Advertisement
ಚಪ್ಪಲಿ ಅಂಗಡಿಯಲ್ಲಿ ಕ್ಯಾಲೆಂಡರ್: ರಘುಪತಿ ತಾಮ್ಹನ್‌ಕರ್ ಅನುಭವ ಕಥನ

ಚಪ್ಪಲಿ ಅಂಗಡಿಯಲ್ಲಿ ಕ್ಯಾಲೆಂಡರ್: ರಘುಪತಿ ತಾಮ್ಹನ್‌ಕರ್ ಅನುಭವ ಕಥನ

ಮೈಸೂರಿನ ರಘುಪತಿ ತಾಮ್ಹನ್‌ಕರ್ ಅವರ ಮೊದಲ ಕೃತಿ ‘ನೋಟಿನ ನಂಟು’ ಇದೇ ಭಾನುವಾರ ಅಂದರೆ ಜುಲೈ 7ರಂದು ಮೈಸೂರಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಬಿಡುಗಡೆಯಾಗಲಿದೆ. ಗಣೇಶ ಅಮೀನಗಡ ಅವರು ತಮ್ಮ ಕವಿತಾ ಪ್ರಕಾಶನದ ಮೂಲಕ ಇದನ್ನು ಪ್ರಕಟಿಸಿದ್ದಾರೆ. ಎಪ್ಪತ್ತು ವರ್ಷದ ರಘುಪತಿ ಅವರು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರ್. ಅವರು ತಮ್ಮ ಅನುಭವಗಳನ್ನು ಕಟ್ಟಿಕೊಟ್ಟ ಕೃತಿಯ ಒಂದು ಅಧ್ಯಾಯ ನಿಮ್ಮ ಓದಿಗಾಗಿ

ಸಿಂಡಿಕೇಟ್ ಬ್ಯಾಂಕಿನಲ್ಲಿದ್ದಾಗ ಕ್ಲರ್ಕ್, ಆಫೀಸರ್ ಅಥವಾ ಮ್ಯಾನೇಜರ್ ಮತ್ತು ಅಷ್ಟೇಕೆ ಬ್ರ್ಯಾಚ್ ಮ್ಯಾನೇಜರ್ ಕುರ್ಚಿಗಳಲ್ಲಿ ಕೂತಿದ್ದಾಗಲೂ ಡಿಸೆಂಬರ್ ಕೊನೆಯ ವಾರದಲ್ಲಿ ಹಾಗೂ ಜನವರಿ ತಿಂಗಳ ಮೊದಲ ವಾರದಲ್ಲಿ ಕ್ಯಾಲೆಂಡರುಗಳನ್ನು ಹಂಚುವ ಕೆಲಸ ನನ್ನದಾಗಿತ್ತು. ಅದೊಂದು ಥರ ನಾಯಿ ಕೆಲಸ! ಅಂದರೆ ಕಾವಲುನಾಯಿಯ ಕೆಲಸ. ಸಿಂಡಿಕೇಟ್ ಬ್ಯಾಂಕಿನ ಚಿಹ್ನೆಯೂ ಅದೇ ಇತ್ತಲ್ಲ (ಚೌತಿ, ದೀಪಾವಳಿಗೆ ಗ್ರಿಟಿಂಗ್ಸ್ ಕಾರ್ಡ್ ಹಂಚುವುದೂ ಇತ್ತು)

ಮುಖ್ಯ ಕಚೇರಿಯಿಂದ ಬಂದ ಕ್ಯಾಲೆಂಡರುಗಳನ್ನು ಯಾರ‍್ಯಾರಿಗೆ ಕೊಡಬೇಕೆನ್ನುವ ಪಟ್ಟಿ ಸಿದ್ಧಗೊಳಿಸಬೇಕಿತ್ತು. ಬ್ಯಾಂಕಿಗೆ ಬರುವ ಎಲ್ಲ ಗ್ರಾಹಕರಿಗೆ ಕ್ಯಾಲೆಂಡರು ಕೊಡಲು ಆಗುತ್ತಿರಲಿಲ್ಲ. ರಾಯಚೂರಿನಲ್ಲಿದ್ದಾಗ ಸುಮಾರು 500 ಕ್ಯಾಲೆಂಡರುಗಳು ಬರುತ್ತಿದ್ದವು. ಎಷ್ಟೋ ಜನರ ಖಾತೆಗಳು ಕ್ಲೋಸ್ ಆಗಿರುತ್ತಿದ್ದವು. ಉಳಿದವರಲ್ಲಿ ಶೇ 50ರಷ್ಟು ಗ್ರಾಹಕರು ದೈನಿಕವಾಗಿ ವ್ಯವಹರಿಸುತ್ತಿದ್ದರು. ಸರಿಸುಮಾರು 400-500 ಜನರು ಪ್ರತಿದಿನ ಬ್ಯಾಂಕಿಗೆ ಬರುತ್ತಿದ್ದರು. ಎಲ್ಲರಿಗೂ ಕ್ಯಾಲೆಂಡರ್ ಹೇಗೆ ಕೊಡುವುದು? ಅವರ ಡಿಪಾಜಿಟ್ ಹಣ ಮತ್ತು ಅವರಿಗೆ ನಮ್ಮ ಅಗತ್ಯತೆ ನೋಡಿ ಕೊಡುವುದಲ್ಲವೆ? ಕೆಲವರನ್ನು ಬಿಡುವುದು ಸಲ್ಲ. ಆದರೂ ಡಿಪಾಜಿಟ್ ಇಟ್ಟ ಕೆಲವರಂತೂ ಬ್ಯಾಂಕಿಗೇ ಫೋನ್ ಮಾಡಿ ನನಗೆ ಕ್ಯಾಲೆಂಡರ್ ಕಳಿಸಬೇಡಿ ಅಂತ ಹೇಳುತ್ತಿದ್ದರು. ಯಾಕೆಂದರೆ ತನಗೆ ಸಾಲದ ನೋಟಿಸ್ ಬಂದಿದೆ ಅಂತ ಅಕ್ಕಪಕ್ಕದ ಮನೆಯವರು ತಿಳಿಯುತ್ತಾರೆ ಅಂತ ಹೇಳುತ್ತಿದ್ದುದರಿಂದ ಅವರನ್ನು ಗೌರವಿಸುವ ಅವಕಾಶವನ್ನೂ ನಾವು ಕಳೆದುಕೊಳ್ಳುತ್ತಿದ್ದುದುಂಟು.

ಕೆಲವರು ಬ್ಯಾಂಕಿಗೇ ಬಂದು ಮ್ಯಾನೇಜರ್ ಕ್ಯಾಬಿನ್‌ಗೆ ನುಗ್ಗಿ ಹಕ್ಕಿನಿಂದ ಕ್ಯಾಲೆಂಡರ್ ತೆಗೆದುಕೊಂಡು ಹೋಗುತ್ತಿದ್ದರು. ಆದಷ್ಟು ನಾವು ಶಾಲೆಗಳಿಗೆ, ಕಚೇರಿಗಳಿಗೆ, ಆಸ್ಪತ್ರೆಗಳಿಗೆ ಹಾಗೆಯೇ ಪೆಟ್ಟಿಗೆ ಅಂಗಡಿಗಳಿಗೆ, ಭಜಿ, ಜಿಲೇಬಿ ಮಾರುವ ಅಂಗಡಿಗಳಿಗೆ ಕೊಟ್ಟುಬರುತ್ತಿದ್ದೆವು. ಯಾವ ಪ್ರದೇಶದಲ್ಲಿ ನಮ್ಮ ಇರುವನ್ನು ತಿಳಿಸಬೇಕಾಗುತ್ತಿತ್ತೋ ಅಲ್ಲಿ ಜನರು ನೋಡುವಂತೆ, ಕ್ಯಾಲೆಂಡರ್ ತೂಗು ಹಾಕುವಂತೆ ನೋಡಿಕೊಳ್ಳುವುದು ನಮ್ಮ ಕೆಲಸವಾಗಿತ್ತು. ನಾನು ಬ್ಯಾಂಕಿಗೆ ಸೇರಿದ ವರ್ಷ ಬ್ಯಾಂಕಿನ ಸುವರ್ಣ ಮಹೋತ್ಸವ ಸಮಾರಂಭಗಳಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಶಿಕ್ಷಕರ ಸಪ್ತಾಹ, ದಾದಿಯರ ಸಪ್ತಾಹ, ವೈದ್ಯರ ಸಪ್ತಾಹ, ರೈತರ ಸಮ್ಮೇಳನ, ಬೀದಿ ವ್ಯಾಪಾರಿಗಳ ಮೇಳ ಎಂದೆಲ್ಲ ಮಾಡಿ ಆಗಾಗ್ಗೆ ನಮ್ಮ ಬ್ಯಾಂಕಿನ ಹೆಸರು ಪತ್ರಿಕೆಗಳಲ್ಲಿ ಬರುವಂತೆ ಮಾಡುತ್ತಿದ್ದೆವು. ಈಮೂಲಕ ಹೆಚ್ಚೆಚ್ಚು ಖಾತೆಗಳು ಬ್ಯಾಂಕಿನಲ್ಲಿ ತೆರೆಯುವಂತೆ ನೋಡಿಕೊಳ್ಳಲಾಗುತ್ತಿತ್ತು. ನಮ್ಮ ಬ್ಯಾಂಕಿನ ಪ್ರಚಾರದಷ್ಟೇ ಅಲ್ಲದೇ ಅದರ ಪ್ರಸಾರವನ್ನೂ ನಾವು ಮಾಡಬೇಕಾಗುತ್ತಿತ್ತು.

ಬ್ಯಾಂಕಿನ ಮ್ಯಾನೇಜರ್ ಅಂದರೆ ತಾನು ಕೆಲಸ ಮಾಡುತ್ತಲೇ ಮೂಕಿ ಸಿನಿಮಾ ನೋಡುತ್ತಲೇ ಇರುವಂತೆ ಇರುವುದು. ಹಾಗೆ ನೋಡುವುದು ಸಿಸಿಟಿವಿಯಂತೆ. ಕನ್ನಡಿ ಹೊರಗೆ ನಡೆಯುವ ಮಾತುಕತೆಗಳು ತನಗೆ ಗೊತ್ತಾಗದಿದ್ದರೂ ಜನರ ಹಾವಭಾವಗಳಿಂದಲೇ ಏನೇನು ನಡೆಯುತ್ತಿದೆ ಎಂದು ತಿಳಿಯುವ ಚಾಣಾಕ್ಷತೆ ಬೇಕಾಗುತ್ತಿತ್ತು. ಬ್ಯಾಂಕುಗಳಲ್ಲಿ ಕಂಪ್ಯೂಟರುಗಳು ಬಂದ ಮೇಲೆ ಯಾವುದೋ ಬ್ಯಾಂಕಿನಲ್ಲಿ ಖಾತೆ ತೆರೆದ ಗ್ರಾಹಕರ ಚೆಕ್ಕನ್ನು ಪಾಸು ಮಾಡುವಾಗ ಕಂಪ್ಯೂಟರ್ ಮುಂದೆ ಕುಳಿತವನ ತಳಮಳಗಳನ್ನು ನಮ್ಮ ಸಿಬ್ಬಂದಿ ಅನುಭವಿಸುವುದನ್ನು ನೋಡಿರುವೆ. ಅವರು ಸಹಿಯನ್ನು ತಾಳೆ ಮಾಡಿ ನೋಡುವ ತಾಳ್ಮೆ ಅಸದಳ. ವಿವರ ಎಲ್ಲೆಲ್ಲಿಗೋ ಹೋಯಿತು. ಇರಲಿ, ಬ್ಯಾಂಕುಗಳು ನಡೆಯುವ ವ್ಯವಹಾರದ ಬಗ್ಗೆ ಸುಖಾಸುಮ್ಮನೆ ಟೀಕೆ ಮಾಡುವವರಿಗೆ ಗೊತ್ತಾಗಲಿ ಅಂತ ಬರೆದೆ. ಬೇರೆ ಕಚೇರಿಗಳಲ್ಲಿ ನೂರು ಸಾರಿ ಅಲೆದಾಡಿದರೂ ಹಲ್ಲುಗಿಂಜಿ ಕೆಲಸ ಮಾಡಿಸಿಕೊಳ್ಳುವ ನಮ್ಮ ಜನರು ಬ್ಯಾಂಕಿಗೆ ಬಂದ ತಕ್ಷಣ ಗಾಂಧೀಜಿಯವರ ಮಾತನ್ನು ಅಕ್ಷರಶಃ ಪಾಲಿಸುತ್ತಾರೆ. ಕಸ್ಟಮರ್ ಈಸ್ ಕಿಂಗ್ ಅಂತ. ಇಂತಹ ಸಾವಿರಾರು ಕಿಂಗ್‌ಗಳ ನಡುವೆ ಪ್ರಧಾನ ಸೇವಕನಾಗಿ ಕ್ಯಾಲೆಂಡರ್ ಹಂಚುವ ಕೆಲಸ ಮಾಡಿದೆ.

ಆರಂಭದಲ್ಲಿ ಕ್ಯಾಲೆಂಡರುಗಳು ಬರೇ ತಾರೀಖುಗಳನ್ನು ತೋರಿಸುತ್ತಿದ್ದವು. ಅಂದರೆ ಎಷ್ಟೋ ಜನರು ಹಾಲಿನ ಲೆಕ್ಕ ಬರೆಯಲು ಉಪಯೋಗಿಸುತ್ತಿದ್ದರು. ಅಂಥವರಿಗೆ ಹೇಳುತ್ತಿದ್ದೆ. ನಿಮ್ಮ ಸಾಲದ ಕಂತಿನ ವಿವರಗಳನ್ನು, ಅದನ್ನು ತುಂಬುವ ದಿನಾಂಕವನ್ನು ನಮೂದಿಸಬಹುದಲ್ಲ ಅಂತ. ಇನ್ನು ಕೆಲವರಿಗೆ ಹೇಳುತ್ತಿದ್ದೆ- ನಿಮ್ಮ ಮನೆಯವರ, ಸಂಬಂಧಿಕರ ಜನ್ಮದಿನಗಳನ್ನೂ ನೋಟ್ ಮಾಡಬಹುದಲ್ಲ ಅಂತ. ಆದರೆ ಜನರು ಕೇಳಬೇಕಲ್ಲ? ನಮಗೋ ನಮ್ಮ ಬ್ಯಾಂಕಿನ ಕ್ಯಾಲೆಂಡರ್ ಲಕ್ಷಾಂತರ ಜನರು ನೋಡಬೇಕೆಂಬ ಆಸೆ.

ಮತ್ತೆ ಕ್ಯಾಲೆಂಡರ್ ಹಂಚುವ ಕುರಿತು ಹಂಚಿಕೊಳ್ಳುವೆ. ಹೊಸ ಊರಿಗೆ ವರ್ಗಾವಣೆಯಾಗಿ ಹೋದ ಕೂಡಲೇ ಬ್ಯಾಂಕಿನ ಅಕ್ಕಪಕ್ಕ ಯಾರ‍್ಯಾರ ಅಂಗಡಿಗಳಿವೆ ಎಂಬುದನ್ನು ಗಮನಿಸುತ್ತಿದ್ದೆ. ಬ್ಯಾಂಕಿನಲ್ಲಿ ಗಲಾಟೆಯಾದರೆ ನೆರೆಹೊರೆಯವರೇ ಬೇಕಲ್ಲ ಸಹಾಯಕ್ಕೆ ಎಂಬ ಇರಾದೆ ಇತ್ತು. ಒಂದು ತಾಲ್ಲೂಕು ಕೇಂದ್ರದಲ್ಲಿಯ ಶಾಖೆಯ ಮುಂದೆ ಸಣ್ಣಪೆಟ್ಟಿಗೆ ಅಂಗಡಿ. ಅಲ್ಲೊಬ್ಬ ಮಧ್ಯವಯಸ್ಕರಾದವರು ಕುಳಿತಿದ್ದರು. ಅವರತ್ತ ನನ್ನ ಲಕ್ಷ್ಯ ಹೋಯಿತು. ಆ ಅಂಗಡಿಯಲ್ಲಿ ಕ್ಯಾಲೆಂಡರ್ ಇರಲಿಲ್ಲ. ಅಂದೇ ಚಾರ್ಜ್ ತೆಗೆದುಕೊಳ್ಳುವವನಿದ್ದೆ. ಮೆಟ್ಟಿಲು ಹತ್ತಿ ಮೊದಲು ಬ್ಯಾಂಕಿನ ಕ್ಯಾಬಿನ್‌ಗೆ ಹೋಗಿ ‘ಇವತ್ತು ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವೆ’ ಎಂದು ಹೇಳಿ ‘ನಮ್ಮ ಬ್ಯಾಂಕಿನ ಒಂದು ಕ್ಯಾಲೆಂಡರ್ ಕೊಡಿ’ ಎಂದು ಒತ್ತಾಯಿಸಿದೆ. ಅದು ಜೂನ್ ತಿಂಗಳ ಮೊದಲ ವಾರ. ಮ್ಯಾನೇಜರ್ ಅಲ್ಲಲ್ಲಿ ಹುಡುಕಾಡಿದಾಗ ಅಟೆಂಡರ್ ಬಂದು ಒಂದು ಕಡೆ ಇಟ್ಟಿದ್ದ ನಾಲ್ಕು ಕ್ಯಾಲೆಂಡರುಗಳಲ್ಲಿ ಒಂದನ್ನು ಕೊಟ್ಟರು. ಕೂಡಲೆ ಪೆಟ್ಟಿಗೆ ಅಂಗಡಿಗೆ ಹೋಗಿ ಕ್ಯಾಲೆಂಡರ್ ಕೊಟ್ಟೆ. ‘ನೀವು ಯಾರು?’ ಕೇಳಿದರು ಅವರು. ‘ಈ ಬ್ಯಾಂಕಿಗೆ ಹೊಸತಾಗಿ ಬಂದಿದ್ದೇನೆ’ ಎಂದೆ. ಸರ್ಕಾರದ ಸಹಾಯಧನದಿಂದ ಶುರುವಾದ ಅಂಗಡಿಯದು. ಅವರು ಎದ್ದರು. ನನ್ನ ಒಟ್ಟಿಗಿದ್ದ ಅಟೆಂಡರ್ ‘ಹೊಸದಾಗಿ ಬಂದ ಮ್ಯಾನೇಜರ್’ ಎಂದರು. ಅಂಗಡಿಯವರು ನನ್ನ ಕೈಹಿಡಿದು ಅತ್ತುಬಿಟ್ಟರು. ‘ಸಾಹೇಬ್ರೆ, ಹತ್ತು ವರ್ಷ ಆಯ್ತು. ಯಾವ ಮ್ಯಾನೇಜರ್ ಕೂಡಾ ನನ್ನತ್ರ ಬರಲಿಲ್ಲ’ ಎಂದು ಬೇಸರದಿಂದ ಹೇಳಿದಾಗ ಮೂಕನಾದೆ. ಕೆಲ ಹೊತ್ತು ಒಬ್ಬರಿಗೊಬ್ಬರು ಕೈಹಿಡಿದುಕೊಂಡಿದ್ದೆವು. ‘ದಿನಾಲೂ ನಿಮ್ಮನ್ನು ಮಾತನಾಡಿಸಿಕೊಂಡು ಹೋಗ್ತೇನೆ’ ಎಂದಾಗ ಖುಷಿಪಟ್ಟರು.

ಎರಡು ದಿನಗಳ ನಂತರ ಅವರು ‘ಸರ್, ನನ್ನ ಅಂಗಡಿಗೆ ಬರ‍್ರಿ’ ಅಂತ ಕರೆದರು. ಅವರ ಅಂಗಡಿಗೆ ಹೋದಾಗ ನಾನು ಕೊಟ್ಟ ಕ್ಯಾಲೆಂಡರಿಗೆ ಹೂವನ್ನು ಏರಿಸಿದ್ದನ್ನು ಗಮನಿಸಿದೆ. ಅಷ್ಟರಲ್ಲಿ ಅವರು ಜೋಡು ಚಪ್ಪಲಿ ನನ್ನ ಮುಂದೆ ಹಿಡಿದು ‘ಇವು ನಿಮಗೆಂದೇ ನಿನ್ನೆಯಿಂದ ತಯಾರಿಸಿ ಇಟ್ಟಿದ್ದೇನೆ. ನಿಮ್ಮ ಕಾಲುಗಳನ್ನು ನೋಡಿ ಅಂದಾಜಿನಿಂದಲೇ ತಯಾರಿಸಿದೆ’ ಎಂದರು. ನಾನು ಅವುಗಳ ದರ ವಿಚಾರಿಸಲಿಲ್ಲ. ನೂರು ರೂಪಾಯಿಗಳ ಎರಡು ನೋಟು ಅವರ ಕೈಯಲ್ಲಿ ಇಟ್ಟು ನಮಸ್ಕರಿಸಿದೆ. ಅವರು ಇಪ್ಪತ್ತೊ ಮೂವತ್ತೊ ಚಿಲ್ಲರೆ ಕೊಡುವವರಿದ್ದರು. ‘ನಿಮ್ಮ ಮಕ್ಕಳಿಗೆ ಬಿಸ್ಕೀಟೋ, ಹಣ್ಣೋ ಏನಾದರೂ ತೆಗೆದುಕೊಂಡು ಹೋಗಿ’ ಎಂದೆ.

ನಂತರ ಅವರ ಅಂಗಡಿಗೆ ಯಾರೇ ಹೋದರೂ ನಮ್ಮ ಬ್ಯಾಂಕಿನ ಬಿಲ್ಡಿಂಗ್ ತೋರಿಸಿ ‘ಆ ಬ್ಯಾಂಕಿಗೆ ಹೋಗ್ರಪ್ಪಾ’ ಎಂದು ಹೇಳುತ್ತಿದ್ದರು ಎಂದು ಜನರು ನನಗೆ ತಿಳಿಸುತ್ತಿದ್ದರು. ಒಂದು ದಿನ ನಮ್ಮ ಬ್ಯಾಂಕಿನ ಪಕ್ಕದಲ್ಲಿದ್ದ ಎನ್‌ಎಸ್‌ಸಿ ಏಜೆಂಟ್ ‘ಏನ್ಸಾರ್, ನಮ್ಮ ವ್ಯಾಪಾರ ಕಮ್ಮಿಯಾಗಿದೆ’ ಎಂದು ಬೇಸರಗೊಂಡು ಹೇಳಿದರು.

ಸಣ್ಣವರಿದ್ದಾಗ ನಮ್ಮ ಹಳ್ಳಿಯಲ್ಲಿ ಊರಿಗೆ ಕ್ಯಾಲೆಂಡರುಗಳನ್ನು ಕಿರಾಣಿ, ಜವಳಿ ಅಂಗಡಿಗೆ ಖರೀದಿಗೆ ಹೋದಾಗ ಮಾತ್ರ ಕೊಡುತ್ತಿದ್ದರು. ಬಾಲ್ಯದಲ್ಲಿ ದೇವರ ಚಿತ್ರಗಳ ಕ್ಯಾಲೆಂಡರುಗಳು ಮನೆಯ ಗೋಡೆಗಳನ್ನು ಅಲಂಕರಿಸುತ್ತಿದ್ದವು. ಪ್ರೌಢನಾಗುವಷ್ಟರಲ್ಲಿ ಸಿನಿಮಾ ನಟಿಯರ ಕ್ಯಾಲೆಂಡರುಗಳನ್ನು ಕೈಗಿಡುತ್ತಿದ್ದರು. ಲಲಿತಾ, ಪದ್ಮಿನಿ, ರಾಗಿಣಿ ಎಂತಲೋ ಹೆಸರುಗಳು. ಮಹಿಳೆಯರ ಚಿತ್ರಗಳುಳ್ಳ ಕ್ಯಾಲೆಂಡರುಗಳು ಯಾರ ಮನೆಯಲ್ಲಿ ಹೆಚ್ಚಿವೆ ಎಂದು ಶಿವರಾತ್ರಿ ದಿನ ಹೈಸ್ಕೂಲ್ ಗೆಳೆಯರು ಮಾತಾಡಿಕೊಂಡು ಸಂಭ್ರಮಿಸಿದ್ದುಂಟು. ನಮ್ಮ ಮುಂಡಾಜೆ ಊರಿನ ಅಡಿಕೆತೋಟಕ್ಕೆ ನೀರು ಬಿಡುವ ದಿನಾಂಕ, ವೇಳೆಯನ್ನು ನಮೂದಿಸಲು ನಮ್ಮೂರ ಸೊಸೈಟಿಯ ಕ್ಯಾಲೆಂಡರ್ ಉಪಯೋಗ ಆಗುತ್ತಿತ್ತು. ರಾತ್ರಿ ಒಂಬತ್ತು ಗಂಟೆಗೆ ತೆಪ್ಪದಗಂಡಿಯಿಂದ, ಬೆಳಿಗ್ಗೆ ಸಂಪಿಗೆ ಮನೆಯಿಂದ ನೀರು ಬಿಡಬೇಕು ಎಂದು ಕ್ಯಾಲೆಂಡರ್ ಮೇಲೆ ಗುರುಗಳಾದ ಕೇಶವ ಹೊಳ್ಳರು ಬರೆಯುತ್ತಿದ್ದರು.

ಬ್ಯಾಂಕುಗಳಿಗೆ ರಜೆಗಳನ್ನು ನಮೂದಿಸುವ ಕ್ಯಾಟಲಾಗುಗಳೂ ಬಂದವು. ಅವುಗಳನ್ನು ಕೆಲವರಿಗೆ ಹಂಚಿದ್ದುಂಟು. ದೀಪಾವಳಿಗೆ ಗ್ರೀಟಿಂಗ್ಸ್ ಕಾರ್ಡ್ ಬರಲು ಶುರುವಾದವು. ಅವುಗಳನ್ನೂ ಹಂಚಿದೆವು. ಹಂಚಿದರೇನೇ ಹಬ್ಬದೂಟವಂತೆ. ಈಗೀಗ ಬ್ಯಾಂಕುಗಳಿಂದ ಹಬ್ಬಗಳಿಗೆ ಶುಭ ಕೋರುವ ಸಂದೇಶಗಳು ಬರುತ್ತಿವೆ. ಜನ್ಮದಿನಕ್ಕೆ ಶುಭ ಕೋರುವ ಸಂದೇಶಗಳ ಜೊತೆಗೆ ಸಾಲಕ್ಕೆ ಮೊತ್ತ ಪಾವತಿಯಾದ ಸಂದೇಶಗಳೂ ರವಾನೆಯಾಗುತ್ತವೆ.


ಮೈಸೂರಿನ ಮಹಾರಾಜರು ನಮ್ಮ ದೇಶಕ್ಕೇ ಕ್ಯಾಲೆಂಡರನ್ನು ಪರಿಚಯಿಸಿದ್ದು ಗೊತ್ತಾ? ಬೆಂಗಳೂರು ಪ್ರೆಸ್ಸಿನ ಅಧಿಕೃತ ಕಚೇರಿಯು ಮೈಸೂರಲ್ಲೇ ಇತ್ತು. ಕ್ಯಾಲೆಂಡರನ್ನು ತಯಾರಿಸುವಾಗ ಮೂರು ತಿಂಗಳು ಹಿಡಿಯಿತಂತೆ. ಅದು ಕೂಡಾ ಜ್ಯೋತಿಷಿಗಳು, ಪಂಡಿತರು, ಮೌಲ್ವಿಗಳನ್ನು ಕರೆಸಿ ಪಂಚಾಂಗದ ಸಹಿತ ಕ್ಯಾಲೆಂಡರ್ ಮುದ್ರಿಸಿದರು. ಹದಿನೆಂಟು ಸದಸ್ಯರು ಕ್ಯಾಲೆಂಡರ್ ಸಮಿತಿಯಲ್ಲಿದ್ದರು. ಇದು 105 ವರ್ಷಗಳ ಹಿಂದಿನ ವಿಷಯ.

(ಕೃತಿ: ನೋಟಿನ ನಂಟು, ಲೇಖಕರು: ರಘುಪತಿ ತಾಮ್ಹನ್‌ಕರ್‌, ಪ್ರಕಾಶಕರು: ಕವಿತಾ ಪ್ರಕಾಶನ, ಮೈಸೂರು, ಬೆಲೆ: 150/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ