ಸಂದರ್ಶನ ಚೆನ್ನಾಗಿ ಮೂಡಿ ಬಂತು. ಬಾಲಮುರಳಿ ಸಂಗೀತದ ಬಗ್ಗೆ, ತಮ್ಮ ಬಗ್ಗೆ ಮಾತ್ರವಲ್ಲ, ಉಳಿದ ಸಂಗೀತಗಾರರ ಬಗ್ಗೆ ಕೂಡ ಅದ್ಭುತ ಒಳನೋಟಗಳನ್ನು ನೀಡಿದರು. ಮಾತು ಮಾತಿಗೂ ಹಾಡುತ್ತಿದ್ದರು. ಕಣ್ಣುಗಳಲ್ಲಿ ಅದೇನು ತಲ್ಲೀನತೆ. ಮೈಮರೆತು ಇನ್ನೊಂದು ಲೋಕಕ್ಕೆ ಹೋಗಿ ಕೇಳುಗರನ್ನೂ, ವೀಕ್ಷಕರನ್ನೂ ಇನ್ನೊಂದು ಲೋಕಕ್ಕೆ ಕರೆದೊಯ್ಯುವ ಉತ್ಸುಕತೆ. ಮಾತುಕತೆಯ ಉದ್ದಕ್ಕೂ. ಬಾಲಮುರಳಿಯವರ ಮುಖದ ಕಾಂತಿ ಎಷ್ಟೊಂದು ಸಲ ಬದಲಾಯಿತು ಎಂಬುದು ಕಪೂರ್ ಮೆಚ್ಚಿನ ಕ್ಯಾಮೆರಾಮನ್ ಥಾಮಸ್‌ಗೆ ಲೆಕ್ಕಕ್ಕೆ ಸಿಗಲೇ ಇಲ್ಲ.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ “ಅಕಾಡೆಮಿ ಒಲ್ಲೆನೆಂದ ಬಾಲಮುರಳಿ ಕೃಷ್ಣ” ನಿಮ್ಮ ಓದಿಗೆ
ರಾಮ ಕಪೂರ್ ಪ್ರಸಿದ್ಧ ಭಾರತೀಯರನ್ನು ಆತ್ಮೀಯವಾಗಿ ಸಂದರ್ಶಿಸುವುದಕ್ಕೆ ಪ್ರಸಿದ್ಧರು. ಅವರ ಪ್ರಶ್ನೆಗಳು, ಗಣ್ಯರಿಂದ ಪಡೆಯುತ್ತಿದ್ದ ಉತ್ತರ, ಸಂದರ್ಶನದ ಸಮಯದಲ್ಲಿ ತೋರುತ್ತಿದ್ದ ಪ್ರೀತಿ ಮತ್ತು ಘನತೆ, ಸಂದರ್ಶನಕ್ಕೆ ಮುಂಚೆ ಮಾಡುತ್ತಿದ್ದ ಸಂಶೋಧನೆ, ಕ್ಷೇತ್ರ ಕಾರ್ಯ, ಎಲ್ಲವೂ ಒಂದಕ್ಕಿಂತ ಒಂದು ಮನಮುಟ್ಟುವಂತಿದ್ದವು. ಈ ಮಾಲಿಕೆಯಲ್ಲೇ ಕಪೂರ್ ಪ್ರಸಿದ್ಧ ಸಂಗೀತಗಾರ, ಸಂಗೀತಜ್ಞ ಬಾಲಮುರಳಿಯವರನ್ನು ಕೂಡ ಸಂದರ್ಶಿಸಿದ್ದು. ಬಾಲಮುರಳಿಯವರದು ಕೆಲವು ಷರತ್ತುಗಳಿದ್ದವು. ಸಂದರ್ಶನದ ಒಂದು ಭಾಗ ಮದ್ರಾಸಿನ ಮೈಲಾಪುರದಲ್ಲಿರಬೇಕೆಂದು, ತರಕಾರಿ ಸಿಪ್ಪೆ, ಬಾಳೆ ಎಲೆ, ಕೊಳೆತ ಹಣ್ಣು ಹಂಪಲು, ಇದರಿಂದೆಲ್ಲ ರಾಡಿಯಾದ ಬೀದಿ, ಪೂಜಾ ಸಾಮಗ್ರಿಗಳನ್ನು ಮಾಡುವ ಅಂಗಡಿ ಬೀದಿ, ಇವೆಲ್ಲವುಗಳ ಮಧ್ಯೆ ಇರುವ ಹಳೆಕಾಲದ ವಠಾರದ ಮನೆಗಳು, ಇಂತಹ ಮನೆಯ ಟೆರೇಸ್ ಎಲ್ಲ ಸಂದರ್ಶನದ ಸಮಯದಲ್ಲಿ ಚೀತ್ರೀಕರಣವಾಗಬೇಕೆಂಬ ಷರತ್ತನ್ನು ಕಪೂರ್ ಸಂತೋಷದಿಂದ ಒಪ್ಪಿಕೊಂಡರು. ಕ್ಯಾಮರಾಮನ್, ಧ್ವನಿ ಮುದ್ರಿಸುವವರಿಗೆ ಇದೆಲ್ಲ ಇಷ್ಟವಾಗಲಿಲ್ಲ. ಆದರೆ ಒಮ್ಮೆ ಬಾಲಮುರಳಿ ಮಾತನಾಡಲು ಶುರು ಮಾಡಿದ ಮೇಲೆ, ಸಂದರ್ಶನದ ಭಾಗವಾಗಿ ಒಂದಿಷ್ಟು ಆಲಾಪನೆ ಮಾಡಿದ ಮೇಲೆ, ಆ ಭಾವತೀವ್ರ ಧ್ವನಿಗೆ ಮರುಳಾಗಿ ತಕರಾರನ್ನೆಲ್ಲ ಮರೆತುಬಿಟ್ಟರು. ಕಪೂರ್ ತಂಡ ಎಂತೆಂತಹ, ಎಷ್ಟೆಷ್ಟು ಭಾರತೀಯರನ್ನು ಸಂದರ್ಶಿಸಿದೆ. ಸಂದರ್ಶನದ ಸಮಯದಲ್ಲಿ ಬಾಲಮುರಳಿಯವರಷ್ಟು ಮುಗ್ಧರಾಗಿ ನಕ್ಕವರನ್ನು ಅವರು ಇದುವರೆಗೆ ನೋಡಿಯೇ ಇರಲಿಲ್ಲ.
ವಠಾರದ ಮೇಲ್ಭಾಗದಲ್ಲಿದ್ದ ಟೆರೇಸ್‌ಗೆ ಹೋಗಬೇಕಿತ್ತಲ್ಲ, ಹೋಗುವ ಮಾರ್ಗದಲ್ಲೇ ತುಂಬಾ ಕಸ, ಕೊಚ್ಚೆ. ಒಂದೆರಡು ಕಡೆ ಇಲ್ಲಿ ತಿಂಗಳಿಂದ ನೀರು ನಿಂತಿರಬಹುದೆಂಬ ಅನುಮಾನ ಕೂಡ ಬಂತು. ಅಸಹ್ಯವಾಯಿತು. ಒಂದೆರಡು ಕಡೆ ಪ್ಯಾಂಟ್ ಎತ್ತಿಕೊಂಡು ದಾಟಬೇಕಾಯಿತು. ಟೆರೇಸಿಗೆ ಹೋಗುವ ಮೆಟ್ಟಿಲುಗಳು ತುಂಬಾ ಕಡಿದಾಗಿದ್ದವು. ಎರಡೂ ಪಾದಗಳನ್ನು ಒಟ್ಟಿಗೇ ಇಡಲು ಕಷ್ಟವಾಗುತ್ತಿತ್ತು. ಇಂತಹ ವಠಾರದ ಗೋಡೆಯ ಮೇಲೂ ಕರೂರಿನ ಹಲ್ಲುಪುಡಿ, ಕುಂಭಕೋಣಂನ ನಶ್ಯ ಕಂಪನಿಗಳ ಜಾಹಿರಾತು. ಟೆರೇಸ್ ಮೇಲಿನ ತಂತಿಯಲ್ಲಿ ಒಣಗಿ ಹಾಕಿದ್ದ ಬಟ್ಟೆಗಳು. ಒಂದಿಷ್ಟು ಬಟ್ಟೆಗಳು ನೆಲದ ಮೇಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಒಂದು ಮೂಲೆಯಲ್ಲಿ ಸಂಡಿಗೆ, ಹಪ್ಪಳ, ಮೆಣಸಿನಕಾಯಿಯಯನ್ನು ಒಣಗಿಹಾಕಿ ಅದರ ಮುಂದೆ ಸಣ್ಣ ಕಡ್ಡಿ ಇಟ್ಟುಕೊಂಡು ಕಾಯುತ್ತಾ ಕುಳಿತ ಹೆಂಗಸರು, ಮಕ್ಕಳು. ಇನ್ನೊಂದು ತುದಿಯಲ್ಲಿ ಲಂಗ ಜಂಪರ್ ಹಾಕಿಕೊಂಡು ಕುಂಟೋಬಿಲ್ಲೆ ಆಡುತ್ತಿರುವ ಹೆಣ್ಣುಮಕ್ಕಳು. ಒಂದು ಮನೆಯಿಂದ ಇನ್ನೊಂದು ಮನೆಗೆ ಜಗಿದಾಗ ಜಿಗಿಯುತ್ತಾ ಕುಲುಕಾಡುತ್ತಿದ್ದ ಉದ್ದನೆಯ ಎರಡು ಜಡೆ. ಬಾಲಮುರಳಿ ಅಲ್ಲಿಗೇ ಕಾಫಿ, ಮಿಕ್ಸ್‌ಚರ್ ತರಿಸಿಕೊಟ್ಟರು. ತುಂಬಾ ಸಂತೋಷದಿಂದ ಪುಟಿಯುತ್ತಾ, ಗುನಗುನುತ್ತಾ, ಕಣ್ಣರಳಿಸುತ್ತಾ, ಎಲ್ಲರನ್ನೂ ತಮಾಷೆ ಮಾಡುತ್ತಾ, ಟೆರೇಸ್ ತುಂಬಾ ಓಡಾಡುತ್ತಿದ್ದರು. ಸಾರಾಂಶವೆಂದರೆ, ಸಂದರ್ಶನ ಚೆನ್ನಾಗಿ ಮೂಡಿ ಬಂತು. ಬಾಲಮುರಳಿ ಸಂಗೀತದ ಬಗ್ಗೆ, ತಮ್ಮ ಬಗ್ಗೆ ಮಾತ್ರವಲ್ಲ, ಉಳಿದ ಸಂಗೀತಗಾರರ ಬಗ್ಗೆ ಕೂಡ ಅದ್ಭುತ ಒಳನೋಟಗಳನ್ನು ನೀಡಿದರು. ಮಾತು ಮಾತಿಗೂ ಹಾಡುತ್ತಿದ್ದರು. ಕಣ್ಣುಗಳಲ್ಲಿ ಅದೇನು ತಲ್ಲೀನತೆ. ಮೈಮರೆತು ಇನ್ನೊಂದು ಲೋಕಕ್ಕೆ ಹೋಗಿ ಕೇಳುಗರನ್ನೂ, ವೀಕ್ಷಕರನ್ನೂ ಇನ್ನೊಂದು ಲೋಕಕ್ಕೆ ಕರೆದೊಯ್ಯುವ ಉತ್ಸುಕತೆ. ಮಾತುಕತೆಯ ಉದ್ದಕ್ಕೂ. ಬಾಲಮುರಳಿಯವರ ಮುಖದ ಕಾಂತಿ ಎಷ್ಟೊಂದು ಸಲ ಬದಲಾಯಿತು ಎಂಬುದು ಕಪೂರ್ ಮೆಚ್ಚಿನ ಕ್ಯಾಮೆರಾಮನ್ ಥಾಮಸ್‌ಗೆ ಲೆಕ್ಕಕ್ಕೆ ಸಿಗಲೇ ಇಲ್ಲ. ಸಂದರ್ಶನ ಮುಗಿಸಿದ ಬಾಲಮುರಳಿ ಹಕ್ಕಿಯಂತಾದರು – ಕುಳಿತಲ್ಲಿಂದಲೇ ಜಿಗಿದುಬಿಡುವರೇನೋ ಎಂದು ಕಪೂರ್-ಥಾಮಸ್ ಭಯಪಡುವಷ್ಟು. ಕಪೂರರಿಗೆ ಮನತುಂಬಿ ಬಂತು. ಬಾಲಮುರಳಿಯವರನ್ನೇ ಭಕ್ತಿಭಾವದಿಂದ ನೋಡುತ್ತಿದ್ದರು.
ಸಂದರ್ಶನ ಮುಗಿದ ಮೇಲೆ ಮತ್ತೆ ಕಾಫಿ ಸಮಾರಾಧನೆ. ಇಂತಹ ಕಲಾವಿದನಿಗೆ ಏನಾದರೂ ನೆರವು ನೀಡಬೇಕು, ಈತನ ಪ್ರತಿಭೆ, ಜ್ಞಾನ, ಎಲ್ಲವೂ ಸಂಪೂರ್ಣವಾಗಿ ಸಮಾಜಕ್ಕೆ ಸಿಗುವಂತೆ ಏನಾದರೂ ಅನುಕೂಲ ಮಾಡಿಕೊಡಬೇಕು ಎಂಬ ಭಾವನೆ ಉಕ್ಕಿ:
“ನೋಡಿ ಬಾಲಮುರಳಿಯವರೇ, ನಿಮ್ಮ ನಾಯಕತ್ವದಲ್ಲಿ, ನಿಮ್ಮ ಹೆಸರಿನಲ್ಲಿ ಒಂದು ದೊಡ್ಡ ಅಕಾಡೆಮಿ ಆಗಬೇಕು. ಬೃಹತ್ ಕ್ಯಾಂಪಸ್ ಬರಬೇಕು. ಒಳ್ಳೆ Recording ಸ್ಟುಡಿಯೋ ಇರಬೇಕು. ಸ್ಕಾಲರ್‌ಶಿಪ್, ಫೆಲೋಶಿಪ್ ಕೊಟ್ಟು ಪ್ರತಿಭಾವಂತರು ಯಾವಾಗಲೂ ನಿಮ್ಮೊಡನೆ ಇರುವಂತೆ ಮಾಡಬೇಕು. ಹತ್ತಾರು ಕಲಾವಿದರು ಇಲ್ಲಿಂದ ಮೂಡಿಬರಬೇಕು. ನೀವು ಒಪ್ಪಿಗೆ ಕೊಡಿ. ನಾನು ಎಲ್ಲ ಅನುಕೂಲ ಮಾಡಿಕೊಡುತ್ತೇನೆ, ಮಾಡಿಸಿಕೊಡುತ್ತೇನೆ” ಎಂದು ಪ್ರಾಂಜಲ ಭಾವದಿಂದ ನಿವೇದಿಸಿದರು. ಕಪೂರರ ಮನಸ್ಸಿನಲ್ಲಿ ಹರ್ಷ, ಪ್ರೀತಿ, ಸಮರ್ಪಣೆ, ಎಲ್ಲವೂ ಉಕ್ಕುತ್ತಿತ್ತು.
ಸಂತೋಷದಿಂದ ಕಾಫಿಯ ಕೊನೆಯ ಗುಟುಕನ್ನು ಕುಡಿಯುತ್ತಿದ್ದ ಬಾಲಮುರಳಿ, ಹೃತ್ಪೂರ್ವಕವಾಗಿ ಬಾಯಿತುಂಬಾ ನಗುತ್ತಾ, ಎರಡೂ ಕೈಗಳನ್ನು ಅಲ್ಲಾಡಿಸುತ್ತಾ, ಮೆಚ್ಚುಗೆಯ ಭಾವದಿಂದ ಕಪೂರರ ಕಡೆ ನೋಡುತ್ತಾ:
“ಅಯ್ಯೋ, ಅಯ್ಯೋ. ಅದೆಲ್ಲ ಏನೂ ಬೇಡ. ನನ್ನ ಮೇಲೆ ಸಂಗೀತದ ಮೇಲೆ ನಿಜವಾಗಿ ಪ್ರೀತಿ ಇದ್ದರೆ, ಖಂಡಿತ ಹೀಗೆಲ್ಲ ಮಾತನಾಡಬೇಡಿ” ಎಂದು ಕಪೂರರ ಎರಡೂ ಕೈಗಳನ್ನು ಹಿಡಿದುಬಿಟ್ಟರು, ಅಂಗಲಾಚುವಂತೆ. ಕಪೂರರ ಮುಖ ನೋಡಿದರು. ಕಪೂರರಿಗೆ ಏನೂ ಅರ್ಥವಾಗಲಿಲ್ಲ. ಕಕ್ಕಾಬಿಕ್ಕಿಯಾಗಿ ಬಾಲಮುರಳಿ ಕಡೆಯೇ ನೋಡಿದರು. ಕಲಾವಿದರು ಸಾವರಿಸಿಕೊಳ್ಳುತ್ತಾ ಖಚಿತವಾದ, ಸಾವಧಾನದ ಧ್ವನಿಯಲ್ಲಿ:
“ತಪ್ಪು ತಿಳಿಯಬೇಡಿ ಕಪೂರ್ ಸಾಹೇಬರೇ. ನೀವು ಹೇಳಿದ ಹಾಗೆ ಮಾಡಿದರೆ ಹಾಡುಗಾರರು ಮೂಡಿ ಬರೋಲ್ಲ. ದೊಡ್ಡ ಕಟ್ಟಡ, ಪವರ್‌ಫುಲ್ ಅಕಾಡೆಮಿ, ಸುಸಜ್ಜಿತ ಸ್ಟುಡಿಯೋ ಬರುತ್ತೆ, ಅಷ್ಟೇ.
“ಹಾಡುಗಾರರು ಮೂಡಿ ಬರಬೇಕಾದರೆ, ವಠಾರದ ಮನೆಗಳು ಇರಬೇಕು. ಧೂಳು, ಕೊಚ್ಚೆ ತುಂಬಿದ ರಸ್ತೆಗಳಿರಬೇಕು. ಕಿಕ್ಕಿರಿದು ತುಂಬಿರುವ ವಠಾರಗಳಲ್ಲಿ, ಇಕ್ಕಟ್ಟಾದ ಮನೆಗಳಿರಬೇಕು. ಸಂಗೀತದ ಅಭ್ಯಾಸ ಮಾಡಲು, ಕೂತುಕೊಳ್ಳಲು ಜಾಗ ಸಿಗುವುದೇ ಕಷ್ಟವಿರಬೇಕು. ಬಡತನವಿರಬೇಕು ಅಂತ ನಾನು ಹೇಳೋಲ್ಲ. ಆದರೆ ಸುಖ, ಸಂಪತ್ತು, ವೈಭೋಗ ಅಂತು ಖಂಡಿತ ಇರಬಾರದು. ಆದರೆ ಜೀವನದ ಮೇಲೆ ಆಸೆ ಇರಬೇಕು. ಈಗ ಇಲ್ಲಿ ಒಡಾಡ್ತಾ ಇರೋರೆಲ್ಲ ಸುಮಾರಾದ ಬಟ್ಟೆಯ ಲಂಗ ಜಂಪರ್ ಹಾಕಿಕೊಂಡು ಸಂತೋಷವಾಗಿ ನಗುನಗುತ್ತಾ ಓಡಾಡ್ತಾರಲ್ಲ, ಅಂತಹ ಹೆಣ್ಣು ಮಕ್ಕಳು ಇರಬೇಕು. ಅವರು ಸಂಗೀತ ಕಲೀಬೇಕು, ಕಲೀತಾರೆ. ಅವರಿಗೆ ಸಂಗೀತ ಚೆನ್ನಾಗಿ ಕೂಡಿ ಬರುತ್ತೆ. ಈ ವಠಾರ, ಈ ಟೆರೇಸ್ ಎಲ್ಲ ಹೀಗೇ ಇರುವಂತೆ ನೋಡಿಕೊಳ್ಳಿ. ಬೇರೆ ಯಾರಾದರೂ ಶ್ರೀಮಂತರ ಕೈಗೆ ಈ ಕಟ್ಟಡ ಹೋದರೆ, ಎಲ್ಲ ನಾಶವಾಗಿಬಿಡುತ್ತೆ. ದೊಡ್ಡ ಅಪಾರ್ಟ್‌ಮೆಂಟ್ ಬರುತ್ತೆ. ಮಾಲ್ ಬರುತ್ತೆ. ಈಗ ಇಲ್ಲಿ ಇರುವರು, ಓಡಾಡ್ತಾ ಇರುವವರು, ಬಟ್ಟೆ ಒಣಗಿ ಹಾಕುತ್ತಿರುವವರು, ಕುಂಟೋಬಿಲ್ಲೆ ಆಡುತ್ತಿರುವವರು, ಇದನ್ನೆಲ್ಲ ಮಾಡುವಾಗ ಹಾಡು ಗುನುಗುತ್ತಿರುವವರು, ಯಾರೂ ಇರೋಲ್ಲ. ಸಂಗೀತದ ಮಾತಂತೂ ಇಲ್ಲವೇ ಇಲ್ಲ ಬಿಡಿ.”
ಮಾತು ಮುಗಿಸುವ ಹೊತ್ತಿಗೆ ಬಾಲಮುರಳಿಯವರ ಧ್ವನಿ ತುಂಬಾ ಮೃದುವಾಗಿತ್ತು. ಕಣ್ಣುಗಳಲ್ಲಿ ಯಾಚನೆ. ಕಪೂರರನ್ನೇ ಕಣ್ಣುಗಳಲ್ಲಿ ತುಂಬಿಕೊಂಡರು. ನನ್ನ ಕೋರಿಕೆಯನ್ನು ಮನ್ನಿಸುತ್ತಿದ್ದಾರಲ್ಲವೇ ಎಂದು ಮಾತನಾಡದೆ ಮತ್ತೆ ಮತ್ತೆ ನೆನಪಿಸುತ್ತಿರುವಂತೆ ಕಂಡರು.
ಕಪೂರ್‌ಗೆ ಆಶ್ಚರ್ಯವಾಯಿತು. ಸಂತೋಷವೂ ಆಯಿತು. ಬಾಲಮುರಳಿಯವರದು ಎಂತಹ involvement, ಎಷ್ಟೊಂದು ಕಾಳಜಿ ಅನಿಸಿತು. ಇದಕ್ಕೇ ಅಲ್ಲವೇ ಇವರು ಇಷ್ಟು ದೊಡ್ಡ ಕಲಾವಿದರಾಗಿರುವುದು ಎಂಬ ಭಾವನೆ ಜಾಗೃತವಾಗಿ ಅವರಿಗೇ ಅವರ ಬಗ್ಗೆ ಧನ್ಯತೆಯ ಭಾವನೆ ಮೂಡಿತು.
ಸಂದರ್ಶನ ಮುಗಿಯುವ ಹೊತ್ತಿಗೆ ಫಲಹಾರದ ವ್ಯವಸ್ಥೆ ಮಾಡಬೇಕೆಂದು ಸೂಚನೆ ಕೊಟ್ಟಿದ್ದರು ಅಂತ ಕಾಣುತ್ತೆ. ದೊಡ್ಡ ಸ್ಟೀಲ್ ತಟ್ಟೆಗಳಲ್ಲಿ ಉಪ್ಪಿಟ್ಟು, ಬೋಂಡಾ, ಕೇಸರಿ ಬಾತ್, ಹಿಂದುಗಡೆಯೇ ಘಮಘಮಿಸುವ ಫಿಲ್ಟರ್ ಕಾಫಿ ಎಲ್ಲ ಬಂತು. ಬಾಲಮುರಳಿ ಸಂದರ್ಶನವನ್ನು ಮರೆತೇಬಿಟ್ಟರು. ಹಸಿದ ಮಕ್ಕಳಂತೆ ಆತುರಾತುರವಾಗಿ ಬಾಲಮುರಳಿ ಗಬಗಬನೆ ತಿನ್ನುವುದನ್ನು ಕಪೂರ್ ಬಿಟ್ಟುಗಣ್ಣಿನಿಂದ ನೋಡಿದರು. ಒಂದೆರಡು ಸಲ ಚಮಚದಲ್ಲಿ ತಿಂದವರು, ಚಮಚವನ್ನು ಪಕ್ಕಕ್ಕಿಟ್ಟು ಕೈಬೆರಳುಗಳ ನೆರವಿನಿಂದಲೇ ತಿಂಡಿ ತಿಂದು, ಬೆರಳು ಸಂದಿಯಲ್ಲಿ ಮೂಡಿದ್ದ ಒಗ್ಗರಣೆಯ ಎಣ್ಣೆಯ ರುಚಿಯನ್ನು ಮತ್ತೆ ಮತ್ತೆ ನೆಕ್ಕಿದರು. ಕಾಫಿ ಕುಡಿಯುವಾಗ ಕೆಳಗಿನ ಬೀದಿಗೂ ಕೇಳುವಂತೆ ಸೊರಸೊರ ಶಬ್ದ ಮಾಡಿದರು. ಛೇ, ಇದನ್ನೆಲ್ಲ ರೆಕಾರ್ಡ್ ಮಾಡಿಕೊಳ್ಳಬೇಕಿತ್ತಲ್ಲ ಎಂದು ಪಿಚ್ಚೆನಿಸಿದರೂ, ಸಧ್ಯ, ಇದನ್ನೆಲ್ಲ ನೋಡಲಾದರೂ ನನಗೆ ಸಾಧ್ಯವಾಯಿತಲ್ಲ ಎಂದು ತಮಗೆ ತಾವೇ ಬೀಗಿದರು.
ಔಪಚಾರಿಕ ಸಂದರ್ಶನ ಮುಗಿದ ಮೇಲೆ ಗಣ್ಯರನ್ನು ಆತ್ಮೀಯವಾಗಿ ಮಾತನಾಡಿಸುತ್ತಾ, ಯಾವುದಾದರೂ ವೈಯಕ್ತಿಕ ಖಾಸಗಿ ಪ್ರಶ್ನೆ ಕೇಳಿ, ಒಳನೋಟ ಪಡೆಯುವುದನ್ನು ಕಪೂರ್ ಒಂದು ಪದ್ಧತಿ ಮಾಡಿಕೊಂಡಿದ್ದರು. ಇದೆಲ್ಲ ಸಂದರ್ಶನದ ಭಾಗವಾಗುವುದಿಲ್ಲ ಎಂದು ಭರವಸೆ ಕೊಟ್ಟು ಗಣ್ಯರು ಮನಬಿಚ್ಚಿ ಮಾತಾಡುವಂತೆ ಪ್ರೇರೇಪಿಸುತ್ತಿದ್ದರು.
ಬಾಲಮುರಳಿಯವರ ಚಿನ್ನ-ಬೆಳ್ಳಿಯ ಪ್ರೀತಿ, ಪೂಜಾಗೃಹದಲ್ಲೂ ಚಿನ್ನದಲ್ಲಿ ಮಾಡಿದ ದೇವರ ಮೂರ್ತಿಗಳನ್ನು ಮಂದಾಸನದಲ್ಲಿ ಇಟ್ಟುಕೊಂಡಿರುವುದು, ಬೆಲೆ ಬಾಳುವ ರೇಶ್ಮೆ ಸೀರೆಗಳನ್ನು ಸಂಗ್ರಹಿಸುವುದು, ಪ್ರೇಯಸಿಯರಿಗೆ ಉಡುಗೊರೆಯಾಗಿ ಇಂತಹ ಬೆಲೆ ಬಾಳುವ ಸೀರೆ ಕೊಡುವುದು, ಸ್ತ್ರೀ ವ್ಯಾಮೋಹವನ್ನು ಕೂಡ ಯಾರಿಂದಲೂ ಮುಚ್ಚಿಡದೇ ಇರುವುದು, ಇದೆಲ್ಲ ಕಪೂರರಿಗೆ ತಿಳಿದಿತ್ತು. ಇದರ ಬಗ್ಗೆ ಪ್ರಸ್ತಾಪಿಸುವುದು ತೀರಾ ವೈಯಕ್ತಿಕವಾಗಬಹುದೇ ಎಂಬ ಅನುಮಾನ. ಗಣ್ಯರು ಯಾವಾಗ ತೆರೆದುಕೊಳ್ಳುತ್ತಾರೆ, ಯಾವಾಗ ಮುಚ್ಚಿಟ್ಟುಕೊಳ್ಳುತ್ತಾರೆ ಎಂಬುದು ಊಹಿಸುವುದೇ ಕಷ್ಟ ಎಂಬುದು ಅವರ ಅನುಭವವಾಗಿತ್ತು. ತೆರೆದ ಮನಸ್ಸಿನವರು, ಮುಕ್ತ ಮಾತುಕತೆಯವರು ಎಂದುಕೊಂಡವರು ಪ್ರಶ್ನೆ ಕೇಳಿದ ತಕ್ಷಣ ಸಿಡುಕುವುದು, ಮೈ ಪರಚಿಸಿಕೊಂಡವರಂತೆ ಆಡುವುದು ಕೂಡ ಕಪೂರರ ಕಹಿ ಅನುಭವ. ಕಪೂರ್ ಹಿಂಜರಿದರು.
ಬಾಲಮುರಳಿಯವರೇ ಸ್ನೇಹದ ಸೂಚನೆ ಕೊಟ್ಟರು. ಸಂದರ್ಶನವೆಲ್ಲ ಮುಗಿಯಿತೇ. ಇನ್ನೂ ಏನಾದರೂ ಪ್ರಶ್ನೆ left ಅಥವಾ leftout? ಏನು ಬೇಕಾದರೂ ಕೇಳಿ ಎಂದು ತಮಾಷೆ ಮಾಡಿ ಅವರೇ ಪ್ರಶ್ನೆಯನ್ನು ಆಹ್ವಾನಿಸಿದರು.
ಕಪೂರ್ ತೀರಾ ಮೆಲ್ಲಗೆ, ಪ್ರತೀ ಪದವನ್ನು ಬಿಡಿಸುತ್ತಾ, ತುಂಬಾ ನಿಧಾನವಾಗಿ, ಧ್ವನಿಯೇ ಕುಗ್ಗಿಹೋದವರಂತೆ:
“ನೋಡಿ ಬಾಲಮುರಳಿಯವರೇ ಪಶ್ಚಿಮದಲ್ಲಿ ಕಲಾವಿದರ, ಸಾಹಿತಿಗಳ, ವಿಜ್ಞಾನಿಗಳ ಸಂದರ್ಶನ ಮಾಡುವಾಗ, ಜೀವನ ಚರಿತ್ರೆ ಬರೆಯುವಾಗ, ಅವರ ಪ್ರತಿಭೆ, ಸೃಜನಶೀಲತೆ ವಿಕಾಸಗೊಳ್ಳುವ ಸಂದರ್ಭದಲ್ಲೇ, ವಿಕಾಸವಾಗುವ, ಸಮಸ್ಯೆಯಾಗುವ, ಸಂತೋಷ ಕೊಡುವ ಅವರವರ ಲೈಂಗಿಕತೆ, ವಿವಾಹ ಜೀವನದ ಬಗ್ಗೆ ಕೂಡ ಮಾತನಾಡುತ್ತಾರೆ. ಸದ್ಯಕ್ಕೆ ನಮ್ಮಲ್ಲಿ ಇದು taboo ಆಗಿದೆ. ಹಾಗೆ ಹೇಳುವುದು ಕೂಡ ತಪ್ಪು. ನಮ್ಮ ಸಮಾಜದ ಗಂಡು-ಹೆಣ್ಣು, ಕಾಮಜೀವನ, ಲೈಂಗಿಕ ಸಾಕ್ಷಾತ್ಕಾರದ ಕಲ್ಪನೆಯೇ ಬೇರೆ ಅನ್ನುವುದು ನಿಜವೇ. ನೋಡಿ ನಿಮಗೆ ವೈಯಕ್ತಿಕ ಅನಿಸದಿದ್ದರೆ ಅದರ ಬಗ್ಗೆ ನಿಮಗೆ ಎಷ್ಟು ಬೇಕೋ ಅಷ್ಟು ಮಾತನಾಡಿ. ಗೌಪ್ಯವಾಗಿ ಇಡುವೆ” ಎಂದು ಭರವಸೆ ಕೊಡುತ್ತಾ ಪ್ರಶ್ನೆ, ಸ್ಪಷ್ಟನೆ, ಎಲ್ಲವನ್ನೂ ಮುಗಿಸುವ ಹೊತ್ತಿಗೆ ಧ್ವನಿಯೇ ಉಡುಗಿ ಹೋಗಿತ್ತು.
ಪಳಗಿದ, ಸಾವಿರಾರು ಸಂದರ್ಶನಗಳನ್ನು ಮಾಡಿದ್ದ ಕಪೂರರಿಗೆ ಬೆರಗಾಗುವಂತೆ ಬಾಲಮುರಳಿಯವರು matter of fact ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದರು. ಮಾತನಾಡುವ ಮುನ್ನ ಎಡಗೈಯಿಂದ ವಾಚ್ ಬಿಚ್ಚಿ, ಮುಳ್ಳುಗಳನ್ನು ಏಕಾಗ್ರತೆಯಿಂದ ನೋಡಿ, ವಾಚನ್ನು ತಮ್ಮ ಎದುರಿಗೆ ಇಟ್ಟುಕೊಂಡರು.
“ಇದನ್ನು ಕೇಳುವುದಕ್ಕೆ ಯಾಕೆ ಸಂಕೋಚ ಪಡ್ತೀರಿ. ನನ್ನನ್ನು ಕೇಳುವಾಗ ನೀವು ಕೂಡ ನಿಮ್ಮೊಳಗೇ ಇದೇ ಪ್ರಶ್ನೆಯನ್ನು ಕೇಳಿಕೊಂಡಿದ್ದರೆ ತುಂಬಾ ಸಂತೋಷ. ಇದರಲ್ಲಿ ಗುಟ್ಟಿಲ್ಲ, ತತ್ವಶಾಸ್ತ್ರವೂ ಇಲ್ಲ. ನಮ್ಮ ನಮ್ಮ ವ್ಯಕ್ತಿತ್ವ, ಆಸಕ್ತಿ ನಿರ್ಮಾಣವಾಗುವಾಗ, ರಾಗ-ತಾಳ-ಲಯ ಹುಡುಕುವಾಗ, ಸಮಾನಾಂತರವಾಗಿ ಲೈಂಗಿಕತೆಯ ಅನುಭವ, ಕಲೆ, ಅರ್ಥವನ್ನು ಕೂಡ ಹುಡುಕುತ್ತಿರುತ್ತೇವೆ. ಹಾಗೆ ಹುಡುಕದೆ ಹಿಂಜರಿಯುವುದು ಕೂಡ ಒಂದು ರೀತಿಯ ಹುಡುಕಾಟವೇ. ಎಲ್ಲವೂ ನಮ್ಮ ಲೆಕ್ಕಾಚಾರದಂತೆ, ಬಯಕೆಯಂತೆಯೇ ನಡೆದರೆ, ಲೈಂಗಿಕ ಜತ್ತಿನಲ್ಲೇ ಮುಳುಗಿ ಅಲ್ಲೇ ಇದ್ದುಬಿಡುತ್ತೇವೆ. ಯಾರಿಗೂ ಹೀಗಾಗೋಲ್ಲ. ಆದರೂ ಈ ರೀತಿಯ ತಾದಾತ್ಮ್ಯ ತುಂಬಾ ದಿನ ಉಳಿಯೋಲ್ಲ. ಇದು ಇನ್ನೊಬ್ಬರ ಜೊತೆ ಸೇರಿ ಪಡೆಯಬೇಕಾದ ಅನುಭವ, ಸಾಕ್ಷಾತ್ಕಾರ ಆದ್ದರಿಂದ ಎಲ್ಲೋ ಒಂದು ಹಂತದಲ್ಲಿ, ಯಾವುದೋ ಒಂದು ಸಂದರ್ಭದಲ್ಲಿ, ಒಂದೇ ಒಂದು ಸಂಬಂಧದ, ಒಂದು ಸ್ತರದಲ್ಲಿ ಎಲ್ಲ ನಿಂತುಹೋಗುತ್ತೆ. ಇದು ಇಷ್ಟೇ ಅನಿಸುತ್ತೆ. ಮತ್ತೆ ಮೊದಲಿನಿಂದ ಸಂಬಂಧಗಳನ್ನು, ಹುಡುಕಾಟವನ್ನು ಮಾಡುವಷ್ಟು ಚೈತನ್ಯವೂ ಇರುವುದಿಲ್ಲ. ಮನಸ್ಸಿಗೆ ತೀವ್ರವಾಗಿ ಬೇಕೂ ಅನಿಸುವುದಿಲ್ಲ. ಸುಮ್ಮನೆ ಕೈ ಚೆಲ್ಲಿಬಿಡುತ್ತೇವೆ. ಮನಸ್ಸಿಗೆ ಒಂದು ರೀತಿಯ ನೆಮ್ಮದಿ. ಇದು ನಿಜವಲ್ಲದಿರಬಹುದು. ಸರಿಯೂ ಅಲ್ಲದಿರಬಹುದು. ಅದರೆ ಈ ಸ್ಥಿತಿ ತಲುಪಿದ ಮೇಲೂ, ಇಷ್ಟು ತಿಳುವಳಿಕೆ ಮೂಡಿದ ಮೇಲೂ, ನಮ್ಮ ಬದುಕು ಮುಂದುವರೆಯುತ್ತೆ ನೋಡಿ, ಅದೇ ದೊಡ್ಡ ಆಶ್ಚರ್ಯ. ಆಶ್ಚರ್ಯವೇನು, ಎಲ್ಲರ ಜೀವನದಲ್ಲೂ ಹೀಗೇ ನಡೆದುಕೊಂಡು ಬಂದಿರೋದು ಸಾಧಾರಣ, ಸಾಮಾನ್ಯ ಸಂಗತಿಯಾಗಿ ಕೂತಿದೆ.”
ಇಂತಹ ಮಾತುಗಳನ್ನು ಕೂಡ ದಿನನಿತ್ಯದ ಸಂಸಾರದ ಮಾತುಗಳಂತೆ ಸರಾಗವಾಗಿ ಅಡುತ್ತಿರುವ ಬಾಲಮುರಳಿಯವರ ರೀತಿಯಿಂದಾಗಿ ಕಪೂರರ ಮುಖ ಕಪ್ಪಿಟ್ಟಿತು. ಬಾಲಮುರಳಿಯವರು ಯಾವುದೇ ಶಿಷ್ಟಾಚಾರವಿಲ್ಲದೆ ಎದ್ದು ಕಡಿದಾದ ಮೆಟ್ಟಿಲುಗಳನ್ನು ವೇಗವಾಗಿ ಇಳಿಯಲು ಪ್ರಾರಂಭಿಸಿದರು.
ಕೆಳಗಡೆ ಬೀದಿಯಲ್ಲಿ ಸಂಜೆಯ ದೀಪಗಳು ಒಂದೊಂದಾಗಿ ಬೆಳಗಲು ಪ್ರಾರಂಭಿಸುತ್ತಿದ್ದವು. ಹೆಣ್ಣುಮಕ್ಕಳು ಕಡಿದಾದ ಮೆಟ್ಟಿಲುಗಳನ್ನು ಹತ್ತುತ್ತಾ, ಹತ್ತುವಾಗಲೂ ಹರಟೆ ಹೊಡೆಯುತ್ತಾ, ಟೆರೇಸ್ ಮೇಲೆ ಬರುತ್ತಿದ್ದರು. ಬಂದವರೇ ಕಂಕುಳಲ್ಲಿದ್ದ ಜಮಖಾನವನ್ನು ಹಾಸಿದರು. ಹಾಸುವುದರಲ್ಲೇನು ಶ್ರದ್ಧೆಯಿರಲಿಲ್ಲ. ಜಮಖಾನಾ ಅಸ್ತವ್ಯಸ್ತವಾಗಿ ಹರಡಿಕೊಂಡಿತು. ಹೆಣ್ಣುಮಕ್ಕಳು ಒಬ್ಬರಿಗೆ ಒಬ್ಬರು ಒತ್ತರಿಸಿಕೊಂಡು ಕೂತು, ಒಬ್ಬರನ್ನೊಬ್ಬರು ಚಿವುಟುತ್ತಾ, ಗುದ್ದುತ್ತಾ, ನಗಾಡುತ್ತಲೇ ತೊಡೆಯ ಮೇಲೆ ತಾಳ ಹಾಕುತ್ತಾ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. ಒಂದು ಹುಡುಗಿಯ ಜಡೆಯ ಟೇಪು ಬಿಚ್ಚಿ ಹರಡಿಕೊಂಡಿರುವುದು ಕಪೂರ್‌ಗೆ ಕಾಣಿಸಿತು. ಹಾಕುತ್ತಿದ್ದ ತಾಳಕ್ಕನುಗುಣವಾಗಿ ಸಡಿಲವಾದ ಟೇಪು ಕೂಡ ತೂಗಾಡುತ್ತಿತ್ತು.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
ಬದುಕಿನ ಗಂಭೀರವಾದ ಸತ್ಯವನ್ನು ಅತ್ಯಂತ ಸರಳವಾದ ಮಾತುಗಳಲ್ಲಿ ಹೇಳುವ ಕಲೆ ಸತ್ಯನಾರಾಯಣ ಸರ್ ಅವರಿಗೆ ದಕ್ಕಿದೆ. ಅದನ್ನು ಬಾಲಮುರಳಿ ಅವರ ಬಾಯಲ್ಲಿ ಹೇಳಿಸಿದ್ದು ಕಲಾವಿದನ ಕತೆಗೆ ಒಂದು ವಿಶೇಷ ಹೊಳಪು ಕೊಟ್ಟಿದೆ. ಚೆಂದದ ಕತೆಗಾಗಿ ಧನ್ಯವಾದಗಳು ಸರ್