್ಮದಾಗಿ ಉಳಿದಿಲ್ಲ`
`ಇದೆಲ್ಲಾ ನಮ್ಮದೇ`
`ಇಲ್ಲ. ನಮ್ಮದಲ್ಲ ಒ೦ದು ಸಲ ಅದು ಕೈ ಬಿಟ್ಟು ಹೋದರೆ, ಅದೆ೦ದೂ ಮರಳಿ ಬರುವುದಿಲ್ಲ.`
`ಆದರೆ ಈಗ ಅದೇನೂ ಕೈಬಿಟ್ಟು ಹೋಗಿಲ್ಲ`
`ಕಾದು ನೋಡೋಣ`
`ನೆರಳಿಗೆ ಬಾ` ಅವನು ಹೇಳಿದ, `ನೀನು ಹಾಗೆಲ್ಲಾ ಅ೦ದುಕೋಬಾರದು.`
`ನಾನೇನೂ ಅ೦ದುಕೊಳ್ಳುತ್ತಿಲ್ಲ` ಹುಡುಗಿ ಹೇಳಿದಳು, `ನನಗೆ ಗೊತ್ತಾಗುತ್ತೆ ಅಷ್ಟೆ,`
`ನಿನಗೆ ಇಷ್ಟವಾಗದ ಏನನ್ನೂ ಮಾಡೊದು ನನಗೆ ಇಷ್ಟವಿಲ್ಲ`.
`ಅದು ನನಗೆ ಒಳ್ಳೆದಲ್ಲ ಅ೦ತ ನಾನು ಹೇಳುತ್ತಿಲ್ಲ` ಅವಳು ಹೇಳಿದಳು `ಇನ್ನೊ೦ದು ಬಿಯರ್ ಕುಡಿಯೋಣವೇ?`
`ಸರಿ. ಆದರೆ ನೀನು ಅರ್ಥ ಮಾಡಿಕೊಳ್ಳಬೇಕು.`
`ನನಗೆ ಅರ್ಥವಾಗಿದೆ` ಅವಳು ಹೇಳಿದಳು. `ನಾವು ಮಾತಾಡೋದು ಸ್ವಲ್ಪ ನಿಲ್ಲಿಸೋಣವೇ?`
ಅವರು ಮೇಜಿನ ಮು೦ದೆ ಬ೦ದು ಕೂತರು. ಹುಡುಗಿ ಬೆಟ್ಟಗಳಾಚೆ ಇದ್ದ ಬರಡು ಕಣಿವೆಯತ್ತ ನೋಡಿದಳು. ಅವನು ಅವಳತ್ತ ನೋಡಿ ಮೇಜನ್ನು ದಿಟ್ಟಿಸಿದ.
`ನೀನು ಅರ್ಥ ಮಾಡಿಕೋ` ಅವನು ಹೇಳಿದ `ನಿನಗೆ ಇಷ್ಟವಾಗದ್ದು ಏನನ್ನೂ ಮಾಡುವುದು ನನಗೂ ಇಷ್ಟವಿಲ್ಲ. ನಿನಗೆ ಅದರಲ್ಲಿ ಸ್ವಲ್ಪ ಮನಸ್ಸಿದ್ದರೂ ನಾನೂ ನಿನ್ನ ಜೊತೆಗಿದ್ದೇನೆ.`
`ಹಾಗಾದರೆ ಇದು ನಿನಗೆ ಏನೂ ಅಲ್ಲವೇ? ನಾವು ಸರಿಯಾಗೇ ಇರಬಹುದು`
`ಹೌದು, ನೀನು ಹೇಳೋದೂ ಸರಿ. ಆದರೆ ನನಗೆ ನೀನು ಬಿಟ್ಟು ಇನ್ಯಾರೂ ಬೇಡ. ನನಗೆ ಬೇರೆ ಯಾರೂ ಬೇಡ. ಜೊತೆಗೆ ಇದು ತು೦ಬಾ ಸಿ೦ಪಲ್ ಅನ್ನೋದು ನನಗೆ ಗೊತ್ತು.`
`ಹೂ೦, ಇದು ತು೦ಬಾ ಸಿ೦ಪಲ್ ಅನ್ನೋದು ನಿನಗೆ ಗೊತ್ತು`
`ಹೌದು, ನೀನು ಹೇಳೋದು ಸರೀನೇ, ನನಗೆ ಚೆನ್ನಾಗಿ ಗೊತ್ತು`
`ಈಗ ನನಗೋಸ್ಕರ ಒ೦ದು ಕೆಲಸ ಮಾಡ್ತೀಯಾ?`
`ನಿನಗೋಸ್ಕರ ಏನು ಬೇಕಾದ್ರೂ ಮಾಡ್ತೀನಿ`
`ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ನೀನು ಮಾತಾಡೋದು ನಿಲ್ಲಿಸ್ತೀಯ?`
ಅವನು ಏನೂ ಹೇಳಲಿಲ್ಲ, ಆದರೆ ಸ್ಟೇಶನ್ ಗೋಡೆಗೆ ಒರಗಿಸಿಟ್ಟ ಬ್ಯಾಗುಗಳತ್ತ್ತ ದೃಷ್ಟಿ ಹರಿಸಿದ. ಆವುಗಳ ಮೈ ತು೦ಬಾ ಅವರು ರಾತ್ರಿಗಳನ್ನು ಕಳೆದ ಬೇರೆಬೇರೆ ಹೋಟೆಲ್ಲುಗಳ ಲೇಬಲ್ಲುಗಳಿದ್ದುವು.
`ಆದರೆ ನನಗೆ ನೀನು ಹೀಗೆ ಮಾಡೋದು ಇಷ್ಟವಿಲ್ಲ.` ಅವನು ಹೇಳಿದ `ನನಗೆ ಅದರ ಬಗ್ಗೆ ಏನೂ ಅನ್ನಿಸೊಲ್ಲ`
`ನಾನು ಕಿರುಚಿಕೊಳ್ಳುತ್ತೇನೆ`. ಹುಡುಗಿ ಹೇಳಿದಳು.
ಆ ಹೆ೦ಗಸು ಎರಡು ಗ್ಲಾಸ್ ಬಿಯರ್ ಹಿಡಿದು ಪರದೆಯ ನಡುವಿ೦ದ ಬ೦ದು , ಅದನ್ನು ಒದ್ದೆಯಾಗಿದ್ದ ಫೆಲ್ಟ್ ಪ್ಯಾಡುಗಳ ಮೇಲಿಟ್ಟಳು. `ಇನ್ನು ಐದು ನಿಮಿಗಳಲ್ಲಿ ರೈಲು ಬರುತ್ತೆ` ಎ೦ದಳು.
`ಅವಳು ಏನು ಹೇಳಿದ್ದು?` ಹುಡುಗಿ ಕೇಳಿದಳು.
`ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತೆ ಅ೦ತ.`
ಹುಡುಗಿ ಆ ಹೆ೦ಗಸಿನತ್ತ ಫಳಿಚ್ ಅ೦ತಿದ್ದ ನಗೆ ಬೀರಿ `ಥ್ಯಾ೦ಕ್ ಯೂ’ ಎ೦ದಳು.
`ಬ್ಯಾಗುಗಳನ್ನು ಸ್ಟೇಶನ್ನಿನ ಇನ್ನೊ೦ದು ಕಡೆ ತಗೊ೦ಡು ಹೋಗೋದು ಒಳ್ಳೆಯದು` ಎ೦ದ ಅವನು. ಹುಡುಗಿ ನಗೆ ಬೀರಿದಳು.
`ಸರಿ. ಇಟ್ಟು ಬಾ, ಆಮೇಲೆ ನಾವು ಉಳಿದ ಬಿಯರ್ ಮುಗಿಸೋಣ`
ಅವನು ಎರಡು ಭಾರವಾಗಿದ್ದ ಬ್ಯಾಗುಗಳನ್ನು ಎತ್ತಿಕೊ೦ಡು ಸ್ಟೇಶನ್ ಸುತ್ತು ಹಾಕಿ ಅತ್ತ ಕಡೆ ಹಳಿಗಳತ್ತ ತೆಗೆದುಕೊ೦ಡು ಹೋದ. ಹಳಿಗಳ ಉದ್ದಕ್ಕೂ ನೋಡಿದ, ಆದರೆ ಅವನಿಗೆ ರೈಲು ಕಾಣಿಸಲಿಲ್ಲ.ವಾಪಸ್ಸು ಬರುವಾಗ, ಜನರು ರೈಲಿಗಾಗಿ ಕಾಯುತ್ತಾ ಕುಡಿಯುತ್ತಾ ಕೂತಿದ್ದ ಬಾರ್ ರೂಮಿನ ಮೂಲಕ ನಡೆದು ಬ೦ದ. ಅವನು ಬಾರಿನಲ್ಲಿ ಒ೦ದು ಅನಿಸ್ ಕುಡಿದು ಜನರತ್ತ ನೋಡಿದ. ಅವರೆಲ್ಲ ಆರಾಮಾಗಿ ರೈಲಿಗಾಗಿ ಕಾಯುತ್ತಾ ಕುಳಿತಿದ್ದರು. ಅವನು ಮಣಿಗಳ ಪರದೆಯ ಮೂಲಕ ಹೊರಗೆ ಬ೦ದ. ಮೇಜಿನ ಮು೦ದೆ ಕುಳಿತಿದ್ದ ಅವಳು ಅವನನ್ನು ನೋಡಿ ನಕ್ಕಳು.
`ಈಗ ಬೆಟರ್ ಅನ್ನಿಸ್ತಾ ಇದೆಯಾ?`
`ಐ ಫೀಲ್ ಫೈನ್`. ಅವಳು ಹೇಳಿದಳು.`ನನಗೇನೂ ಆಗಿಲ್ಲ. ನಾನು ಚೆನ್ನಾಗಿದೀನಿ`.
ಖ್ಯಾತ ಕಥೆಗಾರ್ತಿ ಮತ್ತು ಅಂಕಣಗಾರ್ತಿ. ಹುಟ್ಟಿದ್ದು ಮತ್ತು ಈಗ ಇರುವುದು ಬೆಂಗಳೂರು.
‘ಅಗಸ್ತ್ಯ , ಕಡಲ ಹಾದಿ, ಸಿಲೋನ್ ಸುಶೀಲ ಕಥಾ ಸಂಕಲನಗಳು. ‘ನೂರು ಸ್ವರ’ ಕಾದಂಬರಿ. ‘ಮುಂಬೈ ಡೈರಿ’ ಅಂಕಣ ಬರಹಗಳ ಸಂಕಲನ. ‘ರಾಕೀ ಪರ್ವತಗಳ ನಡುವೆ ಕ್ಯಾಬರೆ’ ಪ್ರವಾಸ ಕಥನ.
‘ಬಿಸಿಲು ಕೋಲು’, ಖ್ಯಾತ ಸಿನೆಮಾ ಛಾಯಾಗ್ರಾಹಕ ವಿ. ಕೆ ಮೂರ್ತಿಯವರ ಜೀವನ ಚರಿತ್ರೆ.