Advertisement
ಕಾಣದ್ದು ಕಾಣಿಸಿದ್ದು…!: ಸುಭಾಷ್‌ ರಾಜಮಾನೆ ವಿಮರ್ಶಾ ಕೃತಿಯ ಕುರಿತು ಕಲ್ಲೇಶ್ ಕುಂಬಾರ್ ಬರಹ

ಕಾಣದ್ದು ಕಾಣಿಸಿದ್ದು…!: ಸುಭಾಷ್‌ ರಾಜಮಾನೆ ವಿಮರ್ಶಾ ಕೃತಿಯ ಕುರಿತು ಕಲ್ಲೇಶ್ ಕುಂಬಾರ್ ಬರಹ

ಜಗತ್ತಿನ ಬಹುಮುಖ್ಯ ಕೃತಿಗಳನ್ನು ಗುರುತಿಸುವ, ಪರಿಚಯಿಸುವ, ಆ ಮೂಲಕ ಓದುಗರಿಗೆ ದಾಟಿಸುವಂಥ ಪ್ರಾಮಾಣಿಕ ಕೆಲಸವನ್ನು ಸುಭಾಷ್ ರಾಜಮಾನೆ ಅವರು ಮಾಡುತ್ತಿದ್ದಾರೆ. ಅವರ ಈ ಬರಹಗಳನ್ನು ಓದುವುದರ ಮೂಲಕ ಓದುಗನು ಸ್ವಯಂ ಮರಳಿ ಮೂಲ ಕೃತಿಗಳನ್ನು ಓದುವುದಕ್ಕೆ ಉತ್ಸುಕನಾಗುತ್ತಾನೆ ಎಂಬುದರಲ್ಲಿ ಸಂಶಯವೇ ಇಲ್ಲ! ಇನ್ನೂ ಹೇಳಬೇಕೆಂದರೆ, ಕೃತಿಕಾರ ಮರೆಯಾಗಿ ಕೃತಿಯೇ ಮುಖ್ಯವಾಗುವುದು, ಹಾಗೂ ಆ ಕೃತಿಯ ಮೂಲಕವೇ ಕೃತಿಕಾರ ಗುರುತಿಸಿಕೊಳ್ಳುವಂತಾಗುವುದು ಒಂದು ಕ್ರಿಯೆ. ಅಂಥ ಲೇಖಕ ಮತ್ತು ಆ ಲೇಖಕನ ಕೃತಿಗಳು ಶಾಶ್ವತವಾಗಿ ನಿಲ್ಲುತ್ತವೆ! ಹಾಗೆ ನಿಲ್ಲಬಹುದಾದ ಲೇಖಕರ ಕೃತಿಗಳನ್ನು ಓದುಗರಿಗೆ ಸುಭಾಷ್ ರಾಜಮಾನೆ ಅವರು ಪರಿಚಯಿಸಿದ್ದಾರೆ.
ಸುಭಾಷ್‌ ರಾಜಮಾನೆ ವಿಮರ್ಶಾ ಕೃತಿ “ಕಂಡದ್ದು ಕಾಣದ್ದು” ಕುರಿತು ಕಲ್ಲೇಶ್‌ ಕುಂಬಾರ್‌ ಬರಹ

ನಮ್ಮ ನಾಡಿನ ಒಳ್ಳೆಯ ವಿಮರ್ಶಕರಾಗಿ ಗುರುತಿಸಿಕೊಳ್ಳಬಲ್ಲ ಎಲ್ಲ ಲಕ್ಷಣಗಳನ್ನು ಹೊಂದಿರುವ ಯುವ ವಿಮರ್ಶಕ ಸುಭಾಷ್ ರಾಜಮಾನೆ ಅವರ ‘ಕಂಡದ್ದು ಕಾಣದ್ದು’ ಕೃತಿಯನ್ನು ಸಾದ್ಯಂತವಾಗಿ ಓದಿ ಮುಗಿಸಿದೆ. ಹಾಗೆ ನೋಡಿದರೆ ಓದಿನಲ್ಲಿ ಅಗಾಧವಾದ ಆಸಕ್ತಿಯನ್ನು ಹೊಂದಿರುವ ಸುಭಾಷ್ ರಾಜಮಾನೆ ಅವರ, ಈ ಮಾತನ್ನು ಸಾಕ್ಷೀಕರಿಸುವಂತಿರುವ ‘ಕಂಡದ್ದು ಕಾಣದ್ದು’ ಕೃತಿಯಲ್ಲಿನ ಲೇಖನಗಳು ಕೇವಲ ಅವರ ಓದಿನ ಹಸಿವೆಗೆ ಹಿಡಿದ ಕನ್ನಡಿಯಾಗಿರದೇ, ಅದನ್ನು ಮೀರಿ ಈ ವಿಶ್ವದ ಎಲ್ಲ ಕಾಲದಲ್ಲಿ, ಎಲ್ಲ ಭಾಷೆಗಳಲ್ಲಿ ರಚಿತಗೊಂಡಿರುವ ಸಾಹಿತ್ಯ ಕೃತಿಗಳ ಮೂಲ ಆಶಯ ಮಾನವೀಯ ಪಾತಳಿಯ ಮೇಲೆ ಮನುಷ್ಯ ಬದುಕಿನ ದಂದುಗಳನ್ನು ಶೋಧಿಸುವುದು ಹಾಗೂ ಆ ಕುರಿತಾದ ಸಾಧ್ಯತೆಗಳನ್ನು ಗ್ರಹಿಸಲು ಪ್ರಯತ್ನಿಸುತ್ತವೆ. ಈ ನಿಟ್ಟಿನಲ್ಲಿ ಸುಭಾಷ್ ರಾಜಮಾನೆ ಅವರು ಕಾಲಾಂತರದಲ್ಲಿ ಅಕ್ಷರಗಳಲ್ಲಿ ದಾಖಲಾಗುತ್ತ ಬಂದ ಮನುಷ್ಯ ಬದುಕು ಮತ್ತು ಆ ಬದುಕನ್ನು ಆವರಿಸಿರುವ ಕ್ರಿಯೆಗಳ ಕುರಿತಾದ ಅವರ ಆಲೋಚನೆಗಳನ್ನು ಈ ಸಂದರ್ಭದಲ್ಲಿ ಓದುಗರಿಗೆ ಕೃತಿಯ ರೂಪದಲ್ಲಿ ಇಡಿಯಾಗಿ ಕಾಣಿಸಲು ಪ್ರಯತ್ನಿಸಿರುವ ಸಂಗತಿಯಂತೂ ನಿಜಕ್ಕೂ ಶ್ಲಾಘನೀಯ. ಈ ಮಾತಿಗೆ ಪೂರಕವಾಗಿ ಇಲ್ಲಿನ ಬರಹಗಳಿವೆ.

(ಸುಭಾಷ್‌ ರಾಜಮಾನೆ)

ಈ ಕೃತಿಯಲ್ಲಿನ ‘ಸ್ಯಾಫೋ: ಗೋರಿಯಿಂದ ಎದ್ದು ಬಂದ ಕಾವ್ಯ’ ಎಂಬ ಪ್ರಾರಂಭದಲ್ಲಿನ ಲೇಖನ, ಕೇವಲ ಸ್ಯಾಫೋನ ಕಾವ್ಯದ ಕುರಿತಾಗಿ ವಿವರಿಸದೇ ಕ್ರಿ. ಪೂ. 630– 580 ರ ಕಾಲಘಟ್ಟದಲ್ಲಿನ ರಾಜ್ಯಗಳ ನಡುವಿನ ಸಂಘರ್ಷ, ತಿಕ್ಕಾಟ, ನಡೆಯುತ್ತಿದ್ದ ಯುದ್ಧಗಳ ಹಿಂದಿನ ಕಾರಣಗಳ ಕುರಿತಾಗಿಯೂ ಓದುಗನ ಅರಿವಿಗೆ ತರುತ್ತದೆ. ರಾಜ್ಯಗಳು, ನಗರಗಳು ಉದಯವಾಗುತ್ತಿದ್ದ ಕಾಲಘಟ್ಟದಲ್ಲಿಯೇ ಸ್ಯಾಫೋ ಕಾವ್ಯವನ್ನೇ ಧೇನಿಸುತ್ತಿದ್ದಳು ಎಂದರೆ ನಾಗರೀಕತೆಯ ಪ್ರಾರಂಭದ ದಿನಗಳಲ್ಲೇ ಮನುಷ್ಯ ಬದುಕನ್ನು ಸಂಘರ್ಷಗಳು ಸುತ್ತುವರೆದಿದ್ದವು ಎಂದೇ ಅರ್ಥ! ಅತ್ತ, ಭೂಮಿಯ ಮೇಲೆ ತಮ್ಮ ಪ್ರಾಬಲ್ಯವನ್ನು ಸಾಧಿಸುವ ಸಲುವಾಗಿ ಯುದ್ಧಗಳು ನಡೆಯುತ್ತಿದ್ದರೆ ಇತ್ತ ಸ್ಯಾಫೋ ಗಂಡು ಹೆಣ್ಣುಗಳ ಭೇದವಿಲ್ಲದೆ ಸ್ನೇಹಕ್ಕಾಗಿ, ಪ್ರೇಮಕ್ಕಾಗಿ ಆತ್ಮಸಂಗಾತಕ್ಕಾಗಿ ಹಾತೊರೆಯವಂಥ ಕಾವ್ಯವನ್ನು ರಚಿಸಿದಳು. ಇಲ್ಲಿ, ಸಂಘರ್ಷವೆಂದರೆ ಸಾಮ್ರಾಜ್ಯಗಳ ಮೇಲೆ ಮನುಷ್ಯ ತನ್ನ ಅಧಿಪತ್ಯವನ್ನು ಸಾಧಿಸಲು ನಡೆಸುವ ಹೋರಾಟವಷ್ಟೇ ಆಗಿರದೇ ಹೆಣ್ಣೊಬ್ಬಳು ನೈತಿಕತೆಯ ಪಾತಳಿಯನ್ನು ಮೀರದಂತೆ ತನ್ನ ದೇಹವಾಂಛೆಯನ್ನು ಪೂರೈಸಿಕೊಳ್ಳಲು ನಡೆಸುವ ಹೋರಾಟವೂ ಸಹ ಆಗಿದೆ ಎನ್ನಬೇಕು. ಸ್ಯಾಫೋಳ ಕಾವ್ಯದ ಮುಖ್ಯ ಗುಣ ಪ್ರೀತಿ ಪ್ರೇಮಕ್ಕಾಗಿ ತಹತಹಿಸುವುದಾಗಿದೆ. ಹೀಗಾಗಿ, ಆಕೆ ತನ್ನ ಕಾವ್ಯದ ಸೀಮಿತ ಆವರಣದಲ್ಲಿ ತನ್ನ ಕೆಚ್ಚೆದೆಯನ್ನು ತೋರಿದ್ದಾಳೆ ಎಂಬ ಮಾತಿನಲ್ಲಿ ಅಷ್ಟೇ ಸತ್ಯವಿದೆ. ಇದಕ್ಕೆ ಸಾಕ್ಷಿಯಾಗಿ ಈ ಬರಹದ ಕೊನೆಯಲ್ಲಿ ನೀಡಲಾದ ಆಕೆಯ ಪದ್ಯಗಳಿವೆ ಎನ್ನಬಹುದು.

ಇನ್ನು, ಎಚ್ ವಿ ಸಾವಿತ್ರಮ್ಮ ಅನುವಾದಿಸಿದ ರವೀಂದ್ರನಾಥ ಠಾಗೋರ್ ಅವರ ‘ಮನೆ ಜಗತ್ತು’ (ಮೂಲ: ‘ಘರೇ ಬೈರೇ’) ಕಾದಂಬರಿ, ಬೆಂಗಾಲ ವಿಭಜನೆ ಹಾಗೂ ಅದರಿಂದ ಪ್ರೇರಿತವಾದ ಸ್ವದೇಶಿ ಚಳುವಳಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ದೇಶಾಭಿಮಾನ, ರಾಷ್ಟ್ರೀಯತೆ, ಪಾಶ್ಚಾತ್ಯ ಶಿಕ್ಷಣ, ಹೆಣ್ಣಿನ ವಿಮೋಚನೆ, ರೈತರ ಸಮಸ್ಯೆ, ಗಂಡು ಹೆಣ್ಣಿನ ವಿವಾಹೇತರ ಸಂಬಂಧ– ಇವೆಲ್ಲವುಗಳ ಕುರಿತಾಗಿ ಶೋಧಿಸುತ್ತದೆ. ನಿಖಿಲೇಶ್ ಚೌದರಿ, ಆತನ ಹೆಂಡತಿ ವಿಮಲೆ ಹಾಗೂ ಸಂದೀಪ್ ಮುಖರ್ಜಿ –ಈ ಮೂರು ಪಾತ್ರಗಳ ಮೂಲಕ ತೆರೆದುಕೊಳ್ಳುವ ಕಾದಂಬರಿಯು ರಾಷ್ಟ್ರೀಯತೆಯ ಅಪಾಯಗಳ ಕುರಿತಾಗಿ ಮಾತನಾಡುತ್ತದೆ. ಇಲ್ಲಿ, ಸುಭಾಷ್ ರಾಜಮಾನೆ ಅವರು ಸಂದೀಪ್ ಮುಖರ್ಜಿಯು ಯಾವ ಕಾರಣಕ್ಕಾಗಿ ರಾಷ್ಟ್ರೀಯತೆಯನ್ನು ಸಮರ್ಥಿಸಿಕೊಳ್ಳುತ್ತಾನೆ ಎಂಬುದರ ಹಿಂದಿನ ಕಾರಣವನ್ನು ನಿಖರವಾಗಿ ಗುರುತಿಸಿದ್ದಾರೆ. ಹಾಗೆಯೇ, ನಿಖಿಲೇಶ್ ಚೌದರಿ ಸಂದೀಪ್’ನ ಉಗ್ರವಾದಿ ರಾಷ್ಟ್ರೀಯತೆಯ ವಿರೋಧಿಯಾಗಿರುವುದಕ್ಕೆ ಇರಬಹುದಾದ ಕಾರಣಗಳನ್ನೂ ಸಹ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ರವೀಂದ್ರನಾಥ ಠಾಗೋರ್ ಅವರು ನಿಖಿಲೇಶ್’ನ ಪಾತ್ರದ ಮೂಲಕ ರಾಷ್ಟ್ರೀಯತೆಯ ಅಪಾಯಗಳನ್ನು ಗುರುತಿಸಿದ್ದಾರೆ ಎಂಬುದು ಸತ್ಯ.

ಹಾಗೆಯೇ, ಭೀಷ್ಮ ಸಹಾನಿ ಅವರು ‘ತಮಸ್’ ಕಾದಂಬರಿಯು ಬಹುತ್ವದಲ್ಲಿ ಏಕತೆಯನ್ನು ಕಾಣುವ ನಮ್ಮ ದೇಶದಲ್ಲಿ ಬಹುತ್ವದಲ್ಲಿನ ಶಾಂತಿಯನ್ನು ಕದಡಿ, ಛಿದ್ರಗೊಳಿಸುವ ವ್ಯವಸ್ಥೆಯೊಂದು ನಮ್ಮ ನಡುವೆಯೇ ಇದೆ ಎಂಬ ವಿಚಾರವನ್ನು ತೆರೆದಿಡುತ್ತದೆ.‌ ಈ ದೇಶದಲ್ಲಿರುವ ವಿವಿಧ ಮತ, ಧರ್ಮ, ಜಾತಿ, ವರ್ಗ, ಸಮುದಾಯಗಳು ನೂರಾರು ವರ್ಷಗಳಿಂದ ಸಂಘರ್ಷಗಳೊಂದಿಗೆಯೇ ಸಹಬಾಳ್ವೆಯನ್ನು ನಡೆಸುತ್ತ ಬಂದಿವೆ. ಈ ಸಹಬಾಳ್ವೆಯಲ್ಲಿನ ನೆಮ್ಮದಿಯನ್ನು ಕದಡುವ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. 1940 ರ ದಶಕದಲ್ಲಿ ನಡೆದ ಕೋಮು ಹತ್ಯಾಕಾಂಡದ ವಸ್ತುವನ್ನು ಕೇಂದ್ರವಾಗಿರಿಸಿಕೊಂಡು ರಚಿತವಾದ ಈ ಕಾದಂಬರಿಯು ಬಹುತ್ವದಲ್ಲಿರಬಹುದಾದ ಶಕ್ತಿಯ ಮಹತ್ವವನ್ನು ಹೇಳುತ್ತದೆ. ಮತ, ಧರ್ಮ, ಜಾತಿಗಳ ಹೆಸರಲ್ಲಿ ಹೇಗೆಲ್ಲ ವಿಕೃತ ಹಿಂಸೆಗಳು ನಡೆಯುತ್ತವೆ ಎಂಬುದನ್ನು ಉತ್ತರ ಭಾರತದಲ್ಲಿ ನಡೆದ ಕೋಮು ಹತ್ಯಾಕಾಂಡದ ವಸ್ತುವನ್ನಿಟ್ಟುಕೊಂಡು ಹೇಳಲು ಪ್ರಯತ್ನಿಸುತ್ತದೆ. ಈ ಕೃತಿಯ ವಿನ್ಯಾಸದಲ್ಲಿ ತೋರಿರುವ ಕಲಾತ್ಮಕತೆಯನ್ನು ಸುಭಾಷ್ ರಾಜಮಾನೆ ಅವರು ಕಾದಂಬರಿಯಲ್ಲಿ ಬರುವ ಹಲವು ಅಂಶಗಳನ್ನಿಟ್ಟುಕೊಂಡು ಖಚಿತವಾಗಿ ಗುರುತಿಸಿದ್ದಾರೆ. ಜೊತೆಗೆ, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಮತ್ತು ‘ತಮಸ್’ ಕಾದಂಬರಿಗಳ ಮಧ್ಯೆ ಇರಬಹುದಾದ ಸಾಮ್ಯತೆಗಳನ್ನು ಗುರುತಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ.
ಇದು ಸುಭಾಷ್ ರಾಜಮಾನೆ ಅವರ ಅಗಾಧವಾದ ಓದಿನ ಹಿನ್ನೆಲೆಯಲ್ಲಿ ಅವರೊಳಗೆ ರೂಪುಗೊಂಡಿರಬಹುದಾದ ಆಲೋಚನಾ ಕ್ರಮಕ್ಕೆ ಕನ್ನಡಿ ಹಿಡಿಯುತ್ತದೆ.

ಈ ಕೃತಿಯಲ್ಲಿ ಇಪ್ಪತ್ತೆರಡು ಬರಹಗಳಿದ್ದು, ಇವೆಲ್ಲವೂ ಅವರು ಅಷ್ಟೇ ಆಸ್ಥೆಯಿಂದ, ಪ್ರೀತಿಯಿಂದ ಓದಿದ ಕೃತಿಗಳ ಕುರಿತಾಗಿ ಬರೆದ ಬರಹಗಳಾಗಿವೆ. ಈ ಬರಹಗಳು ಅವರಿಗಿರುವ ಅಗಾಧವಾದ ಓದಿನ ಹಸಿವೆಗೆ ಕನ್ನಡಿ ಹಿಡಿಯುತ್ತವೆ ಎಂದರೆ ಅತಿಶಯೋಕ್ತಿಯಾಗಲಾರದು. ಅವರ ಓದಿನ ವಿಸ್ತಾರ ವಿಶಾಲವಾಗಿರುವಂತೆಯೇ ಸಾಹಿತ್ಯ ಕೃತಿಗಳ ಸಂಗ್ರಹಣೆಯಲ್ಲಿ ಅವರಿಗಿರುವ ಆಸಕ್ತಿಯೂ ಕೂಡ ಅಷ್ಟೇ ವಿಶಾಲವಾಗಿದೆ ಎಂಬುದನ್ನು ಸುಭಾಷ್ ರಾಜಮಾನೆ ಅವರ ಈ ‘ಕಂಡದ್ದು ಕಾಣದ್ದು’ ಕೃತಿಯು ಕಾಣಿಸುವಂತೆ ಮಾಡಿದೆ. ಜಗತ್ತಿನ ಬಹುಮುಖ್ಯ ಕೃತಿಗಳನ್ನು ಗುರುತಿಸುವ, ಪರಿಚಯಿಸುವ, ಆ ಮೂಲಕ ಓದುಗರಿಗೆ ದಾಟಿಸುವಂಥ ಪ್ರಾಮಾಣಿಕ ಕೆಲಸವನ್ನು ಸುಭಾಷ್ ರಾಜಮಾನೆ ಅವರು ಮಾಡುತ್ತಿದ್ದಾರೆ. ಅವರ ಈ ಬರಹಗಳನ್ನು ಓದುವುದರ ಮೂಲಕ ಓದುಗನು ಸ್ವಯಂ ಮರಳಿ ಮೂಲ ಕೃತಿಗಳನ್ನು ಓದುವುದಕ್ಕೆ ಉತ್ಸುಕನಾಗುತ್ತಾನೆ ಎಂಬುದರಲ್ಲಿ ಸಂಶಯವೇ ಇಲ್ಲ! ಇನ್ನೂ ಹೇಳಬೇಕೆಂದರೆ, ಕೃತಿಕಾರ ಮರೆಯಾಗಿ ಕೃತಿಯೇ ಮುಖ್ಯವಾಗುವುದು, ಹಾಗೂ ಆ ಕೃತಿಯ ಮೂಲಕವೇ ಕೃತಿಕಾರ ಗುರುತಿಸಿಕೊಳ್ಳುವಂತಾಗುವುದು ಒಂದು ಕ್ರಿಯೆ. ಅಂಥ ಲೇಖಕ ಮತ್ತು ಆ ಲೇಖಕನ ಕೃತಿಗಳು ಶಾಶ್ವತವಾಗಿ ನಿಲ್ಲುತ್ತವೆ! ಹಾಗೆ ನಿಲ್ಲಬಹುದಾದ ಲೇಖಕರ ಕೃತಿಗಳನ್ನು ಓದುಗರಿಗೆ ಸುಭಾಷ್ ರಾಜಮಾನೆ ಅವರು ಪರಿಚಯಿಸಿದ್ದಾರೆ. ಆ ಮೂಲಕ ಕೃತಿಗೂ ಹಾಗೂ ಕೃತಿಕಾರನಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಅವರ ಪ್ರಯತ್ನ ಶ್ಲಾಘನೀಯ.

ಅಂದ ಹಾಗೆ, ಈ ಕೃತಿಯ ಮುಖಪುಟ ಅತ್ಯಾಕರ್ಷಕವೂ ಮತ್ತು ಅಷ್ಟೇ ಅರ್ಥಪೂರ್ಣವೂ ಆಗಿದೆ. ಚಿತ್ರದಲ್ಲಿ ತೆರೆದಿಟ್ಟ ಪುಸ್ತಕದ ಮುಂದೆ ಬೆಕ್ಕು ಹೊಂಚುಹಾಕಿ ಕುಂತಂತಿದೆ! ಅದು ಹೊಂಚುಹಾಕಿರುವುದು ಬೇರೆ ಯಾವುದಕ್ಕೂ ಆಗಿರದೇ ನಿದನಿಧಾನವಾಗಿ ಮನೆಯ ಒಳಹೊಕ್ಕು ತಿಂಡಿಯನ್ನು ಹುಡುಕಿ ತಿನ್ನುವಂತೆ ಓದುಗನೂ ಸಹ ನಿದನಿಧಾನವಾಗಿ ಕೃತಿಯನ್ನು ಓದುತ್ತ ಓದುತ್ತ, ಅದರ ಒಳಹೊಕ್ಕು ಹಲವಾರು ಸಾಧ್ಯತೆಗಳನ್ನು ಗುರುತಿಸುವುದು ಎಂಬರ್ಥವನ್ನು ಧ್ವನಿಸುವಂತಿದೆ! ಈ ಚಿತ್ರ ಕೃತಿಗೆ ಮೆರುಗು ತಂದಿದೆ. ಈ ನಿಟ್ಟಿನಲ್ಲಿ ಕಲಾವಿದರಿಗೆ ಅಭಿನಂದನೆಗಳು. ಇನ್ನು, ಈ ಕೃತಿಯಲ್ಲಿ ಸುಭಾಷ್ ರಾಜಮಾನೆ ಅವರು ದಾಖಲಿಸಿರುವ ಅಲ್ಲಮನ ವಚನ ಅವರ ಓದಿನ ಹಸಿವಿನ ಕುರಿತಾಗಿಯೇ ಹೇಳಿದಂತಿದೆ.‌ ‘ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ ಕಾಣದದು ಕಾಣಬಹುದು ಗುಹೇಶ್ವರ…’ ಎಂಬ ಸಾಲುಗಳು ಈ ಬರಹಗಳನ್ನು ಓದಿದ ನಂತರವೂ ಓದುಗನ ಎದೆಯಲ್ಲಿ ಅನುರಣಿಸುತ್ತಿವೆ. ಕನ್ನಡ ವಿಮರ್ಶಾ ಲೋಕಕ್ಕೆ ಈ ಕೃತಿಯು ವಿಶಿಷ್ಟವಾದ ಕೊಡುಗೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

(ಕೃತಿ: ಕಂಡದ್ದು ಕಾಣದ್ದು (ಕೃತಿ ಜಗತ್ತಿಗೆ ಹೀಗೊಂದು ಪಯಣ), ಲೇಖಕರು : ಸುಭಾಷ್ ರಾಜಮಾನೆ, ಪ್ರಕಾಶನ: ಆಕೃತಿ ಪುಸ್ತಕ, ಬೆಂಗಳೂರು, ಪುಟ: 12 + 138, ಪ್ರಕಟಣೆ: 2025, ಬೆಲೆ: 150/-)

About The Author

ಕಲ್ಲೇಶ್ ಕುಂಬಾರ್

ಕಲ್ಲೇಶ್ ಕುಂಬಾರ್ ಮೂಲತಃ ಬೆಳಗಾವಿ ಜಿಲ್ಲೆಯ ಹಾರೂಗೇರಿಯವರು. ಸಧ್ಯ, ಬಾಗಲಕೋಟ ಜಿಲ್ಲೆಯ ತೇರದಾಳದ ಶಾಖಾ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 'ಉರಿಯ ನಾಲಗೆಯ ಮೇಲೆ', 'ಉಸುರಿನ ಪರಿಮಳವಿರಲು', 'ನಿಂದ ನಿಲುವಿನ ಘನ' ಇವರ ಪ್ರಕಟಿತ ಕಥಾಸಂಕಲನಗಳು. 'ಪುರುಷ ದಾರಿಯ ಮೇಲೆ' ಕವನಸಂಕಲನದ ಪ್ರಕಟಣೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ