ನೀಲಿಯನ್ನು ಬಹುವಾಗಿ ಕಾಡಿದ ಕತೆಯೆಂದರೆ ಹೊಳೆಸಾಲಿನ ಮಾರಿ ಮತ್ತು ಕಡೆಸಾಲಿನ ಸುಬ್ಬಮ್ಮನವರ ನಡುವೆ ನಡೆದ ಮಾರಾಮಾರಿ ಜಗಳದ ಕತೆ. ಇಂದಿಗೂ ಊರತುಂಬಾ ಮೆರವಣಿಗೆ ಹೊರಡುವ ಮಾರಿಯ ಪಲ್ಲಕ್ಕಿ ಸುಬ್ಬಮ್ಮನವರ ಅಂಗಳಕ್ಕೆ ಕಾಲಿಡುವುದಿಲ್ಲ. ಹಾಗೇನಾದರೂ ತಪ್ಪಿ ನಡೆದರೂ ಆ ಮನೆಯ ಹೆಣ್ಮಕ್ಕಳು ದಡಕ್ಕನೆ ಬಾಗಿಲಿಕ್ಕುವುದನ್ನು ಮರೆಯುವುದಿಲ್ಲ. ಆ ದೊಡ್ಡ ಮನೆಯ ಹಿರಿಕಳಾದ ಸುಬ್ಬಮ್ಮನೆಂಬ ಜೀವ ಮನೆಯ ಹೆಣ್ಣುಗಳಿಗೆ ವಿಧಿಸಿದ ನಿಯಮವದು. ಅಸಲಿಗೆ ನಡೆದಿದ್ದು ಇಷ್ಟು ಎಂದು ನೀಲಿಯ ಅಮ್ಮ ತನ್ನಮ್ಮ ತನಗೆ ಹೇಳಿದ ಸಂಗತಿಯನ್ನು ನೀಲಿಗೆ ಕತೆಯಂತೆ ಹೇಳಿದ್ದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಆರನೆಯ ಕಂತು ನಿಮ್ಮ ಓದಿಗೆ
ಎಲ್ಲ ನಿಮ್ಮ ಲೀಲೆ ತಾಯೇ…
ಎಲ್ಲ ನಿಮ್ಮ ಮಾಯೆ..
ಹೊಳೆಸಾಲಿನ ಮನೆಗುಂಟ ಹೆಜ್ಜೆ ಹಾಕಿದರೆ ಅಲ್ಲಲ್ಲಿ ಹೆಂಗಳೆಯರ ಜಗಳ ಕಿವಿಗೆ ಬೀಳುವುದು ಮಾಮೂಲು. ಸಣ್ಣ ಕೋಳಿಗೂಡಿನಂತಹ ಅಡುಗೆ ಮನೆಯಲ್ಲಿ, ಇಷ್ಟಿಷ್ಟೇ ಇರುವ ಪಡಿಪದಾರ್ಥಗಳಿಂದ ಮನೆತುಂಬ ಇರುವವರಿಗೆಲ್ಲ ಹೊತ್ತು ಹೊತ್ತಿಗೆ ತುತ್ತು ಹೊಟ್ಟೆಗೆ ಬೀಳಬೇಕೆಂದರೆ ನಡುನಡುವೆ ಅಷ್ಟಿಷ್ಟು ಮಾತು-ಕತೆ ಬರುವಂಥದ್ದೆ. ಹಾಗೆಂದು ಇದೆಲ್ಲ ಮಾಮೂಲಿ ಸಂಗತಿಯೆಂದು ಕಡೆಗಣಿಸಬೇಕಾಗಿಯೂ ಇಲ್ಲ. ಹೊಳೆಸಾಲಿನಲ್ಲಿ ಹೆಂಗಸರ ಜಗಳಕ್ಕೆ ಒಂದು ಪ್ರಾಚೀನ ಪರಂಪರೆಯೇ ಇದೆ. ಇಡಿಯ ಊರನ್ನು ತನ್ನ ಅಂಗೈಯಲ್ಲಿ ಬುಗುರಿಯಂತೆ ಹಿಡಿದು ಗಿರಗಿರನೆ ತಿರುಗಿಸುವ ನಮ್ಮೂರ ಮಾರಿ, ಮಣ್ಣಿನ ಹೊಂಡವೊಂದರಲ್ಲಿ ತಣ್ಣಗೆ ಕುಳಿತು ಜಗವ ಕಾಯುವ ದೇವಿಯರು ನಮ್ಮೂರ ಹೆಣ್ಣುಗಳಿಗಿಂತಲೂ ಹೆಚ್ಚು ಬಡಿದಾಡಿಕೊಳ್ಳುವರು. ಇವರಿಬ್ಬರ ಕಾರುಣ್ಯಕ್ಕೆ ಹಂಬಲಿಸುವ ಜನರು ಇಬ್ಬರನ್ನೂ ಎಂದಿಗೂ ಮುಖಾಮುಖಿಯಾಗಿಸದೇ ಅವರವರ ಹರಕೆಗಳನ್ನು ಅವರವರಿಗೆ ಒಪ್ಪಿಸುತ್ತಾ ತಮ್ಮ ಬದುಕನ್ನು ಒಪ್ಪವಾಗಿಸಿಕೊಳ್ಳುತ್ತಿದ್ದರು. ಜಗವ ಪೊರೆವ ಆ ಜಗದಾಂಬಿಕೆಯರು ತಮ್ಮ ತಮ್ಮ ಗಡಿಗೆರೆಗಳನ್ನು ಗುರುತಿಸಿಕೊಂಡಿದ್ದರೂ ನಡುನಡುವೆ ಜನರ ಪ್ರೀತಿಗಾಗಿ ಸವತಿಯರಂತೆ ಶರಂಪರ ಜಗಳವಾಡುತ್ತಿದ್ದರು.
ಹೊಳೆಸಾಲ ಊರೆಂದರೆ ಮಾರಿಯದೇ ಎಂಬಷ್ಟು ಜೋರಿನ ದೇವತೆ ನಮ್ಮೂರ ಮಾರಿ. ನೋಡಿದವರ ಎದೆ ಝಲ್ಲೆನಿಸುವ ದೊಡ್ಡ ಕಣ್ಣುಗಳು, ಕೈಯ್ಯಲ್ಲೊಂದು ಉದ್ದನೆಯ ಖಡ್ಗ, ಮೈತುಂಬ ಪೂಸಿಕೊಂಡ ಕೆಂಬಣ್ಣ……… ಎದುರು ನಿಂತು ಸುಳ್ಳಾಡಿದರೆ ರಕ್ತ ಕಾರಿಸುವ ಹುಕಿಯವಳು ಮಾರಿ. ಊರ ಹೊರಗಿರುವ ವನದಲ್ಲಿ ಹಂಚಿನ ಮಾಡಿನಡಿಯಲ್ಲಿ ಕುಳಿತು ಊರಿಡೀ ನೋಡಬಲ್ಲ ಚತುರಮತಿ. ಅವಳು ಮೂಲಮೂರ್ತಿಯಾದರೆ ಉತ್ಸವಕ್ಕೆಂದು ಪಲ್ಲಕ್ಕಿಯೇರುವ ಅವಳ ಛಾಯೆಯೇ ನಗುಮುಖದ ಮಾರಿಯಮ್ಮ. ಪಲ್ಲಕ್ಕಿಯಲಿ ಇಡಿಯ ಸೀಮೆಯನು ಸುತ್ತುತ್ತಾ, ಮನೆಮನೆಯೊಳಗೆ ನುಗ್ಗಿ ಹೆಂಗಳೆಯರ ಕೊರಳಿಗೆಲ್ಲ ತನ್ನ ಕೊಂಬನ್ನು ಚಾಚಿ ಅದರ ತುದಿಯಲ್ಲಿರುವ ಸಿಂಗಾರದಿಂದ ಅವರ ಕುತ್ತಿಗೆಯ ಸವರಿ ನಗುಮೂಡಿಸುವವಳು. ಗಂಡಸರ ಹೆಗಲೇರಿ ಸವಾರಿ ಮಾಡಿ ಕೋಪ ಬಂದರೆ ತನ್ನ ಭಾರದಿಂದ ಅವರ ಹೆಗಲಿನಲ್ಲಿ ಬಾವು ತರಬಲ್ಲವಳು. ಭತ್ತದ ಗದ್ದೆ ಕಂಡರೆ ಅವಳಿಗೆ ತುಳಿಯುವ ಹುಕಿ, ಧಾನ್ಯದ ರಾಶಿ ಕಂಡರೆ ಮಕ್ಕಳಂತೆ ಮೇಲೇರಿ ಚೆಲ್ಲಾಡಿಬಿಡುವ ತವಕ. ಸದಾ ಜಾಗಟೆಯ ನಾದದೊಂದಿಗೆ ಓಡಾಡುವ ದೇವಿಯ ಆಗಮನದ ಸುಳಿವು ಸಿಕ್ಕರೆ ಸಾಕು, ಊರ ಹೆಂಗಸರೆಲ್ಲ ಗಡಬಡಿಸಿ ಎದ್ದು ತಮ್ಮ ಅಂಗಳದಲ್ಲಿರುವ ಧಾನ್ಯಗಳನ್ನು ಕಣ್ಮರೆ ಮಾಡಿಬಿಡುವರು. ‘ಅಯ್ಯಾ, ಬತ್ತವ್ಳೆ ನಮ್ಮ ತಾಯಿ. ಅಂಗಳದಲ್ಲೇನಾದರೂ ಕಾಳು ಕಡಿ ಕಂಡರೆ ಮಕ್ಕಳಂತೆ ತೂರಾಡಿಬಿಡ್ತಾಳೆ. ಊರ ಕಾಯೋ ದೇವೀಗೂ ಚೂರು ಹಠ, ಮೊಂಡಾಟ ಬರ್ತದೆ.’ ಎನ್ನುತ್ತಲೇ ದೇವಿಯ ಗುಣಗಾನ ಮಾಡುವರು.
ತೋಟದಂಚಿನಲ್ಲಿ ಬೆಳೆದ ಅಬ್ಬಲಿಗೆ ಹೂವೆಂದರೆ ಮಾರಿಗೆ ಜೀವ. ಕೆಂಪು ದಾಸವಾಳವೆಂದರೂ ಪ್ರೀತಿಯೆ. ಬಣ್ಣ ಗಾಢವಾದಷ್ಟೂ ದೇವಿಗೆ ಇಷ್ಟ. ಹಸಿರು ಬಳೆಗಳ ನಾದ ದೇವಿಗೆ ಪ್ರಿಯ. ಊರಿನ ಹಾಡುಗಾರ್ತಿ ಅಮ್ಮೆಣ್ಣು ಹಾಡು ಹೇಳದೇ ಮಾರಿ ಅವಳ ಮನೆಯ ಅಂಗಳದಿಂದ ಕಾಲು ಕೀಳುವುದಿಲ್ಲ. ಇವೆಲ್ಲವನ್ನೂ ಊರ ಹೆಣ್ಣುಗಳು ತಮ್ಮ ದೇವಿಯ ಮಹಿಮೆಯೆಂಬಂತೆ ಹೇಳುತ್ತಿರುತ್ತಾರೆ. ತಮ್ಮ ದೇವಿಗೆ ಏನು ಬೇಕೆಂಬುದು ತಮಗೆ ಮಾತ್ರವೇ ಗೊತ್ತು ಎಂಬ ಹೆಮ್ಮೆ ಅವರ ಮಾತುಗಳಲ್ಲಿ ತುಂಬಿ ತುಳುಕುತ್ತಿರುತ್ತದೆ. ಮನೆಯ ಹೆಣ್ಣುಗಳೆಲ್ಲ ಸುತ್ತ ನೆರೆದು ಅಮ್ಮೆಣ್ಣಿನ ಹಾಡಿನ ರಾಗಕ್ಕೆ ಸುವ್ವೀ ಎಂದು ದನಿಗೂಡಿಸುತ್ತಿದ್ದರೆ ಪಲ್ಲಕ್ಕಿಯಲ್ಲಿರುವ ಮಾರಿ ತನ್ನ ಪಲ್ಲಕ್ಕಿಯನ್ನು ಒಂದಿನಿತೂ ಅಲ್ಲಾಡಿಸದೇ ನಿಶ್ಶಬ್ದವಾಗಿ ನಿಂತು ಹಾಡನ್ನು ಕಿವಿದುಂಬಿಕೊಳ್ಳುವುದು ಅವರೆಲ್ಲರ ಮಾತುಗಳಿಗೆ ಪುರಾವೆಯನ್ನೊದಗಿಸುತ್ತದೆ. ಅದೇನೋ ತಿಳಿಯದು, ಹೊಳೆಯಾಚೆಗೆ ನೆಲೆನಿಂತ ನಮ್ಮೂರ ದೇವಿಯ ಗಡಿಯೊಳಗೆ ಬಂದಾಗಲೆಲ್ಲ ಪಲ್ಲಕ್ಕಿಯ ದೇವತೆ ಅಲ್ಲಲ್ಲೇ ಸುತ್ತುತ್ತ, ಮುಂದೆ ಹೋಗಲು ಅನುಮಾನಿಸುತ್ತ, ತನ್ನ ಭಾರವನ್ನೆಲ್ಲ ಪಲ್ಲಕ್ಕಿ ಹೊತ್ತವರ ಹೆಗಲಿಗೆ ಒತ್ತುತ್ತಾ ಒಂದಿಷ್ಟು ತಗಾದೆ ತೆಗೆಯುತ್ತಾಳೆ. ಆಗೆಲ್ಲ ಅಲ್ಲಿಯೇ ನಿಂತಿರುವ ಊರ ಹಿರಿಕರು ದೇವಿಯ ನಡೆಯನ್ನು ಬಿಡಿಸಲು ಈಡುಗಾಯಿ ಹೊಡೆದು ಅನುವು ಮಾಡಿಕೊಡುತ್ತಾರೆ. ದೇವಿಯ ನಡೆ ಮೀರಿದ ಕೂಡಲೇ ಪಲ್ಲಕ್ಕಿಯ ಮಾರಿ ಹೊಸಚೈತನ್ಯದಿಂದ ಓಟಕ್ಕಿಡುತ್ತಾಳೆ. ತನ್ನನ್ನು ಹೊತ್ತವರ ಕಾಲು ತಪ್ಪಿಸುವಂತೆ ಚಿಮ್ಮಿ ನೆಗೆಯುತ್ತಾಳೆ. ತಮ್ಮ ಖಾಯಿಲೆ ಕಸಾಲೆಗಳಿಗೆ ಹೊಳೆಸಾಲ ಜನರು ಮಾರಿಗೆ ಶರಣು ಹೋಗುತ್ತಾರೆ. ಮನೆಯಲ್ಲಿ ಬೆಳೆದ ಆಳೆತ್ತರದ ಬಾಳೆಗೊನೆಯನ್ನೋ, ಗೂಡಿನಲ್ಲಿರುವ ಕೋಳಿಯನ್ನೋ, ಅಪರೂಪಕ್ಕೆ ಆಡನ್ನೋ ಹರಕೆಯಾಗಿ ಹೇಳಿಕೊಳ್ಳುತ್ತಾರೆ. ಮಾರಿಯ ಕೈಮೀರಿ ಊರೊಳಗೆ ಏನಾದರೂ ಅಪಾಯವಾದರೆ ಅವರಿಗೇನೂ ಅನಿಸುವುದಿಲ್ಲ, ಎಲ್ಲ ಅವಳಿಚ್ಛೆ ಎಂದು ಕೈಚೆಲ್ಲುತ್ತಾರೆ.
ಊರ ಗಂಡಸರಿಗೂ ಮಾರಿಯ ಬಗ್ಗೆ ಭಯಭಕ್ತಿಯಿದೆ. ಅವರದ್ದು ಪಕ್ಕಾ ಲೆಕ್ಕಾಚಾರ. ವರ್ಷಕ್ಕೊಮ್ಮೆ ಗ್ರಾಮದ ಹಿರಿಯರ ನೇತೃತ್ವದಲ್ಲಿ ಸಭೆ ಸೇರಿ ತಲೆಗಿಷ್ಟು, ಬಾಲಕ್ಕಿಷ್ಟು ಎಂದು ವರ್ಗಿಣಿಯನ್ನು ನಿಗದಿಪಡಿಸುತ್ತಾರೆ. ತಲೆಯೆಂದರೆ ಮನುಷ್ಯರ ಲೆಕ್ಕ, ಬಾಲವೆಂದರೆ ದನಕರುಗಳ ಲೆಕ್ಕ. ಹೀಗೆ ಜನ ಮತ್ತು ದನಗಳ ರಕ್ಷಣೆಗೆ ಲೆಕ್ಕ ಪ್ರಕಾರ ಹಣಸಂದಾಯವಾಗುತ್ತದೆ. ಆ ಹಣದಿಂದ ವರ್ಷದಲ್ಲೊಮ್ಮೆ ಮಾರಿಹಬ್ಬ ನಡೆಯುತ್ತದೆ. ಆ ದಿನ ಗ್ರಾಮಬಂಧಿ ಹಾಕಿ ಊರನ್ನು ಮಾರಿ ತನ್ನ ರಕ್ಷಣೆಯ ತೆಕ್ಕೆಗೆ ತೆಗೆದುಕೊಳ್ಳುತ್ತಾಳೆ. ಅಂದು ರಾತ್ರಿ ಮಾರಿಯ ಸನ್ನಿಧಾನದಲ್ಲಿ ಕುರಿ, ಕೋಳಿಗಳ ಬಲಿ ನಡೆದು ಆವರಣವಿಡೀ ರಕ್ತದಿಂದ ತೊಯ್ದುಹೋಗುತ್ತದೆ. ಬೆಳಗಿನಿಂದ ಸಂಜೆಯವರೆಗಿನ ಪೂಜೆಯಲ್ಲಿ ಊರ ಎಲ್ಲರೂ ಪಾಲ್ಗೊಳ್ಳುವರಾದರೂ ಸಂಜೆಯ ಬಲಿಯ ಸಮಯದಲ್ಲಿ ಹೆದರುವ ಹೆಣ್ಣುಗಳಿಗೆ, ಹೆಂಗರುಳಿಗರಿಗೆ ಪ್ರವೇಶ ನಿಷಿದ್ಧ. ಅಂದು ಪೂಜಾರಿಯ ಮೈಮೇಲೆ ಬಂದು ಅಬ್ಬರಿಸುವ ಮಾರಿಯ ಆವೇಶವನ್ನು ನೋಡಿ ಸೈರಿಸಿಕೊಳ್ಳಲು ಗಟ್ಟಿಎದೆಯಿರಬೇಕು. ಹಾಗೆ ಬಂದ ತಾಯಿ ಸುರಿವ ರಕ್ತದ ಕೋಡಿಯನ್ನು ಅಂಗೈಯಿಂದ ಬಾಚಿ ನಾಲಿಗೆಗೆ ಸವರಿ ತೃಪ್ತಿಯ ನಗೆ ನಕ್ಕಳೆಂದರೆ ಇಡಿಯ ಊರು ವರ್ಷವಿಡೀ ನೆಮ್ಮದಿಯಿಂದ ಇರಬಹುದೆಂದು ಲೆಕ್ಕ. ಮತ್ತುಳಿದಂತೆ ಪ್ರತಿ ಅಮವಾಸ್ಯೆಗೂ ಮಾರಿ ಪೂಜಾರಿಯ ಮೈಮೇಲೆ ಬಂದು ಊರಿನವರ, ಪರವೂರಿನವರ ಸುಖ, ದುಃಖ ವಿಚಾರಿಸುತ್ತಾಳೆ.
ಕಷ್ಟ ಪರಿಹಾರಕ್ಕೆ ಬದಲಿಯಾಗಿ ಎಂದಿಗೂ ಕಾಣಿಕೆಯನ್ನು ಕೇಳುವವಳಲ್ಲ ಆ ತಾಯಿ. ಹೆಚ್ಚೆಂದರೆ ತನಗಿಷ್ಟವಾದ ಕೆಂಪು ಕುಂಕುಮದ ರಾಶಿಯನ್ನು, ಸಿಂಗಾರದೆಳೆಯ ಉಡುಗೊರೆಯನ್ನು, ಹೊನ್ನೆಯೆಣ್ಣೆಯ ತೆರವನ್ನು ಕೇಳಿಯಾಳು ಅಷ್ಟೆ. ಇನ್ನುಳಿದಂತೆ ಊರ ಹೊರಗೆ ಮೂರು ದಾರಿ ಸೇರುವಲ್ಲಿ ದೊಂದಿ ಬೆಳಗಿ, ಕುಂಕುಮದ ನೀರನ್ನು ನಿವಾಳಿಸಿ ಬರುವ ಸರಳ ಪೂಜೆಯನ್ನು ಹೇಳುತ್ತಾಳೆ. ಆದರೂ ಅವಳ ಭಕ್ತೆಯರು ಅವಳಿಗೆಂದು ಹಸಿರು ಬಳೆ ತರುತ್ತಾರೆ, ಅಬ್ಬಲಿಗೆ ದಂಡೆ ಮುಡಿಸುತ್ತಾರೆ, ಅಪರೂಪಕ್ಕೆ ಬೆಳ್ಳಿಯ ಕಣ್ಣನ್ನೊ, ಮರದ ಖಡ್ಗವನ್ನೋ ಉಡುಗೊರೆಯಾಗಿ ನೀಡಿ ನಮಿಸುತ್ತಾರೆ, ಕಾಣಿಕೆ ಹುಂಡಿಗೆ ಮುದುರಿದ ನೋಟುಗಳನ್ನು ತೂರಿಸುತ್ತಾರೆ, ತೆಂಗಿನ ಕಾಯಿ ಒಡೆದು ನೈವೇದಿಸುತ್ತಾರೆ, ಕೈಬಿಟ್ಟೇ ಹೋಯಿತು ಎಂಬ ಮಗುವನ್ನು ಉಳಿಸಿದ್ದಕ್ಕಾಗಿ ಧಾನ್ಯಗಳಿಂದ ತುಲಾಭಾರವನ್ನು ಮಾಡುತ್ತಾರೆ. ಇವೆಲ್ಲವನ್ನೂ ಬಿಡುಗಣ್ಣು ಬಿಟ್ಟು ನೋಡುತ್ತಲೇ ಇರುತ್ತಾಳೆ ಅವಳು. ಭಕ್ತರಿಗೆ ಎಂದೂ ಬಾಗಿಲು ಮುಚ್ಚದ ಕರುಣಾಮಯಿ. ತವರಿಗೆ ಬಂದ ತಂಗಿಯರು ತಮ್ಮ ಗೆಳತಿಯ ಮನೆಗೆ ಭೇಟಿ ನೀಡಿದಂತೆ ಎಷ್ಟು ಹೊತ್ತಿಗೆ ಬೇಕಾದರೂ ತಾಯಿಯ ಗುಡಿಗೆ ಹೋಗಿ ಯಾವ ಪೂಜಾರಿಗೂ ಕಾಯದೇ ಗುಡಿಯ ಮೆಟ್ಟಿಲಿಗೆ ಕುಟ್ಟಿ ಕಾಯೊಡೆದು ದೇವಿಗರ್ಪಿಸಿ ಪ್ರಸಾದ ಪಡೆಯಬಹುದು.
ಮಾರಿಯ ಮಹಿಮೆಗಿಂತ ಚೂರೂ ಕಡಿಮೆಯಿಲ್ಲದಂತೆ ಬೆಳಗುವವಳು ನಮ್ಮೂರ ದೇವಿ. ಗುಡಿಯಿಲ್ಲದ, ಗುರುತಿಲ್ಲದ ಅದೃಶ್ಯ ದೇವತೆಯವಳು. ಊರ ನಡುವೆ ಹರಿವ ಹೊಳೆಯ ದಂಡೆಯಲ್ಲಿಯೇ ಅವಳ ವಾಸ. ಅಲ್ಲೆಲ್ಲೋ ಕಾಡಿನ ಮೂಲೆಯಲ್ಲಿದ್ದ ಈ ಮಹಾತಾಯಿ ಊರವರ ಮೊರೆಗೆ ಓಗೊಟ್ಟು ಇಲ್ಲಿ ಬಂದು ನೆಲೆಸಿದಳೆಂಬ ಪ್ರತೀತಿ. ಅವಳ ಮೂಲ ಮೂರ್ತಿ ಅಲ್ಲೆಲ್ಲೋ ಕಾಡುಮಕ್ಕಳು ಕಟ್ಟಿದ ಮುರುಕು ಗುಡಿಯಲ್ಲಿದೆಯಂತೆ. ಕಾಡಿನಲ್ಲಿ ವಾಸಿಸುವ ದೇವಿಯ ಕೈ ಒಮ್ಮೆ ತುಂಡಾದಾಗ ಅಲ್ಲಿನ ಕಾಡು ಮಕ್ಕಳು ತಮಗೆ ತಿಳಿದ ವನೌಷಧಿಯಿಂದ ಅದನ್ನು ಗುಣಪಡಿಸಿದರಂತೆ. ಅವರ ಪ್ರೀತಿಗೆ ಕಟ್ಟುಬಿದ್ದ ದೇವಿ ಅವರೇ ನಿರ್ಮಿಸಿಕೊಟ್ಟ ಮಣ್ಣಿನ ಗುಡಿಯಲ್ಲಿ ಮೂರ್ತಿಯಾಗಿ ನೆಲಸಿದಳಂತೆ. ಈಗಲೂ ಒಮೊಮ್ಮೆ ದೇವಿಯ ಕೈ ತುಂಡಾಗುವುದಂತೆ. ಆಗೆಲ್ಲ ಕಾಡಿನ ಮಕ್ಕಳು ಖಾಯಿಲೆ ಬೀಳುವರಂತೆ. ತಕ್ಷಣ ತುಂಡಾದ ದೇವಿಯ ಕೈಯ್ಯನ್ನು ಮತ್ತೆ ಮಣ್ಣುಮೆತ್ತಿ ಸರಿಮಾಡುವರಂತೆ. ಇವೆಲ್ಲವನ್ನೂ ಹೊಳೆಸಾಲಿನವರು ಕತೆಯಾಗಿ ಕಟ್ಟಿ ತಮ್ಮ ಕಿರಿಯ ಪೀಳಿಗೆಗೆ ಹೇಳುತ್ತಿರುತ್ತಾರೆ.
ದೇವಿ ಆಗಾಗ ಅಲ್ಲಿರುವ ಕಾಡುಮೂಲದ ಮಕ್ಕಳ ಮನೆಗೂ ಹೋಗಿಬರುವ ಕರುಣಾಮಯಿ. ರಾತ್ರಿಯ ಹೊತ್ತು ಈ ದೇವಿ ತನ್ನ ಮನೆಗೆ ಹೋಗುವಾಗ ಅವಳ ಗೆಜ್ಜೆಯ ದನಿ, ಕೈಬಳೆಗಳ ನಾದ ಊರಿಡೀ ಹರಡಿಕೊಳ್ಳುತ್ತಿತ್ತು ಎನ್ನುತ್ತಾರೆ ನಮ್ಮೂರ ಹಿರಿಯರು. ಮತ್ತೆ, ಮತ್ತೆ ಊರಿನಲ್ಲಿ ಜನರ ಸಂಖ್ಯೆ ಹೆಚ್ಚಾಗಿ, ದೇವಿಯ ಓಡಾಟಕ್ಕೆ ತೊಡಕಾದಾಗ ತನ್ನ ಚಲನೆಗಾಗಿಯೇ ಹೊಳೆಯೊಂದು ಊರ ನಡುವೆ ಹರಿಯಿಸಿದಳು ಎಂಬುದವಳ ಸ್ಥಳ ಮಹಿಮೆ. ಊರಿನ ಹಸಿರೆಲ್ಲವೂ ಹೊಳೆಯ ಋಣವಾದ್ದರಿಂದ ಹೊಳೆಯನ್ನು ಹುಟ್ಟಿಸಿದ ದೇವಿಯ ಕಾರುಣ್ಯಕ್ಕೆ ಕೊನೆಯೆಂಬುದಿರಲಿಲ್ಲ. ಸುತ್ತ ಬೆಳೆದ ದಟ್ಟವಾದ ಮರಗಳ ನಡುವೆ ಒಂದು ಹೊಂಡ. ಅದರೊಳಗೆ ದೇವಿಯಿರುವಳೆಂಬುದು ನಂಬಿಕೆ. ದೇವಿಯ ಪೂಜೆಯ ರೀತಿಯೂ ಮಾರಿದೇವತೆಯ ಪೂಜೆಗಿಂತ ಸಂಪೂರ್ಣ ಭಿನ್ನ. ಭೂಮಿಯಾಳದಲ್ಲಿ ಹುದುಗಿರುವ ಈ ದೇವಿಗೆ ಕೆಂಪೆಂದರೆ ಅಲರ್ಜಿ. ಅವಳ ಆವರಣಕ್ಕೆ ಹೋಗುವರ‍್ಯಾರೂ ಕೆಂಪು ಬಟ್ಟೆ ಧರಿಸುವಂತಿಲ್ಲ. ಕೆಂಪು ಹೂ ಕೂಡ ನಿಷಿದ್ಧ. ಅಷ್ಟಕ್ಕೂ ಅವಳ ಆವರಣದ ಸುತ್ತಲೂ ಮರಗಳ ತುಂಬೆಲ್ಲಾ ಜೇನು ಹಟ್ಟಿಗಳ ರಾಶಿಯಿದ್ದುದರಿಂದ ಅಲ್ಲಿ ಶಂಖ, ಜಾಗಟೆಗಳ ಸದ್ದಿಗೂ ಅವಕಾಶವಿಲ್ಲ. ಮಕ್ಕಳಿಲ್ಲವೆಂದು ಕೊರಗುವ ಹೆಣ್ಮಕ್ಕಳಿಗೆ ಸದಾ ನೆನಪಾಗುವ ಅಮ್ಮನೆಂದರೆ ಈ ದೇವಿ. ದೇವಿಯ ಸನ್ನಿಧಾನದಲ್ಲಿ ತೊಟ್ಟಿಲು ತೂಗುವೆನೆಂದು ಹರಕೆ ಹೊತ್ತವರ ಕೈಗೆ ವರ್ಷದೊಳಗೆ ಕೈಗೂಸು ಬರುತ್ತದೆಯೆಂಬುದು ನಂಬಿಕೆ. ಮಡಿಲು ತುಂಬಿದ ಮಗುವನ್ನೆತ್ತಿಕೊಂಡು ಬಂದು, ಮೊಣಕಾಲಿನವರೆಗೆ ಸೀರೆಯನ್ನೆತ್ತಿ ಹೊಳೆದಾಟಿ ದೇವಿಯೆದುರು ಕಣ್ತುಂಬಿಕೊಂಡು ನಿಂತು ಸುತ್ತಲಿರುವ ಮರದ ಕೊಂಬೆಗೆ ಪೇಟೆಯಿಂದ ತಂದ ಬೆಳ್ಳಿಯ ಬಣ್ಣದ ತೊಟ್ಟಿಲನ್ನು ತೂಗುತ್ತಾರೆ. ಅರ್ಧಬೆರಳಿನ ಗಾತ್ರದ ಆ ತೊಟ್ಟಿಲಿನಲ್ಲಿ ಚಿನ್ನದ ಬಣ್ಣದ ಮಗುವೊಂದು ಮಲಗಿರುತ್ತದೆ.
ಅದೇನೋ ತಿಳಿಯದು, ಹೊಳೆಯಾಚೆಗೆ ನೆಲೆನಿಂತ ನಮ್ಮೂರ ದೇವಿಯ ಗಡಿಯೊಳಗೆ ಬಂದಾಗಲೆಲ್ಲ ಪಲ್ಲಕ್ಕಿಯ ದೇವತೆ ಅಲ್ಲಲ್ಲೇ ಸುತ್ತುತ್ತ, ಮುಂದೆ ಹೋಗಲು ಅನುಮಾನಿಸುತ್ತ, ತನ್ನ ಭಾರವನ್ನೆಲ್ಲ ಪಲ್ಲಕ್ಕಿ ಹೊತ್ತವರ ಹೆಗಲಿಗೆ ಒತ್ತುತ್ತಾ ಒಂದಿಷ್ಟು ತಗಾದೆ ತೆಗೆಯುತ್ತಾಳೆ. ಆಗೆಲ್ಲ ಅಲ್ಲಿಯೇ ನಿಂತಿರುವ ಊರ ಹಿರಿಕರು ದೇವಿಯ ನಡೆಯನ್ನು ಬಿಡಿಸಲು ಈಡುಗಾಯಿ ಹೊಡೆದು ಅನುವು ಮಾಡಿಕೊಡುತ್ತಾರೆ.
ದೇವಿಯ ಆವರಣದ ಸುತ್ತೆಲ್ಲ ತೂಗುಬಿಟ್ಟಿರುವ ಈ ತೊಟ್ಟಿಲು, ಶಿಶುಗಳೆಲ್ಲಾ ಮಳೆಸುರಿದು ಹರಿಯುವ ನೆರೆಯಲ್ಲಿ ತೇಲಿಕೊಂಡು ಮೆರವಣಿಗೆ ಹೊರಡುತ್ತವೆ. ಮತ್ತೆ ಮರುವರ್ಷ ಮರಗಳ ತುಂಬೆಲ್ಲಾ ಹೊಸಕೊಂಬೆಗಳು ಚಿಗುರಿ ಮತ್ತಿಷ್ಟು ತೊಟ್ಟಿಲು ತೂಗಲು ಹಂಬಲಿಸುತ್ತವೆ. ದೇವಿಯ ಫಲವಂತಿಕೆಯ ಮಹಿಮೆ ಮನುಷ್ಯರಿಗೆ ಮಾತ್ರವೇ ಸೀಮಿತವಲ್ಲ. ಮನೆಯಲ್ಲಿ ಕರು ಈಯಲು ತಿಣುಕುವ ದನಗಳ ಹೆಸರಿನಲ್ಲಿ ದೇವಿಗೊಂದು ತೆಂಗಿನಕಾಯಿ ತೆಗೆದಿಡಲೇಬೇಕು. ಸುರಕ್ಷಿತವಾಗಿ ಕರು ಹಾಕಿ, ಹನ್ನೆರಡನೇ ದಿನ ಹಿಂಡಿದ ಹಾಲನ್ನು ದೇವಿಯ ಸನ್ನಿಧಾನಕ್ಕೆ ಅರ್ಪಿಸಿಯೇ ಮತ್ತೆ ಹಾಲಿನ ಚಹಾ ಕುಡಿಯಬೇಕು. ಹಾಲು ಹಿಂಡುವ ಹಸುಗಳಿಗೆ ಜಡ್ಡು ಹಿಡಿದರೂ ದೇವಿಗೇ ಹೇಳಿಕೆ, ಹಾಲು ಹಿಂಡಲು ಬಿಡದ ಚಾಳಿಯ ದನಗಳಿಗೂ ದೇವಿಯ ಹೆಸರಿನಲ್ಲೇ ಹರಕೆ. ಹೊಳೆಸಾಲಿನಲ್ಲಿ ತೆಂಗಿನ ಮರವೊಂದು ಮೊತ್ತಮೊದಲು ಹೂವರಳಿಸಿ, ಕಾಯಾದರೆ ದೇವಿಗೆ ಮೊದಲ ಸಿಹಿಯಾಳದ ಅಭಿಷೇಕ, ಹೊಸತೋಟದಲ್ಲಿ ಮೊಳೆತ ಮೊದಲ ಬಾಳೆಗೊನೆಯೂ ದೇವಿಗೆ ಅರ್ಪಿತ. ನಾಲ್ಕಾರು ವರ್ಷ ವಾಗತಿ ಮಾಡಿದರೂ ಫಲ ಬಿಡದ ಮರದಲ್ಲಿ ಫಲ ಕಚ್ಚಲೂ ದೇವಿಗೆ ಹರಕೆ ಹೊರುವರು. ಅವಳೆಂದರೆ ಹಿಗ್ಗುವ ನೆಲದೆದೆಯ ಕರುಣೆ. ಇಷ್ಟೇ ಅಲ್ಲ, ಊರಿನಲ್ಲೆನಾದರೂ ಕಳುವಾದರೂ ದೇವಿಗೇ ಹೊಯಿಲು, ಮರುದಿನವೇ ಇಟ್ಟ ಜಾಗದಲ್ಲಿ ಕಳುವಾದ ವಸ್ತು ಬಂದು ಬೀಳುವುದನ್ನು ನೋಡುವುದೇ ಕೌತುಕ! ಸುಳ್ಳೇ ಸುಳ್ಳು ಹೆರವರಿಗೆ ಕೆಡುಕಾಗಲೆಂದು ಹರಕೆ ಹೊತ್ತರೆ ಜೀವ ಹಿಂಡಿಬಿಡುವಳು ದೇವಿ ಚಂಡಿಯಂತೆ!
ಮನೆಯಂಗಳದಲ್ಲಿ ಅರಳುವ ಮಲ್ಲಿಗೆಯ ಪರಿಮಳದಂತೆ ಊರತುಂಬಾ ಹರಡಿರುವ ಈ ದೇವಿಯರ ಮಹಿಮೆಗೆ ನೀಲಿಯ ಕಣ್ಣುಗಳೂ ಅರಳುತ್ತವೆ. ಊರ ಹೆಂಗಳೆಯರೆಂದರೆ, ಭತ್ತದ ಗದ್ದೆಗಳೆಂದರೆ ಊರಮಾರಿಗೆ ಅದೇಕೆ ಅಷ್ಟೊಂದು ಮೆಚ್ಚು ಎಂದು ಅಪ್ಪನಲ್ಲಿ ಕೇಳಿಯೂ ಇದ್ದಾಳೆ. ಆಗೆಲ್ಲ ಅಪ್ಪ ಮಾರಿದೇವತೆ ಸಿಕ್ಕಿದ ಕತೆಯನ್ನು ಹೇಳುತ್ತಾರೆ. ಊರ ಗದ್ದೆಯ ಬಯಲಲ್ಲಿ ನೆಟ್ಟಿ ನೆಡುತ್ತಾ ಹಾಡು ಹೇಳುತ್ತಿದ್ದ ಹೆಂಗಳೆಯರ ಕೈಗೆ ದೇವಿಯ ಮೂರ್ತಿ ಸಿಕ್ಕಿದ್ದಂತೆ. ದಿನವಿಡೀ ದುಡಿಯುವ ನಮಗೆ ದೇವಿಯ ಪೂಜೆ, ಪುನಸ್ಕಾರಕ್ಕೆಲ್ಲ ಎಲ್ಲಿಯ ಸಮಯ? ಎಂದು ಯೋಚಿಸಿದ ಅವರು ದೇವಿಯನ್ನು ಊರ ಪೂಜಾರಿಗಳ ಕೈಗೆ ದಾಟಿಸಿದರಂತೆ. ಇಂದಿಗೂ ತನ್ನನ್ನು ಮೊದಲ ಬಾರಿಗೆ ಎತ್ತಿಕೊಂಡ ಊರ ರೈತ ಮಹಿಳೆಯೆಂದರೆ ದೇವಿಗೆ ಜೀವವಂತೆ. ಅವರು ಕಟ್ಟುವ ಅಬ್ಬಲಿಗೆ ಹೂ, ಅವರು ತೊಡುವ ಹಸಿರು ಗಾಜಿನ ಬಳೆಗಳು, ಅವರು ಬೆಳೆಸುವ ಕೋಳಿ ಪಿಳ್ಳೆಗಳು ಎಲ್ಲವೂ ದೇವಿಗೆ ಪ್ರಿಯವೆಂದು ಅಪ್ಪ ಕಥೆ ಹೇಳುತ್ತಿದ್ದರು. ದೇವಿಯ ಪಲ್ಲಕ್ಕಿಯು ತನ್ನ ಚಲನೆಯನ್ನು, ಭಾರವನ್ನು ತಾನೇ ನಿರ್ಣಯಿಸುವ ಬಗ್ಗೆ ನೀಲಿಯ ಅಣ್ಣ ಅವೆಲ್ಲವೂ ಪಲ್ಲಕ್ಕಿಯನ್ನು ಸಂಭಾಳಿಸಲು ನಿಂತಿರುವವರ ಕೈಚಳಕ ಎಂದೆಲ್ಲ ಹೇಳಿ ನೀಲಿಯನ್ನು ಗೊಂದಲದಲ್ಲಿ ಸಿಕ್ಕಿಸುತ್ತಿದ್ದ.
ಆದರೆ ನೀಲಿಯನ್ನು ಬಹುವಾಗಿ ಕಾಡಿದ ಕತೆಯೆಂದರೆ ಹೊಳೆಸಾಲಿನ ಮಾರಿ ಮತ್ತು ಕಡೆಸಾಲಿನ ಸುಬ್ಬಮ್ಮನವರ ನಡುವೆ ನಡೆದ ಮಾರಾಮಾರಿ ಜಗಳದ ಕತೆ. ಇಂದಿಗೂ ಊರತುಂಬಾ ಮೆರವಣಿಗೆ ಹೊರಡುವ ಮಾರಿಯ ಪಲ್ಲಕ್ಕಿ ಸುಬ್ಬಮ್ಮನವರ ಅಂಗಳಕ್ಕೆ ಕಾಲಿಡುವುದಿಲ್ಲ. ಹಾಗೇನಾದರೂ ತಪ್ಪಿ ನಡೆದರೂ ಆ ಮನೆಯ ಹೆಣ್ಮಕ್ಕಳು ದಡಕ್ಕನೆ ಬಾಗಿಲಿಕ್ಕುವುದನ್ನು ಮರೆಯುವುದಿಲ್ಲ. ಆ ದೊಡ್ಡ ಮನೆಯ ಹಿರಿಕಳಾದ ಸುಬ್ಬಮ್ಮನೆಂಬ ಜೀವ ಮನೆಯ ಹೆಣ್ಣುಗಳಿಗೆ ವಿಧಿಸಿದ ನಿಯಮವದು. ಅಸಲಿಗೆ ನಡೆದಿದ್ದು ಇಷ್ಟು ಎಂದು ನೀಲಿಯ ಅಮ್ಮ ತನ್ನಮ್ಮ ತನಗೆ ಹೇಳಿದ ಸಂಗತಿಯನ್ನು ನೀಲಿಗೆ ಕತೆಯಂತೆ ಹೇಳಿದ್ದರು.
ಆಗೆಲ್ಲ ಸಿಡುಬು ಕರಿಮೈಲಿಯೆಂಬ ಹೆಸರಿನಲ್ಲಿ ಇಡಿಯ ಊರಿಗೆ ಊರನ್ನೇ ಆಪೋಷನ ತೆಗೆದುಕೊಳ್ಳುತ್ತಿದ್ದ ಕಾಲ. ಪ್ಲೇಗ್ ಬಂದಾಗ ಊರು ಬಿಡುವಂತೆ ಸಿಡುಬು ಬಂದಾಗಲೂ ಜನರು ಊರನ್ನು ಬಿಟ್ಟು ಗುಳೆ ಹೊರಡುತ್ತಿದ್ದರು. ರೋಗ ಅಂಟಿಕೊಂಡವರೆಲ್ಲ ಮನೆಯಲ್ಲಿಯೇ ನರಳಿ ಸಾಯುತ್ತಿದ್ದರು. ಕೆಲವರು ರೋಗದ ವಿರುದ್ಧ ಸೆಣಸಿ ಗೆದ್ದು ಬಂದವರೂ ಇದ್ದರು. ಅವರ ಮುಖವೆಲ್ಲ ಸಾಣೆಹಿಡಿದ ಅರೆಯುವ ಕಲ್ಲಿನಂತೆಯೇ ಮೈಲಿಯ ಕಲೆಗಳಿಂದ ತುಂಬಿಹೋಗುತ್ತಿತ್ತು. ಜೀವನಪೂರ್ತಿ ಅವರು ಮೈಲಿಯ ಕುರುಹುಗಳನ್ನು ಹೊತ್ತು ಓಡಾಡುತ್ತಿದ್ದರು. ಹೀಗಿರುವ ಹೊತ್ತಿನಲ್ಲಿಯೇ ಕಡೆಸಾಲಿಗೆ ಕರಿಮೈಲಿಯ ಸೋಂಕು ತಗುಲಿತು. ನೀರಿಗೆ ಬಿದ್ದ ಇರುವೆಗಳಂತೆ ಜನರನ್ನು ಕೊಲ್ಲತೊಡಗಿತು. ಊರಿಗೆ ಬರುವ ಎಲ್ಲ ಖಾಯಿಲೆಗೂ ಮಾರಿಯನ್ನೇ ಹೊಣೆಯಾಗಿಸುವ ಕಾಲವದು. ಕಡೆಸಾಲಿಗೆ ಕಾಲಿಡಲು ಯಾರೂ ಒಪ್ಪದ ಕಾಲದಲ್ಲಿ ಊರ ಯುವ ಮುಖಂಡರಾದ ಗೌಡರು ಕಡೆಸಾಲಿನ ಜೋಯಿಸರೊಂದಿಗೆ ಸೇರಿ ಮಾರಿಯನ್ನು ತರುವ ಏರ್ಪಾಡು ಮಾಡಿಯೇಬಿಟ್ಟರು. ಅವರ ಆಣತಿಯಂತೆ ಮಾರಿಯಮ್ಮನ ಪಲ್ಲಕ್ಕಿ ಊರಿಡೀ ತಿರುಗಿ ಊರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಆದರೂ ಕರಿಮೈಲಿಯ ಆರ್ಭಟ ಮಾತ್ರ ಮುಂದುವರೆಯುತ್ತಲೇ ಹೋಯಿತು. ಮಾರಿಯೊಂದಿಗೆ ಊರಿಡೀ ತಿರುಗಿದ ಜೋಯಿಸರು ಮೈಲಿಯಿಂದಾಗಿ ಮೈಯಿಡೀ ಗುಳ್ಳೆಯೆದ್ದು ಹಾಸಿಗೆಯಲ್ಲಿ ಮಲಗಿಯೇಬಿಟ್ಟರು. ಅವರ ಮೋಹದ ಮಡದಿಯೇ ಸುಬ್ಬಮ್ಮ. ಸಾಲಾಗಿ ನಾಲ್ಕು ಹಸುಗೂಸುಗಳ ತಾಯಿ. ಇದ್ದಕ್ಕಿದ್ದಂತೆ ಗಂಡ ಮಲಗಿದಾಗ ಮಕ್ಕಳನ್ನೆಲ್ಲ ದೂರದ ತನ್ನ ತವರಿಗೆ ಸಾಗುಹಾಕಿ ಗಂಡನ ಸೇವೆಗೆ ನಿಂತಳು. ರೋಗ ದಿನದಿಂದ ದಿನಕ್ಕೆ ಉಲ್ಬಣಿಸತೊಡಗಿತು. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಕಂಡ ಮನೆಯ ಹಿರಿಯರು ಅವಳನ್ನೂ ತವರಿಗೆ ಹೋಗುವಂತೆ ಒತ್ತಾಯಿಸಿದರು. ಸುಬ್ಬಮ್ಮನ ಪತಿಭಕ್ತಿ ಅಪರಿಮಿತವಾದುದಾಗಿತ್ತು, ಕಣ್ಣೀರು ಸುರಿಸುತ್ತಾ ಮಾರಿಗುಡಿಯೆಡೆಗೆ ಮುಖಮಾಡಿ ನಿಂತವಳು ದೊಡ್ಡ ದನಿಯಲ್ಲಿ ಹರಕೆ ಹೊತ್ತಳು, “ದೇವಿ, ನಿನ್ನ ಕರುಣೆಯಿಂದ ನನ್ನ ಮುತ್ತೈದೆತನ ಉಳಿಯಿತಾದರೆ ಅದರ ಕುರುಹುಗಳೆಲ್ಲವನ್ನೂ ನಿನ್ನ ಕೊರಳಿಗೆ ಅರ್ಪಿಸುವೆ. ಜತೆಯಲ್ಲಿ ಮದುವೆಯ ಮಂಗಲ ಮೂಹೂರ್ತದಲ್ಲಿ ನನ್ನ ಮೈಯ್ಯೇರಿದ ಡಾಬು, ಕಾಸಿನ ಸರ, ಮುತ್ತಿನ ಹಾರ, ತೋಳಬಂಧಿ, ಕಾಲಿನ ಗೆಜ್ಜೆ, ಕಾಲುಂಗುರ ಎಲ್ಲವನ್ನೂ ನಿನ್ನುಡಿಯಲ್ಲಿ ತುಂಬಿಸಿ, ಅರಿಸಿನ ದಾರದಲ್ಲಿ ಕಟ್ಟಿದ ತಾಳಿಯನ್ನು ಎದೆಗೊತ್ತಿಕೊಂಡು ಇಡಿಯ ಬದುಕನ್ನು ಕಳೆಯುವೆ. ನನ್ನ ಪತಿಯನ್ನು ಬದುಕಿಸಿಕೊಡು, ಎಲ್ಲ ಅಷ್ಟೈಶ್ವರ್ಯಗಳು ನಿನಗಿರಲಿ.” ಸುಬ್ಬಮ್ಮನ ಹರಕೆ ಇಡಿಯ ಕಡೆಸಾಲಿನ ಊರಿಗೆ ಸುದ್ದಿಯಾಗಿಹೋಯಿತು. ಜತೆಯಲ್ಲಿ ಊರಿಡೀ ಹಬ್ಬಿದ ಕರಿಮೈಲಿಯ ತೀವ್ರತೆಯೂ ತಗ್ಗುತ್ತ ನಡೆಯಿತು.
ಆದರೇನು? ಹರಕೆ ಹೊತ್ತ ಹತ್ತು ದಿನಕ್ಕೆ ಜೋಯಿಸರ ಪ್ರಾಣಪಕ್ಷಿ ಹಾರಿಹೋಗಿತ್ತು. ಗಂಡಸತ್ತ ಹನ್ನೆರಡನೆಯ ದಿನದವರೆಗೂ ದೀರ್ಘ ಮೌನದಿಂದಿದ್ದ ಸುಬ್ಬಮ್ಮ, ಗಂಡನ ಕಾರ್ಯ ಮುಗಿದ ಮರುದಿನವೇ ತನ್ನ ಎಲ್ಲ ಒಡವೆಗಳನ್ನು ಗಂಟು ಮಾಡಿ ತಂದು ಹೊಳೆಸಾಲಿನ ಹೊಳೆಯ ಸುಳಿಯಲ್ಲಿ ಎಸೆದು, ದೇವಿಯ ಗುಡಿಯೆದುರು ನಿಂತು, “ಇಂದಿಗೆ ನಿನ್ನ ನನ್ನ ಋಣ ತೀರಿತು. ನನ್ನ ಮನೆಯೊಳಗೇನಾದರೂ ಬಂದರೆ ಹಿಡಿಸೂಡಿಯ ಪೂಜೆ ಮಾಡದೇ ಬಿಡುವುದಿಲ್ಲ.” ಎಂದು ಕಠಿಣ ಪ್ರತಿಜ್ಞೆ ಮಾಡಿ ಮನೆಗೆ ಹಿಂದಿರುಗಿದಳು. ಅಲ್ಲಿಂದ ಮುಂದೆ ಪಲ್ಲಕ್ಕಿ ಅವರ ಮನೆಯಂಗಳಕ್ಕೆ ಕಾಲಿಟ್ಟಿಲ್ಲ, ಕಾಲಕಳೆದು ಎಲ್ಲ ಮರೆತು ಅಂಗಳಕ್ಕೆ ಬಂದರೂ ಬಾಗಿಲಿಕ್ಕುವುದನ್ನು ಅವರ ಮನೆಯ ಹೆಂಗಳೆಯರು ಮರೆಯುವುದಿಲ್ಲ. ಹೀಗೆಲ್ಲ ಕತೆಗಳನ್ನು ಕೇಳುತ್ತ ನೀಲಿಗೆ ತನ್ನ ಊರಿನಲ್ಲಿರುವ ಮಹಿಮಾನ್ವಿತರಾದ ಅನೇಕ ಹೆಂಗಳೆಯರಂತೆ ಈ ಇಬ್ಬರು ದೇವಿಯರೂ ಕೂಡ ಅನಿಸಿಬಿಡುವುದುಂಟು. ಆದರೂ ಮಾರಿಯನ್ನೇ ಎದುರು ಹಾಕಿಕೊಂಡು ತನ್ನ ಮಕ್ಕಳನ್ನೆಲ್ಲ ಒಬ್ಬಳೇ ಬೆಳೆಸಿ ಮನೆತನವನ್ನು ಬೆಳಗಿದ ಸುಬ್ಬಮ್ಮನೂ ಇವರಿಗಿಂತ ಕಡಿಮೆಯೇನಿಲ್ಲ ಅನಿಸಿ ಅವಳ ಬಗ್ಗೆ ಅಮ್ಮನಿಂದ ಇನ್ನಷ್ಟು ತಿಳಿಯುವ ಹುಮ್ಮಸ್ಸು ಮೂಡುವುದು.
ಆದರೆ ಸುಬ್ಬಮ್ಮನ ಒಡವೆಯ ಗಂಟನ್ನು ತನ್ನೊಡಲಿನಲ್ಲಿ ಮುಳುಗಿಸಿಕೊಂಡ ಹೊಳೆಸಾಲಿನ ಹೊಳೆ ಮಾತ್ರ ದೇವಿಯಮ್ಮನನ್ನು ಆಗಾಗ ತನ್ನ ಮೂಲಮನೆಗೆ ಕೊಂಡೊಯ್ಯುವ ದಾರಿಯಾಗುತ್ತ, ಪಲ್ಲಕ್ಕಿಯಲಿ ಕುಳಿತು ಸವಾರಿ ಮಾಡುವ ಮಾರಿಯಮ್ಮನಿಗೂ ದಾರಿ ಬಿಡುತ್ತಾ ಇಬ್ಬರು ದೇವಿಯರ ಜಗಳವನ್ನು ತಣ್ಣಗೆ ನೋಡುತ್ತಾ ಹರಿಯುತ್ತಲೇ ಇದೆ.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ವಾಹ್ ವಾಹ್…. ಈ ಸೊಗಸಾದ ಕತೆಯಂತಹ ಕಥನವನ್ನು ಓದುವ ಖುಷಿಯೇ ಬೇರೆ… ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಿಮ್ಮ ಈ ಅಂಕಣ….ಅಭಿನಂದನೆಗಳು
ಧನ್ಯವಾದಗಳು ಸರ್