ಯಾರು ಏನೇ ಅಂದರೂ ಯಾರು ಏನೇ ತಿಳಿದುಕೊಂಡರು ನಾವು ನಂಬಿರುವ ಪರಿಶುದ್ಧ ಮೌಲ್ಯಗಳೊಂದಿಗೆ ಜೀವಿಸಿದರೆ ಸಕಲವೂ ಸಾಧ್ಯ ಎಂಬುದನ್ನು ಮಹಾತ್ಮರು ತಿಳಿಸಿದ್ದಾರೆ. ಮೌಲ್ಯಗಳು ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಕುಸಿಯುತ್ತಿವೆ. ಅದನ್ನು ಹೇಗೆ ಕಾಪಾಡಿಕೊಳ್ಳಬೇಕು, ಸುಧಾರಿಸಿಕೊಳ್ಳಬೇಕು ಹೇಗೆ ಪುನರ್ ಸ್ಥಾಪಿಸಿಕೊಳ್ಳಬೇಕೆಂಬ ಗೊಂದಲದಲ್ಲಿದ್ದೇವೆ. ಮೌಲ್ಯಗಳು ಇಂದು ಬರಿ ಬಾಯಿ ಮಾತಾಗಿವೆ ಹೊರತು ಪ್ರಾಯೋಗಿಕವಾಗಿ ಮೌನವಾಗಿವೆ ಎಂಬ ಅಳಲು ಕವಿತೆಯದು. ಹಾಗಾಗಿ ಏಸು ಆತ್ಮಸಾಕ್ಷಿಯೇ ನಿಮ್ಮನ್ನು ಮೌಲ್ಯವಂತರನ್ನಾಗಿ ಮಾಡುವ ಹಂಬಲದಲ್ಲಿದೆ ಎಂದು ಸೂಚಿಸುತ್ತಾರೆ.
ಕನ್ನಡ ಕಾವ್ಯದಲ್ಲಿ ಯೇಸುವಿನ ಕುರಿತ ಬರೆಯಲ್ಪಟ್ಟ ಕವಿತೆಗಳ ಕುರಿತು ಡಾ. ರಾಜೇಂದ್ರಕುಮಾರ್ ಮುದ್ನಾಳ್ ಬರಹ
ಜಿ.ಎಸ್ ಶಿವರುದ್ರಪ್ಪನವರು ‘ಕ್ರಿಸ್ಮಸ್’ ಕವಿತೆಯಲ್ಲಿ “ಕ್ರಿಸ್ಮಸ್ ಬಂದಿಹದು ಕ್ರಿಸ್ತನೆದೆಯಂದದಲಿ
ಶೋಭಿಸಿದ ತಿಳಿ ನೀಲಿ ಆಕಾಶ,
ಬೆಳ್ಳಕ್ಕಿ ಮಾಲೆಗಳು ತೇಲುತಿವೆ ದೇವದೂತರ ತೆರೆದಿ” ಎಂದು ನುಡಿಯುತ್ತಾರೆ.
ಯೇಸು ಭೂಮಿಗೆ ಬಂದ ದಿನವನ್ನು ಕ್ರಿಸ್ಮಸ್ ಎಂದು ಆಚರಿಸುತ್ತೇವೆ. ಕರುಣೆಯ ಕಡಲಾಗಿರುವ ಯೇಸುವಿನ ಮನಸ್ಸು ತಿಳಿ ನೀಲ ಆಕಾಶದಂತೆ ಶುಭ್ರವಂತೆ, ಆತನ ದೇವದೂತರು ಬೆಳ್ಳಕ್ಕಿಯ ಮಾಲೆಯಂತೆ ಸಂಚರಿಸುತ್ತಿದ್ದಾರೆ. ಹಾಗಾಗಿ ಕುವೆಂಪು ಬಾನಿನಲ್ಲಿ ಹಾರಾಡುವ ಹಕ್ಕಿಗಳನ್ನು ಕುರಿತು ‘ದೇವರು ರುಜು ಮಾಡಿದನು’ ಎಂಬ ಕವಿತೆಯಲ್ಲಿ ಸೊಗಸಾಗಿ ವರ್ಣಿಸುತ್ತಾರೆ. ಪ್ರಕೃತಿಯ ಪ್ರತಿಯೊಂದು ವಸ್ತುವು ಕೂಡ ವಿಶಿಷ್ಟವಾಗಿದ್ದು, ಸುವ್ಯವಸ್ಥಿತವಾಗಿ ಸಂಚರಿಸುತ್ತಿದೆ ಎಂಬ
ಕವಿ ಕಲ್ಪನೆ ಮಹೋನ್ನತವಾದದ್ದು. ಕನ್ನಡ ಕಾವ್ಯ ಪರಂಪರೆ ಯೇಸು ಕ್ರಿಸ್ತನ ಜನನವನ್ನು ಹೇಗೆ ಅರ್ಥೈಸಿಕೊಂಡಿದೆ ಎಂಬುದನ್ನು ಕವಿತೆಗಳ ಮೂಲಕ ಹಾಗೂ ಸತ್ಯವೇದದ ವಾಕ್ಯಗಳಲ್ಲಿ ಹೇಗೆ ಅಭಿವ್ಯಕ್ತಗೊಂಡಿದೆ ಎಂಬುದನ್ನು ಗ್ರಹಿಸೋಣ.
ಜಗತ್ತಿನ ಇತಿಹಾಸದಲ್ಲಿ ಅನೇಕ ಮಹಾಪುರುಷರು ದಾರ್ಶನಿಕರು ಜನ್ಮ ತಾಳಿದ್ದಾರೆ. ತಮ್ಮದೇ ಆದ ಬೋಧನೆಗಳನ್ನು ನೀಡಿದ್ದಾರೆ. ನುಡಿದಂತೆ ನಡೆದವರು ಜಗತ್ತಿನ ಸಾಕ್ಷಾತ್ಕಾರಕ್ಕೆ ಸಾಕ್ಷಿಯಾಗಿದ್ದಾರೆ. ಅಂಥವರಲ್ಲಿ ಏಸುಕ್ರಿಸ್ತನ ಬೋಧನೆಗಳು ಜಗತ್ತಿನ ಜನರಿಗೆ ಶಾಂತಿ ಸಮಾಧಾನವನ್ನು ನೀಡುತ್ತಿರುವುದರಿಂದ ಜನರು ಯೇಸುವನ್ನು ಸಮಾಧಾನದ ಮಹಾಪ್ರಭುವಾಗಿ ಶಾಂತಿ ಸ್ವರೂಪದ ದೇವರಾಗಿ, ಕರುಣೆಯ ಸಾಕಾರ ಮೂರ್ತಿಯಾಗಿ ಸ್ವೀಕರಿಸಿದ್ದಾರೆ. ಅನೇಕ ಮಹಾಪುರುಷರ ಇತಿಹಾಸವನ್ನು ಅವಲೋಕಿಸಿದಾಗ ಅವರಿಗೆ ಒಂದಿಲ್ಲ ಒಂದು ರೀತಿಯಲ್ಲಿ ಅನೇಕ ಸಂಕಷ್ಟಗಳು ಎದುರಾಗಿವೆ. ಹಾಗೆ ಯೇಸುವಿನ ಜೀವನವು ಹೊರತಲ್ಲ. ಮಹಾಭಾರತದಲ್ಲಿ ಕಂಸ ತನ್ನ ತಂಗಿಯಾದ ದೇವಕಿಗೆ ಹುಟ್ಟುವ ಮಕ್ಕಳನ್ನು ಕೊಲ್ಲುತ್ತಿರುತ್ತಾನೆ, ಕಾರಣ ತನ್ನ ತಂಗಿಯ ಮಗನಿಂದಲೇ ಅವನ ಅಂತ್ಯವಾಗುವುದೆಂಬ ಅಂಶ ಅವನಿಗೆ ಗೊತ್ತಿರುತ್ತದೆ. ಹಾಗಾಗಿ ದೇವಕಿಗೆ ಹುಟ್ಟಿದ ಎಲ್ಲಾ ಶಿಶುಗಳನ್ನು ಹತ್ಯೆ ಮಾಡುತ್ತಿರುತ್ತಾನೆ. ಆದರೂ ಕೃಷ್ಣ ಬದುಕುಳಿಯುತ್ತಾನೆ. ಇದೇ ರೀತಿಯ ಘಟನೆ ‘ಸತ್ಯವೇದ’ದಲ್ಲೂ ಬರುವುದು. ಹೆರೋದ್ ಎಂಬ ಅರಸನು ತಾನೇ ರಾಜನಾಗಿರಬೇಕು ಮತ್ತಾರು ತನ್ನ ಅಧಿಕಾರವನ್ನು ಕಿತ್ತುಕೊಳ್ಳಬಾರದೆಂಬ ದುರಾಸೆಯಲ್ಲಿದ್ದನು. ಏಕೆಂದರೆ ಯಹೂದ ಸೀಮೆಯ ಬೇತ್ಲೆ ಹೇಮಿನಲ್ಲಿಯೇ ಅಧಿಪತಿ ಹುಟ್ಟುವನು ಅವನೇ ನಾಡಿನ ಪ್ರಭು ಜನರ ರಕ್ಷಕನಾಗುವನು ಎಂಬ ಮಾತು ಹೆರೋದ್ ಅರಸನಿಗೆ ಸಹಿಸಲಿಕ್ಕೆ ಆಗಲಿಲ್ಲ. ಹಾಗಾಗಿ ಆ ಮಗುವನ್ನು ಕೊಲ್ಲಬೇಕೆಂದು ನಿಶ್ಚಯಿಸಿದನು. ಮೂಡಣ ದೇಶದಲ್ಲಿ ನಕ್ಷತ್ರವನ್ನು ಕಂಡ ಜೋಯಿಸರು ನಕ್ಷತ್ರ ತೋರಿಸಿದ ದಾರಿಯಲ್ಲಿ ಬಂದು ಬೇತ್ಲಹೇಮಿನ ಗೋದಲೆಯಲ್ಲಿದ್ದ ಕೂಸಿಗೆ ಅಡ್ಡ ಬಿದ್ದರು. ಹೆರೋದನಿಗೆ ಈ ವಿಷಯ ತಿಳಿಸದೆ ಮೂಡಣ ದೇಶಕ್ಕೆ ಜ್ಯೋತಿಷ್ಯರು ಹಿಂದಿರುಗಿದರು. ಇದರಿಂದ ಕೋಪಗೊಂಡ ಹೆರೋದ ಬೇತ್ಲೆ ಹೇಮ್ನ ಎಲ್ಲಾ ಎರಡು ವರ್ಷದ ಗಂಡು ಕೂಸುಗಳನ್ನೆಲ್ಲ ಹತ್ಯೆ ಮಾಡಿದನು. ಆದರೆ ಮೇರಿ ಮತ್ತು ಜೋಸೇಫ್ ಮಗುವನ್ನು ಎತ್ತಿಕೊಂಡು ಐಗುಪ್ತ ದೇಶಕ್ಕೆ ಪವಿತ್ರಾತ್ಮನ ಪ್ರೇರಣೆಯಿಂದ ಹೋಗಿದ್ದರು. ಜಗತ್ತನ್ನು ಕಾಪಾಡಲಿಕ್ಕೆ ಬಂದ ಯೇಸುವಿಗೆ ರಕ್ಷಣೆ ಇರಲಿಲ್ಲ, ಕಿಂಚಿತ್ತು ಜಾಗವು ಇರಲಿಲ್ಲ ಗೋದಲೆಯಲ್ಲಿ ಜನಿಸಿದ ಜಗತ್ತಿನ ರಕ್ಷಕ.
ಯೇಸು ಜನಿಸಿದ ಸುದ್ದಿಯನ್ನು ಮೊಟ್ಟಮೊದಲ ಬಾರಿಗೆ ಕುರುಬರಿಗೆ ತಿಳಿಸಬೇಕೆಂದು ದೇವದೂತ ‘ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ ಆತನು ಕರ್ತನಾಗಿರುವ ಕ್ರಿಸ್ತನೇ. ಆತನು ನಿಮಗೆ ಗೊತ್ತಾಗುವುದಕ್ಕೆ ಗುರುತೇನೆಂದರೆ, ಬಟ್ಟೆಯಿಂದ ಸುತ್ತಿರುವ ಒಂದು ಕೂಸು ಗೋದಲೆಯಲ್ಲಿ ಮಲಗಿರುವುದನ್ನು ಕಾಣುವಿರಿ ಎಂದು ಹೇಳಿದನು. ಪಕ್ಕನೆ ಆ ದೂತನ ಸಂಗಡ ಪರಲೋಕ ಸೈನ್ಯದವರ ಒಂದು ದೊಡ್ಡ ಗುಂಪು ಕಾಣಿಸಿಕೊಂಡು ‘ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ದೇವರು ಅವರಿಗೆ ಒಲಿಯುತ್ತಾನೆ’ ಎಂದು ಹೇಳಿದರು. (ಲೂಕ 2 : 11-14). ಇಂದಿನ ಪ್ರತಿಯೊಬ್ಬ ವ್ಯಕ್ತಿಯು ಒತ್ತಡದ ಜೀವನದಲ್ಲಿ ತನ್ನ ಆಯುಷ್ಯವನ್ನು ಕಳೆಯುತ್ತಿದ್ದಾನೆ. ಪ್ರೀತಿ, ಪ್ರೇಮ, ಮಮತೆ, ಕರುಣೆ, ಸಹೃದಯತೆ ಎಲ್ಲವೂ ಕೂಡ ಕ್ಷಣಿಕವಾಗಿ ಕಳೆದು ಹೋಗುತ್ತಿವೆ. ಇವುಗಳನ್ನು ಮರಳಿ ಪಡೆಯುವುದು ಹೇಗೆ ಎಂದು ಮನುಷ್ಯ ಚಿಂತಿಸುತ್ತಿದ್ದಾನೆ. ಈ ಚಿಂತೆಯಿಂದ ಹೊರಬರುವುದಕ್ಕೆ ಯೇಸುವೇ ಮಾರ್ಗವು, ಸತ್ಯವು, ಜೀವವು ಆಗಿದ್ದಾನೆಂದು ಸತ್ಯವೇದ ಬೋಧಿಸುತ್ತದೆ. ಏಕೆಂದರೆ ಯೇಸುವಿನ ಬೋಧನೆಗಳು ಮನಸ್ಸಿಗೆ ಹಿತ ನೀಡುತ್ತವೆ ಬುದ್ಧಿಗೆ ಬಲ ನೀಡುತ್ತವೆ. ಕೆಲಸಕ್ಕೆ ಉತ್ಸಾಹವನ್ನು ಒದಗಿಸುತ್ತವೆ.
ಸು.ರಂ. ಎಕ್ಕುಂಡಿಯವರು ‘ಕರುಣೆಯ ಕುರುಬ’ ಕವಿತೆಯಲ್ಲಿ ಯೇಸುವಿನ ಜನನದ ಕುರಿತು,”ಚಿಕ್ಕೆ ಮೂಡಿದ್ದನ್ನು ನೋಡಿ ಗುರುತಿಸಿದವರು ಮರುಭೂಮಿಯಲ್ಲಿ ನಡೆದವರು
ದಣಿದವರು ಸಂತೋಷಪಟ್ಟರು
ಬೆತ್ಲ ಹೇಮದ ಕೊಟ್ಟಿಗೆಯ ಹುಲ್ಲು ಬಾಗಿಯಲ್ಲಿ ಪ್ರೀತಿ, ಕರುಣೆ, ಶಾಂತಿಗಳ ಬೆಳಕನಿತ್ತು ಮೂಡಿಬಂದಿತ್ತು ಮತ್ತೊಂದು ನಕ್ಷತ್ರ “ ಎಂದು ನುಡಿಯುತ್ತಾರೆ. ಕನಸು ಕಂಡದ್ದು ನಿಜವಾದಾಗ ಆಗುವಷ್ಟೇ ಸಂತೋಷ ಕವಿಗೂ ಕೂಡ ಆಯ್ತು ಎಂಬಂತೆ ಸಾಲುಗಳು ಬರೆಯಲ್ಪಟ್ಟಿವೆ. ಆಕಾಶಕಾಯಗಳಿಂದಲೇ ಅನೇಕ ಜನರು ಭೂತ, ಭವಿಷ್ಯ, ವರ್ತಮಾನಗಳನ್ನು ತಿಳಿಯುವ ಸಂದರ್ಭ ಅದಾಗಿತ್ತು. ನಕ್ಷತ್ರ ಸದಾಕಾಲ ಮಿನುಗುತ್ತಿರುವಂತೆ ಯೇಸು ಎಂಬ ನಕ್ಷತ್ರ ಇಂದಿಗೂ ಮಿನುಗುತ್ತಿದ್ದಾನೆ. ಅದು ಶಾಂತಿ, ಸಹನೆ, ಪ್ರೀತಿ, ವಾತ್ಸಲ್ಯ, ಮಮತೆ, ಬಾಂಧವ್ಯ ಸಹೋದರತ್ವದ ಮೌಲ್ಯಗಳೊಂದಿಗೆ ಎಂಬುದು ವಿಶೇಷ.
ಕವಿ ವಿಲಿಯಂ ‘ಕ್ರಿಸ್ತನೊಡನೆ ಒಂದು ನಿಮಿಷ’ ಕವಿತೆಯಲ್ಲಿ
“ಏಸು ನಿನ್ನ ಪೂರ್ವ ಜಾತಕ ಜನ್ಮ ಕುಂಡಲಿ ನೋಡಿ ಪ್ರವಾದಿಗಳೆಲ್ಲ ಹೇಳಿದ್ದೆ ಹೇಳಿದ್ದು
ಚುಕ್ಕೆ ನೋಡಿ ಕವಡೆ ಚೆಲ್ಲಿ ಪಂಚಾಂಗ ಬಿಚ್ಚಿ ಪಂಡಿತರೆಲ್ಲ ಸಾರಿದ್ದೆ ಸಾರಿದ್ದು
ಕೊಟ್ಟಿಗೆ ಮೇಲೆ ಆ ಚಿಕ್ಕೆ ನಿಂತಿದ್ದೆ ನಿಂತಿದ್ದು” ಯೇಸುವಿನ ಜನನ ಎಷ್ಟೊಂದು ಅರ್ಥವಾಗಿತ್ತು, ಮಹತ್ವವಾಗಿತ್ತು ಎಂಬುದನ್ನು ಕವಿತೆ ಗ್ರಹಿಸುತ್ತದೆ.
ಬಿ.ಎ. ಸನದಿಯವರು ‘ಯೇಸು ಹೆಸರು, ಯೇಸು ಉಸಿರು’ ಎಂಬ ಕವಿತೆಯಲ್ಲಿ
“ಗುಹೆಯ ಗುಂಬ ತುಂಬಿ ನಿಂದ
ಕತ್ತಲಲ್ಲಿ ಚಂದ್ರಮ
ಕರುಣ ಕಿರಣವಾಗಿ ಬರಲು ಹೊರಗೂ ಸಂಭ್ರಮ “ಎಂದು ಸಂತೋಷ ಪಡುತ್ತಾರೆ. ಯೇಸುವಿನ ಬೋಧನೆಯಿಂದ ಹಲವು ಜನರ ಜೀವನ ಬದಲಾಗಿದೆ. ಕತ್ತಲಲ್ಲಿದ್ದ ಅವರನ್ನು ಜ್ಞಾನದ ಬೆಳಕನ್ನು ತೋರಿಸಿ ಮಹಾ ಬೆಳಕಾದ ಯೇಸು ಕ್ರಿಸ್ತ. ಆದ್ದರಿಂದ ಬಡವರ ಪಾಲಿಗೆ, ಶೋಷಿತರ ಪಾಲಿಗೆ ಯೇಸು ಹೆಸರಾಗಲಿಲ್ಲ ಉಸಿರಾದ ಎಂಬ ಅರ್ಥ ಈ ಕವನದ ಸಾಲುಗಳಲ್ಲಿ ಪ್ರತಿಬಿಂಬವಾಗಿದೆ.
ಕವಿ ಶರತ್ ಕಲಕೋಡ್ ‘ಅಂಬರಕ್ಕೇರಲಾರದ ಮರಗಳ ಅಳಲು’ ಕವಿತೆ
“ಕ್ರಿಸ್ತನ ನಡೆ ನುಡಿ ಅರ್ಥ ಮಾಡಿಕೊಂಡು ನಡೆಯದವರು ಇಲ್ಲವೆಂದಲ್ಲ ಇದ್ದಾರೆ
ಬಸವ, ಗಾಂಧಿ, ಅಂಬೇಡ್ಕರ್, ಲಿಂಕನ್, ಮಾರ್ಟಿನ್ ಲೂತರ್ ಕಿಂಗ್, ಮದರ್ ತೆರೇಸಾ, ನೆಲ್ಸನ್ ಮಂಡೇಲಾ ಹೀಗೆ ಇತಿಹಾಸದ ಉದ್ದಕ್ಕೂ ಸಿಗುವರು ಅಲ್ಲೊಬ್ಬ ಇಲ್ಲೊಬ್ಬ ಬೆರಳೆಣಿಕೆಯಲ್ಲಷ್ಟೇ! “
ಎಂದು ಕವಿ ಮರಗುತ್ತಾನೆ. ಬಸವಣ್ಣನು ಸಮಾಜದ ಜನರನ್ನು ಸಮಾನತೆ ಕಡೆಗೆ ಕರೆ ತರಲು ಪ್ರಯತ್ನಿಸಿದರು. ಅವರು ಹೇಳಿದ ಸಪ್ತ ಸೂತ್ರಗಳು ಇಂದಿಗೂ ಪ್ರಸ್ತುತ. “ಕಳಬೇಡ, ಕೊಲಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೆ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ, ಇದೇ ನಮ್ಮ ಕೂಡಲಸಂಗಮ ದೇವನೊಲಿಸುವ ಪರಿ” ಎಂದು ಸಾರಿದರು. ಆದರೆ ಮಾನವ ಈ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾನೆ ಎಂಬ ಅಪಖ್ಯಾತಿ ಇದೆ. ಅಂತರಂಗ ಶುದ್ದಿ, ಬಹಿರಂಗ ಶುದ್ದಿಗಳ ಕುರಿತು ಮಾತನಾಡುವ ಬಸವಣ್ಣ ದೈವವನ್ನು ಪರಿಶುದ್ಧತೆಯಿಂದ ಒಲಿಸಿಕೊಳ್ಳಲು ಸಾಧ್ಯ ಎನ್ನುವರು. ‘ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಹೆಚ್ಚಾಗಿ ಫಲ ಕೊಡುವನು’ ಎಂಬ ವಾಕ್ಯ ಸತ್ಯವೇದದಲ್ಲಿದೆ. (ಮತ್ತಾಯ 6: 18 ).

ಯಾರು ಏನೇ ಅಂದರೂ ಯಾರು ಏನೇ ತಿಳಿದುಕೊಂಡರು ನಾವು ನಂಬಿರುವ ಪರಿಶುದ್ಧ ಮೌಲ್ಯಗಳೊಂದಿಗೆ ಜೀವಿಸಿದರೆ ಸಕಲವೂ ಸಾಧ್ಯ ಎಂಬುದನ್ನು ಮಹಾತ್ಮರು ತಿಳಿಸಿದ್ದಾರೆ. ಮೌಲ್ಯಗಳು ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಕುಸಿಯುತ್ತಿವೆ. ಅದನ್ನು ಹೇಗೆ ಕಾಪಾಡಿಕೊಳ್ಳಬೇಕು, ಸುಧಾರಿಸಿಕೊಳ್ಳಬೇಕು ಹೇಗೆ ಪುನರ್ ಸ್ಥಾಪಿಸಿಕೊಳ್ಳಬೇಕೆಂಬ ಗೊಂದಲದಲ್ಲಿದ್ದೇವೆ. ಮೌಲ್ಯಗಳು ಇಂದು ಬರಿ ಬಾಯಿ ಮಾತಾಗಿವೆ ಹೊರತು ಪ್ರಾಯೋಗಿಕವಾಗಿ ಮೌನವಾಗಿವೆ ಎಂಬ ಅಳಲು ಕವಿತೆಯದು. ಹಾಗಾಗಿ ಏಸು ಆತ್ಮಸಾಕ್ಷಿಯೇ ನಿಮ್ಮನ್ನು ಮೌಲ್ಯವಂತರನ್ನಾಗಿ ಮಾಡುವ ಹಂಬಲದಲ್ಲಿದೆ ಎಂದು ಸೂಚಿಸುತ್ತಾರೆ.
ಡಾ. ಲೀಲಾವತಿ ದೇವದಾಸ್ ಅವರು ‘ನೀನ್ಯಾಕೆ ನನಗಾಗಿ ಬಂದೆ’ ಕವಿತೆಯಲ್ಲಿ ಯೇಸು ಕ್ರಿಸ್ತನನ್ನೇ ಪ್ರಶ್ನಿಸುತ್ತಾರೆ.
ಯೇಸು,
ನೀನ್ಯಾಕೆ ನನಗಾಗಿ ಬಂದೆ?
ಅಷ್ಟೊಂದು ನೋವನ್ನು ನನಗಾಗಿ ಉಂಡಿ
ನಿನ್ನ ತೋರಿಸಿ, ಹಿಡಿಸಿ ಶಿಲುಬೆಗೇರಿಸಿದ್ದು ನಾನೇ ಬೈದು ಉಗುಳಿ ಹೊಡೆದದ್ದು ನಾನೆ ಯೇಸು ನೀನ್ಯಾಕೆ ನನಗಾಗಿ ಬಂದೆ?
ಎಂದು ನೊಂದುಕೊಳ್ಳುತ್ತಾರೆ. ಪಾಪಿಯಾದ ಈ ಮಾನವನ ಉದ್ಧಾರಕ್ಕಾಗಿ ನೀನೇಕೆ ಭೂಮಿಗೆ ಅವತರಿಸಿ ಕಷ್ಟ ಸಂಕಟಗಳನ್ನು ಅನುಭವಿಸಿದೆ. ಈ ಹುಲು ಮಾನವನು ತನ್ನ ಸ್ವಾರ್ಥಕ್ಕಾಗಿ ಜೀವಿಸುತ್ತಾನೆ ಹೊರತು ನಿಸ್ವಾರ್ಥಕ್ಕಾಗಿ ಜೀವಿಸಿದ ಉದಾಹರಣೆಗಳು ತುಂಬಾ ಕಡಿಮೆ. ಈ ಪಾಪಿಯನ್ನು ಉದ್ಧಾರ ಮಾಡುವುದಕ್ಕೆ ನೀನೇಕೆ ಬಂದಿರುವೆ ಎಂದು ಯೇಸುನನ್ನು ಪ್ರಶ್ನಿಸುತ್ತಾರೆ.
‘ಭೂಮಿಯ ಮೇಲಿರುವ ಒಬ್ಬ ವ್ಯಕ್ತಿಯು ನಾಶವಾಗಬಾರದು ಎಂಬ ತಂದೆಯ ಚಿತ್ತಾನುಸಾರವಾಗಿ ನಾನು ಬಂದಿರುವೆ’ ಎಂದು ಯೇಸು ಹೇಳುತ್ತಾರೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವವೈವಿಧ್ಯತೆ ಸೃಷ್ಟಿಕರ್ತನ ಮೂಲವೆಂದು ಸತ್ಯವೇದ ಸಾರುತ್ತದೆ. ಭೂಮಿ ಹೇಗೆ ಹುಟ್ಟಿಕೊಂಡಿತೆಂದು ಹಳೆ ಒಡಂಬಡಿಕೆ ಮೊದಲ ಅಧ್ಯಾಯದಲ್ಲಿ ವಿವರಿಸಲಾಗಿದೆ. ಪಾಪ ಹೇಗೆ ಹುಟ್ಟಿತೆಂದು ತಿಳಿಸಲಾಗಿದೆ. ಆ ಪಾಪ ನಿವಾರಣೆಗಾಗಿ ಏಸುಕ್ರಿಸ್ತನು ಈ ಭೂಮಿಗೆ ಅವತರಿಸಲು ಕಾರಣವಾಯಿತು ಎಂದು ಸತ್ಯವೇದ ಬೋಧಿಸುತ್ತದೆ. ಯೇಸು ಏಕೆ ಹುಟ್ಟಿದ ಮತ್ತು ಏಕೆ ಶಿಲುಬೆಯ ಮೇಲೆ ಮರಣ ಹೊಂದಿ ಪುನರುತ್ಥಾನಗೊಂಡ ಎಂಬುವ ಚರಿತ್ರೆಯ ರೋಮಾಂಚನಕಾರಿಯಾದದ್ದು. ‘ಕ್ರಿಸ್ತನಿಗೊಂದು ಕಿವಿಮಾತು’ ಕವಿತೆಯಲ್ಲಿ ಬರಗೂರು ರಾಮಚಂದ್ರಪ್ಪನವರು ಕ್ರಿಸ್ತನ ಹುಟ್ಟು ಮತ್ತು ಸಾವನ್ನು,
‘ಕೊಟ್ಟಿಗೆಯ ಕತ್ತಲಲ್ಲಿ ಹುಟ್ಟಿದ ಮಿಂಚು ಮಲ್ಲಿಗೆ, ಕಡೆಗೆ ಸಂದದ್ದು ಮಿಡಿ ನಾಗರ ಮೊಳೆಯ ಸಂಚಿನ ಶಿಲುಬೆಗೆ’ ಎಂದು ಉದ್ಗರಿಸುತ್ತಾರೆ.
ಮುದ್ದು ತೀರ್ಥಹಳ್ಳಿಯವರು ‘ಕ್ಷಮಿಸಿ ಬಿಡು ಕವಿತೆ’ಯಲ್ಲಿ
“ತಪ್ಪು ಮಾಡಿದವರ ಏಳು ಎಪ್ಪತ್ತು ಬಾರಿ ಕ್ಷಮಿಸೆಂದ ಕ್ರಿಸ್ತ
ಎದೆಯಲ್ಲಿರಬೇಕಾದ ನಿನ್ನನ್ನು ಮಂದಿರದೊಳಗೆ ಬಂಧಿಸಿದವರು ಮಂದಿರ ಮಂದಿರಗಳ ಹುಡುಕಿ ಕಲ್ಲೆಸೆದು ಕೊಳ್ಳಿ ಇಟ್ಟವರ ಕ್ಷಮಿಸಿಬಿಡು” ಎಂದು ಮರುಗುತ್ತಾರೆ.
ಯೇಸುವಿನ ಬೋಧನೆಗಳು ಹೃದಯ ವೈಶಾಲ್ಯತೆಯ ದ್ಯೋತಕವಾಗಿವೆ.
“ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಹಾಗೆ ಮಾಡುವವರಿಗೆ ಉಪಕಾರ ಮಾಡಿರಿ. ನಿಮ್ಮನ್ನು ಶಪಿಸುವವರಿಗೆ ಆಶೀರ್ವಾದ ಮಾಡಿರಿ. ನಿಮ್ಮನ್ನು ಬಯ್ಯುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. ನಿನ್ನನ್ನು ಕೆನ್ನೆಯ ಮೇಲೆ ಬಡಿದವನಿಗೆ ಮತ್ತೊಂದು ಕೆನ್ನೆಯನ್ನು ತಿರುಗಿಸು. ನಿನ್ನ ಮೇಲಂಗಿಯನ್ನು ಕಸಿಕೊಳ್ಳುವ ಅವನಿಗೆ ಒಳಅಂಗಿಯನ್ನು ತಡೆಯಬೇಡ. ನಿನ್ನನ್ನು ಬೇಡುವವರೆಲ್ಲರಿಗೆ ಕೊಡು, ನಿನ್ನ ಸ್ವತ್ತು ಕಸಿಕೊಳ್ಳುವವನನ್ನು ಹಿಂದಕ್ಕೆ ಕೊಡು ಎಂದು ಕೇಳಬೇಡ. ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅಂತದನ್ನೇ ನೀವು ಅವರಿಗೆ ಮಾಡಿರಿ.” (ಲೂಕ 6: 27- 31)
ಮಾನವೀಯತೆಯ ಸಂದೇಶವನ್ನು ಸಾರಿದ ಯೇಸುವಿನ ಹಲವು ಬೋಧನೆಗಳು ನಾವು ಅಳವಡಿಸಿಕೊಂಡಿರುವ ಸಂವಿಧಾನದಲ್ಲಿವೆ ಎಂಬುದು ಮತ್ತೊಂದು ವಿಶೇಷ.
ಡಾ. ಜಿ. ಸೌಂದರ್ ರಾಜು ರಚಿಸಿದ ಕವಿತೆಯನ್ನು ಅನುವಾದಿಸಿದ ಡಾ. ಆರ್. ರಾಮಕೃಷ್ಣರವರು ‘ಏಕೆ?’ ಎಂಬ ಕವಿತೆಯಲ್ಲಿ ಮರಗಳ ನೋವನ್ನು ದಾಖಲಿಸುತ್ತಾರೆ.
“ಮರಗಳು ತಮ್ಮಲ್ಲೇ ಗೊಣಗುಟ್ಟಿದವು
ಈ ಮಾನವರು ನಮ್ಮಿಂದ ಅನೇಕ ಶಿಲುಬೆಗಳನ್ನು ತಯಾರಿಸುತ್ತಾರೆ.
ಆದರೆ ಅವರ ಪೈಕಿ ಒಬ್ಬ ಕ್ರಿಸ್ತನನ್ನಾದರೂ ತಯಾರಿಸಲು ಇನ್ನೂ ಅಸಮರ್ಥರಾಗಿದ್ದಾರಲ್ಲ ಏಕೆ?”
ಎಂದು ನೊಂದುಕೊಳ್ಳುತ್ತವೆ.
ಮಾಹಿತಿ ತಂತ್ರಜ್ಞಾನದಲ್ಲಿ ಮುಂದಿರುವ ಮಾನವ ಮೌಲ್ಯಗಳ ಜ್ಞಾನದಲ್ಲಿ ಹಿಂದುಳಿಯಲು ಕಾರಣವೇನು? ಕೃತಕ ಬುದ್ಧಿ ಮತ್ತೆಯನ್ನು ಸೃಷ್ಟಿಸಿರುವ ಮಾನವನಿಗೆ ಮೌಲ್ಯಗಳೆಂಬ ಮಾನವೀಯತೆಯ ಮಾನವನನ್ನು ಸೃಷ್ಟಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕವಿತೆಯಲ್ಲಿದೆ. ಹಾಗಾಗಿ ಅಂತಃಕರಣದ ಕ್ರಿಸ್ತನ ಪ್ರಜ್ಞೆ ನಮ್ಮೊಳಗೆ ಮೊಳಕೆ ಒಡೆದಾಗ ನಿಜವಾದ ಕ್ರಿಸ್ಮಸ್ ಆಚರಣೆಗೆ ಅರ್ಥ ಬರುವುದು. ಕೆ ಎಸ್ ನರಸಿಂಹಸ್ವಾಮಿ ಯವರು ‘ಡಿಸೆಂಬರ್ ಅಲ್ಲವೇ ಈಗ?’ ಈಗ ಕವಿತೆಯಲ್ಲಿ
“ಪ್ರಾರ್ಥನೆಯ ಕರುಳು ಬಾನಿಗೆ ಏರಬೇಕು ಎತ್ತರದ ಗಂಟೆಗಳು ಎಡಬಿಡದೆ ಮೊಳಗಬೇಕು ಶಾಂತಿ ನೆಲೆಸಬೇಕು
ಬಯಲು ಹಸಿರಿನ ತುಂಬಾ ಹೂವಾಡಬೇಕು ಪ್ರೀತಿಯೇ ದೇವರೆಂದವನ ನೆನೆಯಬೇಕು
ಕಣ್ಣ ಹನಿಗಳ ನಡುವೆ ಕೈಮುಗಿಯಬೇಕು “.

ನಾವು ಏನನ್ನು ಭೂಮಿಯಲ್ಲಿ ಬಿತ್ತುತ್ತೇವೋ ಅದನ್ನೇ ನಾವು ಊಟ ಮಾಡಬೇಕಾಗುತ್ತದೆ ಎಂಬ ಸಂದೇಶ ಕ್ರಿಸ್ತನದು.
“ಹೊರಗಿನಿಂದ ಮನುಷ್ಯನೊಳಗೆ ಹೋಗಿ ಅವನನ್ನು ಹೊಲೆ ಮಾಡುತಕ್ಕಂತದ್ದು ಒಂದು ಇಲ್ಲ, ಮನುಷ್ಯನೊಳಗಿನಿಂದ ಹೊರಡುವವುಗಳೇ ಮನುಷ್ಯನನ್ನು ಹೊಲೆ ಮಾಡುವಂಥವುಗಳಾಗಿವೆ. (ಮಾರ್ಕ್ 7:15)” ಎಂಬ ಯೇಸು ಕ್ರಿಸ್ತನ ವಾಕ್ಯ ಮನವರಿಕೆ ಆಗಬೇಕಷ್ಟೇ.

ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಮೂಲತಃ ಯಾದಗಿರಿ ಜಿಲ್ಲೆಯ ಮುದ್ನಾಳ ಗ್ರಾಮದವರು. ಸದ್ಯ ಇವರು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಎಂಟು ವರ್ಷಗಳಿಂದ ಯಾದಗಿರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಚಂದ್ರಕಾಂತ ಕೂಸನೂರ : ಬಹುಶೀಸ್ತೀಯ ಅಧ್ಯಯನ ( ಕಥನಕ್ರಮ,ನಾಟಕ ಮತ್ತು ಚಿತ್ರಕಲೆಗಳನ್ನು ಅನುಲಕ್ಷಿಸಿ )ವಿಷಯದಡಿ ಸಂಶೋಧನಾ ಪ್ರಬಂಧ ಮಂಡಿಸಿ 2023ರಲ್ಲಿ ಪಿಎಚ್.ಡಿ ಪದವಿ ಪಡೆದಿರುವರು. ನಾಟಕಗಳ ಕುರಿತಾದ ರಂಗ ಪ್ರಯೋಗಗಳ ವಿಮರ್ಶಾ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಣೆಗೆ ಸಿದ್ಧವಾಗಿದೆ.
