ಮಂಟಪದ ಮೇಲಂಚಿನ ಕೋಷ್ಠಗಳೂ ಗಾರೆಶಿಲ್ಪಗಳೂ ಭಗ್ನವಾಗಿದ್ದರೂ ಈ ಮಾದರಿಯ ಉತ್ತಮಶಿಲ್ಪಗಳನ್ನು ಪ್ರತಿನಿಧಿಸುತ್ತವೆ. ಶಿವನ ಲೀಲಾಮೂರ್ತಿಗಳನ್ನೂ ದೇವಿಯ ವಿವಿಧ ರೂಪಗಳನ್ನೂ ಈ ಗಾರೆಶಿಲ್ಪಗಳಲ್ಲಿ ಕಾಣುತ್ತೀರಿ. ಶಿವನ ಗುಡಿಗೆ ಅಭಿಮುಖವಾಗಿ ನಂದಿಮಂಟಪ, ಗುಡಿಯನ್ನು ನವೀಕರಿಸುವ ಜನೋತ್ಸಾಹದ ಫಲವಾಗಿ ವಿಚಿತ್ರಬಣ್ಣ ಬಳಿದುಕೊಂಡ ದೊಡ್ಡನಂದಿಯಿದೆ. ಮುಖ್ಯ ಗರ್ಭಗುಡಿಯಲ್ಲಿರುವ ಶಿವಲಿಂಗವು ಮೂಲತಃ ಶೃಂಗೇರಿಯಲ್ಲಿತ್ತೆಂದೂ ಅಲ್ಲಿಯ ಮಠಾಧಿಪತಿಗಳ ಅನುಮತಿಯ ಮೇರೆಗೆ ಇಲ್ಲಿಗೆ ತಂದು ಸ್ಥಾಪಿಸಲಾಯಿತೆಂದೂ ಹೇಳಲಾಗಿದೆ. ಅಲ್ಲದೆ, ಶೃಂಗೇರಿಮಠದಿಂದ ಇಲ್ಲಿನ ದೇಗುಲಕ್ಕೆ ರಥವೊಂದನ್ನು ಕೊಡುಗೆಯಾಗಿ ನೀಡಿದರಂತೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತ್ನಾಲ್ಕನೆಯ ಕಂತು
ವಿಜಯನಗರದ ಅರಸರ ಅಧೀನದಲ್ಲಿ ನಾಡಿನ ವಿವಿಧ ಪ್ರಾಂತ್ಯಗಳ ಆಡಳಿತ ನಡೆಸುತ್ತಿದ್ದ ಸ್ಥಳೀಯ ಅರಸರ ಸಾಲಿಗೆ ಮೈಸೂರು ಒಡೆಯರೂ ಸೇರುತ್ತಾರೆ. ಹದಿನಾರನೇ ಶತಮಾನದಲ್ಲಿ ವಿಜಯನಗರದ ಪತನವಾದಮೇಲೆ ಸ್ವತಂತ್ರವಾಗಿ ರಾಜ್ಯವಾಳತೊಡಗಿದ ಒಡೆಯರ್ ಅರಸರು ಮೊದಲಿಗೆ ಈಗಿನ ಚಾಮರಾಜನಗರ ಪ್ರದೇಶದ ಮೇಲೆ ಹಿಡಿತ ಹೊಂದಿದ್ದು ಕ್ರಮೇಣ ಮೈಸೂರಿಗೆ ತಮ್ಮ ನೆಲೆಯನ್ನು ಬದಲಾಯಿಸಿದರು. ಪುರಾತನ ಕಾಲದಿಂದಲೂ ಚಾಮರಾಜನಗರವು ಅರಿಕುಠಾರವೆಂಬ ಹೆಸರಿನಿಂದ ಪ್ರಸಿದ್ಧವಾಗಿತ್ತು. 1818ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆ (ಎಂಟನೆಯ) ಚಾಮರಾಜ ಒಡೆಯರ ಜನ್ಮಸ್ಥಾನವಾಗಿದ್ದ ಈ ಊರಿಗೆ ಅವರ ಹೆಸರನ್ನೇ ಇರಿಸಿ ಚಾಮರಾಜನಗರವೆಂದು ನಾಮಕರಣ ಮಾಡಿದರು. ಅಂತೆಯೇ 1828ರಲ್ಲಿ ಚಾಮರಾಜೇಶ್ವರ ದೇವಾಲಯವನ್ನೂ ನಿರ್ಮಿಸಿದರು.
ನಗರದ ಮಧ್ಯೆ ವಿಶಾಲವಾದ ಆವರಣದಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ದೇಗುಲಸಂಕೀರ್ಣದ ರಾಜಗೋಪುರವು ದೂರದಿಂದಲೇ ನಿಮ್ಮ ಗಮನಸೆಳೆಯುತ್ತದೆ. ಆರು ಸ್ತರಗಳಲ್ಲಿ ಸುಂದರವಾದ ಕಿರುಗೋಪುರಗಳಿಂದಲೂ ಗಾರೆಶಿಲ್ಪಗಳಿಂದಲೂ ಕಂಗೊಳಿಸುವ ಗೋಪುರ. ದೇವಾಲಯದ ಹೊರಗೋಡೆಯ ಮೇಲೆ ಸುತ್ತಲೂ ಗಾರೆಯ ಕಿರು ದೇವಕೋಷ್ಠಗಳೂ ಅವುಗಳೊಳಗಿನ ದೇವತಾಮೂರ್ತಿಗಳೂ ಕಟ್ಟಡದ ಅಂದವನ್ನು ಮಿಗಿಲುಗೊಳಿಸಿವೆ.
ದೇವಾಲಯ ಸಂಕೀರ್ಣದಲ್ಲಿ ಮುಖ್ಯವಾಗಿ ಚಾಮರಾಜೇಶ್ವರ, ಕೆಂಪನಂಜಾಂಬ ಅಮ್ಮನವರು ಹಾಗೂ ಚಾಮುಂಡೇಶ್ವರಿ ದೇವತೆಗಳ ಗುಡಿಗಳನ್ನು ಕಾಣಬಹುದು. ಈ ಮೂರೂ ಗುಡಿಗಳು ಪ್ರತ್ಯೇಕವಾಗಿದ್ದು ಮಂಟಪ, ನವರಂಗಗಳನ್ನು ಹೊಂದಿವೆ. ಇವೆಲ್ಲ ಮಂಟಪ, ನವರಂಗಗಳಲ್ಲಿ ವಿಜಯನಗರಶೈಲಿಯ ಹಲವಾರು ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ವಿಷ್ಣು, ನರಸಿಂಹ, ಗರುಡ, ಹನುಮ ಮತ್ತಿತರ ದೇವತೆಗಳೂ ನರ್ತಕವಾದ್ಯಗಾರರೂ ಭಕ್ತರೂ ರಾಜಪುರುಷರೂ ಈ ಉಬ್ಬುಶಿಲ್ಪಗಳಲ್ಲಿ ಸ್ಥಾನಪಡೆದಿದ್ದಾರೆ.
ಮಂಟಪದ ಮೇಲಂಚಿನ ಕೋಷ್ಠಗಳೂ ಗಾರೆಶಿಲ್ಪಗಳೂ ಭಗ್ನವಾಗಿದ್ದರೂ ಈ ಮಾದರಿಯ ಉತ್ತಮಶಿಲ್ಪಗಳನ್ನು ಪ್ರತಿನಿಧಿಸುತ್ತವೆ. ಶಿವನ ಲೀಲಾಮೂರ್ತಿಗಳನ್ನೂ ದೇವಿಯ ವಿವಿಧ ರೂಪಗಳನ್ನೂ ಈ ಗಾರೆಶಿಲ್ಪಗಳಲ್ಲಿ ಕಾಣುತ್ತೀರಿ. ಶಿವನ ಗುಡಿಗೆ ಅಭಿಮುಖವಾಗಿ ನಂದಿಮಂಟಪ, ಗುಡಿಯನ್ನು ನವೀಕರಿಸುವ ಜನೋತ್ಸಾಹದ ಫಲವಾಗಿ ವಿಚಿತ್ರಬಣ್ಣ ಬಳಿದುಕೊಂಡ ದೊಡ್ಡನಂದಿಯಿದೆ. ಮುಖ್ಯ ಗರ್ಭಗುಡಿಯಲ್ಲಿರುವ ಶಿವಲಿಂಗವು ಮೂಲತಃ ಶೃಂಗೇರಿಯಲ್ಲಿತ್ತೆಂದೂ ಅಲ್ಲಿಯ ಮಠಾಧಿಪತಿಗಳ ಅನುಮತಿಯ ಮೇರೆಗೆ ಇಲ್ಲಿಗೆ ತಂದು ಸ್ಥಾಪಿಸಲಾಯಿತೆಂದೂ ಹೇಳಲಾಗಿದೆ. ಅಲ್ಲದೆ, ಶೃಂಗೇರಿಮಠದಿಂದ ಇಲ್ಲಿನ ದೇಗುಲಕ್ಕೆ ರಥವೊಂದನ್ನು ಕೊಡುಗೆಯಾಗಿ ನೀಡಿದರಂತೆ.
ಶಿವನ ಗುಡಿಯ ಹೊರಬದಿಗಿರುವ ಕೋಷ್ಠದಲ್ಲಿ ರಾಜಮನೆತನದವರ ಹಲವು ಪ್ರತಿಮೆಗಳನ್ನು ಕಾಣಬಹುದು. ನವರಂಗದಲ್ಲಿ ಕಾಣುವ ಸೂರ್ಯ, ಚಂದ್ರ, ಗಣಪತಿ ಮೊದಲಾದ ಶಿಲ್ಪಗಳು ಸೊಗಸಾಗಿವೆ. ಚಾಮುಂಡೇಶ್ವರಿ ಹಾಗೂ ಪಾರ್ವತಿಯ ಗುಡಿಗಳ ಹೊರಮಂಟಪಗಳಲ್ಲಿ ಪಾರ್ವತೀಕಲ್ಯಾಣ, ಮಹಿಷಮರ್ದಿನಿ ಮತ್ತಿತರ ದೃಶ್ಯಗಳನ್ನು ಬಿಂಬಿಸುವ ವರ್ಣಚಿತ್ರಗಳಿದ್ದುವು. ಮೈಸೂರುಶೈಲಿಯಲ್ಲಿ ನಿರೂಪಿಸಲಾಗಿದ್ದ ಈ ವರ್ಣಚಿತ್ರಗಳು ಕಾಲಾಂತರದಲ್ಲಿ ಹಾಳಾಗಿಹೋಗಿವೆ.
ದೇಗುಲದ ವಿಶಾಲವಾದ ಪ್ರಾಕಾರದಲ್ಲಿ ಸುತ್ತಲೂ ಅನೇಕ ಕೋಷ್ಠಗಳಿದ್ದು ಅವುಗಳಲ್ಲಿ ವಿವಿಧ ದೇವತಾಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಎಡಬದಿಯ ಕೋಷ್ಠಗಳಲ್ಲಿ ಅರವತ್ತುನಾಲ್ಕು ಪುರಾತನರ ವಿಗ್ರಹಗಳನ್ನೂ ಬಲಬದಿಯ ಕೋಷ್ಠಗಳಲ್ಲಿ ಶಿವನ ಇಪ್ಪತ್ತೈದು ಲೀಲಾಮೂರ್ತಿಗಳನ್ನೂ ನೋಡಬಹುದು. ಕಿರಾತಾರ್ಜುನ, ವಿಷಕಂಠ, ಅರ್ಧನಾರೀಶ್ವರ, ಭಿಕ್ಷಾಟನಮೂರ್ತಿ, ಏಕಪಾದಮೂರ್ತಿ, ಶಂಕರನಾರಾಯಣ, ದಕ್ಷಿಣಾಮೂರ್ತಿ ಮೊದಲಾದ ಶಿವನ ಲೀಲಾಮೂರ್ತಿಗಳು ಶಿಲ್ಪಶಾಸ್ತ್ರದ ಅಧ್ಯಯನ ಮಾಡುವವರಿಗೂ ಒಳ್ಳೆಯ ಮಾದರಿಗಳೆನಿಸುತ್ತವೆ.
ಹಿಂಬದಿಯ ಸಾಲಿನಲ್ಲಿ ರಾಜರಾಣಿಯರು ಹಾಗೂ ಅವರ ಮನೆತನದವರ ಹೆಸರಿನಲ್ಲಿ ಪ್ರತಿಷ್ಠಾಪಿಸಲಾದ ಶಿವಲಿಂಗಗಳಿವೆ. ಒಂದು ಬದಿಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್, ಅವರ ನಾಲ್ವರು ಪತ್ನಿಯರು ಹಾಗೂ ನಂಜರಾಜನ ಪ್ರತಿಮೆಗಳನ್ನು ಇರಿಸಿದೆ. ಈ ಸಾಲಿನಲ್ಲಿ ಕಂಡುಬರುವ ಸಹಸ್ರಲಿಂಗವು ದರ್ಶನೀಯವಾಗಿದೆ.
ದೇವಾಲಯದ ಹಿಂಬದಿಗೆ ರಸ್ತೆಯೊಂದರ ಅಂಗಡಿಸಾಲನ್ನು ದಾಟಿಹೋದರೆ ಚಾಮರಾಜ ಒಡೆಯರ ಜನನಮಂಟಪವನ್ನು ನೋಡಬಹುದು. ಮೈಸೂರು ಶೈಲಿಯ ದೊಡ್ಡ ವರ್ಣಚಿತ್ರಗಳಿಂದ ಈ ಮಂಟಪವನ್ನು ಅಲಂಕರಿಸಲಾಗಿದೆ. ನಿರ್ವಹಣೆಯ ಕೊರತೆಯಿಂದಾಗಿ ಈ ಸ್ಮಾರಕವು ಕಳಾಹೀನವಾಗಿದೆ.
ಚಾಮರಾಜನಗರಕ್ಕೆ ಬಂದವರು ಸಮೀಪದ ಹಳೇ ಆಲೂರು, ಯಳಂದೂರು, ತೆರಕಣಾಂಬಿ, ನರಸಮಂಗಲ ಮೊದಲಾದ ಊರುಗಳಲ್ಲಿರುವ ಪುರಾತನಗುಡಿಗಳನ್ನು ನೋಡಲು ಮರೆಯದಿರಿ.
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.