ತಮ್ಮ ಆಸ್ಪತ್ರೆಯಲ್ಲಿರುವ ರೋಗಿಯೊಬ್ಬ ಪುಸ್ತಕವನ್ನು ಬರೆಯಬೇಕೆಂದ ಅಪೇಕ್ಷೆಯನ್ನು ಕೇಳಿ ಉಳಿದವರಿಗೆ ಆಶ್ಚರ್ಯವಾಗುತ್ತದೆ. ಆದರೆ ಉಸಿರಾಡುವುದು ಬಿಟ್ಟರೆ ಇನ್ನೇನು ಮುಳುಗಿಯೇ ಬಿಡುತ್ತೇನೆ ಎನ್ನುವ ರೀತಿಯಲ್ಲಿರುವ ಡೊಮಿನಿಕ್ ಗೆ ಇದು ಅಸಾಧ್ಯವೆನಿಸುವುದಿಲ್ಲ. ಸ್ಪೀಚ್ ಥೆರಪಿಸ್ಟ್ ಹೇಳಿಕೊಟ್ಟ ಪ್ರಕಾರ ಸೂಚನೆಗಳನ್ನು ಅನುಸರಿಸಿ ಅಕ್ಷರಗಳನ್ನು ಹೆಣೆದು ಪದಗಳನ್ನು ಹೊಂದಿಸಿ ಬರೆಯುವವರು ಬೇಕೆಂದು ಬಯಸುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಜೀನ್ ಡೊಮಿನಿಕ್ ಬಾಬಿ ಜೀವನಚರಿತ್ರೆಯನ್ನಾಧರಿಸಿದ ಫ್ರಾನ್ಸ್‌ನ ʻದ ಡೈವಿಂಗ್ ಬೆಲ್ ಅಂಡ್ ದ ಬಟರ್‌ಫ್ಲೈ ʼ ಸಿನಿಮಾ ಕುರಿತ ವಿಶ್ಲೇಷಣೆ
ಅದು 1996. ಫ್ರಾನ್ಸ್‌ನ ‘ಎಲ್ಲಿ’ ಎಂಬ ಮ್ಯಾಗಜೈನ್‌ನ ಸಂಪಾದಕ ಜೀನ್ ಡೊಮಿನಿಕ್ ಬಾಬಿ ಅಡಿಯಿಂದ ಮುಡಿಯವರೆಗೆ ಪಾರ್ಶ್ವವಾಯುಗೆ ತುತ್ತಾಗಿ ಸಾಕಷ್ಟು ಕಾಲ ಅದರ ವಿರುದ್ಧ ಹೋರಾಡಿ ತೀರಿಕೊಂಡ ವರ್ಷ. ಪಾರ್ಶ್ವವಾಯುಗೆ ತುತ್ತಾಗಿದ್ದರೂ ಸಂಕಲ್ಪ ಬಲದಿಂದ ತನ್ನ ಆತ್ಮಚರಿತ್ರೆ ʻದ ಡೈವಿಂಗ್ ಬೆಲ್ ಅಂಡ್ ಬಟರ್‌ಫ್ಲೈʼ ಎಂಬ ಪುಸ್ತಕವನ್ನು ಹೇಳಿ ಬರೆಯಿಸಿದ. ಇತಿಹಾಸದಲ್ಲಿಯೇ ಅಪೂರ್ವವೆನಿಸಿದ ಈ ಆತ್ಮಕತೆಯನ್ನು ಆಧರಿಸಿದ ಜುಲಿಯನ್ ಶ್ನಾಬೆಲ್ ನಿರ್ದೇಶನದ ಅದೇ ಹೆಸರಿನ ಚಿತ್ರ 2007ರ ನಾಲ್ಕು ಆಸ್ಕರ್ ಪ್ರಶಸ್ತಿ ಗಳಿಸುವಷ್ಟು ಶ್ರೇಷ್ಠವೆನಿಸಿತು.
ಅವನು ಆಸ್ಪತ್ರೆಯಲ್ಲಿ ಮಲಗಿದ್ದಾನೆ. ಮೈಕೈ ಆಡಿಸಲು ಶ್ರಮಿಸುತ್ತಿದ್ದಾನೆ. ಏನೂ ಸಾಧ್ಯವಾಗುತ್ತಿಲ್ಲ. ಆಗಷ್ಟೇ ಮನದಲ್ಲೊಂದಷ್ಟು ಬೆಳಕು. ಸುತ್ತಲೂ ಕತ್ತಲು ಮುತ್ತಿರುವ ಹಾಗೆ. ಆದರೆ ಇಡೀ ಮೈ ಕಲ್ಲುಗುಂಡಾದಂತೆ ಅನಿಸಿಕೆ. ಕಣ್ಣು ಬಿಟ್ಟರೆ ಸಾಕೆಂದು ಒಳಗಿನ ಮಾತು. ಅದೂ ಸಾಧ್ಯವಾಗುತ್ತಿಲ್ಲ. ಉಕ್ಕೆದ್ದ ತಳಮಳ. ಎರಡು ಕಣ್ಣುಗಳಲ್ಲಿ ಒಂದನ್ನಾದರೂ ಸರಿಯೇ ತೆರೆಯಬೇಕೆಂದು ಹಟ. ಹೀಗೆ ಮಾಡುವುದಕ್ಕೆ ಅವನೊಳಗಿನ ಒತ್ತಾಯ. ಕಾರಣ ಆಗಷ್ಟೇ ಅವನಿಗೆ ಪ್ರಜ್ಞೆ ಮರಳಿದೆ.
ಅವನ ಮನಸ್ಸಿನ ತೆರೆಯಮೇಲೆ ಬಿಳಿಯ ಕರಿಯ ಛಾಯೆಗಳು ಮನಬಂದಂತೆ ಹರಿದಾಡುತ್ತಿವೆ. ಆಗಾಗ್ಗೆ ಮುದ್ದುಮುಖದ ತರಹ, ಅದ್ಯಾವುದೋ ಕಣ್ಣಿನ ತರಹ, ಕೇವಲ ಮಸಕು ಮಸಕಾಗಿ ಗೋಚರಿಸುತ್ತಿದೆ. ಕ್ರಮೇಣ ಅವನ ಶ್ರಮ ಫಲಕಾರಿಯಾಗುತ್ತದೆ. ಅಳಿದುಳಿದ ಪ್ರಜ್ಞೆಯೂ ಒಗ್ಗೂಡಿ ತಾನು ಆಸ್ಪತ್ರೆಯಲ್ಲಿ ಮಲಗಿರುವುದು ಅರಿವಾಗುತ್ತದೆ. ಅವನ ಸುತ್ತಲಿದ್ದ ಆಸ್ಪತ್ರೆಯವರಿಗೆಲ್ಲ ಅವನಿಗೆ ಪ್ರಜ್ಞೆ ಬಂದದ್ದರಿಂದ ಹೇಳಲಾಗದಷ್ಟು ಹರ್ಷ. ಪ್ರಜ್ಞೆ ಬಂದದ್ದು ಅವನಿಗೆ ತಿಳಿ ಗಾಳಿಯಲ್ಲಿ ಹಾರುತ್ತಿರುವ ಹಾಗೆ. ಔಷಧೋಪಚಾರ ಮಾಡುವ ಸಿಬ್ಬಂದಿಗೂ ಸಂಭ್ರಮ. ಮಲಗಿರುವವನಿಗೆ ತಿಳಿಯದಿದ್ದರೂ ಅವರು ಪರಸ್ಪರ ಕೈಕುಲುಕಿ ಪಿಸುಮಾತನಾಡಿ, ನಸುನಗೆ ತೂರಿ ಅತ್ತಿತ್ತ ಗೆಲುವು ಸಿಂಪಡಿಸುತ್ತಾರೆ. ಕಾರಣ ತಮ್ಮ ಔಷಧೋಪಚಾರ ಆತನನ್ನು ಈ ಸ್ಥಿತಿಗೆ ತರುವಂತೆ ಆದದ್ದಕ್ಕೆ. ಅವರ ಸಂಭ್ರಮ ಹುಸಿ ಸಂಭ್ರಮವಲ್ಲ. ಹಾಸಿಗೆಯಲ್ಲಿ ಮಲಗಿರುವವನು ದೇಹ ಪೂರ್ತಿ ಪಾರ್ಶ್ವವಾಯುಗೆ ತುತ್ತಾದವನು. ಮುಖವನ್ನು ಬಿಟ್ಟು ತಲೆಯ ತನಕ ಉಣ್ಣೆ ಬಟ್ಟೆಗಳಿಂದ ಸುತ್ತುವರಿದ ಅವನಿಗೆ ತನ್ನೆಲ್ಲ ಶಕ್ತಿಗಳನ್ನು ಒಗ್ಗೂಡಿಸಿ ಪ್ರಯತ್ನಿಸಿದರೂ ಕೊಂಚ ಎಡಗಣ್ಣು ಮಾತ್ರ ಬಿಡುವುದಕ್ಕೆ ಸಾಧ್ಯ. ಚಿತ್ರದಲ್ಲಿ ಇಲ್ಲಿಯ ತನಕ ನಿರೂಪಿಸಿದ ಅತಿಸಮೀಪ ಚಿತ್ರಿಕೆಗಳೆಲ್ಲವೂ ಅವನ ದೃಷ್ಟಿಕೋನದಿಂದ ನಮಗೆ ಕಂಡಂಥವು.
ಹೀಗೆ ಪ್ರಮುಖ ಸಂಗತಿಯನ್ನು ನಮ್ಮೆದುರು ಇಟ್ಟದ್ದು 2007ರ ಜೂಲಿಯನ್ ಶ್ನಾಬೆಲ್ ನಿರ್ದೇಶನದ ʻದ ಡೈವಿಂಗ್ ಬೆಲ್ ಅಂಡ್ ದ ಬಟರ್ಫ್ಲೈʼ ಚಿತ್ರದ ಪ್ರಾರಂಭದ ತುಣುಕುಗಳು. ಆನಂತರವೇ ನಮಗೆ ಅರಿವಾಗುತ್ತದೆ ಡೊಮೆನಿಕ್ ನ ಭಯಾನಕ ಸ್ಥಿತಿ. ಅದು ಲಾಕ್ಟಿನ್ ಸಿಂಡ್ರೋಮ್ ಎನ್ನುತ್ತಾರೆ ಮುಖ್ಯ ಡಾಕ್ಟರು. ಅವನು ಎಲ್ಲಿ ಎಂಬ ಫ್ರೆಂಚ್ ಮ್ಯಾಗಜೈನ್ ನ ಸಂಪಾದಕ. ಅವನಿಗೆ ದೊಡ್ಡದಾದ ಕಣ್ಣುಗಳಲ್ಲಿ ಎಡಗಣ್ಣನ್ನು ಮಾತ್ರ ತೆರೆಯಲು ಸಾಧ್ಯ. ನಲವತ್ತೆರಡು ವಯಸ್ಸಿನ ಜೀನ್ ಡೊಮೆನಿಕ್ ಬಾಬಿ ಅಥವಾ ಜೀನ್ ಡೋ ಎಂದು ಆತ್ಮೀಯರು ಕರೆಯುವ ಅವನು ಸಾಕಷ್ಟು ವಾರಗಳ ಕಾಲ ಹೋರಾಡಿ ಈ ಸ್ಥಿತಿ ತಲುಪಿರುತ್ತಾನೆ. ಅವನ ಹೋರಾಟದ ಪರಿಯನ್ನು ಅರಿಯದಿದ್ದರೂ ಒಟ್ಟಾರೆಯಾಗಿ ಇಷ್ಟಾದರೂ ಸಂಭವಿಸಿತಲ್ಲ ಎಂಬ ಹರುಷದ ಉಲ್ಲಾಸದ ಮಿನುಗು ಅವನ ಆತ್ಮೀಯರಿಗೆ… ಹೆಂಡತಿ, ಮಕ್ಕಳು, ವಯಸ್ಸಾಗಿರುವ ತಂದೆಗೆ.
ಚಿತ್ರದ ಈ ಮೊದಲ ಹಂತ ಮುಗಿಯುತ್ತಿದ್ದಂತೆ ಮುಂದುವರೆದ ಒಂದಷ್ಟು ಸಮಯ ಸೊಟ್ಟಗಾಗಿರುವ ಅವನ ಬಾಯಿಯ ಮೂಲಕ ಏನಾದರೂ ಶಬ್ದ ಹೊರಡಬಹುದೇ ಎಂಬ ನಿರೀಕ್ಷೆ ಅವನಿಗೆ ಆರೈಕೆ ಮಾಡುತ್ತಿದ್ದವರಿಗೆ. ಆದರೆ ಎಲ್ಲ ನಿರೀಕ್ಷೆಗಳೂ ವಿಫಲ. ಹಾಸಿಗೆಯಲ್ಲಿ ಮಲಗಿ ಇವೆಲ್ಲವನ್ನೂ ಕೇಳಿಸಿಕೊಳ್ಳುತ್ತ ಸಾಧ್ಯವಾದಷ್ಟು ಶ್ರಮಿಸುತ್ತಿದ್ದ ಜೀನ್ ಡೊಮಿನಿಕ್ ಬಾಬಿಗೆ ತನ್ನೊಳೊಗೆ ಹುದುಗಿರುವ ಶಕ್ತಿಗಳ ಮಿತಿ ಎಷ್ಟು ಎನ್ನುವುದನ್ನು ಪರೀಕ್ಷೆ ಮಾಡಿಕೊಳ್ಳುವುದಷ್ಟೇ ಕೆಲಸ. ಎಡಗಣ್ಣು ಒಂದಷ್ಟು ಬಿಟ್ಟರೆ ಇನ್ನೇನು ಮಾಡುವಂತಿಲ್ಲ ಎಂದು ಅತ್ತಿತ್ತ ಓಡಾಡುವ ಪೆಚ್ಚು ಮುಖದ ಆಸ್ಪತ್ರೆಯ ನರ್ಸುಗಳು ಮೆಲುದನಿಯಲ್ಲಿ ಮಾತನಾಡುವುದು ಕೇಳಿಸುತ್ತದೆ. ಆಗಲೇ ಅವಳು ಬರುತ್ತಾಳೆ, ಸ್ಪೀಚ್ ಥೆರಪಿಸ್ಟ್ ಹೆನ್ರಿಟ್ಟೆ ರೋಯಿ. ಮುಂದಾಗುವುದನ್ನು ಅರಿತ ಅವನಿದ್ದ ಆವರಣದಲ್ಲಿನ ಗಾಳಿ, ಬೆಳಕುಗಳಿಗೆಲ್ಲ ಉತ್ಸಾಹದಿಂದ ಕುಣಿದಂತೆ ಅತ್ತಿತ್ತ ಅಲ್ಲಾಡುತ್ತವೆ. ನರ್ಸುಗಳು ಮತ್ತು ಉಳಿದವರ ಕಣ್ಣುಗಳಲ್ಲಿ ಕುತೂಹಲದ ಇಣುಕು. ಸ್ಪೀಚ್ ಥೆರಪಿಸ್ಟ್ ಅವನಿಗೆ ಸೂಚನೆಗಳನ್ನು ಕೊಡಲು ಸಿದ್ಧಳಾಗುತ್ತಾಳೆ.
ಮಲಗಿರುವ ಜೀನ್ ಡೊಮೆನಿಕ್ ಬಾಬಿಗೆ ದೇಹದ ಎಲ್ಲ ಭಾಗದಲ್ಲಿಯೂ ವಿಕಲತೆ ಇದ್ದರೂ ಕಿವಿ ಸ್ಪಷ್ಟವಾಗಿ ಕೇಳಿಸುತ್ತಿರುತ್ತದೆ! ಹಾಗೆಯೇ ಮನಸ್ಸು ಕೂಡ ತೀಕ್ಷ್ಣ! ಇದನ್ನು ಗಮನಿಸಿದ ದೊಡ್ಡ ಕಣ್ಣುಗಳ ಲವಲವಿಕೆ ಹೊಮ್ಮಿಸುವ ಸ್ಪೀಚ್ ಥೆರಪಿಸ್ಟ್ ಕೊಡುವ ಸೂಚನೆ ಇಷ್ಟು: ಸಾಮಾನ್ಯವಾಗಿ ಉಚ್ಚರಿಸುವಾಗ ಬಳಸುವ ಮಾತಿನ ಅಂದರೆ, ಪದಗಳಲ್ಲಿನ ಅಕ್ಷರಗಳನ್ನು ಹೇಳುತ್ತಾ ಹೋಗುತ್ತೇನೆ. ಯಾವ ಅಕ್ಷರ ಅವನು ಹೇಳಲು ಬಯಸುವ ಪದದ ಅಕ್ಷರವಾಗಿತ್ತದೆಯೋ ಆಗ ಅದು ಬೇಕು ಎಂದು ಸೂಚಿಸುವುದಕ್ಕೆ ಒಂದು ಸಲ ರೆಪ್ಪೆ ಆಡಿಸಬೇಕು. ಅದಿಲ್ಲದೆ ಅದು ಬೇಡ ಎಂದರೆ ಎರಡು ಸಲ ರೆಪ್ಪೆ ಅಲ್ಲಾಡಿಸಬೇಕು ಎನ್ನುತ್ತಾಳೆ. ಹೀಗೆ ಸೂಚನೆ ಕೊಟ್ಟ ನಂತರ ಅವಳು ಅಕ್ಷರಗಳನ್ನು ನಿಧಾನವಾಗಿ ಉಚ್ಛರಿಸುತ್ತ ಹೋಗುತ್ತಾಳೆ. ತಾನು ಹೇಳಬೇಕೆಂದಿದ್ದ ಪದಗಳ ಅಕ್ಷರಗಳನ್ನು ಒಂದು ಸಲ ಅಥವ ಎರಡು ಸಲ ರೆಪ್ಪೆ ಬಡಿದು ಜೀನ್ ಡೊಮೆನಿಕ್ ಆರಿಸಿಕೊಳ್ಳುತ್ತಾನೆ. ಅವನು ಹೀಗೆ ಆರಿಸಿಕೊಂಡ ಅಕ್ಷರಶಬ್ದಗಳನ್ನು ಒಂದರ ಪಕ್ಕದಲ್ಲಿ ಮುಂದಿಟ್ಟು ಬರಹದ ಅಕ್ಷರಗಳನ್ನು ಕೂಡಿಸಿದಾಗ ತಮ್ಮಷ್ಟಕ್ಕೆ ಪದ ರೂಪುಗೊಂಡದ್ದು ಕಾಣುತ್ತದೆ. ಮೊದಲ ಪದ ಸಂಪೂರ್ಣವಾದಾಗ ಏನನ್ನೋ ಸಾಧಿಸಿದಂತೆ ಅವನಿಗೆ ಖುಷಿಯಿಂದ ಆ ಒಂದು ಕಣ್ಣು ಇನ್ನಷ್ಟು ಅಗಲವಾಗಲು ಪ್ರಯತ್ನಿಸುತ್ತದೆ. ಅಷ್ಟೇ ಆನಂದ ಲಹರಿ ಸ್ಪೀಚ್ ಥೆರಪಿಸ್ಟ್‌ಗೆ ಕೂಡ. ಜೀನ್ ಡೊಗೆ ಮನಸ್ಸಿನಲ್ಲಿರುವುದನ್ನು ಹೇಳುವುದಕ್ಕೆ ನಿಧಾನವಾಗಿಯಾದರೂ ಸರಿಯೇ ಅವಕಾಶ ನಿರ್ಮಾಣವಾಯಿತು ಎಂದು ಪುಟಿದ ಸಂತೋಷ.
ಅವನು ಆಸ್ಪತ್ರೆಯಲ್ಲಿ ಮಲಗಿದ್ದಾನೆ. ಮೈಕೈ ಆಡಿಸಲು ಶ್ರಮಿಸುತ್ತಿದ್ದಾನೆ. ಏನೂ ಸಾಧ್ಯವಾಗುತ್ತಿಲ್ಲ. ಆಗಷ್ಟೇ ಮನದಲ್ಲೊಂದಷ್ಟು ಬೆಳಕು. ಸುತ್ತಲೂ ಕತ್ತಲು ಮುತ್ತಿರುವ ಹಾಗೆ. ಆದರೆ ಇಡೀ ಮೈ ಕಲ್ಲುಗುಂಡಾದಂತೆ ಅನಿಸಿಕೆ. ಕಣ್ಣು ಬಿಟ್ಟರೆ ಸಾಕೆಂದು ಒಳಗಿನ ಮಾತು.
ಈ ಬಗೆಯ ಪ್ರಯತ್ನಗಳು ಇನ್ನಷ್ಟು ಮತ್ತಷ್ಟು ಕೈಗೊಳ್ಳುತ್ತ ಜೀನ್ ಡೊನ ಚಿತ್ತ ಕೊಂಚ ಭಾರ ಕಳೆದು ಇರುವ ಸ್ಥಿತಿಯಲ್ಲಿ ಇನ್ನೇನು ಮಾಡಲು ಸಾಧ್ಯ ಎನ್ನುವ ಚಿಂತೆಗೆ ಒಳಗಾಗುತ್ತದೆ. ಆಗಲೇ ಅವನಿಗೆ ತಾನು ಯೋಚಿಸುವ ಶಕ್ತಿಯ ವಿಸ್ತಾರವಿದೆ. ತನ್ನಲ್ಲಿ ನೆನಪುಗಳ ಗಣಿ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಭೂಮಿ ಆಕಾಶಗಳಲ್ಲಿ ಸ್ವಚ್ಛಂದ ವಿಹರಿಸುವ ಕಲ್ಪನೆಯಿದೆ ಎನ್ನುವುದು ಅರಿವಾಗುತ್ತದೆ. ಹೀಗುಂಟಾದ ಅರಿವಿನಿಂದ ಅವನಿಗೆ ಅತ್ಯಂತ ಪ್ರಿಯವಾದ ಅಲೆಕ್ಸ್ಯಾಂಡರ್ ಡ್ಯೂಮಾಸ್ ಬರೆದ ಪ್ರಖ್ಯಾತ ಪ್ರಖ್ಯಾತ ಕಾದಂಬರಿ ʻದ ಕೌಂಟ್ ಆಫ್ ಮಾಂಟೆ ಕ್ರಿಸ್ಟೋʼ ನೆನಪಾಗುತ್ತದೆ. ಅದನ್ನು ಕಣ್ಣು ರೆಪ್ಪೆ ಬಡಿದ ಅಕ್ಷರಗಳ ಜೋಡಣೆಯಿಂದ ತಿಳಿಸಿ ಹೇಳುತ್ತಾನೆ. ಆ ಕಾದಂಬರಿ ಅವನಿಗೆ ಬಾಯಿಪಾಠವಾದಷ್ಟು ನೆನಪಿನಲ್ಲಿರುತ್ತದೆ. ಸ್ಪೀಚ್ ಥೆರಪಿಸ್ಟ್ ಕಾದಂಬರಿಯ ಯಾವ ಭಾಗವನ್ನು ಹೇಳಲಿ ಎಂದಾಗ ತಡವರಿಸದೆ ಅಧ್ಯಾಯ ಐವತ್ತೊಂಬತ್ತು ಹೇಳುತ್ತಾನೆ. ಅವಳು ಅದನ್ನು ಓದಿ ಅವನು ಇದ್ದ ಸ್ಥಿತಿ ಮರೆತು ಎಲ್ಲೆಲ್ಲೋ ಹಾರಾಡಲು ಕಾರಣಳಾಗುತ್ತಾಳೆ. ಆ ಪುಸ್ತಕವನ್ನೇ ಮನಸ್ಸಿನಲ್ಲಿಟ್ಟುಕೊಂಡು ತಾನು ಅದಕ್ಕೆ ಪ್ರತಿಯಾಗಿ ಬರೆಯಬೇಕೆಂದಿರುವ ಕಾದಂಬರಿಯಲ್ಲಿ ಮೂರು ಹೆಂಗಸರ ಪಾತ್ರಗಳಿರುತ್ತವೆ ಎನ್ನುತ್ತಾನೆ.
ಜೀನ್ ಡೊಮೆನಿಕ್ ಗೆ ʻದ ಕೌಂಟ್ ಆಫ್ ಮಾಂಟೆ ಕ್ರಿಸ್ಟೊʼ ಓದಿಸಿ ಕೇಳಿದ ಪ್ರಸಂಗ ಅವನೊಳಗೆ ಹುದುಗಿದ್ದ ಸೃಷ್ಟಿಕ್ರಿಯೆಯನ್ನು ಹುರಿದುಂಬಿಸುತ್ತದೆ. ತನ್ನ ಸಧ್ಯದ ಸ್ಥಿತಿಯನ್ನು ಮರೆತು ಬೇರೊಂದು ಲೋಕದಲ್ಲಿ ವಿಹರಿಸಿ ಅಂತರಂಗದಲ್ಲಿರುವ ಶಕ್ತಿಗಳ ಪ್ರಮಾಣವನ್ನು ಗುರುತಿಸುವುದಕ್ಕೆ ತೊಡಗುತ್ತಾನೆ. ಕ್ರಮೇಣ ಅವನಿಗೆ ಹೆಚ್ಚು ಹೆಚ್ಚು ಭರವಸೆ ಮೂಡುತ್ತದೆ. ಅವನು ಸ್ಪೀಚ್ ಥರಪಿಸ್ಟ್‌ಗೆ ಹೇಳಿದಂತೆ ಡ್ಯೂಮಾಸ್‌ನ ಕಾದಂಬರಿಗೆ ಪ್ರತಿಯಾಗಿ ಬರೆಯುವುದನ್ನು ಯೋಚಿಸುವುದಿಲ್ಲ. ಬದಲಿಗೆ ತನ್ನ ಆತ್ಮಕಥೆ ಬರೆಯಲು ಉದ್ದೇಶಿಸುತ್ತಾನೆ.
ತಮ್ಮ ಆಸ್ಪತ್ರೆಯಲ್ಲಿರುವ ರೋಗಿಯೊಬ್ಬ ಪುಸ್ತಕವನ್ನು ಬರೆಯುವ ಅಪೇಕ್ಷೆಯನ್ನು ಕೇಳಿ ಉಳಿದವರಿಗೆ ಆಶ್ಚರ್ಯವಾಗುತ್ತದೆ. ಆದರೆ ಉಸಿರಾಡುವುದು ಬಿಟ್ಟರೆ ಇನ್ನೇನು ಮುಳುಗಿಯೇ ಬಿಡುತ್ತೇನೆ ಎನ್ನುವ ರೀತಿಯಲ್ಲಿರುವ ಡೊಮಿನಿಕ್ ಗೆ ಇದು ಅಸಾಧ್ಯವೆನಿಸುವುದಿಲ್ಲ. ಸ್ಪೀಚ್ ಥೆರಪಿಸ್ಟ್ ಹೇಳಿಕೊಟ್ಟ ಪ್ರಕಾರ ಸೂಚನೆಗಳನ್ನು ಅನುಸರಿಸಿ ಅಕ್ಷರಗಳನ್ನು ಹೆಣೆದು ಪದಗಳನ್ನು ಹೊಂದಿಸಿ ಬರೆಯಲು ಅತ್ಯಂತ ಸಹನೆಯುಳ್ಳವರು ಬೇಕೆಂದು ಬಯಸುತ್ತಾನೆ. ಸಹಜವಾಗಿ ಅವನ ಆಪ್ತರೊಬ್ಬರಿಗೆ ಮಾತ್ರ ಸಾಧ್ಯ ಎಂದು ತಿಳಿದು ಆ ಕೆಲಸಕ್ಕೆ ಅವನ ಮೂರು ಮಕ್ಕಳ ತಾಯಿ ಸೆಲಿನಿ ಆ ಕಾರ್ಯ ನೆರವೇರಿಸುವುದಕ್ಕೆ ಉತ್ಸಾಹದಿಂದ ನಿರತಳಾಗುತ್ತಾಳೆ.
ಆ ನಂತರವೇ ಅವನ ಕಲ್ಪನೆಗಳು, ನೆನಪುಗಳು ಹುರಿಗೊಂಡು ತನ್ನ ಜೀವಮಾನದ ವಿದ್ಯಮಾನಗಳನ್ನು ಕಣ್ಣಿನ ರೆಪ್ಪೆಗಳನ್ನು ಬಡಿಯುವುದರ ಮೂಲಕ ತಿಳಿಸುತ್ತ ಹೋಗುತ್ತಾನೆ. ಪ್ರಯತ್ನ ಮುಂದುವರಿದಂತೆ ಅವನಿದ್ದ ಆವರಣದಲ್ಲಿ ಹರಿದಾಡುತ್ತಿದ್ದದ್ದು ಸೆಲಿನಿಯ ಅಕ್ಷರಗಳ ಉಚ್ಛರದ ಶಬ್ದ ಮತ್ತು ಡೊಮೆನಿಕ್ ನ ರೆಪ್ಪೆ ಬಡಿತದ ನಿಶ್ಯಬ್ದ.
ಡೊಮೆನಿಕ್‌ನ ಆತ್ಮಚರಿತ್ರೆಯ ಅನೇಕ ವಿವರಗಳು ಬರವಣಿಗೆಯಲ್ಲಿ ರೂಪುಗೊಳ್ಳು ಹೋಗುತ್ತವೆ. ಬರವಣಿಗೆಯಲ್ಲಿ ನಿರೂಪಿತವಾಗುತ್ತಿದ್ದದ್ದು ಚಿತ್ರಿಕೆಗಳಾಗಿ ನಮ್ಮೆದುರು ಕಾಣಿಸುತ್ತ ಹೋಗುತ್ತದೆ. ತನ್ನ ಅಪ್ಪನೊಡನೆ ಆತ್ಮೀಯವಾಗಿ ನಡೆದುಕೊಳ್ಳುತ್ತ ಅವನ ಮುಖಕ್ಕೆ ಸೋಪು ಹಚ್ಚಿ ಶೇವ್ ಮಾಡುವ ಪ್ರಸಂಗ, ಹೆಂಡತಿ ಹಾಗೂ ಮೂರು ಮಕ್ಕಳ ಜೊತೆ ಬೀಚಿನಲ್ಲಿ ಅತ್ತಿತ್ತ ಎಲ್ಲರನ್ನೂ ಇನ್ನಷ್ಟು ಸಂತೋಷದಿಂದ ಸಂಭ್ರಮಿಸಲು ಉತ್ತೇಜಿಸುತ್ತಿದ್ದ ಚಿಟ್ಟೆಗಳ ಜೊತೆ ಒಬ್ಬೊಬ್ಬರನ್ನು ಮುದ್ದಾಡಿ ಹರ್ಷಗೊಂಡ ಪ್ರಸಂಗ, ಅಲ್ಲೆಲ್ಲೋ ಹೋಟೆಲ್ ನಲ್ಲಿ ಎಲ್ಲರೊಡಗೂಡಿ ಊಟ ಮಾಡಿದ ಪ್ರಸಂಗ ಮತ್ತು ಇದಕ್ಕಿಂತ ವಿಭಿನ್ನವಾಗಿರುವ ನೆನಪುಗಳು ಅವನಿಗೆ ಆಗುತ್ತದೆ. ಅವುಗಳಲ್ಲಿ ತಾನು ಪಾರ್ಶ್ವವಾಯುಗೆ ತುತ್ತಾಗಿ ಪ್ರಜ್ಞೆ ಕಳೆದುಕೊಂಡು ಮಲಗಿದಾಗ ತನಗೆ ಒಳಿತಾಗಲಿ ಎಂದು ತನ್ನ ಆಪ್ತರು, ಪರಿಚಿತರು, ಸಂಬಂಧಿಗಳಲ್ಲದೆ ಹತ್ತಿರದ, ದೂರದ, ತನ್ನ ದೇಶದ, ಪರದೇಶದ, ಹಾಗೂ ತಾನು ಅರಿಯಲಾರದೇ ಇದ್ದ ಜನರು ತನಗಾಗಿ ಪ್ರಾರ್ಥಿಸುತ್ತಿದ್ದದ್ದು ಗೊತ್ತಾಗುತ್ತದೆ. ಇದರಿಂದ ಅವರೆಲ್ಲರ ಬಗ್ಗೆ ಕೃತಜ್ಞತೆಯ ಭಾವಗಳು ಹುಟ್ಟುತ್ತವೆ. ಹಾಗೆ ಮಾಡಿದ ಫಲವಾಗಿ ಇಡೀ ದೇಹದಲ್ಲಿ ಜಾಗೃತವಾಗಿರುವ ಎಡಗಣ್ಣನ್ನು ತಾನು ತೀರಿಕೊಂಡ ಮೇಲೆ ಹೊರದೇಶದವನೊಬ್ಬನಿಗೆ ಕೊಡುವುದಕ್ಕೆ ತಿಳಿಸುತ್ತಾನೆ. ಹಳೆಯ ನೆನಪುಗಳಲ್ಲಿ ಅವನ ಮನಸ್ಸನ್ನು ಇನ್ನಷ್ಟು ಮೃದುವಾಗಿಸಿದ ಪ್ರಕರಣವೆಂದರೆ ಅವನ ಹುಟ್ಟುಹಬ್ಬದ ದಿನ ಅವರ ತಂದೆಯಿಂದ ಬಂದ ಫೋನ್ ಕರೆ ಮತ್ತು ಅನಂತರ ಬಂದ ಒಂದು ಪತ್ರ. ಫೋನ್‌ನಲ್ಲಿ ಮಾತನಾಡಿದ ಆತ ನಿನ್ನನ್ನು ಈ ಸ್ಥಿತಿಯಲ್ಲಿ ನೋಡಲಾರೆ ಅದಕ್ಕಾಗಿ ಅಲ್ಲಿಗೆ ಬರುವುದಿಲ್ಲ ಎನ್ನುತ್ತಾನೆ. ಪತ್ರದಲ್ಲಿ ಜೀನ್ ಡೊಮೆನಿಕ್ ಏಳೆಂಟು ವರ್ಷದ ಹುಡುಗನಾಗಿದ್ದಾಗ ತೆಗೆದ ಫೋಟೋ ಇರುತ್ತದೆ. ಇಷ್ಟನ್ನು ಮಾಡಿದಮೇಲೆ ಇಬ್ಬರಿಗೂ ಇನ್ನೇನು ಮಾತನಾಡಲು ಉಳಿದಿರುವುದಿಲ್ಲ ಎಂದು ಇಬ್ಬರೂ ಭಾವಿಸುತ್ತಾರೆ. ಆಗಲೇ ಅವನ ತಂದೆ ಒಮ್ಮೆ ಮಾತನಾಡುತ್ತ ಹೇಳಿದ್ದು ನೆನಪಾಗುತ್ತದೆ. ಪ್ರಪಂಚ ತನ್ನೆಲ್ಲ ಮೌಲ್ಯಗಳನ್ನು ಕಳೆದುಕೊಂಡಿದೆ. ಏಕೆಂದರೆ ಇನ್ನೊಬ್ಬಳ ಮೇಲಿನ ಪ್ರೀತಿ ತನ್ನಿಂದ ಮೂರು ಮಕ್ಕಳನ್ನು ಪಡೆದ ತಾಯಿಯಿಂದ ದೂರವಾಗುವುದಕ್ಕೆ ಕಾರಣವಲ್ಲ ಎಂದಿರುತ್ತಾರೆ. ಅದೊಂದು ದಿನ ಅಲ್ಲಿಗೆ ಬಾರದೆ ಸುಮ್ಮನೆ ಒಂದು ನಿಮಿಷದ ಅವಕಾಶ ಎಂದು ಕೇಳುವ ಸದ್ಯದ ಪ್ರೇಯಸಿ ಮಾತನಾಡುತ್ತಾಳೆ. ಪುಸ್ತಕದ ಬರೆವಣಿಗೆ ಮುಗಿದಮೇಲೆ ಅವನಲ್ಲಿ ಶಕ್ತಿ ಇನ್ನಷ್ಟು ಉಡುಗುತ್ತದೆ.
ಚಿತ್ರದಲ್ಲಿ ಅತಿಭಾವುಕವೆನಿಸುವ ಯಾವ ಸನ್ನಿವೇಶವೂ ಇಲ್ಲ. ಕೇವಲ ಭಾವಸಾಂದ್ರತೆಯ ಸನ್ನಿವೇಶಗಳಿವೆ. ಇವುಗಳನ್ನು ಅತ್ಯಂತ ಯಶಸ್ವಿಯಾಗಿ ಪಾತ್ರಧಾರಿಗಳು ನಿಯಂತ್ರಿತ ರೀತಿಯಲ್ಲಿ ನಿರ್ವಹಿಸುತ್ತಾರೆ. ಜೀನ್ ಡೊಮೆನಿಕ್ ಬಾಬಿ ಪಾತ್ರದ ಮ್ಯಾಥ್ಯೂ ಅಮೆರಿಕ್, ಸೆಲಿನಿಯಾಗಿ ಇಮ್ಯಾನುಯೆಲ್ ಸೀಗರ್, ಶ್ಪೀಚ್ ಥೆರಪಿಸ್ಟ್ ಆಗಿ ಹೆಂಡ್ರಿಟೆ ಗಮನಸೆಳೆಯುತ್ತಾರೆ. ಇವರೆಲ್ಲರ ಯಶಸ್ವಿ ನಿರ್ವಹಣೆಯ ಫಲವೇ ಚಿತ್ರಕ್ಕೆ ದೊರಕಿದ ಪ್ರಶಸ್ತಿಗಳಿಗೆ ಸಾಕ್ಷಿ. ಈ ಬಗೆಯ ಚಿತ್ರಗಳು ಕೆಲವು ನಿರ್ಮಿತವಾಗಿವೆ. ʻಜಾನಿ ಗಾಟ್ ಹಿಸ್ ಗನ್ʼ, ʻಬಿಫೋರ್ ನೈಟ್ ಫಾಲ್ಸ್ʼ ಚಿತ್ರಗಳನ್ನು ಹೆಸರಿಸಬಹುದು. ಇವುಗಳಿಗಿಂತ ಭಿನ್ನ ಆಶಯದ, ಉನ್ನತ ಮಟ್ಟದ ಪರಿಕಲ್ಪನೆಯ ಚಿತ್ರವಿದು ಎಂದು ಯಾರಿಗೂ ಅನಿಸುತ್ತದೆ.
ನಿರ್ದೇಶಕ ಜುಲಿಯನ್ ಶ್ನಾಬೆಲ್ ಗೆ ನಿಬ್ಬೆರಗಾಗುವಂತೆ ಬೆಂಬಲವನ್ನು ಕೊಟ್ಟಿರುವುದು ಛಾಯಾಗ್ರಾಹಕ ಜಾನುಜ಼್ ಕಮಿನ್ಸ್ಕಿಗೆ ಚಿತ್ರದ ಯಶಸ್ಸಿನ ಬಹಳಷ್ಟು ಪಾಲು ಸಂದಾಯವಾಗಬೇಕೆಂದು ತೋರುತ್ತದೆ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.
Well narrated