ಹಮಾರಾ ಬಜಾಜ್ ನ ಕತೆಗಳಲ್ಲಿ ಅಸ್ತಿತ್ವ ಶೋಧದ ಆಯಾಮವು ಅಂತರಗಂಗೆಯಂತೆ ಒಳಗೊಳಗೇ ಹರಿಯುತ್ತ ಎಲ್ಲ ಕತೆಗಳನ್ನು ಒಂದು ಹರಿವಿನಲ್ಲಿ ಬೆಸೆಯುತ್ತದೆ. ದೇಹ, ಪ್ರಜ್ಞೆಗಳಲ್ಲಿ ಯಾವುದು ನಿಜ ಎಂಬ ತೊಡಕುಗಳನ್ನು ಅನುಭವಿಸುತ್ತಲೇ ಅದನ್ನು ನಿಧಾನವಾಗಿ ಬಿಡಿಸುವ ತರ್ಕದ ನಾಜೂಕು ಹೆಣಿಗೆಯನ್ನು ಕತೆಗಳು ನಿರ್ಮಿಸುತ್ತವೆ. ದೇಹದ ಐಂದ್ರಿಕ ಅನುಭವಗಳನ್ನು ಕಾಮದ ಮೂಲಕ ಶೋಧಿಸುವ ಕತೆಗಳು ಪ್ರಜ್ಞೆಯ ಅನುಭವವನ್ನು ವಿಶ್ಲೇಷಿಸಲು ತರ್ಕದ ಮೊರೆ ಹೋಗುತ್ತವೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಕತೆಗಾರ ವಿಕ್ರಮ್ ಹತ್ವಾರರ “ಹಮಾರಾ ಬಜಾಜ್” ಕಥಾ ಸಂಕಲನದ ಕುರಿತು ಡಾ. ಗೀತಾ ವಸಂತ ಬರಹ

 

ಸಮಕಾಲೀನ ಕಥನ ಸಂದರ್ಭದಲ್ಲಿ ತಮ್ಮ ವಿಶಿಷ್ಟ ನೋಟದ ಕ್ರಮದಿಂದಾಗಿ ಗಮನಸೆಳೆದವರು ವಿಕ್ರಮ್ ಹತ್ವಾರ್. ಕಾಲದ ಒಂದು ಬಿಂದುವಿನಲ್ಲಿ ತಟಸ್ಥವಾಗಿ ಕುಳಿತು, ಪುನರಾವಲೋಕನ ಕ್ರಮದಿಂದ ಕಥನ ಕಟ್ಟುವ ಕ್ರಮವೊಂದಿದೆ. ಹಾಗೆಯೇ ವರ್ತಮಾನದಲ್ಲೇ ತನ್ಮಯವಾಗಿ ಆ ಕ್ಷಣಗಳನ್ನಷ್ಟೇ ಸೆರೆಹಿಡಿಯುವಂತಹ ಕಥನ ಮಾದರಿಗಳೂ ನಮ್ಮ ನಡುವೆ ಇದೆ. ಏಕಕಾಲದಲ್ಲಿ ಕಾಲದ ಹಲವು ಬಿಂದುಗಳಲ್ಲಿ ಚಲಿಸುತ್ತ ಅದನ್ನು ಒಂದು ಎಳೆಯಲ್ಲಿ ಕಟ್ಟುವ ಹದವರಿತ ಕತೆಗಾರರು ಹಲವರಿದ್ದಾರೆ. ವಿಕ್ರಮ್ ಹತ್ಪಾರ್ ಕತೆಗಳು ಈ ಮೂರನೆಯ ಬಗೆಯವು. ಅವರ ಕತೆಗಳು ಗತದಲ್ಲಿ ನಿಂತು ವರ್ತಮಾನವನ್ನೂ, ವರ್ತಮಾನದಲ್ಲಿ ನಿಂತು ಗತವನ್ನೂ ಕಾಣುವ ಬೈನಾಕ್ಯುಲರ್ ನಂತೆ ವರ್ತಿಸುವ ಗುಣದಿಂದಾಗಿ ವಿಶಿಷ್ಟವೆನಿಸುತ್ತವೆ. ಗ್ರಾಮೀಣ ಪರಿಸರದ ಹಾಗೂ ಬಾಲ್ಯದ ಹಲವು ಕತೆಗಳು ಒಳಗಿದ್ದರೂ, ಸಮಕಾಲೀನ ಕತೆಗಳೇ ತಮ್ಮಿಂದ ಬರೆಯಿಸಿಕೊಳ್ಳುತ್ತೇವೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನಿಜ, ಅವರ ಕತೆಗಳು ಬೆಂಗಳೂರಿನ ಅಥವಾ ಅಂತಹ ಮಹಾನಗರಗಳ ಗರ್ಭದಲ್ಲಿ ಹುಟ್ಟುತ್ತವೆ. ಜಾಗತೀಕರಣವು ಸೃಷ್ಟಿಸಿದ ತ್ರಿಶಂಕುಸ್ವರ್ಗದಲ್ಲಿ ಗಿರಿಗಿಟ್ಲೆಯಾಡುವ ಯುವ ಸಮೂಹವೊಂದರ ಭಾವಭಿತ್ತಿಗಳು ಇಲ್ಲಿ ಬೆಳಕಿಗೆ ಬಂದು ಮಾತನಾಡುತ್ತವೆ. ಕಾರ್ಪೋರೇಟ್ ವಲಯದ ಹವೆಯಲ್ಲೇ ಸೃಷ್ಟಿಯಾಗಿರುವ ಉಳಿವಿಗಾಗಿ ಹೋರಾಟ – ಬಲವೇ ಉಳಿವು ಎಂಬಂಥ ಬೌದ್ಧಿಕ ಸೆಣಸಾಟ ಮನುಷ್ಯ ಸಂವೇದನೆಯನ್ನೇ ಹೀರಿ ನಿತ್ರಾಣಗೊಳಿಸುವ ಚಿತ್ರಗಳು ಇಲ್ಲಿ ಮೂಡುತ್ತವೆ. ಹಾಗಂತ ವಿಕ್ರಮರ ಹಮಾರಾ ಬಜಾಜ್ ಸಂಕಲನದ ಕತೆಗಳು, ಹೊಸ ಜಾತಿಗಳಾಗಿ ತಲೆದೋರಿದ ಟೆಕ್ಕಿ ಸಮುದಾಯದ ಗೊಂದಲಗಳ ನಿರೂಪಣೆಯೋ, ಹಳಹಳಿಯೋ ಮಾತ್ರವಾಗಿ ನಿಲ್ಲುವುದಿಲ್ಲ. ಚರಿತ್ರೆಯ ಹೆಜ್ಜೆ ಗುರುತುಗಳ ಜತೆ, ಬದುಕನ್ನು ಅವ್ಯಕ್ತವಾಗಿ ರೂಪಿಸುತ್ತಿರುವ ಫಿಲಾಸಫಿಗಳನ್ನೂ ತೆಕ್ಕೆಹಾಯುತ್ತ ಜ್ವಲಿಸುತ್ತವೆ.

ಚರಿತ್ರೆಯೆಂದರೆ ಬರಿಯ ರಾಜಕೀಯ ಚರಿತ್ರೆಯಲ್ಲ. ಬದುಕಿನ ಒಳಸುಳಿಗಳನ್ನು ಅರಳಿಸುವ ಸಾಂಸ್ಕೃತಿಕ ಚರಿತ್ರೆಯೂ ಹೌದು. ಸಣ್ಣಸಣ್ಣ ಸಮುದಾಯಗಳ ವಿಕಾಸ, ವಲಸೆ, ನಾಶ, ನಲುಗುವಿಕೆ ಎಲ್ಲವೂ ಸಾಮೂಹಿಕ ಸ್ಮೃತಿಯಲ್ಲಿ ಕಾಣದಂತೆ ಅಡಗಿರುತ್ತವೆ. ಇಷ್ಟೇ ಅಲ್ಲ ವ್ಯಕ್ತಿಗತ ಚಿಂತನೆಗಳೂ, ವ್ಯಕ್ತಿಯೊಬ್ಬನ/ಳ ಭಾವಕೋಶದ ಆಗುವಿಕೆಯೂ ಚರಿತ್ರೆಯೇ ಸ್ಮೃತಿಗಳಲ್ಲಿ ಮೂಡುವ, ಮುಳುಗುವ ಕುರುಹುಗಳೂ ನಮ್ಮ ಬೆನ್ನುಬಿಟ್ಟಿಲ್ಲ. ಕಥನಕಾರರು ಮತ್ತೆ ಮತ್ತೆ ಇಂಥ ನೆನಪುಗಳ ಹಿಂದೆ ಓಡುವುದು ತಮ್ಮನ್ನು ತಾವು ವರ್ತಮಾನದಲ್ಲಿ ಅರಿಯುವ ಪ್ರಕ್ರಿಯೆಯ ಭಾಗವೇ ಆಗಿರುತ್ತದೆ. ಈಗ ಕಾಣುತ್ತಿರುವ ಸಾಫ್ಟ್ವೇರಿನ ಎ.ಸಿ. ಹವೆಯ ಬದುಕಿನ ಹಿಂದೆ, ಒಂದು ಇಡಿಯ ಜನಾಂಗದ ಬೆವರಿನಿಂದ ತೊಯ್ದು ಎಷ್ಟೊಂದು ಕತೆಗಳು ಹುದುಗಿವೆಯಲ್ಲ! ಎಂದು ಕತೆಯ ಪಾತ್ರವೊಂದು ಉದ್ಘರಿಸುವುದು ಇಲ್ಲಿನ ಕತೆಗಳು ಪರಿಭಾವಿಸುವ ರೀತಿಯನ್ನು ಕಾಣಿಸುತ್ತದೆ.

ಹಮಾರಾ ಬಜಾಜ್ ಎಂಬ ಶೀರ್ಷಿಕೆಯನ್ನೇ ಹೊತ್ತ ನೀಳ್ಗತೆಯೊಂದು ಸಂಕಲನದಲ್ಲಿದೆ. ಅಲ್ಲಿ ಬರುವ ಎರಡು ರೂಪಕಗಳು ವಿಕ್ರಮ್ ರ ಕತೆಗಳ ನೋಟದ ಕ್ರಮವನ್ನು ತುಂಬ ಸಶಕ್ತವಾಗಿ ಕಟ್ಟಿಕೊಡುತ್ತವೆ. ಒಂದು, ಅಪ್ಪನ ಕಾಲದ ಹಳೆಯ ಬಜಾಜ್ ಸ್ಕೂಟರ್. ಕಥಾನಾಯಕ ನವೀನ ಈ ಸ್ಕೂಟರನ್ನು ಮತ್ತೆ ಪಡೆಯಲು ಹೆಣಗುವುದು ಹಾಗೂ ಕೊನೆಯಲ್ಲಿ ಅದು ಸಿಕ್ಕಾಗ ಅದನ್ನು ನಿರಾಕರಿಸುವುದು ಕಥೆಯ ಕೇಂದ್ರ ಪ್ರಜ್ಞೆಯನ್ನು ಸಾಂಕೇತಿಕವಾಗಿ ಕಾಣಿಸುತ್ತದೆ. ಇನ್ನೊಂದು ರೂಪಕ ಹಾರ್ಡ್ ಡಿಸ್ಕಿನದು. ತನ್ನ ಗತವನ್ನೆಲ್ಲ ಡೈರಿ ಬರಹ, ಫೋಟೋಗಳ ರೂಪದಲ್ಲಿ, ಹಾರ್ಡ್ ಡಿಸ್ಕಿನಲ್ಲಿ ಸೇವ್ ಮಾಡಿರುವ ನವೀನ, ಅವೆಲ್ಲ ಅಳಿಸಿ ಹೋದಾಗ ದಿಗ್ಭ್ರಾಂತನಾಗುತ್ತಾನೆ. ಗಟ್ಟಿಯಾಗಿ ಇದೆಯೆಂದುಕೊಂಡಿದ್ದ ಆಧಾರವೊಂದು ಕಳಚಿಹೋದಂತೆ ವಿಲಿಗುಟ್ಟುತ್ತಾನೆ. ಆದರೆ ನಿಧಾನವಾಗಿ ತನ್ನ ನೆನೆಪಿನಲ್ಲಿ ಅವನ್ನೆಲ್ಲ ಜೀವಂತಗೊಳಿಸುತ್ತ ನೆನೆಪುಗಳೆಂದರೆ ಜಡ ಸಂಕೇತಗಳಲ್ಲ ಎಂಬ ಅರಿವಲ್ಲಿ ಹಗುರಾಗುತ್ತಾನೆ.

ತೀರಿಹೋದ ಅಪ್ಪನನ್ನು ಅರಿಯುವ ಪಯಣದಂತೆ ತೋರುವ ಈ ಕತೆ, ಆ ಮೂಲಕ ತನ್ನೊಳಗನ್ನೂ ಶೋಧಿಸುವ ಒಳಪಯಣವೂ ಆಗಿದೆ. ಒಳ-ಹೊರಗೆ ಚಲಿಸುವ ಈ ನೆರಳು-ಬೆಳಕಿನ ಆಟಕ್ಕೆ ಕತೆಯ ಭಾಷೆ-ತಂತ್ರಗಳು ಸೂಕ್ತ ನೆಲೆ ಒದಗಿಸುತ್ತಾ ಹೋಗುತ್ತವೆ. ಊರು ಬಿಟ್ಟುಬಂದು ಬದುಕು ಕಟ್ಟಿಕೊಳ್ಳಲು ಸೆಣಸಿ ಸೋತ ಅಪ್ಪ, ಹಠಮಾರಿ ಬೇಜವಾಬ್ದಾರಿಯ ವ್ಯಕ್ತಿಯಾಗಿ ತೋರುತ್ತಿದ್ದವ ಅವನ ಸಾವಿನ ನಂತರ ಮಗನ ಮರುಶೋಧದಲ್ಲಿ ಬೇರೆಯೇ ಆಗಿ ತೋರುತ್ತಾನೆ. ಮತ್ತೊಬ್ಬರ ಹೋಟೆಲಿನಲ್ಲಿ ಲೋಟತೊಳೆದು, ಸ್ವಂತ ಹೋಟೆಲಿಟ್ಟು ಜಯಿಸಲಾಗದೇ ಕೊನೆಗೆ ಧೀರ್ಘ ಅನಾರೋಗ್ಯಕ್ಕೆ ತುತ್ತಾಗಿ, ಡಯಾಲಿಸಿಸ್ ಗಳ ಜೀವ-ಸಾವಿನ ತೂಗುಯ್ಯಾಲೆಯಲ್ಲಿ ಜೀಕುತ್ತ ಕಾಣೆಯಾದ ಅಪ್ಪನ ಸ್ಮೃತಿಗಳು ವಿಷಾದರಾಗದ ಸಣ್ಣ ಸುಯ್ಲುಗಳಂತೆ ಕಥೆಯಲ್ಲಿ ಹರಡಿಕೊಂಡಿವೆ.

ಮುಂದೆ ಟೆಕ್ಕಿಯಾಗಿ ದೇಶ-ವಿದೇಶಗಳನ್ನು ಸುತ್ತಿ ಬಂದ ಮಗ ಹಾರ್ಡ್ ಡಿಸ್ಕಿನಿಂದ ನೆನಪುಗಳನ್ನು ಟ್ರಾನ್ಸ್ಫರ್ ಮಾಡುತ್ತಾ ಹೋಗುವಾಗ ಸಾಂದ್ರ ನೆನಪುಗಳ ಪಯಣದಲ್ಲಿ ತನ್ನನ್ನೇ ತಾನು ಬೇರೆಯಾಗಿ ಕಾಣುತ್ತಾನೆ. ಇದುವರೆಗೆ ಬರೀ ನೋಡುತ್ತಿದ್ದುದನ್ನು ಕಾಣುವಂತಾದದ್ದು ಅವನ ನೋಟದ ಕ್ರಮದ ಪಲ್ಲಟದಿಂದಾಗಿ. ಹೀಗೆ ಪಲ್ಲಟಗೊಳ್ಳುವ ಕ್ಷಣವೇ ಒಂದು ದಿವ್ಯ ಘಟನೆ. ತರ್ಕಕ್ಕೆ ಮೀರಿದ ಆ ಲೌಕಿಕ ಕ್ಷಣ. ಅಮ್ಮನ ಕಣ್ಣಲ್ಲಿ ಅಸಮರ್ಥ, ಭೋಳೆ, ಬೇಜವಾಬ್ದಾರಿಯಾಗಿ ಕಾಣುವ ಅಪ್ಪನ ಬಿಂಬವನ್ನೇ ತನ್ನದಾಗಿಸಿಕೊಂಡಿದ್ದ ನವೀನ ಈಗ ಬೇರೆಬೇರೆಯವರ ಕಣ್ಣಲ್ಲಿ ಅಪ್ಪನನ್ನು ನೋಡಿದಾಗ ಅಪ್ಪನ ಸ್ವಾಭಿಮಾನ, ಒಳ್ಳೆಯತನ, ಕಾಣುತ್ತಾ ಹೋಗುತ್ತದೆ. ನಂಟಿನ ಸ್ವರೂಪ ಬೇರೆಯಾದಂತೆಲ್ಲ ಬೇರೆಯಾಗಿ ಕಾಣುವ ಅಪ್ಪನ ವ್ಯಕ್ತಿತ್ವ ಅಚ್ಚರಿ ಮೂಡಿಸುತ್ತದೆ. ಇದ್ದಾಗ ಕಂಡಿರದ ಅಪ್ಪ ಅವನ ಸಾವಿನ ನಂತರ ಕಾಣಿಸಲು ಶುರುವಾಗುತ್ತಾನೆ. ಅವನ ಭೋಳೆತನದಲ್ಲಿದ್ದ ಪಾರಮಾರ್ಥಿಕ ಪರಿಮಳವೊಂದು ಲೌಕಿಕದ ಎಲ್ಲೆಗಳನ್ನು ದಾಟಿಸುವಂತೆ ಮಾಡುತ್ತದೆ. ನವೀನ ತನ್ನ ಡೈರಿಯಲ್ಲಿ ಸುಮ್ಮನೆ ದಾಖಲಿಸಿದ ಸಂಗತಿಗಳಲ್ಲೆ ಆಳವಾದ ಅರ್ಥಗಳು ಕಾಣತೊಡಗುತ್ತವೆ. ಒಳ್ಳೆಯ-ಕೆಟ್ಟ, ಕುರೂಪ-ಸೌಂದರ್ಯ, ಸಫಲ-ವಿಫಲ ಹೀಗೆ ಮಾನದಂಡಗಳಲ್ಲಿ ಮರೆಯಾದ ಸತ್ಯವನ್ನು ಕಾಣಲು ಕಣ್ಪೊರೆ ಫಟ್ ಎಂದು ಕಳಚಬೇಕಾಗುತ್ತದೆ.

ಕಳಚಿಕೊಳ್ಳುವುದು ಎಂದರೆ ಆಘಾತ. ಸಾವು ಕೂಡ ಅಂಥ ಆಘಾತ. ಆದರೆ, ಹಾರ್ಡ್ ಡಿಸ್ಕಿನಲ್ಲಿರುವ ನೆನಪುಗಳ ಸಾವು ನವೀನನ್ನು ಅಪ್ಪನ ಸಾವಿಗಿಂತ ಹೆಚ್ಚು ಅಧೀರಗೊಳಿಸುವುದು ಚೋದ್ಯ. ಇಷ್ಟು ವರ್ಷಗಳು ತಾನು ಬರಿಯ ಅಮ್ಮನ ಬೈನಾಕ್ಯುಲರ್ ಆಗಿದ್ದೆ. ದೂರವಿರುವುದು ಹತ್ತಿರವಿರುವಂತೆ ತೋರಿರುವ ಅದೇ ಬೈನಾಕ್ಯುಲರ್ ಅನ್ನು ತಿರುಗಿಸಿ ನೋಡಿದರೆ ಆಯಿತು. ಹತ್ತಿರವಿರುವುದು ದೂರವಿದ್ದಂತೆ ಕಾಣಿಸುವುದು (ಪು-೧೪೦) ಅಪ್ಪ ತೀರಿ ಹೋದ ಮೇಲೆಯೇ ಈ ಬೈನಾಕ್ಯುಲರ್ ಒಡೆದುಹೋದದ್ದು ಎಂಬ ನವೀನನ ಸ್ವಗತದಲ್ಲಿ ನೋಟದ ಭ್ರಮೆಗಳು ಕಳಚಿಕೊಂಡ ಕುರುಹು ಕಾಣಿಸುತ್ತದೆ. ಬೈನಾಕ್ಯುಲರ್ ಮತ್ತೊಂದು ಕಾಣಿಸುವ ರೂಪಕ!. ಇರುವು ಅರಿವುಗಳ ದ್ವೈತವನ್ನು ಕತೆ ಪರಿಣಾಮಕಾರಿಯಾಗಿ ಕಟ್ಟಿದೆ.

ವಿಕ್ರಮ್ ಹತ್ವಾರ್ ಕತೆಗಳಲ್ಲಿ ವಿವರಗಳು, ಘಟನೆಗಳ ಮೂಲಕ ತಾತ್ವಿಕ ಆಕೃತಿಯೊಂದನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾರೆ. ಕಥೆಯ ಹಿನ್ನೆಲೆಯಲ್ಲಿ ತಾತ್ವಿಕ ಗ್ರಹಿಕೆಗಳ ಪೂರ್ವಪಕ್ಷವೊಂದು ಕತೆಗೆ ಸಮಾನಾಂತರವಾಗಿ ರೂಪುಗೊಳ್ಳುತ್ತಿರುತ್ತದೆ. ಆ ಗ್ರಹಿಕೆಗಳಲ್ಲೇ ಚಲಿಸುವ ಕತೆ ಮುಂದೆಲ್ಲೋ ಅದನ್ನು ಮೀರಿನಿಂತುಬಿಡುತ್ತದೆ!. ಕತೆಯಲ್ಲಿ ಬರುವ ಮಾಧವ ಪೆಜತ್ತಾಯರ ಪಾತ್ರ ಅಂಥಹದು. ಕೊನೆಯಿಲ್ಲದ ಹುಡುಕಾಟದಲ್ಲಿ ಮಠ, ಕಮ್ಯೂನಿಸಮ್, ಸಮಾಜಸುಧಾರಣೆ, ಆಧ್ಯಾತ್ಮ ಸಾಧನೆ ಎಂದೆಲ್ಲ ಎಲ್ಲೆಲ್ಲೋ ಅಲೆಯುತ್ತ ಎಲ್ಲಿಯೂ ನಿಲ್ಲದಿರು ಎಂಬಂಥ ಪಾತ್ರವದು. ಅಸ್ತಿತ್ವದ ಹುಡುಕಾಟಕ್ಕೆ ಕೊನೆಯ ಉತ್ತರ ಎಂಬುದಿಲ್ಲ. ಆದ್ದರಿಂದ ಮೌನವೇ ಎಲ್ಲಕ್ಕೂ ಉತ್ತರ ಎನ್ನುವ ಪೆಜತ್ತಾಯರು ಅವರ ಬದುಕಿನ ಕೊನೆಯಲ್ಲಿ ಕಾರ್ಪೊರೇಟ್ ವಲಯದಲ್ಲಿ ನಿಂತು ಬದುಕಿನ ಗಹನೆಯ ಬಗೆಗೆ ಉಪನ್ಯಾಸ ಮಾಡುವುದು ಒಂದು ಚೋದ್ಯ ಆದರೆ ಪೆಜತ್ತಾಯರ ಮಾತುಗಳು ನವೀನನ ಅರಿವನ್ನು ವಿಸ್ತರಿಸುವುದು ಸುಳ್ಳಲ್ಲ.

ಕಥಾನಾಯಕ ನವೀನ ಈ ಸ್ಕೂಟರನ್ನು ಮತ್ತೆ ಪಡೆಯಲು ಹೆಣಗುವುದು ಹಾಗೂ ಕೊನೆಯಲ್ಲಿ ಅದು ಸಿಕ್ಕಾಗ ಅದನ್ನು ನಿರಾಕರಿಸುವುದು ಕಥೆಯ ಕೇಂದ್ರ ಪ್ರಜ್ಞೆಯನ್ನು ಸಾಂಕೇತಿಕವಾಗಿ ಕಾಣಿಸುತ್ತದೆ. ಇನ್ನೊಂದು ರೂಪಕ ಹಾರ್ಡ್ ಡಿಸ್ಕಿನದು. ತನ್ನ ಗತವನ್ನೆಲ್ಲ ಡೈರಿ ಬರಹ, ಫೋಟೋಗಳ ರೂಪದಲ್ಲಿ, ಹಾರ್ಡ್ ಡಿಸ್ಕಿನಲ್ಲಿ ಸೇವ್ ಮಾಡಿರುವ ನವೀನ, ಅವೆಲ್ಲ ಅಳಿಸಿ ಹೋದಾಗ ದಿಗ್ಭ್ರಾಂತನಾಗುತ್ತಾನೆ.

ತಂದೆಯ ನೆನಪುಗಳನ್ನು ಶೋಧಿಸುತ್ತ ತನ್ನನ್ನೇ ಶೋಧಿಸಿಕೊಳ್ಳತೊಡಗಿದ ನವೀನ ಸಿದ್ಧನೋಟಗಳ ಬೈನಾಕ್ಯೂಲರ್ ಎಸೆದು ತನ್ನ ಮೂಲರೂಪವನ್ನು ಕಾಣುವ ದಾಹಕ್ಕೊಳಗಾಗುತ್ತಾನೆ. ನೆನಪಿನ ಆಳಕ್ಕೆ ಇಳಿಯುತ್ತಲೇ ತನ್ನ ಮೂಲ ವಸ್ತುವನ್ನು ನೆನಪಿಸಿಕೊಳ್ಳುವ ಅವಕಾಶವಿದೆ. ಹೀಗೆ ಮರೆತಿರುವುದರಿಂದಲೇ ಮತ್ತೆ ನೆನಪಾಗುವುದು ನಮ್ಮ ಭಾರತೀಯ ದರ್ಶನಗಳಲ್ಲಿ ಬಹಳ ಮುಖ್ಯವಾದ ವಿಚಾರ. ಮರೆತಿದ್ದು ಮತ್ತೆ ನೆನಪಾದಾಗ ನಮಗೆ ಏನೋ ಒಂದು ಬಗೆಯ ಆನಂದ… ಪೆಜತ್ತಾಯರು ಸೆಮಿನಾರ್ ಹಾಲ್ ನಲ್ಲಿ ನಿಂತು ಮಾತನಾಡುತ್ತಿದ್ದರೆ ನವೀನನೊಳಗೂ ನೆನಪುಗಳ ಜಿಜ್ಞಾಸೆ ಆರಂಭವಾಗುತ್ತದೆ. ನಮ್ಮೊಳಗಿದ್ದ ದಿವ್ಯತೆಯ ಅರಿವಿಲ್ಲದಂತೆ ವಿಸ್ಮೃತಿಯಲ್ಲಿರುವ ನಾವು ಅದನ್ನು ಯಾವಾಗಲೋ ಛಕ್ಕನೆ ಕಾಣುವುದು ಆತ್ಮಸಾಕ್ಷಾತ್ಕಾರ. ಹಾಗೆ ಸ್ಮೃತಿಯಲ್ಲಿ ಅದು ಮತ್ತೆ ಮೂಡುವುದು ಅಭಿಜ್ಞಾನ. ಈ ಅಭಿಜ್ಞಾನಕ್ಕೂ ಹಾರ್ಡ್ ಡಿಸ್ಕ್ ನ ಮೂಲಕ ನೆನಪುಗಳಲ್ಲಿ ಇಳಿದು ಹಿಂದೆಂದೂ ಕಾಣದ್ದನ್ನು ಮತ್ತೆ ಕಾಣುವುದಕ್ಕೂ ಕತೆಯಲ್ಲಿ ಸಂಬಂಧದ ತಂತುಗಳು ರೂಪುಗೊಳ್ಳ್ಳುವುದು ಕತೆಗಾರರ ಜಾಣ್ಮೆಯಿಂದ.

ದರ್ಶನ, ಕಾವ್ಯ, ಉಪನಿಷತ್ತು, ಅವಧೂತರು, ಬುದ್ಧ, ಬೇಂದ್ರೆ…. ಹೀಗೆ ಎಲ್ಲದರ ಕುರಿತು ಮಾತನಾಡುವ ಪೆಜತ್ತಾಯರ ತರ್ಕದೆಳೆಗಳ ಒಳಗೇ ಸಿಕ್ಕಿಹಾಕಿಕೊಳ್ಳದ ಅರಿವೊಂದು ನವೀನನ ಅಪ್ಪನಲ್ಲಿತ್ತು. ಪೆಜತ್ತಾಯರನ್ನೊಮ್ಮೆ ಸಾಯುವುದರೊಳಗೆ ಕಾಣಬೇಕೆಂಬ ಅಪ್ಪನ ಹಂಬಲ ಹಾಗೆ ಉಳಿಯುತ್ತದೆ. ಕೊನೆಯಲ್ಲಿ ಬಡತನ, ಸಂಬಂಧಗಳ ವ್ಯಾಜ್ಯ, ಅವಮಾನ, ಖಾಯಿಲೆ, ನಾಲಗೆ ಚಪಲ ಇದನ್ನೆಲ್ಲ ನಾನೇ ದಾಟಬೇಕು ಅದಕ್ಕೇ ಅವರು ತನ್ನನ್ನು ಕಾಣಲು ಬರದೇ ತನ್ನಪಾಡಿಗೆ ತನ್ನನ್ನು ಬಿಟ್ಟಿರಬೇಕೆಂಬ ಸಮಾಧಾನದಲ್ಲಿ ಆತ ವಿರಮಿಸುತ್ತಾನೆ. ದೇಹ, ಮನಸ್ಸು, ನೆನಪುಗಳ ಬಾಧೆಯನ್ನು ಯಾವ ಆಧ್ಯಾತ್ಮದ ಮಾತುಗಳೂ ನಿವಾರಿಸಲಾರವು ಅದನ್ನು ಅನುಭವಿಸಿಯೇ ಮಾಗಬೇಕು. ತಳಮಳದ ಬುಡಕಾಣಬೇಕು ಎಂಬುದು ಕತೆಯಲ್ಲಿ ಧ್ವನಿಸುತ್ತದೆ. ಕಥಾನಾಯಕ ನವೀನ ಪೆಜತ್ತಾಯರ ಭಾಷಣ ನಡೆವ ಹಾಲಿನಿಂದ ನಿರ್ಗಮಿಸುವುದು ಇದನ್ನು ಸೂಚ್ಯವಾಗಿ ಹೇಳಿದೆ. ಮಗ ನವೀನ ತನ್ನ ನೆನಪುಗಳನ್ನು ಸಂಕೇತಗಳಲ್ಲಿ ಬಂಧಿಸುವ ಅರ್ಥಹೀನ ಪ್ರಯತ್ನವನ್ನು ಕೊನೆಗಾಣಿಸುವ ಮೂಲಕ ಕತೆ ಕೊನೆಯಾಗುತ್ತದೆ. ಅಪ್ಪನ ನೆನಪನ್ನು ಶಾಶ್ವತಗೊಳಿಸುವ ಸ್ಕೂಟರ್ ಬರಿಯ ಸಂಕೇತವಾಗಿ ಕಾಣುತ್ತದೆ. ನೆನಪುಗಳನ್ನು ಸಂಕೇತದ ಹಂಗಿಲ್ಲದೆ ತನ್ನಲ್ಲಿ ಉಜ್ಜೀವಿಸಿಕೊಳ್ಳುವ ಮಗನಿಗೆ, ಅಪ್ಪನಿಗಿಂತ ಅವನ ನೆನಪನ್ನು ಹೊತ್ತು ಹಾರ್ಡ್ ಡಿಸ್ಕ್ ಮುಖ್ಯವಲ್ಲ ಎನಿಸುವುದೂ ಕೂಡ ನೆನಪುಗಳ ಹಂಗಿಂದ ಬಿಡುಗಡೆಯೇ.

ಹಮಾರಾ ಬಜಾಜ್ ನ ಕತೆಗಳಲ್ಲಿ ಅಸ್ತಿತ್ವ ಶೋಧದ ಆಯಾಮವು ಅಂತರಗಂಗೆಯಂತೆ ಒಳಗೊಳಗೇ ಹರಿಯುತ್ತ ಎಲ್ಲ ಕತೆಗಳನ್ನು ಒಂದು ಹರಿವಿನಲ್ಲಿ ಬೆಸೆಯುತ್ತದೆ. ದೇಹ, ಪ್ರಜ್ಞೆಗಳಲ್ಲಿ ಯಾವುದು ನಿಜ ಎಂಬ ತೊಡಕುಗಳನ್ನು ಅನುಭವಿಸುತ್ತಲೇ ಅದನ್ನು ನಿಧಾನವಾಗಿ ಬಿಡಿಸುವ ತರ್ಕದ ನಾಜೂಕು ಹೆಣಿಗೆಯನ್ನು ಕತೆಗಳು ನಿರ್ಮಿಸುತ್ತವೆ. ದೇಹದ ಐಂದ್ರಿಕ ಅನುಭವಗಳನ್ನು ಕಾಮದ ಮೂಲಕ ಶೋಧಿಸುವ ಕತೆಗಳು ಪ್ರಜ್ಞೆಯ ಅನುಭವವನ್ನು ವಿಶ್ಲೇಷಿಸಲು ತರ್ಕದ ಮೊರೆ ಹೋಗುತ್ತವೆ.

ಪಿತೃಪಕ್ಷ ಎಂಬ ಕತೆಯಲ್ಲಿ ತನ್ನ ಹೆಸರಿನ ಮುಂದೆ ಅಂಟಿಕೊಂಡಿರುವ ಅಪ್ಪನ ಹೆಸರು ತನ್ನ ಅಸ್ತಿತ್ವವನ್ನೇ ಕಬಳಿಸುತ್ತಿದೆಯೆಂಬ ಕಸಿವಿಸಿಗೆ ನಾಯಕ ಒಳಗಾಗುತ್ತಾನೆ. ವಿಮಾನದಲ್ಲಿ ಉದ್ಘೋಷಕಿ ಹೆಸರು ಕೂಗಿದಾಲೂ, ಕೆಲಸದ ಸ್ಥಳದಲ್ಲಿ ತನ್ನ ಸಾಧನೆಯನ್ನು ಎತ್ತಿಹಿಡಿದು ಹೊಗಳಿದಾಗೂ ಹೆಸರಿನ ಮುಂದಿನ ಅಪ್ಪನ ಹೆಸರೇ ಉಚ್ಚರಿಸಲ್ಪಟ್ಟಾಗ ತನ್ನನ್ನು ಹೆಸರಿನೊಂದಿಗೆ ಗುರುತಿಸಿಕೊಳ್ಳಲಾಗದೇ ಹೋಗುತ್ತಾನೆ. ಸಣ್ಣದರ್ಶಿನಿಯಲ್ಲಿ ಕೆಲಸಮಾಡುತ್ತಿದ್ದ ಅಪ್ಪನಿಗೆ ಪ್ಯಾನ್ ಕಾರ್ಡ, ಆಧಾರ್ ಕಾರ್ಡ್ ಗಳ ಅಗತ್ಯವೇ ಇರಲಿಲ್ಲ! ರೇಷನ್ ಕಾರ್ಡ್ ನಲ್ಲಿಯೂ ಸತ್ತ ಒಂದು ವರ್ಷದಲ್ಲಿ ಹೆಸರು ತೆಗೆದುಹಾಕಲಾಯಿತು. ದಾಖಲೆಗಳಿಂದಲೇ ಗುರುತಿಸಲ್ಪಡುವ ಮನುಷ್ಯ ನಿರ್ಮಿತ ನಾಗರೀಕ ಅರ್ಥವ್ಯವಸ್ಥೆಗಳಾಚೆ ಜಿಗಿದು ಹೋಗುವ ‘ಸ್ವ’ ದ ಹುಡುಕಾಟ ಈ ಕತೆಯಲ್ಲೂ ಇದೆ. ಅಪ್ಪನಿಂದ ತಪ್ಪಿಸಿಕೊಳ್ಳುವುದೆಂದರೆ ಇಂಥ ಪೂರ್ವಸ್ಮೃತಿಗಳಿಂದ ಬಿಡುಗಡೆ ಪಡೆವ ಹಂಬಲದ ಮತ್ತೊಂದು ರೂಪ. ತನ್ನ ದೇಹದ ಮೂಲಕ ಅಸ್ತಿತ್ವ ಹುಡುಕುವ ಸ್ವಪ್ನವಿಲಾಸ ಕತೆಯಲ್ಲಿ ದೇಹಾನುಭವಗಳ ದಟ್ಟನಿರೂಪಣೆಯಿದೆ. ದಾಂಪತ್ಯ, ನಿಷ್ಠೆ ಎಂಬೆಲ್ಲ ರೂಢಿಗತ ಪದಗಳಡಿಗೆ ಅದಕ್ಕೆ ಅತೀತವಾಗಿ ಇರುವ ಸುಪ್ತ ಕಾಮನೆಗಳ ಲೋಕದಲ್ಲಿ ತನ್ನ ಜೀವದ ಹಂಬಲಗಳನ್ನು ಕಥಾನಾಯಕ ನಿಜಗೊಳಿಸಲು ತಪಿಸುತ್ತಾನೆ. ಹೆಂಡತಿ ಸುನೀತಾಳೊಂದಿಗೆ ಒಂದಾಗುವಾಗಲೂ ರೋಸಿ, ವಂದನಾ, ಮೃದುಲಾ, ಬೊರ್ನಾಲಿ.. ಯರೆಲ್ಲ ಸ್ಮೃತಿಪಟಲದಲ್ಲಿ ಸುಳಿದು ಒಬ್ಬರಲ್ಲೊಬ್ಬರು ಕರಗುತ್ತಾ ಹೋಗುತ್ತಾರೆ. ಭಿನ್ನ ಹೆಸರು, ಚಹರೆಗಳಳಿಯುತ್ತ ದೇಹದ ಉತ್ಕಂಠ ಉಪಶಮನವೊಂದೇ ಮುಖ್ಯವಾಗಿ, ಆ ಏಕಾಗ್ರದ ತುದಿಯಲ್ಲಿ ತಾನೂ ಇಲ್ಲವಾಗುವ ಹಗುರು ಭಾವವನ್ನು ಆತ ಅನುಭವಿಸುತ್ತಾನೆ. ಅಷ್ಟು ತೀವ್ರವಾಗಿ ಅವನು ಸೇರಿದ್ದು ಯಾರನ್ನು? ಎಂಬ ಪ್ರಶ್ನೆಯ ತಿರುವನ್ನು ಉಳಿಸಿಯೇ ಕತೆ ಕೊನೆಯಾಗುತ್ತದೆ. ಹಲವು ಸಾಧ್ಯತೆಗಳನ್ನು ಓದುಗರಲ್ಲಿ ಹೊತ್ತಿಸಿ ನಿಗಿನಿಗಿಸುತ್ತದೆ. ಇಂಥ ಕಾಮನೆಗಳ ಲೋಕವೊಂದು ಹತ್ವಾರರ ಕತೆಗಳಲ್ಲಿ ನಾಜೂಕಾಗಿ ಉಸಿರಾಡುತ್ತದೆ. ಉನ್ಮಾದದ ಸ್ವರಗಳಲ್ಲಿ ಮುಚ್ಚಳ ತೆರೆದ ಅತ್ತರಿನ ಶೀಷೆಯಂತೆ ನಿಧಾನವಾಗಿ ಹೊಮ್ಮುತ್ತ ಹರವಿಕೊಳ್ಳುತ್ತಿದ್ದಳು… (ಪು-೬೫) ಇಂಥಹ ಕಾವ್ಯಾತ್ಮಕ ನಿರೂಪಣೆ ಕತೆಗೊಂದು ನವಿರಾದ ಆದರೆ ಸಾಂದ್ರವಾದ ಅನುಭೂತಿಯನ್ನು ತಂದುಕೊಡುತ್ತವೆ.

ಈ ಎಲ್ಲ ತಾತ್ವಿಕ ತಾಕಲಾಟಗಳ ಜೊತೆಗೇ ವಿಕ್ರಮ್ ಕಟ್ಟಿಕೊಡುವ ಕಾರ್ಪೋರೇಟ್ ವಲಯದ ಅನುಭವ ಲೋಕ ಕನ್ನಡ ಕಥನಕ್ಕೆ ಹೊಸದು. ಈಗಾಗಲೇ ವಸುಧೇಂದ್ರರಾದಿಯಾಗಿ ಹಲವರು ಈ ಜಗತ್ತಿನ ತಣ್ಣಗಿನ ಕ್ರೌರ್ಯವನ್ನು ಅನಾವರಣಗೊಳಿಸಿದ್ದಿದೆ. ವಿಕ್ರಮ್ ಈ ಆವರಣದಲ್ಲೂ ತಮ್ಮ ತಾತ್ವಿಕ ಜಿಜ್ಞಾಸೆಯ ಜಿಗುಟುತನವನ್ನು ಬಿಟ್ಟುಕೊಡುವುದಿಲ್ಲ. ಎಷ್ಟೋ ಕಡೆಗಳಲ್ಲಿ ಇದು ಕಥೆಗೆ ಕಸುವು ಕೊಟ್ಟಿದೆ. ಕೆಲವೆಡೆ ಕಥೆಗಳನ್ನೇ ಓವರ ಟೇಕ್ ಮಾಡಿದಂತೆಯೂ ಅನಿಸುತ್ತದೆ. ಅವರ ‘ಕಾಮಸೂತ್ರ’ ಎಂಬ ಕತೆ ಸೆಕ್ಸ್ ಎಂದರೇನು, ಸ್ವಲ್ಪ ವಿವರಿಸ್ತೀರಾ, ಪ್ಲೀಸ್? ಅಂತಲೇ ಆರಂಭವಾಗುತ್ತದೆ. ಹೆಣ್ಣು ಗಂಡಿನ ನಡುವಿನ ರಸಸಂಚಾರದ ಅತಾರ್ಕಿಕ ಘಳಿಗೆಗಳು ಕಾಪೋರೇಟ್ ಆಫೀಸುಗಳಲ್ಲಿ ಹೇಗೆ ಮಾರಾಟದ, ಸ್ಪರ್ಧೆಯ, ಸ್ವಾರ್ಥ ಸಾಧನೆಯ ದಾಳಗಳಾಗಿ ಬಳಕೆಯಾಗುತ್ತವೆ ಎಂಬುದನ್ನು ಕತೆ ಸೂಕ್ಷ್ಮವಾಗಿ ನಿರೂಪಿಸುತ್ತದೆ. ಎಲ್ಲೂ ವಾಚ್ಯ ವಿವರಗಳಿಗಿಳಿಯದೇ ಸಂಭಾಷಣೆಗಳಲ್ಲೆ ಮನುಷ್ಯನ ಇಬ್ಬಂದಿತನವನ್ನೂ, ಚೂಪಾದ ವ್ಯವಹಾರಿಕ ಜಾಣ್ಮೆಯನ್ನೂ ಸಂಭಾಷಣೆಗಳ ಮೂಲಕವೇ ಕಟ್ಟಿಕೊಟ್ಟ ರೀತಿ ಬ್ರಿಲಿಯಂಟ್ ಆಗಿದೆ. ಗಂಡು-ಹೆಣ್ಣೆಂಬ ಭೇದವಿಲ್ಲದೆ ನಡೆಸುವ ಈ ನಾಜೂಕು ಕ್ರೌರ್ಯ ಮಾರುಕಟ್ಟೆ ಸಂಸ್ಕೃತಿಯ ಇನ್ನೊಂದು ಚಹರೆಯಾಗಿ ಕಾಣಿಸುತ್ತದೆ. ಇದರೊಂದಿಗೆ ಮನುಷ್ಯ ಸಂಬಂಧಗಳ ಸಂಕೀರ್ಣತೆ, ಆಳದ ಸ್ವಾರ್ಥ ಒಬ್ಬರನ್ನೊಬ್ಬರು ಬಳಸಿಕೊಂಡು ಮೇಲೇರುವ ಹಾವು-ಏಣಿಯಾಟದ ರೋಚಕತೆ ಅನುಭವವಾಗಿ ತಟ್ಟುತ್ತದೆ.

ಗ್ರಾಮೀಣ ಪ್ರದೇಶಗಳು ಬೆಂಗಳೂರೀಕರಣಗೊಳ್ಳುವ ಕನಸಲ್ಲಿ ತೇಲುತ್ತಾ, ಇನ್ಸ್ಟಂಟ್ ಜಗತ್ತಿನ ಫ್ಲೇವರುಗಳಲ್ಲಿ ಕಳೆದುಹೋಗುವ ವಿಷಾದವೊಂದು ಹಲವು ಕತೆಗಳಲ್ಲಿ ಮೆಲ್ಲಗೆ ಅನುರಣಿಸುತ್ತದೆ. ಪ್ರೇಮ, ದಾಂಪತ್ಯ… ಹೀಗೆ ಸಂಬಂಧಗಳ ಬಗೆಗಿನ ನಂಬಿಕೆಗಳು ಕುಸಿಯುತ್ತಿರುವ ಈ ಕಾಲಘಟ್ಟದ ಕನವರಿಕೆಗಳು ಹಲವು ಕತೆಗಳಲ್ಲಿ ಧ್ವನಿಸಿವೆ. ದಾಂಪತ್ಯವೆಂಬುದು ತೀರ ವ್ಯವಹಾರಿಕವಾದ ಇಬ್ಬರ ಸಂಬಳದಲ್ಲಿ ಮನೆಸಾಲ ತೀರುವ, ಮಗುವೊಂದು ಬೆಳೆಯುವ ಅಚ್ಚುಕಟ್ಟಾದ ಕ್ರಿಯೆಯಾಗಿದೆ. ಅಂಥ ಸಂಬಂಧದ ಅಂತರ್ಯಕ್ಕಿಳಿದರೆ ಅಲ್ಲಿ ಅರಾಜಕತೆಯಿದೆ. ವಿದ್ರೋಹವಿದೆ ಅಥವಾ ಏನೂ ಅಲ್ಲದ ಶೂನ್ಯವಿದೆ. ಮರಣಕಾಮ, ಕಾಮಸೂತ್ರ, ಸ್ವಪ್ನವಿಲಾಸ, ಏನಾದನು ಚಂದಿರ, ಜೆಜೆ ಬಂದಿದ್ದ, ಯಾವ ಉಡುಗೊರೆ ನೀಡಲಿ.. ಇಂಥ ಕತೆಗಳಲ್ಲಿ ನಂಬಿಕೆಯ ಲೋಕವು ಛಿದ್ರಗೊಳ್ಳುವ ಸೂಕ್ಷ್ಮ ಚಿತ್ರಗಳಿವೆ.

ಅನುರಣನ ಕತೆಯಲ್ಲಿ ಕ್ಯಾಬ್ ಡ್ರೈವರ್ ಚೆಲುವನಾರಾಯಣ ಸ್ವಾಮಿಯ ಕತೆ ಕೂಡ ಬೆಂಗಳೂರೀಕರಣದಿಂದ ಮನುಷ್ಯನ ಪ್ರಜ್ಞೆಯಲ್ಲಾದ ವಿಘಟನೆಯ ಕತೆಯಿದೆ. ಹಳ್ಳಿಯಲ್ಲಿ ಹೊಲದ ಕೆಲಸ ಒಲ್ಲದೇ ಅರೆಬರೆ ಓದಿ ನಗರ ಸೇರಿದ ಆತ ಮೊಬೈಲು, ವಾಟ್ಸಾಪು, ಫೇಸ್ ಬುಕ್ಕು, ಮೆಸೇಜುಗಳ ಭ್ರಾಮಕ ಲೋಕದಲ್ಲಿ ತನ್ನನ್ನೇ ಕಳೆದುಕೊಳ್ಳುವ ನಡೆ ತಂತ್ರಜ್ಞಾನ ಕೇಂದ್ರಿತ ಆಧುನಿಕತೆಯ ವ್ಯಂಗ್ಯದಂತಿದೆ. ಮೂರು ಹುಡುಗಿಯರೊಂದಿಗೆ ಏಕಕಾಲಕ್ಕೆ ಮೆಸೇಜು ಮಾಡುತ್ತಾ ಚಕ್ಕುಂದವಾಡುವ, ಸುರಳೀತವಾಗಿ ಸುಳ್ಳು ಹೇಳುವ ನಾರಾಯಣಸ್ವಾಮಿ ಈ ಸುಳ್ಳುಗಳಲ್ಲಿ ಬಿಡಿಬಿಡಿಯಾಗಿ ಹಂಚಿಹೋಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಅಂತರಿಕ್ಷದಲ್ಲಿರುವಂತೆ ಹೊಯ್ದಾಡುತ್ತಾನೆ. ಖಿನ್ನತೆಗೂ ಒಳಗಾಗುತ್ತಾನೆ. ನೈತಿಕ, ಅನೈತಿಕವೆಂಬ ದ್ವಂದ್ವಗಳ ಹೊಯ್ದಾಟದಲ್ಲಿ ಕೊರಗುತ್ತಾನೆ.
ಹೊಸ ಸೆಳೆತಗಳಲ್ಲಿ ಗಿರಿಗಿಟ್ಲೆಯಾಡುವ ಚೆಲುವನಾರಾಯಣಸ್ವಾಮಿ, ಪಾಪಪ್ರಜ್ಞೆಯೇ ಇಲ್ಲದ ಸೆಳೆತಗಳ ಸುಳಿಯಲ್ಲಿ ಹಾವು-ಏಣಿಯಾಟ ಆಡುವ ಕಾರ್ಪೋರೇಟ್ ಜಗತ್ತಿನ ಫೇಕು ಮನುಷ್ಯರ ನಡುವೆ ಅರ್ದೃತೆಯ ಸೆಲೆಯನ್ನೇ ಪುಡಿ ಪುಡಿ ಮಾಡುವ ನಗರೀಕರಣದ ಕಬಂಧ ಬಾಹುಗಳ ಹಿಡಿತವನ್ನು ಕತೆಗಳು ಪರೋಕ್ಷವಾಗಿ ಕಾಣಿಸುತ್ತದೆ.

ಕಥೆಯ ಹಲವು ಪಾತ್ರಗಳ ಮೂಲಕ ಮನುಷ್ಯನ ಅಸ್ತಿತ್ವವನ್ನು ಶೋಧಿಸುವ ಪಯಣವೊಂದನ್ನು ಹಮಾರಾ ಬಜಾಜ್ ಮಾಡಿಸುತ್ತದೆ. ಕಾರ್ಪೋರೇಟ್ ಜಗತ್ತಿನ ಕೋರೈಸುವ ಬದುಕಿನ ಜೊತೆ ಜೊತೆಯಲ್ಲೇ ಇರುವ ಗೂಡಂಗಡಿಗಳ ಲೋಕ, ನ್ಯೂಯಾರ್ಕಿನ ಝಗಮಗಿಸುವ ದೀಪಗಳ ಕೆಳಗೇ ಇಣುಕುವ ಮನಸ್ಸಿನಾಳದ ಕತ್ತಲು ಹಾಗೂ ಅನೂಹ್ಯ ನೆರಳಿನ ಹಲವು ಬಗೆಯ ಹೊಯ್ದಾಟಗಳನ್ನು ವಿಕ್ರಮ್ ಹತ್ಪಾರ್ ದ್ವಂದ್ವ ವೈರುಧ್ಯಗಳಲ್ಲಿ ಸೆರೆಹಿಡಿಯುವ ಬಗೆ ಮೋಹಕವಾಗಿದೆ. ಸೂಕ್ಷ್ಮಗೊಂಡ ಭಾಷೆ ವಿಶಿಷ್ಟ ನಿರ್ವಹಣಾ ಶೈಲಿ ಹಾಗೂ ಮನುಷ್ಯನ ಬವಣೆಗಳ ಮೂಲವನ್ನು ತಾಕಬೇಕೆಂಬ ಧ್ಯಾನಶೀಲತೆ ಇಲ್ಲಿನ ಕತೆಗಳನ್ನು ವಿಶಿಷ್ಟಗೊಳಿಸಿದೆ.