ಬಹುಶಃ ನಾನೂ ಯುವಕನಾಗಿದ್ದಾಗ ಅವನಂತೆಯೇ ಯೋಚಿದ್ದೆನೆ? ಇಲ್ಲವಲ್ಲ! ಎಲ್ಲರೂ ನಮ್ಮ ಹಾಗೆಯೇ ಯೋಚಿಸಬೇಕು ಅಂತಿಲ್ಲವಲ್ಲ! ನಾವೇನಾದರೂ ಪಟ್ಟಣದಲ್ಲಿ ಸುಖ ಇಲ್ಲ ಮಾರಾಯ ಅಂತ ಹೇಳಿದರೆ ಅಲ್ಲಿನವರು “ನಿಮ್ಮ ಹತ್ರ ರೊಕ್ಕ ಜಾಸ್ತಿ ಆಗಿ ಕೊಳಿತೈತಿ ಬಿಡ್ರಿ. ಅದಕ್ಕ ಹಿಂಗ ಮಾತಾಡತೀರಿ” ಅಂತ ಗೊಳ್ಳ ಅಂತ ನಗುತ್ತಾರೆ!
ಕೆಂಡಸಂಪಿಗೆಯಲ್ಲಿ ಪ್ರಕಟವಾದ ಗುರುಪ್ರಸಾದ ಕುರ್ತಕೋಟಿಯವರ ಅಂಕಣ ಬರಹ “ಗ್ರಾಮ ಡ್ರಾಮಾಯಣ” ಇದೀಗ ಪುಸ್ತಕ ರೂಪದಲ್ಲಿ ಅಚ್ಚಾಗುತ್ತಿದ್ದು, ಆಗಸ್ಟ್‌ ಕೊನೆಗೆ ಓದುಗರ ಕೈ ಸೇರಲಿದೆ. ಅದರ ಒಂದು ಬರಹ ನಿಮ್ಮ ಓದಿಗೆ

ಅವತ್ತು ಮದ್ಯಾಹ್ನ ಶಿರಸಿಯಲ್ಲಿ ಒಂದು ಕೆಲಸ ಮುಗಿಸಿಕೊಂಡು, ಅಲ್ಲಿಯೇ ಊಟ ಮುಗಿಸಿ, ದಾಸನಕೊಪ್ಪಕ್ಕೆ ಬರುವಾಗ ದಾರಿಯಲ್ಲಿ ಬಿಸಲುಕೊಪ್ಪದ ಶಂಭುಲಿಂಗ ಮಾವನ ಮನೆಗೆ ಹೊಕ್ಕು ಬರೋಣ ಅಂತ ನಾನು ನಾಗಣ್ಣ ಹೋದೆವು. ನಮಗೆ ಮಾವ ಅತ್ತೆ ತುಂಬಾ ಆದರ ಮಾಡುತ್ತಾರೆ. ಊಟ ಮುಗಿಸಿಯೇ ಹೋಗಬೇಕು ಅಂತ ಪಟ್ಟು ಹಿಡಿಯುತ್ತಾರೆ. ಹೀಗಾಗಿ ಆದಷ್ಟು ಊಟದ ಸಮಯ ತಪ್ಪಿಸಿಯೋ ಅಥವಾ ಊಟ ಮಾಡಿಕೊಂಡೆ ಅವರ ಮನೆಗೆ ಹೋಗೋದು ವಾಡಿಕೆ.

ಅಪರೂಪ ಆಗಿ ಬಿಟ್ಯಲ್ಲೋ ಗುರುಪ್ರಸಾದ್.. ಆರಾಮ ಇದ್ರಾ ಇಬ್ರೂ? ಭತ್ತ ಬಂತನೋ? ಎಷ್ಟು ಚೀಲ ಆಗ್ತೊ… ನಮಗೂ ಒಂದಿಷ್ಟು ಕೊಡು ಮಾರಾಯ… ಎಂಬ ತಮ್ಮ ಆತ್ಮೀಯ ಮಾತಿನ ಮಳೆಯನ್ನು ಸುರಿಸಿ ನಮ್ಮನ್ನು ತೊಯ್ದು ತೊಪ್ಪೆ ಮಾಡಿದರು!

ಭತ್ತ ಕಟಾವು ಆದ ಮೇಲೆ ಏನು ಮಾಡಬೇಕು ಅಂತ ಇದೀಯ ಅಂತೆಲ್ಲ ವಿಚಾರಿಸಿದರು. ನಿಜ ಹೇಳಬೇಕು ಅಂದರೆ ನಾನು ಯಾವುದೇ ಧಾವಂತದಲ್ಲಿ ಇರಲಿಲ್ಲ. ಅಲ್ಲಿನ ಎಲ್ಲರೂ ಮಾಡುತ್ತಿದ್ದುದು ಅಡಿಕೆ ಬೆಳೆ. ಆ ಸಮಯದಲ್ಲಿ ತುಂಬಾ ರೈತರು ತಮ್ಮ ಗದ್ದೆಗಳನ್ನು ಅಡಿಕೆ ತೋಟವಾಗಿ ಪರಿವರ್ತನೆ ಮಾಡುತ್ತಿದ್ದರು. ಯಾಕೆಂದರೆ ಅದರ ಬೆಲೆ ಏರು ಗತಿಯಲ್ಲಿ ಸಾಗಿತ್ತು. ಆದರೆ ಅಡಿಕೆಯ ಬಗ್ಗೆ ನನಗೆ ಅಷ್ಟು ಒಲವು ಇರಲಿಲ್ಲ. ನನ್ನ ತೋಟ ವೈವಿಧ್ಯಮಯ ಆಗಿರಬೇಕು ಅನ್ನುವುದು ನನ್ನ ಕನಸಾಗಿತ್ತು. ಬರೀ ಒಂದೇ ಬೆಳೆಯ ಮೇಲೆ ಅವಲಂಬಿಸುವುದು ನನಗೆ ಬೇಕಿರಲಿಲ್ಲ. ಮುಂದೊಮ್ಮೆ ಅಡಿಕೆ ಬೆಲೆ ಬಿದ್ದರೆ ಎಂಬ ಹೆದರಿಕೆಯಲ್ಲ, ಆದರೆ ಹೀಗೇ ಎಲ್ಲರೂ ಅಡಿಕೆ ಬೆಳೆದರೆ ಹೊಟ್ಟೆಯ ಗತಿ ಏನು? ಅಂತ ನಾನು ಯೋಚಿಸುತ್ತಿದ್ದೆ. ನಾನು ಹಣ್ಣು ಹಂಪಲ, ಕಾಳು ಕಡಿ ಬೆಳೆಯಬೇಕು ಅನಿಸುತ್ತಿತ್ತು. ಆದರೂ ಒಂದು ಎಕರೆಯಾದರೂ ಅಡಿಕೆ ಗಿಡಗಳನ್ನು ಹಾಕಿದರಾಯಿತು ಎಂಬ ಯೋಚನೆ ಇತ್ತಾದರೂ ಸಧ್ಯಕ್ಕೆ ಕೃಷಿ ಪ್ರಕ್ರಿಯೆಯ ಆನಂದವನ್ನು ಅನುಭವಿಸುತ್ತಿದ್ದೆ.

(ಗುರುಪ್ರಸಾದ ಕುರ್ತಕೋಟಿ)

ಮಾವನಿಗೆ, ಒಂದು ಸಲ ನಮ್ಮ ಗದ್ದೆಗೆ ಬಂದು ಭತ್ತ ಹೇಗೆ ಬಂದಿದೆ ಅಂತ ನೋಡಿ ಹೇಳಿ ಅಂದೆ. ಮಧ್ಯದಲ್ಲಿ ಒಂದಿಷ್ಟು ದೊಡ್ಡ ದೊಡ್ಡ ಗಿಡಗಳಂತಹ ಕಳೆ ಕೂಡ ಬೆಳೀತಾ ಇದೆ ಎಂಬ ವಿಷಯವನ್ನೂ ತಿಳಿಸಿದೆ.

ಅದೆಂತಾ ಆಗ್ತಿಲ್ಲೆ ಮಾರಾಯ. ನೀನು ಕಳೆ ನಾಶಕ ಹೊಡೆದಿಲ್ಲ ಅಂದ ಮೇಲೆ ಕಳೆ ಮಾಮೂಲಿ.. ಎಂತದೂ ಆಗ್ತಿಲ್ಲೆ ಹೆದರಡ ಅಂತ ಅಭಯ ನೀಡಿದರು.

ಎಷ್ಟೇ ಆದರೂ ಅಂಬೆಗಾಲು ಇಡುತ್ತಿರುವ ರೈತರು ನಾವು. ಹೀಗೊಬ್ಬ ಹಿರಿಯರ ಮಾರ್ಗದರ್ಶನ ಸಲಹೆ ಸೂಚನೆಗಳು ಕಾಲಕಾಲಕ್ಕೆ ಬೇಕೆ ಬೇಕು. ರಾಮಚಂದ್ರ ಮಾವನಿಗೂ ನನ್ನ ಗದ್ದೆ ತೋರಿಸಿದ್ದೆ. ಅವರು ಗದ್ದೆಯನ್ನು ಅವಲೋಕಿಸಿ ಇಪ್ಪತ್ತೈದು ಚೀಲ ಭತ್ತ ಬರಬಹುದು ಅಂತ ಹೇಳಿದ್ದು ಖುಷಿ ಕೊಟ್ಟಿತ್ತು. ಅಲ್ಲಿನವರು ಭತ್ತ ತೆಗೆಯುವುದು ನೋಡಿದರೆ ಇಪ್ಪತ್ತೈದು ಚೀಲ ಏನೂ ಅಲ್ಲವಾದರೂ ನಾವು ಯಾವುದೇ ವಿಶೇಷ ತಯಾರಿ ಇಲ್ಲದೆ, ರಾಸಾಯನಿಕ ಬಳಸದೇ ಇಷ್ಟು ಇಳುವರಿ ಬಂದರೆ ದೊಡ್ಡ ಸಾಧನೆಯೇ ಸರಿ ಅಂದುಕೊಂಡೆ.

ಅತ್ತೆ ಮಾವರಿಗೆ ವಿದಾಯ ಹೇಳಿ ದಾಸನಕೊಪ್ಪಕ್ಕೆ ಹೊರಟೆವು. ಅಷ್ಟೊತ್ತಿಗೆ ರಾತ್ರಿ ಏಳು ಗಂಟೆ. ಮತ್ತೆ ಮನೆಗೆ ಹೋಗಿ ಅಡಿಗೆ ಮಾಡುವುದು ಬೇಡ ಅಂತ ಅಲ್ಲಿನ ಲಿಂಗಾಯತರ ಖಾನಾವಳಿಗೆ ಹೋದೆವು. ಮನೆ ಊಟಾ ತಪ್ಪಿದರೆ ಖಾನಾವಳಿ ಊಟ ನಮ್ಮ ಹೊಟ್ಟೆಗೆ ಹೊಂದುತ್ತದೆ. ಜೋಳದ ರೊಟ್ಟಿಯ ಮಹಿಮೆಯೇ ಅಂಥದ್ದು. ಅದು ಹೊಟ್ಟೆ ತುಂಬಿಸುತ್ತದೆ, ಜೊತೆಗೆ ಕಾಳು, ಪಲ್ಯ, ತಾಜಾ ಸೊಪ್ಪಿನ ಪಚಡಿ, ಬೆಳ್ಳುಳ್ಳಿ ಘಮದ ಸಾರು … ಆಹಾ ಅದನ್ನು ಸವಿಯುವುದೇ ಪರಮಾನಂದ! ಬರೋಬ್ಬರಿ ತಿಂದು ತೇಗಿ ಹಾಗೆಯೇ ಒಂದಿಷ್ಟು ದೂರ ನಡೆದುಕೊಂಡು ಹೋಗುತ್ತಿದ್ದಾಗ ಹಿಂದೆ ಯಾರೋ ಹಾರ್ನ್ ಹೊಡೆಯುತ್ತಿದ್ದದು ಕೇಳಿಸಿತು. ಇವನ್ಯಾರು ಅಂತ ತಿರುಗಿ ನೋಡಿದರೆ ಶ್ಯಾಮ ತನ್ನ ಹೊಚ್ಚ ಹೊಸ ಬೈಕಿನಲ್ಲಿ ನಿಂತಿದ್ದ.

ಮೊದಲೆಲ್ಲ ನಮ್ಮ ಹೊಲದ ಕೆಲಸಕ್ಕೆ ಬರುತ್ತಿದ್ದ. ನಮ್ಮ ಬಗ್ಗೆ ಎಲ್ಲವನ್ನೂ ಕೇಳುತ್ತಿದ್ದ ವಿಚಿತ್ರ ಕುತೂಹಲಿ ಹಾಗೂ ಕಾರಭಾರಿ ಎಂಬ ಬಲವಾದ ಕಾರಣದ ಜೊತೆಗೆ, ಸಧ್ಯಕ್ಕೆ ಹೊಲದಲ್ಲಿ ಏನೂ ಕೆಲಸವೂ ಇಲ್ಲ ಎಂಬ ನೆಪ ಮುಂದಿಟ್ಟುಕೊಂಡು ಅವನನ್ನು ಕೆಲಸದಿಂದ ಬಿಡಿಸಿದ್ದೆವು. ಅದಾದ ಮೇಲೆ ಈಗಲೆ ಸಿಕ್ಕಿದ್ದ.

ಏನ್ರೀ ಸರ ಪತ್ತೇನೆ ಇಲ್ಲ.. ನಿಮ್ಮ ಹಳೆ ಮನೀ ಕಡೆ ಹೋಗಿದ್ದೆ ನೀವು ಅಲ್ಲಿ ಇರಲಿಲ್ಲ ಅಂದ.. (ನಾವು ಎಲ್ಲಿದ್ದೇವೆ ಅಂತ ವಿಚಾರಿಸುವುದು ಕೂಡ ಅವನ ಕಾರುಭಾರಿ ವ್ಯಕ್ತಿತ್ವದ ಒಂದು ಕುರುಹೇ!)

ಹೊಸಕೊಪ್ಪದ ಮನೆಯನ್ನೂ ನಾವು ಬದಲಿಸಿ ದಾಸನಕೊಪ್ಪದಲ್ಲಿ ಒಂದು ಹೊಸ ಬಾಡಿಗೆ ಮನೆಗೆ ಬಂದಿದ್ದು ಅವನಿಗೆ ಹೇಗೋ ಗೊತ್ತಿರಲಿಲ್ಲ. ಈ ಮನೆ ಮುಖ್ಯ ರಸ್ತೆಗೆ ಹೊಂದಿಕೊಂಡು ಇತ್ತು. ನಾನು ಅಥವಾ ನನ್ನ ಶಿಷ್ಯಂದಿರಲ್ಲಿ ಯಾರೇ ಆದರೂ ಬೆಂಗಳೂರಿನಿಂದ ಬಂದರೆ ಹಾವೇರಿಗೆ ರೈಲಿನಲ್ಲಿ ಬಂದು ಅಲ್ಲಿಂದ ಬಸ್ಸಿನಲ್ಲಿ ಬರುತ್ತಿದ್ದೆವು. ಅದಕ್ಕೇ ಈ ಮನೆ ಅನುಕೂಲ ಇತ್ತು. ಅದೂ ಅಲ್ಲದೆ ಮೊದಲು ಇದ್ದಿದ್ದ ತೋಟದ ಮನೆಗಳಲ್ಲಿ ಮೇಲಿನಿಂದ ಎಲೆಗಳು ಬೀಳುತ್ತಿದ್ದವು ಹಾಗೂ ಇಲಿಗಳು ನುಸುಳಿ ನಮ್ಮ ಬಟ್ಟೆ ಬರೆಗಳು ಎಲ್ಲವನ್ನೂ ತಿಂದು ಜೀರ್ಣಿಸಿಕೊಂಡಿದ್ದವು! ಹೀಗಾಗಿ ನಮ್ಮಂತಹ ನಗರ ಜೀವನಕ್ಕೆ ಹೊಂದಿಕೊಂಡಿದ್ದ ಕಲಿಗಳಿಗೆ ಮನೆ ಬದಲಾವಣೆ ಅನಿವಾರ್ಯವಾಗಿತ್ತು.

ಅಲ್ಲಿ ಬಿಟ್ಟು ಇಲ್ಲೇ ಬಂದೇವಿ ನೋಡರಿ ಶ್ಯಾಮ ಅಂದೆ.

ಹೌದ್ರಿ ಸರ್ರ? ಮತ್ತ ರಿ ಆರಾಮ ಆದೀರಿ?

ರಾತ್ರಿ ಎಲ್ಲಿಂದ ಬಂದ್ರಿ ಶ್ಯಾಮ? ಅಂತ ಅವನ ಬಗ್ಗೆ ನಾನೂ ಸ್ವಲ್ಪ ಕಾರುಭಾರು ಮಾಡಿದೆ!

ಹೆಂಡ್ತಿ ತೆಂಗಿನಕಾಯಿ ತರಾಕ್ ಹೇಳಿದ್ಲು, ತೊಗೊಂಡ ಮನೀಗೆ ಹೊಂಟಿನಿ ನೋಡ್ರಿ… ಅಂದವನ ಬಾಯಲ್ಲಿ ಪಾನ್ ಇತ್ತು. ಕಿಮಾಮ್ ನ ಘಂ ಅನ್ನುವ ವಾಸನೆಯ ಜೊತೆಗೆ ಎಣ್ಣೆಯ ವಾಸನೆಯೂ ನಮ್ಮ ಮೂಗಿಗೆ ಅಡರಿ, ಅವನು ಬರಿ ಕಾಯಿ ತರಲು ಈ ಹೊತ್ತಿನಲ್ಲಿ ಬಂದಿರಲಿಲ್ಲ ಅಂತ ಅದು ಸಾರಿ ಹೇಳಿತು …

ಎಣ್ಣೆ ಹಾಕಿದ ವಿಷಯ ನಮಗೆ ಗೊತ್ತಾದದ್ದು ಅವನಿಗೂ ತಿಳೀತು ಅನ್ಸುತ್ತೆ..

ಇವತ್ತ ಸ್ವಲ್ಪ ಎಣ್ಣೆ ತೊಗೊಂಡೆನಿ ನೋಡ್ರಿ.. ನಿಮ್ಮತ್ರ ಯಾಕ ಸುಳ್ಳು ಹೇಳಲಿ.. ಅಂತ ಎಣ್ಣೆ ಕುಡಿದಾಗಲೂ ತಾನು ಹರಿಶ್ಚಂದ್ರನ ಕೊನೆಯ ತುಂಡು ಅಂತ ಪ್ರದರ್ಶನ ಮಾಡಿದ..

ಅವನ ಹೊಚ್ಚ ಹೊಸ ಬೈಕು, ಎಣ್ಣೆ, ಪಾನ್ ನೋಡಿದಾಗ ಅನಿಸಿದ್ದು, ಇವನಷ್ಟು ಸುಖಿ ಯಾರಿದ್ದಾರೆ? ಬಡತನ ಎಲ್ಲಿದೆ? ಅಂತ!

ಆದರೆ ಆತ ಎಣ್ಣೆಗೆ ಖರ್ಚು ಮಾಡುವಷ್ಟು, ಮುಂದೆ ಯಾವುದಕ್ಕೂ ಇರಲಿ ಅಂತ ಉಳಿತಾಯ ಮಾಡಲ್ಲ. ಅವತ್ತಿನದು ಅವತ್ತಿಗೆ. ಮುಂದಿನ ಯೋಚನೆ ಅವನಿಗೆ ಇಲ್ಲ. ತನ್ನ ರಟ್ಟೆಯನ್ನ ನಂಬಿಕೊಂಡು ದುಡಿಯುತ್ತಾನೆ. ಗಳಿಸಿದ್ದನ್ನು ಕಳೆಯುತ್ತಾನೆ. ಜೊತೆಗೆ ಸರ್ಕಾರ ಅವನಿಗೊಂದು social security ಕೊಟ್ಟಿದೆಯಲ್ಲ. ವೋಟಿಗಾಗಿ ಗಿಮ್ಮಿಕ್ ಮಾಡುವ ರಾಜಕಾರಣಿಗಳು ಇಂಥವರನ್ನು ನಿಜವಾಗಿಯೂ ಮೇಲೆತ್ತುವ ಕೆಲಸ ಮಾಡುತ್ತಿದ್ದಾರೆಯೇ? ಅಂತೆಲ್ಲ ಯೋಚನೆಗಳು ನನ್ನನ್ನು ಮುತ್ತಿಕೊಂಡವು.

ಸರ್, ನಿಮ್ಮ ಹೊಲ ಬಂಗಾರ ಐತ್ರಿ. ಅಡಿಕಿ ಗಿಡ ಹಾಕ್ರಿ. Benz car ನ್ಯಾಗ ಅಡ್ಯಾಡಬಹುದು. ಆವಾಗ ನೀವು ಾಡಿಕಿ ಗಿಡ ಹಾಕಿದ್ರ ಇಷ್ಟೊತ್ತಿಗೆ ನಿಮಗ ಎಷ್ಟು ದುಡ್ಡು ಬರ್ತಿತ್ತು?

ಅರೇ, ನಾವು ಐಷಾರಾಮಿ ಬದುಕು ಬೇಡ, ಹಳ್ಳಿಯವರಂತೆ ನೆಮ್ಮದಿಯ ಬದುಕು ಕಟ್ಟಿಕೊಳ್ಳೋಣ ಅಂತ ಇಲ್ಲಿಗೆ ಬಂದರೆ, ಇವನು benz car ಇದ್ದರೆನೆ ನೆಮ್ಮದಿ ಅಂದುಕೊಂಡಿದ್ದು ಕೇಳಿ ವಿಚಿತ್ರ ಅನಿಸಿತು. ಅವನು ಮುಂದುವರೆಸಿದ ..

…ಒಂದ್ ಕೆಲಸ ಮಾಡ್ರಿ ಸರ… ನಾಲ್ಕೂ ಏಕರೆಕ್ಕ ಅಡಿಕಿ ಗಿಡ ಹಚ್ರಿ ನನಗ ದಿನಕ್ಕ 200… ಅಲ್ಲಲ್ಲ ವಾರಕ್ಕ 200 ಕೊಡ್ರಿ ನಿಮ್ಮ ಹೊಲದಾಗ ದಿನಕ್ಕ ಎರಡು ಸಲ ನೀರು ಬಿಡ್ತೀನಿ. ಒಂದು ಎಕರೆ ಉತ್ಪನ್ನ ನನಗ ಕೊಡ್ರಿ ಸಾಕು.. ಅಂತೇನೇನೋ ಹೇಳತೊಡಗಿದ.

ಇವನ್ನ ನಂಬಿದ್ರ ಎಳ್ಳು ನೀರೇ ಗತಿ ಅನಿಸಿ ಅವನಿಂದ ತಪ್ಪಿಸಿಕೊಳ್ಳೋದು ಹೇಗೆ ಅಂತ ಯೋಚಿಸ್ತಾ ನಾಗಣ್ಣನ್ನ ನೋಡಿ ಸನ್ನೆ ಮಾಡಿದರೆ ಅವರು ಯಾವುದೊ ಕರೆಯಲ್ಲಿ ಮಗ್ನರಾಗಿದ್ದರು. ನಾನು ಕೈ ಸನ್ನೆ ಮಾಡಿದ್ದೂ ಕಾಣದಂತೆ!

ಆದರೆ ಅದು ಶ್ಯಾಮನಿಗೆ ಕಂಡಿತೋ ಏನೋ…

ಯಾಕ ಸರ್, ನನ್ನ ಮಾತು ಬೇಜಾರ್ ಬಂತೆನ್ರಿ, ಅಂದವನೆ…

ಮುಂದೊಂದು fast food ಅಂಗಡಿ ತೋರಿಸಿ, ಇಂವಾ egg rice ಮಸ್ತ್ ಮಾಡ್ತಾನ ನೋಡ್ರಿ ತಿಂತೀರಿ? ಅಂದ..

ಅಂತಾದೆಲ್ಲ ತಿನ್ನಂಗಿಲ್ಲ ನಾವು ಅಂತ ಜಾರಿಕೊಳ್ಳಲು ನೋಡಿದೆ..

ಘಟ್ಟಿ ಆಗಬೇಕು ಸರ ನೀವು.. ನಾನ್ ನೋಡ್ರಿ ಐವತ್ತು ಕೆಜಿ ಚೀಲಾ ಒಂದು ಕಿಲೋಮೀಟರ್ ಹೊರತೀನಿ.. ಬೇಕಂದ್ರ ಚಾಲೆಂಜ ಮಾಡ್ರಿ. ನಾನ್ ಏನ್ ತಿಂತೀನಿ ಗೊತ್ತೇನ್ರಿ? ಮಟನ್, ಚಿಕನ್… ಈ ಫಾಸ್ಟ್ ಫುಡ್ ಅಂಗಡ್ಯಾಗ Egg rice ಮಾತ್ರ ತಿನ್ನಂಗಿಲ್ರಿ, ಯಾಕಂದ್ರ ಅದರಾಗ ಒಂದ್ ನಮೂನಿ ಪೌಡರ್ ಹಾಕ್ತಾರ.. ಅದನ್ನ ತಿಂದ್ರ ಮುಗೀತ ಕತಿ.. ಅನ್ನಬೇಕೆ!

ಅಲಾ ಮಗನೇ.. ನಮಗೆ egg rice offer ಮಾಡಿ, ತಾನು ಮಾತ್ರ ಅದನ್ನ ತಿನ್ನೋದಿಲ್ಲ ಅಂತ ಹೇಳುತ್ತಾ ಇದ್ದ.

ಹಂಗಂದ್ರ Egg rice ತಿನಿಸಿ ನಮ್ಮ ಕತಿನೂ ಮುಗಸಾಂವ್ ಇದ್ದೆನಪಾ ಶ್ಯಾಮಣ್ಣ ಅಂದೆ

ಅಯ್ಯಯ್ಯೋ.. ಹಂಗಲ್ರೀ ಸರ್ರ.. ಅಂತ ಇನ್ನೂ ಏನೋ ಹೇಳೋಕೆ ಹೊರಟಿದ್ದ ಅವನ ಕಡೆ ಲಕ್ಷ ಕೊಡದೆ ನಾನು ನಾಗಣ್ಣನ್ನ ಬೈದು, ಬರ್ರಿ ನಿದ್ದಿ ಬಂದದ ಅನ್ನುತ್ತಾ ಅವರನ್ನು ಹೆಚ್ಚು ಕಡಿಮೆ ಎಳೆದುಕೊಂಡೆ ಅಲ್ಲಿಂದ ಓಡಿದೆ!

ಮನೆ ಸೇರಿದಾಗ ಹಲವು ಯೋಚನೆಗಳು ಮುತ್ತಿಕೊಂಡವು. ಪಟ್ಟಣದಲ್ಲಿ ಇದ್ದ ನಾವುಗಳು ಅಲ್ಲಿನ ಒತ್ತಡದ ಬದುಕು ಸಾಕಾಗಿ, ಒಂದಿಷ್ಟು ಶುದ್ಧ ಹವೆ, ಹಸಿವಾದಾಗ ವಿಷರಹಿತ ಆಹಾರ ಸಿಕ್ಕರೆ ಅದೇ ಸ್ವರ್ಗ ಅಂತ ಅಲ್ಲಿಂದ ಇಲ್ಲಿಗೆ ನೆಮ್ಮದಿಯನ್ನು ಅರಸಿ ಬರುತ್ತೇವೆ. ಆದರೆ ಶ್ಯಾಮನಂತಹ ಗ್ರಾಮವಾಸಿ ಯುವಕರು ಕೈತುಂಬಾ ದುಡ್ಡು ಮಾಡಿದರೆ ಮಾತ್ರ ಸುಖ ಅಂತ ಅಂದುಕೊಳ್ಳುತ್ತಾರೆ. ಹೌದು ದುಡ್ಡು ಬೇಕು.. ಆದರೆ ಬೆಂಝ್ ಕಾರೆ ಆಗಬೇಕೇ? ಇದ್ದುದರಲ್ಲೇ ಸುಖ ನೆಮ್ಮದಿ ಕಾಣಲು ಸಾಧ್ಯವಿಲ್ಲವೇ? ಬಹುಶಃ ನಾನೂ ಯುವಕನಾಗಿದ್ದಾಗ ಅವನಂತೆಯೇ ಯೋಚಿದ್ದೆನೆ? ಇಲ್ಲವಲ್ಲ! ಎಲ್ಲರೂ ನಮ್ಮ ಹಾಗೆಯೇ ಯೋಚಿಸಬೇಕು ಅಂತಿಲ್ಲವಲ್ಲ! ನಾವೇನಾದರೂ ಪಟ್ಟಣದಲ್ಲಿ ಸುಖ ಇಲ್ಲ ಮಾರಾಯ ಅಂತ ಹೇಳಿದರೆ ಅಲ್ಲಿನವರು “ನಿಮ್ಮ ಹತ್ರ ರೊಕ್ಕ ಜಾಸ್ತಿ ಆಗಿ ಕೊಳಿತೈತಿ ಬಿಡ್ರಿ. ಅದಕ್ಕ ಹಿಂಗ ಮಾತಾಡತೀರಿ” ಅಂತ ಗೊಳ್ಳ ಅಂತ ನಗುತ್ತಾರೆ!

ಅಷ್ಟೊತ್ತಿಗೆ ನಿದ್ದೆ ಬಂದಿತ್ತು, ಮುಸುಕು ಹಾಕಿ ಮಲಗಿಕೊಂಡೆ.

…ಅದೊಂದು ಅವತ್ತಿನ ತಮಾಷೆಯ ಕ್ಷಣ ಆಗಿತ್ತಾದರೂ, ಹಳ್ಳಿಯ ಬದುಕಿನಲ್ಲಿ ಇಂತಹ ಎಷ್ಟೋ ಸ್ವಾರಸ್ಯಕರ ಅನುಭವಗಳ ಕಂತೆ ಇದೆಯಲ್ಲವೇ ಅನಿಸಿತು. ಅವತ್ತೇ ನನಗೆ ಈ ಗ್ರಾಮ ಡ್ರಾಮಾಯಣ ಸರಣಿ ಬರೆಯಬೇಕು ಎಂಬ ಸ್ಪೂರ್ತಿ ಬಂತು. ಈ ವಿಷಯದಲ್ಲಿ ಶ್ಯಾಮನಿಗೆ ನಾನು ಋಣಿ!

(ಕೃತಿ: ಗ್ರಾಮ ಡ್ರಾಮಾಯಣ (ಅಂಕಣ ಬರಹಗಳ ಸಂಗ್ರಹ), ಲೇಖಕರು: ಗುರುಪ್ರಸಾದ ಕುರ್ತಕೋಟಿ, ಪ್ರಕಾಶಕರು: ಪರಿಶ ಪ್ರಕಾಶನ, ಬೆಂಗಳೂರು, ಬೆಲೆ: 180/- (ಪ್ರೀ ಆರ್ಡರ್‌ ಬೆಲೆ: 150/-)