ಜಿ. ಗುಂಡಣ್ಣ ಅವರ ಹುಟ್ಟೂರು  ಚಿತ್ರದುರ್ಗ ಜಿಲ್ಲೆಯ ಜಂಜರಗುಂಟೆ. ಹುಟ್ಟಿದ್ದು ಎಪ್ರಿಲ್ 1922ರ ಏಪ್ರಿಲ್ 8.   ಕನ್ನಡದಲ್ಲಿ ಎಂ.ಎ.ಪದವಿ ಪಡೆದು ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿದ್ದರು. ಶಿವಮೊಗ್ಗ ಸರಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ವಾಣಿಯ ಕೃಪೆ, ಶಿಲ್ಪ ಗಂಗೋತ್ರಿ, ಕಾರ್ಯಕರ್ಪೂರ, ಜೈಮಿನಿಭಾರತ ಸಂಗ್ರಹ ಅವರು ಬರೆದ ಕೃತಿಗಳು. ಸುವರ್ಣ ಸಂಪುಟದಲ್ಲಿ ಪ್ರಕಟವಾದ ಅವರ ‘ಸ್ಫೂರ್ತಿ ದೇವಿಗೆ’ ಎಂಬ ಕವನವು ಇಂದಿನ ಕಾವ್ಯಮಾಲೆಯ ಕುಸುಮವಾಗಿ ನಿಮ್ಮ  ಓದಿಗೆ. 

 

ಸ್ಪೂರ್ತಿ ದೇವಿಗೆ

ಬಯಕೆ ಬಾಯಾರಿ ನಿನ್ನನು ನಾನು ಕರೆದಾಗ
ಬಾರದಿಹೆ, ತೋರದಿಹೆ, ದೂರವೇ ಇರುವೆ.
ನನ್ನರಿವೆ ನನಗಿರದ ಆವುದೋ ಗಳಿಗೆಯಲಿ
ತಟ್ಟನೆನ್ನಯ ಬಳಿಗೆ ಬಂದು ನಗುವೆ !

ನಿನ್ನಾಟಕೊಮ್ಮೊಮ್ಮೆ ಮುನಿಸು ಬರುವುದು ನನಗೆ ;
ನಿನ್ನ ಕಂಡೊಡನೆಲ್ಲ ಕರಗಿ ಅಕ್ಕರೆಯಾಗಿ
ಸಕ್ಕರೆಯ ಸವಿಯಾಗಿ ಒಲುಮೆಗಿರಿಯೇರುವುದು ;
ನಾನರಿಯದೆಯೆ ನನ್ನ ಬಯಕೆ ತೀರುವುದು !

ನಾನು ಕಾಮಿಸಿದಾಗ ನೀನು ಮೊಗವನೆ ತೋರೆ ;
ಮೃಣ್ಮಯದ ಭೋಗಕ್ಕೆ ಒಳಗಾಗದಿರುವೆ !
ನನಗರಿಯದಿರುವಂತೆಯೇ ಚಿನ್ಮಯದ ಪ್ರೇಮವನು
ಸುರಿಸುರಿದು ಬರುತಿರುವೆ ಕರುಣೆಯೊಲವೆ !

ನೀಂ ನಿತ್ಯ ಪರಿಶುದ್ಧೆ, ಸರ್ವಮಂಗಳೆ, ಜನನಿ ;
ನಾಂ ಬರಿಯ ಹಸುಗೂಸು, ಕಡುಪಾಪಿ, ಕಾಮಿ.