ನಾನು ಒಂಟಿಯಾಗುತ್ತಿದ್ದಂತೆ ಮೊನ್ನೆಯ ಸಮುದ್ರ ತೀರದ ಹತ್ಯಾಕಾಂಡ ನೆನಪಾಯಿತು, ವಿಷಾದವಾಯಿತು. ಒಂದು ಕ್ಷಣ ಅರಮನೆಗೆ ಹೋಗಿಬಿಡಲೇ ಎನ್ನಿಸಿತು. ಅಲ್ಲಿ ಇನ್ನು ನನಗೇನು ಕೆಲಸ? ಎಂಬ ಪ್ರಶ್ನೆ ಮೂಡಿತು. ನಿನ್ನೆಯ ಹತ್ಯಾಕಾಂಡದ ಆರಂಭವನ್ನು ನೋಡಿದರೆ, ಬಹುಶಃ ಯಾದವ ಮುಖ್ಯರಲ್ಲಿ ಯಾರೂ ಬದುಕಿರಲಾರರು. ನಗರದಲ್ಲಿ, ಅರಮನೆಯಲ್ಲಿ ನನಗಿಂತ ಮುದುಕರಾದ ಕೆಲವರಿರಬಹುದು. ಈಗ ನಾನು ಮಾಡಬೇಕಾದ ಮಹತ್ವದ ಕರ‍್ಯ ಯಾವುದೂ ಇಲ್ಲ, ಸಾಧಿಸಬೇಕಾದ ಯಾವ ಆದರ್ಶವೂ ಇಲ್ಲ. ಅಂಥ ಶಕ್ತಿ, ಉತ್ಸಾಹಗಳೂ ದೇಹದಲ್ಲಿ ಉಳಿದಿಲ್ಲ.
ಸು. ರುದ್ರಮೂರ್ತಿ ಶಾಸ್ತ್ರಿ ಬರೆದ ಹೊಸ ಕಾದಂಬರಿ “ಶ್ರೀಕೃಷ್ಣ”ದ ಕೆಲವು ಪುಟಗಳು ನಿಮ್ಮ ಓದಿಗೆ

ಹಕ್ಕಿಗಳ ಚಿಲಿಪಿಲಿ ಸದ್ದಿನಿಂದ ಎಚ್ಚರಗೊಂಡೆ. ಮೈಯೆಲ್ಲ ಹಗುರವಾದಂತೆನಿಸಿತು. ಎದ್ದು ಕೂಡುವುದು ಸಾಧ್ಯವಾಯಿತು. ಅಬ್ಬ! ಮರಣಕ್ಕೆ ಮೊದಲು ಈ ಜರಾ ತನ್ನ ಅದ್ಭುತ ಚಿಕಿತ್ಸೆಯಿಂದ ನನ್ನನ್ನು ಬದುಕಿಸಿದ! ಮರಣಕ್ಕೆ ಎಲ್ಲ ರೀತಿಯಿಂದಲೂ ಹತ್ತಿರ ವಾಗಿದ್ದು, ಜರೆಯಿಂದ ಜರ್ಝರಿತನಾದ ನನ್ನನ್ನು ಇವನು ಕೆಲವು ದಿನಗಳ ಮಟ್ಟಿಗೆ ಬದುಕಿಸಿದ. ಹೌದು, ಅವನು ಸೊಪ್ಪಿನ ರಸ, ಬೇರಿನ ರಸದ ಮದ್ದು ನೀಡಿದ; ಮರಣವೇ ಇಲ್ಲದ ಅಮೃತ ನೀಡಲಿಲ್ಲ; ನೀಡಲು ಸಾಧ್ಯವೂ ಇಲ್ಲ.
ಒಂದು ಕ್ಷಣ, ಅವನು ಬಾಣ ಬಿಟ್ಟೊಡನೆ ಪ್ರಾಣ ಹೋಗಿಬಿಡಬೇಕಾಗಿತ್ತು

ಎನಿಸಿತು. ಅವನ ಔಷಧಿಯ ಪ್ರಭಾವದಿಂದ ನಾನು ಸುಮಾರು ಒಂದು ದಿನ ಪ್ರಜ್ಞಾಹೀನ ನಿದ್ರೆಯಲ್ಲಿ ಮುಳುಗಿದ್ದೆ. ಹೌದು, ಮುಸ್ಸಂಜೆ ಸಮುದ್ರ ತೀರದಿಂದ ಹೊರಟಿದ್ದೆ. ತಾವು ಹಚ್ಚಿಕೊಂಡಿದ್ದ ಕೃತಕ ದೀಪಗಳ ಬೆಳಕಿನಲ್ಲಿ ಯಾದವ ಪ್ರಮುಖರು ಮದ್ಯಪಾನದ ಲೀಲಾವಿನೋದದಲ್ಲಿ ತೊಡಗಿದ್ದರು. ಇಲ್ಲಿ ಎಚ್ಚರವಾದ ಸ್ವಲ್ಪ ಹೊತ್ತಿಗೆ ಜರಾ ಬಂದು ಕುಟೀರದ ಬಾಗಿಲು ತೆರೆದಾಗ ಮುಸ್ಸಂಜೆಯಾಗಿತ್ತು. ಅಂದರೆ ಅಖಂಡವಾಗಿ ಒಂದು ದಿನ ನಾನು ಎಚ್ಚರವಿಲ್ಲದಂತಿದ್ದೆ. ಅಂದರೆ, ಸತ್ತಂತೆ ಮಲಗಿದ್ದೆ. ಹೌದು ನಿದ್ರೆ ಒಂದು ತಾತ್ಕಾಲಿಕ ಸಾವು. ಸಾವೂ ಈ ನಿದ್ರೆಯಂತಿರಬಹುದೆ? ಅದು ನಿಜವಾದರೆ ಮಾನವರೆಲ್ಲ ಸಾಯಲು ಏಕೆ ಹೆದರುತ್ತಾರೆ? ಇಲ್ಲ, ಸಾವು ನಿಗೂಢವೇ! ಅದರ ರಹಸ್ಯ ಕೈವಶವಾದರೆ ಈ ಮನುಷ್ಯನನ್ನು ಹಿಡಿಯುವವರಾರು?

(ಸು. ರುದ್ರಮೂರ್ತಿ ಶಾಸ್ತ್ರಿ)

ಕುಳಿತವನು ಎದ್ದು ನಿಂತೆ. ನಿಧಾನವಾಗಿ ಕುಂಟುತ್ತಾ ನಡೆದು, ಬಾಗಿಲು ತೆರೆದು ಹೊರಬಂದು ಮೂತ್ರ ಬಾಧೆ ತೀರಿಸಿಕೊಂಡೆ. ಮತ್ತೆ ಒಳಬಂದು, ಮಣ್ಣಿನ ತಂಬಿಗೆಯಲ್ಲಿ ನೀರು ತುಂಬಿಕೊಂಡು ಬಂದು ಮುಖ ಕೈಕಾಲು ತೊಳೆದುಕೊಂಡೆ. ಗಾಯದ ಕಾಲಿಗೆ ನೀರು ಸೋಕಿಸಲಿಲ್ಲ. ಮತ್ತೆ ಕುಟೀರದ ಒಳಗೆ ಹೋಗದೆ ಹೊರಗಿನ ಒಂದು ಬಂಡೆಯ ಮೇಲೆ ಕುಳಿತುಕೊಂಡೆ. ಎಡಗಾಲಿನ ನೋವು ಎಷ್ಟೋ ಕಡಿಮೆಯಾಗಿತ್ತು. ಪಕ್ಷಿಗಳ ಕಲರವವನ್ನು ಕೇಳುತ್ತಾ, ಗಿಡಮರಗಳನ್ನು ನೋಡುತ್ತಾ, ಪ್ರಕೃತಿ ಎಷ್ಟು ರಮಣೀಯವಾಗಿದೆ, ಎಂದುಕೊಂಡೆ.

ಆಕಸ್ಮಿಕವಾಗಿ ನನ್ನ ದೃಷ್ಟಿ ನನ್ನ ಕೈಗಳ ಮೇಲೆ ಬಿತ್ತು. ಮುಂಗೈಗಳ ಮೇಲೆ ನರಗಳು ಎದ್ದು ಕಾಣುತ್ತಿದ್ದವು. ಚರ್ಮ ಸುಕ್ಕಾಗಿರುವುದು ಸ್ಪಷ್ಟವಾಗಿ ಕಂಡಿತು. ಇದು ಜರೆಯ ಪ್ರಭಾವ. ಅದರಿಂದ ಪಾರಾಗಬಲ್ಲವರು ಯಾರು? ದೇವಲೋಕದ ಅಮೃತದ ಕನಸು ಕಂಡಾಕ್ಷಣಕ್ಕೆ ನಾವು ಅಮರರಾಗುವುದು ಸಾಧ್ಯವೆ? ಜರೆಯ ಲಕ್ಷಣಗಳು ಮರಣದ ಮಹಾನೆಲೆಗೆ ಕರೆದೊಯ್ಯುವ ಸಂದೇಶಗಳಲ್ಲವೆ?

ಹಸಿವಿನ ಅನುಭವವಾಗತೊಡಗಿತು. ಅಷ್ಟರಲ್ಲಿ ಜರಾ ಆತುರಾತುರವಾಗಿ ಬಂದ. “ಒಡೆಯ ತಡ ಆಯ್ತು. ನನಗೆ ಗೊತ್ತು ನಿಮಗೆ ಹಸಿವಾಗರ‍್ತದೆ ಅಂತ. ಅದಕ್ಕೇ ಹತ್ತಿರದಲ್ಲೇ ನನ್ನ ಪರಿಚಯದವರ ಕುಟೀರ ಇದೆ. ಆ ಮನೇಲಿ ಹೆಂಗಸರೂ ಇದ್ದಾರೆ. ನಿಮಗೊಂದಿಷ್ಟು ರೊಟ್ಟಿ, ಬೆಣ್ಣೆ, ಕುಡಿಯಕ್ಕೆ ಹಾಲು ತಂದಿದ್ದೀನಿ. ಬನ್ನಿ ಒಳಗೆ ಹೋಗೋಣ.”

“ಖಂಡಿತ ಹಸಿವಾಗಿದೆ. ಅದೇನನ್ನು ತಂದಿರುವೆಯೋ, ಅದನ್ನು ಇಲ್ಲೇ ಕೊಡು” ಎಂದೆ ನಾನು.

ಅವನು ಎಲೆಯಲ್ಲಿ ಮುದುರಿ ತಂದಿದ್ದ ಎರಡು ರೊಟ್ಟಿ, ಬೆಣ್ಣೆ ಕೊಟ್ಟ. ನಾನು ಆತುರದಿಂದ ತಿನ್ನತೊಡಗಿದೆ. ಅದು ಆ ಕ್ಷಣದಲ್ಲಿ ಯಾವ ರಾಜಭೋಜನಕ್ಕೂ ಕಡಿಮೆ ಯಾಗಿರಲಿಲ್ಲ. ಹೌದು, ಅದೊಂದು ಸ್ವಭಾವ ನನ್ನಲ್ಲಿದೆ. ಅರಮನೆಯ ಮೃಷ್ಟಾನ್ನವನ್ನು ಚಪ್ಪರಿಸಿಕೊಂಡು ತಿನ್ನುವಂತೆ, ಬಡವನಾದ ಮಿತ್ರ ಕುಚೇಲನ ಮನೆಯ ಅವಲಕ್ಕಿಯನ್ನೂ ಅಷ್ಟೇ ರುಚಿಕರವಾಗಿ ಆಸ್ವಾದಿಸಬಲ್ಲೆ. ವಿದುರನ ಮನೆಯ ಸರಳ ಆಹಾರವೂ ಅಷ್ಟೇ ಸವಿಯಾಗಿರುತ್ತದೆ. ಇಷ್ಟರಿಂದಲೇ ನಾನು ಸ್ಥಿತಪ್ರಜ್ಞ ಎನ್ನುವುದಾದರೆ, ಖಂಡಿತ ನಾನು ಸ್ಥಿತಪ್ರಜ್ಞನೇ!

ರೊಟ್ಟಿ ತಿಂದು ಹಾಲು ಕುಡಿದ ಮೇಲೆ ಜರಾ ನನ್ನ ಎಡ ಪಾದವನ್ನು ತನ್ನ ತೊಡೆಯ ಮೇಲಿರಿಸಿಕೊಂಡು, ಪಟ್ಟಿಯನ್ನು ಬಿಚ್ಚಿ ನೋಡಿದ. “ಒಡೆಯ, ಗಾಯ ಮಾಯ್ತಾ ಇದೆ. ಇನ್ನು ಎರಡು ಮೂರು ದಿನ ಮದ್ದು ಮಾಡಿದ್ರೆ ಪೂರ್ತಿ ಗುಣ ಆಗುತ್ತೆ” ಎಂದು ಸೊಪ್ಪನ್ನು ಮತ್ತೆ ಅರೆದು ಕಟ್ಟಿದ. ನಾನು ಸದ್ಯದಲ್ಲಿ ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದು ನಂತರ ಕುಟೀರದೊಳಗೆ ಹೋಗಿ ಮಲಗುವುದಾಗಿ ಹೇಳಿದೆ. ಅವನು ನಿನ್ನೆ ತಂದಿದ್ದ ಮೊಲದ ದೇಹವನ್ನು ಹೆಗಲ ಮೇಲೆ ಹಾಕಿಕೊಂಡು, ಬಿಲ್ಲು ಬಾಣ ಹಿಡಿದು, ಸಂಜೆ ಬೇಗ ಬರುವುದಾಗಿ ಹೇಳಿ ಹೊರಟುಹೋದ. ಮೊಲದ ಮಾಂಸವನ್ನು ನನ್ನೆದುರು ಬೇಯಿಸಿ ತಿನ್ನಲು ಸಂಕೋಚ ಪಟ್ಟುಕೊಂಡು ತನ್ನ ಪರಿಚಿತರ ಮನೆಗೆ ತೆಗೆದುಕೊಂಡು ಹೋದನೆಂದು ನಾನು ಅರ್ಥ ಮಾಡಿಕೊಂಡೆ.

ನಾನು ಒಂಟಿಯಾಗುತ್ತಿದ್ದಂತೆ ಮೊನ್ನೆಯ ಸಮುದ್ರ ತೀರದ ಹತ್ಯಾಕಾಂಡ ನೆನಪಾಯಿತು, ವಿಷಾದವಾಯಿತು. ಒಂದು ಕ್ಷಣ ಅರಮನೆಗೆ ಹೋಗಿಬಿಡಲೇ ಎನ್ನಿಸಿತು. ಅಲ್ಲಿ ಇನ್ನು ನನಗೇನು ಕೆಲಸ? ಎಂಬ ಪ್ರಶ್ನೆ ಮೂಡಿತು. ನಿನ್ನೆಯ ಹತ್ಯಾಕಾಂಡದ ಆರಂಭವನ್ನು ನೋಡಿದರೆ, ಬಹುಶಃ ಯಾದವ ಮುಖ್ಯರಲ್ಲಿ ಯಾರೂ ಬದುಕಿರಲಾರರು. ನಗರದಲ್ಲಿ, ಅರಮನೆಯಲ್ಲಿ ನನಗಿಂತ ಮುದುಕರಾದ ಕೆಲವರಿರಬಹುದು. ಈಗ ನಾನು ಮಾಡಬೇಕಾದ ಮಹತ್ವದ ಕರ‍್ಯ ಯಾವುದೂ ಇಲ್ಲ, ಸಾಧಿಸಬೇಕಾದ ಯಾವ ಆದರ್ಶವೂ ಇಲ್ಲ. ಅಂಥ ಶಕ್ತಿ, ಉತ್ಸಾಹಗಳೂ ದೇಹದಲ್ಲಿ ಉಳಿದಿಲ್ಲ. ಮುಪ್ಪು ಬಂದು ಹಲವು ವರ್ಷಗಳು ಕಳೆದರೂ, ಅದನ್ನು ಮರೆತು, ಸೋಗಿನ ಸ್ಥಿತಪ್ರಜ್ಞತೆಯಲ್ಲಿ ಕೆಲವು ಕಾಲ ಕಳೆದದ್ದಾಯಿತು. ಹೌದು, ಒಂದು ರೀತಿಯಲ್ಲಿ ನನ್ನ ಇಡೀ ಬದುಕು, ನನಗೇ ಈಗ ಸೋಗಿನ ಪ್ರದರ್ಶನವಿರಬಹುದೇ ಎಂಬ ಸಂದೇಹ ಮೂಡಿಸುತ್ತಿದೆ.

ನನ್ನ ಬದುಕು ಸಾಗಿ ಬಂದ ದಾರಿಯನ್ನು ಒಮ್ಮೆ ಹಿಂದಿರುಗಿ ನೋಡಬೇಕೆಂದು ಪ್ರೇರಣೆಯಾಯಿತು. ನನ್ನ ಕಥೆ ಎಲ್ಲಿಂದ ಆರಂಭಗೊಂಡಿತು! ನನಗೆ ಬುದ್ಧಿ ತಿಳಿದಾಗಿನ ನೆನಪು ಗೋಕುಲಕ್ಕೇ ಕರೆದೊಯ್ಯುತ್ತದೆ……

ಎರಡು

ನನಗಾಗ ಐದಾರು ವರ್ಷ ವಯಸ್ಸಿರಬೇಕು. ಬಲರಾಮ ಬಹುಶಃ ನನಗಿಂತ ಎರಡು ಮೂರು ವರ್ಷ ದೊಡ್ಡವನಿರಬಹುದು. ಬಲರಾಮ ಬೆಳ್ಳಗಿದ್ದ. ನಾನು ಶಾಮಲ ವರ್ಣದವನು. ಅದಕ್ಕೇ ನನಗೆ ‘ಕೃಷ್ಣ’ ಎಂದು ಹೆಸರಿಟ್ಟರಂತೆ. ಬಲರಾಮ ಹೆಸರಿಗೆ ತಕ್ಕಂತೆ ಬಲವಾಗಿಯೂ ಇದ್ದ, ಗಾತ್ರವಾಗಿಯೂ ಇದ್ದ.

ಒಂದು ರೀತಿಯಲ್ಲಿ ಗೋಕುಲದ ಹುಡುಗರಿಗೆಲ್ಲ ನಾವೇ ನಾಯಕರು. ಎಷ್ಟೋ ಸಲ ಎಲ್ಲರ ತುಂಟಾಟಗಳಿಗೆ ನಾವೇ ಹೊಣೆಯಾಗಬೇಕಾಗಿತ್ತು. ಅದರಲ್ಲೂ, ಹೆಚ್ಚಾಗಿ ನಾನೇ ಗುರಿಯಾಗುತ್ತಿದ್ದೆ. ಆದರೆ ಅಮ್ಮ ಯಶೋದೆಗೆ ನನ್ನ ಮೇಲೆ ಎಷ್ಟು ಅಕ್ಕರೆ ಯಿತ್ತೆಂದರೆ, ನನ್ನ ಎಲ್ಲ ತಪ್ಪುಗಳನ್ನೂ ಸಾಮಾನ್ಯವಾಗಿ ಕ್ಷಮಿಸಿಬಿಡುತ್ತಿದ್ದಳು. ತೀರ ಕೋಪ ಬಂದಾಗ ಒಂದೆರಡು ಏಟು ಕೊಟ್ಟರೂ, ಮರುಕ್ಷಣದಲ್ಲಿ ತಬ್ಬಿಕೊಂಡು “ನನ್ನನ್ನು ಏಕೆ ಗೋಳಾಡಿಸುತ್ತೀಯೋ ಕೃಷ್ಣ? ನಿನಗೆ ಹೊಡೆದರೆ ನನ್ನ ಕರುಳು ಸುಟ್ಟು ಹೋಗುತ್ತದೆ ಎಂದು ನಿನಗೇಕೋ ಅರ್ಥವಾಗುವುದಿಲ್ಲ? ತುಂಟ ಹುಡುಗರ ಸಹವಾಸ ಮಾಡಬೇಡವೆಂದರೆ ಕೇಳುವುದಿಲ್ಲ” ಎಂದು ಜೋರಾಗಿ ಅತ್ತುಬಿಡುತ್ತಿದ್ದಳು.

ಅವಳ ಸಂಕಟವನ್ನು ನೋಡಲಾರದೆ ನಾನೂ ಅವಳ ತೊಡೆಯಲ್ಲಿ ಮುಖ ಹುದುಗಿಸಿ, “ಅಳಬೇಡಮ್ಮ, ನಾನು ಇನ್ನು ಮೇಲೆ ಯಾವ ತಪ್ಪನ್ನೂ ಮಾಡುವುದಿಲ್ಲ” ಎಂದು ಬಿಕ್ಕಳಿಸುತ್ತಿದ್ದೆ.

ಎಂಥ ವಾತ್ಸಲ್ಯ! ಸಾಗರದಷ್ಟು ಸಮೃದ್ಧವಾದ ಯಶೋದೆಯ ವಾತ್ಸಲ್ಯವನ್ನು ನೆನಪು ಮಾಡಿಕೊಂಡರೆ, ಈಗಲೂ ನಾನೊಂದು ಪುಟ್ಟ ಮಗುವಾಗಿ, ಮತ್ತೆ ಅವಳ ಮಡಿಲಲ್ಲಿ ಮಲಗಿರುವಂತೆ ಭ್ರಮೆಯಾಗುತ್ತದೆ. ನಾನು ಅವಳೇ ನನ್ನ ಹೆತ್ತ ತಾಯಿಯೆಂದು ಕೊಂಡಿದ್ದೆ, ಆದರೆ ಅವಳು ನನ್ನ ಸಾಕುತಾಯಿ, ಮಥುರೆಯ ವಸುದೇವ, ದೇವಕಿಯರು ನನ್ನ ಹೆತ್ತ ತಂದೆ ತಾಯಿಗಳೆಂದು ನನಗೆ ಆರೇಳು ವರ್ಷವಾದ ಮೇಲೆ ತಿಳಿಯಿತು.

ಒಂದು ದಿನ ರಾಜಧಾನಿ ಮಥುರೆಯಿಂದ ವಸುದೇವ, ಅಕ್ರೂರ ಕುದುರೆಗಳ ಮೇಲೆ ಬಂದರು. ವಸುದೇವ ಅಪ್ಪ ನಂದನಿಗೆ ಪ್ರಾಣಮಿತ್ರನಂತೆ. ಇಬ್ಬರೂ ಸಾಂದೀಪನೀ ಮುನಿಗಳ ಆಶ್ರಮದಲ್ಲಿ ನಾಲ್ಕೈ ವರ್ಷ ಜತೆಯಲ್ಲೇ ಕಲಿಯುತ್ತಿದ್ದರಂತೆ. ಅಕ್ರೂರ ಸುಮಾರು ಇಪ್ಪತ್ತೈದು ವರ್ಷದ ತರುಣ. ಅವನು ಅಪ್ಪನಿಗೆ ದಾಯಾದಿ ಎಂದು ಆಮೇಲೆ ಗೊತ್ತಾಯಿತು.

ಅಮ್ಮನ ತೊಡೆಯ ಮೇಲೆ ನಾನು ಮಲಗಿದ್ದೆ. ಬಲರಾಮ ಹತ್ತಿರದಲ್ಲೇ ಚಿಕ್ಕಮ್ಮ ರೋಹಿಣಿಯ ತೊಡೆಯ ಮೇಲೆ ಮಲಗಿದ್ದ. ಎದುರಿಗೆ ಅಮ್ಮ, ಅಪ್ಪ ನಂದ, ವಸುದೇವ, ಅಕ್ರೂರ ಮಾತನಾಡುತ್ತ ಕುಳಿತಿದ್ದರು. ವಸುದೇವ ಮಥುರೆಯ ರಾಜ ಕಂಸನ ತಂಗಿಯ ಗಂಡನೆಂಬುದೂ ನನಗೆ ಮೊದಲು ಗೊತ್ತಿರಲಿಲ್ಲ.

“ಇವರ ಬಳಿಗೆ ಹೋಗು ಮಗು” ಎಂದಳು ಅಮ್ಮ ವಸುದೇವನನ್ನು ತೋರಿಸಿ. ಬಾಲ್ಯದಲ್ಲಿ ನನ್ನನ್ನು ಯಾರು ಪ್ರೀತಿಸಿದರೂ, ನಾನು ಅವರ ಬಳಿಗೆ ಹೋಗುತ್ತಿದ್ದೆ. ಈಗಲೂ ಹೋದೆ. ನಾನು ಮೊದಲು ಒಂದೆರಡು ಸಲ ವಸುದೇವನನ್ನು ನಮ್ಮ ಗೋಕುಲದ ಮನೆಯಲ್ಲಿ ಕಂಡಿದ್ದೆ. ನಾನು ಅವನನ್ನು ಯಾವ ಶಬ್ದದಿಂದಲೂ ಸಂಬೋಧಿಸುತ್ತಿರಲಿಲ್ಲ. ವಸುದೇವ ನನ್ನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಮುದ್ದು ಮಾಡಿದ. ನನಗೆ ಒಂದಿಷ್ಟು ಮುಜುಗರವಾಯಿತು. “ಇವರು ಯಾರು ಗೊತ್ತೆ?” ಎಂದು ಅಪ್ಪ ನಂದ ಕೇಳಿದ.

“ನಿನ್ನ ಮಿತ್ರ ಎಂದು ನನಗೆ ಗೊತ್ತು” ಎಂದೆ.

“ಹೌದು ವಸುದೇವ ನನ್ನ ಪ್ರಾಣಮಿತ್ರ ನಿಜ. ಇವನು ನಿನ್ನ ತಂದೆಯೆಂಬುದೂ ಅಷ್ಟೇ ನಿಜ” ಅಪ್ಪ ಹೇಳಿದ.

ನಾನು ಆಘಾತಗೊಂಡೆ, “ಏನಿಲ್ಲ, ನೀನು ಸುಳ್ಳು ಹೇಳುತ್ತಿರುವೆ” ಎಂದು ನಾನು ಯಶೋದೆಯ ಬಳಿಗೆ ಧಾವಿಸಿ, “ಅಮ್ಮ, ನೀನೇ ಹೇಳು, ನೀನು ತಾನೇ ನನ್ನ ಅಮ್ಮ” ಎಂದು ಅವಳ ತೊಡೆಯಲ್ಲಿ ಮುಖ ಹುದುಗಿಸಿದೆ.

ಅಮ್ಮ ಮೊದಲು ಮಾತಾಡಲಿಲ್ಲ. ಆದರೆ ಕಂಬನಿ ಧಾರಾಕಾರವಾಗಿ ಧುಮುಕುತ್ತಿತ್ತು. “ಹೌದು ಕಂದ, ನಾನೇ ನಿನ್ನ ಅಮ್ಮ, ನಿನಗೆ ಹಾಲೂಡಿ ಬೆಳೆಸಿದವಳು, ಆದರೆ ನಿನ್ನ ಹೆತ್ತಮ್ಮ ಈ ವಸುದೇವಣ್ಣನ ಹೆಂಡತಿ ದೇವಕಿ. ಇವರೇ ನಿನ್ನ ತಂದೆ. ನಾವಿಬ್ಬರೂ ನಿನ್ನ ಸಾಕು ತಂದೆ ತಾಯಿ, ಅಷ್ಟೆ” ಎಂದಳು ಅಮ್ಮ.

“ಹೌದು ಮಗು” ನಂದ ಹೇಳಿದ, “ನಾವಿಬ್ಬರೂ ನಿನ್ನ ಸಾಕು ತಂದೆ ತಾಯಿಗಳು.”

“ಹಾಗಾದರೆ, ನಾನು ಇಲ್ಲಿಂದ ಹೊರಟುಹೋಗಬೇಕೆ?” ನಾನು ಹತಾಶೆಯಿಂದ ಕೇಳಿದೆ.

ಅಳುತ್ತಲೇ ಯಶೋದೆ ನನ್ನ ತಲೆಯನ್ನು ತನ್ನ ಎದೆಗೆ ಅಪ್ಪಿಕೊಂಡು, ನನ್ನ ತಲೆಯ ಮೇಲೆ ತನ್ನ ಕಣ್ಣೀರಿನ ಅಭಿಷೇಕ ಮಾಡುತ್ತ ಹೇಳಿದಳು, “ನಿನ್ನನ್ನು ಹೆತ್ತ ತಾಯಿ ದೇವಕಿ. ದೇವತೆಯಂಥ ಹೆಂಗಸು ಮಗು. ನನಗೆ ಹುಟ್ಟಿದ ಮಗು ಸತ್ತುಹೋಗಿ, ಸನ್ನಿ ಹಿಡಿದು ನಾನು ಹುಚ್ಚಿಯಂತಾಗಿದ್ದೆ. ಆಗ, ಇನ್ನೂ ಎದೆಹಾಲು ಕುಡಿಯುತ್ತಿದ್ದ, ಇನ್ನೂ ಒಂದು ವರ್ಷ ತುಂಬಿರದ ತನ್ನ ಕರುಳ ಕುಡಿಯನ್ನು ನನಗೆ ಕಳಿಸಿಕೊಟ್ಟು ನನ್ನನ್ನು ಬದುಕಿಸಿದಳು. ಹೌದು ಕೃಷ್ಣ, ನೀನು ಬಾರದಿದ್ದರೆ ನಾನು ಸತ್ತು ಹೋಗುತ್ತಿದ್ದೆ. ನಿನ್ನನ್ನು ಪ್ರೀತಿಸುವ ಅಧಿಕಾರ ನನಗಿದೆ. ಆದರೆ ನೀನು ಸಂಪೂರ್ಣವಾಗಿ ನನ್ನ ಮಗ ಎಂದು ಹೇಳಿಕೊಂಡರೆ ಅದು ನಿನ್ನ ತಾಯಿಗೆ ದ್ರೋಹ ಮಾಡಿದಂತಾಗುತ್ತದೆ. ಎಂದಿದ್ದರೂ ನೀನು ಆ ಮಹಾತಾಯಿ ದೇವಕಿಯ ಮಗನೇ.”

ಆ ವಯಸ್ಸಿನ ನನ್ನ ಅರಿವಿಗೆ ಅದೆಲ್ಲ ವಿಚಿತ್ರವಾಗಿ ಕಂಡಿರಬಹುದು. ಯಶೋದೆ ಯನ್ನೇ ತಾಯಿಯೆಂದು ಭಾವಿಸಿಕೊಂಡಿದ್ದ ನನಗೆ, ನನ್ನ ಹೆತ್ತ ತಾಯಿ ಬೇರೆಯವಳು, ವಸುದೇವ ನನ್ನ ತಂದೆ ಎಂದಾಗ ನಂಬಲಾಗದ ಆಘಾತವಂತೂ ಉಂಟಾಯಿತು. ಆದರೆ ದಿನ ಕಳೆದಂತೆ, ವಯಸ್ಸು ಬೆಳೆದಂತೆ ದೇವಕಿ ಎಂಥ ಉದಾತ್ತಳು ಎಂಬ ಅಪರಿಮಿತ ಗೌರವ ಭಾವನೆಯುಂಟಾಯಿತು. ಯಾವ ತಾಯಿ ತಾನೆ ತನ್ನ ವರ್ಷ ತುಂಬದ ಮಗುವನ್ನು, ಗಂಡನ ಗೆಳೆಯನ ಹೆಂಡತಿಗೆ ಕೊಡುತ್ತಾಳೆ? ಅಂಥ ಔದರ‍್ಯ ಬರಬೇಕಾದರೆ ದೇವಕಿ ನಿಜವಾಗಲೂ ದೇವತೆಯೇ ಎಂಬ ಭಾವನೆ ಸ್ಥಿರವಾಯಿತು.

ಬಾಲ್ಯದ ಭಾವುಕತೆಯನ್ನು ಮೀರಿದ, ವಯಸ್ಸಿಗೆ ಮೀರಿದ ಆಲೋಚನಾ ಶಕ್ತಿ ನನ್ನಲ್ಲಿತ್ತು. ವಾಸ್ತವವನ್ನು ಬಹು ಬೇಗನೆ ಅರ್ಥ ಮಾಡಿಕೊಂಡೆ. ಆದರೂ ನಂದ ಯಶೋದೆಯರ ಪ್ರೀತಿ ವಾತ್ಸಲ್ಯದ ಮುಂದೆ ನಾನು ಕರಗಿ ಹೋಗುತ್ತಿದ್ದೆ. ಅದು ಅಪರಿಮಿತವಾದ ವಾತ್ಸಲ್ಯ! ಹೆತ್ತವರು, ಅಂಥ ಪ್ರೀತಿ ವಾತ್ಸಲ್ಯ ತೋರಿಸುತ್ತಿದ್ದರೇ ಎಂದು ಸಂದೇಹ ಪಡುವಷ್ಟು ಅಗಾಧವಾದ ಅಕ್ಕರೆ!

ಗೋಕುಲದಲ್ಲಿ ನಾನು ಗೋಪಾಲಕನಂತೆಯೇ ಬೆಳೆದೆ. ಬಲರಾಮ ಸದಾ ನನ್ನ ಜೊತೆಯಲ್ಲಿರುತ್ತಿದ್ದ. ಚಿಕ್ಕಮ್ಮ ರೋಹಿಣಿ ಆಗಾಗ ಬಂದು ತನ್ನ ಮಗನನ್ನು ನೋಡಿ ಕೊಂಡು, ದೇವಕಿ ವಸುದೇವರ ವಾರ್ತೆಯನ್ನು ತಿಳಿಸಿ, ಕೆಲವು ದಿನವಿದ್ದು, ಇಲ್ಲಿಂದ ನನ್ನ ಮತ್ತು ನಂದ ಯಶೋದೆಯರ ವಾರ್ತೆಯನ್ನು ತೆಗೆದುಕೊಂಡು ಹೋಗುತ್ತಿದ್ದಳು. ನನಗೂ ಬಲರಾಮನಿಗೂ ವಸುದೇವನೇ ತಂದೆ, ತಾಯಿಯರು ಮಾತ್ರ ಬೇರೆ. ಅವನು ನನ್ನ ಸ್ವಂತ ಅಣ್ಣ ಎಂದು ಅರ್ಥವಾದ ದಿನದಿಂದ ನಾನು ಅವನನ್ನು ಪ್ರೀತಿ ಗೌರವಗಳಿಂದ ಕಾಣತೊಡಗಿದೆ.

ಆಟಪಾಟಗಳೆಂದರೆ ನನಗೆಷ್ಟು ಇಷ್ಟವೋ, ಹಾಲು ಬೆಣ್ಣೆಗಳೆಂದರೂ ಅಷ್ಟೇ ಇಷ್ಟ. ನಂದಗೋಪ ಇಡೀ ಗೋಕುಲದ ಗೋಪಾಲಕರ ನಾಯಕನೆಂದ ಮೇಲೆ ಅವನಲ್ಲಿ ಗೋಸಂಪತ್ತಿಗೆ ಕೊರತೆಯೇ? ಮನೆಯಲ್ಲಿ ಹಾಲು ಮೊಸರು ಬೆಣ್ಣೆಗಳ ಸಮೃದ್ಧಿ. ವಾರಕ್ಕೊಮ್ಮೆ ಬೆಣ್ಣೆಯನ್ನು ಪೂರೈಸಲು, ಇತರ ಗೋಪಾಲಕರ ಬಂಡಿಗಳೊಂದಿಗೆ ನಮ್ಮ ಬಂಡಿಯೂ ಮಥುರೆಗೆ ಹೋಗಿ ಬರುವುದಿತ್ತು. ತುಸು ದೂರದ ಕೆಲವು ಪಟ್ಟಣಗಳಿಗೂ ಗೋಕುಲದಿಂದ ಬೆಣ್ಣೆ ಪೂರೈಕೆಯಾಗುತ್ತಿತ್ತು. ಕೆಲವರು ಬೆಣ್ಣೆ ಕಾಯಿಸಿದ ತುಪ್ಪವನ್ನು ಜಾಡಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದರು. ಒಟ್ಟಾರೆ ಸಾಕಷ್ಟು ಗೋಪಾಲಕರ ಕುಟುಂಬಗಳಿದ್ದ ನಮ್ಮ ಗೋಕುಲ ಸಂಪತ್ಸಮೃದ್ಧಿಯಿಂದ ಕೂಡಿತ್ತು.
ವಿಶೇಷವಾಗಿ ತನ್ನ ಮಿತ್ರ ವಸುದೇವ ಮತ್ತು ಅವನ ಕುಟುಂಬಕ್ಕೆಂದು, ಅಪ್ಪ ನಂದ ಪ್ರತಿದಿನ ಅರಮನೆಗೆ ಸಮೃದ್ಧವಾಗಿ ಹಾಲನ್ನು ಕಳಿಸಿಕೊಡುತ್ತಿದ್ದ. ತಿಂಗಳಿಗೊಮ್ಮೆ ಯಾದರೂ ತಾನೇ ಅರಮನೆಗೆ ಹೋಗಿ ಮಿತ್ರನನ್ನು ಮಾತಾಡಿಸಿಕೊಂಡು ಬರುತ್ತಿದ್ದ. ಆದರೆ ನನ್ನನ್ನು ಮಾತ್ರ ಕರೆದುಕೊಂಡು ಹೋಗುತ್ತಿರಲಿಲ್ಲ. ಆಕಸ್ಮಿಕವಾಗಿ ಹೆತ್ತ ತಂದೆ ತಾಯಿಗಳ ಮೋಹದಿಂದ ನಾನು ಅಲ್ಲೇ ಉಳಿದುಬಿಟ್ಟರೆ? ಎಂದು ಯಶೋದೆಗೆ ಅಳುಕಿದ್ದಂತಿತ್ತು. ಅಂಥ ಸಂದಿಗ್ಧ ಸ್ಥಿತಿ ಬರಬಾರದೆಂದು, ಅಮ್ಮ ದೇವಕಿಯೂ ನನ್ನನ್ನು ನೋಡಲು ಒಮ್ಮೆಯೂ ಗೋಕುಲಕ್ಕೆ ಬರಲಿಲ್ಲ. ಆದರೆ ಬಲರಾಮ ಮಾತ್ರ ಒಂದೆರಡು ಸಲ ಹೋಗಿ ಬಂದಿದ್ದ. ಅಂಥ ಒಂದು ದಿನ ನಾನು ಅವನನ್ನು ಕೇಳಿದೆ, “ಅಣ್ಣ, ಅರಮನೆ ಹೇಗಿದೆ? ಬಹಳ ವೈಭವದಿಂದ ಕೂಡಿದೆಯೇ?”

“ಹೌದು, ವೈಭವದಿಂದ ಕೂಡಿದೆ. ನಮ್ಮ ಸೋದರ ಮಾವ, ಅಂದರೆ, ನಿನ್ನ ತಾಯಿ ದೇವಕಿಯ ಅಣ್ಣ ಕಂಸನೇ ಈಗ ರಾಜನಂತೆ” ಎಂದ ಬಲರಾಮ.
“ಅಣ್ಣ, ನನ್ನ ಹೆತ್ತಮ್ಮ ಹೇಗಿದ್ದಾಳೆ? ನಿನ್ನ ಅಮ್ಮ ರೋಹಿಣಿಯಷ್ಟು ಸುಂದರ ವಾಗಿದ್ದಾಳೆಯೆ? ಅಥವಾ ಈ ಅಮ್ಮ ಯಶೋದೆಗಿಂತ ಚೆನ್ನಾಗಿದ್ದಾಳೆಯೆ? ಅಥವಾ ನನ್ನ ಹಾಗೆ ಕಪ್ಪಗಿದ್ದಾಳೆಯೆ?”

“ಕಪ್ಪಗಿರುವವರೆಲ್ಲ ನಿನ್ನಷ್ಟು ಸುಂದರವಾಗಿರುವುದಿಲ್ಲ ಕೃಷ್ಣ!” ಎಂದು ಅಮ್ಮ ಯಶೋದೆ ಹತ್ತಿರ ಬಂದು ನನ್ನನ್ನು ತಬ್ಬಿಕೊಂಡಳು. ನನಗೆ ಮುಜುಗರವಾಯಿತು. “ಅಮ್ಮ, ನಾನು ಆ ಅಮ್ಮನನ್ನು ನೋಡೇ ಇಲ್ಲವಲ್ಲ, ಅದಕ್ಕೇ, ಅವಳು ಹೇಗಿದ್ದಾಳೆ, ಎಂದು ಕೇಳುತ್ತಿದ್ದೆ” ಎಂದೆ.

“ನಿನ್ನ ಅಮ್ಮ” ಯಶೋದೆ ಹೇಳಿದಳು, “ನನಗಿಂತ, ಬಲರಾಮನ ತಾಯಿ ರೋಹಿಣಿಗಿಂತ, ಲೋಕದ ಎಲ್ಲ ತಾಯಂದಿರಿಗಿಂತ ಸುಂದರವಾಗಿದ್ದಾಳೆ. ಇಲ್ಲವಾದರೆ ನಿನ್ನಂಥ ಸುಂದರವಾದ ಮಗು ಹುಟ್ಟಲು ಸಾಧ್ಯವೆ?”

“ಹಾಗಾದರೆ, ಅವಳು ನನ್ನ ಹಾಗೆ ಕಪ್ಪು, ಎಂದಾಯಿತು.”

“ಇಲ್ಲ, ದೇವಕಿ ಅಪರಂಜಿ ಚಿನ್ನದಂತಿದ್ದಾಳೆ. ಅವಳ ಗುಣ ಆ ಚಿನ್ನಕ್ಕಿಂತ ಶ್ರೇಷ್ಠ. ಇಲ್ಲವಾದರೆ ನನ್ನ ಜೀವವುಳಿಸಲು, ವರ್ಷ ತುಂಬದ ತನ್ನ ಕರುಳ ಕುಡಿಯನ್ನು ನನಗೆ ಕೊಡುತ್ತಿದ್ದಳೆ? ನೀನು ನನ್ನ ಮಗನಲ್ಲ ಎಂಬ ಭಾವನೆ ಬರಬಾರದೆಂದು ಅವಳು ನಿನ್ನನ್ನು ನೋಡಲು ಒಮ್ಮೆಯೂ ಇಲ್ಲಿಗೆ ಬರಲಿಲ್ಲ ಕೃಷ್ಣ, ಅಂಥ ಮಹಾಸಾಧ್ವಿ.

ದೇವಕಿಯ ವಾತ್ಸಲ್ಯ, ಹರಕೆ ಆಶೀರ್ವಾದವೂ ನಿನಗೆ ದೊರೆಯಬೇಕು. ಈ ಸಲ ಅಪ್ಪನೊಂದಿಗೆ ನೀನೂ ಮಥುರೆಯ ಅರಮನೆಗೆ ಹೋಗಿ ಬಾ ಕಂದ.”
“ಬೇಡ ಬಿಡಮ್ಮ, ನಿನ್ನ ಮನಸ್ಸಿಗೆ ನೋವಾಗುತ್ತದೆ.”

ತೀರ ಕೋಪ ಬಂದಾಗ ಒಂದೆರಡು ಏಟು ಕೊಟ್ಟರೂ, ಮರುಕ್ಷಣದಲ್ಲಿ ತಬ್ಬಿಕೊಂಡು “ನನ್ನನ್ನು ಏಕೆ ಗೋಳಾಡಿಸುತ್ತೀಯೋ ಕೃಷ್ಣ? ನಿನಗೆ ಹೊಡೆದರೆ ನನ್ನ ಕರುಳು ಸುಟ್ಟು ಹೋಗುತ್ತದೆ ಎಂದು ನಿನಗೇಕೋ ಅರ್ಥವಾಗುವುದಿಲ್ಲ? ತುಂಟ ಹುಡುಗರ ಸಹವಾಸ ಮಾಡಬೇಡವೆಂದರೆ ಕೇಳುವುದಿಲ್ಲ” ಎಂದು ಜೋರಾಗಿ ಅತ್ತುಬಿಡುತ್ತಿದ್ದಳು.

“ಇಲ್ಲ ಕೃಷ್ಣ, ಸತ್ಯವನ್ನು ಅಂಗೀಕರಿಸಿದಂತೆ, ಅದನ್ನು ನಾವು ಗೌರವಿಸಲೂ ಬೇಕು. ನೀನು ದೇವಕಿಯ ಮಗನೆಂಬುದು ನನಗೂ ಗೊತ್ತು, ಅವಳಿಗೂ ಗೊತ್ತು, ಈಗ ನಿನಗೂ ಗೊತ್ತು. ನಿನಗೆ ಯಾರು ಬೇಕೆಂದು ಆಯ್ಕೆ ಮಾಡಿಕೊಳ್ಳುವ ಸಂದಿಗ್ಧ ವಂತೂ ಇಲ್ಲ. ನಿನಗೆ ದೇವಕಿ, ನಾನು ತಾಯಿಯಾದಂತೆ, ಈ ಗೋಕುಲದ ಎಲ್ಲ ಹೆಂಗಸರೂ ತಾಯಂದಿರೇ. ಅವರೆಲ್ಲ ನಿನ್ನನ್ನು ಎಷ್ಟು ಪ್ರೀತಿಸುತ್ತಾರೆಂದು ನಿನಗೂ ಗೊತ್ತಲ್ಲ. ಜೊತೆಗೆ ನೀನು ಕೆಚ್ಚಲಿಗೇ ಬಾಯಿ ಹಾಕಿ ಹಾಲು ಕುಡಿಯಲು ಬಿಟ್ಟ ಗಂಗೆ ಹಸು ನಿನ್ನ ತಾಯಿಯಲ್ಲ ಎಂದು ಹೇಗೆ ಹೇಳುವುದು?”

ಅದು ಮಾತ್ರ ನೂರಕ್ಕೆ ನೂರು ಸತ್ಯ. ಗೋಕುಲದ ಎಲ್ಲ ತಾಯಂದಿರ ವಾತ್ಸಲ್ಯದ ಸೆರಗಿನ ವಾಸನೆ ನನ್ನ ಉಸಿರಿನಲ್ಲಿ ಬೆರೆತುಹೋಗಿದೆ. ಅಷ್ಟೊಂದು ಜನರ ಅಕ್ಕರೆಯ ಒಂದೊAದು ಬಿಂದು ನನ್ನ ವ್ಯಕ್ತಿತ್ವದಲ್ಲಿ ಸೇರಿಕೊಂಡು, ನನ್ನನ್ನು ನಿಜದ ಮನುಷ್ಯನಾಗು ವಂತೆ ಮಾಡಿವೆ ಎಂದು ಈಗ ಅನ್ನಿಸುತ್ತಿದೆ. ನಾನು ಅರಮನೆಯ ಅರೆಬೆಂದ ನಾಗರಿಕರ ನಡುವಿನಿಂದ, ಮುಕ್ತವಾಗಿ ಪ್ರಾಣಿ, ಪ್ರಕೃತಿಗಳೊಂದಿಗೆ ಸಮಾಹಿತವಾಗಿ ತೃಪ್ತಿಯಿಂದ ಬದುಕುವ ಈ ಗೋಕುಲದ ಜನರ ನಡುವೆ ಬಂದು ಬಿದ್ದೆನೆಂದು ಈಗ ಹೆಮ್ಮೆಯೆನಿಸುತ್ತಿದೆ; ಮನಸ್ಸು ಕೃತಜ್ಞತೆಯಿಂದ ಮೃದುವಾಗುತ್ತದೆ.

ನಾನು ಯಶೋದೆಯ ಮಡಿಲು ಸೇರಿದ ಹೊಸದರಲ್ಲಿ ಇಡೀ ಗೋಕುಲದ ಹೆಂಗಸರೆಲ್ಲ ನಮ್ಮ ಮನೆಗೆ ದಾಳಿಯಿಡುತ್ತಿದ್ದರಂತೆ. “ಎಂಥ ಮುದ್ದು ಮಗು! ಯಶೋದೆ, ಇಂಥ ಮಗುವನ್ನು ಪಾಲಿಸಲು ನೀನು ಎಷ್ಟು ಪುಣ್ಯ ಮಾಡಿದ್ದೆಯೋ!” “ಇಂಥ ಕಂದನನ್ನು ಸಾಕಲು ನಿನಗೆ ಕೊಟ್ಟ ಆ ದೇವಕಿ ತಾಯಿಯದು ಎಷ್ಟು ದೊಡ್ಡ ಮನಸ್ಸಮ್ಮ!” ಇತ್ಯಾದಿ ಬಂದವರೆಲ್ಲ ಉದ್ಗರಿಸುತ್ತಿದ್ದರಂತೆ. ಸದಾ ಒಬ್ಬರಲ್ಲ ಒಬ್ಬರು, ನನ್ನನ್ನು ಎತ್ತಿ ಕೊಂಡೇ ಇರುತ್ತಿದ್ದರಂತೆ! ಕೆಲವು ಸಲ ಅವರ ಕೈಯಿಂದ ಇನ್ನೊಬ್ಬರ ಕೈಗೆ ವರ್ಗಾವಣೆ ಯಾಗುತ್ತ, ಅಮ್ಮ ಯಶೋದೆ, ನಾನು ಯಾರ ಮನೆಯಲ್ಲಿ, ಯಾರ ಮಡಿಲಲ್ಲಿರುವೆನೆಂದು ಹುಡುಕುತ್ತಾ ಎಲ್ಲ ಮನೆಗಳನ್ನೂ ಇಣುಕಿ ನೋಡಬೇಕಾಗಿತ್ತಂತೆ. ಪ್ರತಿದಿನ ಮನೆಗೆ ಎತ್ತಿಕೊಂಡು ಬಂದು, ಅಮ್ಮ ದೃಷ್ಟಿ ತೆಗೆಯುತ್ತಿದ್ದಳಂತೆ. “ನೀನು ಎಷ್ಟು ಬೇಕಾದರೂ ಬೈಯಿ ಯಶೋದೆ, ನಿನ್ನ ಕೃಷ್ಣನ ಮುಖ ನೋಡದೆ ನನಗೆ ದಿನದ ಕೆಲಸ ಮಾಡಲು ಉತ್ಸಾಹವೇ ಇರುವುದಿಲ್ಲ” ಎಂದು ಎಲ್ಲ ಹೆಂಗಸರೂ ಹೇಳುತ್ತಿದ್ದರಂತೆ.

ಗೋಕುಲದ ಸಮೀಪದ ಗುಡ್ಡದಲ್ಲಿ ನವಿಲುಗಳು ಹಿಂಡು ಹಿಂಡಾಗಿದ್ದವು. ದನಕರುಗಳನ್ನು ಮೇಯಿಸಲು ಹೋದ ಗೋಪಾಲಕರು ನಿತ್ಯ ಅವುಗಳನ್ನು ನೋಡು ತ್ತಿದ್ದರಂತೆ. ಅವುಗಳ ದೇಹದಿಂದ ಬಿದ್ದ ಸುಂದರವಾದ ಕಣ್ಣುಳ್ಳ ಗರಿಗಳನ್ನು ತಂದು ಯಶೋದೆಗೆ ಕೊಡುತ್ತಿದ್ದರು. ಯಶೋದೆ ನನ್ನ ಉದ್ದ ಕೂದಲನ್ನು ನಯವಾಗಿ ಬಾಚಿ, ಹಣೆಯಿಂದ ಬರುವಂತೆ, ಕೂದಲು ಕೆದರದಂತೆ ಒಂದು ಪಟ್ಟಿ ಕಟ್ಟುತ್ತಿದ್ದಳು. ಆ ಪಟ್ಟಿಗೆ ಕಣ್ಣಿನ ಭಾಗವಿರುವಂತೆ ನವಿಲು ಗರಿಯನ್ನು ಸಿಕ್ಕಿಸುತ್ತಿದ್ದಳು. ಅದೇ ನನ್ನ ಪರಿಚಿತ ಅಲಂಕಾರವಾಯಿತು. ನಾನು ಗೋಕುಲವನ್ನು ಬಿಡುವವರೆಗೆ ನವಿಲುಗರಿಯ ಅಲಂಕಾರ ನನ್ನ ತಲೆಯಲ್ಲಿತ್ತು.

ಹಾಲು ಮೊಸರು ಬೆಣ್ಣೆಗಳೆಂದರೆ ಬಾಲ್ಯದಿಂದಲೂ ನನಗೆ ಹೆಚ್ಚಿನ ಪ್ರೀತಿಯಿತ್ತಂತೆ. ಗೋಕುಲದ ಎಲ್ಲರ ಮನೆಯಲ್ಲೂ ಸಮೃದ್ಧವಾಗಿ ಹಸುಕರುಗಳಿದ್ದವು. ಎಲ್ಲರ ಮನೆಯಲ್ಲೂ ಹಾಲು ಮೊಸರು ಬೆಣ್ಣೆಗಳಿಗೆ ಕೊರತೆಯಿಲ್ಲ. ಜೊತೆಗೆ ನನ್ನ ಮೇಲಿನ ಪ್ರೀತಿಯಿಂದ ಗೋಕುಲದ ಹೆಂಗಸರು ಹಿಡಿ ಹಿಡಿ ಬೆಣ್ಣೆ ತಿನ್ನಿಸುತ್ತಿದ್ದರಂತೆ. ನನಗೆ ಆರೋಗ್ಯ ಕೆಟ್ಟರೇನು ಗತಿಯೆಂದು ಅಮ್ಮ ಯಶೋದೆ ಆತಂಕ ಪಡುವುದು ಸಹಜವಾಗಿತ್ತು. ಆದರೆ ಅಷ್ಟನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಪ್ರಕೃತಿದತ್ತವಾಗಿ ನನಗಿತ್ತು. ಗೋಕುಲದ ತಾಯಂದಿರ ವಾತ್ಸಲ್ಯ, ಅವರು ತಿನ್ನಿಸಿದ ಬೆಣ್ಣೆಯ ಶಕ್ತಿ, ಕುಡಿದ ಹಾಲಿನ ಶಕ್ತಿ ಮುಂದಿನ ನನ್ನ ದೇಹ ಸಾಮರ್ಥ್ಯಕ್ಕೆ ಮೂಲವಾಯಿತೆಂದು ಧರ‍್ಯವಾಗಿ ಹೇಳಬಲ್ಲೆ.

ನನಗೆ ನಾಲ್ಕು ವರ್ಷಗಳಾಗುವಷ್ಟರಲ್ಲಿ ನನ್ನದೇ ವಯಸ್ಸಿನ ಗೋಕುಲದ ಮಕ್ಕಳ ಸ್ನೇಹವೂ ಆಯಿತು. ಸಂಜೆಯ ವೇಳೆ ಎಲ್ಲ ತಾಯಂದಿರೂ ತಮ್ಮ ಮಕ್ಕಳನ್ನು ಎತ್ತಿ ಕೊಂಡು ನಮ್ಮ ಮನೆಗೆ ಬಂದುಬಿಡುತ್ತಿದ್ದರು. ಅಮ್ಮನೊಂದಿಗೆ ಅವರೆಲ್ಲ ವಿನೋದದಿಂದ ಮಾತನಾಡುತ್ತಿದ್ದರು. ನಾನು ಅವರ ಮಕ್ಕಳೊಂದಿಗೆ ಆಟವಾಡುತ್ತಿದ್ದೆ. ಹಸುಕರುಗಳೂ ನಮ್ಮನ್ನು ಪ್ರೀತಿಸುತ್ತಿದ್ದವು. ಕರುಗಳು ನನ್ನ ಬಳಿಗೆ ಬಂದು ತಮ್ಮ ನಾಲಿಗೆಯಿಂದ ನನ್ನನ್ನು ನೆಕ್ಕುತ್ತಿದ್ದವು. ನಾನು ಬೇರೆ ಮಕ್ಕಳಂತೆ ಹೆದರದೆ ಹಸುಗಳ ಬಳಿಗೆ ಹೋಗಿಬರುತ್ತಿದ್ದೆ. ಅವು ನನ್ನನ್ನು ತಮ್ಮ ಒರಟು ನಾಲಿಗೆಯಿಂದ ನೆಕ್ಕುತ್ತಿದ್ದವು. ನಾನು ಅವುಗಳ ಕೆಚ್ಚಲಿಗೇ ಬಾಯಿ ಹಾಕಿ ಹಾಲು ಕುಡಿಯುತ್ತಿದ್ದೆ. ಆದರೆ ಹಾಗೆ ಹೆಚ್ಚು ಹಾಲು ಕುಡಿದದ್ದು ಗಂಗೆ ಹಸುವಿನಲ್ಲಿ. ಅದು ಅತ್ಯಂತ ಸಾಧು ಮತ್ತು ವಾತ್ಸಲ್ಯಮಯಿ ಹಸು! ಹಸು ಒದ್ದರೆ ಏನು ಗತಿ, ಎಂದು ಅಮ್ಮ ಹೆದರುತ್ತಿದ್ದಳು. ಆದರೆ ಅದು ಒರಟು ಹಸುವಿಗಿಂತ ಹೆಚ್ಚಾಗಿ ಅಕ್ಕರೆಯ ತಾಯಿಯಾಗಿತ್ತು. ಆ ವಯಸ್ಸಿ ನಲ್ಲಿ ನಾನು ಎಷ್ಟೊಂದು ಹಸುಗಳ ಹಾಲು ಕುಡಿದಿರಬಹುದು! ಅಷ್ಟು ಹಸುಗಳ ಅಕ್ಕರೆಯೂ ಇಲ್ಲಿಯವರೆಗೆ ಸಂಜೀವಿನಿಯಂತೆ ನನ್ನನ್ನು ಕಾಪಾಡಿದೆ.

ನಾನು ಎರಡು ವರ್ಷವಾಗುತ್ತಿದ್ದಂತೆಯೇ ಅಚ್ಚುಕಟ್ಟಾಗಿ ಮಾತಾಡಲು ಆರಂಭಿಸಿದೆ ನಂತೆ. ಬೇರೆ ನನ್ನ ವಯಸ್ಸಿನ ಮಕ್ಕಳು ಇನ್ನೂ ಶಬ್ದಗಳನ್ನು ತೊದಲುತ್ತಿರುವಾಗ ನಾನು ಅರಳು ಹುರಿದಂತೆ ಮಾತಾಡುತ್ತಿದ್ದೆನಂತೆ. ದಾರಿಯಲ್ಲಿ ಹೋಗುವವರನ್ನೆಲ್ಲ ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಅಕ್ಕ, ಚಿಕ್ಕಪ್ಪ, ದೊಡ್ಡಪ್ಪ, ಮಾವ, ಅಣ್ಣ ಎಂದು ಬಾಯಿ ತುಂಬ ಕರೆದರೆ, ಎಲ್ಲ ಒಂದು ಕ್ಷಣ ನಿಂತು, ನನ್ನನ್ನು ಎತ್ತಿಕೊಂಡು ಮುದ್ದಿಸಿ ಹೋಗುತ್ತಿದ್ದರಂತೆ. ‘ನಂದ, ನಮ್ಮ ಗೋಕುಲದ ರಾಜನೆಂದರೆ ನಿನ್ನ ಮಗ ಕೃಷ್ಣನೇ! ಯಾರ ಬಾಯಲ್ಲಿ ನೋಡಿದರೂ ಅವನ ಹೆಸರೇ. ಎಲ್ಲರೂ ಏನಾದರೂ ನೆಪ ಮಾಡಿಕೊಂಡು ಅವನನ್ನು ನೋಡಿ ಹೋಗಲು ನಿನ್ನ ಮನೆಯ ಬಳಿಗೆ ಬರುತ್ತಾರೆ’ ಎಂದು ಅಪ್ಪನ ಆಪ್ತರು ಹೇಳುತ್ತಿದ್ದರಂತೆ.

ಮೊದಮೊದಲು ಸ್ವಲ್ಪ ಹೊತ್ತು ನಾನು ಕಣ್ಣಿಗೆ ಮರೆಯಾದರೂ ಆತಂಕಪಡುತ್ತಿದ್ದ ಅಮ್ಮ, ಆಮೇಲೆ ನಿರಾಳವಾದಳು. ಗೋಕುಲದಲ್ಲಿ ಎಲ್ಲೋ ಒಂದು ಕಡೆ ಯಾರದೋ ಮನೆಯಲ್ಲಿ, ಯಾವುದೋ ತಾಯಿಯ ಮಡಿಲಿನಲ್ಲಿ ತನ್ನ ಮಗ ಹಾಯಾಗಿರುತ್ತಾನೆ, ಎಂದು ಅವಳು ನಿಶ್ಚಿಂತಳಾದಳು.

ಸ್ವಲ್ಪ ಬೆಳೆದ ಮೇಲೆ ನನ್ನ ವಯಸ್ಸಿನ ಹುಡುಗರ ಜೊತೆ ಆಟದಲ್ಲಿ ಜಗತ್ತೇ ಮರೆತು ಹೋಗುತ್ತಿತ್ತು. ಬೀದಿಯ ಮಣ್ಣು, ಕಲ್ಲು, ಎಲ್ಲ ನಮ್ಮ ಆಟದ ವಸ್ತುಗಳೇ. ಮಗುವಿನ ಮುಗ್ಧ ಮನಸ್ಸು ಪ್ರಕೃತಿಯ ಎಲ್ಲದರೊಂದಿಗೂ ತಾರತಮ್ಯವಿಲ್ಲದೆ ಬೆರೆಯುತ್ತದೆ. ವಯಸ್ಸು ಬೆಳೆದಂತೆ ಹಿರಿಯರು ಎಲ್ಲ ತಾರತಮ್ಯಗಳನ್ನು ಮಕ್ಕಳಿಗೆ ಕಲಿಸುತ್ತಾರಲ್ಲವೆ? ಆ ಎಳೆಯ ವಯಸ್ಸಿನಲ್ಲಿ ತಿನ್ನಲು ಮಣ್ಣೂ ರುಚಿಯಾಗಿತ್ತು ಅಥವಾ ರುಚಿಗಳನ್ನು ವರ್ಗೀಕರಿಸಿ ಆಸ್ವಾದಿಸುವ ಜ್ಞಾನ ಆಗ ಇರಲಿಲ್ಲವೆಂದೂ ಹೇಳ ಬಹುದು. ಹಾಗೆ ಮಣ್ಣು ತಿಂದ ಒಂದು ದಿನ, ಅಮ್ಮ ನನಗೆ ಬಲವಾಗಿಯೇ ಬಡಿದು, ಯಥಾಪ್ರಕಾರ ಅಳುತ್ತಾ ನೆಲದ ಮೇಲೆ ಮಲಗಿಬಿಟ್ಟಳಂತೆ. ಯಥಾಪ್ರಕಾರ ನಾನು ಅವಳ ಮೇಲೆ ಬಿದ್ದು, ಇನ್ನೆಂದೂ ಮಣ್ಣು ತಿನ್ನುವುದಿಲ್ಲವೆಂದು ಗೋಳಾಡಿದೆನಂತೆ. ಅಮ್ಮ ಸಮಾಧಾನಗೊಂಡು, ನನಗೆ ಹೊಡೆದೆನಲ್ಲಾ ಎಂದು ಪಶ್ಚಾತ್ತಾಪ ಪಟ್ಟು ನನ್ನನ್ನು ಸಂತೈಸಿದಳಂತೆ.

ಐದಾರು ವರ್ಷ ವಯಸ್ಸಾದ ಮೇಲಿನ ನೆನಪುಗಳು ಸಾಕಷ್ಟು ಪ್ರಖರವಾಗಿಯೇ ಇದ್ದರೂ, ಅದಕ್ಕೆ ಹಿಂದಿನ ಪ್ರಸಂಗಗಳು, ನಂತರ ನಾನು ಬೇರೆಯವರಿಂದ ಕೇಳಿ ತಿಳಿದದ್ದು. ಮಣ್ಣು ತಿಂದು ಅಮ್ಮನಿಂದ ಏಟು ತಿಂದಂತೆ, ಬೆಣ್ಣೆ ತಿಂದೂ ಏಟು ತಿಂದಿದ್ದೇನೆ. ಗೋಕುಲದಲ್ಲಿ ಹಾಲು ಮೊಸರು ಬೆಣ್ಣೆಗಳಿಗೆ ಕೊರತೆಯಂತೂ ಇರಲಿಲ್ಲ. ಯಾರ ಮನೆಯಲ್ಲೂ ಮಕ್ಕಳಿಗೆ ಕೊರತೆ ಮಾಡಿ ಬೆಣ್ಣೆಯನ್ನು ಮಾರಾಟ ಮಾಡುತ್ತಿರಲಿಲ್ಲ. ಎಲ್ಲ ಮಕ್ಕಳೂ ತಮ್ಮ ತಮ್ಮ ಮನೆಗಳಲ್ಲಿ ಸಮೃದ್ಧವಾಗಿ ಬೆಣ್ಣೆ ತಿನ್ನುತ್ತಿದ್ದರು. ಆದರೆ ಆ ಅಮಾಯಕ ಮನಸ್ಸಿನ ವಯಸ್ಸಿನಲ್ಲಿ ಕದ್ದು ತಿನ್ನುವ ಚಾಪಲ್ಯವುಂಟಾಗಿರಬೇಕು ಅಥವಾ ಆ ವಯಸ್ಸಿನ ಮಕ್ಕಳ ಹುಚ್ಚು ಸಾಹಸವಾಗಿರಬೇಕು. ನಮ್ಮ ಮನೆಯಲ್ಲಿ ಬೆಣ್ಣೆ ಕದ್ದು ತಿಂದಿದ್ದರೆ ಅಮ್ಮ ಕ್ಷಮಿಸಿಬಿಡುತ್ತಿದ್ದಳೇನೋ! ಆದರೆ ಗೆಳೆಯರನ್ನು ಕಟ್ಟಿಕೊಂಡು ಬೇರೆಯವರ ಮನೆಯಲ್ಲಿ ಬೆಣ್ಣೆ ಕದ್ದು ತಿಂದು, ಆ ಮನೆಯ ಗೋಪಮ್ಮ, ಅಮ್ಮನಿಗೆ ದೂರು ಹೇಳಿದಾಗ ಮಾತ್ರ ಅಮ್ಮನ ಕೋಪ ಮಿತಿಮೀರಿತು. ತುಂಟತನವನ್ನು ಅವಳು ಸಹಿಸುತ್ತಿದ್ದಳು, ಆದರೆ ಬೇರೆಯವರು ಬಂದು ದೂರು ಹೇಳುವಂಥ ತಪ್ಪು ನಡವಳಿಕೆ ಯನ್ನು ಅವಳಿಂದ ಸಹಿಸುವುದು ಸಾಧ್ಯವಾಗಲಿಲ್ಲ. ಬಲವಾಗಿಯೇ ಬಾರಿಸಿಬಿಟ್ಟಳು. ಮೈಮೇಲೆ ಬಾಸುಂಡೆ ಬರುವಷ್ಟು ಬಲವಾದ ಹೊಡೆತಗಳು! ಅಪ್ಪ ನಂದ ಬಂದು ತಡೆಯದಿದ್ದರೆ ಆ ಹೊತ್ತು ಇನ್ನಷ್ಟು ಹೊಡೆತಗಳು ಬೀಳುತ್ತಿದ್ದವು. ಅಪ್ಪ ಅಡ್ಡ ಬಂದು ಬಿಡಿಸಿ ನನ್ನನ್ನು ಎತ್ತಿಕೊಂಡು “ಸಾಕು ನಿಲ್ಲಿಸು, ಮಗುವನ್ನು ಕೊಂದುಬಿಡುತ್ತೀಯೇನು?” ಎಂದು ಗದರಿದ.

“ಇಲ್ಲ, ನಾನು ಇವನನ್ನು ಕೊಲ್ಲುವುದಿಲ್ಲ, ನಾನೇ ಕೊಂದುಕೊಳ್ಳುತ್ತೇನೆ.”

“ಕೃಷ್ಣ ಅಂಥ ಮಹಾಪರಾಧ ಏನು ಮಾಡಿದ?”

“ಕಂಡವರ ಮನೆಯಲ್ಲಿ ಬೆಣ್ಣೆ ಕದ್ದು ತಿನ್ನಬೇಕೆ? ನಮ್ಮ ಮನೆಯಲ್ಲಿ ದರಿದ್ರ ಬಂದಿದೆಯೆ? ಆ ಚಂಪ ಬಂದು ದೂರು ಹೇಳಿದಾಗ ನನಗೆ ಕುತ್ತಿಗೆ ಕೊಯ್ದುಕೊಳ್ಳು ವಂತಾಯಿತು. ಈ ವಯಸ್ಸಿಗೇ ಬೆಣ್ಣೆ ಕದ್ದವನು ನಾಳೆ ದೊಡ್ಡ ಕಳ್ಳನಾಗುತ್ತಾನೆ, ಅಷ್ಟೆ.”

“ಹಾಗಿದ್ದರೆ, ನಾನು ಈಗ ಚೋರಾಗ್ರೇಸರನಾಗಬೇಕಿತ್ತು. ಏಕೆಂದರೆ ನಾನೂ ಬಾಲ್ಯದಲ್ಲಿ ತಿನಿಸುಗಳನ್ನು ಕದಿಯುವುದರಲ್ಲಿ ನಿಸ್ಸೀಮನಾಗಿದ್ದೆನಂತೆ” ಎಂದು ಅಪ್ಪ ನಂದ ಜೋರಾಗಿ ನಕ್ಕುಬಿಟ್ಟ. ಅಮ್ಮನೂ ನಕ್ಕುಬಿಟ್ಟಳು. ಏನೇ ಆದರೂ ತನ್ನ ಮಗನನ್ನು ಯಾರಾದರೂ ಕೆಟ್ಟವನೆಂದು ಕರೆದರೆ ಮಾತ್ರ, ಅವಳಿಗೆ ಸಹಿಸುವುದು ಬಹಳ ಕಷ್ಟವಾಗುತ್ತಿತ್ತು.

ಒಂದು ಸಲ ಇನ್ನೊಬ್ಬಳು ಗೋಪಿ, “ಯಶೋದ, ನೋಡು ನಿನ್ನ ಮಗ ಕೃಷ್ಣ ತನ್ನ ತುಂಟ ಗೆಳೆಯರೊಂದಿಗೆ ಯಾರೂ ಇಲ್ಲದಾಗ ಮನೆಗೆ ನುಗ್ಗಿ, ನೆಲುವಿನ ಮೇಲಿರಿಸಿದ್ದ ಬೆಣ್ಣೆಯ ಮಡಕೆಯನ್ನು ಒಡೆದು, ಒಂದು ದೊಡ್ಡ ಮುದ್ದೆಯಷ್ಟು ಬೆಣ್ಣೆಯನ್ನು ತಿಂದಿದ್ದಾನೆ” ಎಂದು ದೂರಿದಳು.

ಅಮ್ಮನಿಗೆ ವಿಪರೀತ ಬೇಸರವಾಗಿ, ಒಂದು ದೊಡ್ಡ ಮಡಕೆಯಲ್ಲಿ ಬೆಣ್ಣೆಯನ್ನು ತೆಗೆದುಕೊಂಡು ಹೋಗಿ ಅವಳಿಗೆ ಕೊಟ್ಟು ಬಂದಳು. ಅವಳಿಗೆ ಮುಖಕ್ಕೆ ಹೊಡೆದಂತಾಗಿ, ಅದೇ ಬೆಣ್ಣೆಯ ಮಡಕೆಯನ್ನು ಹಿಂದಿರುಗಿಸಲು ಹೊತ್ತು ತಂದಳು. ಕ್ಷಮೆ ಕೇಳಿದಳು. ಆದರೆ ಅಮ್ಮ “ನಾನು ಒಮ್ಮೆ ಕೊಟ್ಟದ್ದನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ. ನನ್ನ ಮಗ ಮಾಡಿದ ತಪ್ಪಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ” ಎಂದುಬಿಟ್ಟಳು.

ಆ ತಾಯಿಯ ಸ್ವಾಭಿಮಾನ ನನ್ನ ಮೇಲೆ ಚಿಕ್ಕಂದಿನಿಂದಲೇ ಪ್ರಭಾವ ಬೀರುವುದು ಸಹಜವಾಗಿತ್ತು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಂದ ಯಶೋದೆಯರ ಅಕ್ಕರೆಯ ಅಮೃತವುಂಡು ನಾನು ಕೆಟ್ಟವನಾಗಿ ಬೆಳೆಯಲು ಸಾಧ್ಯವೇ? ಆಮೇಲೆ ನಾನು ಬೆಣ್ಣೆ ಕದಿಯುವ ಧರ‍್ಯ ತೋರಲಿಲ್ಲ. ಅಮ್ಮನ ಹೊಡೆತ, ಅವಳ ದುಃಖ, ಎರಡನ್ನೂ ಸಹಿಸುವುದು ನನ್ನಿಂದಾಗುತ್ತಿರಲಿಲ್ಲ. ಕೆಲವು ಸಲ ನಾನಿಲ್ಲದಾಗ ನನ್ನ ಗೆಳೆಯರು ಮಾಡಿದ ತುಂಟಾಟಕ್ಕೆ ನನ್ನನ್ನೇ ಹೊಣೆ ಮಾಡಿ ಆಕ್ಷೇಪಿಸುವುದೂ ನಡೆಯಿತು.
ಒಂದು ವಿಚಿತ್ರವೆಂದರೆ, ನಾನು ಗೆಳೆಯರೊಂದಿಗೆ ಬೆಣ್ಣೆ ಕದ್ದೆನೆಂದು ದೂರು ಹೇಳಿದವರೇ, ನನ್ನನ್ನು ಕಂಡಾಗ ಎತ್ತಿ ಮುದ್ದಿಸಿ ಬೆಣ್ಣೆ, ಸಿಹಿ ತಿನಿಸುಗಳನ್ನು ಕೊಡುತ್ತಿದ್ದರು. “ನನಗೇನೂ ಬೇಡ, ನೀವು ಅಮ್ಮನಿಗೆ ದೂರು ಹೇಳಿದರೆ, ಅಮ್ಮ ನನಗೆ ಹೊಡೆಯುತ್ತಾಳೆ” ಎಂದು ಅರೆಮನಸ್ಸಿನಿಂದ ಹೇಳುತ್ತಿದ್ದೆ.

“ನಾನು ಖಂಡಿತ ನಿನ್ನ ಅಮ್ಮನಿಗೆ ಹೇಳುವುದಿಲ್ಲ” ಎಂದು ಅವಳು ಆಶ್ವಾಸನೆ ನೀಡಿದ ಮೇಲೆ ನಾನು ತಿನ್ನುತ್ತಿದ್ದೆ. ಈಗಲೂ ನನಗೆ, ಗೋಕುಲದಲ್ಲಿ ಎಷ್ಟು ಮನೆಗಳಿದ್ದವು, ಯಾವ ಮನೆಯ ಗೋಪಮ್ಮ ಯಾವ ತಿನಿಸನ್ನು ರುಚಿಯಾಗಿ ಮಾಡುತ್ತಿದ್ದಳು, ಎಂದು ಚೆನ್ನಾಗಿ ನೆನಪಿದೆ. ಅವರೆಲ್ಲರ ಪ್ರೀತಿ ವಾತ್ಸಲ್ಯಗಳ ನೂರಾರು, ಸಾವಿರಾರು ಪ್ರಸಂಗಗಳು ನೆನಪಾಗುತ್ತವೆ. ಈಗಲೂ ಅವರೆಲ್ಲರ ಪ್ರೀತಿಯ ಋಣವನ್ನು ಹೊತ್ತು ನಾನು ಬೆಳೆದೆನೆಂದು ವಿನೀತನಾಗುತ್ತೇನೆ. ಮನುಷ್ಯನ ಬದುಕೇ ಸಾವಿರಾರು ಋಣಗಳಿಂದ ಪಾಲನೆ ಪೋಷಣೆ ಪಡೆಯುತ್ತದೆ. ನಾನೇ, ನನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ, ಎಂದು ಅಹಂಕಾರದಿಂದ ಮೆರೆಯುವ ಉದ್ಧಟ ಅಹಂಕಾರಿ, ಕ್ಷಣ ಹೊತ್ತು ತನ್ನ ಬದುಕಿನ ಭೂತಕಾಲವನ್ನು, ವರ್ತಮಾನವನ್ನು ತೆರೆದ ಮನಸ್ಸಿನಿಂದ ಅವಲೋಕಿಸಿದರೆ ತಾನು ಏನೂ ಅಲ್ಲ, ತನ್ನ ಅಹಂಕಾರಕ್ಕೆ ಅರ್ಥವೇ ಇಲ್ಲವೆಂದು ಅರಿವಾಗುತ್ತದೆ. ಸಹ ಮಾನವರ ಋಣ ಮಾತ್ರವಲ್ಲದೆ ಭೂಮಿ, ಗಾಳಿ, ಬೆಳಕು, ನೀರು, ದವಸ ಧಾನ್ಯ, ಹಣ್ಣು ಹಂಪಲು, ಪ್ರಾಣಿ ಪಕ್ಷಿಗಳ ಋಣಭಾರವೂ ನಮ್ಮ ಬೆನ್ನ ಮೇಲಿದೆ ಎಂಬ ಅರಿವಿರದ ಮನುಷ್ಯ ನನ್ನ ದೃಷ್ಟಿಯಲ್ಲಿ ಮನುಷ್ಯನೇ ಅಲ್ಲ.

ಗೋಕುಲದ ನನ್ನ ಜೀವನ ವ್ಯಾಕುಲರಹಿತವಾಗಿತ್ತೆಂದೇ ಹೇಳಬಹುದು. ನನ್ನ ಭಾವಕೋಶ ಬೆಳೆಯಲು, ಬುದ್ಧಿ ವಿಕಸನವಾಗಲು, ದೇಹದ ಕ್ಷಮತೆ ಹೆಚ್ಚಾಗಲು ಗೋಕುಲ ಕಾರಣವಾಯಿತು. ಆ ನೆನಪುಗಳನ್ನು ಒಂದೊಂದಾಗಿ ಹೆಕ್ಕಿ ತೆಗೆದು, ಕೃತಜ್ಞತೆ ಯಿಂದ ಸ್ಮರಿಸಬೇಕೆಂದು ಪ್ರೇರಣೆಯಾಗುತ್ತದೆ. ಹೌದು, ಭೂತಕಾಲವನ್ನು ಮರೆತವನಿಗೆ ವರ್ತಮಾನ ಅರ್ಥವಾಗುವುದಿಲ್ಲ, ಭವಿಷ್ಯ ಕೈಗೆಟುಕುವುದಿಲ್ಲ. ಅಂಥ ಜೀವನ ಬೇರಿಲ್ಲದ ಮರದಂತೆ, ಅಲ್ಲವೆ? ಅದರಲ್ಲಿ ಮರದ ಲಕ್ಷಣವಿರುತ್ತದೆ. ಆದರೆ ಅದರಲ್ಲಿ ಹೂ ಅರಳುವುದಿಲ್ಲ, ಹಣ್ಣುಗಳು ತೂಗುವುದಿಲ್ಲ. ಹಸಿರಿನಿಂದ ನಳನಳಿಸಿ, ಆಸರೆ ನೀಡಲು ಪಕ್ಷಿಗಳನ್ನು ಕರೆಯುವುದಿಲ್ಲ.

(ಕೃತಿ: ಶ್ರೀಕೃಷ್ಣ (ಕಾದಂಬರಿ), ಲೇಖಕರು: ಸು. ರುದ್ರಮೂರ್ತಿ ಶಾಸ್ತ್ರಿ, ಪ್ರಕಾಶಕರು: ಅಂಕಿತ ಪ್ರಕಾಶನ, ಬೆಲೆ: 650/-)