Advertisement
ಕಾರ್ಯಕ್ರಮ ನಮ್ಮದು, ಗೊಂದಲ ದೇವರದು!: ಎಚ್. ಗೋಪಾಲಕೃಷ್ಣ ಸರಣಿ

ಕಾರ್ಯಕ್ರಮ ನಮ್ಮದು, ಗೊಂದಲ ದೇವರದು!: ಎಚ್. ಗೋಪಾಲಕೃಷ್ಣ ಸರಣಿ

ಆಗ ಇನ್ನೂ ವಿಕಿಪೀಡಿಯ, ಗೂಗಲ್ ಮಾವ, ಜೆಮಿನಿ ಅತ್ತೆ, ಚಾಟ್ ಪಟ್ ಅಂಕಲ್ ಮುಂತಾದ AI ಗಳೇ ಆಗಲಿ ಉಳಿದ ಜ್ಞಾನಕೋಶಗಳು ಮೊದಲಾದವು ಹುಟ್ಟಿರಲಿಲ್ಲ. ಎನ್ಸೈಕ್ಲೋಪೀಡಿಯಾ ಆಫ್ ಬ್ರಿಟಾನಿಕಾ ಇತ್ತು, ಆದರೆ ಅದು ನನ್ನಂತಹವರ ಮನೆಯಲ್ಲಿ ಇರಲಿಲ್ಲ. ಅಷ್ಟು ದೊಡ್ಡ ದೊಡ್ಡ ಪುಸ್ತಕ ಇಟ್ಟುಕೊಳ್ಳುವಷ್ಟು ಜಾಗ ನನ್ನಂತಹವರ ಐದೂವರೆ ಚದರದ ಮನೇಲಿ ಇರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅಷ್ಟು ಪುಸ್ತಕ ಕೊಳ್ಳಬೇಕು ಅಂದರೆ ಎರಡು ಮೂರು ವರ್ಷದ ಸಂಬಳ ಅದಕ್ಕೇ ಆಗಿ ಬಿಡೋದು. ಈ ಕಷ್ಟ ಕೊಟ್ಟು ದೈವ ನನ್ನನ್ನು ಅವತ್ತು ಕಾಪಾಡಿತ್ತು.
ಎಚ್.
ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೯ನೇ ಬರಹ ನಿಮ್ಮ ಓದಿಗೆ

ಹೋದ ಕಂತು ಮುಗಿದದ್ದು ಹೀಗೇ ತಾನೇ..

……ಕೊನೆಯಲ್ಲಿ ಮನಸ್ಸಿನಲ್ಲಿ ಒಂದೇ ಮಾತು — “ಕಾರ್ಯಕ್ರಮ ನಮ್ಮದು, ಗೊಂದಲ ದೇವರದು!”
ಕಾರ್ಯಕ್ರಮ ನಾವು ಪ್ಲ್ಯಾನ್ ಮಾಡ್ತೀವಿ… ಆದರೆ ಕ್ಲೈಮ್ಯಾಕ್ಸ್ ಯಾವತ್ತೂ ದೇವರ ಡೈರೆಕ್ಷನ್!”
“ಹಾರ ಯಾರ ಕೊರಳಿಗೆ ಹೋಗಬೇಕು ಅಂತ ಕೊನೆಗೆ ನಿರ್ಧಾರ ಮಾಡುವವರು ಮೇಲಿನವರೇ ಅನಿಸುತ್ತೆ!”
“ನಮ್ಮ ಯೋಜನೆ ಒಂದೇ… ಆಗೋದು ಇನ್ನೊಂದೇ — ಅದೇ ಕಾರ್ಯಕ್ರಮದ ಸೊಗಸು ಸರ!”
“ನನ್ನ ಹೆಸರಿದ್ದಲ್ಲಿ ಸಣ್ಣ ಗಲಿಬಿಲಿ ಫ್ರೀ ಬೋನಸ್ ಅಂತ ಈಗ ನಂಬಿದ್ದೇನೆ!”
“ಆ ದಿನದ ನಂತರ ಒಂದು ಪಾಠ — ಕಾರ್ಯಕ್ರಮಕ್ಕೆ ಸ್ಕ್ರಿಪ್ಟ್ ಇರಬಹುದು, ಕ್ಷಣಗಳಿಗೆ ಇರೋದಿಲ್ಲ!”
ಮಾಲಾರ್ಪಣೆ ನಂತರದ ಗೊಂದಲದ ನನಗೆ ಶೇಪ್ ತೆಗೆದ ಕೆಲವು ನೆನಪುಗಳು ಕೆರೆ ಕಟ್ಟೆ ಒಡೆದ ಹಾಗೆ(ಇದು ಒಡೆದ ನೋ ಅಥವಾ ಹೊಡೆದ ನೋ? ಸದ್ಯಕ್ಕೆ ಒಡೆದ ಇರಲಿ)ಒಡೆದುಕೊಂಡು ಬರುತ್ತಿವೆ. ಅದನ್ನು ಸರಿಯಾಗಿ ಎ ಬೀ ಸೀ ಡೀ ತರಹ ಜೋಡಿಸಿಕೊಂಡು ಹೇಳಬೇಕು ಸರ, ಮೇಡಂಮೋರೇ….

ಮುಂದಕ್ಕೆ…..
ಈಗ ಮುಂದಕ್ಕೆ ಓಡಿಸಿಕೊಂಡು ಹೋಗಲಾ ಅದೂ ಮೂರನೇ “ಆಮೇಲೆ ಹೇಳ್ತೀನಿ…..” ಪ್ರಸಂಗಕ್ಕೆ.

ಈಗ ಒಂದೊಂದಾಗಿ ನಿಮಗೆ ಹೇಳಬೇಕಾದ ಪ್ರಸಂಗಗಳು. ಮೊದಲು ಪುಸ್ತಕ ಲೋಕಾರ್ಪಣೆ ಆದಾಗ ನಡೆದ ಒಂದು ಸಣ್ಣ ಪ್ರಸಂಗ ಹೇಳುವ ಮೊದಲು ಪುಸ್ತಕ ಮಾರಾಟದ ಕೂಪನ್ ಮಾರಿದೆ ಅಂತ ಹೇಳಿದ್ದೆ ತಾನೇ ಅದಕ್ಕೆ ಪ್ರತ್ಯಕ್ಷ ಪರೋಕ್ಷವಾಗಿ ಸಂಬಂಧ ಪಟ್ಟ ಕೆಲವು ಕೆಲವೇನು ಹಲವು ಇರುಸು ಮುರುಸಿನ ಕಥಾನಕಗಳ ನೆನಪು ಇನ್ನೂ ಇದೆ. ಅದರಲ್ಲಿ ಆರಿಸಿದ ಕೆಲವನ್ನು ಮಾತ್ರ ನಿಮ್ಮೆದುರು ಹರವಿ ಬಿಡುತ್ತೇನೆ, ನಿಮ್ಮ ಸಮಯ ಕೂಡ ಇಂಪಾರ್ಟೆಂಟ್ ತಾನೇ ನನ್ನದರ ಹಾಗೆ? ಸಂಪೂರ್ಣ ಪ್ರವರ ನಿಮಗೆ ಹೇಳಬಹುದು. ಆದರೆ ಅದರಲ್ಲಿನ ಪಾತ್ರಧಾರಿಗಳು ಅವರ ಬಾಳಿನ ಸಂಜೆಯಲ್ಲಿ ನೆಮ್ಮದಿಯ ಬದುಕು ಸಾಗಿಸುತ್ತಾ ಸಂತೋಷವಾಗಿದ್ದಾರೆ. ಅವರ ಮನಸಿನಲ್ಲಿ ಹಳೆಯ ನೆನಪು ಕೆದಕಿ ಅವರ ಬಾಳನ್ನು ನರಕ ಮಾಡುವ ಅಮಾನುಷ ಮನುಷ್ಯ ನಾನಾಗಲಾರೆ. ಅದರಿಂದ ಕೆಲವು ಮುಜುಗರದ ಮತ್ತು ಇರಸು ಮುರುಸು ಪ್ರಸಂಗ ಕೈ ಬಿಡುತ್ತೇನೆ.

ಸುಮಾರು ಏಳುನೂರು ಪುಸ್ತಕ ಬಿಡುಗಡೆ ಪೂರ್ವ ಮಾರಾಟ ಆಗಿತ್ತು, ನನ್ನ ಗೆಳೆಯರ ಮೂಲಕ ನಮ್ಮ ಕಾರ್ಖಾನೆಯಲ್ಲಿ ಅಂತ ಹೇಳಿದ್ದೆ ತಾನೇ? ಸುಮಾರು ಹೊಸಬರು ಗುರುತಾಗಿದ್ದರು. ಎದುರು ಕಾಣಿಸಿದರೆ ನಮಸ್ಕಾರ ಎಂದು ಕೈ ಜೋಡಿಸುತ್ತಿದ್ದರು. ಕೆಲವರು (ಗಂಡಸರು)ಹತ್ತಿರ ಬಂದು ಕೈ ಕುಲುಕಿ ಕುಶಲೋಪರಿ ವಿಚಾರಿಸುತ್ತಿದ್ದರು. ಹೆಂಗಸರು ಆಗ ಇನ್ನೂ ಕೈ ಕುಲುಕುವ ಕಲ್ಚರ್‌ಗೆ ಹೊಂದಿಕೊಂಡಿರಲಿಲ್ಲ. ಹೊಂದಿಕೊಂಡಿರಲಿಲ್ಲ ಅಂದರೆ ಅದು ತಪ್ಪು, ಆ ಕಲ್ಚರ್ ಇನ್ನೂ ಬಂದಿರಲಿಲ್ಲ. ಎಲ್ಲರೂ ಮಡಿಯಲ್ಲಿ ಇದ್ದೆವು! ಸುಮಾರು ಒಂಬತ್ತನೇ ದಶಕದ ಕೊನೆಯಲ್ಲಿ ಹೆಂಗಸರು ಗಂಡಸರ ಕೈ ಕುಲುಕಲು ಆರಂಭಿಸಿದರು ಎಂದು ನನ್ನ ಒಂದು ಸಂಶೋಧನೆ ಹೇಳುತ್ತದೆ. ಸಂಶೋಧನೆ ವಿಷಯ ಪಕ್ಕಕ್ಕಿಟ್ಟು ಬಿಡೋಣ ಮತ್ತು ಮೈನ್ ಸ್ಟ್ರೀಮ್‌ಗೆ ಹಾರೋಣ.

ಮಹಿಳಾ ಉದ್ಯೋಗಿಗಳು ನನ್ನನ್ನು ನೋಡಿ ನಾಚಿಕೊಂಡು ಸೆರಗು ಅಡ್ಡ ಹಿಡಿದು ಮುಸಿ ಮುಸಿ ನಗುತ್ತಿದ್ದರು. ನನ್ನ ಕಥಾನಕದಲ್ಲಿನ ಯಾವುದೋ ಕತೆಯ ಪ್ರೇಮ ಪ್ರಸಂಗ ಅಥವಾ ರೋಚಕ ಪ್ರಸಂಗ ಇವರಿಗೆ ಮುಸಿ ಮುಸಿ ನಗು ತರಿಸಿದೆ ಎಂದು ಅರ್ಥ ಮಾಡಿಕೊಳ್ಳುತ್ತಿದ್ದೆ. ಇಂತಹ ಪ್ರಸಂಗಗಳು ನಡೆದಾಗ ನಾನು ಒಂದೆರೆಡು ಅಡಿ ಎತ್ತರ ಆಗಿರುವ ಭಾವ ಮೂಡುತ್ತಿತ್ತು. ನಿಗುರಿ ನಡೆಯುತ್ತಿದ್ದೆ ಎಂದು ಕಾಣುತ್ತದೆ.

ಸ್ವಲ್ಪ ದಿವಸ ಮೋಡದ ಮೇಲೆ ಕೂತಿರುವ ಅಲ್ಲಿಂದ ಭೂ ಮಂಡಲವನ್ನು ಶಾಂತವಾಗಿ ಅವಲೋಕಿಸುತ್ತಿರುವ ದೇವತೆಗಳಂತೆ ಭೂ ಮಾತೆಯನ್ನು ನೋಡುತ್ತಿರುವ  ಖುಷಿಯನ್ನು ಸಂಪೂರ್ಣ ಅನುಭವಿಸುತ್ತಿದ್ದೆ!

ಈ ಖುಷಿಯ ಅನುಭವಕ್ಕೆ ಕರೋಲರಿಗಳು(corollary.. ಅಂದರೆ..ಅಂದರೆ, ಒಂದು ವಿಷಯ ನಿಜವಾದರೆ, ಅದಕ್ಕೆ ಸಂಬಂಧಿಸಿದ ಮತ್ತೊಂದು ವಿಷಯ ತಾನಾಗಿಯೇ ನಿಜವಾಗುತ್ತದೆ ಎನ್ನುವ ಅರ್ಥ ಮೀಮಾಂಸೆ!) ಸಹ ಅನುಭವಕ್ಕೆ ಬಂದವು. ಅದನ್ನು ಕುರಿತು ಕೆಲವು ನೆನಪುಗಳು..

ಒಂದು ಸಲ ನನ್ನ ಸೆಕ್ಷನ್‌ಗೆ ಹುಡುಕಿಕೊಂಡು ಒಬ್ಬರು ಮೇಡಂ ಬಂದರು. ಕಾರ್ಖಾನೆ ಯೂನಿಫಾರ್ಮ್ ಧರಿಸಿದ್ದರು, ಅದರಿಂದ ನಮ್ಮವರು ಅನಿಸಿತ್ತು. ಕಾರ್ಖಾನೆಗಳಲ್ಲಿ ಅದೂ ರಕ್ಷಣಾ ಇಲಾಖೆಯ ಕಾರ್ಖಾನೆಗಳಲ್ಲಿ ಹೊರಗಿನ ಯಾರೂ ಸಹ ಅನುಮತಿ ಇಲ್ಲದೇ ಒಳಗೆ ಬರುವ ಹಾಗಿಲ್ಲ. ಅನುಮತಿ ಸುಲಭವಾಗಿ ಸಿಗುವುದೂ ಇಲ್ಲ. ಇದೇ ಬೇರೆಯ ಕತೆ. ಯಾವಾಗಲಾದರೂ ಈ ಸಂಗತಿಗೆ ಬರುತ್ತೇನೆ, ನಾನು ಮರೆತರೆ ನೀವು ಜ್ಞಾಪಿಸಿ.

“ಗೋಪಾಲಕೃಷ್ಣ……?” ಅಂದರು.

ಮೇಡಂನ  ನೋಡಿದೆ, ಬನ್ನಿ ಕೂತ್ಕೊಳ್ಳಿ ಎಂದೆ. ಎದುರು ಕುರ್ಚಿ ಮೇಲೆ ಕೂತರು.

“ನಾನೇ ಗೋಪಾಲಕೃಷ್ಣ, ಏನು ಮೇಡಂ ಏನಾಗ ಬೇಕಿತ್ತು….?” ಅಂತ ಪ್ರಶ್ನೆ ಎಸೆದೆ. ತಮಿಳು ಮಾತೃಭಾಷೆ ಅವರದ್ದು. ಇದು ಅವರ ಮಾತಿನ ರೀತಿಯಲ್ಲಿ ಗೊತ್ತಾಯಿತು. ಮುಂದಿನ ಸಂಭಾಷಣೆ ಅರೆಬರೆ ಕನ್ನಡ ಇಂಗ್ಲಿಷ್ ತಮಿಳು ಮಿಶ್ರಣದಲ್ಲಿ ಆಗಿದ್ದು. ಸಜ್ಜನ ಓದುಗರಿಗೆ ಸುಲಭವಾಗಿ ಅರ್ಥವಾಗಲಿ ಎನ್ನುವ ಸದುದ್ದೇಶದಿಂದ ಮುಂದಿನ ನಮ್ಮ ಮಾತುಕತೆಯನ್ನು ಸುಲಿದ ಬಾಳೆಹಣ್ಣಿನ ಹಾಗಿರುವ ಕಸ್ತೂರಿ ಕನ್ನಡದಲ್ಲಿ ಹೇಳಿದ್ದೇನೆ.

“ಹೆಹೆ ಏನಿಲ್ಲ ಸರ್. ಒಂದು ಹೆಲ್ಪ್ ಬೇಕಿತ್ತು…” ಅಂದರು.

ದುಡ್ಡು ಕಾಸು ಕೇಳಿದರೆ ಹೇಗಪ್ಪಾ ಕೊಡೋದು, ಗುರುತು ಪರಿಚಯ ಇಲ್ಲ ಬೇರೆ ಅನಿಸಿತು. ಅವರ ಕೊರಳಲ್ಲಿ ಕೈನಲ್ಲಿ ತುಂಬಿ ತುಳುಕುತ್ತಿದ್ದ ಆಭರಣ ನೋಡಿದರೆ ಅವರೇ ನನ್ನ ರೇಟ್ ಎಷ್ಟು ಅಂತ ವಿಚಾರಿಸಿಕೊಂಡು, ಕೊಂಡು ಬ್ಯಾಗ್ ಒಳಗಡೆ ಹಾಕಿಕೊಂಡು ಹೋಗುವ ಹಾಗಿದ್ದರು. ಸೊಂಟದಲ್ಲಿ ಡಾಬು ಒಂದು ಕಾಣಲಿಲ್ಲ. ಮಿಕ್ಕ ಹಾಗೆ ವರಮಹಾಲಕ್ಷ್ಮಿ ಹಾಗೆ ಮೈತುಂಬಾ ಒಡವೆ, ಒಡವೆ ಮತ್ತು ಒಡವೆ!

ಆಗ ಹೆಂಗಸರಿಗೆ ಮೈ ತುಂಬಾ ಚಿನ್ನ ಹೇರಿಕೊಂಡು ಓಡಾಡುವ ಅಭ್ಯಾಸ ಆಳವಾಗಿ ಬೇರೂರಿತ್ತು.

ಅದರಲ್ಲೂ ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರ ಇಡೀ ಸಂಬಳ ಚಿನ್ನದ ಅಂಗಡಿಗೆ ಹೋಗುತ್ತಿತ್ತು. ಇನ್ನೂ ಹೆಂಗಸರ ಸರ ಕದಿಯುವ ಗ್ಯಾಂಗ್ ಹುಟ್ಟಿರಲಿಲ್ಲ ಮತ್ತು ಸಾಕಷ್ಟು ಚಿನ್ನ ಹೇರಿಕೊಂಡು ಉದ್ಯೋಗಕ್ಕೆ ಬರುತ್ತಿದ್ದ ಹೆಣ್ಣು ಮಕ್ಕಳಿಗೆ ಪ್ರತಿ ನಿಮಿಷ ಈ ಹೇರಿಕೆ ಒಂದು ರೀತಿಯಲ್ಲಿ ಅವ್ಯಕ್ತ ಖುಷಿ ನೀಡುವ ಸಂಗತಿಯಾಗಿತ್ತು. ಇವತ್ತು ಯಾರು ಯಾರು ನನ್ನನ್ನು ನನ್ನ ಚಿನ್ನದ ಆಭರಣ ನೋಡಿ ಉರಿದುಕೊಂಡರು ಎಂದು ಹೆಣ್ಣು ಉದ್ಯೋಗಿಗಳು ಸಂಜೆ ಮನೆ ಸೇರಿದ ಮೇಲೆ ಪಟ್ಟಿ ಮಾಡುತ್ತಿದ್ದರಂತೆ……. !

ತಲೆಯಿಂದ ಸಾಲದ ಯೋಚನೆ ಆಚೆ ಓಡಿಸಿ ಅವರ ಮುಂದಿನ ಮಾತಿಗೆ ಕಾದೆ.

ಅವರ ವ್ಯಾನಿಟಿ ಬ್ಯಾಗ್ ತೆರೆದರು. ಅದರಿಂದ ಒಂದು ನೂರು ಪೇಜಿನ ವಿಸ್ಡಮ್ ನೋಟ್ ಪುಸ್ತಕ ತೆರೆದರು. ಅದನ್ನು ನನ್ನ ಮುಂದೆ ಇಟ್ಟರು. ನಂತರ ಹುಡುಕಿ ಯಾವುದೋ ಪುಟ ತೆಗೆದರು. ನಾನು ಕಣ್ಣು ಬಾಯಿ ಬಿಟ್ಟು ಅವರು ಮುಂದೇನು ಮಾಡುತ್ತಾರೆ ಎಂದು ಕಾತರದಿಂದ ಎದುರುನೋಡುತ್ತಿದ್ದೆ..!
ಪುಸ್ತಕ ನನ್ನ ಮುಂದೆ ಹಿಡಿದರು.

“ಸಾರ್. ನನ್ನ ಮಗಳು ಸೆಕೆಂಡ್ ಸ್ಟ್ಯಾಂಡರ್ಡ್‌ನಲ್ಲಿ ಓದುತ್ತಿದ್ದಾಳೆ. ತುಂಬಾ ಇಂಟಲಿಜೆಂಟ್ ಸರ್. ಅವಳಿಗೆ ಹೋಮ್ ವರ್ಕ್ ಅಂತ ಒಂದು ಎಸ್ಸೆ ಬರೆಯಕ್ಕೆ ಹೇಳಿದಾರೆ… ನೋಡಿ ಇದೇ ಸಬ್ಜೆಕ್ಟು….” ಮಗಳ ಶಾಲೆಯ ಹೆಸರು ಹೇಳಿದರು. ಆಗಿನ್ನೂ ಪ್ರೈವೇಟ್ ಶಾಲೆಗಳು ಹುಟ್ಟುತ್ತಿದ್ದ ಸಮಯ.  ಪ್ರೈವೇಟ್ ಶಾಲೆಗಳು ಚೆನ್ನಾಗೆ ಫೀಸು ವಸೂಲಿ ಮಾಡುತ್ತಿದ್ದವು ಮತ್ತು ಅಂತಹ ಶಾಲೆಗೆ ಮಕ್ಕಳನ್ನು ಸೇರಿಸುವುದು ತಳ ಮಧ್ಯಮವರ್ಗದ ಜನರಿಗೆ ಒಂದು ಪ್ರತಿಷ್ಠೆಯ ವಿಷಯ. ಅದರಲ್ಲೂ ಡಬಲ್ ಅರ್ನಿಂಗ್ ಜನರಿಗೆ (ಡಬಲ್ ಅರ್ನಿಂಗ್ ಅಂದರೆ ಗಂಡ ಹೆಂಡತಿ ಇಬ್ಬರೂ ದುಡಿಯುವ ವರ್ಗದವರು!) ಇದು ಪ್ರತಿಷ್ಠೆಯ ಹಾಗೂ ಸ್ಟೇಟಸ್ ವಿಷಯ. ಅವರ ಇಂಟಲಿಜೆಂಟ್ ಮಗಳು ಇಂತಹ ಒಂದು ಹೆಸರು ಮಾಡುತ್ತಿದ್ದ ಶಾಲೆಯಲ್ಲಿ ಓದುತ್ತಿದ್ದಳು.

ಬೆರಳು ತೆರೆದ ಪುಸ್ತಕದ ಒಂದು ಸಾಲಿನ ಮೇಲೆ ಇಟ್ಟಿದ್ದರು. ಇವರು ಇದನ್ನ ನನ್ನ ಹತ್ತಿರ ಯಾಕೆ ಹೇಳ್ತಿದ್ದಾರೆ ಅಂತ ತಲೆ ಗಿರ್ ಅನ್ನಲು ಶುರುವಾಗಿತ್ತು.

“ನೋಡಿ ಸಾರ್ ಅವರ ಮೇಡಂ ಈ ಸಬ್ಜೆಕ್ಟ್ ಮೇಲೆ ಒಂದು ಎಸ್ಸೆ, ಒಂದು ಪದ್ಯ ಬರೆಯಕ್ಕೆ ಹೇಳಿದ್ದಾರೆ…..”

ಈ ವಿಷಯ ನನ್ನ ಬಳಿ ಯಾಕೆ ಪ್ರಸ್ತಾಪ ಮಾಡ್ತಾ ಇದ್ದಾರೆ ಅಂತ ಇನ್ನೂ ನನ್ನ ತಲೆಗೆ ಹೊಳೆದಿರಲಿಲ್ಲ. ಅವರು ಬೆರಳು ಇರಿಸಿದ್ದ ಪುಟ ನೋಡಿದೆ. ಕನ್ನಡದಲ್ಲಿ ಕವನದ ಪ್ರಬಂಧದ ವಿಷಯ ಕಾಣಿಸಿತು.

ಓಹೋ ಇದರ ಬಗ್ಗೆ ಮ್ಯಾಟರ್ ಕಲೆಕ್ಟ್ ಮಾಡ್ತಾ ಇದ್ದಾರೆ ಅಂತ ಕಾಣುತ್ತೆ ಅದಕ್ಕೇ ಬಂದಿದ್ದಾರೆ ಅನಿಸ್ತಾ? ಆಗಿನ ಕಾಲಕ್ಕೆ ಅವರು ಕೊಟ್ಟಿದ್ದ ಸಬ್ಜೆಕ್ಟ್ ಇನ್ನೂ ಹೊಸದು. ಬಹುಶಃ ಹುಲಿ ಸಂತತಿ, ಹೈಡ್ರೋಜನ್ ಬಾಂಬ್, ಪರಿಸರ ರಕ್ಷಣೆ, ರಾಜಕಾರಣಿಗಳ ಕರ್ತವ್ಯ… ಈ ರೀತಿಯ ಸಬ್ಜೆಕ್ಟು. ಅಂದರೆ ಅದರ ಬಗ್ಗೆ ನನಗೇನೂ ಅರಿವು ಇಲ್ಲದಿರುವುದು. ಮುಂದೇನು ಹೇಳುತ್ತಾರೆ ಎಂದು ಕಾದೆ ನಾ….
ಅವರು ಮಾತು ಮುಂದುವರೆಸಿದರು.

“ಹಾಳಾದ್ದು ಕನ್ನಡದಲ್ಲಿ ಬರಿ ಅಂತ ಹೇಳಿದ್ದಾರೆ. ನನಗೂ ಕನ್ನಡ ಬರಲ್ಲ, ನನ್ನ ಗಂಡನಿಗೂ ಕನ್ನಡ ಬರಲ್ಲ. ಹೋದ ಸಲ ಹೀಗೇ ಒಂದು ಎಸ್ಸೆ ಕನ್ನಡದಲ್ಲಿ ಬರೆದುಕೊಂಡು ಬನ್ನಿ ಅಂತ ಹೇಳಿದ್ದರು. ಪೇರೆಂಟ್ಸ್ ಮೀಟಿಂಗ್‌ನಲ್ಲಿ ನಾನೂ ನನ್ನ ಗಂಡನೂ ಪ್ರೊಟೆಸ್ಟ್ ಮಾಡಿದೆವು. ಯಾರೂ ನಮ್ಮ ಸಪೋರ್ಟಿಗೆ ಬರಲಿಲ್ಲ. ಸ್ಕೂಲು ಪ್ರಿನ್ಸಿಪಾಲು ಗವರ್ಮೆಂಟ್ ರೂಲು ಇರೋದೇ ಹಾಗೆ. ನಿಮಗೆ ಕಷ್ಟ ಆದರೆ ಬೇರೆ ಸ್ಕೂಲಿಗೆ ಸೇರ್ಸಿ ಅಂದರು, ತಿಮಿರು ಅವರಿಗೆ….. ಮಿಕ್ಕವರು ಬಾಯಿ ಮುಚ್ಕೊಂಡು ತೆಪ್ಪಗಿದ್ದರು… ಅಷ್ಟೊಂದು ಫೀಸು ಕಟ್ಟಿದ್ದೆವು. ಬೇರೆ ಸ್ಕೂಲಿಗೆ ಸೇರಿಸೋದು ಹೇಗೆ? ನೀವೇ ಹೇಳಿ ಸಾರ್ ಅವರು ಮಾಡಿದ್ದು ಸರೀನಾ…?”

ಇದಕ್ಕೇನು ಉತ್ತರ ಹೇಳಲಿ? ಎರಡನೇ ಮೂರನೇ ತಲೆಮಾರು ಇವರದ್ದು ಈ ಊರಿನಲ್ಲಿ, ಇನ್ನೂ ಲೋಕಲ್ ಭಾಷೆ ಇಲ್ಲದೇ ಬದುಕಬಲ್ಲೆವು ಎನ್ನುವ ಮನೋಸ್ಥಿತಿಯಲ್ಲೇ ಇದ್ದಾರೆ ಅಂದರೆ…?
ಆಕೆ ಮತ್ತೆ ಮಾತು ಮುಂದುವರೆಸಿದರು.

“ಈ ನೋಟ್ ಬುಕ್ ನನ್ನ ಫ್ರೆಂಡ್ ಉಷಾಗೆ ತೋರಿಸಿ ಬರೆದುಕೊಡು ಅಂತ ಕೇಳಿದೆ. ಅವಳು ನಿಮ್ಮ ಹತ್ತಿರ ಕೇಳು ಅಂತ ಕಳಿಸಿದಳು….”

ಇದ್ಯಾವುದು ಉಷಾ? ಅದರ ತಲೆನೋವು ನನಗೆ ಕಟ್ಟುತ್ತಾ ಇದೆ ಅನಿಸ್ತಾ?

“ಯಾರು ಉಷಾ….” ಅಂತ ಕೇಳಿದೆ.
“ಅದೇ ಸಾರ್. ನಮ್ಮ ಸೆಕ್ಷನಲ್ಲಿ ಇದಾಳೆ. ನಿಮ್ಮ ಪುಸ್ತಕ ಕೊಂಡುಕೊಂಡಿದ್ದಾಳಂತೆ. ಅವಳೇ ಹೇಳಿದಳು ಸಾರ್ ನಾನು ಹೇಳಿದೆ, ನಿಮ್ಮನ್ನು ಕೇಳು ಅಂತ ಹೇಳಿದಳು…..”

ತಲೆ ಒಂದು ನಿಮಿಷ ಘಿಂ ಅಂದು ಬಿಡ್ತು ಇವರೇ..

ಸಾವರಿಸಿಕೊಂಡು “ಮೇಡಂ ಈ ಸಬ್ಜೆಕ್ಟ್ ನನಗೆ ತುಂಬಾ ಹೊಸದು. ಇದರ ಬಗ್ಗೆ ಏನೂ ಗೊತ್ತಿಲ್ಲ….” ಅಂದೆ. ಅದು ಹೇಗೋ ಪಾಡು ಪಟ್ಟುಕೊಂಡು ಅರ್ಧ ದಿವಸ ಹೆಣಗಾಡಿ ಈ ಸಂಕಟದಿಂದ ಆಚೆಗೆ ಬಂದೆ ಇವ್ರೇ..

ಈಗ ಈ ಪ್ರಸಂಗ ನೆನೆದರೆ ನನಗೆ ನಾನು ನಂಬದ ದೈವ ಮಾಡಿದ ಉಪಕಾರ ಏನು ಅಂತ ಎದೆ ತುಂಬುತ್ತೆ. ಆಗ ಇನ್ನೂ ವಿಕಿಪೀಡಿಯ, ಗೂಗಲ್ ಮಾವ, ಜೆಮಿನಿ ಅತ್ತೆ, ಚಾಟ್ ಪಟ್ ಅಂಕಲ್ ಮುಂತಾದ AI ಗಳೇ ಆಗಲಿ ಉಳಿದ ಜ್ಞಾನಕೋಶಗಳು ಮೊದಲಾದವು ಹುಟ್ಟಿರಲಿಲ್ಲ. ಎನ್ಸೈಕ್ಲೋಪೀಡಿಯಾ ಆಫ್ ಬ್ರಿಟಾನಿಕಾ ಇತ್ತು, ಆದರೆ ಅದು ನನ್ನಂತಹವರ ಮನೆಯಲ್ಲಿ ಇರಲಿಲ್ಲ. ಅಷ್ಟು ದೊಡ್ಡ ದೊಡ್ಡ ಪುಸ್ತಕ ಇಟ್ಟುಕೊಳ್ಳುವಷ್ಟು ಜಾಗ ನನ್ನಂತಹವರ ಐದೂವರೆ ಚದರದ ಮನೇಲಿ ಇರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅಷ್ಟು ಪುಸ್ತಕ ಕೊಳ್ಳಬೇಕು ಅಂದರೆ ಎರಡು ಮೂರು ವರ್ಷದ ಸಂಬಳ ಅದಕ್ಕೇ ಆಗಿ ಬಿಡೋದು. ಈ ಕಷ್ಟ ಕೊಟ್ಟು ದೈವ ನನ್ನನ್ನು ಅವತ್ತು ಕಾಪಾಡಿತ್ತು. ಇಂತಹ ಪ್ರಸಂಗಗಳೇ ದೈವದ ಮೇಲೆ ನಂಬಿಕೆಯನ್ನು ಹುಟ್ಟಿಸಿತಾ ಎನ್ನುವ ಶಂಕೆ ನನ್ನದು. ಇದು ಅಂತಿರಲಿ, ಈಗ ಮತ್ತೆ ಟು ದೀ ಮೇನ್ ಇಶ್ಯೂ…

ಮಲ್ಲಿಕಾರ್ಜುನ ಅಂತ ಒಬ್ಬರು ಕವಿ ನನ್ನ ಸ್ನೇಹಿತ. ಸ್ನೇಹಿತ ಹೇಗೆ ಅಂದರೆ ಅವನು ಕವಿ, ಕವಿತೆ ಬರೆಯುತ್ತಿದ್ದ. ಈ ಕಾರಣದಿಂದ ನನಗೆ ದೂರದ ಪರಿಚಯ ಆದವನು. ನನ್ನನ್ನು ಅಥವಾ ನನ್ನ ರೀತಿಯವರನ್ನು ಕಂಡರೆ ಹೊಟ್ಟೆಕಿಚ್ಚು ಮತ್ತು ಅಸಹನೆ ಎದ್ದು ಕಾಣುತ್ತಿತ್ತು ಮತ್ತು ಅದನ್ನು ಎಷ್ಟೋ ಸಲ ಮುಖದಲ್ಲಿ ತೋರಿಸುತ್ತಲೂ ಇದ್ದ. ಇದಕ್ಕೆ ಕಾರಣ ಮೊದಮೊದಲು ಗೊತ್ತಿರಲಿಲ್ಲ. ನಂತರ ಇಬ್ಬರಿಗೂ ಹತ್ತಿರದವರು ಹೇಳಿದ್ದು..

‘ಏನೇನೋ ಕಸ ಪಸ ಬರೀತಾರೆ, ಯಾರನ್ನೋ ಹಿಡಕೊಂಡು ಪತ್ರಿಕೇಲಿ ಬರೋ ತರಹ ಮಾಡ್ತಾರೆ…” ಅಂತ ಹೇಳಿದ್ದನಂತೆ. ಹಾಗೆ ನೋಡಿದರೆ ಅದುವರೆಗೂ ಯಾವುದೇ ಪತ್ರಿಕಾ ಕಚೇರಿ ಬಾಗಿಲು ದಾಟಿರಲಿಲ್ಲದವರು ನಾವು. ಸಹಜವಾಗಿ ಕೋಪ ಬಂತು. ಕೋಪ ನುಂಗಿ ಮತ್ತು ಇಂತಹ ಮಾತು ಇಗ್ನೋರಿಸಿ ಅಂತ ನಮಗೆ ನಾವೇ ಕನ್ಸೋಲ್ ಮಾಡಿಕೊಂಡಿದ್ದೆವು.

ಪುಸ್ತಕ ಮಾರಾಟದ ಮೊದಲನೇ ವರ್ಷ ಮಲ್ಲಿಕಾರ್ಜುನ ಸೆಕ್ಷನ್ ಹೊಕ್ಕ. ನೇರ ನನ್ನೆದುರು ಕೂತ. ಕೈಚೀಲದಿಂದ ಒಂದು ಹತ್ತೋ ಹದಿನೈದೋ ಪುಸ್ತಕ ತೆಗೆದು ಎದುರು ಹರಡಿದ.
“ಹೊಸಾ ಪುಸ್ತಕ ಪಬ್ಲಿಷ್ ಆಯ್ತಾ ಮಲ್ಲಿಕಾರ್ಜುನ? ಕಂಗ್ರಾಟ್ಸ್….” ಅಂದೆ.
ಅವನ ಮುಖದಲ್ಲಿ ಉರಿ ಕಾಣಿಸಿತು.
“ಮೊದಲು ಪುಸ್ತಕ ನೋಡಿ….” ಅಂದ. ಇನ್ನೂ ಉರಿ ಹೆಚ್ಚಿತ್ತು.
ಪುಸ್ತಕ ಕೈಗೆ ತೆಗೆದುಕೊಂಡು ನೋಡಿದೆ. ಸಿಂಗರ್ ಕತೆಗಳು, ನರಹಳ್ಳಿ ಬಾಲಸುಬ್ರಮಣ್ಯ ಅವರ ಅನುವಾದದ ಕತೆಗಳು.
“ನರಹಳ್ಳಿ ಬಾಲಸುಬ್ರಮಣ್ಯ ತುಂಬಾ ಚೆನ್ನಾಗಿ ಬರೆಯುತ್ತಾರೆ, ಒಳ್ಳೆಯ ವಿಮರ್ಶಕರು, ಅನುವಾದ ಸಹ ಚೆನ್ನಾಗಿರುತ್ತೆ… ” ಅಂದೆ.
“ಅದೆಲ್ಲಾ ಸರಿ. ಇಷ್ಟು ಪುಸ್ತಕ ತಗೊಂಡು ಕಾಸು ಕೊಡಿ….” ಅಂದ!
“ಎಷ್ಟು ಪುಸ್ತಕ ಇದೆ….” ಅಂದೆ.
“ಈಗ ಇಪ್ಪತ್ತು ತಂದಿದ್ದೀನಿ. ನಾಳೆ ಇನ್ನೊಂದು ಇಪ್ಪತ್ತು ತರ್ತೀನಿ. ಹೊತ್ಕೊಂಡು ಬರೋದು ಭಾರ. ಮನೆಯಿಂದ ಬಸ್ ಸ್ಟಾಪ್ ಒಂದೂವರೆ ಕಿಲೋಮೀಟರು…..” ಅಂದ!
“ಇಷ್ಟು ಪುಸ್ತಕ ನಾನೊಬ್ಬನೇ ತಗೊಂಡು ಏನು ಮಾಡಲಿ…?”
“ಏನಾದರೂ ಮಾಡಿ ನನಗೇನು….?” ಅಂದ!
ಸರಿ ಮನುಷ್ಯ ಉರಿತಾ ಇದ್ದಾನೆ. ಮೊದಲು ಅವನ ಉರಿ ಕಡಿಮೆ ಆಗಲಿ ಅನಿಸಿತು.
“ನರಹಳ್ಳಿ ಬಾಲಸುಬ್ರಮಣ್ಯ ನಿಮ್ಮ ಸ್ನೇಹಿತ್ರಾ ಮಲ್ಲಿಕಾರ್ಜುನ…” ಅಂದೆ.
ಯಾರೋ ಪಬ್ಲಿಷರ್ ಇವನಿಗೆ ನೂರು ಪುಸ್ತಕ ಕೊಟ್ಟು ಮಾರಿಕೊಂಡು ಬಾ ಅಂತ ಹೇಳಿದ್ದಾರೆ ಅಂತ ಗೊತ್ತಾಯ್ತು.
“ನಿಮ್ಮ ಪುಸ್ತಕ ನಾನು ಕೊಂಡಿದ್ದೇನೆ, ನೀವೂ ಕೊಂಡ್ಕೋಬೇಕು…” ಅಂದ. ಇದು tit for tat ಕೇಸು ಅನಿಸಿತು.
“ಸರಿ ಒಂದು ಪ್ರತಿ ಇರಲಿ ಸಾಕು….”
“ಒಂದಲ್ಲ. ಹತ್ತಾದರೂ ಕೊಂಡುಕೊಳ್ಳಿ. ಕನ್ನಡ ಸಾಹಿತಿಗಳು ಬದುಕ ಬೇಡವೇ…?”
“ಸಾಹಿತಿಗಳು ಬದುಕಬೇಕು, ಖಂಡಿತ ಒಪ್ತೀನಿ. ಒಂದು ಪ್ರತಿ ಕೊಡೋ ಹಾಗಿದ್ರೆ ಕೊಡಿ….” ಅಂತ ಎದ್ದುನಿಂತೆ.
“ಅಲ್ಲ ಗೋಪಾಲಕೃಷ್ಣ, ಸಾವಿರ ಪುಸ್ತಕ ಮಾರಿದ್ದೀರಿ, ಹದಿನೈದು ಮಾರೋಕೆ ಆಗಲ್ವಾ…..”

ಇವನ ಹತ್ತಿರ ಮಾತು ಮುಂದುವರೆಸಿದರೆ ನಾನೂ ಕ್ರ್ಯಾಕ್ ಆಗಿ ಬಿಡ್ತೀನಿ ಅನಿಸಿತು. ಎರಡು ಪ್ರತಿ ಕೈಯಲ್ಲಿ ಇಟ್ಟುಕೊಂಡೆ. ಅದರ ದುಡ್ಡು ಕೊಟ್ಟೆ. ಪಾಪ ಅವನು ಕೋಪದಲ್ಲಿ ದಡ ದಡ ಹೆಜ್ಜೆ ಹಾಕುತ್ತಾ ಹೋದ! ಕಳೆದ ವರ್ಷ ಮನೆಯಲ್ಲಿದ್ದ ಪುಸ್ತಕಗಳನ್ನು ಒಂದು ಲೈಬ್ರರಿಗೆ ದಾನ ಮಾಡಿದೆ ನೋಡಿ ಆಗ ಈ ಸಿಂಗರ್ ಕತೆಗಳು ಕಣ್ಣಿಗೆ ಬಿತ್ತು, ಮಲ್ಲಿಕಾರ್ಜುನ ನೆನಪಾದ!

ಇದು ಹೀಗಾದರೆ ನೆಹರು ಮೇಲೆ ಗಾಂಧಿ ಮೇಲೆ ಸುಭಾಷ್ ಚಂದ್ರ ಬೋಸ್ ಮೇಲೆ ಬರೆದು ಕೊಡಿ ಅಂತ ಬಂದಾಗ ಯಾವುದೇ ಸಬೂಬು ಹೊಳೆಯದೇ ಎರಡು ಮೂರು ದಿವಸ ಕೂತು ಬರೆದದ್ದು ಉಂಟು. ಹೀಗೆ ಬರೆದುಕೊಡಿ ಎಂದು ಬಂದವರು ಕೋರುತ್ತಿರಲಿಲ್ಲ. ಬದಲಿಗೆ ಅದು ಅವರ ಡಿಮ್ಯಾಂಡ್.

ಡಿಮ್ಯಾಂಡ್‌ಗೆ ಕಾರಣ ನಾನು ನಿಮ್ಮ ಪುಸ್ತಕ ಕೊಂಡಿದ್ದೇನೆ! ಡಿಮ್ಯಾಂಡ್‌ಗೆ ಕನ್ನಡದಲ್ಲಿ ಶ್ರೀ ಚಿದಾನಂದ ಮೂರ್ತಿ ಅವರು ಒಂದು ಹೊಸಾ ಪದ ಹುಡುಕಿದ್ದರು. ಅವರು ನಮ್ಮ ಕಾರ್ಖಾನೆಯ ಕನ್ನಡ ಕಾರ್ಮಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದರು. ಅವರು ಹುಡುಕಿದ್ದ ಪರ್ಯಾಯ ಪದ ಹಕ್ಕೊತ್ತಾಯ ಅಂತ. ಇಂತಹ ಹಕ್ಕೊತ್ತಾಯಗಳನ್ನು ನನ್ನ ಮೇಲೆ ಸಹಾಯ ಕೇಳಿ ಬಂದವರು ಹೇರುತ್ತಿದ್ದರು!

ಇದರ ಎಫೆಕ್ಟ್ ಹೇಗಾಯಿತು ಅಂತ ನಿಮಗೆ ಹೇಳಲೇ ಬೇಕು. ಈ ಪುಸ್ತಕ ಲೈಬ್ರರಿಗೆ ಸಲ್ಲಿಸುವ ವೇಳೆಗೆ ಮೊದಲ ಮುದ್ರಣದ ಪ್ರತಿಗಳು ಖರ್ಚಾಗಿದ್ದವು. ಕೋರ್ಟ್‌ಗೆ ಹೋಗಿ “ಗೆದ್ದು ಬೀಗಿದ” ಹಮ್ಮು ಬೇರೆ. ಎರಡನೇ ಮುದ್ರಣಕ್ಕೆ ಹೋದಾಗ ಉಳಿತಾಯದ ಮೊರೆ ಹೋಗಿದ್ದು ಆಯಿತು.

ಮೊದಲನೇ ಮುದ್ರಣದಲ್ಲಿನ ಲ್ಯಾಮಿನೇಷನ್ ಬೇಡ ಅಂತ ಆಯಿತು. ಪುಸ್ತಕ ಕುರಿತ ಹಾಗೆ ಗೆಳೆಯರ ಅನಿಸಿಕೆ ನಾಲ್ಕು ಪುಟದಲ್ಲಿ ಹಾಕಿದ್ದೆ. ಅದನ್ನ ಒಂದು ಪುಟಕ್ಕೆ ಇಳಿಸಿ ಪತ್ರಿಕಾ ವಿಮರ್ಶೆಯ ತುಣುಕು ಸೇರಿಸಿದೆ. ಹೀಗೆ ಮೊದಲ ಮುದ್ರಣದ ಕತೆ ಆಯ್ತಾ.. ನಂತರ ನಾಲ್ಕೋ ಐದೋ ಪುಸ್ತಕ ನನ್ನ ಪ್ರಕಾಶನ ಸಂಸ್ಥೆಯಿಂದಲೇ ಆದರೂ ಅದನ್ನು ಕಾರ್ಖಾನೆಯಲ್ಲಿ ಒಂದೇ ಒಂದು ಪ್ರತಿಯನ್ನು ಸಹ ಮಾರಲಿಲ್ಲ! ಬಹುಶಃ ಅನುಭವ ಪಾಠ ಕಲಿಸಿತ್ತು!

ಪುಸ್ತಕ ಬಿಡುಗಡೆಯ ಮಾಲಾರ್ಪಣೆ ಸಂದರ್ಭದ ಗೊಂದಲಗಳು ಈಚೆಗೆ ಅಂದರೆ ನಿನ್ನೆ ಮೊನ್ನೆ ನಡೆದ ಹಾಗೆ ನೆನಪಾಗುತ್ತಿವೆ ಮತ್ತು ಒಟ್ಟಿಗೆ ತಲೆಯಲ್ಲಿ ನುಗ್ಗಿ ಟ್ರಾಫಿಕ್ ಜಾಮ್ ಮಾಡಿವೆ. ಟ್ರಾಫಿಕ್ ಪೊಲೀಸರ ಹಾಗೆ  ಟ್ರಾಫಿಕ್ ಜಾಮ್ ನಿವಾರಿಸಿ ಕತೆ ಸಲೀಸಾಗಿ ಮಂಡ್ಯದ ಕಾಲುವೆಗಳಲ್ಲಿ  ಮಳೆಗಾಲದಲ್ಲಿ ನೀರು ಹರಿದ ಹಾಗೆ ಹರಿಯಬೇಕು. ಅದರಿಂದ ಸರ ಮೇಡಂಮೋರೆ, ಕೊಂಚ ಟೈಮ್ ಕೊಡ್ರಿ ಸುಧಾರಿಸಿಕೊಂಡು ಮುಂದಿನ ಕತೆ ತಮ್ಮ ಮುಂದೆ ಬಿಚ್ಚಿಡುತ್ತೇನೆ…

ಇನ್ನೂ ಇದೆ

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ