“ನೀಲಿ… ಈ ನರಕಸಮ ರೋಗ ಯಾರಿಗಿರುತ್ತೋ ಅವರನ್ನು ಹಚ್ಚಿಕೊಂಡವರಿಗೂ ಒಂದು ಭಯಾನಕ ಅಸ್ವಸ್ಥತೆ ಉಂಟಾಗುತ್ತೆ ಕಣೇ. ಅದೇ ಆಗ್ಲೇ ಹೇಳಿದ್ನಲ್ಲಾ ಯಾತನಾಬಂಧ ಅಂತ, ಅದೇ ಕಣೆ ನಂಗೆ ಆಗಿದ್ದು. ಇದು ಹೇಗೆ ಅಂದ್ರೆ ನಾವು ಮಾಡ್ತಿರೋದು ನಮಗೆ ಅಪಾಯಕರ ಅಂತ ಗೊತ್ತಿದ್ರೂ ಮನಸ್ಸು ಅದನ್ನೇ ಮತ್ತೆ ಮತ್ತೆ ಮಾಡುವಂತೆ ನಮ್ಮನ್ನ ಬಲವಂತಿಸುತ್ತೆ! ಒಂದು ಉದಾಹರಣೆ ಕೊಡ್ಬೇಕು ಅಂದ್ರೆ ಬೆಂಕಿಗೆ ಕೈಯಿಟ್ರೆ ಸುಡುತ್ತೆ ಅಂತ ಗೊತ್ತಿದ್ರೂ ಮತ್ತೆ ಮತ್ತೆ ಕೈಯಿಟ್ಟು ಸುಡಿಸ್ಕೊಳೋ ಹಂಗೆ”.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಎಂಟನೆಯ ಬರಹ

“ಮುಪ್ಪು ಎರಡನೇ ಬಾಲ್ಯ ಆದ್ರೆ ಮಧ್ಯವಯಸ್ಸು ಎರಡನೇ ಹದಿಹರೆಯ ಆಗುತ್ತೇನೇ ನೀಲಿ?” ಮುಖದಲ್ಲಿ ಚಿಂತೆಯ ಗೆರೆಗಳನ್ನು ಹೊತ್ತು ಒಂದೇ ಸಮನೆ ಮಾತಾಡುತ್ತಿದ್ದ ಸರಿತಾ ಕೇಳಿದಾಗ ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ನನ್ನ ಪ್ರತಿಕ್ರಿಯೆಗೆ ಕಾಯದೆ ಅವಳು ಮುಂದುವರಿಸಿದಳು.. “ನನ್ನ ಬುದ್ಧಿಗೆ ಏನಾಗಿತ್ತೋ ಗೊತ್ತಿಲ್ಲ ಕಣೇ. ಬುದ್ಧಿ ಬಂದಾಗಿನಿಂದ `ಹೆಣ್ಮಕ್ಕಳು ಯಾವತ್ತೂ ಮದುವೆಯಾದ ಗಂಡಸರನ್ನು ಹಚ್ಕೋಬಾರದು, ಹಾಗೆ ಹಚ್ಚಿಕೊಂಡ್ರೆ ನಾವು ಮುಳುಗುವುದು ಶತಸಿದ್ಧ. ಮದುವೆಯಾದ ಗಂಡಸರು ಯಾವತ್ತಿದ್ರೂ ತಮ್ಮ ಹೆಂಡತಿ ಬಳಿ ವಾಪಸ್ ಹೋಗೋದೇ ಸೈ. ನಾನಂತೂ ಈ ವಿಷಯದಲ್ಲಿ ಹುಷಾರಾಗಿರ‍್ತೀನಪ್ಪ’ ಅಂದುಕೊಂಡಿದ್ದೆ ಕಣೇ. ಆದ್ರೆ ನೋಡೇ, ನನ್ನ ನಲವತ್ತೆಂಟನೇ ವಯಸ್ಸಿನಲ್ಲಿ ಅಂದ್ರೆ, ನನಗೆ ಮದುವೆಯಾಗಿ ಇಪ್ಪತ್ತೈದು ವರ್ಷ ಆದ್ಮೇಲೆ, ಒಬ್ಬ ಊಸರವಳ್ಳಿಯಂತವನನ್ನ, ಅದೂ ಮದ್ವೆ ಆದವನನ್ನ ಹಚ್ಕೊಂಡ್ನಲ್ಲೇ ನೀಲೀ …. ಅನ್ಯಾಯವಾಗಿ ನನ್ನ ಸಂಸಾರ ಹಾಳು ಮಾಡಿಕೊಂಡ್ನಲ್ಲೇ …. ಮೆಟ್ಟಲ್ಲಿ ಹೊಡ್ಕೋಬೇಕು ಕಣೆ ನನಗೆ ನಾನೇ” … ಮಾತಾಡುತ್ತಾ ಮಾತಾಡುತ್ತಾ ಕಣ್ತುಂಬಿಕೊಂಡ ಸರಿತಾಗೆ ಹೇಗೆ ಸಮಾಧಾನ ಮಾಡುವುದೆಂದೇ ಅರ್ಥ ಆಗಲಿಲ್ಲ ನನಗೆ. ನನ್ನ ಕಾಲೇಜು ದಿನಗಳಲ್ಲಿ ಪರಿಚಿತಳಾಗಿ ಆಪ್ತ ಗೆಳತಿಯಾದವಳು ಈ ಸರಿತ. ನೀಲಿಮ ಎಂಬ ನನ್ನ ಹೆಸರು ಅವಳ ಮಟ್ಟಿಗೆ ನೀಲಿ. ನನಗೆ ಅವಳು ಸರು. ಮೂವತ್ತು ವರ್ಷಗಳ ಸುದೀರ್ಘ ಸ್ನೇಹ ನಮ್ಮದು.

ನಾವು ಈಗ ಕುಳಿತು ಮಾತಾಡುತ್ತಿದ್ದ ಕಾಫಿಡೇಯ ತಂಪು ವಾತಾವರಣ ಸರಿತಾಳ ಉದ್ವೇಗದ ತಾಪದಿಂದಾಗಿ ಬಿಸಿಯಾಗ್ತಾ ಇದೆಯೇನೋ ಅನ್ನಿಸಿತು ನನಗೆ.

“ನನ್ನ ಬುದ್ಧೀಗೆ ಏನು ಮಂಕು ಬಡ್ದಿತ್ತೋ ಗೊತ್ತಿಲ್ಲ ಕಣೇ. ನನ್ನ ಪಾಡಿಗೆ ನಾನು ಗಂಡ, ಎರಡು ಮಕ್ಳು, ಅತ್ತಿಗೆ ನಾದಿನೀರ ಉಪಚಾರ, ಯಾವಾಗ್ಲೋ ಒಮ್ಮೆ ತವರುಮನೆ ಓಡಾಟ, ಹಬ್ಬ, ಮುಂಜಿ, ಮದುವೆ, ಗೃಹಪ್ರವೇಶ, ದೇವಸ್ಥಾನ, ವಯಸ್ಸಾದ ಮಾವನ ದೇಖರೇಖಿ, ಬ್ಯಾಂಕಿನ ಕೆಲಸ ಅಂತ ಇದ್ದೋಳಿಗೆ ಈ ದೀಪಕ್ ಮೇಲೆ ಇಷ್ಟೊಂದು ಗಮನ ಯಾಕೆ ಬಂತು ಅಂತ ಸಾವಿರ ಸಲ ಯೋಚನೆ ಮಾಡಿದೀನಿ ಕಣೇ. ಉತ್ರ ಸಿಕ್ಕಿಲ್ಲ ನಂಗೆ. ಎರಡು ವರ್ಷದ ಹಿಂದೆ ಈ ದೀಪಕ್ ಶ್ರೀವಾಸ್ತವ್ ನಮ್ಮ ಬ್ಯಾಂಕಿಗೆ ಮ್ಯಾನೇಜರ್ ಆಗಿ ಬಂದಾಗ” ………. ಎಲ್ಲೋ ಕಳೆದು ಹೋದವಳಂತೆ ಮಾತು ನಿಲ್ಲಿಸಿದ ಸರಿತೆಯ ಹೆಗಲನ್ನು ಮೃದುವಾಗಿ ಮುಟ್ಟಿ “ಸರೂ…. ಮಾತಾಡೇ… ಯಾಕೆ ಸುಮ್ನಾದೆ?” ಎಂದು ಕೇಳಿದೆ.

ಎದೆಯಲ್ಲಿ ಹುದುಗಿದ್ದ ನೋವೆಲ್ಲ ಒಮ್ಮೆ ಮುಖದ ಮೇಲೆ ಹಾಯ್ದು ಸರಿತೆಯ ಮುಖ ಯಾತನೆಯ ಪಾತ್ರೆಯಾಯಿತು. ಕಣ್ಣು ತುಂಬಿ ಬಂದವು. ಎಲ್ಲಿ ಬಿಕ್ಕಿ ಬಿಕ್ಕಿ ಅತ್ತುಬಿಡುತ್ತಾಳೋ ಎಂದು ನನಗೆ ಚಿಂತೆಯಾಯಿತು. ಅವಳಿಗೆ ನೀರಿನ ಲೋಟ ಕೊಟ್ಟೆ. ಎರಡು ಗುಟುಕು ಕುಡಿದ ಮೇಲೆ ಒಮ್ಮೆ ನಿಟ್ಟುಸಿರು ಬಿಟ್ಟು ಮತ್ತೆ ಮಾತಾಡಲಾರಂಭಿಸಿದಳು. “ನಿಂಗೆ ಗೊತ್ತಲ್ಲ ನೀಲಿ, ನಾನು ಜನರ ಜೊತೆ ತುಂಬ ಬೆರೆಯೋ ಸ್ವಭಾವದವಳಲ್ಲ. ಬ್ಯಾಂಕಲ್ಲಾಗಲೀ, ಹೊರಗಡೆ ಆಗಲೀ ವ್ಯವಹಾರಕ್ಕೆ ಎಷ್ಟು ಬೇಕೋ ಅಷ್ಟೇ ನನ್ನ ಮಾತು. ನಾನಾಯ್ತು, ನನ್ನ ಪಾಡಾಯ್ತು ಅಂತ ಇದ್ದೋಳು. ಆದ್ರೆ ಮಾಡೋ ಕೆಲಸಾನ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗ್ತಿದ್ದೆ. ಒಂದು ರೂಪಾಯಿ ಆಚೀಚೆ ಆಗಕ್ಕೆ ಬಿಟ್ಟವಳಲ್ಲ. ಬ್ಯಾಂಕ್‌ಗೆ ಬರೋ ಯಾವ ಕಸ್ಟಮರ್‌ನೂ ಒಂದು ಕ್ಷಣ ಕೂಡ ಅನಗತ್ಯವಾಗಿ ಕಾಯಿಸಿದವಳಲ್ಲ. ಕ್ಯಾಶ್‌ನಲ್ಲಿದ್ದಾಗ ಒಂದು ಪೈಸೆ ಕೂಡ ಎಂದೂ ನಾನು ವಾಪಸ್ ಕಟ್ಟಿದವಳಲ್ಲ ಕಣೇ. ಪ್ರತಿಯೊಂದು ಕೆಲಸವನ್ನೂ ಇನ್ನೂ ಹೇಗೆ ಚೆನ್ನಾಗಿ ಮಾಡಬಹುದು ಅಂತ ಸದಾ ಯೋಚಿಸ್ತಾ ಹೊಸ ಹೊಸ ರೀತಿಗಳನ್ನ ಹುಡುಕ್ತಾ ಇರ್ತಿದ್ದೆ. ಆ ಬಗ್ಗೆ ಪುಸ್ತಕಗಳನ್ನ ಕೂಡ ಓದ್ತಿದ್ದೆ. ನಿಂಗೆ ಗೊತ್ತಲ್ಲ ನೀಲಿ?” ಅಂದಳು.

“ಹೌದು ಸರೂ, ಗೊತ್ತು. ಜೊತೆಗೆ ಬ್ಯಾಂಕಲ್ಲಿ ಯಾರೂ ಈ ಬಗ್ಗೆ ನಿಂಗೆ ಸ್ಪಂದಿಸ್ತಿರ್ಲಿಲ್ಲ, `ಅಯ್ಯೋ ಕೊಟ್ಟ ಕೆಲಸಾನ ಹೇಗೋ ಒಂದು ಮಾಡಿ ಮನೆಗ್ಹೋದ್ರೆ ಸಾಕಪ್ಪಾ, ನಿನ್ನ ಇನ್ನೋವೇಷನ್ಸ್ ಕಟ್ಟಿಕೊಂಡು ಯಾರಿಗೇನಾಗ್ಬೇಕಿದೆ!’ ಅನ್ನೋರೇ ಜಾಸ್ತಿ ಇದ್ರು ಅನ್ನೋದು ಕೂಡ ಗೊತ್ತು ಕಣೇ. ಬ್ಯಾಂಕಿಗೆ ಸೇರ್ದಾಗಿನಿಂದಲೂ ನಾ ನಿನ್ನ ನೋಡಿದೀನಲ್ಲ” ಅಂದೆ ನಾನು.

“ಹೌದು, ಇಪ್ಪತ್ತು ವರ್ಷ ಬ್ಯಾಂಕ್ ಸರ್ವಿಸ್‌ನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಡಲು ಸಾಧ್ಯ ಆಗದಂತೆ ಕೆಲ್ಸ ಮಾಡ್ದೋಳು ನಾನು. ಯಾವಾಗ್ಲೂ ಹೊಸ ವಿಧಾನಗಳ ಬಗ್ಗೆ ಯೋಚಿಸ್ತಾನೇ ಇರ್ತಿದ್ದೆ. ಆದ್ರೆ ನೀ ಹೇಳಿದ ಹಾಗೆ ಆ ಒಂದು ಕೊರಗು ಯಾವಾಗಲೂ ಬಾಧಿಸ್ತಾ ಇತ್ತು ಕಣೇ. ಬ್ಯಾಂಕಲ್ಲಿ ಯಾರಾದರೂ ಒಬ್ಬರು ನನ್ನ ಜೊತೆ ವೃತ್ತಿಗೆ ಸಂಬಂಧಿಸಿದ ಕಷ್ಟ ಸುಖ ಹಂಚಿಕೊಳ್ಳೋರು, ಹೊಸದರ ಬಗ್ಗೆ ನಂಜೊತೆ ಮಾತಾಡೋರು ಬೇಕು ಅಂತ ಅನ್ನಿಸ್ತಿತ್ತು, ಆದ್ರೆ ನನ್ನ ವೇವ್‌ಲೆಂತ್‌ಗೆ ಮ್ಯಾಚ್ ಆಗೋರು ಅಲ್ಲಿ ಸಿಗ್ತಾನೇ ಇರ್ಲಿಲ್ಲ ಕಣೇ. ಮನೆಯಲ್ಲಿ ಗಂಡ ಮಕ್ಕಳ ಹತ್ರ ಈ ಬಗ್ಗೆ ಮಾತಾಡಕ್ಕೆ ಆಗ್ತಾ ಇರಲಿಲ್ಲ. ಯಾಕಂದ್ರೆ ನನ್ನ ಗಂಡ ಸದಾ ಕಾಲ ಸಾಹಿತ್ಯ, ಸಂಗೀತ ಅಂತ ಕಲ್ಪನಾ ಲೋಕದಲ್ಲಿ ವಿಹರಿಸ್ತಾ ಇರೋ ಆಕಾಶಜೀವಿ, ಇನ್ನು ಮಕ್ಕಳೋ….. ಅವರದ್ದೇ ಬೇರೆ ಲೋಕ ಕಣೆ”…. ಒಂದು ಕ್ಷಣ ಸುಮ್ಮನಾದಳು ಸರಿತೆ. ಸದಾ ಪುಸ್ತಕಗಳಲ್ಲಿ ಮುಳುಗಿರುತ್ತಿದ್ದ ಕಾಲೇಜೊಂದರಲ್ಲಿ ಇಂಗ್ಲಿಷ್ ಅಧ್ಯಾಪಕನಾದ ಅವಳ ಗಂಡ ವಿನೀತ್ ನನ್ನ ಕಣ್ಣ ಮುಂದೆ ಬಂದ. ಪದವಿ ಓದುತ್ತಿದ್ದ ಒಬ್ಬ ಮಗಳು ಮತ್ತು ಪ್ರೌಢಶಾಲೆಯಲ್ಲಿದ್ದ ಒಬ್ಬ ಮಗಳು ಇದ್ದರು ಸರುಗೆ.

ಮ್… ತಲೆದೂಗಿದೆ ನಾನು. “ಹೇಳು ಸರೂ, ಆಮೇಲೆ ಏನಾಯ್ತು?”

ಮುಂದುವರಿಸಿದಳು ಅವಳು. “ಆಮೇಲೆ… ಇದ್ದಕ್ಕಿದ್ದ ಹಾಗೆ ಒಂದು ದಿನ ಈ ದೀಪಕ್ ಶ್ರೀವಾಸ್ತವ್ ದೆಹಲಿಯಿಂದ ವರ್ಗ ಆಗಿ ನಮ್ಮ ಬ್ಯ್ರಾಂಚಿಗೆ ಬಂದ, ಮ್ಯಾನೇಜರಾಗಿ. ನೋಡಕ್ಕೆ ಲಕ್ಷಣವಾಗಿದ್ದ, ಮಾತ್ರವಲ್ಲ ತುಂಬ ಚುರುಕಾಗಿದ್ದ ಕೆಲಸದಲ್ಲಿ. ಅವನ ಚಾಕಚಕ್ಯತೆ, ಜಾಣತನ, ಬ್ಯಾಂಕಿನ ಕೆಲಸಗಳ ಕುರಿತ ಜ್ಞಾನ ಅಗಾಧ ಅನ್ನಿಸುವಷ್ಟರ ಮಟ್ಟಿಗೆ ಇದ್ವು ಕಣೇ. ಒಂದು ಕಷ್ಟಕರವಾದ ಸಾಲದ ಅರ್ಜಿಯ ಜೊತೆ ಕೆಲಸ ಮಾಡ್ಬೇಕಾದ್ರೆ ನಾನು ಅವನ ಜೊತೆ ಒಡನಾಡಬೇಕಾಗಿ ಬಂತು. ಅವನ ಜೊತೆ ಮಾತಾಡ್ತಾ, ಕೆಲಸ ಮಾಡ್ತಾ ಮಾಡ್ತಾ ನನಗೆ ಮೊಟ್ಟ ಮೊದಲ ಬಾರಿಗೆ ವೃತ್ತಿ ಜೀವನದಲ್ಲಿ ತುಂಬ ಖುಷಿಯಾಗಿಬಿಡ್ತು ಕಣೇಮ್ಮ. ನನ್ನ ಭಾಷೆ ಅರ್ಥ ಆಗೋರು ಸಿಕ್ಕಿಬಿಟ್ರು ಅಂತ ತುಂಬ ತುಂಬ ಆನಂದ ಆಗಿಬಿಡ್ತು. ಅವನ ಪರಿಚಯ ಆದ ಮೇಲೆ ಬ್ಯಾಂಕಿಗೆ ಹೋಗೋದೇ ಒಂದು ಸಂಭ್ರಮ ಅನ್ನಿಸೋಕೆ ಶುರುವಾಯ್ತು ನೀಲಿ. ನನ್ನ ಆತ್ಮವನ್ನು ಬಹುಕಾಲದಿಂದ ಕಾಡ್ತಿದ್ದ ಒಂಟಿತನ ಹೊರಟುಹೋದ ಭಾವನೆ ಬಂತು. ಕೆಲವು ತಿಂಗಳುಗಳ ಮಟ್ಟಿಗೆ ನಾನು ಬಹಳ ಬಹಳ ಖುಷಿಯಾಗಿದ್ದೆ.

“ಕೆಲವು ತಿಂಗಳು?” ಕೇಳಿದೆ ನಾನು. “ಆಮೇಲೇನಾಯ್ತು?”

“ಆಮೇಲೆ ತುಂಬ ಭಯಂಕರವಾದ ಒಂದು ಅನುಭವ ಆಯ್ತು ನೀಲಿ… ಕನಸು ಮನಸಿನಲ್ಲೂ ನಾನು ನಿರೀಕ್ಷಿಸದ ಒಂದು ಅನುಭವ ಅದು. ದೀಪಕ್‌ನಲ್ಲಿ ಒಂದು ವಿಚಿತ್ರ ವರ್ತನೆ ಆರಂಭ ಆಗಿ ಅದು ನನ್ನ ಮನಃಶ್ಯಾಂತಿ, ನೆಮ್ಮದಿಯನ್ನ ಪೂರ್ತಿ ಹಾಳು ಮಾಡ್ತು. ಬದುಕೇ ನರಕ ಆಗ್ಹೋಯ್ತು ಕಣೆ”.

“ಅಂಥದ್ದೇನಾಯ್ತು ಸರು?”

“ದೀಪಕ್‌ನಲ್ಲಿ ನನಗೆ ತುಂಬ ಹೊಂದಿಕೆಯಾಗೋ ಗುಣಗಳನ್ನ ನೋಡ್ದೆ ಅಂದ್ನಲ್ಲಾ, ನಾನವನನ್ನ ತುಂಬ ಹಚ್ಕೊಂಬಿಟ್ಟೆ ನೀಲಿ. ಆದ್ರೆ ಅವನಲ್ಲಿ ನಾನು ಕಂಡ ಒಂದು ವಿಲಕ್ಷಣ ವರ್ತನೆ ನಂಗೆ ಆಘಾತ ಮಾಡ್ತು. ಅದೇನು ಅಂದ್ರೆ ಇದ್ದಕ್ಕಿದ್ದ ಹಾಗೆ ಮಾತು ನಿಲ್ಲಿಸಿಬಿಡೋದು, ಕೋಪ ಮಾಡ್ಕೊಳೋದು, ನಾನ್ಯಾರು ಅಂತ ಗೊತ್ತೇ ಇಲ್ವೇನೋ ಅಂತ ನಡ್ಕೊಳೋದು, ನಾನು ಮಾತಾಡಿಸಕ್ಕೆ ಹೋದರೆ ತುಂಬ ಹಿಂಸೆಯಾದ ಹಾಗೆ ಆಡೋದು … ಹೀಗೆ! ಅವನು ಅಕಾರಣವಾಗಿ, ಅನಿರೀಕ್ಷಿತವಾಗಿ ಹೀಗೆ ಮಾಡಿದಾಗ ನಂಗೆ ತುಂಬ ಗಾಬರಿಯಾಗ್ತಾ ಇತ್ತು, ದಿಕ್ಕೇ ತೋಚ್ತಿರಲಿಲ್ಲ. ಅವನನ್ನ `ಯಾಕೆ ಹೀಗೆ ಮಾಡ್ತೀಯ ದೀಪಕ್, ಹೇಳು.. ಹೇಳು’ ಅಂತ ಕೇಳೋದು, `ಮಾತಾಡ್ಸು ನನ್ನ… ಮಾತಾಡ್ಸು ..’ ಅಂತ ಗೋಗರಿಯೋದು, ಒದ್ದಾಡೋದು, ಅಳೋದು, ಮನಸಲ್ಲಿ ತುಂಬ ಗೋಳಾಡ್ತಾ ಇದ್ರೂ ಏನೂ ಆಗಿಲ್ಲ ಅನ್ನೋ ಹಾಗೆ ಮುಖವಾಡ ಹಾಕ್ಕೊಂಡು ಒದ್ದಾಡೋದು.. ಹೀಗೆ ಮಾಡ್ತಿದ್ದೆ ಕಣೆ ನಾನು. ಆಮೇಲೆ ಮೂರು ನಾಲ್ಕು ದಿನ ಅಥವಾ ಒಂದು ವಾರ ಆದ ಮೇಲೆ ಅವನು ಸರಿ ಹೋಗ್ತಿದ್ದ! ತಾನು ಬದಲಾಗ್ಲೇ ಇಲ್ವೇನೋ ಅನ್ನೋ ಹಾಗೆ ನನ್ನ ಹತ್ರ ನಗ್ತಾ ನಗ್ತಾ ಮಾತಾಡ್ತಿದ್ದ. `ಅಬ್ಬ, ಸರಿ ಹೋದ್ನಪ್ಪ’ ಅಂತ ನಾನು ನಿಟ್ಟುಸಿರು ಬಿಡೋವಷ್ಟರಲ್ಲಿ ಮತ್ತೆ ತನ್ನ ವಿಚಿತ್ರ ಕೋಪದ ವರ್ತನೆ ಶುರು ಮಾಡ್ತಿದ್ದ! ಇದ್ರಿಂದ ನಾನು ತೀರಾ ಕಷ್ಟ ಅನುಭವಿಸಿದೆ ನೀಲಿ. ರೋಲರ್ ಕೋಸ್ಟರ್ ರೈಡ್ ಥರ ಇರ್ತಿತ್ತು ಕಣೆ, ನನ್ನ ಪರಿಸ್ಥಿತಿ”.

“ಛೆ, ಇಂತಹವನನ್ನ ಯಾಕೆ ಹಚ್ಕೊಂಡೆ ಸರಿತಾ? ಹೋಗ್ಲಿ, ಈ ತರಹ ಅಂತ ಗೊತ್ತಾದ ಮೇಲೆ ಅವನ ಸಹವಾಸ ಬೇಡ ಅಂತ ದೂರ ಇದ್ಬಿಡೋದಲ್ವಾ. ಈಗಿನ್ ಕಾಲದೋರು ಒಂದು ಪದ ಬಳಸ್ತಾರೆ ನೋಡು `ಬಿಟ್ಹಾಕೋದು’ ಅಂತ. ಹಾಗೆ ಮಾಡದೆ ನೀನು ನಿನ್ನ ನೆಮ್ಮದಿ ಯಾಕೆ ಕೆಡಿಸ್ಕೊಂಡೆ? ಅರ್ಥ ಆಗ್ಲಿಲ್ಲ ನಂಗೆ” ಎಂದೆ ನಾನು. ನನ್ನ ಜೀವದ ಗೆಳತಿಗೆ ಇಂತಹ ಮಾನಸಿಕ ತಳಮಳ ಉಂಟು ಮಾಡಿದವನ ಬಗ್ಗೆ ನನಗೆ ನಿಜಕ್ಕೂ ತುಂಬ ಸಿಟ್ಟು ಬಂದಿತ್ತು.

“ಅಲ್ಲೇ ಕಣೆ ಸಮಸ್ಯೆಯ ಮೂಲ ಇರೋದು. ನಂಗೆ ಅವನ ಜೊತೆ ಯಾತನಾಬಂಧ ಉಂಟಾಗಿಬಿಡ್ತು ನೀಲಿ. ಅಂದ್ರೆ ಮನಃಶಾಸ್ತ್ರಜ್ಞರು ಇದನ್ನ ಅವರ ಪರಿಭಾಷೇಲಿ ಟ್ರೋಮಾ ಬಾಂಡ್ ಅಂತಾರೆ”.

“ಆಂ!!” ನಾನೆಂದೂ ಈ ಪದ ಕೇಳಿರಲಿಲ್ಲ. “ಹಾಗಂದ್ರೆ ಏನೇ?”

“ನೀಲಿ, ಇದನ್ನ ಅರ್ಥ ಮಾಡ್ಕೋಬೇಕಂದ್ರೆ ನಾವು ಮೊದಲು ದೀಪಕ್‌ನಿಂದ ಪ್ರಾರಂಭಿಸಬೇಕು. ದೀಪಕ್ ಶ್ರೀವಾಸ್ತವ್ ಒಂದು ಗಂಭೀರ ವ್ಯಕ್ತಿತ್ವ ಅಸ್ವಸ್ಥತೆಯಿಂದ ನರಳ್ತಾ ಇರೋ ವ್ಯಕ್ತಿ. ಆ ಸ್ಥಿತಿಗೆ `ಬಾರ್ಡರ್‌ಲೈನ್ ಪರ್ಸನಾಲಿಟಿ ಡಿಸ್‌ಆರ್ಡರ್’ ಅಂತಾರೆ, `ಬಿಪಿಡಿ’ ಅನ್ನೋದು ಅದರ ಸಂಕ್ಷಿಪ್ತ ರೂಪ. ಈ ತರಹ ಅತಿಕೋಪ, ಅಕಾರಣ ರೇಗಾಟ, ತಾನು ಯಾರನ್ನ ಮನಸ್ಸಿಗೆ ಹಚ್ಚಿಕೊಂಡಿದೀನೋ ಅವರನ್ನ ಕೆಲವು ದಿನ ಆಕಾಶಕ್ಕೇರಿಸೋದು, ಅಂದರೆ ಅವರ ಮೇಲೆ ಪ್ರೀತಿ, ಕಾಳಜಿಗಳ ಮಳೆ ಸುರಿಯೋದು, ಇನ್ನು ಕೆಲವು ದಿನ ಅವರನ್ನ ದ್ವೇಷಿಸಿ ದೂರ ಮಾಡೋದು, ಅವರು ಗೋಳಾಡ್ತಾ ಬೇಡಿಕೊಳ್ತಾ ಇದ್ರೂ ಕಲ್ಲಿನ ಹಾಗೆ ಸುಮ್ಮನಿರೋದು, ಮತ್ತೆ ತನ್ನ ಮನಃಸ್ಥಿತಿ ಬದಲಾದಾಗ ಕ್ಷಮೆ ಕೇಳೋದು, ರಮಿಸೋದು, `ಅಬ್ಬ ಸದ್ಯ’ ಅಂತ ಅವರು ಉಸಿರು ಬಿಡುವಷ್ಟರಲ್ಲಿ ಮತ್ತೆ ತನ್ನ ದೂರ ಮಾಡುವ ವರ್ತನೆಗೆ ವಾಪಸ್ ಹೋಗೋದು… ಅಯ್ಯೋ ನೀಲಿ, ಅದೊಂದು ನರಕ ಕಣೆ. ಭೀತಿ ಹುಟ್ಟಿಸೋ ಕರಾಳಚಕ್ರ. ಯಾರಿಗೂ ಕಾಣದ ಮಾನಸಿಕ ಪಾತಾಳ”.

“ಆಯ್ತು, ಅವನಿಗೇನೋ ಆ ಗಂಭೀರ ಮಾನಸಿಕ ಸಮಸ್ಯೆ ಇತ್ತು ಸರು, ಅದು ಗೊತ್ತಾದ ಮೇಲೂ ನೀನ್ಯಾಕೆ ಅವನನ್ನ ದೂರ ಮಾಡದೆ, ಅವನ ಜೊತೆ ಸಂಪರ್ಕದಲ್ಲಿದ್ದೆ? ಮನೆಯಲ್ಲಿ ಬೇರೆ ತೊಂದರೆ ಮಾಡ್ಕೊಂಡೆ ಅಂದ್ಯಲ್ಲ. ಅದಕ್ಕೂ ಕಾರಣ ಇದೇನಾ?” ಆತಂಕದಿಂದ ಕೇಳಿದೆ ನಾನು.

“ನೀಲಿ… ಈ ನರಕಸಮ ರೋಗ ಯಾರಿಗಿರುತ್ತೋ ಅವರನ್ನು ಹಚ್ಚಿಕೊಂಡವರಿಗೂ ಒಂದು ಭಯಾನಕ ಅಸ್ವಸ್ಥತೆ ಉಂಟಾಗುತ್ತೆ ಕಣೇ. ಅದೇ ಆಗ್ಲೇ ಹೇಳಿದ್ನಲ್ಲಾ ಯಾತನಾಬಂಧ ಅಂತ, ಅದೇ ಕಣೆ ನಂಗೆ ಆಗಿದ್ದು. ಇದು ಹೇಗೆ ಅಂದ್ರೆ ನಾವು ಮಾಡ್ತಿರೋದು ನಮಗೆ ಅಪಾಯಕರ ಅಂತ ಗೊತ್ತಿದ್ರೂ ಮನಸ್ಸು ಅದನ್ನೇ ಮತ್ತೆ ಮತ್ತೆ ಮಾಡುವಂತೆ ನಮ್ಮನ್ನ ಬಲವಂತಿಸುತ್ತೆ! ಒಂದು ಉದಾಹರಣೆ ಕೊಡ್ಬೇಕು ಅಂದ್ರೆ ಬೆಂಕಿಗೆ ಕೈಯಿಟ್ರೆ ಸುಡುತ್ತೆ ಅಂತ ಗೊತ್ತಿದ್ರೂ ಮತ್ತೆ ಮತ್ತೆ ಕೈಯಿಟ್ಟು ಸುಡಿಸ್ಕೊಳೋ ಹಂಗೆ”.

ನನಗೆ ನಿಜಕ್ಕೂ ಆಶ್ಚರ್ಯ ಆಯಿತು. “ಹೌದಾ!! ಮನಸ್ಸು ಯಾಕೆ ಹೀಗೆ ಮಾಡುತ್ತೆ ಸರು?”

“ಯಾಕಂದ್ರೆ ಬಿಪಿಡಿ ಮನುಷ್ಯನಿಂದ ಮೊದಲು ಸಿಕ್ಕಿದ್ದ ಪ್ರೀತಿ, ಕಾಳಜಿ, ಗಮನಗಳು ಮತ್ತೆ ಸಿಗಬಹುದು ಅನ್ನೋ ಆಸೆಯಿಂದ ಕಣೇ. ಆ ಅಸ್ಥಿರ, ಅಸ್ವಸ್ಥ ಮನಸ್ಸಿನಿಂದ ಸಿಗುವ ಪ್ರೀತಿ ನಿಜವಾದದ್ದು ಅಲ್ಲ ಅಂತ ಗೊತ್ತಿದ್ರೂ ನಮ್ಮ ಮನಸ್ಸು ಅವನನ್ನೇ ಮತ್ತೆ ಮತ್ತೆ ಪ್ರೀತಿಗಾಗಿ ಬೇಡುವಂತೆ ಬಲವಂತಿಸುತ್ತೆ. ಒಂದು ಚಟಕ್ಕೆ ಬಿದ್ದ ಹಾಗೆ ಅಂದ್ಕೋ. ಕುಡುಕರು ಕುಡಿಯೋದು ಕೆಟ್ಟದ್ದು ಅಂತ ಗೊತ್ತಿದ್ರೂ ಮತ್ತೆ ಮತ್ತೆ ಕುಡೀತಾರಲ್ಲ ಹಾಗೆ”.

`ಛೆ, ಮನಸ್ಸು ಒಂದು ಹಿಡಿ ಪ್ರೀತಿಗಾಗಿ ಏನೆಲ್ಲ ಮಾಡುತ್ತಲ್ಲ! ತನಗೆ ತಾನೇ ಶತ್ರುವಾಗಿಬಿಡುತ್ತೆ. ಎಂತಹ ದೈನೇಸಿ ಸ್ಥಿತಿಗೆ ಬಂದುಬಿಟ್ಲಲ್ಲ ನನ್ನ ಪ್ರೀತಿಯ ಗೆಳತಿ ಸರಿತಾ’ ಅನ್ನಿಸಿದಾಗ ನನಗೆ ಹೇಳತೀರದ ಸಂಕಟ ಆಯಿತು.

“ನೀಲಿ, ನನ್ನ ಮನಸ್ಸು ಈ ನೋವಿನ ಕೂಪದಲ್ಲಿ ಬಿದ್ದು ಪರಿಪರಿಯ ಬೇನೆ ಅನುಭವಿಸ್ತಿದ್ದಾಗ ಬರಗಾಲದಲ್ಲಿ ಅಧಿಕ ಮಾಸ ಅಂತ ವಿನೀತ್ ಕಣ್ಣಿಗೆ ದೀಪಕ್ ಕಳಿಸಿದ್ದ ಆಪ್ತ ಸಂದೇಶಗಳು ಕಾಣಿಸಿಬಿಟ್ವು ಕಣೇ. ಯಾವುದೋ ಒಟಿಪಿ ಬಂತು ಅಂತ ಅವರು ನನ್ನ ಮೊಬೈಲ್ ತಗೊಂಡಾಗ `ಐ ಮಿಸ್ ಯು ವೆರಿ ಮಚ್, ಐ ವಿಶ್ ಯೂ ವರ್ ಮೈ ಲೈಫ್ ಪಾರ್ಟ್ನರ್, ಐ ವಾಂಟ್ ಟು ಮ್ಯಾರಿ ಯು’ ಅಂತೆಲ್ಲ ಭಾವುಕ ಬಡಬಡಿಕೆಯ ಸಂದೇಶ ಕಳಿಸ್ತಿದ್ನಲ್ಲ ದೀಪಕ್ ಅದನ್ನ ನೋಡಿಬಿಟ್ರು ಕಣೆ. ಅವರ ಮನಸ್ಸಿಗೆ ತೀರಾ ಅಂದರೆ ತೀರಾ ನೋವಾಗಿ ಅವರು ನನ್ನ ಹತ್ರ ಮಾತೇ ಬಿಟ್ಬಿಟ್ಟಿದ್ದಾರೆ. ನಾನೇನಾದ್ರೂ ಒಂದೇ ಒಂದು ಮಾತಾಡಕ್ಕೆ ಹೋದ್ರೆ `ನಿಂಗೆ ಅಫೀಶಿಯಲ್ ಡೈವೋರ್ಸ್ ಕೊಡ್ತೀನಿ’ ಅಂತಾರೆ ಕಣೇ. ನನಗೆ ದಿಕ್ಕೇ ತೋಚ್ತಿಲ್ಲ”.

`ದೇವರೇ…’ ಮಂಜುಗಡ್ಡೆಯಲ್ಲಿ ನನ್ನನ್ನು ನಿಲ್ಲಿಸಿದಂತೆ ಮರಗಟ್ಟಿದೆ ನಾನು. ಏನಿದು ಈ ಆಧುನಿಕ ಗ್ಯಾಡ್ಜೆಟ್ ಬದುಕಿನ ಮಹಾಯಾತನೆ!! ಬದುಕನ್ನು ದೂರದಿಂದಲೇ ಚುಚ್ಚಿ ನಿಜವಾಗಿಯೂ ರಕ್ತ ಬರಿಸುವ ಈ ತಂತ್ರಜ್ಞಾನದ ಅದೃಶ್ಯ ಮುಳ್ಳನ್ನ ತೆಗೆಯೋದು ಹೇಗೆ?

****

“ಮುಳ್ಳನ್ನ ಮುಳ್ಳಿಂದಲೇ ತೆಗೀಬೇಕಮ್ಮ. ಕಾಣದ ಮುಳ್ಳನ್ನ ಕಾಣದ ಮುಳ್ಳಿಂದಲೇ ತೆಗೀಬೇಕು”, ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಟೆಕ್ಕಿ ಆಗಿ ಕೆಲಸ ಮಾಡ್ತಿದ್ದ ನನ್ನ ಮಗ ಅನೀಶ್ ಹೇಳಿದ. ಕಳೆದ ಎರಡು ಮೂರು ದಿನಗಳಿಂದ ನಾನು ಚಿಂತಾಗ್ರಸ್ತಳಾಗಿದ್ದನ್ನು ನೋಡಿದ್ದ ಅವನು. `ಏನು’ ಅಂತ ಕಾರಣ ಕೇಳಿ ಸರಿತಾ ವಿಷಯ ತಿಳಿದುಕೊಂಡಿದ್ದ. ಅವನ ನೆಚ್ಚಿನ `ಸರಿತಾ ಆಂಟಿ’ಗೆ ಹೀಗಾಗಿದ್ದು ನೋಡಿ ಅವನಿಗೂ ಬೇಸರವಾಗಿತ್ತು.

“ಹಾಗಂದ್ರೆ … ? ಈಗೇನು ಮಾಡಬೇಕು ಅನಿ?” ಅಂದೆ ನಾನು. ಅವನು ಹೇಳಿದ್ದನ್ನು ಗಮನವಿಟ್ಟು ಕೇಳಿಸಿಕೊಂಡೆ, ಏಕೆಂದರೆ ಸರಿತಾಳಿಗೆ ಇದನ್ನು ನಾ ಹೇಳಬೇಕಿತ್ತಲ್ಲ. ಅವಳ ವೈವಾಹಿಕ ಜೀವನ ಉಳಿಯುವ ಅಥವಾ ಅಳಿಯುವ ಗುರುತರ ಪ್ರಶ್ನೆಯಾಗಿತ್ತು ಅದು.

****

ಅನೀಶ ಕೊಟ್ಟ ಸಲಹೆಯನ್ನು ಪಾಲಿಸಿ ಬ್ಯಾಂಕ್‌ನಲ್ಲಿ ದೀಪಕ್ ಶ್ರೀವಾಸ್ತವ್ ಕುಳಿತುಕೊಳ್ಳುವ ಕೋಣೆಯಲ್ಲಿ ಧ್ವನಿಗ್ರಹಣೆಯ ಸಾಮರ್ಥ್ಯ ಇರುವ ಛಾರ್ಜರ್ ರೀತಿಯ ಪತ್ತೇದಾರಿ ಕ್ಯಾಮೆರಾವನ್ನು ಸರಿತಾ ಅಳವಡಿಸಿದಳು. ಇಪ್ಪತ್ತೊಂದು ದಿನಗಳ ಕಾಲ ಅದರಲ್ಲಿ ದಾಖಲಾದ ಅವನ ವರ್ತನೆಯನ್ನು ಒಂದು ಪೆನ್ ಡ್ರೈವ್‌ನಲ್ಲಿ ಸಂಗ್ರಹಿಸಿ ತನ್ನ ಗಂಡ ಮತ್ತು ಮಕ್ಕಳಿಗೆ ತೋರಿಸಿದಳು. ಅದರಲ್ಲಿ ಅವನ ಮನೋಲಹರಿ ಎರಡು ಮೂರು ದಿನಕ್ಕೊಮ್ಮೆ ಬದಲಾಗುವುದು, ಒಂದು ದಿನ ಅರಗಿಣಿಯಂತೆ ಮಾತಾಡಿದರೆ ಇನ್ನೊಂದು ದಿನ ಹೆಬ್ಬುಲಿಯಂತೆ ಅಬ್ಬರಿಸುವುದು, ಇನ್ನು ಕೆಲವೊಮ್ಮೆ ಮಾತೇ ಬರುವುದಿಲ್ಲವೆಂಬಂತೆ ಮೌನವಾಗಿರುವುದು, ಸರಿತಾಳೊಂದಿಗೆ ಮಾತಾಡುವಾಗ ಅವಾಚ್ಯ ಶಬ್ದಗಳ ಬಳಕೆ ಮಾಡುವುದು, ತಕ್ಷಣ ಬೇರೆಯವರೊಂದಿಗೆ ಏನೂ ಆಗಿಲ್ಲದಂತೆ ಇರುವುದು …… ಇವೆಲ್ಲವೂ ದಾಖಲಾಗಿದ್ದವು. ಜೊತೆಗೆ ಸರಿತಾ ಮತ್ತು ನಾನು ನಗರದ ಅತ್ಯುತ್ತಮ ಮನೋವೈದ್ಯರ ಬಳಿ ಹೋಗಿ ಸರಿತಾಳು ಯಾತನಾಬಂಧಕ್ಕೆ ಸಿಲುಕಿದ್ದರ ಬಗ್ಗೆ ರೋಗಪತ್ತೆ ವಿವರವುಳ್ಳ ಪ್ರಮಾಣಪತ್ರವನ್ನು ತಂದೆವು.

ನಮ್ಮ ಕಡೆಯಿಂದಂತೂ ಗರಿಷ್ಠ ಪ್ರಯತ್ನ ಮಾಡಿದೆವು. ಇದಕ್ಕೆ ವಿನೀತ್‌ನ ಪ್ರತಿಕ್ರಿಯೆ ಹೇಗೆ ಇರುತ್ತೆ ಎಂಬುದೇ ತುಂಬ ಚಿಂತೆ ಹುಟ್ಟಿಸಿದ ವಿಷಯವಾಗಿತ್ತು.

****

ಪೆನ್‌ಡ್ರೈವ್ ದೃಶ್ಯ ಹಾಗೂ ಪ್ರಮಾಣಪತ್ರಗಳನ್ನ ಸರು ವಿನೀತ್‌ಗೆ ತೋರಿಸಿದ್ದು ಒಂದು ಶನಿವಾರ ಸಂಜೆ. ಮಾರನೆಯ ದಿನ ಭಾನುವಾರ ಸರಿತೆಯ ದೂರವಾಣಿ ಕರೆಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ ನಾನು. ವಿನೀತ್ ಏನಂದಿರಬಹುದು? ಸರುವನ್ನು ಕ್ಷಮಿಸಿರಬಹುದಾ ಅವನು?

ಬೆಳಿಗ್ಗೆ ಹತ್ತು ಗಂಟೆಗೆ ಸರುವಿನ ಕರೆ ಬಂತು. “ಬೇಕಿತ್ತಾ ನಿಂಗೆ ಸರಿತಾ ಇದೆಲ್ಲ? ಇರ್ಲಾರ‍್ದೆ ಇರುವೆ ಬಿಟ್ಕೊಂಡ್ಯಲ್ಲ. ಇದೆಲ್ಲ ತರ್ಲೆ-ತಾಪತ್ರಯ ಬಿಟ್ಟು ಬೇರೆ ಬ್ರ್ಯಾಂಚ್‌ಗೆ ವರ್ಗ ಮಾಡಿಸಿಕೋ” ಅಂದನಂತೆ ವಿನೀತ್.

“ಸದ್ಯ, ವಿಚ್ಛೇದನದ ಮಾತನ್ನ ದೂರ ಇಟ್ಟು ವರ್ಗಾವಣೆ ವಿಷಯ ಮಾತಾಡಿದನಲ್ಲ ನೀಲಿ. ಸದ್ಯ ನನ್ನ ಸಂಸಾರ ಉಳೀತು ಕಣೆ” ಎಂದು ಸರಿತಾ ನಿಟ್ಟುಸಿರು ಬಿಟ್ಟಳು.

“ಹೋಗ್ಲಿ ಬಿಡೇ ಸರು. ಬೆಟ್ಟದ ಹಾಗೆ ಬಂದ ಕಷ್ಟ ಹೂವಿನ ಸರ ಎತ್ತಿದ ಹಾಗೆ ಕಳೀತಲ್ಲ” ಅಂದೆ ನಾನು. ನನ್ನ ಮುಖದ ಮೇಲೆ ಬಂದ ಬಿಡುಗಡೆಯ ಭಾವ ನೋಡಿ, ಈ ಘಟನಾವಳಿಯ ಹಿನ್ನೆಲೆ ಗೊತ್ತಿದ್ದ ಅನೀಶ್ ನನಗೆ ಒಂದು ಥಂಪ್ಸಪ್ ಸಂಕೇತ ಕೊಟ್ಟ. ನಾನು ಮುಗುಳ್ನಕ್ಕೆ.