ಹಲಸಿನ ಹಣ್ಣಾದ ದಿನವಂತೂ ಅವರಿಗೆ ಅನ್ನವೇ ಸೇರದು. ಚಕ್ಕೆಯೋ, ಬೊಕ್ಕೆಯೋ ಯಾವುದಾದರೂ ಸರಿಯೆ, ಸಕ್ಕರೆಯಂತೆ ಸಿಹಿಯಾಗಿರುವ ಹಣ್ಣಿನಿಂದ ಹೊಟ್ಟೆ ತುಂಬಿತೆಂದರೆ ದಿನವಿಡೀ ಬೇರೇನೂ ಬೇಕೆನಿಸದು. ಅದನ್ನು ಅಕ್ಕಿಯ ತರಿಯೊಂದಿಗೆ ಸೇರಿಸಿ, ಬಾಳೆಲೆಯಲ್ಲಿ ಬೇಯಿಸಿದ ಕಡುಬಿಗೆ ಕಾಡಿನಿಂದ ಕಿತ್ತು ತಂದ ಹೆಜ್ಜೇನಿನ ಜೇನುತುಪ್ಪ ಸೇರಿಸಿ ತಿನ್ನುತ್ತಿದ್ದರೆ ಸ್ವರ್ಗ ಅಲ್ಲೆಲ್ಲಿಯೋ ಸುಳಿದಾಡಿದಂತೆ ಸುಖ. ಮನೆಯ ಗಾಣದಲ್ಲಿಯೇ ಅರೆದ ಕಬ್ಬಿನ ರಸದಿಂದ ತಯಾರಿಸಿದ ಬೆಲ್ಲವನ್ನು ಹಲಸಿನ ಹಣ್ಣಿನ ದೋಸೆಯ ಹಿಟ್ಟಿಗೆ ಸೇರಿಸಿದರೆ ಮೃದುವಾದ ಸಿಹಿ ದೋಸೆ ತಯಾರಾಗುವುದು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಒಂಭತ್ತನೆಯ ಕಂತು ನಿಮ್ಮ ಓದಿಗೆ
ಕಾಡೊಳಗೆ ಹೋಗಿ ಬಂದ ನೀಲಿಗೆ ಮರಗಿಡಗಳೊಂದಿಗೆ ಬಾಂಧವ್ಯ ಬೆಳೆದಿತ್ತು. ಮನೆಯ ಸುತ್ತೆಲ್ಲ ಬೆಳೆದ ಮರಗಿಡಗಳ ಬಗ್ಗೆ ಅಪ್ಪನಿಂದ ಕೇಳಿ ತಿಳಿದುಕೊಳ್ಳುತ್ತ, ತಾನು ಸಂಗ್ರಹಿಸಿದ ಮಾಹಿತಿಗಳನ್ನು ತಾನೇ ತಯಾರಿಸಿದ ಪುಸ್ತಕವೊಂದರಲ್ಲಿ ಬರೆದಿಡತೊಡಗಿದಳು. ಇವಳ ಉತ್ಸಾಹವನ್ನು ಕಂಡ ಮನೆಯ ಹಿರಿಯರೆಲ್ಲರೂ ತಮಗೆ ತಿಳಿದ ಸಂಗತಿಗಳನ್ನು ಅವಳಿಗೆ ಉತ್ಸುಕತೆಯಿಂದಲೇ ಹೇಳತೊಡಗಿದರು. ಹೇಳಿ ಕೇಳಿ ಹೊಳೆಸಾಲೆಂಬುದು ಕಥೆಗಳ ಊರು. ಅಲ್ಲಿ ಹುಟ್ಟಿದ್ದಕ್ಕೆ, ಸತ್ತಿದ್ದಕ್ಕೆ, ಬದುಕಿದ್ದಕ್ಕೆ ಎಲ್ಲದಕ್ಕೂ ಕಥೆಗಳ ಸಾಲು, ಸಾಲು. ಮಳೆಗಾಲ ಬಂದರೆ ಎಲ್ಲ ಹೆಂಗಸರ ತುರುಬಿನಲ್ಲಿಯೂ ಸಿತಾಳೆ ದಂಡೆಗಳ ತೇರು. ಯಾಕೆ ಅದನ್ನು ಸಿತಾಳೆ ದಂಡೆ ಎನ್ನುತ್ತಾರೆ? ಎಂದು ನೀಲಿ ಕೇಳಿದರೆ ಸಾಕು. ದಂಡೆಯ ಸುತ್ತ ಚೆಲ್ಲುವ ಸುಗಂಧದಂತೆ ಕಥೆಯೊಂದು ತನ್ನಷ್ಟಕ್ಕೆ ತೆರೆದುಕೊಳ್ಳುವುದು. “ನೀಲಿ, ನಿಂಗೆ ರಾಮಾಯ್ಣ ಕಥೆ ಗೊತ್ತಿಲ್ವೇನೆ? ಸೀತಾಮಾತೆ ರಾಮದೇವರೊಂದಿಗೆ ಕಾಡಿಗೆ ಹೋದಾಗ ಅವರ ಜತೆಗೆ ದಾಸಿಯರೆಲ್ಲ ಹೋಗಿರಲೇ ಇಲ್ಲ. ನಮ್ಮ ಸೀತಾಮಾತೆಗೋ ದಿನವೂ ದಾಸಿಯರು ಪೋಣಿಸಿ ತರುತ್ತಿದ್ದ ರಾಶಿ, ರಾಶಿ ಹೂವುಗಳನ್ನು ತಲೆಗೇರಿಸಿ ರೂಢಿಯಾಗಿತ್ತು. ಇಲ್ಲಿಯೂ ಅವಳ ಮೈದುನ ಲಕ್ಷ್ಮಣ ಹೂಗಳನ್ನೇನೋ ತಂದು ರಾಶಿ ಹಾಕ್ತಿದ್ದ. ಆದರೆ ಅದನ್ನು ಹೆಣೆಯೋಕೆ ನಮ್ ಸೀತಾಮಾತೆಗೆ ಗೊತ್ತಿರಬೇಕಲ್ಲ. ಸುಮ್ನೆ ಹೂರಾಶಿಯನ್ನ ನೋಡಿ ನಿಟ್ಟುಸಿರು ಬಿಡ್ತಿದ್ಲು. ಅದ್ನ ಕಂಡ ರಾಮದೇವ್ರು ಒಂದಿನ ಈ ಹೂವನ್ನ ಮರವೇರಿ ಕೊಯ್ದು ತಂದ್ರು. ಸೀತವ್ವನಿಗೆ ಖುಶಿಯೋ ಖುಶಿ. ಅರೆ! ದಾರವಿಲ್ಲ, ಸೂಜಿಯಿಲ್ಲ, ಗಂಟಿಲ್ಲ. ಗಿಡದ ಮೇಲೆ ಹೂದಂಡೆಯ ಹಾಗೆ ಸಾಲಲ್ಲಿ ಹೂಗಳು ಅರಳಿವೆ ಅಂತ ಪ್ರೀತಿಯಿಂದ ಮುಡಿಗೇರಿಸಿಕೊಂಡ್ಲು. ಅಲ್ಲಿಂದ ಮುಂದೆ ಆ ಹೂವಿಗೆ ಸಿತಾಳೆ ದಂಡೆ ಅಂತಾನೇ ಹೆಸರಾಯ್ತು.” ಎನ್ನುತ್ತಾ ಕಥೆಯನ್ನು ಮುಗಿಸುತ್ತಿದ್ದರು. ನೀಲಿಗೆ ಈ ದಂಡೆಯನ್ನು ಮುಡಿದವರೆಲ್ಲ ಸೀತಾಮಾತೆಯಂತೆಯೇ ಕಾಣತೊಡಗಿದ್ದರು. ಸಿತಾಳೆ ಗಿಡವನ್ನು ಹುಡುಕಿ ಹೊರಟರೆ ದೊಡ್ಡ ಮರದ ಬೊಡ್ಡೆಯ ಮೇಲೆ ಅಡಗಿ ಕುಳಿತಿತ್ತು ಪುಟ್ಟ ಗಿಡ. ತನ್ನ ಆಹಾರ, ವಸತಿ ಎಲ್ಲದಕ್ಕೂ ಮರವನ್ನೇ ಅವಲಂಭಿಸಿರುವ ಈ ಗಿಡ ರಾಮನ ನೆರಳಿನಲ್ಲಿ ಸಾಗಿದ ಸೀತೆಯಂತೆ ಕಂಡಿತು ನೀಲಿಗೆ.
ಬೆಳಬೆಳಿಗ್ಗೆ ದನಕರುಗಳ ಹಟ್ಟಿಯಲ್ಲಿ ಮೆತ್ತಗಿನ ಹಾಸಿಗೆಯಾಗಿ ಹರಡಲು ಸೊಪ್ಪಿನ ಹೊರೆಯನ್ನು ಹೊತ್ತು ತರುವುದು ಹೊಳೆಸಾಲಿನ ರೂಢಿ. ಹಾಗೆ ತಂದ ಸೊಪ್ಪಿನ ರಾಶಿಯಲ್ಲಿದ್ದ ಬಸರಿ ಮರದ ಸೊಪ್ಪನ್ನು ಅಪ್ಪ ಆರಿಸಿ ಬೇರೆಯೇ ಇಡುತ್ತಿದ್ದರು. ಇದ್ಯಾಕೆ ಎಂದರೆ ಅಪ್ಪ ಕಥೆ ಹೇಳುತ್ತಿದ್ದರು. ಬಸರಿ ಮರ ಬೆಳೆಯುವುದು ಇನ್ನೊಂದು ಮರದ ಆಸರೆಯಲ್ಲಿ. ಮೊದಲಿಗೆ ಬಳ್ಳಿಯಂತೆ ಸಪೂರವಾಗಿ ತನ್ನ ನಿಲುಕಿಗೆ ಸಿಗುವ ದಷ್ಟಪುಷ್ಟವಾದ ಮರವನ್ನು ಅಪ್ಪಿಹಿಡಿದು ಬೆಳೆಯುವ ಬಸರಿ ಮರ ಮೇಲೆ ಸಾಗಿದಂತೆ ತಾನು ಬಳಸಿದ ಮರದ ಕಾಂಡವನ್ನು ಪೂರ್ತಿಯಾಗಿ ಸುತ್ತುವರೆದು ತನ್ನ ಬಳ್ಳಿಗಾತ್ರವನ್ನು ಮರದ ಗಾತ್ರಕ್ಕೆ ಬೆಳೆಸಿಕೊಳ್ಳುತ್ತದೆ. ತಾನು ಆವರಿಸಿದ ಮರವನ್ನು ಪೂರ್ತಿಯಾಗಿ ಆಕ್ರಮಿಸದೇ ಬೇಕಾದಷ್ಟು ಹಾಲನ್ನು ಕರೆದುಕೊಂಡು ಕರುವನ್ನೂ ಉಳಿಸುವ ಮನುಷ್ಯನ ಬುದ್ಧಿವಂತಿಕೆಯೇ ಈ ಮರದ್ದು ಕೂಡ. ಹಾಗೆ ಬೆಳೆಯುವ ಬಸರಿ ಮರದ ಹಸಿರು ಎಲೆಗಳೆಂದರೆ ದನಕರುಗಳಿಗೆ ಪ್ರಾಣ. ಆದರೆ ಕರು ಹಾಕಬೇಕಾದ ದನಗಳು ಇದನ್ನು ತಿಂದರೆ ಗರ್ಭ ಧರಿಸುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತವೆಯೆಂಬುದು ಹೊಳೆಸಾಲಿನ ನಂಬಿಕೆ. ಹಾಗಾಗಿ ಅದನ್ನು ಮನೆಯ ದನಗಳು ತಿನ್ನದಂತೆ ಆರಿಸಿ ಬೇರೆಯಿಡುವುದು ನೀಲಿಯ ಅಪ್ಪನ ರೂಢಿ. ಅಪ್ಪನ ಮಾತು ಕೇಳಿದ ನೀಲಿ ಬಸರಿ ಮರವನ್ನು ನೋಡಲು ಕಾಡಿಗೂ ಹೋಗಿ ಬಂದಿದ್ದಾಳೆ. ತನ್ನ ಆಸರೆ ಮರವನ್ನು ಅಪ್ಪಿಹಿಡಿದು ತನ್ನ ರೆಂಬೆ ಕೊಂಬೆಗಳ ಭಾರವನ್ನು ಅದರ ಮೇಲೆ ಹೇರಿ ನಿರಾಳವಾಗುವ ಬಗೆಯನ್ನು ನೋಡಿ ಮರಕ್ಕೆ ಅಲಸಿ ಮರವೆಂದು ಹೊಸ ನಾಮಕರಣವನ್ನೂ ಮಾಡಿದ್ದಾಳೆ.
ಎಲ್ಲಕ್ಕಿಂತಲೂ ಗಾಢವಾಗಿ ನೀಲಿಯನ್ನು ಕಾಡಿದ್ದು ಬೆಟ್ಟಾನೆ ಮರದಿಂದ ಒಸರುವ ರಕ್ತದಂತಹ ದ್ರವ. ಬೆಟ್ಟಾನೆ ಮರದ ರೆಂಬೆಯೊಂದನ್ನು ಕಚಕ್ಕೆಂದು ಕಡಿದು ಕತ್ತಿಗೆ ಮೆತ್ತಿದ ರಕ್ತವನ್ನು ನೀಲಿಯ ಅಣ್ಣ ಅವಳ ಮುಂದೆ ಹಿಡಿದಾಗ ನೀಲಿಯ ಕಣ್ಣುಗಳು ಅಚ್ಚರಿಯಿಂದ ಅರಳುತ್ತವೆ. ಇದಕ್ಕೂ ಒಂದು ಕಥೆಯಿರಲೇಬೇಕೆಂದು ಅಮ್ಮನಲ್ಲಿ ಕೇಳುತ್ತಾಳೆ. ಅಮ್ಮ ಯಥಾವತ್ತಾಗಿ ಮತ್ತೆ ಸೀತಾಮಾತೆಯ ಕಥೆಯನ್ನೇ ಹೇಳುತ್ತಾಳೆ. ಸೀತೆಯ ಬಗ್ಗೆ ಅಗಸನೊಬ್ಬ ಹೇಳಿದ ಹಗುರ ಮಾತುಗಳಿಂದ ಬೇಸರಗೊಂಡ ಶ್ರೀರಾಮ ಅವಳನ್ನು ಕಾಡಿಗೆ ಕಳಿಸುತ್ತಾನೆ. ಅವಳನ್ನು ಅಲ್ಲಿಯೇ ಕೊಂದು ಅದಕ್ಕೆ ಸಾಕ್ಷಿಯಾಗಿ ಖಡ್ಗಕ್ಕೆ ಮೆತ್ತಿದ ರಕ್ತವನ್ನು ತನಗೆ ತಂದು ತೋರಿಸಬೇಕೆಂದು ತಮ್ಮನಾದ ಲಕ್ಷ್ಮಣನಿಗೆ ಹೇಳುತ್ತಾನೆ. ಅಣ್ಣನ ಮಾತಿನಂತೆ ಅತ್ತಿಗೆಯನ್ನು ಕಾಡಿನಲ್ಲಿ ಬಿಡುವ ಲಕ್ಷ್ಮಣನಿಗೆ ಗರ್ಭಿಣಿಯಾದ ಸೀತಾಮಾತೆಯನ್ನು ಕೊಲ್ಲಲು ಕಳವಳವಾಗುತ್ತದೆ. ಆಗ ಅವನು ಪತ್ತೆ ಹಚ್ಚಿದ ಮರವೇ ಈ ಬೆಟ್ಟಾನೆ ಮರ. ಈ ಮರದ ಗೆಲ್ಲನ್ನು ಕತ್ತರಿಸಿ ಖಡ್ಗಕ್ಕೆ ಮೆತ್ತಿದ ಕೆಂಪುರಸವನ್ನೇ ರಕ್ತವೆಂದು ತೋರಿಸಿ ಅಣ್ಣನನ್ನು ನಂಬಿಸಿದನಂತೆ. ಬೆಟ್ಟಾನೆ ಮರ ಸೀತಾಮಾತೆಯನ್ನು ಉಳಿಸಿದ ಕಥೆಯನ್ನು ಅಮ್ಮ ಗದ್ಗದಿತಳಾಗಿ ಹೇಳುವಾಗ ನೀಲಿಗೆ ಈ ಸೀತೆ ಅಮ್ಮನ ಆಪ್ತ ಗೆಳತಿಯಾಗಿರಬೇಕು ಎಂದೇ ಅನಿಸುವುದು. ಇದೇ ಕಥೆಯನ್ನು ಗಣಪಿ ಬೇರೆಯೇ ರೀತಿಯಲ್ಲಿ ನೀಲಿಗೆ ಹೇಳಿದ್ದಾಳೆ.
ಹೊಳೆಸಾಲಿನಲ್ಲಿರುವ ಮೂವರು ಹೆಂಗಳೆಯರಿಗೆ ಕಾಲಿನಲ್ಲಿ ಆರಾರು ಬೆರಳುಗಳಿವೆ. ಅವರೆಲ್ಲರಿಗೂ ಒಂದೇ ಮುಹೂರ್ತದಲ್ಲಿ ಮದುವೆಯಾಗಿತ್ತಂತೆ. ಏನೇನೋ ಕಾರಣಗಳಿಂದ ಮೂವರೂ ವಿಧವೆಯರಾಗಿ ಊರಿನಲ್ಲಿ ಒಂಟಿಬಾಳನ್ನು ಸವೆಸುತ್ತಿದ್ದಾರೆ. ಒಬ್ಬಳ ಗಂಡ ಕಾಡಿನ ತೋಡನ್ನು ದಾಟುವಾಗ ಕಾಲುಜಾರಿ ಬಿದ್ದು ಸತ್ತರೆ, ಇನ್ನೊಬ್ಬಳ ಗಂಡನನ್ನು ಹುಲಿಯೋ, ಚಿರತೆಯೋ ತಿಂದುಬಿಟ್ಟಿದೆ. ಮತ್ತೊಬ್ಬಳ ಗಂಡ ಹೇಳದೇ ಕೇಳದೇ ಊರುಬಿಟ್ಟಿದ್ದಾನೆ. ಬದುಕಿರುವ ಯಾವ ಕುರುಹುಗಳೂ ಇಲ್ಲ. ಅವರೆಲ್ಲರ ಈ ದುಃಸ್ಥಿತಿಗೇ ಅವರ ಕಾಲಿನಲ್ಲಿರುವ ಆರು ಬೆರಳುಗಳೇ ಕಾರಣವೆಂಬುದು ಗಣಪಿಯ ಅಚಲ ನಂಬಿಕೆ. ನೀಲಿ ಅದನ್ನೆಲ್ಲ ಹಾಗೆ ಕೇಳಿ ಒಪ್ಪಿಕೊಳ್ಳುವವಳಲ್ಲ. ಅದು ಹೇಗೆ ಸಾಧ್ಯವೆಂದು ಮತ್ತೆ, ಮತ್ತೆ ಪ್ರಶ್ನಿಸುವಳು. ಆಗ ಗಣಪಿಯೂ ಹೇಳುವುದು ಸೀತೆಯ ಕಥೆಯನ್ನೇ. ಕಥೆಯ ಅಂತ್ಯದಲ್ಲಿ ಮಾತ್ರ ಕೊಂಚವೇ ಬದಲಾವಣೆ. ಅತ್ತಿಗೆಯ ಕುತ್ತಿಗೆಯನ್ನು ಕತ್ತರಿಸಲಾಗದ ಲಕ್ಷ್ಮಣ ಅವಳ ಕಾಲಿನಲ್ಲಿರುವ ಹೆಚ್ಚುವರಿ ಬೆರಳನ್ನು ಮಾತ್ರವೇ ಕತ್ತರಿಸಿ ಅಣ್ಣನಿಗೆ ರಕ್ತದ ಸಾಕ್ಷ್ಯವನ್ನು ನೀಡಿದನಂತೆ. ಸೀತೆಯೆಂಬುದು ಎಲ್ಲ ಹೆಂಗಸರಿಗೆ ಎಂದಿಗೂ ಮಗಿಯದ ಶೋಕಕಾವ್ಯ. ಹಾಗಾಗಿ ಆರು ಬೆರಳುಗಳಿರುವ ಎಲ್ಲರೂ ಅವಳಂತೆಯೇ ಶೋಕದ ಬೆಂಕಿಯಲ್ಲಿ ಹಾದು ಬರಲೇಬೇಕು. ಈ ಎಲ್ಲ ಕಥೆಗಳ ಕಾನನದ ನಡುವೆ ದಾರಿತಪ್ಪಿದ ಮಗುವಿನಂತೆ ನೀಲಿ ವಿಹ್ವಲಗೊಳ್ಳುತ್ತಾಳೆ.
ಹೊಳೆಸಾಲಿನ ಕಾಡಿನಲ್ಲಿ ಕೇವಲ ರಾಮಾಯಣದ ಕಥೆ ಮಾತ್ರವೇ ಅಲ್ಲ, ಮಹಾಭಾರತದ ಪಾತ್ರಗಳೂ ಬೀಡುಬಿಟ್ಟಿವೆ. ಕಾಡಿನ ನಡುವೆ ಇರುವ ದಿಣ್ಣೆಯನ್ನೇರಿದರೆ ರಾಶಿಯೊಟ್ಟಿದ ಕೆಂಪುಮಣ್ಣಿನ ದಿಬ್ಬವೊಂದು ಕಾಣುತ್ತದೆ. ಅದರ ಸುತ್ತಲೂ ಕಡೆದು ನಿಲ್ಲಿಸಿದ ನಾಲ್ಕು ಬಿಳಿಕಲ್ಲಿನ ಕಂಬಗಳಿವೆ. ಇದರ ಸುತ್ತಲೂ ಪಂಚಪಾಂಡವರ ಕಥೆ ಥಳಕು ಹಾಕಿಕೊಂಡಿದೆ. ವನವಾಸದಲ್ಲಿರುವ ಪಾಂಡವರು ಈ ದಾರಿಯಲ್ಲಿ ಸಾಗುವಾಗ ಹೊಳೆಸಾಲಿನ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ಮನೆಮಾಡಿ ಉಳಿಯುವ ತೀರ್ಮಾನ ಮಾಡಿದರಂತೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಮನೆಕಟ್ಟಿ ಮುಗಿದರೆ ಮಾತ್ರವೇ ಅವರು ಅಲ್ಲಿ ಉಳಿಯಬಹುದೆಂದು ಭಾವ ಕೃಷ್ಣ ಅವರಿಗೆ ನಿಬಂಧನೆಯನ್ನು ಹಾಕಿದ್ದನಂತೆ. ಹಾಗೆಯೇ ಮಾಡಲೆಂದು ನಾಲ್ವರು ಪಾಂಡವರು ನಾಲ್ಕು ಕಂಬ ಕಟ್ಟುವ ಹೊಣೆಹೊತ್ತರೆ, ಭೀಮ ಕೆಂಪು ಮಣ್ಣನ್ನು ಕಲೆಸಿ ಗೋಡೆಕಟ್ಟುವ ಕೆಲಸವನ್ನು ವಹಿಸಿಕೊಂಡನಂತೆ.
ನೀಲಿಗೆ ಈ ದಂಡೆಯನ್ನು ಮುಡಿದವರೆಲ್ಲ ಸೀತಾಮಾತೆಯಂತೆಯೇ ಕಾಣತೊಡಗಿದ್ದರು. ಸಿತಾಳೆ ಗಿಡವನ್ನು ಹುಡುಕಿ ಹೊರಟರೆ ದೊಡ್ಡ ಮರದ ಬೊಡ್ಡೆಯ ಮೇಲೆ ಅಡಗಿ ಕುಳಿತಿತ್ತು ಪುಟ್ಟ ಗಿಡ. ತನ್ನ ಆಹಾರ, ವಸತಿ ಎಲ್ಲದಕ್ಕೂ ಮರವನ್ನೇ ಅವಲಂಭಿಸಿರುವ ಈ ಗಿಡ ರಾಮನ ನೆರಳಿನಲ್ಲಿ ಸಾಗಿದ ಸೀತೆಯಂತೆ ಕಂಡಿತು ನೀಲಿಗೆ.
ಇನ್ನೇನು ಇವರು ರಾಜ್ಯ, ಕೋಶದ ಚಿಂತೆ ಮರೆತು ಇಲ್ಲಿಯೇ ಹೊಳೆಸಾಲಿನ ಮಂದಿಯಾಗಿಬಿಡುವರೇನೋ ಎಂಬ ಸಂಶಯ ಮಡದಿ ಪಾಂಚಾಲಿಗೆ ಕಾಡಿ ಅಣ್ಣನಿಗೆ ಸುದ್ದಿ ತಿಳಿಸಿದಳಂತೆ. ಅವಳ ಮಾತಿನಂತೆ ಕಾಡಿನಲ್ಲಿ ಅಡಗಿ ಕುಳಿತ ಕೃಷ್ಣ ನಾಲ್ಕು ಕಂಬಗಳು ನೆಲೆಯೂರಿ, ಮಣ್ಣಿನ ಗೋಡೆಗೆಂದು ಭೀಮ ತನ್ನ ಮುಷ್ಟಿಯಲ್ಲಿ ಮಣ್ಣನ್ನು ಬಾಚಿ ಎತ್ತಿಟ್ಟ ಕೂಡಲೇ ಕೋಳಿಯಾಗಿ ಕೊಕ್ಕೋಕ್ಕೋ ಎಂದು ಮೂರುಬಾರಿ ಕೂಗಿದನಂತೆ. ಕೋಳಿಯ ದನಿ ಕೇಳಿದ್ದೇ, “ಅಯ್ಯೋ ಶಿವನೇ, ಬೆಳಗಾಗಿ ಹೋಯಿತಲ್ಲ” ಎಂದು ಪಾಂಡವರು ಮುಂದಿನ ದಾರಿ ಹಿಡಿದರಂತೆ. ಪಾಂಡವರು ಹಾದುಹೋದ ಆ ದಾರಿಯೇ ಈಗ ‘ಪಾಂಡವರ ಅರೆ’ ಎಂದು ಹೆಸರು ಪಡೆದಿದೆಯಂತೆ. ದಟ್ಟ ಕಾಡಿನ ನಡುವಿದ್ದೂ ಬಟ್ಟ ಬಯಲಾಗಿ ಇರುವ ಈ ಜಾಗದಲ್ಲಿ ಕಾಡಿನ ದೆವ್ವಗಳು ಪ್ರತಿವರ್ಷವೂ ಜಾತ್ರೆಯನ್ನು ಮಾಡುತ್ತವೆಯಂತೆ. ಈ ಕಥೆಯನ್ನು ಕೇಳಿದ ನೀಲಿಗೆ ದೆವ್ವಗಳ ಜಾತ್ರೆಯನ್ನು ನೋಡುವ ಆಸೆಯೂ ಕೆಲವೊಮ್ಮೆ ಆಗುವುದುಂಟು. ತಪ್ಪಿಯೆಲ್ಲಿಯಾದರೂ ಗಣಪಿಗೆ ಇದನ್ನು ಹೇಳಿದರೆ, “ಅಯ್ಯಾ ಕೂಸೆ, ಅದೇನ್ ನಮ್ಮೂರ ಮಾರಿ ಜಾತ್ರೆ ಅದ್ಕಂಡ್ಯೇನೆ? ಅಮವಾಸಿ ಕತ್ತಲಿನಲ್ಲಿ, ದೊಂದಿ ಬೆಳಕಿನಲ್ಲಿ ಭೂತಪ್ರೇತಾದಿಗಳೆಲ್ಲ ನಡೆಸುವ ಜಾತ್ರೆಯದು. ಮನುಷ್ಯರೇನಾದ್ರೂ ಅದನ್ನು ಕಣ್ಣಂಚಿನಲ್ಲಿ ನೋಡಿದ್ರೆ ಸಾಕು, ರಕ್ತಕಾರಿ ಸಾಯ್ತಾರೆ ಕಣಮ್ಮೀ” ಎಂದು ಬೆದರಿಕೆಯ ಬಾಣ ಬಿಡುತ್ತಾಳೆ. ಸತ್ತವರನ್ನೆಲ್ಲ ಹೊಳೆಸಾಲಿನಲ್ಲಿ ಕಾಡಿನಲ್ಲಿಯೇ ಸುಡುವುದನ್ನು ನೀಲಿ ನೋಡಿದ್ದಾಳಾದ್ದರಿಂದ ಅವರೆಲ್ಲರೂ ಅಲ್ಲಿಯೇ ದೆವ್ವವಾಗಿ ಜಾತ್ರೆ-ಗೀತ್ರೆ ಮಾಡಿಕೊಂಡು ಆರಾಮವಾಗಿರಬಹುದೆಂದುಕೊಂಡಳು. ಹೇಗೂ ಇಂದಲ್ಲವಾದರೆ ನಾಳೆಯಾದರೂ ಆ ಜಾತ್ರೆಯಲ್ಲಿ ತಾನೂ ಭಾಗವಾಗುವ ನಿರೀಕ್ಷೆಯೇ ಅವಳನ್ನು ಪುಳಕಿತಳನ್ನಾಗಿಸಿತು.
ಹೀಗೆ ನೀಲಿಗೆ ಕಾಡಿನ ಇಂಚಿಂಚೂ ಕಥೆಯಾಗಿ ದಕ್ಕುವ ಹೊತ್ತಿಗೆ ಹೊಳೆಸಾಲಿನ ದಾರಿಯಲ್ಲಿ ಇದುವರೆಗೂ ಕಂಡು ಕೇಳರಿಯದ ಹೊಸಮುಖಗಳು ಕಾಣತೊಡಗಿದವು. ಬಿಳಿಯ ಶುಭ್ರ ಅಂಗಿಗಳನ್ನು ಕಪ್ಪು ಬೆಲ್ ಬಾಟಮ್ ಪ್ಯಾಂಟಿನಡಿಯಲ್ಲಿ ಸಿಕ್ಕಿಸಿ, ಕಾಲಿಗೊಂದು ಕಪ್ಪು ಬೂಟನ್ನು ಸಿಕ್ಕಿಸಿಕೊಂಡು ಓಡಾಡುವ ಅವರೆಲ್ಲರೂ ಮರದ ವ್ಯಾಪಾರಿಗಳೆಂಬುದು ಅರಿವಾಗುತ್ತ ಹೋಯಿತು. ಮೊದಲಿಗೆ ಅವರ ಕಣ್ಣು ಬಿದ್ದಿದ್ದು ಕಾಡಿನಂಚಿನ ಬೆಟ್ಟದಲ್ಲಿ ಹೊಳೆಸಾಲಿನವರೆಲ್ಲ ಕುಮ್ಕಿ ಆಸ್ತಿಯಲ್ಲಿ ಬೆಳೆದ ಹಲಸಿನ ಮರಗಳ ಮೇಲೆ. ಮೂವರು ವ್ಯಕ್ತಿಗಳ ತೆಕ್ಕೆ ಗಾತ್ರಕ್ಕೂ ಸಿಗದಷ್ಟು ದಪ್ಪನಾಗಿ ಬೆಳೆದು ನಿಂತ ಹಲಸಿನ ಮರಗಳು ಹಲಗೆ, ಜಂತಿ, ಬಾಗಿಲು, ಕಿಟಕಿ, ರೀಪು, ಪಕಾಸುಗಳಾಗಿ ಅವರಿಗೆ ಕಾಣತೊಡಗಿದ ಕೂಡಲೇ ಮರಗಳಿಗೆ ಬೆಲೆಯ ನಿಗದಿಯಾಗುತ್ತ ಹೋಯಿತು. ಹೊಳೆಸಾಲಿನಲ್ಲಿ ಭೂಮಿಯ ಯಜಮಾನರಾದ ಗಂಡಸರಿಗೆ ಈ ಹಲಸಿನ ಮರಗಳೊಂದಿಗೆ ಯಾವ ನಂಟೂ ಇರಲಿಲ್ಲ. ಮನೆಯ ಹೆಂಗಳೆಯರು ಒತ್ತಾಯಿಸಿದ ದಿನದಂದು ಅವರಿಗೆ ಬೈಯ್ಯುತ್ತಲೇ ಮರವೇರಿ ಒಂದಿಷ್ಟು ಹಲಸಿನ ಕಾಯಿಗಳನ್ನು ದೊಪ್ಪೆಂದು ಉದುರಿಸಿ ಹೋದರೆ ಅವರ ಕೆಲಸ ಮುಗಿದಂತೆಯೆ. ಆದರೆ ಊರ ಹೆಂಗಸರಿಗೆ ಹಲಸೆಂದರೆ ಅದು ಹಸಿವನ್ನು ಹಿಂಗಿಸುವ ಸಾಧನ. ಹಲಸಿನ ಕೆಲಸವೆಂಬುದು ಅವರಿಗೆ ತಿಂಗಳಿಡೀ ನಡೆಸುವ ಕಾಯಕದ ಜಾತ್ರೆ. ಎಳೆಯ ಹಲಸಿನ ಸಾಂಬಾರು ಪಲ್ಯ, ಪಳದಿಯ ರುಚಿಯನ್ನವರು ಇಡೀ ವರ್ಷ ಕನಸುತ್ತಾರೆ. ಬೆಳೆದ ಹಲಸಿನ ತೊಳೆಬಿಡಿಸಿ, ಬೇಯಿಸಿ, ಕಡೆದು ಹಪ್ಪಳ ಮಾಡಿ ಮಳೆಗಾಲವನ್ನು ರುಚಿಕರವಾಗಿಸುತ್ತಾರೆ. ಹಲಸಿನ ತೊಳೆಯನ್ನು ಉದ್ದುದ್ದಕ್ಕೆ ಸಿಗಿದು ಎಣ್ಣೆಯಲ್ಲಿ ಕರಿದು ಕುರುಕಲಾಗಿ ಚಪ್ಪರಿಸುತ್ತಾರೆ. ಮಿಕ್ಕುಳಿದ ತೊಳೆಯನ್ನು ಉಪ್ಪಿನಲ್ಲಿ ಕಾಪಿಟ್ಟು ದೊಡ್ಡಪುಂಡನೆಂಬ ಮಳೆ ಎಡೆಬಿಡದೇ ಸುರಿವಾಗ ತೆಂಗಿನೆಣ್ಣೆಯೊಂದಿಗೆ ಹುರಿದು, ಖಾರ ಸೇರಿಸಿ ತಿನ್ನುತ್ತಾರೆ. ಹಲಸಿನ ಹಣ್ಣಾದ ದಿನವಂತೂ ಅವರಿಗೆ ಅನ್ನವೇ ಸೇರದು. ಚಕ್ಕೆಯೋ, ಬೊಕ್ಕೆಯೋ ಯಾವುದಾದರೂ ಸರಿಯೆ, ಸಕ್ಕರೆಯಂತೆ ಸಿಹಿಯಾಗಿರುವ ಹಣ್ಣಿನಿಂದ ಹೊಟ್ಟೆ ತುಂಬಿತೆಂದರೆ ದಿನವಿಡೀ ಬೇರೇನೂ ಬೇಕೆನಿಸದು. ಅದನ್ನು ಅಕ್ಕಿಯ ತರಿಯೊಂದಿಗೆ ಸೇರಿಸಿ, ಬಾಳೆಲೆಯಲ್ಲಿ ಬೇಯಿಸಿದ ಕಡುಬಿಗೆ ಕಾಡಿನಿಂದ ಕಿತ್ತು ತಂದ ಹೆಜ್ಜೇನಿನ ಜೇನುತುಪ್ಪ ಸೇರಿಸಿ ತಿನ್ನುತ್ತಿದ್ದರೆ ಸ್ವರ್ಗ ಅಲ್ಲೆಲ್ಲಿಯೋ ಸುಳಿದಾಡಿದಂತೆ ಸುಖ. ಮನೆಯ ಗಾಣದಲ್ಲಿಯೇ ಅರೆದ ಕಬ್ಬಿನ ರಸದಿಂದ ತಯಾರಿಸಿದ ಬೆಲ್ಲವನ್ನು ಹಲಸಿನ ಹಣ್ಣಿನ ದೋಸೆಯ ಹಿಟ್ಟಿಗೆ ಸೇರಿಸಿದರೆ ಮೃದುವಾದ ಸಿಹಿ ದೋಸೆ ತಯಾರಾಗುವುದು. ಹಣ್ಣು, ಕಾಯಿಗಳ ಕಥೆ ಹೀಗಾದರೆ ಹಣ್ಣಿನ ಒಳಗಿರುವ ಬೇಳೆಯಂತೂ ಅವರಿಗೆ ವರ್ಷವಿಡೀ ದಕ್ಕುವ ಬಾಯಿಬಡಿಗೆ. ಅದನ್ನು ಉಪ್ಪುನೀರಿನಲ್ಲಿ ಬೇಯಿಸಿ ಒಣಗಿಸಿದರೆ ಗಟ್ಟಿಯಾದ ಚಾಕಲೇಟಿನಷ್ಟು ಸವಿ. ತರಕಾರಿಯೊಂದಿಗೆ ಸಾಂಬಾರಿಗೆ ಸೇರಿಸಿದರೆ ಕಡಿದು ತಿನ್ನುವ ಸುಖ. ಮಣ್ಣಿನ ಹೆಂಚಿನಲ್ಲಿ ಹಾಕಿ ಹುರಿದರೆ ಘಮಘಮಿಸುವ ಲಘು ಉಪಹಾರ. ತಿನ್ನಲು ಏನಾದರೂ ಬೇಕೆಂದು ಹಂಬಲಿಸುವ ಮಳೆಗಾಲದಲ್ಲೆಲ್ಲ ಬೇಳೆಯೆಂಬುದು ಆ ಕ್ಷಣಕ್ಕೆ ಒದಗಿಬರುವ ಸರಕು.
ಹೀಗೆಲ್ಲ ಹಲಸನ್ನು ಸಂಭ್ರಮಿಸುವ ಹೊಳೆಸಾಲಿನ ಹೆಂಗಳೆಯರಿಗೆ ಈ ಮರದ ವ್ಯಾಪಾರಿಗಳ ಆಗಮನ ಒಂದಿಷ್ಟೂ ಪ್ರಿಯವಲ್ಲ. ಆದರೂ ಗಂಡಸರ ಎದುರು ಮಾತನಾಡಲಾರದ ಅವರ ಅಸಹಾಯಕತೆ ಮರಗಳ ಮಾರಣಹೋಮಕ್ಕೆ ನಾಂದಿಯಾಯಿತು. ತಮ್ಮ ಅಜ್ಜನೋ, ಮುತ್ತಜ್ಜನೋ ಎಂದೋ ನೆಟ್ಟಿದ್ದ, ತಮ್ಮಿಂದ ಎಂದಿಗೂ ಒಂದಿಷ್ಟು ನೀರು, ಗೊಬ್ಬರವನ್ನೂ ಕೇಳದ ಈ ಮರಗಳಿಗೆ ಹಸಿರು ನೋಟುಗಳ ಬೆಲೆಯನ್ನು ಕೊಡುವ ಈ ವ್ಯಾಪಾರಿಗಳು ಅರೆಹುಚ್ಚರೇ ಇರಬೇಕೆಂದು ಅವರೆಲ್ಲರೂ ಮಾತಾಡಿಕೊಳ್ಳತೊಡಗಿದರು. ವಾರ ಕಳೆಯುವುದರೊಳಗೆ ಹೊಳೆಸಾಲಿಗೆ ಕಟ್ಟುಮಸ್ತಾದ ದೇಹದ ದಾಂಡಿಗರು ಕೊಡಲಿಯೊಂದಿಗೆ ಬಂದಿಳಿದರು. ಏನು ನಡೆಯುತ್ತಿದೆಯೆಂಬುದು ಮನೆಮಂದಿಗೆಲ್ಲ ಗೊತ್ತಾಗುವ ಮೊದಲೇ ಕಾಡಂಚಿನ ಹಕ್ಕಲಿನಲ್ಲಿ ಬೆಳೆದು ನಿಂತ ಹಲಸಿನ ಮರಗಳು ಒಂದೊಂದಾಗಿ ನೆಲಕ್ಕೆ ಉರುಳತೊಡಗಿದವು. ಹಲಸಿನ ಹಂಬಲದ ಹೆಂಗಳೆಯರ ಜಗಳಕ್ಕೆ ಹೊಳೆಸಾಲಿನ ಗಂಡಗಡಣ ಪೈಸೆ ಕಿಮ್ಮತ್ತನ್ನೂ ಕೊಡಲಿಲ್ಲ. “ನಿಮಗೆ ಎಷ್ಟು ಹಲಸಿನ ಕಾಯಿ ಬೇಕು? ಯಾವ ಥರದ್ದು ಬೇಕು? ಅಂತ ಒಂದು ಲಿಸ್ಟ್ ಮಾಡಿಕೊಡಿ. ಸೋಮ್ವಾರದ ಸಂತೇಲಿ ಹುಡುಕಿ ತಂದು ಕೊಡುವ. ಇಷ್ಟೆಲ್ಲ ದುಡ್ಡು ಕೊಡ್ತಿರೋವಾಗ ನಾವು ಮಾತ್ರ ಹಲಸಿನ ಕಾಯಿಗೆಂದು ಮರ ಉಳಿಸಿಕೊಳ್ಳುವ ಮಳ್ಳುತನ ಮಾಡೋದು ಬೇಡ.” ಎಂದು ಹೆಂಗಸರ ದನಿಯಡಗಿಸಿದರು. ತಾವು ಮಾತ್ರವೇ ಒಂದೆರಡು ಮರಗಳನ್ನು ಉಳಿಸಿಕೊಂಡು ಎಲ್ಲರಿಗೆ ಅದರ ಕಾಯಿಗಳನ್ನು ದಾನಮಾಡುವ ಉಸಾಬರಿ ತಮಗ್ಯಾಕೆ ಎಂದು ಉಳಿದವರೂ ತಮ್ಮ ಮನೆಯ ಮರಗಳನ್ನು ಮಾರತೊಡಗಿದರು.
ಬಿಳಿಯಂಗಿಯ ವ್ಯಾಪಾರಿಗಳು ಮರದ ಬೊಡ್ಡೆಯ ಮೇಲೆ ಕುಳಿತು ಅದು ತಮಗೆ ತರಬಹುದಾದ ಆದಾಯವನ್ನು ಎಣಿಸಿ ಬಿಳಿನಗೆಯನ್ನು ಹೊರಸೂಸಿದರು. ಅವರಿಗೆಲ್ಲ ನಾಟಿಕೋಳಿಯ ಸಾರಿನೊಂದಿಗೆ ಒಂಚೂರು ಗೇರುಹಣ್ಣಿನ ಸುರೆಯ ಸಮಾರಾಧನೆಯನ್ನೂ ಮಾಡಿ ಹೊಳೆಸಾಲಿನವರು ಅತಿಥಿ ಸತ್ಕಾರದಲ್ಲಿ ಸೈ ಎನಿಸಿಕೊಂಡರು. ಇಡಿಯ ಹೊಳೆಸಾಲಿನ ತುಂಬೆಲ್ಲಾ ಕೊಡಲಿಯ ಸದ್ದು, ಗರಗಸರ ಹೂಂಕಾರ ತುಂಬಿರುವ ಹೊತ್ತಿನಲ್ಲಿ ಕಾಡಿನಲ್ಲಿರುವ ಮರಗಳೆಲ್ಲವೂ ಗಡಗಡನೆ ನಡುಗಿದವು. ಹಲಸಿನ ಮರದ ಬೊಡ್ಡೆಯ ಸಾಗಾಣಿಕೆಗೆಂದು ಹೊಳೆಸಾಲಿಗೆ ಬಂದಿಳಿದ ಸಾಕಾನೆಗಳು ತಿಳಿಯಾದ ಹೊಳೆಯ ಒಡಲನ್ನು ಕಲುಕತೊಡಗಿದವು. ಕಂಡದ್ದರ ಮೇಲೆಲ್ಲ ಹಾಡು ಕಟ್ಟಿ ಹಾಡುವ ಹೊಳೆಸಾಲಿನ ತಿಮ್ಮಜ್ಜಿ
ಕೊಡಲಿಯ ಕಂಡರೆ ಮರವೆಲ್ಲ ನಡುಗಿದೋ|
ಮರದ ಮ್ಯಾಗಿರುವ ಗಿಣಿರಾಯ| ತನ್ನಯ
ಮಡದೀಗೆ ಹೀಂಗೆ ನುಡಿದಾನೆ
ಇಲ್ಲಿತನಕ ಕಾಡಿದ್ದೊ, ಕಾಡ್ನಾಗೆ ಮರವಿದ್ದೊ|
ಮರದಾಗೆ ನಮ್ಮ ಮನೆಯಿದ್ದೊ| ಇನ್ಮುಂದೆ
ಮನೆಯಿಲ್ಲದ ತಬ್ಬಲಿ ನಾವಾದೊ…….
ತಿಮ್ಮಜ್ಜಿಯ ಹಾಡಿನ ರಾಗಕ್ಕೆ ತಕ್ಕಂತೆ ಕಾಡಿನ ಗಿಡಗಳೆಲ್ಲ ತಲೆಯಲ್ಲಾಡಿಸುತ್ತ ತೂಗಿದರೆ, ಮಾತಾಡಲಾರದ ಹೊಳೆಯು ಕಣ್ಣೀರು ಸುರಿಸಿದ್ದು ಯಾರ ಗಮನಕ್ಕೂ ಬರದೇಹೋಯ್ತು.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.