Advertisement
ಗತಕಾಲದ ಚಿನ್ನದ ಗಣಿ ಕೊಲಂಬಿಯಾ:  ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಗತಕಾಲದ ಚಿನ್ನದ ಗಣಿ ಕೊಲಂಬಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಕೊಲಂಬಿಯಾದಲ್ಲಿ ದೊಡ್ಡವರು ಮಾತ್ರವಲ್ಲ, ಚಿಕ್ಕ ಮಕ್ಕಳೂ ಸಹ ಕಾಫಿಪ್ರಿಯರು. ಊಟದ ನಂತರವೂ ಸಹ ಕಾಫಿ ಕುಡಿಯುವ ಅಭ್ಯಾಸವನ್ನು ಇವರು ಇಟ್ಟುಕೊಂಡಿದ್ದಾರೆ. ರಾತ್ರಿಯ ಊಟದ ನಂತರ ಹೆತ್ತವರೇ ತಮ್ಮ ಮಕ್ಕಳಿಗೆ ಕಾಫಿಯನ್ನು ಕುಡಿಯುವುದಕ್ಕೆ ಕೊಡುತ್ತಾರೆ. ಇದನ್ನು ‘ಕಾಫಿ ಕಾನ್ ಲೆಚೆ’ ಎಂದು ಕೊಲಂಬಿಯನ್ ಭಾಷೆಯಲ್ಲಿ ಕರೆಯಲಾಗುತ್ತದೆ. ಅಂದರೆ ‘ಹಾಲಿನ ಜೊತೆಗೆ ಕಾಫಿ’ ಎಂದರ್ಥ. ಮಕ್ಕಳಿಗೆ ಹಾಲಿನ ಜೊತೆಗೆ ಬೆರೆಸಿದ ಲೈಟಾದ ಕಾಫಿಯನ್ನು ಕೊಡುವ ದೊಡ್ಡವರು ಸ್ಟ್ರಾಂಗ್ ಕಾಫಿಯನ್ನೇ ಕುಡಿಯುತ್ತಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಕೊಲಂಬಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

ಇಡಿಯ ಕೊಲಂಬಿಯಾ ದೇಶವನ್ನು ಐದು ಭೌಗೋಳಿಕ ಪ್ರದೇಶಗಳಾಗಿ ವರ್ಗೀಕರಿಸಿಕೊಳ್ಳಲಾಗುತ್ತದೆ. ಅಟ್ಲಾಂಟಿಕ್ ತಗ್ಗು ಪ್ರದೇಶಗಳು ಕೊಲಂಬಿಯಾದ ಪ್ರಾಚೀನತೆಯನ್ನು ಅರಿತುಕೊಳ್ಳುವ ನೆಲೆಯಿಂದ ಪ್ರಾಮುಖ್ಯತೆ ಪಡೆದಿವೆ. ಕೊಲಂಬಿಯಾದ ಮೊದಲ ವಸಾಹತುಗಳು ಕಾಣಿಸಿಕೊಂಡದ್ದು ಇಲ್ಲಿಯೇ. ಇಲ್ಲಿಯ ಜನರಿಗೆ ಮೊದಮೊದಲ ನೆಲೆಯನ್ನು ಒದಗಿಸಿಕೊಟ್ಟ ಪ್ರದೇಶವಿದು. ಈಗ ಇಲ್ಲಿ ಹಿಂದಿನಷ್ಟೇನೂ ಜನಸಂಖ್ಯೆ ಇಲ್ಲ. ಆದರೆ ಇಪ್ಪತ್ತು ಶೇಕಡಾ ಜನರು ಈಗಲೂ ಇಲ್ಲಿ ಬದುಕುತ್ತಿದ್ದಾರೆ. ಆರ್ಥಿಕತೆ ಉತ್ತಮವಾಗಿದೆ. ಆದರೆ ಅತ್ಯುತ್ತಮ ಎನಿಸುವಷ್ಟೇನೂ ಅಲ್ಲ. ಹಲವು ಬೆಳೆಗಳನ್ನು ಇಲ್ಲಿಂದ ರಫ್ತು ಮಾಡಲಾಗುತ್ತದೆ. ಫೆಸಿಫಿಕ್ ಕರಾವಳಿ ಪ್ರದೇಶವು ಫಲವತ್ತಾದ ಪ್ರದೇಶ. ಚೆನ್ನಾಗಿ ಬೆಳೆದಿರುವ ಮಳೆಕಾಡು ಇಲ್ಲಿದೆ. ಇಲ್ಲಿಯ ಮಣ್ಣು ಫಲವತ್ತಾಗಿದೆ. ಆದರೆ ಇಲ್ಲಿ ಜನರು ಅಷ್ಟಾಗಿ ನೆಲೆನಿಂತಿಲ್ಲ. ಇಲ್ಲಿ ಕಂಡುಬರುವ ಹೆಚ್ಚಿನವರು ಆಫ್ರಿಕನ್ ಮೂಲದವರು. ಇವರು ನದಿತೀರದ ಉದ್ದಕ್ಕೂ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇಲ್ಲಿ ವಾಣಿಜ್ಯ ಚಟುವಟಿಕೆಗಳು ಕಡಿಮೆ. ಆಂಡಿಯನ್ ಪ್ರದೇಶವು ಎಲ್ಲಾ ರೀತಿಯಲ್ಲಿಯೂ ಬಲಯುತವಾಗಿದೆ. ದೇಶದ ರಾಜಕೀಯ ಮತ್ತು ಆರ್ಥಿಕತೆಯ ಕೇಂದ್ರಸ್ಥಾನವಿದು. ದೇಶದ ಹೆಚ್ಚಿನ ಜನರು ಇಲ್ಲಿಯೇ ಬದುಕುತ್ತಿದ್ದಾರೆ. ಅತೀ ದೊಡ್ಡ ನಗರಗಳೆನಿಸಿಕೊಂಡಿರುವ ಮೆಡೆಲಿನ್, ಕ್ಯಾಲಿ ಮತ್ತು ಬೊಗೋಟಾಗಳಿಗೆ ನೆಲೆಯಾಗಿದೆ ಈ ಪ್ರದೇಶ. ಮೆಕ್ಕಲು ಮಣ್ಣಿನಿಂದ ಕೂಡಿರುವ ಪ್ರದೇಶವಿದು. ಸುಮಾರು ಅರುವತ್ತೈದು ಶೇಕಡಾದಷ್ಟು ಭೂಪ್ರದೇಶ ಲಾನೋಸ್ ಮತ್ತು ಅಮೇಜಾ಼ನ್ ಮಳೆಕಾಡಿನ ಪ್ರದೇಶವಾಗಿ ಗುರುತಿಸಿಕೊಂಡಿದೆ. ಆದರೆ ಇಲ್ಲಿ ವಾಸಿಸುತ್ತಿರುವ ಜನರ ಸಂಖ್ಯೆ ಕಡಿಮೆ. ಲಾನೋಸ್‌ನಲ್ಲಿದ್ದ ಬಹುತೇಕ ಜನರು ಪಶುಪಾಲನೆಯನ್ನು ಪ್ರಮುಖ ವೃತ್ತಿಯಾಗಿಸಿಕೊಂಡಿದ್ದರು.

ಸ್ಪೇನ್ ದೇಶದ ಆಳ್ವಿಕೆಯಡಿಯಲ್ಲಿ ಕೊಲಂಬಿಯಾ ಇದ್ದಾಗ ಚಿನ್ನದ ಗಣಿಗಾರಿಕೆಯು ಆದಾಯದ ಬಹುಪ್ರಮುಖ ಮೂಲವಾಗಿತ್ತು. ಚಿನ್ನಕ್ಕಿದ್ದ ವಿಪರೀತ ಬೇಡಿಕೆ ಮತ್ತು ದುಬಾರಿ ಬೆಲೆಯ ಕಾರಣದಿಂದಾಗಿ ಸಮಾಧಿಗಳನ್ನು ಅಗೆದು ಚಿನ್ನವನ್ನು ದೋಚುವ ಜನರೂ ಇದ್ದರು. ಇವತ್ತಿನ ಕಾಲಘಟ್ಟದಲ್ಲಿ ಕೊಲಂಬಿಯಾ ಬೇರೆ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯನ್ನು ಸಾಧಿಸಿದೆ. ಚಿನ್ನದ ರಫ್ತನ್ನು ಮಾತ್ರವೇ ಅವಲಂಬಿಸಿಕೊಂಡಿಲ್ಲ. ಹೈಡ್ರೋಕಾರ್ಬನ್ ಇಂಧನಗಳು, ಕೃಷಿ ಉತ್ಪನ್ನಗಳು, ಹಲವಾರು ಲೋಹಗಳು ಕೊಲಂಬಿಯಾದಿಂದ ಬೇರೆ ರಾಷ್ಟ್ರಗಳಿಗೆ ರಫ್ತಾಗುತ್ತಿವೆ. ಬಹುತೇಕ ಕೈಗಾರಿಕೆಗಳು ಖಾಸಗಿಯವರ ಪಾಲಾಗಿವೆ. ರೈಲ್ವೇ, ಪೆಟ್ರೋಲಿಯಂ ಇಂತಹ ಕೆಲವೇ ಕೆಲವು ಕ್ಷೇತ್ರಗಳು ಮಾತ್ರ ಸರ್ಕಾರಕ್ಕೆ ಸೀಮಿತ ಎನಿಸಿವೆ. ಆರ್ಥಿಕ ಚಟುವಟಿಕೆಗಳಲ್ಲಿ ಖಾಸಗಿಯವರು ಭಾಗವಹಿಸುವುದಕ್ಕೆ ಅಗತ್ಯವಾದ ಪ್ರೋತ್ಸಾಹವನ್ನು ಸರ್ಕಾರ ನೀಡುತ್ತಿದೆ. ಅನುಕೂಲಕರವಾದ ರೀತಿಯಲ್ಲಿ ತೆರಿಗೆ ವ್ಯವಸ್ಥೆಯನ್ನು ರೂಪಿಸಿದೆ. ಹೊಸ ಕೈಗಾರಿಕೆಗಳಿಗೆ ಸಾಲ ನೀಡುತ್ತಿದೆ. ಪ್ರದೇಶಗಳ ಆಧಾರದಲ್ಲಿಯೂ ಸಹ ನೆರವು ನೀಡುತ್ತಿದೆ. 1950ರ ಸುಮಾರಿಗೆ ಕೊಲಂಬಿಯಾದ ಆರ್ಥಿಕ ಬೆಳವಣಿಗೆ ಉತ್ತಮವಾಗಿತ್ತು. ಆದರೆ ನಂತರದ ಕಾಲಘಟ್ಟದಲ್ಲಿ ಬೆಳವಣಿಗೆಯ ದರ ಕುಸಿಯತೊಡಗಿತು. ವಸ್ತುಗಳ ಬೆಲೆ ಹೆಚ್ಚಳವಾಯಿತು. ನಿರುದ್ಯೋಗ ಬೆಳೆಯಿತು. ಇಷ್ಟೆಲ್ಲಾ ಇದ್ದರೂ ಕೊಲಂಬಿಯಾ ಹಣಕಾಸಿನ ಸ್ಥಿತಿಯನ್ನು ಒಂದಷ್ಟುಮಟ್ಟಿಗೆ ಉತ್ತಮವಾಗಿಯೇ ಕಾಯ್ದುಕೊಂಡಿದೆ. ಸುತ್ತಮುತ್ತಲಿನ ರಾಷ್ಟ್ರಗಳು ಹಣಕಾಸಿನ ಚೈತನ್ಯವನ್ನು ಕಳೆದುಕೊಂಡು, ಸಾಲದ ಸುಳಿಗೆ ಸಿಲುಕಿದ್ದಾಗಲೂ ಸಹ ಕೊಲಂಬಿಯಾ ಈ ಬಗೆಯ ಬಿಕ್ಕಟ್ಟನ್ನು ಅನುಭವಿಸಿಲ್ಲ. ಕೊಲಂಬಿಯಾದಲ್ಲಿ ಇಂದಿಗೂ ಸಂಪನ್ಮೂಲಗಳು ಹೇರಳವಾಗಿವೆ. ಚಿನ್ನ, ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ನಿಕ್ಷೇಪಗಳು ಕೊಲಂಬಿಯಾ ಪಾಲಿಗೆ ಬಹುದೊಡ್ಡ ಭರವಸೆಯ ಸೆಲೆ. ನದಿಗಳ ನೀರನ್ನು ಜಲವಿದ್ಯುತ್ ಶಕ್ತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ದೇಶದ ಮಧ್ಯಭಾಗದಲ್ಲಿ ಮತ್ತು ಪಶ್ಚಿಮ ದಿಕ್ಕಿನ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪಗಳಿವೆ. ಇಂತಹ ಕೆಲವು ಪ್ರದೇಶಗಳಲ್ಲಿ ಬೆಳ್ಳಿ, ಪ್ಲಾಟಿನಮ್ ಸಹ ದೊರಕುತ್ತದೆ. ಇಲ್ಲಿನ ಲಾ ಗುವಾಜಿರಾ ಪ್ರದೇಶದಲ್ಲಿರುವ ಕಲ್ಲಿದ್ದಲಿನ ನಿಕ್ಷೇಪಗಳು ಉತ್ತರ ಮತ್ತು ದಕ್ಷಿಣ ಅಮೇರಿಕಾಗಳಲ್ಲಿಯೇ ಅತೀ ದೊಡ್ಡದು ಎನಿಸಿದೆ.

ಆಂಟಿಯೋಕ್ವಿಯಾದಲ್ಲಿ ತಾಮ್ರದ ನಿಕ್ಷೇಪಗಳಿವೆ. ಮ್ಯಾಗ್ಡಲೇನಾ ಮತ್ತು ಕ್ಯಾಟಟಂಬೊ ನದಿಗಳ ಕಣಿವೆ ಪ್ರದೇಶಗಳಲ್ಲಿ ಪೆಟ್ರೋಲಿಯಂ ನಿಕ್ಷೇಪಗಳಿವೆ. ವಿಶೇಷ ರೀತಿಯಲ್ಲಿರುವ ಚೀಸ್ ಅನ್ನು ಬಿಸಿ ಬಿಸಿಯಾದ ಚಾಕೋಲೇಟ್‌ನಲ್ಲಿ ಮುಳುಗಿಸಿ ತಿನ್ನುವುದು ಕೊಲಂಬಿಯನ್ನರಿಗೆ ಬಹಳ ಇಷ್ಟ. ಕಾಫಿಗೆ ಹೆಸರುವಾಸಿಯಾಗಿದೆ ಕೊಲಂಬಿಯಾ. ಪ್ರಪಂಚದ ಬಹುತೇಕ ರಾಷ್ಟ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಪೂರೈಸುತ್ತಿರುವ ದೇಶವಿದು.

ಕೊಲಂಬಿಯಾದಲ್ಲಿ ದೊಡ್ಡವರು ಮಾತ್ರವಲ್ಲ, ಚಿಕ್ಕ ಮಕ್ಕಳೂ ಸಹ ಕಾಫಿಪ್ರಿಯರು. ಊಟದ ನಂತರವೂ ಸಹ ಕಾಫಿ ಕುಡಿಯುವ ಅಭ್ಯಾಸವನ್ನು ಇವರು ಇಟ್ಟುಕೊಂಡಿದ್ದಾರೆ. ರಾತ್ರಿಯ ಊಟದ ನಂತರ ಹೆತ್ತವರೇ ತಮ್ಮ ಮಕ್ಕಳಿಗೆ ಕಾಫಿಯನ್ನು ಕುಡಿಯುವುದಕ್ಕೆ ಕೊಡುತ್ತಾರೆ. ಇದನ್ನು ‘ಕಾಫಿ ಕಾನ್ ಲೆಚೆ’ ಎಂದು ಕೊಲಂಬಿಯನ್ ಭಾಷೆಯಲ್ಲಿ ಕರೆಯಲಾಗುತ್ತದೆ. ಅಂದರೆ ‘ಹಾಲಿನ ಜೊತೆಗೆ ಕಾಫಿ’ ಎಂದರ್ಥ. ಮಕ್ಕಳಿಗೆ ಹಾಲಿನ ಜೊತೆಗೆ ಬೆರೆಸಿದ ಲೈಟಾದ ಕಾಫಿಯನ್ನು ಕೊಡುವ ದೊಡ್ಡವರು ಸ್ಟ್ರಾಂಗ್ ಕಾಫಿಯನ್ನೇ ಕುಡಿಯುತ್ತಾರೆ.

ಕೊಲಂಬಿಯಾದ ಮೂವತ್ತು ಶೇಕಡಾಕ್ಕಿಂತ ಹೆಚ್ಚಿನ ಭೂಪ್ರದೇಶ ಅಮೇಜಾ಼ನ್ ಮಳೆಕಾಡಿನಿಂದ ಆವೃತವಾಗಿದೆ. ಹೆಚ್ಚಿನ ವಿಶಿಷ್ಟ ವನ್ಯಜೀವಿ ಪ್ರಭೇದಗಳು ಇಂತಹ ಕಾಡುಪ್ರದೇಶಗಳಲ್ಲಿಯೇ ಕಂಡುಬರುತ್ತವೆ. ವಿಶ್ವದ ಹದಿನೇಳು ದೇಶಗಳನ್ನು ವೈವಿಧ್ಯಮಯ ದೇಶಗಳಾಗಿ ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಸೇರಿಕೊಂಡ ದೇಶಗಳಲ್ಲಿ ಕೊಲಂಬಿಯಾವೂ ಒಂದಾಗಿದೆ. ಇಲ್ಲಿರುವ ವಿವಿಧ ಬಗೆಯ ವನ್ಯಜೀವಿಗಳಿಂದಾಗಿ ಕೊಲಂಬಿಯಾಕ್ಕೆ ಈ ಸ್ಥಾನ ದೊರೆತಿದೆ. ಸ್ಥಳೀಯ ಜಾತಿಗೆ ಸೇರಿದ ವನ್ಯಜೀವಿ ಪ್ರಭೇದಗಳನ್ನು ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಹೊಂದಿರುವ ಪ್ರಪಂಚದ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದೆ ಕೊಲಂಬಿಯಾ. ಇಲ್ಲಿ ಕಂಡುಬರುವ ಹಲವು ವನ್ಯಜೀವಿ ಪ್ರಭೇದಗಳು ವಿಶ್ವದ ಬೇರೆ ರಾಷ್ಟ್ರಗಳಲ್ಲಿಯೂ ಕಂಡುಬರುತ್ತವೆ.

ಗುಲಾಬಿ ಡಾಲ್ಫಿನ್‌ಗಳ ನೆಲೆ ಎನಿಸಿಕೊಂಡಿದೆ ಕೊಲಂಬಿಯಾ. ಇದನ್ನು ಪಿಂಕ್ ರಿವರ್ ಡಾಲ್ಫಿನ್ ಅಥವಾ ಅಮೇಜಾ಼ನ್ ರಿವರ್ ಡಾಲ್ಫಿನ್ ಎಂದು ಕರೆಯಲಾಗುತ್ತದೆ. ಇದು ಕೊಲಂಬಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತದೆ. ಕ್ಯಾನೋ ಕ್ರಿಸ್ಟೇಲ್ಸ್ ಎನ್ನುವುದು ಕೊಲಂಬಿಯಾದಲ್ಲಿರುವ ಸಿಹಿನೀರಿನ ನದಿಯಾಗಿದೆ. ಇದು ವರ್ಷವಿಡೀ ಶುಭ್ರ ನೀಲಿ ವರ್ಣದಿಂದ ಕಂಗೊಳಿಸುತ್ತಿರುತ್ತದೆ. ಇದರ ತಳದಲ್ಲಿರುವ ಸಸ್ಯಗಳ ಕಾರಣದಿಂದಾಗಿ ಹೀಗಾಗಿದೆ. ಬೂದು ಬಣ್ಣದ ಬಂಡೆಗಳು ಇದರ ಸುತ್ತ ಇರುತ್ತದೆ. ಹಲವಾರು ಪ್ರಕಾಶಮಾನವಾದ ಬಣ್ಣಗಳು ನದಿಯ ನೀರಿನಲ್ಲಿ ಹೊಳೆದಂತೆ ಕಾಣಿಸುತ್ತದೆ. ಆದ್ದರಿಂದ ನೋಡುವವರ ಪಾಲಿಗೆ ಕಾಮನಬಿಲ್ಲನ್ನು ಕಂಡ ಅನುಭವ ಉಂಟಾಗುತ್ತದೆ. ಈ ಕಾರಣದಿಂದಲೇ ಈ ನದಿಯನ್ನು ‘ದ್ರವ ಕಾಮನಬಿಲ್ಲು’ ಎಂದು ಕರೆಯುವ ರೂಢಿಯಿದೆ.

ಕೊಲಂಬಿಯಾದಲ್ಲಿ ಹೆಚ್ಚಿನ ಜನರು ಇಷ್ಟಪಡುವ ಕ್ರೀಡೆ ಫುಟ್‌ಬಾಲ್. ಇಲ್ಲಿಯ ಮೂರು ನಗರಗಳಲ್ಲಿ ಹೆಚ್ಚಾಗಿ ಫುಟ್‌ಬಾಲ್ ಪಂದ್ಯಗಳು ನಡೆಯುತ್ತವೆ. ಇವುಗಳಲ್ಲಿ ಸದಾ ಎರಡು ತಂಡಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಇರುತ್ತದೆ. ಬೊಗೋಟಾ ನಗರದಲ್ಲಿ ಮಿಲೋನಾರಿಯೊಸ್ ಮತ್ತು ಸಾಂಟಾ ಫೆ ಎಂಬ ಎರಡು ತಂಡಗಳು ಗೆಲುವಿಗಾಗಿ ಹೋರಾಡುತ್ತವೆ. ಡಿಪೋರ್ಟಿವೊ ಇಂಡಿಪೆಂಡೆಂಟ್ ಮತ್ತು ನ್ಯಾಶನಲ್ ಎಂಬೆರಡು ತಂಡಗಳ ಸ್ಪರ್ಧೆ ಕಂಡುಬರುವುದು ಮೆಡೆಲ್ಲಿನ್ ಎಂಬ ಪ್ರದೇಶದಲ್ಲಿ. ಕ್ಯಾಲಿ ಪ್ರದೇಶದಲ್ಲಿ ಡಿಪೋರ್ಟಿವೊ ತಂಡವು ಅಮೇರಿಕಾ ತಂಡಕ್ಕೆ ಕಠಿಣ ಪೈಪೋಟಿ ನೀಡುತ್ತದೆ. ಇಲ್ಲಿಯ ರಾಷ್ಟ್ರೀಯ ಫುಟ್‌ಬಾಲ್ ತಂಡವು ಹಲವಾರು ಸಲ ವಿಶ್ವಕಪ್‌ಗೆ ಅರ್ಹತೆ ಗಳಿಸಿಕೊಂಡಿದೆ. ಬಾಸ್ಕೆಟ್‌ಬಾಲ್ ಮತ್ತು ಬೇಸ್‌ಬಾಲ್, ಹೆಚ್ಚಿನ ಜನರನ್ನು ಸೆಳೆಯುವ ಇನ್ನೆರಡು ಪ್ರಸಿದ್ಧ ಕ್ರೀಡೆಗಳು. ಗಾಲ್ಫ್, ಟೆನ್ನಿಸ್ ಮೊದಲಾದ ಆಟಗಳನ್ನು ಇಲ್ಲಿ ಆಡಲಾಗುತ್ತದೆ. ಆದರೆ ಹೆಚ್ಚಿನ ಜನಪ್ರಿಯತೆಯೇನೂ ಇಲ್ಲ. ಸೈಕಲ್ ರೇಸಿಂಗ್ ಎನ್ನುವುದು ಜನಾಕರ್ಷಣೆಯನ್ನು ಹೊಂದಿರುವ ಸ್ಪರ್ಧೆಯಾಗಿದೆ. ‘ಟೂರ್ ಆಫ್ ಕೊಲಂಬಿಯಾ’ ಎಂಬ ಹೆಸರಿನಲ್ಲಿ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಇದನ್ನು ಕೊಲಂಬಿಯನ್ ಭಾಷೆಯಲ್ಲಿ ‘ವುಲ್ಟಾ ಡಿ ಕೊಲಂಬಿಯಾ’ ಎಂದು ಕರೆಯಲಾಗುತ್ತದೆ. ಇದರಲ್ಲಿ ಸೈಕಲ್ ಸವಾರರು ಹನ್ನೆರಡು ದಿನಗಳಲ್ಲಿ ಸುಮಾರು ಸಾವಿರದ ಇನ್ನೂರು ಮೈಲುಗಳನ್ನು ಕ್ರಮಿಸುತ್ತಾರೆ. ಕೊಲಂಬಿಯಾದ್ದೇ ಆದ ಕ್ರೀಡೆಯೊಂದಿದ್ದು ಅದನ್ನು ತೇಜೋ ಎಂದು ಕರೆಯುತ್ತಾರೆ. ಇದನ್ನು ರೂಪಿಸಿದವರು ಇಲ್ಲಿಯ ಚಿಬ್ಜಾ ಜನರು. ಗೂಳಿ ಕಾಳಗವನ್ನು ನೋಡಲು ಇಷ್ಟಪಡುವ ಜನರು ಇಲ್ಲಿದ್ದಾರೆ. ಸ್ಪ್ಯಾನಿಷ್ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿ ರೂಪುಗೊಂಡ ಆಸಕ್ತಿಯಿದು. ವಿಶ್ವದ ಅತೀ ದೊಡ್ಡ ಸೈಕಲ್ ಮಾರ್ಗ ಇರುವುದು ಕೊಲಂಬಿಯಾದಲ್ಲಿ. ಇಲ್ಲಿನ ಬೊಗೋಟಾ ಪ್ರದೇಶವು ಸಂಪೂರ್ಣವಾಗಿ ಸೈಕಲ್ ಸವಾರರಿಗೆ ಮೀಸಲಾಗಿದೆ. ಸಣ್ಣಪುಟ್ಟ ನಗರಗಳಿಂದ ನಗರಗಳಿಗೆ ಬರುವ ಸೈಕಲ್ ಸವಾರರನ್ನು ಇಲ್ಲಿ ಗಮನಿಸಿಕೊಳ್ಳಬಹುದು. ಇಂತಹ ಸೈಕಲ್ ಮಾರ್ಗ ಮುನ್ನೂರು ಕಿಲೋಮೀಟರ್‌ಗಳಿಗಿಂತಲೂ ಉದ್ದವಿದೆ.

ಕೊಲಂಬಿಯಾದಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯ ಇದೆ. ಆದರೆ ಇದು ಸಂಪೂರ್ಣವಲ್ಲ. ಪತ್ರಿಕೆ, ರೇಡಿಯೋ, ದೂರದರ್ಶನ ವಾಹಿನಿಗಳು ಸರ್ಕಾರದ ಮೇಲೆ ಅವಲಂಬಿತವಾಗಿವೆ. ಸಮಾಜದ ವಾಸ್ತವ ಸ್ಥಿತಿಯನ್ನು ಯಥಾವತ್ತಾಗಿ ವ್ಯಕ್ತಪಡಿಸಲು ಭಯಪಡುವ ಸ್ಥಿತಿಯಿದೆ. ಮುಖ್ಯವಾಗಿ ಮಾದಕ ವ್ಯಸನಿಗಳು ಮತ್ತು ಗೆರಿಲ್ಲಾ ಗುಂಪುಗಳು ಮಾಧ್ಯಮದವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗುವ ಘಟನೆಗಳು ನಡೆದಿವೆ. ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಬೇಕಾದ ರೀತಿಯಲ್ಲಿ ಕಾರ್ಯನಿರ್ವಹಿಸುವ ಪತ್ರಿಕೆಗಳೂ ಇವೆ. ಎಲ್ ಟೈಂಪೊ ಮತ್ತು ಎಲ್ ಎಸ್ಪೆಕ್ಟಡಾರ್ ಎಂಬ ಎರಡು ಹೆಸರಾಂತ ಪತ್ರಿಕೆಗಳು ಲಿಬರಲ್ ಪಾರ್ಟಿಯ ಸಿದ್ಧಾಂತಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ.

ಕೊಲಂಬಿಯಾದ ಜನರು ತಮ್ಮ ರಾಷ್ಟ್ರದ ಕುರಿತು ಗೌರವದ ಭಾವನೆಯನ್ನು ಇಟ್ಟುಕೊಂಡಿದ್ದಾರೆ. ಅಲ್ಲಿಯ ನೆಲದ ಕಾನೂನು ಸಹ ಎಲ್ಲರೂ ದೇಶಭಕ್ತರಾಗುವಂತೆ ಪ್ರೇರಣೆ ನೀಡುತ್ತದೆ. ಅಲ್ಲಿ ಪ್ರತೀ ದಿನ ಬೆಳಗ್ಗೆ ಆರು ಗಂಟೆಗೆ ಮತ್ತು ಸಂಜೆ ಆರು ಗಂಟೆಗೆ ರೇಡಿಯೋ ಮತ್ತು ದೂರದರ್ಶನದಲ್ಲಿ ರಾಷ್ಟ್ರಗೀತೆಯನ್ನು ಮೊಳಗಿಸಲಾಗುತ್ತದೆ. ಇಲ್ಲಿನ ಹೆಚ್ಚಿನ ಜನರು ಮೆಸ್ಟಿಜೊ ಜನಾಂಗಕ್ಕೆ ಸೇರಿದವರು. ಒಟ್ಟು ಜನರಲ್ಲಿ ಇವರ ಪ್ರಮಾಣ ಅರುವತ್ತು ಶೇಕಡಾದಷ್ಟು. ಮುಲಾಟ್ಟೋ ಜನಾಂಗ ಎನ್ನುವುದು ಇನ್ನೊಂದು ಪ್ರಮುಖ ಜನಾಂಗ. ಆಫ್ರಿಕನ್ ಮತ್ತು ಯುರೋಪಿಯನ್ ಜನಾಂಗಗಳ ಸಂಮ್ಮಿಶ್ರಿತ ರೂಪ ಎನಿಸಿಕೊಂಡಿದೆ ಈ ಜನಾಂಗ. ದೇಶದ ಇಪ್ಪತ್ತು ಪ್ರತಿಶತ ಜನರು ಈ ಜನಾಂಗದವರು. ಇವರು ಕರಾವಳಿ ಪ್ರದೇಶಗಳಲ್ಲಿ ಮತ್ತು ಕಾಕ ನದಿಯ ತೀರಪ್ರದೇಶಗಳಲ್ಲಿ ನೆಲೆನಿಂತಿದ್ದಾರೆ. ಈ ಪ್ರದೇಶಗಳು ಸಕ್ಕರೆ ಬೆಳೆಯುವುದಕ್ಕೆ ಹೆಸರುವಾಸಿಯಾಗಿವೆ. ಸ್ಪ್ಯಾನಿಷ್ ಜನಾಂಗದವರು ಸರಿಸುಮಾರು ಇಪ್ಪತ್ತು ಶೇಕಡಾದಷ್ಟಿದ್ದಾರೆ. ಸ್ಥಳೀಯ ಜನರು ಅತೀ ಕಡಿಮೆ ಸಂಖ್ಯೆಯಲ್ಲಿದ್ದು, ಇವರ ಪ್ರಮಾಣ ಒಂದು ಪ್ರತಿಶತಕ್ಕಿಂತ ಹೆಚ್ಚೇನೂ ಅಲ್ಲ.

ಕೊಲಂಬಿಯಾ ದೇಶವು ವಲಸೆಗೆ ಪ್ರೋತ್ಸಾಹವನ್ನೇನೂ ನೀಡಿಲ್ಲ. ಆದರೂ ಬೇರೆ ದೇಶಗಳ ಜನರು ವಲಸೆ ಬಂದದ್ದರಿಂದಾಗಿ ಮೂಲನಿವಾಸಿಗಳ ಸಂಖ್ಯೆ ಕುಸಿಯುವಂತಾಗಿದೆ. ಕೊಲಂಬಿಯಾದ ಭಾಷೆಗಳು ಸ್ಪ್ಯಾನಿಷ್ ಪ್ರಭಾವಕ್ಕೊಳಗಾಗಿವೆ. ಸ್ಪೇನ್‌ನ ಭಾಷಾ ಅಕಾಡೆಮಿಯು ಕೊಲಂಬಿಯಾದ ಭಾಷಾ ಅಕಾಡೆಮಿಯ ಜೊತೆಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದೆ. ಕ್ಯಾಸ್ಟಿಲಿಯನ್ ಎನ್ನುವುದು ಕೊಲಂಬಿಯಾದ ಅಧಿಕೃತ ಭಾಷೆಯಾಗಿದೆ. ಇಲ್ಲಿ ಸ್ಪ್ಯಾನಿಷ್ ಭಾಷೆಯನ್ನೂ ಮಾತನಾಡಲಾಗುತ್ತದೆ. ಸುಮಾರು ನೂರಾ ಎಂಭತ್ತರಷ್ಟು ಭಾಷೆಗಳು ಮತ್ತು ಉಪಭಾಷೆಗಳು ಇಲ್ಲಿವೆ. ಅರಾವಕನ್, ಟುಪಿ ಗ್ವಾರಾನಿ, ಯುರುಮಂಗುಯಿ, ಕ್ಯಾರಿಬನ್, ಚಿಬ್ಚಾನ್ ಮೊದಲಾದವು ಕೊಲಂಬಿಯಾದಲ್ಲಿ ಅಸ್ತಿತ್ವದಲ್ಲಿರುವ ಪ್ರಮುಖ ಭಾಷೆಗಳು.

ಕೊಲಂಬಿಯಾದಲ್ಲಿ ರೋಮನ್ ಕ್ಯಾಥೋಲಿಕ್ ಧರ್ಮ ಪ್ರಬಲವಾಗಿದೆ. ಇಲ್ಲಿರುವ ಹೆಚ್ಚಿನವರು ಈ ಧರ್ಮದ ಅನುಯಾಯಿಗಳು. ಕೊಲಂಬಿಯನ್ ಸಮಾಜದಲ್ಲಿ ಚರ್ಚ್‌ನ ಪಾತ್ರ ಮಹತ್ವದ್ದು. ಸಮುದಾಯದ ಜನರ ಮೇಲೆ ಮಾತ್ರವಲ್ಲದೆ ಸರ್ಕಾರದ ಮೇಲೂ ಪ್ರಭಾವ ಬೀರುವಷ್ಟರಮಟ್ಟಿಗೆ ಚರ್ಚ್ ಶಕ್ತಿಶಾಲಿಯಾಗಿದೆ. ಇಲ್ಲಿಯ ಚರ್ಚ್‌ಗಳು ಸಂಪ್ರದಾಯಕ್ಕೆ ತೀರಾ ಕಟ್ಟುಬಿದ್ದಿವೆ ಎಂಬ ಅಭಿಪ್ರಾಯ ಹಲವರದ್ದು. ಆದರೆ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಧಾರ್ಮಿಕ ನೆಲೆಯ ಉದಾರತೆಯನ್ನು ವ್ಯಕ್ತಪಡಿಸಿದ್ದಿದೆ. ಇಲ್ಲಿಯ ಸಂವಿಧಾನವು ಧಾರ್ಮಿಕ ನೆಲೆಯ ಸ್ವಾತಂತ್ರ್ಯವನ್ನು ಸ್ಪಷ್ಟಪಡಿಸಿದೆ. ಕ್ಯಾಥೋಲಿಕ್ ಹೊರತಾಗಿ ಕೊಲಂಬಿಯಾದಲ್ಲಿ ಪ್ರೊಟೆಸ್ಟೆಂಟ್ ಸಮುದಾಯದವರಿದ್ದಾರೆ. ಯಹೂದಿಗಳಿದ್ದಾರೆ. ಮಾರ್ಮನ್‌ಗಳಿದ್ದಾರೆ. ತಮ್ಮದೇ ಆದ ಸಾಂಪ್ರದಾಯಿಕ ಧರ್ಮಗಳನ್ನು ಆಚರಿಸುವವರೂ ಇದ್ದಾರೆ.

ಕೊಲಂಬಿಯನ್ ಸಾಹಿತ್ಯ ಕ್ಷೇತ್ರ ದೊಡ್ಡಮಟ್ಟದ ಗುರುತಿಸುವಿಕೆಯನ್ನು ಪಡೆದದ್ದು 1982ರಲ್ಲಿ. ಈ ವರ್ಷ ನೊಬೆಲ್ ಗೌರವ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರಿಗೆ ದೊರಕಿತು. ಇವರು ಪ್ರಸಿದ್ಧರಾದದ್ದು ‘ಸಿಯೆನ್ ಅನೋಸ್ ಡಿ ಸೊಲೆಡಾಡ್’ ಎನ್ನುವ ಕೃತಿಯ ಮೂಲಕ. ಮ್ಯಾಕೊಂಡೋ ಎನ್ನುವ ಕಾಲ್ಪನಿಕ ಪಟ್ಟಣದಲ್ಲಿನ ನೂರು ವರ್ಷಗಳ ಜೀವನವನ್ನು ಇಲ್ಲಿ ಚಿತ್ರಿಸಲಾಗಿದೆ. ಕೊಲಂಬಿಯಾದ ಸಮಾಜವನ್ನು ಬಹುಸೂಕ್ಷ್ಮವಾಗಿ ದರ್ಶಿಸಿದ್ದು ಮಾರ್ಕ್ವೆಜ್ ಅವರ ಹೆಗ್ಗಳಿಕೆ. ಯುದ್ಧ ಸಂಸ್ಕೃತಿಗಿಂತಲೂ ಅಕ್ಷರ ಸಂಸ್ಕೃತಿಗೆ ಒತ್ತು ನೀಡಿದ ದೇಶ ಕೊಲಂಬಿಯಾ. ಸೈನಿಕರಿಗಿಂತ ಹೆಚ್ಚಾಗಿ ಕವಿಗಳಾಗಿರುವವರು ಇಲ್ಲಿನ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕೊಲಂಬಿಯಾದಲ್ಲಿ ಕಲೆಗಳು ಬೆಳವಣಿಗೆ ಆಗುವುದರ ಹಿನ್ನೆಲೆಯಲ್ಲಿ ಅಲ್ಲಿನ ವಿಶ್ವವಿದ್ಯಾನಿಲಯಗಳು, ಸಂರಕ್ಷಣಾಲಯಗಳು, ರಂಗಮಂದಿರಗಳ ಪಾತ್ರ ಮಹತ್ವದ್ದಾಗಿದೆ. ಕೊಲಂಬಿಯಾದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿರುವವರು ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಮಂದಿ. ಕೊಲಂಬಿಯಾದ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಕಲಾಕೃತಿಗಳು ನಿರ್ದಿಷ್ಟ ಕಾಲಘಟ್ಟಕ್ಕಾಗಲೀ, ಪ್ರದೇಶಕ್ಕಾಗಲೀ ಸೀಮಿತವಾಗಿಲ್ಲ. ಕಾಲ- ದೇಶಗಳ ಪರಿಧಿಯನ್ನು ಮೀರಿ ಸಾರ್ವತ್ರಿಕವಾಗಿವೆ; ಸಾರ್ವಕಾಲಿಕವಾಗಿವೆ. ಕೊಲಂಬಿಯನ್ ಸಂಗೀತದ ಮೇಲೆ ಸ್ಪೇನ್ ಮತ್ತು ಆಫ್ರಿಕಾ ಎರಡೂ ದೇಶಗಳ ಸಂಗೀತ ಶೈಲಿಗಳ ಪ್ರಭಾವವಿದೆ.

ಇಲ್ಲಿಯ ಸಂಗೀತ ಕ್ಷೇತ್ರದ ವಿವರಣೆ ಪಾಪ್ ಗಾಯಕಿ ಶಕೀರಾಳ ಪ್ರಸ್ತಾಪವಿಲ್ಲದೆ ಪೂರ್ಣವಾಗುವುದಿಲ್ಲ. ಹಲವಾರು ಮಹತ್ವದ ಸಂಗೀತ ಸಂಯೋಜನೆಗಳನ್ನು ಕೊಟ್ಟ ಶಕೀರಾ ಕೊಲಂಬಿಯಾಕ್ಕೆ ಸೇರಿದವರು. ಕುಂಬಿಯಾ ಎನ್ನುವುದು ಕೊಲಂಬಿಯಾದ ವಿಶಿಷ್ಟ ಸಂಗೀತ ಪ್ರಕಾರ. ಇದು ನೃತ್ಯಕ್ಕೆ ಪೂರಕವಾಗಿದೆ. ಪೊರೊ ಎನ್ನುವುದು ಇದರ ಸಾಂಪ್ರದಾಯಿಕ ರೂಪ. ವ್ಯಾಲ್ಲೆನಾಟೊ ಎನ್ನುವುದು ಇನ್ನೊಂದು ಅತೀ ವಿಶಿಷ್ಟವಾದ ಸಂಗೀತ ರೂಪವಾಗಿದೆ. ಇದರಲ್ಲಿ ಗಾಯನಕ್ಕೆ ಸರಿಹೊಂದುವ ರೀತಿಯಲ್ಲಿ ಕ್ಯಾಟೊ, ಗ್ವಾಚರಾಕಾ, ಗಿಟಾರ್, ಅರ್ಕಾಡಿಯನ್ ಮೊದಲಾದ ವಾದ್ಯಗಳ ಬಳಕೆ ಇರುತ್ತದೆ. ಟಿಪಲ್ ಎನ್ನುವುದು ಕೊಲಂಬಿಯಾದ ರಾಷ್ಟ್ರೀಯ ವಾದ್ಯವಾಗಿದೆ. ಇದು ಹನ್ನೆರಡು ತಂತಿಗಳಿರುವ ಗಿಟಾರ್ ರೀತಿಯಲ್ಲಿದೆ. ಪ್ಯಾಸಿಲ್ಲೊ, ವಾಲ್ಸ್, ಚಾಂಪೆಟಾ, ಬಾಂಬುಕೊ ಮೊದಲಾದವುಗಳು ಇಲ್ಲಿ ಕಂಡುಬರುವ ಇತರ ಸಂಗೀತ ಶೈಲಿಗಳಾಗಿವೆ.

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ