Advertisement
ಕಳ್ಳರು ಹಾಕಿದ ಕೊಡಲಿಯೇಟು…: ಜುಲೇಖಾ ಬೇಗಂ ಜೀವನ ವೃತ್ತಾಂತ

ಕಳ್ಳರು ಹಾಕಿದ ಕೊಡಲಿಯೇಟು…: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಮ್ಮೆ ಆಡುತ್ತಾ, ಮನೆಗೆ ಬರುವುದು ತಡವಾಯಿತು. ಬಾಗಿಲೆದುರು ಬಂದು ನಿಂತೊಡನೆ, ಅವ್ವ ಸಿಟ್ಟಿನಿಂದ ನನ್ನ ಬಟ್ಟೆಯನ್ನೆಲ್ಲ ಬಿಚ್ಚಿ ಒಳಗೆಸೆದು, ‘ಈಗ್ ಹೋಗು. ನೋಡಾನ’ ಎಂದಿದ್ದಷ್ಟೇ ಅಲ್ಲ, ದಢಾರನೇ ಬಾಗಿಲನ್ನೂ ಮುಚ್ಚಿದಳು. ಆ ವಯಸ್ಸಿಗೆ ಅವ್ವ ತೋರುತ್ತಿದ್ದ ಪ್ರೀತಿಯ ಕದವೂ ಮುಚ್ಚಿದಂತೆನಿಸಿತು. ಈಗೆಲ್ಲಿಯಾದರೂ ಜೀವನದಲ್ಲಿ ಕಳೆದ ಘಟನೆಯೊಂದನ್ನು ಅಳಿಸಿಹಾಕುವ ಅವಕಾಶ ಸಿಕ್ಕರೆ ಬಹುಶಃ ಇದಕ್ಕೇ ಬಳಸಿಕೊಳ್ಳುತ್ತೇನೆ.
ಕೀರ್ತಿ
ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಐದನೆಯ ಕಂತು

ಆಗ ಕುಕನೂರಲ್ಲಿ ನೆಲಗಡಲೆ (ಶೇಂಗಾ) ಸುಗ್ಗಿ ಮಾಡುವುದಕ್ಕೆಂದು ರಾಯಚೂರು ಜಿಲ್ಲೆಯಿಂದೆಲ್ಲ ಜನ ಸೇರುತ್ತಿದ್ದರು. ಸಾವಿರಾರು ಜನ ಕೂಡುತ್ತಿದ್ದ ಸುಗ್ಗಿಯದು. ಅಪ್ಪ ಕಣ್ಮರೆಯಾದಾಗಿನಿಂದ ಅವ್ವ ಮಂಕಾಗಿದ್ದಳು. ಗಂಡನ ದಾರಿ ಕಾಯುತ್ತಾ ಕೂರುತ್ತಿದ್ದ ನೆನಪು ನನಗೀಗಲೂ ಇದೆ. ಆದರೆ ನೆಲಗಡಲೆ ಸುಗ್ಗಿಗೆ ಊರಿಗೆ ಊರೇ ತಯಾರಿ ನಡೆಸುವ ಹೊತ್ತಿಗೆ ಅವ್ವನೂ ಹೊರಟುನಿಂತಳು. ನಾನೂ ಜೊತೆಯಾದೆ. ಶೇಂಗಾ ಗಿಡವನ್ನು ಕಿತ್ತ ಮೇಲೆ ಆ ಗದ್ದೆಯಲ್ಲಿ ಬಿದ್ದ ನೆಲಗಡಲೆಗಳನ್ನು ಸಂಗ್ರಹಿಸುವ ಕೆಲಸಕ್ಕೆ ಊರಿನವರೆಲ್ಲ ಕೈ ನೀಡುತ್ತಿದ್ದರು. ದೊಡ್ಡ ಈರುಳ್ಳಿ ಚೀಲ, ಸೇರು, ಚೊಂಬುಗಳನ್ನೆಲ್ಲ ಹಿಡಿದು ಊರಿನವರೆಲ್ಲ ಸದ್ದುಗದ್ದಲ ಮಾಡುತ್ತಾ ರಂಗೇರಿಸುತ್ತಿದ್ದರು.

ತಾವು ಆರಿಸಿದ ಶೇಂಗಾವನ್ನೆಲ್ಲ ಗದ್ದೆಯ ಮಾಲೀಕರಿಗೆ ನೀಡಬೇಕು. ಅವ್ವ ನನ್ನ ಕೈಚೀಲ ತೋರಿಸಿ, ‘ಮಗ್ಳು ಮಲ್ಲಮ್ಮ ಆರಿಸಿದ್ರಿ’ ಎಂದರೆ, ಮಾಲೀಕರು ನಗುತ್ತಾ, ‘ನಿನ್ ಮಗ್ಳು ಆರಿಸಿದ್ದು ನಂಗ್ಯಾಕೆ? ನೀವೇ ಇಟ್ಕೊರಿ’ ಎಂದಷ್ಟಕ್ಕೆ ಸುಮ್ಮನಾಗದೆ, ಇನ್ನೆರಡು ಬೊಗಸೆ ನೆಲಗಡಲೆ ನನ್ನ ಚೀಲಕ್ಕೆ ಹಾಕಿ ಕಳುಹಿಕೊಡುತ್ತಿದ್ದರು. ‘ಮ್ಯಾವುಂಡಿ ತಿನ್ಸು ಮತ್ತೆ’, ಅವ್ವ ಮರೆತಾಳೇನೊ ಎಂದು ನೆನಪಿಸುತ್ತಿದ್ದರು. ಮ್ಯಾವುಂಡಿ ಎಂದರೆ ಕಡಲೆಹಿಟ್ಟು, ಬೆಲ್ಲ ಸೇರಿಸಿ ಮಾಡಿದ ಉಂಡೆ. ಹತ್ತಿ ಬಿಡಿಸೋ ಸುಗ್ಗಿಯಲ್ಲಂತೂ ಸಿಣ್ಣಿ, ಮ್ಯಾವುಂಡಿ ಖರೀದಿ ಹೆಚ್ಚಾಗಿರುತ್ತಿತ್ತು.

ಸುಗ್ಗಿ ಕಳೆದರೂ ಸಂಭ್ರಮದ ಕಳೆ ಊರಿಂದ ಮಾಸಿರಲಿಲ್ಲ. ಅಷ್ಟರಲ್ಲೊಬ್ಬರು ‘ನಿನ್ ಗಂಡ ಹೊಸಪೇಟೆಗೆ ಅದಾನ. ವ್ಯಾಪಾರ ಮಾಡ್ತಾನ. ದೊಡ್ ಅಂಗ್ಡಿ ಇಟ್ಕೊಂಡಾನ’ ಎಂದಾಗ ಅವ್ವನ ಆತಂಕ, ಗಡಿಬಿಡಿ, ನಿರಾಳತೆ ಓಡಾಟದಲ್ಲೇ ವ್ಯಕ್ತವಾಗುತ್ತಿತ್ತು. ಅದೆಷ್ಟು ಪ್ರಶ್ನೆಗಳು ಅವಳ ಮನಸ್ಸಿನೊಳಗೆ ಸುಳಿದಾಡಿರಬಹುದು!

ಸರಿ, ತಡಮಾಡದೆ ಅಪ್ಪ ಅಂಗಡಿಯಿಟ್ಟಿದ್ದ ವಿಳಾಸದೆಡೆಗೆ ಹೊರಟೆವು. ಹೊಸಪೇಟೆಯ ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರ ಕಳೆದರೆ ದೊಡ್ಡದೊಂದು ಕ್ಯಾನಲ್‌ ಇದೆ. ಅದರ ಪಕ್ಕದಲ್ಲಿದ್ದ ಹೂ, ಹಣ್ಣು, ಮನೆ ದಿನಸಿ ವಸ್ತುಗಳ ಅಂಗಡಿಯದು. ಅವ್ವ ಧುತ್ತೆಂದು ಅಪ್ಪನ ಅಂಗಡಿಯೆದುರೇ ನಿಂತುಬಿಟ್ಟಳು. ತುಂಬಿದ ಬಸುರಿಯ ಮನಸ್ಸಿನಲ್ಲಿ ಗೊಂದಲಗಳೇ ಗೂಡು ಕಟ್ಟಿಕೊಂಡಿದ್ದವೆಂದು ಅಪ್ಪನಿಗೆ ತಿಳಿಯದೆ ಇರಲಿಲ್ಲ. ಆ ಬಳ್ಳಾರಿ ಹುಡುಗಿಯೆಡೆಗೆ ಆಕರ್ಷಿತರಾದ ಅಪ್ಪ ಮನೆಯಿಂದ ನಾಪತ್ತೆಯಾಗುವ ಮುನ್ನ ಕೈ ತುಂಬಾ ಕಾಸು, ಅವ್ವನ ಒಂದಷ್ಟು ಒಡವೆ ಎಲ್ಲವನ್ನು ಕೊಂಡೊಯ್ದಿದ್ದರು. ಕೈ ಬರಿದಾಗುತ್ತಿದ್ದಂತೆ ಅವಳ ಒರಸೆಯೂ ಬದಲಾಯಿತಂತೆ, ಹೇಳದೆ ಮಾಯವಾದಳು. ಕುಕನೂರಿಗೆ ಮರಳಿದರೆ ಆಗಬಹುದಾದ ನಾಚಿಕೆ, ಮುಜುಗರದ ಬಗ್ಗೆ ಅಪ್ಪನಿಗೆ ಯೋಚನೆ ಬಂದಿದ್ದೇ ಆಗ! ಹಾಗಾಗಿ ಬರುವುದು ಸೂಕ್ತವಲ್ಲವೆನಿಸಿ ಅಲ್ಲೇ ಮನೆ ಮಾಡಿಕೊಂಡು, ಅಂಗಡಿ ನಡೆಸುತ್ತಿದ್ದರು. ಈಗ ಅವ್ವ ಎದುರುನಿಂತಾಗ, ಅವಳ ಮಾತುಗಳೆಲ್ಲ ಕಣ್ಣೀರಾಗಿ ಜಾರುತ್ತಿತ್ತು. ಸಮಾಧಾನ ಮಾಡುವುದನ್ನು ಬಿಟ್ಟು ಅಪ್ಪನಿಗೆ ಬೇರೆ ದಾರಿ ಇನ್ನೇನಿತ್ತು?

ಅವ್ವ ಅಪ್ಪನೆಡೆಗೆ ಹೀಗೆ ಹೊರಟುಬಂದಾಗ ತುಂಬು ಬಸುರಿಯಾಗಿದ್ದಳು. ಯಾವ ಘಳಿಗೆಯಲ್ಲಾದರೂ ಪ್ರಸವ ಆಗಬಹುದಿತ್ತು. ಹಾಗಾಗಿ ಮತ್ತೆ ಕುಕನೂರಿಗೆ ಮರಳುವ ಸಾಹಸಕ್ಕೆ ಅವ್ವ ಕೈ ಮುಗಿದಿದ್ದಳು. ಹೊಸಪೇಟೆಯಲ್ಲಿರುವಾಗಲೇ ಗಂಡು ಮಗುವಾಯಿತು. ನನಗೆ ಬಸವರಾಜ ತಮ್ಮನೇನೊ ಹುಟ್ಟಿದ. ಆದರೆ ಅವ್ವ ಅಪ್ಪ ತೋರುತ್ತಿದ್ದ ಪ್ರೀತಿಯಲ್ಲಿ ಈಗ ಅವನಿಗೇ ಸಿಂಹಪಾಲು. ಏಳು ವರ್ಷಗಳ ಹಿಂದೆ ನನಗಾಗಿಯೇ ಕರೆಯುತ್ತಿದ್ದ ಮುದ್ದು, ಬಂಗಾರ ಪದಗಳೆಲ್ಲ ಅವನಿಗೇ ಸೀಮಿತ ಎಂಬಂತೆ ಅವ್ವ ತೀರ್ಮಾನಿಸಿದ್ದಳು. ಸಹಜವಾಗಿ ಅವನಿಂದಾಗಿ ಬೇಸರ, ಮಾತ್ಸರ್ಯಗಳೆಲ್ಲ ನನ್ನೊಳಗೂ ಮೈದಳೆಯತೊಡಗಿತು. ‘ತಮ್ಮ ಬಂಗಾರ, ಮಲ್ಲಮ್ಮ ಬೆಳ್ಳಿ’ ಎಂಬ ಸಂಬೋಧನೆಯಲ್ಲಿ ವ್ಯತ್ಯಾಸಗಳೆಲ್ಲ ಅರ್ಥವಾಗುತ್ತಿತ್ತು. ‘ಮೊದ್ಲು ಬಂಗಾರ ಅಂತಿದ್ದಿ. ಈಗ ನಾ ಬರೇ ಬೆಳ್ಳಿಯೇನು?’ ಎಂದು ಪ್ರಶ್ನಿಸಿಯೇ ಬಿಟ್ಟೆ. ‘ನಂಗ್ ಈ ಮನೀನೆ ಬೇಡ. ಬಿಟ್ ಹೋಕೇನಿ’ ಎಂದೂ ಹೇಳತೊಡಗಿದೆ. ಅವ್ವ ಸಹನೆಯನ್ನೆಲ್ಲ ಕಳೆದುಕೊಂಡು, ಕೈಗಳನ್ನೇ ಬಡಿಗೆಯಾಗಿಸಿಕೊಂಡಳು. ಬೆನ್ನು, ಕೈ ತೋಳುಗಳೆನ್ನದೆ ಬೀಳುತ್ತಿದ್ದ ಏಟು ದಿನಚರಿಯ ಭಾಗವಾಯಿತು.

ಹೊಸಪೇಟೆಯಲ್ಲಿ ನಾವಿದ್ದಲ್ಲಿಂದ ಒಂದಷ್ಟು ದೂರಕ್ಕೆ ಮುಸ್ಲಿಮರ ಮನೆಗಳಿದ್ದವು. ಅಂಗಡಿಗೆ ಅವರು ಬರುತ್ತಿದ್ದದ್ದರಿಂದ ಪರಿಚಯವಾಯಿತು. ಮಕ್ಕಳಿಗಾಗಿ ಬಟ್ಟೆಯಿಂದಲೇ ಗೊಂಬೆಗಳನ್ನು ಮಾಡಿಕೊಡುತ್ತಿದ್ದರು. ಗೊಂಬೆಯಾಟಕ್ಕೆ ನನ್ನನ್ನೂ ಸೇರಿಸಿಕೊಳ್ಳುತ್ತಿದ್ದರು. ನಾನೂ ಪ್ರೀತಿ ಕೊಡುವ ಹೊಸ ಸಂಬಂಧಗಳನ್ನು ಅರಸುತ್ತಿದ್ದೆ. ಒಟ್ಟಾಗಿ ನಾವೆಲ್ಲ ಆಡುತ್ತಿದ್ದೆವು. ಹೀಗೆ ಒಮ್ಮೆ ಆಡುತ್ತಾ, ಮನೆಗೆ ಬರುವುದು ತಡವಾಯಿತು. ಬಾಗಿಲೆದುರು ಬಂದು ನಿಂತೊಡನೆ, ಅವ್ವ ಸಿಟ್ಟಿನಿಂದ ನನ್ನ ಬಟ್ಟೆಯನ್ನೆಲ್ಲ ಬಿಚ್ಚಿ ಒಳಗೆಸೆದು, ‘ಈಗ್ ಹೋಗು. ನೋಡಾನ’ ಎಂದಿದ್ದಷ್ಟೇ ಅಲ್ಲ, ದಢಾರನೇ ಬಾಗಿಲನ್ನೂ ಮುಚ್ಚಿದಳು. ಆ ವಯಸ್ಸಿಗೆ ಅವ್ವ ತೋರುತ್ತಿದ್ದ ಪ್ರೀತಿಯ ಕದವೂ ಮುಚ್ಚಿದಂತೆನಿಸಿತು. ಈಗೆಲ್ಲಿಯಾದರೂ ಜೀವನದಲ್ಲಿ ಕಳೆದ ಘಟನೆಯೊಂದನ್ನು ಅಳಿಸಿಹಾಕುವ ಅವಕಾಶ ಸಿಕ್ಕರೆ ಬಹುಶಃ ಇದಕ್ಕೇ ಬಳಸಿಕೊಳ್ಳುತ್ತೇನೆ.

ಮನೆಯಲ್ಲಿ ಅಪ್ಪ ಇರಲಿಲ್ಲ. ಅಳುವುಕ್ಕಿ ಬರುತ್ತಿತ್ತು. ಮನಸ್ಸು ಮಮತೆ, ವಾತ್ಸಲ್ಯಕ್ಕಾಗಿ ಹಂಬಲಿಸುತ್ತಿತ್ತು. ವಿವಸ್ತ್ರಳಾಗಿ ಅದೇ ಮುಸ್ಲಿಮರ ಮನೆಗೆ ನಡೆದೆ. ‘ಯೇ ಕ್ಯಾ ಹೈ? ಉನೇ ಕಪಡೇ ಪೇನ್‌ಕೋ ನೈ’ ಎನ್ನುತ್ತಲೇ ಕೈ ಹಿಡಿದು ಒಳಕರೆದರು. ಅವ್ವ ಹೊಡೆದದ್ದು, ಬೈದು ಬಟ್ಟೆಯನ್ನೇ ಬಿಚ್ಚಿದ್ದು, ಬಾಗಿಲು ಹಾಕಿದ್ದು ಎಲ್ಲವನ್ನೂ ಅವರೆದುರು ಹೇಳಿಕೊಂಡೆ. ಅಯ್ಯೋ ಎಂದು ಬೇಸರಿಸುತ್ತಾ, ತಮ್ಮ ಮಕ್ಕಳ ಬಟ್ಟೆಯನ್ನೇ ತೊಡಿಸಿದರು. ಅತ್ತ ಆರು ತಿಂಗಳು ಕಳೆಯದ ಕೂಸು ಬಿಟ್ಟು ಅವ್ವ ಕರೆದುಕೊಂಡು ಹೋಗುವುದಕ್ಕೆ ಬರಲಿಲ್ಲ. ನನಗಾಗ ಅವರೇ ಆಪ್ತರಾಗಿದ್ದರು. ಆವತ್ತು ಅಲ್ಲೇ ಉಳಿದೆ. ಬಾಂಧವ್ಯ ಹೇಗೆಲ್ಲ ಬೆಸೆಯುತ್ತೆ ನೋಡಿ! ಮಾರನೇ ದಿನಕ್ಕೆ ಅಪ್ಪ ಬಂದರು. ಮನೆಗೆ ಕರೆದೊಯ್ದ ತಕ್ಷಣ ಅವ್ವನೊಂದಿಗೆ ಜಗಳಕ್ಕೆ ನಿಂತೇಬಿಟ್ಟರು. ನನ್ನಿಂದಾಗಿ ಅಪ್ಪ ಅವ್ವರ ನಡುವೆ ವಾಗ್ವಾದ ನಡೆಯುವಂತಾಯಿತಲ್ಲಾ, ಇಬ್ಬರೂ ಚೆನ್ನಾಗಿರಬೇಕು. ಅಪ್ಪನಿಗೆ ಇನ್ಯಾವತ್ತೂ ಚಾಡಿ ಹೇಳಬಾರದೆಂದು ನಿರ್ಧರಿಸಿದೆ.

ಆ ದೊಡ್ಡ ಕ್ಯಾನಲ್ ಪಕ್ಕದಲ್ಲಿದ್ದ ಶಿವನ ಗುಡಿಗೆ ನಿತ್ಯವೂ ಹೋಗುತ್ತಿದ್ದೆ. ಪ್ರಾರ್ಥನೆಯ ಪಟ್ಟಿ ಒಪ್ಪಿಸುವುದು ನನಗೇನೂ ಹೊಸತಾಗಿರಲಿಲ್ಲ. ಅವ್ವ ಹೊಡೆಯಬಾರದು ಎಂಬುದೊಂದೇ ಬೇಡಿಕೆ. ಆರೋಗ್ಯ, ಅಂತಸ್ತು ಕೊಡು ಅಂತೆಲ್ಲ ತಲೆಗೆ ಹೊಳೆಯುತ್ತಲೇ ಇರಲಿಲ್ಲ ಬಿಡಿ. ಹಾಂ… ಹೀಗಾಗಿರಬಹುದು, ದೇವರು ಇಂತಹ ಪಟ್ಟಿಯನ್ನೇ ನೋಡಿ ನೋಡಿ, ಒಂದೇ ಸಾಲಿನ ನನ್ನ ನೂರೆಂಟು ಪ್ರಾರ್ಥನೆ ಕಣ್ಣಿಗೆ ಬಿದ್ದಿರಲಿಕ್ಕಿಲ್ಲ. ದೇವರ ಕರುಣೆಯೂ ದೊರಕದೆ, ಹೊಡೆತದಿಂದ ತಪ್ಪಿಸಿಕೊಳ್ಳುವುದಕ್ಕೆ ಆಗದೆ, ಕಣ್ಣೀರಿಡುತ್ತಿದ್ದೆಯಷ್ಟೇ.

ತಮ್ಮನಿಗೆ ಹೆಚ್ಚು ಕಡಿಮೆ ಒಂದು ವರ್ಷ ಕಳೆಯುವ ತನಕ ನಾವು ಹೊಸಪೇಟೆಯಲ್ಲೇ ಇದ್ದೆವು. ಅವ್ವ ಅಪ್ಪರಿಗೆ ಕುಕನೂರಿಗೆ ಮರಳುವ ಇರಾದೆಯಾಯಿತು. ಹೊರಟೆವು.

ಊರಿಗೆ ಬಂದಾಗ ಎಲ್ಲರಿಗೂ ಅಚ್ಚರಿ. ಒಂದಷ್ಟು ತಿಂಗಳವರೆಗೆ ಅದೇ ಮಾತುಕತೆಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದೆ. ಅಪ್ಪನ ವ್ಯಾಪಾರ ಮರು ಆರಂಭವಾಯಿತು. ಅಂದು ಕಡೇ ಸೋಮವಾರ ನಮ್ಮ ಊರಿನಲ್ಲಿ ದೊಡ್ಡ ಜಾತ್ರೆ ನಡೆಯುತ್ತಿತ್ತು. ನಾಲ್ಕೈದು ದಿನಗಳವರೆಗೆ ಪುರಾಣ ಓದುತ್ತಿದ್ದರು. ಆ ಪುರಾಣ ಓದು ಮುಗಿಯುವುದೆ, ಕಡೇ ಸೋಮವಾರಕ್ಕೆ. ದೇವರಿಗೆ ಒಪ್ಪಿಸುವುದಕ್ಕೆಂದೊ, ಪಲ್ಲಕ್ಕಿಯ ಅಲಂಕಾರಕ್ಕೆಂದೊ ಇಲ್ಲಾ, ಹೆಂಗಸರು ತಮ್ಮ ತುರುಬನ್ನು ಸಿಂಗರಿಸಿಕೊಳ್ಳುವುದಕ್ಕೆಂದೊ ಹೂ ಕೊಂಡುಕೊಳ್ಳುತ್ತಿದ್ದರು. ಕನಿಷ್ಟ ಹತ್ತು ಮಣ ಹೂ ಖರ್ಚಾಗುತ್ತಿತ್ತು. ಅವ್ವ ಅಪ್ಪನಿಗೆ ಲಾಭವಾಗುತ್ತಿದ್ದದ್ದೇ ಇಂತಹ ಜಾತ್ರೆಗಳಿಂದ. ಅದರಲ್ಲೂ ಕುಕನೂರಿನಲ್ಲಿ ಅಪ್ಪನವರ ಹೂ ವ್ಯಾಪಾರ ಜೋರಾಗಿತ್ತು. ಬಂದವರೆಲ್ಲ ನಮ್ಮಲ್ಲೇ ಹೂ ಮಾಲೆಗಳನ್ನು ಖರೀದಿಸುತ್ತಿದ್ದರು.

ಜಾತ್ರೆಯಿಂದ ಮನೆಗೆ ಬಂದೊಡನೆ ಸಂಗ್ರಹವಾದ ದುಡ್ಡನ್ನೆಲ್ಲ ರಾಶಿ ಹಾಕುತ್ತಿದ್ದರು. ಆ ನಾಣ್ಯದ ರಾಶಿಯ ಮಧ್ಯದಲ್ಲಿ ನನ್ನನ್ನು ಕೂರಿಸಿ, ನಾಣ್ಯವನ್ನೆಲ್ಲ ಮೇಲಿಂದ ಸುರಿಯುತ್ತಿದ್ದರು. ‘ನಮ್ಮನೆ ಲಕ್ಷ್ಮಿ. ಹಿಂಗೇ ಮಾಡ್ಸವ್ವಾ’ ಎಂದು ಸಂಭ್ರಮಿಸುತ್ತಿದ್ದರು. ನಾನೂ ವರ ಕೊಡುವವಳಂತೆ, ನಟಿಸುತ್ತಿದ್ದೆ. ಆಗ ದಪ್ಪನೆಯ ಖಾಕಿ ಬಟ್ಟೆಯನ್ನು ಹೊಲಿದು, ಎಂಟು ಹತ್ತು ಹಮ್ಮಣಿ ಮಾಡುತ್ತಿದ್ದರು. ಆ ಒಂದೊಂದು ಹಮ್ಮಣಿಯೊಳಗೆ ಒಂದು ರೂಪಾಯಿ, ಎಂಟಾಣೆ, ನಾಲ್ಕಾಣೆ ಹೀಗೆ ಎಲ್ಲವನ್ನೂ ಪ್ರತ್ಯೇಕಿಸಿ ಹಾಕಿಡುತ್ತಿದ್ದರು. ಹೀಗೆ ಹಾಕುವ ಮುನ್ನ ಎಣಿಸುತ್ತಿದ್ದಾಗ, ನನ್ನ ಕಟ್ಟೋ ಲಂಗದೊಳಗೆ ಕಾಲು ಭಾಗದಷ್ಟು ಹಣ ಸೇರುತ್ತಿತ್ತು. ಮೂರ್ನಾಲ್ಕು ನಾಣ್ಯ ಎಣಿಸುವುದು, ಒಂದು ನಾಣ್ಯವನ್ನು ಲಂಗದೊಳಕ್ಕೆ ಹಾಕಿಕೊಳ್ಳುವುದು. ಭಾರವಾಗುತ್ತಿದ್ದಂತೆ ಹೊರಗಡೆ ಹೋಗುತ್ತಿದ್ದೆ. ಮನೆ ಹಿತ್ತಲಿನ ಉದುರಿಹೋಗುತ್ತಿದ್ದ ಮಣ್ಣಿನ ಗೋಡೆ ಕೊರೆದು ದುಡ್ಡನ್ನೆಲ್ಲ ತುಂಬಿ, ಮಣ್ಣು ಮೆತ್ತಿ ಬರುತ್ತಿದ್ದೆ. ನನ್ನ ತರಲೆ, ಕಿತಾಪತಿ ಅವ್ವ ಅಪ್ಪರಿಗೆ ಹೊಸತಾಗಿರಲಿಲ್ಲ. ಎಣಿಕೆ ಕಾರ್ಯವೆಲ್ಲ ಮುಗಿದ ಮೇಲೆ ಕೂಡಿಟ್ಟ ಕಾಸನ್ನು ಸೇರಿಸಿ ನನ್ನದೇ ಆದ ಒಂದು ಹಳೇ ಪೆಟ್ಟಿಗೆಯೊಳಗೆ ಅಡಗಿಸಿಡುತ್ತಿದ್ದೆ.

ಮನೆ ಮತ್ತೆ ಕೊಟ್ಟಿಗೆಯ ಮಧ್ಯೆ ಈಚಲ ತಟ್ಟಿಯನ್ನು ಕಟ್ಟಿದ್ದರು. ಆ ಈಚಲ ತಟ್ಟಿಗೆ ಮಣ್ಣು ಮೆತ್ತಿ ಸುಣ್ಣ ಬಳಿದಿದ್ದರು. ಒಂದಷ್ಟು ಸಮಯವಾಗುತ್ತಿದ್ದಂತೆ ಎತ್ತುಗಳ ಕೊಂಬುಗಳು ತಿವಿದು ಆ ಗೋಡೆಯಲ್ಲಿ ತೂತುಗಳಾಗಿದ್ದವು. ನಾವು ದುಡ್ಡು ಎಣಿಸುತ್ತಿದ್ದದ್ದನ್ನು ಅದೇ ತೂತುಗಳಿಂದ ಕಳ್ಳರು ಕಂಡಿರಬಹುದು. ಲೆಕ್ಕಾಚಾರ ಮುಗಿದು, ಊಟ ಪೂರೈಸುವಾಗಲೇ ಬೆಳಗಿನ ಜಾವ ಮೂರರ ಹೊತ್ತು. ಹೇಳಿ ಕೇಳಿ ಕೆಲಸ ಮಾಡಿ, ದಣಿದ ದೇಹ ಬೇರೆ. ನಿದ್ರಾಲೋಕದಲ್ಲಿ ಅದ್ಹೇಗೆ ಮೈಮರೆತಿದ್ದೆವೆಂದರೆ ಮನೆಯನ್ನೇ ದೋಚುತ್ತಿದ್ದರೆ, ಆ ಶಬ್ಧವೂ ಕೂಡ ಕೇಳಿಸದಷ್ಟು ತಲ್ಲೀನತೆ. ಆ ದಾರಿಯ ಕೊನೇ ಮನೆ ನಮ್ಮದು. ಎಚ್ಚರಾಯಿತೆಂದರೆ ಮನೆಯವರ ಕತೆ ಮುಗಿಸಬೇಕೆಂದು ಹೊರಗೆ ಎಂಟು ಹತ್ತು ಕಲ್ಲುಗಳನ್ನು ಹಾಕಿದ್ದರು. ಒಳಬಂದವರೇ ಮುಖದ ಮೇಲೆ ಬೂದಿ ಎರಚಿದರು. ನಾಲ್ಕು ಪೆಟ್ಟಿಗೆಗಳನ್ನು ಎತ್ತಿ ಸಾಗಿಸಿದರು. ಅದರಲ್ಲೆಲ್ಲ ಬರೀ ದುಡ್ಡುಗಳಿರಲಿಲ್ಲ. ಅವ್ವ ನನಗಾಗಿ ಮಾಡಿಸಿಟ್ಟ ಕಾಲ್ಗೆಜ್ಜೆ, ಪುಟ್ಟ ಓಲೆಗಳು, ಸೋದರಮಾವಂದಿರು ಕೊಟ್ಟ ನೆತ್ತಿ ನಾಗರ, ನಡುನೆತ್ತಿ ನಾಗರ, ಜುಲ್ಪೆದ ಹೂ ಹೀಗೆ ಒಂದಷ್ಟು ಒಡವೆಗಳೆಲ್ಲ ಇದ್ದಿತ್ತು. ಕೊಟ್ಟಿಗೆ ಬಾಗಿಲಿನ ಎರಡೂ ಕಡೆಯಿಂದ ಕಳ್ಳರು ಪಲಾಯನ ಮಾಡಿದ್ದರು.

ಅವ್ವ ಬೆಳಗಿನ ಜಾವ ಐದಕ್ಕೆ ಎದ್ದು ನಿತ್ಯ ಕರ್ಮಕ್ಕೆಂದು ಹೋಗಿದ್ದಳು. ಹೋಗುವಾಗಲೂ ಮನೆಯೆದುರಿಗೆ ಹಾಕಿಟ್ಟ ದೊಡ್ಡ ಕಲ್ಲುಗಳನ್ನೂ ಗಮನಿಸಿರಲಿಲ್ಲ. ಅಕ್ಕಪಕ್ಕದವರೆಲ್ಲ ಅಲ್ಲಲ್ಲಿ ಬಿದ್ದ ನಾಣ್ಯಗಳನ್ನು ಕಂಡು, ‘ಇದೇನು, ರಾತ್ರಿ ದುಡ್ಡಿನ್ ಮಳಿ ಆಗೈತೆನು!’ ಎಂದು ಬೆರಗಾಗಿದ್ದರು. ಊರಲ್ಲಿ ತೋಟಪ್ಪನ ಹಿತ್ತಲಿದೆ. ಮುಳ್ಳು, ಎತ್ತರದ ಹುಲ್ಲುಗಳೆಲ್ಲ ಬೆಳೆದು ಅಲ್ಲಿದ್ದ ಮನೆ ಪಾಳು ಬಿದ್ದುಹೋಗಿತ್ತು. ಹಮ್ಮಣಿ, ಒಡವೆಗಳನ್ನೆಲ್ಲ ಎತ್ತಿಕೊಂಡು ಆ ಪೆಟ್ಟಿಗೆಗಳನ್ನು ಅಲ್ಲೇ ಎಸೆದುಹೋಗಿದ್ದರು. ನೋಡಿದ ಜನರಿಗೆ ಮನೆ ಕಳವು ಮಾಡಿದ್ದಾರೆಂದು ಪ್ರತ್ಯೇಕವಾಗೇನೂ ಹೇಳಬೇಕಿರಲಿಲ್ಲ. ಸುದ್ದಿ ಕೇಳಿದ ಅವ್ವ ‘ಯಾರ್ ಮನೆ?’ ಎಂದೇ ವಿಚಾರಿಸುತ್ತಿದ್ದಳು. ಪೆಟ್ಟಿಗೆಯೆಡೆಗೆ ಕೆಲ ಜನ ಕೈ ತೋರಿದಾಗಲೇ ಗರಸಿಡಿಲು ಬಡಿದವರಂತೆ ಅರೆಕ್ಷಣ ನಿಂತುಬಿಟ್ಟಳು. ಎದೆ ಮೇಲೆ ಕೈ ಹೊಡೆದುಕೊಳ್ಳುತ್ತಾ, ‘ಯವ್ವಾ ನಾ ಸತ್ತೆ. ನಮ್ಮನಿನೇ ಕಳುವಾಗೇತಿ’ ಎನ್ನುತ್ತಾ ನೆಲ ತಟ್ಟಿ ಕೂಗಾಡುತ್ತಲೇ ಮೂರ್ಛೆ ತಪ್ಪಿದ್ದಳು. ಅವ್ವನನ್ನು ಮನೆಗೆ ಎತ್ತಿ ಕರೆತಂದಾಗ ಊರವರಿಗೆಲ್ಲ ಹಾಕಿದ್ದ ಕಲ್ಲುಗಳನ್ನು ಕಂಡೇ ಅಚ್ಚರಿ. ‘ಈ ಈರಪ್ಪ, ನಿನ್ ಹೆಂಡ್ತಿ ಮೂರ್ಛ್ ಹೋಗ್ಯಾಳ. ದೌಡ್ ಬಾ’ ಎಂದು ಎಬ್ಬಿಸಿದರು. ಅಪ್ಪನೂ ವಿಷಯ ತಿಳಿದು ಕಂಗಾಲಾದರು. ಆ ಕಲ್ಲುಗಳಷ್ಟೇ ಅಲ್ಲ, ಮನೆಯಲ್ಲಿದ್ದ ಉಪ್ಪು, ಖಾರದ ಪುಡಿಗೆ ಮರಳು ಬೆರೆಸಿದ್ದರು. ಬಂದ ಕಳ್ಳರೆಷ್ಟು ಕ್ರೂರರಾಗಿದ್ದರೆಂಬುದನ್ನು ಇನ್ನೆಷ್ಟು ವಿಸ್ತರಿಸಲಿ?

 

ನಯಾಪೈಸೆಗೂ ಗತಿಯಿಲ್ಲದ ಕುಟುಂಬವಾಗಿ ಹೋಗಿತ್ತು ನಮ್ಮಮನೆ. ಮೌನವಾಗಿ ಹೋಗಿದ್ದ ಅವ್ವ ದಿನೇದಿನೇ ಕೃಶವಾಗುತ್ತಾ ಹೋದಳು. ಸಮಾಧಾನವೆಂದರೆ ನನ್ನ ಟ್ರಂಕನ್ನು ಹಾಗೇ ಬಿಟ್ಟುಹೋಗಿದ್ದರು. ಕೂಡಿಟ್ಟ ಏಳುನೂರ ಐವತ್ತು ರೂಪಾಯಿಗಳನ್ನು ಅವ್ವ ಅಪ್ಪರ ಕೈಗಿತ್ತೆ. ನಮ್ಮ ನಾಲ್ವರ ಪಾಲಿಗೆ ಅದೇ ಆಧಾರವಾಯಿತು.

ಮುಂದುವರಿಯುವುದು…

(ಹಿಂದಿನ ಕಂತು: ಹೋಗುತ್ತಾ ಹೋಗುತ್ತಾ.. ಕಳೆದೇ ಹೋಗಿದ್ದೆ…)

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ