ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು ಉತ್ತಮ ಮಾಧ್ಯಮ ಎಂದು ನಂಬಿರುವ ಲೇಖಕಿ ಸವಿತಾ ರವಿಶಂಕರ `ಚಿಲಿಪಿಲಿ ಕನ್ನಡ ಕಲಿ’ ಸಂಕಲನದಲ್ಲಿ ಅಂತಹ ಮಕ್ಕಳ ಮನ ತಟ್ಟುವ ರೀತಿಯ ಕನ್ನಡ ಪದ್ಯಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.
ಸವಿತಾ ರವಿಶಂಕರ `ಚಿಲಿಪಿಲಿ ಕನ್ನಡ ಕಲಿ’ ಮಕ್ಕಳ ಪದ್ಯಗಳ ಸಂಕಲನದ ಕುರಿತು ಮಂಡಲಗಿರಿ ಪ್ರಸನ್ನ ಬರಹ
`ಮೂಲತಃ ಮೈಸೂರಿನವರಾದರೂ, ಹಲವು ದಶಕಗಳಿಂದ ಅಮೇರಿಕದಲ್ಲಿ ನೆಲೆಸಿರುವ ಸವಿತಾ ರವಿಶಂಕರ, ಅಮೇರಿದಂತಹ ವಿದೇಶಿ ನೆಲದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುವಲ್ಲಿ ಅಪಾರ ಆಸಕ್ತಿ ಹೊಂದಿದವರು.
ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು ಉತ್ತಮ ಮಾಧ್ಯಮ ಎಂದು ನಂಬಿರುವ ಲೇಖಕಿ ಸವಿತಾ ರವಿಶಂಕರ `ಚಿಲಿಪಿಲಿ ಕನ್ನಡ ಕಲಿ’ ಸಂಕಲನದಲ್ಲಿ ಅಂತಹ ಮಕ್ಕಳ ಮನ ತಟ್ಟುವ ರೀತಿಯ ಕನ್ನಡ ಪದ್ಯಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. `ಚಿಲಿಪಿಲಿ ಕನ್ನಡ ಕಲಿ’ ಸಂಕಲನದಲ್ಲಿ ಒಟ್ಟು 36 ಪದ್ಯಗಳಿವೆ.
ಮಕ್ಕಳ ಪದ್ಯಗಳ ಹೆಸರಲ್ಲಿ ಏನೇನೋ ಪುಂಖಾನುಪುಂಖವಾಗಿ ಪ್ರಕಟಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸವಿತಾ ರವಿಶಂಕರ ಅವರ ಹೊಸತನದ ಈ ಮಕ್ಕಳ ಪದ್ಯಗಳು ಓದುಗರಿಗೆ ಮುದನೀಡುತ್ತವೆ.
ಇದನ್ನು ಸಂಕಲನದ ಆರಂಭದ `ಕನ್ನಡ ಅಕ್ಷರಮಾಲೆ’ ಪದ್ಯದಲ್ಲಿಯೆ ಗಮನಿಸಬಹುದು. ಕನ್ನಡ ವರ್ಣಮಾಲೆಯ ಪರಿಚಯ ನೀಡಲು ಪ್ರಯತ್ನಿಸುವ ಈ ಪದ್ಯ `ಅ’ ದಿಂದ `ಳ’ ವರೆಗಿನ ಅಕ್ಷರಗಳ ಮೂಲಕ ಪೋಣಿಸಲಾಗಿದೆ. ನಂತರದ ಅಕ್ಷರಮಾಲೆಯಲ್ಲಿ ಅಮ್ಮ ಪದ್ಯದ `ಅಮ್ಮನ ಸಂಗವು ನನಗದು ಇಷ್ಟ’ಎನ್ನುವ ಮೂಲಕ ತಾಯಿಯ ಅಂತಃಕರಣದ ಉದಾತ್ತತೆಯನ್ನು ಎತ್ತ ಹಿಡಿಯುತ್ತದೆ.
`ಪಿಜ್ಜಾ ಅಂಗಡಿ ಪಾಪಣ್ಣ
ನಂಗೊಂದು ಪಿಜ್ಜಾ ಬೇಕಣ್ಣ’ ಪದ್ಯ ಸೇರಿದಂತೆ ಇನ್ನಿತರ ಕೆಲ ಪದ್ಯಗಳು ನೃತ್ಯ ಸಂಯೋಜನೆಯ ಮೂಲಕ ಅಭಿನಯಿಸಲು ಯೋಗ್ಯವಾಗಿವೆ.
`ಯಾಕೆ ಬೇಕು’ ಎಂದು ಆರಂಭವಾಗುವ ಪದ್ಯ ನಂತರದಲ್ಲಿ ಕಿವಿ, ಮೂಗು, ಬಾಯಿ, ನಾಲಿಗೆ, ಹಲ್ಲು, ಕೈ-ಕಾಲುಗಳ ಮಹತ್ವ ತಿಳಿಸುವಲ್ಲಿ ಯಶಸ್ವಿಯಾಗುತ್ತದೆ. `ಒಂದು ಎರಡು ಇಂಡಿಯಾಕ್ಕೆ ಹೊರಡು’ ಎನ್ನುವ ಪದ್ಯ ಮಗು ತನ್ನ ತಾಯ್ನಾಡಿಗೆ ಬರಲು ಹಂಬಲಿಸುವ ಪ್ರಯತ್ನ ಎನಿಸಿ, ಅದರಲ್ಲೂ ಮುಖ್ಯವಾಗಿ ಅಜ್ಜಿಯ ಊರಿಗೆ ಬರುವ ಕೌತುಕತೆ ಇದರಲ್ಲಿದೆ. `ಏಪ್ರಿಲ್’ `ಹವಾಮಾನ ಹೀಗಿದೆ’ `ಅಮೇರಿಕನ್ನಡ ಕಂದ’ ಸೇರಿದಂತೆ ಇಂಗ್ಲೀಷ್ ಶಿಶುಗೀತೆಗಳ ಭಾವಾನುವಾದ ಪದ್ಯಗಳು ಓದಲು ಮುದನೀಡುತ್ತವೆ. `ಸ್ಕೂಲ್ ಬಸ್’, `ಆನೆ’, `ಚಂದ್ರ’, `ಸ್ಯಾಂಟ’, `ಮಂಜು’ ಸೇರಿದಂತೆ ಕೆಲವು ಒಗಟಿನ ಪದ್ಯಗಳು ಕಚಗುಳಿಯಿಡುತ್ತವೆ. ಸಂತೋಷ್ ಸಸಿಹಿತ್ಲು ಅವರ ಚಿತ್ರಗಳು ಪ್ರತಿ ಪದ್ಯಕ್ಕೂ ಸಮಸಮನಾಗಿ ಚಿತ್ರಿತಗೊಂಡು ಆಕರ್ಷಿಸುತ್ತವೆ.
ಹೊರದೇಶದಲ್ಲಿ ಬೆಳೆಯುತ್ತಿರುವ ಕನ್ನಡದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿರುವ ಈ ಪದ್ಯಗಳಲ್ಲಿ ಪಿಜ್ಜಾ ಪಾಪಣ್ಣನ ಸಂವಾದವಿದೆ, ಹಕ್ಕಿಯ ಕಲರವವಿದೆ, ಹಬ್ಬಗಳ ಮೋಜಿದೆ, ಹ್ಯಾಲೋವೀನ್ ಚಾಕಲೇಟಿನ ಖುಷಿಯಿದೆ, ಸ್ಯಾಂಟನ ಹರ್ಷವಿದೆ. ಕನ್ನಡ ಭಾಷೆಯ ಸ್ವಾದವನ್ನೆ ಮುಖ್ಯವಾಗಿಟ್ಟುಕೊಂಡು, ಕನ್ನಡೇತರ ನೆಲದಲ್ಲಿ ಕನ್ನಡ ಮಕ್ಕಳ ಮನಸನ್ನು ತಲುಪಬೇಕೆನ್ನುವ ಸವಿತಾ ರವಿಶಂಕರ ಅವರ ಪ್ರಯತ್ನ ಇಲ್ಲಿ ಸ್ತುತ್ಯಾರ್ಹ.
(ಕೃತಿ: ಚಿಲಿಪಿಲಿ ಕನ್ನಡ ಕಲಿ(ಮಕ್ಕಳ ಪದ್ಯಗಳು), ಲೇಖಕರು: ಸವಿತಾ ರವಿಶಂಕರ, ಪ್ರಕಾಶಕರು: ಅವ್ಯಕ್ತ ಪ್ರಕಾಶನ, ಬೆಂಗಳೂರು, ವರ್ಷ: 2023, ಪುಟಗಳು: 60, ಬೆಲೆ: ರೂ.205/-)
ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ