ಹಲವಾರು ಲೇಖಕ-ಲೇಖಕಿಯರು ತಮ್ಮ ಕೊಡುಗೆಗಳನ್ನು ಕೊಟ್ಟಿದ್ದಾರೆ, ಕೊಡುತ್ತಿದ್ದಾರೆ. ಆದರೂ ಕರ್ನಾಟಕದ ಜನಮಾನಸದಲ್ಲಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ವಿಜ್ಞಾನದ ಅಧ್ಯಾಪಕರಲ್ಲಿ ಮತ್ತು ಸಂಶೋಧಕರಲ್ಲಿ `ವಿಜ್ಞಾನವೆಂದರೆ ಇಂಗ್ಲಿಷಿನಲ್ಲಿ ಇರುವಂಥದ್ದು, ಇರಬೇಕಾದದ್ದುʼ ಎಂಬ ಗಾಢ ಭಾವನೆ ಬೇರೂರಿದೆ. ಈ ಭಾವನೆ-ಚಿಂತನೆಯ ತಿರುಳು ಎಂದರೆ “ತೀರಾ ಗಂಭೀರ ವಿಜ್ಞಾನ ವಿಚಾರಗಳನ್ನು ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಲೇಖನಗಳನ್ನು ಕನ್ನಡದಲ್ಲಿ ಬರೆಯಲಾಗದು, ಹಾಗೆ ಬರೆಯಲು ಸೂಕ್ತ ಪದಗಳೇ ಸಿಗುವುದಿಲ್ಲ” ಎಂಬ ಅನಿಸಿಕೆ ಅಥವಾ ಪೂರ್ವಗ್ರಹ. ಇದು ವಿಜ್ಞಾನಕ್ಷೇತ್ರದ ಹಲವು ಅಧ್ಯಾಪಕರು ಮತ್ತು ವಿಜ್ಞಾನಿಗಳಲ್ಲಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತೊಂಭತ್ತನೆಯ ಬರಹ
ಇಪ್ಪತ್ತೊಂದನೇ ಶತಮಾನದಲ್ಲಿ ಮನುಷ್ಯರ ನಡುವಿನ ಸಂವಹನವು ಗರಿಷ್ಠ ಮಟ್ಟದಲ್ಲಿ ತಂತ್ರಜ್ಞಾನವನ್ನು ಆಧರಿಸಿದೆ. ಈ ಸಂದರ್ಭದಲ್ಲಿನ ಹೊಸ ರೀತಿಯ ಸಂವಹನ ಹಾಗೂ ಸಾಮಗ್ರಿ ನಿರ್ಮಾಣದ ಸವಾಲುಗಳನ್ನು ಕನ್ನಡ ಭಾಷೆಯು ಕಳೆದ ಇಪ್ಪತ್ತೈದು ವರ್ಷಗಳಿಂದ ಪ್ರಯತ್ನಶೀಲವಾಗಿ ಎದುರಿಸುತ್ತ ಬಂದಿದೆ. 1997ರಲ್ಲಿ ಕನ್ನಡಗಣಕ ಪರಿಷತ್ತಿನ ಸ್ಥಾಪನೆ ಹಾಗೂ 2003ರಲ್ಲಿ ಕನ್ನಡ ಅಂತರ್ಜಾಲ ವಿಶ್ವಕೋಶದ ನಿರ್ಮಾಣಗಳು ಇದಕ್ಕೆ ಸಾಕ್ಷಿ. ಗಣಕಯಂತ್ರ ಮತ್ತು ಸಂಚಾರಿ ದೂರವಾಣಿಯಲ್ಲಿ ಕನ್ನಡ ಲಿಪಿಯ ಬಳಕೆಯು ಈಗ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಒಂದು ದೃಷ್ಟಿಯಿಂದ ನೋಡುವುದಾದರೆ ಇದು ಕನ್ನಡದ `ಡಿಜಿಟಲ್(ಅಂಕರೂಪೀ) ನವೋದಯ’. ಕನ್ನಡದಂತಹ ಜೀವಂತ ಭಾಷೆಗಳು ಇಂದಿನ ವಿಜ್ಞಾನ-ತಂತ್ರಜ್ಞಾನಗಳ ನವಪ್ರಪಂಚದಲ್ಲಿ ಸಲ್ಲಲು ಇಂತಹ ಹೊಸಹುಟ್ಟುಗಳನ್ನು ಪಡೆಯಲೇಬೇಕು. ಹಿರಿಯ ಸಂಶೋಧಕರಾಗಿದ್ದ ಶ್ರೀನಿವಾಸ ಹಾವನೂರು ಹಾಗೂ ಕನ್ನಡಿಗರ ಮೆಚ್ಚಿನ ಲೇಖಕ ಶ್ರೀ ಪೂರ್ಣಚಂದ್ರ ತೇಜಸ್ವಿಯವರು ಗಣಕಯಂತ್ರವನ್ನು ಕನ್ನಡ ಬರವಣಿಗೆಗೆ ಬಳಸಿದ ಮೊದಲಿಗರಲ್ಲಿ ಮುಖ್ಯರು ಎಂಬುದನ್ನು ನಾವು ನೆನೆಯಬೇಕು.
ವಾಸ್ತವವಾಗಿ`ಡಿಜಿಟಲ್ ನವೋದಯ’ಅಂದರೆ ಏನು? ಇದನ್ನು ಇನ್ನೂ ಪರಿಣಾಮಕಾರಿಯಾಗಿಸುವುದು ಹೇಗೆ? ಇದಕ್ಕೂ ವಿಜ್ಞಾನ ಬರವಣಿಗೆಗೂ ಏನು ಸಂಬಂಧ?ಎಂಬುದನ್ನು ಗಮನಿಸುವುದು ಈ ಲೇಖನದ ಉದ್ದೇಶವಾಗಿದೆ.
*******
`ಹಸಿರು ಓದಿನ ವಿಮರ್ಶಕರು’ಎಂದು ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಹೆಸರಾಗಿರುವ ಲೇಖಕರಾದ ಶ್ರೀ ಚಂದ್ರಶೇಖರ ನಂಗಲಿಯವರು ಆಗಾಗ ಬಳಸಿ ಜನರು ಗಮನಿಸುವಂತೆ ಮಾಡಿದ ಪದ ಈ `ಡಿಜಿಟಲ್ ನವೋದಯ’. 0 ಮತ್ತು 1 ಎಂಬ ಎರಡಂಕಿಗಳ ಭಾಷೆಯ ಮೇಲೆ ಕಂಪ್ಯೂಟರ್(ಗಣಕಯಂತ್ರ) ವಿಜ್ಞಾನದ ಪರಿಭಾಷೆಯು ಆಧಾರಿತವಾಗಿದೆಯಲ್ಲವೆ? ಕನ್ನಡ ಭಾಷೆಯನ್ನು ಈ ಅಂಕರೂಪಕ್ಕೆ ಒಗ್ಗಿಸುವ ಮತ್ತು ಸರ್ವರೀತಿಗಳಲ್ಲೂ ಸಜ್ಜುಗೊಳಿಸುವ ಮಹಾಪ್ರಯತ್ನವೇ ಈ `ಡಿಜಿಟಲ್ ನವೋದಯ’. ನಮ್ಮ ಕನ್ನಡ ಬರಹಕ್ಕೆ ಮಾಹಿತಿತಂತ್ರಜ್ಞಾನದ ಯಂತ್ರ ಮಾಧ್ಯಮದಲ್ಲಿ ಮರುಹುಟ್ಟುಕೊಟ್ಟದ್ದೇ ಇದು. ಈ ಪರಿಕಲ್ಪನೆಯನ್ನು ಇನ್ನಷ್ಟು ಆಳವಾಗಿ ಗಮನಿಸೋಣ.
ಈ ಪ್ರಬಂಧದ ಪ್ರಸ್ತಾವನೆಯಲ್ಲಿ ಹೇಳಿದಂತೆ ಕನ್ನಡದ ಡಿಜಿಟಲ್ ನವೋದಯ ಈಗಾಗಲೇ ಆಗಿದೆ. ಅಂದರೆ ಕಂಪ್ಯೂಟರು, ಕಿಂಡಲ್ಲು, ಮೊಬೈಲು(ಸಂಚಾರಿದೂರವಾಣಿ) ಮುಂತಾದ ಸಂವಹನ ಸಂಬಂಧೀ ಯಂತ್ರೋಪಕರಣಗಳಲ್ಲಿ ನಾವು ಕನ್ನಡವನ್ನು ತಕ್ಕಮಟ್ಟಿಗೆ ಬಳಸುತ್ತಿದ್ದೇವೆ. ಆದರೆ, ವಾಯುವೇಗಕ್ಕಿಂತಲೂ ಹೆಚ್ಚು ವೇಗದಿಂದ ಬದಲಾಗುತ್ತಿರುವ, ಹೊಸದಾಗುತ್ತಿರುವ ಯಂತ್ರಜ್ಞಾನ-ತಂತ್ರಜ್ಞಾನಾಧಾರಿತ ಬದುಕಿನ ಬಗೆಯನ್ನು, ಶಕ್ತವಾದ ಮತ್ತು ಸುಗಮವಾದ ರೀತಿಯಲ್ಲಿ ಹಾಗೂ ಸುಲಭವಾಗಿ ಅರ್ಥವಾಗುವ ಕನ್ನಡದಲ್ಲಿ, ಅಂತರ್ಜಾಲ ಮಾಧ್ಯಮದಲ್ಲಿ ಅಭಿವ್ಯಕ್ತಿಸುವುದು ನಮಗೆ ಸಾಧ್ಯ ಆಗುತ್ತಿದೆಯೆ? ಅಂತರ್ಜಾಲ, ಸಾಮಾಜಿಕ ಮಾಧ್ಯಮಗಳು, ಮೊಬೈಲು ಇಲ್ಲೆಲ್ಲ ಆಂಗ್ಲ ಭಾಷೆಯನ್ನು ಎಷ್ಟು ಆರಾಮವಾಗಿ ಬಳಸಲಾಗುತ್ತದೋ ಅಷ್ಟೇ ಆರಾಮವಾಗಿ ಕನ್ನಡವನ್ನೂ ಬಳಸಲು ಸಾಧ್ಯಆಗುತ್ತಿದೆಯೆ? ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ. ಮತ್ತು ಅದಕ್ಕಿಂತ ಹೆಚ್ಚಿನ ಮಟ್ಟದ ಸಂಶೋಧನಾ ಕ್ಷೇತ್ರಗಳಲ್ಲಿ ಅಧ್ಯಯನ, ಅಧ್ಯಾಪನ, ಬರವಣಿಗೆಗಳಲ್ಲಿ ನಾವು ಡಿಜಿಟಲ್ ಕನ್ನಡವನ್ನು ಇಂಗ್ಲಿಷನ್ನು ಬಳಸುವಂತೆ ಅರಾಮವಾಗಿ ಬಳಸುತ್ತಿದ್ದೇವೆಯೆ? ಇದಕ್ಕೆ ಉತ್ತರ “ಇಲ್ಲ, ನಾವಿನ್ನೂ ಈ ಕ್ಷೇತ್ರದಲ್ಲಿ ಸಾಧಿಸುವುದು ತುಂಬ ಇದೆ”.
ವಿಜ್ಞಾನ, ತಂತ್ರಜ್ಞಾನಗಳು ಪ್ರಪಂಚವನ್ನು ಆಳುತ್ತಿರುವ ಈ ಕಾಲದಲ್ಲಿ ಕನ್ನಡದ ಜನರು, ಮುಖ್ಯವಾಗಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಈ ಕಾಲದ ಕನ್ನಡ ನಾಡಿನ ಲಯವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ಈಗ ಆಗುತ್ತಿರುವ ಹೊಸ ಹೊಸ ಸಂಶೋಧನೆಗಳನ್ನು ಸರಳಗನ್ನಡದಲ್ಲಿ ಅವರಿಗೆ ಪರಿಚಯಿಸಬೇಕು. ವಿಜ್ಞಾನ, ತಂತ್ರಜ್ಞಾನಗಳ ಕ್ಷೇತ್ರದ ಲೇಖಕರ ಜವಾಬ್ದಾರಿ ಈ ನಿಟ್ಟಿನಲ್ಲಿ ತುಂಬ ದೊಡ್ಡದು. ಆಚಾರ್ಯ ಬಿ.ಎಂ.ಶ್ರೀ.ಯವರು ಧಾರವಾಡದಲ್ಲಿ 1911ರಲ್ಲಿ “ಕನ್ನಡ ಮಾತುತಲೆಯೆತ್ತುವ ಬಗೆ” ಎಂಬ ಭಾಷಣವನ್ನು ಮಾಡಿ ಕನ್ನಡದ ಹೊಸಹುಟ್ಟಿಗೆ ಕಾರಣರಾದರೋ, ಹಾಗೆಯೇ, ಈ 0 ಮತ್ತು 1ರ ಜೋಡಿಯ ಇಂದಿನ ಅಂಕರೂಪೀ ಅಂತರ್ಜಾಲ ಪ್ರಪಂಚದ ನಾಡಿಮಿಡಿತವನ್ನು ಹಿಡಿದು ತನ್ನ ಮೂಲಕ ವ್ಯಕ್ತ ಪಡಿಸುವ ಸರ್ವಾಂಗ ಸಾಮರ್ಥ್ಯವು ಕನ್ನಡಕ್ಕೆ ಬರಬೇಕು. ಅಂದರೆ ಕನ್ನಡದಲ್ಲಿ ಈಗ ಸ್ವಲ್ಪ ಮಟ್ಟಿಗೆ ಆಗಿರುವ `ಡಿಜಿಟಲ್ ನವೋದಯ’ದ ಪ್ರಕ್ರಿಯೆಯು ನಿರಂತರವಾಗಿ ಮತ್ತು ಇನ್ನಷ್ಟು ಶಕ್ತಿ ತುಂಬಿಕೊಂಡು ಮುಂದುವರಿಯಬೇಕು. ಕವಿ ಅಡಿಗರ ಮಾತುಗಳಲ್ಲಿ ಹೇಳುವುದಾದರೆ “ಆಗಿರುವುದು ಇಷ್ಟು, ಆಗಬೇಕಾದುದರ ರವಷ್ಟು”.

ಈವರೆಗಿನ ಮಾತುಗಳ ತಾತ್ಪರ್ಯ ಅಂದರೆ, ಕನ್ನಡದ ಡಿಜಿಟಲ್ ನವೋದಯದ ಗಮನೀಯ ಮುನ್ನಡೆಗೆ ಅತ್ಯಗತ್ಯವಾದ ಒಂದು ಕ್ಷೇತ್ರವೆಂದರೆ ಅದು ಕನ್ನಡದ ವಿಜ್ಞಾನ ಬರವಣಿಗೆಯ ಕ್ಷೇತ್ರ ಎಂಬುದು. ಈ ಕ್ಷೇತ್ರವನ್ನು ನಾವು ಬಲಪಡಿಸಿದೆವೆಂದರೆ ಕನ್ನಡದ ಜನರನ್ನು ಕಾಲೋಚಿತಗೊಳಿಸಿದಂತೆ, ನಮ್ಮ ಬದುಕನ್ನು ಇಂದೀಕರಿಸಿದಂತೆ.
ನೇರವಾಗಿ ಈಗ ಕನ್ನಡ ವಿಜ್ಞಾನ ಬರವಣಿಗೆಯ ವಿಷಯಕ್ಕೆ ಬರೋಣ. ನಮಗೆ ವಿಜ್ಞಾನವನ್ನು ಸರಾಗ ಹಾಗೂ ಸುಲಭಕನ್ನಡ ಪದಗಳಲ್ಲಿ ಬರೆಯಲು ಸಾಧ್ಯ ಆಗುತ್ತಿದೆಯೆ? ಹಾಗೆ ಬರೆಯಲು ಸಾಧ್ಯವಾಗುವಂತೆ ಕನ್ನಡವನ್ನು ನಾವು ಸಜ್ಜುಗೊಳಿಸಿದ್ದೇವೆಯೆ? ವಿಜ್ಞಾನಕನ್ನಡದ ಆದಿ ಲೇಖಕರಲ್ಲೊಬ್ಬರಾದ ಕೆ.ಶಿವರಾಮ ಕಾರಂತರಿಂದ ಹಿಡಿದು ಈಚೆಗೆ ನಮ್ಮನ್ನು ಅಗಲಿದ ಸುಧೀಂದ್ರ ಹಾಲ್ದೊಡ್ಡೇರಿಯವರವರೆಗೆ ಹಲವಾರು ಜನರು ಈ ಕ್ಷೇತ್ರದಲ್ಲಿ ಬರೆದಿದ್ದಾರೆ, ಬರೆಯುತ್ತಿದ್ದಾರೆ. ಆರ್.ಎಲ್.ನರಸಿಂಹಯ್ಯ, ಬಿ.ಜಿ.ಎಲ್.ಸ್ವಾಮಿ, ಜೆ.ಆರ್.ಲಕ್ಷ್ಮಣರಾವ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಟಿ.ಆರ್.ಅನಂತರಾಮು, ನಾಗೇಶ್ ಹೆಗಡೆ, ಪವನಜ, ವೈ.ಸಿ.ಕಮಲ. ಸುಮಂಗಲಾ ಮುಮ್ಮಿಗಟ್ಟಿ, ಬಿ.ಎಸ್.ಶೈಲಜ ……….. ಹೀಗೆ ಹಲವಾರು ಲೇಖಕ-ಲೇಖಕಿಯರು ತಮ್ಮ ಕೊಡುಗೆಗಳನ್ನು ಕೊಟ್ಟಿದ್ದಾರೆ, ಕೊಡುತ್ತಿದ್ದಾರೆ. ಆದರೂ ಕರ್ನಾಟಕದ ಜನಮಾನಸದಲ್ಲಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ವಿಜ್ಞಾನದ ಅಧ್ಯಾಪಕರಲ್ಲಿ ಮತ್ತು ಸಂಶೋಧಕರಲ್ಲಿ `ವಿಜ್ಞಾನವೆಂದರೆ ಇಂಗ್ಲಿಷಿನಲ್ಲಿ ಇರುವಂಥದ್ದು, ಇರಬೇಕಾದದ್ದುʼ ಎಂಬ ಗಾಢ ಭಾವನೆ ಬೇರೂರಿದೆ. ಈ ಭಾವನೆ-ಚಿಂತನೆಯ ತಿರುಳು ಎಂದರೆ “ತೀರಾ ಗಂಭೀರ ವಿಜ್ಞಾನ ವಿಚಾರಗಳನ್ನು ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಲೇಖನಗಳನ್ನು ಕನ್ನಡದಲ್ಲಿ ಬರೆಯಲಾಗದು, ಹಾಗೆ ಬರೆಯಲು ಸೂಕ್ತ ಪದಗಳೇ ಸಿಗುವುದಿಲ್ಲ” ಎಂಬ ಅನಿಸಿಕೆ ಅಥವಾ ಪೂರ್ವಗ್ರಹ. ಇದು ವಿಜ್ಞಾನಕ್ಷೇತ್ರದ ಹಲವು ಅಧ್ಯಾಪಕರು ಮತ್ತು ವಿಜ್ಞಾನಿಗಳಲ್ಲಿದೆ. `ಕನ್ನಡದಲ್ಲಿ ವಿಜ್ಞಾನವನ್ನು ಬರೆಯಹೊರಟರೆ ಭಾಷೆಯೇ ಒಂದು ದೊಡ್ಡ ತೊಡಕಾಗುತ್ತದೆ. ಇನ್ನು ವಿಷಯವನ್ನು ಏನು ಅರಿಯುವುದು!?’ಎಂಬ ಭಾವನೆ ಇನ್ನು ಕೆಲವರಲ್ಲಿದೆ. ಇಂತಹ ಭಾವನೆಗಳಿಗೆ ಕಾರಣಗಳೇನು ಮತ್ತು ಇವುಗಳನ್ನು ಹೋಗಲಾಡಿಸುವುದು ಹೇಗೆ ಎಂಬುದನ್ನು ನಾವು ಯೋಚಿಸಬೇಕು.
ಕೇಳಿ ಅರ್ಥಮಾಡಿಕೊಳ್ಳಲು ಮತ್ತು ಬರೆಯಲು ವಿಪರೀತ ಕಷ್ಟ ಎನ್ನಿಸುವ ಕೆಲವು ಸಂಸ್ಕೃತಪದಗಳನ್ನು ಈವರೆಗೆ ಬಳಸಿ ಬಳಸಿ ವಿಜ್ಞಾನ ಸಂವಹನವು ಕನ್ನಡದಲ್ಲಿ ತುಂಬ ಕ್ಲಿಷ್ಟ, ಕಷ್ಟಕರ ಎಂಬ ಭಾವನೆ ಅನೇಕರಲ್ಲಿ ಬಂದುಬಿಟ್ಟಿದೆ. ಉದಾಹರಣೆಗೆ ತುಂಬ ಪ್ರಸಿದ್ಧವಾದ ಒಂದು ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿ ಬಳಸಿರುವ ಕೆಲವು ಪದಗಳನ್ನು ನೋಡೋಣ.
ಅಡ್‌ಹೆಷನ್ – ಸಂಲಗ್ನತ್ವ
ಅಡಿಯಾಥರ್‌ಮಾನಸ್–ಅನುಷ್ಣವಾದಪ್ರಾಪಕ
ಆಸ್ಟ್ರೋಫಿಸಿಕ್ಸ್ –ಖೇಟ ಭೌತಶಾಸ್ತ್ರ
ಕ್ಯಾಪಿಲರಿ – ಲೋಮನಾಳದ ಕೇಶಾಕರ್ಷಣ
ಡಕ್ಟಿಲಿಟಿ–ತಂತುರೂಪಕ್ಷಮತ್ವ, ತಂತುಭವನ ಶೀಲತ್ವ
ಎಮಿಸಿವ್ ಪವರ್ – ಬಹಿಃಕ್ಷೇಪಕ ಶಕ್ತಿ
ಇಂತಹ ಪದಗಳನ್ನು ಸರಳಗನ್ನಡ ಪದಗಳಿಂದ ಸ್ಥಳಪಲ್ಲಟಿಸುವ ಶ್ರದ್ಧಾವಂತ ಪ್ರಯತ್ನಗಳು ಸಹ ನಡೆದಿವೆ.
ಇದಕ್ಕಾಗಿ ಶ್ರಮಿಸಿದ ಪೂರ್ವಸೂರಿಗಳ ದುಡಿಮೆಯನ್ನು ನಾವು ಅಲ್ಲಗಳೆಯಲಾಗದು. ಈ ವಿಷಯದಲ್ಲಿ ಅವರುಗಳದ್ದು ಮೊದಲ ಹೆಜ್ಜೆ. ಇದರ ಫಲವಾಗಿ ವಿವಿಧ ವಿಜ್ಞಾನ ನಿಘಂಟುಗಳು ಪ್ರಕಟವಾಗಿವೆ. ಅವುಗಳಲ್ಲಿ ಗಮನಾರ್ಹವಾದ ಒಂದು ನಿಘಂಟಿದೆ. ಅದು ನವಕರ್ನಾಟಕ ಪ್ರಕಾಶನದ “ನವ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಪದಸಂಪದ”(ಸಂಪಾದಕರು – ಗೋಪಾಲಕೃಷ್ಣ ರಾವ್ ಕೆ.ಎಲ್., ಸಿ.ಆರ್. ಕೃಷ್ಣರಾವ್ ಮತ್ತು ಟಿ.ಆರ್.ಅನಂತರಾಮು, ಪ್ರಕಟಣೆಯ ವರ್ಷ–2012 ). ಇದು ಈ ದಿಸೆಯಲ್ಲಿನ ಒಂದು ಮಹತ್ವಾಕಾಂಕ್ಷೀ ಪ್ರಯತ್ನವಾಗಿದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 1990ರಲ್ಲಿ ಮೊದಲನೆಯ ಆವೃತ್ತಿಯಾಗಿ ಪ್ರಕಟಿಸಿದ, ಅನೇಕ ಮುದ್ರಣಗಳನ್ನು ಕಂಡಿರುವ `ಇಂಗ್ಲಿಷ್ ಕನ್ನಡ ವಿಜ್ಞಾನ ಶಬ್ದಕೋಶ’( ಸಂಪಾದಕರು– ಜೆ.ಆರ್. ಲಕ್ಷ್ಮಣರಾವ್ ಹಾಗೂ ಆಡ್ಯನಡ್ಕ ಕೃಷ್ಣಭಟ್ ) ಕೃತಿ ಕೂಡ ಗಮನಯೋಗ್ಯವಾದದ್ದು.
*****
ಈವರೆಗಿನ ವಿಜ್ಞಾನ ಬರಹಗಾರರು ಇಂಗ್ಲಿಷ್ ಪದಗಳಿಗೆ ಕನ್ನಡ ಸಂವಾದಿಗಳಾಗಿ ಗುರುತಿಸಿಕೊಂಡಿರುವ ಪದಗಳಲ್ಲಿ ಕೆಲವಾರು ಪದಗಳು ಸದಾಕಾಲಕ್ಕೂ ನಿಲ್ಲುವಂಥವು. ಆದರೆ ಕೇಳಿ ಅರ್ಥಮಾಡಿಕೊಳ್ಳಲು ಹಾಗೂ ಬಳಸಲು ತೀರಾ ಕಷ್ಟಕರ ಅನ್ನಿಸುವ ಪದಗಳನ್ನು ನಾವು ಕೆಲವು ಸುಲಭ ಪದಗಳಿಂದ ಸ್ಥಳ ಪಲ್ಲಟಿಸಬೇಕಿದೆ.
ಇದಕ್ಕೆ ಉತ್ತಮವಾದ ಒಂದು ಉದಾಹರಣೆ ಎಂದರೆ 13-12-2020ರಂದು ಪ್ರಜಾವಾಣಿಯ ಭಾನುವಾರದ ಪುರವಣಿಯಲ್ಲಿ ಪ್ರಶಾಂತ್ ಸೊರಟೂರ್ ಅವರು ಬರೆದ ಒಂದು ಲೇಖನ – “ಕನ್ನಡದ ಕೈಗೆಟಕುವುದೇ ತಾಂತ್ರಿಕ ಶಿಕ್ಷಣ?’’. ಇದರಲ್ಲಿ ಅವರು ತಾಂತ್ರಿಕ ಶಿಕ್ಷಣವನ್ನು ಸಜ್ಜುಗೊಳಿಸುವ ಕುರಿತು ಕೆಲವು ಉತ್ತಮವಾದ ಸಲಹೆಗಳನ್ನು ನೀಡಿದ್ದಾರೆ. ಅವರು ಬಳಸುವ ಕೆಲವು ಸರಳಗನ್ನಡ ಪದಗಳು ಗಮನ ಸೆಳೆಯುತ್ತವೆ. ಸಂಕಲನ, ವ್ಯವಕಲನ ಎಂಬ ಪದಗಳನ್ನು ಕೂಡುವುದು, ಕಳೆಯುವುದು ಎಂದು ಸರಳವಾಗಿ ಏಕೆ ಬರೆಯಬಾರದು? ಎಂದು ಕೇಳುವ ಲೇಖಕರು `ಹೌದಲ್ಲವ?’ ಅನ್ನಿಸುವಂತೆ ಮಾಡುತ್ತಾರೆ.
ಚಂಪೂಕಾವ್ಯಗಳ ಅಂದರೆ ಪಂಪ ರನ್ನರ ಕಾಲದಲ್ಲಿ ಸಂಸ್ಕೃತ ಭೂಯಿಷ್ಠವಾಗಿದ್ದ ಕಾವ್ಯಭಾಷೆಯನ್ನು ವಚನಕಾರರು ಮತ್ತು ಹರಿದಾಸರು ಸರಳಗೊಳಿಸಿದಂತೆ ವಿಜ್ಞಾನ ಕನ್ನಡವನ್ನು ಸರಳಗೊಳಿಸುವ ಅಗತ್ಯವು ಇಂದು ಬಹಳವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020ರ ಪ್ರಕಾರ ತಾಂತ್ರಿಕ ಶಿಕ್ಷಣಕ್ಕಾಗಿ ಪ್ರಾದೇಶಿಕ ಭಾಷೆಗಳನ್ನು ಸಜ್ಜುಗೊಳಿಸಲು ಕೇಂದ್ರ ಸರ್ಕಾರವು ಕರೆಕೊಟ್ಟಿರುವ ಈ ಸಂದರ್ಭದಲ್ಲಿ ಬಹಳ ಮುಖ್ಯವಾಗಿ ಶೈಕ್ಷಣಿಕ ಉದ್ದೇಶಗಳಿಗೆ ವಿಜ್ಞಾನ ಕನ್ನಡವನ್ನು ನಾವು ಸಜ್ಜುಗೊಳಿಸಬೇಕಿದೆ.
ವಿಜ್ಞಾನ ಬರವಣಿಗೆಯಲ್ಲಿ ನಾವು ಅತ್ಯಂತ ಹೆಚ್ಚು ಗಮನ ನೀಡಬೇಕಾಗಿರುವುದು ಉನ್ನತ ಶಿಕ್ಷಣದ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಬಳಸಬೇಕಾದ ಕನ್ನಡದ ಬಗ್ಗೆ. ಈ ದಿಸೆಯಲ್ಲಿ ಮೈಸೂರು ವಿಶ್ವವಿದ್ಯಾಲಯವು 1985ರಲ್ಲಿ ಪ್ರಕಟಿಸಿದ `ಭೌತವಿಜ್ಞಾನ ಪರಿಚಯ’ – ಪದವಿ ತರಗತಿಯ ಕನ್ನಡ ಪಠ್ಯಪುಸ್ತಕದಂತಹ ಕೃತಿಗಳು ಮಾರ್ಗದರ್ಶಿಯಾಗಿವೆ – ಸಂಪಾದಕರು; ಪ್ರೊ.ಎಸ್.ಆರ್.ಶಂಕರನಾರಾಯಣ ಮತ್ತು ಬಳಗ. ಈ ಹೊತ್ತಿನಲ್ಲಿ ಹೆಚ್ಚಬೇಕಾದ ಪ್ರಯತ್ನಗಳಿಗೆ ಇವು ದಿಕ್ಸೂಚಿಯಿದ್ದಂತೆ.
ಇಲ್ಲಿ ನಾವು ಕನ್ನಡದ ಜಾಯಮಾನಕ್ಕೆ ಒಗ್ಗುವ ಸರಳ ಪದಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕನ್ನಡ ಅಧ್ಯಾಪಕರು ಮತ್ತು ಕನ್ನಡಿಗರಾದ ವಿಜ್ಞಾನ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಈ ವಿಷಯದಲ್ಲಿ ಮಾರ್ಗದರ್ಶನ ಮಾಡಬೇಕಿದೆ. `ವಿಜ್ಞಾನ ಬರವಣಿಗೆ– ಕೆಲವು ಸಮಸ್ಯೆಗಳು’ ಎಂಬ (ಕ.ರಾ.ವಿ.ಪ.ದಿಂದ ಪ್ರಕಟಿತ) ಕೃತಿಯಲ್ಲಿ, ಜೆ.ಆರ್. ಲಕ್ಷ್ಮಣರಾವ್‌ಅವರು ನೀಡಿರುವ ಕನ್ನಡ ವಿಜ್ಞಾನ ಪದರಚನೆಯ ಪ್ರಯತ್ನಗಳು ಅನುಸರಣೀಯವಾಗಿವೆ.
ಈ ದಿಸೆಯಲ್ಲಿ ಆಗಬೇಕಾದ ಇನ್ನಷ್ಟು ಕೆಲಸಗಳು
1. ಈಗಾಗಲೇ ಇರುವಂತಹ ಇಂಗ್ಲಿಷ್ ಕನ್ನಡ ವಿಜ್ಞಾನ ನಿಘಂಟುಗಳ ಸೂಕ್ಷ್ಮ ಮತ್ತು ವಿಮರ್ಶಾತ್ಮಕ ಅವಲೋಕನ, ಈ ಅವಲೋಕನವು ಮುಂದಿನ ಇಂತಹ ನಿಘಂಟುಗಳು ಮತ್ತು ಪದಕೋಶಗಳ ರಚನೆಯಲ್ಲಿ, ಸರಾಗ ಸಂವಹನದ ದೃಷ್ಟಿಯಿಂದ ದಾರಿದೀಪ ಮತ್ತು ಎಚ್ಚರಿಕೆಯ ಗಂಟೆ ಎರಡೂ ಆಗಬೇಕು.
2. ಎಲೆಕ್ಟ್ರಾನ್, ಪ್ರೋಟಾನ್, ರೆಸಿಸ್ಟರ್, ಅಯಾನ್ ಮುಂತಾದ ಇಂಗ್ಲಿಷಿನ ಅತಿಪರಿಚಿತ, ಜನಪ್ರಿಯ ಪಾರಿಭಾಷಿಕ ಪದಗಳನ್ನು ಕನ್ನಡದ ಉಕಾರದೊಂದಿಗೆ ಬಳಸಬಹುದು. ಅವನ್ನು ಒದ್ದಾಡಿ ಗುದ್ದಾಡಿ ಕನ್ನಡೀಕರಿಸುವ ಅಗತ್ಯವಿಲ್ಲ. ಅಂದರೆ ಇವನ್ನು ಎಲೆಕ್ಟ್ರಾನು, ಪ್ರೋಟಾನು, ರೆಸಿಸ್ಟರು ಎಂದು ಉಕಾರಾಂತ್ಯ ಪದಗಳಾಗಿ ಬಳಸಬಹುದು.
3. ಪದಗಳನ್ನು ಬಳಸುವಾಗ ಮಡಿವಂತಿಕೆ ಬೇಕಿಲ್ಲ. ಸಂವಹನವು ಸರಾಗವಾಗಿ, ಸುಲಭವಾಗಿ, ಸುಗಮವಾಗಿ ಆಗುತ್ತದೆ ಎನ್ನುವುದಾದರೆ ಆಡುನುಡಿಗಳನ್ನು ಹಾಗೂ ತೀರಾ ಔಪಚಾರಿಕ ಎನ್ನಿಸದ ಪದಗಳನ್ನು ಸಹ ಬಳಸಬಹುದು. ಉದಾಹರಣೆಗೆ ರ‍್ಯಾಂಡಮ್–ಚೆಲ್ಲಾಪಿಲ್ಲಿ, ಕೊಲಿಷನ್–ಢಿಕ್ಕಿ, ಆಂಪ್ಲಿಟ್ಯೂಡ್- ಅಲೆಯೆತ್ತರ, ಶಾರ್ಟ್–ಗಿಡ್ಡ, ಬ್ಲ್ಯಾಕ್ ಬಾಡಿ–ಕಪ್ಪು ವಸ್ತು, ಕ್ಲೋಸ್ ಪ್ಯಾಕಿಂಗ್–ಒತ್ತೊತ್ತಾದ ಜೋಡಣೆ ….. ಹೀಗೆ.
4. ಕೆಲವು ಸಲ ಇಂಗ್ಲಿಷ್ ಮತ್ತು ಕನ್ನಡ ಪದಗಳನ್ನು ಸೇರಿಸಿ ಕನ್ನಡದ್ದೇ ಎಂಬ ಭಾವನೆ ಬರುವಂತೆ ಹೊಸ ಪದಗಳನ್ನು ಕಟ್ಟಿಕೊಳ್ಳಬಹುದು. ಉದಾಹರಣೆಗೆ ಆಲ್ಫಾಕಣ(ಆಲ್ಫಾ ಪಾರ್ಟಿಕಲ್), ಕ್ಯಾಮೆರಾಕಿಂಡಿ(ಅಪೆರ್‌ಚರ್)…… ಇಂಥವು.
5. ಭೌತ ವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಜೀವ ವಿಜ್ಞಾನ, ಸಂಖ್ಯಾ ವಿಜ್ಞಾನ, ಜೀವರಸಾಯನ ವಿಜ್ಞಾನ …… ಮುಂತಾದ ಪ್ರತ್ಯೇಕ ವಿಜ್ಞಾನ ಶಾಖೆಗಳಿಗೆ ಪ್ರತ್ಯೇಕ ನಿಘಂಟು- ಶಬ್ದಕೋಶಗಳನ್ನು ರಚಿಸಿಕೊಳ್ಳುವುದು ಅಗತ್ಯವಾದ ಹೆಜ್ಜೆ. ಆಗ ಈ ಜ್ಞಾನಶಿಸ್ತುಗಳಲ್ಲಿ ಲೇಖನಗಳನ್ನು, ಪಠ್ಯಪುಸ್ತಕ, ಸಂಶೋಧನಾ ಕೃತಿಗಳನ್ನು ಬರೆಯುವವರಿಗೆ ತಕ್ಷಣ ಪದಗಳು ಸಿಕ್ಕಿ ಅವರ ಕೆಲಸ ಸುಗಮವಾಗುತ್ತದೆ.
6. ಕನ್ನಡ ವಿಜ್ಞಾನ ಬರವಣಿಗೆಯಲ್ಲಿ ಯಾವ ಆಂಗ್ಲ ಪದಕ್ಕೆ ಯಾವ ಕನ್ನಡ ಪದವನ್ನು ಸಂವಾದಿಯಾಗಿ ಬಳಸಬೇಕು ಎಂಬುದರ ಬಗ್ಗೆ ಕನ್ನಡದ ವಿಜ್ಞಾನ ಲೇಖಕ ಸಮುದಾಯದಲ್ಲಿ ಒಮ್ಮತವು ಮೂಡುವುದು ತುಂಬ ಮುಖ್ಯ. ಉದಾಹರಣೆಗೆ `ಬ್ಲ್ಯಾಕ್ ಹೋಲ್’ ಎಂಬ ಪದವನ್ನು ತೆಗೆದುಕೊಳ್ಳೋಣ. ಇದಕ್ಕೆ `ಕೃಷ್ಣ ವಿವರ’, `ಕಪ್ಪುರಂಧ್ರ’, `ಕಪ್ಪು ಕುಳಿ’ಎಂಬೆಲ್ಲ ಪದಗಳನ್ನು ಬೇರೆ ಬೇರೆ ಲೇಖಕರು ಬಳಸುತ್ತಾರೆ. ಇವುಗಳಲ್ಲಿ `ಕಪ್ಪು ಕುಳಿ’ ಎಂಬ ಪದ ಬಳಕೆಗೆ ಸರಳವಾಗಿದೆ ಅಲ್ಲವೇ? ಕನ್ನಡದ ವಿಜ್ಞಾನ ಬರವಣಿಗೆಯಲ್ಲಿನ ಸಂವಾದಿ ಪದಗಳ ಅಸಮರೂಪವು ಉಂಟು ಮಾಡುವ ಗೊಂದಲಗಳು ಕಡಿಮೆಯಾಗುತ್ತಾ ಹೋದಂತೆ ಸಂವಹನ ಹೆಚ್ಚು ಹೆಚ್ಚು ಸರಾಗವಾಗುತ್ತದೆ.
*****
ವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಬದಲಾಗುವ ಮತ್ತು ಹೊಸ ಹೊಸ ಪದಗಳನ್ನು ನಿರ್ಮಾಣ ಮಾಡುತ್ತಲೇ ಇರುವ ಗಣಕ ವಿಜ್ಞಾನ ಕ್ಷೇತ್ರದಲ್ಲಿನ ಹೊಸ ಹೊಸ ಬೆಳವಣಿಗೆಗಳನ್ನು ಕನ್ನಡದಲ್ಲಿತರುವ ಪ್ರಯತ್ನ ತುಂಬ ನಿಯಮಿತವಾಗಿ ಆಗಬೇಕಿದೆ. ಇದರಲ್ಲಿ ಕನ್ನಡ ಗಣಕ ಪರಿಷತ್ತು ಮಹತ್ವದ ಕೊಡುಗೆಗಳನ್ನು ನೀಡಬಹುದು. `ಈ ತಿಂಗಳ ಹೊಸ ಗಣಕ ವಿಜ್ಞಾನ ಪದಗಳು’ ಎಂಬ ಲೇಖನ ಸರಣಿಯ ನಿಯಮಿತ ಪ್ರಕಟಣೆಯು ಇಲ್ಲಿ ಸಹಾಯ ಮಾಡುತ್ತದೆ.

ಮಾಹಿತಿ ಯುಗದ ಯುವ ಸಮುದಾಯದ ಆಸಕ್ತರು ವಿಜ್ಞಾನ ಬರವಣಿಗೆಯಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಕೊಂಡು ಈ ಕ್ಷೇತ್ರವನ್ನು ಬಲಗೊಳಿಸಬೇಕಿದೆ. `ಬರಹ’ ಎಂಬ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ ಶ್ರೀ.ಶೇಷಾದ್ರಿ ವಾಸು ಮತ್ತು ಕನ್ನಡದ ವಿಶಾಲ ಸಮುದಾಯದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಜರ್ಮನಿ ದೇಶದ `ಫಾಲಿಂಗ್ ವಾಲ್ಸ್ ಅವಾರ್ಡ್’ಬಹುಮಾನಕ್ಕಾಗಿ ನೂರರೊಳಗಿನ ನಾಮನಿರ್ದೇಶನವನ್ನು ಪಡೆದ ಶ್ರೀ.ಟಿ.ಜಿ.ಶ್ರೀನಿಧಿ ಮತ್ತು ಶ್ರೀ.ಕೊಳ್ಳೇಗಾಲ ಶರ್ಮ ಅವರಂತಹ ಆಸಕ್ತರ ಶ್ರದ್ಧಾವಂತ ಕೊಡುಗೆಯು ಗಮನೀಯವಾದದ್ದು. ಕಳೆದ ಐವತ್ತು ವರ್ಷಗಳಿಂದ ಕನ್ನಡ ವಿಜ್ಞಾನ ಬರವಣಿಗೆಯನ್ನು ಒಂದು ತಪಸ್ಸಿನಂತೆ ಮಾಡಿಕೊಂಡು ಬಂದು ವಿಜ್ಞಾನವಿಷಯಗಳನ್ನು ಕರಿತು ಬಹಳಷ್ಟು ಕೃತಿಗಳು ಮತ್ತು ಸಾವಿರಾರು ಲೇಖನಗಳನ್ನು ಬರೆದಿರುವ ಡಾ.ಟಿ.ಆರ್.ಅನಂತರಾಮು ಅವರ ಸಾಧನೆಯು ಆದರಣೀಯವಾಗಿದೆ. ಇಂತಹವರ ಕೆಲಸವು ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿ ನೀಡುವಂಥದ್ದು.
ಕನ್ನಡದ ಡಿಜಿಟಲ್ ನವೋದಯವು ಬೆಳೆದು, ಕನ್ನಡದ ಹೆಮ್ಮೆಯು ಹೆಮ್ಮರವಾಗಲಿ ಎಂದು ಹಾರೈಸೋಣ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
