ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು ಪಾತ್ರವಾಗಿ ಬಂದ ಉದಾಹರಣೆ ಕಡಿಮೆ. ಹಾಗೆ ಮಾಡಿದಾಗಲೂ ಮಳೆಯು ಸಿನಿಮಾಕ್ಕೆ ತರುವ ರಮ್ಯತೆಗೇ ಹೆಚ್ಚು ಒತ್ತು ಇರುತ್ತಿತ್ತು. ಹಾಗಾಗದೇ ಮಳೆ ಒಂದು ಪಾತ್ರವೇ ಆಗಬೇಕು ಎಂಬ ಉದ್ದೇಶ ನಮ್ಮದಾಗಿತ್ತು.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ದ್ವೀಪ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

ಪೈ: ನಿಮ್ಮ ‘ದ್ವೀಪ’ ಚಿತ್ರದ ವಸ್ತು ಮುಳುಗಡೆಯಿಂದಾಗಿ ಸೃಷ್ಟಿಯಾದ ದ್ವೀಪವೊಂದರಲ್ಲಿ ಬದುಕುವ ಒಂದು ಕುಟುಂಬದ ಕತೆಯಾದರೂ ಅದು ಒಳರಚನೆಯಲ್ಲಿ ಪ್ರಕೃತಿ ಮತ್ತು ಮನುಷ್ಯ, ಅಭಿವೃದ್ಧಿ ಮತ್ತು ಅದರ ನೈತಿಕತೆ ಮನುಷ್ಯ ಗುಣ, ಮೃಗೀಯ ಗುಣ- ಹೀಗೆ ಹಲವು ದಿಕ್ಕುಗಳತ್ತ ಕತೆ ಕೈ ಚಾಚುತ್ತಾ ಸಾಗುತ್ತದೆ. ಆದರೆ ಚಿತ್ರದ ಜೀವನಾಡಿ ಮಳೆ. ಅದನ್ನು ಹಲವು ಧ್ವನಿಗಳಲ್ಲಿ ಬಳಸಿದ್ದೀರಿ.

ಗಿರೀಶ್: ನಾನು ಹುಟ್ಟಿ ಬೆಳೆದದ್ದು ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಆಗುಂಬೆಯ ಹತ್ತಿರವಿರುವ ಒಂದು ಹಳ್ಳಿಯಲ್ಲಿ. ಬಾಲ್ಯದಲ್ಲಿ ವರ್ಷದ ಐದಾರು ತಿಂಗಳು ಮಳೆಯಲ್ಲೇ ಕಳೆಯುತ್ತಿದ್ದ ಮಲೆನಾಡಿಗ ನಾನು. ಪ್ರಕೃತಿ ಮತ್ತು ಮನುಷ್ಯನ ನಡುವೆ ಸೌಹಾರ್ದಯುತವಾದ ಸಂಬಂಧ ಸದಾ ಇರುತ್ತದೆ ಎನ್ನುವುದೇ ಒಂದು ರಮ್ಯಕಲ್ಪನೆ. ಮಲೆನಾಡಿಗರಾದ ನಮಗೆ ಮಳೆಯ ಸಕಲ ಮುಖಗಳ ಪರಿಚಯವಿರುತ್ತದೆ. ಮಳೆಗಾಲದ ಆರಂಭದಲ್ಲಿ ಅದರ ರಮ್ಯರೂಪ ನೋಡಿದರೆ, ನಡು ಮಳೆಗಾಲದಲ್ಲಿ ಅದರ ರುದ್ರರೂಪ ನೋಡುತ್ತೇವೆ. ಮಳೆ ಹನಿ ಮನಸ್ಸಿಗೆ ಮುದ ಕೊಡುವಷ್ಟೇ ಸಿಡಿಲು, ಗುಡುಗುಗಳ ಆರ್ಭಟ ಭಯ ಹುಟ್ಟಿಸುತ್ತವೆ. ಮನೆಯ ಸೂರನ್ನೇ ಹಾರಿಸಿಕೊಂಡು ಹೋಗುವ ಗಾಳಿ, ಕುಸಿದು ಬೀಳುವ ಧರೆ, ಸಿಡಿಲಿಗೆ ಹೊತ್ತಿ ಉರಿಯುವ ಅಡಿಕೆ ಮರ-ಇವು ಪ್ರಕೃತಿಯ ಎದುರು ಮನುಷ್ಯರು ಎಷ್ಟು ನಗಣ್ಯರು, ತೃಣಸಮಾನರು ಎನ್ನುವುದನ್ನೂ, ಅವರ ಅಸಹಾಯಕತೆಯನ್ನೂ ಅನಾವರಣ ಮಾಡಿ ತೋರಿಸುತ್ತದೆ. ಮಳೆಗೆ ಮನುಷ್ಯನ ಬದುಕನ್ನು ಸುಂದರ ಮಾಡುವ ಶಕ್ತಿ ಇರುವಂತೆಯೇ ಅದನ್ನು ಬುಡಮೇಲು ಮಾಡಿ, ಕುಟುಂಬಗಳನ್ನೇ ನಾಶ ಮಾಡುವ, ಜೀವನ ಶೈಲಿಯನ್ನೇ ಛಿದ್ರ ಮಾಡುವ ಶಕ್ತಿಯೂ ಇರುತ್ತದೆ. ಚಿತ್ರೋದ್ಯಮಕ್ಕೆ ಬಂದಮೇಲೆ ನನಗೆ ಮಳೆಯ ಈ ಎರಡೂ ಮುಖಗಳನ್ನು ತೆರೆಯ ಮೇಲೆ ಸೃಷ್ಟಿಸಬೇಕೆಂಬ ತವಕ ಇತ್ತು. ನಾ. ಡಿಸೋಜಾರ ಒಡ್ಡು, ಮುಳುಗಡೆ, ದ್ವೀಪ ಕಾದಂಬರಿಗಳಲ್ಲಿ ಮತ್ತು ಕೆಲವು ಕತೆಗಳಲ್ಲಿ ಇದಕ್ಕೆ ಅವಕಾಶ ಇರುವುದನ್ನು ಗಮನಿಸಿದ್ದೆ. ಅವುಗಳಲ್ಲಿ ನಾನು ಆರಿಸಿಕೊಂಡ ಕಾದಂಬರಿ ‘ದ್ವೀಪ’. ನನ್ನ ಕಾಳಜಿಯನ್ನು ಬಿತ್ತಿ ಬೆಳೆಸಬಹುದಾದ ಶಕ್ತಿ ಈ ಕಾದಂಬರಿಯಲ್ಲಿ ಇದೆ, ಹಾಗೆಯೇ ಮಳೆಯ ವಿರಾಟ ರೂಪದ ಹಲವು ಮುಖಗಳನ್ನು ಚಿತ್ರಿಸಲೂ ‘ದ್ವೀಪ’ ಒಂದು ಒಳ್ಳೆಯ ಭಿತ್ತಿ ಒದಗಿಸುತ್ತದೆ ಎಂದು ಕಾದಂಬರಿ ಓದಿದಾಗಲೇ ನಾನು ಕಲ್ಪನೆ ಮಾಡಿಕೊಂಡಿದ್ದೆ.

*****

ಪೈ: ಸೌಂದರ್ಯ ಅವರು ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನದಲ್ಲಿದ್ದ ನಟಿಯಾಗಿದ್ದ ದಿವಸಗಳವು. ಜನಪ್ರಿಯ ನಟನಟಿಯರು ಕಲಾತ್ಮಕ ಚಿತ್ರಗಳಲ್ಲಿ ಪಾಲ್ಗೊಳ್ಳುವುದು ಅಪರೂಪ. ಸೌಂದರ್ಯ ನಿಮ್ಮ ದ್ವೀಪ ಚಿತ್ರದ ನಿರ್ಮಾಪಕಿಯಾದದ್ದು ಮಾತ್ರವಲ್ಲ, ನಟಿಸಿಯೂ ಇದ್ದಾರೆ.

ಗಿರೀಶ್: ಒಂದು ಸಲ ದೆಹಲಿಯಲ್ಲಿ ನಡೆದ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ(I.F.F.I.))ದಲ್ಲಿ ಒಂದು ಚಿತ್ರ ನೋಡಿ ಹೊರಬರುತ್ತಿರುವಾಗ ಕನ್ನಡದ ಖ್ಯಾತ ನಿರ್ಮಾಪಕರಾದ ಎಚ್.ಎನ್. ಮಾರುತಿಯವರು ಸಿಕ್ಕಿ, ‘ಸೌಂದರ್ಯ ಅವರು ನಿಮ್ಮನ್ನು ಒಮ್ಮೆ ಭೇಟಿಯಾಗಬೇಕಂತೆ. ಅವರು ನಿಮ್ಮ ಕೈಯಲ್ಲಿ ಒಂದು ಸಿನಿಮಾ ಮಾಡಿಸಬೇಕೆಂದು ಅಪೇಕ್ಷಿಸಿದ್ದಾರೆ’ ಎಂದರು. ಸೌಂದರ್ಯ ಅವರ ತಂದೆ ಸತ್ಯನಾರಾಯಣರವರು ಮಾರುತಿಯವರ ಸ್ನೇಹಿತರು. ಅವರ ನಿರ್ಮಾಣದ ಚಿತ್ರಗಳಿಗೆ ಸತ್ಯನಾರಾಯಣ್ ಅವರು ಚಿತ್ರಕಥೆ ಬರೆದಿದ್ದರಲ್ಲದೇ ಸ್ವತಃ ಒಂದೆರಡು ಸಿನಿಮಾಗಳನ್ನು ನಿರ್ದೇಶಿಸಿದ್ದರು. ದಕ್ಷಿಣ ಭಾರತದಲ್ಲೇ ಅತ್ಯಂತ ಜನಪ್ರಿಯ ನಟಿಯಾಗಿದ್ದ, ತೆಲುಗಿನಲ್ಲಿ ತಾರಾ ಮೌಲ್ಯ ಪಡೆದಿದ್ದ ನಟಿ, ಹಿಂದಿಯಲ್ಲೂ ಅಮಿತಾಬ್ ಬಚ್ಚನ್ ಅಂತಹವರ ಜೊತೆ ನಟಿಸುತ್ತಿದ್ದ ಸೌಂದರ್ಯ ಅವರು ನನ್ನ ಹತ್ತಿರ ಯಾಕೆ ಸಿನಿಮಾ ಮಾಡಿಸುತ್ತಾರೆ ಎಂದು ಅನುಮಾನಿಸಿದ್ದೆ. ಅಲ್ಲಲ್ಲಿ ಸಿಕ್ಕ ಕೆಲವರು ಸಿನಿಮಾ ಮಾಡೋಣ ಎಂದು ಹೇಳಿದ್ದಿದೆ, ಆದರೆ ಅವು ದೇಶಾವರಿ ಮಾತಾಗಿದ್ದು, ಯಾವತ್ತೂ ಕಾರ್ಯಗತವಾಗಿಲ್ಲ. ಇದೂ ಒಂದು ಅಂತಹದೇ ಶುಷ್ಕ ಯೋಜನೆ ಎಂದು ಭಾವಿಸಿ ಭೇಟಿಯಾಗೋಣ ಎಂದು ಮಾರುತಿಯವರಿಗೆ ಹಾರಿಕೆಯ ಉತ್ತರ ನೀಡಿದೆ. ಫೆಸ್ಟಿವಲ್ ಮುಗಿದ ಒಂದು ವಾರದೊಳಗೆ ಮಾರುತಿಯವರು, ಸೌಂದರ್ಯ ಅವರ ಅಣ್ಣ ಅಮರ್‌ನಾಥ್ ಜೊತೆಗೆ ಮನೆಗೆ ಬಂದಾಗ ನನಗೆ ಆಶ್ಚರ್ಯವೇ ಆಯಿತು. ಅಮರ್‌ನಾಥ್‌ರವರು ‘ನಮ್ಮ ತಂದೆಯ ಹೆಸರಲ್ಲಿ ಒಂದು ನಿರ್ಮಾಣ ಸಂಸ್ಥೆ ಆರಂಭಿಸುತ್ತಿದ್ದೇವೆ. ಆ ಸಂಸ್ಥೆಯ ಮೂಲಕ ನಿಮ್ಮ ನಿರ್ದೇಶನದಲ್ಲಿ ಒಂದು ಸಿನೆಮಾ ಮಾಡಬೇಕೆಂದಿದೆ. ತಂಗಿ ಸೌಂದರ್ಯಳಿಗೆ ಪ್ರಮುಖ ಪಾತ್ರ ಇರಲಿ. ಅದು ನಮ್ಮ ತಂದೆಯವರಿಗೆ ಸೂಕ್ತವಾದ ಒಂದು ಟ್ರಿಬ್ಯೂಟ್ ಆಗುವಂಥ ಚಿತ್ರವಾಗಬೇಕು ಎನ್ನುವುದು ನಮ್ಮ ಮುಖ್ಯ ಉದ್ದೇಶ’ ಎಂದರು. ನನ್ನ ತಲೆಯಲ್ಲಿ ಸಿನಿಮಾಕ್ಕೆ ಸೂಕ್ತವಾದ ಎರಡು ಮೂರು ಕತೆಗಳು ಇದ್ದವು. ಅವುಗಳಲ್ಲಿ ನಾ. ಡಿಸೋಜಾ ಅವರ ಕಿರು ಕಾದಂಬರಿ ‘ದ್ವೀಪ’ವೂ ಒಂದು. ಕತೆ ಕೇಳುತ್ತಿದ್ದ ಹಾಗೇ ಮಾರುತಿಯವರೂ ‘ದ್ವೀಪ’ವನ್ನು ಆಯ್ಕೆ ಮಾಡಿದರು. ಮಳೆಯ ಬಗ್ಗೆ ಒಂದು ಸಿನಿಮಾ ಮಾಡುವ ಹಂಬಲ ಅವರಿಗೂ ಇತ್ತಂತೆ.

ಪೈ: ನಾ. ಡಿಸೋಜರ ಕಾದಂಬರಿಗೂ ದ್ವೀಪ ಚಿತ್ರಕ್ಕೂ ತುಂಬ ವ್ಯತ್ಯಾಸವಿದೆ. ಮುಖ್ಯಪಾತ್ರಗಳ ಜಾತಿಯನ್ನು ಬದಲಿಸಿದ್ದೀರಿ, ತ್ರಿಕೋನ ಸಂಬಂಧವನ್ನು ಕೈ ಬಿಟ್ಟಿದ್ದೀರಿ, ಅಂತ್ಯದಲ್ಲಿ ಎಲ್ಲರೂ ಸಾಯುತ್ತಾರೆ. ಅದನ್ನೂ ಅಡಕ ಮಾಡಿಕೊಂಡಿಲ್ಲ. ಕಿರು ಕಾದಂಬರಿಯಲ್ಲಿ ಮುಖ್ಯವಾಗಿ ಪರಿಹಾರ ಸಿಗದಿರುವುದೇ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿರುತ್ತದೆ.

ಗಿರೀಶ್: ಅವುಗಳನ್ನು ಕೈ ಬಿಡಲು ನನ್ನದೇ ಆದ ಕಾರಣಗಳಿದ್ದವು. ಕಾದಂಬರಿಗೆ ದೃಷ್ಟಾಂತ ಕತೆಯ (fable) ಗುಣ ಇದೆ. ಕೈಬೆರಳೆಣಿಕೆಯ ಪಾತ್ರಗಳು, ಘಟನೆಗಳ ಸರಮಾಲೆ ಇಲ್ಲದ ದೃಷ್ಟಾಂತ ಕತೆಗಳ ಸ್ವರೂಪವೇ ಚಿತ್ರಕ್ಕೂ ಸೂಕ್ತ ಎನ್ನಿಸಿತು. ಮುಳುಗಡೆ ತಂದೊಡ್ಡುವ ಸಾಮಾಜಿಕ ಬಿಕ್ಕಟ್ಟನ್ನು ಚಿತ್ರಿಸುತ್ತಲೇ ಅದರ ನಿವಾರಣೆಗೆ ಸರ್ಕಾರ ಸೂಚಿಸುವ ಪರಿಹಾರ ಕ್ರಮ ಎಷ್ಟು ನೈತಿಕ ಎಂಬ ಪ್ರಶ್ನೆಯೂ ಚಿತ್ರದಲ್ಲಿದೆ. ಅಭಿವೃದ್ಧಿಯ ಕಾರಣದಿಂದ ಜನರನ್ನು ಸ್ಥಳಾಂತರ ಮಾಡುವುದು ಅನಿವಾರ್ಯ ಎಂದು ಎಷ್ಟೇ ಸಮಜಾಯಿಷಿ ಕೊಟ್ಟರೂ, ಅದರ ಹಿಂದಿನ ಅಮಾನವೀಯತೆಯನ್ನು ಮುಚ್ಚಿಡುವುದು ಅಸಾಧ್ಯ. ಸರ್ಕಾರ ಪರಿಹಾರ ನಿಗದಿಪಡಿಸಲು ಮನೆ, ಗದ್ದೆ, ತೋಟ ಮುಂತಾದ ಅಳೆಯಬಹುದಾದ ಆಸ್ತಿಯನ್ನು ಅಳತೆಗೋಲಾಗಿ ಬಳಸುತ್ತದೆ. ಆದರೆ ಆ ತಕ್ಕಡಿಗೆ ಸಿಗದ ಎಷ್ಟೋ ವೃತ್ತಿಗಳಿರುತ್ತವೆ. ಆಸ್ತಿ ಇಲ್ಲದಿದ್ದರೂ ಯಾವುದೋ ವೃತ್ತಿ ಮಾಡುತ್ತಾ, ಗೌರವಯುತ ಜೀವನ ನಡೆಸುತ್ತಿರುವವರೂ ಇರುತ್ತಾರಲ್ಲ! ಅಂತಹವರನ್ನು ಸ್ಥಳಾಂತರ ಮಾಡಿ ಹಣದ ರೂಪದಲ್ಲಿ ಕೊಡುವ ಪರಿಹಾರ ನಿಜವಾದ ಪರಿಹಾರವಾದೀತೇ? ಅವರಿಗೆ ಈಗಿರುವ ಗೌರವ ಉಳಿದೀತೇ? ಕತೆಯ ಗಣಪಯ್ಯನನ್ನು ಅಂತಹ ಒಬ್ಬ ವ್ಯಕ್ತಿಯನ್ನಾಗಿ ಮಾಡಿದರೆ, ಆಗ ಸರಕಾರ ಬಳಸುವ ತಕ್ಕಡಿಯನ್ನೇ ಪ್ರಶ್ನಿಸಿ, ಇಡೀ ಅಭಿವೃದ್ಧಿಯ ಹಿಂದಿನ ಕರಾಮತ್ತಿನ ರಾಜಕೀಯವನ್ನು ಪ್ರಕಟ ಪಡಿಸುವ ಸಾಧ್ಯತೆ ಇದೆ ಅನ್ನಿಸಿತು. ಒಂದು ಪರಿಸರದಲ್ಲಿ ಡ್ಯಾಂ ಕಟ್ಟಿದಾಗ ಎರಡು ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಒಂದು ಸ್ಥಳಾಂತರಕ್ಕೆ ಸಂಬಂಧಿಸಿದ್ದು, ಮತ್ತೊಂದು ಮುಳುಗಡೆಗೆ ಸಂಬಂಧಿಸಿದ್ದು. ಇನ್ನೊಂದು ಊರಿನಲ್ಲಿ ಜಮೀನು, ಹಣ ನೀಡಿದರೆ ಸ್ಥಳಾಂತರದ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ ಮುಳುಗಡೆಯ ಪ್ರಶ್ನೆ ಇನ್ನೂ ಗಹನವಾದದ್ದು. ಮುಳುಗಡೆಯಾದಾಗ ಒಂದು ಭೌಗೋಳಿಕ ಸ್ಥಳ ಮಾತ್ರ ಮುಳುಗುತ್ತಿರುವುದಿಲ್ಲ. ಅದರೊಂದಿಗೆ ಅಲ್ಲಿನ ಜೀವನ ಕ್ರಮ, ಸಾಮುದಾಯಿಕ ಸಂಬಂಧಗಳು, ಸಂಪ್ರದಾಯ, ಕಲೆಗಳೂ ಮುಳುಗಡೆಯಾಗುತ್ತಿರುತ್ತವೆ. ಅವಕ್ಕೆ ಪರಿಹಾರವೇನು, ಅವುಗಳ ಪುನರುಜ್ಜೀವನ ಸಾಧ್ಯವೇ ಎಂಬುದು ನೈತಿಕ ಪ್ರಶ್ನೆ. ಈ ಪ್ರಶ್ನೆಗೆ ಸರ್ಕಾರದ ಬಳಿಯಾಗಲೀ, ಅಧಿಕಾರ ಯಂತ್ರದಲ್ಲಾಗಲೀ, ಸಮಾಜದಲ್ಲಾಗಲೀ ಉತ್ತರ ಸಿಗುವುದಿಲ್ಲ.

ಪೈ: ಚಿತ್ರದಲ್ಲಿ ನಾಲ್ಕು ಪಾತ್ರಗಳ ಜೊತೆ ಮಳೆಯೂ ಒಂದು ಪಾತ್ರವಾಗಿ ಬರುತ್ತದೆ. ಸಿನಿಮಾದ ಅನೇಕ ತಿರುವುಗಳಿಗೆ ಅದೇ ಕಾರಣವಾಗುತ್ತದೆ.

ಗಿರೀಶ್: ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು ಪಾತ್ರವಾಗಿ ಬಂದ ಉದಾಹರಣೆ ಕಡಿಮೆ. ಹಾಗೆ ಮಾಡಿದಾಗಲೂ ಮಳೆಯು ಸಿನಿಮಾಕ್ಕೆ ತರುವ ರಮ್ಯತೆಗೇ ಹೆಚ್ಚು ಒತ್ತು ಇರುತ್ತಿತ್ತು. ಹಾಗಾಗದೇ ಮಳೆ ಒಂದು ಪಾತ್ರವೇ ಆಗಬೇಕು ಎಂಬ ಉದ್ದೇಶ ನಮ್ಮದಾಗಿತ್ತು. ಈ ಚಿತ್ರದ ದ್ವಿತೀಯಾರ್ಧದಲ್ಲಿ ಕೇಂದ್ರ ಪಾತ್ರಗಳನ್ನು ಮತ್ತು ಅವುಗಳ ನಿರ್ಧಾರಗಳನ್ನು ನಿಯಂತ್ರಿಸುವುದೇ ಮಳೆ. ಮಳೆಯಿಂದಾಗಿಯೇ ದುಗ್ಗಜ್ಜನ ಸಂಸಾರ ತಮ್ಮ ಮನೆ ಬಿಟ್ಟು ಹೇರಂಭನ ಮನೆಗೆ ಹೋಗಿರಬೇಕಾಗುತ್ತದೆ. ಮಳೆ ಮತ್ತು ಏರುತ್ತಿರುವ ನೀರು ತಂದೊಡ್ಡುತ್ತಿರುವ ಸಮಸ್ಯೆಗಳಿಂದಾಗಿ ಗಣಪ ಮತ್ತು ಕೃಷ್ಣರ ನಡುವೆ ತಮ್ಮ ಸಾಮರ್ಥ್ಯ ತೋರಿಸಿಕೊಳ್ಳುವ ಸಲುವಾಗಿ ಚಿಕ್ಕದಾಗಿ ಪೈಪೋಟಿ ಬೆಳೆಯತೊಡಗುತ್ತದೆ. ಅದು ಈರ್ಷ್ಯೆಗೆ ಎಡೆಮಾಡಿಕೊಡುತ್ತದೆ. ದುಗ್ಗಜ್ಜನ ಸಾವು, ಗಣಪನಲ್ಲಿ ಬೆಳೆಯುವ ಕೀಳರಿಮೆ, ಕೃಷ್ಣನ ಪಲಾಯನ, ಅಂತಿಮವಾಗಿ ನಾಗಿಗೆ ಸಿಗುವ ನಿರಾಳತೆ ಇವೆಲ್ಲವುಗಳ ಹಿಂದೆ ಮಳೆಯ ಪಾತ್ರವಿದೆ. ಅದಕ್ಕೇ ಹೇಳಿದ್ದು, ಮಳೆಯೇ ಒಂದು ಪಾತ್ರವಾಗಿ ಕೆಲಸ ಮಾಡುತ್ತದೆ ಎಂದು. ಚಿತ್ರಕಥೆ ಬರೆಯುತ್ತಿರುವಾಗಲೇ ಐದು ಪಾತ್ರಗಳಿರುವ ಕತೆ ಇದು ಎಂದು ಬೆಳೆಸುವ ನಿರ್ಧಾರ ಮಾಡಿದ್ದೆ. ದುಗ್ಗಜ್ಜ, ಗಣಪ, ನಾಗಿ, ಕೃಷ್ಣ ಮತ್ತು ಮಳೆ.

ಪೈ: ಕೃಷ್ಣ ಮತ್ತು ನಾಗಿಯರ ನಡುವೆ ಪ್ರೇಮ ಸಂಬಂಧ ಇಲ್ಲ ಎನ್ನುವುದು ಚಿತ್ರದಲ್ಲಿ ಬಂದಿದೆ. ಆದರೆ ಕೃಷ್ಣ ಮತ್ತು ಗಣಪನ ನಡುವೆ ಈರ್ಷ್ಯೆಯೂ ಇದೆ.

ಗಿರೀಶ್: ನಾಗಿ, ಕೃಷ್ಣ ಮತ್ತು ಗಣಪನ ನಡುವೆ ಇರುವ ಸಂಬಂಧ ವಿಲಕ್ಷಣವಾದದ್ದು. ನಾಗಿಗೆ ಕೃಷ್ಣನ ಬಗ್ಗೆ ಆಕರ್ಷಣೆಯಿರುವುದು ಲೈಂಗಿಕ ಕಾರಣಕ್ಕಾಗಿ ಅಲ್ಲ, ಆತ ತನ್ನ ಗಂಡನಿಗಿಂತ ಹೆಚ್ಚು ಸಮರ್ಥ ಎಂಬ ನಂಬಿಕೆಯಿಂದ. ಅದು ಪೊಳ್ಳು ಎನ್ನುವುದು ಚಿತ್ರ ಬೆಳೆದಂತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆದರೂ ಎಷ್ಟೋ ವರ್ಷದಿಂದ ಅದೇ ಊರಲ್ಲಿ ಬದುಕು ರೂಪಿಸಿಕೊಂಡು ಬಂದಿದ್ದ ಗಣಪನಿಗಿಂತ ಹೊಸದಾಗಿ ಬಂದ ಕೃಷ್ಣ ಸಮರ್ಥ ಎಂದು ನಾಗಿಗೆ ಅನ್ನಿಸಲು ಕಾರಣ ತಾವಿರುವ ದ್ವೀಪಕ್ಕಿಂತ ಹೆಚ್ಚು ನಾಗರಿಕ ಸಂಪರ್ಕವಿರುವ ಬೊಂಬಾಯಿಂದ ಆತ ಬಂದಿದ್ದಾನೆ ಎಂಬುದು. ಲೋಹಿಯಾ ಅವರು ಭಾರತೀಯ ಸಮಾಜದಲ್ಲಿ ಕೀಳರಿಮೆ ಹುಟ್ಟಿಸುವ ಮೂರು ಅಂಶಗಳು ಜಾತಿ, ಮೈ ಬಣ್ಣ, ಮತ್ತು ಇಂಗ್ಲೀಷ್ ಜ್ಞಾನ ಎಂದು ಹೇಳುತ್ತಾರೆ. ಅದರೊಂದಿಗೇ ನಾಲ್ಕನೆಯದಾಗಿ ನಾಗರಿಕ ಪ್ರಪಂಚದ ನಂಟು ಎಂದೂ ಸೇರಿಸಬಹುದೇನೋ.

ಕೃಷ್ಣ ಇವರ ಜೀವನದೊಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ಗಣಪ ಒಂದು ರೀತಿಯ ಕೀಳರಿಮೆಯಿಂದ ಕುಗ್ಗಿಹೋಗುವುದು ಇದೇ ಕಾರಣಕ್ಕೆ. ಇದು ನನಗೆ ಹೊಳೆದದ್ದು ಡಾ. ಯು.ಆರ್. ಅನಂತಮೂರ್ತಿಯವರ ಒಂದು ಲೇಖನ ಓದಿದ ಮೇಲೆ. ಅವರು ಪ್ರಾಸಂಗಿಕವಾಗಿ ಅಮೇರಿಕಾದ ಸಿನಿಮಾ ನಿರ್ದೇಶಕ ರಾಬರ್ಟ್ ಫ್ಲಾಹರ್ಟಿಯ ‘ನಾನೂಕ್ ಆಫ್ ದ ನಾರ್ಥ್’ ಸಿನಿಮಾವನ್ನು ತಮ್ಮ ಆ ಲೇಖನದಲ್ಲಿ ಉಲ್ಲೇಖಿಸುತ್ತಾರೆ. ರಾಬರ್ಟ್ ಫ್ಲಾಹರ್ಟಿಯನ್ನು ಕಥಾಚಿತ್ರದ ಸ್ವರೂಪ ಇರುವ ಸಾಕ್ಷ್ಯಚಿತ್ರಗಳ ಜನಕ ಎಂದು ಪರಿಗಣಿಸಲಾಗುತ್ತಿದೆ. ಸ್ಥಿರ ಛಾಯಾಗ್ರಾಹಕನಾದ ಆತ ಮೂಲನಿವಾಸಿಗಳಿರುವಲ್ಲಿಗೆ ಹೋಗಿ ಅವರ ಜೊತೆ ಬದುಕಿ ಅವರ ಕತೆಯನ್ನೇ ಸಿನಿಮಾ ಮಾಡಿ ಜಗದ್ವಿಖ್ಯಾತನಾದವನು. ನಾನೂಕ್ ಉತ್ತರ ಧ್ರುವದಲ್ಲಿ ಬದುಕುತ್ತಿರುವ ಒಬ್ಬ ಎಸ್ಕಿಮೋ (ಇನ್ಯೂಟ್) ಜನಾಂಗದವನು. ತನ್ನ ಬದುಕಿನ ಅಗತ್ಯಗಳನ್ನು ಹೇಗೆ ಸಂಭಾಳಿಸಿಕೊಳ್ಳಬೇಕೆನ್ನುವ ವ್ಯಾವಹಾರಿಕ ಪ್ರಜ್ಞೆ ಅವನಿಗಿದೆ. ಪರಿಸರದಲ್ಲಿ ಸಿಗುವ ಮಂಜುಗಡ್ಡೆಯಿಂದಲೇ ತನ್ನ ಮನೆ (Igloo) ಕಟ್ಟಿಕೊಳ್ಳಬಲ್ಲ, ಪ್ರಯಾಣಕ್ಕೆ ಅಗತ್ಯವಾದ ಜಾರು ಗಾಡಿ (Sledge) ಮಾಡಬಲ್ಲ. ಆಹಾರಕ್ಕಾಗಿ ಈಟಿಯಿಂದ ಸೀಲ್ ಮೀನನ್ನು ಬೇಟೆಯಾಡುವ ತಂತ್ರವೂ ಗೊತ್ತು. ಸುಖವಾಗಿ ತನ್ನ ಜೀವನ ನಡೆಸಲು ಬೇಕಾದ ಎಲ್ಲ ಜ್ಞಾನವೂ, ಸಾಮರ್ಥ್ಯವೂ ಅವನಲ್ಲಿದೆ. ಈ ವಿಷಯ ಹೇಳಿದ ನಂತರ ಅನಂತಮೂರ್ತಿಯವರು ‘ಅಲ್ಲಿಗೆ ಕೋವಿ ಹಿಡಿದ ಒಬ್ಬ ಬಿಳಿಯನ ಪ್ರವೇಶವಾಗುತ್ತದೆ ಎಂದು ಭಾವಿಸಿ. ತಕ್ಷಣವೇ ನಾನೂಕ್‌ಗೆ ಕೀಳರಿಮೆ ಹುಟ್ಟುತ್ತದೆ. ಯಾಕೆಂದರೆ ಈ ಅಭ್ಯಾಗತನ ಮೈ ಬಣ್ಣ, ದೂರದಿಂದಲೇ ಮದ್ದು ಸಿಡಿಸಿ ಕೊಲ್ಲಬಲ್ಲ ಅವನ ಕೋವಿ ನೋಡಿ ಆತ ತನಗಿಂತ ಹೆಚ್ಚು ಸಮರ್ಥ, ಬಲಶಾಲಿ ಎಂದು ಭಾವಿಸುತ್ತಾನೆ’ ಎಂದು ಬರೆಯುತ್ತಾರೆ. ಇದು ಅನಂತಮೂರ್ತಿಯವರ ಹೇಳಿಕೆಯ ಭಾವಾನುವಾದ. ಕೃಷ್ಣನ ಪಾತ್ರ ಹುಟ್ಟಿದ್ದು ಈ ಒಳ ನೋಟದಿಂದ. ಕಾದಂಬರಿಯಲ್ಲಿರುವಂತೆ ಕೃಷ್ಣ ಮತ್ತು ನಾಗಿಯರ ಸ್ನೇಹ ಗಣಪನಲ್ಲಿ ಈರ್ಷ್ಯೆ ಹುಟ್ಟಲು ಕಾರಣವಾಗುವ ಬದಲು ತಾನು ಹೆಚ್ಚು ಸಮರ್ಥ ಎಂದು ನಂಬಿಸಲು ಹೊರಟ ಕೃಷ್ಣನ ಧೋರಣೆಯನ್ನು ನಿಜವೆಂದು ನಂಬಿದ ಗಣಪ ಕುಗ್ಗುತ್ತಾ ಹೋಗುವುದು ಹೆಚ್ಚು ಧ್ವನಿ ಪೂರ್ಣ ಎನ್ನಿಸಿತು. ಹಾಗಾಗಿ ನಾಗಿ ಕೃಷ್ಣರ ಸಂಬಂಧ ಪ್ರೇಮ ಸಂಬಂಧವೂ ಅಲ್ಲ, ಗಣಪ ಕೃಷ್ಣರದ್ದು ಘರ್ಷಣಾತ್ಮಕ ಸಂಬಂಧವೂ ಅಲ್ಲ. ಒಂದು ಸಂಸ್ಕೃತಿ ಯಾ ಸಮಾಜದ ಜನ ಇನ್ನೊಂದು ಸಂಸ್ಕೃತಿ ಯಾ ಸಮಾಜದ ಜನರ ಜೊತೆ ತಮಗರಿವಿಲ್ಲದೆಯೇ ಸೃಷ್ಟಿಸುವ ತರತಮ ಸಂಬಂಧದ ಕ್ರೌರ್ಯ ಇಲ್ಲಿದೆ.

(ಕೃತಿ: ಬಿಂಬ ಬಿಂಬನ (ಕಾಸರವಳ್ಳಿ ಚಿತ್ರಗಳ ಸಂಕಥನ), ಲೇಖಕರು: ಗಿರೀಶ್‌ ಕಾಸರವಳ್ಳಿ, ಗೋಪಾಲಕೃಷ್ಣ ಪೈ, ಪ್ರಕಾಶಕರು: ವೀರಲೋಕ ಬುಕ್ಸ್‌)