ಪುತಿನ ಅವರ ಪೂರ್ಣ ಹೆಸರು ಪುರೋಹಿತ ತಿರುನಾರಾಯಣ ನರಸಿಂಹಾಚಾರ್. ಕನ್ನಡದ ನವೋದಯ ಕವಿಗಳಲ್ಲಿ ಪ್ರಮುಖರು. 1905ರ ಮಾರ್ಚ್ 17ರಂದು ಮೇಲುಕೋಟೆಯಲ್ಲಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ (1963-66), ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟು (1966-71) ಸಂಪಾದಕ ವರ್ಗದಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸಿದರು.
ಪುತಿನ ರಚಿತ ‘ಹಂಸದಮಯಂತಿ ಮತ್ತು ಇತರ ರೂಪಕಗಳು’ ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ (1965), ೧೯೬೬ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ (1966), ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ (1971) ಪದವಿ ನೀಡಿ ಗೌರವಿಸಲಾಗಿತ್ತು. ಚಿಕ್ಕಮಗಳೂರಿನಲ್ಲಿ ನಡೆದ 53ನೇ ಕನ್ನಡ ಸಾಹಿತ್ಯ ಸಮ್ಮೇಳನ (1981) ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅವರು 1998ರ ಅಕ್ಟೋಬರ್ 13ರಂದು ನಿಧನರಾದರು. ಕನ್ನಡ, ತಮಿಳು, ಇಂಗ್ಲಿಷ್, ಸಂಸ್ಕೃತ, ಫ್ರೆಂಚ್ ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದ ವಿದ್ವಾಂಸರು. ಕನ್ನಡ ಕಾವ್ಯಮಾಲೆಯ ಕಾಣದ ಕುಸುಮಗಳು ಸರಣಿಯಲ್ಲಿ ಅವರು ಬರೆದ “ನರಸಿಂಗ”ನಿಗೆ ಮರುಳಾದ ಮಗಳು ಕವಿತೆ ನಿಮ್ಮ ಓದಿಗೆ.
“ನರಸಿಂಗ”ನಿಗೆ ಮರುಳಾದ ಮಗಳು
೧
ಆಡಿಯಾಡಿ ಮನಕರಗಿ ಹಾಡನು
ಹಾಡಿಹಾಡಿ ಕಂಬನಿಕರೆದೆಲ್ಲೆಡೆ
ನೋಡಿನೋಡಿ ನರಸಿಂಗಾ ಎನ್ನುತ
ಬಾಡಿ ಹೋದಳೀ ಕಳೆಮೊಗದವಳು
೨
ಏನನರಿಯದೀ ಚೆಲುಮಗು ನಿಮ್ಮನು
ಕಾಣುವಾಸೆಯೊಳು ಸೊರಗಿರೆ, ಬಲೆಮಯ
ಬಾಣನ ಸಾಸಿರ ತೋಳ್‌ತರಿದ ನೀವು
ಕಾಣಿಸಿಕೊಳ್ಳಲು ದಯೆತೊರೆದಿಹಿರೇ!
೩
ಕೊರಗುವ ಮನದೊಳು ಬೆಂಕಿಯ ಬಳಿಯೊಳು
ಅರಗು ಮೇಣದೊಲು ಕರಗುವಳಿವಳು
ಮರುಕವಿಲ್ಲದ ನಿಮಗಿದಕೇಗೈಯಲಿ
ದುರುಳನ ಲಂಕೆಯನಳಿಸಿದ ನಿಮಗೆ
೪
ಎಂಬುಳ್ಯಲಂಕಾಹರನೇ, ಮತ್ತೆಯು
ಎಂಬಳು ಗರುಡಧ್ವಜನೆ, ಎನ್ನುತ
ಹಂಬಲದೊಳು ಬಿಸುಸುಯ್ವಳು ಕಂಬನಿ
ತುಂಬುತ ಕೈಮುಗಿವಳು ಭ್ರಮಿಸೆದ್ದು.
೫
ಇರುಳೂ ಹಗಲೂ ನೆನೆನೆನೆದೊರಲುತ
ತರುವಳೂ ನೈದಿಲೆ ಕಣ್ಣಿಗೆ ಹನಿಯ
ತೆರುವುದಿಲ್ಲ ನೀವಳಿಗಳು ಮುತ್ತುವ
ವರ ತುಳಸಿಯನಹ ಶುದ್ಧರ ಕೃಪೆಯೇ!
೬
ಮರುಕವುಳ್ಳವನೆ ಎಂಬಳು ಮತ್ತೆಯು
ಹಿರಿಯಾಸೆಯ ಹೊರೆವವನೇ ಎಂಬಳು
ಇರವು ನನ್ನದಿದರಮೃತವೆ ಎಂಬಳು
ಕರಗಿಸಿ ಮನವನು ತನ್ನೊಳೆ ನಿಂದು
೭
ತಾ ಪಡುತಿಹ ಮೋಸವ ಮರೆಮಾಚುತ
ತಾಪದಿ ತಾರಿರೆ ತನ್ನೊಳಗಿವಳೆ-
ನ್ನಾಪದ್ಬಂಧುವೆ ಕೃಷ್ಣಾ ಎಂಬಳು
ಆಪೂರ್ಣಾಂಬುಧಿ ಶಯನಾ ಎಂಬಳು
೮
ಎಲೆ ವಂಚಕ ಎನುವಳು ಕೈಮುಗಿವಳು
ಬಲು ಬೆಂದಿರುವೆದೆಯೊಳು ನಿಡುಸುಯ್ವಳು
ಬಲಿ ಕಂಸನ ವಂಚನೆಗೈದವರೇ
ಅಳಲೇನೆಂಬೆನು ನಿಮಗೊಲಿದಿವಳ
೯
ಇರುಳಾದುದ ಹಗಲಾದುದನರಿಯಳು
ಅರಳಿ ಜೇನ್‌ಸುರಿವ ತುಳಸಿಯನೆರೆವಳು
ಉರಿವ ಮೊನೆಬಾಯ ಚಕ್ರಧರೆ, ನಿ-
ಮ್ಮರಿವೆಂತಿಹುದೀ ಚಪಲೆಯ ಕುರಿತು.
೧೦
ಮಿಗಿಲಿಲ್ಲದ ಚೆಲುಕಣ್ಣಿಗೆ ಚಂಚಲೆ
ಹಗಲಿರುಳೂ ನೀರ್ ತರುವಳು ದೀನೆ
ಮಿಗು ಬಾಳುರಿವೊಲು ಲಂಕೆಯಳಿಸಿದರೆ
ಮೃಗಲೋಚನಗಳನೀಕೆಯವುಳಿಸಿ.
೧೧
ಬಾಡದ ವರಗುಣಗಳ ವಾಮನನ
ಹಾಡೊಳು ಸಿರಿಶಡಗೋಪನುಸಿರಿದ
ಹಾಡಿನ ಸಿರಿ ಸಾಸಿರದೊಳು ಹತ್ತಿವು
ಸುಡಲಡಿಗೆ ಚೆಲುವಾದುದು ಮಾಲೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ