Advertisement
“ಜಿನ್ನ್‌ ಮತ್ತು ಪರ್ಷಿಯನ್‌ ಕ್ಯಾಟ್‌” ಕಥೆಗಳು….

“ಜಿನ್ನ್‌ ಮತ್ತು ಪರ್ಷಿಯನ್‌ ಕ್ಯಾಟ್‌” ಕಥೆಗಳು….

ಈ ಕಥೆಗಳ ಗಮನ ಸೆಳೆಯುವ ಇನ್ನೂ ಕೆಲವು ಅಂಶಗಳೆಂದರೆ, ನಾಟಕೀಯತೆ, ಕಥಾವರಣದಲ್ಲಿ ಬಿಚ್ಚಿಕೊಳ್ಳುವ ಒಂದು ಬಗೆಯ ನಿಗೂಢತೆ ಮತ್ತು ಜನಪ್ರಿಯ ಕಥನ ಪರಂಪರೆಯಿಂದ ಪಡೆದ ಪ್ರಭಾವ. ಬೆಳೆಯುತ್ತಿರುವ ಲೇಖಕನೊಬ್ಬನಿಗೆ ಯಾವ ಅಂಶವೂ ವರ್ಜ್ಯವಲ್ಲ. ಮಾತ್ರವಲ್ಲ, ತನ್ನ ಕಥನ ಸಾಮರ್ಥ್ಯವನ್ನು ಕಂಡುಕೊಳ್ಳಲು ನಡೆಸುವ ಪ್ರಯೋಗ ಕೂಡ ಮುಖ್ಯ. ಮುನವ್ವರ್ ಅಂತಹ ಕಂಡುಕೊಳ್ಳುವಿಕೆಯ ಪ್ರಯತ್ನದಲ್ಲಿದ್ದಾರೆ.
ಮುನವ್ವರ್‌ ಜೋಗಿಬೆಟ್ಟು ಕಥಾಸಂಕಲನ “ಜಿನ್ನ್‌ ಮತ್ತು ಪರ್ಷಿಯನ್‌ ಕ್ಯಾಟ್‌”ಗೆ ಕೇಶವ ಮಳಗಿ ಬರೆದ ಪ್ರವೇಶಿಕೆ

ತಮ್ಮ ‘ಇಶ್ಖಿನ ಒರತೆಗಳು’ ಕವನ ಸಂಕಲನದಿಂದ ಕೆಲವು ಓದುಗರಿಗಾದರೂ ಪರಿಚಿತರಾದ ಮುನವ್ವರ್ ಜೋಗಿಬೆಟ್ಟು ಇದೀಗ ಹೊಸ ಕಥಾ ಸಂಕಲನದ ಮೂಲಕ ಓದುಗರನ್ನು ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದಾರೆ. ಕಥಾ ಓದುಗರಿಗೂ ಅವರೇನು ಅಪರಿಚಿತರಲ್ಲ. ಈ ಸಂಕಲನದ ಎಂಟೂ ಕಥೆಗಳು ಬೇರೆ ಬೇರೆಡೆ ಪ್ರಕಟವಾಗಿವೆ. ಸಂಕಲನದ ಉತ್ತಮ ಕಥೆಗಳಲ್ಲಿ ಒಂದಾದ ‘ಜಿನ್ನ್’ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದೆ.

(ಮುನವ್ವರ್‌ ಜೋಗಿಬೆಟ್ಟು)

ಕರಾವಳಿಯವರಾಗಿ, ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿ ಮುನವ್ವರ್ ಈ ಹಿಂದಿನ ಲೇಖಕರಂತೆ ತಮ್ಮ ಸಮುದಾಯಕ್ಕೆ ಸಂದ ಕಥೆಗಳನ್ನು ಮಾತ್ರ ಬರೆಯದೇ ಸಮಾಜದ ಬೇರೆ ಮಗ್ಗಲುಗಳನ್ನು ನೋಡುತ್ತಿರುವುದು ‘ಜಿನ್ನ್’ ಮತ್ತು ಇತರ ಕಥೆಗಳು ಸಂಕಲನದ ವಿಶಿಷ್ಟತೆಯಾಗಿದೆ. ಸಮುದಾಯದ ಸೂಕ್ಷ್ಮತೆಯನ್ನು ಸಂವೇದನಾಶೀಲರಾಗಿ ಹೇಳಬೇಕಾದ ಅಂತಹ ವಸ್ತುವನ್ನೂ ಜೋಗಿಬೆಟ್ಟು ಆಯ್ದುಕೊಂಡಿದ್ದಾರೆ.

ಈ ಕಥೆಗಳ ಗಮನ ಸೆಳೆಯುವ ಇನ್ನೂ ಕೆಲವು ಅಂಶಗಳೆಂದರೆ, ನಾಟಕೀಯತೆ, ಕಥಾವರಣದಲ್ಲಿ ಬಿಚ್ಚಿಕೊಳ್ಳುವ ಒಂದು ಬಗೆಯ ನಿಗೂಢತೆ ಮತ್ತು ಜನಪ್ರಿಯ ಕಥನ ಪರಂಪರೆಯಿಂದ ಪಡೆದ ಪ್ರಭಾವ. ಬೆಳೆಯುತ್ತಿರುವ ಲೇಖಕನೊಬ್ಬನಿಗೆ ಯಾವ ಅಂಶವೂ ವರ್ಜ್ಯವಲ್ಲ. ಮಾತ್ರವಲ್ಲ, ತನ್ನ ಕಥನ ಸಾಮರ್ಥ್ಯವನ್ನು ಕಂಡುಕೊಳ್ಳಲು ನಡೆಸುವ ಪ್ರಯೋಗ ಕೂಡ ಮುಖ್ಯ. ಮುನವ್ವರ್ ಅಂತಹ ಕಂಡುಕೊಳ್ಳುವಿಕೆಯ ಪ್ರಯತ್ನದಲ್ಲಿದ್ದಾರೆ.

(ಕೇಶವ ಮಳಗಿ)

ಪ್ರತಿ ಕಥೆಯಲ್ಲಿಯೂ ಪ್ರಾದೇಶಿಕ ವಿವರ, ಅಲ್ಲಿನ ಬದುಕಿಗೆ ಅಂಟಿಕೊಂಡ ವೃತ್ತಿ, ಮನುಷ್ಯ ಸ್ವಭಾವ, ಬಾಹ್ಯ ಪರಿಸರ ಎಲ್ಲವೂ ಕಥನ ಕಟ್ಟುವಿಕೆಗೆ ಸಹಕಾರಿಯಾಗಿವೆ. ಕಥಾ ವಿನ್ಯಾಸ ಹಾಗೂ ಶೈಲಿಗಳು ಕೂಡ ಮುನವ್ವರ್ ಅವರಿಗೆ ಜತೆಯಾಗಿವೆ. ಪ್ರತಿ ಕಥೆಯಲ್ಲಿ ತಾವು ಅಂದುಕೊಂಡಿದ್ದನ್ನು ನಾಟಕೀಯ ಅಂಶ ಮತ್ತು ಜನಪ್ರಿಯ ಕಥಾಹಂದರದ ಕ್ಲೈಮಾಕ್ಸ್ ತಂತ್ರಗಳಿಂದ ಅವರು ಸಾಧಿಸಲು ಪ್ರಯತ್ನಿಸಿದ್ದಾರೆ. ಆ ನಿಟ್ಟಿನಲ್ಲಿ ‘ಜಿನ್ನ್’ ಮತ್ತು ‘ಸೇತುವೆ’ ಕಥೆಗಳು ತಮ್ಮ ಪ್ರಯತ್ನದಲ್ಲಿ ಹೆಚ್ಚು ಯಶಸ್ಸನ್ನು ಸಾಧಿಸಿವೆ. ಉಳಿದ ಕಥೆಗಳು ನಿರೂಪಣೆ, ವಿವರ, ಶೈಲಿ ಇತ್ಯಾದಿಗಳಿಂದ ಗಮನಾರ್ಹವಾಗಿವೆ. ಇದ್ದರೂ, ಅಸಲಿ ಕಸುಬಿನ ಕಥೆಗಾರ ಮಂತ್ರ-ತಂತ್ರಕ್ಕಿಂತ ಕಲ್ಪನೆ, ಕನಸು, ಅನುಭವ, ಬದುಕು ಮತ್ತು ಮನುಷ್ಯರನ್ನು ನೋಡುವ ದೃಷ್ಟಿಕೋನದ ಮೇಲೆಯೇ ತನ್ನ ಭಾರವನ್ನು ಹಾಕಿ ಕಥೆಯನ್ನು ಮುನ್ನಡೆಸಬಲ್ಲ. ಇನ್ನೂ ತರುಣರಾಗಿರುವ ಮುನವ್ವರ್ ಅಂಥದ್ದರಲ್ಲಿ ಪಳಗುತ್ತಾರೆ. ಅದಕ್ಕೆ ಪುರಾವೆ ಈ ಸಂಕಲನದಲ್ಲೇ ಇದೆ. ಸಂಕಲನ ರೂಪದಲ್ಲಿ ಮತ್ತೊಮ್ಮೆ ಓದುಗರೆದುರು ಬರುತ್ತಿರುವ ಈ ಕಥೆಗಳನ್ನು ಓದುಗರು ಉತ್ಸಾಹದಿಂದ ಎದುರುಗೊಳ್ಳಲಿ.

(ಕೃತಿ: ಜಿನ್ನ್‌ ಮತ್ತು ಪರ್ಷಿಯನ್‌ ಕ್ಯಾಟ್‌ (ಕಥಾಸಂಕಲನ), ಲೇಖಕರು: ಮುನವ್ವರ್‌ ಜೋಗಿಬೆಟ್ಟು, ಪ್ರಕಾಶಕರು: ಕಾನ್ಕೇವ್‌ ಮಾಧ್ಯಮ ಮತ್ತು ಪ್ರಕಾಶನ, ಬೆಲೆ: 120/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ