ಅವನು ಹೇಳುತ್ತಿರುವುದು ಬರಿ ಕಥೆಯೇ. ಸುಳ್ಳು ಕಥೆ. ಅವನ ಕಲ್ಪನೆಯಲ್ಲಿ ಅರಳುವ ಕಥೆ ಎನ್ನುವುದಕ್ಕೆ ಪುರಾವೆ ಎಂಬಂತೆ ನನ್ನ ಬಳಿ ಹಲವಾರು ನಿದರ್ಶನಗಳಿವೆ. ಅವನು ತನ್ನೆಲ್ಲಾ ದಿನಚರಿಯಲ್ಲಿ ನಟ ಯಶ್ ಅನ್ನು ಅನುಕರಿಸುತ್ತಿದ್ದ. ಕೆ. ಜಿ. ಎಫ್. ಸಿನಿಮಾದ ಅವನ ಗೆಟಪನ್ನು ಅನುಕರಿಸುವುದು. ಪುರುಷ ಪ್ರಾಧಾನ್ಯದ ಮುಖ್ಯವಾಹಿನಿಯ ಮಾಸ್ ಸಿನಿಮಾಗಳಲ್ಲಿ ಹೀರೋಗಳು ಹೊಡೆಯುವ ಅಸೂಕ್ಷ್ಮ ಡೈಲಾಗುಗಳನ್ನು ಅವನು ವಾಟ್ಸಪ್ಪ್ ರೀಲಾಗಿ ಇಡುತ್ತಿದ್ದ. ಅವನು ಕನಸುತ್ತಿದ್ದ ಭವಿಷ್ಯದ ಬಸವರಾಜನ ಪೂರ್ವ ಬಿಂಬದ ಪರಿಕರಗಳನ್ನು ಪುಷ್ಟೀಕರಿಸುವಂತೆ ಅವು ಇರುತ್ತಿದ್ದವು. ಅವನ ಸಾಹಸಗಾಥೆಗೆ ಲೀಲೆಯ ಸ್ಪರ್ಶ ಕೊಡದೆ ಇದ್ದರೆ ಸಿನಿಮಾ ಹೇಗೆ ಪೂರ್ಣವಾದೀತು?
ದಾದಾಪೀರ್ ಜೈಮನ್ ಬರೆಯುವ ‘ಜಂಕ್ಷನ್ ಪಾಯಿಂಟ್’ ಅಂಕಣ
‘ನಾವ್ ಗೊತ್ತಲ್ಲಾ?! ಕಡೆಪಾನ್. ಯಾವುದಕ್ಕಾದರೂ ರೆಡಿ.’ ಎಂದು ಸಿನಿಮಾ ಹೀರೋ ರೀತಿಯಲ್ಲಿ ಅವನು ಹೇಳುತ್ತಿದ್ದ ಡೈಲಾಗ್ ನನಗೆ ಮತ್ತೆ ಮತ್ತೆ ನೆನಪಾಗುತ್ತದೆ. ಅಸಲಿಗೆ ಅವನಿಗೆ ಸಿನಿಮಾದಲ್ಲಿ ವಿಲನ್ ಆಗುವ ಅಭಿಲಾಷೆಯಿತ್ತು. ಹೀರೋಗಳು ಬೋರು ಹೊಡೆಸುತ್ತಾರೆ. ‘ನೋಡ್ತಾ ಇರು, ನಾನೊಂದ್ ದಿನ ಬಿಗ್ ಸ್ಕ್ರೀನ್ ಮೇಲೆ ಬರ್ತೀನಿ. ದಾದಾ, ನಾನು ತಮಾಷೆ ಮಾಡ್ತಿಲ್ಲ. ನಿಜ್ಜ. ನಾನು ವಿಲನ್ ಆಗೇ ಆಗ್ತೀನಿ.’ ಎನ್ನುತ್ತಿದ್ದ. ನಾನು ಹೂ ಅನ್ನುತ್ತಿದ್ದೆ. ‘ಆಗದೆ ಏನು?! ಯಾರೂ ಏನು ಬೇಕಾದರೂ ಆಗಬಹುದು. ಖಂಡಿತಾ ಆಗತ್ತೆ. ಪ್ರಯತ್ನ ಮಾಡ್ಬೇಕು ಅಷ್ಟೇ.’ ನಾನೂ ಸಿನಿಮಾ ರೀತಿಯಲ್ಲಿಯೇ ಪ್ರತಿಕ್ರಿಯೆ ಕೊಡುವ ಹೊತ್ತಿಗೆ ಇಡೀ ವಾತಾವರಣ ಸಿನಿಮೀಯ ಆಗಿಹೋಗುತ್ತಿತ್ತು.
ಅವನ ಹೆಸರು ಬಸವರಾಜ್. ಉತ್ತರ ಕರ್ನಾಟಕದ ಹುಡುಗ. ನಮ್ಮ ಕಡೆಯವರು ಎನ್ನುವುದೇ ಮೊದಲಿಗೆ ನಮ್ಮನ್ನು ದೋಸ್ತರನ್ನಾಗಿ ಮಾಡಿಬಿಟ್ಟಿತ್ತು. ಬಿಟ್ಟು ಬಂದ ಊರಿಗೆ ಅಂತಹ ಸೆಳೆತವಿದೆ. ನಾವೆಲ್ಲಿಗೇ ಹೋದರೂ ಊರಿನ ನೆನಪು ನಮ್ಮೊಳಗೆ ಹಿಂಬಾಲಿಸಿಕೊಂಡು ಬರುತ್ತದೆ. ಧರ್ಮರಾಯನ ಹಿಂದೆ ನಾಯಿ ಬಂದ ಹಾಗೆ. ನಾವು ಎಲ್ಲಿಗೇ ಹೋದರೂ ನಮ್ಮ ಕಣ್ಣುಗಳು ನಮ್ಮವರನ್ನು ನಮ್ಮ ಊರಿನ ನಮ್ಮ ಭಾಷೆಯ ಜನರನ್ನು ನಮ್ಮ ಕಣ್ಣುಗಳು ಹುಡುಕುತ್ತಿರುತ್ತವೆ. ಅಪರಿಚಿತ ಪ್ರದೇಶಗಳಲ್ಲಿ ಪರಿಚಿತತೆಯ ಒಂದೇ ಒಂದು ಎಳೆಗಾಗಿ ಹಾತೊರೆಯುವುದರಲ್ಲಿ ಮನುಷ್ಯ ಸಾಂಗತ್ಯದ ತಹತಹ ಕಾಣಿಸುತ್ತದೆ. ಅವನು ನಮ್ಮ ಪೀಜಿಗೆ ಬಂದದ್ದೇ ಸಿನಿಮಾ ವಿಲನ್ ಬಂದ ಹಾಗೆ! ಆ ಘಟನೆ ನನಗಿನ್ನೂ ನೆನಪಿದೆ. ಸರಿ ಸುಮಾರು ಎಂಟೂವರೆ ಇರಬಹುದು. ಪೀಜಿಯ ಕೆಳಗಿನ ಮಹಡಿಯ ಡೈನಿಂಗ್ ಟೇಬಲ್ಲಿನಲ್ಲಿ ಕೂತು ಟೀವಿ ನೋಡುತ್ತಿದ್ದೆ. ಟೀವಿಯಲ್ಲಿ ಒಂದು ತೆಲುಗು ಸಿನಿಮಾ ಬರುತ್ತಿತ್ತು. ಇನ್ನೇನು ಸತ್ತೇ ಹೋಗುತ್ತಾನೆನ್ನುವಷ್ಟು ಹೊಡೆತ ತಿಂದ ಹೀರೊ ಇದ್ದಕ್ಕಿದ್ದಂತೆ ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿಕೊಂಡು ಎದ್ದು ಬರುವ ತಯಾರಿಯ ದೃಶ್ಯ ಬರುತ್ತಿತ್ತು. ಅದೇ ಹೊತ್ತಿಗೆ ಬಂದವನೇ ಬಸವರಾಜ್. ಕಟ್ಟುಮಸ್ತಾದ ದೇಹ. ಮತ್ತೆ ಟ್ರೆಂಡಿಂಗ್ ಆಗುತ್ತಿರುವ ಋಷಿಯ ದಾಡಿ. ತಲೆಯ ಮೇಲೊಂದು ಜುಟ್ಟು. ರಗಡ್ ಎನ್ನಬಹುದಾದ ಲುಕ್ಕು. ಇಷ್ಟೆಲ್ಲದರ ಜೊತೆಗೆ ತಾನು ಚೆನ್ನಾಗಿದ್ದೇನೆ ಮತ್ತು ಜನ ತನ್ನನ್ನು ಗಮನಿಸುತ್ತಿದ್ದಾರೆ ಎನ್ನುವುದು ಗೊತ್ತಿರುವವನಂತೆ ತನ್ನನ್ನು ಕ್ಯಾರಿ ಮಾಡಿಕೊಳ್ಳುತ್ತಿದ್ದ. ಅವನು ಹೆಗಲಿಗೊಂದು ಟ್ರಾವೆಲ್ ಬ್ಯಾಗನ್ನು ಏರಿಸಿಕೊಂಡು ಪೀಜಿ ಓನರನನ್ನ ಹಿಂಬಾಲಿಸುತ್ತಾ ಡೈನಿಂಗ್ ಟೇಬಲ್ಲಿನ ಪಕ್ಕದಲ್ಲೇ ಇದ್ದ ಮೆಟ್ಟಿಲುಗಳನ್ನು ಹತ್ತಿ ಮೊದಲನೇ ಮಹಡಿಯ ನನ್ನದೇ ರೂಮಿಗೆ ಹೋದ. ಅವನು ಆ ರೀತಿ ಹೋಗುವಾಗ ದೇಹಕ್ಕೆ ಪೂಸಿಕೊಂಡಿದ್ದ ಗಾಢವಾದ ಪರ್ಫ್ಯೂಮಿನ ಗಂಧ ಊಟಕ್ಕೆ ಕೂತಿದ್ದ ಎಲ್ಲರ ಮೂಗಿಗೆ ಬಡಿಯಿತು. ಎಲ್ಲರ ಮುಖದ ಭಾವ ಹೇಗಿತ್ತೆಂದರೆ ಯಾರೋ ಸೆಲೆಬ್ರಿಟಿ ಬಂದಿದ್ದಾರೆ ಎನ್ನುವ ಸ್ಟಾರ್ ಸ್ಟಕ್ ಜನರ ಅಚ್ಚರಿಯ ಭಾವವಿತ್ತು.
ನಮ್ಮ ರೂಮಿನಲ್ಲಿ ಖಾಲಿಯಿದ್ದ ಬೆಡ್ಡಿಗೆ ಆ ಸಿನಿಮಹಾಶಯ ಬಂದಿದ್ದ. ಉತ್ತರಕರ್ನಾಟಕ ನಮ್ಮನ್ನು ಹತ್ತಿರ ತಂದಿತ್ತು. ಅವನ ಗದಗ ಹಾಗೂ ನನ್ನ ಬಳ್ಳಾರಿ ಎನ್ನುವ ಊರಿನ ಹೆಸರುಗಳು ಬಾಲ್ಯದ ಜವಾರಿ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ್ದವು. ಮೂರು ದಿನಗಳಾಗುವ ಹೊತ್ತಿಗೆ ಬಸವರಾಜ್ ಬಸ್ಯಾ ರೂಮ್ಮೇಟ್ ಆಗಿ ನನ್ನ ಫೋನಿನ ಕಾಂಟ್ಯಾಕ್ಟಲ್ಲಿ ಸೇವ್ ಆಗಿದ್ದ. ಅವನ ಅವ್ವ ಊರಿಂದ ಕಟಗು ರೊಟ್ಟಿ, ಶೇಂಗಾ ಖಾರ, ಕರ್ಚಿಕಾಯಿ, ನಿಂಬಿಕಾಯಿ ಉಪ್ಪಿನಕಾಯಿಯನ್ನು ತಿಂಗಳಿಗೊಮ್ಮೆ ಬಸ್ಸಿನಲ್ಲಿ ಇಟ್ಟು ಕಳಿಸುತ್ತಿದ್ದಳು. ಇವನು ಮೆಜೆಸ್ಟಿಕ್ಕಿಗೆ ಬೆಳಿಗ್ಗೆಯೇ ಹೋಗಿ ಊರಿನ ಬಸ್ಸಿಗಾಗಿ ಕಾದು ತರುತ್ತಿದ್ದ. ಆಂಧ್ರ ಪೀಜಿಯ ಶೇಂಗಾ ಮುಂದಿಟ್ಟು ಮಾಡುವ ಅಡುಗೆ, ಆಗಾಗ ಸೋಡಾ ಹಾಕಿ ಮಾಡುವ ಅಡುಗೆಯಿಂದ ಮನೆಯ ಬುತ್ತಿ ಬಿಡುಗಡೆ ನೀಡುತ್ತಿತ್ತು. ಕನಸಿನ ಬೆನ್ನು ಹತ್ತಿ ಬೆಂಗಳೂರಿಗೆ ಬಂದವರು ಹೀಗೆಯೇ ತಮ್ಮ ಊರನ್ನು ಸಾಕುತ್ತಿರುತ್ತಾರೆ. ಅವ್ವ ತಟ್ಟಿದ ರೊಟ್ಟಿಯಿಂದಲೇ ಎಲ್ಲರ ಅವ್ವ ಆಗಿಬಿಡುತ್ತಿದ್ದಳು. ಬಸವರಾಜನಿಗೆ ಅವ್ವ ಎಂದರೆ ಬಹಳ ಪ್ರೀತಿ. ಅವ್ವನಿಗೂ ಇವನ ಮೇಲೆ ಮಮತೆ. ಆಗಾಗ ವಾರಾಂತ್ಯದ ಪಾನಗೋಷ್ಠಿಗಳಿಗೂ ಮುಂಚೆ ಅವ್ವನಿಗೆ ಫೋನ್ ಮಾಡುತ್ತಿದ್ದ. ‘ಬೇ ಯವ್ವಾ, ಒಂದ್ ಹಾಡ್ ಹಾಡಾ ಯವ್ವಾ! ಆ ಸಂಗೊಳ್ಳಿ ರಾಯಣ್ಣ ಸಿನಿಮಾದ್ ಹಾಡ್ ಹಾಡ್ತೀಯಲ್ಲ. ಅದ್ನ್ ಹಾಡಬೇ.’ ಎಂದು ಪುಸಲಾಯಿಸುತ್ತಿದ್ದ. ‘ಆ ಹಾಡಾ ಯಪ್ಪಾ. ಮರ್ತು ಹೋಗೇತೆ ಬಿಡೋ ಯಪ್ಪ.’ ಎಂದಾಗ ‘ಅಂಗ್ಯಾಕ್ ಮಾಡ್ತಿ ಬೆ ನಿನೌನ್. ಛಲೋ ಹಾಡ್ತಿ ಹಾಡಬೇ.’ ಎಂದಾಗ ಮಗನಿಗಾಗಿ ಹಾಡು ಹಾಡುತ್ತಿದ್ದಳು. ಅದೊಂದು ರೀತಿ ಪಾನಗೋಷ್ಠಿ ಶುರುಮಾಡುವ ಮುಂಚೆಗಿನ ಪ್ರಾರ್ಥನಾ ಗೀತೆಯಂತಿರುತ್ತಿತ್ತು.
ಅವನು ಜಸ್ಟ್ ಡಯಲ್ ಕಂಪನಿಯ ಕಾಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದ. ಈ ಕೆಲಸ ಮಾಡುತ್ತಾ ಒಂಚೂರು ಹಣ ಸಂಪಾದಿಸಿ ನಿಧಾನವಾಗಿ ಫಿಲಂ ಇಂಡಸ್ಟ್ರಿಯಲ್ಲಿ ಪಾತ್ರಕ್ಕಾಗಿ ಟ್ರೈ ಮಾಡೋಣ ಅಂದುಕೊಂಡಿದ್ದ. ಕಾಲ್ ಸೆಂಟರ್ ಕೆಲಸ ಹಾಗೂ ಅದರಲ್ಲಿ ಅವನಿಗೆ ಕೊಡುತ್ತಿದ್ದ ಟಾರ್ಗೆಟ್ಟುಗಳು ಅವನಿಗೆ ಮೊದಮೊದಲಿಗೆ ಆಗಿಬರುತ್ತಿರಲಿಲ್ಲ. ಕಡೆಗೆ ಅವನು ಅವನದೇ ರೀತಿಯಲ್ಲಿ ಟಾರ್ಗೆಟ್ ತಲುಪುವುದನ್ನು ಕಲಿತುಬಿಟ್ಟ. ಅವನಿಗೆ ಇಂಗ್ಲಿಷ್ ಬರುವುದಿಲ್ಲವಾಗಿ ಬೇಗನೆ ಒಗ್ಗಿಕೊಳ್ಳುವುದು ಕಷ್ಟ ಆಗಬಹುದು ಎಂದೇ ಭಾವಿಸಿದ್ದೆ. ಇದೆಲ್ಲ ಹೇಗೆ ಸಾಧ್ಯವಾಯಿತೆಂದು ಕೇಳಿದೆ. ಅದಕ್ಕವನು ‘ಲೇ ಮಚಿ. ಏನು ಇಲ್ಲ ಅಂದಾಗ ಯಾವುದೇ ವಿದ್ಯಾ ಇದ್ರೂ ಮನುಷ್ಯ ಕಲಿತಾನಾಲೆ.’ ಎಂದವನು ಮುಂದುವರೆಯುತ್ತಾ ‘ನನ್ನ ತಂಗಿನ ಊರಾಗ ನಾನೇ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ಓದಿಸಿ ಈಗ ಟ್ರೇನಿಂಗಿನಾಗ ಅದಾಳ. ಊರಾಗ ಒಂದು ಸ್ವಂತ ಮನಿ ನಾನಾ ಕಟ್ಟಿಸಿನಿ. ಈಗ ಏನೋ ಕಷ್ಟ ಅಂತ ಇಲ್ಲಿ ಬಂದಿರೋದು ಮಚಿ. ಈ ಕಷ್ಟಾನೂ ಒಂದಿನ ಹೊಕ್ಕೇತಿ. ಆಮೇಲೆ ನಾನು ಸೀದಾ ಎಲ್ಲ ಬಿಟ್ಟು ಫಿಲಂ ಇಂಡಸ್ಟ್ರಿಗೆ ಹೋಗಿಬಿಡ್ತೀನಿ. ಇಲ್ಲಿಗೆ ಬರೋದಕ್ಕಿಂತ ಮುಂಚೆ ಡೈರೆಕ್ಟರ್ ತಾಜ್ಮಹಲ್ ಮಂಜು ಹತ್ರ ಮಾತಾಡಿಕೊಂಡು ಬಂದೆ. ವಿಲನ್ ರೋಲ್ ಕೊಡ್ತೀನಿ ಅಂದಾನೆ.’ ಎಂದೆಲ್ಲಾ ಹೇಳಿದ. ನಾನು ಎಂದಿನಂತೆ ಹೂಗುಟ್ಟುತ್ತಿದ್ದೆ. ಅವನು ಹೇಳುತ್ತಲೇ ಹೋದ.
ಅವನು ಹೆಗಲಿಗೊಂದು ಟ್ರಾವೆಲ್ ಬ್ಯಾಗನ್ನು ಏರಿಸಿಕೊಂಡು ಪೀಜಿ ಓನರನನ್ನ ಹಿಂಬಾಲಿಸುತ್ತಾ ಡೈನಿಂಗ್ ಟೇಬಲ್ಲಿನ ಪಕ್ಕದಲ್ಲೇ ಇದ್ದ ಮೆಟ್ಟಿಲುಗಳನ್ನು ಹತ್ತಿ ಮೊದಲನೇ ಮಹಡಿಯ ನನ್ನದೇ ರೂಮಿಗೆ ಹೋದ. ಅವನು ಆ ರೀತಿ ಹೋಗುವಾಗ ದೇಹಕ್ಕೆ ಪೂಸಿಕೊಂಡಿದ್ದ ಗಾಢವಾದ ಪರ್ಫ್ಯೂಮಿನ ಗಂಧ ಊಟಕ್ಕೆ ಕೂತಿದ್ದ ಎಲ್ಲರ ಮೂಗಿಗೆ ಬಡಿಯಿತು.
ನಾನೊಮ್ಮೆ ಕೆ. ಆರ್. ಪುರಂ ಬಸ್ ಸ್ಟ್ಯಾಂಡಿನಲ್ಲಿ ದುಡ್ಡಿಲ್ಲದೆ, ಇರೋದಕ್ಕೆ ಜಾಗ ಇಲ್ಲದೆ ಅಲ್ಲೇ ಥರ ಥರ ನಡುಗುವ ಚಳಿಯಲ್ಲೇ ಮಲಗಿದ್ದೆ; ನನಗೆ ಕಷ್ಟ ಅಂದ್ರೆ ಏನಂತ ಗೊತ್ತು ಹೇಳಿದ್ದು. ನಾನು ಊರಲ್ಲಿ ಸ್ವಂತ ಮನೆ ಕಟ್ಟಿಸಿದೆ ಅಂತ ಹೇಳಿದ್ದು. ಹೀಗೆ ಹೇಳುತ್ತಲೇ ಹೋಗಿದ್ದು… ಅದು ಒಮ್ಮೆ ತುತ್ತತುದಿಗೆ ಹೋಗಿ ನಾನು ಇಲ್ಲಿಗೆ ಬಂದಿದ್ದೆ, ನಾನು, ಹುಬ್ಬಳ್ಳಿಯಲ್ಲಿರೋ ಪ್ರಭಾವಿರಾಜಕಾರಣಿಯೊಬ್ಬರು ನನ್ನ ಕೈಯಲ್ಲಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ರು, ಅದಾದ ಮೇಲೆ ಒಂದಿಷ್ಟು ರೊಕ್ಕ ಕೊಟ್ಟು ತಲೆ ಮರೆಸಿಕೋ ಎಂದರು ಅಂತ ಹೇಳಿಬಿಟ್ಟ. ಅದೂ ಹೋಗಲಿ; ‘ನಾನು ನಮ್ಮೂರಲ್ಲಿ ದೊಡ್ಡ ರೌಡಿ. ನಿನಗೇನೆ ಕಷ್ಟ ಬಂದ್ರು ಮುಂದೆ ನಾನಿರ್ತೀನಿ’ ಎಂದಿದ್ದು, ಕಥೆ ಹೇಳ್ತ; ಸುತ್ತ ರೌಡಿಗಳಿದ್ದಾರೆ. ದೊಡ್ಡ ರೌಡಿ ಪ್ರಶ್ನೆ ಕೇಳಿದ! ಯಾರಿಗೂ ಅನುಮಾನ ಬಾರದ ಹಾಗೆ ಹೇಗೆ ಕೊಲ್ಲುತ್ತಿ? ಅಂತ. ನಾನು ಹೇಳಿದ ಉತ್ತರಕ್ಕೆ ಅವನು ದಂಗಾಗಿ ಹೋದ ಎಂದದ್ದು… ಹೀಗೆ ಅವನ ಪಾನಗೋಷ್ಠಿಗಳಲ್ಲಿ ಪರಮಾತ್ಮ ಒಳಗೆ ಹೋಗುತ್ತಲೇ ಅವನು ಹೇಳುತ್ತಿದ್ದ ಕಥೆಗಳಿಗೆ ಎಲ್ಲೆಯೇ ಇರುತ್ತಿರಲಿಲ್ಲ. ನಾನಂತೂ ಅವೆಲ್ಲವನ್ನೂ ಒಂದು ಲಾಜಿಕ್ಕಿನಲ್ಲಿ ಅಲೈನ್ ಮಾಡಲು ಒದ್ದಾಡುತ್ತಿದ್ದೆ. ನನಗಂತೂ ಸಿನಿಮಾ ಹುಚ್ಚಿರುವ ಇವನು ಬರಿ ಕಥೆ ಹೊಡೆಯುತ್ತಿದ್ದ ಎಂದೇ ಅನಿಸುತ್ತಿತ್ತು. ಈಗಲೂ ಹಾಗೆಯೇ ಅನಿಸುತ್ತದೆ. ಆದರೂ ತೆಲುಗು ಹೊಡಿ ಬಡಿ ಕಡಿ ಸಿನಿಮಾಗಳನ್ನು ಕಾಲೇಜು ದಿನಗಳಲ್ಲಿ ನೋಡಿಕೊಂಡೆ ಬೆಳೆದ ನನಗೆ, ಇದು ನಿಜವಾದರೂ, ನನ್ನ ಜೀವನದಲ್ಲೂ ಸಿನಿಮಾದಂತದ್ದು ವಾಸ್ತವದಲ್ಲಿ ನಡೆಯುತ್ತಿದೆಯಲ್ಲ ಎಂದು ಪುಳಕವೂ ಆಗಿದೆ.
ಅವನು ಹೇಳುತ್ತಿರುವುದು ಬರಿ ಕಥೆಯೇ. ಸುಳ್ಳು ಕಥೆ. ಅವನ ಕಲ್ಪನೆಯಲ್ಲಿ ಅರಳುವ ಕಥೆ ಎನ್ನುವುದಕ್ಕೆ ಪುರಾವೆ ಎಂಬಂತೆ ನನ್ನ ಬಳಿ ಹಲವಾರು ನಿದರ್ಶನಗಳಿವೆ. ಅವನು ತನ್ನೆಲ್ಲಾ ದಿನಚರಿಯಲ್ಲಿ ನಟ ಯಶ್ ಅನ್ನು ಅನುಕರಿಸುತ್ತಿದ್ದ. ಕೆ. ಜಿ. ಎಫ್. ಸಿನಿಮಾದ ಅವನ ಗೆಟಪನ್ನು ಅನುಕರಿಸುವುದು. ಪುರುಷ ಪ್ರಾಧಾನ್ಯದ ಮುಖ್ಯವಾಹಿನಿಯ ಮಾಸ್ ಸಿನಿಮಾಗಳಲ್ಲಿ ಹೀರೋಗಳು ಹೊಡೆಯುವ ಅಸೂಕ್ಷ್ಮ ಡೈಲಾಗುಗಳನ್ನು ಅವನು ವಾಟ್ಸಪ್ಪ್ ರೀಲಾಗಿ ಇಡುತ್ತಿದ್ದ. ಅವನು ಕನಸುತ್ತಿದ್ದ ಭವಿಷ್ಯದ ಬಸವರಾಜನ ಪೂರ್ವ ಬಿಂಬದ ಪರಿಕರಗಳನ್ನು ಪುಷ್ಟೀಕರಿಸುವಂತೆ ಅವು ಇರುತ್ತಿದ್ದವು. ಅವನ ಸಾಹಸಗಾಥೆಗೆ ಲೀಲೆಯ ಸ್ಪರ್ಶ ಕೊಡದೆ ಇದ್ದರೆ ಸಿನಿಮಾ ಹೇಗೆ ಪೂರ್ಣವಾದೀತು? ನಮ್ಮ ಪೀಜಿಯ ಎದುರುಗಡೆ ಇದ್ದ ಒಂದು ಕ್ಲಿನಿಕ್ಕಿನಲ್ಲಿ ಇವನ ರಗಡ್ ಖದರಿನಿಂದಲೇ ಒಬ್ಬ ಹುಡುಗಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದ. ಅವನು ನಮ್ಮ ಪೀಜಿಯಲ್ಲಿ ಇರುವವರೆಗೂ ಆ ಪ್ರೀತಿ ಹೆಸರಿನ ಸಂಬಂಧವನ್ನು ನಿಭಾಯಿಸಿದ ಕೂಡ. ಆ ದೃಶ್ಯ ಸಿನಿಮಾದ ರಾಜೇಂದ್ರ ಪೊನ್ನಪ್ಪ ದೃಶ್ಯಗಳನ್ನೇ ಜೋಡಿಸಿ ಬದುಕಿಗೂ ಸಿನಿಮಾಗೂ ಇರುವ ಗೆರೆಯನ್ನು ಅಳಿಸಿ ಕುಟುಂಬವನ್ನು ಕಾಪಾಡುತ್ತಾನಲ್ಲ ಹಾಗೆ ಇವನೂ ಎನಿಸಿದ್ದಿದೆ.
ವಿಲನ್ ಆಗುವ ಕನಸು ಕಂಡಿದ್ದ ಅವನು ನಿಜಜೀವನದಲ್ಲೇ ವಿಲನ್ನನ್ನು ಪರಿಭಾವಿಸುತ್ತಿದ್ದನೇ? ಹಾಗೆ ನೋಡಿದರೆ ಬಹಳಷ್ಟು ಜನರಿಗೆ ತಾವು ಒಮ್ಮೆಯಾದ್ರೂ ಲೈಮ್ ಲೈಟಿಗೆ ಬರಲಿ ಎನ್ನುವ ಸುಪ್ತ ಆಸೆಯಂತೆಯೇ ಅಷ್ಟೇನಾ? ನಾನೇ ಏನೋ ಅತಿರೇಕದಲ್ಲಿ ಎಲ್ಲವನ್ನೂ ಊಹಿಸುತ್ತಿದ್ದೆನಾ ಎನಿಸಿದ್ದಿದೆ. ಅವನು ನಿಜದಲ್ಲಿ ಕೋವಿಡ್ ಸಾಂಕ್ರಾಮಿಕದ ಲಾಕ್ಡೌನ್ ಸಮಯದಲ್ಲಿ ಟಾರ್ಗೆಟ್ ತಲುಪಲಾಗದೆ ಅರ್ಧ ಸಂಬಳಗಳನ್ನು ಸಹಿಸಿಕೊಂಡು ಒದ್ದಾಡಿಕೊಂಡು ಬದುಕಿದ್ದು ನನ್ನ ಕಣ್ಣಮುಂದೆಯೇ ಇದೆಯಲ್ಲ. ಒಮ್ಮೊಮ್ಮೆ ಪಕ್ಕದ ಚಾಯ್ ಅಂಗಡಿಯಲ್ಲಿ ಬರೆಸುತ್ತಿದ್ದ ಟೀ ಬಾಕಿಯನ್ನು ಕಟ್ಟಲಾಗದೆ ಟೀ ಕುಡಿಯದೆ ಉಳಿದ ದಿನಗಳನ್ನು ಕಂಡಿದ್ದೀನಲ್ಲ!
ಮನುಷ್ಯರು ನಮ್ಮ ಮುಂದೆ ಆತ್ಮೀಯರು ಎಂಬ ಭಾವದಲ್ಲಿ ‘ಅವರ ಜೀವನದ ನಿಜವೋ ಸುಳ್ಳೋ ಕಲ್ಪನೆಯನ್ನೋ’ ಹೇಳಿಕೊಳ್ಳುವಾಗ ಎಷ್ಟನ್ನು ನಂಬಬೇಕು? ನಂಬುವುದು ಬಿಡುವುದು ಮುಂದಿನ ಪ್ರಶ್ನೆ. ನಾವು ಮನುಷ್ಯರನ್ನು ಕೇಳಿಸಿಕೊಳ್ಳಬೇಕು. ಯಾಕೆಂದರೆ ಮನುಷ್ಯರು ಮನುಷ್ಯರಾಗುವುದು ಅವೆಲ್ಲದರಿಂದಲೇ! ರಕ್ತ ಮಾಂಸ ಮೂಳೆಗಳಂತೆ ಮನುಷ್ಯನಿಗೆ ಅವೆಲ್ಲವೂ! ಆದರೆ ಯಾರಾದರೂ ಅವರ ಕನಸುಗಳನ್ನು ಮಿಂಚುಗಣ್ಣಿನಿಂದ ನಮ್ಮ ಮುಂದೆ ಹರವಿಕೊಂಡಾಗ ನಾವು ಅದನ್ನು ಪೂರ್ಣವಾಗಿ ನಂಬಬೇಕು. ಯಾಕೆಂದರೆ ಮನುಷ್ಯರ ಕನಸುಗಳಲ್ಲಿ ದೋಷಗಳಿರುವುದಿಲ್ಲ!
ಬಸ್ಯಾ ಅಲಿಯಾಸ್ ಬಸವರಾಜ ಏನೋ ಕನಸು ಕಟ್ಟಿಕೊಂಡಿದ್ದಾನೆ. ನನ್ನ ಮುಂದೆಯೂ ಕೂಡ ಹೇಳಿಕೊಳ್ಳಲಾಗದ ಏನೋ ಒಂದು ಅವನ ಎದೆಯೊಳಗೆ ಇದೆ. ಆ ಕಷ್ಟ ಮುಗಿಯುತ್ತದೆ. ಅದು ಮುಗಿದ ಕೂಡಲೇ ಅವನು ತನ್ನ ಕನಸಿನಂತೆ ತೆರೆಯ ಮೇಲೆ ವಿಲನ್ ಆಗಿ ಬರುತ್ತಾನೆ. ಅವನು ಯಾವಾಗಲೂ ಹೇಳುವ ಹಾಗೆ ‘ನಾವು ಗೊತ್ತಲ್ಲಾ?! ಕಡೆಪಾನ್. ಯಾವುದಕ್ಕಾದರೂ ರೆಡಿ.’ ಒಂದು ಕಡೆಯ ಕಾರ್ಡಿಗಾಗಿ ಕಾಯುತ್ತಿದ್ದಾನೆ. ಅದು ಬಿದ್ದುಬಿಟ್ಟರೆ ಅವನ ಪಾಲಿನ ಭಾಗ್ಯದ ಬಾಗಿಲು ತೆರೆದುಬಿಡುತ್ತದೆ. ಅವನ ಪ್ರಕಾರ ಕಡೆಪಾನ್ ಎಂದರೆ ಎಲ್ಲವನ್ನು ಮೀರುವ ಸಾಮರ್ಥ್ಯವುಳ್ಳವನು ಎಂದರ್ಥ. ಸಾಧಿಸುವುದಕ್ಕೆ ಕಡೇಕ್ಷಣದಲ್ಲಿ ಏನು ಮಾಡುವುದಕ್ಕೂ ಹೇಸದವನು ಎಂದರ್ಥ. ಆ ಟೀವಿಯಲ್ಲಿ ಬರುತ್ತಿದ್ದ ತೆಲುಗು ಸಿನಿಮಾದಲ್ಲಿ ಹೀರೊ ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿಕೊಳ್ಳುವ ಹಂತದಲ್ಲಿದ್ದಾನೆ ಎನಿಸುತ್ತದೆ ನನಗೆ. ಕಡೆಪಾನ್ ಬಸ್ಯಾ ತೆರೆಯ ಮೇಲೆ ಕಾಣಿಸಿಕೊಳ್ಳಲಿ. ತೆರೆಯ ಮೇಲಷ್ಟೇ ವಿಲನ್ ಆಗಿ ವಿಜೃಂಭಿಸಲಿ ಎಂದು ಆಗಾಗ ಅಂದುಕೊಳ್ಳುತ್ತೇನೆ. ಈಗವನು ಅವನು ಊರಲ್ಲಿದ್ದಾನೆ. ಸಾಧ್ಯವಾದಾಗಲೆಲ್ಲಾ ನಾನು ಅವನ ವಾಟ್ಸಪ್ ಸ್ಟೇಟಸ್ಸುಗಳನ್ನು ನಾನು ತಪ್ಪದೆ ಗಮನಿಸುತ್ತಿರುತ್ತೇನೆ.
ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಹಲವು ಕವಿತೆಗಳು, ಕಥೆಗಳು ನಾಡಿನ ಪ್ರಮುಖ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ & ಪಾಲಿಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಛoದ ಪುಸ್ತಕ ಪ್ರಕಾಶನ ಅದನ್ನು ಹೊರತಂದಿದೆ. Dmitrij Gawrisch ಅವರ ‘ಬ್ಯಾರೆನ್ ಲ್ಯಾಂಡ್’ ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ನೀಲಕುರಿಂಜಿ ಇವರ ಪ್ರಥಮ ಪ್ರಕಟಿತ ಕಥಾಸಂಕಲನ.