ರತ್ನಳ ತಂದೆ ತಾನೇ ಪಟ್ಟಕ್ಕೇರಬೇಕೆಂದು ದುರಾಸೆ ಹೊಂದಿ ಕಂಪಿಲ ಮತ್ತು ಹರಿಯಾಲಾಳ ಮಗನಾದ ರಾಮನಾಥನನ್ನು ಕೊಲ್ಲಿಸುವ ಸಂಚು ಹೂಡುತ್ತಾನೆ. ಇತ್ತ ರತ್ನ ರಾಮನಾಥನಲ್ಲಿ ಮಗುವನ್ನು ಪಡೆಯಲು ಹವಣಿಸಿ ಸೋತು ಸಿಕ್ಕು ಬಿದ್ದು ರಾಜ್ಯದಿಂದ ಹೊರ ಹಾಕಿಸಿಕೊಳ್ಳುತ್ತಾಳೆ. ಆದರೆ ನಂತರ ರಾಯದುರ್ಗದ ಮೇಲೆ ಯುದ್ಧಕ್ಕೆ ಬಂದಿದ್ದ ತುಘಲಕ್ ನ ಸೇನಾಧಿಪತಿ ಉಲ್ಮುಲ್ಕ್ ನ ಬಳಿ ಹೋಗಿ ರಾಯದುರ್ಗದ ಗುಪ್ತ ಮಾರ್ಗಗಳ ಕುರಿತು, ಸೈನ್ಯದ ಕುರಿತು ಲೆಕ್ಕ ಒಪ್ಪಿಸಿ ಕಂಪಿಲರಾಯ ಹಾಗೂ ರಾಮನಾಥ ಇಬ್ಬರನ್ನೂ ಬಲಿಕೊಡಿಸಿದಳು.
ಶ್ರೀದೇವಿ ಕೆರೆಮನೆ ಬರೆಯುವ ‘ತೆರೆದಿಟ್ಟ ಪುಸ್ತಕ’ ಅಂಕಣದಲ್ಲಿ ದಯಾನಂದ ತೊರ್ಕೆಯವರ ‘ಕಾಲಗರ್ಭ’ ಪುಸ್ತಕದ ಪರಿಚಯ

 

ಕಾದಂಬರಿಗಳ ಕ್ಷೇತ್ರದಲ್ಲಿ ದಯಾನಂದ ತೊರ್ಕೆಯವರದ್ದು ದೊಡ್ಡ ಹೆಸರು. ತೊಂಬತ್ತರ ದಶಕದಲ್ಲಿ ಮನೆಮನೆಗಳಲ್ಲಿ ಕಾದಂಬರಿ ಓದುತ್ತಿದ್ದ ಮಹಿಳೆಯರ ನಾಲಿಗೆಯ ಮೇಲೆ ದಯಾನಂದ ತೊರ್ಕೆಯವರ ಹೆಸರು ಜನಜನಿತವಾಗಿತ್ತು. ಇವರ ಸಾಮಾಜಿಕ ಕಾದಂಬರಿಗಳು ಅತಿ ಹೆಚ್ಚು ಓದುಗರನ್ನು ಸೆಳೆಯುತ್ತಿದ್ದವು. ಸುಮಾರು ಎಂಬತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ದಯಾನಂದ ತೊರ್ಕೆಯವರು ಒಂದು ರೀತಿಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿದ್ದೂ ಇಲ್ಲದಂತಿರುವವರು. ಎಲೆಮರೆಯ ಹೂವಂತೆ ಯಾರಿಗೂ ಕಾಣಿಸಿಕೊಳ್ಳದೇ ತಮ್ಮದೇ ಬರವಣಿಗೆಯಲ್ಲಿ ನಿರತರಾಗಿ ಕಾದಂಬರಿಯ ಓದುಗರನ್ನು ಹೆಚ್ಚಿಸುವಲ್ಲಿ ಸಫಲರಾದವರು. ಬೃಹತ್ ಸಂಖ್ಯೆಯ ಕಾದಂಬರಿಗಳನ್ನು ಬರೆದೂ ಇನ್ನೂ ಸಾಹಿತ್ಯ ಕ್ಷೇತ್ರದಲ್ಲಿ ಬಹುತೇಕರಿಗೆ ಪರಿಚಯವೇ ಇಲ್ಲದಂತಿದ್ದಾರೆ. ಹಿರಿಯ ಕಾದಂಬರಿಕಾರರಾದ ಇವರ ಮೂರು ಸಣ್ಣ ಕಾದಂಬರಿಗಳನ್ನು ಒಟ್ಟುಮಾಡಿ ‘ಕಾಲಗರ್ಭ’ ಎನ್ನುವ ಪುಸ್ತಕವನ್ನು ಮಾಡಲಾಗಿದೆ.

ಇಲ್ಲಿ ಪುರುಷವಲ್ಲಭ, ಸುಲ್ತಾನ್ ಹಾಗೂ ಪತನ ಎನ್ನುವ ಮೂರು ಐತಿಹಾಸಿಕ ಕಾದಂಬರಿಗಳಿವೆ. ಇತಿಹಾಸದ ವಿಷಯವನ್ನಿಟ್ಟುಕೊಂಡು ರಚಿಸಿರುವ ಮೂರೂ ಕಾದಂಬರಿಗಳು ಓದುಗರನ್ನು ರಂಜಿಸುವುದರಲ್ಲಿ ಸಂಶಯವಿಲ್ಲ. ಮೊದಲ ಕಾದಂಬರಿ ಪುರುಷವಲ್ಲಭ. ಇದು ರಾಯದುರ್ಗ ಸಂಸ್ಥಾನ ಎಂಬಲ್ಲಿ ನಡೆಯುವ ಕಥೆ. ದೆಹಲಿಯ ಸುಲ್ತಾನ್ ಅಲಾವುದ್ದೀನ್ ಖಿಲ್ಜಿ ದೇವಗಿರಿಯ ಮೇಲೆ ದಾಳಿ ನಡೆಸಿದಾಗ ದೇವಗಿರಿಯ ಅರಸ ರಾಮದೇವ ರಾಯದುರ್ಗದ ಸಹಾಯ ಬೇಡಲು, ಅಲ್ಲಿನ ಅರಸ ಮುಮ್ಮಡಿ ಸಿಂಹ ತನ್ನ ಮಗ ಕಂಪಿಲರಾಯನನ್ನು ಯುದ್ಧಕ್ಕೆ ಕಳುಹಿಸಿ ಖಿಲ್ಜಿಯನ್ನು ಸೋಲಿಸಿದ್ದನು. ಆದರೆ ಕಂಪಿಲರಾಯ ತನ್ನ ರಾಜ್ಯವಾದ ರಾಯದುರ್ಗಕ್ಕೆ ಹಿಂದಿರುಗುವ ಮುನ್ನವೇ ರಾಯದುರ್ಗದ ಅರಸು ಮುಮ್ಮಡಿ ಸಿಂಹ ಅನಾರೋಗ್ಯದಿಂದ ನಿಧನ ಹೊಂದಿದ್ದನು. ಹೀಗಾಗಿ ರಾಜ್ಯಭಾರ ಕಂಪಿಲನ ಮೇಲೇಯೇ ಬಿದ್ದಿತ್ತು.

ಕಂಪಿಲನ ಪಟ್ಟಾಭಿಷೇಕದ ದಿನವೇ ಆ ಕಾರ್ಯಕ್ಕೆ ಅತಿಥಿಗಳಾಗಿ ಬಂದಿದ್ದ ದೂರದ ಗುಜರಾತಿನ ಚರಾಮರಾಯನ ಮಗಳು ಹರಿಯಾಲಾ ದೇವಿಯನ್ನು ಕಂಪಿಲರಾಯನ ತಾಯಿ ಮಂಚಲಾದೇವಿ ಒಪ್ಪಿಕೊಂಡಿದ್ದರಿಂದ ಮದುವೆ ಸಕಾಲದಲ್ಲಿ ನಡೆದು ಹರಿಯಾಲ ರಾಯದುರ್ಗದ ಪಟ್ಟದರಸಿಯಾದಳು. ಸಮಯೋಚಿತವಾಗಿ ಹರಿಯಾಲಾದೇವಿಗೆ ಗಂಡುಮಗುವಾಯಿತು. ಮಗ ರಾಮನಾಥನ ಆರೈಕೆಯಲ್ಲಿಯೇ ಸಮಯ ಕಳೆಯುತ್ತಿದ್ದ ಹರಿಯಾಲಾ ತನ್ನೆಡೆಗೆ ಗಮನ ನೀಡುತ್ತಿಲ್ಲವೆಂದು ಕಂಪಿಲರಾಯ ಮುನಿಯತೊಡಗಿದ. ಮಗನ ಬೇಕುಬೇಡಗಳನ್ನು ಗಮನಿಸುತ್ತ ಗಂಡನಿಗೆ ಸಮಯ ನೀಡುವುದು ಕಡಿಮೆಯಾಗಿದ್ದರಿಂದ ಕಂಪಿಲ ಕೂಡ ಅವಳಿಗೆ ಸರಿಯಾದ ಶಿಕ್ಷೆ ನೀಡಬೇಕೆಂದು ಅವಳಿಂದ ದೂರವೇ ಉಳಿಯ ತೊಡಗಿದ.

(ದಯಾನಂದ ತೊರ್ಕೆ)

ಹರಿಯಾಲ ತನ್ನ ಅತ್ತೆಯ ಬಳಿ ಈ ವಿಷಯವನ್ನು ಹೇಳಿ ದುಃಖಪಟ್ಟಾಗ ಅತ್ತೆ ಮಂಚಲಾದೇವಿ ಹೇಳುವ ಈ ಮಾತು ಸಂಸಾರಕ್ಕೆ ಹಿಡಿದ ಕೈಗನ್ನಡಿಯಂತಿದೆ. ‘ಕೆಲವು ಗಂಡಂದಿರು ಹೆಂಡತಿ ಯಾವಾಗಲೂ ತಮ್ಮನ್ನು ಒಂದೇ ರೀತಿ ಪ್ರೀತಿಸುತ್ತಿರಬೇಕೆಂದು ಬಯಸುತ್ತಾರೆ.’ ಎನ್ನುವುದಲ್ಲದೇ ತನ್ನ ಹೆಂಡತಿ ತಮ್ಮದೇ ಮಕ್ಕಳನ್ನು ಪ್ರೀತಿಸಿದರೂ ತನ್ನೆಡೆಗಿನ ಪ್ರೀತಿ ಕಡಿಮೆಯಾಯಿತೆಂದು ತಿಳಿಯುವವರಿದ್ದಾರೆ. ಇಲ್ಲಿ ಅತ್ತೆ ತನ್ನ ಸೊಸೆಗೆ ಹೇಳುವ ಮಾತನ್ನು ಗಮನಿಸಬೇಕು ‘ಗಂಡನ ಪ್ರೀತಿ ಗಟ್ಟಿಯಾಗಿ ಉಳಿಯಬೇಕೆಂದರೆ ಹೆಂಡತಿಯಾದವಳು ಯಾವಾಗಲೂ ಎಂತಹ ಸಂದರ್ಭದಲ್ಲೂ ನಗುನಗುತ್ತಾ ಎಂದಿನಂತೆ ಅವನ ಬಗ್ಗೆ ಆಸಕ್ತಿಯನ್ನು ತೋರಿಸುತ್ತಿರಬೇಕು. ನೀನು ಮೊದಲು ಗಂಡನಿಗೆ ಹೆಂಡತಿ ನಂತರ ಮಗನಿಗೆ ತಾಯಿ ಎನ್ನುವುದನ್ನು ನೆನಪಿನಲ್ಲಿಟ್ಟುಕೊ’ ಎನ್ನುತ್ತಾಳೆ.

ಪುರುಷ ಅಹಂಕಾರವೇ ಹಾಗೆ. ಜಗತ್ತು ಏನೇ ಆದರೂ ಸರಿ. ತನ್ನನ್ನು ಎಲ್ಲರೂ ಮೆರೆಸಬೇಕು ಎನ್ನುವ ಮನೋಭಾವ ಇಂದು ನಿನ್ನೆಯದಲ್ಲ. ಅದಕ್ಕೆ ತಕ್ಕ ಹಾಗೆ ಕಂಪಿಲ ಹೆಂಡತಿಯ ಕೋಣೆಯ ಕಡೆಗೆ ಹೋಗದೆ ಊರೆಲ್ಲ ಸುತ್ತಿ ದೊಂಬರವಳಾದ ರತ್ನ ಎನ್ನುವವಳಲ್ಲಿ ಅನುರಕ್ತಳಾಗಿ ಎಲ್ಲರ ವಿರೋಧದ ನಡುವೆಯೂ ಅವಳನ್ನು ಮದುವೆಯಾಗಿ ಅರಮನೆಗೆ ತಂದಿಟ್ಟುಕೊಳ್ಳುತ್ತಾನೆ. ಆದರೆ ರತ್ನಳ ತಂದೆ ತಾನೇ ಪಟ್ಟಕ್ಕೇರಬೇಕೆಂದು ದುರಾಸೆ ಹೊಂದಿ ಕಂಪಿಲ ಮತ್ತು ಹರಿಯಾಲಾಳ ಮಗನಾದ ರಾಮನಾಥನನ್ನು ಕೊಲ್ಲಿಸುವ ಸಂಚು ಹೂಡುತ್ತಾನೆ. ಇತ್ತ ರತ್ನ ರಾಮನಾಥನಲ್ಲಿ ಮಗುವನ್ನು ಪಡೆಯಲು ಹವಣಿಸಿ ಸೋತು ಸಿಕ್ಕು ಬಿದ್ದು ರಾಜ್ಯದಿಂದ ಹೊರ ಹಾಕಿಸಿಕೊಳ್ಳುತ್ತಾಳೆ. ಆದರೆ ನಂತರ ರಾಯದುರ್ಗದ ಮೇಲೆ ಯುದ್ಧಕ್ಕೆ ಬಂದಿದ್ದ ತುಘಲಕ್ ನ ಸೇನಾಧಿಪತಿ ಉಲ್ಮುಲ್ಕ್ ನ ಬಳಿ ಹೋಗಿ ರಾಯದುರ್ಗದ ಗುಪ್ತ ಮಾರ್ಗಗಳ ಕುರಿತು, ಸೈನ್ಯದ ಕುರಿತು ಲೆಕ್ಕ ಒಪ್ಪಿಸಿ ಕಂಪಿಲರಾಯ ಹಾಗೂ ರಾಮನಾಥ ಇಬ್ಬರನ್ನೂ ಬಲಿಕೊಡಿಸಿದಳು. ಇತ್ತ ರಾಮನಾಥನನ್ನು ಮನಸಾರೇ ಪ್ರೀತಿಸುತ್ತಿದ್ದ ತುಘಲಕ್ ನ ಮಗಳು ಬಾಬಮೆ ರಾಮನಾಥನ ಮರಣದ ಸುದ್ದಿ ಕೇಳಿ ಅರಮನೆಯ ಉಪ್ಪರಿಗೆಯ ಮೇಲಿಂದ ಹಾರಿ ಪ್ರಾಣ ಬಿಟ್ಟಳು.

 ಟಿಪ್ಪು ಬೇಡವೆಂದು ನಿರ್ಧರಿಸಿದರೂ ಅವನಿಂದ ದೇಗುಲದ ನಾಶಕ್ಕೆ ಆದೇಶ ಮಾಡುವಂತೆ ಮಾಡುವುದರಲ್ಲಿ, ಬಯಸಿದ ಹೆಣ್ಣು ರಾಜಾಸ್ಥಾನದ ಭಕ್ಷಿ ರಾಮರಾಯನ ಮಗಳು ಮಾಧವಿಯನ್ನು ಮತಾಂತರಗೊಳಿಸಿ ನುಸ್ರತ್ ಎಂದು ಹೊಸ ನಾಮಕರಣ ಮಾಡಿ ನಿಖಾ ಮಾಡಿಕೊಳ್ಳುವುದರಲ್ಲಿ ಮೀರ್ ಸಾಧಿಕ್ ನ ದುಷ್ಟತನವೇ ಎದ್ದು ಕಾಣುತ್ತದೆ.

ಇಡೀ ಕಾದಂಬರಿಯು ಗಂಡು-ಹೆಣ್ಣಿನ ಅಸಹಜ ಪ್ರೀತಿಯನ್ನು ಹೇಗೆ ವಿವರಿಸಿದ್ದಾರೋ ಹಾಗೆ ಗಂಡು-ಹೆಣ್ಣು ಇಬ್ಬರ ಅಲೌಕಿಕ ಪವಿತ್ರ ಪ್ರೇಮದ ಬಗೆಯೂ ಕಾದಂಬರಿಕಾರರು ಹೇಳಿದ್ದಾರೆ. ಅತಿಯಾಗಿ ಪ್ರೀತಿಸುತ್ತಿದ್ದ ಪತ್ನಿ ಹರಿಯಾಲಾಳನ್ನು ಬಿಟ್ಟು ರತ್ನಾಳನ್ನು ವಿವಾಹವಾದ ಕಂಪಿಲರಾಯನದ್ದು ಕಾಮಪೂರಿತ ಪ್ರೇಮವಾದರೂ ಆತ ಅವಳನ್ನು ಅದಮ್ಯವಾಗಿ ಪ್ರೀತಿಸುತ್ತಿದ್ದ ಎಂಬುದು ಇಲ್ಲಿ ತಿಳಿಯುತ್ತದೆ. ಇತ್ತ ಅಧಿಕಾರ, ಹಣ, ಸುಖ ಸಂಪತ್ತಿಗಾಗಿಯೇ ಕಂಪಿಲರಾಯನನ್ನು ಮದುವೆಯಾದ ರತ್ನಾಳದ್ದು ಸಮಯ ಸಾಧಕ ಪ್ರೇಮ. ತನ್ನ ಸ್ವಾರ್ಥಕ್ಕಾಗಿ ಮಗನ ಸಮಾನನಾದವನನ್ನು ಬಯಸುವ ಅವಳು ಅತ್ತ ತುಘಲಕ್ ನ ಸೇನಾಧಿಕಾರಿ ಉಲ್ ಮುಲ್ಕ್ ನ ಬಳಿಯೂ ತನ್ನನ್ನು ಒಪ್ಪಿಸಿಕೊಳ್ಳುವುದಾಗಿ ಹೇಳುತ್ತಾಳೆ. ದೇಹವನ್ನು ಬಳಸಿ ಎಲ್ಲವನ್ನೂ ಸಾಧಿಸಿಕೊಳ್ಳಬಹುದು ಎಂಬ ಹೆಣ್ಣಿನ ಕಾಮುಕ ಮನಸ್ಸಿಗೆ ಉದಾಹರಣೆಯಾಗಿ ನಿಂತರೆ ತುಘಲಕ್ ನ ಮಗಳು ಬಾಬಮೆಯದ್ದು ಪರಿಶುದ್ಧ ಪ್ರೇಮ. ರಾಮನಾಥ ತಿರಸ್ಕರಿಸಿದರೂ ಅವನ್ನೇ ಆರಾಧಿಸುವ ಆಕೆ ಆತ ವಿವಾಹಿತ ಎಂಬುದು ಗೊತ್ತಿದ್ದೂ ಪ್ರೀತಿಸುತ್ತಾಳೆ. ಆತನ ಸಾವಿನ ಸುದ್ಧಿ ಕೇಳಿ ಅರಮನೆಯ ಉಪ್ಪರಿಗೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಪ್ರೇಮ ಅವಳಲ್ಲಿದೆ.

ರಾಮನಾಥನಾದರೂ ಅಷ್ಟೇ. ತುಘಲಕ್ ನ ಮಗಳೇ ಒಲಿದ ಸಮಾಚಾರ ಬಂದಾಗಲೂ ಅದನ್ನು ನಿರಾಕರಿಸಿ ತನ್ನ ಪತ್ನಿಯ ಮೇಲೆ ನಿಷ್ಠೆಯನ್ನು ತೋರುತ್ತಾನೆ. ಕಂಪಿಲರಾಯನ ಕಚ್ಚೆ ಹರಕುತನವನ್ನು ಅವನ ಮಗ ನಿರಾಕರಿಸಿ ಶುದ್ಧ ಪ್ರೇಮದ ಎಳೆ ನೀಡಿದಂತೆ, ರತ್ನಾಳ ಅನೈತಿಕತೆಗೆ ಉತ್ತರವಾಗಿ ಬಾಬಮೆ ಪ್ರೇಮದ ಉತ್ಕಂಠತೆಯನ್ನು ತೆರೆದಿಡುವ ಪರಿಯೇ ಅಚ್ಚರಿ. ಒಟ್ಟಿನಲ್ಲಿ ಇಡೀ ಕಾದಂಬರಿ ನಮ್ಮ ಸುತ್ತ ಪ್ರೇಮ ಕಾಮದ ನೈತಿಕ ಅನೈತಿಕತೆಯನ್ನು ಬಿಚ್ಚಿಡುತ್ತಲೇ ಅದ್ಭುತ ಪ್ರೇಮದ ಅನಾವರಣವನ್ನೂ ಮಾಡುತ್ತದೆ.

ಎರಡನೆ ಕಾದಂಬರಿ ಸುಲ್ತಾನ. ಇದು ಟಿಪ್ಪುವಿನ ಕಥೆಯನ್ನು ಹೇಳುತ್ತದೆ. ಇಲ್ಲಿ ಕಾದಂಬರಿಕಾರರು ಟಿಪ್ಪುವನ್ನು ಒಬ್ಬ ಧರ್ಮಾಂಧನಂತೆ ಕಾಮಾಂಧನಂತೆ ಚಿತ್ರಿಸಿದ್ದರೂ ಆತನ ಈ ಧರ್ಮ ಹಾಗೂ ಕಾಮದ ಅಂಧತ್ವಕ್ಕೆ ಮೀರ್ ಸಾದಿಕ್ ಎನ್ನುವ ಕುಟಿಲ ಮಿತ್ರನ ದುಷ್ಟತನವೇ ಕಾರಣ ಎಂಬುದನ್ನೂ ತಿಳಿಸಿದ್ದಾರೆ. ಟಿಪ್ಪು ಬೇಡವೆಂದು ನಿರ್ಧರಿಸಿದರೂ ಅವನಿಂದ ದೇಗುಲದ ನಾಶಕ್ಕೆ ಆದೇಶ ಮಾಡುವಂತೆ ಮಾಡುವುದರಲ್ಲಿ, ಬಯಸಿದ ಹೆಣ್ಣು ರಾಜಾಸ್ಥಾನದ ಭಕ್ಷಿ ರಾಮರಾಯನ ಮಗಳು ಮಾಧವಿಯನ್ನು ಮತಾಂತರಗೊಳಿಸಿ ನುಸ್ರತ್ ಎಂದು ಹೊಸ ನಾಮಕರಣ ಮಾಡಿ ನಿಖಾ ಮಾಡಿಕೊಳ್ಳುವುದರಲ್ಲಿ ಮೀರ್ ಸಾಧಿಕ್ ನ ದುಷ್ಟತನವೇ ಎದ್ದು ಕಾಣುತ್ತದೆ. ಹೈದರಾಲಿಯ ಮರಣದ ನಂತರ ತನ್ನನ್ನು ತಾನು ಸುಲ್ತಾನ ಎಂದು ಘೋಷಿಸಿಕೊಂಡ ಟಿಪ್ಪು, ರಾಜಮಾತೆ ಲಕ್ಷ್ಮಣ್ಣಿಯನ್ನು ಬದಿಗೆ ಸರಿಸಿ ತಾನೇ ಆಡಳಿತ ನಡೆಸಲು ಹೊಂಚು ಹಾಕುವುದು, ರಾಜ ಪರಿವಾರವನ್ನು ನಿರ್ಲಕ್ಷಿಸಿ ತಾನೇ ಮೈಸೂರಿನ ಅರಸ ಎಂಬಂತೆ ಆಡಳಿತ ನಡೆಸುವುದು ಈ ಕಾದಂಬರಿಯಲ್ಲಿದೆ.

ಮೀರ್ ಸಾದಿಕ್ ನ ಮಾತು ಕೇಳಿ ಸುತ್ತ ಮತ್ತಲಿನ ರಾಜ್ಯದವರ ಮೇಲೆ ಟಿಪ್ಪು ಮಾಡುವ ಯುದ್ಧ ಹಾಗೂ ಅಲ್ಲಿನ ಹೆಣ್ಣುಮಕ್ಕಳ ಮೇಲೆ ಮಾಡುತ್ತಿರುವ ದೌರ್ಜನ್ಯವನ್ನು ಕಂಡು ಟಿಪ್ಪುವಿನ ಮಗ ಫತೇ ಹೈದರ್ ಕೂಡ ಆತನ ಕ್ರಮವನ್ನು ವಿರೋಧಿಸುತ್ತಾನೆ. ಆದರೆ ಮೀರ್ ಸಾದಿಕ್ ಒಬ್ಬನಿದ್ದರೆ ಸಾಕು ಎಂದುಕೊಂಡಿದ್ದ ಟಿಪ್ಪು ಅದಾವುದನ್ನೂ ಗಮನಿಸುವುದಿಲ್ಲ, ನಂತರ ಅವನು ಬ್ರಿಟೀಷ್ ರೊಂದಿಗೆ ಯುದ್ಧ ಮಾಡುತ್ತ ಹತನಾಗುತ್ತಾನೆ. ಆದರೆ ಈತನ ಯುದ್ಧ ಕೌಶಲ್ಯಕ್ಕೆ ಜನರಲ್ ಮೆಂಡಿಸ್ ಕೂಡ ಆತನನ್ನು ಅದ್ಭುತ ಹೋರಾಟಗಾರ ಎಂದು ಹೊಗಳುತ್ತಾನೆ.

ಮೂರನೆಯ ಕಾದಂಬರಿ ಪತನ. ಇದು ಮರಾಠಾ ಸಾಮ್ರಾಟ ಶಿವಾಜಿಯ ಪತನದ ನಂತರ ಉಂಟಾದ ಮರಾಠಿಗರ ಆಂತರಿಕ ಕಲಹ ಹಾಗೂ ಮರಾಠಾ ಸಾಮ್ರಾಜ್ಯದ ಪತನದ ಕುರಿತು ಹೇಳುತ್ತದೆ. ಶಿವಾಜಿಯ ಇಬ್ಬರು ಮಕ್ಕಳಾದ ಸಂಭಾಜಿ ಹಾಗೂ ರಾಜಾರಾಯರ ಅಧಿಕಾರದ ಕಿತ್ತಾಟ ಹಾಗೂ ಮುಂದಿನ ಮರಾಠಾ ಸಾಮ್ರಾಜ್ಯದ ಒತ್ತಡಗಳು ಇಲ್ಲಿ ಕಾದಂಬರಿಯಾಗಿ ರೂಪುಗೊಂಡಿದೆ. ಇದರೊಟ್ಟಿಗೆ ಬರುವ ಔರಂಗಜೇಬನ ಆಡಳಿತ ವೈಖರಿ, ಅವನ ಕ್ರೌರ್ಯ ಎದೆಯನ್ನು ನಡುಗುವಂತೆ ಮಾಡುತ್ತದೆಯಾದರೂ ಒಬ್ಬ ನರ್ತಕಿ ಹೀರಾಬಾಯಿ ಔರಂಗಜೇಬನ ಮನಸ್ಸನ್ನು ಹೇಗೆ ಸೆರೆಹಿಡಿದಿದ್ದಳು ಎಂದು ಓದಿದಾಗ ಆದ್ರವಾಗದೇ ಇರದು. ಆದರೆ ಪ್ರೇಮಕ್ಕೆ ಹೆಸರಾಗಿ ತಾಜ್ ಮಹಲ್ ಕಟ್ಟಿದ್ದ ಷಹಜಹಾನ್ ಮಗನ ಪ್ರೇಮವನ್ನು ಅರ್ಥಮಾಡಿಕೊಳ್ಳದಷ್ಟು ಕಠಿಣ ಹೃದಯದವನಾಗಿದ್ದ ಎಂಬುದೇ ಅಚ್ಚರಿ. ಷಹಜಹಾನನ ಕುತಂತ್ರದಿಂದ ವಿಷಪ್ರಾಶನದಿಂದಾಗಿ ಸತ್ತು ಹೋದ ಹೀರಾಬಾಯಿಯ ನೆನಪಿಗಾಗಿ ಔರಂಗಜೇಬ ತನ್ನ ರಾಜ್ಯದಲ್ಲಿ ನೃತ್ಯ, ಸಂಗೀತ ಹಾಗೂ ಕಲೆಗಳನ್ನು ನಿರಾಕರಿಸಿದ ಕುರಿತು ಇಲ್ಲಿದೆ.

ಇತ್ತ ರಾಜಾರಾಯ ಅಸ್ವಸ್ಥತೆಯಿಂದ ಮರಣ ಹೊಂದುತ್ತಾನೆ. ಆತನ ಇಬ್ಬರು ಹೆಂಡಿರಲ್ಲಿ ಒಬ್ಬಳಾದ ತಾರಾಬಾಯಿ ಸಹಗಮನ ಹೊಂದುತ್ತಾಳೆ. ಸತಿಯಾಗುತ್ತಾಳೆ. ಮರಾಠಾ ಸಾಮ್ರಾಜ್ಯ ಔರಂಗಜೇಬನ ವಶವಾಗುತ್ತದೆ. ಆದರೆ ತನ್ನೆಲ್ಲ ದುಷ್ಕೃತ್ಯಗಳ ಫಲವಾಗಿ ಕೊನೆಗೂ ಪಶ್ಚಾತಾಪ ಪಡುತ್ತ ಔರಂಗಜೇಬನ ಕೊನೆಯಾಗುತ್ತದೆ.

ಇಲ್ಲಿ ಕಾದಂಬರಿಕಾರರು ಜೀವನದ ನಶ್ವರತೆಯನ್ನು ಪ್ರತಿಪಾದಿಸಿದ್ದಾರೆ. ಎಷ್ಟು ಐಶ್ವರ್ಯವಿದ್ದರೇನು? ಅಧಿಕಾರವಿದ್ದರೇನು? ಸಾವು ಯಾವುದನ್ನೂ ಲೆಕ್ಕಿಸುವುದಿಲ್ಲ. ಇಡೀ ಭಾರತವನ್ನು ತನ್ನ ಅಧಿಪತ್ಯದೊಳಗೆ ಸೇರಿಸಿಕೊಳ್ಳ ಬಯಸಿದ್ದ ಔರಂಗಜೇಬ್ ಸತ್ತಿದ್ದೂ ಬರಗೈಯ್ಯಿಂದಲೇ ಎಂಬ ಸತ್ಯ ಕಣ್ಣಿಗೆ ರಾಚುತ್ತದೆ.

ತನ್ನ ಮೂರೂ ಕಾದಂಬರಿಗಳಿಗೆ ಇತಿಹಾಸದ ಅಧ್ಯಯನವಿದೆ ಎಂದು ಕಾದಂಬರಿಕಾರು ಹೇಳುತ್ತಾರೆ. ಇಲ್ಲಿನ ಬಹುತೇಕ ಘಟನೆಗಳು ಕಥೆಯ ರೂಪದಲ್ಲಿಯೇ ಈಗಾಗಲೇ ಜನರ ನಡುವೆ ಹರಿದಾಡುತ್ತಿದೆ. ಆದರೆ ಐತಿಹಾಸಿಕವಾಗಿ ಇಲ್ಲಿ ಕ್ರಮಬದ್ಧವಾಗಿ ಜೋಡಿಸಿಕೊಟ್ಟ ದಯಾನಂದ ತೊರ್ಕೆಯವರು ಅಭಿನಂದನಾರ್ಹರು.

 

(ಪುಸ್ತಕ: ಕಾಲಗರ್ಭ (ಮೂರು ಸಣ್ಣ ಕಾದಂಬರಿಗಳು), ಲೇಖಕರು- ದಯಾನಂದ ತೊರ್ಕೆ, ಬೆಲೆ-೧೯೦, ಪ್ರಕಾಶಕರು- ಕಿಕ್ಕೇರಿ ಪಬ್ಲಿಕೇಷನ್ಸ್)