Advertisement
ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು”

ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು”

ನೆತ್ತಿಯ ಮೇಲಿನ ಕಣ್ಣ ಸ್ವಾಮೀಜಿ ಈಗ ಸಮಾಧಾನದಲ್ಲಿದ್ದು ಬೆವರುವುದನ್ನು ನಿಲ್ಲಿಸಿದ್ದರು. ಉಂಗುರಗಳನ್ನು ಹಾಕಿದ್ದ ಹಿತ್ತಾಳೆ ಚೊಂಬಿನ ನೀರನ್ನು ಇಬ್ಬರಿಗೂ ತೀರ್ಥದಂತೆ ಕೊಟ್ಟು ತಾವೂ ಬಲಗೈ ಗೆ ಬಗ್ಗಿಸಿಕೊಂಡರು. ಸ್ವಾಮೀಜಿ ಏನು ಮಾಡುತ್ತಾರೋ ಅದನ್ನೇ ಮಾಡಲು ತಯಾರಾದ ದಂಪತಿಗಳು ಅವರನ್ನೇ ನೋಡುತ್ತಿದ್ದರು. ಸ್ವಾಮೀಜಿ ನೀರಿದ್ದ ಕೈಯನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು ಗಟಕ್ಕೆಂದು ಆ ನೀರನ್ನು ಕುಡಿದರು. ನಂತರ ಅಂಗೈಯನ್ನು ಮುಂಡಾಸಿನ ಬಳಿ ತಗೊಂಡುಹೋದರು. “ಅಯ್ಯೋ, ಪೇಟವನ್ನ ತೆರೆದು ಮೂರನೇ ಕಣ್ಣಿಗೆ ಒರಸಿಬಿಡುತ್ತಾರೇನೋ?” ಎಂದು ವೃಷಭಳು ತನಗೇ ನೋವಾದಂತೆ ಬಾಯಿ ತೆರೆದುದನ್ನು ನೋಡಿದ ಅವರು ಪೇಟವನ್ನು ಸವರಿಕೊಳ್ಳಲಿಲ್ಲ.
ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು” ನಿಮ್ಮ ಓದಿಗೆ

‘ಇನ್ನೇನು ಈಗ ಬಂದುಬಿಡುತ್ತಾರೆ ’ ಎಂದು ಕಾಯುತ್ತಿದ್ದ ವೃಷಭಳ ಹೃದಯ ನಗಾರಿಯಂತೆ ಬಡಿದುಕೊಳ್ಳುತ್ತಿತ್ತು. ಏನು ತಪ್ಪು ಮಾಡಿದ್ದೇನೋ ಎನ್ನುವ ಕಳವಳವೂ ಜೊತೆಗೆ ಸೇರಿಕೊಂಡು ಮೂರು ಬಾರಿಯಾದರೂ ತಾನು ಜೋಡಿಸಿದ ಎಲ್ಲ ಸಾಮಗ್ರಿಗಳನ್ನು ಪರೀಕ್ಷಿಸಿದ್ದಳು.

ಅಷ್ಟಕ್ಕೂ ಇಂತಿಷ್ಟು ಮಾಡು ಅಂತ ಯಾರೂ ಅವಳಿಗೆ ಪಟ್ಟಿ ಮಾಡಿ ಕೊಟ್ಟಿರಲಿಲ್ಲ. ಹಾಗಾಗಿ ತನಗೆ ತಿಳಿದಂತೆ ಅಣಿ ಮಾಡಿದ್ದನ್ನೇ  ಮತ್ತೆ ಮತ್ತೆ ಪರೀಕ್ಷಿಸಿ  ಖಚಿತಪಡಿಸಿಕೊಂಡಿದ್ದಳು.

ನೆಲ ಒರೆಸಲು ಬಳಸಿ, ಬಳಸಿ ಬಣ್ಣಗೆಟ್ಟಿದ್ದ ಬಸಣ್ಣನ ಹಳೆಯ ಬನೀನು ಬಟ್ಟೆ ಉಪಯೋಗಿಸದೆ, ಹರಿದ ಮತ್ತೊಂದು ಹಳೆಯ ಬನೀನನ್ನು  ಹೊಸದಾಗಿ ಒರೆಸುವ ಬಟ್ಟೆ ಮಾಡಿಕೊಂಡಿದ್ದಳು. ಅದರಿಂದ ನೆಲವನ್ನೆಲ್ಲ ನೀರಲ್ಲಿ ತಿಕ್ಕಿ  ತೊಳೆದು ನೆಲವನ್ನು ಹೊಳೆಯುವಂತೆ ಮಾಡಿದ್ದಳು. ನೆಲ ಒರೆಸಿದ ನಂತರ  ಅಡುಗೆ ಮನೆಯ ಒಂದು ಮೂಲೆಯ್ಲಲಿದ್ದ ದೇವರನ್ನಿಡುವ ಕಟ್ಟೆಯನ್ನು ಮತ್ತೊಂದು ಮಡಿ ವಸ್ತ್ರದಿಂದ ಒರೆಸಿದ್ದಳು. ನಂತರ  ಪೂಜೆಯ ಕೆಂಪು ವಸ್ತ್ರದ ಒಂದು ತುದಿಯಿಂದ ದೇವರ ಪಟಗಳನ್ನು ಒರೆಸಿ, ಒಣಗಿದ್ದ  ಅದರದೇ  ಮತ್ತೊಂದು ತುದಿಯಿಂದ ಅವುಗಳ ಒದ್ದೆ ಹೋಗುವಂತೆ ಕೈಯಾಡಿಸಿದ್ದಳು.

ಅವರ ಬಳಿ ಇದ್ದದ್ದೇ ಎರಡು ಪೂಜೆಯ ವಸ್ತ್ರಗಳು. ಒಂದನ್ನು ಬಳಸಿ ಒಗೆಯಲು ಹಾಕಿ ಒಣಗಿಸಿ ಮತ್ತೆ ನಾಳೆಗೆ ಅದನ್ನೇ ಬಳಸುತ್ತಿದ್ದರು. ಮತ್ತೊಂದು ಟ್ರಂಕಿನಿಂದ ಹೊರಬರುತ್ತಿದ್ದುದೇ ಇಂತಹ ವಿಶೇಷ ದಿನಗಳಲ್ಲಿ. ಮದುವೆಯಾಗಿ ಈ ಊರಿಗೆ ಬಂದಾಗ ಮನೆಯವರು ಕೊಟ್ಟ ಎಲ್ಲ ದೇವರ ಫೋಟೋಗಳನ್ನು ಇವತ್ತು ಜೋಡಿಸಿಟ್ಟ ಕಾರಣ  ಅಡುಗೆ ಮನೆಯಲ್ಲಿದ್ದ,  ‘ದೇವರ ಮೂಲೆಗೆ’ ಹಬ್ಬದ ನೋಟ ಬಂದಿತ್ತು.

ಗಟ್ಟಿಯಾದ ಗಂಧವನ್ನು ರಟ್ಟೆ ನೋಯುವವರೆಗೂ ಒಂದು ಬೊಗಸೆಯಷ್ಟು ತೇದಿದ್ದಳು. ಅಕ್ಷತೆಯನ್ನು ಕಲೆಸಿಟ್ಟು, ಹೊಸ ವಿಭೂತಿ ಗಟ್ಟಿಯನ್ನು ತಟ್ಟೆಯಲ್ಲಿಟ್ಟು ಹಳೆಯದನ್ನು ಪಕ್ಕಕ್ಕೆ ಎತ್ತಿಟ್ಟಿದ್ದಳು. ಹಿತ್ತಾಳೆಯ ತಟ್ಟೆಗಳು ಹುಣಿಸೇ ಹುಳಿಯಲ್ಲಿ ಜಳಕ ಮಾಡಿದ ಕಾರಣ ಚಿನ್ನದಂತೆ ಮಿನುಗುತ್ತಿದ್ದವು. ಬೆಳಿಗ್ಗೆ ಸ್ನಾನ ಮಾಡಿ ಬರಿಹೊಟ್ಟೆಯಲ್ಲಿ ಬಾವಿಯಿಂದ ಸೇದಿದ ಸಿಹಿ ನೀರನ್ನ ತಮ್ಮ ಬಳಿ ಇದ್ದ ಹಿತ್ತಾಳೆಯ ಚೊಂಬಿನಲ್ಲಿ ತುಂಬಿಸಿಟ್ಟಿದ್ದಳು. ಇದ್ದ ಎರಡು ಹಿತ್ತಾಳೆ ತಟ್ಟೆಗಳನ್ನು ರಾತ್ರಿಯೇ ಒಲೆಯ ಬೂದಿಯಲ್ಲಿ ಫಳ ಫಳ ಎನ್ನುವಂತೆ ತಿಕ್ಕಿ ತೊಳೆದು, ತೆಂಗಿನ ನಾರಿನ ಜುಂಗಿನಲ್ಲಿ ಹುಣಿಸೇ ಹುಳಿಯಲ್ಲಿ ಉಜ್ಜಿ ಮಿನುಗುವಂತೆ ಮಾಡಿದ್ದಳು. ತಟ್ಟೆಗಳು ಬನ್ನಿಯ ಪತ್ರೆ, ಮಂಚಿ ಪತ್ರೆ, ಗಂಟೆಯ ಹೂ, ತುಂಬೆ ಹೂ, ಎಕ್ಕದ ಹೂ, ಒಂದಿಷ್ಟು ಬಿಳಿ ಕಾಕಡ ಹೂವಿನಿಂದ ಅಲಂಕೃತಗೊಂಡಿದ್ದವು. ಹೊಸ ಕುಂಕುಮ, ಅರಿಶಿನ, ಅದೇ ತಟ್ಟೆಯ ಒಂದು ಬದಿಯಲ್ಲಿದ್ದವು. ಕೈಯಲ್ಲಿ ಹೊಸೆದ ಹತ್ತಿಯ ಬತ್ತಿ ಎಣ್ಣೆಯಲ್ಲಿ ಮಿಂದು ಆರತಿಯ ತಟ್ಟೆಯಲ್ಲಿ  ಕಾಯುತ್ತಿದ್ದವು.

ಇವಿಷ್ಟು ಸಿದ್ಧತೆಯನ್ನು ಎಂದಿನಂತೆ ಮಾಡಿದ್ದ ವೃಷಭಳ ವಯಸ್ಸಿನ್ನೂ ಹದಿನಾರನ್ನು ಮೀರಿರಲಿಲ್ಲ. ಅವಳ ಬಾಳೆಯ ದಿಂಡಿನಂಥ ಎಳೆಯ ಶರೀರ, ಹರಳೆಣ್ಣೆಯ ತಲೆಯ ಸ್ನಾನದ ಕಾರಣ ಒಂದು ರೀತಿಯಲ್ಲಿ ಮಿರುಗುತ್ತಿತ್ತು. ಕುಂಡಿ ಮೀರಿ ಕೆಳಗಿಳಿಯುತ್ತಿದ್ದ ಅವಳ ಸಂಪನ್ನ ಕೂದಲು ಮಡಿವಸ್ತ್ರವೊಂದರಲ್ಲಿ ಸಿಂಬಿಯಾಗಿ ಸುತ್ತಿಕೊಂಡು ಸೊಟ್ಟಗೆ ಭುಜದ ಮೇಲೆ ಕೂತು ಅವಳ ಗುಂಡು ಮುಖದ ಸೊಬಗನ್ನು ಹೆಚ್ಚಿಸಿದ್ದವು. ಮದುವೆಯಲ್ಲಿ ಕೊಟ್ಟಿದ್ದ ಗಿಲೀಟಿನ ಬೆಂಡೋಲೆಗಳು ಕಿವಿಯಲ್ಲಿ ಮಿರುಗುತ್ತಿದ್ದರೆ ಅವಳ ಹಣೆಯಲ್ಲಿ ಪರ್ಮನಂಟಾಗಿ ಹಾಕಿದ್ದ ಹಸಿರು ಹಚ್ಚೆ ಅವಳು ಹಚ್ಚಿದ್ದ  ಕೆಂಪು ಕುಂಕುಮದ ಅಡಿಯಿಂದ ಇಣುಕುತ್ತಿತ್ತು. ಕರಿಮಣಿಯ ಸರ ಮತ್ತು ಚಿನ್ನದ ತಾಳಿಯ ಬಿಲ್ಲೆ ಅವಳ ಅಂದಕ್ಕೆ ಬೊಟ್ಟಿಟ್ಟಿದ್ದವು. ಅವಳ ಪುಟ್ಟ ಕೈ ಬೆರಳಲ್ಲಿ ಮದುವೆಯಲ್ಲಿ ಹಾಕಿದ್ದ ತೆಳ್ಳಗಿನ ತಗಡಿನಂತಿದ್ದ ಒಂದು ಚಿನ್ನದ ಉಂಗುರವಿತ್ತು. ತಾಳಿಯ ಬೊಟ್ಟು ಮತ್ತು ಒಂದು ಉಂಗುರವಷ್ಟೇ ಅವಳ ಸಕಲ ಸಂಪತ್ತುಗಳಾಗಿದ್ದರೂ, ಅವಳ ಮುಗ್ಧ  ಸೌಂದರ್ಯದ ಮುಂದೆ ಅವು ಯಾತಕ್ಕೂ ಇರಲಿಲ್ಲ. ಆದರೆ ಅವಳ ಅಗಲ ಕಣ್ಣುಗಳ ತುಂಬ ದುಗುಡವೇ ತುಂಬಿ ತುಳುಕುತ್ತಿತ್ತು.

ಬಸಣ್ಣ ಇನ್ನೇನು ಈ ಪ್ರಸಿದ್ಧ ಪವಾಡಗಳ ಸ್ವಾಮೀಜಿಗಳನ್ನು ಮನೆಗೆ ಕರೆತರುವ ಸಮಯವಾಗುತ್ತಿತ್ತು.

ಅವಳಿಗಿಂತ ಹನ್ನೆರಡು ವರ್ಷ ದೊಡ್ಡವನಾದ ಬಸಣ್ಣ ಎಸ್.ಎಸ್.ಎಲ್.ಸಿ. ಓದು ಮುಗಿಸಿದ ಕೂಡಲೆ ಕೆಲಸಕ್ಕೆ ಸೇರಿದ್ದ. ಮನೆ ಬಿಟ್ಟು ಹೊರಗೆ ದುಡಿಯುತ್ತಿದ್ದ ಅವನಿಗೆ ಕರ್ನಾಟಕದ ಹಲವು ಜಿಲ್ಲೆಗಳ ಪರಿಚಯವಿತ್ತು. ಮದುವೆ ಮಾಡಿದರೆ ದುಡಿಮೆ ಇಲ್ಲವಾಗುವ ಭಯದಿಂದ ಅವನ ವಿಧವೆ ತಾಯಿ ಆ ಕಾಲಕ್ಕೆ ವಿರುದ್ಧವಾಗಿ ಬಹುಕಾಲ ಅವನಿಗೆ ಮದುವೆ ಮಾಡಿರಲಿಲ್ಲ. ಮೂರು ವರ್ಷದ ಕೆಳಗೆ ಮದುವೆಮಾಡಿದ್ದರೂ ಮೈ ನೆರೆಯದ ಹುಡುಗಿಯಾಗಿದ್ದ ವೃಷಭ ಅವನನ್ನು ಸೇರಿದ್ದು ಎರಡು ವರ್ಷದ ಕೆಳಗಷ್ಟೇ.

ಅವರಿಬ್ಬರದೂ ಒಂದೇ ಹಳ್ಳಿ. ಇದ್ದ ಬದ್ದವರೆಲ್ಲ ಬಸವಣ್ಣನ ಒಕ್ಕಲಿನವರು. ಹೀಗಾಗಿ ಅಲ್ಲಿದ್ದ ಬಸವಣ್ಣಗಳು, ಬಸವರಾಜುಗಳು,  ಬಸಲಿಂಗಪ್ಪ, ಶಿವಲಿಂಗಪ್ಪ, ಶಿವಣ್ಣಗಳಿಗೆ ಭರವೇ ಇರಲಿಲ್ಲ. ತನ್ನ ಮನೆಯಲ್ಲಿ ಹಿರಿಯನಾಗಿ ಹುಟ್ಟಿದ ಹುಡುಗ ಬಸಣ್ಣನಾದರೆ ಅವನ ದೂರದ ಸಂಬಂಧಿಗಳ ಮನೆಯಲ್ಲಿ ಹುಟ್ಟಿದ ಮೊದಲ ಹುಡುಗಿಯ ಹೆಸರು ವೃಷಭ ಎಂದಾಗಿತ್ತು. ತುಮಕೂರಿನ ಬಳಿಯ ಹರೆಯೂರು ಎನ್ನುವ ಹಳ್ಳಿಯಿಂದ ಹೊರಟಿದ್ದ ಇವರ ಸಂಸಾರ ಬಳ್ಳಾರಿ  ಜಿಲ್ಲೆಯ ಶಿರಗುಪ್ಪಾ ತಾಲ್ಲೂಕಿನ ತೆಕ್ಕಲು ಕೋಟೆಯನ್ನು ಮೊದಲ ಠಾವನ್ನಾಗಿ ಮಾಡಿಕೊಂಡು ವಾಸ್ತವ್ಯ ಹೂಡಿತ್ತು.

ಏನೂ ತಿಳಿಯದ ಹದಿಮೂರರ ವಯಸ್ಸಿನ ಹುಡುಗಿ  ವೃಷಭಳಿಗೆ ಮದುವೆಯ ದಿನ ಕೂತಿದ್ದ ಕಡೆಯೇ ತೊಡೆಗಳು ಒಂದೇ ಸಮನೆ ಭಯದಿಂದ ನಡುಗಿದ್ದವು. ಆಡುವ ವಯಸ್ಸಿನ್ನೂ ಮುಗಿಯದಿರುವಾಗಲೇ ದೊಡ್ಡ ಗಾತ್ರದ ಸ್ಥನಗಳಿಗೆ ಹೆಸರಾಗಿದ್ದ ತನ್ನ ಅತ್ತೆ ದೇವೀರಮ್ಮನಿಗೆ ಅಧಿಕೃತವಾಗಿ ಸೊಸೆಯಾಗಿದ್ದಳು. ತೀರಿಹೋಗಿದ್ದ ತನ್ನ ಮಾವ ಅತ್ಯಂತ ಬೆಳ್ಳಗಿದ್ದನೆಂತಲೂ, ಅವನು ಮುದ್ದೆ ನುಂಗುವಾಗ ಮುದ್ದೆಯ ಕರಿ ತುತ್ತುಗಳು ಅವನ ಗಂಟಲಲ್ಲಿ ಇಳಿಯುವುದನ್ನು ಅವನ ಬಿಳಿಚರ್ಮದ ಮೂಲಕ ನೋಡಬಹುದಿತ್ತೆಂದು ಕೇಳಿದ್ದಳಾದರೂ ಅವನನ್ನು ನೋಡಿದ್ದ ನೆನಪಿರಲಿಲ್ಲ. ಆದರೆ ಬಸಣ್ಣ ಅವರಮ್ಮನಂತೆಯೇ ಕಪ್ಪಗಿದ್ದ ಹುಡುಗ. ಹದಿನೈದು ವರ್ಷಕ್ಕೆಲ್ಲ ಮನೆಯಿಂದ ಹೊರಬಿದ್ದಿದ್ದ ಅವನಿಗೆ ಜೀವನದಲ್ಲಿ ಕೆಲವು ದೊಡ್ಡ ಭಯಗಳಿದ್ದವು. ತನ್ನ ತಂದೆಯಂತೆ ಬೇಗನೆ ಸಾವು ಬರಬಾರದು ಎಂಬ ಭಯ ಒಂದೆಡೆಯಾದರೆ ಅವನ ಬಡತನ ಅವನನ್ನು  ಅತಿಯಾಗಿ ಹೆದರಿಸಿತ್ತು. ಪೈಸೆಗೆ ಪೈಸೆ ಕೂಡಿಟ್ಟು ದುಡಿಯುತ್ತಿದ್ದ ಅವನಿಗೆ ಬೇಗನೆ ಶ್ರೀಮಂತನಾಗುವ ಆಸೆಗಳಿದ್ದವು. ಆದರೆ ಅದು ಸುಲಭವಾಗಿರಲಿಲ್ಲ. ಅದಕ್ಕೊಂದು ಪವಾಡವೇ ನಡೆಯಬೇಕೆಂದು ಆತ ನಂಬಿದ್ದ. ಹಾಗಾಗಿ ಅವನು ಊರಿಗೆ ಬರುತ್ತಿದ್ದ ಸಾಧು-ಸಂತರನ್ನೆಲ್ಲ ಮನೆಗೆ ಕರೆತಂದು ಪೂಜೆ ಮಾಡಿಸುತ್ತಿದ್ದ. ಬಸಣ್ಣನ ಈ ವರ್ತನೆ ವೃಷಭಳಿಗೆ ಸರಿ ಬರುತ್ತಿರಲಿಲ್ಲ. ಯಾಕೆಂದರೆ ಅಂತಹ ಸಮಯದಲ್ಲೆಲ್ಲ ಅವಳಲ್ಲಿ ಭಯ, ಆತಂಕ, ಚಡಪಡಿಕೆಗಳು ಮೂಡಿ ಅವಳು ಒತ್ತಡಕ್ಕೊಳಗಾಗುತ್ತಿದ್ದಳು. ತನ್ನದೇ ಮನೆಯೆಂಬ ಶಾಲೆಯಲ್ಲಿ ಅವಳು ಎಲ್ಲವನ್ನೂ ಪ್ರಯೋಗ ಮಾಡುವುದರ ಮೂಲಕ ಕಲಿಯತೊಡಗಿದ್ದ  ಹುಡುಗಿ ತಾನೇ?

ಇನ್ನೂ ಒಂದರ್ಥಕ್ಕೆ ಮಗುವೇ ಆಗಿದ್ದ ಅವಳಿಗೆ ಸಾಧು ಸಂತರನ್ನ ಕಂಡರೆ ಅದೇಕೋ ಭಯವಾಗುತ್ತಿತ್ತು. ತವರಿನಲ್ಲಿ ಅವಳ ಎದುರು ಮನೆಯಲ್ಲಿದ್ದ ದಾನಪ್ಪಯ್ಯ ತಾತ, ಅವಳಿಗೆ ಸಾಧು ಸಂತರ ಬಗ್ಗೆ ಹಲವು ಕಥೆಗಳನ್ನು ಹೇಳುತ್ತಿದ್ದ. ಸಾಧುಗಳ ವಶದಲ್ಲಿದ್ದ ಹಲವು ಶಕ್ತಿ-ಭೂತ -ಪ್ರೇತಗಳ ಬಗ್ಗೆ ಅವನು ಹೇಳುತ್ತಿದ್ದ ಕಥೆಗಳು ಅವಳಲ್ಲಿ ವಿಪರೀತ ಭೀತಿಯನ್ನು ಹುಟ್ಟಿಸುತ್ತಿದ್ದವು. ಕೆಲವು ಕತೆಗಳಲ್ಲಿ ಊಟ-ಉಪಚಾರ ಸರಿಯಿಲ್ಲವೆಂತಲೋ, ಪೂಜೆಗೆ ಅಣಿಮಾಡಿದ್ದು ಸರಿಯಿಲ್ಲವೆಂತಲೋ ಅವರು ರಾಜಕುಮಾರಿಯರಿಗೆ, ರಾಜ ಮಹಾರಾಜರಿಗೆ ಶಾಪ ಕೊಟ್ಟದ್ದನ್ನೆಲ್ಲ ಕೇಳಿ ದುಃಖಿಸಿದ್ದಳು. ಅವಳಿದ್ದ ಹರೆಯೂರು ಅತ್ಯಂತ ಪುಟ್ಟ ಹಳ್ಳಿಯಾದ್ದರಿಂದ ಅಲ್ಲಿಗೆ ಸ್ವಾಮೀಜಿಗಳು, ಸಾಧು ಸಂತರು ಬರುವುದು ಬಹಳ ಕಡಿಮೆಯಿತ್ತು. ಅವಳ ತಂದೆ ಚಿಕ್ಕಣ್ಣನಿಗೆ ವ್ಯವಸಾಯವನ್ನು ಬಿಟ್ಟರೆ ಬೇರೆ ವಿಚಾರಗಳಿಗೆ ಪುರುಸೊತ್ತಿರಲಿಲ್ಲ. ಆದರೆ ತೆಕ್ಕಲುಕೋಟೆಯ ವಿಚಾರವೇ ಬೇರೆ ಇತ್ತು. ಜೊತೆಗೆ ಬಸಣ್ಣನದೂ.

ಶಿರಗುಪ್ಪ ತಾಲ್ಲೂಕಿನಲ್ಲೇ ಪ್ರಸಿದ್ಧವಾದ ಹಲವು ಗುಡಿಗಳು ತೆಕ್ಕಲಕೋಟೆಯಲ್ಲಿದ್ದವು. ಕಾಡಸಿದ್ದೇಶ್ವರನ ದೇವಸ್ಥಾನ, ಜಡೆ ಶಂಕರ ಲಿಂಗನ ದೇವಸ್ಥಾನ, ನಗರೇಶ್ವರ ದೇವಸ್ಥಾನ, ನೀಲಕಂಠೇಶ್ವರನ ದೇವಸ್ಥಾನ, ಸಿದ್ದರಾಮೇಶ್ವರ ದೇವಸ್ಥಾನ, ಕಾಳಮ್ಮನ ದೇವಸ್ಥಾನ, ದ್ಯಾವಮ್ಮನ ದೇವಸ್ಥಾನ, ಮಲ್ಲಯ್ಯನ ಗುಡಿ, ಪೇಟೆ ಬಸವೇಶ್ವರನ ಗುಡಿ  ಇನ್ನೂ ಹಲವು ದೇವಸ್ಥಾನಗಳ ಕಾರಣ ಇಲ್ಲಿಗೆ ಬರುವ ಸಾಧು ಸಂತರ ಸಂಖ್ಯೆ ಸ್ವಲ್ಪ ಜಾಸ್ತಿಯೇ ಇತ್ತು. ಬಸಣ್ಣನಿಗೆ ತನ್ನ ಬಡತನದ ಬಗ್ಗೆ ಹಿಂಜರಿಕೆಯಿದ್ದರೂ ತನ್ನ ಬುದ್ಧಿವಂತಿಕೆಯ ಬಗ್ಗೆ ಸ್ವತಃ ಅಭಿಮಾನವಿತ್ತು. ಅಷ್ಟಕ್ಕೂ ಈ ಊರಿನಲ್ಲಿ ಓದು ಬರಹ ಬರುತ್ತಿದ್ದ ಕೆಲವೇ ಕೆಲವರಲ್ಲಿ ಅವನೂ ಒಬ್ಬನಾಗಿದ್ದ. ಬೇಗನೆ ತಮಗೆ ಒಳ್ಳೆಯದಾಗಬೇಕೆಂದರೆ ಯಾರದಾದರೂ ಪವಾಡ ಪುರುಷನ ಅನುಗ್ರಹ ತಮ್ಮ ಮೇಲೆ ಆಗಬೇಕು ಎನ್ನುವುದು ಅವನ ಮನದಾಳದ ನಂಬಿಕೆಯಾಗಿತ್ತು.

ತನ್ನ ಗಂಡ  ಮನೆಗೆ ಕರೆತರುವ ಸಾಧು ಸಂತರ ಪೂಜೆಗೆ ಅಣಿಮಾಡುವುದು,  ಪೂಜೆಯ ನಂತರ ಊಟ ಹಾಕುವುದು ವೃಷಭಳ ಪಾಲಿಗೆ ಬರುವ ಕೆಲಸವಾಗಿ ಅವಳಿಗೆ ತಾನೆಲ್ಲಿ ತಪ್ಪು ಮಾಡುತ್ತೇನೋ, ಯಾವ ಬಗೆಯ ಶಾಪ ಸಿಗುತ್ತದೋ ಎನ್ನುವ ಭಯದಿಂದ ನಡುಗುತ್ತಿದ್ದಳು.

ಅದರಲ್ಲೂ ಇವತ್ತು ಬಸಣ್ಣ ಕರೆತರುತ್ತಿದ್ದ ಸ್ವಾಮೀಜಿ ಅವಳಲ್ಲಿ ವಿಶೇಷ ಭಯವನ್ನು ಹುಟ್ಟಿಸಿದ್ದ. ನೆತ್ತಿಯ ಮೇಲೆ ಕಣ್ಣಿದ್ದ ಈ ಸ್ವಾಮಿಗೆ ಅತ್ಯಂತ ವೀಶೇಷ ಶಕ್ತಿಯಿರುವ ಪ್ರತೀತಿಗಳಿದ್ದವು. ಆತ ಯಾವಾಗಲೂ ತಲೆಗೆ ಪೇಟ ಬಿಗಿದು, ತನ್ನ ಮೂರನೇ ಕಣ್ಣನ್ನು ಮುಚ್ಚಿಡುತ್ತಾನೆಂದೂ, ಅದನ್ನು ಅವನು ತೆಗೆದನೆಂದರೆ ಸಾಕ್ಷಾತ್ ಮುಕ್ಕಣ್ಣನಂತೆಯೇ ಜಗತ್ತನ್ನು ಅಲ್ಲೋಲ ಕಲ್ಲೋಲ ಮಾಡಬಲ್ಲನೆಂದೂ ಜನರಲ್ಲಿ ನಂಬಿಕೆಯಿತ್ತು. ಈ ಕಣ್ಣು ಯಾರಿಗೂ ಕಾಣಬಾರದೆಂದು ಸ್ವಾಮೀಜಿ ಸ್ನಾನ ಮಾಡುವಾಗ ಯಾರನ್ನೂ ಒಳ ಬರದಂತೆ  ಅತ್ಯಂತ ಗುಪ್ತವಾಗಿ ಮೀಯುತ್ತಾನೆಂದೂ ಬಸಣ್ಣ ಅವಳಿಗೆ ಹೇಳಿದ್ದ. ಮಲಗಿದ್ದಾಗಲೂ ತಲೆಯ ಮುಂಡಾಸನ್ನು ತೆಗೆಯದೆ ಮಲಗುವ ಈ ಸ್ವಾಮಿಗೆ ವಿಶೇಷ ಶಕ್ತಿಗಳಿರುವ ಕಾರಣ ಇವನು ಊರಿಗೆ ಬಂದಿರುವ ಈ ಸದಾವಕಾಶವನ್ನು ಬಿಡಬಾರದೆಂದು ವೃಷಭಳಿಗೆ ಬುದ್ದಿ ಹೇಳಿದ್ದ. ಬಟ್ಟೆಯ ಹಿಂದೆ ಮುಚ್ಚಿಟ್ಟುಕೊಳ್ಳುವ ಎಲ್ಲ ಅಂಗಗಳ ಬಗ್ಗೆ ಜನರಲ್ಲಿ ವಿಚಿತ್ರ ಉದ್ವೇಗಗಳು, ಕುತೂಹಲವಿರುವುದು ಯಾವತ್ತಿಗೂ ನಿಜವೇನೋ?

ಅಷ್ಟೇ ಆಗಿದ್ದರೆ ಸಾಕಿತ್ತು. ಆದರೆ ಈ ಸ್ವಾಮಿ ಸುಂದರನೂ, ತೇಜೋವಂತನೂ ಆಗಿದ್ದ. ಆತ ಐವರು ಸಹೋದರರಲ್ಲಿ ಒಬ್ಬನೆಂದೂ ಮಿಕ್ಕ ನಾಲ್ವರೂ ಮೂಗರೆಂದೂ ಸ್ವಾಮೀಜಿ ಜನರಿಗೆ ಹಾವ ಭಾವಗಳ ಸಮೇತ ಕಥೆ ಹೇಳಿದ್ದರು. ಎಲ್ಲರೂ ಸನ್ಯಾಸ ಸ್ವೀಕರಿಸಿ ಇಡೀ ಭಾರತದ ತುಂಬೆಲ್ಲ ಪ್ರವಾಸ ಮಾಡುತ್ತಿದ್ದಾರೆ ಎಂದು ಹೇಳಿ, ತಾವು ಉತ್ತರದ ಕಾಶಿಯಲ್ಲಿ ತಮ್ಮ ಮೂರನೇ ಕಣ್ಣನ್ನು ಶಿವನ ಧ್ಯಾನದಿಂದ ಪಡೆದು ಅದನ್ನು ಲೋಕ ಕಲ್ಯಾಣಕ್ಕೆ ಮಾತ್ರ ಬಳಸುವುದಾಗಿಯೂ, ಗುಪ್ತನಿಧಿಗಳು, ನಗ ನಾಣ್ಯಗಳೂ ಈ ಮೂರನೇ ಕಣ್ಣಿಗೆ ಕಾಣುತ್ತವೆಂದು ಜನರಿಗೆ ತಿಳಿಸಿದ್ದ. ಈ ಕಣ್ಣಿನ ದೃಷ್ಟಿಯ ಕಾರಣ ಎಂತಹ ವಿಷ ಜಂತುಗಳು, ದೆವ್ವ ಪಿಶಾಚಿಗಳೂ ತನ್ನನ್ನು ಮುಟ್ಟುವುದಿಲ್ಲವೆಂದು ವಿಶಧೀಕರಿಸಿದ್ದ.

ಈ ಸ್ವಾಮೀಜಿ ಪಕ್ಕದ ಊರಿನಲ್ಲಿ ತಂಗಿದ್ದಾಗ  ಸಿದ್ದರಾಮಯ್ಯ ಎನ್ನುವ ರೈತ ಇವನನ್ನು ತನ್ನ ಮನೆಗೆ ಆಹ್ವಾನಿಸಿ ಪೂಜೆ ಮಾಡಿ ಕಳಿಸಿದ್ದನಂತೆ. ಅದಾದ ಒಂದೇ ವರ್ಷದಲ್ಲಿ ಅವನು ಆಗರ್ಭ ಶ್ರೀಮಂತನಾಗಿ ಉಪ್ಪರಿಗೆ ಮನೆ ಕಟ್ಟಿಸಿದ್ದ ಬಗ್ಗೆ ಜನರು ಮಾತಾಡುತ್ತಿದ್ದರು. ಹಾಗೆ ಆದದ್ದಂತೂ ನಿಜವಾಗಿತ್ತು.

ಪಕ್ಕದ ಊರಿನ ಸಿದ್ದರಾಮಯ್ಯನಿಗೆ ಪಿತ್ರಾರ್ಜಿತವಾಗಿ  ಒಂದು ಪುರಾತನ ಮನೆ ಬಳುವಳಿಯಾಗಿ ಬಂದಿತ್ತು. ಅದೆಷ್ಟೇ ಸುಣ್ಣ, ಬಣ್ಣ, ರಿಪೇರಿ ಮಾಡಿದರೂ ತಡೆದುಕೊಳ್ಳಲಾಗದ ಆ ಮನೆ ಒಂದು ದಿನ ದೊಡ್ಡ ನಿಟ್ಟುಸಿರೊಂದನ್ನು ಹೊರಹಾಕಿ ಕುಸಿದು ಬಿಟ್ಟಿತು. ಆ ಮನೆಯ ಉಳಿದ ಭಾಗಗಳನ್ನು ಬೀಳಿಸುತ್ತಿದ್ದಾಗ ಗೋಡೆಯೊಂದರಲ್ಲಿ ಬಾವಿಯಲ್ಲಿ ಸೇದುವ ಹಗ್ಗದಷ್ಟೇ ಗಾತ್ರದ ಅಪ್ಪಟ ಚಿನ್ನದ ಸರಪಳಿಯ ತುಂಡೊಂದು ಸಿಕ್ಕಿತೆಂದೂ, ಅವನು ರಾತ್ರೋ ರಾತ್ರಿ ಅದನ್ನು ಅಕ್ಕಸಾಲಿಗ ಮಲ್ಲಪ್ಪನ ಬಳಿ ಕರಗಿಸಿ ಒಡವೆ ಮಾಡಿಸಿ, ಮಾರಿದ ಕಾರಣವೇ ದೊಡ್ಡ ಶ್ರೀಮಂತನಾದನೆಂದೂ ಜನರು ಇನ್ನೊಂದು ಕಥೆಯನ್ನೂ ಹೇಳುತ್ತಿದ್ದರು.

ಸಿರಿಸ್ವಾಮಿಗಳ ಮಹಾತ್ಮೆಯೂ ಹೀಗೆಯೇ ಪ್ರಸಿದ್ಧವಾಗಿತ್ತು. ಒಮ್ಮೆ ಆತ ಹಂಪಿಯ ಜಾತ್ರೆಗೆ ಹೋಗಲು ತನಗೆ ತಡವಾಗುತ್ತಿದೆಯೆಂದು ಯಾರಲ್ಲೋ ಹೇಳಿದನಂತೆ. “ಅಯ್ಯೋ ಜಾತ್ರೆ ಇವತ್ತೇನೆ ನೀವು ಹೋಗಲು ಸಾಧ್ಯವೇ ಇಲ್ಲ ಬಿಡಿ” ಎಂದರಂತೆ ಜನರು. “ಹೌದೇನ್ರಪ್ಪ?” ಎಂದ ಅವರು ತಮ್ಮ ಕರಿ ಕಂಬಳಿಯನ್ನು ಹಾಸಿ ಜನರನ್ನೂ ಕೂಡುವಂತೆ  ಹೇಳಿದರಂತೆ. ಮರುಕ್ಷಣದಲ್ಲಿ ಅವರು ಹಾರುತ್ತ ಹಂಪಿಯಲ್ಲಿದ್ದರಂತೆ. ಸಿರಿಸ್ವಾಮಿಗಳು ಬೇಕಾದಾಗೆಲ್ಲ ತನ್ನ ಕರಿ ಕಂಬಳಿಯನ್ನು ನೆಲದಲ್ಲಿ ಹಾಸಿ ಬೇಕೆಂದಲ್ಲಿಗೆ ಪ್ರಯಾಣಿಸುತ್ತಿದ್ದರೆಂದು ಜನರು ಮಾತಾಡುತ್ತಿದ್ದರು.

ಅಲ್ಲಾದ್ದೀನನ ಅದ್ಭುತ ಹಾರುವ ಕಂಬಳಿಯ ಬಗ್ಗೆ  ಎಂದೂ ಕೇಳಿರದ ವೃಷಭಳಿಗೆ ಇದು ಅತ್ಯಾಕರ್ಷಕ ಕಥೆಯೆನಿಸಿತ್ತು. ಕೊನೆಯಲ್ಲಿ ಏಕಕಾಲದಲ್ಲಿ ಏಳು ಜಾಗಗಳಲ್ಲಿ ಆ ಸ್ವಾಮೀಜಿಗಳು ಸಮಾಧಿಯಾಗಿದ್ದರಂತೆ. ಹೀಗಾಗಿ ಏಳೂ ಊರುಗಳಲ್ಲಿ ಒಟ್ಟಿಗೆ ಅವರ ಜಾತ್ರೆ ನಡೆಯುತ್ತಿತ್ತು. ಈ ಸ್ವಾಮಿಗಳು ಈಗಾಗಲೇ ಸಮಾಧಿಯಾಗಿದ್ದರಿಂದ ಬಸಣ್ಣ ಅವರನ್ನು ಮನೆಗ ಕರೆತರುವ ಸಾದ್ಯತೆ ಇರಲಿಲ್ಲ. ಈ ಕಾರಣ ವೃಷಭಳಿಗೆ ಅವರ ಬಗ್ಗೆ ಭಯವಿರಲಿಲ್ಲ. ಬದಲಿಗೆ ಅವರ ಹೆಸರಿನ ಜಾತ್ರೆ ಬಂತೆಂದರೆ ಸಂತಸದಿಂದ ಮನಸ್ಸು ಕುಣಿದು ಕುಪ್ಪಳಿಸುತ್ತಿತ್ತು.

ತೆಕ್ಕಲ ಕೋಟೆಯ ಸರಹದ್ದಿನಲ್ಲಿ ಇಂತಹ ಹಲವು ದಂತ ಕಥೆಗಳು ಆಗಾಗಲೇ ಬಹಳ ಚಾಲ್ತಿಯಲ್ಲಿದ್ದವು. ಹಳೆಯ ಕಥೆಗಳ ಜೊತೆ  ಹೊಸ ಕಥೆಗಳು ಸಲಭವಾಗಿ ಬೆರೆತು ಬಲುಬೇಗನೆ ಗಾಳಿಯಲ್ಲಿ ತೇಲುತ್ತಿದ್ದವು. ಅದಕ್ಕೂ ಕಾರಣಗಳಿದ್ದವು.

ವಿಜಯನಗರದ ಸಾಮ್ರಾಜ್ಯ ಕುಸಿದ ನಂತರ ಹೇಳಿ, ಕೇಳಿ ಇದು ಪಾಳೆಯಗಾರರು ಆಳಿದ್ದ ಜಾಗ. ಬಾಲದ ಹನುಮಂತ ನಾಯಕ, ಅದ್ವಾನಿಯ ಸುಲ್ತಾನ, ಹೈದರ್ ಅಲಿ ಇತ್ಯಾದಿ ಜನರಿಂದ ಆಳಲ್ಪಟ್ಟ ತೆಕ್ಕಲ ಕೋಟೆಯ ಬಗ್ಗೆ ಅಲ್ಲಿನ ಜನರಿಗೆ ಅದೇನೋ ವಿಶೇಷ ಕುತೂಹಲವಿತ್ತು. ಹೈದರ್ ಅಲಿ ಇಲ್ಲಿ ಒಂದು ಚೌಕನಾದ ಕೋಟೆಯನ್ನೂ ಕಟ್ಟಿದ್ದರಿಂದಲೇ ಇದಕ್ಕೆ ತೆಕ್ಕಲಕೋಟೆ ಎನ್ನುವ ಹೆಸರು ಬಂದಿತ್ತು. ಪ್ರತಿಯೊಂದು ಪಾಳೇಗಾರನ ಮನೆತನ ಕುಸಿದಾಗಲೂ ತಮ್ಮ ನಗ ನಾಣ್ಯಗಳನ್ನು ಶತ್ರುಗಳಿಗೆ ಸಿಗದಂತೆ ಹುಗಿದು ಬಚ್ಚಿಟ್ಟಿದ್ದಾರೆಂಬ ಕಥೆಗಳಿದ್ದವು. ನೂರಾಒಂದು ಬಾವಿಗಳು ತೆಕ್ಕಲಕೋಟೆಯಂತ ಸಣ್ಣ ಜಾಗದಲ್ಲಿದ್ದವಂತೆ. ಅವೆಲ್ಲ ಎಲ್ಲಿ ಹೋದವು? ಯಾಕೆ? ಎಂಬೆಲ್ಲ ರಹಸ್ಯ ಮತ್ತು ಕೌತುಕಗಳ ಕಾರಣ ಜನರಲ್ಲಿ, ತಮಗೂ ಒಂದು ದಿನ ಗುಪ್ತನಿಧಿ ಸಿಗಬಹುದೆಂಬ ಆಸೆಗೇನೂ ಕೊರತೆಯಿರಲಿಲ್ಲ. ಅದೇ ಹುಚ್ಚು ಬಸಣ್ಣನನ್ನೂ ಮೆಲ್ಲಗೆ ಆವರಿಸಿಕೊಂಡುಬಿಟ್ಟಿತ್ತು. ಹಾಗಾಗಿ ಗುಪ್ತ ನಿಧಿಗಳನ್ನು ಕಾಣಬಲ್ಲ ಮೂರನೇ ಕಣ್ಣಿದ್ದ ಈ ಸ್ವಾಮಿ ಬಸಣ್ಣನ ಕಣ್ಣನ್ನು ತೀವ್ರವಾಗಿ ಸೆಳೆದಿದ್ದ.

ಅದೇ ಊರಿನಲ್ಲಿ ಹೊಸಶಿಲಾಯುಗದ ಜನರು ನೆಲಸಿದ್ದ ಕಾಲದ ಸಮಾಧಿಗಳು, ಗುಡಿಸಲು, ಮಡಕೆ, ಕುಡಕೆಗಳು ಸಿಕ್ಕವೆಂದು ಸುದ್ದಿಯಿದ್ದರೂ ಆ ಬಗ್ಗೆ ಜನರ ಗಮನ ಅಷ್ಟಾಗಿ ಹೋಗಿರಲಿಲ್ಲ. ಅಲ್ಲಿಯೂ ಒಂದೆರಡು ಚಿನ್ನದ ಗುಂಡುಗಳು, ಓಲೆಗಳು ಸಿಕ್ಕರೂ ಅವಕ್ಕೆ ಅಂತಹ ಕಿಮ್ಮತ್ತಿಲ್ಲದ ಕಾರಣ ಆ ಬಗ್ಗೆ ತೆಕ್ಕಲಕೋಟೆಯ ಜನರು ವಿಚಿತ್ರವಾಗಿ ತೆಪ್ಪಗಿದ್ದುಬಿಟ್ಟಿದ್ದರು. ಐವತ್ತು ವರ್ಷಗಳ ಹಿಂದೆ ಅಲ್ಲಿದ್ದ ವಿದ್ಯಾವಂತರು ಬೆರಳೆಣಿಕಯ ಜನರಷ್ಟೇ!

ಸ್ವಾಮೀಜಿ ಸರಳವಾಗಿಯೇ ನಡೆದುಬಂದರು, ಅವರನ್ನು ಮನೆಗೆ ಕರೆತಂದ ಬಸಣ್ಣ ಭಯ ಭಕ್ತಿಯ ಪರಮಾವತಾರವಾಗಿ ಹೋಗಿದ್ದ. ಪೂಜೆ ಮುಗಿಯುವವರೆಗೆ ಸ್ವಾಮೀಜಿ ಒಂದು ಹನಿ ನೀರೂ ಮುಟ್ಟುವುದಿಲ್ಲವೆಂದರು.

ಸ್ವಾಮಿಗಳ ಪೂಜೆ ಮುಗಿಯುವವರೆಗೆ ಬಸಣ್ಣ ಮತ್ತು ವೃಷಭ ಇಬ್ಬರೂ ಬರಿಹೊಟ್ಟೆಯಲ್ಲೇ ಇರಲು ನಿರ್ಧರಿಸಿದ್ದ ಕಾರಣ ಪೂಜೆ ಶುರುಮಾಡಲು ಎಲ್ಲರೂ ಉತ್ಸುಕರಾದರು.

ವೃಷಭಳ ಕಣ್ಣು ಅವಳಿಗೆ ಗೊತ್ತಿಲ್ಲದೆ ಸ್ವಾಮಿಯ ತಲೆಯ ಮೇಲಿನ ಮುಂಡಾಸಿನ ಮೇಲೆ ಹೋಗಿ ನಿಲ್ಲತೊಡಗಿತು. ಗಡ್ಡ, ಮೀಸೆ, ತಲೆಕೂದಲು ಎಲ್ಲ ನುಣ್ಣಗೆ ಬೋಳಿಸಿದ್ದ  “ಈ ಸ್ವಾಮೀಜಿಯ ತಲೆಯ ಕೂದಲನ್ನು ಯಾರು ತೆಗೆಯುವುದು? ಆ ಕ್ಷೌರದವನಿಗೆ ಮೂರನೇ ಕಣ್ಣಿನ ದರ್ಶನವಾಗಿರಲೇ ಬೇಕಲ್ಲವೇ?” ಅಂತ ಅವಳ ಮನಸ್ಸು ಯೋಚಿಸುತ್ತಿತ್ತು. ಸಧ್ಯ ಆ ಮೂರನೇ ಕಣ್ಣಿಗೆ ನೋವಾಗದಂತೆ ತಲೆ ಬೋಳಿಸುವ ಕೆಲಸ ತನ್ನದಲ್ಲವಲ್ಲ ಎನ್ನುವ ವಿಚಿತ್ರ ಸಮಾಧಾನವೂ ಅವಳಲ್ಲಿ ಮೂಡಿತ್ತು.

ಸ್ವಾಮೀಜಿ ಪೂಜೆಗೆ ಕುಳಿತಾಗ “ಈಗ ಸ್ವಾಮೀಜಿಯ ಕಣ್ಣು ತೆರೆದಿದೆಯೇ ಅಥವಾ ಮುಚ್ಚಿದೆಯೇ?” ಎಂಬ ಪ್ರಶ್ನೆ ಅವಳಲ್ಲಿ ಸುಳಿದುಹೋಯಿತು. ತಲೆಗೆ ಕಾವಿಯ ಪೇಟವನ್ನು  ಬಿಗಿದಿರುವ ಕಾರಣ ನೆತ್ತಿಯ ಆ ಮೂರನೇ ಕಣ್ಣು ಮುಚ್ಚಿರಬೇಕು ಎಂದು ತನಗೆ ತಾನೇ ಹೇಳಿಕೊಂಡಳು.

ಬಸಣ್ಣ ಪ್ರತಿದಿನವೂ ಕನಿಷ್ಠ ಒಂದು ಗಂಟೆ ಪೂಜೆ ಮಾಡುತ್ತಿದ್ದ. ಆಗೆಲ್ಲ ಅವನು ಜೋರಾಗಿ ಮಂತ್ರಗಳನ್ನು ಹೇಳುತ್ತಿದ್ದ. ಒಂದೂ ಮರೆಯದಂತೆ ಸತತವಾಗಿ  ಒಂದು ಗಂಟೆ ಮಂತ್ರ ಹೇಳುವ ತನ್ನ ಗಂಡ ಅತ್ಯಂತ ಬುದ್ಧಿವಂತನೇ ಇರಬೇಕೆಂದು ಅವಳ ಭಾವನೆಯಾಗಿತ್ತು.

ಎಡ ಅಂಗೈನಲ್ಲಿ  ಕರಡಿಗೆಯಲ್ಲಿನ ಶಿವಲಿಂಗವನ್ನಿಡಿದು, ಅದನ್ನು ಶೃಂಗರಿಸಿ, ಕಣ್ಣಿನ ಸಮಕ್ಕೆ ಎತ್ತಿ ಹಿಡಿದು ಅದನ್ನೇ ನೋಡುತ್ತ ಅರ್ಧಕಣ್ಣನ್ನು ಮುಚ್ಚಿ ಕಣ್ಣ ಗುಡ್ಡೆಗಳನ್ನು ಬಸಣ್ಣ ಮೇಲಕ್ಕೆ ತೇಲಿಸುತ್ತಿದ್ದ, ಅದನ್ನು ನೋಡುವಾಗ ಮಾತ್ರ ವೃಷಭಳಿಗೆ ಭಯವಾಗುತ್ತಿತ್ತು. ಮಿಕ್ಕಂತೆ ಗಂಡನೆಂದರೆ ಅವಳಿಗ ವಿಪರೀತ ಗೌರವವಿತ್ತು. ಅಷ್ಟಕ್ಕೂ ಅವಳು ಓದಿದ್ದುದು ನಾಲ್ಕನೇ ತರಗತಿ. ಗಂಡ ಮೆಟ್ರಿಕ್ ಪಾಸ್ ಮಾಡಿ, ಸರ್ಕಾರಿ ನೌಕರಿಯಲ್ಲಿದ್ದ. ಇಲ್ಲದಿದ್ದರೆ ದೂರದ ತೆಕ್ಕಲಕೋಟೆ ಎನ್ನುವ ‘ದೊಡ್ಡ ’ ಊರನ್ನು ಅವಳು ನೋಡಲು ಸಾಧ್ಯವೇ ಇರಲಿಲ್ಲ.

ವೃಷಭಳ ಮನೆಗೆ ಬಂದಿದ್ದ ಸ್ವಾಮೀಜಿ ಪೂಜೆಯನ್ನು ಆರಂಭಿಸಿದರು.

ಆದರೆ ಸ್ವಾಮೀಜಿಯ ಕೈ  ಅವಳು ನೋಡಿದ್ದ ಎಲ್ಲರಿಗಿಂತ ಮುಂದಕ್ಕಿತ್ತು. ಅವರ ಧ್ವನಿ ತಾರಕದಲ್ಲಿ ಮೊಳಗುವ ಕಂಚಿನ ಗಂಟೆಯ ರೀತಿ ಕೇಳಿಸತೊಡಗಿತು. ಈಶ್ವರನ ಮಂತ್ರಗಳು, ಮಹದೇಶ್ವರನ ಹಾಡುಗಳು ಅವನ ಬಾಯಿಂದ ಪುಂಖಾನು ಪುಂಖಾನುವಾಗಿ ಹೊರಬರತೊಡಗಿದವು.

“ಇಂತ ಚೆನ್ನಾಗಿ ಮಂತ್ರ ಹೇಳುವ ಈಯಪ್ಪ ಎಷ್ಟನೇ ಕ್ಲಾಸ್‌ವರೆಗೆ ಓದಿರಬಹುದು?” ಎನ್ನುವ ಸಂಶಯ ವೃಷಭಳ ಮನಸ್ಸಿನಲ್ಲಿ ಸುಳಿದುಹೋಯ್ತು.

ಬಸಣ್ಣನ ಮನೆಯ ದೇವರನ್ನೆಲ್ಲ ಪೂಜಿಸಿದ ನಂತರ  “ರಂಗೋಲಿ ಪುಡಿಯನ್ನು ಕೊಡು” ಎಂದು ಸ್ವಾಮೀಜಿ ವೃಷಭಳನ್ನು  ಕೇಳಿದರು. ಅವಳು ಬಿಳಿಯ ರಂಗೋಲಿ ಪುಡಿಯನ್ನು ತಂದು ಕೊಟ್ಟಳು. ಸ್ವಾಮೀಜಿ ತಮ್ಮ ಸುತ್ತಲಿದ್ದ ತಟ್ಟೆ, ಧೂಪ, ದೀಪಗಳನ್ನೆಲ್ಲ ಅತ್ತಿತ್ತ ಸರಿಸಿ ಒಂದಷ್ಟಗಲ ಜಾಗ ಮಾಡಿದರು. ವೃಷಭಳು ಅವಾಕ್ಕಾಗಿ ನೋಡುತ್ತಿರುವಂತೆಯೇ ತಮ್ಮ ಗಂಡು ಬೆರಳುಗಳ ಸಂದಿನಿಂದ ರಂಗೋಲಿಪುಡಿ ಇಳಿಬಿಡುತ್ತ ಚಕ ಚಕನೆಂದು ಒಂದು ಮಂದಾರ ತಾವರೆಯನ್ನು  ಸೃಷ್ಟಿಸಿದರು. ಅದರ ನಡುವಿನ ಭಾಗಕ್ಕೆ ಕುಂಕುಮ ಅರಿಶಿಣಗಳ ರಂಗನ್ನು ಚೆಲ್ಲಿದರು. ಗಂಧಕ್ಕೆ ಬೆರಳನ್ನು ಅದ್ದಿ ಹ್ರಾಂ.. ಹ್ರೀಂ… ಸ್ವಸ್ತಿಕ… ಅಂತೆಲ್ಲ ಬರೆದು ಅಲಂಕರಿಸಿದರು. ಇದೆಲ್ಲ ಯಾತಕ್ಕೆ ಎಂದು ನೋಡುತ್ತಿರುವಂತೆ ತಮ್ಮ ಕಾವಿಯ ಜೋಳಿಗೆಯಿಂದ ಒಂದು ಪುಟ್ಟ ಮರದ ಪೆಟ್ಟಿಗೆಯನ್ನು ತೆರೆದರು. ಅದರಲ್ಲಿ ಹತ್ತಾರು ಪುಟ್ಟ ನಾಗರಗಳು, ಬಸವಗಳು, ಲಿಂಗಗಳ ದೇವರುಗಳಿದ್ದವು. ಅವನ್ನು ಯಾವುದೋ ನಿಯಮದ ಪ್ರಕಾರ ರಂಗೋಲಿಯ ನಡುವೆ ಕೂಡಿಸುತ್ತ ಹೋದರು. ಬಸಣ್ಣ ಕೂತಕಡೆಯೇ ಬಾಯಿ ತೆರೆದು ನೋಡುತ್ತಿದ್ದ.

ವೃಷಭಳನ್ನೂ ಕೂರಲು ಹೇಳಿದ  ‘ನೆತ್ತಿಯ ಕಣ್ಣಿನ ಸ್ವಾಮೀಜಿ’ ಅವರಿಬ್ಬರ ಬೆರಳಿನಲ್ಲಿದ್ದ ಚಿನ್ನದ ಉಂಗುರಗಳನ್ನು ಬಿಚ್ಚಿ, ಹಿತ್ತಾಳೆಯ ಚೊಂಬಿನಲ್ಲಿದ್ದ ನೀರಿನಲ್ಲಿ ಹಾಕಲು ಹೇಳಿದರು. ಅಲ್ಪ -ಸ್ವಲ್ಪ ಹಿಂತೆಗೆದ ಬಸಣ್ಣನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತ  ‘ಹೆದರದಿರುವಂತೆ’ ಆಶ್ವಾಸನೆ ನೀಡಿದರು. ಬಸಣ್ಣ ವೃಷಭಳ ಕಡೆ ನೋಡುತ್ತ  “ಹಾಕು” ಎನ್ನುವಂತೆ ಸನ್ನೆ ಮಾಡಿದಾಗ ಅವಳು ತನ್ನ ಬೆರಳಿಗೆ ಅಂಟಿದ್ದ ಉಂಗುರವನ್ನು ಕಷ್ಟಪಟ್ಟು ಕಳಚಿ ಹಾಕಿದಳು. “ಗುಳುಂ” ಎನ್ನುವ ಸದ್ದಿನೊಂದಿಗೆ ಅದು ಚೊಂಬಿನ ನೀರಿನ ತಳವನ್ನು ಸೇರಿತು. ಬಸಣ್ಣನ ಉಂಗುರವೂ ನೀರಲ್ಲಿ ಮುಳುಗುತ್ತ ಬಂದು ಅವಳ ಉಂಗುರಕ್ಕೆ ಭರವಸೆ ನೀಡುವಂತೆ ವೃಷಭಳ ಉಂಗುರದ ಮೇಲೆ ಕೂತಿತು.

ಮಂತ್ರ ಮತ್ತು ಹಾಡು ಎರಡು ಇಲ್ಲದೆ ಕಳೆದ ಐದು ನಿಮಿಷಗಳಲ್ಲಿ ಆವರಿಸಿಕೊಂಡಿದ್ದ ಮೌನ, ನುರಿತ ಹಾಡುಗಾರನೊಬ್ಬ ಧ್ವನಿಯನ್ನು ತಾರಕಕ್ಕೇರಿಸುವ ಮುನ್ನ ಪೂರ್ತಿ ಇಳಿಸಿ ಮಾಯವಾಗಿಸಿಬಿಡುವ ಹಂತದಲ್ಲಿದ್ದಂತೆ  ಇದ್ದ ಕಾರಣ ಇಬ್ಬರೂ ಮುಂದೆ ಏನಾಗುತ್ತದೆ ಎಂದು ಸ್ವಾಮೀಜಿಯನ್ನೇ ನೋಡತೊಡಗಿದರು.

ಸ್ವಾಮೀಜಿ ಕಣ್ಣು ಮುಚ್ಚಿದ್ದರು. ಪದ್ಮಾಸನದಲ್ಲಿ ಮರದ ಮಣೆಯ ಮೇಲೆ ಕೂತ ಅವರ ಮುಖದಲ್ಲಿ ಧೂಪ ದೀಪಗಳ ಶಾಖ, ಬಳ್ಳಾರಿಯ ಬಿಸಿಲ ಬೇಗೆಯಲ್ಲಿ ಧಾರಾಕಾರವಾಗಿ ಬೆವರನ್ನು ಹರಿಸಿತ್ತು. ಕತ್ತಿನಿಂದ ಸುರಿದು, ಎದೆ ಮತ್ತು ಬೆನ್ನಹುರಿಯಲ್ಲಿ ಹರಿಯುತ್ತಿತ್ತು. ಇಂತ ಎಣ್ಣೆ ಮುಖದ ಮುಂದೆ ಊದಿನಬತ್ತಿಯ ಹೊಗೆ ಒಂದು ಭಗೆಯ ದೇದೀಪಮಾನ್ಯ ಕಾಂತಿಯನ್ನು ಸ್ವಾಮೀಜಿಗೆ ನೀಡಿತ್ತು.

ನಾಭಿಯಿಂದ ಹೊರಟ ಆಳವಾದ ಧ್ವನಿಯಲ್ಲಿ ಅವರೀಗ ಮಂತ್ರೋಚ್ಚಾರಣೆ ಆರಂಭಿಸಿದ್ದರು. ಅದರಲ್ಲಿ ಶಿವಸ್ತುತಿಯ ಶಬ್ದಗಳಿದ್ದಂತೆ ಅವರಿಗೆ ಕೇಳಿಸಲಿಲ್ಲ. ಒಂದೈದು ನಿಮಿಷವಾಗಿತ್ತೇನೋ…

ಇದ್ದಕ್ಕಿಂದಂತೆ ವೃಷಭ ಸಣ್ಣಗೆ ಕಿರುಚಿದಳು. ಅವಳು ಕೂತಿದ್ದ ಕಡೆಯ ರಂಗೋಲಿಯ ಮೇಲಿದ್ದ ನಾಗರವೊಂದು ತಟ್ಟನೆ ಚಲಿಸಿದಂತಾಗಿ ಅವಳು ತರತರನೆ ನಡುಗತೊಡಗಿದಳು. ಬಸಣ್ಣನ ಮುಂದಿದ್ದ  ಬೆಳ್ಳಿಯ ಬಸವನೂ ಇದ್ದಕ್ಕಿದ್ದಂತೆ ಚಲಿಸಿದಾಗ ಬಸಣ್ಣ ತಟ್ಟನೆ ಹಿಂದಕ್ಕೆ ಹಾರಿದ್ದ. ಸ್ವಾಮೀಜಿಯ ಮಂತ್ರಪಠಣೆ ವೇಗವಾಗುತ್ತ ಹೋದಂತೆ ಅವರ ದೇಹವೂ ಓಲಾಡತೊಡಗಿತ್ತು. ದಂಪತಿಗಳಿದ್ದ ಮುಂದಿದ್ದ ಎಲ್ಲ ಪುಟ್ಟ ದೇವರುಗಳು ಯಾರೂ ಮುಟ್ಟದಿದ್ದರೂ ಇದ್ದ ಜಾಗದಲ್ಲೆ ಕುಣಿಯುತ್ತಿದ್ದವು!

ವೃಷಭಳ ಕಣ್ಣು ಮನೆಯ ಮುಂಬಾಗಿಲ ಕಡೆಗೆ ಒಮ್ಮೆ, ಕುಣಿಯುತ್ತಿದ್ದ ದೇವರುಗಳ ಕಡೆಗೆ ಒಮ್ಮೆ ನೋಡತೊಡಗಿದ್ದವು. ಮೊದಲ ಬಾರಿಗೆ ಇಂಥ ಶಕ್ತಿಯುತ ಸ್ವಾಮೀಜಿಗಳನ್ನು ತಾವಿಬ್ಬರೇ ಇರುವ ಮನೆಯೊಳಕ್ಕೆ ಕರೆತಂದ ಗಂಡನ ಬಗ್ಗೆ ಅವಳಿಗೆ ಕೋಪಬರುತ್ತಿತ್ತು. ಜೊತೆಗೇ ಮುಂಬಾಗಿಲ ಮೂಲಕ ಹೊರಗೆ ಓಡಿ ಹೋಗಲು ಅವಳ ಮನಸ್ಸು ಪತರಗುಟ್ಟಿಹೋಯಿತು. ಹಿಂದಕ್ಕೆ ಹಾರಿದ್ದ ಬಸಣ್ಣನ ಕಣ್ಣಲ್ಲಿ ಭಯದ ಜೊತೆಗೆ ಭಕ್ತಿ ತುಂಬಿ ಕಣ್ಣೀರಾಗಿ ಧಾರಾಕಾರವಾಗಿ ಹರಿಯತೊಡಗಿತ್ತು. ಗಂಡನ ನಿಶ್ಯಬ್ದ ಅಳುವಿನಿಂದ ವೃಷಭಳ ಕಂಠವೂ ಒತ್ತಿಬಂತು. ಒಟ್ಟಿನಲ್ಲಿ ಅಮಾಯಕ ದಂಪತಿಗಳ ಮೈಯ ನಡುಕ, ಅವರ ಮುಂದಿದ್ದ ದೇವರುಗಳ ಕುಣಿತ ಮುಗಿದಾಗಲೇ ನಿಂತಿದ್ದು.

ನೆತ್ತಿಯ ಮೇಲಿನ ಕಣ್ಣ ಸ್ವಾಮೀಜಿ ಈಗ ಸಮಾಧಾನದಲ್ಲಿದ್ದು ಬೆವರುವುದನ್ನು ನಿಲ್ಲಿಸಿದ್ದರು. ಉಂಗುರಗಳನ್ನು ಹಾಕಿದ್ದ ಹಿತ್ತಾಳೆ ಚೊಂಬಿನ ನೀರನ್ನು ಇಬ್ಬರಿಗೂ ತೀರ್ಥದಂತೆ ಕೊಟ್ಟು ತಾವೂ ಬಲಗೈ ಗೆ ಬಗ್ಗಿಸಿಕೊಂಡರು. ಸ್ವಾಮೀಜಿ ಏನು ಮಾಡುತ್ತಾರೋ ಅದನ್ನೇ ಮಾಡಲು ತಯಾರಾದ ದಂಪತಿಗಳು ಅವರನ್ನೇ ನೋಡುತ್ತಿದ್ದರು. ಸ್ವಾಮೀಜಿ ನೀರಿದ್ದ ಕೈಯನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು ಗಟಕ್ಕೆಂದು ಆ ನೀರನ್ನು ಕುಡಿದರು. ನಂತರ ಅಂಗೈಯನ್ನು ಮುಂಡಾಸಿನ ಬಳಿ ತಗೊಂಡುಹೋದರು. “ಅಯ್ಯೋ, ಪೇಟವನ್ನ ತೆರೆದು ಮೂರನೇ ಕಣ್ಣಿಗೆ ಒರಸಿಬಿಡುತ್ತಾರೇನೋ?” ಎಂದು ವೃಷಭಳು ತನಗೇ ನೋವಾದಂತೆ ಬಾಯಿ ತೆರೆದುದನ್ನು ನೋಡಿದ ಅವರು ಪೇಟವನ್ನು ಸವರಿಕೊಳ್ಳಲಿಲ್ಲ.

ಆ ಕ್ಷಣ ಎಚ್ಚೆತ್ತ ದಂಪತಿಗಳು ಜಗ್ಗನೆ ನೀರನ್ನು ಕಣ್ಣಿಗೆ ಒತ್ತಿಕೊಂಡು ಗಟಕ್ಕೆಂದು ಕುಡಿದರು. ಸಿಹಿನೀರಿನ ಬಾವಿಯಿಂದ ತಂದು ತುಂಬಿದ್ದ ನೀರು ಯಾಕೋ ವಿಷ, ವಿಷವೆನಿಸಿತು. ಸಧ್ಯ ಪೂಜೆ ಮುಗಿಯಿತು. ಇನ್ನು ಈ ಸ್ವಾಮಿಗೆ ಊಟವಿಕ್ಕಿ ತಾನೂ ಉಣ್ಣಬಹುದೆಂಬ ಹೊಸ ಉತ್ಸಾಹದಿಂದ ವೃಷಭಳು ಏಳಲು ಹೋಗಿ ತಟ್ಟನೆ ಬಿದ್ದಳು. ಪಕ್ಕದಲ್ಲೇ ಬಸಣ್ಣನೂ ಉರುಳಿದ.

ಅವರಿಬ್ಬರೂ ತೆಕ್ಕಲಕೋಟೆಯನ್ನು ಬಿಟ್ಟು ಹಲವು ಹತ್ತು ವರ್ಷಗಳಾಗಿವೆ. ಇವತ್ತಿಗೂ ಅವರ ಬೆರಳುಗಳು ತಮ್ಮ ಮದುವೆಯಲ್ಲಿ ತೊಟ್ಟಿದ್ದ ಉಂಗುರಗಳನ್ನು ಬಹಳ ನೆನಪಿಸಿಕೊಳ್ಳುತ್ತವೆ. ಎಲ್ಲವನ್ನೂ ಎತ್ತೊಯ್ದ ಸ್ವಾಮಿ ತನ್ನ ತಾಳಿಯ ಬೊಟ್ಟಿಗೆ ಕೈ ಹಾಕಲಿಲ್ಲವೆಂಬ ಸಮಾಧಾನ ಇವತ್ತೂ ವೃಷಭಳಲ್ಲಿ ಉಳಿದಿದೆ.

ಬಸಣ್ಣ ಪೈಸಕ್ಕೆ ಪೈಸೆ ಕೂಡಿಡುವುದನ್ನು ಮಾತ್ರ ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ಉಂಗುರಗಳ ಜೊತೆ ತನ್ನ ಕಿಸೆಯಿಂದ ಅವತ್ತು ಕಾಣೆಯಾದ ಐವತ್ತು ರೂಪಾಯಿಯ ಬಗ್ಗೆ ಅವನು ವೃಷಭಳಿಗೆ ಎಂದಿಗೂ ಹೇಳಲಿಲ್ಲ. ಇವತ್ತಿನ ಲೆಕ್ಕದಲ್ಲಿ ಎಲ್ಲ ಸೇರಿದರೆ ಅದು ಐನೂರೇ, ಐದು ಸಾವಿರವೇ ಅಥವಾ ಹತ್ತಾರು ಸಾವಿರದ ಮೌಲ್ಯವೇ ಅಂತ ಲೆಕ್ಕ ಹಾಕುವುದನ್ನು ಮಾತ್ರ  ಬಸಣ್ಣ ಬಹುಕಾಲ ಮುಂದುವರೆಸಿದ. ಆದರೆ ಸಾಧು ಸಂತರನ್ನು ಕರೆ ತರುವುದನ್ನು ಹಠಾತ್ ನಿಲ್ಲಿಸಿಬಿಟ್ಟ. ಇದರಿಂದ ಉಳಿತಾಯವಾದ ಹಣದಲ್ಲೇ ಅವರ ಮಗುವಿನ ಖರ್ಚುಗಳೂ ನಡೆದವು ಎಂದರೆ ಸುಳ್ಳಾಗುವುದಿಲ್ಲ. ಹೀಗಾಗಿ ವೃಷಭ ಮತ್ತೆಂದೂ ಅಂತಹ ಶಕ್ತಿಶಾಲಿ ಸ್ವಾಮೀಜಿಗೆ ಅಡುಗೆ ಮಾಡಬೇಕಾಗಿ ಬರಲಿಲ್ಲ.

ಆದರೆ  ಕುಣಿಯುವ ದೇವರುಗಳನ್ನು ಎಲ್ಲಿ ನೋಡಿದರೂ  ಅವು ವೃಷಭಳಲ್ಲಿ ಇಂದಿಗೂ ಹಲವು ವಿಚಿತ್ರ ಭಯಗಳನ್ನು ತರುತ್ತವೆ.

About The Author

ಡಾ.ಪ್ರೇಮಲತ

ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್‌ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ