ಕರಾವಳಿ ಜಿಲ್ಲೆಗಳು ಎಂದು ಸರಕಾರದ ಮಟ್ಟದಲ್ಲಿ ಹೇಳುವಾಗ ಕೇವಲ ಉಡುಪಿ, ಮಂಗಳೂರು ಎಂಬ ಎರಡು ಜಿಲ್ಲೆಗಳನ್ನು ಮಾತ್ರ ಹೆಸರಿಸುತ್ತಾರೆಯೇ ಹೊರತೂ ಉತ್ತರಕನ್ನಡವೂ ಕರಾವಳಿ ಜಿಲ್ಲೆಯೆಂದು ಎಂದೂ ಪರಿಗಣಿಸಲ್ಪಡುವುದಿಲ್ಲ. ಮಲೆನಾಡಿನ ಜಿಲ್ಲೆಗಳ ಪಟ್ಟಿಯಲ್ಲಿ ಈ ಜಿಲ್ಲೆ ಇಲ್ಲವೇ ಇಲ್ಲ, ಬಯಲು ಸೀಮೆಯ ಪ್ರದೇಶ ಆಗುವುದೇ ಇಲ್ಲ. ಗೋವಾದೊಂದಿಗೆ, ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡು, ಗಡಿ ಸಮಸ್ಯೆಗಳಾಗಿ, ಕಾರವಾರ ಹಾಗೂ ಜೊಯ್ಡಾ ತಾಲೂಕುಗಳನ್ನು ಮಹಾರಾಷ್ಟ್ರಕ್ಕೆ ಅಥವಾ ಗೋವಾಕ್ಕೆ ಸೇರಿಸಿ ಎಂದು ಹುಯಿಲೆದ್ದರೂ ಇದು ಗಡಿ ಜಿಲ್ಲೆಯಲ್ಲ.
ಶ್ರೀದೇವಿ ಕೆರೆಮನೆ ಬರೆಯುವ ‘ತೆರೆದಿಟ್ಟ ಪುಸ್ತಕ’ ಅಂಕಣದಲ್ಲಿ ಬೀರಣ್ಣ ಮೋನಪ್ಪ ನಾಯಕ ಅವರ ‘ದಿನಕ್ಕೊಂದು ಬೀರಣ್ಣನ ಚುಟುಕುಗಳು’ ಪುಸ್ತಕದ ಪರಿಚಯ
ಉತ್ತರಕನ್ನಡ ಎಂದರೆ ಅದು ಚುಟುಕು ಸಾಮ್ರಾಟ ದಿನಕರ ದೇಸಾಯಿಯವರ ಕರ್ಮಭೂಮಿ. ದಿನಕರ ದೇಸಾಯಿಯವರು ಇಡೀ ಜಿಲ್ಲೆಯ ತುಂಬ ಓಡಾಡಿ ಪ್ರೌಢಶಾಲೆಗಳನ್ನು ಸ್ಥಾಪಿಸಿದರು. ಕೆನರಾ ವೆಲ್ಫೇರ್ ಟ್ರಸ್ಟ್ ಎನ್ನುವ ಹೆಸರಿನ ಸಂಘದಡಿಯಲ್ಲಿ ನಿರ್ಮಿತವಾದ ಈ ಶಿಕ್ಷಣ ಸಂಸ್ಥೆ ಅದೆಷ್ಟು ಹೆಸರು ಪಡೆಯಿತೋ ದಿನಕರರ ಚುಟುಕುಗಳೂ ಕೂಡೂ ನಾಡಿನಾದ್ಯಂತ ತಮ್ಮ ಘಮವನ್ನು ಹಬ್ಬಿಸಿತು.
ದಿನಕರರ ಚುಟುಕುಗಳು ಉಪ್ಪು, ಹುಳಿ ಖಾರ
ಅದರೊಳಡಗಿದೆ ಸತ್ವ ಜೀವನದ ಸಾರ
ಈ ಸಾರ ಹೀರಿದರೆ ಸರ್ವರೋದ್ಧಾರ
ಕೆಟ್ಟ ಪಿಡುಗುಗಳೆಲ್ಲ ಸರಿಯುವವು ದೂರ,
ಎಂದು ಬೀರಣ್ಣ ನಾಯಕರು ಹೇಳುತ್ತಾರಾದರು ನಮ್ಮ ಈ ಕನ್ನಡ ನಾಡು ಅವನ್ನೆಷ್ಟು ಗೌರವಿಸಬೇಕಿತ್ತೋ ಅಷ್ಟು ಗೌರವಿಸಲೇ ಇಲ್ಲ. ದಿನಕರರು ತಮ್ಮ ಕೊನೆಯವರೆಗೂ ಶಿಕ್ಷಣ, ಸಮಾಜಸೇವೆ ಎನ್ನುತ್ತಲೇ ನಾಡಿನ ಋಣ ತೀರಿಸಿದರೇ ಹೊರತೂ ನಾಡು ಅದನ್ನು ಗಮನಿಸಲಿಲ್ಲ. ಕೆಲವು ದಿನಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಹಿರಿಯ ಸಾಹಿತಿಯೊಬ್ಬರು ಹೇಳಿದಂತೆ ಉತ್ತರಕನ್ನಡ ಶಾಪಗ್ರಸ್ಥ ಜಿಲ್ಲೆ. ಇಲ್ಲಿಯ ಪ್ರತಿಭೆಗಳು ಹೊರಜಗತ್ತಿಗೆ ಅನಾವರಣಗೊಳ್ಳುವುದು ತೀರಾ ಅಪರೂಪದ ವಿಷಯ.
ಹಿರಿಯ ಸಾಹಿತಿಗಳಾದ ಸ. ಪ ಗಾಂವಕರರಿರಬಹುದು, ಮೊಟ್ಟ ಮೊದಲು ಗೀತಾಂಜಲಿಯನ್ನು ಕನ್ನಡಕ್ಕೆ ತಂದ ಹೆಮ್ಮೆಯಿರುವ ವಿ ವೆ ತೊರ್ಕೆ ಇರಬಹುದು, ದಿನಕರ ದೇಸಾಯಿಯವರಿರಬಹುದು, ಗೌರೀಶ ಕಾಯ್ಕಿಣಿಯವರಿರಬಹುದು, ಗಂಗಾಧರ ಚಿತ್ತಾಲ, ಯಶವಂತ ಚಿತ್ತಾಲ ಸಹೋದರರಿರಬಹುದು, ಶಾಂತಾರಾಮ ನಾಯಕರಿರಬಹುದು, ವಿಷ್ಣು ನಾಯ್ಕರಿರಬಹುದು, ವಿ. ಜೆ ನಾಯಕರಿರಬಹುದು, ಶಾಂತಾರಾಮ ಬಾಳೆಗುಳಿಯಾಗಿರಬಹುದು, ಮೊಟ್ಟಮೊದಲ ಸಾಮಾಜಿಕ ನಾಟಕ ಎಂದು ಗುರುತಿಸಲ್ಪಟ್ಟ ‘ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ’ ಬರೆದ ಸೂರಿ ವೆಂಕಟರಮಣ ಶಾಸ್ತ್ರಿಯವರಾಗಿರಬಹುದು, ಭಾಗೀರಥಿ ಹೆಗಡೆಯವರಾಗಿರಬಹುದು ಯಾರೇ ಆದರೂ ಜಿಲ್ಲೆಯವರನ್ನು ಇಡೀ ಕರ್ನಾಟಕದ ಸಾಹಿತ್ಯಲೋಕ ಗುರುತಿಸಿ ಮಾನ್ಯತೆ ನೀಡಿದ್ದು ತೀರಾ ಕಡಿಮೆಯೇ.
ಕರಾವಳಿ ಜಿಲ್ಲೆಗಳು ಎಂದು ಸರಕಾರದ ಮಟ್ಟದಲ್ಲಿ ಹೇಳುವಾಗ ಕೇವಲ ಉಡುಪಿ, ಮಂಗಳೂರು ಎಂಬ ಎರಡು ಜಿಲ್ಲೆಗಳನ್ನು ಮಾತ್ರ ಹೆಸರಿಸುತ್ತಾರೆಯೇ ಹೊರತೂ ಉತ್ತರಕನ್ನಡವೂ ಕರಾವಳಿ ಜಿಲ್ಲೆಯೆಂದು ಎಂದೂ ಪರಿಗಣಿಸಲ್ಪಡುವುದಿಲ್ಲ. ಮಲೆನಾಡಿನ ಜಿಲ್ಲೆಗಳ ಪಟ್ಟಿಯಲ್ಲಿ ಈ ಜಿಲ್ಲೆ ಇಲ್ಲವೇ ಇಲ್ಲ, ಬಯಲು ಸೀಮೆಯ ಪ್ರದೇಶ ಆಗುವುದೇ ಇಲ್ಲ. ಗೋವಾದೊಂದಿಗೆ, ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡು, ಗಡಿ ಸಮಸ್ಯೆಗಳಾಗಿ, ಕಾರವಾರ ಹಾಗೂ ಜೊಯ್ಡಾ ತಾಲೂಕುಗಳನ್ನು ಮಹಾರಾಷ್ಟ್ರಕ್ಕೆ ಅಥವಾ ಗೋವಾಕ್ಕೆ ಸೇರಿಸಿ ಎಂದು ಹುಯಿಲೆದ್ದರೂ ಇದು ಗಡಿ ಜಿಲ್ಲೆಯಲ್ಲ, ಭಾಷಾ ಅಲ್ಪಸಂಖ್ಯಾತವೆಂದು ಪರಿಗಣಿತವಾಗುವುದಿಲ್ಲ, ಉತ್ತರ ಕರ್ನಾಟಕದ ಭಾಗದಲ್ಲಿದ್ದರೂ ಉತ್ತರ ಕರ್ನಾಟಕದ ಏಳಿಗೆಯಲ್ಲಿ ಈ ಜಿಲ್ಲೆ ಲಕ್ಷಿತವಾಗುವುದಿಲ್ಲ, ದಕ್ಷಿಣ ಕರ್ನಾಟಕಕ್ಕೆ ಈ ಜಿಲ್ಲೆ ಸೇರುವುದಿಲ್ಲ, ಮುಂಬೈ ಕರ್ನಾಟಕದ ಪ್ರಾಂತ್ಯವಾಗಿದ್ದೂ ಈಗ ಉಳಿದ ಕರ್ನಾಟಕದ ಬೇರೆ ಜಿಲ್ಲೆಗಳಿಗೆ ಸಿಗುತ್ತಿರುವ ಹೈದರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ಸಿಗುತ್ತಿರುವ ಅವಕಾಶಗಳು, ಮೀಸಲಾತಿಗಳು ಇಲ್ಲಿನವರಿಗೆ ಅಲಭ್ಯ. ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆ ಹೇಗೆ ಯೋಗ್ಯತೆಯಿದ್ದೂ ಸರಕಾರದ ಕಣ್ಣಲ್ಲಿ ಕಾಡಿನ ಜಿಲ್ಲೆ, ಹಿಂದುಳಿದ ಜಿಲ್ಲೆ ಎನ್ನಿಸಿಕೊಂಡು ಮೂಲೆಗುಂಪಾಗಿದೆಯೋ ಹಾಗೆ ಜಿಲ್ಲೆಯ ಸಾಹಿತಿಗಳೂ ರಾಜಧಾನಿಯ ಸಾಹಿತ್ಯಿಕ ಗುಂಪುಗಾರಿಕೆಯಲ್ಲಿ ಮೂಲೆಗುಂಪಾಗಿಬಿಟ್ಟಿದ್ದಾರೆ.
ಈ ಕಾರಣಕ್ಕಾಗಿಯೇ ದಿನಕರ ದೇಸಾಯಿಯವರ ಚುಟುಕುಗಳು ಯಾವ ಎತ್ತರಕ್ಕೆ ಬೆಳೆದು ನಾಡಿನಾದ್ಯಂತ ಪಸರಿಸಬೇಕಿತ್ತೋ ಆ ಉನ್ನತಿಯನ್ನು ಪಡೆಯಲೇ ಇಲ್ಲ. ‘ಚುಟುಕು ಬ್ರಹ್ಮ’ ಎಂಬ ಹೆಸರು ಪಡೆದೂ ನಾಡಿನ ವಿಮರ್ಶಕರು ಈ ಚುಟುಕುಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಾಮುಖ್ಯತೆ ನೀಡದಿರುವುದು ವಿಷಾದಕರ. ಶಾಮ್ ಹುದ್ದಾರ, ವಿಡಂಬಾರಿ, ವಸಂತ ಬಾಂದೇಕರ, ದೇವಿದಾಸ ಸುವರ್ಣ ಮುಂತಾದವರು ಚುಟುಕುಗಳನ್ನು ಬರೆದೂ ಬೆಳಕಿಗೆ ಬರದೇ ಈಗ ಅದೇ ನಾಡಿನಿಂದ ದಿನಕರ ದೇಸಾಯಿಯವರ ಅಂಕೋಲೆಯ ಅಲಗೇರಿಗೆ ಸನಿಹದಲ್ಲಿಯೇ ಅಂದರೆ ಸುಮಾರು ೨೦-೨೫ ಕಿ.ಮಿ ದೂರದಲ್ಲಿಯೇ ಬೀರಣ್ಣ ನಾಯಕರು ಅರ್ಥವತ್ತಾದ ಚುಟುಕುಗಳನ್ನು ಬರೆಯುತ್ತಿದ್ದಾರೆ. ಆದರೆ ಇಂದಿಗೂ ಅವರು ಎಲೆಮರೆಯ ಕಾಯಿ. ಅವರ ದಿನಕ್ಕೊಂದು ಚುಟುಕುಗಳು ಎಲ್ಲರೂ ಓದಲೇಬೇಕಾದ ಕೃತಿ.
೩೬೫ ಚುಟುಕುಗಳಿರುವ ಈ ಕೃತಿಯ ವಿಷಯ ವೈವಿಧ್ಯದ ಹರವು ಅಪಾರವಾದದ್ದು. ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಂತಿರುವ ಈ ಪುಸ್ತಕದ ವಿಷಯದ ವ್ಯಾಪ್ತಿ ಮಾತ್ರವಲ್ಲ, ಚುಟುಕದ ಆಳ ಕೂಡ ನಮ್ಮನನ್ನು ಸೆಳೆಯುತ್ತದೆ.
ಶಿಕ್ಷಣವು ಕಡ್ಡಾಯವಾಗಲೇಬೇಕು
ಸರ್ವರಿಂದಲೂ ಸರ್ವ ಸಹಕಾರಬೇಕು
ಪ್ರತಿಯೊಬ್ಬರೂ ಕಲಿಯೆ ಸೌಲಭ್ಯ ಉಚಿತ
ಕಲಿಯದಿರೆ ನಾಗರಿಕ ಸೌಲಭ್ಯ ಕಡಿತ
ಎನ್ನುವ ಸಾಲುಗಳು ಕಡ್ಡಾಯ ಶಿಕ್ಷಣದ ಮಹತ್ವವನ್ನು ಸಾರುತ್ತವೆ.
ಕಡ್ಡಾಯ ಶಿಕ್ಷಣ ಆಚರಣೆಗೆ ಬರಲೇಬೇಕು ಎನ್ನುವುದು ಕವಿಯ ಆಶಯ. ಒಂದುವೇಳೆ ಕಲಿಯದೇ ಹೋದರೆ ಅವರ ಎಲ್ಲ ನಾಗರಿಕ ಸೌಲಭ್ಯಗಳನ್ನು ಕಡಿತಗೊಳಿಸಲಿ ಎನ್ನುವ ಇಂಗಿತ ಇವರದ್ದು. ಶಿಕ್ಷಣದಿಂದಲೇ ಎಲ್ಲವನ್ನೂ ಪಡೆಯಬಹುದು ಎಂಬ ನಂಬಿಕೆಯಿರುವ ಬೀರಣ್ಣ ನಾಯಕರು ಮೂಲತಃ ಶಿಕ್ಷಕರು. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಉತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿಯನ್ನೂ ಪಡೆದು ಶಿಕ್ಷಕರಾಗಿಯೇ ನಿವೃತ್ತರಾದವರು.
ಹೀಗಾಗಿ ಶಿಕ್ಷಣ ಇಲಾಖೆಯ ಒಳಸುಳಿಗಳ ಬಗ್ಗೆ ನಿಖರ ಮಾಹಿತಿ ಹೊಂದಿದವರು. ಹೀಗಾಗಿಯೇ,
ಇಬ್ಬರೊಂದೇ ದಿವಸ ನೌಕರಿಗೆ ಸೇರಿದರು
ಅವರು ಫಾರೆಸ್ಟು ಗಾರ್ಡು ಇವರು ಶಿಕ್ಷಕರು
ಭಡತಿ ಹೊಂದುತ ಅವರು ಈಗ ರೇಂಜರ್ರು
ಇವರೀಗಲೂ ಅದೇ ಶಾಲೆ ಮಾಸ್ತರ್ರು.
ಬಹುಶಃ ಶಿಕ್ಷಣ ಇಲಾಖೆಯಲ್ಲಿದ್ದವರಿಗೆ ಗೊತ್ತಿದೆ. ಇದು ಭಡ್ತಿ ಸಿಗದ ನಿಂತಲ್ಲೇ ನಿಂತು ಕೊಳೆತು ಹೋಗುವ ಇಲಾಖೆ ಎಂಬುದು. ಎಷ್ಟು ಓದಿದರೇನು? ಎಷ್ಟು ಎಂ.ಎ ಪದವಿ ಪಡೆದರೇನು? ಪಿಎಚ್.ಡಿ ಮಾಡಿದರೇನು? ಶಿಕ್ಷಕರಾದವರು ಶಿಕ್ಷಕರಾಗಿಯೇ ನಿವೃತ್ತರಾಗಬೇಕೆ ಹೊರತು ಅವರಿಗೆ ಪದೋನ್ನತಿ ಸಿಗುವುದು ದುರ್ಲಭ. ಹೆಚ್ಚೆಂದರೆ ಪ್ರಾತಮಿಕಶಾಲಾ ಶಿಕ್ಷಕರಿಗೆ ಮುಖ್ಯೋಪಾದ್ಯಾಯ ಹುದ್ದೆಗೆ ಭಡ್ತಿ ಹೊಂದಬಹುದು, ಅದಕ್ಕಿಂತ ಒಂದು ಹೆಜ್ಜೆ ಮುಂದುವರೆದು ಪ್ರೌಢಶಾಲೆ ಶಿಕ್ಷಕರಾಗಬಹುದು. ಇನ್ನು ಹೈಸ್ಕೂಲು ಶಿಕ್ಷಕರಿಗೆ ನಿವೃತ್ತಿಯ ಅಂಚಿನಲ್ಲಿ ಮುಖ್ಯೋಪಾಧ್ಯಾಯ ಹುದ್ದೆಗೆ ಪದೋನ್ನತಿ ದೊರಕಿದರೆ ಅದು ಅವರ ಸೌಭಾಗ್ಯ. ಎಂ.ಎ. ಎಂ.ಇಡಿಗಳ ಮಾಡಿದ್ದೇವೆ ಎಂದು ಹೇಳಿಕೊಂಡು ಹೆಸರಿನ ಮುಂದೆ ನಮೂದಿಸಿಕೊಳ್ಳಲಷ್ಟೇ ಲಾಯಕ್ಕು.
ವೃತ್ತಿಯಲ್ಲಿರುವಾಗ ಮುಂದೆ ಓದುತ್ತೇನೆಂದರೂ ಅದಕ್ಕೆ ಹತ್ತಾರು ಅಡೆತಡೆಗಳು, ಲೆಕ್ಕವಿಲ್ಲದಷ್ಟು ಇಲಾಖಾ ನಿಬಂಧನೆಗಳು. ಅದನ್ನೆಲ್ಲ ಪೂರೈಸುವ ಹೊತ್ತಿಗೆ ಮುಂದಿನ ಓದು ಓದಿ ಸಾಧಿಸುವುದೇನಿದೆ ಎಂಬ ತೀರ್ಮಾನಕ್ಕೆ ಬಂದು ತಟಸ್ಥರಾಗುವವರೇ ಅಧಿಕ. ನಾಲ್ಕೇ ಸಾಲುಗಳಲ್ಲಿ ಈ ಎಲ್ಲ ಒಳಸುಳಿಗಳನ್ನು ಹಿಡಿದಿಟ್ಟು ಇಲಾಖೆಯ ಕುರುಡುತನಕ್ಕೆ ಕನ್ನಡಿ ಹಿಡಿದಿಡುವ ಪರಿ ಮೆಚ್ಚಬೇಕಾದುದ್ದೇ. ಯಾಕೆಂದರೆ ಶಿಕ್ಷಕರದ್ದು ಲಂಚ ಪಡೆಯುವ ಇಲಾಖೆಯಲ್ಲ. ಮುಕ್ಕಾಲು ಭಾಗ ಶಿಕ್ಷಕರು ಲಂಚಕೊಡುವುದನ್ನು ಸಹಿಸುವವರೂ ಅಲ್ಲ. ಆದರೆ ಕೆಲವೇ ಕೆಲವು ಶಿಕ್ಷಕರು ಮಾಡುವ ತಪ್ಪನ್ನು ಇಡೀ ಇಲಾಖೆಯ ಮೇಲೆ ಹೊರಿಸಿ, ಇಡೀ ಶಿಕ್ಷಕ ಲೋಕವೇ ತಲೆತಗ್ಗಿಸುವಂತೆ ಮಾಡುವಲ್ಲಿ ಈ ಸಮಾಜ, ಮಾಧ್ಯಮಗಳು ಸಿದ್ಧಹಸ್ತರು. ಆದರೆ ಸದಾ ಲಂಚದಲ್ಲೇ ಮುಳುಗಿದ್ದು, ಭ್ರಷ್ಟಾಚಾರದ ಪಾಪಕೂಪದಲ್ಲಿರುವವರ ಕುರಿತು ಒಂದೂ ಮಾತನಾಡುವುದಿಲ್ಲ ಈ ಸಮಾಜ ಹಾಗೂ ಮಾಧ್ಯಮಗಳು.
ಯಾಕೆಂದರೆ,
ನೌಕರಿಗೆ ಸೇರುವಾಗನಿತ್ತು ಲಂಚ
ಮರಳಿ ಪಡೆಯಲು ಈಗ ಕೇಳುವನು ಕೊಂಚ
ಲಂಚ ನೀಡಿದರೆ ಆಗುವುದೆಲ್ಲ ಕೆಲಸ
ಜೊತೆಗೆ ಸಂಬಳ ಪಡೆದು ಜೀವನವು ಹರುಷ
ಎಂದು ಕೆಲಸಕ್ಕೆ ಸೇರುವಾಗಲೇ ಲಂಚ ನೀಡಿ ಸೇರಿಕೊಂಡವರಿಂದ ಜೀವನದಲ್ಲಿ ನಿಯತ್ತನ್ನು ನಿರೀಕ್ಷಿಸುವುದಾದರೂ ಹೇಗೆ?
ಯಾವಾಗಲೂ ಎಂಜಲನ್ನವುಂಡವಗೆ
ರುಚಿಸಲುಂಟೇನು ಬಿಸಿಬಿಸಿಯೂಟ ಅಡುಗೆ
ಒಂದೊಮ್ಮೆ ಸ್ವಂತ ಮಾಡಿದ್ದನ್ನು ತಿಂದ್ರೆ
ಅರಗಿಸಲು ತಾ ಪಡುವನು ಬಹಳ ತೊಂದ್ರೆ
ಎಂಬಂತಾಗುವುದು. ಎಂಜಲೆಲೆಯ ಮೃಷ್ಟಾನ್ನವನ್ನು ಸವಿದವರಿಗೆ ಸ್ವತಃ ಮಾಡಿಕೊಂಡ ಬಿಸಿಬಿಸಿಯಾದ ಗಂಜಿಯ ಸವಿ ಹೇಗೆ ತಿಳಿದೀತು? ಬರೀ ಗಂಜಿ ಉಪ್ಪಾದರೂ ಸಾಕು, ಸ್ವಾಭಿಮಾನದಿಂದ ಬದುಕುವ ನಿಯತ್ತು ಲಂಚ ತಿಂದವರಿಗೆ ಇರಲು ಸಾಧ್ಯವೇ?
ದೇಶದ ಅಭಿವೃದ್ಧಿ ಇಂತಹ ಸಗಣಿ ತಿನ್ನುವವರಿಂದ ಆಗುವುದೇ?
ಲಂಚ ಕೊಟ್ಟರೆ ಮಾತ್ರ ಫೈಲು ಓಡುವುದು
ಕೊಡದಿದ್ದರದು ಕಸದ ಬುಟ್ಟಿ ಸೇರುವುದು
ಸಂಬಳವ ಪಡೆದು ಪೀಡಿಸುವ ನೌಕರರು
ಮುಂದೊಂದು ದಿವಸ ಕಣ್ಣೀರು ಸುರಿಸುವರು
ಎಂದು ಹಿಡಿಶಾಪ ಹಾಕುತ್ತಾರೆ. ಹೆಚ್ಚಿನ ಚುಟುಕುಗಳು ಇಂತಹ ಲಂಚಾವತಾರದ ದಶಗುಣಗಳ ವರ್ಣನೆಯಲ್ಲಿ, ಭ್ರಷ್ಟಾಚಾರದ ಹತ್ತಾರು ವಿರಾಟ್ ರೂಪವನ್ನು ತೆರೆದಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ದಿನಕರರು ತಮ್ಮ ಕೊನೆಯವರೆಗೂ ಶಿಕ್ಷಣ, ಸಮಾಜಸೇವೆ ಎನ್ನುತ್ತಲೇ ನಾಡಿನ ಋಣ ತೀರಿಸಿದರೇ ಹೊರತೂ ನಾಡು ಅದನ್ನು ಗಮನಿಸಲಿಲ್ಲ. ಕೆಲವು ದಿನಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಹಿರಿಯ ಸಾಹಿತಿಯೊಬ್ಬರು ಹೇಳಿದಂತೆ ಉತ್ತರಕನ್ನಡ ಶಾಪಗ್ರಸ್ಥ ಜಿಲ್ಲೆ. ಇಲ್ಲಿಯ ಪ್ರತಿಭೆಗಳು ಹೊರಜಗತ್ತಿಗೆ ಅನಾವರಣಗೊಳ್ಳುವುದು ತೀರಾ ಅಪರೂಪದ ವಿಷಯ.
ಸ್ವಚ್ಛ ಮಾಡಲೆಂದೇ ಹುಟ್ಟಿದೆನು ನಾನು
ಈ ಕಾಯಕದಿ ಧನ್ಯ ಕಸಬರಿಗೆ ನಾನು
ಸುತ್ತಲಿನ ಪರಿಸರದ ಮಾಲಿನ್ಯಗಳನ್ನು
ಸ್ವಚ್ಛಗೊಳಿಸಾರೋಗ್ಯ ಭಾಗ್ಯ ನೀಡುವೆನು
ಎನ್ನುತ್ತ ಕಸರಬರಿಗೆ ಹೇಳುವ ಚುಟುಕವೂ ಕೂಡ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ, ಸಮಾಜದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿಯೇ ಮಾತನಾಡುತ್ತದೆ. ಇಡೀ ಸಮಾಜದ ಉನ್ನತಿಯಲ್ಲಿಯೇ ತಮ್ಮ ಶ್ರೇಯವನ್ನು ಕಾಣುವ ಹಿರಿಯಗುಣ ಇವರದ್ದು .
ಹೆರವಟ್ಟಿಯಲ್ಲೀಗ ನೆಲೆಸಿರುವೆ ನಾನು
ಹಿರೆಗುತ್ತಿಯನ್ನೆಂದಿಗೂ ಮರೆಯೆ ನಾನು
ನಿವೃತ್ತಿಯಾಗುತಲೆ ಸ್ಥಳ ಬದಲಿಸಿಹೆನು
ಆದರೆಂದಿಗೂ ನಾ ಹಿರೇಗುತ್ತಿಯವನು
ಮೂಲತಃ ಹಿರೇಗುತ್ತಿಯವರಾದ ಇವರು ನಿವೃತ್ತಿಯ ದಿನಗಳಲ್ಲಿಯೇ ಈ ಚುಟುಕು ಹವ್ಯಾಸವನ್ನು ಬೆಳೆಸಿಕೊಂಡವರು. ತಾನು ಸಾಹಿತಿಯಲ್ಲ ಎನ್ನುತ್ತಲೇ ಸಾಹಿತ್ಯದ ಒಳಸೂಕ್ಷ್ಮಗಳನ್ನು ಅರಿತವರು. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡು ದೊಡ್ಡ ಸಂಸಾರದ ಜವಾಬ್ದಾರಿಗಳನ್ನು ಹೆಗಲಮೇಲೆ ಹೊತ್ತುಕೊಂಡು ಸಹೋದರ ಸಹೋದರಿಯರನ್ನೆಲ್ಲ ದಡ ಸೇರಿಸಿದವರು.
ಇಪ್ಪತ್ತನೇ ವರ್ಷದಲ್ಲಿ ತಂದೆಯನು
ಕಳೆದುಕೊಂಡಸಹಾಯ ಸ್ಥಿತಿಯಲ್ಲಿ ತಾನು
ತಾಯಿ ಸಹಿತೊಡಹುಟ್ಟಿದವರನ್ನು ತನ್ನ
ದುಡಿಮೆಯಲಿ ಸಹಿಸಿ ಸುಸ್ತಾದ ಬೀರಣ್ಣ
ಎನ್ನುತ್ತ ತನ್ನ ಜೀವನದ ಕಷ್ಟಗಳನ್ನೂ ಚುಟುಕದಲ್ಲಿ ಜೋಡಿಸಿದ್ದಾರೆ. ಜಾತಿ ಬೇಧ ಮಾಡದ ಕುರಿತೂ ಅವರು ತಮ್ಮ ಚುಟುಕದಲ್ಲಿ ನಮೂದಿಸಿದ್ದಾರೆ.
ನಾನು ನಾಡೋರವನು, ಕ್ಷಾತ್ರ ಗುಣದವನು
ಎಲ್ಲರೊಳಗೊಂದಾಗಿ ಬೆರೆತು ಬಾಳುವೆನು
ಜಾತಿ, ಭೇದವ ಮಾಡದೇ ಸಾಮರಸ್ಯ
ದಿಂದ ಬಾಳುವುದೆಮ್ಮ ಜೀವನ ರಹಸ್ಯ
ಎಂದಿದ್ದಾರೆ. ಜಾತಿ ಪದ್ಧತಿನ್ನು ತೀವ್ರವಾಗಿ ವಿರೋಧಿಸುತ್ತ ಸಾಮರಸ್ಯದ ಬಾಳ್ವೆಗೆ ಒತ್ತುಕೊಟ್ಟವರು ಇವರು. ಸಮಾಜದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಅದಕ್ಕೆ ತಕ್ಷಣ ಸ್ಪಂದಿಸುವ ಗುಣ ಇವರದ್ದು ಹೀಗಾಗಿ ಕುಮಟಾದಲ್ಲಿ ಗಾಂಧಿ ಪ್ರತಿಮೆಯ ನಿರ್ಮಾಣಕ್ಕೆ ವಿರೋಧ ವ್ಯಕ್ತವಾದಾಗ ತಮ್ಮ ಚುಟುಕುಗಳ ಮೂಲಕವೇ ಖಂಡಿಸಿದ್ದರು. ನಿತ್ಯಾನಂದ ಸ್ವಾಮಿಯ ರಾಸಲೀಲೆಗಳಿಗೆ ಹೇಸಿ,
ಕಾವಿಯುಡುಗೆಯಲಿ ನಿತ್ಯಾನಂದ ಸ್ವಾಮಿ
ಮುಗ್ಧ ಭಕ್ತರ ವಂಚಿಸಿದ ವಿಕೃತಕಾಮಿ
ಬಹಿರಂಗದಲಿ ಸಾಧು ಸಭ್ಯತೆಯ ವೇಷ
ಧ್ಯಾನಪೀಠದಲಿ ರಂಜಿತಳ ಜೊತೆ ಸರಸ
ಎಂದು ಯಾವುದೇ ಮುಚ್ಚುಮರೆಯಿಲ್ಲದೆ ಸತ್ಯವನ್ನು ಬಿಚ್ಚಿಡುತ್ತಾರೆ. ಕೃತಿಯ ಇಂತಹ ತೀಕ್ಷ್ಣ ಬಾಣಗಳಿವೆ. ಮೊನಚು ಹಾಸ್ಯವಿದೆ. ಇರಿಯದೆಯೂ ಇರಿಯುವ ಗುಣವಿರುವ ಸಾಲುಗಳಿವೆ. ಮುಟ್ಟಿ ನೋಡಿಕೊಳ್ಳಬೇಕಾದ ಸಾಲುಗಳಿವೆ.
ಚುಟುಕು ಬ್ರಹ್ಮರು ಇವರು ದಿನಕರ ದೇಸಾಯಿ
ಕುಡಿಸಿದರು ಹಲವರಿಗೆ ಬೇವಿನ ಕಷಾಯಿ
ಚುಟುಕು ಬೇವಿನ ಕಹಿ ಕಷಾಯದೆಸೆಯಿಂದ
ಕೆಟ್ಟ ಕ್ರಿಮಿಗಳ ಹುಟ್ಟು ಅಡಗಿಸಿದೆನೆಂದ
ಎಂದು ದಿನಕರರನ್ನು ನೆನೆಯುತ್ತ ತಮ್ಮ ಚುಟುಕುಗಳಲ್ಲೂ ಬೇವಿನ ಕಷಾಯ ತುಂಬಿಸಿ ಸಮಾಜದ ರೋಗಕ್ಕೆ ಮದ್ದೆರೆಯುವ ಪ್ರಯತ್ನ ಮಾಡಿದ್ದಾರೆ. ಹಬ್ಬಹರಿದಿನಗಳ ಕುರಿತಾಗಿ, ಬದುಕಿನ ಖುಷಿಯ ಕುರಿತಾಗಿ, ಜೀವನದ ಸಂತಸದ ಸಮಯಗಳ ಬಗ್ಗೆಯೂ ಇವರ ಚುಟುಕಗಳಿವೆ. ಬದುಕೆಂದರೆ ಕೇವಲ ದುಃಖಗಳ ಆಗರವಲ್ಲ ಎಂಬುದನ್ನು ಅರಿತವರು ಇವರು. ಜೀವನದಲ್ಲಿ ಎಲ್ಲರೂ ಸಮಾನರು ಎನ್ನುವ ತತ್ವವನ್ನು ಪ್ರತಿಪಾದಿಸುತ್ತಲೇ ಬದುಕಿದವರು. ಇಂದಿಗೂ ಊರನಾಗರಿಕರ ಪ್ರೀತಿ ವಿಶ್ವಾಸ ಉಳಿಸಿಕೊಂಡವರು.
ಮೇಲ್ಜಾತಿ, ಕೀಳ್ಜಾತಿ, ಆ ಜಾತಿ, ಈ ಜಾತಿ
ಯಾಕಿಂಥ ಮೇಲರಿಮೆ, ಕೀಳರಿಮೆ ನೀತಿ
ಇರುವುದೊಂದೇ ಜಾತಿ ಅದು ಮನುಜ ಜಾತಿ
ಮಾನವೀಯತೆಯೊಂದೇ ಪರಮೋಚ್ಛ ನೀತಿ
ಬದುಕಿನುದ್ದಕ್ಕೂ ಮಾನವೀಯತೆಯ ಸಹಬಾಳ್ವೆಯಲ್ಲಿ ಬದುಕಿದ ಬೀರಣ್ಣ ನಾಯಕರು ಈಗಾಗಲೇ ಆರು ಸಂಕಲನಗಳಲ್ಲಿ ನಾಲ್ಕು ಚುಟುಕು ಸಂಕಲನವನ್ನು ಪ್ರಕಟಿಸಿದ್ದರೂ ಇಂದಿಗೂ ಕನ್ನಡ ನಾಡಿನ ಚುಟುಕುಲೋಕ ಗುರುತಿಸಲು ಹಿಂದೇಟು ಹಾಕುತ್ತಿರುವ ಒಳ ಮರ್ಮ ಅರ್ಥವಾಗುತ್ತಿಲ್ಲ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಒಂದು ಹಂತಕ್ಕೆ ಗುರುತಿಸಿದೆಯಾದರೂ ಇಂತಹ ಹಿರಿಯ ಕವಿಗಳಿಗೆ ಸಿಗಬೇಕಾದ ಮಾನ್ಯತೆ ನಾಡಿನಾದ್ಯಂತ ಸಿಗಲೇಬೇಕಾದುದು ಇಂದಿನ ತುರ್ತು ಅಗತ್ಯ.
(ಪುಸ್ತಕ: ದಿನಕ್ಕೊಂದು ಬೀರಣ್ಣನ ಚುಟುಕುಗಳು, ಲೇಖಕರು: ಬೀರಣ್ಣ ಮೋನಪ್ಪ ನಾಯಕ, ಬೆಲೆ-೬೦/-, ಪ್ರಕಾಶನ: ಸರಸ್ವತಿ ಪ್ರಕಾಶನ, ಕರ್ಕಿ)
ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ.
ಸಾಹಿತ್ಯ ಲೋಕದ ವನಸುಮದ ಪರಿಮಳ ಈ ಪರಿಚಯದ ಮೂಲಕ ಇನ್ನಷ್ಟು ಘಮಘಮಿಸಿದೆ
ವಂದನೆಗಳು