ಭಾವಗೀತೆಯು ಕನ್ನಡ ನವೋದಯ ಸಾಹಿತ್ಯದ(1870-1940) ಸಂದರ್ಭದಲ್ಲಿ ಹುಟ್ಟಿತಲ್ಲವೇ. ಆ ಕಲಾಪ್ರಕಾರವು ಅನೇಕ ಕವಿಗಳ ಸಾಹಿತ್ಯವನ್ನು ಗೀತೆಗಳ ಮೂಲಕ, ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಹಿತ್ಯಕ್ಷೇತ್ರದ ಆಚೆಗಿನ ದೊಡ್ಡ, ಅದರಲ್ಲೂ ಅನಕ್ಷರಸ್ಥ ಜನಸಮುದಾಯಕ್ಕೂ ತಲುಪಿಸುವ ಕೆಲಸ ಮಾಡಿತು. ನಮ್ಮ ಸಂಸ್ಕೃತಿಯು ಸಾಹಿತ್ಯಪ್ರಸರಣದಲ್ಲಿ ಭಾವಗೀತೆಯನ್ನು ದುಡಿಸಿಕೊಂಡಂತೆ ಭಾವನೃತ್ಯವನ್ನು ಸಹ ದುಡಿಸಿಕೊಳ್ಳಬಹುದು. ಹಾಗೆ ದುಡಿಸಿಕೊಳ್ಳಬೇಕಾದ ಕಾಲ ಮತ್ತು ಅಗತ್ಯ ಈಗ ಬಂದಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಾಲ್ಕನೆಯ ಬರಹ
ಕಳೆದ ಮೂರು ದಶಕಗಳಿಂದ ವೃತ್ತಿಯಿಂದ ಕನ್ನಡ ಪ್ರಾಧ್ಯಾಪಕಿ ಹಾಗೂ ಪ್ರವೃತ್ತಿಯಿಂದ ಭರತನಾಟ್ಯ ಶಿಕ್ಷಕಿಯಾಗಿರುವ ನಾನು `ಕನ್ನಡವನ್ನು ಬೆಳೆಸುವಲ್ಲಿ ಭರತನಾಟ್ಯದ ಪಾತ್ರವೇನು?’ ಎಂದು ಆಗಾಗ ಯೋಚಿಸುತ್ತಿರುತ್ತೇನೆ. ಆಗ ನನಗೆ ಹೊಳೆದದ್ದು ಭಾವನೃತ್ಯ ಎಂಬ ಭರತನಾಟ್ಯಾಧಾರಿತ ಕಲಾಪ್ರಕಾರ. ಈ ಕಲಾಪ್ರಕಾರವು ಕನ್ನಡವನ್ನು ಬೆಳೆಸುವ ಕೆಲಸ ಮಾಡಬಲ್ಲದು. ಕನ್ನಡ ರಾಜ್ಯೋತ್ಸವವು ಇನ್ನೇನು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಈ ಬಗ್ಗೆ ಬರೆಯೋಣ ಅನ್ನಿಸ್ತು.
ಮೊದಲು ಭಾವನೃತ್ಯ ಅಂದರೆ ಏನು ಅಂತ ಹೇಳಿಬಿಡ್ತೇನೆ. ಭರತನಾಟ್ಯವನ್ನು ಮುಖ್ಯವಾಗಿ, ಹಾಗೂ ಲಘುನೃತ್ಯ ಹಾಗೂ ಜಾನಪದ ಶೈಲಿಯ ನೃತ್ಯಗಳನ್ನು ಆನುಷಂಗಿಕವಾಗಿ(ಅಂದರೆ ಕಡಿಮೆ ಪ್ರಮಾಣದಲ್ಲಿ) ಬಳಸಿಕೊಂಡು ಕನ್ನಡದ ಭಾವಗೀತೆಗಳಿಗೆ ನೃತ್ಯ ಮಾಡುವ ಕಲೆಯೇ ಭಾವನೃತ್ಯ.
ಭಾವಗೀತೆಯು ಕನ್ನಡ ನವೋದಯ ಸಾಹಿತ್ಯದ(1870-1940) ಸಂದರ್ಭದಲ್ಲಿ ಹುಟ್ಟಿತಲ್ಲವೇ. ಆ ಕಲಾಪ್ರಕಾರವು ಅನೇಕ ಕವಿಗಳ ಸಾಹಿತ್ಯವನ್ನು ಗೀತೆಗಳ ಮೂಲಕ, ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಹಿತ್ಯಕ್ಷೇತ್ರದ ಆಚೆಗಿನ ದೊಡ್ಡ, ಅದರಲ್ಲೂ ಅನಕ್ಷರಸ್ಥ ಜನಸಮುದಾಯಕ್ಕೂ ತಲುಪಿಸುವ ಕೆಲಸ ಮಾಡಿತು. ನಮ್ಮ ಸಂಸ್ಕೃತಿಯು ಸಾಹಿತ್ಯಪ್ರಸರಣದಲ್ಲಿ ಭಾವಗೀತೆಯನ್ನು ದುಡಿಸಿಕೊಂಡಂತೆ ಭಾವನೃತ್ಯವನ್ನು ಸಹ ದುಡಿಸಿಕೊಳ್ಳಬಹುದು. ಹಾಗೆ ದುಡಿಸಿಕೊಳ್ಳಬೇಕಾದ ಕಾಲ ಮತ್ತು ಅಗತ್ಯ ಈಗ ಬಂದಿದೆ. ಅದರಲ್ಲೂ ನಮ್ಮ ಮಕ್ಕಳಿಗೆ ಕನ್ನಡ ಭಾಷೆ ಮತ್ತು ಜೀವನಕ್ರಮವನ್ನು ಕುರಿತ ಶಿಕ್ಷಣ ನೀಡುವಲ್ಲಿ ಈ ಕಲಾಪ್ರಕಾರವು ಅಪರಿಮಿತ ಸಾಧ್ಯತೆಗಳನ್ನು ಹೊಂದಿರುವುದರಿಂದ ಇದಕ್ಕೆ ಹೆಚ್ಚು ಗಮನ ನೀಡಬೇಕಾಗಿದೆ.
ಕೆಲವು ಕನ್ನಡಸಾಹಿತ್ಯಪ್ರಿಯ ಭರತನಾಟ್ಯ ಗುರುಗಳು ಶುದ್ಧ ಭರತನಾಟ್ಯ ಕಾರ್ಯಕ್ರಮಗಳಲ್ಲಿ, ಅಲ್ಲೊಂದು ಇಲ್ಲೊಂದು ಎಂಬಂತೆ ಭಾವನೃತ್ಯವನ್ನು ತಮ್ಮ ಶಿಷ್ಯರಿಂದ ಮಾಡಿಸುವ ಕ್ರಮವಿದೆ. ಈಗ ಆ ಅಭ್ಯಾಸ ಹೆಚ್ಚಾಗುತ್ತಿದೆ ಕೂಡ. ವಚನ ಹಾಗೂ ದೇವರನಾಮಗಳಿಗೆ ಮಾಡುವ ನೃತ್ಯವು ಭಾವನೃತ್ಯಕ್ಕೆ ತುಂಬ ಸಮೀಪವಾದ ಶೈಲಿ. ಬೆಂಗಳೂರು ದೂರದರ್ಶನದಲ್ಲಿ ಹಿಂದೊಮ್ಮೆ ಗೀತಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದಾಗ ಭಾವನೃತ್ಯಶೈಲಿಯನ್ನು ಬಳಸಿಕೊಳ್ಳಲಾಗಿತ್ತು. ಉದಾಹರಣೆಗೆ, ಕುವೆಂಪು ಅವರ `ಬಾ ಚಕೋರಿ ಬಾ ಚಕೋರಿ ಚಂದ್ರಮಂಚಕೆ’ ಗೀತೆಯನ್ನು ಪ್ರದರ್ಶಿಸಿದ ಗೀತಚಿತ್ರ. ಕೆಲವೊಮ್ಮೆ ನಾಟಕಗಳಲ್ಲಿ ಮತ್ತು ಸಿನಿಮಾಗಳಲ್ಲಿ ಸಹ ಈ ನಾಟ್ಯಶೈಲಿಯನ್ನು ಬಳಸುವುದುಂಟು.
ಕನ್ನಡಕ್ಕೊಂದು ಕಣ್ಣಾದ ಕವಿ ಡಿ.ವಿ.ಜಿ. ಅವರ ಮೋಹಕ ಅಂತಃಪುರಗೀತೆಗಳನ್ನು ಭಾವನೃತ್ಯಸಾಧ್ಯತೆಯ ಶ್ರೇಷ್ಠಮಾದರಿ(ಕ್ಲಾಸಿಕ್) ಅನ್ನಬಹುದು. ಬೇಲೂರಿನ ದೇವಾಲಯದ ಚೆನ್ನಕೇಶವ ದೇವರನ್ನು ಕುರಿತು ತಮ್ಮ ಅದಮ್ಯವಾದ ಪ್ರೀತಿ, ಮಧುರಭಕ್ತಿಯನ್ನು ನಾಟ್ಯಭಂಗಿಗಳ ಮೂಲಕ ತೋರುವ ಮದನಿಕೆಯರ ಶಿಲ್ಪಗಳು ಅಪೂರ್ವವಾಗಿವೆ. ಒಂದೊಂದು ಮದನಿಕೆಯು ಒಂದೊಂದು ಪ್ರಿಯಭಾವದ ಸಂಕೇತ. ಅಂತಃಪುರಗೀತೆಯನ್ನು ಅಳವಡಿಸಿಕೊಂಡು ನೃತ್ಯ ಮಾಡಿದಾಗ ಅದು ಪಡೆಯುವ ಗಮನೀಯ ಜನಮೆಚ್ಚುಗೆಯನ್ನು ಸ್ವತಃ ನೃತ್ಯಸಂಯೋಜನೆಯ ಪ್ರಯೋಗಗಳನ್ನು ಮಾಡುತ್ತಿರುವ ಈ ಲೇಖಕಿ ಬಲ್ಲಳು.
ಮಜುಂದಾರ್ ಅವರ ವರ್ಣಚಿತ್ರವೊಂದನ್ನು ನೋಡಿದ ಸ್ಫೂರ್ತಿಯಿಂದ ಕುವೆಂಪು ಅವರು ಬರೆದಿರುವ `ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ’ ಕವಿತೆಯು ತನ್ನ ಗೇಯಗುಣದಿಂದ ಒಂದು ಸುಂದರ ಗೀತೆಯಾಗಿಬಿಟ್ಟಿತು. ಇದನ್ನು ಬಿ.ಕೆ.ಸುಮಿತ್ರ ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ. ಇದು ಒಂದು ಸುಂದರ ಭಾವನೃತ್ಯವಾಗಬಲ್ಲುದು! ಇಂದು ಶಾಲೆಗಳಲ್ಲೂ ಜಾಣ(ಸ್ಮಾರ್ಟ್) ತರಗತಿಗಳಿಂದಾಗಿ ಬಹುಮಾಧ್ಯಮ ಕಲಿಕೆ ಎಂಬುದು ರೂಢಿಗತ ವಿಷಯವಾಗಿರುವಾಗ ಇದರ ಪ್ರಸ್ತುತತೆ ಹೆಚ್ಚಾಗುತ್ತದೆ.
ಕುವೆಂಪು ಅವರದೇ `ಆನಂದಮಯ ಈ ಜಗಹೃದಯ’ ಕವಿತೆ, ಬೇಂದ್ರೆಯವರ `ಕುಣಿಯೋಣು ಬಾರಾ ಕುಣಿಯೋಣು ಬಾ’, `ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ’, `ಯಾರಿಗೂ ಹೇಳೋಣು ಬ್ಯಾಡ’, ಪು.ತಿ.ನ. ಅವರ `ಕೃಷ್ಣನ ಕೊಳಲಿನ ಕರೆ’, ಕೆ.ಎಸ್.ನಿಸಾರ್ ಅಹಮದ್ ಅವರ `ವಂದಿಸುವೆನು ಸುಜ್ಞಾನಮತಿ ಕನ್ನಡಿಗರ ಅಭಿಮಾನವತಿ’, `ನಾಡದೇವಿಯೆ ಕಂಡ ನಿನ್ನ ಮಡಿಲಲ್ಲಿ ಎಂಥ ದೃಶ್ಯ’, ಜಿ.ಎಸ್.ಶಿವರುದ್ರಪ್ಪ ಅವರ `ಆಕಾಶದ ನೀಲಿಯಲ್ಲಿ’, ಇವೆಲ್ಲ ಅದ್ಭುತವಾದ ನೃತ್ಯಸಾಧ್ಯತೆಯನ್ನು ಹೊಂದಿರುವ ಗೀತೆಗಳು. ಕನ್ನಡದಲ್ಲಿ ಇಂತಹ ಗೀತಸಂಪತ್ತಿಗೆ ಕೊರತೆಯಿಲ್ಲ.
`ಕಾವ್ಯಲಾಸ್ಯ’ವು ಭಾವನೃತ್ಯದ ಇನ್ನೊಂದು ಸಾಧ್ಯತೆ. ಗದ್ಯಗಂಧೀ ಕವನವಾಚನಕ್ಕೆ ಅಭಿನಯ ಮಾಡುವ ಕ್ರಮ ಇದು. ಬೇಂದ್ರೆಯವರ `ಚಿಗರಿಗಂಗಳ ಚೆಲುವಿ’, ಪುತಿನ ಅವರ `ವಿಶ್ವಕುಟುಂಬಿಯ ಕಷ್ಟ’, ನಿಸಾರ್ ಅವರ `ಅಮ್ಮ, ಆಚಾರ ಮತ್ತು ನಾನು`. ಕೆಎಸ್‌ನ ಅವರ `ಹಿಂದಿನ ಸಾಲಿನ ಹುಡುಗರು’, ವೈದೇಹಿ ಅವರ `ಅಡುಗೆ ಮನೆಯ ಹುಡುಗಿ’ ಇವಕ್ಕೆ ಅಪಾರವಾದ ಕಾವ್ಯಲಾಸ್ಯದ ಸಾಧ್ಯತೆಗಳಿವೆ. ಕೆಲವು ವರ್ಷಗಳ ಹಿಂದೆ ಸಮುದಾಯ ಜಂಗಮರಂಗಕರ್ಮಿಗಳು(ಅಂದರೆ ರೆಪರ್ಟರಿಯವರು) ಕರ್ನಾಟಕದ ಬೇರೆ ಬೇರೆ ಕಾಲೇಜುಗಳಲ್ಲಿ `ಕಾವ್ಯರಂಗ’ ಎಂಬ ಹೆಸರಿನ, ಕನ್ನಡ ಕಾವ್ಯದ ನಾಟ್ಯರೂಪವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದು ನೆನಪಾಗುತ್ತದೆ. ಕವಿತೆಯನ್ನು ದೃಶ್ಯರೂಪದಲ್ಲಿ ನೋಡುವ ಕಾವ್ಯಲಾಸ್ಯದ ಸಾಧ್ಯತೆಯು ಕುತೂಹಲ ಮೂಡಿಸುವಂಥದ್ದು.
*****
ಭಾವನೃತ್ಯಕ್ಕೆ ಸಾಹಿತ್ಯಪ್ರಸಾರದ ಒಂದು ವಿಶೇಷ ಸಾಧ್ಯತೆ ಇದೆ. ಹೇಗೆ ಭಾವಗೀತೆಗಳು ಸಾಹಿತ್ಯದ ಗಂಧಗಾಳಿ ಇಲ್ಲದ ಜನರ ಬಾಯಲ್ಲೂ ಬೇಂದ್ರೆ, ಕುವೆಂಪು, ಕೆಎಸ್‌ನ ರಚನೆಗಳನ್ನು ನಲಿದಾಡಿಸಿದವೋ ಹಾಗೆಯೇ ಭಾವನೃತ್ಯಗಳು ಅದನ್ನು ಮಾಡುವವರಲ್ಲಿ ಸಾಹಿತ್ಯದ ಛಾಪನ್ನು ಮೂಡಿಸುತ್ತವೆ. ಓದುವ ಅಭ್ಯಾಸ ಕಡಿಮೆಯಾಗುತ್ತಿರುವ ಸಮಕಾಲೀನ ಸನ್ನಿವೇಶದಲ್ಲಿ ಭಾವಗೀತೆ, ಭಾವನೃತ್ಯಗಳ ಮೂಲಕ ಮಕ್ಕಳಲ್ಲಿ, ಹದಿಹರೆಯದವರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಸಾಧ್ಯವಾಗುತ್ತದೆ. ಬೆಂಗಳೂರಿನ ಹಂಪಿನಗರದಲ್ಲಿರುವ ನಮ್ಮ ನಾಟ್ಯಶಾಲೆ `ಚಿತ್ರನಾಟ್ಯ ಫೌಂಡೇಷನ್’ನಲ್ಲಿ ಐದು-ಆರು ವರ್ಷದ ಎಳೆಯ ಮಕ್ಕಳು, ಕನ್ನಡ ಬರದಿದ್ದರೂ ತಾವು ಸದಾ ಅಭ್ಯಾಸ ಮಾಡುವ ತಮ್ಮ ನೃತ್ಯಕ್ಕೆ ಸಂಬಂಧಿಸಿದ ಕನ್ನಡ ಹಾಡುಗಳನ್ನು ಬಾಯಿಪಾಠವೆಂಬಂತೆ ತಮಗೆ ತಾವೇ ಗುನುಗಿಕೊಳ್ಳುವುದನ್ನು ಗಮನಿಸಿ ನಾನು ಸಂತೋಷ ಪಟ್ಟಿದ್ದೇನೆ. ಸಾಹಿತ್ಯವನ್ನು ಮಕ್ಕಳ ಹೃದಯಕ್ಕೆ ಹತ್ತಿರವಾಗಿಸುವ ಮಾರ್ಗಗಳಲ್ಲಿ ಇದೂ ಒಂದು. `ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?’ ಎಂಬ ಶಿಶುಗೀತೆಯಿಂದ ಹಿಡಿದು `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಗಂಭೀರ ಭಾವದ ಕನ್ನಡ ಗೀತೆಯ ತನಕ ಈ ಗಾನನಾಟ್ಯ ಶ್ರೇಣಿ ಹಬ್ಬುತ್ತದೆ.
ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರು ತಮ್ಮ ಕನಸಿನ ಕೂಸಾದ ಶಾಂತಿನಿಕೇತನ ಸಂಸ್ಥೆಯಲ್ಲಿ ಹಾಡು, ನೃತ್ಯಗಳನ್ನು ಪಠ್ಯಕ್ರಮದ ಭಾಗವಾಗಿಸಿದ್ದುದ್ದನ್ನು ಗಮನಿಸಬಹುದು. ಈ ಕುರಿತು ಅವರು ಲೇಖನಗಳನ್ನು ಕೂಡ ಬರೆದಿದ್ದಾರೆ. `ಶಿಕ್ಷಣದಲ್ಲಿ ಆಂಗಿಕ ಸ್ಪಂದನದ ಮಹತ್ವ’ವನ್ನು ಅವರಷ್ಟು ಚೆನ್ನಾಗಿ ಹೇಳಿದವರು ಕಡಿಮೆ. ಮಕ್ಕಳು ಹಾಡುಗಳಿಗೆ ತಾವೇ ಹಾಡಿಕೊಂಡು ಅಥವಾ ಗುನುಗಿಕೊಂಡು ನೃತ್ಯ ಮಾಡಿದಾಗ ಅದು ಅವರನ್ನು ಆಳವಾಗಿ ಪ್ರಭಾವಿಸಿ ಕಲಿಕೆಗೆ ಪ್ರೇರೇಪಿಸುತ್ತದೆ. `ಮಾಡಿ ಕಲಿ’ ಎಂಬ ಪರಿಣಾಮಕಾರಿ ಕಲಿಕಾ ಸನ್ನಿವೇಶ ಇಲ್ಲಿ ಸಕ್ರಿಯಗೊಳ್ಳುತ್ತದೆ.
ಮಾಂಟೆಸೆರಿಯ ಹಂತದ ಕಲಿಕೆಯಲ್ಲಿ ದೇಹಭಾಷೆಯ ಬಳಕೆ ಇದೆ. ಶಿಶುಶಿಕ್ಷಣದಲ್ಲಿ ಜರ್ಮನಿ ದೇಶದ ಮರಿಯಾ ಮಾಂಟೆಸೆರಿ ಅವರ ಕೊಡುಗೆಯನ್ನು ಜಗತ್ತು ಗೌರವಿಸಿದ್ದನ್ನು ನಾವು ನೆನೆಯಬಹುದು. ಇದನ್ನು ತುಸು ವಿಸ್ತೃತ ರೂಪದಲ್ಲಿ ದೊಡ್ಡ ಮಕ್ಕಳಲ್ಲಿ ಭಾವನೃತ್ಯದ ಮೂಲಕ ಬಳಸಬಹುದು.
ಶಾಲೆ ಮತ್ತು ಕಾಲೇಜು ಮಟ್ಟದ ಕಲಿಕೆಯಲ್ಲಿ ಭಾವನೃತ್ಯ – ಕಾವ್ಯಲಾಸ್ಯಗಳ ಬಳಕೆ: ಪ್ರಾಥಮಿಕ ಶಾಲೆಯಿಂದ ಹಿಡಿದು ಉನ್ನತ ಶಿಕ್ಷಣದ ತನಕ ವಿದ್ಯಾರ್ಥಿಗಳ ಸಾಹಿತ್ಯ ಕಲಿಕೆಯಲ್ಲಿ ಈ ಪ್ರಕಾರವನ್ನು ಬಳಸಬಹುದು. ದೇಹದ ಮೂಲಕ ತಾವೇ ಮಾಡಿ ಕಲಿತ ವಿಷಯವು ಮೆದುಳಿನ ಆಳವಾದ ನೆನಪಿನ ಕೋಶಗಳಲ್ಲಿ ದಾಖಲಾಗುತ್ತದೆ, ಭರತನಾಟ್ಯ ಕಲಿಕೆಯ ಸಂದರ್ಭದಲ್ಲಿ `ನೃತ್ಯ ಮಾಡುವಾಗ ಗೀತವನ್ನು ಕಂಠದಲ್ಲಿಟ್ಟುಕೊಳ್ಳಬೇಕು’ ಎಂಬ ಕ್ರಮವಿದೆ. ಇದರಿಂದಾಗಿ ಮಕ್ಕಳು ನೃತ್ಯ ಮಾಡುತ್ತ ಮಾಡುತ್ತ ಹಾಡನ್ನು ತಮಗರಿವಿಲ್ಲದೆ ಕಲಿತುಬಿಡುತ್ತಾರೆ. ಎಲ್ಲಿ ಭಾವವಿರುತ್ತದೋ ಅಲ್ಲಿ ರಸ ಹುಟ್ಟುತ್ತದೆ ಎಂದು ಭರತಮುನಿ ಹೇಳಿದ್ದಾರಲ್ಲ. ಹೀಗಾಗಿ, ಭಾವನೃತ್ಯ ಮಾಡುವವರಂತೆ ನೋಡುವವರಿಗೂ ಸಾಹಿತ್ಯದ ಆಪ್ತ ಪರಿಚಯ ಆಗುತ್ತದೆ.
ಎಲ್ಲ ವಯಸ್ಸಿನ ಮಕ್ಕಳೂ ಅವರ ವಯಸ್ಸಿಗೆ ತಕ್ಕ ಸಾಹಿತ್ಯವುಳ್ಳ ಶಿಶುನೃತ್ಯ, ಭಾವನೃತ್ಯಗಳನ್ನು ತುಂಬ ಸಂತೋಷದಿಂದ ಮಾಡುತ್ತಾರೆ. ಇದು ಎಲ್ಲ ನೃತ್ಯಗುರುಗಳು ಮತ್ತು ಕನ್ನಡ ಅಧ್ಯಾಪಕರ ಅನುಭವವಾಗಿದೆ.
ಭಾವನೃತ್ಯವನ್ನು ನೃತ್ಯಶೈಲಿಗಳ ಉದ್ದದ ಸಾಲಿನಲ್ಲಿ ಇನ್ನೊಂದು ನೃತ್ಯಶೈಲಿ ಎಂಬಂತೆ ಕಡೆಗಣಿಸದೆ ಕನ್ನಡ ಸಾಹಿತ್ಯ ಸಂಸ್ಕೃತಿಗಳ ಪ್ರಸಾರಕವೆಂಬಂತೆ ಪರಿಗಣಿಸಿದರೆ ಅದರಲ್ಲಿರುವ ಅಮಿತ ಸಾಧ್ಯತೆಗಳನ್ನು ಅನಾವರಣಗೊಳಿಸಬಹುದು. ನೃತ್ಯಗುರುಗಳು, ಕಲಾಸಂಸ್ಥೆಗಳು, ಶಾಲೆಕಾಲೇಜುಗಳು ಇದಕ್ಕೆ ಪ್ರಾಮುಖ್ಯ ಕೊಟ್ಟು ಅದರ ಪ್ರದರ್ಶನಗಳನ್ನು, ಸ್ಪರ್ಧೆಗಳನ್ನು ಏರ್ಪಡಿಸಬೇಕು.
ಭಾವನೃತ್ಯದ ಒಂದು ಪ್ರಯೋಗ: ಒಂದು ಪ್ರಾಯೋಗಿಕ ಸಾಧ್ಯತೆಯಾಗಿ ಪ್ರಸ್ತುತಗೊಳಿಸಿದ ನಮ್ಮ ಚಿತ್ರನಾಟ್ಯ ಫೌಂಡೇಷನ್‌ನ “ಓದೋಣು ಬಾರಾ ಕುಣಿಯೋಣು ಬಾರಾ” ನೃತ್ಯಸ್ಪರ್ಧೆಯನ್ನು ಇಲ್ಲಿ ಗಮನಿಸಬಹುದು. 2014ರಲ್ಲಿ ಈ ಸ್ಪರ್ಧೆಯು ಪ್ರಾರಂಭವಾಯಿತು. ಇದರಲ್ಲಿ ನಾಟ್ಯಶಾಲೆಯ ತುಸು ಹಿರಿಯ ವಿದ್ಯಾರ್ಥಿಗಳನ್ನು ಅಂದರೆ ನಾಲ್ಕು-ಐದು ವರ್ಷಗಳ ಕಾಲ ಭರತನಾಟ್ಯವನ್ನು ಕಲಿತವರನ್ನು ಆಯ್ಕೆ ಮಾಡಿ ತಲಾ ಮೂರು ಮಕ್ಕಳಿರುವ ತಂಡಗಳನ್ನಾಗಿ ವಿಂಗಡಿಸಲಾಯಿತು. ನೃತ್ಯಸಾಧ್ಯತೆಯುಳ್ಳ ಕನ್ನಡದ ಉತ್ತಮ ಭಾವಗೀತೆಗಳನ್ನು ಆಯ್ಕೆ ಮಾಡಿ, ಪಾರದರ್ಶಕತೆಗಾಗಿ ಚೀಟಿ ಎತ್ತುವ ಮೂಲಕ ಒಂದೊಂದು ತಂಡಕ್ಕೆ ಒಂದೊಂದು ಗೀತೆಯನ್ನು ನೀಡಲಾಯಿತು. ಉದಾಹರಣೆಗೆ 2014ರ ಕಾರ್ಯಕ್ರಮಕ್ಕೆ `ಎಲ್ಲಾದರು ಇರು ಎಂತಾದರು ಇರು’, `ಬಂಗಾರ ನೀರ ಕಡಲಾಚೆಗೀಚೆಗಿದೆ’, `ಕೃಷ್ಣನ ಕೊಳಲಿನ ಕರೆ`, `ಮೊದಲು ತಾಯ ಹಾಲ ಕುಡಿದು’, `ಹರಿ ಚರಣಕೆ ನಾ ಶರಣಾದೆʼ, `ಬಳೆಗಾರ ಚೆನ್ನಯ್ಯ’, ಮತ್ತು `ಕಂಡೆ ನಾ ಗೋವಿಂದನ’ – ಈ ಗೀತೆಗಳನ್ನು ಆಯ್ಕೆ ಮಾಡಲಾಗಿತ್ತು. 2015ರ ಕಾರ್ಯಕ್ರಮದಲ್ಲಿ `ಪಡುವಣ ಕಡಲಿನ ನೀಲಿಯ ಬಣ್ಣʼ, `ಕುಣಿದಾಡೊ ಕೃಷ್ಣ’, `ಸಹ್ಯಾದ್ರಿಯ ಕಾಡು ಬೆಳವಲ ಹಳೆಬೀಡು’, `ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’, `ಗಡಿಯಾಚೆ, ಗುಡಿಯಾಚೆ, ಗಿಡದಾಚೆಗೆ’, `ಶಾರದೆ ನೀರದೆʼ, `ಬಾ ರವಿ ಫಾಲ್ಗುಣ ರವಿ ದರ್ಶನಕೆ’, ಮತ್ತು `ಸಾವಿರ ದಳ ಕಮಲಿನಿ ಓ ಭಾರತಿ’…..ಈ ಹಾಡುಗಳಿದ್ದವು.
ಮೇಲ್ಕಂಡ ವಾಚನ-ನರ್ತನ ಸ್ಪರ್ಧೆಗೆ ತಯಾರಾಗಲು ಮಕ್ಕಳಿಗೆ ಸುಮಾರು ಮೂವತ್ತು ದಿನಗಳ ಕಾಲಾವಕಾಶವಿತ್ತು. ಆ ಅವಧಿಯಲ್ಲಿ ಅವರು ಹಾಡನ್ನು ಕೇಳಿ ಅರ್ಥ ಮಾಡಿಕೊಂಡು ತಮಗೆ ಗೊತ್ತಿದ್ದ ರೀತಿಯಲ್ಲಿ ನೃತ್ಯಸಂಯೋಜನೆ ಮಾಡಬೇಕಿತ್ತು. ಸ್ಪರ್ಧೆಯಲ್ಲಿ ವಾಚನದ ಭಾಗವೂ ಇದ್ದದ್ದರಿಂದ ಮಕ್ಕಳು ತಮಗೆ ಕೊಟ್ಟಿರುವ ಗೀತೆಯನ್ನು ಭಾವಾರ್ಥಪೂರ್ಣವಾಗಿ ವಾಚಿಸಲೂ ಸಹ ಅಭ್ಯಾಸ ಮಾಡಬೇಕಿತ್ತು. ಸ್ಪರ್ಧೆಯ ಭಾಗವಾಗಿರದ ಬೇರೆ ಕೆಲವು ಕವಿತೆಗಳನ್ನು ಇಟ್ಟುಕೊಂಡು `ವಾಚನ ಮಾಡುವುದು ಹೇಗೆ’, `ನೃತ್ಯ ಸಂಯೋಜನೆ ಮಾಡುವುದು ಹೇಗೆ’ ಎಂಬುದನ್ನು ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಡಲಾಯಿತು.
ಇಲ್ಲಿಂದ ಶುರುವಾಯಿತು ನೋಡಿ ಮಕ್ಕಳ ಸವಾಲಿನ ಒಂದು ಪ್ರಯಾಣ. ಪದಗಳ ಅರ್ಥ ಏನು ಎಂದು ತಿಳಿದುಕೊಳ್ಳಲು ಕಷ್ಟ ಪಟ್ಟಿದ್ದು, ತಂದೆ-ತಾಯಿ, ಶಾಲಾ ಅಧ್ಯಾಪಕರು, ತಮಗೆ ನೃತ್ಯ ಹೇಳಿಕೊಡುವ `ಟ್ರೈನರ್ ಅಕ್ಕಂʼದಿರನ್ನು (ಚಿಕ್ಕ ಮಕ್ಕಳಿಗೆ ತರಬೇತಿ ನೀಡುವ ನಮ್ಮ ತರಗತಿಯ ಹಿರಿಯ ವಿದ್ಯಾರ್ಥಿನಿಯರನ್ನು) `ಹಾಗಂದ್ರೆ ಏನಕ್ಕ?’ ಎಂದು ಆಗಾಗ ಕೇಳುತ್ತಿದ್ದದ್ದು, ಬೇಗ ಬಂದು, ಮನೆಗೆ ಹೋಗಲು ತಡವಾದರೂ ಇದ್ದು ಗಂಟೆಗಟ್ಟಲೆ ನೃತ್ಯ ಸಂಯೋಜನೆ ಮಾಡಿದ್ದು. ಕೆಲವೊಮ್ಮೆ `ಆಗಲ್ಲ ಮಿಸ್’ ಎಂದು ಅತ್ತಿದ್ದು, ತುಸು ಧೈರ್ಯ ಕೊಟ್ಟ ಮೇಲೆ ಕಣ್ಣೊರೆಸಿಕೊಂಡು ಮತ್ತೆ ಅಭ್ಯಾಸ ಮಾಡಲು ಓಡಿದ್ದು, ನೃತ್ಯದ ಮೇಲೆ ಹಿಡಿತ ಸಿಗುತ್ತ ಹೋದಂತೆ ಖುಷಿಯಿಂದ ಸಮಯದ ಪರಿವೆ ಇಲ್ಲದೆ ಅಭ್ಯಾಸ ಮಾಡಿದ್ದು……. ಇವೆಲ್ಲ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ವಾಚನ ಮಾಡಬೇಕಾಗಿದ್ದ ಹಾಗೂ ನೃತ್ಯ ಸಂಯೋಜಿಸಬೇಕಿದ್ದ ಕಾರಣ ಪದಗಳ ಅರ್ಥಗಳ ಬಗ್ಗೆ ಮಕ್ಕಳು ಸೂಕ್ಷ್ಮಗೊಂಡದ್ದು ಒಂದು ಮುಖ್ಯ ವಿಚಾರ. ಆಗಾಗ ಮಕ್ಕಳು ಮಾಡಿದ್ದನ್ನು ಗಮನಿಸುತ್ತ ಅವರ ಪ್ರಗತಿಯನ್ನು ಗಮನಿಸುವ ಕೆಲಸ ಮಾಡುತ್ತಿದ್ದೆವು. ಈ ಹಂತ ಮರೆಯಲಾಗದ್ದು. ಏಕೆಂದರೆ ಮಕ್ಕಳು ತಮ್ಮ ಉತ್ಸಾಹ, ಸೃಜನಶೀಲತೆ, ಪರಿಶ್ರಮ ಮತ್ತು ಮುಗ್ಧತೆಗಳಿಂದ ನಮ್ಮ ಕಣ್ಣಲ್ಲಿ ನೀರು ತಂದುಬಿಡುತ್ತಿದ್ದರು! ಆನಂದದ ಕಣ್ಣೀರು ಅದು! ತಪ್ಪು ತಿದ್ದಿದ್ದು ತುಂಬ ಕಡಿಮೆ. ಸಂತೋಷ ಪಟ್ಟದ್ದೇ ಹೆಚ್ಚು!
ಸುಮಾರು ಒಂದು ತಿಂಗಳು ಅಭ್ಯಾಸದ ನಂತರ ಪ್ರದರ್ಶನದ ದಿನ ಬಂತು. ಈ ದಿನ ವಾಚನ, ನರ್ತನಗಳ ಮೌಲ್ಯಮಾಪನ ಮಾಡಿ ತೀರ್ಪು ಕೊಡಲು ಮೊದಲ ವರ್ಷ(2014) ಭರತನಾಟ್ಯ ಗುರುಗಳಾದ ಶ್ರೀಮತಿ ಸೀತಾ ಗುರುಪ್ರಸಾದ್ ಹಾಗೂ ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ನುರಿತ ಶ್ರೀ ಶ್ರೀವರ್ಷ ಅವರನ್ನು ಆಹ್ವಾನಿಸಲಾಗಿತ್ತು; ಎರಡನೆ ವರ್ಷ(2015) ಭರತನಾಟ್ಯ ಕಲಾವಿದೆ ಕುಮಾರಿ ನಿಧಿ ಶೆಣೈ ಮತ್ತು ಕವಿ ಶ್ರೀ ಬೇಲೂರು ರಘುನಂದನ ಅವರನ್ನು ಬರಮಾಡಿಕೊಳ್ಳಲಾಗಿತ್ತು. ಹಂಪಿನಗರದ ಗ್ರಂಥಾಂಗಣದಲ್ಲಿ 2014 ಮತ್ತು 2015ರ ಡಿಸೆಂಬರ್ ತಿಂಗಳಿನ ಎರಡನೆ ಶನಿವಾರಗಳಂದು ಆಯೋಜಿಸಿದ್ದ ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಕ್ಕಳು ತುಂಬಿದ ಸಭೆಯಲ್ಲಿ ತಮ್ಮ ವಾಚನ, ನರ್ತನಗಳನ್ನು ಪ್ರದರ್ಶಿಸಿದರು. ತುಂಬ ಸಂತೋಷದ ಕ್ಷಣಗಳು ಅವು. ತಮ್ಮ ನೃತ್ಯಕ್ಕೆ ಬೇಕಾದ ವೇಷಭೂಷಣಗಳನ್ನೂ ಸಹ ಮಕ್ಕಳೇ ತಮ್ಮ ಪೋಷಕರ ಸಹಾಯದಿಂದ ವ್ಯವಸ್ಥೆ ಮಾಡಿಕೊಂಡಿದ್ದರು. `ಮಕ್ಕಳು ಹೇಳಿಕೊಟ್ಟದ್ದನ್ನು ಮಾಡುವ ಯಾಂತ್ರಿಕ ಗೊಂಬೆಗಳಾಗಬಾರದು, ತಮ್ಮ ಸೃಜನಶೀಲತೆಯನ್ನು ಹೊರಹೊಮ್ಮಿಸುವ ಚೈತನ್ಯದ ಚಿಲುಮೆಗಳಾಗಬೇಕು’ ಎಂಬ ಕನಸು ಅಂದು ಸಾಕಾರಗೊಂಡಿತು. ಮಕ್ಕಳು ಕವಿತಾ ವಾಚನ ಮಾಡಿದ ನಂತರ, ಅದೇ ಹಾಡಿಗೆ ತಾವೇ ಸಂಯೋಜನೆ ಮಾಡಿದ ನೃತ್ಯ ಮಾಡಿದರು. ಇದು ಯಾವುದೇ ಅಧ್ಯಾಪಕ ಮನಸ್ಸಿಗಾದರೂ ಸಂತೋಷ ಕೊಡುವ ವಿಷಯ.
`ಓದೋಣು ಬಾರಾ ಕುಣಿಯೋಣು ಬಾರಾ’ ಸ್ಪರ್ಧೆಯಲ್ಲಿ ಗೆದ್ದ ಮೂರು ತಂಡಗಳಿಗೆ ತಲಾ 2000ರೂಪಾಯಿಗಳ ಬಹುಮಾನ ನೀಡಲಾಯಿತು. ಇದರಲ್ಲಿ ಪಾರಿತೋಷಕ, ಸಪ್ನಾ ಬುಕ್ ಹೌಸ್‌ನ ಬಹುಮಾನ ಹಣಚೀಟಿ(ಗಿಫ್ಟ್ ವೋಚರ್) ಮತ್ತು ಪ್ರಮಾಣಪತ್ರಗಳು ಸೇರಿದ್ದವು. ಮಕ್ಕಳು ತೀರ್ಪುಗಾರರ ಮತ್ತು ಸಭಿಕರ ಸಮ್ಮುಖದಲ್ಲಿ ವೇದಿಕೆಯ ಮೇಲೆ ಮುಖ್ಯ ಅತಿಥಿಗಳಿಂದ ಬಹುಮಾನ ತೆಗೆದುಕೊಂಡು ಸಂಭ್ರಮಿಸಿದ್ದು ನಿಜಕ್ಕೂ ಸಂತೋಷ ಪಡಬೇಕಾದ ಸಮಯವಾಗಿತ್ತು.
ಒಟ್ಟಿನಲ್ಲಿ ಮಕ್ಕಳ ಸಾಹಿತ್ಯಾಸಕ್ತಿ ಮತ್ತು ಸೃಜನಶೀಲತೆ, ತಂಡಕಾರ್ಯದ ಮನೋಭಾವಗಳನ್ನು ವೃದ್ಧಿಸುವಲ್ಲಿ ಈ ಸ್ಪರ್ಧೆಯ ಪಾತ್ರ ಗಮನೀಯವಾದದ್ದು.
*****
“ಪರಿಹಾರದ ಭಾಗವಾಗಿರಿ” (ಬಿ ಎ ಪಾರ್ಟ್ ಆಫ್ ಸೊಲ್ಯೂಷನ್) ಎಂಬ ಸೂಕ್ತಿ ಇದೆ. ಮಕ್ಕಳಲ್ಲಿ ಉತ್ತಮ ಸೃಜನಶೀಲತೆ ಮತ್ತು ಕನ್ನಡ ಸಾಹಿತ್ಯಾಭಿರುಚಿ ಬೆಳೆಸಬೇಕು ಎಂಬ ಉದ್ದೇಶವನ್ನು ಕಾರ್ಯರೂಪಕ್ಕೆ ತರುವ ಒಂದು ಪ್ರಯತ್ನ `ಓದೋಣು ಬಾರಾ ಕುಣಿಯೋಣು ಬಾರಾ’.
ನಮ್ಮ ಪರಂಪರೆಯ ಭಾಗವಾದ ಭಾಷೆ, ಸಂಸ್ಕೃತಿ ಸಂಪತ್ತನ್ನು ನಮ್ಮ ಮಕ್ಕಳಿಗೆ ಕೊಡುವ ಅರ್ಥಪೂರ್ಣ ದಾರಿಗಳಲ್ಲಿ ಒಂದು ಭಾವನೃತ್ಯದ ದಾರಿ. `ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯಾಗಿಸಿ’ ಎಂದಿದ್ದಾರೆ ಹಿರಿಯರು. ಭಾವನೃತ್ಯಗಳು ನಮ್ಮ ಮಕ್ಕಳನ್ನು ನಾಡಿನ ಆಸ್ತಿಯಾಗಿಸಲು ಒಂದು ಒಳ್ಳೆಯ ದಾರಿ ಅನ್ನಿಸುತ್ತೆ.
ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.
ಮಕ್ಕಳ ಬೆಳವಣಿಗೆಯಲ್ಲಿ ನ್ರತ್ಯದ ಪ್ರಭಾವ ಎಷ್ಟೊಂದು ಪರಿಣಾಮಕಾರಿ ಇದೆ ಎಂಬುದು ತಿಳಿಯಿತು.ಇದರ ಮೂಲಕ ಅವರಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಯಿಸಿ ಅವರ ಸರ್ವೋತೋಮುಖ ಬೆಳವಣಿಗೆಗೆ ಕಾರಣವಾಗುತ್ತಿರುವ ತಮ್ಮ ಕಾರ್ಯ ಓದಿ ಬಹಳಷ್ಟು ಅಭಿಮಾನ ಮೂಡಿಸಿತು.