ಸಮಯ ಸರಿಯಾಗಿತ್ತು ಹಾಗಾಗಲಿಲ್ಲ. ಒಂದು ವೇಳೆ ನಾನು ಶಸ್ತ್ರಪ್ರಹಾರಕ್ಕೆ ಅಣಿಯಾದೆನೆಂದಿಟ್ಟುಕೊಳ್ಳಿ. ಅದುವರೆಗೂ ಕದಲದೇ ನಿಂತಿದ್ದ ನನ್ನ ಅನಿರೀಕ್ಷಿತ ದೇಹಚಲನೆ ಕಂಡು ಹುಲಿಗೆ ವಿಚಲಿತವಾದಂತೆನ್ನಿಸಿ ಅದು ಅಕ್ಷರಶಃ ಕೆರಳುತ್ತಿತ್ತು. ನಾನು ಗನ್ನು ಮೇಲಕ್ಕೆತ್ತಿ ಹೊಡೆಯಬೇಕೆಂದು ಹಂಚಿಕೆ ಹಾಕುವಾಗಲೇ ಅದು ಠಣ್ ಎಂದು ಒಂದೇ ನೆಗೆತಕ್ಕೆ ನಮ್ಮ ಮೇಲೆರಗಿ ಸಿಕ್ಕವರ ಕತ್ತು ಹಿಸುಕಿ ಕರುಳು ಬಗೆದಿರುತ್ತಿತ್ತು. ಕ್ಷಣಮಾತ್ರದಲ್ಲೇ ಈ ಅಚಾತುರ್ಯ ಸಂಭವಿಸುವ ಸಾಧ್ಯತೆಯಿತ್ತು. ನಾನು ಗನ್ನು ಚಲಾಯಿಸುವ ಗೋಜಿಗೆ ಹೋಗದಿದ್ದುದೆ ಸರಿಯಾಯ್ತು.
ಶ್ರೀಧರ ಪತ್ತಾರ ಅನುಭವ ಕಥನ “ಕಾಟಿಹಳ್ಳದ ತಿರುವು” ಕೃತಿಯ ಒಂದು ಬರಹ ನಿಮ್ಮ ಓದಿಗೆ
ಅದು ನನ್ನಿಂದ ಸರಿಯಾಗಿ ಹತ್ತು ಮೀಟರ್‌ದಷ್ಟೇ ದೂರ. ನನಗೂ ಸಾವಿಗೂ ತಡೆಗೋಡೆಯಾಗಿ ಆ ಮಣ್ಣು ದಿಬ್ಬ ಮಧ್ಯೆ ಇಲ್ಲದೇ ಹೋಗಿದ್ದರೇ? ಆ ಪ್ರಾಣಿ ಹತ್ತೆಂಟು ಅಡಿ ದೂರ ಹೋಗಿ ಹೊರಳಿ ನೋಡಿದಾಗ ನಾನು ಅಲ್ಲೇ ನಿಲ್ಲದೇ ಓಟಕ್ಕಿತ್ತಿದ್ದರೇ..? ಅಬ್ಪಾ…! ನೇರವಾಗಿ ಅದರ ಬಾಯಿಗೆ ಆಹಾರವಾಗುತ್ತಿದ್ದೆ. ಹಾಗೆ ಕೆಟ್ಟದ್ದನ್ನು ಯೋಚಿಸಬಾರದೆಂದರೂ ರಾತ್ರಿಯಿಡೀ ಈ ವಿಚಾರ ಹಿಂಡಿಹಿಪ್ಪೆ ಮಾಡುತ್ತಿತ್ತು. ಎರಡ್ಮೂರು ಬಾರಿ ನೀರು ಗುಟುಕರಿಸಿ ಮಗ್ಗಲು ಬದಲಿಸಿದರೂ ಅದೇ ಬೆಚ್ಚಿಬೀಳಿಸುವ ಕ್ಷಣಗಳ ಚಿತ್ರಣ ಕಣ್ಮುಂದೆ ಬರುತ್ತಿತ್ತು.
ಅಂದು ಸುಮಾ ನಾಷ್ಟಾದ ತಟ್ಟೆಯನ್ನು ಕೈಲ್ಹಿಡಿದು ನನ್ನನ್ನು ಕೂಗಿ ಕರೆದಳು. ಪಡಸಾಲೆಯಲ್ಲಿದ್ದವನು ಒಳಗೆ ಬಂದವ್ನೆ ತಟ್ಟೆ ಖಾಲಿಮಾಡಲು ಆತುರ ತೋರಿದೆ. ಈ ಮಧ್ಯೆ ‘ನಿಧಾನರೀ… ಅಷ್ಟೇಕೆ ಗಡಿಬಿಡಿ ತುತ್ತು ಗಂಟಲಿಗೆ ಸಿಕ್ಹಾಕ್ಕೊಂಡೀತು. ಕಕ್ಕುಲಾತಿಯಿಂದ ನುಡಿದಳವಳು. ನಾನಾದರೋ ಅಂದು ಮಹತ್ವದ ಕ್ಷಣವೊಂದಕ್ಕೆ ಸಾಕ್ಷಿಯಾಗಬೇಕಿತ್ತು. ಅಂತೆಯೇ ಹಾಗೆ ಅವಸರಿಸಿದೆನೇನೋ? ಹೀಗಾಗುವುದೆಂದು ನಾನಂತೂ ಊಹಿಸಿರಲಿಲ್ಲ. ಇನ್ನೂ ನನ್ನವಳಾದರೂ ಆ ಬಗ್ಗೆ ಹೇಗೆ ಯೋಚಿಸಿಯಾಳು? ನನ್ನೊಡನಿದ್ದ ಸಿದ್ದ ಮತ್ತು ಹಸನ್ ಅವರೂ ನನ್ನಂತೆಯೇ ಯತಾರ್ಥ.
ನಾವಿಂದು ಕಾಟಿಹಳ್ಳದ ಮೂಲೆಯ ಕಂಪಾರ್ಟಮೆಂಟ್‌ಗಳ ಗಸ್ತು ಮಾಡಬೇಕಿದ್ದಿತು. ಅಂತೆಯೇ ಸಿದ್ದ ಮತ್ತು ಹಸನ್‌ರನ್ನು ಜೊತೆಯಾಗಿಸಿಕೊಂಡು ಹೊರಡಲನುವಾದೆ. ‘ಹುಷಾರು ರೀ’ ಎಂದು ಹೊಸ್ತಿಲಲ್ಲಿ ನಿಂತ ಹೆಂಡತಿಯ ಎಂದಿನ ಪ್ರೀತಿ ಮತ್ತು ಕಾಳಜಿ ಬೆರೆತ ಮಾತು. ಅವಳ ಈ ಮಾತುಗಳೇ ನನಗೆ ಎಂದೆಂದೂ ಶ್ರೀರಕ್ಷೆಯಾಗಿರುತ್ತವೆಂಬ ನಂಬಿಕೆ ನನ್ನದಾಗಿತ್ತು.
ಆ ಕೊಳಚಿ ನಮ್ಮಿಂದ ನಲವತೈವತ್ತು ಹೆಜ್ಜೆಯಷ್ಟೇ ದೂರ. ಅಭ್ಯಾಸಬಲದಿಂದೆಂಬಂತೆ ನಮ್ಮ ಕಾಲುಗಳು ನಿಧಾನಗೊಂಡವು. ಕಣ್ಣು ಢಾಳಾಗಿಸಿ ಎಡಕ್ಕೆ ಬಲಕ್ಕೆ ಮುಂದೆ ಕಣ್ಣಳತೆಗೆ ಸಿಗುವಷ್ಟು ದೂರ ದೃಷ್ಟಿ ಹರಿಸಿದೆವು. ಮರಗಿಡಗಳ ಮಧ್ಯದಲ್ಲಿ ಲಂಟಾನಾ ಯುಪಟೋರಿಯಮ್‌ನಂತಹ ತರಹೇವಾರಿ ಮುಳ್ಳು ಕಂಟಿಗಳ ಪೊದೆ. ಅಲ್ಲಿ ಯಾವ ಸಪ್ಪಳವೂ ಇರಲಿಲ್ಲ. ಯಾವ ಪ್ರಾಣಿಯಾದರೂ ಅಲ್ಲಿದ್ದು ಅದು ಚಿಕ್ಕದಾಗಿ ಕದಲಿದರೂ ನಮಗೆ ಗೊತ್ತಾಗುತ್ತಿತ್ತು. ಏಕೆಂದರೆ ಕಸಕಡ್ಡಿ ತರಗೆಲೆಗಳ ರಾಶಿಯೇ ಮರಗಳಡಿಯಲ್ಲಿತ್ತು..
ಕೊಳಚಿಗೆ ಹತ್ತಿರವಾದಂತೆ ಕೆಟ್ಟವಾಸನೆ ಮೂಗಿಗಡರಿತು. ‘ಥೂ.. ದುರ್ಗಂಧ! ಇಲ್ಲೇ ಪಕ್ಕದಲ್ಲೆಲ್ಲೋ ಪ್ರಾಣಿ ಸತ್ತಿದೆ’ ಸಿದ್ದ ಸರಿಯಾಗಿ ಅಂದಾಜಿಸಿ ಹೇಳಿದ. ನಾನು ಹೌದೆಂಬಂತೆ ತಲೆಯಾಡಿಸಿದೆ. ಪ್ರಾಣಿ ಸತ್ತಿದೆಯೆಂದಾದರೆ ಅದರ ಹತ್ತಿರ ಹುಲಿ ಚಿರತೆಯಂತಹ ಮಾಂಸಾಹಾರಿ ಪ್ರಾಣಿಗಳು ಇದ್ದಿರಬಹುದಾದ ಸಾಧ್ಯತೆ ಇಲ್ಲದಿಲ್ಲ. ಯಾವುದಕ್ಕೂ ನಾವು ಜಾಗರೂಕತೆಯಿಂದ ನಡೆಯಬೇಕು. ನಮ್ಮ ಹೆಜ್ಜೆಗಳನ್ನು ಮತ್ತಷ್ಟು ಹಗುರವಾಗಿಡಬೇಕು. ಅಪಾಯದ ಮುನ್ಸೂಚನೆ ಅರಿತು ಕಣ್ಣಿಂದಲೇ ವಿಷಯ ವಿನಿಮಯಿಸಿಕೊಂಡೆವು. ಕೊಳಚಿ ಸಮೀಪಿಸಿದಂತೆ ನಮ್ಮ ಹೆಜ್ಜೆಗಳು ಮತ್ತಷ್ಟು ನಿಧಾನವಾದವು. ಕೊಳಚಿ ಇನ್ನೇನು ನಮ್ಮಿಂದ ಹತ್ಹೆಜ್ಜೆಯಷ್ಟೇ. ಮಧ್ಯದ ಮಣ್ಣುದಿಬ್ಬದಿಂದಾಚೆಗೆ ಕಣ್ಣು ಹಾಯಿಸಿದರೆ ಅಬ್ಬಾ…! ನಿಜಕ್ಕೂ ಘೋರದೃಶ್ಯ! ಹಿಂದೆಂದೂ ಕಂಡರಿಯದ್ದು. ಸಾವು ಕಣ್ಣೆದುರಿಗೆ ನಿಂತು ನರ್ತಿಸಿದಂತೆ. ಕ್ಷಣ ಕೈಕಾಲುಗಳು ತಣ್ಣಗಾದವು. ಅದಾಗಲೇ ‘ಹುಲಿ… ಹುಲಿ’ ಎಂದು ಸಿದ್ದ ದೊಡ್ಡದಾಗಿ ಉದ್ಗಾರವೆಳೆದಿದ್ದ. ಅವನ ಧ್ವನಿಯೀಗ ನಡುಗುತ್ತಿತ್ತು. ನೀರಿನಲ್ಲಿ ಮಲಗಿ ಒದ್ದಾಡಿ ಮೈಗೆಲ್ಲ ಕೆಸರು ಮೆತ್ತಿಸಿಕೊಂಡು ಸತ್ತ ಕಾಡೆಮ್ಮೆಯ ಶವಕ್ಕೆ ಬಾಯಿಹಾಕಿ ಮಾಂಸ ಭಕ್ಷಿಸುತ್ತಿದ್ದ ದೊಡ್ಡ ಗಾತ್ರದ ಹುಲಿ ಅವನ ಉದ್ಗಾರದ ಸದ್ದಿಗೆ ಬೆಚ್ಚಿ ಬಿದ್ದಿತೆನೋ… ಮಾಂಸ ತಿನ್ನುವುದನ್ನು ಬಿಟ್ಟು ಚಕ್ಕನೇ ಮೇಲೆದ್ದು ಗಾಂಭೀರ್ಯದಿಂದ ಐದಾರು ಮಾರು ದೂರ ನಡೆದು ಒಂದು ಕ್ಷಣ ನಿಂತಂತೆ ಮಾಡಿ ನಮ್ಮೆಡೆಗೆ ಕತ್ತು ತಿರುಗಿಸಿ ಬಾಯಗಲಿಸಿ ಗರ್ಜಿಸಿ ಅಲ್ಲಿಂದ ಓಡಿಹೋಯ್ತು. ಸುತ್ತಲಿರುವ ಎತ್ತರೆತ್ತರದ ಮರಗಳ ಅಭೇದ್ಯ ಕೋಟೆ ಅಕ್ಷರಶಃ ಪ್ರತಿಧ್ವನಿಸಿತು.
ಈ ಹಿಂದೆ ಮೂರ್ನಾಲ್ಕು ಬಾರಿ ಬೆನ್ನು ಬಾಲ ಮುಖವಷ್ಟೇ ತೋರಿಸಿ ಕ್ಷಣಮಾತ್ರದಲ್ಲಿ ಮರೆಯಾಗಿದ್ದ ಹುಲಿಗಳನ್ನು ಕಂಡಾಗ ಭಯಮಿಶ್ರಿತ ಖುಶಿಯೇನೋ ಮೂಡಿತ್ತು. ಆದರೆ ಈ ಅನುಭವ ಮಾತ್ರ ರೋಚಕ ಮತ್ತು ಅಷ್ಟೇ ಭಯಾನಕ. ಈ ಬಾರಿ ಹುಲಿಯನ್ನು ನೋಡಿದ್ದು ತೀರಾ ಹತ್ತಿರದಿಂದ. ಅದನ್ನು ಕಂಡೊಡನೆ ನನ್ನ ಪ್ರಾಣ ಉಳಿದರೆ ಸಾಕೆಂಬಂತಾಗಿತ್ತು. ನಿಂತಲ್ಲಿಯೇ ಬೆವರಿಳಿದ್ಹಾಗಾಯ್ತು. ಸಿದ್ದನೂ ನನ್ನಂತೆ ವಿಹ್ವಲಗೊಂಡಿದ್ದ. ಹೆದರಿ ನಡುಗುತ್ತಿದ್ದ ನನಗೆ ಓಡಿಹೋಗಬೇಕೆಂದರೂ ಕಾಲೆತ್ತಲಾಗುತ್ತಿಲ್ಲ, ನೆಲ ಕಾಲ್ಹಿಡಿದು ಎಳೆದಂತೆ. ಅದೂ ಒಳ್ಳೆಯದೇ ಆಯ್ತು. ಹುಲಿಯನ್ನು ಕಂಡೊಡನೆ ನಾನು ಹಾಗೆ ಓಡಿದ್ದರೆ ಪರಿಣಾಮ ಮಾತ್ರ ಕ್ರೂರವಾಗಿರುತ್ತಿತ್ತು. ಕೆಲವೊಮ್ಮೆ ತತ್‌ಕ್ಷಣದ ನಮ್ಮ ಒಳ್ಳೆಯ ನಿರ್ಧಾರಗಳು ನಮ್ಮನ್ನು ಅಪಾಯದಿಂದ ಪಾರಾಗಿಸುತ್ತವೆ; ಬದುಕಿಸುತ್ತವೆ; ಬಾಳಿಸುತ್ತವೆ. ಇಲ್ಲೂ ಆದದ್ದು ಅದೇ.
ಹುಲಿ ನಮ್ಮನ್ನು ನೋಡಿದಾಕ್ಷಣ ಗಲಿಬಿಲಿಗೊಂಡಂತಾಗಿ ನಮಗೆ ವಿಮುಖವಾಗಿ ಓಡದೇ ನಿಂತಲ್ಲಿಂದಲೇ ದಾಳಿ ಮಾಡುವ ಚೂರು ಸೂಚನೆಯನ್ನೇನಾದರೂ ತೋರಿಸಿದ್ದರೆ ನಾನೂ ಕೈಲಿದ್ದ ಬಂದೂಕನ್ನು ಬಗಲಿಗೇರಿಸಿಕೊಳ್ಳುತ್ತಿದ್ದೆ. ಹಾಗೆ ಯೋಚಿಸಿ ಬಂದೂಕಿನ ಕುದುರೆಯನ್ನು ಹಿಂದಕ್ಕೆ ಎಳೆದು ಬಿಟ್ಟಿದ್ದರೆ ಆಗಲೇ ಲೋಡಾಗಿದ್ದ ಬಂದೂಕಿನ ನಳಿಗೆಯಿಂದ ಬುಲೆಟ್ ಮುಂದಕ್ಕೆ ಸಿಡಿದು ಹೆಬ್ಬುಲಿಯ ದೇಹ ಸೀಳುತ್ತಿತ್ತು. ನನ್ನೀ ತತ್‌ಕ್ಷಣದ ನಡೆಯಿಂದ ನಿರೀಕ್ಷಿಸದ ಘಟನೆಯೊಂದು ಇದ್ದಕ್ಕಿದ್ದಂತೆ ಸಂಭವಿಸುತ್ತಿತ್ತು. ಆತ್ಮರಕ್ಷಣೆಗೋಸ್ಕರವಾದರೂ ಹಾಗೆ ಮಾಡಿದ್ದರೆ ಆ ಘಳಿಗೆಗಷ್ಟೇ ನಾನು ಹುಲಿಯನ್ನು ಕೊಂದ ಪರಾಕ್ರಮಿ. ಆದರೆ ಆ ಮೂಕಪ್ರಾಣಿಯನ್ನು ಹೊಡೆದು ನಾನದನ್ನು ಜೀರ್ಣಿಸಿಕೊಳ್ಳುತ್ತಿದ್ದೆನೇ..? ಖಂಡಿತವಾಗಿಯೂ ಇಲ್ಲ. ನನ್ನ ಮಟ್ಟಿಗೆ ಅದೊಂದು ಕೊಲೆಯೇ. ಆ ಸಂದರ್ಭದಲ್ಲಿ ನಿರುಪದ್ರವಿಯಾಗಿ ವರ್ತಿಸಿದ ಪ್ರಾಣಿಯನ್ನು ಕೊಂದ ಪಾಪ ನನ್ನನ್ನು ಖಂಡಿತ ಸುತ್ತಿಕೊಳ್ಳುತ್ತಿತ್ತು. ಏನೇ ಕಾರಣಗಳೊಡ್ಡಿ ಕಾನೂನಿನಿಂದ ತಪ್ಪಿಸಿಕೊಂಡರೂ ಜೀವನಪರ್ಯಂತ ನಾನು ಪಶ್ಚಾತಾಪದ ಬೆಂಕಿಯಲ್ಲಿ ಬೇಯುವಂತಾಗುತ್ತಿತ್ತು.
ಸಮಯ ಸರಿಯಾಗಿತ್ತು ಹಾಗಾಗಲಿಲ್ಲ. ಒಂದು ವೇಳೆ ನಾನು ಶಸ್ತ್ರಪ್ರಹಾರಕ್ಕೆ ಅಣಿಯಾದೆನೆಂದಿಟ್ಟುಕೊಳ್ಳಿ. ಅದುವರೆಗೂ ಕದಲದೇ ನಿಂತಿದ್ದ ನನ್ನ ಅನಿರೀಕ್ಷಿತ ದೇಹಚಲನೆ ಕಂಡು ಹುಲಿಗೆ ವಿಚಲಿತವಾದಂತೆನ್ನಿಸಿ ಅದು ಅಕ್ಷರಶಃ ಕೆರಳುತ್ತಿತ್ತು. ನಾನು ಗನ್ನು ಮೇಲಕ್ಕೆತ್ತಿ ಹೊಡೆಯಬೇಕೆಂದು ಹಂಚಿಕೆ ಹಾಕುವಾಗಲೇ ಅದು ಠಣ್ ಎಂದು ಒಂದೇ ನೆಗೆತಕ್ಕೆ ನಮ್ಮ ಮೇಲೆರಗಿ ಸಿಕ್ಕವರ ಕತ್ತು ಹಿಸುಕಿ ಕರುಳು ಬಗೆದಿರುತ್ತಿತ್ತು. ಕ್ಷಣಮಾತ್ರದಲ್ಲೇ ಈ ಅಚಾತುರ್ಯ ಸಂಭವಿಸುವ ಸಾಧ್ಯತೆಯಿತ್ತು. ನಾನು ಗನ್ನು ಚಲಾಯಿಸುವ ಗೋಜಿಗೆ ಹೋಗದಿದ್ದುದೆ ಸರಿಯಾಯ್ತು.
ಎದುರಿಗೆ ನಿಂತ ನಮ್ಮನ್ನು ಕಂಡು ಹುಲಿಯ ಮನಸ್ಸಿನಲ್ಲಿ ಏನೋಡಿತೋ..! ವ್ಯಾಘ್ರ ಕೋಪಗೊಂಡು ಗರ್ಜಿಸಿತಾದರೂ ನಮ್ಮ ಮೇಲೆರಗುವ ಮನಸ್ಸು ಮಾಡಲಿಲ್ಲ. ‘ಅದಾವ ಕ್ಷುದ್ರ ಜೀವಿಗಳಿವು ತನ್ನೆದುರಿಗೆ ಬಂದಿವೆ ಎಂತಲೋ.. ತನಗಿಂತ ಕ್ರೂರಪ್ರಾಣಿಗಳು ತನ್ನೆದುರಿಗೇ ನಿಂತಿವೆಯಲ್ಲ; ತನಗೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಹೆದರಿತೋ… ತಿಳಿಯದು. ಆ ಕ್ಷಣ ಹುಲಿಯ ಎದುರಲ್ಲಿ ‘ಖಂಡವಿದೆಕೋ.. ಮಾಂಸವಿದೆಕೋ.. ಗುಂಡಿಗೆಯ ಬಿಸಿ ರಕ್ತವಿದೆಕೋ..! ಎಂದು ಚಂಡವ್ಯಾಘ್ರನ ಹಸಿವು ಹಿಂಗಿಸಿ ಅದರ ಮನಸ್ಸನ್ನು ಸಂತುಷ್ಟಗೊಳಿಸಬೇಕೆನ್ನುವ ಪುಣ್ಯಕೋಟಿ ಕತೆಯ ಸತ್ಯಪರಿಪಾಲಕ ಗೋವು ನಾವಾಗಿರದಿದ್ದರೂ ಕೊಟ್ಟಿಗೆಯೊಳಗಿರುವ ತನ್ನ ಎಳೆ ಕರುವನ್ನು ಸೇರಬೇಕು; ಸಂತೈಸಬೇಕು; ಮಮತೆಯಿಂದ ಹಾಲುಣಿಸಬೇಕು ಎಂಬ ತಾಯ್ಗರಳ ಗೋವುಗಳಾಗಿದ್ದೆವು ನಾವು. ಖೂಳವ್ಯಾಘ್ರನ ಬಾಯಿಂದ ತಪ್ಪಿಸಿಕೊಂಡು ಓಡಿಹೋಗಬೇಕು ಜೀವ ಉಳಿಸಿಕೊಳ್ಳಬೇಕು ಎಂಬುದೇ ನನ್ನ ಆ ಕ್ಷಣದ ತುಡಿತ. ಈ ಹುಲಿಯೂ ಆ ಪುಣ್ಯಕೋಟಿ ಕತೆಯ ವ್ಯಾಘ್ರನ ದಾರಿಯೇ ತುಳಿಯಿತು. ‘ಬಡಜೀವಗಳು ಬದುಕಿಕೊಳ್ಳಲಿ’ ಎಂದು ಮಾನವೀಯತೆಯಿಂದ ನಮಗೆ ಜೀವದಾನ ನೀಡಿ ಅಲ್ಲಿಂದ ಕಾಲ್ಕೀಳುವ ದೊಡ್ಡ ಮನಸ್ಸು ಮಾಡಿತು; ಮಹದುಪಕಾರ ಮಾಡಿ ಪುಣ್ಯ ಕಟ್ಟಿಕೊಂಡಿತು. ಹೇಗೋ ಬದುಕಿದೆವು. ದೇವರ ಕೃಪಕಟಾಕ್ಷ ನಮ್ಮ ತಲೆಯ ಮೇಲಿತ್ತೋ ಇಲ್ಲವೋ… ಆದರೆ ಹುಲಿಯ ಕೃಪೆಯಂತೂ ಇದ್ದೇಯಿತ್ತು ಜೀವರಕ್ಷಕವಾಗಿ.
ಆ ಘಳಿಗೆಯಲ್ಲಿ ಹಸನ್ ಅದೆಂತಹ ಧೈರ್ಯ ಮಾಡಿದ! ನಾನು ಮತ್ತು ಸಿದ್ದ ಹುಲಿಗೆದುರಾಗಿ ನಡುಗುತ್ತಾ ನಿಂತಿದ್ದರೆ, ನನ್ನ ಹಿಂದಿದ್ದ ಆ ಹುಂಬ ಮೊಬೈಲ್ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಹುಲಿಯ ಚಿತ್ರ ನೋಡುತ್ತ ಸಂತಸದ ನಗೆಬೀರುತ್ತಿದ್ದ. ಸಾವಿನ ದವಡೆಯಿಂದ ಪಾರಾಗಿ ಬಂದ ಹರ್ಷದಲ್ಲಿ ನಾನಿದ್ದೆ. ಮೂವರು ಘಟನೆಯನ್ನು ಮೆಲುಕುಹಾಕುತ್ತಲೇ ಮನೆಯೆಡೆಗೆ ಅವಸರವಸರವಾಗಿ ಹೆಜ್ಜೆ ಹಾಕಿದೆವು.
(ಕೃತಿ: ಕಾಟಿಹಳ್ಳದ ತಿರುವು (ಅನುಭವ ಕಥನ), ಲೇಖಕರು: ಶ್ರೀಧರ ಪತ್ತಾರ, ಪ್ರಕಾಶಕರು: ವೈಷ್ಣವಿ ಪ್ರಕಾಶನ, ಪುಟಗಳು: 124, ಬೆಲೆ: 120/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ