ಸುಬ್ರಾಯ ಭಟ್ಟರು ಬಹಳ ಯೋಚಿಸಿ ಕೊನೆಗೆ ಅವನು ಕೊಟ್ಟ ಚಿನ್ನಾಭರಣಗಳ ಗಂಟನ್ನು ತೆಗೆದುಕೊಂಡು, ಗಾಂಪ ಕೊಡ್ಡನ ಕಣ್ಣೆದುರೇ ಅದನ್ನು ತಮ್ಮ ಕೈಯಾರೆ ತಮ್ಮ ಮನೆಯ ಬಾವಿಯೊಳಗೆ ಹಾಕಿದರು.ಗಾಂಪ ಕೊಡ್ಡ ತೃಪ್ತಿಯಿಂದ ಹೊರಟುಹೋದ. ಕೆಲವೇ ದಿನಗಳಲ್ಲು ಕುಂಪಣಿ ಪೋಲೀಸರು ಬಂದು ಅವನನ್ನು ಹಿಡಿದುಕೊಂಡು ಹೋದರು.ಅವನಿಗೆ ಅಂಡಮಾನಿಗೆ ಗಡೀಪಾರು ಆಗುತ್ತದೋ ಅಥವಾ ಆಯಿತೋ …..
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹದಿಮೂರನೆಯ ಕಥಾನಕದ ಮುಂದುವರಿದ ಭಾಗ.

(ಕಳೆದ ಭಾನುವಾರದ ಸಂಚಿಕೆಯಿಂದ ಮುಂದುವರಿದ ಭಾಗ)

ಮೇಲಿನ ಸಂಗತಿ ನಡೆದದ್ದು 1970 ರ ದಶಕದಲ್ಲಿ. ಆಗ ನಾನು ಮತ್ತು ನಾರಾಯಣ ಉಪಾಧ್ಯಾಯರು ಒಂದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದೆವು. ಆಮೇಲೆ ನಮಗಿಬ್ಬರಿಗೂ ಬೇರೆ ಬೇರೆ ಊರುಗಳಿಗೆ ಟ್ರಾನ್ಸ್ಫರ್ ಆಯಿತು. ನಮ್ಮ ಸಂಪರ್ಕ ಕಡಿಮೆಯಾಗುತ್ತಾ ಹೋಯಿತು. ಆಗೊಮ್ಮೆ ಈಗೊಮ್ಮೆ ನಾವಿಬ್ಬರೂ ಮಂಗಳೂರು ಅಥವಾ ಉಡುಪಿಗಳಲ್ಲಿ ನಡೆಯುವ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಅಥವಾ ಮೌಲ್ಯಮಾಪನ ಕಾರ್ಯದ ಸಂದರ್ಭದಲ್ಲಿ ಭೇಟಿಯಾದಾಗ ಒಟ್ಟಿಗೆ ಕಾಫಿ ಕುಡಿದು ಹರಟೆ ಹೊಡೆದು ನಮ್ಮ ಸ್ನೇಹವನ್ನು ಊರ್ಜಿತದಲ್ಲಿಟ್ಟುಕೊಂಡೇ ಇದ್ದೆವು. ಆದರೆ ಈಗಿನ ಕಾಲದ ಧಾವಂತದಿಂದಾಗಿ ನಮಗೆ ಇಬ್ಬರಿಗೂ ಒಬ್ಬರ ಮನೆಗೆ ಹೋಗಿ ಒಂದೆರಡು ದಿನ ಬಿಡಿ, ಅರ್ಧ ಗಂಟೆಯ ಕಾಲವೂ ಕುಳಿತು ಹರಟೆಹೊಡೆದು ಬರುವಷ್ಟು ವ್ಯವಧಾನ ಇರಲಿಲ್ಲ.

ಅನಂತ ಭಟ್ಟನ ಕತೆ ಮಾತ್ರ ನನ್ನನ್ನು ಯಾವಾಗಲೂ ಕಾಡುತ್ತಿತ್ತು. ನಾವು ಭೇಟಿಯಾದಾಗಲೆಲ್ಲಾ ನಾನು ಆ ಬಗ್ಗೆ ವಿಚಾರಿಸುತ್ತಲೇ ಇದ್ದೆ. ಅವರ ಮನೆಯ ಬಾಗಿಲನ್ನು ಒದೆಯುವ ಅನಂತ ಭಟ್ಟನ ಪ್ರೇತಕ್ಕೆ ತಿಲಹೋಮ ಇತ್ಯಾದಿಗಳನ್ನು ಮಾಡಿ ಮುಕ್ತಿ ಮಾಡಿತೆಂದು; ಈಗ ಬಾಗಿಲು ಒದೆಯುವ ಶಬ್ದ ಕೇಳುವುದಿಲ್ಲವೆಂದು ಅವರು ಒಮ್ಮೆ ಹೇಳಿದ್ದರು. ಆನಂತರ ನಾನು ಅನಂತ ಭಟ್ಟನ ಬಗ್ಗೆ ಕೇಳುವುದನ್ನು ಬಿಟ್ಟಿದ್ದೆ.  ಇತ್ತೀಚೆಗೆ ನಾರಾಯಣ ಉಪಾಧ್ಯಾಯರು ನನ್ನ ಮೊಬೈಲಿಗೆ ಕರೆಮಾಡಿ, “ನೀವು ಹಿಂದೊಮ್ಮೆ ನಮ್ಮ ಮನೆಗೆ ಬಂದಿದ್ದಾಗ ನಿಮಗೆ ಅನಂತ ಭಟ್ಟನ ಪ್ರೇತದ ಕತೆ ಹೇಳಿದ್ದೆನಲ್ಲ. ಈಗ ಆ ಕತೆಗೆ ಬೇರೊಂದು ಆಯಾಮ ಸಿಕ್ಕಿದೆ. ನೀವು ನಾಳೆ ಶನಿವಾರ ನಮ್ಮ ಮನೆಗೆ ಬಂದರೆ ನಾವು ಮರುದಿನ ಭಾನುವಾರ ಬಂಟ್ವಾಳಕ್ಕೆ ಹೋಗಿಬರಬಹುದು. ಬಹಳ ಕುತೂಹಲವುಳ್ಳ ಕತೆಯಿದು. ನೀವು ಬರಲೇ ಬೇಕು” ಎಂದರು. ನನಗೆ ಆ ವಾರಾಂತ್ಯ ಬೇರೇನೂ ಕೆಲಸ ಇಲ್ಲದ ಕಾರಣ “ನಾನು ಖಂಡಿತ ಬರುತ್ತೇನೆ” ಎಂದೆ.

ಮರುದಿನ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಗಂಪದಬೈಲು ತಲುಪಿದೆ. ಈಗ ಬಸ್ಸುಗಳ ಓಡಾಟ ಹೆಚ್ಚಾಗಿದ್ದುದರಿಂದ ಮೂವತ್ತು ವರ್ಷಗಳ ಹಿಂದಿಗಿಂತ ವೇಗವಾಗಿ ತಲುಪಲು ಸಾಧ್ಯವಾಯಿತು. ಆದರೆ ಅಂದಿನ ಪ್ರಯಾಣದಲ್ಲಿ ಲಭಿಸಿದ ಮನೋಲ್ಲಾಸ ಈ ಬಾರಿ ಸಿಗಲಿಲ್ಲ. ಸಂಜೆಯ ಕಾಫಿ, ತಿಂಡಿ ಆದ ನಂತರ ನಾರಾಯಣ ಉಪಾಧ್ಯಾಯರು ನನ್ನನ್ನು ಬಯಲಿನತ್ತ ಕರೆದುಕೊಂಡು ಹೋದರು. ಈಗ ಜನವರಿ ತಿಂಗಳಾದ ಕಾರಣ ಬೈಲಿನಲ್ಲಿ ನೀರು ಇರಲಿಲ್ಲ. ಗದ್ದೆಗಳ ಫಸಲು ಕೊಯ್ದಾಗಿತ್ತು. ಅಲ್ಲಲ್ಲಿ ಕೊಕ್ಕರೆಗಳು ಹೆಜ್ಜೆಹಾಕುತ್ತಾ ಆಹಾರ ಹುಡುಕುತ್ತಿದ್ದವು. ಒಣಗಲಾರಂಭಿಸಿದ್ದ ಖಾಲಿ ಗದ್ದೆಗಳ ನಡುವೆಯೇ ನಡೆದುಕೊಂಡು ಹೋಗಿ ನಾವು ಹಿಂದೆ ಕುಳಿತಿದ್ದ ಅದೇ ಬಂಡೆಯ ಮೇಲೆ ಹೋಗಿ ಕುಳಿತೆವು. ಇಡೀ ಬೈಲು ಗಾಳಿಯ ನದಿಯಂತಿತ್ತು, ನಾವು ಅದರಲ್ಲಿ ಮುಳುಗಿ ಕುಳಿತಂತೆ ಹಿತವಾಗಿತ್ತು.

ನಾರಾಯಣ ಉಪಾಧ್ಯಾಯರು ಪ್ರಾರಂಭಿಸಿದರು, “ಹಿಂದೊಮ್ಮೆ ನಾನು ನಿಮಗೆ ಕತೆ ಹೇಳಿದ್ದೆನಲ್ಲ, ಈಗ ಅದಕ್ಕೆ ಸಂಬಂಧಿಸಿದ ಇನ್ನೊಂದು ಪೂರ್ವಕತೆ ನನಗೆ ಸಿಕ್ಕಿದೆ. ಅದನ್ನು ನಿಮಗೆ ಹೇಳಬೇಕು. ಆಗ ನಿಮಗೆ ಹಿಂದಿನ ಚಿತ್ರ ಸಮಗ್ರವಾಗಿ ಸಿಗುತ್ತದೆ ಮಾತ್ರವಲ್ಲ, ನಾಳೆ ನಾವು ನೋಡಲಿರುವ ವಿದ್ಯಮಾನವನ್ನು ಸ್ಪಷ್ಟವಾಗಿ ಅರಿತುಕೊಳ್ಳಲು ನೆರವಾಗುವುದು”. ಇಂತಹದೊಂದು ಮುನ್ನುಡಿಯ ನಂತರ ಅವರು ಕತೆ ಹೇಳಲಾರಂಭಿಸಿದರು : ಅದು ಕಲ್ಯಾಣಪ್ಪನ ಕಾಟಕಾಯಿಯ ಕಾಲ. ಅಂದರೆ 1837 ನೆಯ ಇಸವಿ. ಕಲ್ಯಾಣಪ್ಪನ ಹೆಸರು ಹೇಳಿಕೊಂಡು ಅಲ್ಲಲ್ಲಿ ಪುಂಡರಾದ ಶಕ್ತಿವಂತರು, ಆಸುಪಾಸಿನ ಶ್ರೀಮಂತರನ್ನು ದೋಚಿ ಹಣ ಮಾಡಿಕೊಳ್ಳತೊಡಗಿದ್ದರು. ಅಂತಹವರಲ್ಲಿ ಒಬ್ಬ ಬಂಟ್ವಾಳದ ಸಮೀಪದ ನೂತಬೆಟ್ಟಿನ ಗಾಂಪ ಕೊಡ್ಡ ಎಂಬವ.

ಗಾಂಪ ಕೊಡ್ಡನಿಗೆ ನೂತಬೆಟ್ಟಿನಲ್ಲಿ ಐದಾರು ಎಕರೆ ಗದ್ದೆಯಿತ್ತು. ಅವನು ಸ್ವಲ್ಪ ಖಯಾಲಿ ಮನುಷ್ಯ. ಪುಂಡ ಅಂತ ಕೂಡಾ ಹೇಳಬಹುದು. ಅವನ ಬಗೆಯ ನಾಲ್ಕಾರು ಯುವಕರು ಅವನ ಜತೆಗಾರರಾಗಿದ್ದರು. ಅವರ ದುಶ್ಚಟಗಳಿಗೆ ಬೇಕಾದಷ್ಟು ಉತ್ಪತ್ತಿ ಅವನ ಗದ್ದೆಯಲ್ಲಿ ಸಿಗುತ್ತಿರಲಿಲ್ಲ. ಅಲ್ಲದೆ ಅವನ ಗದ್ದೆಗಳಿಗೆ ಕುಂಪಣಿ ಸರಕಾರ ಸಿಕ್ಕಾಪಟ್ಟೆ ಕಿಸ್ತು (ಕಂದಾಯ) ವಿಧಿಸಿಬಿಟ್ಟಿತ್ತು. ಅದರ ಕತೆ ಬೇರೆಯೇ ಇದೆ. ಈ ಕತೆಯಲ್ಲಿ ಗಾಂಪ ಕೊಡ್ಡನ ಮನೆ ಮತ್ತು ಹಿಡುವಳಿಗೆ ತಾರಾಯಿತೋಟ ಎಂಬ ಹೆಸರು ಬಂದ ವಿಚಾರವೂ ತಿಳಿಯುತ್ತದೆ. ಆದ್ದರಿಂದ ಈ ಕತೆಯನ್ನು ತಿಳಿಯುವುದು ಸೂಕ್ತ. ಕುಂಪಣಿಯವರು ಬಂದು ಸೆಟ್ಲ್ ಮೆಂಟ್ ಮಾಡುವ ಮುಂಚೆ ಶಿವಪ್ಪನಾಯಕನ ಶಿಸ್ತು ಅಥವಾ ಕಿಸ್ತು ಎಂಬ ಭೂಗಂದಾಯ ಇತ್ತಂತೆ. ಅದರ ನಡುವೆ ಮೈಸೂರಿನ ನವಾಬರು ಆಳಿದ್ದರೂ ಶಿವಪ್ಪನಾಯಕನ ಕಾಲದ ಭೂಗಂದಾಯವೇ ಮುಂದುವರಿದಿತ್ತಂತೆ. ಕುಂಪಣಿಯವರು ಈ ದೇಶವನ್ನೆಲ್ಲ ವಶಪಡಿಸಿಕೊಂಡ ಮೇಲೆ ಕಲೆಕ್ಟರ್ ಮನ್ರೋ ಎಂಬವನು ಊರೂರಿಗೆ ಬಂದು ಭೂಮಿ ಕಾಣಿ ನೋಡಿ, ಪೈರು ಪಚ್ಚೆ ಅಳೆದು ತೆರಿಗೆ ನಿರ್ಧಾರ ಮಾಡುತ್ತಾ ಸರ್ಕೀಟು ಹೋಗುತ್ತಿದ್ದನಂತೆ.

ಹಾಗೆ ಕಲೆಕ್ಟರರ ಸರ್ಕೀಟು ನೂತಬೆಟ್ಟಿಗೂ ಬಂತಂತೆ. ಗಾಂಪ ಕೊಡ್ಡನ ಅಪ್ಪನೋ, ಅಜ್ಜನೋ ಏನೋ – ಆಗ ಇದ್ದವರು. ಅವರಿಗೆ ಕಲೆಕ್ಟರರು ಯಾಕೆ ಬರುವುದು ಎಂದು ತಿಳಿದಿರಲಿಲ್ಲ. ಕೃಷಿ ನೋಡಲು ಬರುವುದೆಂದು ಸುದ್ದಿಯಿತ್ತು, ಆದರೆ ತೆರಿಗೆ ಹಾಕುವ ಉದ್ದೇಶವೆಂದು ಅವರಿಗೆ ತಿಳಿದಿರಲಿಲ್ಲ. ಕೊಡ್ಡನ ಮನೆಯವರು ಕಲೆಕ್ಟರರು ಬಂದಾಗ ತಮ್ಮ ಕೃಷಿ ಎದ್ದು ಕಾಣಬೇಕೆಂದು ಬೇರೆ ಊರಿನಿಂದ ಎಳನೀರು ಗೊನೆಗಳು, ತೆಂಗಿನಕಾಯಿ ಗೊನೆಗಳನ್ನು ತಂದು ಬಹಳ ಕಷ್ಟಪಟ್ಟು ಅವುಗಳನ್ನು ತಮ್ಮ ಬರಡು ತೆಂಗಿನಮರಗಳಿಗೆ ಕಟ್ಟಿದ್ದರಂತೆ.
ಕಲೆಕ್ಟರ್ ಮನ್ರೋ ಬಂದು ನೋಡಿ ‘ಆಹಾ! ಈ ಗುಡ್ಡದಲ್ಲೂ ಎಂತಹ ಬೆಳೆ!’ ಎಂದು ಉದ್ಗರಿಸಿ ಆ ಹಿಡುವಳಿಗೆ ತೆರಿಗೆ ಹೆಚ್ಚಿಸಿ ಆದೇಶ ಮಾಡಿದನಂತೆ. ನೂತಬೆಟ್ಟಿನಲ್ಲಿ ಇನ್ನೂ ಒಂದಿಬ್ಬರು ಹಾಗೆ ಮಾಡಿದ್ದರಂತೆ. ಕೊಡ್ಡನ ಮನೆಯವರ ಮೂರ್ಖತನದಿಂದಾಗಿ ಅವರ ಕಿಸ್ತು ಹೆಚ್ಚಾದದ್ದರಿಂದ ಊರವರು ಅವರ ಹಿಡುವಳಿಯನ್ನು ಹಾಸ್ಯವಾಗಿ ತಾರಾಯಿ (ತೆಂಗಿನ ಕಾಯಿ) ತೋಟ ಎಂದು ಕರೆಯತೊಡಗಿದ್ದರು.

“ಹಿಂದೊಮ್ಮೆ ನಾನು ನಿಮಗೆ ಕತೆ ಹೇಳಿದ್ದೆನಲ್ಲ, ಈಗ ಅದಕ್ಕೆ ಸಂಬಂಧಿಸಿದ ಇನ್ನೊಂದು ಪೂರ್ವಕತೆ ನನಗೆ ಸಿಕ್ಕಿದೆ. ಅದನ್ನು ನಿಮಗೆ ಹೇಳಬೇಕು. ಆಗ ನಿಮಗೆ ಹಿಂದಿನ ಚಿತ್ರ ಸಮಗ್ರವಾಗಿ ಸಿಗುತ್ತದೆ ಮಾತ್ರವಲ್ಲ, ನಾಳೆ ನಾವು ನೋಡಲಿರುವ ವಿದ್ಯಮಾನವನ್ನು ಸ್ಪಷ್ಟವಾಗಿ ಅರಿತುಕೊಳ್ಳಲು ನೆರವಾಗುವುದು”. ಇಂತಹದೊಂದು ಮುನ್ನುಡಿಯ ನಂತರ ಅವರು ಕತೆ ಹೇಳಲಾರಂಭಿಸಿದರು.

ಗಾಂಪ ಕೊಡ್ಡನ ಖಯಾಲಿಗಳಿಗೆ ಹಣದ ಅವಶ್ಯಕತೆ ಹೆಚ್ಚು ಹೆಚ್ಚಾಗುತ್ತಾ ಬಂದ ಕಾಲದಲ್ಲಿಯೇ ಕಲ್ಯಾಣಪ್ಪನ ಕಾಟಕಾಯಿ ಶುರುವಾದದ್ದು ಯೋಗಾಯೋಗ ಎಂದೇ ಹೇಳಬೇಕು. ಕಾಟಕಾಯಿಯ ಸಂದರ್ಭದಲ್ಲಿ ಅಲ್ಲಲ್ಲಿ ಪುಂಡಪೋಕರಿಗಳ ತಂಡಗಳು ಕಲ್ಯಾಣಪ್ಪನ ಹೆಸರು ಹೇಳಿಕೊಂಡು ಊರೂರನ್ನು ದೋಚುತ್ತಾ ತಿರುಗಾಡುತ್ತಿದ್ದವು. ಅಲ್ಪಸ್ವಲ್ಪ ಚಿನ್ನಾಭರಣ ಇದ್ದವರು ಅವುಗಳನ್ನೆಲ್ಲ ಗಂಟುಕಟ್ಟಿ ಅಡಗಿಸಿಡುತ್ತಿದ್ದರು. ಅಥವಾ ಬಾವಿಗಳಿಗೆ ಹಾಕಿಬಿಡುತ್ತಿದ್ದರು.  ನೂತಬೆಟ್ಟಿನವರಿಗೆ ಪುತ್ತೂರಿಗೆ ಕಲ್ಯಾಣಪ್ಪನ ಕಾಟಕಾಯಿ ಬಂದ ಸುದ್ದಿ ಬಂದು ತಲುಪಿದಾಗ ಇನ್ನು ತಮ್ಮ ಗತಿ ಮುಗಿಯಿತೆಂದೇ ಭಯವುಂಟಾಗತೊಡಗಿತು. ಎಲ್ಲರೂ ತಮ್ಮ ತಮ್ಮ ನಗ ನಾಣ್ಯಗಳನ್ನು ಅಡಗಿಸಿಡತೊಡಗಿದರು. ಅದೇ ಸಮಯದಲ್ಲಿ ಗಾಂಪ ಕೊಡ್ಡನಿಗೆ ತನ್ನಂತಹ ಪುಂಡರು ಊರೂರನ್ನು ದೋಚತೊಡಗಿದ್ದ ಸುದ್ದಿ ತಿಳಿಯಿತು. ಇವರು ಕೂಡಾ ಬೇರೆ ಬೇರೆ ಊರುಗಳಿಗೆ ದಾಳಿಮಾಡಿ ಸಿಕ್ಕಸಿಕ್ಕಿದವರನ್ನೆಲ್ಲ ದೋಚಿಕೊಂಡು ಬರತೊಡಗಿದರು. ಬಂಟ್ವಾಳ ತಾಲೂಕಿನಲ್ಲಿ ಸುಮಾರು ಇಪ್ಪತ್ತು – ಮೂವತ್ತು ದಿನಗಳ ಕಾಲ ಗಾಂಪ ಕೊಡ್ಡನ ಹಾವಳಿ ನಡೆದಿತ್ತು. ಆ ನಡುವೆ ಕಲ್ಯಾಣಪ್ಪನ ಸೈನ್ಯ ಬಂಟ್ವಾಳದ ಮೂಲಕ ಹಾದುಹೋಗಿ ಮಂಗಳೂರನ್ನು ಆಳಲು ತೊಡಗಿಯೂ ಆಗಿತ್ತು.

ಕೊನೆಗೊಮ್ಮೆ “ಬ್ರಿಟಿಷರು ಹಿಂದೆ ಬಂದು ಕಲ್ಯಾಣಪ್ಪನನ್ನೂ ಅವನ ಜತೆಗಾರರನ್ನೂ ಹಿಡಿದು ಗಲ್ಲಿಗೇರಿಸಿದರಂತೆ; ಇನ್ನು ಊರೂರಿಗೆ ಸೈನ್ಯ ಕಳಿಸಿ ಕಲ್ಯಾಣಪ್ಪನ ಕಡೆಯವರನ್ನು ಹಿಡಿದು ಗಲ್ಲಿಗೇರಿಸುತ್ತಾರಂತೆ” ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಜನರಿಗೆ ಒಮ್ಮೆ ಅಯ್ಯಮ್ಮ ಎಂದು ನಿರಾಳವಾಯಿತು. ಊರೂರು ತಿರುಗಿ ಹಾವಳಿ ಮಾಡುತ್ತಿದ್ದ ಗಾಂಪ ಕೊಡ್ಡನಂತವರು ಒಮ್ಮೆಲೇ ಕಣ್ಮರೆಯಾಗಿಬಿಟ್ಟರು. ಕುಂಪಣಿ ಸೈನ್ಯ ನಿಜವಾಗಿಯೂ ದರೋಡೆಗಾರರನ್ನು ಹುಡುಕುತ್ತ ಅಂತಹವರನ್ನು ಹಿಡಿದು ಶಿಕ್ಷೆ ಕೊಡಲು ಪ್ರಾರಂಭಿಸಿತ್ತು. ಅವರ ಗುಪ್ತಚರರು ಊರೂರಿಗೆ ತಿರುಗಾಡುತ್ತಾ ಕಲ್ಯಾಣಪ್ಪನ ಕಾಟಕಾಯಿಗೆ ಸಹಕರಿಸಿದ ಪುಂಡರ ಗುಂಪುಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದರು. ಜನರು ಕೂಡಾ ತಾವಾಗಿಯೇ ಕುಂಪಣಿ ಸರಕಾರಕ್ಕೆ ಕಾಟಕಾಯಿಯವರ ಮಾಹಿತಿಯನ್ನು ಕೊಡಲು ಮುಂದಾಗುತ್ತಿದ್ದರು. ಅಂತಹ ಸಂದರ್ಭದಲ್ಲಿ, “ಇನ್ನು ಗಾಂಪ ಕೊಡ್ಡನನ್ನು ಹಿಡಿಯಲು ಬರುತ್ತಾರಂತೆ” ಎಂಬ ಸುದ್ದಿ ನೂತಬೆಟ್ಟಿನಲ್ಲಿ ಹಬ್ಬಿತು.

ಈಗ ಗಾಂಪ ಕೊಡ್ಡನಿಗೆ ಚಿಂತೆ ಶುರುವಾಯಿತು. ತಾನು ದೋಚಿದ್ದ ಅಪಾರ ಚಿನ್ನಾಭರಣಗಳನ್ನು ಎಲ್ಲಿ ಅಡಗಿಸಿಡುವುದು ಎಂದು ತಿಳಿಯದೆ ಬಹಳ ಯೋಚನೆಮಾಡಿದ ಕೊಡ್ಡ ಕೊನೆಗೆ ಸುಬ್ರಾಯ ಭಟ್ಟರಲ್ಲಿಗೆ ಬಂದ. ಸುಬ್ರಾಯ ಭಟ್ಟರ ಬಳಿ ಒಂದು ಗಂಟನ್ನು ಕೊಟ್ಟು, “ಕುಂಪಣಿಯವರು ನನ್ನನ್ನು ಹುಡುಕುತ್ತಿದ್ದಾರೆ, ನಾನು ಅಡಗಿಕೊಳ್ಳಲು ಎಲ್ಲಿಗೋ ಹೋಗುತ್ತಿದ್ದೇನೆ. ಈ ಗಂಟನ್ನು ನಿಮ್ಮ ಮನೆಯ ಬಾವಿಯಲ್ಲಿ ಅಥವಾ ನಿಮಗೆ ಬೇಕಾದಲ್ಲಿ ಅಡಗಿಸಿಡಿ. ನಾನು ಹಿಂದೆ ಬಂದ ಮೇಲೆ ಇದನ್ನು ಹಿಂದಕ್ಕೆ ಪಡೆಯುತ್ತೇನೆ. ನಿಮ್ಮ ಉಪಕಾರಕ್ಕೆ ತಕ್ಕ ಪ್ರತಿಫಲ ನೀಡಿಯೇನು” ಎಂದ.

ಸುಬ್ರಾಯ ಭಟ್ಟರು ಬಹಳ ಯೋಚಿಸಿ ಕೊನೆಗೆ ಅವನು ಕೊಟ್ಟ ಚಿನ್ನಾಭರಣಗಳ ಗಂಟನ್ನು ತೆಗೆದುಕೊಂಡು, ಗಾಂಪ ಕೊಡ್ಡನ ಕಣ್ಣೆದುರೇ ಅದನ್ನು ತಮ್ಮ ಕೈಯಾರೆ ತಮ್ಮ ಮನೆಯ ಬಾವಿಯೊಳಗೆ ಹಾಕಿದರು. ಗಾಂಪ ಕೊಡ್ಡ ತೃಪ್ತಿಯಿಂದ ಹೊರಟುಹೋದ. ಕೆಲವೇ ದಿನಗಳಲ್ಲು ಕುಂಪಣಿ ಪೋಲೀಸರು ಬಂದು ಅವನನ್ನು ಹಿಡಿದುಕೊಂಡು ಹೋದರು. ಅವನಿಗೆ ಅಂಡಮಾನಿಗೆ ಗಡೀಪಾರು ಆಗುತ್ತದೋ ಅಥವಾ ಆಯಿತೋ – ಏನೋ ಒಂದು ಸುದ್ದಿ ನೂತಬೆಟ್ಟಿಗೆ ಬಂದು ಮುಟ್ಟಿತು.

ಅದೇ ವೇಳೆಗೆ ಸುಬ್ರಾಯ ಭಟ್ಟರು ಮತ್ತು ಅವರ ಇಬ್ಬರು ತಮ್ಮಂದಿರೊಳಗೆ ಗಹನವಾದ ಚರ್ಚೆ ನಡೆದಿತ್ತು. “ಗಾಂಪ ಕೊಡ್ಡ ಇನ್ನು ಫಕ್ಕನೆ ಊರಿಗೆ ಹಿಂದಿರುಗಲಿಕ್ಕಿಲ್ಲ. ಫಕ್ಕನೇ ಏನು, ಯಾವತ್ತೂ ಹಿಂದಿರುಗಲಾರ. ಅವನು ಅನ್ಯಾಯದಿಂದ ಸಂಪಾದಿಸಿದ ಹಣವನ್ನು ಇನ್ನು ಕುಂಪಣಿ ಸರಕಾರದವರು ಹಿಡಿದುಕೊಂಡು ಹೋಗುತ್ತಾರೆ. ಅದಕ್ಕಿಂತ ನಾವೇ ಇದನ್ನು ಹಿಡಿದುಕೊಂಡು ದೇಶಾಂತರ ಹೋಗುವ” ಎಂದು ಸುಬ್ರಾಯರ ಒತ್ತಿನ ತಮ್ಮ ವಿಠಲ ಹೇಳಿದ.

ಸುಬ್ರಾಯ ಭಟ್ಟರಿಗೆ ಅದೂ ಹೌದೆಂದು ಕಂಡಿತು. ಅವರ ಹಿಡುವಳಿ ಮೂವರು ಅಣ್ಣತಮ್ಮಂದಿರ ಸಂಸಾರವನ್ನು ಸಾಕುವಷ್ಟಿರಲಿಲ್ಲ. ಹಾಗಾಗಿ ಅವರೆಲ್ಲ ಗದ್ದೆಯಲ್ಲಿ ದುಡಿಯುವ ಜತೆಗೆ ಅಡಿಗೆ ಕೆಲಸಕ್ಕೆ ಹೋಗುತ್ತಿದ್ದರು. ವಿಠಲ ಭಟ್ಟರು ಹೇಳುವುದರಲ್ಲಿಯೂ ಅರ್ಥವಿದೆ ಅನಿಸಿತು. ಅವರು ಕೊನೆಯ ತಮ್ಮ ರಘುಪತಿ ಭಟ್ಟರತ್ತ ನೋಡಿದರು. “ಇನ್ನೊಬ್ಬರ ಹಣ ನನಗಂತೂ ಬೇಡ. ಅದೂ ಕೂಡಾ ಪಾಪದವರ ತಲೆ ಒಡೆದು ಸಂಪಾದಿಸಿದ ಹಣ ನಮಗೆ ಯಾಕೆ? ನಾನು ಗಂಜಿಯೋ ತಿಳಿಯೋ ತಿಂದುಕೊಂಡು ಇಲ್ಲೇ ಇರುತ್ತೇನೆ” ಎಂದು ರಘುಪತಿ ಭಟ್ಟರು ಹೇಳಿದರು.

ಹಿರಿಯವರಿಬ್ಬರು ಗಾಂಪ ಕೊಡ್ಡನ ಚಿನ್ನದ ಗಂಟನ್ನು ಹಿಡಿದುಕೊಂಡು ಊರುಬಿಡುವ ಸಿದ್ಧತೆ ಮಾಡಿದರು. ಅದು ಮೇ ತಿಂಗಳ ಕೊನೆಯಾದ ಕಾರಣ ಬಾವಿಯಲ್ಲಿ ಹೆಚ್ಚು ನೀರಿರಲಿಲ್ಲ. ವಿಠಲ ಭಟ್ಟರು ಬಾವಿಗೆ ಇಳಿದು ಚಿನ್ನದ ಗಂಟನ್ನು ಎತ್ತಿ ಸುಬ್ರಾಯ ಭಟ್ಟರು ಇಳಿಸಿದ ಬುಟ್ಟಿಯಲ್ಲಿ ಅದನ್ನಿರಿಸಿದರು. ಗಾಂಪ ಕೊಡ್ಡನ ಕಾಟಕಾಯಿಯ ಫಲ ಹೀಗೆ ಅಣ್ಣತಮ್ಮಂದಿರ ಪಾಲಾಯಿತು. ಅವರಿಬ್ಬರೂ ಮರುದಿನವೇ ಕುಟುಂಬ ಸಮೇತ ಊರುಬಿಟ್ಟರು. ಹಲವಾರು ಮೈಲುಗಳ ಪ್ರಯಾಣ ಮಾಡಿ ಗಂಪದಬೈಲಿನತ್ತ ಬಂದರು. ಸುಬ್ರಾಯ ಭಟ್ಟರು ಆ ಕಾಲದಲ್ಲಿ ಯಾರೂ ಕಂಡು ಕೇಳರಿಯದಷ್ಟು ದೊಡ್ಡ ಮೊತ್ತವಾದ ಇನ್ನೂರು ರೂಪಾಯಿ ಕೊಟ್ಟು ಗಂಪದ ಬೈಲಿನಲ್ಲಿ ದೊಡ್ಡ ಆಸ್ತಿ ತೆಗೆದುಹಾಕಿದರೆ, ವಿಠಲ ಭಟ್ಟರು ಮಾದಯ ಕುಮೆರಿಯಲ್ಲಿ ಮನೆಮಾರು ತೆಗೆದುಕೊಂಡು ಮಜವಾಗಿ ಬದುಕತೊಡಗಿದರು. ಉಳಿದ ಕತೆ ನಿಮಗೆ ಈಗಾಗಲೇ ಹೇಳಿದ್ದೇನೆ.

ಈಗ ಗಾಂಪ ಕೊಡ್ಡನಿಗೆ ಚಿಂತೆ ಶುರುವಾಯಿತು. ತಾನು ದೋಚಿದ್ದ ಅಪಾರ ಚಿನ್ನಾಭರಣಗಳನ್ನು ಎಲ್ಲಿ ಅಡಗಿಸಿಡುವುದು ಎಂದು ತಿಳಿಯದೆ ಬಹಳ ಯೋಚನೆಮಾಡಿದ ಕೊಡ್ಡ ಕೊನೆಗೆ ಸುಬ್ರಾಯ ಭಟ್ಟರಲ್ಲಿಗೆ ಬಂದ. ಸುಬ್ರಾಯ ಭಟ್ಟರ ಬಳಿ ಒಂದು ಗಂಟನ್ನು ಕೊಟ್ಟು, “ಕುಂಪಣಿಯವರು ನನ್ನನ್ನು ಹುಡುಕುತ್ತಿದ್ದಾರೆ, ನಾನು ಅಡಗಿಕೊಳ್ಳಲು ಎಲ್ಲಿಗೋ ಹೋಗುತ್ತಿದ್ದೇನೆ. ಈ ಗಂಟನ್ನು ನಿಮ್ಮ ಮನೆಯ ಬಾವಿಯಲ್ಲಿ ಅಥವಾ ನಿಮಗೆ ಬೇಕಾದಲ್ಲಿ ಅಡಗಿಸಿಡಿ.” ಎಂದ.

ನೂತಬೆಟ್ಟಿನಲ್ಲಿ ಉಳಿದುಕೊಂಡ ರಘುಪತಿ ಭಟ್ಟರ ಕತೆ ನಮಗೆ ಇತ್ತೀಚಿನವರೆಗೆ ಗೊತ್ತಿರಲಿಲ್ಲ. ಮೊನ್ನೆ ಮೊನ್ನೆ ನಮ್ಮನ್ನು ಹುಡುಕಿಕೊಂಡು ರಘುಪತಿ ಭಟ್ಟರ ವಂಶದವರು ಇಲ್ಲಿಗೆ ಬಂದಿದ್ದರು. ಅವರು ಹೇಳಿದ ಪ್ರಕಾರ ಗಾಂಪ ಕೊಡ್ಡನಿಗೆ ಹೆಚ್ಚು ವರ್ಷ ಶಿಕ್ಷೆ ಆಗಲಿಲ್ಲವಂತೆ. ಅವನು ದೋಚಿದ್ದ ವಸ್ತುಗಳು ಯಾವುವೂ ಸಿಗದ ಕಾರಣ ಕುಂಪಣಿಯವರು ಅವನನ್ನು ಬಿಟ್ಟರೆಂದು ಕಾಣುತ್ತದೆ. ಅವನು ಊರಿಗೆ ಬಂದವನೇ ರಘುಪತಿ ಭಟ್ಟರ ಮನೆಗೆ ಬಂದು ಸುಬ್ರಾಯರನ್ನು ಕೇಳಿದನಂತೆ. ಅಣ್ಣಂದಿರಿಬ್ಬರೂ ಊರು ಬಿಟ್ಟುಹೋಗಿದ್ದಾರೆ ಎಂದು ರಘುಪತಿ ಭಟ್ಟರು ಹೇಳಿದಾಗಲೇ ಕೊಡ್ಡನಿಗೆ ಸಂಶಯ ಬಂತಂತೆ. ಅವನೇ ಬಾವಿಗಿಳಿದು ಹುಡುಕಿ ಏನೂ ಸಿಗದೆ ಸಿಟ್ಟಿನಿಂದ ಮೇಲೆ ಬಂದನಂತೆ. ರಘುಪತಿ ಭಟ್ಟರನ್ನು ಬೆದರಿಸಿ, ಅವರಿಂದ ಏನೂ ಮಾಹಿತಿ ಸಿಗದೆ ತನ್ನ ಬಂಟರ ಮೂಲಕ ಸುತ್ತಮುತ್ತಲಿನ ಎಲ್ಲಾ ಊರುಗಳನ್ನೂ ಜಾಲಾಡಿಸಿದನಂತೆ. ಗಂಪದಬೈಲು ಬಹಳ ದೂರದ ಊರಾದ ಕಾರಣ ಸುಬಾಯ ಭಟ್ಟರ ಸುದ್ದಿ ಅವನಿಗೆ ತಿಳಿಯಲಿಲ್ಲ ಎಂದು ಕಾಣುತ್ತದೆ. ಆದರೆ ಸುಬ್ರಾಯ ಭಟ್ಟರಿಗೆ ಗಾಂಪ ಕೊಡ್ಡ ತಮ್ಮನ್ನು ಹುಡುಕುತ್ತಿರುವ ಸುದ್ದಿ ಸಿಕ್ಕಿರಬೇಕು, ಅದಕ್ಕಾಗಿಯೇ ಅವರು ಕೇರಳಕ್ಕೆ ಹೋಗಿರಬೇಕು ಎಂದು ನಾವು ಊಹಿಸಬಹುದು.

ಅತ್ತ ರಘುಪತಿ ಭಟ್ಟರ ಹೆಣ ಮಾತ್ರ ಒಂದು ದಿನ ಚಿನ್ನದ ಬಾವಿಯಲ್ಲಿ ತೇಲಾಡುತ್ತಿತ್ತಂತೆ. ಅವರು ಆತ್ಮಹತ್ಯೆ ಮಾಡಿಕೊಂಡರೆಂದು ಕೇಸು ಮುಚ್ಚಿಹೋದರೂ ಅದು ಗಾಂಪ ಕೊಡ್ಡನದೇ ಕೆಲಸ ಎಂದು ಭಟ್ಟರ ಮನೆಯವರಿಗೆ ಸಂಶಯವಿತ್ತಂತೆ.  ಈ ಕಥಾನಕದ ಸ್ವಾರಸ್ಯಕರ ಅಂಶವೆಂದರೆ ಈಗ ಗಾಂಪ ಕೊಡ್ಡನ ಕುಟುಂಬದ ಮನೆಯಲ್ಲಿ ಈ ಕತೆಗೆ ಸಂಬಂಧಪಟ್ಟ ಮೂವರು ವ್ಯಕ್ತಿಗಳು ಭೂತಗಳಾಗಿ ಪೂಜೆಗೊಳ್ಳುತ್ತಿದ್ದಾರೆ ಎನ್ನುವುದು. ಗಾಂಪ ಕೊಡ್ಡ ‘ಪೊಸ ಬೂತ’ (ಹೊಸ ಭೂತ)ವಾಗಿ ಅವರ ಮನೆಯಲ್ಲಿ ನೆಲೆಸಿ ಕಾಲಕಾಲಕ್ಕೆ ಭೋಗಾದಿಗಳನ್ನು ಸ್ವೀಕರಿಸುತ್ತಾ ಇದ್ದಾನೆ. ಅದರ ಜತೆಗೆ ರಘುಪತಿ ಭಟ್ಟರ ಆತ್ಮವೆಂದು ಊಹಿಸಲ್ಪಟ್ಟಿರುವ ‘ಬೆರಣ ಬೂತ’ (ಬ್ರಾಹ್ಮಣ ಭೂತ) ಎನ್ನುವ ಶಕ್ತಿ ಅವರ ಕುಟುಂಬಕ್ಕೆ ಸಾಕಷ್ಟು ಉಪದ್ರವ ನೀಡಿದ ಬಳಿಕ ಅವರು ಅದನ್ನು ನಂಬಿಕೊಂಡು ಪೂಜಿಸುತ್ತಾ ಬರುತ್ತಿದ್ದಾರಂತೆ. ಆ ಬ್ರಾಹ್ಮಣ ಭೂತಕ್ಕೆ ಅಗೆಲು ಅಥವಾ ನೈವೇದ್ಯ ಬಡಿಸುವ ಕಾರ್ಯಕ್ರಮವನ್ನು ರಘುಪತಿ ಭಟ್ಟರ ವಂಶದವರು ಮಾಡುತ್ತಾ ಬರುತ್ತಿದ್ದಾರಂತೆ. ಯಾಕೆಂದರೆ ಗಾಂಪ ಕೊಡ್ಡನ ಮನೆಯವರು ಮಾಂಸಾಹಾರಿಗಳು, ಅವರ ಇತರ ಭೂತಗಳು ಮಾಂಸಾಹಾರಿಗಳೇ. ಅವುಗಳಿಗೆ ಮನೆಯವರೇ ಮಾಂಸದ ಅಡುಗೆ ಮಾಡಿ ಪರ್ವದಿನಗಳಂದು ಅಗೆಲು ಬಡಿಸುತ್ತಾರೆ. ಆದರೆ ಬ್ರಾಹ್ಮಣ ಭೂತಗಳಿಗೆ ಶುದ್ಧಾಚಾರದಲ್ಲಿ ನೈವೇದ್ಯ ಬಡಿಸಬೇಕಂತೆ!

ವಿಶೇಷವೆಂದರೆ ಈಗ ಮತ್ತೊಂದು ಭೂತ ಅದರ ಜತೆಗೆ ಸೇರಿಕೊಂಡಿದೆಯಂತೆ. ಅದು ಗಂಪದಬೈಲು ಅನಂತ ಭಟ್ಟನ ಆತ್ಮವೇ ಇರಬೇಕು ಎಂದು ಅಲ್ಲಿನ ದೈವಜ್ಞರು ಅಷ್ಟಮಂಗಲ ಪ್ರಶ್ನೆ ಇಟ್ಟು ವಿಮರ್ಶಿಸಿ ತೀರ್ಮಾನಿಸಿದ್ದಾರಂತೆ. ಯಾವುದಾದರೂ ಇರಲಿ ಎಂದು ಗಾಂಪ ಕೊಡ್ಡನ ಕುಟುಂಬಸ್ಥರು ಈಗ ಎರಡು ಬ್ರಾಹ್ಮಣ ಭೂತಗಳಿಗೆ ರಘುಪತಿ ಭಟ್ಟರ ಮನೆಯವರ ಕೈಯಲ್ಲಿ ನೈವೇದ್ಯ ಇಡಿಸುತ್ತಾ ಇದ್ದಾರಂತೆ – ಎಂದು ಹೇಳಿದ ನಾರಾಯಣ ಉಪಾಧ್ಯಾಯರು ಮುಖ್ಯ ವಿಷಯಕ್ಕೆ ಬಂದರು :

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಈಗ ಒಬ್ಬರು ದೊಡ್ಡ ಜಾನಪದ ವಿದ್ವಾಂಸರು ಸಂಶೋಧನೆ ಮಾಡಿಕೊಂಡು ಹೋಗುವಾಗ ಅವರಿಗೆ ಹೀಗೆ ಬೇರೆ ಜಾತಿಯವರ ಮನೆಯಲ್ಲಿ ಎರಡು ಬ್ರಾಹ್ಮಣ ಭೂತಗಳನ್ನು ಆರಾಧಿಸಿಕೊಂಡುಬರುವ ಸಂಗತಿ ತಿಳಿದುಬಂದು ಬಹಳ ಆಶ್ಚರ್ಯವಾಯಿತಂತೆ. ಆ ವ್ಯಕ್ತಿಗಳ ಇತಿಹಾಸವನ್ನು ತಿಳಿಯುವ ಸಲುವಾಗಿ ನಾಳೆ ನೂತಬೆಟ್ಟಿನ ಗಾಂಪ ಕೊಡ್ಡನ ಕುಟುಂಬದ ಮನೆಗೆ ಬರುತ್ತಾರಂತೆ. ಅವರು ಅದನ್ನು ರಘುಪತಿ ಭಟ್ಟರ ಕುಟುಂಬಸ್ಥರಿಗೆ ಹೇಳಿ, “ಅನಂತ ಭಟ್ಟನಿಗೆ ಸಂಬಂಧಪಟ್ಟ ಕುಟುಂಬದವರು ಗಂಪದಬೈಲಿನಲ್ಲಿ ಯಾರಾದರೂ ಇದ್ದರೆ ನಾಳೆ ಇಲ್ಲಿಗೆ ಬರಮಾಡಿಸಿಕೊಳ್ಳಿ, ಅವರಿಗೆ ಕಾರಿನಲ್ಲಿ ಬಂದುಹೋಗುವ ಖರ್ಚನ್ನು ನಾನು ಕೊಡುತ್ತೇನೆ” ಎಂದು ಹೇಳಿಹೋಗಿದ್ದಾರಂತೆ. ರಘುಪತಿ ಭಟ್ಟರ ಕುಟುಂಬದವರೊಬ್ಬರು ಮೊನ್ನೆ ಇಲ್ಲಿಗೆ ಬಂದು ಪರಿಚಯ ಮಾಡಿಕೊಂಡು ವಿಷಯ ಹೇಳಿಹೋದರು. ಅವರು ಹೇಳಿದ ಕತೆಯನ್ನೇ ನಾನು ನಿಮಗೆ ಹೇಳಿದ್ದು. ನಾಳೆ ನನ್ನ ಜತೆಗೆ ನೀವು ಕೂಡಾ ಬಂದರೆ ನನಗೆ ಕಂಪೆನಿಯೂ ಆಗುತ್ತದೆ; ನಿಮಗೆ ಆಸಕ್ತಿ ಇರುವ ವಿಷಯವೊಂದನ್ನು ಪ್ರತ್ಯಕ್ಷ ಕಂಡ ಹಾಗೂ ಆಗುತ್ತದೆ – ಎಂದು ನಾರಾಯಣ ಉಪಾಧ್ಯಾಯರು ಹೇಳಿದರು.

ಕತೆಯನ್ನೆಲ್ಲ ಕೇಳಿದ ನನಗೆ ಯಾವ ಪಾಪದ ಪರಿಮಾರ್ಜನೆ ಹೇಗೆ; ಯಾವ ಕ್ರಿಯೆಗೆ ಎಲ್ಲಿ ಯಾಕೆ ಹೇಗೆ ಪ್ರತಿಕಿಯೆ ಹುಟ್ಟುತ್ತದೆ ಎನ್ನುವುದು ಅರ್ಥವಾಗಲಿಲ್ಲ. ಈ ಗೊಂದಲವನ್ನು ಹೇಳಿಕೊಳ್ಳದೆ, ನಾರಾಯಣ ಉಪಾಧ್ಯಾಯರ ಕತೆಗೆ ಒಂದು ಪ್ರತಿಕ್ರಿಯೆ ತೋರಿಸಬೇಕಲ್ಲ ಎಂದು ತೀರಾ ಅಮುಖ್ಯವಾದ, ಆದರೆ ಈಗಿನ ಸಾಂಸ್ಕೃತಿಕ ರಾಜಕೀಯಕ್ಕೆ ಹಾಗೂ ರಾಜಕೀಯ ವಿಕೃತಿಗೆ ಬಹಳ ಆಪ್ಯಾಯಮಾನವಾದ ವಿಶ್ಲೇಷಣೆಯೊಂದನ್ನು ಹೇಳಿದೆ :

“ಇದನ್ನು ನೋಡಿದರೆ ದೈವಾರಾಧನೆ ಬಹಳ ಸೆಕ್ಯೂಲರ್ ಅನಿಸುತ್ತದಲ್ವ? ಒಂದು ಜಾತಿಯವರ ಮನೆಯಲ್ಲಿ ಇನ್ನೊಂದು ಜಾತಿಯವರ ಭೂತ! ನಮ್ಮ `ಜಾತಿ ಭೂತ’ಕ್ಕೆ ಇದೇ ಉತ್ತರವಾಗಬಲ್ಲುದಲ್ಲವೇ?” ಎಂದೆ. ನಾರಾಯಣ ಉಪಾಧ್ಯಾಯರು ಬೇರೊಂದೇ ಆಯಾಮದಲ್ಲಿ ಯೋಚಿಸುತ್ತಿದ್ದರೆನಿಸುತ್ತದೆ. ಅವರು ಹೇಳಿದರು : “ತುಂಬಾ ದುರಂತವಾದ ಸಾವನ್ನು ಕಂಡವರು ಭೂತಗಳಾಗುವ ಹಲವಾರು ಉದಾಹರಣೆಗಳು ನನಗೆ ತಿಳಿದಿವೆ. ಸಾರ್ವಜನಿಕವಾಗಿ ಆರಾಧನೆಗೊಳ್ಳದ, ಒಂದೊಂದು ಮನೆಗಳಿಗೆ ಮಾತ್ರ ಸಂಬಂಧಿಸಿದ ಇಂತಹ ಚುಂಗುಡಿ ಭೂತಗಳು ಸಾವಿರಾರು ಇವೆ ಎಂದು ಕೇಳಿದ್ದೇನೆ.”


ನಾನು ಮತ್ತೇನೂ ಮಾತಾಡದೆ, ರಘುಪತಿ ಭಟ್ಟ ಮತ್ತು ಅನಂತ ಭಟ್ಟರೆಂಬವರು ‘ಬೆರಣ (ಬ್ರಾಹ್ಮಣ) ಭೂತ’ಗಳಾಗಿ ಕಾಟಕಾಯಿಯ ಗಾಂಪ ಕೊಡ್ಡನ ಕುಟುಂಬದ ಮನೆಯಲ್ಲಿ ಆರಾಧನೆಗೊಳ್ಳುತ್ತಿರುವ ಪರಿಗೆ ವಿಸ್ಮಯಪಡುತ್ತಾ ಮೌನವಾದೆ.

 

ಕಾಟಕಾಯಿ: ಬಿ. ಜನಾರ್ದನ ಭಟ್ ಬರೆದ ಸಣ್ಣ ಕಥೆಯ ಮೊದಲ ಕಂತಿಗೆ ಇಲ್ಲಿ ಒತ್ತಿ.