ಹೆಣ್ಣು ಹೆಣ್ಣನ್ನು ನಂಬಿ ಆದರಿಸಿ ಹೆಗಲ ಕೊಟ್ಟು ಬೆಂಬಲವಾಗಿ ನಿಲ್ಲಬೇಕಿದೆ. ಗಂಡನ್ನು ನೀನೆ ಸರ್ವಸ್ವ ಎನ್ನುವ ಅಥವಾ ಗಂಡನ್ನು ಸಂಪೂರ್ಣ ತ್ಯಜಿಸಿ ದ್ವೇಷಿಸುವುದು ಎನ್ನುವ ಎರೆಡೂ ಎಕ್ಸ್ಟ್ರೀಮ್ ಗಳ ಹೊರತಾಗಿ ಸಮತೋಲಿತ ದೃಷ್ಟಿಕೋನವೊಂದನ್ನು ಯೋಜಿಸಿಕೊಳ್ಳಬೇಕಾದ ಅಗತ್ಯವಿದೆ. ಒಂದು ಕಡೆ ಹೀಗೆಲ್ಲಾ ತೀವ್ರ ಅಸಮಾಧಾನದ ಸ್ಥಿತಿಯಲ್ಲಿ ತೊಳಲಾಡುತ್ತಿರುವ ಹೊತ್ತಿನಲ್ಲೇ ಮತ್ತೊಂದು ಕಡೆ ಒಂದಷ್ಟು ಹೆಣ್ಮನದ ಹೆಣ್ಗವಿತೆಗಳು ಹುಟ್ಟುತ್ತವೆ. ಹೆಣ್ಣುಮಕ್ಕಳೇ ತಾವು ಕಂಡ ಹೆಣ್ಮಕ್ಕಳ ಬಗ್ಗೆ ಕಕ್ಕುಲಾತಿಯಿಂದ ಬರೆಯತೊಡಗುತ್ತಾರೆ, ಪುಟ್ಟ ಹಣತೆಗಳಾಗಿ ಮತ್ತಾವುದೋ ಕಪ್ಪಡರಿದ ಹಣತೆಯ ತುದಿ ಬೆಚ್ಚಗಾಗಿಸಿ ಹೊತ್ತಿಸುವಂತೆ. ಮನಸಿಗೆ ಎಂಥದೋ ನಿರಾಳ. ಕಣ್ಣುಗಳು ತೇವ. ಆಯ್ತು ಇನ್ನೀಗ ಸಣ್ಣಗೆ ಸುಧಾರಿಸಿಕೊಳ್ಳಬಹುದು ಎನಿಸುವಂತಹ ಸಮಾಧಾನ.
ಆಶಾ ಜಗದೀಶ್ ಅಂಕಣ

 

ನಮ್ಮ ಶಾಲೆಯಲ್ಲಿ ಮುಖ್ಯಶಿಕ್ಷಕರನ್ನೂ ಸೇರಿದಂತೆ ನಾವೆಲ್ಲರೂ ಮಹಿಳೆಯರೇ ಇದ್ದೇವೆ. ಒಬ್ಬೇ ಒಬ್ಬ ಪುರುಷ ಶಿಕ್ಷಕರು ಇದ್ದರೂ ಮತ್ತೊಂದು ಶಾಲೆಗೆ ಅವರು ನಿಯೋಜನೆ ಮೇರೆಗೆ ಹೋಗಿರುತ್ತಾರೆ (ನಾಲ್ಕು ಜನ ಮಹಿಳೆಯರ ನಡುವೆ ಅವರಿಗೆ ಒಂಟಿತನ ಕಾಡಿರಬಹುದು ಬಹುಶಃ). ಮೂರು ಜನ ಅಡುಗೆಯವರೂ ಮಹಿಳೆಯರು. ಆದರೆ ಕೆಲಸದ ವಿಷಯಕ್ಕೆ ಬಂದಾಗ ಯಾವ ವಿಷಯದಲ್ಲೂ ನಾವು ರಾಜಿಯಾದದ್ದಿಲ್ಲ. ಮಹಿಳೆಯರು ಎನ್ನುವ ಕಾರಣಕ್ಕೆ ಅಡ್ವಾಂಟೇಜ್ ತೆಗೆದುಕೊಳ್ಳುವ ಮನಸ್ಥಿತಿ ನಮ್ಮಲ್ಲಿ ಯಾರಿಗೂ ಬಂದಿಲ್ಲ. ಇದುವರೆಗೂ ನಾವೆಲ್ಲ ನಮ್ಮ ನಮ್ಮ ಜವಾಬ್ದಾರಿಯನ್ನು ಅರಿತು ನಡೆದಿದ್ದೇವೆ. ನಮ್ಮಲ್ಲಿ ಒಂದೊಳ್ಳೆ ಹೊಂದಾಣಿಕೆ ಇದೆ. ಯಾರೂ ಯಾರನ್ನೂ ಹಿಂದೆ ಆಡಿಕೊಳ್ಳುವುದಿಲ್ಲ ಹಾಗೂ ನಮ್ಮ ನಡುವೆ ಒಂದೊಳ್ಳೆ ಗೆಳೆತನ ಬೆಳೆಯುತ್ತಿದೆ. ನಮ್ಮ ಖಾಸಗಿ ವಿಚಾರಗಳನ್ನೂ ಹಂಚಿಕೊಳ್ಳುವಷ್ಟು ಹತ್ತಿರವಾಗುತ್ತಿದ್ದೇವೆ.

 

ನಮ್ಮಲ್ಲಿ ವಯಸ್ಸಿನ ಅಂತರವಿದೆ. ನಮ್ಮೆಲ್ಲರಿಗಿಂತಲೂ ಕಿರಿಯ ವಯಸ್ಸಿನ ಮುಖ್ಯಶಿಕ್ಷಕರಿದ್ದಾರೆ. ನಮ್ಮ ನಮ್ಮ ವೈಯಕ್ತಿಕ ಜೀವನದ ಬದುಕೂ ಭಿನ್ನವಾಗಿದೆ. ಆದರೆ ಅವೆಲ್ಲವನ್ನೂ ನಾವು ನಮ್ಮ ಹೊಂದಾಣಿಕೆಗೆ ಪೂರಕವಾಗಿಸಿಕೊಂಡಿದ್ದೇವೆಯೇ ಹೊರತು ಯಾವತ್ತಿಗೂ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಯಾರೂ ಮಾಡಿಲ್ಲ. ಎರೆಡು ಜಡೆಗಳು ಸೇರೋದು ಕಷ್ಟ ಎನ್ನುವ ಮಾತಿಗೆ ಅಪವಾದದಂತೆ ನಾವಿದ್ದೇವೆ.

ಆದರೆ ಎಲ್ಲ ಕಡೆಯ ಪರಿಸ್ಥಿತಿಯೂ ಹೀಗಿರುವುದಿಲ್ಲ. ಔದ್ಯೋಗಿಕ ಕ್ಷೇತ್ರವೂ ಪುರುಷ ಪ್ರಧಾನತೆಗೆ ಹೊರತಾಗಿಲ್ಲ. ಈಗಲೂ ಮಹಿಳೆಯೊಬ್ಬರು ಉನ್ನತ ಸ್ಥಾನದಲ್ಲಿದ್ದಾರೆ ಎಂದರೆ ಅವರ ಕೈಕೆಳಗೆ ಕೆಲಸ ಮಾಡಲು ತಯಾರಿಲ್ಲದ ಹಲವು ಗಂಡಸರಿದ್ದಾರೆ. (ಹೆಂಗಸರೂ ಇದ್ದಾರೆ!). ಹೆಂಗಸರ ಕೈಗೆ ಅಧಿಕಾರ ಸಿಕ್ಕರೆ ಮುಗೀತು ಎನ್ನುವವರೂ ಹಲವು ಮಂದಿ. (ಕೆಲವು ಮಹಿಳೆಯರೂ ಈ ಮಾತಿಗೆ ಪೂರಕ ಎನ್ನುವಂತೆ, ಹೆಣ್ಣಾಗಿ ತಾವು ಅನುಭವಿಸಿದ ಅಷ್ಟೂ ಫ್ರಸ್ಟ್ರೇಶನ್ ಅನ್ನೂ ತಮ್ಮ ಕೈಕೆಳಗೆ ಕೆಲಸ ಮಾಡುವ ಪುರುಷ ಉದ್ಯೋಗಿಗಳ ಮೇಲೆ ಕಾರಿಕೊಳ್ಳುತ್ತಲೂ ಇರುತ್ತಾರೆ ಎನ್ನುವುದನ್ನೂ ಅಲ್ಲಗಳೆಯಲಾಗುವುದಿಲ್ಲ). ಅದನ್ನು ಉನ್ನತ ಹುದ್ದೆಯಲ್ಲಿರುವ ಹಲವಾರು ಮಹಿಳಾ ಅಧಿಕಾರಿಗಳು (ಉದಾ: ಶಾಲಿನಿ ರಜನೀಶ್, ರೂಪಾ ಡಿ., ಜೀಜಾ ಹರಿಸಿಂಗ್, ಕಿರಣ್ ಬೇಡಿ ಮತ್ತು ಮುಂತಾದವರು ಬಹಳಷ್ಟು ಸಂದರ್ಭಗಳಲ್ಲಿ ಅದನ್ನು ಹೇಳಿರುತ್ತಾರೆ) ತಾವು ತಮ್ಮ ವೃತ್ತಿಜೀವನದಲ್ಲಿ ಅನುಭವಿಸಿದ, ಎದುರಿಸಬೇಕಾಗಿ ಬಂದ ಸವಾಲುಗಳ ಬಗ್ಗೆ ಹೇಳಿಕೊಂಡಿರುವುದರಿಂದಲೂ ನಮಗೆ ಗೊತ್ತು.

ಆದರೆ ಒಂದು ಸ್ಥಾನಕ್ಕೆ ಮಹಿಳೆ ಮತ್ತು ಪುರುಷ ಏರಲಿಕ್ಕೆ ಅವರಿಗಿರುವ ಅವಕಾಶ, ಉತ್ತೇಜನ, ವಾತಾವರಣ, ಸಾಮಾಜಿಕ ಪರಿಸ್ಥಿತಿ, ದೈಹಿಕ ಪರಿಸ್ಥಿತಿ ಒಂದೇ ರೀತಿಯಾಗಿ ಇದೆಯಾ ಎಂಬುದನ್ನು ನೋಡುತ್ತಾ ಹೋದರೆ ನಮಗೆ ಅರ್ಥವಾಗುತ್ತದೆ, ಖಂಡಿತ ಒಂದೇ ಆಗಿ ಇಲ್ಲ! ಮಹಿಳೆ ಎನ್ನುವ ಒಂದೇ ಕಾರಣಕ್ಕೆ ಅವಳು ಸಮರ್ಥಳಾಗಿದ್ದಾಗ್ಯೂ ಉನ್ನತ ಹುದ್ದೆಗಳು ಅವಳ ಕೈತಪ್ಪುತ್ತವೆ. ಯಾಕೆ? ಮಹಿಳೆ ಎಂದರೆ ಕೈಲಾಗದವಳು, ನಿಶ್ಯಕ್ತಳು, ಮಾನಸಿಕ ಬಲಾಢ್ಯತೆ ಇಲ್ಲದವಳು, ಅಧೈರ್ಯವಂತಳು, ಪ್ರತಿ ತಿಂಗಳೂ ಮಾಸಿಕ ಬಾಧೆ ಅನುಭವಿಸುವವಳು, ಮಕ್ಕಳನ್ನು ಹೆತ್ತು ಅವುಗಳ ಲಾಲನೆ ಪಾಲನೆ ನೋಡಿಕೊಳ್ಳುತ್ತಾ ಮನೆಯಲ್ಲಿ ಇರತಕ್ಕವಳು ಎನ್ನುವ ಅದೇ ಮೂಲಭೂತ ಮನಸ್ಥಿತಿಯ ಕಾರಣದಿಂದ!

ಆದರೆ ಪರಿಸ್ಥಿತಿ ಬದಲಾಗಿದೆ, ಒಪ್ಪಿಕೊಳ್ಳೋಣ. ಎಷ್ಟರ ಮಟ್ಟಿಗೆ ಬದಲಾಗಿದೆ ಎನ್ನುವುದೂ ಬೇಕಲ್ಲವಾ… ಬದಲಾಗಬೇಕಾಗಿರುವುದು ವ್ಯವಸ್ಥೆ ಅಲ್ಲ, ಬದಲಾಗಬೇಕಾಗಿರುವುದು ಕಾನೂನು ಅಲ್ಲ. ಯಾವ ವ್ಯವಸ್ಥೆಯಾಗಲೀ ಯಾವ ಕಾನೂನೇ ಆಗಲಿ ಯಾರಿಂದಲಾದರೂ ಬಲವಂತವಾಗಿ ಅನುಪಾಲನೆ ಮಾಡಿಸಲು ಸಾಧ್ಯವಿಲ್ಲ. ಹಸುವನ್ನು ನೀರಿನವರೆಗೂ ಎಳೆದೊಯ್ಯಬಹುದೇ ವಿನಃ ಬಲವಂತವಾಗಿ ನೀರನ್ನು ಕುಡಿಸಲು ಸಾಧ್ಯವಿಲ್ಲ. ಯಾವುದು ಸರಿ ಎನ್ನುವ ವಿವೇಚನೆಯೊಟ್ಟಿಗೆ ಅದನ್ನು ಪೂರ್ಣ ಮನಸ್ಸಿನಿಂದ ಸಹಜವಾಗಿ ಸ್ವೀಕರಿಸಬೇಕು ಪ್ರತಿಯೊಬ್ಬರೂ.

ಮತ್ತೆ ಹೆಣ್ಣಿನ ಮೇಲೆ ಆಗುವ ಶೋಷಣೆ ಎನ್ನುವ ವಿಚಾರ ಬಂದಾಗ ಗಂಡಿನಿಂದಾಗವ ಶೋಷಣೆಯನ್ನಷ್ಟೇ ವಿಚಾರಮಾಡುತ್ತಾ ಹೋಗುವುದು ಅರ್ಧ ವಿಚಾರಣೆಯಾಗುತ್ತದಷ್ಟೇ. ಮತ್ತೆ ಸ್ತ್ರೀ ವಿಮೋಚನೆ ಎಂದರೆ ಏನು? ಪುರುಷನನ್ನು ತಿರಸ್ಕರಿಸುವುದಾ? ಅದು ಹಾಗೆ ಹೇಗಾಗಲು ಸಾಧ್ಯ?! ಪುರುಷ ಸ್ತ್ರೀಯ ಮೂಲಭೂತ ಅವಶ್ಯಕತೆ. ಅವರಿಬ್ಬರೂ ಒಬ್ಬರಿಗೊಬ್ಬರು ಪೂರಕರು. ಪ್ರಕೃತಿ ಅವರನ್ನು ಸೃಷ್ಟಿಸಿರುವುದೇ ಹಾಗೆ. ಪ್ರಕೃತಿಯ ಉಳಿವಿಗಾಗಿ, ಮುಂದುವರಿಕೆಗಾಗಿ ಅವರು ಹಾಗೇ ಇರಬೇಕಿದೆ. ಹೀಗಿರುವಾಗ ಪ್ರಕೃತಿಯ ದೃಷ್ಟಿಯಲ್ಲಿ ಸಮಾನ ಪ್ರಾಮುಖ್ಯತೆ ಪಡೆದ ಎರೆಡು ಜೀವಿಗಳು ತಮ್ಮ ತಮ್ಮಲ್ಲೇ ಶೋಷಣೆಯನ್ನು ಅಸ್ತ್ರವಾಗಿಸಿಕೊಂಡು ಒಂದು ಇನ್ನೊಂದರ ಅಳಿವನ್ನು ಕೋರುವುದು ಪ್ರಕೃತಿಗೆ ವಿರುದ್ಧವೇ. ಹಾಗಾದರೆ ಆ ಇಬ್ಬರೂ ಖಂಡಿತಾ ಅದಕ್ಕಾಗಿ ಸೃಷ್ಟಿಯಾದವರಲ್ಲ. ಅವರು ಒಟ್ಟಾಗಿ ಬದುಕಬೇಕಿರುವವರು ಸೃಷ್ಟಿಯ ನಿರಂತರ ಚಲನೆಗಾಗಿ. ಇದು ನಾವೆಲ್ಲ ನಮ್ಮ ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದ ಮನೆಯಿಂದಲೇ ಕೊಡಬೇಕಿರುವ ಸಂಸ್ಕಾರ.

ಸ್ತ್ರೀ ಶೋಷಣೆಯ ಮತ್ತೊಂದು ಮುಖವೆಂದರೆ ಹೆಣ್ಣೇ ಹೆಣ್ಣಿಗೆ ಶತ್ರುವಾಗಿಬಿಡುವುದು. ಮನೆಯಲ್ಲಿ ಮಗಳನ್ನು ಹೆಚ್ಚು ನಿರ್ಬಂಧಿಸುವವಳು ತಾಯಿಯೇ. ಗಂಡನ ಮನೆಯಲ್ಲಿ ಸೊಸೆಯನ್ನು ಹೆಚ್ಚು ನಿರ್ಬಂಧಿಸುವವಳು ಅತ್ತೆಯೇ (ಇದಕ್ಕೆ ಅಪವಾದ ಇಲ್ಲವೆಂದೂ ಹೇಳುತ್ತಿಲ್ಲ, ಇರಬಾರದು ಎಂದೂ ಇಲ್ಲ). ಅತ್ತೆ ಎಂದೂ ತಾಯಾಗಲು ಸಾಧ್ಯವಿಲ್ಲ ಎನ್ನುವ ಮನೋಭಾವ ಈಗಲೂ ಸೊಸೆಯರಲ್ಲಿದೆ. ಕೋಪ, ಮುನಿಸು, ಮತ್ಸರ, ಹೊಟ್ಟೆಕಿಚ್ಚು, ಕರುಬುವುದು, ಆಡಿಕೊಳ್ಳುವುದು, ಚಾಡಿ ಹೇಳುವುದು… ಹೀಗೆ ತಮ್ಮ ಬತ್ತಳಿಕೆಯ ಅಷ್ಟೂ ಬಾಣಗಳನ್ನು ಸಮಯೋಚಿತ ಮತ್ತು ಸಮಯನುಚಿತವಾಗಿಯೂ ಬಳಸುತ್ತಾ ಹೋಗುವ ಅದೆಷ್ಟೋ ಹೆಣ್ಣು ಮಕ್ಕಳಿದ್ದಾರೆ. ಪರಿಚಿತರು, ಗೆಳತಿಯರು, ಸಹೋದ್ಯೋಗಿಗಳು, ನೆರೆಹೊರೆಯವರು…. ಆಗಿಯೂ ಒಬ್ಬರ ಶ್ರೇಯೋಭಿಲಾಶಿಗಳು ಮತ್ತೊಬ್ಬರಾಗದೆ ತೆರೆಮರೆಯಲ್ಲಿ ಜರಿದು ಮಸಲತ್ತು ಮಾಡುವ, ಅದನ್ನೇ ಕಾಯಕವಾಗಿಸಿಕೊಂಡಂತೆ ವರ್ತಿಸುವ ಅದೆಷ್ಟೋ ಹೆಣ್ಣುಮಕ್ಕಳನ್ನೂ ನಾವು ಕಾಣುತ್ತೇವೆ.

ಇವರೆಲ್ಲ ಯಾಕೆ ಹೀಗೆ, ತಾವು ಪಟ್ಟ ಹಿಂಸೆಯನ್ನು ಬೇರೆಯವರೂ ಪಡಲಿ ಎಂದೇಕೆ ಬಯಸುತ್ತಾರೆ… ತಾವು ಮಾಡಲಾಗದ್ದನ್ನು ಮತ್ತೊಬ್ಬರಾದರೂ ಮಾಡಲಿ ಎಂದೇಕೆ ಆಶಿಸಲಾರರು ಎಂದೆಲ್ಲಾ ಯೋಚನೆ ಬರುತ್ತದೆ. ಆಗ ಅನಿಸುವುದು ಈ ನಿಟ್ಟಿನಲ್ಲೂ ಸ್ತ್ರೀ ವಿಮೋಚನೆಯಾಗಬೇಕಿದೆ. ಹೆಣ್ಣು ತನ್ನ ಚಿಂತನಾ ಕ್ರಮವನ್ನು ಬದಲಿಸಿಕೊಳ್ಳಬೇಕಿದೆ. ಉದಾತ್ತ ಚಿಂತನೆಗಳನ್ನು ತನ್ನ ಯೋಚನಾ ಕ್ರಮದ ಭಾಗವಾಗಿಸಿಕೊಳ್ಳಬೇಕಿದೆ. ಹೆಣ್ಣು ಹೆಣ್ಣನ್ನು ನಂಬಿ ಆದರಿಸಿ ಹೆಗಲ ಕೊಟ್ಟು ಬೆಂಬಲವಾಗಿ ನಿಲ್ಲಬೇಕಿದೆ. ಗಂಡನ್ನು ನೀನೆ ಸರ್ವಸ್ವ ಎನ್ನುವ ಅಥವಾ ಗಂಡನ್ನು ಸಂಪೂರ್ಣ ತ್ಯಜಿಸಿ ದ್ವೇಷಿಸುವುದು ಎನ್ನುವ ಎರೆಡೂ ಎಕ್ಸ್ಟ್ರೀಮ್ ಗಳ ಹೊರತಾಗಿ ಸಮತೋಲಿತ ದೃಷ್ಟಿಕೋನವೊಂದನ್ನು ಯೋಜಿಸಿಕೊಳ್ಳಬೇಕಾದ ಅಗತ್ಯವಿದೆ.

ಕೃತಿಯ ದೃಷ್ಟಿಯಲ್ಲಿ ಸಮಾನ ಪ್ರಾಮುಖ್ಯತೆ ಪಡೆದ ಎರೆಡು ಜೀವಿಗಳು ತಮ್ಮ ತಮ್ಮಲ್ಲೇ ಶೋಷಣೆಯನ್ನು ಅಸ್ತ್ರವಾಗಿಸಿಕೊಂಡು ಒಂದು ಇನ್ನೊಂದರ ಅಳಿವನ್ನು ಕೋರುವುದು ಪ್ರಕೃತಿಗೆ ವಿರುದ್ಧವೇ. ಹಾಗಾದರೆ ಆ ಇಬ್ಬರೂ ಖಂಡಿತಾ ಅದಕ್ಕಾಗಿ ಸೃಷ್ಟಿಯಾದವರಲ್ಲ. ಅವರು ಒಟ್ಟಾಗಿ ಬದುಕಬೇಕಿರುವವರು ಸೃಷ್ಟಿಯ ನಿರಂತರ ಚಲನೆಗಾಗಿ.

ಒಂದು ಕಡೆ ಹೀಗೆಲ್ಲಾ ತೀವ್ರ ಅಸಮಾಧಾನದ ಸ್ಥಿತಿಯಲ್ಲಿ ತೊಳಲಾಡುತ್ತಿರುವ ಹೊತ್ತಿನಲ್ಲೇ ಮತ್ತೊಂದು ಕಡೆ ಒಂದಷ್ಟು ಹೆಣ್ಮನದ ಹೆಣ್ಗವಿತೆಗಳು ಹುಟ್ಟುತ್ತವೆ. ಹೆಣ್ಣುಮಕ್ಕಳೇ ತಾವು ಕಂಡ ಹೆಣ್ಮಕ್ಕಳ ಬಗ್ಗೆ ಕಕ್ಕುಲಾತಿಯಿಂದ ಬರೆಯತೊಡಗುತ್ತಾರೆ, ಪುಟ್ಟ ಹಣತೆಗಳಾಗಿ ಮತ್ತಾವುದೋ ಕಪ್ಪಡರಿದ ಹಣತೆಯ ತುದಿ ಬೆಚ್ಚಗಾಗಿಸಿ ಹೊತ್ತಿಸುವಂತೆ. ಮನಸಿಗೆ ಎಂಥದೋ ನಿರಾಳ. ಕಣ್ಣುಗಳು ತೇವ. ಆಯ್ತು ಇನ್ನೀಗ ಸಣ್ಣಗೆ ಸುಧಾರಿಸಿಕೊಳ್ಳಬಹುದು ಎನಿಸುವಂತಹ ಸಮಾಧಾನ.

“ಕರಿಮಣಿ, ಕುಂಕುಮ, ಕಾಲುಂಗುರ
ಇಂತಹ ಕಾಗುಣಿತಗಳನ್ನೆಲ್ಲ
ಸೀತೆಯ ಸೆರಗ ತುದಿಯಲಿ ಹುದುಗಿಸಿಟ್ಟು
ಮರುಪೂರಣಗೊಳ್ಳುತ್ತಿರುವಾಗ
ಅಲ್ಲೆಲ್ಲೋ ಊರಲ್ಲಿ
ನೋವುಂಡ ಹೆಣ್ಣು ಜೀವದ ನಿಟ್ಟುಸಿರು
ಇಲ್ಲಿಲ್ಲೆ ಮತ್ತೆ ಚಲಿಸಿದಂತಿದೆ”
-ಅಕ್ಷತಾ ಕೃಷ್ಣಮೂರ್ತಿ

ಕಲಕಿದವು ಈ ಸಾಲುಗಳು. ಅಕ್ಷತಾ ಕೃಷ್ಣಮೂರ್ತಿಯವರ ‘ಕೋಳ್ಗಂಬ’ ಕವನ ಸಂಕಲನವನ್ನು ಓದುವಾಗ ಇಂತಹ ಅಪ್ಪಟ ಸ್ತ್ರೀ ಮನಸಿನ ಹಲವಾರು ಕವಿತೆಗಳು ಎಡತಾಕುತ್ತವೆ. ಒಂದು ಸ್ಪಷ್ಟ ಹೆಣ್ಣು ದನಿಯನ್ನು ಈ ಸಂಕಲನದುದ್ದುಕ್ಕೂ ನಾವು ಗುರುತಿಸಬಹುದು. ಮತ್ತು ತಣ್ಣನೆಯ ಆಕ್ರೋಶವನ್ನೂ ಕವಿತೆಯಲ್ಲಿ ಹೆಣೆಯುವ ಕವಯತ್ರಿಯರ ಕುಶಲತೆಯ ಬಗ್ಗೆಯೂ ಅಚ್ಚರಿಯೆನಿಸುತ್ತದೆ. ಇಲ್ಲಿ ಶೋಭಾ ಕಂಡ್ರಾಜೆಯವರ “ಕಲ್ಲಾದವಳಿಗೆ” ಎನ್ನುವ ಕವಿತೆಯೊಂದರ ತಣ್ಣಗಿನ ಆಕ್ರೋಶವನ್ನು ನೋಡಿ,
“ಒಬ್ಬನ ಮೋಸ ಇನ್ನೊಬ್ಬನ
ಶಾಪಕ್ಕೆ ಗುರಿಯಾಗಿಯೂ ನೀ
ಮೋಕ್ಷಕ್ಕೂ ಮತ್ತೊಬ್ಬನಿಗಾಗಿಯೇ
ಕಾದೆಯಲ್ಲವೇ?
ಅದಕ್ಕೇ ತಕರಾರಿದೆ ನಿನ್ನ ಬಗ್ಗೆ “
-ಶೋಭಾ ಹಿರೇಕೈ ಕಂಡ್ರಾಜೆ

ಎಂದು ಶುರುವಾಗುವ ಈ ಕವಿತೆಯಲ್ಲಿ, ಹೆಣ್ಣು ತನ್ನನ್ನು ತಾನೇ ನೋಡಿಕೊಳ್ಳುತ್ತಿರುವಂತಿದೆ. ಅವಳು ಹೆಣ್ಣು ಅವಳು ಸೋಲುತ್ತಾಳೆ. ಅವಳು ಹೆಣ್ಣು, ಹೆಣ್ಣು ಗಂಡೆನ್ನುವ ಭೇದ ಭಾವವಿಲ್ಲದೆಯೇ ಹಡೆಯುತ್ತಾಳೆ. ಹಾಗಾಗಿಯೇ ಅವಳು ಯಾರನ್ನೂ ದ್ವೇಷಿಸಲಾರಳು.(ಆದರೆ ಸಣ್ಣತನ ಅವಳಲ್ಲೂ ಇದೆ. ಸರಿ ತಪ್ಪುಗಳ ಅಳೆಯಲಾಗದ ಮುಗ್ಧತೆ, ಮತಿಗೇಡಿತನ ಅವಳಲ್ಲೂ ಇದೆ) ಆದರೆ ಅವಳ ಗರ್ಭಕ್ಕೆ ಆ ಭೇದ ಗೊತ್ತಿದ್ದಿದ್ದರೆ! ಇವತ್ತು ಸೃಷ್ಟಿಕ್ರಿಯೆಯೇ ಅಲ್ಲೋಲಕಲ್ಲೋಲವಾಗಿರುತ್ತಿತ್ತು. ಒಬ್ಬನಿಂದ ಮೋಸ ಹೋಗಿ, ಒಬ್ಬನಿಂದ ಪರಿತ್ಯಕ್ತಳಾಗಿಯೂ ಮೋಕ್ಷಕ್ಕಾಗಿ ಮತ್ತೊಬ್ಬನನ್ನು ಆಶ್ರಯಿಸಬೇಕಾಗಿ ಬಂದ ಅವಳ ಪಾಡನ್ನು ಕಂಡು ಅದರ ಬಗ್ಗೆ ತಕರಾರಿದೆ ಎನ್ನುತ್ತಾರೆ ಕವಯಿತ್ರಿ. ಇಲ್ಲಿ ಯೋಚಿಸಬೇಕಿರುವುದು ಅವಳು ಅವನನ್ನು ವಿರೋಧಿಸಬೇಕಿತ್ತು ಎನ್ನುವುದರ ಬಗ್ಗೆ ಎನ್ನುವುದಕ್ಕಿಂತ ಅವಳನ್ನು ಹಾಗೆ ಇರಬೇಕೆಂದು ನಿರೀಕ್ಷಿಸುವ ಸಮಾಜದ ಬಗ್ಗೆ. ತಾರತಮ್ಯದ ಮನೋಭಾವದ ಬಗ್ಗೆ.
ರೇಣುಕಾ ರಮಾನಂದರ “ಹಿಂದೊಮ್ಮೆ ನಾನು ಹೆಣ್ಣಾಗಿದ್ದೆ” ಎನ್ನುವ ಕವಿತೆಯೂ ಕಾಡುವಂಥದ್ದು.

ಹೆಣ್ಣೆಂದರೆ ಕೇವಲ ಒಂದು ಹೆಣ್ಣು
ಧರ್ಮದ ಬಗ್ಗೆ ಸುಮ್ಮನೆ
ಯಾಕೆ ತಲೆಕೆಡಿಸಿಕೊಳ್ಳುವಿರಿ
ಒಡಕು ಹಿಮ್ಮಡಿ ಮಾಯಲು ಬಿಡದೇ
ಸದಾ ಭೀತಿಯ ಬಿಚ್ಚುಗೊಡಲಿಯ ಹಿಡಿದು
ಹೆಣ್ಣುಗಳ ದುಡಿಸಿಕೊಳ್ಳುವುದು
ಎಲ್ಲ ಧರ್ಮಗಳ ಜನ್ಮಸಿದ್ಧ ಹಕ್ಕು
ಬುರ್ಖಾಗಳು ಗೌನುಗಳು
ತರಹೇವಾರಿ ಬಣ್ಣದ ಸೀರೆಗಳು
ಮರೆಮಾಡುತ್ತವೆ ನಮ್ಮ
ಒಣಕೆಮ್ಮುಗಳನ್ನು ಸರ್ಪಸುತ್ತುಗಳನ್ನು
ನೆರೆಹಾವಳಿಯಂತಹ ಮಾಸಿಕ ಸ್ರಾವಗಳನ್ನು
ಅವರದೇ ಮಕ್ಕಳಿಗೆ ತಾಯಾದ
ಜೋಲು ಬಿದ್ದ ಹೊಟ್ಟೆಗಳನ್ನು
ಮತ್ತದರ ಮೇಲಿನ ಆಕಾರಗೆಟ್ಟ ಮೊಲೆಗಳನ್ನು”
-ರೇಣುಕಾ ರಮಾನಂದ
ಎನ್ನುವ ಈ ಕವಿತೆಯ ಸಾಲುಗಳ ಅದೆಷ್ಟೋ ಹೆಣ್ಣು ಮಕ್ಕಳ ಎದೆಯ ದನಿಯಂತೆ ಪ್ರತಿಧ್ವನಿಸುತ್ತವೆ. ನಿಜ ಯಾವ ಜಾತಿ ಧರ್ಮಗಳೂ ಹೆಣ್ಣಿನ ಸ್ಥಿತಿಯಲ್ಲಿ ಸುಧಾರಣೆ ತರಲು ಯತ್ನಿಸಿಲ್ಲ ಎನ್ನುವುದು ವಿಷಾದಕರ. ಜಾತಿ ಧರ್ಮಗಳೆನ್ನುವ ಮುಸುಕು ಪೋಷಾಕು ಹೆಣ್ಣಿನ ಯಾವ ಕಷ್ಟಕ್ಕೂ ಒದಗಿಬಂದಿಲ್ಲ ಎನ್ನುವುದು ದುರದೃಷ್ಟಕರ.

ಪ್ರತಿಭಾ ನಂದವಕುಮಾರರ “ಮುದುಕಿಯರಿಗಿದು ಕಾಲವಲ್ಲ” ಎನ್ನುವ ಕವನ ಸಂಕಲನದಲ್ಲಿ ಹೆಣ್ಣು ಮಕ್ಕಳ ಅಂತರಂಗಕ್ಕೆ ಹಿಡಿದ ಕನ್ನಡಿಯಂತಹ ಹಲವಾರು ಕವಿತೆಗಳಿವೆ. ಮತ್ತೆ ಈ ಸಂಕಲನದಲ್ಲಿನ ಜ್ವಾಲಾಮುಖಿ ಅಮ್ಮನವರು ಕವಿತೆಗಳೂ ಸಹ ವಿಶೇಷ ವಿಶಿಷ್ಟ ಕವಿತೆಗಳು.

“ಕಿಟಕಿ ಹೊರಗೆ ಚಿಗುರು ಚೈತ್ರ…
ನನ್ನದೇ ಹೆಸರಿನವಳು ಕೊಲೆಯಾಗಿಹೋದಳು
ಒಳಗೆ ಹಾಸಿದ ಹಾಸಿಗೆಯ ಹಂಗಿಲ್ಲದ ಕನಸು
ಹಗಲು ಇರುಳುಗಳ ನಿಯಮ ಸಡಿಲು
ಕ್ಯಾಬ್ ಗೆ ಕಾಯುತ್ತಾ ಟಿವಿಯಲ್ಲಿ ಕ್ಷಣ ಕ್ಷಣ
ಬದಲಾಗುವ ಚಿತ್ರಗಳು
ಡ್ರೈವರನೇ ಕೊಲೆ ಮಾಡಿದ್ದಕ್ಕೆ ಸಾಕ್ಷಿ ಪುರಾವೆ
ಏನೂ ಇಲ್ಲ. ಗಂಡನೂ ಅಂಕಿತ. ಅತ್ತೆ ಮಾವರೂ ಹೊರತಲ್ಲ
ಕೊಲೆಗೆ ಮುನ್ನ ಅವಳಲ್ಲೂ ಕವನ ಹುಟ್ಟಿರಬಹುದು”
-ಪ್ರತಿಭಾ ನಂದಕುಮಾರ್

ತಮ್ಮ ಹೆಸರಿನಲ್ಲಿ ಅವಳನ್ನು ಕಾಣುತ್ತಾ ಶುರುವಾಗುವ ಕವಿತೆ, ಅವಳ ಕೊಲೆಯ ಸುತ್ತಾ ಸುತ್ತುತ್ತಾ ಹೋಗುತ್ತದೆ. ಆದರೆ ಕೊನೆಯ ಸಾಲು ಮಾತ್ರ ತೀವ್ರ ಯೋಚನೆಗೆ ದೂಡುತ್ತದೆ. ಅವಳಲ್ಲಿ ಕೊನೆಯದಾಗಿ ಹುಟ್ಟಿದ ಕವಿತೆ ಏನಿರಬಹುದು? ಯಾವುದಿರಬಹುದು? ಅವಳ ಆಸೆ ಆಕಾಂಕ್ಷೆ ಆಸೆ ಏನಿದ್ದಿರಬಹುದು? ಆದರೆ ಅವೆಲ್ಲ ಈ ಕ್ಷಣಕ್ಕೆ ಎಷ್ಟು ನಿರರ್ಥಕ! ಮತ್ತೆ ಅವಳ ಆಸೆಗಳಾದರೂ ಏಕಿಷ್ಟು ಕ್ಷುಲ್ಲಕ ಯಾರಾದರೂ ಬಲವಂತವಾಗಿ ಹೊಸಕಿ ಹಾಕುವಷ್ಟು! ಅನಿಸಿ ಮನಸು ನೋಯತೊಡಗುತ್ತದೆ….