ಒಂದು ನಂಬರಿನ ಸೋಮಾರಿ. ಇವಳು ಸ್ವಲ್ಪ ಕೈಕಾಲುಗಳನ್ನ ಅಲುಗಾಡಿಸಿಕೊಂಡಿರಲಿ ಎಂದು ಡ್ಯಾಡಿ ಕೆಲಸದವರನ್ನು ಇಟ್ಟುಕೊಂಡಿರಲಿಲ್ಲ. ಆದರೆ ಮಾಡಿಟ್ಟದ್ದನ್ನುಣ್ಣುವ ಇವಳ ಗೀಳು ಬಿಡದು. ಅನ್ನ ಮತ್ತು ಮೀನುಸಾರು ಹೇಗೇಗೋ ಮಾಡಿಟ್ಟಿರುತ್ತಾಳೆ. ಅಡುಗೆಮನೆಯಲ್ಲಿ ಕೆಲಸ ಮಾಡುವಾಗಲೂ ಲಕ್ಷ್ಯ ಹೊರಗಿನ ಟೀವಿಯ ಮೇಲೆಯೇ. ಅಮ್ಮನ ಅಡುಗೆಗೆ ಅಸಹ್ಯಪಟ್ಟ ಡ್ಯಾಡಿ ದಿನವೂ ಹೊರಗೇ ಊಟ ಮಾಡುತ್ತಿರಬೇಕೆನ್ನುವ ಸಂದೇಹ ನನಗೆ.
ಇತ್ತೀಚೆಗಷ್ಟೇ ಜ್ಞಾನಪೀಠ ಪ್ರಶಸ್ತಿ ಪಡೆದ ಕೊಂಕಣಿ ಸಾಹಿತಿ ದಾಮೋದರ ಮಾವಜೋ ಅವರ “ಜೀವ ಕೊಡಲೇ? ಚಹ ಕುಡಿಯಲೇ” ಕಾದಂಬರಿಯನ್ನು ಕಿಶೂ ಬಾರ್ಕೂರು ಕನ್ನಡಕ್ಕೆ ತಂದಿದ್ದು ಅದರ ಒಂದು ಭಾಗ ನಿಮ್ಮ ಓದಿಗೆ
ಚಹಾ ಬೇಕೆನ್ನಿಸಿತು.
ಗ್ಯಾಸ್ ಹಚ್ಚಿ ಕುದಿಯಲು ಇಟ್ಟೆ.
ನೀರು ಕುದಿಯಲಾರಂಭಿಸಿತು.
ಯುರೇಕಾ!
ಆದರೆ ಆರ್ಕಿಮಿಡಿಸನ ನೆನಪಾಗುವ ಮುನ್ನವೇ ನಾಲಿಗೆ ಆತುರಿಸಲಾರಂಭಿಸಿತು.
ಕಲೆ ಮತ್ತು ವಿಜ್ಞಾನ ನಾಣ್ಯದೆರಡು ಮುಖಗಳಂತೆ ಎಂದು ನಾನೆಣಿಸಿದ್ದೆ. ಆದರೆ ಅವೆರಡರ ಸಂಬಂಧ ಎಷ್ಟು ಹತ್ತಿರದ್ದೆನ್ನುವುದು ಚಹಾ ಮಾಡಲು ಕಲಿತ ನಂತರವೇ ಅರಿವಾಗತೊಡಗಿತು.
ಚಹಾ ಹೇಗಾಯಿತು ಎನ್ನುವುದಕ್ಕೂ ಮಿಗಿಲಾಗಿ, ಚಹಾ ಹೇಗನ್ನಿಸಿತು ಎನ್ನುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿ.
ಚಹಾದೆಲೆ, ಸಕ್ಕರೆ, ಹಾಲು ಹಾಕಿ ಸೋಸುವುದರ ತನಕ ನನಗೆ ವ್ಯವಧಾನವಿರಲಿಲ್ಲ. ಕಪ್ ತುಟಿಗಿಟ್ಟೊಡನೆ ಸುಖವೆನ್ನಿಸಿತು.
‘ಅರೆ.. ಚಹಾದ ಪರಿಮಳ.. ಮಾಡಿದ್ದಿಯಾದರೆ ನನಗೂ ಸ್ವಲ್ಪ ತಾ,’ ಒಳಗೆ ಕುಳಿತಲ್ಲಿಂದಲೇ ಅಮ್ಮನ ಆಜ್ಞಾಪಣೆ.
ಅದೇ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ, ಬೇಕೋ ಬೇಡವೆಂಬಂತೆ ಕುದಿಸಿದೆ. ಮತ್ತು ಹಾಲು ಹಾಕಿ ಲೋಟಕ್ಕೆ ಎರೆದು ಕೊಟ್ಟೆ. ಗುಟುಕರಿಸಿದಾಕೆ ಮುಖ ಸೊಟ್ಟಗೆ ಮಾಡಿದಳು. ‘ನೀನು ಕುಡಿದ ಚಹಾದ ಪರಿಮಳ ಬೇರೆಯೇ ಇತ್ತು. ಈ ಚಹಾ ಅದಲ್ಲ. ಸಕ್ಕರೆ ಕೂಡಾ ಸರಿ ಇಲ್ಲ.’
ಮರುಮಾತಾಡದೇ ಒಂದು ಚಮಚೆಯಷ್ಟು ಸಕ್ಕರೆ ತೆಗೆದುಕೊಂಡು ಹೋಗಿ ಆಕೆಯ ಕಪ್ಪಿಗೆ ಹಾಕಿದೆ. ‘ಈಗ ಚೆನ್ನಾಗಿ ಕರಡಿಸದನ್ನ. ಇಲ್ಲದಿದ್ರೆ ಅದನ್ನೂ ನನಗೇ ಹೇಳುವಿಯಂತೆ’ ಅನ್ನಬೇಕಿನಿಸಿತು, ಆದರೆ ಹೇಳಲಿಲ್ಲ. ಒಂದು ನಂಬರಿನ ಸೋಮಾರಿ. ಇವಳು ಸ್ವಲ್ಪ ಕೈಕಾಲುಗಳನ್ನ ಅಲುಗಾಡಿಸಿಕೊಂಡಿರಲಿ ಎಂದು ಡ್ಯಾಡಿ ಕೆಲಸದವರನ್ನು ಇಟ್ಟುಕೊಂಡಿರಲಿಲ್ಲ. ಆದರೆ ಮಾಡಿಟ್ಟದ್ದನ್ನುಣ್ಣುವ ಇವಳ ಗೀಳು ಬಿಡದು. ಅನ್ನ ಮತ್ತು ಮೀನುಸಾರು ಹೇಗೇಗೋ ಮಾಡಿಟ್ಟಿರುತ್ತಾಳೆ. ಅಡುಗೆಮನೆಯಲ್ಲಿ ಕೆಲಸ ಮಾಡುವಾಗಲೂ ಲಕ್ಷ್ಯ ಹೊರಗಿನ ಟೀವಿಯ ಮೇಲೆಯೇ. ಅಮ್ಮನ ಅಡುಗೆಗೆ ಅಸಹ್ಯಪಟ್ಟ ಡ್ಯಾಡಿ ದಿನವೂ ಹೊರಗೇ ಊಟ ಮಾಡುತ್ತಿರಬೇಕೆನ್ನುವ ಸಂದೇಹ ನನಗೆ.
*****
ಹತ್ತನೇ ಇಯತ್ತೆಯವರೆಗೆ ನಾನು ಚಹಾದ ಗುಟುಕನ್ನೇ ತೆಗೆದುಕೊಂಡಿರಲಿಲ್ಲ. ಚಹಾವೆಂದರೆ ವ್ಯಸನ, ಮಕ್ಕಳು ಚಹಾ ಕುಡಿಯಬಾರದೆನ್ನುವುದನ್ನು ನನ್ನ ಮನಸಿನಲ್ಲಿ ಬಿಂಬಿಸಲಾಗಿತ್ತು. ಆದ್ದರಿಂದ ಯಾವತ್ತಾದರೂ ರುಚಿ ನೋಡಬೇಕೆಂದೂ ಕೂಡಾ ಅನ್ನಿಸಿರಲಿಲ್ಲ. ಆದರೆ ಇದರ ಮಧ್ಯೆ ನಡೆದ ಘಟನೆಗಳಿಂದ ಚಹಾದ ಬಗೆಗಿನ ಜಿಜ್ಞಾಸೆಯೊಂದು ತಲೆಯೆತ್ತಿತ್ತು. ನಾನಾವಾಗ ಆರು ಅಥವಾ ಏಳರಲ್ಲಿದ್ದಿರಬೇಕು. ತಡರಾತ್ರಿಯಲ್ಲೊಮ್ಮೆ ನನಗೆ ಎಚ್ಚರವಾಗಿತ್ತು. ಮೊದಲೆನ್ನಿಸಿತು, ನೆರೆಮನೆಯ ಗಡವ ಬೆಕ್ಕಿನ ಸದ್ದು. ನಂತರ ಪಕ್ಕದ ಕೋಣೆಯಲ್ಲಿ ಅಮ್ಮನ ನರಳುವಿಕೆ ಕೇಳಿಸಲಾರಂಭಿಸಿತು. ಮಧ್ಯೆ ಮಧ್ಯೆ ‘ಆಂ… ಸಾಕು… ಬೇಡ’ ಅನ್ನುತ್ತಿದ್ದಳು. ಡ್ಯಾಡಿ ‘ಹಾಂ.. ಹಾಂ’ ಎನ್ನುತ್ತ ಏದುಸಿರು ಬಿಡುತ್ತ ಮಧ್ಯೆ ಮಧ್ಯೆ ಅಮ್ಮನಿಗೆ ಬೈಯುತ್ತಿದ್ದಂತಿತ್ತು. ಏನು ಮಾಡುವುದು ತಿಳಿಯಲಿಲ್ಲ. ಜಗಳವಾಡುತ್ತಿದ್ದಾರೇನು? ಆದರೆ ಕ್ರಮೇಣ ಸದ್ದು ನಿಂತಿತು. ಹೀಗೆ ಕಣ್ಣುಹತ್ತುವಷ್ಟರಲ್ಲಿ ಡ್ಯಾಡಿಯ ಮಾತು ಕಿವಿಯ ಮೇಲೆ ಬಿತ್ತು.
‘ಏಳು.. ಚಹಾ ಮಾಡು, ನೋಡೋಣ.’
‘ಗಂಟೆ ಎರಡಾಗುತ್ತಿದೆ.’
‘ನಾನು ಟೈಂ ಕೇಳ್ಲಿಲ್ಲ. ಚಹಾ ಮಾಡೂ ಅಂದೆ.’
ಮತ್ತು ಅಮ್ಮ ಗ್ಯಾಸ್ ಹಚ್ಚಿದ ಶಬ್ದ ಕೇಳಿಸಿತು.
ಇಷ್ಟು ತಡರಾತ್ರಿ ಡ್ಯಾಡಿಗೆ ಚಹಾ ಬೇಕನ್ನಿಸಿದೆ! ಹೇಗಿರಬಹುದು ಈ ಚಹಾ! ಇಷ್ಟು ಚೆನ್ನಾಗಿರುತ್ತೇನು?
*****
ಬೆಳಿಗ್ಗೆ ಡ್ಯಾಡಿ ಸ್ಕೂಟರ್ ತೆಗೆದುಕೊಂಡು ಕೆಲಸಕ್ಕೆ ಹೋದ ನಂತರ ನಾನು ಅಮ್ಮನಲ್ಲಿ ಕೇಳಿದೆ. ‘ಅಮ್ಮ, ಚಹಾ ಚೆನ್ನಾಗಿರುತ್ತೇನು?’
‘ಚೆನ್ನಾಗಾಗಿದ್ದರೆ ಚೆನ್ನಾಗಿರತ್ತೆ. ಯಾಕೆ ಕೇಳುತ್ತಿ?’
‘ರಾತ್ರಿ ಅಪ್ಪ ನಿನ್ನಿಂದ ಚಹಾ ಮಾಡಿಸಿಕೊಂಡರಲ್ಲ.’
ಅಮ್ಮನ ಕಣ್ಣುಗಳು ದೊಡ್ಡದಾದವು. ‘ನೀನು ಎಚ್ಚರವಾಗಿದ್ದಿಯೇನು?’
‘ಇಲ್ಲಿಲ್ಲಾ. ಎಚ್ಚರವಾಗಿತ್ತು. ಮತ್ತೆ ಮಲಗ್ಬಿಟ್ಟೆ.’
ಅಮ್ಮ ತಕ್ಷಣವೇ ಅದನ್ನು ಮರೆತುಬಿಟ್ಟಳು. ಆದರೆ ನನ್ನ ಮನಸಿನಲ್ಲಿ ಎಚ್ಚರವಾದ ಜಿಜ್ಞಾಸೆಯೊಂದು ಮಾತ್ರ ಆವಾಗಾವಾಗ ತಲೆ ಎತ್ತುತ್ತಲೇ ಇತ್ತು.
*****
ಗಾಯದ ಕಲೆಗಳು ಶರೀರಕ್ಕೆ ಆಯುಷ್ಯಪೂರ್ತಿ ಸಂಗಾತಿಯಾಗಿರುವಂತೆ ಕೆಲವೊಂದು ಘಟನೆಗಳ ನೆನಪುಗಳು ನನ್ನ ಮನಸಿನಲ್ಲಿ ಅಚ್ಚೊತ್ತಿ ನಿಂತಿವೆ. ಎಷ್ಟು ಪ್ರಾಯದವನೆಂದು ನನಗೀಗ ಅರಿವಿಲ್ಲ, ಆಗ ಮನೆಯ ಬಾಗಿಲು ಕಿಟಕಿಗಳು ಹಗಲಿಡೀ ತೆರೆದಿರುತ್ತಿದ್ದವು! ಆಗ ಅಮ್ಮ ಮತ್ತು ಡ್ಯಾಡಿ ಜೊತೆಗೆ ಕುಳಿತು ಹರಟುತ್ತಿದ್ದರು ಅಥವಾ ವಾದಿಸುತ್ತಿದ್ದರು! ಅಮ್ಮ ಎಂದೂ ನನ್ನ ಮುದ್ದು ಮಾಡಿದ್ದು ನನಗೆ ನೆನಪಿಲ್ಲ. ಸಾಧಾರಣ ದೊಡ್ಡವನಾಗುವ ತನಕ ಆಕೆ ನನ್ನ ಮೇಲೆ ರೇಗುತ್ತಿದ್ದಳು. ‘ನೀನು ಹೊಟ್ಟೆಯಲ್ಲಿ ಬಂದದ್ದೇ ನನ್ನ ಸುಖಕ್ಕೆ ಕಣ್ಣು ಬಿತ್ತು’, ‘ನೀನು ಬಂದದ್ದೇ ಡ್ಯಾಡಿ ನನ್ನಿಂದ ದೂರವಾದರು.’
ಅವಳ ಕೆಲಸಕ್ಕೆ ಸಹಾಯ ಮಾಡುವುದು ನನ್ನ ಕರ್ತವ್ಯ ಎಂದು ಅವಳಿಗೆ ಯಾವತ್ತೂ ಅನಿಸಿದೆ. ನಮ್ಮಲ್ಲಿ ಮನೆಗೆಲಸಕ್ಕೆ ಯಾರೂ ಇಲ್ಲದಿರುವುದರ ದೋಷವನ್ನು ಅವಳು ಡ್ಯಾಡಿಗೆ ವಹಿಸುತ್ತಿದ್ದಳು. ಮತ್ತು ಡ್ಯಾಡಿ ಅಮ್ಮನಿಗೆ. ನನ್ನ ನೆನಪಿನಲ್ಲಿ, ನಮ್ಮ ಮನೆಯಲ್ಲಿ ದುರ್ಗಮ್ಮ ಅನ್ನುವ ಹೆಂಗಸೊಂದು ಕೆಲಸಕ್ಕಿತ್ತು. ನಾನು ಹುಟ್ಟಿದಂದಿನಿಂದ ಇದ್ದಳಂತೆ ಆಕೆ. ಒಂದು ದಿನ ಏನೇನೊ ಆಯಿತೆಂದು ಅಮ್ಮ ಆಕೆಯನ್ನು ಓಡಿಸಿಬಿಟ್ಟಳು. ಡ್ಯಾಡಿ ಮನೆಗೆ ಬಂದಂತೆ ಅಮ್ಮ ದುರ್ಗಮ್ಮನ ಹೆಸರಿನಲ್ಲಿ ಡ್ಯಾಡಿಗೆ ಏನೇನೋ ಹೇಳಲಾರಂಭಿಸಿದಳು. ಆಗ ಡ್ಯಾಡಿ ಅವಳನ್ನು ಹೊಡೆದು, ತುಳಿದು ಮೇಲಿಂದ ‘ಒಡನೆಯೇ ಚಹಾ ಮಾಡಿಕೊಡು’ ಎಂದು ಆಜ್ಞಾಪಿಸಿದ್ದು, ನೆನಪಿದೆ ನನಗೆ. ನಂತರ ನಾನು ಕತ್ತಲೆಯಲ್ಲಿ ಹೋಗಿ ಕೂತು, ಅಲ್ಲಿಯೇ ನಿದ್ದೆ ಹೋಗಿದ್ದೆ.
ನಮ್ಮ ಮನೆ ಹಳೆಯ ಹೆಂಚಿನದ್ದೂ ಅಲ್ಲ, ಹಾಗಂತ ಪೂರ್ತಿ ಹೊಸತೂ ಅಲ್ಲ. ‘ಅಜ್ಜ ಕಟ್ಟಿಸಿದ್ದು ಆದರೆ ಪಾಪದ ಅಜ್ಜ ಅಜ್ಜಿ ಮಾತ್ರ ಮನೆಯಲ್ಲಿ ನೆಲೆಯಾಗಲಿಲ್ಲ’ ಎಂದು ಯಾವತ್ತೋ ಒಮ್ಮೆ ಡ್ಯಾಡಿ ಹೇಳಿದ್ದರು. ಹೊರಗಿನ ಪ್ರಾಂಗಣದಂತಹುದ್ದೇನೂ ಇಲ್ಲದಿದ್ದರೂ ಸಣ್ಣ ಮನೆಯೇನಲ್ಲ ಅದು. ಮಧ್ಯದಲ್ಲಿ ಹಾಲ್. ಹಾಲಿನ ಬಲಕ್ಕೆ ಡ್ಯಾಡಿಯ ಕೋಣೆ. ಎಡಕ್ಕಿದ್ದ ಕೋಣೆಯನ್ನು ಬಾಣಂತನದ ದಿನಗಳಲ್ಲಿ ಅಮ್ಮನಿಗೆ ಕೊಟ್ಟದ್ದಂತೆ, ಅದೀಗ ಸದ್ಯಕ್ಕೆ ಅಮ್ಮನ ಕೋಣೆಯೇ ಆಗುಳಿದಿದೆ. ಮುಂದೆ ಒಂದು ಪಕ್ಕದಲ್ಲಿ ಅಡುಗೆ ಕೋಣೆ. ಇನ್ನೊಂದು ಪಕ್ಕದ ಸಾಮಾನಿನ ಕೋಣೆ, ನಂತರ ನನ್ನ ಪಾಲಿಗೆ ಬಂದದ್ದು. ಕೆಳಗೆ ಬಚ್ಚಲುಮನೆ. ಅಜ್ಜ ಮತ್ತು ಅಜ್ಜಿ ಆಕಸ್ಮಿಕ ಒಬ್ಬರ ಹಿಂದೊಬ್ಬರು ತೀರಿಕೊಳ್ಳುವವರೆಗೂ ಮನೆಗೆ ಕಿಟಕಿ ಬಾಗಿಲು ಇತ್ಯಾದಿ ಅಳವಡಿಸಿರಲಿಲ್ಲವಂತೆ. ಅಮ್ಮನೊಂದಿಗೆ ಬಂದ ವರದಕ್ಷಿಣೆಯ ಹಣದಿಂದ ಮನೆಗೆ ಬಾಗಿಲು, ಡ್ಯಾಡಿಗೆ ಸ್ಕೂಟರ್ ಬಂತೆಂದು ಅಮ್ಮ ಹೇಳುತ್ತಿದ್ದಳು. ಮುಂದಿನ ಬಾಗಿಲಿಗೆ ಮೊದಲು ಹೊರಗಿನಿಂದ ಒಂದು ಮತ್ತು ಒಳಗಿನಿಂದ ಒಂದು – ಹೀಗೆ ಎರಡು ಚಿಲಕಗಳಿದ್ದವು ಮತ್ತು ಎಲ್ಲರೂ ಹೊರಗೆ ಹೊರಟರಾದರೆ ಹೊರಗಿನ ಚಿಲಕಕ್ಕೆ ಬೀಗ ತಗುಲಿಸಲಾಗುತ್ತಿತ್ತು. ಆದರೆ ಮುಂದೊಂದು ದಿನ ಅವೆರಡೂ ಚಿಲಕಗಳನ್ನು ತೆಗೆದು ಹೊರಗಿನಿಂದ ಕೀಲಿಕೈಯಿಂದ ತೆರೆಯಲಾಗುವ ಲ್ಯಾಚನ್ನು ಕುಳ್ಳಿರಿಸಿದ್ದು ನನಗೆ ಸರಿಯಾಗಿ ನೆನಪಿದೆ.
ಪಾಸ್ಕೊಲನ ಮನೆಯ ಎದುರು ಡಾ. ಸೋಮೇಶ್ವರ್ ಒಂದು ಕ್ಲಿನಿಕ್ ತೆರೆದಿದ್ದರು. ‘ಆಯುರ್ವೇದಿಕ್ ಆತ. ಗೋವೆಯ ಯಾರು ಹೋಗ್ತಾರೆ ಅವನ ಹತ್ರ? ಪಾಪ ನೊಣ ಓಡಿಸುತ್ತಿದ್ದಾನೆ.’ ಅದನ್ನು ಕೇಳುತ್ತಿದ್ದಂತೆ ಅಮ್ಮನಿಗೆ ಆತನಲ್ಲಿ ಮರುಕ ಹುಟ್ಟಿತಂತ ಕಾಣುತ್ತದೆ. ಒಂದು ದಿನ ಎದೆಯಲ್ಲಿ ನಡುಕ ಎಂದು, ಅವರನ್ನೇ ಕರೆ ಎಂದು ನನ್ನನ್ನು ಕಳುಹಿಸಿದಳು. ಅವರು ಉತ್ಸುಕತೆಯಿಂದ ಬಂದರು. ನಂತರ ನಡುನಡುವೆ ಬರುತ್ತಲೇ ಇದ್ದರು. ಒಂದು ದಿನ ಡ್ಯಾಡಿ ಶೀತವಾಗಿದೆಯೆಂದು ಕೊಶ್ತಾಬಿರ್ ಹತ್ತಿರ ಹೋಗಲು ಸನ್ನದ್ಧರಾಗುತ್ತಿದ್ದಾಗ ನಾನು ಹೇಳಿದೆ, ‘ಸೋಮೇಶ್ವರರನ್ನು ಕರೆಯಲೇನು? ಅಮ್ಮನಿಗೆ ದಿನವೂ ಅವರೇ ಪರೀಕ್ಷಿಸುತ್ತಾರೆ.’ ಕೇಳಿದ್ದೇ ಡ್ಯಾಡಿ ಕೆರಳಿದರು. ತನ್ನ ಅನಾರೋಗ್ಯವನ್ನೂ ಮರೆತು ಅಮ್ಮನ ಮೈ ಹುಡಿಯಾಗುವ ತನಕ ಅವಳನ್ನು ಹೊಡೆಯುತ್ತಲೇ ಇದ್ದರು.
ಮಾರನೆಯ ದಿನವೇ ಬಡಗಿಯೂ ಬಂದ. ಎರಡೂ ಚಿಲಕಗಳನ್ನು ತೆಗೆದು, ಹೊರಗಿನಿಂದ ಕೀಲಿಕೈಯಿಂದ ತೆಗೆಯುವ ಲ್ಯಾಚನ್ನು ಬಾಗಿಲಿಗೆ ಕುಳ್ಳಿರಿಸಲಾಯಿತು. ಆವತ್ತಿನಿಂದ ಡ್ಯಾಡಿ ಕೀಲಿಕೈ ತೆಗೆದುಕೊಂಡು ಹೋಗುತ್ತಿದ್ದರು ಮತ್ತು ಯಾವಯಾವಾಗಲೊಮ್ಮೆ ಆಕಸ್ಮಿಕವಾಗಿ ಬಾಗಿಲು ತೆರೆದು ಮನೆಯೊಳಗೆ ಬರುತ್ತಿದ್ದರು.
*****
ಮನೆಯ ಸುತ್ತಲೂ ಇರುವ ಸ್ಥಳದಲ್ಲಿ ಎಲ್ಲರೂ ಚಿಕ್ಕದಾದರೂ ಹೂದೋಟವನ್ನು ಮಾಡುತ್ತಿದ್ದರು. ಆದರೆ ನಮ್ಮ ಮನೆ ಸುತ್ತ ಸ್ಥಳವಿದ್ದರೂ, ಒಂದು ತುಳಸಿ ಬಿಟ್ಟರೆ ಒಣಗಿದ ಮರಳುಗಾಡು. ಇಲ್ಲವೆನ್ನಲು, ಹತ್ತಿರದಲ್ಲೇ ಒಂದು ಚಿಕ್ಕ ಮಾವಿನಹಣ್ಣುಗಳ ಮರ ಮತ್ತು ಅಲ್ಲೇ ಒಂದು ಆಲದ ಮರ. ಅದು ನಮ್ಮದಲ್ಲ, ನಮ್ಮ ಗಡಿಯಾಚೆಯಿತ್ತು. ಆದರೆ ಮಾವಿನಮರ ನಮ್ಮದೆಂದು ಡ್ಯಾಡಿ ಹೇಳುತ್ತಿದ್ದರು. ಆಲದ ಮರದ ಬುಡದಲ್ಲಿ ಬೆಳಗೆದ್ದು ನೋಡಿದರೆ ಅದರ ಬೀಜಗಳು ರಾಶಿ ರಾಶಿ ಬಿದ್ದಿರುತ್ತಿದ್ದವು. ನನ್ನ ಮೇಲೆ ಯಾವಾಗಲಾದರೂ ಒಂದು ಬೀಳಲೆಂದು ನಾನು ಹೊರಗೆ ಹೋಗಿ ಮರದಡಿಯಲ್ಲಿ ನಿಲ್ಲುತ್ತಿದ್ದೆ, ಆದರೆ ಆಲ ನನ್ನ ಮೇಲೆ ಸಿಟ್ಟಲ್ಲಿರುತ್ತಿತ್ತು. ಮಾವಿನಮರ ಮಾತ್ರ ಚಳಿಗಾಲದಲ್ಲಿ ಹೂ ಬಿಡುತಿತ್ತು ಮತ್ತು ನನಗೆ ತುಂಬಾ ಸುಂದರವಾಗಿ ಕಾಣುತಿತ್ತು. ಬೇಸಿಗೆ ಕಾಲದಲ್ಲಿ ಅದಕ್ಕೆ ಹಣ್ಣುಗಳಾಗುತ್ತಿದ್ದವು. ಸ್ವಲ್ಪ ಹುಳ್ಳಗೆ ಮತ್ತು ಜಾಸ್ತಿ ಸಿಹಿ. ಗಾಳಿಗೆ ಉದುರುತ್ತಿದ್ದವು ಮತ್ತು ಬೇರೆ ಮಕ್ಕಳು ಅಲ್ಲಿ ಬರುವ ಮುನ್ನ ನಾನಲ್ಲಿಗೆ ಓಡಿಹೋಗಿ ಅವುಗಳನ್ನು ಹೆಕ್ಕಿ ತರುತ್ತಿದ್ದೆ. ಅಮ್ಮ ಅದರ ಮಾವಿನಹಣ್ಣಿನ ಸಾಸಿವೆ ಮಾಡುತ್ತಿದ್ದಳು. ಡ್ಯಾಡಿಗೆ ಸಾಸಿವೆ ತುಂಬ ಇಷ್ಟವಾಗಿತ್ತಂತೆ. ಹಾಗಂತ ಭಾನುವಾರ ಮತ್ತು ಬೇರೆ ರಜಾದಿನಗಳನ್ನು ಬಿಟ್ಟು ವಾರದಲ್ಲಿ ನಡುನಡುವೆ ಮಾಡುತ್ತಿದ್ದಳು. ಆವಾಗ ನಾನೂ ತಿನ್ನುತ್ತಿದ್ದೆ. ಮಕ್ಕಳು ಮಾವಿನಮರಕ್ಕೆ ಕಲ್ಲು ಹೊಡೆಯುವಾಗ ಅಮ್ಮ ಅವರ ಮೇಲೆ ಸಿಟ್ಟಾಗುತ್ತಿದ್ದಳು ಮತ್ತು ನನಗೆ ಅವರನ್ನು ಓಡಿಸಲು ಹೇಳುತ್ತಿದ್ದಳು. ನಾನೆಂದೂ ಅವರನ್ನು ಓಡಿಸಿರಲಿಲ್ಲ. ಅವರೇ ನನ್ನನ್ನು ನೋಡಿ ಓಡುತ್ತಿದ್ದರು, ನಾನು ‘ನಿಲ್ಲಿ’ ಎಂದು ಹೇಳಿದರೂ ಸಹ.
ಅದೊಂದು ಸಂಜೆ ಅವರಿಬ್ಬರು ಮಾತ್ರ ಓಡಲಿಲ್ಲ. ಧಪ್ ಧಪ್ ಎಂದು ಒಂದರ ಹಿಂದೊಂದು, ಎರಡು ಮಾವು ಉದುರಿದ ಶಬ್ದ ನನ್ನ ಚುರುಕು ಕಿವಿಗಳು ಕೇಳಿದ್ದವು. ಯಾರಾದರೂ ಮಕ್ಕಳು ಬಂದು ತೆಗೆದುಕೊಂಡು ಹೋಗಲಿ ಎಂದು ನಾನು ಸುಮ್ಮನೆ ನಿಂತೆ. ಆದರೆ ಯಾರೂ ಓಡಿಬರಲಿಲ್ಲ.
‘ಅರೆ ಬಾಬು, ಮಾವಿನಹಣ್ಣು ಉದುರಿದ ಶಬ್ದ ಆಯ್ತು. ಹೋಗಿ ಬೇಗ ನೋಡು’ ಅಮ್ಮ ಹೇಳಿದಳು. ಕತ್ತಲಲ್ಲಿ ಹಣ್ಣುಗಳನ್ನು ಹುಡುಕುವುದು ಜೀವಕ್ಕೆ ಬಂದಿತ್ತು. ಆದರೂ ಹೋದೆ. ಎತ್ತಿಕೊಂಡು ನೋಡಿದರೆ ಮಾವಿನಮರದ ಬುಡದಲ್ಲಿ ಯಾರೋ ಇದ್ದಾರೆ. ಎರಡು ಹೆಜ್ಜೆ ಮುಂದೆ ಹೋದೆ. ಒಂದು ಹುಡುಗಿ ಮತ್ತೆ ಸ್ವಲ್ಪ ದೊಡ್ಡವನೆನಿಸುವಂಥ ಹುಡುಗ ಅಲ್ಲಿ ಕತ್ತಲೆಯಲ್ಲಿ ನಿಂತಿದ್ದರು. ಹಣ್ಣುಗಳನ್ನು ಹುಡುಕಲಿಕ್ಕೆ ಬಂದಿರಬೇಕು. ನಾನು ಹತ್ತಿರ ಹೋಗಿ ಎರಡೂ ಕೈಗಳನ್ನು ಮುಂದಕ್ಕೆ ತಂದು ‘ಹಣ್ಣು ಬೇಕಾ? ಎರಡೇ ಇದ್ದದ್ದು’ ಎಂದು ಕೇಳಿದೆ. ಘಾಂಟಿ ಮಕ್ಕಳಾದರೆ ಓಡಿಬರುತ್ತಿದ್ದರು. ಇವರು ಅಲ್ಲಿಯೇ ನಿಂತಿದ್ದರು. ಮೇಲಿನಿಂದ ಅವನು ಹೇಳಿದ, ‘ನನ್ನ ಕೈಯಲ್ಲಿ ಎರಡಿವೆ, ನೀನು ಹೋಗೀಗ’ ಮತ್ತು ನನಗೆ ತಮಾಷೆ ಮಾಡಿದಂತೆ ಅವನು ನಕ್ಕ.
ನನಗೆ ಅವನ ಮೇಲೆ ಸಿಟ್ಟೇ ಬಂತು. ಅವನ ಎರಡೂ ಕೈಗಳು ಆ ಹುಡುಗಿಯ ಬ್ಲಾವ್ಸಿನಲ್ಲಿದ್ದವು. ಹಣ್ಣುಗಳೆಲ್ಲಿ ಹಾಗಾದರೆ?
‘ತೋರಿಸು ನೋಡೋಣ’ ಎನ್ನುತ್ತಾ ನಾನು ಮುಂದೆ ಸರಿದೆ. ಆ ಹುಡುಗಿ ತನ್ನ ಒಂದು ಕೈಯನ್ನು ಬಾಯಿಯ ಮೇಲಿಟ್ಟಿದ್ದರಿಂದ ಅವಳು ಅಳುತ್ತಾಳಿರಬೇಕೆಂದೆನಿಸಿತು.
‘ನೀನು ಹೋಗು…’ ಅವಳು ಮೆಲುಸ್ವರದಲ್ಲಿ ಹೇಳಿದಳು.
ಅವಳು ಹೇಳಿದಳಂತ ನಾನ್ಯಾಕೆ ಹೋಗಬೇಕು? ಅಷ್ಟರಲ್ಲಿ ಅಮ್ಮ ಕರೆದದ್ದು ಕೇಳಿಸಿತು. ಅದಕ್ಕೇ ಹೋದೆ.
ಎರಡೂ ಹಣ್ಣುಗಳನ್ನು ಅಮ್ಮನ ಕೈಯಲ್ಲಿ ಕೊಟ್ಟು ಹೇಳಿದೆ, ‘ಮರದ ಬುಡದಲ್ಲಿ ಇಬ್ಬರಿದ್ದಾರೆ. ಎರಡು ಹಣ್ಣುಗಳು ಸಿಕ್ಕಿವೆ ಅಂತಿದ್ದಾನೆ. ಅವನ ಎರಡೂ ಕೈಗಳು ಹುಡುಗಿಯ ಬ್ಲಾವ್ಸಿನಲ್ಲಿವೆ. ಸುಳ್ಳ್ಯಾಕೆ ಹೇಳ್ತಾನೆ?’
ಅಮ್ಮ ಬಾಗಿಲಿಂದ ತಲೆ ಹೊರಗೆ ಹಾಕಿ ಕಣ್ಣು ಕಿರಿದು ಮಾಡಿ ನೋಡಿ ಹೇಳಿದಳು, ‘ಕತ್ತಲಿಗೆ ಏನೂ ಕಾಣ್ಸ್ತಿಲ್ಲ, ಹಣ್ಣುಗಳನ್ನ ಏನು ಮಾಡ್ತಾನಂತೆ! ನೀನು ಒಳಗ್ ಬಾ.’ ಅವಳು ಬಾಗಿಲು ಹಾಕಿದಳು ಮತ್ತು ಅವನಿಗೆ ಸಿಕ್ಕಿದ ಹಣ್ಣುಗಳನ್ನು ನೋಡುವ ನನ್ನ ಇಚ್ಛೆ ಕಮರಿಹೋಯಿತು.
ಗಾಯದ ಕಲೆಗಳು ಶರೀರಕ್ಕೆ ಆಯುಷ್ಯಪೂರ್ತಿ ಸಂಗಾತಿಯಾಗಿರುವಂತೆ ಕೆಲವೊಂದು ಘಟನೆಗಳ ನೆನಪುಗಳು ನನ್ನ ಮನಸಿನಲ್ಲಿ ಅಚ್ಚೊತ್ತಿ ನಿಂತಿವೆ. ಎಷ್ಟು ಪ್ರಾಯದವನೆಂದು ನನಗೀಗ ಅರಿವಿಲ್ಲ, ಆಗ ಮನೆಯ ಬಾಗಿಲು ಕಿಟಕಿಗಳು ಹಗಲಿಡೀ ತೆರೆದಿರುತ್ತಿದ್ದವು! ಆಗ ಅಮ್ಮ ಮತ್ತು ಡ್ಯಾಡಿ ಜೊತೆಗೆ ಕುಳಿತು ಹರಟುತ್ತಿದ್ದರು ಅಥವಾ ವಾದಿಸುತ್ತಿದ್ದರು!
ಒಂದು ದಿನ ಆಲದ ಮರಕ್ಕೆ ನನ್ನ ಮೇಲೆ ಕನಿಕರವೆನ್ನಿಸಿರಬೇಕು. ಒಂದು ಬೀಜ ನನ್ನ ತಲೆಯ ಮೇಲೆ ಧೊಪ್ಪೆಂದು ಬಿದ್ದಿತು. ಅದೇ ವರ್ಷ ಮಾವಿನಮರಕ್ಕೂ ತುಂಬಾ ಹಣ್ಣುಗಳಾದುವು. ಆಲದ ಮರದ ಮದುಮಗಳಂತೆ ಅದು ನನಗೆ ಕಂಡಿತು. ವಠಾರದ ಎಲ್ಲ ಮಕ್ಕಳನ್ನು ಕರೆದು, ಆಲ ಮತ್ತು ಮಾವಿನಮರದ ಮದುವೆ ಸಹ ಮಾಡಿಸಬೇಕನ್ನಿಸಿತು. ಆ ದಿನ ಮಾವಿನಹಣ್ಣಿನ ಸಾಸಿವೆ ಮಾಡಿ, ಆಲದ ಎಲೆಗಳಲ್ಲಿ ತುಂಬಿಸಿ ಮಕ್ಕಳಿಗೆ ಹಂಚುವುದು.
ಒಂದು ದಿನ ಸಂಜೆ ಜೋರಾಗಿ ಗಾಳಿ ಬೀಸಿತು. ಧಪ್ ಧಪ್ ಎಂದು ರಾಶಿ ರಾಶಿ ಮಾವಿನಹಣ್ಣುಗಳು ಉದುರಿದವು. ಅಮ್ಮ ಹೇಳುವುದಕ್ಕೂ ಮುನ್ನ ಚೀಲ ಹಿಡಿದು ನಾನು ಹೊರಗೋಡಿದೆ. ಎಲ್ಲ ಮಕ್ಕಳೊಂದಿಗೆ ಮಾವಿನಕಾಯಿಗಳನ್ನು ಹೆಕ್ಕಲು ನನಗೆ ಮಜವೆನಿಸಿತು. ಚೀಲ ತುಂಬಿಸಿ ಮನೆಗೊಯ್ದರೆ, ಘಾಟಿಮಕ್ಕಳು ಜಾಸ್ತಿ ಹಣ್ಣುಗಳನ್ನೊಯ್ದರು ಎಂದು ಅಮ್ಮ ಕೋಪಗೊಂಡಿದ್ದಳು. ಡ್ಯಾಡಿಯ ಸ್ಕೂಟರ್ ಮನೆಗೆ ಬರುವುದೇ ತಡ, ಅಮ್ಮ ದೂರಿಟ್ಟಳು. ‘ಎಲ್ಲ ಘಾಟಿಮಕ್ಕಳು ಮಾವಿನಹಣ್ಣು ಕೊಂಡೊಯ್ಯುತ್ತಾರೆ. ಅದಕ್ಕಿಂತ ಜನ ಕರೆಯಿಸಿ ಎಲ್ಲ ತೆಗೆಸಿಬಿಡಿ.’
‘ನಿನಗ್ಯಾಕೆ? ಸಾಸಿವೆ ಮಾಡಲು ತಾನೆ?’ ಡ್ಯಾಡಿಯ ಹಣೆಯಲ್ಲಿ ನೆರಿಗೆಗಳೆದ್ದವು.
‘ಮಾರಿದರೂ ಆಗಬಹುದು.’ ಅಮ್ಮ ವ್ಯವಹಾರ ಕುದುರಿಸುತ್ತಿದ್ದಳು.
‘ನನ್ನನ್ನು ಮಾರಲು ಕೂರಿಸುವೆಯೋ?’ ಆದರೆ ಡ್ಯಾಡಿ ಬೇರೆಯೇ ವ್ಯವಹಾರ ನೋಡಹತ್ತಿದರು. ಯಾರನ್ನೋ ಕರೆಯಿಸಿ, ಸೊಂಪಾಗಿ ಬೆಳೆದ ಆ ಮಾವಿನಮರವನ್ನು ತೋರಿಸಿದರು. ಮುಂದಿನ ಎಂಟು ಹತ್ತು ದಿನಗಳಲ್ಲಿ ನಾವು ಬೇಕಾದಷ್ಟು ಉದುರಿದ ಮಾವಿನಹಣ್ಣುಗಳನ್ನು ಶೇಖರಿಸಿದೆವು. ನಂತರ ಆ ಮರವನ್ನೇ ಕಡಿಯಲಾಯಿತು. ಪಾಪ, ಆಲದ ಮರ ಏಕಾಂಗಿಯಾಯಿತು ಮತ್ತು ನನಗೆ ತುಂಬಾ ದುಃಖವಾಯಿತು.
*****
ದೇವು ಯಾರೆಂದು ನನಗೆ ತಿಳಿಯದು. ತುಂಬಾ ಸಲ ನೋಡಿದ್ದೆ ಅವನನ್ನು. ಡ್ಯಾಡಿ ದೇವು ಬಗ್ಗೆ ಮಾತನಾಡುವಾಗ ದೇವರಷ್ಟೇ ಶ್ರದ್ಧೆಯಿಂದ ಮಾತನಾಡುತ್ತಿದ್ದರು. ದೇವುವನ್ನು ಅವರು ‘ಬಾಬಾ’ ಎಂದು ಕರೆಯುತ್ತಿದ್ದರು. ಬಾಬಾನನ್ನು ಕೇಳದೆ ಅವರೇನೂ ಮಾಡುತ್ತಿರಲಿಲ್ಲ. ಅದರ ನಂತರವೂ ಈ ದೇವುವನ್ನು ನಾನು ಬಹಳ ಸಾರಿ ನೋಡಿದೆ. ಡ್ಯಾಡಿ ಅವನನ್ನು ನೋಡಲು ಶನಿವಾರ ಸಂಜೆಯೂ ಹೋಗುತ್ತಿದ್ದರು. ‘ಅವನು ಮಾಟಗಾರ’ ಎಂದು ಅಮ್ಮ ನನಗೆ ಹೇಳಿದ್ದಳು.
ಮಾಟಗಾರನೆಂದರೇನೆಂದು ನನಗೆ ಹೇಗೆ ತಿಳಿಯುವುದು? ಯಾವತ್ತಾದರೂ ಲಹರಿಯಲ್ಲಿದ್ದರೆ ಡ್ಯಾಡಿ ಬಾಬಾನ ಬಗ್ಗೆ ಹೇಳುತ್ತಿದ್ದರು. ‘ಇವತ್ತು ಬಾಬಾ ಚೆನ್ನಾಗಿ ಜಕಣಿ ಮಾಡಿದ’, ‘ದೈವಕ್ಕೆ ಕೋಳಿ ಕೊಡಬೇಕೆಂದಿದ್ದಾರೆ’, ‘ಈ ಬುಧವಾರದ ಕಳ್ಳುರೊಟ್ಟಿ ಕಾಣಿಕೆ ತಪ್ಪಿದೆಯೆಂದು ವಠಾರದ ದೈವ ಮುನಿದಿದೆ.’ ನನಗಿದೊಂದೂ ತಿಳಿಯುತ್ತಿರಲಿಲ್ಲ. ಆದರೆ ಡ್ಯಾಡಿ ಅದನ್ನೆಲ್ಲಾ ಹೇಳುವ ರೀತಿ ನೋಡುವಾಗ ನನಗದರ ನಕ್ಕಲ್ ಮಾಡಬೇಕನ್ನಿಸುತ್ತಿತ್ತು.
ನನಗೆ ನಾಲಕ್ಕಾಗುವಾಗ ಅಮ್ಮ ಡ್ಯಾಡಿಗೆ ನೆನಪಿಸಿದ್ದಳು. ‘ಅವನನ್ನೀಗ ಕೇಜಿಗೆ ದಾಖಲಿಸಬೇಕು.’ ನನಗೀಗ ಕೇಜಿಯೆಂದರೇನೆಂದು ನೋಡುವ ಕುತೂಹಲ. ಆದರೆ ಒಂದು ಶನಿವಾರದಂದು ಮನೆಗೆ ಬಂದ ಡ್ಯಾಡಿ ನನ್ನೆದುರಲ್ಲೇ ಅಮ್ಮನಿಗೆ ಹೇಳಿದರು, ‘ಬಾಬುವಿನ ಹಣೆಯಲ್ಲಿ ಅಕ್ಷರಭಾಗ್ಯವಿಲ್ಲ ಎನ್ನುತ್ತಾರೆ ಬಾಬಾ.’
‘ಅದೇನದು? ಎಲ್ಲ ಮಕ್ಕಳೂ ಹೋಗ್ತಾರೆ, ಇವನೂ ಹೋಗ್ಲಿ’ ಅಮ್ಮ ಹೇಳಿದಳು.
‘ಅವನು ಕಲಿಯುವುದು ನನಗೆ ಬೇಡವೆಂದೇ? ನಮ್ಮ ಮುದಿತನದಲ್ಲಿ ಅವನೇ ಸಾಕಬೇಕು ನಮ್ಮನ್ನ. ಓದು ಇಲ್ಲದೆ ಹೇಗೆ ಮಾಡಿಯಾನು? ಆದರೆ ಆ ಯೋಗವೇ ಅವನಿಗಿಲ್ಲದಿದ್ದರೆ ಯಾರೇನು ಮಾಡಲು ಸಾಧ್ಯ?’
‘ಹೀಗೆಯೇ ಮನೆಯಲ್ಲಿ ಕೂರಿಸುವುದೇನು, ಅವನನ್ನು?’
‘ಬಾಬಾ ಹೇಳಿದ್ದಾರೆ. ಆರು ವರ್ಷಗಳಾದ ಮೇಲೆ ಶಾಲೆಗೆ ಕಳ್ಸಿ. ಅಲ್ಲಿತನಕ ಬುದ್ಧಿ ಬೆಳೆಯುತ್ತೇನೊ ನೋಡುವ.’ ಡ್ಯಾಡಿ ಕಣ್ಣುಮುಚ್ಚಿ ಬಾಬಾನಿಗೆ ನಮಸ್ಕಾರ ಮಾಡಿದರು.
‘ಸರಿಯಾದ ಸಮಯಕ್ಕೆ ಶಾಲೆಗೆ ಕಳುಹಿಸದಿದ್ದರೆ ಅವನ ನಾಶವಾಗುತ್ತದೆ.’ ನನ್ನ ಬಗ್ಗೆ ಅಮ್ಮನ ಆಸ್ಥೆ ಕಂಡು ನನಗೆ ಖುಶಿಯಾಯಿತು.
‘ಅವನು ಶಾಲೆಗೆ ಹೋದರೆ ನಿನ್ನ ಆಟಕ್ಕೆ ಕಟ್ಟಿರುವುದಿಲ್ಲ. ಆಗ ನೀನು ಹಳ್ಳಹಿಡಿಯುವುದನ್ನು ಯಾವ ಕಣ್ಣಲ್ಲಿ ನೋಡಲಿ?’ ಡ್ಯಾಡಿಯ ಕಣ್ಣುಗಳೀಗ ಕೆಂಪಾಗಹತ್ತಿದವು. ಅಮ್ಮ ವಿಷಯ ಬದಲಿಸಿದಳು. ಮತ್ತು ಇದರ ನಂತರ ‘ಕೆಜಿ’ ಎಂದರೇನೆಂದು ನೋಡಲು ಸಿಗದು ಎಂದು ಮಾತ್ರ ನನಗೆ ಸ್ಪಷ್ಟವಾಯಿತು.
*****
ಮಧ್ಯಾಹ್ನದ ಹೊತ್ತು ದೂರದಲ್ಲಿ ಮಕ್ಕಳಾಡುವ ಸದ್ದು ಕಿವಿಗೆ ಬೀಳುವಾಗ ನಾನು ಕಿಟಕಿ ಹತ್ತಿರ ನಿಂತು ಹೊರಗೆ ನೋಡುತ್ತ ನಿಲ್ಲುತ್ತಿದ್ದೆ. ಒಮ್ಮೆ ಎರಡು ಒಮ್ಮೊಮ್ಮೆ ಮೂವರು ನನ್ನ ಪ್ರಾಯದ ಮಕ್ಕಳು ಆಡುವುದು ಕಣ್ಣಿಗೆ ಬೀಳುತ್ತಿತ್ತು. ಒಮ್ಮೆ ಗೋಲಿ, ಒಮ್ಮೊಮ್ಮೆ ಲಗೋರಿ. ಯಾವಾಗಲೊಮ್ಮೆ ಅವರ ಚೆಂಡು ಯಾ ಗೋಲಿ ಕಿಟಕಿಯ ಹತ್ತಿರ ಬೀಳುವಾಗ ಅವರೂ ನನ್ನನ್ನು ನೋಡುತ್ತಿದ್ದರು. ನನ್ನತ್ತ ಕೈ ಬೀಸುತ್ತಿದ್ದರು. ನನ್ನ ಕೈ ಮೇಲೇರುತ್ತಿತ್ತು ಮತ್ತು ಹಾಗೆಯೇ ಕೆಳಗೆ ಬರುತ್ತಿತ್ತು. ಸಂಜೆ ಅವರು ಹೋದ ನಂತರ ನಾನು ಅವರ ಆಟವನ್ನು ಮನಸ್ಸಿನಲ್ಲಿಯೇ ಆಡುತ್ತಿದ್ದೆ. ಬೆಳಿಗ್ಗೆ ಡ್ಯಾಡಿ ಹೋದ ನಂತರ ಹೊರಗಿನ ಎರಡು ಉರುಟಾದ ಕಲ್ಲುಗಳನ್ನಾರಿಸಿ ಒಂದರ ಮೇಲೊಂದು ಗುರಿಯಿಟ್ಟು ಹೊಡೆಯುತ್ತಿದ್ದೆ. ನನ್ನಷ್ಟಕ್ಕೆ ಆಡುವುದರಲ್ಲಿಯೂ ಮಜವಿತ್ತು.
ಒಂದು ದಿನ ಅವರಿಬ್ಬರು ಗೋಲಿಯಾಟವಾಡುತ್ತಿದ್ದರು. ಒಬ್ಬನ ಗೋಲಿ ಕಿಟಕಿಯತ್ತ ಬಂತು. ‘ಹೊಡೆ ಗುಳಿ’ ಎಂದು ಗೋಲಿಯ ಹಿಂದೆ ಬಂದ ಹುಡುಗನಿಗೆ ಇನ್ನೊಬ್ಬ ಹೇಳಿದ. ಅವನು ಹೊಡೆದಿದ್ದರೆ ನಮ್ಮ ಗೋಡೆಗೆ ತಾಗಿ ಇನ್ನೊಬ್ಬನಿಗೆ ನಂತರ ಸುಲಭವಾಗುತ್ತಿತ್ತು. ಅವನು ಗೋಲಿಯನ್ನು ಅಲ್ಲಿಯೇ ಇನ್ನೊಂದು ಬದಿಗೆ ಹಾಕಿದ. ಗೋಲಿ ಹೆಕ್ಕಲು ಬಂದ ಹುಡುಗ ನನ್ನನ್ನು ಕೇಳಿದ, ‘ಆಡಲು ಬರುತ್ತೀಯ?’
ನಾನು ನನ್ನ ಹತ್ತಿರ ಗೋಲಿಯಿಲ್ಲವೆಂದು ಹೇಳಿದೆ.
‘ಹೀಗೆಯೇ… ನೋಡಲು ಬಾ’ ಎಂದು ಗೋಲಿಯನ್ನು ಇನ್ನೊಂದೆಡೆಗೆ ಎಸೆದು ಅವನು ಅಲ್ಲಿಂದ ಓಡಿದ.
ನಾನು ಅಮ್ಮನಲ್ಲಿಗೆ ಹೋಗಿ, ‘ನಾನು ಹೊರಗೆ ಆಡಲು ಹೋಗಲೇನು?’ ಎಂದು ಕೇಳಿದೆ. ಅಮ್ಮನ ನಿದ್ರೆಯಾಗಿತ್ತು, ಆದರೆ ಕಣ್ಣಲ್ಲಿನ ಜೊಂಪು ಹೋಗಿರಲಿಲ್ಲ. ಆಕೆ ಮಾತನಾಡದೆ ತಲೆ ಆಡಿಸುತ್ತಿರುವಾಗ ನಾನು ಬಾಗಿಲು ತೆರೆದು ಹೊರಗೋಡಿದೆ. ಅವರ ಆಟ ನೋಡುತ್ತ ನಿಂತೆ.
‘ಇಪ್ಪತ್ತು’ ಕೊನೆಯ ಪೆಟ್ಟಿನೊಂದಿಗೆ ಅವನು ಗೆದ್ದಿದ್ದ. ಅವೆರಡೂ ಗೋಲಿಗಳು ಅವನವಾದವು. ನಂತರ ಕಿಸೆಯಲ್ಲಿನ ಗೋಲಿಗಳನ್ನಾಡಿಸುತ್ತ ಇಬ್ಬರೂ ನನ್ನೆಡೆಗೆ ಬಂದರು. ‘ನಾನು ರವಿ. ಇವನು ಪೀಟು. ನಿನ್ನ ಹೆಸರೇನು?’
ನಾನು ಹೆಸರು ಹೇಳಿದೆ, ‘ಬಾಬು’. ‘ವಿಪಿನ್’ ಎಂದು ಒಂದು ಹೆಸರಿತ್ತೆಂದು ನನಗೆ ತಿಳಿದಿತ್ತು. ಆದರೆ ಅದು ನನ್ನ ಹೆಸರಂತೆ ಅನ್ನಿಸುತ್ತಿರಲಿಲ್ಲ. ನನ್ನ ಹತ್ತಿರ ಗೋಲಿಯಿಲ್ಲವೆಂದು ಹೇಳಿದ ಮೇಲೆ ಒಬ್ಬ ಹೇಳಿದ, ‘ನೀನು ಕ್ರಿಕೆಟ್ ಆಡುತ್ತೀಯಂತ ಕಾಣುತ್ತದೆ.’ ಇಲ್ಲವೆಂದು ಹೇಳಿದ ಮೇಲೆ ಇನ್ನೊಬ್ಬನೆಂದ, ‘ಫುಟ್‌ಬಾಲ್?’. ಯಾವುದೇ ಆಟವಾಡುತ್ತಿಲ್ಲ ಎಂದು ನಾನು ಹೇಳಿದ್ದು ಅವರಿಗೆ ನಿಜವೆನಿಸಲಿಲ್ಲ.
‘ಸ್ಕೂಲಿನಲ್ಲಿಯೂ ಆಡುವುದಿಲ್ಲವೆ?’
ನಾನು ಶಾಲೆಗೇ ಹೋಗುವುದಿಲ್ಲವೆಂದು ಕೇಳಿದ ಮೇಲೆ ಅವರು ಇನ್ನೂ ಆಶ್ಚರ್ಯಚಕಿತರಾದರು. ಅವರಿಗೆ ನನ್ನ ಮೇಲೆ ಕರುಣೆ ಬಂದದ್ದು ನನಗೆ ಇಷ್ಟವಾಗಲಿಲ್ಲ. ರವಿ ಪೀಟುವಿಗೆ ಹೇಳಿದ, ‘ನೀನು ಎರಡು ಬಾರಿ ಸೋತೆ. ಈಗ ನೀನು ಇವನ ಜೊತೆ ಆಡು. ಆಮೇಲೆ ನೀನು ಹೊಸ ಗೋಲಿಯನ್ನು ಗೆಲ್ಲಬಹುದು.’
‘ನಾನಾಡುವುದಿಲ್ಲ. ನನ್ನ ಹತ್ತಿರ ಗೋಲಿ ಇಲ್ಲ’ ನಾನು ಹೇಳಿದೆ.
‘ನಾನು ಕೊಡುತ್ತೇನೆ. ಆಟವಾದ ನಂತ್ರ ವಾಪಾಸ್ ಕೊಟ್ರಾಯ್ತು.’ ರವಿಯ ಗಣಿತಕ್ಕೆ ಪೀಟು ನಕ್ಕ.
‘ಅವನು ಸೋತ ನಂತ್ರ ಅವನ ಗೋಲಿ ನನ್ನದಾಗುತ್ತದೆ. ನಿನಗೆಲ್ಲಿಂದ ವಾಪಾಸ್ ಕೊಡೋದು?’
‘ಅದು ನಮ್ಮ ನಡುವಿನದ್ದು, ನಾವು ನೋಡುತ್ತೇವೆ’ ರವಿ ಹೇಳಿದ. ನಾನು ಬೇಡವೆನ್ನುವಾಗಲೂ ಕೈಯಲ್ಲಿ ಗೋಲಿ ತುರುಕಿಸಿ ನನಗೆ ಆಟದ ನಿಯಮಗಳನ್ನು ವಿವರಿಸಲಾರಂಭಿಸಿದ. ನೆಲದಲ್ಲಿ ತೋಡಿದ ಸಣ್ಣ ಗುಳಿಗಳಲ್ಲಿ ಗೋಲಿಯಾಟ. ಗುಳಿಗಳಿಂದ ಎದುರಾಳಿಯ ಗೋಲಿಗೆ ಹೊಡೆಯುತ್ತ ಯಾರು ಮೊದಲು ಇಪ್ಪತ್ತನೇ ಪೆಟ್ಟು ಹೊಡೆಯುತ್ತಾರೋ ಅವರು ಗೆಲ್ಲುವುದು.
ಮತ್ತು ನಾನಾಡಿದೆ. ಗುಳಿ, ಪೆಟ್ಟು, ಪೆಟ್ಟು, ಗುಳಿಯೆಂದು ನನ್ನ ಹದಿನೇಳಾಗುವಾಗ ಪೀಟು ಎಂಟರಲ್ಲಿದ್ದ. ನನ್ನ ತಪ್ಪದ ಗುರಿ ನೋಡಿ ಅವರಂತೆಯೇ ನಾನೂ ಚಕಿತನಾಗಿದ್ದೆ. ಗೋಲಿ ದೂರದೂರಕ್ಕೆ ಎಸೆದು ಪೀಟು ಆಟವನ್ನು ಉದ್ದಕ್ಕೆ ಎಳೆದನಷ್ಟೆ. ಆದರೆ ಅವನು ಎಂಟರಲ್ಲಿರುವಾಗಲೇ ನಾನು ಇಪ್ಪತ್ತರ ಪೆಟ್ಟಿನೊಂದಿಗೆ ಆಟವನ್ನು ಗೆದ್ದಿದ್ದೆ. ಪೀಟುವಿನ ಗೋಲಿಯನ್ನು ಕಿಸೆಯಲ್ಲಿಟ್ಟು ನಾನು ರವಿಯ ಗೋಲಿಯನ್ನು ಹಿಂದಿರುಗಿಸಿದೆ.
ರವಿ ಪೀಟುವಿನ ಕಾಲೆಳೆಯತೊಡಗಿದಾಗ, ಪೀಟು ಅವನನ್ನೇ ನನ್ನೊಂದಿಗೆ ಆಡಿ ಜಯಿಸುವ ಸವಾಲನ್ನೊಡ್ಡಿದ.
ರವಿಯೂ ಇದನ್ನೇ ಬಯಸಿದ್ದ. ಆಟವಾಯಿತು. ಈ ಆಟದಲ್ಲಿಯೂ ರವಿ ಹದಿನೈದಲ್ಲಿರುವಾಗ ನಾನು ಇಪ್ಪತ್ತರಲ್ಲಿ ಗೆದ್ದಾಗ ಪೀಟು ಚಪ್ಪಾಳೆ ಹೊಡೆದು ಸಂಭ್ರಮಿಸಿದ.
ನಾನು ಹೇಳಿದೆ, ‘ನಾವು ಮೂವರೂ ಆಡೋಣ. ಸೋಲು, ಗೆಲುವಿಲ್ಲ. ಯಾವುದೇ ಲೆಕ್ಕಾಚಾರವಿಲ್ಲ. ಕೇವಲ ಆಟವಾಡೋಣ.’ ಇಬ್ಬರೂ ಖುಶಿಯಾದರು. ನಂತರ ನಾವು ತುಂಬಾ ಹೊತ್ತು ಆಡಿದೆವು. ಡ್ಯಾಡಿ ಮನೆ ತಲುಪುವ ಮುನ್ನ ಮನೆ ಸೇರಬೇಕು ಎಂದು ಹೇಳಿದಾಗ ರವಿ ನನ್ನನ್ನು ಕೇಳಿದ. ‘ನೀನು ಡ್ಯಾಡಿಗೆ ಹೆದರುತ್ತಿಯೇನು?’
ನಾನು ಗೊಂದಲಕ್ಕೆ ಬಿದ್ದೆ. ಹೆದರುವುದೆಂದರೇನು? ನಾನು ನಿಜವನ್ನೇ ಹೇಳಿದೆ, ‘ನನಗೆ ತಿಳಿಯದು.’
ಅದನಂತರ ನಾನು ದಿನಾಲೂ ಅವರೊಂದಿಗೆ ಆಡತೊಡಗಿದೆ. ಚೆನ್ನಾಗಿ ಆಟವಾಡಿದ ನಂತರವೂ ಗೋಲಿಗಳನ್ನು ಕಳೆದುಕೊಳ್ಳಬೇಕಾಗಿಲ್ಲವೆಂದು ಪೀಟು ಖುಶಿಯಾಗಿದ್ದ. ಹೇಳಿದ ಸಹ. ‘ನೀನು ಬಂದ ನಂತರ ಆಟವಾಡಲು ಇಷ್ಟವಾಗ್ತಿದೆ. ಈಗ ನಾವು ಗೆಲ್ಲುವುದಕ್ಕಾಡುವುದಿಲ್ಲ. ಆಡುವುದಕ್ಕಾಗಿ ಆಡ್ತೇವೆ. ಅಲ್ವಾ?’
(ಕೃತಿ: ಜೀವ ಕೊಡಲೇ? ಚಹ ಕುಡಿಯಲೇ (ಕಾದಂಬರಿ), ಕೊಂಕಣಿ ಮೂಲ: ದಾಮೋದರ ಮಾವಜೋ, ಕನ್ನಡಕ್ಕೆ: ಕಿಶೂ ಬಾರ್ಕೂರು, ಪ್ರಕಾಶನ: ಬಹುವಚನ, ಬೆಲೆ: 400/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ