ಬಾಣಸಿಗರ ಬಯಲು
ತುಪ್ಪ ಸವರಿದ ತುಟಿಯಂತ ಹೋಳಿಗೆ, ಅವರೆಕಾಳಿನ ನಾನಾ ರೂಪಿ ನಗುವಿನ ತಿನಿಸಾಗಿ,
ಹೆಜ್ಜೆ ಇಟ್ಟಲೆಲ್ಲ ಗುಲ್ಕನ್ನಿನ ಗುಲಾಬಿ ತೋಟ
ಸುರಲೋಕವ ಸೂರೆ ಹೊಡೆವ ಶರಬತ್ತಿನ ಗುಟುಕು
ಸಿಹಿಯಂಗಡಿಯ ತುಂಬಾ ನಾಲಿಗೆ ಚಪ್ಪರಿಸುವ ಸದ್ದು
ಹೀಗೆ ಏನೆಲ್ಲ ರೂಪ ಧರಿಸಿ ನರ್ತಿಸುತ್ತಿದ್ದಾಳೆ ಕಾಮಲತೆ!
ಹಸಿವು ಹೊತ್ತು ಬಂದ ಹೆಜ್ಜೆಗಳಿಗೆ ಸೂಜಿಮೊನೆಯಷ್ಟು ನೆಲೆ ಇಲ್ಲದ ಬಾಣಸಿಗರ ಬಯಲಿಗೆ
ಹೊಟ್ಟೆ ಇಲ್ಲದ ಅಲ್ಲಮ ಬಂದಿದ್ದಾನೆ!
ಆಲಯದ ಅನ್ನವೆಲ್ಲ ಬೀದಿಯ ಚಿನ್ನವಾಗಿ
ತರಾವರಿ ರೂಪ ಧರಿಸಿ ನಿಂತಿಹಳು
ಮೃದಂಗವಿಲ್ಲದ ಅಲೆಮಾರಿ ಅಲ್ಲಮನ ಒಲಿಸಿಕೊಳ್ಳಲು!
ಕಿಸೆಯಲ್ಲಿ ಕಡಲಿಟ್ಟುಕೊಂಡ ಅಲ್ಲಮನ ಅಂಗೈಯಲ್ಲಿ
ಗೆರೆಗಳಂತೆಯೇ ಕಿಲುಬುಗಾಸೂ ಇಲ್ಲ!
ಕಣ್ಣಲ್ಲೇ ತಿಂದು ತೇಗಿದರೂ ಹಸಿವು ಹಿಂಗಲೇ ಇಲ್ಲ!
ಎಲ್ಲೆಂದರಲ್ಲಿ ಕಾಮಲತೆಯ ನರ್ತನ
ಚಪ್ಪರಿಸಿ ತಿನ್ನುವವರ ನಾಲಿಗೆಯ ಮೇಲೆ
ರಸಸಿದ್ಧಾಂತದ ಧ್ಯಾನ!
ತಿರು ತಿರು ತಿರುಗಿದ ಅಲ್ಲಮನ ಅಂಗಾಲಿಗೂ
ಆಯಾಸ ಅಂಟಿ,
ನೀಲಾಕಾಶದ ನಕ್ಷತ್ರಗಳಿಗೂ ನೀರಡಿಕೆ
ಇಲ್ಲೋ ನದಿಯೇ ಬಾಟಲಿಯೊಳಗೆ ಬಂಧಿ
ದಾರಿಯುದ್ದಕ್ಕೂ ಕೂರದ ಖುಷಿಯೊಂದಿಗೆ ನಿಂತು ತಿನ್ನುವವರ ಕಂಡು,
ಅಲ್ಲಮ ಗುಹೇಶ್ವರನ ಹುಡುಕುತ್ತಾ ಮಾಂಸದಂಗಡಿಗೆ ಹೊರಟು ಹೋದ!
ಚಾಂದ್ ಪಾಷ ಮೂಲತಃ ಗುಲ್ಬರ್ಗಾ ಜಿಲ್ಲೆಯ ಜೆವರ್ಗಿ ತಾಲೂಕಿನ ಮಂದೇವಾಲದವರು. ಸಧ್ಯ ಬೆಂಗಳೂರು ವಾಸಿ. ಬೆಂಗಳೂರು ವಿ. ವಿ. ಯಲ್ಲಿ ಕನ್ನಡ ಎಂ. ಎ. ಪದವಿ ಪಡೆದಿದ್ದು, ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. “ಮೌನದ ಮಳೆ”, “ಚಿತ್ರ ಚಿಗುರುವ ಹೊತ್ತು” ಮತ್ತು “ಒದ್ದೆಗಣ್ಣಿನ ದೀಪ” ಇವರ ಪ್ರಕಟಿತ ಕವನ ಸಂಕಲನಗಳು