Advertisement
ಚಿಲೆ ದೇಶದ ಕವಿ ಎಲಿಕುರಾ ಚಿವಾಯ್‌ಲಾಫ಼್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಚಿಲೆ ದೇಶದ ಕವಿ ಎಲಿಕುರಾ ಚಿವಾಯ್‌ಲಾಫ಼್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಚಿವಾಯ್‌ಲಾಫ಼್ ಅವರ ಅನೇಕ ಕವಿತೆಗಳು ಆ ಭೂಮಿಯಲ್ಲಿ ರೂಪಕಾತ್ಮಕವಾಗಿ ವಾಸಿಸುವ ತುರ್ತು ಬಯಕೆಗೆ ಸಾಕ್ಷಿಯಾಗಿವೆ. ಅವರ ಬುಡಕಟ್ಟಿನ ಪೂರ್ವಜರ ಮರೆತುಹೋದ ಅಥವಾ ನಿಗ್ರಹಿಸಲ್ಪಟ್ಟ ಉಪಸ್ಥಿತಿಯನ್ನು ಮಾತ್ರವಲ್ಲದೆ, ‘ಮಾಪುಚೆ’ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾದ ಮತ್ತು ಸಾಂಪ್ರದಾಯಿಕ ಮಾಪುಚೆ ಭೂಮಿಯಲ್ಲಿ ಕೈಗಾರಿಕಾ ಯೋಜನೆಗಳಿಂದ ಹೆಚ್ಚಾಗಿ ಬೆದರಿಕೆಗೆ ಒಳಗಾಗುವ ಪ್ರಕೃತಿಯ ಧ್ವನಿಯನ್ನು ಸಹ ಅವರು ಮರಳಿ ಪಡೆಯುವ ಗುರಿಯನ್ನು ಹೊಂದಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಚಿಲೆ (Chile) ದೇಶದ ಮಾಪುಚೆ ಬುಡಕಟ್ಟಿಗೆ ಸೇರಿದ ಮಾಪುಜುಗುನ್ (Mapuzugun) ಭಾಷಾ ಕವಿ ಎಲಿಕುರಾ ಚಿವಾಯ್‌ಲಾಫ಼್ರವರ  (Elicura Chihuailaf, 1953)  ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಎಲಿಕುರಾ ಚಿವಾಯ್‌ಲಾಫ಼್ ಅವರು (Elicura Chihuailaf) 1953-ರಲ್ಲಿ ಚಿಲೆ (Chile) ದೇಶದ ‘ಕೌತೀನ್’ (Cautín) ಪ್ರಾಂತ್ಯದ ‘ಕ್ವೆಚುರೆವೆ’ (Quechurewe) ಸ್ಥಳೀಯ ಸಮುದಾಯದಲ್ಲಿ ಜನಿಸಿದರು. ಒಬ್ಬ ಪ್ರಸಿದ್ಧ ‘ಮಾಪುಚೆ’ (Mapuche) ಕವಿಯಾದ ಚಿವಾಯ್‌ಲಾಫ಼್ ಅವರು ಆ ಬುಡಕಟ್ಟಿನ ಮುಖ್ಯಸ್ಥರ ಮೊಮ್ಮಗ.  ಗ್ರಾಮೀಣ ಸ್ಥಳೀಯ ಪರಿಸರದಲ್ಲಿ ಬೆಳೆದ ಅನುಭವ ಅವರ ಕಾವ್ಯದ ಮೇಲೆ ಬಹಳಷ್ಟು ಪ್ರಭಾವ ಬೀರಿದೆ.  ಅವರ ದ್ವಿಭಾಷಾ ಬರವಣಿಗೆಯ ಮೂಲಕ (ಸ್ಪ್ಯಾನಿಷ್ ಮತ್ತು ಮಾಪುಜುಗುನ್‌-ನಲ್ಲಿ [Mapuzugun]), ಚಿವಾಯ್‌ಲಾಫ಼್ ತಮ್ಮ ಜನರ ಸ್ಥಳೀಯ ಸಂಸ್ಕೃತಿಯನ್ನು ಕಾಪಾಡುತ್ತಾರೆ, ಪುನರ್ ಪರಿಶೀಲಿಸುತ್ತಾರೆ, ಮತ್ತು ಪ್ರಸಾರ ಮಾಡುತ್ತಾರೆ.

ಚಿವಾಯ್‌ಲಾಫ಼್ ಅವರ ಅನೇಕ ಕವಿತೆಗಳು ಆ ಭೂಮಿಯಲ್ಲಿ ರೂಪಕಾತ್ಮಕವಾಗಿ ವಾಸಿಸುವ ತುರ್ತು ಬಯಕೆಗೆ ಸಾಕ್ಷಿಯಾಗಿವೆ. ಅವರ ಬುಡಕಟ್ಟಿನ ಪೂರ್ವಜರ ಮರೆತುಹೋದ ಅಥವಾ ನಿಗ್ರಹಿಸಲ್ಪಟ್ಟ ಉಪಸ್ಥಿತಿಯನ್ನು ಮಾತ್ರವಲ್ಲದೆ, ‘ಮಾಪುಚೆ’ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾದ ಮತ್ತು ಸಾಂಪ್ರದಾಯಿಕ ಮಾಪುಚೆ ಭೂಮಿಯಲ್ಲಿ ಕೈಗಾರಿಕಾ ಯೋಜನೆಗಳಿಂದ ಹೆಚ್ಚಾಗಿ ಬೆದರಿಕೆಗೆ ಒಳಗಾಗುವ ಪ್ರಕೃತಿಯ ಧ್ವನಿಯನ್ನು ಸಹ ಅವರು ಮರಳಿ ಪಡೆಯುವ ಗುರಿಯನ್ನು ಹೊಂದಿದ್ದಾರೆ.

ಚಿವಾಯ್‌ಲಾಫ಼್ ಅವರ ಕಾವ್ಯದಲ್ಲಿ ಕಂಡುಬರುವ ಇತರ ಮಾಪುಚೆ ಸಾಂಸ್ಕೃತಿಕ ಸಂಪ್ರದಾಯಗಳೆಂದರೆ ಮೌಖಿಕತೆ (orality), ಹಿರಿಯರ ವಿವೇಕ ಹಾಗೂ ಲೋಕಜ್ಞಾನವನ್ನು ಗೌರವಿಸುವುದು, ಮತ್ತು, ಮನುಷ್ಯರಲ್ಲದವರು ಮತ್ತು ಮನುಷ್ಯರಿಗಿಂತ ಮೇಲಾಗಿರುವವರಿಗೆ ನೀಡಲಾಗುವ ಮೌಲ್ಯದಿಂದ ಒತ್ತಿಹೇಳಲಾಗುವ ಪ್ರಕೃತಿಯೊಂದಿಗೆ ಕಲ್ಪನೆಯ ನಿಕಟ ಸಂಬಂಧವನ್ನು ಬೆಳೆಸುವುದು.

Recado Confidencial a los Chilenos ಎಂಬ ತಮ್ಮ ಪುಸ್ತಕದಲ್ಲಿ, ಅವರು ರಾತ್ರಿಯಲ್ಲಿ ಬೆಂಕಿಯ ಸುತ್ತ ಕೂತು ಕಳೆದ ಬಾಲ್ಯದ ಬಗ್ಗೆ ಮಾತನಾಡುತ್ತಾರೆ, ಅದರಲ್ಲಿ ಅವರು ಸಂಭಾಷಣೆಯ ಕಲೆಯನ್ನು (nvtram) ಮತ್ತು ಹಿರಿಯರ ಸಲಹೆಯನ್ನು (gulam) ಕಲಿತರು.  ಅದೇ ರೀತಿ, ಪ್ರಕೃತಿಯು ತನ್ನ ವೈವಿಧ್ಯತೆಯಿಂದ ಅವರಿಗೆ ಲೋಕಚೈತನ್ಯವನ್ನು ಕಲಿಸಿತು.  ಅವರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ವ್ಯಕ್ತಪಡಿಸುವ ಈ ಅಗತ್ಯವು, ಸ್ವತಃ ವೈವಿಧ್ಯಮಯವಾಗಿದ್ದು, ಅವರನ್ನು ಒಬ್ಬ Oralitor-ಆಗಿ ಮಾಡಿತು, ಅಂದರೆ, ಮಾಪುಚೆ ಹಿರಿಯರ ಮೌಖಿಕ ಅಭಿವ್ಯಕ್ತಿಯ ವಾಹಕ.

“ಒಬ್ಬ ಮನುಷ್ಯ, ಒಂದು ಜೀವಂತ ಪ್ರಾಣಿ, ಮತ್ತು ನಿರ್ಜೀವ ವಸ್ತುವಾದ ಒಂದು ಕಲ್ಲು – ಎಲ್ಲವೂ ಒಂದು ನೆಲೆಗೆ ಸೇರಿದ್ದು ಮತ್ತು ಒಂದು ngen-ನ್ನು, ಒಂದು ಚೈತನ್ಯವನ್ನು ಹೊಂದಿರುವುದು. ಈ ngen ಸಹ ಮಾನವನಂತೆಯೇ ಒಂದೇ ನೆಲೆಗೆ ಸೇರಿದ್ದು, ಮತ್ತು ಅವರಿಬ್ಬರೂ ಅದನ್ನು ಹಂಚಿಕೊಳ್ಳುವುದರಿಂದ ಪರಸ್ಪರ ವಿನಿಮಯದ, ಪರಸ್ಪರ ಅವಲಂಬನೆಯ ಸಂಬಂಧವಿದೆ. ಅದ್ದರಿಂದ ಇದು ಹೊರಗಿಡುವಿಕೆ ಮತ್ತು ವಿಘಟನೆ ಇಲ್ಲದೆ ಸಂಪೂರ್ಣತೆಯ ಪ್ರತೀಕವಾಗಿದೆ,” ಎಂದು ಚಿವಾಯ್‌ಲಾಫ಼್ ಒಂದು ಕಡೆ ಹೇಳುತ್ತಾರೆ.

ಚಿವಾಯ್‌ಲಾಫ಼್ ಅವರು ಪಾಬ್ಲೋ ನೆರುಡಾ ಅವರಂತಹ ಇತರ ಕವಿಗಳ ಕೃತಿಗಳನ್ನು ಮಾಪುಜುಗುನ್‌ ಭಾಷೆಗೆ ಅನುವಾದಿಸಿದ್ದಾರೆ. ಅವರ ಪ್ರಕಟಿತ ಕೃತಿಗಳಲ್ಲಿ En el país de la memoria (1988), El invierno, su imagen y otros poemas azules (1991), and De sueños azules y contrasueños (1995), Recado confidencial a los chilenos (1999), Kallfv (2006), A orillas de un sueño azul (2010), La vida es una nube azul(2019), ಹಾಗೂ El azul del tiempo que nos sueña (2020) ಸೇರಿವೆ.  2020-ರಲ್ಲಿ ಅವರಿಗೆ ಚಿಲಿಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಯಿತು ಹಾಗೂ ಈ ಗೌರವವನ್ನು ಪಡೆದ ಮೊದಲ ಮಾಪುಚೆ ಸಾಹಿತಿಯೆಂಬ ಕೀರ್ತಿ ಪಡೆದದರು. ಈ ಪ್ರಶಸ್ತಿ ಸೇರಿದಂತೆ ಇನ್ನೂ ಹಲವಾರು ಪ್ರತಿಷ್ಟಿತ ಸನ್ಮಾನಗಳು ಹಾಗೂ ಗೌರವಗಳನ್ನು ಪಡೆದ ಚಿವಾಯ್‌ಲಾಫ಼್ ಅವರನ್ನು ಇಂದಿನ ಮಾಪುಚೆ ಕಾವ್ಯದ ‘ಲೋಂಕೊ’ (lonco) ಅಥವಾ ಮುಖ್ಯಸ್ಥ ಎಂದು ಕರೆಯಲಾಗಿದೆ.

ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವ ಎಲಿಕುರಾ ಚಿವಾಯ್‌ಲಾಫ಼್-ರವರ ಏಳು ಕವನಗಳಲ್ಲಿ ಮೊದಲ ಕವನವನ್ನು ಜಾನ್ ಬಿಯರ್ಹೊರ್ಸ್ಟ್ (John Bierhorst), ಮುಂದಿನ ಎರಡು ಕವನಗಳನ್ನು ಕ್ಯಾಮಿಲಾ ಐವರ್ (Camila Yver), ಹಾಗೂ ನಂತರದ ನಾಲ್ಕು ಕವನಗಳನ್ನು ಆರ್ಥರ್ ಮಾಲ್ಕಮ್ ಡಿಕ್ಸನ್ (Arthur Malcolm Dixon) ಅವರು ಚಿವಾಯ್‌ಲಾಫ಼್ ಅವರೇ ಮೂಲ ಮಾಪುಜುಗುನ್‌ ಭಾಷೆಯಿಂದ ಸ್ಪ್ಯಾನಿಷ್ ಭಾಷೆಗೆ ಮಾಡಿದ ಅನುವಾದಗಳಿಂದ ಇಂಗ್ಲಿಷಿಗೆ ಅನುವಾದಿಸಿರುವರು.

ಯಾರೂ ಕಳೆಯದ ಬೀಗದಕೈ 
ಮೂಲ: The Key no one Lost
ಕಾವ್ಯ ಯಾವ ಕೆಲಸಕ್ಕೂ ಬಾರದು ಅಂತ
ನಾನು ಕೇಳಿದ್ದೇನೆ
ಅಡವಿಯಲ್ಲಿ ಮರಗಳು ತಮ್ಮ ನೀಲಿ ಬೇರುಗಳಿಂದ
ಒಂದನ್ನೊಂದು ಲಾಲಿಸುತ್ತಾ
ತಮ್ಮ ಟೊಂಗೆಗಳನ್ನು ಗಾಳಿಯಲ್ಲಿ ತೂಗಿಸುತ್ತಾ
ಹಕ್ಕಿಗಳ ಜೊತೆಗೂಡಿ
ತ್ರಿಶಂಕು ತಾರಾಪುಂಜಕ್ಕೆ ಕೈಬೀಸಿ ‘ಹಾಯ್’ ಎನ್ನುತ್ತವೆ.
ಕಾವ್ಯವು
ಕೊಲೆಯಾದವರ ಗಂಭೀರ ಪಿಸುಮಾತು,
ಶರತ್ಕಾಲದ ಎಲೆಗಳ ಗಾಳಿಮಾತು,
ಭಾಷೆಯ ಕಾಪಾಡುವ,
ಆದರೆ
ತನ್ನ ಆತ್ಮವ ಕಳಕೊಂಡ
ಆ ಹುಡುಗನ ದುಃಖ.
ಕಾವ್ಯ, ಕಾವ್ಯವೊಂದು ಕೈಮಾತು,
ಒಂದು ಕನಸು, ಭೂದೃಶ್ಯವದು, ಹುಡುಗೀ.
ನಿನ್ನ ಕಣ್ಣುಗಳು, ನನ್ನ ಕಣ್ಣುಗಳು
ಕರ್ಣಗಳು, ಹೃದಯಗಳು, ಅದೇ ಸಂಗೀತ.
ಇನ್ನು ಹೆಚ್ಚೇನೂ ಹೇಳುವುದಿಲ್ಲ ನಾನು, ಏಕೆಂದರೆ
ಯಾರೂ ಎಂದೂ ಕಂಡು ಹಿಡಿಯಲ್ಲ
ಯಾರೂ ಕಳೆಯದ ಬೀಗದಕೈಯನ್ನು,
ಮತ್ತೆ, ಕಾವ್ಯವು ನನ್ನ ಪೂರ್ವಿಕರ ಹಾಡು,
ಅದೊಂದು ಶೀತಕಾಲದ ದಿನ
ಅದು ಧಗಧಗಿಸುತ್ತಾ ಈ
ಆತ್ಮೀಯ ಅವಸಾನವನ್ನು ಆರಿಸುತ್ತದೆ.
ನೀರಿನ ಚೇತನಗಳು ಕರೆದೊಯ್ಯುತ್ತವೆ ನನ್ನನ್ನು
ಮೂಲ: The Spirits of Water Carry Me Off
ನನಗೆ ವಯಸ್ಸಾಗಿದೆ, ಮಲರುವ ಮರದಿಂದ ಬಂದಿರುವೆ ನಾನು
ಬಾನಂಚಿನತ್ತ ನೋಡುವೆ ನಾನು
ಎಷ್ಟು ಮಾರುತಗಳ ಮೆಟ್ಟಿ ಬಂದಿರುವೆ ನಾನು?
ತಿಳಿದಿಲ್ಲ ನನಗೆ
ಕಡಲಿನ ಆಚೆಕಡೆಯಿಂದ ಮುಳುಗುವ ಸೂರ್ಯ
ಈಗಾಗಲೇ ತನ್ನ ಓಲೆಕಾರರನ್ನು ರವಾನಿಸಿದ್ದಾನೆ
ನಾನು ತೆರಳುತ್ತಿದ್ದೇನೆ
ನನ್ನ ಪೂರ್ವಜರನ್ನು ಭೇಟಿಯಾಗಲು
ನಾವು ಹೋಗುವುದು ನೀಲ ತಾಣಕ್ಕೆ
ನೀರಿನ ಚೇತನಗಳು ಕರೆದೊಯ್ಯುತ್ತವೆ ನನ್ನನ್ನು
ಹೆಜ್ಜೆಯ ಮೇಲೊಂದು ಹೆಜ್ಜೆಯನ್ನಿಡುತ್ತಾ
Wenulewfv / ‘ಆಕಾಶದ ನದಿ’
ಒಂದು ಚಿಕ್ಕ ವರ್ತುಲವಷ್ಟೇ
ಈ ಬ್ರಹ್ಮಾಂಡದಲ್ಲಿ
ಈ ಕನಸಿನಲ್ಲೇ ನಾನುಳಿಯುವೆ:
ಅಂಬಿಗರೇ, ಹುಟ್ಟು ಚಲಾಯಿಸಿ! ಮೌನದಲಿ
ದೂರ ಸರಿಯುವೆ ನಾನು
ಅದೃಶ್ಯ ಜೀವಗಾನದಲ್ಲಿ.
ಮೂಡಣದ ಮಳೆನೀರು ನನ್ನ ಕನಸುಗಳಲ್ಲಿ ಹಾಡಿದಾಗ
ಮೂಲ: When the Waters of the East Sing in My Dreams
ಒಣಗಿದ ಹುಲ್ಲು ನಾನು
ಮಳೆಯನ್ನು ನೋಡಿ ಕೈಬೀಸುವೆನು,
ಅಷ್ಟರಲ್ಲೆ ಮೊದಲ ಹನಿಗಳು
ಬಯಲ ಮೇಲೆ ಬೀಳುವುದ ಅನುಭವಿಸುವೆನು.
ಈ ನೀರು ನನ್ನನ್ನು ತೋಯಿಸಲಿ!
ನಾ ಹೇಳುವೆ,
ಹೂಗಳ ಸಂಗ ನಲಿಯುವಾಗ.
ನಾನೆಚ್ಚೆತ್ತಾಗ ಮೇಲೇರುವೆ ನಾನು
ಲ್ಯಾವೆಂಡರ್ ಹೂವಿನ ಪರಿಮಳದಿಂದ
ಸ್ಪರ್ಶಿತನಾಗಿ ಆಧೃತನಾಗಿ.
ಈಗಲೂ ಈ ಕಣಿವೆಯ ಕನಸು ಕಾಣಲು ಬಯಸುವೆ
ಮೂಲ: I Still Wish to Dream of this Valley
ಮಳೆಯು ಅವನ ಗಾಳಿಯ ತಂತಿಗಳನ್ನು ಸ್ಪರ್ಶಿಸುತ್ತದೆ,
ಮೇಲೆ ಆಗಸದಲ್ಲಿ, ಫಲವಂತಿಕೆಯ ಧ್ವನಿಯನ್ನು
ಉಸುರುವ ಮೇಳವಾಗಿರುತ್ತಾನೆ ಅವನು,
ಹಲವಾರು ಪ್ರಾಣಿಗಳಿದ್ದವು, ಅವನನ್ನುತ್ತಾನೆ,
ಕಾನನಗಳು, ಕೆರೆಗಳು, ಹಕ್ಕಿಗಳು, ಚೆನ್ನುಡಿಗಳು.
ಕಣ್ಮುಚ್ಚಿಕೊಂಡು ನಡೆಯುವೆ ನಾನು:
ನೋಡುವೆ ನಾನು, ನನ್ನೊಳಗೆ, ಆ ಮುದುಕನನ್ನು,
ಚಿಟ್ಟೆಗಳ ಮರಳುವಿಕೆಯನ್ನು ಎದುರುನೋಡುತ್ತಾ
ತನ್ನ ಯೌವನದ ದಿನಗಳಲ್ಲಿ ವಾಸವಾಗಿರುತ್ತಾನೆ.
ನನಗೆ ವಯಸ್ಸೆಷ್ಟೆಂದು ಕೇಳದಿದ್ದರೆ
ನನಗೆ ಖುಷಿಯೆನಿಸುವುದು, ಅವನನ್ನುತ್ತಾನೆ,
ಇಲ್ಲದೇ ಇರುವುದನ್ನು ಪದಗಳಲ್ಲಿ ಯಾಕೆ ಹೇಳಬೇಕು?
ನೆನಪಿನ ಕಸುವಿನಲ್ಲಿ ಭೂಮಿ ನೆಲೆಸಿರುವುದು
ಹಾಗೂ ಅವಳೊಳಗೆ ನಮ್ಮ ಪೂರ್ವಜರ ರಕ್ತ.
ಅರ್ಥವಾಗುವುದೇ ನಿನಗೆ, ಅರ್ಥವಾಗುವುದೇ ನಿನಗೆ
ಯಾಕೆ, ಅವನು ಕೇಳುತ್ತಾನೆ, ಯಾಕೆ ನಾನು
ಈಗಲೂ ಈ ಕಣಿವೆಯ ಕನಸು ಕಾಣಲು ಬಯಸುವೆನೆಂದು?
ಏಕೆಂದರೆ ಹೆಸರಿಲ್ಲದಿರುವುರ ಬಲ ನಾನು
ಮೂಲ: Because I Am the Strength of the Unnamed
ಅರ್ಧಚಂದ್ರನನ್ನು ಕನಸಿನಲ್ಲಿ ಕಂಡಿರುವೆ ನಾನು,
ಹೇಳುತ್ತಾನವನು, ಮತ್ತು
ಹೊಲಗಳಲ್ಲಿ ನೇಗಿಲನ್ನು ನೆಡೆಸಿರುವೆ ನಾನು.
ಪದಗಳ ಮುನ್ನ, ಹೂವುಗಳ ಮುನ್ನ ಇದ್ದೆ ನಾನು
(ಮುಂದಕ್ಕೂ ಇರುವೆ).
ನನ್ನ ಪುತ್ರಿಯರಿಗಾಗಿ ಕಟ್ಟುವೆ ನಾನು
ಬೆಳ್ಳಿಯ ಮನೆಯೊಂದನ್ನು,
ನನ್ನ ಕೇಶವನ್ನು ಗಾಳಿಯಲ್ಲಿ ಹಾರಿಸುತ್ತಾ
ಕಾಮನಬಿಲ್ಲಿನ ಮೇಲೆ ಕುದುರೆ ಸವಾರಿ ಮಾಡುವಾಗ.
ಹರಿಯುವ ನೀರು ನಾನು.
ನಿದ್ರಿಸುವ ಕಡಲು ಹರಿಯುತ್ತೆ ನನ್ನೊಳಗೆ,
ಬೆಟ್ಟ ನಿದ್ರೆಯಿಂದೇಳುತ್ತೆ.
ಏಕೆಂದರೆ ಹೆಸರಿಲ್ಲದಿರುವುರ ಬಲ ನಾನು, ಹೇಳುತ್ತಾನವನು
ಸೂರ್ಯನ ಮುಕುಟವೆ: ಇದು ನಿನ್ನ ಗಾನ.
ನಿನ್ನನ್ನು ಗುಣಪಡಿಸಲು ಬಂದಿರುವೆ ನಾನು, *ಕಾನೇಲೊ ಮರ ಹೇಳಿತು
ಮೂಲ: I Came To Heal You, Spoke the Canelo
ನಿನ್ನನ್ನು ಗುಣಪಡಿಸಲು ಬಂದಿರುವೆ, ಹೇಳಿತು
ಆ ಪವಿತ್ರ ವೃಕ್ಷ
ಹೋಗು, ನನ್ನ ಎಲೆಗಳನ್ನ, ಬೀಜಗಳನ್ನ ಕಲೆಹಾಕು,
ಅವನು ಹೇಳುತ್ತಾನೆ ನನಗೆ
ಎಲ್ಲ ದಿಕ್ಕುಗಳಿಂದ ಬರುತ್ತಾರವರು
ನಿಮ್ಮ ಚೆನ್ನಾದ ಮಾಚಿ ಮಹಿಳೆಯರು
ನನ್ನ ಚೆನ್ನಾದ ಮಾಚಿ ಪುರುಷರು
ನಾಲ್ಕು ನೆಲಗಳಿಂದ
ನಾಲ್ಕು ಜಲಗಳಿಂದ
ಪ್ರಾರ್ಥಿಸುವೆವು ನಿಮಗಾಗಿ, ಹೇಳುವರವರು ನನಗೆ
ಅವನ ಕಸುವು
ನಿಮ್ಮ ನರಗಳಲ್ಲಿ, ನಿಮ್ಮ ಮೂಳೆಗಳಲ್ಲ
ನಿಮ್ಮ ನಾಳಗಳಲ್ಲಿವೆ,
ಅಥವಾ ಬಹುಶಃ ನೀವೇನಾದರೂ ನಮ್ಮ ಜನರನ್ನು
ಹಿಂಬಿಟ್ಟು ಹೋಗಲು ಬಯಸುವಿರೇನು?
ನನ್ನ ಪ್ರಾರ್ಥನೆಗಳನ್ನು ಕಳಿಸುವೆ ಮುಗಿಲಿಗೆ, ನಾನನ್ನುವೆ ಅವನಲ್ಲಿ
ಅಯ್ಯೋ, ನನ್ನ ಹೃದಯದ ಶಾಂತ ನದಿಗಳಿಂದ
ನನ್ನ ಆಲೋಚನೆಗಳು ದಿಕ್ಕುತಪ್ಪಿ ತೇಲಿಹೋಗಿವೆ:
ಇದು ‘ಪಾರದರ್ಶಕ ಕಲ್ಲು’ ಎಂದು ಹೇಳುವೆ ನಾನು, ಅಂತ ನೀನಂದೆ
ಊಹ! ಗೆನೆಚೆನ್*, ನಿನ್ನ ಉಸಿರನ್ನು ಕಳಿಸು
ಬಲವಾದ ಗಾಳಿಯ ನಿನ್ನ ನಿಶ್ವಾಸವನ್ನು ಕಳಿಸು
ಇವನು ಗಾಯಕನಾಗುತ್ತಾನೆ,
ಶಬ್ದದ ನೀಲಿ ಕುದುರೆಯನ್ನು ನನಗೆ ಕೊಡುತ್ತಾ ನೀನಂದೆ
ಅವನು ತನ್ನ ಕನಸುಗಳಲ್ಲಿ ಆಕಾಶದ ನಾಡಿನವರೆಗೂ ಹೋಗುವನು
ಅವನ ಶತ್ರುಗಳ ಓಲೆಕಾರನನ್ನು ಬೆಚ್ಚಳಿಸುತ್ತಾ
ಗಿಡಗಳ ಜೀವರಸದಿಂದ ಹಾಗೂ ಹೂವುಗಳಿಂದ
ನಾನು ಮಾತನಾಡಿದಾಗ ಅವನಿಗೆ ಕೇಳಿಸುತ್ತೆ,
ಅಂತ ನೀನಂದೆ
ಆದರೆ ಹಿರಿಯ ಮಹಿಳೆಯರ ಹಾಗೂ ಹಿರಿಯ ಪುರುಷರ
ಉಪದೇಶಗಳನ್ನು ಮರೆತು ಹೋದೆ ನಾನು
ಅದಕ್ಕೆ ನಾನೀಗ ಅಸ್ವಸ್ಥನಾಗಿದ್ದೇನೆ
ನಿನ್ನ ಹೃದಯದ ಸೌಮ್ಯ ನದಿಗಳಿಂದ
ನನ್ನ ಆಲೋಚನೆಗಳು ದಾರಿತಪ್ಪಿ ಹೋದವು.
ನೋಡಿಲ್ಲಿ, ನಿನ್ನ ಎಲೆಗಳ ಮೇಲೆ ಏರಿದೆನೆಂದು
ಕನಸು ಕಾಣುತ್ತಿರುವೆ ನಾನು.
ಮುಂಜಾನೆಯ ‘ನೀಲಿ ನೀರ್ಬೀಳು’ ಬಂದು
ತನ್ನ ನೀರಿನಿಂದ ನನ್ನ ತುಟಿಗಳನ್ನು ತೇವಿಸಿದಳು.
ಏರಿದೆ ನಾನು, ಅವರೊಂದಿಗೇರಿದೆ ನಾನು, ಆದರೆ
ಮೀನುಗಳ ಗುಳುಗುಳಿಕೆಗಳು ನನ್ನನ್ನು ಗಟ್ಟಿಯಾಗಿ ಹಿಡಕೊಂಡವು.
ಕಾನನದ ಸುವಾಸನೆಯ ಮೇಲೆ ನಾನು ನಡೆದು ಹೋದೆ
ಆಮೇಲೆ ಕುಣಿದೆ ನಾನು.
ಅವನೊಳಗೆ ಜೋತಿದೆ ನನ್ನ ಬಲ.
ಚೆಂದರ್ಶನಗಳು ಹಾಗೂ ಚೆಂಕನಸುಗಳು ಅವನನ್ನು ಸುತ್ತುವರೆದವು
ಅತ್ತೆ ನಾನು,
ನನ್ನ ಕಾನೇಲೊದ ಚೇತನದ ತೆಕ್ಕೆಯಲ್ಲಿ ಅವಿತು ಅತ್ತೆ ನಾನು.
* ‘ಕಾನೇಲೊ’ ಅಥವಾ ‘ಫೊಯೆ’ (Foye) ಎಂಬುದು ಮಾಪುಚೆ (Mapuche) ಬುಡಕಟ್ಟು ಜನಾಂಗದವರ ಪವಿತ್ರ ಮರ.  ಈ ಮರವನ್ನು ಅವರು ‘ಒಳಿತು,’ ‘ಶಾಂತಿ’ ಮತ್ತು ‘ನ್ಯಾಯ’-ದ ಪರಿಕಲ್ಪನೆಗಳೊಂದಿಗೆ ಜೋಡಿಸುತ್ತಾರೆ.  ಇದನ್ನು ಹೆಚ್ಚಾಗಿ ವಿಶೇಷ ಕೂಟಗಳಲ್ಲಿ ನೆಡಲಾಗುತ್ತದೆ.  ಕಾನೇಲೊ ಮರ ಚಿಲಿ ಮತ್ತು ಆರ್ಜೆಂಟೀನಾದ ಮೆಗೆಲ್ಲಾನಿಕ್ ಮತ್ತು ವಾಲ್ಡಿವಿಯನ್ ಸಮಶೀತೋಷ್ಣ ಕಾಡುಗಳಿಗೆ (Magellanic and Valdivian temperate forests) ಸ್ಥಳೀಯವಾಗಿದ್ದು, ಅಲ್ಲಿನ ಕರಾವಳಿಯ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮುಖ್ಯ ಮರವಾಗಿದೆ. ಮಾಪುಚೆ ಜನಾಂಗದವರ ಸ್ಥಳೀಯ ಧರ್ಮದ ಪುರೋಹಿತರನ್ನು ‘ಫೊಯೆವೆಯ್’ ಅಥವಾ ‘ಬೊಕ್ವಿಬುಯೆ,’ (foyeweye or boquibuye) ಅಂದರೆ “ಫೊಯೆ ಮರದ ಸೇವಕ” ಎಂದು ಕರೆಯಲಾಗುತ್ತದೆ.
* ‘ಗೆನೆಚೆನ್’ – ಮಾಪುಚೆ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಧರ್ಮದ ಬಹು ಮುಖ್ಯ ‘ನ್ಗೆನ್’ (Ngen) ದೈವ, ಹಾಗೂ ಮಾಪುಚೆ ಜನರ ಈಗಿನ ನಂಬಿಕೆಗಳ ಪ್ರಮುಖ ದೇವತೆ.  ಮೂಲತಃ ‘ಗೆನೆಚೆನ್’ ಮಾಪುಚೆ ಜನರ ಒಂದು ‘ನ್ಗೆನ್ ದೈವ’ ಮಾತ್ರವಾಗಿದ್ದು, ಅವರ ಸೃಷ್ಟಿಕರ್ತ ದೇವರಾಗಿರಲಿಲ್ಲ.  ಆದರೆ ನಂತರ ಬಂದ ಕ್ಯಾಥಲಿಕ್ ಧರ್ಮದ ಜತೆಗಿನ ಸಂಕರದ ಫಲವಾಗಿ ಹಾಗೂ ‘ಅಬ್ರಹಾಮಿಕ್’ ಧರ್ಮಗಳ ಏಕದೇವತಾವಾದಿ ನಂಬಿಕೆಗಳಂತೆ ‘ಗೆನೆಚೆನ್’ ಈಗ ಮಾಪುಚೆ ಜನರ ‘ಸರ್ವೋಚ್ಚ ದೇವರು’ ಸಹ ಆಗಿದ್ದಾರೆ.
ಸಾಗುತ್ತವೆ ಹೀಗೆ ನನ್ನ ಕನಸುಗಳು, ನನ್ನ ಕಾಣ್ಮೆಗಳು
ಮೂಲ: And So My Dreams, My Visions Pass
ಪದಗಳೆಂದರೆ ‘ಕೂಲ್‌ಟ್ರೂನ್’* ದುಡಿಯ ಸದ್ದಿನ ಹಾಗೆ,
ಎಂದು ಜ್ಞಾನದ ನಿಗೂಢ ತೊಟ್ಟಿಲಲ್ಲಿ ತೂಗುತ್ತಾ
ಹೇಳುತ್ತಾರೆ ನನಗೆ ನನ್ನ ಪೂರ್ವಜರು.
ಎಂದೇ, ನಿನ್ನ ಅಲಂಕೃತ ನುಡಿಗಳಿಂದ
ಗೆಳೆಯರೊಂದಿಗೆ ಮಾತಾಡುವೆ ನೀನು,
‘ವಿಂಕಾ’-ರೊಂದಿಗೆ* ಸಂಧಿ ಮಾಡಲು ಹೋಗುವೆ ನೀನು.
ಕಾಮನಬಿಲ್ಲಿನ ಮೇಲೆ ಕೂತು ಲೋಕವ ಸುತ್ತುವೆ ನಾನು,
ಗಾಳಿಯ ನಾಲ್ಕೂ ನಾಯಕರು ಬರುವರು ನನ್ನ ಜತೆ.
ಬಹುಶಃ ಮೋಡಗಳಲ್ಲಿ ಶತ್ರುಗಳ ಜತೆ
ಯುದ್ಧ ಮಾಡಬೇಕಾಗಬಹುದು,
ಪಯಣಿಸುತ್ತಾ ಯೋಚಿಸುವೆ ನಾನು.
ಬಹುಶಃ ಒಂದಾನೊಂದು ದಿನ ರಕ್ತದಲ್ಲಿ
ರಂಗಿಸುವೆ ನನ್ನ ಜನರ ಪಥಗಳನ್ನು ನಾನು.
* ‘ಕೂಲ್‌ಟ್ರೂನ್’ (Cultrun) – ಮಾಪುಚೆ ಜನಾಂದವರ ಸಾಂಪ್ರಾಯಿಕ ಆಚರಣೆಗಳಲ್ಲಿ ಬಳಸುವ ಒಂದು ದುಡಿ, ಹಾಗೂ ಮಾಪುಚೆ ಸಂಸ್ಕೃತಿಯ ಅತ್ಯಂತ ಪ್ರಮುಖ ಸಂಗೀತ ವಾದ್ಯ. ಇದನ್ನು ಮಾಪುಚೆ ಜನರ ‘ಮಾಚಿ’-ಯವರು (machi – ವೈದ್ಯರು ಅಥವಾ ಮಾಂತ್ರಿಕರು) ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಿಗಾಗಿ ಬಳಸುತ್ತಾರೆ.  ಈ ದುಡಿಗೆ ಸರಿಸುಮಾರು 35 ರಿಂದ 40 ಸೆಂಟಿಮೀಟರ್ ವ್ಯಾಸವಿದ್ದು, 12 ರಿಂದ 15 ಸೆಂಟಿಮೀಟರ್-ರಷ್ಟು ಉದ್ದವಾಗಿರುತ್ತೆ.
* ಮಾಪುಚೆ ಭಾಷೆಯಲ್ಲಿ, ‘ವಿಂಕಾ’ ಎಂದರೆ ‘ವಿದೇಶಿ,’ ‘ಆಕ್ರಮಣಕಾರ,’ ಅಥವಾ ‘ವಸಾಹತುಶಾಹಿ’ ಎಂದರ್ಥ, ಮತ್ತು ಸ್ಥಳೀಯ ಮಾಪುಚೆಯವರು ಈ ಪದವನ್ನು ಮಾಪುಚೆ ಅಲ್ಲದ, ಬಿಳಿ ಚಿಲಿಯರು ಮತ್ತು ಅರ್ಜೆಂಟೀನಾದವರನ್ನು ಉಲ್ಲೇಖಿಸಲು ಬಳಸುತ್ತಾರೆ.  ಈ ಪದ ‘ಇನ್ಕಾ’ (Inca) ಆಕ್ರಮಣಕಾರರನ್ನು ಹಾಗೂ ನಂತರ ಇವರನ್ನು ತಮ್ಮ ವಶಕ್ಕೆ ತೆಗೆದುಕೊಂಡ ಹೊಸ ಸ್ಪ್ಯಾನಿಷ್ ಆಕ್ರಮಣಕಾರರನ್ನು ಉಲ್ಲೇಖಿಸುತ್ತದೆ.

About The Author

ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ