ಶುಭಕೃತ್ ಸಂವತ್ಸರವು ಅಡಿಯಿಟ್ಟಿದೆ. ಆದರೆ ಕಾಲವು ಅದೇ ಪ್ರಕಾರ ಒಳಿತುಕೆಡುಕುಗಳನ್ನು ಒಟ್ಟಿಗೆ ಕಟ್ಟಿಕೊಂಡು ಸಾಗುತ್ತಿದೆ. ಪ್ರಕೃತಿ ವಿಕೋಪವೆಂಬ ಬೇವು, ಮಾನವೀಯತೆ ಎಂಬ ಬೆಲ್ಲವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕಾಗಿದೆ. ಆಸ್ಟ್ರೇಲಿಯಾದಲ್ಲಿ ಟೆನಿಸ್ ಪಟು ಆಶ್ ಬಾರ್ಟಿ ನಿವೃತ್ತಿ ಘೋಷಿಸಿದ್ದು ಬೇಸರವೆನಿಸಿದರೆ ಅವರ ಮುಂದಿನ ನಿರ್ಧಾರ ಖುಷಿ ಕೊಡುವುದು. ಪ್ರವಾಹವು ನೋವು ಕೊಡುವುದು. ಮಾನವೀಯತೆಯು ಬೆಲ್ಲಕ್ಕಿಂತಲೂ ಸಿಹಿಯೆನಿಸುವುದು. ಡಾ. ವಿನತೆ ಶರ್ಮ ಬರೆದ ಆಸ್ಟ್ರೇಲಿಯಾ ಪತ್ರದಲ್ಲಿ ಅಲ್ಲಿನ ಕ್ಷೇಮ ಸಮಾಚಾರಗಳನ್ನು ತಿಳಿಯೋಣ.
ದೇಶದಲ್ಲಿ ಸುದ್ದಿಸಮಾಚಾರಗಳ ಒಂದಿಷ್ಟು ಸದ್ದುಗದ್ದಲ ಕೇಳಿಬರುತ್ತಿದೆ. ಆಸ್ಟ್ರೇಲಿಯನ್ನರ ಟೆನಿಸ್ ಪ್ರಪಂಚದಲ್ಲಿ ಆಶಾದೀಪವಾಗಿ ಬೆಳಗುತ್ತಿದ್ದ ಆಶ್ ಬಾರ್ಟಿ ಕಳೆದವಾರ ಇದ್ದಕ್ಕಿದ್ದಂತೆ ತಮ್ಮ ನಿವೃತ್ತಿ ಘೋಷಿಸಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಕೇವಲ ಇಪ್ಪತ್ತೈದು ವರ್ಷ ಹರೆಯದ ಆಶ್ ತಾನು ಟೆನಿಸ್ ಕ್ರೀಡೆಗೆ ಎಷ್ಟೆಲ್ಲಾ ಕೊಡಬಹುದೊ ಅಷ್ಟೆನ್ನೆಲ್ಲ ಕೊಟ್ಟಿದ್ದೀನಿ, ಒಬ್ಬ ಅಥ್ಲೀಟ್ ಆಗಿದ್ದು ಟೆನಿಸ್ ಕ್ರೀಡೆಯನ್ನು ಸಂಪೂರ್ಣವಾಗಿ ಅನುಭವಿಸಿ ಆನಂದಿಸಿದ್ದೀನಿ, ಎಂದು ಸರಳವಾಗಿ, ಪ್ರಾಮಾಣಿಕವಾಗಿ ಹೇಳಿದ್ದಾರೆ. ಮುಂದೇನು ಮಾಡುತ್ತೀರಿ ಎಂದು ಕೇಳಿದ ವರದಿಗಾರರ ಪ್ರಶ್ನೆಗೆ ನಸುನಗುತ್ತಾ ಆಶ್ ತನ್ನ ಹೃದಯ ಮಿಡಿಯುವುದು ತನ್ನ ಮಕ್ಕಳ ಏಳಿಗೆಗಾಗಿ. ಅಬೊರಿಜಿನಲ್ ಮಕ್ಕಳಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಟೆನಿಸ್ ಆಟವನ್ನು ಹೇಳಿಕೊಡುತ್ತಾ ಅವರಿಗೆ ತರಬೇತಿ ಕೊಡುವ ಆಶಯವಿದೆ, ಎಂದರು.
ಹಿಂದೊಮ್ಮೆ ತಾನೇ ಟೆನಿಸ್ ತ್ಯಜಿಸಿ ಕ್ರಿಕೆಟ್ ಆಟವನ್ನು ಅಪ್ಪಿಕೊಂಡರೂ, ದೊಡ್ಡ ಕ್ರೀಡಾಪಟು ಎಂಬ ಯಾವುದೆ ತರಹದ ಬಿಗುಮಾನವಿಲ್ಲದೆ ಆಶ್ ಬ್ರಿಸ್ಬೇನ್ ನಗರದಲ್ಲಿ ಮಕ್ಕಳಿಗೆ ಟೆನಿಸ್ ಕೋಚ್ ಆಗಿದ್ದು ಜೀವನ ನಡೆಸಿದ್ದರು. ಸಮುದಾಯದತ್ತ ಕ್ರೀಡೆ ಎನ್ನುವುದನ್ನು ಅಕ್ಷರಶಃ ಪಾಲಿಸಿದ್ದರು. ಈಗ ಬ್ರಿಸ್ಬೇನ್ ನಗರದ ಹೊರವಲಯದಲ್ಲಿರುವ ಇಪ್ಸ್ವಿಚ್ ಪ್ರದೇಶದಲ್ಲಿ ಮನೆ ಕಟ್ಟಿಸುತ್ತಿರುವ ಆಶ್ ಸದ್ಯದಲ್ಲೇ ಮದುವೆಯಾಗಲಿದ್ದಾರಂತೆ. ಈ ಆಸ್ಟ್ರೇಲಿಯನ್ ಅಬೊರಿಜಿನಲ್ ಹುಡುಗಿಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸೋಣ.
ದೊಡ್ಡ ಕ್ರೀಡಾಪಟು ಎಂಬ ಯಾವುದೆ ತರಹದ ಬಿಗುಮಾನವಿಲ್ಲದೆ ಆಶ್ ಬ್ರಿಸ್ಬೇನ್ ನಗರದಲ್ಲಿ ಮಕ್ಕಳಿಗೆ ಟೆನಿಸ್ ಕೋಚ್ ಆಗಿದ್ದು ಜೀವನ ನಡೆಸಿದ್ದರು. ಸಮುದಾಯದತ್ತ ಕ್ರೀಡೆ ಎನ್ನುವುದನ್ನು ಅಕ್ಷರಶಃ ಪಾಲಿಸಿದ್ದರು.
ಮತ್ತೆ ಧಾರಾಕಾರ ಮಳೆ ಜೊತೆಗೆ ಪ್ರವಾಹ! ಮಾರ್ಚ್ ತಿಂಗಳ ಆದಿಭಾಗದಲ್ಲಿ ಸುರಿಸುರಿದು ಅಪ್ಪಳಿಸಿದ ಮಹಾನ್ ಮಳೆ ಮತ್ತು ಪ್ರವಾಹದಿಂದ ಜನರು ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಮಳೆ!
ನಮ್ಮ ಸೌತ್-ಈಸ್ಟ್ ಕ್ವೀನ್ಸ್ ಲ್ಯಾಂಡ್‍ನ ಕೆಲಭಾಗಗಳಲ್ಲಿ ಮತ್ತು ರಾಜ್ಯದ ಕೆಳಗಡೆ ದಕ್ಷಿಣದಲ್ಲಿರುವ ನ್ಯೂ ಸೌತ್ ವೇಲ್ಸ್ ರಾಜ್ಯದ ಭಾಗಗಳಲ್ಲಿ ಪುನಃ ಅಧಿಕ ಮಳೆ ಬಿದ್ದು ನದಿ, ತೊರೆಗಳು ಉಕ್ಕಿ ಹರಿದು ಜನಜೀವನವನ್ನು ಅಲ್ಲಾಡಿಸಿವೆ. ಇಬ್ಬರು ಸತ್ತಿರುವ ಸಮಾಚಾರ ರಾಜ್ಯ ಸರಕಾರಗಳಿಗೆ ತಲೆಬಿಸಿ ತಂದಿದೆ. ಮತ್ತೆ ಚರ್ಚೆಗೆ ಬಂದಿರುವುದು ಪ್ರತಿವರ್ಷವೂ ಪುನರಾವರ್ತನೆಯಾಗುವ ವಿಷಯಗಳೇ- ಕೇಂದ್ರದಿಂದ ಎಷ್ಟು ಹಣಸಹಾಯ ಸಿಗುತ್ತದೆ, ಅವರಿಗೆ ಯಾಕೆ ಹೆಚ್ಚು ನಮಗೆ ಯಾಕೆ ಕಡಿಮೆ, ಧೋರಣೆಗಳ ನಡುವೆ ಇರುವ ಅಸಮಾಧಾನದ ಹೊಗೆ, ಜಖಂ ಆದ ರಸ್ತೆ, ಸೇತುವೆ ಮುಂತಾದ ಸಾರ್ವಜನಿಕ ಆಸ್ತಿಗಳನ್ನು ದುರಸ್ತಿ ಮಾಡಲು ಬೇಕಿರುವ ತಯಾರಿ ಮತ್ತು ಅದರ ಜೊತೆಗೆ ಬರುವ ಕೆಂಪುಪಟ್ಟಿ ಅಡಚಣೆಗಳು…
ಇತ್ತ ಕಡೆ ಸಾರ್ವಜನಿಕರು ತಮ್ಮ ಮನೆ, ಅಂಗಡಿ ವಹಿವಾಟುಗಳಿಗಾದ ಹಾನಿಯನ್ನು ನೋಡಿ ಇನ್ನೂ ಕಣ್ಣೀರಿಡುತ್ತಿದ್ದಾರೆ. ಮಕ್ಕಳ ಪಾಲನೆ ಕೇಂದ್ರಗಳು, ಶಾಲೆಗಳು, ಆಟದ ಮೈದಾನಗಳು, ಪಾರ್ಕುಗಳು ಎಂಬಂತೆ ಎಲ್ಲವಕ್ಕೂ ಆಗಿರುವ ಹಾನಿಗಳನ್ನು ತಕ್ಷಣಕ್ಕೆ ಸರಿಪಡಿಸಲು ಕೂಡ ಸಾಧ್ಯವಿಲ್ಲ. ಹಾನಿಯ ಅಂದಾಜು ಪರಿಶೀಲನೆ, ರಿಪೇರಿ ಮಾಡುವ ಕಂಪನಿಗಳು ಯಾವುವು, ಅವರಿಂದ ಪಡೆಯಬೇಕಿರುವ ಅಂದಾಜು ವೆಚ್ಚದ ಸ್ಟೇಟ್ಮೆಂಟ್, ಅವರಲ್ಲಿ ಯಾರು ಕಡಿಮೆ ಚಾರ್ಜ್ ಮಾಡುತ್ತಾರೆ ಎನ್ನುವುದರ ಪುರಾವೆ… ಒಂದೇ ಎರಡೇ… ಕೆಂಪುಪಟ್ಟಿ ಎಂಬುದು ಕಬಂಧಬಾಹುಗಳು. ಎಲ್ಲವೂ ನಿಗದಿತ ಯೋಜನೆ ಅನುಸಾರವಾಗಿ ಕರಾರುವಾಕ್ಕಾಗಿ, ನಿಯಮಿತವಾಗಿ ನಡೆಯುವ ಪಾಶ್ಚಿಮಾತ್ಯ ಜನಜೀವನದಲ್ಲಿ ಸ್ವಲ್ಪ ಏರುಪೇರು ಕಂಡರೆ ಅದನ್ನು ಸರಿಪಡಿಸುವುದು ಸಾಮಾನ್ಯ ಪ್ರಜೆಗೆ ಅದೆಷ್ಟು ಕಷ್ಟ ಎನ್ನುವುದು ಈ ಪ್ರವಾಹ ಪರಿಸ್ಥಿತಿಯಿಂದ ನಿಚ್ಚಳವಾಗಿದೆ.
ಆದರೆ ಅಲ್ಲೊಂದು ಇಲ್ಲೊಂದು ಸಹೃದಯತೆಯ ಸಮಾಚಾರಗಳೂ ಸಿಗುತ್ತವೆ. ಈ ವಾರ ಬಿದ್ದ ಅಧಿಕ ಮಳೆಯಿಂದ ನಮ್ಮನೆ ಹಿಂದಿನ ಅಂಗಳದಲ್ಲಿರುವ ಒಂದು ಮರದ ದೊಡ್ಡ ಭಾಗ ಕಳಚಿ ಪಕ್ಕದ ಮನೆಯವರ ಅಂಗಳದಲ್ಲಿ ಬಿತ್ತು. ನಮ್ಮ ಪುಣ್ಯಕ್ಕೆ ಅವರು ‘ಗುಡ್ ನೈಬರ್’. ಫೋಟೋ ತೆಗೆದು ಕಳಿಸಿ, ಏನು ಮಾಡುತ್ತೀರ ಎಂದು ಕೇಳಿದರು. ಈ ದೇಶದ ಕಾನೂನಿನ ಪ್ರಕಾರ ಕಳಚಿದ್ದ ಮರದ ಭಾಗವನ್ನು ಅವರ ಅಂಗಳದಿಂದ ನಾವು ತೆರವು ಮಾಡಬೇಕು. ಅದು ನಮ್ಮ ಜವಾಬ್ದಾರಿ. ಸರಿ, ಈ ವಾರಾಂತ್ಯದಲ್ಲಿ ನಾವು ಬಂದು ಅದನ್ನು ತೆರವು ಮಾಡುತ್ತೀವಿ ಎಂದೆವು. ಈ ಗುಡ್ ನೈಬರ್ ಮನೆಯಲ್ಲಿ ಫೈರ್ ಪ್ಲೇಸ್ ಇದೆ (ಚಳಿಗಾಲದಲ್ಲಿ ಮನೆಯೊಳಗಡೆ ಬೆಂಕಿಯುರಿಸಿ ಬೆಚ್ಚಗಿರಲು ಇರುವ ಪ್ರತ್ಯೇಕ ಬೆಂಕಿ ಉರಿಸುವ ಸ್ಥಳ). ಹಾಗಾಗಿ ಅವರು, ನಮಗೆ ಅಭ್ಯಂತರವಿಲ್ಲವಾದರೆ ಆ ಮರಭಾಗವನ್ನು ತಾವೇ ಉಪಯೋಗಿಸುತ್ತೇವೆ ಎಂದರು. ಅಲ್ಲಿಗೆ ವಿಷಯ ಇತ್ಯರ್ಥವಾಯಿತು. ಹನ್ನೊಂದು ವರ್ಷಗಳ ಹಿಂದೆ ನಮ್ಮ ಹಿಂದಿನ ಮನೆಯವರದ್ದೊಂದು ಮರ ಕಳಚಿ ನಮ್ಮ ಬೇಲಿಯ ಮೇಲೆ ಬಿದ್ದು ಅದು ಮುರಿದಿತ್ತು. ಯಾವುದೇ ತಕರಾರಿಲ್ಲದೆ ಅವರು ಮರವನ್ನು ತೆರವು ಮಾಡಿ ಬೇಲಿಯನ್ನು ರಿಪೇರಿ ಮಾಡಿದ್ದರು. ನೆರೆಹೊರೆಯವರಲ್ಲಿ, ಸಮುದಾಯದಲ್ಲಿ ಸೌಹಾರ್ದತೆಯಿದ್ದರೆ ಸಂಬಂಧಗಳು ಬೆಳೆದು ಗಟ್ಟಿಯಾಗುತ್ತವೆ.
ಸೌಹಾರ್ದತೆ ಎಂದಾಗ ನೆನಪಿಗೆ ಬಂದದ್ದು ಕಳೆದ ವಾರ ಮಾರ್ಚ್ ೨೧ ರಿಂದ ೨೭ರವರೆಗೆ ಆಸ್ಟ್ರೇಲಿಯ ದೇಶಪೂರ್ತಿ ಸೌಹಾರ್ದತೆ ವಾರ ನಡೆಯಿತು. ಪ್ರತಿವರ್ಷವೂ ಮಾರ್ಚ್ ಮೂರನೇ ವಾರ ನಡೆಯುವ ಸೌಹಾರ್ದತೆ ವಾರವು ‘ಪರಸ್ಪರ ಗೌರವ, ಎಲ್ಲರನ್ನೂ ಒಳಗೊಳ್ಳುವುದು, ಎಲ್ಲರೂ ಸೇರಿರುವುದು’ ಎಂಬ ಒಗ್ಗಟ್ಟಿನ ಸಂದೇಶವನ್ನು ಸಾರುತ್ತದೆ.
ವಸಾಹತುಶಾಹಿಗಳ ನಂತರ ಬಂದು ನೆಲೆಸಿರುವ ಅನೇಕ ದೇಶಗಳ ಜನರ ವಿವಿಧ ಸಂಸ್ಕೃತಿಗಳು ಬೆರೆತು ರೂಪುಗೊಳ್ಳುತ್ತಿರುವುದು ಇಂದಿನ ನವೀನ ಆಸ್ಟ್ರೇಲಿಯನ್ ಸಮಾಜ. ಎಲ್ಲರೂ ಪರಸ್ಪರ ಸೌಹಾರ್ದತೆಯಿಂದಿರಬೇಕಾದ ಅಗತ್ಯವಿದೆ. ಈ ಭಾವನೆಯಲ್ಲಿ ‘ಹಾರ್ಮೋನಿ ವೀಕ್’ ಅರ್ಥಪೂರ್ಣವಾಗಿದೆ. ಆದರೆ ‘ಆಸ್ಟ್ರೇಲಿಯಾ ಒಂದು ಮಲ್ಟಿ ಕಲ್ಚರಲ್ ದೇಶ. ಅದರಲ್ಲೇ ಇರುವುದು ನಮ್ಮ ಶಕ್ತಿ’ ಎಂದು ಎಲ್ಲರೂ ಗಿಣಿಪಾಠದಂತೆ ಪಠಿಸಿದಾಗ ಪ್ರಶ್ನೆಗಳು ಮೂಡುತ್ತವೆ. ಈ ನಾಡಿನಲ್ಲಿ ೬೦,೦೦೦ಕ್ಕೂ ಹೆಚ್ಚು ಸಾವಿರ ವರ್ಷಗಳಿಂದಲೂ ನೆಲದ ಮಕ್ಕಳಾಗಿ ಬದುಕಿ ಬಾಳಿರುವ, ಅನೇಕ ವೈವಿಧ್ಯತೆಗಳಿಂದ ಕೂಡಿರುವ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳ ಸಂಸ್ಕೃತಿಗಳಿಗೆ, ಅವರುಗಳ ಅಸ್ಮಿತೆಗೆ ಸಲ್ಲಬೇಕಿರುವ ಗೌರವ ಮತ್ತು ಗುರುತಿಸುವಿಕೆ ಇನ್ನೂ ಪೂರ್ತಿ ಸಂದಿಲ್ಲವೇಕೆ ಎನ್ನಿಸಿ ಕಸಿವಿಸಿಯಾಗುತ್ತದೆ. ಈ ವಿಷಯವನ್ನು ಅದುಮಿಟ್ಟು, ತಾವು ಮಲ್ಟಿ ಕಲ್ಚರಲ್ ಸಮಾಜವೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಪಡಿಸುವ ಹೆಗ್ಗಳಿಕೆಯನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ.
ಅತ್ತ ಕಡೆ ಅಗಲಿಹೋದ ಕ್ರಿಕೆಟಿಗ ಶೇನ್ ವಾರ್ನ್ ಗೆ ಹಿಂದೆಂದೂ ಕಂಡಿರದಿದ್ದ ಅಭೂತಪೂರ್ವ ನಿರ್ಗಮನ-ನಮನವನ್ನು ಕೊಡಲಾಗಿದೆ. ಇದೇ ವಾರ ನಡೆದ ರಾಷ್ಟ್ರೀಯ ಮಟ್ಟದ ಅಂತಿಮನಮನದಲ್ಲಿ ಆಸ್ಟ್ರೇಲಿಯಾದ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳ ಎಲ್ಲಾ ದೊಡ್ಡ, ಸಣ್ಣ, ಹಿರಿಯ, ಕಿರಿಯ ಹೆಸರುಗಳು ಹಾಜರಿದ್ದು ಮೂಗಿನ ಮೇಲೆ ಬೆರಳಿಕ್ಕುವಂತೆ ಮಾಡಿ ಕ್ರಿಕೆಟ್ ಆಟಕ್ಕಿರುವ ಗೌರವ ಮರ್ಯಾದೆಗಳನ್ನು ಮತ್ತೊಮ್ಮೆ ರುಜುವಾತುಪಡಿಸಿದೆ.
ಟೆಲಿವಿಷನ್ ಸುದ್ದಿವಾಹಿನಿಯಲ್ಲಿ ಈ ವಿಜೃಂಭಣೆಯ ಅಂತಿಮ-ನಮನದ ದೃಶ್ಯಗಳನ್ನು ನೋಡುತ್ತಿರುವಾಗಲೇ ಅದು ಮುಗಿದು ಜಾಹಿರಾತು ಬಂತು. ಅದೇನೆಂದರೆ ಆಸ್ಟ್ರೇಲಿಯನ್ ರೆಡ್ ಕ್ರಾಸ್ ಮಾಡುತ್ತಿದ್ದ ವಿನಂತಿ – ಇನ್ನೂ ಸಂಭವಿಸುತ್ತಿರುವ ಮಳೆ ಪ್ರವಾಹದಿಂದ ದೇಶದಲ್ಲಿನ ಎರಡು ರಾಜ್ಯಗಳಲ್ಲಿ ಸಾವಿರಾರು ಜನರು ನಷ್ಟಕಷ್ಟಗಳಿಗೀಡಾಗಿದ್ದಾರೆ. ದಯವಿಟ್ಟು ದೇಣಿಗೆ ನೀಡಿ, ಸಹಾಯ ಮಾಡಿ ಎನ್ನುವ ಸಾರ್ವಜನಿಕ ಕೇಳಿಕೆ. ಒಬ್ಬ ವ್ಯಕ್ತಿಗೆ ಸಲ್ಲಿಸಲಾದ ಮಲ್ಟಿ-ಮಿಲಿಯನ್ ಗೌರವದ ಜೊತೆಜೊತೆಗೆ ಪ್ರಸಾರವಾದ ಈ ಬೇಡುವಿಕೆಯನ್ನು ನೋಡಿ ಮನುಷ್ಯ ಜೀವನದ ಹಿತಾಸಕ್ತಿಗಳ ಕಡೆ ಆಲೋಚನೆ ಹರಿಯಿತು. ಅಡುಗೆಮನೆಯಲ್ಲಿ ಬೆರೆಸಲು ಇಟ್ಟಿರುವ ಬೇವಿನೆಲೆ ಮತ್ತು ಬೆಲ್ಲ ನೆನಪಾಯಿತು.
(ಚಿತ್ರಗಳು: ಇಂಟರ್ ನೆಟ್)
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ನಿಮಗೂ ಕೂಡ ಹೊಸ ವರ್ಷದ ಶುಭಾಕಾಂಕ್ಷೆಗಳು