ಹೊಸ ಊರಿಗೆ ಪ್ರವಾಸ ಹೋಗುವ ಖುಷಿ ಇಮ್ಮಡಿಯಾಗುವುದು ಆ ಸ್ಥಳದ ಪೂರ್ವಾಪರವನ್ನು ತಿಳಿದಾಗ. ಗುರುದತ್ ಅಮೃತಾಪುರ ಅವರು ಪ್ರವಾಸವನ್ನು ಇಷ್ಟಪಡುವವರು. ಜೊತೆಗೆ ಆ ಜಾಗಗಳ  ಇತಿಹಾಸವನ್ನೂ ಅರಿಯುವ ಕುತೂಹಲ  ಹೊಂದಿದವರು. ಯುರೋಪ್ ಖಂಡದ ಈಶಾನ್ಯ ಭಾಗದಲ್ಲಿರುವ ಒಂದು ಪುಟ್ಟ ರಾಷ್ಟ್ರ. ಭಾರತದಂತೆಯೇ ಅಹಿಂಸಾತ್ಮಕ ಹೋರಾಟದ ಹಾದಿಯನ್ನು ಹಿಡಿದ ದೇಶವದು. ಎಲೆಮರೆಯ ಕಾಯಿ ಎಸ್ಟೋನಿಯಾದ ರಾಜಧಾನಿ ತಾಲಿನ್ ಕುರಿತ ಬರಹದೊಂದಿಗೆ ತಮ್ಮ ಸರಣಿಯನ್ನು ಅವರು ಆರಂಭಿಸಿದ್ದಾರೆ. ‘ದೂರದ ಹಸಿರು’ ಸರಣಿಯ ಮೊದಲ ಬರಹ ನಿಮ್ಮ ಓದಿಗಾಗಿ.

 

ಎಸ್ಟೋನಿಯಾದ ಗಾಯನ ಕ್ರಾಂತಿ (The Singing Revolution) ಹಾಗೂ ತಾಲಿನ್ ಪ್ರವಾಸ:

ನನಗೆ ಎಸ್ಟೊನಿಯಾ ಎಂಬ ಒಂದು ರಾಷ್ಟ್ರ ಇದೆ ಎನ್ನುವ ಮಾಹಿತಿಯೇ ಇರಲಿಲ್ಲ. ಹೆಸರು ಕೂಡ ಕೇಳಿರಲಿಲ್ಲ. ಫಿನ್ಲ್ಯಾಂಡ್ ಪ್ರವಾಸದ ಸಮಯದಲ್ಲಿ ಒಂದು ದಿನ ಬಿಡುವಿತ್ತು. ಗೂಗಲ್ಲಣ್ಣನ ಸಹಾಯಕ್ಕೆ ಮೊರೆಹೊಕ್ಕಾಗ ಹೊರಬಂದ ಎಲೆಮರೆಯ ಕಾಯಿ ಎಸ್ಟೋನಿಯಾದ ರಾಜಧಾನಿ ತಾಲಿನ್! ಎಸ್ಟೋನಿಯಾ ಯುರೋಪ್ ಖಂಡದ ಈಶಾನ್ಯ(north-east) ಭಾಗದಲ್ಲಿರುವ ಒಂದು ಪುಟ್ಟ ರಾಷ್ಟ್ರ. ಇದರ ರಾಜಧಾನಿ “ತಾಲಿನ್”. ಇಲ್ಲಿನ ಇತಿಹಾಸ ಕೆದಕುತ್ತಾ ಹೋದಾಗ ತಿಳಿದ ಅತ್ಯಪರೂಪದ ಸಂಗತಿ ಭಾರತೀಯನಾಗಿ ನನಗೆ ವಿಶೇಷ ಎನ್ನಿಸಿತು. ಒಬ್ಬ ಭಾರತೀಯನ ದೃಷ್ಟಿ ಕೋನದಿಂದ ಎಸ್ಟೋನಿಯಾದ ಇತಿಹಾಸವನ್ನು ನೋಡಲು ಪ್ರಯತ್ನಿಸಿದ್ದೇನೆ.

ನಾನು ಓದಿಕೊಂಡಿದ್ದ ಪ್ರಕಾರ ಪ್ರಪಂಚದಲ್ಲಿ ಪ್ರಮುಖವಾದ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟ ನಡೆದದ್ದು ಮತ್ತು ಪ್ರಸಿದ್ಧಿ ಗಳಿಸಿದ್ದು ಭಾರತದಲ್ಲಿ. ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ನಡೆದ ಈ ಹೋರಾಟದಿಂದ ಸ್ಪೂರ್ತಿ ಪಡೆದ ನೆಲ್ಸನ್ ಮಂಡೇಲಾ ಆಫ್ರಿಕಾದಲ್ಲಿ ಅದನ್ನು ಮುಂದುವರೆಸಿದರು. ಇದನ್ನು ಬಿಟ್ಟರೆ ಅಹಿಂಸಾತ್ಮಕ ಹೋರಾಟದ ಉದಾಹರಣೆಗಳು ನನಗೆ ಗೊತ್ತಿರಲಿಲ್ಲ. ನಾವು ಶಾಲೆಗಳಲ್ಲಿ ಓದಿದ ಇತಿಹಾಸದ ಪಾಠಗಳಲ್ಲಿ ಹೊರಗಿನ ದೇಶಗಳ ಇತಿಹಾಸ ನೆನಪಿರುವುದು ಗ್ರೀಕ್ ನ ಅಲೆಕ್ಸಾಂಡರ್ ದಿ ಗ್ರೇಟ್, ಬೆಂಕಿ ಹತ್ತಿ ಊರು ಉರಿಯುತ್ತಿರುವಾಗ ಪಿಟೀಲು ಬಾರಿಸುತ್ತಿದ್ದ ರೋಮ್ ದೊರೆ, ಬ್ರಿಟಿಷರ ಆಡಳಿತ ಹಾಗು ಮೊಘಲರು ದಂಡೆತ್ತಿ ಬಂದದ್ದು. ಹಲವಾರು ವೈಶಿಷ್ಟ್ಯಮಯ ಐತಿಹಾಸಿಕ ವಿಷಯಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಆದರೆ ಬದಲಾದ ತಂತ್ರಜ್ಞಾನದಿಂದ ಬೆರಳ ತುದಿಯಲ್ಲಿ ಇತಿಹಾಸ ತಿಳಿಯಬಲ್ಲ ಸವಲತ್ತುಗಳು ಜ್ಞಾನಾರ್ಜನೆಗೆ ಅನುಕೂಲವಾಗುತ್ತಿರುವುದು ಆಶಾದಾಯಕ ಬೆಳವಣಿಗೆ.

ಈಗ ಎಸ್ಟೋನಿಯಾ ವಿಷಯಕ್ಕೆ ಮತ್ತೆ ಬರೋಣ. ಸುಮಾರು ಆರರಿಂದ ಎಂಟು ಸಾವಿರ ವರ್ಷಗಳ ಕಾಲ ಮಾನವನ ಹೆಜ್ಜೆ ಗುರುತು ಎಸ್ಟೋನಿಯಾ ನೆಲದಲ್ಲಿ ಪತ್ತೆಯಾಗಿದೆ. ಕ್ರಿ.ಶ. 1208ವರೆಗೂ ಭೂ ಭಾಗವನ್ನು ಎಸ್ಟೋನಿಯನ್ನರು ಸ್ವತಂತ್ರವಾಗಿ ಕಾಪಾಡಿಕೊಂಡಿದ್ದರು. ತದನಂತರ ವ್ಯಾಪಾರ ಹಾಗೂ ಮತ ಪ್ರಚಾರಕ್ಕಾಗಿ ಮೊದಲು ಜರ್ಮನ್ನರು ಎಸ್ಟೋನಿಯಾಗೆ ಕಾಲಿಟ್ಟರು. ಅಪಾರ ಸಂಪತ್ತು ಮತ್ತು ಅವಕಾಶಗಳನ್ನು ಅರಿತ ಜರ್ಮನ್ನಿನ ಬಿಷಪ್ ಅಲ್ಬರ್ಟ್ ತನ್ನ ಸೈನ್ಯದೊಂದಿಗೆ ಸಜ್ಜಾಗಿ ಸತತ ಹತ್ತೊಂಬತ್ತು ವರ್ಷಗಳ ಕಾಲ ಯುದ್ಧ ಮಾಡಿ ಎಸ್ಟೋನಿಯಾವನ್ನು ವಶಪಡಿಸಿಕೊಳ್ಳುತ್ತಾನೆ. ಈ ಆಪರೇಷನ್ ಹೆಸರು “ದಿ ಬಾಲ್ಟಿಕ್ ಕ್ರುಸೇಡ್”. ಅದರ ಮೂಲ ಉದ್ದೇಶ ಕ್ರೈಸ್ತ ಮತ ವಿಸ್ತರಣೆ.

ಈ ಸುದ್ದಿ ಎಲ್ಲೆಡೆ ಹರಡಿ ಇತರೆ ಮೂರೂ ದಿಕ್ಕುಗಳಿಂದ ಬೇರೆ ವಸಾಹತುಶಾಹಿಗಳು ಎಸ್ಟೋನಿಯಾ ಮೇಲೆ ದಾಳಿ ಮಾಡುತ್ತವೆ. ಉತ್ತರದಿಂದ ಡೆನ್ಮಾರ್ಕ್, ಪಶ್ಚಿಮದಿಂದ ಸ್ವೀಡೆನ್ ಹಾಗೂ ಪೂರ್ವದಿಂದ ಸ್ಲಾವ್‌ಗಳು. ಪೈಪೋಟಿ ಹೇಗಿತ್ತೆಂದರೆ ಮೊದಲೇ ದಕ್ಷಿಣದಿಂದ ಬಂದಿದ್ದ ಜರ್ಮನ್ನರಿಗೆ ಸವಾಲಾಗಿ ನಿಲ್ಲುತ್ತವೆ. ಅವಶ್ಯಕತೆ ಇದ್ದಾಗ ಮಾತ್ರ ಶಸ್ತ್ರ ಹಿಡಿಯುತ್ತಿದ್ದ ಎಸ್ಟೋನಿಯಾದ ಮೀನುಗಾರರು ಹಾಗೂ ರೈತರ ಅರೆಕಾಲಿಕ ಪಡೆ ಶಸ್ತ್ರಸಜ್ಜಿತ ಪಡೆಗಳ ಮುಂದೆ ಹೈರಾಣಾಗಿ ನೆಲಕಚ್ಚುತ್ತದೆ. ಹೀಗೆ ಎಸ್ಟೋನಿಯಾದ ಸ್ವಾತಂತ್ರ್ಯ ಹರಣ ಎಗ್ಗಿಲ್ಲದೆ ಮುಂದುವರೆದು ಅಮೂಲ್ಯ ಸಂಪತ್ತು, ಭೂ ಭಾಗಗಳು ಸ್ಥಳೀಯ ಜನಗಳ ಕೈ ತಪ್ಪಿ ವಸಾಹತುಗಳ ಪಾಲಾಗುತ್ತದೆ. ತನ್ನ ಸ್ವಂತ ನೆಲದ ಜಮೀನಿನಲ್ಲಿ ಕೂಲಿಕಾರರಾಗಿ ದುಡಿದು ತೆರಿಗೆ ಕಟ್ಟುವ ಹಾಗೂ ವಸಾಹತು ಸೈನ್ಯದಲ್ಲಿ ಕೆಳ ಹಂತದ ಗುಲಾಮರಾಗಿ ಕೆಲಸ ಮಾಡುವ ಪರಿಸ್ಥಿತಿ ಹಲವು ಶತಮಾನಗಳವರೆಗೆ ಮುಂದುವರೆಯುತ್ತದೆ.

1721ರಲ್ಲಿ ರಷಿಯನ್ನರಿಗೆ ಅಧಿಕಾರ ಹಸ್ತಾಂತರಿಸಿ ಬೇರೆ ವಸಾಹತುಗಳು ಹಿಂದಿರುಗಿದರೂ ಎಸ್ಟೋನಿಯನ್ನರ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಗಳು ಆಗುವುದಿಲ್ಲ. 1860ರ ದಶಕದಲ್ಲಿ “ದಿ ಗ್ರೇಟ್ ಅವೇಕನಿಂಗ್” ಚಳವಳಿ ಪ್ರಾರಂಭವಾಗುತ್ತದೆ. ಶಸ್ತ್ರ ಸಜ್ಜಿತ ಹೋರಾಟವಾಗಲೀ ಅಥವಾ ಕ್ರಾಂತಿಕಾರಿ ಹೋರಾಟವಾಗಲೀ ಇದರ ಉದ್ದೇಶ ಅಲ್ಲ. ಮೂಲ ಉದ್ದೇಶ ಎಸ್ಟೋನಿನಯನ್ನರ ಭಾಷೆ, ಕಲೆ, ಸಂಸ್ಕೃತಿ, ಸಂಗೀತ ಹಾಗೂ ಸಾಹಿತ್ಯವನ್ನು ಪುನರುಜ್ಜೀವನಗೊಳಿಸುವುದಾಗಿತ್ತು. ಈ ಚಳವಳಿಯ ಭಾಗವಾಗಿ ನಮ್ಮ ಸ್ವಾತಂತ್ರ್ಯ ಹೋರಾಟದ ದಿಕ್ಕು ಬದಲಿಸಿದ ಬಂಕಿಮ ಚಂದ್ರರ “ಆನಂದ ಮಠ”ದಂತೆಯೆ ಎಸ್ಟೋನಿಯಾದ “ಕಲೆವಿಪೋಯೆಗ್ (Kalevipoeg)” ಹೊರಹೊಮ್ಮಿತು. ಅದನ್ನು ರಚಿಸಿದವರು Lydia Koidula. ಈ ಕೃತಿಯ ಆತ್ಮ ಎಸ್ಟೋನಿಯನ್ನರ ಹೃದಯವನ್ನು ಎಷ್ಟರಮಟ್ಟಿಗೆ ಆವರಿಸಿತ್ತೆಂದರೆ ಇದನ್ನು ರಾಷ್ಟ್ರೀಯ ಮಹಾಕಾವ್ಯ ಎಂದೇ ಗ್ರಹಿಸಲಾಗುತ್ತದೆ. ಇದರಲ್ಲಿ ಎಸ್ಟೋನಿಯನ್ನರ ಸ್ವಾಭಿಮಾನ ಹೆಚ್ಚಿಸುವ ಹಲವಾರು ನಾಟಕಗಳು ಹಾಗೂ ಗೀತೆಗಳು ಇರುತ್ತವೆ. ಸದ್ದಿಲ್ಲದೇ ಎಸ್ಟೋನಿಯನ್ನರು ಒಂದು ಶಾಂತಿಯ ಕ್ರಾಂತಿಗೆ ನಾಂದಿ ಹಾಡಿದರು.

(1987 Hirve Park Demonstration Crowd – ಕೃಪೆ: singingrevolution.com)

ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ತಿಲಕರು ಗಣಪತಿ ಹಬ್ಬವನ್ನು ಹೇಗೆ ಉಪಾಯದಿಂದ ತಂತ್ರವಾಗಿ ಬಳಸಿಕೊಂಡರೋ, ಅದೇ ರೀತಿ ಎಸ್ಟೋನಿಯಾದಲ್ಲಿ ಸಂಗೀತ ಕೂಟಗಳನ್ನು ಏರ್ಪಡಿಸಿ ದೇಶಭಕ್ತಿ ಗೀತೆಗಳನ್ನು ಹಾಡುತ್ತಿದ್ದರು. ಮೊದಲ ಸಂಗೀತದ ಹಬ್ಬ ಜರುಗುವುದು 1869ರಲ್ಲಿ. ಮರಳುಗಾಡಿನಲ್ಲಿ ಓಯಸಿಸ್ ಕಂಡಂತೆ ಆದ ಎಸ್ಟೋನಿಯನ್ನರು ಗಾಯನ ಕ್ರಾಂತಿಯನ್ನು ಅಪ್ಪಿ ಒಪ್ಪಿಕೊಂಡರು. ಈ ಗಾಯನ ಕ್ರಾಂತಿ 1921ರಲ್ಲಿ ಸ್ವಾತಂತ್ರ್ಯ ಪಡೆಯುವ ತನಕ ಮುಂದುವರೆಯಿತು. ಕೊನೆಯ ವರ್ಷಗಳಲ್ಲಿ ವಿಶ್ವ ಯುದ್ಧ- ೧ ನಡೆದು ಅತ್ತಿತ್ತ ವಿಚಲಿತರಾದ ರಷಿಯನ್ನರನ್ನು ಶಸ್ತ್ರಾಸ್ತ್ರ ಹೋರಾಟದಿಂದ ಎಸ್ಟೋನಿಯನ್ನರು ಹೊರದಬ್ಬಿ ನಂತರ ಮತ್ತೆ ಬಂದ ಜರ್ಮನ್ನರನ್ನೂ ಸೋಲಿಸುತ್ತಾರೆ. 1921ರಲ್ಲಿ ಮೊದಲ ಸ್ವಾತಂತ್ರ್ಯ ಎಸ್ಟೋನಿಯನ್ನರಿಗೆ ದೊರಕುತ್ತದೆ.

ತದನಂತರ ಎಸ್ಟೋನಿಯಾ ಎರಡನೇ ವಿಶ್ವ ಯುದ್ದದಲ್ಲಿ ತಟಸ್ಥ ನೀತಿಯನ್ನು ಅನುಸರಿಸಿತ್ತು. ಸ್ವಾತಂತ್ರ್ಯ ಪಡೆದು ಯಾವ ಯುದ್ಧದ ಉಸಾಬರಿಯೂ ನಮಗೆ ಬೇಡ ಎಂದು ದೇಶ ಕಟ್ಟುವ ಕೆಲಸ ನಡೆಯಿತು. ಇಪ್ಪತ್ತು ವರ್ಷಗಳಲ್ಲಿ ರಷಿಯಾದಷ್ಟೇ ಆರ್ಥಿಕ ವೃದ್ಧಿಯನ್ನು ಕಂಡ ಎಸ್ಟೋನಿಯಾದ ಸಾಧನೆ ಅಪಾರ. ಈ ಪುಟ್ಟ ರಾಷ್ಟ್ರದ ಆರ್ಥಿಕ ಪ್ರಗತಿ ಹಾಗು ಸಂಪತ್ತಿನ ಮೇಲೆ ಯಾವಾಗಲೂ ಕಣ್ಣಿಟ್ಟಿದ್ದ ಸೋವಿಯತ್ ಯೂನಿಯನ್ ಎಸ್ಟೋನಿಯಾವನ್ನು 1940 ದಶಕದಲ್ಲಿ ಪುನಃ ಆಕ್ರಮಿಸಿತು! 1944ರಲ್ಲಿ ಈ ಭೂ ಭಾಗವನ್ನು USSRಗೆ ಸೇರಿಸಲಾಯಿತು. 1950ರ ದಶಕದಿಂದ ಮತ್ತೆ ಪುಟಿದೆದ್ದು ಪ್ರಾರಂಭವಾಗಿದ್ದೆ “ಗಾಯನ ಕ್ರಾಂತಿ”. ರಾಷ್ಟ್ರ ಭಕ್ತಿ ಗೀತೆಗಳಿಗೆ ಹೊಸ ರೂಪ ಕೊಟ್ಟು, ಯುವಜನಾಂಗವನ್ನು ಮತ್ತೆ ರಷಿಯನ್ನರ ವಿರುದ್ಧ ಒಗ್ಗೂಡಿಸಿದ ಅಹಿಂಸಾತ್ಮಕ ಚಳುವಳಿ! ಕಾಡ್ಗಿಚ್ಚಿನಂತೆ ಹಬ್ಬಿದ ಈ ಚಳವಳಿ ಯಾವ ಮಟ್ಟಕ್ಕೆ ಬೆಳೆಯಿತೆಂದರೆ 23 ಆಗಸ್ಟ್ 1989ರಂದು ಸುಮಾರು ಎರಡು ಲಕ್ಷ ಜನ 675 ಕಿ.ಮೀ. ಉದ್ದದ ಮಾನವ ಸರಪಳಿಯ ಮೂಲಕ ರಾಷ್ಟ್ರ ಭಕ್ತಿ ಗೀತೆಗಳನ್ನು ಹಾಡಿದ ದಾಖಲೆ ಇನ್ನೂ ಇದೆ. ಅಂದಿನ ರಷಿಯಾದ ಅಧ್ಯಕ್ಷರಾಗಿದ್ದ ಗೊರಬೆಚಾವ್(gorbechav) ಅವರು ಅದಾಗಲೇ ಜಗತ್ತಿನಾದ್ಯಂತ ನಕಾರಾತ್ಮಕ ಟೀಕೆಗಳಿಗೆ ಒಳಗಾಗಿದ್ದರಿಂದ ಈ ಚಳವಳಿಯನ್ನು ಹತ್ತಿಕ್ಕುವ ಗೋಜಿಗೆ ಹೋಗುವುದಿಲ್ಲ. ಇಂದಿಗೂ ಎಸ್ಟೋನಿಯನ್ನರಿಗೆ ಈ ಗೀತೆಗಳ ಮೇಲೆ‌ ಎಲ್ಲಿಲ್ಲದ ಅಭಿಮಾನ!

(ಕೃಪೆ: By Jaan Künnap – Own work, CC BY-SA 4.0, https://commons.wikimedia.org/w/index.php?curid=105913173)

ಆಮೇಲೆ ಯಾವಾಗ ಸೋವಿಯತ್ ಯೂನಿಯನ್ ಬಡವಾಗತೊಡಗಿತೊ, ಅದರ ತೆಕ್ಕೆಯಿಂದ ಒಂದೊಂದೆ ರಾಷ್ಟ್ರ ಸ್ವಾತಂತ್ರ್ಯ ಪಡೆಯಿತು. 24 ಫೆಬ್ರವರಿ 1991ರಲ್ಲಿ ಕೊನೆಯದಾಗಿ ಸ್ವಾತಂತ್ರ್ಯ ಪಡೆದುಕೊಂಡ ದೇಶಗಳಲ್ಲಿ ಎಸ್ಟೋನಿಯಾ ಕೂಡ ಒಂದು. ಅಲ್ಲಿಗೆ ಎಸ್ಟೋನಿಯಾ ಎರಡನೇ ಬಾರಿ ಬಂಧನದ ಸರಪಳಿಯಿಂದ ಸ್ವತಂತ್ರವಾಗಿ ಹಾರಿತು.

ಪ್ರಸ್ತುತ ತಾಲಿನ್ ನಗರದಲ್ಲಿ ಕ್ರಿಸ್ಮಸ್ ಮಾರುಕಟ್ಟೆ ಬಹಳ ಪ್ರಸಿದ್ಧ. ಚಳಿ ತಡೆಯಲಾಗದೆ ಅಲ್ಲಿಯ ಒಂದು ಅಂಗಡಿಯಲ್ಲಿ ಉಣ್ಣೆಯ ಮಫ್ಲರ್ ತೆಗೆದುಕೊಂಡ ಮೇಲೆ ಗಾಯನ ಕ್ರಾಂತಿಯ ಬಗೆಗೆ ನೈಜ ಚಿತ್ರಣ ತಿಳಿಯಲು ಉತ್ಸುಕನಾಗಿ ಆ ಅಜ್ಜಿಯ ಹತ್ತಿರ ಮಾತು ಆರಂಭಿಸಿದೆ. ನನ್ನ ಪುಣ್ಯಕ್ಕೆ ಬಹುತೇಕರು ಇಂಗ್ಲೀಷ್ ಮಾತನಾಡುತ್ತಾರೆ. ಮಾತನಾಡುತ್ತಾ ತಿಳಿದಿದ್ದೇನೆಂದರೆ ಅಜ್ಜಿಯೂ ಸಹ “ಗಾಯಾನ ಕ್ರಾಂತಿ”ಯಲ್ಲಿ ಭಾಗವಹಿಸಿದ್ದರು ಎಂದು. ಮಾತು ಸಾಗುತ್ತಾ “ಗಾಯನ ಕ್ರಾಂತಿಯಿಂದಲೇ ಸ್ವಾತಂತ್ರ್ಯ ದೊರೆಯಿತೆ?” ಎಂದು ಕೇಳಿ ಬಿಟ್ಟೆ! ಅಷ್ಟು ಹೊತ್ತು ನಿರರ್ಗಳವಾಗಿ ವಿವರಿಸಿದ ಅಜ್ಜಿಯ ಮುಖ ಪೆಚ್ಚಗಾಗಿ ಉತ್ತರಿಸಲು ತಡವರಿಸುತ್ತಿತ್ತು. ಹತಾಶೆ ಎನ್ನುವುದಕ್ಕಿಂತಲೂ ಸತ್ಯ ಅಷ್ಟು ಸಿಹಿಯಾಗಿಲ್ಲ ಎನ್ನುವ ಭಾವನೆ. ಕೊನೆಗೆ ಸುಧಾರಿಸಿಕೊಂಡು “ಅದೊಂದರಿಂದಲೇ ಸ್ವಾತಂತ್ರ್ಯ ದೊರೆಯದೇ ಇರಬಹುದು, ಆದರೆ ಸ್ವಾತಂತ್ರ್ಯ ಸಿಕ್ಕ ನಂತರ ನಮ್ಮ ಆತ್ಮ ನಮ್ಮ ಬಳಿಯೇ ಇದೆ ಎಂದರೆ ಅದಕ್ಕೆ ಗಾಯನ ಕ್ರಾಂತಿಯೇ ಕಾರಣ” ಎಂದು ಆತ್ಮವಿಶ್ವಾಸದಿಂದ ಉತ್ತರಿಸಿತು. ಹೊಟ್ಟೆ ಪಾಡಿಗಾಗಿ ಒಬ್ಬ ಸ್ವೆಟರ್, ಮಫ್ಲರ್ ಮಾರುವ ಅಜ್ಜಿಗೆ ಈ ಮಟ್ಟದ ಅರಿವು ಮತ್ತು ಧೃಡತೆ ಇರುವುದನ್ನು ಕಂಡು ನಾನು ನಿಜವಾಗಲೂ ಬೆರಗಾಗಿಬಿಟ್ಟೆ. ನನ್ನ ದೇಶದ ಮೇಲಿನ ಅಭಿಮಾನದ ಉತ್ಸಾಹದಲ್ಲಿ ತಪ್ಪು ಮಾಹಿತಿ ಕೊಡಬಾರದೆಂದು ಯೋಚಿಸಿ ಉತ್ತರಿಸಿದೆ ಎಂದು ಆಮೇಲೆ ಹೇಳಿದ್ದು, ನನಗೆ ಆ ಅಜ್ಜಿಯ ಮೇಲಿನ ಗೌರವವನ್ನು ದುಪ್ಪಟ್ಟಾಗಿಸಿತು. ಇಂದು ಎಸ್ಟೋನಿಯಾ ಒಂದು ಮುಂದುವರೆದ ದೇಶ. ಶಿಕ್ಷಣ, ಆರೋಗ್ಯ, ಡಿಜಿಟಲೀಕರಣ, ಭ್ರಷ್ಟಾಚಾರರಹಿತ ಆಡಳಿತ ಹೀಗೆ ಹಲವಾರು ವಿಷಯಗಳಲ್ಲಿ ಮುಂಚೂಣಿಯಲ್ಲಿದೆ. ಆದರೂ ಹೊರಜಗತ್ತಿಗೆ ಪುಟ್ಟ ದೇಶ ಎಸ್ಟೋನಿಯದ ಗರಿಮೆ ಗೋಚರಿಸದಿರುವುದು ವಿಷಾದನೀಯವೇ ಸರಿ!

ಇದಕ್ಕೆ ವ್ಯತಿರಿಕ್ತ ಉದಾಹರಣೆಯನ್ನು ಕೊಡುವುದಾದರೆ: ಪ್ರಪಂಚದಲ್ಲಿ ಅತೀ ಹೆಚ್ಚು ಉಪಯೋಗಿಸುವ ಮಾತೃ ಭಾಷೆಗಳಲ್ಲಿ ಸ್ಪಾನಿಷ್‌ಗೆ ಎರಡನೆ ಸ್ಥಾನ್ (ಇಂಗ್ಲಿಷ್‌ಗೆ ಮೂರನೆ ಸ್ಥಾನ)! ಸ್ಪೇನ್ ಒಂದು ದೇಶವಾದರೂ ಅದರ ಜನಸಂಖ್ಯೆ ಅದರ ಭಾಷೆಯ ಕುರಿತಾದ ಅಂಕಿಅಂಶಕ್ಕೆ ನ್ಯಾಯ ದೊರಕಿಸುವುದಿಲ್ಲ. ಸ್ಪೇನ್‌ಗಿಂತ ನಾಲ್ಕು ಪಟ್ಟು ದೊಡ್ಡದಾದ ಉತ್ತರ ಅಮೆರಿಕಾದ ಮೆಕ್ಸಿಕೋದಿಂದ ಹಿಡಿದು ದಕ್ಷಿಣ ಅಮೇರಿಕಾ ಖಂಡದ ಹಲವಾರು ದೇಶಗಳಲ್ಲಿ ಸ್ಪೇನ್ ವಸಾಹತು ಸ್ಥಾಪನೆಯಾಗಿ ಆ ದೇಶಗಳು ಸ್ವಾತಂತ್ರ್ಯಗೊಳ್ಳುವ ಹೊತ್ತಿಗೆ ಅಲ್ಲಿಯ ಸ್ಥಳೀಯ ಭಾಷೆ, ಸಂಸ್ಕೃತಿ ಎಲ್ಲವೂ ನಾಶವಾಗಿ ಸ್ಪಾನಿಷ್ ಮಾತ್ರ ಉಳಿಯಿತು. ಈಗ ಆ ಎಲ್ಲಾ ರಾಷ್ಟ್ರಗಳಲ್ಲಿ ಸ್ಪಾನಿಷ್ ಅಧಿಕೃತ ಮಾತೃ ಭಾಷೆಯಾಗಿದೆ. ಬರೋಬ್ಬರಿ ಇಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ಸ್ಪಾನಿಷ್ ಅಧಿಕೃತ ಮಾತೃ ಭಾಷೆಯಾಗಿದೆ! ಈ ರೀತಿ ಆತ್ಮವನ್ನು ಕಳೆದುಕೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಎಸ್ಟೋನಿಯಾ ಬಾರದಿರುವುದಕ್ಕೆ ಅನನ್ಯ “ಗಾಯನ ಕ್ರಾಂತಿ” ಯೇ ಮೂಲ ಕಾರಣ. ಈಗಲೂ ಅಲ್ಲಿ ಎಸ್ಟೋನಿಯನ್ ಭಾಷೆ ಅಧಿಕೃತ ಭಾಷೆ. ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಗೀತೆಗಳನ್ನು ಹಾಡಿ ಸಂಪೂರ್ಣ ದೇಶವೇ ಸಂಭ್ರಮಿಸುತ್ತದೆ!!

1860ರ ದಶಕದಲ್ಲಿ “ದಿ ಗ್ರೇಟ್ ಅವೇಕನಿಂಗ್” ಚಳವಳಿ ಪ್ರಾರಂಭವಾಗುತ್ತದೆ. ಶಸ್ತ್ರ ಸಜ್ಜಿತ ಹೋರಾಟವಾಗಲೀ ಅಥವಾ ಕ್ರಾಂತಿಕಾರಿ ಹೋರಾಟವಾಗಲೀ ಇದರ ಉದ್ದೇಶ ಅಲ್ಲ. ಮೂಲ ಉದ್ದೇಶ ಎಸ್ಟೋನಿನಯನ್ನರ ಭಾಷೆ, ಕಲೆ, ಸಂಸ್ಕೃತಿ, ಸಂಗೀತ ಹಾಗೂ ಸಾಹಿತ್ಯವನ್ನು ಪುನರುಜ್ಜೀವನಗೊಳಿಸುವುದಾಗಿತ್ತು.

ಇಷ್ಟೆಲ್ಲಾ ಇತಿಹಾಸ ಹೇಳುವ ಭರದಲ್ಲಿ ನನ್ನ ತಾಲಿನ್ ಭೇಟಿಯ ಅನುಭವವನ್ನು ಹಂಚಿಕೊಳ್ಳುವುದನ್ನೇ ಮರೆತುಬಿಟ್ಟೆ. ತಾಲಿನ್ ನಗರ ಎಷ್ಟೋನಿಯಾದ ರಾಜಧಾನಿ. ಫಿನ್ಲ್ಯಾಂಡ್‌ನ ಹೆಲ್ಸಿಂಕಿಯಿಂದ ಎರಡೂವರೆ ಘಂಟೆ ಹಡಗಿನ ಪಯಣ. ನಾವು ಹಡಗು ಹತ್ತಿದ್ದೂ ಇದೇ ಮೊದಲು! ಹಡಗು ನಿಲ್ದಾಣವೂ ಒಂಥರ ವಿಮಾನ ನಿಲ್ದಾಣದ ಹಾಗೆಯೇ. ಹೊರಡುವ ಅರ್ಧ ಘಂಟೆ ಮುಂಚೆಯೆ ಗೇಟ್ ಬಂದ್ ಮಾಡಿಬಿಡುತ್ತಾರೆ. ಬೆಳಗ್ಗೆ 8:30ಕ್ಕೆ ಚೆಕ್ ಇನ್ ಆದ್ವಿ. ನಾವಂದುಕೊಂಡಿದ್ದಕ್ಕಿಂತಲೂ ಐಷಾರಮಿಯಾಗಿದ್ದ ಹಡಗಿನ ಎಂಟು ಮಹಡಿಗಳಲ್ಲಿ ಸೂಪರ್ ಮಾರ್ಕೆಟ್, ಶಾಪಿಂಗ್ ಸೆಂಟರ್, ಹಲವಾರು ಹೋಟೆಲ್‌ಗಳು, ಬಾರ್ ಹಾಗೂ ಲಕ್ಷ್ಯುರಿ ಕ್ಯಾಬಿನ್‌ಗಳೂ ಇದ್ದವು. ನಿಧಾನವಾಗಿ ಇಷ್ಟೆಲ್ಲಾ ಸುತ್ತಾಡಿ ನೋಡಲು ಒಂದೂವರೆ ಘಂಟೆ ಹಿಡಿಯಿತು! ಒಂಭತ್ತನೇ ಮಹಡಿಗೆ ಹೋದರೆ ಹಡಗಿನ ತಾರಸಿ. ಕೊರೆಯುವ -14 ಡಿಗ್ರಿ ಸೆಲ್ಸಿಯಸ್ ತಾಪಮಾನ. ಅಲೆಗಳು ಕಡಿಮೆಯಿದ್ದ ಕಡೆ ಸಮುದ್ರ ಕೂಡ ಹೆಪ್ಪುಗಟ್ಟಿತ್ತು! ನೀರಿನ ತಾಪಮಾನಕ್ಕೂ ಹಾಗೂ ಹೊರಗಿನ ವಾತಾವರಣದ ತಾಪಮಾನಕ್ಕೂ ವ್ಯತ್ಯಾಸವಿದ್ದದ್ದರಿಂದ ನೀರಿನ ಮೇಲ್ಮೈ ಪದರದಿಂದ ಮಂಜು ಎದ್ದಿತ್ತು. ತುಂಬ ಚಳಿಗಾಲದಲ್ಲಿ ಹೊರಗಿನ ವಾತಾವರಣದ ತಾಪಮಾನ ನಮ್ಮ ದೇಹದ ತಾಪಮಾನಕ್ಕಿಂತಲೂ ಕಡಿಮೆ ಇದ್ದಾಗ ಬಾಯಿಯಿಂದ ಹ.. ಎಂದು ಉಸಿರು ಬಿಟ್ಟರೂ ಇದೆ ರೀತಿ ಹೊಗೆ ಬಂದ ಹಾಗೆ ಮಂಜು ಬರುತ್ತದೆ. ಅಬ್ಬಬ್ಬಾ, ಎಂದೂ ನೋಡಿರದ ದೃಶ್ಯಗಳು. ಎಲ್ಲವನ್ನೂ ಆಸ್ವಾದಿಸುವುದೊರಳೊಳಗಾಗಿ ಹಡಗು ಹೂಂಕಾರ ಹಾಕಿ ತಾಲಿನ್‌ ಬಂದರು ತಲುಪಿತ್ತು.

ಬಂದರಿನಿಂದ ಹೊರಬರುವಾಗ ಬೋರ್ಡಿನಲ್ಲಿ ತಾಲಿನ್ ಐತಿಹಾಸಿಕ ಭಾಗದ ಊರಿಗೆ ಸುಮಾರು ಒಂದೂವರೆ ಕಿಲೋಮೀಟರ್ ತೋರಿಸುತ್ತಿತ್ತು. ಹೊರಗೆ ಎಲ್ಲೆಲ್ಲೂ ಹಿಮ. ಬಹುಶಃ ಹಿಂದಿನ ರಾತ್ರಿಯೂ ಹಿಮ ಸುರಿದಿತ್ತು ಅನ್ನಿಸುತ್ತೆ, ಮೇಲಿನ ಪದರಗಳು ಹತ್ತಿಯಂತೆ ಮೆತ್ತಗಿತ್ತು. ನಡೆಯುವಾಗ ಕಾಲುಗಳು ಹಿಮದ ಮೇಲೆ ಅತ್ತಿಂದಿತ್ತ ಇತ್ತಿಂದತ್ತ ಸರಿಯುತ್ತಾ ನಗೆಪಾಟಲು ಎನ್ನಿಸುತ್ತಿತ್ತು. ಕಣ್ಣೆತ್ತಿ ನೋಡಿದಾಗ ಎಲ್ಲರೂ ಹಿಮ ಕರಡಿಗಳ ಹಾಗೆ ನಡೆಯುತ್ತಿದ್ದದ್ದು, ನಾವೇನೂ ಪ್ರತ್ಯೇಕವಲ್ಲ ಎನ್ನುವ ಸಮಾಧಾನ ನೀಡಿತು. ನಿಂತಿದ್ದ ಕಾರುಗಳು ಹಿಮದ ಹೊದಿಕೆಯಿಂದ ಮುಳುಗಿಹೋಗಿದ್ದವು. ರಸ್ತೆ ದಾಟುವಾಗ ಬರುತ್ತಿದ್ದ ಕಾರುಗಳು ದೂರದಿಂದಲೇ ಬ್ರೇಕ್ ಹಾಕಿದರೂ ಹಿಮದ ರಸ್ತೆಯ ಮೇಲೆ ಜುಯ್ಯೆಂದು ಜಾರಿ ಬಂದು ಬಹಳ ಹತ್ತಿರ ನಿಲ್ಲುತ್ತಿದ್ದವು. ಅದು ಹೇಗೆ ಇಲ್ಲಿನ ವಾತಾವರಣದಲ್ಲಿ ಕಾರು ಓಡಿಸುತ್ತಾರೋ ಎನ್ನಿಸುತ್ತಿತ್ತು. ಒಮ್ಮೆ ಕೋಟೆಯ ಒಳಗೆ ಹೋದ ಮೇಲೆ ಕಿರಿದಾದ ಕಲ್ಲಿನ ರಸ್ತೆಗಳು, ಐತಿಹಾಸಿಕ ಕಟ್ಟಡಗಳು ಹಾಗೂ ಒಂದಕ್ಕೊಂದು ಅಂಟಿಕೊಂಡ ಮನೆಗಳು (ನಮ್ಮ ಬೆಂಗಳೂರಿನ ೨೦*೩೦ ಅಳತೆಯಲ್ಲಿ ಒಂದರ ಪಕ್ಕ ಒಂದು ಅಂಟಿಕೊಂಡು ಎತ್ತರಕ್ಕೆ ಕಟ್ಟುವ ಹಾಗೆ) ವಿಭಿನ್ನ ಅನುಭವ ನೀಡಿದವು. ರಸ್ತೆಗಳು ಕಿರಿದಾಗಿದ್ದರೂ ಆಕರ್ಷಣೀಯವಾಗಿದ್ದವು. ಫೋಟೋ ತೆಗೆಯುತ್ತಾ ನಡೆದಾಡಿದಾಗ ಮತ್ತೆ ಸಮಯ ನೋಡಿದ್ದು ಹೊಟ್ಟೆ ಹಸಿದಾಗಲೇ.

ಕ್ರಿಸ್ಮಸ್ ಸಮಯದಲ್ಲಿ ಯಾವುದೇ ಯುರೋಪಿಯನ್ ನಗರಗಳ ಪ್ರಮುಖ ಆಕರ್ಷಣೆ ಕ್ರಿಸ್ಮಸ್ ಮಾರುಕಟ್ಟೆ. ಇದೊಂಥರಾ ನಮ್ಮೂರ ಜಾತ್ರೆಯನ್ನು ಹೋಲುತ್ತದೆ. ಡಿಸೆಂಬರ್‌ನಲ್ಲಿ ಹೆಚ್ಚು ಚಳಿ ಇರಿವುದರಿಂದ ಕ್ರಿಸ್ಮಸ್ ಮಾರುಕಟ್ಟೆಯ ವಿಶೇಷ ಬಿಸಿ ಕೆಂಪು ವೈನ್ ಹಾಗೂ ಮಧ್ಯ ಕುಡಿಯದವರಿಗಾಗಿ ಬಿಸಿ ಫ್ರೂಟ್ ಪಂಚ್ (ಇದೊಂಥರ ಕೆಂಪು ದ್ರಾಕ್ಷಿ ರಸವನ್ನು ಕಾಯಿಸಿ ಸಕ್ಕರೆ ಹಾಗೂ ಮಸಾಲೆ ಹಾಕಿದಂತಿರುತ್ತದೆ). ಎರಡರಲ್ಲೂ ನಮ್ಮ ಮಸಾಲೆಯಲ್ಲಿ ಉಪಯೋಗಿಸುವ ಚಕ್ಕೆ ಬೆರೆಸಿ ಕುದಿಸಿರುತ್ತಾರೆ. ಚಳಿಗೆ ಹೇಳಿಮಾಡಿಸಿರುವಂತಿರುತ್ತದೆ. ಅದು ಬಿಟ್ಟರೆ ನಮ್ಮ ಜಾತ್ರೆಗಳಲ್ಲಿ ಇರುವಂತೆ ಬಟ್ಟೆ ಅಂಗಡಿ, ಸ್ವೆಟರ್, ಉಣ್ಣೆಯ ಇತರ ಬಿಡಿಭಾಗಗಳು ಇಲ್ಲಿನ ವೈಶಿಷ್ಟ್ಯ. ಮಕ್ಕಳಿಗೆ ಆಟವಾಡಲು ಸಹ ಹಲವಾರು ಆಕರ್ಷಣೆಗಳು ಇರುತ್ತವೆ. ತಾಲಿನ್ ನಗರದ ಕ್ರಿಸ್ಮಸ್ ಮಾರುಕಟ್ಟೆಯ ಇನ್ನೊಂದು ವಿಶೇಷ ಎಂದರೆ “ವೈಟ್ ಕ್ರಿಸ್ಮಸ್”! ನಮಗೆ ಯುಗಾದಿಯ ಮಳೆ ಹೇಗೆ ಶುಭ ಸಂಕೇತವೋ ಹಾಗೆ ಇವರಿಗೆ ಕ್ರಿಸ್ಮಸ್ ಸಮಯದಲ್ಲಿ ಎಲ್ಲೆಡೆ ಹಿಮ ಬಿದ್ದು ಬಿಳಿಯಾಗಿದ್ದರೆ ಅದನ್ನು ಶುಭ ಸಂಕೇತ ಎಂದು ಪರಿಗಣಿಸುತ್ತಾರೆ ಹಾಗೂ ಅದನ್ನು “ವೈಟ್ ಕ್ರಿಸ್ಮಸ್” ಎನ್ನುತ್ತಾರೆ. ತಾಲಿನ್ ನಗರದ ಹವಾಮಾನದ ಪ್ರಕಾರ ಬಹುತೇಕ ಪ್ರತಿ ವರ್ಷ ವೈಟ್ ಕ್ರಿಸ್ಮಸ್ ಇರುತ್ತದೆ. ಇದನ್ನು ನೋಡಲು ಯುರೋಪಿನಾದ್ಯಂತ ಜನ ಇಲ್ಲಿಗೆ ಬರುತ್ತಾರೆ. ನಾವು ಫ್ರೂಟ್ ಪಂಚ್ ಕುಡಿದು, ಉಣ್ಣೆಯ ಮಫ್ಲರ್ ಕೊಂಡು ಮಾರುತ್ತಿದ್ದ ಅಜ್ಜಿಯ ಜೊತೆ ಎಸ್ಟೋನಿಯಾ ಇತಿಹಾಸದ ಬಗೆಗೆ ಹರಟಿದೆವು.

ತಾಲಿನ್‌ನ ಪ್ರಮುಖ ಆಕರ್ಷಣೆ ರಷಿಯನ್ ಶೈಲಿಯ ಅಲೆಕ್ಸಾಂಡರ್ ಚರ್ಚ್. ಈರುಳ್ಳಿ ಗುಮ್ಮಟವಿರುವ ಚರ್ಚುಗಳು ರಷಿಯನ್ನರ ಹೆಜ್ಜೆ ಗುರುತು. ಸೋವಿಯತ್ ಯೂನಿಯನ್ ಭಾಗವಾಗಿದ್ದ ಬಹುತೇಕ ದೇಶಗಳಲ್ಲಿ ಈ ರೀತಿಯ ಚರ್ಚ್‌ಗಳನ್ನು ಕಾಣಬಹುದು. ತಾಲಿನ್‌ನ ಈ ಚರ್ಚನ್ನು ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ರಷಿಯನ್ನರು ತಮ್ಮ ನೆಚ್ಚಿನ ನಾಯಕನಾದ ಅಲೆಕ್ಸಾಂಡರ್ ನೆವ್‌ಸ್ಕೈ ನೆನಪಿಗಾಗಿ ಕಟ್ಟಿದ್ದಾರೆ. ಒಳಗಡೆ ಎಲ್ಲರಿಗೂ ಪ್ರವೇಶವಿದೆ. ಆದರೆ ಕೆಲವು ಕಟ್ಟುಪಾಡುಗಳೂ ಇವೆ. ಅರೆ ಬರಿಯ ಬಟ್ಟೆ ಹಾಕುವಂತಿಲ್ಲ ಹಾಗೂ ಗಂಡಸರು ಟೋಪಿ ಹಾಕುವಂತಿಲ್ಲ! ಅದೇಕೆ ಗಂಡಸರಿಗೆ ಮಾತ್ರ ತಾರತಮ್ಯವೋ ನಾ ತಿಳಿಯೆ. ಕೇಳಿ ತಿಳಿದುಕೊಳ್ಳೋಣವೆಂದರೆ ಕಡ್ಡಾಯವಾಗಿ ಮೌನವನ್ನು ಆಚರಿಸಬೇಕು. ಒಳಗೆ ಫೋಟೋ ತೆಗೆಯುವಹಾಗಿಲ್ಲ. ಇನ್ನೊಂದು ಆಸಕ್ತಿಕರ ಸಂಗತಿಯೂ ಈ ಚರ್ಚಿನೊಂದಿಗೆ ಅಂಟಿಕೊಂಡಿದೆ. ಎಸ್ಟೋನಿಯನ್ನರಿಗೆ ಮೊದಲ ಸ್ವಾತಂತ್ರ್ಯ ದೊರೆತಾಗ ಅಲ್ಲಿನ ಸರ್ಕಾರದ ಸಭೆಯಲ್ಲಿ ರಷಿಯನ್ನರ ಸಂಕೇತವಾದ ಈ ಸುಂದರ ಕಟ್ಟಡವನ್ನು ಕೆಡವಲು ಆದೇಶಿಸಲಾಯಿತಂತೆ. ಆದರೆ ಪರಿಸ್ಥಿತಿ ಹೇಗಿತ್ತೆಂದರೆ ಅದಕ್ಕೆ ಬೇಕಾದ ಹಣಕಾಸು ಹಾಗೂ ಮಾನವ ಸಂಪನ್ಮೂಲ ಆರ್ಥಿಕ ಹೊರೆಯಾದ ಪರಿಣಾಮ ಈ ಚರ್ಚನ್ನು ಕೆಡವಲಿಲ್ಲವಂತೆ!

ಸಂಜೆಯ ಹೊತ್ತಿಗೆ Toompea ಹಿಲ್ ಬಹಳ ಪ್ರಸಿದ್ಧ. ಇಲ್ಲಿಂದ ಜಗ-ಮಗಿಸುವ ಸಂಪೂರ್ಣ ತಾಲಿನ್ ಕಾಣುತ್ತದೆ. ಹಳೆಯ ಚರ್ಚ್‌ಗಳು, ಹೊಸ ನಗರದ ಆಕರ್ಷಕ ನವ ಕಟ್ಟಡಗಳೂ ಸೇರಿದಂತೆ ಕಣ್ಣು ಹಾಯಿಸುವವರೆಗೂ ತಾಲಿನ್ ಅನ್ನು ಆನಂದಿಸಬಹುದು. ಒಂದಷ್ಟು ಫೋಟೋಗಳನ್ನು ತೆಗೆದು, ತಾಲಿನ್ ಸ್ಮರಣಿಕೆಯನ್ನು ಕೊಂಡೆವು. ಬ್ರಷ್ಟಾಚಾರರಹಿತ ಆಡಳಿತವಿದ್ದರೆ ದೇಶ ಏಳಿಗೆ ಕಾಣಲು ಹೆಚ್ಚು ಸಮಯ ಬೇಡವೆಂದು ತಾಲಿನ್ ನೋಡಿ ಅನ್ನಿಸಿತು.

ನಾನು ಪಟ್ಟಿ ಮಾಡಿದ ಸ್ಥಳಗಳಲ್ಲಿ ಹೋಗಲಾಗದ್ದು ಅಲ್ಲಿಯ ಕಡಲ ವಸ್ತುಸಂಗ್ರಹಾಲಯ. ಮುಳುಗಿ ಹೋಗಿದ್ದ ಹಡಗನ್ನು ತಂದು ಇಲ್ಲಿ ಸಂರಕ್ಷಿಸಲಾಗಿದೆಯಂತೆ. ಮುಂದೆ ಅದೃಷ್ಟ ಇದ್ದರೆ ಬೇಸಿಗೆಯ ಕಾಲದಲ್ಲಿ ಮತ್ತೆ ಭೇಟಿ ನೀಡಲೇಬೇಕು ಎಂದುಕೊಂಡು ಬಂದರಿನ ದಾರಿಯ ಕಡೆ ನಡೆದೆವು. ಕೊರೆಯುವ ಚಳಿಯಲ್ಲಿ ನಡುಗುತ್ತಾ ಸುತ್ತಾಡಿದ್ದ ನಮಗೆ ಹಡಗಿನ ಎರಡೂವರೆ ಘಂಟೆಯ ಪ್ರಯಾಣ ಆಹ್ಲಾದಕರವಾಗಿತ್ತು. ಆಯಾಸದ ಕಾರಣ ಚೆನ್ನಾಗಿ ನಿದ್ರಾ ದೇವತೆಯೂ ನಮ್ಮನ್ನು ಗಾಢವಾಗಿ ಆವರಿಸಿದಳು. ಕನಸಿನಲ್ಲಿ ಎಸ್ಟೋನಿಯಾದ ಗಾಯನ ಕ್ರಾಂತಿಯ ಒಂದು ಝಲಕ್ ಹಾದು ಹೋಯಿತು.

ನಮ್ಮಂತೆಯೆ ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟ ಮಾಡಿದ ಎಸ್ಟೋನಿಯಾ ಭೇಟಿ ಬೇರೆ ಯಾವುದೆ ಯೂರೋಪಿಯನ್ ನಗರಗಳಿಗಿಂತ ಬಹಳ ವಿಶಿಷ್ಟ ಹಾಗೂ ಮನಸ್ಸಿಗೆ ಸನಿಹ ಎನಿಸಿತು. ತಾಲಿನ್ ಭೇಟಿ ನೀಡಿದ ಮೇಲೆ ಸೋದರತ್ವದ ಭಾವನೆ ಮೂಡಿದ್ದು ಭಾರತೀಯನಾದ ನನಗೆ ಅತಿಶಯೋಕ್ತಿ ಎನ್ನಿಸಲಿಲ್ಲ!

(ಫೋಟೋಗಳು: ಲೇಖಕರವು)