Advertisement
ಜೀವಂತಿಕೆ ಒಸರುವ ಕವಿತೆಗಳು: ಸ್ಮಿತಾ ಅಮೃತರಾಜ್ ಬರಹ

ಜೀವಂತಿಕೆ ಒಸರುವ ಕವಿತೆಗಳು: ಸ್ಮಿತಾ ಅಮೃತರಾಜ್ ಬರಹ

ನಾವು ಬದುಕುವ ರೀತಿ ನೀತಿ‌ ನಮ್ಮ ಪ್ರತಿಷ್ಟೆ ಪರಾಕಾಷ್ಟೆಗಳು ಅದೆಷ್ಟಿದ್ದರೂ ನಾವೆಲ್ಲರೂ ಮನುಷ್ಯರು.  ಆಳದಲ್ಲಿ ನಾವೆಲ್ಲರೂ ಅನುಭವಿಸುವ ಭಾವಗಳು ಒಂದೇ. ನಾನಾ ಸ್ತರಗಳಲ್ಲಿ‌ ಪ್ರಕಟಗೊಳ್ಳುವ ನಮ್ಮ  ನೋವು ನಲಿವು ಗೆಲುವು ಸೋಲು ಅಪಮಾನ ಎಲ್ಲವೂ ಇಲ್ಲಿ ಕವಿತೆಯಾಗಿ ನಿಸೂರಾಗುತ್ತವೆ. ನಾಗರೇಖಾ ತನ್ನದೇ ರೀತಿಯಲ್ಲಿ ಕವಿತೆ ಕಟ್ಟುವ ಕೌಶಲ್ಯವನ್ನು‌‌ ಸಿದ್ಧಿಸಿಕೊಂಡಿದ್ದಾರೆ. ತಾನು ಬದುಕಿದ, ತಾನು ಕಾಣುವ ಸುತ್ತ ಮುತ್ತಲಿನ ಸಹಜ ಸಂಗತಿಗಳನ್ನು ಕವಿತೆಯ ಮೂಲಕ‌ ತರುತ್ತಾ ಅದನ್ನು ಮತ್ಯಾವುದೋ‌ ಸಂದರ್ಭಕ್ಕೆ, ಸಂಗತಿಗಳಿಗೆ ಕೊಂಡಿ ಕೂಡಿಸುತ್ತಾರೆ. ಒಂದು ವಸ್ತುವನ್ನು ತೆರೆದಿಡುತ್ತಾ ಮತ್ಯಾವುದೋ ಹೊಳಹನ್ನು ಕಾಣಿಸುವುದು ನಾಗರೇಖರ ಕವಿತೆ ವೈಶಿಷ್ಟ್ಯತೆ.
ನಾಗರೇಖಾ ಗಾಂವಕರ ಕವನ ಸಂಕಲನ “ಪಾದಕ್ಕೊಂದು ಕಣ್ಣು” ಕುರಿತು ಸ್ಮಿತಾ ಅಮೃತರಾಜ್‌ ಬರಹ

ಯಾವುದೋ ಊರಿನ ಒಂದು ಹಳ್ಳಿ ಮೂಲೆಯಲ್ಲಿರುವ ನಾನು ಮತ್ಯಾವುದೋ ದೂರದ ದಾಂಡೇಲಿಯಲ್ಲಿರುವ ಉಪನ್ಯಾಸಕಿ ನಾಗರೇಖಾ ಹೀಗೆ ಆಪ್ತರಾಗಬೇಕೆಂದರೆ ಇದು ಕವಿತೆಯ ಸಾಧ್ಯತೆ.

ನಾಗರೇಖರ ಕವಿತೆಗಳನ್ನು ಓದುತ್ತಾ ಬಂದವಳು ನಾನು. ಆಂಗ್ಲ ಉಪನ್ಯಾಸಕಿಯಾಗಿರುವ ನಾಗರೇಖ ಜಟಿಲವಾಗಿ ಅರ್ಥ ಮಾಡಿಕೊಳ್ಳಲು ತಿಣುಕಾಡಬೇಕಾದ ರೀತಿಯಲ್ಲಿ ಬರೆಯುತ್ತಾರೆ ಅನ್ನುವ ಗುಮಾನಿಯಲ್ಲೇ ಓದತೊಡಗಿದ್ದೆ. ನನ್ನ ನಿರೀಕ್ಷೆಯನ್ನು ಸುಳ್ಳಾಗಿಸುವಂತೆ ತೀರಾ ಸಹಜವಾಗಿ ಸರಳವಾಗಿ ಯಾವುದೇ ಬೌಧಿಕ ಕಸರತ್ತುಗಳಿಲ್ಲದೆ ತನ್ನ‌ ಸುತ್ತಮುತ್ತಲಿನ ಸಂಗತಿಗಳ ಮೂಲಕವೇ ಹೊಸತೊಂದು ಲೋಕವನ್ನು ತೆರೆದು ತೋರಿಸುವ ಅವರ ಕವಿತೆಗಳು ಇಷ್ಟವಾಗುತ್ತಾ ಹೋದವು.

ಕವಿತೆ ಯಾವಾಗ ಅರ್ಥಪೂರ್ಣವಾಗುತ್ತದೆಯೆಂದರೆ ಅದು ಓದುಗರನ್ನು ತಕ್ಷಣವೇ ಅವರದೇ ಬದುಕಿನೊಳಗೆ ತಳ್ಳಿ ಬಿಡುವಾಗ. ನಮ್ಮೆಲ್ಲರ ಬದುಕಿನ ಬಿಂಬಗಳೇ ಅಲ್ಲಿ ಪ್ರತಿಫಲನಗೊಳ್ಳುವ ಕಾರಣ ಇಲ್ಲಿಯ ಕವಿತೆಗಳು ನಮ್ಮವು ಅನ್ನಿಸತೊಡಗುತ್ತವೆ.

ನಾವು ಬದುಕುವ ರೀತಿ ನೀತಿ‌ ನಮ್ಮ ಪ್ರತಿಷ್ಟೆ ಪರಾಕಾಷ್ಟೆಗಳು ಅದೆಷ್ಟಿದ್ದರೂ ನಾವೆಲ್ಲರೂ ಮನುಷ್ಯರು.  ಆಳದಲ್ಲಿ ನಾವೆಲ್ಲರೂ ಅನುಭವಿಸುವ ಭಾವಗಳು ಒಂದೇ. ನಾನಾ ಸ್ತರಗಳಲ್ಲಿ‌ ಪ್ರಕಟಗೊಳ್ಳುವ ನಮ್ಮ  ನೋವು ನಲಿವು ಗೆಲುವು ಸೋಲು ಅಪಮಾನ ಎಲ್ಲವೂ ಇಲ್ಲಿ ಕವಿತೆಯಾಗಿ ನಿಸೂರಾಗುತ್ತವೆ.

(ನಾಗರೇಖಾ ಗಾಂವಕರ)

ನಾಗರೇಖಾ ತನ್ನದೇ ರೀತಿಯಲ್ಲಿ ಕವಿತೆ ಕಟ್ಟುವ ಕೌಶಲ್ಯವನ್ನು‌‌ ಸಿದ್ಧಿಸಿಕೊಂಡಿದ್ದಾರೆ. ತಾನು ಬದುಕಿದ, ತಾನು ಕಾಣುವ ಸುತ್ತ ಮುತ್ತಲಿನ ಸಹಜ ಸಂಗತಿಗಳನ್ನು ಕವಿತೆಯ ಮೂಲಕ‌ ತರುತ್ತಾ ಅದನ್ನು ಮತ್ಯಾವುದೋ‌ ಸಂದರ್ಭಕ್ಕೆ, ಸಂಗತಿಗಳಿಗೆ ಕೊಂಡಿ ಕೂಡಿಸುತ್ತಾರೆ. ಒಂದು ವಸ್ತುವನ್ನು ತೆರೆದಿಡುತ್ತಾ ಮತ್ಯಾವುದೋ ಹೊಳಹನ್ನು ಕಾಣಿಸುವುದು ನಾಗರೇಖರ ಕವಿತೆ ವೈಶಿಷ್ಟ್ಯತೆ.

ಒಂದು ನವಿರು ಮೃದು ಹೂವನ್ನು ಕಿತ್ತು ಬಿಡಬಹುದು. ಆದರೆ ನಿಜಕ್ಕೂ ಅದು ಅಷ್ಟು ಸುಲಭವಲ್ಲ ಅನ್ನುವುದು ಈ ಕವಿತೆ ಮತ್ತೊಂದು ಮಗ್ಗುಲಿಗೆ ಹೊರಳಿಕೊಂಡಾಗಲೇ  ಗೊತ್ತಾಗುವುದು.

‘ಹೂ ಕೊಯ್ಯುವುದು ಸುಲಭವಲ್ಲ’

ಅನ್ನುವ ‌ಈ ಕವಿತೆ ಶುರುವಾದಾಗ ನಮ್ಮ ಕಣ್ಣಿಗೆ ಕಾಣಿಸುವ ಹೂ ಕೊಯ್ಯುವ ಸಂಗತಿಯೇ ಬೇರೆ

ಕವಿತೆಯ ಕೊನೇಯಲ್ಲಿ ಕಾಣಿಸುವ ಹೂವೇ ಬೇರೆ.

ಎದೆಯ ಗರ್ಭದೊಳಗೆ ಮಾಲೆ ಕಟ್ಟಲು ಬೇಕಾದ ಹೂವು ಕೊಯ್ಯುವುದು ನಿಜಕ್ಕೂ ಅಷ್ಟು ಸುಲಭವಲ್ಲ ಅನ್ನುವುದು ನಮ್ಮನ್ನು ಆಧ್ಯಾತ್ಮಿಕ ನೆಲೆಗೆ ಕೊಂಡೊಯ್ಯಬಲ್ಲದು..

ಗಿಡದ ಹೂವೊಂದು ತಿಳಿವಿನ, ಅರಿವಿನ ಹೂವಾದಾಗ ಅದನ್ನು ಕೊಯ್ಯುವುದು ಸುಲಭ ಸಾಧ್ಯವಲ್ಲ.

ಮತ್ತೆ ಮತ್ತೆ ಓದಿದ ನನ್ನ ಇಷ್ಟದ ಕವಿತೆಗಳಲ್ಲಿ ಈ ಕವಿತೆಯೂ ಒಂದು.

ಹೆಣ್ಣಿನ ಅಂತರಾಳದ ಒಳತುಡಿತಗಳು, ಹೆಣ್ಣೊಬ್ಬಳು ಅನುಭವಿಸುವ ಸಂಕಟಗಳು, ಪುರುಷ ಪ್ರಧಾನ ಸಮಾಜದಲ್ಲಿ ತಾನು ಪರಕೀಯಳಾಗಿಯೇ ಉಳಿದುಬಿಡುವ ದಂದ್ವಗಳು ಇಲ್ಲಿ ಬಹು ನಾಜೂಕಾಗಿ ಕಟ್ಟಿ ಕೊಡುತ್ತಾರೆ.

ಪುರುಷನ ಅಹಂಗೆ ಸವಾಲೆಸೆಯುವ ಎದೆಗಾರಿಕೆಯನ್ನು ‘ಹುಡುಕಿ ಕೊಡುʼ ಕವಿತೆಯಲ್ಲಿ ಕಾಣಬಹುದು.

‘ಅವಳಿಲ್ಲದೆ ಜಗದ ಬೆಳಕಿಗೆ
ಕಣ್ಣು ತೆರೆದವನ ಹುಡುಕಿ ಸೋತಿದ್ದೇನೆ’

ಅನ್ನುವ ಸಾಲುಗಳು ಇಡೀ ಸ್ತ್ರೀ ಕುಲದ ಅಸ್ಮಿತೆಯ ಗುರುತಿನಂತೆ ಕಾಣುತ್ತದೆ.

ಹಾಗೆಯೇ ‘ಕುಲ ಧರ್ಮಪತ್ನಿʼ ಕವಿತೆಯ ಮೂಲಕ ಹೆಣ್ಣೊಬ್ಬಳು ಗಂಡನ‌‌ ಸಹಚಾರಿಣಿಯಾಗಿ  ಸಹಧರ್ಮಿಣಿಯಾಗಿ ಎಲ್ಲಾ ರೀತಿಯಲ್ಲೂ ಗಂಡನಿಗೆ ತಕ್ಕುದಾಗಿ ಒಪ್ಪವಾಗಿ ಬಾಳ್ವೆ ಮಾಡಿದ ಮೇಲೂ  ಅವಳು  ಪರಕೀಯಳಾಗಿಯೇ ಉಳಿದು ಬಿಡುವ ಸಂದಿಗ್ಧತೆಯನ್ನು  ತೆರೆದಿಡುತ್ತಾರೆ.

ಧರ್ಮಕ್ಕೆ ಸಿಕ್ಕಬಹುದಾದ ವಸ್ತುಗಳ ಪಟ್ಟಿಯಲ್ಲಿ ಅಷ್ಟೇ ಪತ್ನಿಯ ಹೆಸರಿಟ್ಟು ಮೆರೆದದವನ ಬಗ್ಗೆ ಆಕೆ ಎಳ್ಳಷ್ಟೂ ಆಕ್ರೋಶವಿಲ್ಲ. ಕೇವಲ ಗಂಡನಾದವನ ಬಗ್ಗೆ ನನಗೆ ಮರುಕವಿದೆ….

ಇವಿಷ್ಟೇ ಸಾಕು.

ಈ ಮರುಕ ಹೆಣ್ಣೊಬ್ಬಳ ಶಕ್ತಿಯೂ ಆಗುವಂತೆ ಬದಲಾಗಬಲ್ಲದು.

‘ಮೆನಪೋಸು’ ಕವಿತೆ ಹೆಣ್ಣಿನ ತಳಮಳಗಳನ್ನು ಪ್ರತಿಧ್ವನಿಸುತ್ತದೆ.

ನಾಗರೇಖಾರ ಕವಿತೆಗಳು ಬದುಕಿನ ತಾತ್ವಿಕತೆಯನ್ನು ತರಗೆಲೆ, ಹುಡುಕುವುದ ಕಲಿತ ದಿನದಿಂದ, ಮರದ ಕುರಿತು, ಪ್ರಮಾದಗಳು, ನೆರಳು… ಮುಂತಾದ  ಕವಿತೆಗಳ ಮೂಲಕ ಕಾಣಿಸುತ್ತಾರೆ.

ಕೃಷಿ ಬದುಕು ಹಾಗು ಆಧುನಿಕತೆಗಳು ಮೂಲಕ ಸಹಜತೆ ಮತ್ತು ಸೋಗಿನ ಬದುಕು ಮತ್ತೆ ಮತ್ತೆ ಇಲ್ಲಿ ಬಂದು ಹೋಗುವುದನ್ನು  ‘ಅಂದಿಗೂ ಇಂದಿಗೂ’, ‘ಬೆರ್ಚಪ್ಪಗಳು’ ಕವಿತೆಯಲ್ಲಿ ನಾವು ಕಾಣಬಹುದು.

ಒಂದು ಕಾಲದಲ್ಲಿ ಹೀಗೆಲ್ಲ ಇತ್ತು ಅನ್ನುವುದನ್ನು ಈ ಕಾಲಘಟ್ಟದಲ್ಲಿ ನಿಂತು ನೋಡಿದರೆ ನಂಬಲು ಸಾಧ್ಯವೇ ಇಲ್ಲ ಅನ್ನುವ ಸಾಲುಗಳಲ್ಲಿ ವಿಷಾದವಿದೆ. ಜೊತೆಗೆ ಬದಲಾವಣೆ ಹೇಗೆ ಎಲ್ಲವನ್ನೂ ಕುರುಹೇ ಇಲ್ಲದಂತೆ ಅಳಿಸಿ ಹಾಕಿತು ಅನ್ನುವ ಭಾವ ಅರೆಕ್ಷಣ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ.

‘ಹುಡುಕುವುದ ಕಲಿತ ದಿನದಿಂದ’ ಕವಿತೆಯಲ್ಲಿ, ನಾವು ಎಷ್ಟೇ ಸಂವೇದನಾಶೀಲರು ಅಂದುಕೊಂಡರೂ ನಾವೂ ಅಸೂಕ್ಷ್ಮರಾಗುತ್ತಾ ಹೋಗುತ್ತಿದ್ದೇವೆ ಅನ್ನುವುದನ್ನ

‘ದೇಸಿಯ ಸೋಗಿನಲ್ಲಿ
ವಿದೇಶಿ ಭಂಡಾರವನ್ನೇ ಹೊತ್ತು ಮೆರೆಯುತ್ತಿದ್ದೇನೆ’
ಅನ್ನುವ ಸಾಲುಗಳು ಕಟ್ಟಿಕೊಡುತ್ತವೆ.

ಹಿಂದೆ ಬೇಲಿಗಳು ನಮ್ಮ ನಡುವೆ ಇದ್ದರೂ ಅದು ನಮ್ಮ ಜೀವಂತಿಯನ್ನ ಹೊಸಕಿ ಹಾಕುತ್ತಿರಲಿಲ್ಲ. ಗೂಟದ ಬೇಲಿ ಇದ್ದಾಗ ಬಳ್ಳಿ ಹಬ್ಬಿ ಹಸಿರು ಉಕ್ಕುತ್ತಿತ್ತು. ಈಗ ತಂತಿ ಬೇಲಿ ಬಂದ ಮೇಲೆ ಬಳ್ಳಿಯೂ ಹಬ್ಬದಂತೆ ಆಗಿದೆ. ನಾವು ದಿನೇ ದಿನೇ ಎಷ್ಟು ನಿರ್ಭಾವುಕರಾಗಿದ್ದೇವೆ ಅನ್ನುವುದನ್ನ ‘ಬೇಲಿ’ ಕವಿತೆ ತೆರೆದಿಡುತ್ತದೆ.

ಕೇಳಿಸುವ ಕಿವಿ ಕಾಣಿಸುವ ಕಣ್ಣು ಮುಚ್ಚಿ ಒಳಗಿವಿ, ಒಳಕಣ್ಣು ತೆರೆದುಕೂತಾಗಲೇ ಮೌನರಾಗಗಳನ್ನು ಆಲಿಸಲು ಸಾಧ್ಯವಾಗುವುದು. ಅಂತಹ ರಾಗಗಳು ಎದೆಗಿಳಿದಾಗಲೇ ನಾಗರೇಖರ ಈ ಕವಿತೆಗಳು ಎಣ್ಣೆ ಇಲ್ಲದೇ ದೀಪ ಉರಿಯುವ ಸೋಜಿಗಕ್ಕೆ ತೆರೆದುಕೊಳ್ಳುವುದು ಮತ್ತು ಪಾದಕ್ಕೂ ಕಣ್ಣು ಅಂಟಿಸಿಕೊಂಡು ನಡೆಯಲು ಸಾಧ್ಯವಾಗುವುದು.

ಈ ಬರಹಗಳಲ್ಲಿ ಒಂದು ಹೃದಯದ ಧ್ವನಿಯಿದೆ. ಅದು ನಮ್ಮೊಳಗನ್ನ ತಾಕುತ್ತದೆ.  ಧಾವಂತದ ಬದುಕಿನಲ್ಲಿ  ನಾವು ಮರೆಯುವ ಅತಿ ಸಣ್ಣ, ಆದರೆ ಅತಿ ಮುಖ್ಯವಾದ ಅನುಭವಗಳನ್ನು ಕವಯತ್ರಿ ಎತ್ತಿ ತೋರಿಸುತ್ತಾರೆ. ಜೀವಂತಿಕೆಯನ್ನು ಒಸರುವ ಇಲ್ಲಿಯ ಕವಿತೆಗಳು ಎಲ್ಲರಿಗೂ ಇಷ್ಟವಾಗಬಲ್ಲದು. ಒಳ್ಳೆಯ ಸಂಕಲನಕ್ಕಾಗಿ ನಾಗರೇಖರಿಗೆ ಅಭಿನಂದನೆಗಳು.

(ಕೃತಿ: ಪಾದಕ್ಕೊಂದು ಕಣ್ಣು  (ಕವನ ಸಂಕಲನ), ಲೇಖಕರು: ನಾಗರೇಖಾ ಗಾಂವಕರ, ಪ್ರಕಾಶಕರು: ಸಾಹಿತ್ಯಲೋಕ ಪಬ್ಲೀಕೇಷನ್ಸ್, ಬೆಂಗಳೂರು (9036877391), ಬೆಲೆ: 130/-)

About The Author

ಸ್ಮಿತಾ ಅಮೃತರಾಜ್ ಸಂಪಾಜೆ

ಸ್ಮಿತಾ ಅಮೃತರಾಜ್ ಕೊಡಗಿನ ಸಂಪಾಜೆ ಬಳಿಯ ಚೆಂಬುವಿನ ನಿವಾಸಿ.  ಗೃಹಿಣಿ, ಕೃಷಿಕ ಮಹಿಳೆ. 'ಕಾಲ ಕಾಯುವುದಿಲ್ಲ', 'ತುಟಿಯಂಚಿನಲ್ಲಿ ಉಲಿದ ಕವಿತೆಗಳು' ಸೇರಿದಂತೆ ಮೂರು ಕವನ ಸಂಕಲನ ಹಾಗೂ ಮೂರು ಲಲಿತ ಪ್ರಬಂಧಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ